Tuesday, July 31, 2012

ಕರುಣಾ ಸಂಧಿ - ೫ನೇ ಪದ್ಯ

ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ ಕುಳಿತು ಪಾಡಲು |
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ||
ಸುಲಭನೋ ಹರಿ ತನ್ನವರನರ |
ಘಳಿಗೆ ಬಿಟ್ಟಗಲನು ರಮಾಧವ |
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ || ೫ ||

ಪ್ರತಿಪದಾರ್ಥ :  ಮಲಗಿ - ಅನಾರೋಗ್ಯದಿಂದಾಗಲೀ, ವೃದ್ಧಾಪ್ಯದಿಂದಾಗಲೀ, ದೈಹಿಕ ದೌರ್ಬಲ್ಯದಿಂದಾಗಲೀ ಅಂತಃಪ್ರಜ್ಞೆಯಿಂದ ಮಲಗಿರುವಾಗ, ಪರಮಾದರದಿ ಪಾಡಲು - ಭಕ್ತಿ - ಶ್ರದ್ಧೆ ಹಾಗೂ ಪ್ರೇಮದಿಂದ ಹಾಡಲು, ಕುಳಿತು ಕೇಳುವ - ಆದರದಿಂದ ಕರೆಯುತ್ತಾ ಮಲಗಿರುವ ಭಕ್ತರ ಸಮೀಪ ತಾನೇ ಬಂದು ಕುಳಿತು ಕಿವಿಗೊಟ್ಟು ಆಲಿಸುವವನು, ಕುಳಿತು ಪಾಡಲು ನಿಲುವ - ಕುಳಿತು ಎಂದರೆ ಯೋಗ್ಯವಾದ ಆಸನಗಳಲ್ಲಿ ಕುಳಿತು ಮಾಡುವ ಜಪ - ತಪ - ಪೂಜೆಗಳನ್ನು ಭಗವಂತ ನಿಂತು ಸ್ವೀಕರಿಸುವನು, ನಿಂತರೆ ನಲಿವ - ನಿಂತರೆ ಎಂದಾಗ ಯೋಗ್ಯವಾದ ಸ್ಥಳದಲ್ಲಿ ನಿಂತು ಅರ್ಘ್ಯವನ್ನು ಕೊಡುವಾಗ ಸಂತಸದಿಂದ ನಲಿಯುವವನು, ನಲಿದರೆ ಒಲಿವೆನು ನಿಮಗೆಂಬ - ಭಕ್ತರು ಭಗವಂತನನ್ನು ಸ್ತುತಿಸುತ್ತಾ ಮೈಮರೆತು ನಲಿಯುತ್ತಾ ನಾಟ್ಯವಾಡುವ ಭಕ್ತರ ಭಕ್ತಿಯ ಪರಾಕಾಷ್ಠೆಗೆ ಮೆಚ್ಚಿ ಒಲಿಯುವವನು, ಸುಲಭನೋ ಹರಿ - ಸರಳವಾಗಿ ಭಕ್ತಿಗೆ ಶ್ರದ್ಧೆಗೆ ಸಮರ್ಪಣೆಗೆ ಮೆಚ್ಚಿ ಧಾವಿಸುವವನು, ತನ್ನವರ ಅರೆಗಳಿಗೆ ಬಿಟ್ಟಗಲನು - ತನ್ನನ್ನೇ ನಂಬಿ ಸ್ತುತಿಸುವ ಸರ್ವವನ್ನೂ ಸಮರ್ಪಿಸುವ ಭಕ್ತರನ್ನು ಒಂದೇ ಒಂದು ಕ್ಷಣಕ್ಕೂ ಬಿಟ್ಟು ದೂರ ಹೋಗದವನು, ರಮಾಧವನ ಒಲಿಸಲರಿಯದೆ - ಇಂತಹ ಸುಲಭವಾಗಿ ಒಲಿಯುವ ರಮೆಯ ಪತಿಯಾದ ಮಾಧವನನ್ನು ಹೇಗೆ ಮೆಚ್ಚಿಸುವುದೆಂದು ತಿಳಿಯದ, ಪಾಮರರು - ವಿವೇಕವಿಲ್ಲದ ಮೂಢ ಜನರು, ಬಳಲುವರು ಭವದೊಳಗೆ - ಸಂಸಾರದ ಬಂಧನದಲ್ಲಿ ಮತ್ತೆ ಮತ್ತೆ ಸಿಲುಕುತ್ತಾ ದುಃಖ ಅನುಭವಿಸುವರು.


ಕರುಣಾಮೂರ್ತಿಯಾದ ಪರಮಾತ್ಮನು ತನ್ನನ್ನು ಸ್ಮರಿಸುವವರನ್ನು ಎಂದೂ ಕೈ ಬಿಡನು. ತನ್ನನ್ನು ಕುರಿತು ಸ್ತುತಿಸುವಾಗ ಹೀಗೇ ಇರಬೇಕೆಂಬ ನಿರ್ದೇಶನವನ್ನು ಅವನು ಕೊಡುವುದೇ ಇಲ್ಲ. ದೇಶ, ಕಾಲ, ನೇಮ, ನಿಷ್ಠೆ ಯಾವುದೂ ಅವನಿಗೆ ಬೇಡ.  ಯಾರು ತನ್ನನ್ನು ಪ್ರೀತಿಯಿಂದ, ಆರ್ತತೆಯಿಂದ, ಮನವನ್ನು ಕೊಟ್ಟು ಭಜಿಸುತ್ತಾರೋ ಅವರಿಗೆ ರಮಾಧವ ಒಲಿದೇ ಒಲಿಯುತ್ತಾನೆ ಎಂದು ಹರಿದಾಸರು ಈ ಪದ್ಯದಲ್ಲಿ ಹೇಳಿದ್ದಾರೆ.  

ಇನ್ನು ಅಧ್ಯಾತ್ಮಿಕವಾಗಿ ತೆಗೆದುಕೊಂಡರೆ ಮಲಗಿ ಪರಮಾದರದಿ ಪಾಡಲು ಎಂದರೆ ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿಯೇ ವಿಷ್ಣು ಸ್ತೋತ್ರವನ್ನು ಮಾಡಿದವರು.  ಕುಳಿತು ಪಾಡಲು ಎಂದರೆ ಪುಟ್ಟ ಧ್ರುವಕುಮಾರನು ಕುಳಿತೇ ಸ್ತೋತ್ರ ಮಾಡಿದವನು.  ಭಕ್ತ ಪ್ರಹ್ಲಾದನು ನಿಂತು ಪಾಡಿದ್ದರಿಂದ ಪರಮಾತ್ಮ ನರಸಿಂಹ ರೂಪದಿಂದ ನಲಿ ನಲಿಯುತ್ತಾ ಕಂಬದಿಂದ ಬಂದು ಒಲಿದನು.  ನಾರದರಂತಹ ಜ್ಞಾನಿಗಳು ಗೆಜ್ಜೆ ಕಟ್ಟಿ ತಾಳ ಕುಟ್ಟಿ ನಲಿದು ಪಾಡುವುದರಿಂದ, ಭಗವ೦ತನೂ ಅವರೊಡನೆಯೇ ಇದ್ದು ನಲಿಯುತ್ತಲೇ ಇರುತ್ತಾನೆ.  ಹರಿಯನ್ನು ಒಲಿಸಿಕೊಳ್ಳುವುದು ಬಲು ಸುಲಭವು.  ಇಂತಹ ಹರಿಯು ತನ್ನ ಭಕ್ತರನ್ನು ಬಿಟ್ಟು ಎಂದೂ ಅಗಲುವುದೇ ಇಲ್ಲ.  ಭಕ್ತರು ಎಂದಿಗೂ ಅವನ ಮಕ್ಕಳೇ.  ಜಗನ್ನಾಥ ದಾಸರು ತಮ್ಮ ಒಂದು ಕೃತಿ "ಅರಿತವರಿಗೆ ಅತಿ ಸುಲಭ ಹರಿಯ ಪೂಜೆ" ಯಲ್ಲಿ ಪ್ರೀತಿಯಿಂದಲಿ ಭಜಿಸಿ ಮೋದಿಪರ ವೀತಶೋಕರ ಮಾಡಿ ಸಂತೈಸುತಿಹ ಜಗನ್ನಾಥ ವಿಠಲ, ಒಲಿದು ಸರ್ವಕಾಲದಲ್ಲಿ ಎಂದು ಹಾಡಿ ಹೊಗಳಿದ್ದಾರೆ.  ಹಾಗೇ ಪರಮಾತ್ಮನನ್ನು ಒಲಿಸಲು ಅರಿಯದೇ ಪಾಮರರು ಬಳಲುವರು ಭವದೊಳಗೆ ಎಂದು ಹೇಳುತ್ತಾರೆ.
 "ಮಲಗಿ ಪರಮಾದರದಿ ಪಾಡಲು.."   -   ದಶ ಇಂದ್ರಿಯಗಳನ್ನೂ ಲಯಗೊಳಿಸಿ ಧ್ಯಾನಿಸಿದರೆ, ಹೃದಾಕಾಶದಲ್ಲಿ ಕುಳಿತು ಕೇಳುವ ಎನ್ನುವ ವಿಚಾರವನ್ನು ವಿಶ್ಲೇಷಿಸುವ ದಾಸರು, ಮಲಗುವ ಮುನ್ನ ಹರಿಯನ್ನು ಧ್ಯಾನಿಸಿ, ಮನವು ನಿನ್ನಲ್ಲಿ ಲಯಗೊಳ್ಳಲಿ ಅಂತ ಪ್ರಾರ್ಥಿಸಿದ್ದರೆ, ಕನಸುಗಳ ವ್ಯಾಪಾರವೂ ಅಲ್ಲಿ ಇರುವುದಿಲ್ಲ, ಹೃದಯದಾಕಾಶದಲಿ  ಹರಿಯು ವ್ಯಾಪಿಸಿ ಕುಳಿತು ಕೇಳುವ ಎ೦ದು ಅರ್ಥವನ್ನು ವ್ಯಾಖ್ಯಾನಿಸಿದ್ದಾರೆ. ಕುಳಿತು ಧ್ಯಾನಿಸಿದರೆ, ಕಣ್ಣೆದುರಲ್ಲಿ ನಿಲುವ ಎ೦ದಾಗ  ಧ್ಯಾನ ಸ್ಥಿತಿಯಲ್ಲಿ ನಮಗೆ ಗೋಚರವಾಗುತ್ತಾ ಹೋಗುವ ಒಂದು ದೃಷ್ಟಿ (vision) ಕೆಲವೊಮ್ಮೆ ಬೆಳಕು, ಬಣ್ಣಗಳು ಗೋಚರವಾಗುವ ಹಾಗೆ ಎ೦ದು ಅರ್ಥೈಸಬಹುದು.  "ಸುಲಭನೂ ಹರಿ ತನ್ನವರನರೆಘಳಿಗೆ ಬಿಟ್ಟಗಲನೋ".... ಎನ್ನುವಲ್ಲಿ   ತನ್ನವರು ಎ೦ದರೆ ಹರಿಯ ಪರಿವಾರ ಅಲ್ಲ, ಅವನ ಭಕ್ತರು ಎಂದು ಅರ್ಥೈಸಿಕೊಳ್ಳಬೇಕು.  "ರ ಮಾಧವನ ಒಲಿಸಲರಿಯದೆ.." ಅಂದರೆ ರಮೆಯ ಅರಸ,  ಧವನ ಎ೦ದರೆ ಗಂಡ, ಪತಿ ಎ೦ದು ಅರ್ಥ ಆಗುತ್ತದೆ.  ಅವನನ್ನು ಹೀಗೆ ಸುಲಭವಾಗಿ ಒಲಿಸಿಕೊಳ್ಳಲರಿಯದ ಭಕ್ತರು ಎಂದು ಅರ್ಥ ಮಾಡಿಕೊಳ್ಳಬೇಕು.  ಭಗವಂತನ ಕರುಣೆ ಎಂಬುದು ಅದೆಷ್ಟು ವಿಶಾಲವಾದುದೆಂದರೆ, ನಾವು ಒಂದು ಹೆಜ್ಜೆ ಅವನೆಡೆಗೆ ಇಟ್ಟರೆ ಸಾಕು, ಅವನು ೧೦, ೧೦೦, ೧೦೦೦ ಹೆಜ್ಜೆಗಳನ್ನು ನಮ್ಮೆಡೆಗಿಟ್ಟು ಕಂದನೆಡೆಗೆ ಧಾವಿಸುವ ತಾಯಿಯಂತೆ ಬಂದು ರಕ್ಷಿಸುವನು. ಜೀವನದ ಉಳಿದೆಲ್ಲಾ ಸಂಬಂಧಗಳು ಬರೀ ಸೀಮಿತ. ಬಿಂಬರೂಪಿ ಭಗವಂತನ ಸಂಬಂಧ ಮಾತ್ರವೇ ಅವನದೇ ಪ್ರತಿಬಿಂಬವಾದ ನಮ್ಮ ಜೊತೆ ಅನಂತ.  ನಾವು ಭಗವಂತನನ್ನು ಅರಿಯುವ ಪ್ರಯತ್ನ ಮಾಡುತ್ತಾ ನಮ್ಮ ಕೃತಜ್ಞತೆಯನ್ನು ಮಾತ್ರ ಸದಾ ತಿಳಿಸುತ್ತಿರಬೇಕು.

ಮಲಗಿ, ಕುಳಿತು, ನಿಂತು, ಕುಣಿದು, ನಲಿದು, ಒಲಿದು ಎಂದೆಲ್ಲಾ ಬೇರೆ ಬೇರೆಯಾಗಿ ಹೇಳಿರುವುದನ್ನು ಅನೇಕ ರೀತಿಯಾಗಿ ವಿಶ್ಲೇಷಣೆ ಮಾಡಬಹುದು.  ಮಲಗಿ ಎಂದಾಗ ಕುಳಿತುಕೊಳ್ಳಲಾಗದವರು, ಅಶಕ್ತರು ಮಲಗಿಯೇ ಪರಮಾದರದಿಂದ ಹರಿಯ ಸ್ಮರಣೆ ಮಾಡಿದರೂ ಸಾಕು, ಅವನು ಪ್ರೀತಿಯಿಂದ ಪಕ್ಕದಲ್ಲಿ ಕುಳಿತೇ ಕೇಳಿಸಿಕೊಳ್ಳುವನೆಂದೆನ್ನಬಹುದು.  ಜಗನ್ನಾಥ ದಾಸರು ಹರಿ ಪ್ರತ್ಯಕ್ಷನಾಗುವನೆಂದು ಹೇಳಿಲ್ಲ ’ಒಲಿವೆ ನಿಮಗೆಂಬ’ ಎಂದಿದ್ದಾರೆ.  ಹರಿಯ ಕರುಣೆಯನ್ನು ನಾವು ನಾನಾ ರೀತಿಯಲ್ಲಿ ಪ್ರತೀ ನಿಮಿಷವೂ ಪಡೆಯುತ್ತಲೇ ಇದ್ದೇವೆ.  ಇದಕ್ಕಾಗಿ ಮಲಗಿದಾಗಲೂ, ಕುಳಿತಾಗಲೂ, ನಿಂತಾಗಲೂ, ಸದಾ ಅನವರತ ಭಗವಂತನ ನಾಮ ಸ್ಮರಣೆ ಮಾಡುತ್ತಾ ಧನ್ಯವಾದಗಳನ್ನು ಅರ್ಪಿಸುತ್ತಲೇ ಇರಬೇಕೆಂಬ ಅರ್ಥ ಕೂಡ ಆಗುತ್ತದೆ.  ನಾವು ಯಾವಾಗ ಪರಮ ಆದರದಿಂದ, ಭಕ್ತಿಯಿಂದ ಭಗವಂತನ ಸ್ಮರಣೆ ಮಾಡುತ್ತೇವೆಯೋ ಆಗ ಅವನು ನಾವು ಮಲಗಿ, ಕುಳಿತು, ಅಥವಾ ನಿಂತು ಸ್ಮರಣೆ ಮಾಡುತ್ತಿದ್ದೇವೆಯೇ ಎಂಬುದನ್ನು ಪರಿಗಣಿಸುವುದಿಲ್ಲ, ಧಾವಿಸಿ ಬಂದು ನಮಗೆ ಒಲಿಯುವನೆಂದು ಅರ್ಥ.  ಇನ್ನೊಂದು ವಿಧದಲ್ಲಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ನಮಗೆ ತೋರುವುದು, ಜನನ ಮರಣವೆಂಬ ಚಕ್ರದಲ್ಲಿ ನಿರಂತರ ಸುತ್ತುವ ಜೀವ, ಭ್ರೂಣಾವಸ್ಥೆಯಲ್ಲಿ ತಾಯಿಯ ಗರ್ಭದಲ್ಲಿ ಮಲಗಿರುತ್ತಾನೆ, ಜನಿಸಿದ ನಂತರ ತೊಟ್ಟಿಲಲ್ಲಿ ಮಲಗುತ್ತಾನೆ, ಮಗುವಾಗಿ ಎದ್ದು ಕುಳಿತುಕೊಳ್ಳುತ್ತಾನೆ, ಬೆಳೆದಾಗ ನಿಲ್ಲುತ್ತಾನೆ, ಯೌವನ ಬಂದಾಗ ಕುಣಿಯುತ್ತಾನೆ, ಮತ್ತೆ ವಯಸ್ಸಾದಾಗ ಸೋತು ನಿಲ್ಲುತ್ತಾನೆ, ತೀರ ಮುದುಕನಾದಾಗ ನಿಲ್ಲಲಾರದೆ ಕುಳಿತುಕೊಳ್ಳುತ್ತಾನೆ ಮತ್ತು ಮರಣ ಸಮಯವಾದಾಗ ಏಳಲೇ ಆಗದೆ ಮಲಗಿ ಬಿಟ್ಟಿರುತ್ತಾನೆ.  ಹೀಗೇ ಎಲ್ಲಾ ಅವಸ್ಥೆಗಳಲ್ಲೂ ಯಥಾಶಕ್ತಿ ಜ್ಞಾನ ಸಾಧನೆ ಮಾಡಲೇಬೇಕೆಂಬ ಅರ್ಥ ಕೂಡ ಆಗುತ್ತದೆ.  ಗರ್ಭಾವಸ್ಥೆಯಲ್ಲಿಯೂ, ಶಿಶುಗಳಲ್ಲಿಯೂ, ವೃದ್ಧಾಪ್ಯದಲ್ಲಿಯೂ, ಭೌತಿಕ ದೇಹದ ದೌರ್ಬಲ್ಯದಿಂದ ಭಗವಂತನ ಆರಾಧನೆ, ಉಪಾಸನೆ ತೀವ್ರತರವಾಗಿ ಆಗುವುದಿಲ್ಲ ಆದರೆ ಯೌವನಾವಸ್ಥೆಯಲ್ಲಿ ಜೀವಿ ಸದೃಢನಾಗಿರುತ್ತಾನೆ, ಕುಣಿದು, ನಲಿದು ಉಪಾಸನೆ ಮಾಡಬಹುದಾದ ಅವಸ್ಥೆ ಮತ್ತು ಯೋಗ್ಯಕಾಲ ಕೂಡ.  ಆಗ ವಿಷಯಾಸಕ್ತಿಗಳಲ್ಲಿ ಮುಳುಗಿ, ಬೇಕೆನಿಸಿದ್ದನ್ನೆಲ್ಲಾ ಉಂಡು - ಉಟ್ಟು ದೇಹವನ್ನು ವ್ಯರ್ಥ ಮಾಡಿಕೊಳ್ಳುವುದು ಬಿಟ್ಟು ಬಿಡಬೇಕು.  ದೇಹಧಾರಣೆಗೆ ಬೇಕಾದಷ್ಟು ಮಾತ್ರ ಸಾತ್ವಿಕ ಆಹಾರ ತೆಗೆದುಕೊಂಡು, ಶರೀರ ಮತ್ತು ಇಂದ್ರಿಯಗಳನ್ನು ನಿಗ್ರಹಿಸಿ, ಒಳಗೂ - ಹೊರಗೂ ಹರಿಯನ್ನು ಸೇವಿಸಿದಾಗ ಭಗವಂತ ಪರಮ ಕರುಣೆಯಿಂದ ನಮಗೆ ಒಲಿಯುವನು ಎಂಬ ಅರ್ಥ ಕೂಡ ಆಗುತ್ತದೆ.

ಕಲಿಯುಗದಲ್ಲಿ ನಿರಂತರವಾಗಿ ಹರಿ ಸ್ಮರಣೆ,  ನಾಮ ಜಪ ಮಾಡುತ್ತ, ಹರಿಯ ಸ್ತುತಿಗಳನ್ನು ಹಾಡುತ್ತಾ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂಬುದನ್ನು ನಮ್ಮ ದಾಸ ಪರಂಪರೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಮತ್ತು ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.  ಶ್ರೀ ವಿಜಯದಾಸರು "ಕಲಿಯುಗದಿ ಗಾನದಿ ಕೇಶವನೆನಲು ಕೈಗೂಡುವನು ರಂಗವಿಟ್ಠಲ" ಎಂದಿದ್ದಾರೆ ಮತ್ತು ಶ್ರೀ ಪುರಂದರ ದಾಸರು "ಕೀರ್ತನಮಾತ್ರದಿ ಕಲಿಯುಗದಲ್ಲಿ ಮುಕುತಿಯನೀವ ಪುರಂದರ ವಿಟ್ಠಲ" ಎಂದಿದ್ದಾರೆ.  ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಿಗಿಂತಲೂ ಕಲಿಯುಗದಲ್ಲಿ ಅತ್ಯಂತ ಸುಲಭೋಪಾಯವಾದ, ನಾಮ ಸ್ಮರಣೆಯಿಂದಲೇ ಹರಿಯನ್ನು ಒಲಿಸಿಕೊಳ್ಳಬಹುದೆಂಬ ಮಾತು ಸತ್ಯವೆಂದಿದ್ದಾರೆ.  ಹೀಗೆ ಗಾನ ಮಾಡುವುದಕ್ಕೆ ಯಾವುದೇ ನಿರ್ದಿಷ್ಟ ಆಸನವೇ ಬೇಕೆಂದೇನೂ ಇಲ್ಲ.  ಮಲಗಿಯೂ ಹಾಡಬಹುದು, ಕುಳಿತೂ ಹಾಡಬಹುದು, ನಿಂತೂ ಹಾಡಬಹುದು, ಕುಣಿಯುತ್ತಲೂ ಹಾಡಬಹುದು.  ’ಮಲಗಿ ಪರಮಾದರದಿ ಪಾಡಲು’ ಎಂಬುದನ್ನು ’ಅಪರೋಕ್ಷ ಜ್ಞಾನಿಗಳಿಗಾಗಿ ತಿಳಿಸಿರುವುದು ಎಂಬ ಅರ್ಥದಲ್ಲಿ ಕೂಡ ನೋಡಬಹುದು, ಏಕೆಂದರೆ ಅವರಿಗೆ ಯಾವ ನಿಯಮಗಳೂ ಇರುವುದಿಲ್ಲ.  ಅವರು ಸದಾ ಭಗವಂತನ ಸ್ಮರಣೆಯನ್ನು ಮಾಡುತ್ತಲೇ ಇರುತ್ತಾರೆ.

’ರಮಾಧವನೊಲಿಸಲರಿಯದೇ ಪಾಮರರು ಬಳಲುವರು ಭವದೊಳಗೆ’ - ರಮಾಧವನೆಂದರೆ ರಮೆಯ ರಮಣ ಮಾಧವನು.  ಪಾಮರರಿಗೆ ರಮೆ (ಲಕ್ಷ್ಮೀ) ಮಾತ್ರ ಬೇಕು, ರಮಾರಮಣ ಬೇಡ, ಆದ್ದರಿಂದಲೇ ಭಗವಂತ ನಮ್ಮ ಹತ್ತಿರ ನಾವು ಕರೆಯದೇ ಬರುವುದೇ ಇಲ್ಲ. ಆದರೆ ಭಗವಂತ ನಮ್ಮಿಂದ ದೂರ ಇಲ್ಲವೇ ಇಲ್ಲ, ಅವನು ಸದಾ ನಮ್ಮಂತರಂಗದಲ್ಲಿ ಬಿಂಬರೂಪಿಯಾಗಿ ಇದ್ದೇ ಇದ್ದಾನೆ, ಒಮ್ಮೆ ಪರಮಾದರದಿಂದ ಕೂಗಿದರೂ ಓಗೊಡುತ್ತಾನಾದ್ದರಿಂದಲೇ ಅವನು ’ಸುಲಭನು’  ಆದರೆ ಭಕ್ತರಾದ ಪಾಮರರು ಇದನ್ನು ತಿಳಿಯುವುದಿಲ್ಲ, ಅವನು ದುರ್ಲಭನೆಂದುಕೊಳ್ಳುತ್ತಾರೆ.  ಭಗವಂತ ಹಾಗೇನೂ ತಿಳಿಯುವುದೇ ಇಲ್ಲ.  ತನ್ನ ಭಕ್ತರಾದ ಸಜ್ಜನರನ್ನು ಅವನು ತನ್ನವರೆಂದೇ ತಿಳಿದು, ಅವರ ಬಳಿಯೇ ಇದ್ದು, ಅವರ ಸಾಧನೆಗೆ ಹೆಚ್ಚು ಹೆಚ್ಚು ಅನುಕೂಲ ಮಾಡಿಕೊಡುತ್ತಿರುತ್ತಾನೆ.  ಅವರ ಸಾಧನೆಗಿಂತಲೂ ಅಧಿಕವಾಗಿಯೇ ಅನುಗ್ರಹ ಮಾಡುತ್ತಾನೆ. ಪರಮ ಕರುಣಾಳುವಾದ ಶ್ರೀಹರಿ ಬೇಡುವವನಿಗಿಂತ ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇದ್ದು, ಅನುಗ್ರಹ ಮಾಡುತ್ತಾನೆ.

ತತ್ವಸುವ್ವಾಲಿಯಲ್ಲಿ ಜಗನ್ನಾಥ ದಾಸರು :
ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು | ಸುರರೊಳು ನೀನು ಬೆಂ-
ಬಲವಾಗಿ ಇರಲು ಭಯವುಂಟೆ ||  - ಸಂಸಾರವೆಂಬ ಭವಸಾಗರದಲ್ಲಿ ನಾನಾ ಭಯಗಳ ಮಧ್ಯೆ ಸಿಕ್ಕಿಕೊಂಡು ಕಂಗಾಲಾಗಿರುವ ಜೀವನು ನಿನ್ನನ್ನೇ ಆಶ್ರಯಿಸುವನು.  ಭಗವಂತ ನಿನಗಿಂತ ಸುಲಭರು ಮತ್ಯಾರು ಇಲ್ಲ.  ನಿನ್ನ ಬೆಂಬಲವೊಂದಿದ್ದರೆ ಯಾವ ಭಯವೂ ನನ್ನನ್ನು ಕಾಡದು ಎನ್ನುತ್ತಾ, ಸುಲಭದಲ್ಲಿ ಒಲಿಸಿಕೊಳ್ಳಬಹುದಾದವನು  ಭಗವಂತ ಎಂದಿದ್ದಾರೆ.

ನಿಲ್ಲಲು ನಿಲ್ಲುವೆನು ಮಲಗಿದರೆ ಮಲಗುವೆನು
ತಿಳಿದು ತಿಳಿಸಿದರೆ ತಿಳಿವೆನು | ತಿಳಿವೆನೊ ದೇಹದ
ನೆಳಲಂತೆ ಇರ್ಪೆ ನಿನಗಾನು ||  -  ಜೀವ ಪರಮಾತ್ಮನ ಪೂರ್ಣ ಅಧೀನನು, ಪ್ರತಿಬಿಂಬರೂಪನು ಎಂಬುದನ್ನು ತಿಳಿಸುತ್ತಾ ಜೀವರ ಸಕಲ ಕ್ರಿಯೆಗಳೂ ಬಿಂಬರೂಪಿಯಾದ ಭಗವಂತನ ಕ್ರಿಯೆಗನುಸಾರವಾಗಿಯೇ ಆಗುವುದೆಂಬ ಯಥಾರ್ಥವು ಸತ್ಯವೆನ್ನುತ್ತಾರೆ ಜಗನ್ನಾಥ ದಾಸರು.ಚಿತ್ರಕೃಪೆ : ಅಂತರ್ಜಾಲ