Thursday, December 1, 2011

ಮಂಗಳಾಚರಣ ಸಂಧಿಗೆ ಮಂಗಳದ ಮುಕ್ತಾಯ....


ಯಾವುದೇ ಒಂದು ಶುಭ ಕಾರ್ಯ ಮಾಡುವ ಮುನ್ನ ನಿರ್ವಿಘ್ನವಾಗಿ ಕಾರ್ಯ ಸಂಪೂರ್ಣಗೊಳ್ಳಬೇಕು ಎಂಬ ಭಾವದ ಪುಷ್ಟೀಕರಣಕ್ಕೆ ಅನುಸಾರವಾಗಿ ಹರಿಕಥಾಮೃತಸಾರದ ಕರ್ತೃ ಶ್ರೀ ಜಗನ್ನಾಥ ದಾಸರು ಕೂಡ ಆರಂಭದ ಒಂದು ಪರಿಪೂರ್ಣ ಸಂಧಿಯನ್ನೇ ದೇವತಾ ಪ್ರಾರ್ಥನೆಗೆ ಮೀಸಲಿಟ್ಟಿದ್ದಾರೆ.  ಯಾವುದೇ ಒಂದು ಬೃಹತ್ ಗ್ರಂಥ / ಕಾವ್ಯ ರಚನೆಯಾದಾಗ ಅದರ ಮೊದಲ ಪದ್ಯವು ಗ್ರಂಥದ ವಿಷಯ ಸೂಚಕವೂ ಆಗಿರಬೇಕಲ್ಲವೇ..? ಹಾಗೇ ಅದೇ ಪದ್ಧತಿಗನುಗುಣವಾಗಿ ಈ ಗ್ರಂಥದ ವಿಚಾರ ನಾರಾಯಣಾದಿ ಪಂಚರೂಪ ಪರಮಾತ್ಮನ ಉಪಾಸನೆಯಾಗಿರುವುದರಿಂದ, ದಾಸರು ಮೊದಲ ಸಂಧಿಯಾದ ಮಂಗಳಾಚರಣ ಸಂಧಿಯ ಮೊಟ್ಟ ಮೊದಲ ಪದ್ಯವನ್ನು “ಶ್ರೀ ರಮಣಿಕರಕಮಲ ಪೂಜಿತ” ಎಂದೂ, ನೀರಜಭವಾಂಡ ಉದಯ ಸ್ಥಿತಿ ಕಾರಣನೆ ಎಂದು ಪ್ರದ್ಯುಮ್ನ, ಅನಿರುದ್ಧ ರೂಪಗಳನ್ನೂ, ಕೈವಲ್ಯದಾಯಕವಾದ ಸಂಕರ್ಷಣರೂಪವನ್ನೂ ಸ್ತುತಿಸಿದ್ದಾರೆ.  ಆಮೇಲೆ ಲಕ್ಷ್ಮೀ, ಬ್ರಹ್ಮ, ವಾಯು, ಸರಸ್ವತಿ, ಭಾರತೀ ದೇವಿಯವರನ್ನು ಸ್ತುತಿಸಿ, ನಮಿಸಿದ್ದಾರೆ.  ನಂತರ ಗುರುಗಳ ನಮಸ್ಕಾರವಾಗಿ ವೇದವ್ಯಾಸರು, ಆಚಾರ್ಯರು, ರುದ್ರ, ಇಂದ್ರ, ಋಷಿಗಳು, ಪಿತೃಗಳು, ಚಕ್ರವರ್ತಿಗಳು, ಯತಿವರ್ಯರು ಹಾಗೂ ಕೊನೆಯದಾಗಿ ಸಕಲ ದಾಸವರೇಣ್ಯರಿಗೂ ನಮಿಸಿದ್ದಾರೆ.

ಹೀಗೆ ಪಂಚಭೇದ ತಾರತಮ್ಯ ಪಂಚವಿಂಶತಿ ತತ್ವ ಇವುಗಳ ವಿವರಣೆ ಕೊಟ್ಟು ಮಂಗಳಾಚರಣ ಸಂಧಿಯಲ್ಲಿ ಸ್ವೋತ್ತಮರಿಗೆಲ್ಲಾ ವಂದಿಸಿ ಅಂತರ್ಯಾಮಿ ಬಿಂಬರೂಪಿ ಜಗನ್ನಾಥ ವಿಠಲನ “ಕರುಣೆ”ಯನ್ನು ಕೇಳಿಕೊಂಡು ಮುಂದಿನ “ಕರುಣಾಸಂಧಿ” ಪದ್ಯಗಳಿಗೆ ನಾಂದಿ ಹಾಡುತ್ತಾರೆ ಜಗನ್ನಾಥ ದಾಸರು.  ಈ ಮಂಗಳಾಚರಣ ಸಂಧಿಯನ್ನು ಓದಿದವರಿಗೆ, ಕೇಳಿದವರಿಗೆ, ಬರೆದವರಿಗೆ ಎಲ್ಲರಿಗೂ ಶ್ರೀಹರಿಯ ಪ್ರಸಾದ ಲಭ್ಯವಾಗಲೆಂದು ಪ್ರಾರ್ಥಿಸಿದ್ದಾರೆ.  ಶ್ರೀಹರಿಯ ಪ್ರಸಾದವೆಂದರೆ ಭಗವಂತನ “ಅನುಗ್ರಹ”.  ನಮಗೆ ಆ ಪ್ರಸಾದ ಸಿಕ್ಕಬೇಕಾದರೆ ನಾವು ಕಾಯಾ ವಾಚಾ ಮನಸಾ ಭಗವಂತನ ಪಾದಗಳಿಗೆ ಶರಣಾಗಿ, ಪರಾಪರ ತತ್ವಜ್ಞಾನದ ಆಶ್ರಯದಿಂದ ನಮ್ಮೊಳಗಿನ ಜೀವ ಕುಸುಮದ ವಿಕಸನೆಯನ್ನು ನಿರಂತರ ಮಾಡಿಕೊಳ್ಳುತ್ತಲೇ ಇರಬೇಕು ಎಂಬ ಸಂದೇಶ ಸಾರುತ್ತಾ ಶ್ರೀ ಜಗನ್ನಾಥ ದಾಸರು “ಹರಿಕಥಾಮೃತಸಾರ” ಗ್ರಂಥ ರಚನೆಯ ಕೆಲಸ ಸುಗಮವಾಗಿ ಸಾಗಿ, ಮುಕ್ತಾಯಹೊಂದಿ, ಶ್ರೀಹರಿಯ ಕೃಪೆ, ಅನುಗ್ರಹದ ಪ್ರಸಾದ ಎಲ್ಲರಿಗೂ ಲಭ್ಯವಾಗಲೆಂದು ಪ್ರಾರ್ಥಿಸುತ್ತಾ ಮಂಗಳಾಚರಣ ಸಂಧಿಗೆ ಮಂಗಳವನ್ನು  ಕೋರುತ್ತಾ 

ಜಯ ಮಂಗಳಂ ನಿತ್ಯ ಶುಭ ಮಂಗಳಂ |
ದಯದಿ ಭಕ್ತರ ಕಾಯ್ದ ದಾಶರತಿಗೆ ||

ಅವನಿಜಾವಲ್ಲಭಾಗೆ ಪವನಾತ್ಮನ ಸಖಗೆ |
ಪ್ಲವಗ ನಾಯಕರಾಳ್ದ ರವಿಜ ಸುತಗೆ |
ಶಿವನ ವರ ಪಡೆದಕ್ಷಕುವರ ಮುಖ್ಯ ರಕ್ಕಸರ |
ಬವರಮುಖದಲಿ ಸದೆದ ಪ್ರವಿತತನಿಗೆ ||

ಪಾವಮಾನಿಯ ಪೆಗಲನೇರಿ ಅತಿ ಹರ್ಷದಲಿ |
ರಾವಣಾದ್ಯರ ಸದೆದ ರಘುರಾಮಗೆ |
ಭಾವಿ ಬ್ರಹ್ಮನಿಗೆ ಭಕ್ತಿಯನಿತ್ತು ಮಿಕ್ಕ ಸು |
ಗ್ರೀವಾದಿಗಳಿಗೆ ಮುಕ್ತಿಯ  ನೀಡ್ದಗೆ ||

ತ್ರಿಗುಣವರ್ಜಿತ ತ್ರಿವಿಕ್ರಮ ತೀರ್ಥಪಾದನಿಗೆ |
ಭಗೃ ಕುಲೋದ್ವಹ ಭಕ್ತಜನಪಾಲಗೆ |
ಸ್ವಾಗತ ನಾಮಗಳ ಸರ್ವರಿಗಿತ್ತು ಸಂತೈಪ |
ಅಗಣಿತಮಹಿಮ ಜಗನ್ನಾಥ ವಿಠಲಗೆ || 

ಜಯ ಮಂಗಳಂ ನಿತ್ಯ ಶುಭ ಮಂಗಳಂ ಎಂದು ಪ್ರಾರ್ಥಿಸುತ್ತಾರೆ.


ಚಿತ್ರಕೃಪೆ : ಅಂತರ್ಜಾಲ

Wednesday, November 16, 2011

ಮಂಗಳಾಚರಣ ಸಂಧಿ - ೧೩ ನೇ (ಕೊನೆಯ) ಪದ್ಯ...


ಪರಿಮಳವು  ಸುಮನದೊಳಗನಲನು
ಅರಣಿಯೊಳಗಿಪ್ಪಂತೆ  ದಾಮೋ
ದರನು ಬ್ರಹ್ಮಾದಿಗಳ  ಮನದಲಿ ತೋರಿ ತೋರದೆಲೆ |
ಇರುತಿಹ ಜಗನ್ನಾಥ ವಿಠಲನ
ಕರುಣ ಪಡೆವ ಮುಮುಕ್ಷುಜೀವರು
ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು ||೧೩||

ಪ್ರತಿಪದಾರ್ಥ  : ಪರಿಮಳವು ಸುಮನದೊಳಗೆ - ಸುಮ ಎಂದರೆ ಹೂವು, ಹೂವಿನಲ್ಲಿರುವ ಸುವಾಸನೆ, ಅನಲನು ಅರಣಿಯೊಳಗೆ - ಅರಣಿ ಎಂದರೆ ಒಣಗಿದ ಅರಳಿ ಕಡ್ಡಿ ಮತ್ತು ಅನಲನೆಂದರೆ ಅಗ್ನಿ, ಇಪ್ಪಂತೆ - ಅಡಗಿಕೊಂಡಿರುವಂತೆ, ದಾಮೋದರನು - ದಾಮ ಎಂದರೆ ಹಗ್ಗ ಮತ್ತು ತಾಯಿ ಯಶೋದೆಯು ಹಗ್ಗದಿಂದ ಬಾಲಕೃಷ್ಣನನ್ನು ಕಟ್ಟಿದಾಗ, ದರ  ಎಂದರೆ ಉದರದಲ್ಲಿ ಧರಿಸಿದವನು, ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ - ಬ್ರಹ್ಮಾದಿ ಸಮಸ್ತ ದೇವತೆಗಳ ಮನದಲ್ಲಿ ಕಂಡೂ ಕಾಣಿಸದಂತೆ, ಇರುತಿಹ - ನೆಲೆಸಿರುವ, ಜಗನ್ನಾಥವಿಠಲನ - ಜಗತ್ತಿಗೇ ಒಡೆಯನಾದ ಶ್ರೀಹರಿಯ, ಕರುಣಪಡೆವ - ಕರುಣೆಗೆ ಪಾತ್ರರಾಗಬಯಸುವಂತಹ, ಮುಮುಕ್ಷು ಜೀವರು - ಮೋಕ್ಷಾಪೇಕ್ಷಿಗಳಾದ ಸುಜೀವರು, ಪರಮಭಾಗವತರನು - ಭಗವಂತನ ಶ್ರೇಷ್ಠ ಭಕ್ತರಾದ ಭಾಗವತರುಗಳನ್ನು, ಕೊಂಡಾಡುವುದು ಪ್ರತಿದಿನವು - ಪ್ರತಿದಿನವೂ ಅನವರತವೂ ಸ್ತುತಿಸುತ್ತಲೇ ಇರಬೇಕು.
 

ಮಂಗಳಾಚರಣದ  ಅಂತಿಮ ಚರಣದಲ್ಲಿ ಅಂತರ್ಯಾಮಿ ಬಿಂಬರೂಪಿ ಜಗನ್ನಾಥ ವಿಟ್ಠಲ ಜೀವಿಗಳೊಳಗೆ ಹೇಗೆ ಇರುತ್ತಾನೆಂದು ವರ್ಣಿಸುತ್ತಾರೆ.  ಭಗವಂತ ಸುಮನದೊಳು ಪರಿಮಳವಿದ್ದಂತೆ ಎಂದರೆ ಹೂವಿನಲ್ಲಿರುವ ಕಂಪಿನಂತೆ ಎಂದು ದೃಷ್ಟಾಂತ ಕೊಡುತ್ತಾರೆ. ಹೇಗೆಂದರೆ ಹೂವಿನಲ್ಲಿರುವ ಕಂಪು ನಮಗೆ ಕಣ್ಣಿಗೆ ಕಾಣುವುದಿಲ್ಲ, ಆದರೆ ಹೂವು ಚೆನ್ನಾಗಿ ಅರಳಿದ ನಂತರ ನಮಗೆ ಅದರ ಸುವಾಸನೆ ತಿಳಿಯುತ್ತದೆ.  “ಸುಮನ” ಎಂದರೆ ಹೂವು ಎಂದೂ ಹಾಗೂ “ಸು” ಮನಸ್ಸು ಎಂದೂ ಆಗುತ್ತದೆ.  ನಮ್ಮ ಮನಸ್ಸು ಸು – ಒಳ್ಳೆಯದಾಗಿರಬೇಕು, ಸಾತ್ವಿಕ ವಿಚಾರಗಳಿಂದ ತುಂಬಿ ಮನಸ್ಸು ಅರಳಿದಾಗ, ಭಗವಂತನಿರುವ ಅರಿವು ನಮಗೆ ಪರಿಮಳದಂತೆ ತಿಳಿಯುವುದು.  ಅಂದರೆ ಮನಸ್ಸೆಂಬ ಹೂವು ತನ್ನನ್ನು ಆವರಿಸಿ ಕೊಂಡಿರುವ ಅಹಂಕಾರ ಮತ್ತು ಮಮಕಾರಗಳಿಂದ ಬಿಡಿಸಿಕೊಂಡು, ಜ್ಞಾನ-ಭಕ್ತಿ-ವೈರಾಗ್ಯಗಳಿಂದ, ಸಾಧನೆಮಾಡಿ, ಹರಿ-ಗುರು ಕೃಪೆಯಿಂದ, ಭಗವತ್ಪ್ರಜ್ಞೆಯಿಂದ ಸುಂದರವಾಗಿ ಅರಳಿದರೆ, ಪರಿಮಳದಂತೆ ಪರಮಾತ್ಮ ನಮ್ಮೊಳಗೇ ವ್ಯಕ್ತವಾಗಿ ನಮ್ಮನ್ನು ಉದ್ಧರಿಸುತ್ತಾನೆ.  ಪರಿಮಳವು ಹೂವಿಗೆ ಸಹಜ ಅಥವಾ ಸ್ವಾಭಾವಿಕ ಗುಣ.  ಅದು ಅರಳಿದಾಗ ಮಾತ್ರ ಪರಿಮಳದ ಕಂಪು ಹೊರಸೂಸುವುದು.  ಹಾಗೇ ನಮ್ಮ ಮನಸ್ಸೂ ಕೂಡ.

ಇನ್ನೊಂದು ದೃಷ್ಟಾಂತವೆಂದರೆ ಕಟ್ಟಿಗೆಯಲ್ಲಿರುವ ಅತೀ ಸೂಕ್ಷ್ಮವಾದ ಅನಲ – ಬೆಂಕಿಯಂತೆ, ನಮಗೆ ಕಾಣುವುದೇ ಇಲ್ಲ.  ಆದರೆ ಎರಡು ಕಾಷ್ಟದ ಘರ್ಷಣೆ ಮಾಡಿದಾಗ, ಮಥನ ಮಾಡಿದಾಗ ಮಾತ್ರ ಅರಣಿ (ಕಟ್ಟಿಗೆ)ಯಲ್ಲಿ ಕಾಣುವಂತೆ, ಭಗವಂತ ಇರುತ್ತಾನೆ.  ನಾವು ನಮ್ಮ ಮನಸ್ಸೆಂಬ ಕಡಗೋಲಿನಿಂದ ಶಾಸ್ತ್ರದ ಸಮುದ್ರವನ್ನು ಮಥನ ಮಾಡಿ, ಮಾಡಿ ಆ ಭಗವಂತನ ಅರಿವು ತಿಳಿಯಬೇಕು.  ನಮ್ಮ ಮನಸ್ಸಿನಲ್ಲಿಯೇ ಅಸುರೀ ಗುಣಗಳು ಮತ್ತು ಸಾತ್ವಿಕ ಗುಣಗಳು ಎರಡೂ ಇವೆ.  ಯಾವಾಗ ಮನಸ್ಸಿನ ಮಥನ ಶುರುವಾಗುವುದೋ ಆಗ ಅಸುರೀ ಶಕ್ತಿಗಳು ಅಂದರೆ  ಅಹಂಕಾರ, ಮಮಕಾರ, ವಿಷಯಾಸಕ್ತಿಗಳು ಎಲ್ಲವೂ ಮೇಲೆ ಬರುತ್ತವೆ. ನಾವು ಆ ಯಾವ ಶಕ್ತಿಗಳನ್ನೂ ಗಣನೆಗೆ ತೆಗೆದುಕೊಳ್ಳದೇ... ಸತತವಾಗಿ ಭಗವಂತನ ಧ್ಯಾನ ಮಾಡಬೇಕು ಅವನಿಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಬಿಡಬೇಕು, ಅವನ ಇರುವನ್ನು ಅರಿಯಬೇಕು.  ಹೀಗೆ ನಾವು ನಿರಂತರವಾಗಿ ಮಾಡಿದಾಗಲೇ,   ನಮಗೆ, ಅರಣಿಯೊಳಗೆ ಅನಲ ಕಾಣುವಂತೆ, ಚಿನ್ಮಯನ ಅರಿವು ಮೂಡುವುದು.  ಸಮುದ್ರ ಮಥನದಲ್ಲಿ ಆದಂತೆ ನಾವು, ನಮ್ಮೊಳಗೇ ಇರುವ ಅಸುರೀ ಶಕ್ತಿಗಳನ್ನು ಜಯಿಸಿ ಸಾತ್ವಿಕ ಭಾವವನ್ನು ಅಪ್ಪಿಕೊಂಡಾಗ ನಮಗೆ  ಸಿಕ್ಕುವುದೇ - ಚಿನ್ಮಯನ ಇರುವಿನ  “ಜ್ಞಾನ”, ನಮ್ಮೊಳಗಿನ ದೈವೀಕ “ಶಕ್ತಿ”ಯ ಪರಿಚಯ, ಭಗವಂತನೆಂಬ ಅಮೃತದ ಗಡಿಗೆ.

ಬೇರೆ ಬೇರೆ ದೇವತೆಗಳಲ್ಲಿ ಕಲಿಯ ಆವೇಶ ಹೆಚ್ಚು ಇರುವುದರಿಂದ ಭಗವಂತ ಬೇಗ ಪ್ರಕಟವಾಗುವುದಿಲ್ಲ, ಅವ್ಯಕ್ತನಾಗಿರುತ್ತಾನೆ.  ಉಪಾಸನೆ – ಸಾಧನೆಗಳಿಂದ ವ್ಯಕ್ತನಾಗುತ್ತಾನೆ.  ಆದರೆ ವಿಭೂತಿ ಚೇತನಗಳಾದ ಬ್ರಹ್ಮ-ವಾಯು ದೇವರುಗಳಲ್ಲಿ ವ್ಯಕ್ತನಾಗಿಯೇ ಇರುತ್ತಾನೆ.  ರುದ್ರ ದೇವರಲ್ಲಿ ಪರಮಾತ್ಮ ತೋರಿಯೂ ತೋರದಂತೆ ಇರುತ್ತಾನೆ.  ಕಾಷ್ಠವನ್ನು ನಿರಂತರ ಘರ್ಷಣೆಗೆ ಒಳಪಡಿಸಿದಾಗ ಹೇಗೆ ಅಗ್ನಿಯ ದರ್ಶನವಾಗುವುದೋ, ಹಾಗೇ  ನಿರಂತರ ಘರ್ಷಣೆಯಿಂದ, ರುದ್ರ ದೇವರಲ್ಲಿ ಭಗವಂತ ಪ್ರಕಟಗೊಳ್ಳುತ್ತಾನೆ. 

ಜಗನ್ನಾಥ ದಾಸರು ಈ ಪದ್ಯದಲ್ಲಿ ಭಗವಂತನನ್ನು “ದಾಮೋದರ”ನೆಂದು ಸಂಬೋಧಿಸಿದ್ದಾರೆ.  “ದಾಮ” ಎಂದರೆ ಹಗ್ಗ – ಹೊಟ್ಟೆಗೆ ಹಗ್ಗದಿಂದ  ಕಟ್ಟಲ್ಪಟ್ಟವನು ದಾಮೋದರನೆಂದರೆ ಅದು ಕೃಷ್ಣಾವತಾರದ ಒಂದು ಪ್ರಸಂಗಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತದೆ ಹಾಗೂ  ಇದು ಭಗವಂತನ ಅನಾದಿ ನಾಮವೂ ಹೌದು.  ಇದಕ್ಕೆ  ಆಧ್ಯಾತ್ಮಿಕವಾದ ಅನೇಕ ವಿಶಿಷ್ಟ ಅರ್ಥಗಳು ಇವೆ.  ನಾವು ಉಪಯೋಗಿಸುವ ಪ್ರತಿಯೊಂದು ಶಬ್ದಕ್ಕೂ ಒಂದು ಭೌತಿಕ, ಪ್ರಾಕೃತಿಕ ಮತ್ತು ಅಪ್ರಾಕೃತಿಕವೆಂಬ ಅರ್ಥಗಳಿರುತ್ತವೆ. ಇಲ್ಲಿ ದಾಮೋದರ ಎಂಬ ನಾಮ ಬೇರೆಯೇ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ. “ದಮ” ಎಂದರೆ “ಇಂದ್ರಿಯ ನಿಗ್ರಹ ಉಳ್ಳವನು, ಎಲ್ಲಾ ಇಂದ್ರಿಯಗಳನ್ನೂ ಭಗವಂತನೆಡೆಗೆ ಕೇಂದ್ರೀಕರಿಸಬಲ್ಲವನು” ಮತ್ತು ಇಂತಹ ಸಾಧಕರನ್ನು ಉದ್ಧಾರ ಮಾಡುವವನು / ಉದರದಲ್ಲಿ ಇಟ್ಟುಕೊಂಡು ಸಲಹುವವನು “ದಾಮೋದರ”.  ಅಕ್ಷರಗಳನ್ನು ಬಿಡಿಸಿ ನೋಡಿದಾಗ ದಾಮೋದರ ಎಂಬ ಪದ ಐದು ಭಾಗಗಳಾಗಿ ಬಿಡಿಸಿಕೊಳ್ಳುತ್ತದೆ – ದ + ಅಮ + ಉತ್ + ಅ + ರ ಆದಾಗ, ಉತ್ಕೃಷ್ಠನಾದ, ನಾವು ತಿಳಿಯಬಲ್ಲ ಈ ಪ್ರಪಂಚದಿಂದ ಅತೀತನಾದ, ಅಳತೆಯಿಲ್ಲದೆ ಅಪರಿಮಿತನಾಗಿ ಸಮಸ್ತ ಅಭೀಷ್ಟಗಳನ್ನೆಲ್ಲ ಪ್ರಸಾದಿಸುವವನಾದ, ಅನಂದಸ್ವರೂಪನು, ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದವನು ಎಂದರ್ಥವಾಗುತ್ತದೆ.  ಮತ್ತು ದಾಮರಾದ ಉದರು, ದಮನಶೀಲರು ಎಂದಾಗ – ಉದ ಎಂದರೆ ಜೀವಿ, ಇಂದ್ರಿಯ ನಿಗ್ರಹ ಮಾಡಿದ ಸಾತ್ವಿಕ ಜೀವಿ, ದಮನಶೀಲರಿಗೆ ರಂ – ಆನಂದ ನೀಡುವವನು ದಾಮೋದರ ಎಂದೂ ಆಗುತ್ತದೆ.  ಹೀಗೆ ದಾಮೋದರನೆಂಬ ಭಗವಂತನ ಒಂದು ಹೆಸರಿಗೆ ಇನ್ನೂ ಅನೇಕ ವಿಶೇಷ ಅರ್ಥಗಳು ಇವೆ.

ಮುಂದುವರೆಯುತ್ತಾ ಜಗನ್ನಾಥ ದಾಸರು  “ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ” ಎನ್ನುತ್ತಾರೆ.  ಬ್ರಹ್ಮಾದಿಗಳು ಎಂದರೆ ಬ್ರಹ್ಮ, ವಾಯು, ಲಕ್ಷ್ಮೀ, ಸರಸ್ವತಿ, ಭಾರತಿಯರಲ್ಲಿ ಸುಮನದಲ್ಲಿ ಪರಿಮಳದಂತೆಯೂ, ರುದ್ರಾದಿ ದೇವತೆಗಳಲ್ಲಿ ಅರನಣಿಯೊಳಗಿಪ್ಪಂತೆಯೂ ಇರುತ್ತಾನೆ.  ಅಂದರೆ ಪರಶುಕ್ಲತ್ರಯರಲ್ಲಿ “ತೋರಿ” ಇರುತ್ತಾನೆ.  ಬಾಕಿ ದೇವತೆಗಳಲ್ಲಿ “ತೋರದೆಲೆ” ಇರುತ್ತಾನೆ.   

ಪುಷ್ಪಗತ ದೃಷ್ಟಾಂತದಿಂದ ಕಾರ್ಯಭೂತವಾದ ಈ ಜಗತ್ತಿಗೇ ಕಾರಣಭೂತ ದೇವರು ಇದ್ದಾನೆ ಎಂದೂ ಸ್ಮೃತಿ, ಶೃತಿಗಳಿಂದ ಅಧರಿಸಿದ ದಾಸರು ಅರಣಿಗತ ಅಗ್ನಿ ಪ್ರಾಪ್ತಿಗೆ ಮಥನದಂತೆ ಗುರುಸೇವಾ, ಶಾಸ್ತ್ರಾಭ್ಯಾಸ ಮೊದಲಾದ ಸೇವಾ ಹೊರತು ದೇವರು ದೊರಕುವುದಿಲ್ಲ ಎಂಬರ್ಥ ತಿಳಿಸಲು ಎರಡು ದೃಷ್ಟಾಂತಗಳನ್ನು ಕೊಟ್ಟಿದ್ದಾರೆ.  ಕುಸುಮದಲ್ಲಿ ಪರಿಮಳವು ಇರುವ ಹಾಗೆ, ಆರಣಿಯಲ್ಲಿ ಅಗ್ನಿ ಇರುವ ಹಾಗೆ, ಬ್ರಹ್ಮಾದಿಗಳ ಮನಸ್ಸಿನಲ್ಲಿ ಕಾಣಿಸಿಕೊಂಡ, ಜ್ಞಾನಪ್ರದ ಸ್ವಾಮಿಯ ದಯ ಸಂಪಾದಿಸುವ ಮೋಕ್ಷಾಕಾಂಕ್ಷಿಗಳು ಪೂರ್ವೋಕ್ತ ಭಾಗವತರಾದ ಬ್ರಹ್ಮಾದಿಗಳನ್ನು ಸದಾ ತಾರತಮ್ಯ ಕ್ರಮದಿಂದ ಸ್ತುತಿಸತಕ್ಕದೆಂದು ಆದೇಶಿಸುತ್ತಾರೆ.

ನಾವು ಯಾರಿಗೆ ನಮಸ್ಕರಿಸಿದರೂ ಅದು ಅವರ ಒಳಗಿರುವಂತ ಭಗವಂತನಿಗೇ ನಮ್ಮ ನಮಸ್ಕಾರ ಸಲ್ಲುವುದು.  “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂಬ ಮಾತಿನಂತೆ, ಎಲ್ಲಿ, ಯಾವ ಸನ್ನಿಧಾನ ಶುದ್ಧವಾಗಿದೆಯೋ ಅಂತಹ ಸನ್ನಿಧಾನಕ್ಕೆ ನಾವು ನಮಸ್ಕರಿಸಬೇಕು.  ಇದಕ್ಕೆ ಉದಾಹರಣೆ ಕೊಡುವುದಾದರೆ : ಗೋವು, ವೃಕ್ಷಗಳಲ್ಲಿ ತುಳಸೀ, ಅರಳಿ.. ಅಂದರೆ ಇದರ ಅರ್ಥ ಈ ಸನ್ನಿಧಾನಗಳಲ್ಲಿ ಭಗವಂತನ ಅಭಿವ್ಯಕ್ತ ಶುದ್ಧವಾಗಿರುತ್ತದೆ, ಪವಿತ್ರವಾಗಿರುತ್ತದೆ ಎಂದು.  ಆದ್ದರಿಂದ ಎಲ್ಲಿ ವಿಶೇಷ ಅಭಿವ್ಯಕ್ತಿ ಇದೆಯೋ ಅಲ್ಲಿ ನಾವು ನಮಸ್ಕರಿಸುತ್ತೇವೆ. ಇಲ್ಲಿ ಪರಮ ಭಾಗವತರು ಎಂದರೆ ಭಗವಂತನನ್ನು ನಿರಂತರ ಧ್ಯಾನಿಸುವವರು, ಅವನ ಇರುವಿಕೆಯ ಅರಿವು ಉಳ್ಳವರು.  ಇವರಲ್ಲಿ ಭಗವಂತನ ಸನ್ನಿಧಾನ ತುಂಬಾ ವಿಶೇಷವಾಗಿ ಅಭಿವ್ಯಕ್ತವಾಗುವುದಾದ್ದರಿಂದ, ಅವರಿಗೆ ನಾವು ನಮಿಸೋಣ, ನಿರಂತರ ಅವರ ಸಂಪರ್ಕದಿಂದ ನಮ್ಮ ಮನಸ್ಸೂ ಅರಳಿ ನಮಗೂ ಭಗವಂತನ ಅರಿವಿನ ಪರಿಮಳವನ್ನು ಶ್ರೀ ವಾಯುದೇವರು ನಮ್ಮ ಅನುಭವಕ್ಕೆ ತಂದುಕೊಡಲಿ ಎಂದು ಪ್ರಾರ್ಥಿಸುತ್ತಾ ಶ್ರೀ ಜಗನ್ನಾಥ ದಾಸರು ಮಂಗಳಾಚರಣ ಸಂಧಿಯನ್ನು ಮುಗಿಸುತ್ತಾರೆ. 

Monday, October 17, 2011

ಮಂಗಳಾಚರಣ ಸಂಧಿ - ೧೨ ನೇ ಪದ್ಯ...ಪಾಕಶಾಸನ ಮುಖ್ಯ ಸಕಲ ದಿ


ವೌಕಸರಿಗಭಿನಮಿಪೆ ಋಷಿಗಳಿ


ಗೇಕ ಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ |


ಆ ಕಮಲನಾಭಾದಿ ಯತಿಗಳ


ನೀಕಕಾ ನಮಿಸುವೆನು ಬಿಡದೆ ರ


ಮಾಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||

ಪ್ರತಿಪದಾರ್ಥ :  ಪಾಕಶಾಸನ - ಪಾಕನೆಂಬ ಅಸುರನನ್ನು ಕೊಂದ ಇಂದ್ರದೇವ, ಮುಖ್ಯ ಸಕಲದಿವೌಕಸರಿಗೆ - ಮುಖ್ಯವಾದ ಮತ್ತು ಸಮಸ್ತ ತತ್ತ್ವಾಭಿಮಾನಿ ದೇವತೆಗಳಿಗೆ, ಅಭಿನಮಿಪೆ - ನಮಸ್ಕರಿಸುವೆ, ಋಷಿಗಳಿಗೆ ಏಕ ಚಿತ್ತದಿ - ಸಮಸ್ತ ಋಷಿಗಳಿಗೂ ಒಂದೇ ಮನಸ್ಸಿನಿಂದ, ಪಿತೃಗಳಿಗೆ - ಪಿತೃದೇವತೆಗಳಿಗೆ, ಗಂಧರ್ವ ಕ್ಷಿತಿಪರಿಗೆ - ತಾರತಮ್ಯದ ಪ್ರಕಾರ ಪಿತೃದೇವತೆಗಳ ನಂತರ ಗಂಧರ್ವರಿಗೆ ಮತ್ತು ಕ್ಷಿತಿಪರು ಎಂದರೆ ಚಕ್ರವರ್ತಿಗಳಿಗೆ, ಆ ಕಮಲ ನಾಭಾದಿಯತಿಗಳ ಅನೀಕಕೆ - ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀಪದ್ಮನಾಭ ತೀರ್ಥರಾದಿಯಾಗಿ ಸಮಸ್ತ ಯತಿ ಶ್ರೇಷ್ಠರುಗಳ ಸಮೂಹಕ್ಕೆ, ಆ ನಮಿಸುವೆನು - ನಾನು ನಮಸ್ಕರಿಸುವೆನು, ಬಿಡದೆ - ಮರೆಯದೇ, ರಮಾಕಳತ್ರನ - ರಮೆಯ ವಲ್ಲಭನಾದ ಶ್ರೀಹರಿಯ, ದಾಸವರ್ಗಕೆ - ವಿಷ್ಣು ಭಕ್ತರಾದ ದಾಸ ಪರಂಪರೆಗೆ, ನಮಿಪೆನನವರತ - ಅನವರತವಾಗಿ ನಮಸ್ಕರಿಸುವೆನು.
ಸಮಸ್ತ ತತ್ವಾಭಿಮಾನಿ  ದೇವತೆಗಳನ್ನು ವಂದಿಸಿದ ನಂತರ ಈ ಚರಣದಲ್ಲಿ ಇಂದ್ರಾದಿ ದೇವತೆಗಳಿಂದ  ಹಿಡಿದು ದಿಗ್ದೇವತೆಗಳೂ, ಋಷಿಗಳೂ, ಪಿತೃಗಳೂ, ಗಂಧರ್ವರೂ, ಉತ್ತಮ ರಾಜರುಗಳು, ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರ ಸ್ವೋತ್ತಮ ಜೀವಿಗಳೆಲ್ಲರಿಗೂ ನಮಸ್ಕರಿಸಿ, ಹರಿದಾಸರುಗಳಾದ ಪುರಂದರ ದಾಸರಿಂದ   ಗೋಪಾಲದಾಸರವರೆಗೂ ಎಲ್ಲರಿಗೂ ನಮಸ್ಕರಿಸುತ್ತಾರೆ.  ಇಲ್ಲಿ ವ್ಯಾಸಕೂಟಕ್ಕೂ – ದಾಸಕೂಟಕ್ಕೂ ಅಬೇಧವನ್ನು ತೋರಿಸಿದ್ದಾರೆ. 

“ಪಾಕ”ನೆಂಬ ಅಸುರನನ್ನು ನಾಶ ಮಾಡಿದವನು ಇಂದ್ರ, ಅದಕ್ಕೆಂದೇ ಅವನು “ಪಾಕಶಾಸನ” ಹಾಗೂ ನಮ್ಮ ಮನಸ್ಸನ್ನು ಪಾಕ ಮಾಡುವವನು ಎಂದೂ ಅರ್ಥವಾಗುತ್ತದೆ.  ಇಂದ್ರ ಚಂದ್ರರು ಕೂಡ ಮನೋಭಿಮಾನಿ ದೇವತೆಗಳೇ.  ಪಾಕಶಾಸನನಾದ ಇಂದ್ರ ಕಶ್ಯಪ-ಅದಿತಿಯರ ಜ್ಯೇಷ್ಠ ಪುತ್ರ ಮತ್ತು ಅತಿ ಸುಂದರಾಂಗ.  ದೇವತೆಗಳಲ್ಲೇ ಅತ್ಯಂತ ಎತ್ತರವಿರುವ, ವಜ್ರಾಯುಧ ಹಿಡಿದಿರುವ, ಐರಾವತ ಮತ್ತು ಉತ್ತಮ ಅಶ್ವವನ್ನು ಹೊಂದಿದ, ಸ್ವರ್ಗಾಧಿಪತಿ.  ಇಂದ್ರ ದೇವನು ಮಾನಸಿಕ ಸಂರಚನೆ ಹಾಗೂ ತತ್ಸಂಬಂಧಿತ ಕ್ರಿಯೆಗಳಿಗಾಗಿ ಸಾಮರ್ಥ್ಯವನ್ನು  ಬೆಳೆಸಿಕೊಳ್ಳುವುದಕ್ಕೆ ಮಾನವರಿಗೆ ನೆರವು ನೀಡುವವನು. ಋಗ್ವೇದದಲ್ಲಿ ಸುಮಾರು ೨,೫೦೦ ಮಂತ್ರಗಳು ಇಂದ್ರ ದೇವನಿಗೆ ಅರ್ಪಿತವಾಗಿವೆ. ಋಗ್ವೇದದಲ್ಲಿ ಸಕಲ ಕ್ರಿಯೆಗಳ ಅಧಿದೈವವೆಂದು ಇಂದ್ರನನ್ನು ‘ಮಹೀ’ ಎಂದರೆ ವೈಶಾಲ್ಯತೆಯ ದೇವತೆಯೆಂದೂ, ‘ಸೂನೃತ’ ಎಂದರೆ ಪ್ರಿಯ ಮತ್ತು ಶುಭವಾಣಿಗಳನ್ನು ಉಳ್ಳವನೆಂದೂ, ‘ವಿರಪ್ಶಿ’ ಎಂದರೆ ಸಮೃದ್ಧಿಯಿಂದ ಕಾಂತಿಯುಕ್ತ ಆಗಿರುವವನೆಂದೂ, ‘ಗೋಮತಿ’ ಎಂದರೆ ಪ್ರಕಾಶಮಾನವಾದ ಜ್ಞಾನಭರಿತನೆಂದೂ ಹಾಗೂ ಯಜ್ಞಕರ್ತನಿಗೆ ಮಾಗಿದ ಹಣ್ಣಿನಂತೆ ಲಭ್ಯವಾಗುವನೆಂದೂ ವರ್ಣಿಸಲಾಗಿದೆ.  ಹಾಗೇ ಇಂದ್ರನ ಅನೇಕ ಗುಣಗಳಲ್ಲಿ ಈ ಕೆಲವು ಪ್ರಮುಖವಾದವುಗಳನ್ನು ಹೆಸರಿಸಿದ್ದಾರೆ :

೧.  ಪರಿಪೂರ್ಣ ಆಕೃತಿಗಳನ್ನು ವಿನ್ಯಾಸ ಮಾಡುವವನು
೨)  ಇಂದ್ರನು ಬೆಳಕನ್ನು ಸುರಿಸುವವನು
೩)  ಇಂದ್ರನು ಗೆಳೆಯನಿಗೆ ಸಂತೋಷ ನೀಡುವವನು
೪)  ವೃತ್ರ ಸಂಹಾರಕ

ಶ್ರೇಷ್ಠವಾದ ಮಾನಸಿಕ ಚಲನೆಯನ್ನುಂಟು ಮಾಡುವ ಹಾಗೂ ದಿನೇ ದಿನೇ ಅದನ್ನು ವೃದ್ಧಿಸುವ ಸಾಮರ್ಥ್ಯ ಉಳ್ಳವನಾದ್ದರಿಂದ ಅವನು ಪರಿಪೂರ್ಣ ಆಕೃತಿಗಳನ್ನು ವಿನ್ಯಾಸ ಮಾಡುವವನು, ಅಧ್ಯಾತ್ಮಿಕ ಜ್ಯೋತಿಯ ಕಿರಣಗಳನ್ನು ಸುರಿಸುತ್ತಾ,  ರಾಕ್ಷಸೀ ಶಕ್ತಿಯಾದ ವೃತ್ರನ ಸಂಹಾರ ಮಾಡುತ್ತಾ ಎಲ್ಲಾ ಆರಾಧಕರನ್ನೂ ರಕ್ಷಿಸುವವನು ಎನ್ನುತ್ತಾರೆ.  ಇಂತಹ ಇಂದ್ರಾದಿ ಸಕಲ ದೇವತೆಗಳು ನನ್ನ ಮನದೊಳಗಿದ್ದು ಒಳ್ಳೆಯದು ಮಾಡಲಿ ಎಂದು ಜಗನ್ನಾಥ ದಾಸರು  ಪ್ರಾರ್ಥಿಸುತ್ತಾರೆ.

“ದಿವೌಕಸ”ರೆಂದರೆ ಸ್ವರ್ಗದಲ್ಲಿರುವ ಎಲ್ಲಾ ದೇವತೆಗಳು ಎಂದು ಅರ್ಥವಾಗುತ್ತದೆ.  ದೇವತೆಗಳ ನಂತರ ಜ್ಞಾನ ಮಾರ್ಗ ತೋರುವ ಋಷಿಗಳಿಗೆ ವಂದಿಸುತ್ತಾರೆ.  ಏಕಚಿತ್ತದಿ ಪಿತೃದೇವತೆಗಳಾದ ಯಮ, ಚಂದ್ರ, ಅಗ್ನಿ, ವಾಸು-ರುದ್ರ-ಆದಿತ್ಯರು ಎಲ್ಲರಿಗೂ, ನಂತರ ಗಂಧರ್ವರಿಗೂ, ಕ್ಷಿತಿಪರಿಗೂ (ಹಿಂದೆ ಈ ಭೂಮಿಯನ್ನಾಳಿದ ದೇವತೆಗಳಿಗೆ ಸಮರಾಗಿ ನಿಂತ ಚಕ್ರವರ್ತಿಗಳು) ಕೊನೆಗೆ ಈ ಭೂಮಿಯಲ್ಲಿ ಜನ್ಮಿಸಿದ ಆಚಾರ್ಯರು, ಅವರ ಶಿಷ್ಯರಾದ “ಕಮಲನಾಭಾದಿ” (ಪದ್ಮನಾಭ ತೀರ್ಥರು) ಯತಿಗಳ ಸಮೂಹಕ್ಕೂ  ವಂದಿಸಿ, ಬಿಡದೆ ನಿರಂತರವಾಗಿ ಶ್ರೀಹರಿಯ ಸ್ಮರಣೆ ಮಾಡುವ ಆ ರಮಾಕಳತ್ರನ ಸಮಸ್ತ ಭಕ್ತ ವರ್ಗದವರೆಲ್ಲರಿಗೂ ಕೂಡ ನಮಿಸುತ್ತಾರೆ.

ಜಗನ್ನಾಥ ದಾಸರು ತಮ್ಮ ಒಂದು ಸುಳಾದಿಯಲ್ಲಿ :

ಆ ಸರಸಿಜಭವ ವಾಸವಾದಿಗಳನು ಬ್ಯಾಸರವಿಲ್ಲದೆ ಪೊರೆವೆ |  ಶಾಶ್ವತ ಮೂರುತಿ ವಾಸವಾನುಜ ಜಗನ್ನಾಥ ವಿಟ್ಠಲ ನಿನ್ನ ದಾಸನ ಅಪರಾಧ ಲೇಶ ನೋಡದೆ ಕಾಯೋ ||
ಎನ್ನುತ್ತಾ ಎಲ್ಲರಿಗೂ ನಮಿಸುತ್ತಾರೆ..


ಚಿತ್ರಕೃಪೆ : ಅಂತರ್ಜಾಲ
ವಿಷಯಾಧಾರ  : ಶ್ರೀ ಅರ ಎಲ್  ಕಶ್ಯಪ್ ಅವರ "ಇಂದ್ರ" ಪುಸ್ತಕ

Sunday, September 18, 2011

ಮಂಗಳಾಚರಣ ಸಂಧಿ - ೧೧ ನೇ ಪದ್ಯ...

ಕೃತ್ತಿವಾಸನೆ ಹಿಂದೆ ನೀ ನಾ
ಲ್ವತ್ತು ಕಲ್ಪಸಮೀರನಲಿ ಶಿ
ಷ್ಯತ್ವ ವಹಿಸಿ ಅಖಿಳಾಗಮಾರ್ಥಗಳೋದಿ ಜಲಧಿಯಲಿ |
ಹತ್ತು ಕಲ್ಪದಿ ತಪವ ಗೈದಾ
ದಿತ್ಯರೊಳಗುತ್ತಮನೆನಿಸಿ ಪುರು
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ ||೧೧||


ಪ್ರತಿಪದಾರ್ಥ : ಕೃತ್ತಿವಾಸನೆ - ಮೃಗದ ಚರ್ಮವನ್ನು ಧರಿಸಿರುವ ರುದ್ರದೇವನೆ, ಹಿಂದೆ ನೀ - ರುದ್ರ ಪದವಿಗೆ ಬರುವ ಮೊದಲು ನೀನು, ನಾಲ್ವತ್ತು ಕಲ್ಪ - ಬ್ರಹ್ಮನ ೪೦ ದಿನಗಳ ಕಾಲ, ಸಮೀರನಲಿ - ವಾಯುದೇವರಲ್ಲಿ, ಶಿಷ್ಯತ್ವವಹಿಸಿ - ಶಿಷ್ಯನಾಗಿದ್ದುಕೊಂಡು, ಅಖಿಳಾಗಮಾರ್ಥಗಳೋದಿ - ಸಮಸ್ತ ಶಾಸ್ತ್ರಗಳ ಅಧ್ಯಯನವನ್ನು ಮಾಡಿ, ಜಲಧಿಯೊಳು - ಲವಣ ಸಮುದ್ರದಲ್ಲಿ, ಹತ್ತು ಕಲ್ಪದಿ - ಬ್ರಹ್ಮನ ೧೦ ದಿನಗಳ ಕಾಲ, ತಪವ ಗೈದು - ತಪಸ್ಸನ್ನು ಮಾಡಿ, ಆದಿತ್ಯರೊಳಗೆ - ದೇವತೆಗಳಲ್ಲಿ, ಉತ್ತಮನೆನಿಸಿ - ಶ್ರೇಷ್ಠನೆಂದೆನಿಸಿಕೊಂಡು, ಪುರುಷೋತ್ತಮನ - ಶ್ರೀಹರಿಯ, ಪರಿಯಂಕಪದವ - ಶಯನವಾದ ಶೇಷ ಪದವಿಯನ್ನು, ಐದಿದೆಯೋ ಮಹದೇವ - ಪಡೆದೆಯೋ ಮಹದೇವ.

ಇಲ್ಲಿ ರುದ್ರದೇವರನ್ನು “ಕೃತ್ತಿವಾಸನೆ” ಎಂದು ಸಂಬೋಧಿಸಿದ್ದಾರೆ. “ಕೃತ್ತಿ” ಎಂದರೆ ಚರ್ಮ ಎಂಬ ಅರ್ಥ ಬರುತ್ತದೆ, ಸಂಸ್ಕೃತದಲ್ಲಿ ಕೃತ್ತಿ ಎಂದರೆ ಛೇದನ - ಕತ್ತರಿಸಲಿಕ್ಕೆ ಬರುವಂತಹುದು. ರುದ್ರ ದೇವರು ಹುಲಿಯ ತೊಗಲನ್ನು ಬಟ್ಟೆಯಾಗಿ ಉಳ್ಳವರು. ಚರ್ಮಮಯವಾದ ಶರೀರದ ಒಳಗೆ “ಮನೋಮಯ” ಸ್ವರೂಪದಲ್ಲಿ ಇರುತ್ತಾರೆ ರುದ್ರ ದೇವರು. ಆದ್ದರಿಂದ ಅವರಿಗೆ ಚರ್ಮಾಂಬರನೆಂದೂ ಕರೆಯುತ್ತಾರೆ (“ಗಜ ಚರ್ಮಾಂಬರ”ನೆಂದೂ ಕರೆಯುವ ಕಾರಣವೇನೆಂದರೆ – “ಗಜ” ಸಂಪತ್ತಿನ ಸಂಕೇತ. ಶಿವ ಗಜನನ್ನು, ಸಂಪತ್ತನ್ನು ಬಿಟ್ಟು ಅದರ ತೊಗಲನ್ನು ತೊಟ್ಟವನು. ಇದು ವೈರಾಗ್ಯದ ಸೂಚಕ). ನಾವು ಈ ಚರ್ಮವನ್ನು (ಶರೀರ) ಛೇದಿಸಿಕೊಂಡು, ಮನೋಮಯ ಕೋಶಕ್ಕೆ ತಲುಪಿದಾಗಲೇ ನಮಗೆ ರುದ್ರ ದೇವರ ಅನುಗ್ರಹವಾಗುವುದೆಂದು ಅರ್ಥೈಸಿ ಕೊಳ್ಳಬಹುದು.


ಶ್ರೀ ಶಂಕರರು "ಶಿವ ಮಾನಸ ಪೂಜಾ" ಎಂಬ ರಚನೆಯಲ್ಲಿ

"ಆತ್ಮಾ ತ್ವಂ ಗಿರಿಜಾ ಮತಿ: ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿ: |
ಸಂಚಾರಃ ಪದಯೋ: ಪ್ರದಕ್ಷಿಣವಿಧಿ: ಸ್ತೋತ್ರಾಣಿ ಸರ್ವಾಗಿರೋ
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||


ನಮ್ಮ ಶರೀರವನ್ನೇ ಆಲಯವನ್ನಾಗಿಸಿ, ನಮ್ಮ ಸಂಚಾರವನ್ನು ಪ್ರದಕ್ಷಿಣೆಯಾಗಿಸಿ, ನಿದ್ರೆಯನ್ನು ಸಮಾಧಿ ಸ್ಥಿತಿ ಎಂದು ವಿವರಿಸುತ್ತಾ ನಮ್ಮ ಮನಸ್ಸನ್ನು ಹೇಗೆ ಶಿವನಲ್ಲಿ ಲೀನವಾಗಿಸಿ ಮಾನಸ ಪೂಜೆಯನ್ನು ಮಾಡಬೇಕೆಂದು ತಿಳಿಸುತ್ತಾರೆ.


ಹಾಗೇ ಶಿವಾನಂದಲಹರಿಯಲ್ಲಿ

ಆಶಾಪಾಶ ಕ್ಲೇಶಕುರ್ವಾಸನಾದಿ -
ಭೇದೋಧ್ಯುಕ್ತೈರ್ದಿವ್ಯಗಂಧೈರಮಂದೈ: |
ಆಶಾಶಾಟೀಕಸ್ಯ ಪಾದಾರವಿಂದಂ
ಚೇತಃಪೇಟೀಂ ವಾಸಿತಾಂ ಮೇ ತನೋತು ||


ಇಲ್ಲಿ ಮನಸ್ಸನ್ನು ಪೆಟ್ಟಿಗೆಗೆ ಹೋಲಿಸುತ್ತಾರೆ. ಲೌಕಿಕ ವಿಷಯಗಳ ಆಸೆಗಳಲ್ಲಿ ಆಸಕ್ತಿ ಸಾಕು, ಅದು ಹಗ್ಗದಂತೆ ನಮ್ಮನ್ನು ಬಂಧಿಸುತ್ತದೆ. ಆದ್ದರಿಂದ ಈ ವಿಷಯಾಸಕ್ತಿಗಳನ್ನೆಲ್ಲಾ ನಿನ್ನ ಪಾದಾರವಿಂದಕ್ಕರ್ಪಿಸುವಂತೆ ಮಾಡಿ, ನನ್ನ ಮನಸ್ಸೆಂಬ ಪೆಟ್ಟಿಗೆಯನ್ನು ದಿವ್ಯ ಪರಿಮಳದಿಂದ ಕೂಡಿರುವಂತೆ ಮಾಡು, ಅಲ್ಲಿ ನೀನು ನೆಲೆಸು ಎಂದು ಪ್ರಾರ್ಥಿಸುತ್ತಾರೆ. ಆಶಾಪಾಶಕ್ಲೇಶಗಳು ದುರ್ಗಂಧದ ವಸ್ತುಗಳು ಎಂಬರ್ಥ.

ಜಗನ್ನಾಥ ದಾಸರು ರುದ್ರ ದೇವರ ಸಾಧನಾ ಪದವಿ ಬಗ್ಗೆ ತಿಳಿಸುತ್ತಾ ಹಿಂದೆ ಅವರು ಶಿವ ಪದವಿಗೆ ಬರುವ ಮುನ್ನವೂ ಸಾಧನೆ ಮಾಡಿದ್ದರು. ಈಗಲೂ ಮಾಡುತ್ತಿದ್ದಾರೆನ್ನುತ್ತಾರೆ. ಈ ಸಾಧನೆಯಿಂದ ಅವರು ಶ್ರೀ ಹರಿಯ ಪರಿಯಂಕ ಅಂದರೆ ಶೇಷ ಪದವಿಯನ್ನು ಪಡೆಯುವವರಾಗುತ್ತಾರೆ. ಶೇಷ ಹಾಗೂ ರುದ್ರ ಇಬ್ಬರೂ ಒಂದೇ ರೂಪದವರು. ರುದ್ರ ದೇವರೇ ಮುಂದೆ ಶೇಷನಾಗುವವರು. ರುದ್ರ ದೇವರು ಶೇಷದೇವನಾದಾಗ ಅವರೇ ನಮಗೆ ವಾಕ್ ಕೊಡುವವರು ಹಾಗೂ ನಮ್ಮ ಮಾತುಗಳನ್ನು ನಿಯಂತ್ರಿಸುವವರು. ರುದ್ರ ದೇವರ ಅನುಗ್ರಹವಿಲ್ಲದೆ ಯಾವ ಸಾಧನೆಯೂ ಇಲ್ಲ. ನಾವು ಎಷ್ಟೇ ತಿಳಿದರೂ ತಿಳಿಯುವುದು ಇನ್ನೂ ಉಳಿದೇ ಇರುತ್ತದೆ. ಆದ್ದರಿಂದ ದೇವತೆಗಳೂ ಕೂಡ ಕಲ್ಪ ಕಲ್ಪದಲ್ಲಿಯೂ ತಮ್ಮ ಸಾಧನೆಯನ್ನು ಮುಂದುವರೆಸುತ್ತಲೇ ಇರುತ್ತಾರೆ. ರುದ್ರ ದೇವರು ಶೇಷ ಪದವಿಗಾಗಿ ೫೦ ಕಲ್ಪಗಳು ಸಾಧನೆ ಮಾಡುತ್ತಾರೆ. ೪೦ ಕಲ್ಪಗಳು ವಾಯುದೇವರಲ್ಲಿ ಅಭ್ಯಾಸ ಮಾಡಿ ಇನ್ನೂ ೧೦ ಕಲ್ಪ ತಾವು ಅಧ್ಯಯನ ಮಾಡಿದ ಜ್ಞಾನವನ್ನು ಲವಣ ಸಮುದ್ರದಲ್ಲಿ ಕುಳಿತು ಧ್ಯಾನ ಮಾಡಿ ಮನನ ಮಾಡಿಕೊಂಡರೆಂದು ತಿಳಿಯುತ್ತದೆ. ಇದರಿಂದ ಅವರ ಶೇಷ ಪದವಿಯ ಸಾಧನೆ ೫೦ ಕಲ್ಪಗಳು ಮತ್ತು ಈ ಸಾಧನೆಯ ನಂತರ ೧೦೦ನೆಯ ಕಲ್ಪದಲ್ಲಿ ಅವರು ಶೇಷ ಪದವಿಯನ್ನು ಪಾರ್ವತಿ ಸಹಿತವಾಗಿ ಸೇರುತ್ತಾರೆ. ಸಾಧನೆಯಲ್ಲಿ ರುದ್ರ ದೇವರು ಅತ್ಯುತ್ತಮ ಪದವಿಗೇರಿದವರು.

ಜಗನ್ನಾಥ ದಾಸರು ಶೇಷದೇವರ ಕುರಿತು ರಚಿಸಿರುವ ಒಂದು ಕೀರ್ತನೆಯಲ್ಲಿ ಶೇಷದೇವರನ್ನು..

ಬಲು ರಮ್ಯವಾಗಿದೆ ಶ್ರೀಹರಿಯ ಮಂಚ | ಯಲ ಋಣಿ ಕುಳರಾಜ ರಾಜೇಶ್ವರನ ಮಂಚ || ||

ಪವನತನಯನೆನಿಪ ಪಾವನಕರ ಮಂಚ | ಭುವನತ್ರಯನ ಪೊತ್ತ ಭಾರಿ ಮಂಚ |
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ | ಶಿವರೂಪದಲ್ಲಿ ಶ್ರೀಹರಿಯ ವಲಿಸಿದ ಮಂಚ ||||

ನೀರಾಂಬರವನ್ನುಟ್ಟು ನಳನಳಿಸುವ ಮಂಚ | ನಾಲಿಗೆ ಎರಡುಳ್ಳ ನೈಜ ಮಂಚ |
ನಾಲ್ವತ್ತು ಕಲ್ಪದಿ ತಪವಮಾಡಿದ ಮಂಚ | ತಾಲ ಮುಲ ಹಲವ ಪಿಡಿದಿಹ ಮಂಚ ||||

ರಾಮನನುಜನಾಗಿ ಶರಾದ ಜಯಿಸಿದ ಮಂಚ | ತಾಮಸ ರುದ್ರನ ಪಡೆದ ಮಂಚ |
ಭೀಮನನುಜನೊಳು ಆವೇಶಿಸಿದ ಮಂಚ | ಜೀಮೂತ ಮಲ್ಲರನು ಕಟ್ಟಿದ ಮಂಚ ||||

ಜೀವನಾಮಕನಾಗಿ ವ್ಯಾಪ್ತನಾದ ಹರಿಯ | ಸೇವಿಸಿ ಸುಖಿಸುವ ದಿವ್ಯ ಮಂಚ |
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ | ದೇವಕಿಯ ಜಠರದಿ ಜನಿಸಿದ ಮಂಚ ||||

ವಾರುಣಿ ದೇವಿಗೆ ವರನೆನಿಸಿದ ಮಂಚ | ಸಾರುವ ಭಕ್ತರ ಪೊರೆವ ಮಂಚ |
ಕಾರುಣ್ಯ ನಿಧಿ ಜಗನ್ನಾಥ ವಿಠಲನ | ವಿಹಾರಕ್ಕೆ ಯೋಗ್ಯವಾದ ಶೇಷ ಮಂಚ ||||

ಎನ್ನುತ್ತಾ ಸುಂದರವಾಗಿ ವರ್ಣಿಸುತ್ತಾರೆ.


ಶೇಷ - ಕಾಲದ ಸಂಕೇತ. ಎಲ್ಲಾ ನಾಶವಾದ ನಂತರ ಉಳಿಯುವುದು “ಕಾಲ” ಮಾತ್ರ. ಶೇಷ ಶಕ್ತಿಯೆಂದರೆ ಇಡೀ ವಿಶ್ವವನ್ನು ಧಾರಣೆ ಮಾಡುವ ಶಕ್ತಿ ಎಂದರ್ಥ. ಕಾಲಾಭಿಮಾನಿ, ಕಾಲವನ್ನು ನಿಯಂತ್ರಿಸುವವನು ಎಂದರ್ಥ. ಭಗವಂತ ಕಾಲಾತೀತ, ಏಕೆಂದರೆ ಅವನು ಕಾಲನನ್ನು ತನ್ನಡಿಯಲ್ಲಿ ಹಾಕಿಕೊಂಡು ಮಲಗಿರುವವನು.

ಶೇಷ ಕುಂಡಲಿನಿ ಶಕ್ತಿ, ನಮ್ಮೊಳಗೇ ಇರುವವನು. ಈ ಶೇಷ ದೇವರು (ಶಕ್ತಿ) ಜಾಗೃತವಾದಾಗ, ಸರ್ಪದ ಸಹಸ್ರಾರು ಹೆಡೆಗಳು ಬಿಚ್ಚಿ ನಮಗೆ ಭಗವಂತ ಕಾಣುತ್ತಾನೆ. ಅವನು ಶೇಷಶಾಯಿ. ಕ್ಷೀರ ಸಮುದ್ರವೆಂದರೆ ಜ್ಞಾನಾನಂದಮಯವಾದ ಲೋಕ ಎಂದರ್ಥವಾಗುತ್ತದೆ. ಆ ಜ್ಞಾನಾನಂದಮಯ ಲೋಕದ ಅರಿವು ಶೇಷ ಶಕ್ತಿ ಜಾಗೃತವಾದಾಗ ನಮ್ಮ ಹೃದಯ ಸಮುದ್ರದಲ್ಲಿ ಮಾತ್ರ ಕಾಣ ಸಿಗುವಂತಹುದು. ಪ್ರಪಂಚ ಸೃಷ್ಟಿಯಾಗುವುದಕ್ಕಿಂತ ಮುಂಚಿನಿಂದಲೂ ಸಾಧನೆ ಮಾಡುತ್ತಿರುವ ಆದಿತ್ಯರೆಲ್ಲರಲ್ಲೂ ಉತ್ತಮರು ರುದ್ರ ದೇವರು. ಪುರುಷೋತ್ತಮನ ಪರಿಯಂಕನಾಗುವವ ಎಂದರೆ ಉತ್ತರ ಕಲ್ಪಕ್ಕೆ ದೇವರ ಪರಿಯಂಕಪದವಿ (ಮಂಚದ) “ಶೇಷ” ಪದವಿ ಪಡೆಯುವವರಾಗಿ ಸದಾ ಭಗವಂತನ ಜೊತೆಯಲ್ಲೇ ಇರುವಂತಹ ಮಹಾಭಾಗ್ಯ ಪಡೆದವರಾದ್ದರಿಂದಲೇ ರುದ್ರ ದೇವರು “ಮಹಾದೇವನು”.

ಶ್ರೀ ಮಧ್ವಾಚಾರ್ಯರ ಶಿಷ್ಯರೂ ಹಾಗೂ ತ್ರಿವಿಕ್ರಮ ಪಂಡಿತರ ಮಗನೂ ಆದ ಶ್ರೀ ನಾರಾಯಣ ಪಂಡಿತರು
ರುದ್ರ ದೇವರ ಕುರಿತು ಹೇಳಿದಂತೆ ನಾವು ಸದಾ ರುದ್ರ ದೇವರನ್ನು


ನಮಃ ಶಿವ ಶಿವಾ ಶಿವ ಶಿವ ಶಿವಾರ್ದ್ರಗ್ರಂಥಾ ಶಿವಂ |
ನಮೋ ಹರ ಹರಾ ಹರ ಅಂತರೀಮೇದೃಶಂ |
ನಮೋ ಭವ ಭವಾ ಭವ ಪ್ರಭಾವ ಭೂತಯೇ ಸಂಪದಂ |
ನಮೋ ಮೃಡನಂ ನಮೋ ನಮೋ ಉಮೇಶ ತುಭ್ಯಂ ನಮಃ ||


ಎಂದು ಪ್ರಾರ್ಥಿಸುತ್ತಿದ್ದರೆ ಮನೋನಿಯಾಮಕರಾದ ರುದ್ರ ದೇವರು ನಮ್ಮ ಮನಸ್ಸು ಧೃಡವಾಗಿ ಶ್ರೀಹರಿಯಲ್ಲಿ ನೆಲೆಸುವಂತೆ ಅನುಗ್ರಹಿಸುತ್ತಾರೆ.

ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೀಗೇ ಹೇಳುತ್ತಾ..


ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು |  

ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||  
ಬೇಸರದ ಪಾತಕ ಸ್ಮೃತಿಯ ಚುಚ್ಚದಿರ್ : ಎನ್ನು - |  
ತೀಶನನು ಬೇಡುತಿರೊ – ಮಂಕುತಿಮ್ಮ ||


ಈ ಪ್ರಪಂಚ ಬ್ರಹ್ಮನ ವೈಭವೋಪೇತವಾದ ಒಂದು ಆಲಯ. ಇದರ ವೈಭವದ ಛಲಕುಗಳನ್ನು ನೋಡಿ, ನನಗೂ ಬೇಕು ಎಂಬ ಆಸೆ ಬರಬಹುದು. ಆದ್ದರಿಂದ ತಿಮ್ಮಗುರುವೆ ನೀನು ಈಶ್ವರನನ್ನು ಆಸೆಗಳನ್ನು ಕೆಣಕಿ ಅವು ನನಗೇ ಬೇಕು ಎಂಬ ಮನಸ್ಸು ಕೊಡಬೇಡ. ಈ ಲೌಕಿಕದ ವಸ್ತುಗಳು, ವ್ಯಕ್ತಿಗಳು ನನ್ನನ್ನು ಪಾಶದಂತೆ ಬಿಗಿಯದಿರಲಿ, ನಿನ್ನನ್ನು ಮರೆತು ನಾನು ಯಾವಾಗ ಪಾಪ ಮಾಡುತ್ತೇನೋ ಮತ್ತು ಅದು ನನ್ನ ಅಂತರಂಗ ಚುಚ್ಚುವುದೋ ತಿಳಿಯುವುದಿಲ್ಲ. ಆ ನೋವು, ಯಾತನೆಯನ್ನು ನಾನು ಭರಿಸಲಾರೆ. ನನಗೆ ಆ ಕಷ್ಟ ಕೊಡಬೇಡ, ನಿನ್ನ ಸ್ಮರಣೆಯೇ ಎಂದೆಂದೂ ನನಗೆ ಇರಲಿ ಎಂದು ಕೇಳಿ ಕೊಳ್ಳುತ್ತಾರೆ.
 
ಚಿತ್ರಕೃಪೆ : ಅಂತರ್ಜಾಲ

Monday, August 29, 2011

ಮಂಗಳಾಚರಣ ಸಂಧಿ - ೧೦ ನೇ ಪದ್ಯ...

 
ವಾಮದೇವ ವಿರಿಂಚಿತನಯ ಉ

ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ|
ಕಾಮಹರ ಕೈಲಾಸಮಂದಿರ
ಸೋಮಸೂರ್ಯಾನಲ ವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ ||೧೦||

ಪ್ರತಿಪದಾರ್ಥ : ವಾಮದೇವ - ಸುಂದರನಾದಂತಹ ದೇವ, ವಿರಿಂಚಿತನಯ - ಬ್ರಹ್ಮದೇವನ ಪುತ್ರ, ಉಮಾಮನೋಹರ - ಉಮಾದೇವಿಯ ಮನಸ್ಸನ್ನು ಮುದಗೊಳಿಸುವವ, ಉಗ್ರ - ಉ ಎಂದರೆ ಸಂಸಾರ ಮತ್ತು ಗ್ರ ಎಂದರೆ ಸಂಸಾರವನ್ನು ಗ್ರಸನ ಮಾಡುವವನು, ಧೂರ್ಜಟಿ - ಜಟೆಯಲ್ಲಿ ಗಂಗೆಯನ್ನು ಧರಿಸಿರುವವನು, ಸಾಮಜಾಜಿನ ವಸನಭೂಷಣ - ಸಾಮಜ ಎಂದರೆ ಗಜ, ಆಜಿನ ಎಂದರೆ ಚರ್ಮ, ವಸನ ಎಂದರೆ ವಸ್ತ್ರ, ಭೂಷಣ ಎಂದರೆ ಅಲಂಕರಿಸಿಕೊಂಡವ, ಸುಮನಸೋತ್ತಂಸ - ಸುಮನಸರು ಎಂದರೆ ಜ್ಞಾನಿಗಳಾದ ದೇವತೆಗಳು ಮತ್ತು ಅಂತಹವರಲ್ಲಿ ಉನ್ನತಸ್ಥಾನದಲ್ಲಿರುವವನು, ಕಾಮಹರ - ಕಾಮ (ಮನ್ಮಥ)ನನ್ನು ಸಂಹರಿಸಿದ ಪರಮ ವೈರಾಗಿ, ಕೈಲಾಸ ಮಂದಿರ - ಕೈಲಾಸವನ್ನು ತನ್ನ ಮನೆಯನ್ನಾಗಿಸಿಕೊಂಡವ, ಸೋಮಸೂರ್ಯಾನಲ ವಿಲೋಚನ - ಸೋಮ ಎಂದರೆ ಚಂದ್ರ ಮತ್ತು ಸೂರ್ಯರನ್ನು ಎಡ ಹಾಗೂ ಬಲ ಕಣ್ಣುಗಳಲ್ಲಿಯೂ,  ಅನಲ ಎಂದರೆ ಅಗ್ನಿಯನ್ನು ಹಣೆಯಲ್ಲಿಯೂ ಧರಿಸಿರುವವನು, ಕಾಮಿತಪ್ರದ - ಬೇರೆಲ್ಲಾ ದೇವತೆಗಳಿಗಿಂತಲೂ ಅತಿ ಶ್ರೀಘ್ರವಾಗಿ ಒಲಿಯುವವನು, ಸದಾಸುಮಂಗಳವ - ಒಳ್ಳೆಯ ಜ್ಞಾನವನ್ನೂ, ಭಕ್ತಿಯನ್ನೂ,  ಕರುಣಿಸೆಮಗೆ - ಕರುಣೆಯಿಂದ ನಮಗೆ ಕೊಡು.


ಈ ಪದ್ಯದಲ್ಲಿ  ದಾಸರು ರುದ್ರ ದೇವರನ್ನು ನಮಿಸುತ್ತಾರೆ
ರುದ್ರ ದೇವರು "ವಿರಿಂಚಿ" ಎಂದರೆ ಬ್ರಹ್ಮ ತನಯರುಅವರಿಗೆ ಮೂರು ಮುಖ್ಯವಾದ ಹೆಸರುಗಳು : ) ಅತ್ಯಂತ ಸುಂದರ ರೂಪನಾದವನು, ತನ್ನ ಎಡಭಾಗದಲ್ಲಿರುವ ಪರಮಾತ್ಮನನ್ನು ಸರ್ವದಾ ಉಪಾಸನೆ ಮಾಡುವವನು ವಾಮದೇವ. ಸುಂದರನೆಂದರೆ ನಮ್ಮನ್ನು ಮರುಳುಗೊಳಿಸುವಂತಹ ರೂಪವುಳ್ಳವನು ವಾಮದೇವ. ನಮ್ಮ ಮನಸ್ಸಿಗೆ ಸತ್ಯದ ಅರಿವನ್ನೂ ಮತ್ತು ಮೋಹವನ್ನೂ - ಎರಡನ್ನೂ ಕೊಡುವವನು.    ೨) "ಉ" ಏಕಾಕ್ಷರದ ಅರ್ಥ "ಶಿವ". ಉಮಾ ಎಂದರೆ ಶಿವನಲ್ಲಿ ಮನಸ್ಸಿಟ್ಟವಳುಹಾಗೂ ಉಮಾ ದೇವಿಯ ಮನಸ್ಸಿಗೆ ಸಂತೋಷ ಕೊಡುವವನು, ಉಮಾಳ ಪತಿ ಉಮಾ ಮನೋಹರ. ೩) ಶತೃಗಳಿಗೆ ಕ್ರೂರನಾದುದರಿಂದ ಉಗ್ರ. "ಉ" ಎಂದರೆ ಉತ್ಪನ್ನವಾಗಿರುವ ಪ್ರಪಂಚ ಮತ್ತು "ಉ" ಎಂದರೆ "ಉಗ್ರ".  ಇಲ್ಲಿ ’ಗ್ರ’ ಎಂದರೆ "ಗ್ರಸನ" "ಗ್ರಸತಿ" ಎಂದು ಅರ್ಥ ಆದಾಗ, ಉತ್ಪನ್ನವಾಗಿರುವ ಪ್ರಪಂಚವನ್ನು  ಗ್ರಸನ - ಸಂಹಾರ ಮಾಡುವವನು ಎಂದು ಅರ್ಥವಾಗುತ್ತದೆಹಾಗೇ "ಉಗ್" ಜ್ಞಾನಿಗಳ ಸಮುದಾಯ "ರ" - ರಮಯತಿ ಎಂದರೆ ಆನಂದ ಕೊಡತಕ್ಕವನು ಎಂದೂ ಅರ್ಥೈಸಬಹುದು.   ತ್ರಿನೇತ್ರನಾದ ರುದ್ರ ದೇವರು ಬಲಗಣ್ಣಿನಲ್ಲಿ ಸೂರ್ಯ - ಇಚ್ಛೆ ಹಾಗೂ ರಜೋಗುಣವನ್ನೂ, ಎಡಗಣ್ಣಿನಲ್ಲಿ ಚಂದ್ರ - ಜ್ಞಾನ ಹಾಗೂ ಸತ್ವಗುಣವನ್ನೂ ಮತ್ತು ಹಣೆಗಣ್ಣಿನಲ್ಲಿ ಅಗ್ನಿ - ಕ್ರಿಯೆ ಹಾಗೂ ತಮೋ ಗುಣಗಳನ್ನು ಹೊಂದಿರುತ್ತಾರೆ.   ಇಲ್ಲಿ ನಮಗೆ ಯಾವುದೇ ಸಾಧನೆಗೂ ಅಥವಾ ವಸ್ತು ನಿರ್ಮಾಣಕ್ಕೂ ಮೊದಲು ಇಚ್ಛೆ ಬರಬೇಕು ನಂತರ ಆ ಇಚ್ಛೆಯನ್ನು ಪೂರೈಸಿಕೊಳ್ಳಲು ಜ್ಞಾನ ಬೇಕು, ಕೊನೆಗೆ ಸಾಧನೆಗೂ, ಯಾವುದೇ ವಸ್ತು ನಿರ್ಮಾಣಕ್ಕೂ  ಕ್ರಿಯೆ ಬೇಕಾಗುತ್ತದೆ ಎಂಬುದನ್ನು ತಿಳಿಸುತ್ತದೆ.  ರುದ್ರ ದೇವರು  ಗಂಗೆಯನ್ನು ಶಿರದಲ್ಲಿ ಧರಿಸಲು ತಮ್ಮ ಜಟೆಯನ್ನು ಆಕಾಶದಲ್ಲಿ ಒಗೆದು ಹರಡಿದಾಗ ಅದು ಹೊಗೆಯಂತೆ ಕಂಡಿದ್ದರಿಂದ ಅವರನ್ನು ವ್ಯೋಮಕೇಶ’  ಅಥವಾ ಧೂರ್ಜಟಿಎಂಬ ಹೆಸರಿನಿಂದಲೂ ಕರೆಯುತ್ತಾರೆಧೂರ್ಜಟಿ ಮತ್ತು ಸಾಮಜಾಜಿನವಸನ ಎಂಬ ಹೆಸರುಗಳು ವೈರಾಗ್ಯವನ್ನು ಸೂಚಿಸುತ್ತವೆ.  ಸುಮನಸೋತ್ತಂಸ - ’ಸು’ ಎಂದರೆ ಭಗವಂತ, ಯಾರು ಅವನನ್ನು ಸದಾ ಧ್ಯಾನಿಸುವರೋ ಅವರು ಸುಮನಸರು, ದೇವತೆಗಳು ಎಂದರ್ಥ.  ಅಂತಹ ಸುಮನಸರಲ್ಲಿ ರುದ್ರ ದೇವರು ಉತ್ತಮರು. ಕಾಮಹರ - ರುದ್ರ ದೇವರು ತನ್ನ ಕಾಮವನ್ನು ಮಾತ್ರ ಬಿಡಲಿಲ್ಲ.  ನಮ್ಮ ಸಾಧನೆಗೆ ಬಾಧಕವಾದಾಗ ನಮ್ಮ ಕಾಮವನ್ನು ಹರಿಸಿದವರು ಎಂದರೆ, ಇಂದ್ರಿಯಗಳ ನಿಗ್ರಹಣೆಗೆ ಅನುಕೂಲ ಮಾಡಿಕೊಡುವಂತಹ ಮನೋಕಾರಕ ದೇವರು ಎಂದರ್ಥ. ಕೈಲಾಸ ಮಂದಿರ - ಕೈಲಾಸವೆಂದರೆ ಹಿಮದ ರಾಶಿ ಎಂದರ್ಥ.  "ಕಿಲ" ಎಂದರೆ ಶೈತ್ಯ.  ಛಳಿ ಬರಿಸುವಂತಹ ಹಿಮದ ರಾಶಿಯನ್ನು ಮನೆಯನ್ನಾಗಿಸಿಕೊಂಡವನು.  ಎಲ್ಲಿ ಮನುಷ್ಯರು ಮೈ ಕೈ ಬಿಟ್ಟಿರಲು ಸಾಧ್ಯವಿಲ್ಲವೋ ಅಂತಹ ಶೈತ್ಯದಲ್ಲಿ ದಿಗಂಬರನಾದವನು ರುದ್ರ.  ಇದು ಅತ್ಯಂತ ಉನ್ನತವಾದ ಭಾವ - ಎಲ್ಲಾ ಕಾಮನೆಗಳನ್ನೂ ಬಿಟ್ಟವನು ಎಂಬ ಅರ್ಥ ಕೊಡುವ ಶಬ್ದ.  ಶಿವನಿಗೆ ಉಪನಿಷತ್ತಿನಲ್ಲಿ ಶರೀರಪುರುಷ ಎಂದೂ ಹೆಸರಿದೆ.  ನಮ್ಮ ಈ ಶರೀರವೇ ರುದ್ರನಿಗೆ ಬಟ್ಟೆ.  ಶರೀರ ಬಿದ್ದು ಹೋದಾಗ.. ಅವನು ದಿಗಂಬರ.  ಆದ್ದರಿಂದಲೇ ರುದ್ರ ದೇವರು “ತ್ವಂ ಪ್ರಾಣ ತೇಜಸಾ ರುದ್ರಃ”. ರುದ್ರ ಶಬ್ದ ವೇದದಲ್ಲಿ ನಾಲಕ್ಕು ಅರ್ಥಗಳಲ್ಲಿ ಬಳಕೆಯಾಗಿದೆ – ೧) ಅಗ್ನಿ ೨) ಶಂಕರ ೩) ಪ್ರಾಣ ೪) ನಾರಾಯಣ.  ಶ್ರೀ ವಿಷ್ಣು ಸಹಸ್ರನಾಮದಲ್ಲಿ “ಓಂ ರುದ್ರಾಯ ನಮ:” ಎಂದಾಗ - ರುದ್ರ ಎಂದರೆ ಮೇಲ್ನೋಟಕ್ಕೆ ದುಃಖ ಕೊಡುವವನು, ಸುಡುವವನು, ಎನ್ನುವ ಅರ್ಥವನ್ನು ಕೊಡುತ್ತದೆ. ವೇದಗಳಲ್ಲಿರುವ ರುದ್ರಸೂಕ್ತಗಳಿಗೆ ಸಾಯಣರು ಅರ್ಥ ಬರೆಯುವಾಗ, ರುದ್ರ ಎಂದರೆ ಅಗ್ನಿ ಎಂದು ಬರೆಯುತ್ತಾರೆ. ಮುಟ್ಟಿದರೆ ಕಣ್ಣೀರು ಬರುವುದು ಪಂಚಭೂತಗಳಲ್ಲಿ ಅಗ್ನಿಯಿಂದ ಮಾತ್ರ. ಆದ್ದರಿಂದ ಅಗ್ನಿ ಕೂಡ ರುದ್ರ. ಆದರೆ ಭಗವಂತ ನಮಗೆ ಏಕೆ ದುಃಖ ಕೊಡುತ್ತಾನೆ? ಭಗವಂತ ದುಃಖ ಕೊಡುವುದು ಪಾಪಿಗಳಿಗೆ ಮಾತ್ರ. ಇಲ್ಲಿ ಭಗವಂತ ದುಃಖ ಕೊಡುವ ಉದ್ದೇಶ ನಮಗೆ ಶಿಕ್ಷಣ ಕೊಡುವುದು, ಉದ್ಧರಿಸುವುದು ಎಂದೇ ಅರ್ಥವಾಗುತ್ತದೆ.   ಹಾಗೇ ಈ ಪದ “ರುದ್ರ”ವನ್ನು ಬಿಡಿಸಿ ನೋಡಿದಾಗ ರುಕ್+ದ್ರಾ ಎಂದಾಗುತ್ತದೆ.  'ರುಕ್' ಎಂದರೆ ಭವರೋಗ, ಮತ್ತು 'ದ್ರಾ' ಎಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ. ಆದ್ದರಿಂದ ರುದ್ರ ಎಂದರೆ ಭವರೋಗ ನಾಶಕ. ಈ ನಾಮವನ್ನು ನಾವು ರುತ್+ದ್ರಾ ಎಂದೂ ಒಡೆದು ಅರ್ಥೈಸಬಹುದು. ಇಲ್ಲಿ ರುತ್ ಅಂದರೆ ದುಃಖ. ಆದ್ದರಿಂದ ರುದ್ರ ಅಂದರ ದುಃಖನಾಶಕ.  ರುದ್ರನು ಮಹಾ ತೇಜಸ್ವಿ ಮತ್ತು ಅಹಂಕಾರ ತತ್ವದ ಪ್ರತೀಕ.  ನಮ್ಮಲ್ಲಿರುವ ಅಹಂಕಾರ, ಅತಿಯಾದ ಅಭಿಮಾನ, ಆಲಸ್ಯವೆಂಬ ದೌರ್ಬಲ್ಯಗಳು  ನಮ್ಮನ್ನು ದುರವಸ್ಥೆಗೀಡು ಮಾಡಿದಾಗ ನಮಗೆ ಭಗವಂತನಲ್ಲಿ ಶರಣಾಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂಬ ಅರಿವು ಮೂಡಿಸುವುದೂ ಹಾಗೂ ಭಗವಂತನ ಸರ್ವೋತ್ತಮತ್ವದೆಡೆಗೆ ಸಾಗಲು ಪ್ರೇರೇಪಿಸುವವರೇ ರುದ್ರ ದೇವರು.

ಶಿವಾನಂದಲಹರಿಯಲ್ಲಿ ಶ್ರೀ ಶಂಕರರು ರುದ್ರನನ್ನು ಇನ್ನೂ ಅನೇಕ ಹೆಸರುಗಳಿಂದ ಸ್ತುತಿಸುತ್ತಾರೆ.  ಅದರಲ್ಲಿ  ಅ) ಚದುರಗಹಾರ - ದಾರುಕಾವನದಲ್ಲಿ ಮುನಿಗಳು ಹರಿಬಿಟ್ಟ ಹಾವುಗಳನ್ನೂ, ಗರುಡನ ಭಯದಿಂದ ಹೆದರಿ ಶರಣು ಬಂದ ಹಾವುಗಳನ್ನೂ ತನಗೆ ಆಭರಣವಾಗಿ ಮಾಡಿಕೊಂಡವನು ಆ) ಮೃಗಧರಂ - ಜಿಂಕೆಯನ್ನು ಧರಿಸಿದವನು ಇ) ಪಶುಪತಿಂ - ಬ್ರಹ್ಮನಿಂದ ಸ್ಥಾವರದವರೆಗಿನ ಪಶುಸಮೂಹಕ್ಕೆ ಒಡೆಯನಾದವನು ಈ) ಚಿದಾಲಂಬಂ - ಚೈತನ್ಯಾಶ್ರಯನಾದವನು ಉ) ಜಟಾಭಾರೋದಾರಂ - ಜಟಾಸಮೂಹದಿಂದ ರಮಣೀಯನಾದವನು ಊ)  ಅತಿವಿಡಂಬಂ - ಲೋಕ ವಿಲಕ್ಷಣನಾದವನು, ತ್ರಿಲೋಚನತ್ವ, ದಿಗಂಬರತ್ವ, ಸ್ಮಶಾನವಾಸ ಮುಂತಾದವುಗಳು.

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿ: |
ಸಮರ್ಪ್ಯೈಕಂ ಚೇತ: ಸರಸಿಜಮುಮಾನಾಥ ಭವತೇ
ಸುಖೇನೈವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ||
ಪರಮೇಶ್ವರನಿಗೆ ಬಾಹ್ಯಾರ್ಚನೆಗಿಂತಲೂ ಅಂತರಂಗದ ಅರ್ಚನೆ ಬಹಳ ಪ್ರಿಯವಾದದ್ದು.  ಎಷ್ಟೇ ಕಷ್ಟ ಪಟ್ಟು ಬಾಹ್ಯ ವಸ್ತುಗಳನ್ನು ಸಂಗ್ರಹಿಸಿ ಶಿವನಿಗೆ ಅರ್ಪಿಸಿ ಪೂಜಿಸಿದರೂ, ನಮ್ಮ ಮನಸ್ಸನ್ನು ಶಿವನಲ್ಲಿ ಲೀನವಾಗಿಸದೆ, ಅರ್ಪಿಸದೆ ಹೋದರೆ ನಾವು ಸಂಸಾರದ ವಿಷಯಾಸಕ್ತಿಗಳಿಂದ ಹೊರ ಬರುವುದು ಸಾಧ್ಯವಿಲ್ಲ.  ಮನಸ್ಸನ್ನು ಶಿವನಿಗೆ ಅರ್ಪಿಸಿದ್ದಾದ ಮೇಲೆ ಬೇರೆ ಯಾವ ಆರಾಧನೆಯೂ, ಪೂಜೆಯೂ ಬೇಕಾಗಿಯೇ ಇಲ್ಲ. ಅದರಿಂದಲೇ ಶಿವನನ್ನು "ಮನಸ್ಸಿನಂತೆ ಮಹಾದೇವ" ಎನ್ನುವುದು. 

ಸ್ತೋತ್ರಕಾವ್ಯಗಳ ಕವಿ ನಾರಾಯಣ ಪ೦ಡಿತಾಚಾರ್ಯರ ವಿರಚಿತ ಶಿವಸ್ತುತಿ :
ಮಹೇಶ ಮಹಿತೋsಸಿ ತತ್ಪುರುಷ ಪೂರುಷಾಗ್ರ್ಯೋ ಭವಾನ್
ಅಘೋರ ರಿಪು-ಘೋರ ತೇsನವಮ ವಾಮ-ದೇವಾ೦ಜಲಿ:|
ನಮ: ಸಪದಿ-ಜಾತ ತೇ ತ್ವಮಿತಿ ಪ೦ಚ-ರೂಪೋs೦ಚಿತ:
ಪ್ರಪ೦ಚಯ ಚ ಪ೦ಚ-ವೃನ್ಮಮ ಮನಸ್ತಮಸ್ತಾಡಯ ||

ಓ ಮಹೇಶ, ಎಲ್ಲರಿ೦ದಲೂ ಪೂಜೆಗೊಳ್ಳುವವನು ನೀನು. ಓ ತತ್ಪುರುಷ, ಪುರುಷರಿಗೂ ಮಿಗಿಲಾದ ಪುರುಷ ನೀನು. ಹಗೆಗಳ ಎದೆಗೆಡಿಸಿದ ಓ ಅಘೋರ, ಹಿರಿಯ ದೈವತವಾದ ಓ ವಾಮದೇವ, ಇದೋ ನಿನಗೆ ಕೈಮುಗಿದೆ. ಓ ಸದ್ಯೋಜಾತ, ಇದೋ ನಿನಗೆ ವ೦ದನೆ, ಹೀಗೆ ಪ೦ಚರೂಪನಾದ ನಿನ್ನನ್ನು ಪೂಜಿಸುವೆ. ಪ೦ಚವಿಧವಾದ ನನ್ನ ಒಳ ಬಗೆಯನ್ನು ವಿಸ್ತಾರಗೊಳಿಸು. ಪ೦ಚವಿಧವಾದ ಬಗೆಯ ಕತ್ತಲನ್ನು ಒದ್ದೋಡಿಸು.


ರುದ್ರ ದೇವರು ಮುಖ್ಯವಾಗಿ “ಮನೋನಿಯಾಮಕರು” ಎಂಬ ಮಾತನ್ನು  “ಪಂಪಾಪುರ ನಿವಾಸ ಪ್ರಮಥೇಶ “ ಎಂಬ ಪದದಲ್ಲಿ ಜಗನ್ನಾಥ ದಾಸರು “ಮನೋ ಮೈಲಿಗೆಯ ಪರಿಹರಿಸು ನೀಲಕಂಠ..” ಎಂದು ಆರ್ದ್ರರಾಗಿ ಬೇಡಿಕೊಳ್ಳುವುದರ ಮೂಲಕ ಹೇಳುತ್ತಾರೆ.  ಅಮೃತ ಮಂಥನ ಕಾಲದಲ್ಲಿ ಬಂದ ವಿಷವನ್ನು ಕಂಠದಲ್ಲಿಟ್ಟು ಕೊಂಡಿದ್ದರಿಂದ ಅವನು “ನೀಲಕಂಠ”ನಾಗಿದ್ದಾನೆ.  ಇದಲ್ಲದೆ ದೂರ್ವಾಸ, ಶುಕ, ವ್ಯಾಧ, ಜೈಗೀಶ ಎಂಬ ರೂಪಗಳಲ್ಲೂ ಹರಿಯ ಪರಿಚರವನ್ನು ಮಾಡಿ ಮೆಚ್ಚಿಸಿದ್ದಾನೆ. 


“ನೀಲಲೋಹಿತ” ಎಂಬ ಪದದಲ್ಲಿ ಡಮರುಗ, ತ್ರಿಶೂಲಗಳನ್ನು ಹೊಂದಿರುವವನು, ಹಣೆಯಲ್ಲಿ ಕಣ್ಣನ್ನಿಟ್ಟುಕೊಂಡು ಫಾಲನಯನನಾಗಿದ್ದಾನೆ. ತಲೆಯಲ್ಲಿ ಚಂದ್ರನನ್ನು ಧರಿಸಿಕೊಂಡು ಶಶಿಧರನೂ, ಇಂದ್ರನಿಂದ ವಂದಿಸಿಕೊಳ್ಳುವವನೂ  ಹಾಗೂ ನಾಗಭೂಷಣನೂ ಆಗಿದ್ದಾನೆ.  ಇಂತಹ ರುದ್ರ ದೇವರು ನಮಗೆ ಸದಾ ಸುಮಂಗಳವ ಕರುಣಿಸಲೆಂದು ದಾಸರು ಕೇಳಿ ಕೊಳ್ಳುತ್ತಾರೆ.

ಜಗನ್ನಾಥ ದಾಸರು ತಮ್ಮ ತತ್ವ ಸುವ್ವಾಲಿಯಲ್ಲಿ ಪರಮೇಶ್ವರನನ್ನು ಕುರಿತು..

ಭೂತನಾಥನ ಗುಣ ಪ್ರಭಾತಕಾಲದಲೆದ್ದು
ಪ್ರೀತಿಪೂರ್ವಕದಿ ಪಠಿಸುವ | ಪಠಿಸುವವರ ಜಗ-
ನ್ನಾಥ ವಿಠಲನು ಸಲಹುವ ||   ಎನ್ನುತ್ತಾರೆ.

"ಶಿವ"ನೆಂದರೇ ಮಂಗಲ, ಮಂಗಲವೆಂದರೆ ಮೇಲಕ್ಕೇರುವುದು, ಎತ್ತರಕ್ಕೇರುವುದು ಎಂದರ್ಥ.  ಇದಕ್ಕಾಗಿಯೇ ಅಲ್ಲವೇ ನಾವು ಕೈಲಾಸವಾಸನನ್ನು ಎಲ್ಲಾ ವಿಷಯಾಸಕ್ತಿಗಳನ್ನೂ ನಿಗ್ರಹಿಸಿ, ಅತ್ಯಂತ ಎತ್ತರದಲ್ಲಿರುವ ಭಗವಂತನ ಅರಿವನ್ನು ಮೂಡಿಸಿ, ಹರಿಯಲ್ಲಿ ತೈಲಧಾರೆಯಂತೆ ನಮ್ಮ ಮನಸ್ಸನ್ನು ನೆಲೆ ನಿಲ್ಲಿಸು, ನಮಗೆ ಮಂಗಲವನ್ನು ಕರುಣಿಸು ಎಂದು ಕೇಳಿಕೊಳ್ಳುವುದು.  ನಮ್ಮ ಮನಸ್ಸಿನಲ್ಲಿ ಸದಾ ಭಗವಂತನ ಎಚ್ಚರ ಇರುವಂತೆ  ಮಾಡು ಎಂದು ಜಗನ್ನಾಥ ದಾಸರು ರುದ್ರದೇವರು ಏಕಾದಶ ರುದ್ರರ ಗಣಕ್ಕೆ ಅಧಿಪತಿಯಾದವರು, ಮುಖ್ಯರಾದವರು "ಶಿವ" ಎಂಬ ಸೂಚನೆ ಕೊಡುತ್ತಾ ಒಟ್ಟು   - ವಾಮದೇವ, ವಿರಿಂಚಿತನಯ, ಉಮಾಮನೋಹರ, ಉಗ್ರ, ಧೂರ್ಜಟಿ, ಸಾಮಜಾಜಿನವಸನ ಭೂಷಣ, ಸುಮನಸೋತ್ತಂಸ, ಕಾಮಹರ, ಕೈಲಾಸಮಂದಿರ, ಸೋಮಸೂರ್ಯಾನಲ ವಿಲೋಚನ, ಕಾಮಿತಪ್ರದ ಎಂಬ ಹನ್ನೊಂದು ಹೆಸರುಗಳಿಂದ  ಸ್ತುತಿಸುತ್ತಾ ಕೇಳಿಕೊಳ್ಳುತ್ತಾರೆ.


ಚಿತ್ರಕೃಪೆ : ಅಂತರ್ಜಾಲ
"ಶಿವಾನಂದಲಹರಿ" - ಆಧಾರ ವೇದಾಂತ ಭಾರತೀ ಪ್ರಕಾಶನ

Tuesday, August 16, 2011

ಮಂಗಳಾಚರಣ ಸಂಧಿ - ೯ ನೇ ಪದ್ಯ...


ಪಂಚಭೇದಾತ್ಮಕ ಪ್ರಪಂಚಕೆ
ಪಂಚ ರೂಪಾತ್ಮಕನೆ ದೈವಿಕ
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ |
ಪಂಚವಿಂಶತಿ ತತ್ವ ತರತಮ
ಪಂಚಿಕೆಗಳನು ಪೇಳ್ದ ಭಾವಿ ವಿ
ರಿಂಚಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||

ಪ್ರತಿಪದಾರ್ಥ :  ಪಂಚಭೇದಾತ್ಮಕ ಪ್ರಪಂಚ - ಜೀವ-ಜೀವರ ಭೇದ, ಜೀವ-ಜಡರ ಭೇದ, ಜಡ-ಜಡ ಭೇದ, ಜೀವೇಶ ಭೇದ, ಜಡೇಶ ಭೇದ ಎಂಬ ಐದು ಭೇದಗಳುಳ್ಳ ಪ್ರಪಂಚ, ಪಂಚರೂಪಾತ್ಮಕನೆ ದೈವತ - ನಾರಾಯಣ, ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ಎಂಬ ಶ್ರೀಹರಿಯ ಐದು ರೂಪಗಳೇ ಅಧಿದೇವತೆಗಳು, ಪಂಚಮುಖ - ರುದ್ರದೇವರು, ಶಕ್ರಾದಿಗಳು - ಇಂದ್ರ ಮೊದಲಾದವರು, ಕಿಂಕರರು ಶ್ರೀಹರಿಗೆ - ಭಗವಂತನಾದ ಶ್ರೀಹರಿಯ ಸಹಚರರು (ಸೇವಕರು), ಪಂಚವಿಂಶತಿತತ್ವ - ಮಹದಾದಿ ೨೫ ತತ್ವಗಳು, ತರತಮ - ತಾರತಮ್ಯದಲ್ಲಿ ದೇವತೆಗಳು, ಪಂಚಿಕೆಗಳನು ಪೇಳ್ದ - ಪಂಚಭೇದಗಳ ವಿವರಗಳನ್ನು ವಿವರಿಸಿದ, ಭಾವಿ ವಿರಿಂಚಿ - ಭಾವಿ ಬ್ರಹ್ಮರು (ಮುಂದಿನ ಕಲ್ಪದಲ್ಲಿ ಬ್ರಹ್ಮ ಪದವಿಗೆ ಬರುವವರು), ಎನಿಪ ಆನಂದತೀರ್ಥರ - ಎಂದು ಕರೆಯುವ ಆನಂದಕರವಾದ ಮಧ್ವ ಸಿದ್ಧಾಂತವನ್ನು ನೀಡಿದ ಮಧ್ವರು, ನೆನೆವೆನನುದಿನವು - ನಿರಂತರವೂ ಸ್ಮರಿಸುವೆನು. 

ಈ ಪದ್ಯ  ಕೂಡ ಆನಂದತೀರ್ಥರನ್ನೇ ಕುರಿತದ್ದಾಗಿದೆ.  ಇಲ್ಲಿ ಆಚಾರ್ಯರು ಬೋಧಿಸಿದ ಪಂಚಭೇದ, ಪಂಚರೂಪ, ಇವೆಲ್ಲದರ ಕುರಿತು ತತ್ವವನ್ನು ಹೇಳುತ್ತದೆ. ಪಂಚ ಭೇದವೆಂದರೆ ೧) ಜೀವ ಮತ್ತು ಈಶ್ವರನಲ್ಲಿರುವ ಭೇದ.  ಜೀವವೆಂದರೆ ಬ್ರಹ್ಮನಿಂದಾರಂಭಿಸಿ ಅತೀ ಸೂಕ್ಷ್ಮ ಜೀವಿಗಳವರೆಗೂ ಇರುವ  ೨)  ಜಡ ಮತ್ತು ಈಶ್ವರ ಭೇದ. ಜಡವೆಂದರೆ ಚಲನೆ ಇಲ್ಲದ್ದು ಮತ್ತು  ಈಶ್ವರನಿಗೂ ಇರುವ ಭೇದ.  ೩) ಜಡಕ್ಕೂ ಜೀವಕ್ಕೂ ಇರುವ ಭೇದ.  ೪)  ಜಡ - ಜಡ  ಭೇದ.   ಜಡ   ವಸ್ತುಗಳಲ್ಲಿ ಒಂದರಿಂದ   ಒಂದಕ್ಕಿರುವ ಭೇದ.   ೫) ಜೀವ – ಜೀವ ಭೇದ.  ಹೀಗೆ ಪಂಚ ಭೇದಗಳಿಂದ ಕೂಡಿದ ಈ ಪ್ರಪಂಚಕ್ಕೆ “ಪಂಚ ಭೇದಾತ್ಮಕ ಪ್ರಪಂಚ” ಎಂದು ಹೆಸರು. ಈ ಪ್ರಪಂಚದಲ್ಲಿ ಈಶ (ಪರಮಾತ್ಮ) – ಜೀವ – ಜಡ ಪದಾರ್ಥ ಈ ಮೂರು ವಸ್ತುಗಳ ಹೊರತು ಪ್ರಸಿದ್ಧವಾದವು ಯಾವುದೂ ಇಲ್ಲ ಮತ್ತು ಈ ಮೂರು ವಸ್ತುಗಳೇ ಆಚಾರ್ಯರು ಬೋಧಿಸಿದ ಪಂಚಭೇದ ತತ್ವಕ್ಕೆ ಆಧಾರ.  ಪ್ರತೀ ಜೀವವೂ ತನ್ನದೇ ಆದ ಸ್ವಂತಿಕೆ ಹೊಂದಿರುತ್ತದೆ. ಜೀವ – ಜೀವಗಳಿಗೆ ಎಷ್ಟೇ ಹೋಲಿಕೆ ಇದ್ದರೂ.. ಅಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ.  ಉದಾ – ಅವಳಿ ಮಕ್ಕಳು.  ಸಾಮಾನ್ಯವಾಗಿ ಬೇರೆ ಯಾರೂ ಗುರುತಿಸಲಾಗದಿದ್ದರೂ ತಾಯಿಯಾದವಳು ಗುರುತಿಸುತ್ತಾಳೆ.  ಜಡ – ಜಡ ಭೇದ. ಜಡವಸ್ತುಗಳಲ್ಲಿರುವ ವ್ಯತ್ಯಾಸಗಳು.

ಇನ್ನು ಪಂಚರೂಪವೆಂದರೆ  - ಪರಮಾತ್ಮನ ಐದು ರೂಪಗಳು.  ಲಕ್ಷ್ಮೀ – ನಾರಾಯಣ, ಮಾಯಾ – ವಾಸುದೇವ, ಜಯ – ಸಂಕರ್ಷಣ, ಕೃತಿ – ಪ್ರದ್ಯುಮ್ನ ಮತ್ತು  ಶಾಂತಿ – ಅನಿರುದ್ಧ.  ಈ ಐದು ರೂಪಗಳುಳ್ಳ ನರಸಿಂಹನೇ ಸರ್ವೋತ್ತಮ ದೇವರು.

ಪಂಚಮುಖನಾದ ರುದ್ರ, ಶಕ್ರ ಎಂದರೆ ಇಂದ್ರ, ದೇವತೆಗಳೆಲ್ಲಾ ಶ್ರೀಹರಿಗೆ ಕಿಂಕರರಾಗಿರುತ್ತಾರೆಪಂಚವೆಂದರೆ ಐದು, ವಿಂಶತಿಯೆಂದರೆ ೨೦, ಇವುಗಳಲ್ಲಿ ಮೊದಲಿನ ನಾಲಕ್ಕು ತತ್ವಗಳಾದ ) ಅವ್ಯಕ್ತತತ್ವ ) ಮಹತ್ತತ್ವ ) ಅಹಂಕಾರತತ್ವ ಮತ್ತು ) ಮನಸ್ತತ್ವ, ಇವುಗಳನ್ನು ಸೂಕ್ಷ್ಮತತ್ವಗಳುಎಂದು ಕರೆಯುತ್ತಾರೆಉಳಿದವುಗಳು  ) ಪಂಚ ಭೂತಗಳು ಪಂಚತನ್ಮಾತ್ರ  ) ಪಂಚ ಜ್ಞಾನೇಂದ್ರಿಯಗಳು  ಹಾಗು ೮) ಪಂಚ  ಕರ್ಮೇಂದ್ರಿಯಗಳು ,  ಒಟ್ಟು  ೨೫ ತತ್ವಗಳುಇದರ ಅಭಿಮಾನಿ ದೇವತೆಗಳು ಮತ್ತು ಅವರ ತಾರತಮ್ಯವನ್ನು ತಿಳಿಸುತ್ತಾರೆ ತಾರತಮ್ಯ ಪಂಚಭೇದಗಳು ಎಂಬುದೇ ಆನಂದತೀರ್ಥರು ಪ್ರತಿಪಾದಿಸಿದ ತತ್ವಗಳಲ್ಲಿ ಬಹು ಮುಖ್ಯವಾದವುಇದರಿಂದಲೇ ಬಹು ಮುಖ್ಯವಾದಹರಿಸರ್ವೋತ್ತಮತ್ವಸಾಧಿಸುವುದುಅವ್ಯಕ್ತ ತತ್ವಾಭಿಮಾನಿ ರಮಾದೇವಿ, ಸರ್ವೋತ್ತಮನಾದ ಶ್ರೀಹರಿಗಿಂತ ಅನಂತ ಗುಣಗಳಲ್ಲಿ ಕಡಿಮೆಮಹತ್ತತ್ವಾಭಿಮಾನಿಗಳಾದ ಬ್ರಹ್ಮ, ವಾಯುಗಳು ರಮಾದೇವಿಗಿಂತ ಕೋಟಿ ಗುಣ ಕಡಿಮೆಯಾಗಿದ್ದಾರೆಅವರವರ ಪತ್ನಿ ವಾಣೀ, ಭಾರತೀ ತಮ್ಮ ಪತಿಗಳಿಗಿಂತ ೧೦೦ ಗುಣ ಕಡಿಮೆ ಇದ್ದಾರೆಅಹಂಕಾರಾಭಿಮಾನಿಗಳಲ್ಲಿ ಕಾಲಾಭಿಮಾನಿ ಗರುಡ, ಜೀವಾಭಿಮಾನಿ ಶೇಷ, ಅಹಂಕಾರಾಭಿಮಾನಿ ರುದ್ರ  ಸಮರಾದರೂ ವಾಣೀ ಭಾರತಿಯರಿಗಿಂತ ೧೦೦ ಕಡಿಮೆ.

ಜೀವ ಜೀವರಲ್ಲಿ ಭೇದ ಚೆನ್ನಾಗಿ ಉಂಟು ಎಂದು ತಿಳಿಯಬೇಕು.  ಪುರಂದರ ದಾಸರು ತಮ್ಮ “ಸ್ನಾನವ  ಮಾಡಿರೋ ಜ್ಞಾನ ತೀರ್ಥದಲಿ | ನಾನು ನೀನೆಂಬ ಅಹಂಕಾರ ಬಿಟ್ಟು || ಎಂಬ ಪದದಲ್ಲಿ “ವೇದಶಾಸ್ತ್ರವನೋದುವುದೊಂದು ಸ್ನಾನ | ಭೇದಾಭೇದ ತಿಳಿದರೊಂದು ಸ್ನಾನ || ಸಾಧು ಸಜ್ಜನರ ಸಂಗ ಒಂದು ಸ್ನಾನ | ಪುರಂದರ ವಿಠಲನ ಜ್ಞಾನವೇ ಗಂಗಾ ಸ್ನಾನ || ಎಂದಿದ್ದಾರೆ. 

ಜೀವರು ತ್ರಿವಿಧ – ಸಾತ್ವಿಕರು, ರಾಜಸರು ಮತ್ತು ತಾಮಸರು.  ಹೀಗೆ ಪರಮಾತ್ಮನಿಂದ ಹಿಡಿದು ತೃಣದ ತನಕ ತಾರತಮ್ಯ ಮತ್ತು ಪಂಚಭೇದಗಳು ಇವೆ.  ಎಲ್ಲರೂ ಎಲ್ಲವೂ ಎಲ್ಲೂ ಒಂದೇ ಅಲ್ಲ ಎಂಬ ತತ್ವ ನಿರೂಪಿಸಿದವರು ಶ್ರೀ ಆನಂದತೀರ್ಥರು.  ಇವರೇ ಮುಂದಿನ ಕಲ್ಪದಲ್ಲಿ ಬರುವ ಭಾವೀ ಬ್ರಹ್ಮರು.ಈ ದೇವತಾ ತಾರತಮ್ಯವನ್ನು ಶ್ರೀ ಪುರಂದರ ದಾಸರು ತಮ್ಮ ಒಂದು ಪದದಲ್ಲಿ ಹೀಗೆ..

ಸತ್ಯ ಜಗಕಿದು ಪಂಚ ಭೇದವು ನಿತ್ಯ ಶ್ರೀಗೋವಿಂದನ |

ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ||


ಜೀವ ಈಶಗೆ ಭೇದಸರ್ವತ್ರ | ಜೀವಜೀವಕೆ ಭೇದವು ||

ಜೀವಜಡಕೆ ಜಡಜಡಕೆ ಭೇದ | ಜೀವಜಡ ಪರಮಾತ್ಮಗೆ ||೧||ಮಾನುಷೋತ್ತಮಗಧಿಪ ಕ್ಷಿತಿಪರು | ಮನುಜ ದೇವ ಗಂಧರ್ವರು

ಜ್ಞಾನಿ ಪಿತ್ರಾಜಾನ ಕರ್ಮಜ | ದಾನವಾರಿ ತತ್ವಾತ್ಮರು ||೨||ಗಣಪ ಮಿತ್ರರು ಸಪ್ತ ಋಷಿಗಳು | ವಹ್ನಿನಾರದ ವರುಣನು ||

ಇನಜಗೆ ಸಮ ಚಂದ್ರ ಸೂರ್ಯರು | ಮನುಸತಿಯು ಹೆಚ್ಚು ಪ್ರವಹನು ||೩||ದಕ್ಷ ಸಮ ಅನಿರುದ್ಧ ಗುರುಶಚಿ | ರತಿ ಸ್ವಾಯಂಭುವರಾರ್ವರು ||

ಪಕ್ಷ ಪ್ರಾಣನಿಗಿಂತ ಕಾಮನು | ಕಿಂಚಿದಧಿಕನು ಇಂದ್ರನು ||೪||ದೇವೇಂದ್ರನಿಗಿಂದಧಿಕ ಮಹರುದ್ರ ದೇವಸಮ ಶೇಷ ಗರುಡರು ||

ಕೇವಲಧಿಕರು ಶೇಷ ಗರುಡಗೆ ದೇವಿ ಭಾರತೀ ಸರಸ್ವತಿ ||೫||ವಾಯುವಿಗೆ ಸಮರಿಲ್ಲ ಜಗದೊಳು | ವಾಯುದೇವರೇ ಬ್ರಹ್ಮರು ||

ವಾಯು ಬ್ರಹ್ಮಗೆ ಕೋಟಿಗುಣದಿಂದ | ಅಧಿಕ ಶಕ್ತಳು ಶ್ರೀರಮಾ  ||೬||ಅನಂತ ಗುಣದಿಂ ಲಕುಮಿಗಿಂತ | ಅಧಿಕ ಪುರಂದರ ವಿಠಲನು |

ಘನಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ || ೭ ||  ಎಂದು ವಿವರಿಸಿದ್ದಾರೆ.

ಕೈವಾರ ತಾತಯ್ಯನವರು "ಪಂಚವಿಂಶತಿ ಮೀದ ಪ್ರಬಲು ಪರಂಜ್ಯೋತಿ" ಎಂದಿದ್ದಾರೆ.  ಪರಂಜ್ಯೋತಿ ಎಂದರೆ ದಿವ್ಯಜ್ಯೋತಿ.. ಪರಮಾತ್ಮ.  ಅದು ತಾನಾಗಿಯೇ ಬೆಳಗುತ್ತದೆ, ಬೇರೆ ಯಾರೂ ಹೊತ್ತಿಸಬೇಕಾಗಿಲ್ಲ.  ಅದು ಸ್ವಯಂಪ್ರಕಾಶಮಾನವಾಗಿ ಉರಿಯುತ್ತಿರುತ್ತದೆ.  ದೇಹದಲ್ಲಿ ಆಧ್ಯಾತ್ಮಿಕ ಹೃದಯವೇ ಹಣತೆ, ಅನುಭೂತಿಯೇ ಪ್ರಕಾಶ, ತತ್ತ್ವರೂಪಿಯಾದ ಪರಮಾತ್ಮನೇ ಪರಂಜ್ಯೋತಿ.  

ಡಿವಿಜಿಯವರು ತಮ್ಮ ಕಗ್ಗದಲ್ಲಿ ಇದೇ ಜೀವ – ಜಡ ಎಂಬುದೊಂದು ಅಗೋಚರ ಶಕ್ತಿ ಎನ್ನುತ್ತಾ..

ಜೀವ ಜಡರೂಪ ಪ್ರಪಂಚವನಾವುದೋ |

ಆವರಿಸಿಕೊಂಡುಮೊಳನೆರೆದುಮಿಹುದಂತೆ ||

ಭಾವಕೊಳಪಡದಂತೆ ಅಳತೆಗಳವಡದಂತೆ |

ಆ ವಿಶೇಷಕೆ ಮಣಿಯೋ – ಮಂಕುತಿಮ್ಮ ||

ಜೀವ  ಚೈತನ್ಯ ಹೊಂದಿರುವಂತದ್ದೂ, ಜಡ ರೂಪದಲ್ಲಿರುವಂತದ್ದೂ ಆದ ಈ ಪ್ರಪಂಚವನ್ನು ಅದ್ಯಾವುದೋ ಒಂದು ಪ್ರಚಂಡ ಶಕ್ತಿ ಆವರಿಸಿ ಕೊಂಡಿದೆ.  ಅದು ಎಲ್ಲಾ ಜೀವ-ಜಡ ವಸ್ತುಗಳ ಒಳಗಡೆಯೂ, ಹೊರಗಡೆಯೂ, ಎರಡು ಕಡೆಯೂ ಪಸರಿಸಿಕೊಂಡಿದೆ.  ಆ ಮಹಾನ್  ಶಕ್ತಿಗೆ, ಅಸಾಮಾನ್ಯ ಚೇತನಕ್ಕೆ ನಮಿಸು ಎನ್ನುತ್ತಾರೆ.