Sunday, July 10, 2011

೧. ಮಂಗಳಾಚರಣ ಸಂಧಿ - ೫ ಮತ್ತು ೬ ನೇ ಚರಣಗಳು


ಚತುರವದನನ ರಾಣಿ ಅತಿರೋ
ಹಿತ ವಿಮಲವಿಜ್ಞಾನಿ ನಿಗಮ ಪ್ರ
ತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ |
ನುತಿಸಿ ಬೇಡುವೆ ಜನನಿ ಲಕುಮೀ
ಪತಿಯ ಗುಣಗಳ ತುತಿಪುದಕೆ ಸ
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನಸದನದಲಿ || ೫ ||

ಪ್ರತಿಪದಾರ್ಥ :  ಚತುರವದನನರಾಣಿ - ನಾಲ್ಕು ಮುಖಗಳುಳ್ಳ ಬ್ರಹ್ಮನ ಪತ್ನಿಯೇ, ಅತಿರೋಹಿತ ವಿಮಲ ವಿಜ್ಞಾನಿ - ವಿಚಲನೆಗೊಳಗಾಗದ ನಿರ್ಮಲವಾದಂತಹ ವಿಶೇಷ ಜ್ಞಾನವುಳ್ಳವಳು, ನಿಗಮಪ್ರತತಿಗಳಿಗಭಿಮಾನಿ - ವೇದಗಳ ಸಮೂಹಕ್ಕೆ ಅಭಿಮಾನಿಯಾದ ದೇವತೆಯು, ವೀಣಾಪಾಣಿ - ಕಚ್ಛಪಿ ಎಂಬ ವೀಣೆಯನ್ನು ಕೈಯಲ್ಲಿ ಹಿಡಿದಿರುವವಳು, ಬ್ರಹ್ಮಾಣಿ - ಬ್ರಹ್ಮನ ಪತ್ನಿ, ಸಮಸ್ತ ವೇದಗಳನ್ನು ತಿಳಿದವಳು, ತತ್ವಜ್ಞಾನಿಯು, ನತಿಸಿ ಬೇಡುವೆ ಜನನಿ - ನಮಸ್ಕರಿಸಿ ಪ್ರಾರ್ಥಿಸುವೆ ತಾಯಿಯೇ, ಲಕುಮೀ ಪತಿಯ - ಲಕ್ಷ್ಮೀರಮಣನ, ಗುಣಗಳ ತುತಿಪುದಕೆ - ಗುಣಗಳನ್ನು ಸ್ತುತಿಸುವುದಕ್ಕೆ, ಸನ್ಮತಿಯ ಪಾಲಿಸಿ - ಶುದ್ಧವಾದ ಬುದ್ಧಿಯನ್ನು ದಯಪಾಲಿಸಿ, ನೆಲೆಸು ನೀ ಮದ್ವದನಸದನದಲಿ - ನನ್ನ ನಾಲಿಗೆಯಲ್ಲಿ ನೆಲೆಸು.

ಸರಸ್ವತಿ ದೇವಿಯು ವೇದಗಳ ಅಭಿಮಾನಿ. ಬ್ರಹ್ಮ ದೇವರ ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಅತಿರೋಹಿತವೆಂದರೆ ಮರೆವೆಯೇ ಇಲ್ಲದ, ತಡೆಯಿಲ್ಲದೇ ಪರಮಾತ್ಮನ ಸ್ತುತಿ ಮಾಡುವವಳು ಬ್ರಹ್ಮಾಣಿ – ತತ್ವಜ್ಞಾನಿ,  ಬ್ರಹ್ಮ ಮತ್ತು ಸರಸ್ವತಿ ಮಹತ್ತತ್ವಕ್ಕೆ ಸೇರಿದವರು. ಪರಮಾತ್ಮನ ಬಗ್ಗೆ ಶುದ್ಧವಾದ ವಿಮಲ ಜ್ಞಾನವು ನಿರಂತರವಾಗಿ ಹರಿಯುತ್ತಲೇ ಇರುತ್ತದೆ.  ಇವಳು ಪರಶುಕ್ಲತ್ರಯರಲ್ಲಿ ಒಬ್ಬಳು ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ತತ್ವಜ್ಞಾನಿ, ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.  ಬ್ರಹ್ಮ ದೇವರಿಗಿಂತ ೧೦೦ ಗುಣಗಳಲ್ಲಿ ಕಡಿಮೆ.  ಇವಳೂ ಋಜುಗಣಕ್ಕೆ ಸೇರಿದವಳಾದ್ದರಿಂದ ೩೨ ಲಕ್ಷಣಗಳು ಉಳ್ಳವಳು.  ೧೯೯ ಕಲ್ಪ ಸಾಧನೆಯಾದ ಮೇಲೆ ವಾಣೀ ಪದವಿಗೆ ಬರುವವಳು.  ವೇದಾಭಿಮಾನಿ, ವೇದದ್ವಾರ ಭಗವಂತನಲ್ಲಿ ಉಪಸಂಹಾರ ಮಾಡುವ ಚಿತ್ತಕ್ಕೆ ಅಭಿಮಾನಿ ಸರಸ್ವತಿ.  ನಾಲಿಗೆಗೂ ಅಭಿಮಾನಿ,    ಕ್ಷೀರಕ್ಕೂ ಅಭಿಮಾನಿ.  ಕ್ಷೀರದ ಬಣ್ಣ ಬಿಳುಪು ಮತ್ತು ಬಿಳುಪು ಎಂದರೆ ಜ್ಞಾನ.  ಜೀವರುಗಳಿಗೆ ಜ್ಞಾನ ಕ್ಷೀರ ಉಣಿಸುವವಳು ಸರಸ್ವತಿ ದೇವಿ. ಇಂತಹ ಅಭಿಮಾನಿ ದೇವತೆ ಸದ್ಗುಣಿ ಸರಸ್ವತಿಯು ನಮ್ಮ ವದನದಲ್ಲಿ ಇದ್ದು ಪರಮಾತ್ಮನ ಗುಣಗಳನ್ನು ನುಡಿಸಲಿ  ಎಂದು ದಾಸರು ಕೇಳಿಕೊಂಡಿದ್ದಾರೆ.

ಸರಸ್ವತಿ ದೇವಿಯ ಕುರಿತಾದ ಒಂದು ಪದದಲ್ಲಿ ದಾಸರು “ದಯಮಾಡೆ ದಯಮಾಡೆ ತಾಯೇ ವಾಗ್ದೇವಿ, ದಯದಿಂದ ನೀ ಎನ್ನ ನೋಡೆ..  ಜಗನ್ನಾಥ ವಿಠಲನ ಅಂಘ್ರಿಗಳ ಸೇವೆಯೊಳು.. ಸುಗುಣೆ ಸನ್ಮತಿ ಕೊಟ್ಟು ಬೇಗೆನ್ನ ಸಲಹೇ.. ಎಂದು ಕೇಳಿಕೊಳ್ಳುತ್ತಾರೆ.

ಇಂತಹ ವೀಣಾಪಾಣಿ ವಿಶ್ವ ಕಲ್ಯಾಣಿಯಾಗಿದ್ದಾಳೆ.  ಗಾಯನ, ನರ್ತನಗಳ ನಂದ ಪ್ರದಾಯಿನಿಯಾಗಿದ್ದಾಳೆ.  ಅವಳದು ಎಂತಹ ಗಾಯನವೆಂದರೆ ಮೌನದ ಗಾಯನ, ಎಂತಹ ನರ್ತನವೆಂದರೆ ಕಾಣದ ನರ್ತನ, ಧ್ಯಾನದ ಕಿವಿ ಕಣ್ಗಳಿಗೆ ಅಮೃತದ ಸ್ವಾದನ.  ಸಂಗೀತ ಶಾಸ್ತ್ರದಲ್ಲಿ ಬರುವ ಆಹತ – ಅನಾಹತ ನೆನಪಾಗುತ್ತದೆ.  ಆಹತವೆಂದರೆ ಕೇಳಿಸಿಕೊಳ್ಳುವ ಶಬ್ದ, ಅನಾಹತವೆಂದರೆ ಕೇಳಲು ಸಾಧ್ಯವಿಲ್ಲದಂತಹ ಶಬ್ದ.  ಇಂತಹ ಮೌನದ ಗಾಯನ, ಕಾಣದ ನರ್ತನವನ್ನು ಸರಸ್ವತಿ ದೇವಿ ಪರಮಾತ್ಮ ಚನ್ನಕೇಶವ ಸ್ವಾಮಿಗೆ ಅರ್ಪಿಸುತ್ತಾಳೆ.  ಡಿವಿಜಿಯವರು ತಮ್ಮ ಅಂತಃಪುರ ಗೀತೆಯ ಸಂಕಲನದಲ್ಲಿ ಯಾರು ಸದಾ ಸರಸ್ವತಿ ದೇವಿಯ ಧ್ಯಾನದಲ್ಲಿ ಇರುವರೋ ಅವರಿಗೆ ಈ ಗಾಯನ ಮತ್ತು ನರ್ತನ ಅಮೃತದ ಸ್ವಾದನದಂತೆ ಇರುತ್ತದೆ  ಎನ್ನುತ್ತಾರೆ . 

ಕೃತಿರಮಣ ಪ್ರದ್ಯುಮ್ನ ನಂದನೆ |
ಚತುರವಿಂಶತಿ ತತ್ವಪತಿ ದೇ |
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ ||
ಸತತ ಹರಿಯಲಿ ಗುರುಗಳಲಿ ಸ |
ದ್ರತಿಯ ಪಾಲಿಸಿ ಭಾಗವತ ಭಾ |
ತರಪುರಾಣರಹಸ್ಯ ತತ್ವಗಳರುಪು ಕರುಣದಲಿ  || ೬ ||


ಪ್ರತಿಪದಾರ್ಥ :  ಕೃತಿರಮಣ ಪ್ರದ್ಯುಮ್ನ - ರಮಾದೇವಿಯ ಮಾಯಾ ಮೊದಲಾದ ನಾಲ್ಕು ರೂಪಗಳಲ್ಲಿ ಮೂರನೆಯ ರೂಪ ಕೃತಿ, ರಮಣ - ಮಹಾಲಕ್ಷ್ಮಿಯ ಪತಿಯಾದ ಪ್ರದ್ಯುಮ್ನ ರೂಪಿ ಭಗವಂತ, ನಂದನೆ - ಪ್ರದ್ಯುಮ್ನ ರೂಪಿ ಭಗವಂತನಾದ ಶ್ರೀಹರಿಯ ಪುತ್ರಿ, ಚತುರವಿಂಶತಿ ತತ್ತ್ವಪತಿ - ೧೦ ದಶಕರಣ, ಪಂಚಭೂತ, ಪಂಚತನ್ಮಾತ್ರ, ಅವ್ಯಕ್ತತತ್ವ, ಅಹಂಕಾರ ತತ್ವ, ಬುದ್ಧಿ ತತ್ವ, ಮನಸ್ತತ್ವ ಎಂಬ ೨೪ ತತ್ತ್ವಗಳಿಗೆ ತತ್ವಾಭಿಮಾನಿ ದೇವತೆಗಳಲ್ಲಿ ಒಬ್ಬರಾದ ಹಾಗೂ ದೇವತೆಗಳಿಗೆ ಗುರುವೆನಿಸುತಿಹ - ಸಮಸ್ತ ದೇವತೆಗಳಿಗೂ ಗುರುವೆನ್ನಿಸಿರುವ, ಮಾರುತನ - ವಾಯುದೇವರ, ನಿಜಪತ್ನಿ - ನೀತಪತ್ನಿ ಸರ್ವ ಅವತಾರಗಳಲ್ಲಿಯೂ ವಾಯುದೇವರಿಗೇ ಪತ್ನಿಯಾಗಿರುವವಳು, ಸತತ ಹರಿಯಲಿ ಗುರುಗಳಲಿ - ನಿರಂತರವಾಗಿ ಭಗವಂತನಾದ ಶ್ರೀಹರಿಯಲ್ಲಿಯೂ ಮತ್ತು ಗುರುಗಳಲ್ಲಿಯೂ, ಸದ್ರತಿಯ - ಉತ್ತಮವಾದ ಭಕ್ತಿ, ರತಿ ಎಂದರೆ ಪ್ರೀತಿ-ಭಕ್ತಿ-ಸುಖವೆಂದು ಅರ್ಥವಾಗುವುದು.  ಈ ಮೂರಕ್ಕೂ ಭಾರತೀದೇವಿ ಅಭಿಮಾನಿ ದೇವತೆಯಾದ್ದರಿಂದ ಸದ್ರತಿಯನ್ನು ಬೇಡುವುದು, ಪಾಲಿಸಿ - ಕರುಣಿಸಿ, ಭಾಗವತ - ಶ್ರೀಮದ್ಭಾಗವತ, ಭಾರತ - ಮಹಾಭಾರತ, ಪುರಾಣ - ಇತರ ಎಲ್ಲಾ ಪುರಾಣಗಳು, ರಹಸ್ಯ ತತ್ತ್ವಗಳ - ಮೇಲ್ನೋಟದ ಅರ್ಥವನ್ನಲ್ಲದೇ ಅಂತರಾರ್ಥವನ್ನು, ಅರುಪು ಕರುಣದಲಿ - ಕರುಣೆಯಿಂದ ತಿಳಿಸಿಕೊಡು.

ಈ ಚರಣದಲ್ಲಿ ಭಾರತಿ ದೇವಿಯನ್ನು ಕುರಿತು ಸ್ತುತಿಸಿದ್ದಾರೆ.  ವಾಯು ಮತ್ತು ಭಾರತಿ ದೇವಿಯರೂ ಕೂಡ ಮಹತ್ತತ್ತ್ವಕ್ಕೆ ಸೇರಿದವರು.  ಭಾರತಿ ದೇವಿ ಕೃತಿ + ಪ್ರದ್ಯುಮ್ನನ ಮಗಳು.  ೨೪ ತತ್ವಗಳಿಗೂ ಪತಿ, ದೇವತೆ, ಗುರು ಎನಿಸುವ ವಾಯುದೇವರ ನೀತಪತ್ನಿ.  ಇವಳೂ ಕೂಡ ತತ್ವಾಭಿಮಾನಿ, ವೇದಾಭಿಮಾನಿ ದೇವತೆಯಾಗಿರುವುದರಿಂದ ಯಾವಾಗಲೂ ಹರಿ, ಗುರುಗಳಲ್ಲಿ ಸದ್ಭಕ್ತಿಯನ್ನು ಪಾಲಿಸಿ ಭಾಗವತ, ಭಾರತ, ಪುರಾಣ ಇವುಗಳ ರಹಸ್ಯ ತತ್ವಗಳನ್ನು ಕರುಣದಿಂದ ತಿಳಿಸಿಕೊಡಲಿ ಎಂದು ಬೇಡಿ ಕೊಳ್ಳುತ್ತಾರೆ.

ಭಾರತಿ ಮಜ್ಜನನಿ ಎಂಬ ದಿವ್ಯವಾದ ಪದ್ಯದಲ್ಲಿ ಭಾರತಿ ದೇವಿಯ ನಾನಾ ರೂಪಗಳ ವರ್ಣನೆಯನ್ನು ದಾಸರು ಮಾಡಿದ್ದಾರೆ.  ಭಾರತೀ ದೇವಿಯನ್ನು ವಿದ್ಯುನ್ನಾಮಕೆಯೆಂದು ಕರೆಯುತ್ತಾರೆ.  ಬ್ರಹ್ಮ ವಿದ್ಯೆಯನ್ನು ಪಾಲಿಸೆಂದು ಕೇಳಿಕೊಳ್ಳುತ್ತಾರೆ.  ಬುದ್ಧಿಯ ಅಭಿಮಾನಿ, ಸದ್ಯೋಜಾತನನ್ನು (ಈಶ್ವರ) ಹೆತ್ತ ಶ್ರದ್ಧಾ ಎಂಬ ಹೆಸರುಳ್ಳವಳೇ ಪರಮಾತ್ಮ ಅನಿರುದ್ಧನನ್ನು ತೋರಿಸು ಎಂದು ಬೇಡಿಕೊಳ್ಳುತ್ತಾರೆ.  ಮತ್ತೆ ಅವಳ ಅವತಾರಗಳಾದ ಇಂದ್ರಸೇನ ನಳನಂದಿನಿ ಜ್ಞಾನವನ್ನು ಕರುಣಿಸು,  ಪುರಂದರ (ದೇವೆಂದ್ರ)ರಿಂದ ಆರಾಧಿತಳಾದವಳೇ, ಕಾಳಿ, ದ್ರೌಪತಿ, ಶಿವಕನ್ಯಾ, ನಮ್ಮ ಮನ್ಮನದಲ್ಲಿ ನಿಂತು ಕಾಪಾಡು, ಅಲ್ಲದೇ ಶೈಲಜಾ, ಶ್ಯಾಮಲಾ, ಪೌಲೋಮಿ, ಉಷೆ ಇವರುಗಳಿಂದ ಓಲೈಸಿಕೊಳ್ಳುವವಳು ನೀನು ಎಂದು ಹೊಗಳುತ್ತಾರೆ.

ಚಿತ್ರಕೃಪೆ  : ಅಂತರ್ಜಾಲ

1 comment:

Vishnu Priya said...

ಆ ವೀಣಾಪಾಣಿ, ವಾಯು ಮತ್ತು ಭಾರತಿ ದೇವಿಯರು ನಿಮ್ಮನ್ನು ಹರಸಲಿ.