Tuesday, December 31, 2013

ಕರುಣಾ ಸಂಧಿ - ೧೩ ನೇ ಪದ್ಯ



ಧನವ ಸಂರಕ್ಷಿಸುವ ಫಣಿ ತಾ
ನುಣದೆ ಮತ್ತೊಬ್ಬರಿಗೆ ಕೊಡದನು
ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು|
ಪ್ರಣತರನು ಕಾಯ್ದಿಹನು ನಿಷ್ಕಾ
ಮನದಿ ನಿತ್ಯಾನಂದಮಯ ದು
ರ್ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ ||೧೩||



ಪ್ರತಿಪದಾರ್ಥ :  ಧನವ ಸಂರಕ್ಷಿಸುವ ಫಣಿ - ಭೂಮಿಯಲ್ಲಿ ಹೂತಿಟ್ಟ ನಿಧಿಯನ್ನು ಸಂರಕ್ಷಿಸುವ ಸರ್ಪವು,  ತಾನುಣದೆ, ಮತ್ತೊಬ್ಬರಿಗೆ ಕೊಡದೆ -   ತಾನೂ ಅನುಭವಿಸದೆ, ಮತ್ತೊಬ್ಬರಿಗೂ ನೀಡದೆ, ಅನುದಿನದಿ - ಪ್ರತಿದಿನವೂ, ನೋಡುತ - ಸುಮ್ಮನೆ ಧನವನ್ನು ನೋಡುತ್ತಲೇ ಕುಳಿತು, ಸುಖಿಸುವಂದದಿ - ಧನವು ಜೋಪಾನವಾಗಿದೆ ಎಂಬ ಸಂತೃಪ್ತ ಭಾವದಿಂದ ಸುಖ ಪಡುವ ರೀತಿಯಲ್ಲಿ, ಲಕುಮಿವಲ್ಲಭನು - ಲಕ್ಷ್ಮೀಪತಿಯಾದ ಶ್ರೀಹರಿಯು, ಪ್ರಣತರನು - ಶರಣಾಗತರಾದ ಭಕ್ತರನ್ನು, ನಿಷ್ಕಾಮನದಿ - ಯಾವುದೇ ತರಹದ ಪ್ರತಿಫಲಾಪೇಕ್ಷೆಯೂ ಇಲ್ಲದೆ, ಕಾಯ್ದಿಹನು - ಸರ್ಪ ನಿಧಿಯನ್ನು ಕಾಯುವಂತೆ (ಸರ್ಪಗಾವಲಿನಂತೆ) ಕಾಪಾಡುತ್ತಾನೆ, ನಿತ್ಯಾನಂದಮಯ - ಭಗವಂತನು ನಿತ್ಯವೂ ನಿರತವೂ ಆನಂದಮಯನು, ದುರ್ಜನರ ಸೇವೆಯನೊಲ್ಲ - ನಿಜವಾದ ಶ್ರದ್ಧೆ ಭಕ್ತಿಗಳಿಲ್ಲದೆ ತೋರಿಕೆಗಾಗಿ ಸೇವೆಯನ್ನು  ಮಾಡುವವರ  ಸೇವೆಯನ್ನು ಸ್ವೀಕರಿಸುವವನಲ್ಲ, ಅಪ್ರತಿಮಲ್ಲ - ಮೂರು ಲೋಕಗಳಿಗೂ ಸಾಟಿಯಿಲ್ಲದ 
ಜಗಕೆಲ್ಲ - ಜಗಜ್ಜಟ್ಟಿಯಾಗಿರುವನು.                                                                                                                                      

                                                                                                                               
ಇಲ್ಲಿ ದಾಸರಾಯರು ಫಣಿಯು ಹಣವನ್ನು ಹೇಗೆ ಕಾಪಾಡುತ್ತದೆಯೆಂಬುದನ್ನು ವಿವರಿಸುತ್ತಾರೆ.  ಅದು  ಹಣವನ್ನು ತಾನೂ ಉಪಯೋಗಿಸುವುದಿಲ್ಲ ಮತ್ತೊಬ್ಬರಿಗೂ ಕೊಡುವುದಿಲ್ಲ, ಹೇಗೆ ತನಗೆ ಉಪಯೋಗವಿಲ್ಲದಿದ್ದರೂ ಹಣವನ್ನು ಕಾಪಾಡುತ್ತದೆಯೋ ಹಾಗೆ ಫಣಿಶಯನನಾದ ಭಗವಂತನು ಜೀವಿಗಳಿಗೆ ಸುಖವನ್ನು ಕೊಡುತ್ತಾನೆ.  ಕಾದಿಟ್ಟು ಕೊಡುತ್ತಾನೆ ಆದರೆ ಅದರಿಂದ ಅವನಿಗೆ ಪ್ರಯೋಜನವೇನೂ ಇಲ್ಲ.  ಕೇವಲ ಜೀವಿಗಳ ಸುಖಕ್ಕಾಗಿ ಆನಂದವನ್ನು ಕಾದಿಟ್ಟು ಕೊಡುತ್ತಾನೆ.  ಇದನ್ನು ದಾಸರು ಫಣಿ ಕಾಯುವ ಧನದ ಉಪಮೆಯ ಮೂಲಕ  ಪರಮಾತ್ಮನ ಕರುಣೆಯನ್ನು ಹೇಳುತ್ತಿದ್ದಾರೆ.  ಪರಮಾತ್ಮ ಪ್ರಣತರನ್ನು ತತ್ವಾಭಿಮಾನಿಗಳಾದ ಬ್ರಹ್ಮ, ವಾಯು, ಶೇಷ ಮೊದಲಾದವರಿಗೆ ಕೊಡುತ್ತಾನೆ.  ಅಸುರ ತತ್ವಾಭಿಮಾನಿಗಳಿಗೆ ಕೊಡುವುದಿಲ್ಲ.  ಪಾಪ ಪುರುಷನೆಂಬ ಪಾಪಿಯ ಕೈಗೆ ಕೊಡದೆ ನಮ್ಮನ್ನು ಕಾಪಾಡುತ್ತಾನೆ.  ಭಗವಂತನು ಪ್ರತೀ ಜೀವಿಗೂ ಸ್ವರೂಪ ಶರೀರದ ಮೇಲೆ ೨೫ ಶರೀರಗಳನ್ನು ಕೊಟ್ಟಿದ್ದಾನೆ.  ಪರಮಾತ್ಮನ ರಕ್ಷಾ ಕವಚ ಜೀವಿಗಳಿಗೆ ಹೀಗಿರುತ್ತದೆ .  ಸಜ್ಜನರು ಕರುಣಾಳು ಭಗವಂತನಿಗೆ ನಿಧಿಯಿದ್ದಂತೆ.  ಹಾಗಾಗಿ ಪರಮಾತ್ಮ ಅವರನ್ನು ಕರುಣೆಯಿಂದ ಕಾಪಾಡುತ್ತಾನೆ.  ಹಾಗೇ ಪರಮಾತ್ಮ ಕೂಡ ಸಜ್ಜನರಿಗೆ ನಿಧಿಯಂತೆ.  ಸಜ್ಜನರು ಪರಮಾತ್ಮನನ್ನು ಬಿಟ್ಟು ಆಲೋಚಿಸಬಾರದು, ಅಗಲಬಾರದು.  ಪರಮಾತ್ಮನು ಎಂತಹ ಕರುಣಿ ಎಂಬುದನ್ನು ದಾಸರಾಯರು ಈ ಕೃತಿಯಲ್ಲಿ ಕರುಣಿಸೆನಗಿನಿತು ಕರುಣಾಳು | ನಿನ್ನ ಚರಣದಲ್ಲಿ ಭಕುತಿ ವಿಷಯದ ವಿರುಕುತಿ ||  ಚರಣದಲ್ಲಿ ಬಿಂಬನೇ ಸರ್ವ ಪ್ರಯೋಜನವ ಮಾಡಿ ಪ್ರತಿ ಬಿಂಬರಿಗೆ ತತ್ಫಲಗಳೀವ.   ಕಾವ ಬಿಂಬ ಸ್ವತಂತ್ರ - ಪ್ರತಿಬಿಂಬ ಅಸ್ವತಂತ್ರತಮನೆಂಬ ಸುಜ್ಞಾನ ಪೂರ್ವಕ ನಿನ್ನ ಭಜಿಪ ಸುಖ.. ಕರುಣಿಸೆನಗಿನಿತು ಕರುಣಾಳು ಎಂದು ಕೇಳಿಕೊಳ್ಳುತ್ತಿದ್ದಾರೆ. 

ಧನವ ಸಂರಕ್ಷಿಸುವ ಫಣಿ - "ಫಣಿ" ಎಂದರೆ ಶೇಷನ ಅವತಾರ.   ರಾಮಾವತಾರವಾದಾಗ ಶೇಷನು ಲಕ್ಷ್ಮಣನಾಗಿ ತನ್ನ ಸ್ವಾಮಿಯನ್ನು ಅತೀ ಜೋಪಾನವಾಗಿ ಕಾಪಾಡಿದ.  ದಂಡಕಾರಣ್ಯದಲ್ಲಿ ಪರ್ಣಕುಟೀರದೊಳಗೆ ತನ್ನ ಸ್ವಾಮಿ ಶ್ರೀರಾಮ ಹಾಗೂ ಸೀತೆಯರನ್ನಿರಿಸಿ, ರಾತ್ರಿಯೆಲ್ಲಾ ನಿದ್ರಿಸದೆ ಎಚ್ಚರದಿಂದ ಕಾವಲು ಕಾಯ್ದ ಶೇಷ.  ಪ್ರೀತಿ ಭಕ್ತಿಗಳಿಂದ ಅವರನ್ನು ಅನುದಿನವೂ ಶೇಷನು
 ನೋಡುತ್ತಾ ಸುಖಿಸುತ್ತಾನೆ. 
ತಾನುಣದೆ ಮತ್ತೊಬ್ಬರಿಗೆ ಕೊಡದನುದಿನದಿ ನೋಡುತ -   ಭೂಮಿಯಲ್ಲಿ ಹುದುಗಿಸಿಟ್ಟ ನಿಧಿಯನ್ನು ನಾಗರಹಾವು ಬಹಳ ಜತನದಿಂದ ಕಾಯುತ್ತದೆ.  ಆ ನಿಧಿಯನ್ನು ಅನುಭವಿಸುವುದೂ ಇಲ್ಲ, ಮತ್ತೊಬ್ಬರಿಗೆ ಅನುಭವಿಸಲು ಬಿಡುವುದೂ ಇಲ್ಲ ಆದರೆ ಸದಾ ನಿಧಿಯನ್ನು ನೋಡುತ್ತಾ ಸುಖಿಸುತ್ತದೆ.  ಭಗವಂತನಿಗೂ ಹೀಗೆ ತನ್ನ ಭಕ್ತರನ್ನು ಸುಖದಿಂದ ಕಾಪಾಡುವ ಆಸೆ, ತನಗೇನೂ ಸುಖ ಬರಬೇಕಾಗಿಲ್ಲವಾದರೂ,  ಅಥವಾ ತನಗೇನೂ ದುಃಖ ನಿವಾರಣೆ ಆಗಬೇಕಾಗಿಲ್ಲದಿದ್ದರೂ ಅವನು ನಮ್ಮನ್ನು ನಿಧಿ ಕಾಯುವ ಫಣಿಯಂತೆ ಕಾಯುತ್ತಾನೆ, ಪೊರೆಯುತ್ತಾನೆ.  ನಿಧಿ ಕಾಯುವ ಫಣಿಯೂ ನಿಷ್ಕಾಮನೆಯಿಂದಲೇ ಕಾಯುತ್ತದೆ ಮತ್ತು ಭಗವಂತನಿಗೂ ಕಾಮನೆಯಿಲ್ಲ.  ಎಲ್ಲವೂ ತನ್ನದೇ, ಬ್ರಹ್ಮಾಂಡದ ಒಡೆಯನೇ ಅವನು.  ಆದರೂ ಭಕ್ತರು / ಸಜ್ಜನರೆಂದರೆ ಅವನಿಗೆ "ನಿಧಿ"ಯಂತೆ.  ಪ್ರತಿಫಲಾಪೇಕ್ಷೆಯೇ ಇಲ್ಲದೆ ಸಂರಕ್ಷಿಸುವವನು ಪರಮಾತ್ಮ.  ಗುಪ್ತವಾಗಿ ನಿಧಿಯನ್ನು ನಾನಾ ವಿಧದಲ್ಲಿ ಜತನವಾಗಿರಿಸಿ ಹೇಗೆ ಭೂಗತ ಮಾಡಿ ಕಾಪಾಡುವೆವೋ ಹಾಗೆ  ಭಗವಂತ ನಮ್ಮನ್ನು ಕಾಪಾಡುತ್ತಾನೆ.   "ಜೀವ" ಭಗವಂತನಿಗೆ ಬಂಗಾರವಿದ್ದಂತೆ, ಅದನ್ನು ಶರೀರವೆಂಬೋ ಅಭೇದ್ಯವಾದ ಸ್ಥೂಲ ಕೋಟೆಯೊಳಗೆ ಅನೇಕ ಆವರಣಗಳನ್ನು ಸೃಷ್ಟಿಸಿ ಒಳಗಿಟ್ಟು ಜತನವಾಗಿ ಕಾಪಾಡುತ್ತಾನೆ.  ಹೀಗೆ ಸೃಷ್ಟಿ ಮಾಡಿದ ಜೀವನನ್ನು ಭಗವಂತ ಯೋಗ್ಯರಾದವರಿಗೆ ಮಾತ್ರವೇ ಕೊಡುತ್ತಾನೆ, ಅಸುರರಿಗಲ್ಲ.  ಯೋಗ್ಯರೆಂದರೆ ತತ್ವಾಭಿಮಾನಿ ದೇವತೆಗಳೆಂದರ್ಥ.  ಅಸಂಖ್ಯಾತ ತತ್ವಾಭಿಮಾನಿ ದೇವತೆಗಳು ಜೀವಿಯೆಂಬ ಭಕ್ತನನ್ನು (ನಿಧಿಯನ್ನು) ಅನುಭವಿಸುತ್ತಾರೆ.  ಶರೀರವೆಂಬ ಸ್ಥೂಲದೇಹದಲ್ಲೇ ಆಗಲಿ, ಸೂಕ್ಷ್ಮ ದೇಹದಲ್ಲೇ ಆಗಲಿ, ಎಲ್ಲಿಯೂ ಅಸುರರಿಗೆ ಪ್ರವೇಶವಿಲ್ಲ.  ಈ ರೀತಿಯ ಭದ್ರವಾದ ಕೋಟೆಯಂತಹ ಶರೀರವನ್ನು ಕೊಟ್ಟು ಸಂಸಾರದಲ್ಲಿ ಬಂಧಿಸಿಟ್ಟು ಶ್ರೀಹರಿಯು ರಕ್ಷಣೆಯನ್ನು ಮಾಡಿ, ಸಾಧನೆಯನ್ನೂ ಮಾಡಿಸುವವನು ಭಗವಂತ.  ಆದ್ದರಿಂದಲೇ ಈ ಶರೀರವನ್ನು ಸಾಧನಾ ಶರೀರವೆಂದು ಕರೆಯುವುದು.
ಲಕುಮಿ ವಲ್ಲಭನು - ಜೀವರನ್ನು ಕಾಪಾಡಿ ಶ್ರೀಹರಿಗೆ ಯಾವ ಲಾಭವಾಗಲೀ, ನಷ್ಟವಾಗಲೀ ಇಲ್ಲ.  ಆತ ತನ್ನ ಮನದನ್ನೆಯಾದ ಲಕ್ಷ್ಮಿಯ ಮುದ್ದು ಮಕ್ಕಳು ಜೀವರು, ಮತ್ತು ಅವರ ಮೇಲಿನ ಪ್ರೀತಿ ಮತ್ತು ಕರುಣೆಯಿಂದ ಲಕ್ಷ್ಮೀದೇವಿಯು ಅವರನ್ನು ಕಾಪಾಡೆಂದು ಕೇಳಿಕೊಳ್ಳುತ್ತಾಳಾದ್ದರಿಂದಲೇ ಕಾಪಾಡುತ್ತಾನೆ.  ಸಂಪತ್ತಿಗೇ ಅಧಿದೇವತೆಯಾದ ಲಕ್ಷ್ಮೀದೇವಿಯ ವಲ್ಲಭನಾದ ಭಗವಂತನಿಗೆ ಜೀವರು ಏನನ್ನು ತಾನೇ ಕೊಟ್ಟು ತೃಪ್ತಿಪಡಿಸಲು ಸಾಧ್ಯ?

ಪ್ರಣತರನು ಕಾದಿಹನು - ಜೀವರನ್ನು ತತ್ವಾಭಿಮಾನಿ ದೇವತೆಗಳಾದ ಬ್ರಹ್ಮದೇವರು, ವಾಯುದೇವರು ಮುಂತಾದವರಿಗೆ ಕೊಟ್ಟು ಬಿಡುತ್ತಾನೆ ಭಗವಂತ.  ಪ್ರಣತರು ಎಂದರೆ ವಾಯುದೇವರ ಭಕ್ತರು.  ಯಾರು ವಾಯುದೇವರ ಮುಖಾಂತರ ಭಗವಂತನನ್ನು ಪ್ರಾರ್ಥಿಸುತ್ತೇವೋ ಅವರಿಗೆ ಮಾತ್ರ ಅವನು ಒಲಿಯುತ್ತಾನೆ.  "ವಾಯುದೇವಾಂತರ್ಗತ" ಎನ್ನಬೇಕು.  ಪ್ರಣತರನ್ನು ಭಗವಂತ ಕಾಯುತ್ತಾನೆ.  ಪ್ರಣತರು ನಮ್ಮನ್ನು ಕಾಯುತ್ತಾರೆ.
ನಿಷ್ಮಾಮನದಿ ನಿತ್ಯಾನಂದಮಯ - ಸಕಲ ಸಜ್ಜನರೂ, ಭಕ್ತರೂ ತಮ್ಮ ತಮ್ಮ ಹೃದಯ ಕಮಲವೆಂಬ ಗುಹೆಯಲ್ಲಿ ಸದಾ ಬಚ್ಚಿಟ್ಟುಕೊಂಡಿರುವಂತಹ ಮಹಾ ಶ್ರೇಷ್ಠವಾದ ನಿಧಿ ಭಗವಂತ.   ನಿತ್ಯಾನಂದಮಯನಾದ ಶ್ರೀಹರಿಗೆ ಭಕ್ತರು ’ನಿಧಿ’ ಮತ್ತು ಭಕ್ತರಿಗೆ ಭಗವಂತ ’ನಿಧಿ’.  ಭಕ್ತರು ಭಗವಂತನನ್ನು ಭಕ್ತಿ ಪ್ರೀತಿಗಳಿಂದ ಆರಾಧಿಸಿದರೆ, ಭಗವಂತನು ತನ್ನ ಭಕ್ತರನ್ನು ಅತ್ಯಂತ ವಾತ್ಸಲ್ಯ ಮತ್ತು ಕರುಣೆಯಿಂದ ಕಾಪಾಡುತ್ತಾನೆ ಎಂದರ್ಥ.
ದುರ್ಜನರ ಸೇವೆಯನೊಲ್ಲ - ಭಗವಂತನು ಸಜ್ಜನರನ್ನು ಅವರ ಭಕ್ತಿಗೆ ಮೆಚ್ಚಿ ಅವರಿಂದ ಸೇವೆ ಸ್ವೀಕರಿಸಿ ಅವರನ್ನು ಕಾಪಾಡುತ್ತಾನೆ.  ಅದೂ ಕೂಡ ತನಗಾಗಿಯೇನೂ ಅಲ್ಲ, ಜೀವರಿಗೆ ಮೋಕ್ಷ ಕೊಡುವುದಕ್ಕಾಗಿ ಮತ್ತು ಅವರಿಂದ ಸಾಧನೆಯನ್ನು ಮಾಡಿಸುವುದಕ್ಕಾಗಿ ಅಷ್ಟೆ.  ತನ್ನನ್ನು ಪೂಜಿಸದ ದುರ್ಜನರನ್ನು ಅವನು ಕೋಪದಿಂದಲಾಗಲೀ, ದ್ವೇಷದಿಂದಲಾಗಲೀ ನಾಶವನ್ನೇನೂ ಪಡಿಸುವುದಿಲ್ಲ.  ಆದರೆ ಅವರು ತಮ್ಮ ಸ್ವಾರ್ಥಕ್ಕಾಗಿ ಸೇವೆ ಮಾಡಲಿಚ್ಛಿಸಿದರೆ, ಅದನ್ನು ಭಗವಂತ ಒಲ್ಲ.

ಜಗಕೆಲ್ಲ ಅಪ್ರತಿಮಲ್ಲ - ಭಗವಂತನು ಸರ್ವ ಶಕ್ತನು.  ಅವನನ್ನು ಯಾರು ಏನೂ ಮಾಡಲಾರರು.  ಅವನಿಗೆ ಯಾರಿಂದಲೂ ಯಾವ ಅಪಾಯವಾಗಲೀ, ಭಯವಾಗಲೀ ಇಲ್ಲ.  ಅವನಿಗೆ ಯಾರ ಸಹಾಯವೂ ಬೇಕಾಗಿಲ್ಲ.   ಅವನು ಸಜ್ಜನರಿಂದ ಮಾತ್ರ ಸೇವೆಯನ್ನು ಸ್ವೀಕರಿಸುತ್ತಾನೆ ಮತ್ತು ಅವರನ್ನು ಅನುಗ್ರಹಿಸಿ, ರಕ್ಷಣೆ ಮಾಡುತ್ತಾನೆ.


ನಿಷ್ಕಾಮನದಿ ಕಾದಿಹನು - ಶೇಷದೇವರು ಭಗವಂತನಿಗೆ ಪರ್ಯಂಕ.  ಶೇಷಶಯನನಾದ ಶ್ರೀಹರಿ ಸದಾ ಶೇಷನ ಸೇವೆಯನ್ನು ಸ್ವೀಕರಿಸುತ್ತಿರುವನು.  ಲಕ್ಷ್ಮಣನಾಗಿ  ನಿತ್ಯ ನಿರಂತರವಾಗಿ ನಿಷ್ಕಾಮದಿಂದ ಸ್ವಾಮಿಯ ಪಾದವಂದನೆ ಮಾಡುತ್ತಿದ್ದನು. 


ಭಕ್ತರು ಭಗವಂತನನ್ನು  ಭಕ್ತಿ ಹಾಗೂ ಪ್ರೀತಿಗಳಿಂದ ಆರಾಧಿಸಿದಾಗ ಭಗವಂತ ಭಕ್ತರನ್ನು ವಾತ್ಸಲ್ಯ ಕರುಣೆಗಳಿಂದ ರಕ್ಷಿಸುತ್ತಾನೆ.  ನಮ್ಮ ಹೃತ್ಕಮಲದಲ್ಲಿಯೇ ನೆಲೆಸಿರುವ ಮೂಲೇಶನನ್ನು ನಾವು ಸದಾ ಧ್ಯಾನಿಸುತ್ತಾ ವಿಷಯಾಸಕ್ತ ವಿಚಾರಗಳೆಂಬ ರಾಕ್ಷಸರು ಬಾಧೆ ಮಾಡದಂತೆ ಜತನವಾಗಿ ಕಾಯ್ದುಕೊಳ್ಳಬೇಕು.  ಎಲ್ಲಿ ಈ ರಾಕ್ಷಸರು ನೆಲೆಸಿರುತ್ತಾರೋ ಅಲ್ಲಿ ಭಗವಂತ ಇರುವುದಿಲ್ಲ, ಮರೆಯಾಗಿಬಿಡುತ್ತಾನೆ.  ಹಾಗಾಗದಂತೆ ನೋಡಿಕೊಳ್ಳುವುದೆಂದರೆ ’ಫಣಿ’ ನಿಧಿಯನ್ನು ಕಾಯ್ದಂತೆ ಕಾಯ್ದುಕೊಂಡು ನಮ್ಮ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳಬೇಕು.  ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳುವುದೆಂದರೆ ನಾವು ನಿಷಿದ್ಧಾನ್ನ ಪದಾರ್ಥಗಳನ್ನೂ, ಪಾನಗಳನ್ನೂ ತ್ಯಜಿಸಬೇಕು, ಉಪವಾಸ, ವ್ರತ, ಪೂಜೆ, ಧ್ಯಾನಗಳನ್ನು  ಮಾಡಿಕೊಳ್ಳುವುದೆಂದು ಅರ್ಥ. 


ಪ್ರಣತರಲ್ಲಿ ಮುಖ್ಯನಾದ ವಾಯುದೇವರನ್ನು ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ :


ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ

ಶ್ರೀಕಂಠಮುಖ್ಯಸುರರಿಗೆ | ಸುರರಿಗಿಲ್ಲವೊ ಭಾರ-
ತೀಕಾಂತ ನಿನಗೆ ಬಹದೆಂತೋ || - ದೇವಾಸುರರಲ್ಲಿ ಯುದ್ಧವಾದಾಗ ಅಸುರರು ರುದ್ರದೇವರ ಬಲದಿಂದ ವಿಜೃಂಭಿಸಿದರು.  ದೇವತೆಗಳು ಉದ್ಗೀಥನಾಮಕ ಶ್ರೀಹರಿಯನ್ನು ಉಪಾಸಿಸಿ ಅಸುರರನ್ನು ಗೆಲ್ಲುವ ಪ್ರಯತ್ನ ಮಾಡಿದರು.  ಯಾವುದೇ ದೇವತೆಯ ಪ್ರತಿಮೆಯನ್ನು ಮಾಡಿ ಅದರಲ್ಲಿ ಉದ್ಗೀಥನನ್ನು ಉಪಾಸಿಸಲು ಆರಂಭಿಸಿದರೂ ಅಸುರರು ಆ ಪ್ರತಿಮೆಯನ್ನು ಅಪವಿತ್ರ ಮಾಡಿ ಬಿಡುತ್ತಿದ್ದರು.  ಕೊನೆಗೆ ದೇವತೆಗಳು ಮುಖ್ಯಪ್ರಾಣನ ಪ್ರತಿಮೆಯನ್ನು ಮಾಡಿ ಉಪಾಸನೆ ಮಾಡಲಾರಂಭಿಸಿದರು.  ಅಸುರರು ಮುಖ್ಯಪ್ರಾಣ ದೇವರ ಪ್ರತಿಮೆಯ ಮೇಲೆ ಬೀಳಲು, ಮಣ್ಣು ಹೆಂಟೆಯು ವಜ್ರದ ಬಂಡೆಯ ಮೇಲೆ ಬಿದ್ದರೆ ಹೇಗೆ ಪುಡಿಯಾಗುವುದೋ ಹಾಗೆ ಚದುರಿ ಹೋದರು.  ಶ್ರೀಹರಿಗೆ ವಾಯುದೇವರು ಶ್ರೇಷ್ಠ ಪ್ರತಿಮೆ.  ಯಾರು ಅತಿ ಶುದ್ಧವಾದ ವಾಯುದೇವರ ಪ್ರತಿಮೆಯಲ್ಲಿ ಭಗವಂತನನ್ನು ಆರಾಧಿಸುವರೋ ಅವರು ಭಗವಂತನಿಗೆ ಅತಿ ಪ್ರಿಯರಾಗುತ್ತಾರೆಂದು ನುಡಿದಿದ್ದಾರೆ. 

ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿ-ಕೊಳುವೆ

ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜಭಾಗ-
ವತರ ಸಂಗವನೆ ಕರುಣಿಸೋ || - ಸತತವೂ ಸ್ಮರಿಸುತ್ತಾ  ಸ್ತೋತ್ರ ಮಾಡುತ್ತಾ ನಿನ್ನನ್ನೇ ಬೇಡುತ್ತಾ ಶರಣಾಗುವೆ.  ನನ್ನ ಉದ್ಧರಿಸಲೋಸುಗ ನಿನ್ನ ಸಂಬಂಧವಾದ ಜ್ಞಾನವನ್ನೂ, ವಿಜ್ಞಾನವನ್ನೂ ಕೊಟ್ಟು, ಪರಮ ಭಾಗವತರ ಸಂಗವನ್ನೂ ದಯಪಾಲಿಸಿ, ಕರುಣೆಯಿಂದ ರಕ್ಷಿಸು ಎನ್ನುತ್ತಾರೆ.  ಇದೇ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳುವುದರ ಅರ್ಥ.  ಸದಾ ಸ್ಮರಣೆ, ನಿತ್ಯ ನಿರಂತರ ಧ್ಯಾನ, ಸ್ತೋತ್ರಗಳೇ ನಮ್ಮೊಳಗಿರುವ ಎಲ್ಲಾ ಕೊಳೆಯನ್ನೂ ತೊಳೆದು ಪವಿತ್ರವಾಗಿಸುವ ಸಾಧನವಾಗಿದೆ.

ಚಿತ್ರಕೃಪೆ : ಅಂತರ್ಜಾಲ












Wednesday, December 11, 2013

ಕರುಣಾ ಸಂಧಿ - ೧೨ ನೇ ಪದ್ಯ



ಇಟ್ಟಿಕಲ್ಲನು ಭಕುತಿಯಿಂದಲಿ
ಕೊಟ್ಟ ಭಕುತಗೆ ಮೆಚ್ಚಿ ತನ್ನನೆ
ಕೊಟ್ಟ ಬಡಬ್ರಾಹ್ಮಣನ ಉಪ್ಪಿಡಿಯವಲಿಗಖಿಳಾರ್ಥ |
ಕೆಟ್ಟ ಮಾತುಗಳೆಂದ ಚೈದ್ಯನ
ಪೊಟ್ಟೆಯೊಳಗಿಂಬಿಟ್ಟ ಬಾಣದ
ಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು  ||೧೨||


ಪ್ರತಿಪದಾರ್ಥ : ಇಟ್ಟಿಕಲ್ಲನು - ಯಜ್ಞಕುಂಡ ನಿರ್ಮಾಣ ಮಾಡಲು ಬಳಸುವ ಇಟ್ಟಿಗೆ (ಮೃದುವಾದ ಕೆಂಪು) ಕಲ್ಲು, ಭಕುತಿಯಿಂದಲಿ ಕೊಟ್ಟ - ಭಕ್ತಿಯಿಂದ ಕೂಡಿ ಕೊಟ್ಟಂತಹ, ಭಕುತಗೆ - ಭಕ್ತನಾದ ಪುಂಡರೀಕನಿಗೆ, ಮೆಚ್ಚಿ ತನ್ನನೆ ಕೊಟ್ಟ - ಭಕ್ತಿಗೆ ಪ್ರಸನ್ನನಾಗಿ ಶ್ರೀಹರಿಯು ತನ್ನ ಭಕ್ತನಿಗೆ ತನ್ನನ್ನೇ ಕೊಡುವನು, ಬಡ ಬ್ರಾಹ್ಮಣನ - ಅತ್ಯಂತ ದೀನ ಸ್ಥಿತಿಯಲ್ಲಿದ್ದ ಸುಧಾಮನೆಂಬ ಬ್ರಾಹ್ಮಣನ, ಒಪ್ಪಿಡಿಯವಲಿಗೆ - ಒಂದೇ ಒಂದು ಮುಷ್ಟಿ ಅವಲಕ್ಕಿಗೆ, ಅಖಿಳಾರ್ಥ - ಸಕಲ ಸಂಪತ್ತುಗಳನ್ನೂ, ಕೆಟ್ಟ ಮಾತುಗಳೆನದೆ - ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಅವುಗಳನ್ನು ಲಕ್ಷಿಸದೆ ಕ್ಷಮಿಸಿ, ಚೈದ್ಯನ - ಚೇದಿ ರಾಜನ ಮಗನಾದ ಶಿಶುಪಾಲನನ್ನು ಸಂಹರಿಸಿ, ಪೊಟ್ಟೆಯೊಳಗಿಂಬಿಟ್ಟ - ಅವನಲ್ಲಿದ್ದ ವೈಕುಂಠದ ದ್ವಾರಪಾಲಕನಾದ ಜಯನನ್ನು ತನ್ನ ಹೊಟ್ಟೆಯೊಳಗೆ ಜೋಪಾನವಾಗಿಟ್ಟುಕೊಂಡು ಉದ್ಧರಿಸಿದ, ಬಾಣದಲಿಟ್ಟ ಭೀಷ್ಮನ - ಅರ್ಜುನನ ಸಾರಥಿಯಾಗಿ ಕುರುಕ್ಷೇತ್ರ ಯುದ್ಧದಲ್ಲಿದ್ದ ತನ್ನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದ ಭೀಷ್ಮರ, ಅವಗುಣಗಳೆಣಿಸಿದನೆ - ಕೆಟ್ಟ ನಡತೆಯೆಂದೂ, ದುಷ್ಟ ಗುಣಗಳೆಂದೂ ಎಣಿಸಿದನೇ, ಕರುಣಾಳು - ಅತ್ಯಂತ ದಯಾಮಯನಾದವನು, ಕರುಣಾಸಾಗರನು.


ಭಗವಂತ ಎಂಥಹ ಕರುಣಾಳು ಎಂದರೆ ಅವನ ಭಕ್ತನಾದ ಪುಂಡರೀಕನು ಪ್ರತ್ಯಕ್ಷನಾದ ಪಾಂಡುರಂಗನಿಗೆ ನಿಲ್ಲು, ಕಾದಿರು ಎಂದು ಹೇಳಿ ಇಟ್ಟಿಗೆಯನ್ನು ಕೊಟ್ಟು ಅವನನ್ನು ನಿಲ್ಲಿಸಿ, ತನ್ನ ತಂದೆ-ತಾಯಿಗಳ ಕರ್ತವ್ಯವನ್ನು ಮುಗಿಸಿ ನಂತರ ಭಗವಂತನಾದ ಪಾಂಡುರಂಗನನ್ನು ಉಪಚರಿಸುತ್ತಾನೆ. ಅವನ ಭಕ್ತಿಗೆ ಮೆಚ್ಚಿ ಪಾಂಡುರಂಗ ಇಂದಿಗೂ ಇಟ್ಟಿಗೆಯ ಮೇಲೆ ನಿಂತು ಸೊಂಟದ ಮೇಲೆ ಕೈಯಿಟ್ಟುಕೊಂಡು ಬಂದ ಭಕ್ತರಿಗೆಲ್ಲಾ ದರುಶನವನ್ನು ಕೊಡುತ್ತಲೇ ಇದ್ದಾನೆ. ಮತ್ತೊಬ್ಬ ಬಡ ಬ್ರಾಹ್ಮಣನಾದ ಸುಧಾಮ ತನ್ನ ಬಡತನದ ಬೇಗೆಯನ್ನು ತಾಳಲಾರದೆ ಭಗವಂತನಲ್ಲಿಗೆ ಬಂದಾಗ ಅವನನ್ನು ಆದರದಿಂದ ಉಪಚರಿಸಿ ಅವನು ತಂದು ಕೊಟ್ಟ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಸಂತೋಷಿಸಿ ಅವನಿಗೆ ಮಹದೈಶ್ವರ್ಯವನ್ನು ಕರುಣಿಸುತ್ತಾನೆ. ಇನ್ನು ತನ್ನ ಬಳಗದವನೇ ಆದ ಚೈದ್ಯರಾಜ ಶಿಶುಪಾಲನನ್ನು ಅವನ ತಾಯಿಯ ಬೇಡಿಕೆಯ ಪ್ರಕಾರ ಆ ಚೈದ್ಯ/ಶಿಶುಪಾಲ ನೂರು ಬೈಗುಳ ಬೈಯುವ ತನಕ ಕಾದು ನಂತರ ಅವನಿಗೆ ತನ್ನ ಚಕ್ರದಿಂದ ಮೋಕ್ಷವನ್ನು ಕರುಣಿಸಿ ಅವನಲ್ಲಿದ್ದ ದೈತ್ಯನನ್ನು ತಮಸ್ಸಿಗೆ ಕಳುಹಿಸುತ್ತಾನೆ. ಮತ್ತೊಬ್ಬ ಮಹಾನ್ ಭಕ್ತ ಭೀಷ್ಮಾಚಾರ್ಯರು, ಇವರು ಭಗವಂತನ ಕೈಯಲ್ಲಿ ಶಸ್ತ್ರವನ್ನು ಹಿಡಿಸುತ್ತೇನೆಂದು ಪಣತೊಟ್ಟಿದ್ದರು. ಕರುಣಾಳುವಾದ ಭಗವಂತ ಅವರ ಇಚ್ಛೆಯನ್ನು ಪೂರೈಸಲೆಂದು ಆಯುಧವನ್ನು ಎತ್ತಿ ಹಿಡಿದ. ಅಂಥಾ ಭೀಷ್ಮಾಚಾರ್ಯರಿಗೆ ಶರಮಂಚದ ಮೇಲೆ ಮಲಗಿದ್ದಾಗ ಅವರಿಂದ ವಿಷ್ಣು ಸಹಸ್ರನಾಮವನ್ನು ಜಗತ್ತಿಗೆ ಕೊಡಿಸಿದ ಕರುಣಾಳು ನಮ್ಮ ಭಗವಂತ. ಅಂದರೆ ನಾವು ಪ್ರಾಮಾಣಿಕ ಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಿದರೆ ನಮ್ಮ ಅವಗುಣಗಳನ್ನು ಎಣಿಸದೆಲೇ ಕರುಣಿಸುವವ.

ಈ ಪದ್ಯದಲ್ಲಿ ದಾಸರಾಯರು ಭಗವಂತನನ್ನು ಸದುಪಾಸನೆಯಿಂದ ಒಲಿಸಿಕೊಂಡಾಗ ಯಾರು ಯಾರಿಗೆ ಕರುಣೆ ತೋರಿದನೆಂದು ಉದಾಹರಿಸುತ್ತಾರೆ.  ಅಸದುಪಾಸನೆಯಿಂದ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಆತ್ಮಘಾತುಕತನದಿಂದ ಸದುಪಾಸನೆ ಸಾಧ್ಯವಿಲ್ಲ.  ಸುಧಾಮ, ಶಿಶುಪಾಲ ಮತ್ತು ಭೀಷ್ಮರನ್ನು ಉಧ್ಧರಿಸಿದ್ದಾನೆ.  ಅಸದುಪಾಸನೆಗೆ ಸೂಕ್ತವಾದ ಉದಾಹರಣೆಯಾಗಿ ದುರ್ಯೋಧನ ನಿಲ್ಲುತ್ತಾನೆ.  ಸದುಪಾಸನೆಯನ್ನು ಸಾರುವ ಉದಾಹರಣೆಗಳಿಗೆ ಮೊದಲನೆಯದಾಗಿ ಪುಂಡರೀಕನ ಪ್ರಕರಣವನ್ನು ವಿವರಿಸುತ್ತಾರೆ.  ತಾಯಿ ತಂದೆಯರನ್ನೇ ಪ್ರತ್ಯಕ್ಷ ದೇವರುಗಳೆಂದು ಅವರ ಸೇವೆಯಲ್ಲಿ ನಿರತನಾಗಿದ್ದ ಪುಂಡರೀಕ ದರ್ಶನ ಇತ್ತ ಪಾಂಡುರಂಗನಿಗೆ ನಿಲ್ಲಲು ಒಂದು ಇಟ್ಟಿಗೆಯನ್ನು ಕೊಟ್ಟು ಉಪಚರಿಸಿ, ತಂದೆ-ತಾಯಿಯರ ಕರ್ತವ್ಯವನ್ನು ಪೂರೈಸಿದ.  ಪುಂಡರೀಕನ ಭಕ್ತಿಗೆ ಮೆಚ್ಚಿದ ಭಗವಂತ, ತನ್ನ ಭಕ್ತ ಕೊಟ್ಟ ಇಟ್ಟಿಗೆಯ ಮೇಲೆ ಕಾಯುತ್ತಾ ನಿಂತು ಅವನನ್ನು ಉದ್ಧರಿಸಿದ.  ಅದೇ ರೂಪದಲ್ಲಿ ಪುಂಡರೀಕಪುರ (ಫಂಡರ)ದಲ್ಲಿ ವಿಠಲನಾದ.  ಶುದ್ಧ ಭಕ್ತಿಗೆ ಒಲಿಯುವ ಭಗವಂತ ಭಕ್ತರು ಆದೇಶಿಸಿದಂತೆ ನಡೆಯುವವನು.  ತಾನು "ಅಹಂ ಭಕ್ತ ಪರಾಧೀನ" ಎಂದು ಹೇಳಿದವನು.  ಸುಧಾಮನ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಅಖಿಳಾರ್ಥಗಳನ್ನೇ ಕೊಟ್ಟ. ಚೈದ್ಯ- ಶಿಶುಪಾಲನ ಒಳಗೆ ಜಯ ಇದ್ದ.  ಜಯ ಭಕ್ತನಾದರೂ ಶಿಶುಪಾಲನ ಕೆಟ್ಟ ಮಾತುಗಳಿಂದ ಜಯನ ಪಾಲಿಗೂ ಬಂದ ಕರ್ಮವನ್ನು ಭಗವಂತ ಕಳೆದುಬಿಟ್ಟ.  ಅರ್ಜುನನನ್ನು ಕಂಗೆಡಿಸಲು ವಾಸುದೇವನ ಮೇಲೆ ಬಾಣಗಳ ಮಳೆಗರೆದ ಭೀಷ್ಮನ ಅವಗುಣಗಳೆಣಿಸಲಿಲ್ಲ.  ಶರಶಯ್ಯೆಯಲ್ಲಿ ಮರಣಕ್ಕೆ ಸನ್ನಿಹಿತನಾಗಿ ಮಲಗಿದ್ದ ಭೀಷ್ಮನ ಬಳಿ ಬಂದು, ವಿಷ್ಣು ಸಹಸ್ರನಾಮ ನುಡಿಸಿ ಉದ್ಧರಿಸಿದ ಭಗವಂತನ ಕಾರುಣ್ಯಕ್ಕೆ ಎಣೆಯೇ ಇಲ್ಲ.  ಅಸುರಾವೇಶ ಹಾಗೂ ಕಲಿ ಪವೇಶದಿಂದ ನಿಜ ಭಕ್ತರು ಮಾಡಿದ ಅಪರಾಧಗಳನ್ನು ಭಗವಂತ ಎಂದಿಗೂ ಪರಿಗಣಿಸದೇ ಕ್ಷಮಿಸಿ ಉದ್ಧರಿಸುವನು. ನಾವು ಪ್ರಾಮಾಣಿಕ ಭಕ್ತಿಯಿಂದ ಪೂಜಿಸಿದರೆ ನಮಗೊಲಿಯುವ ಸುಲಭನು ಹರಿ ಎನ್ನುತ್ತಾರೆ ದಾಸರಾಯರು. 
"ಇಟ್ಟಿಕಲ್ಲು" - ಶ್ರೀ ಹಯವದನ ಪುರಾಣಿಕರು ತಮ್ಮ ಪುಸ್ತಕದಲ್ಲಿ ಇಟ್ಟಿಕಲ್ಲು ಶಬ್ದದ ಅರ್ಥ ವಿವರಣೆಗೆ ಶ್ರೀ ಜಗನ್ನಾಥ ದಾಸರದೇ ರಚನೆ ’ಪಾಂಡುರಂಗ ಪಾರಿಜಾತ’ದಲ್ಲಿ "ಇಟ್ಟಿಗೆ ಪೀಠ ಸಂಸ್ಥಿತಪಾದ ! ಮಂಗಳಪ್ರದ!" ಎಂಬ ಉಕ್ತಿಯನ್ನು ಉಲ್ಲೇಖಿಸುತ್ತಾ, ಮೂರ್ತಿ ಪ್ರತಿಷ್ಠಾಪನೆಗೆ ಮಣ್ಣಿನ ಇಟ್ಟಿಗೆ ಬಳಕೆಯಾಗುವುದಿಲ್ಲ, ಕಲ್ಲಿನ ಪೀಠವೇ ಆಗಬೇಕು ಎನ್ನುತ್ತಾರೆ.  ಇದನ್ನು ನಾವು ಅವಗಾಹನೆಗೆ ತೆಗೆದುಕೊಂಡರೆ ’ಇಟ್ಟಿಕಲ್ಲನು’ ಎಂಬ ಪದದ ಬಳಕೆಯನ್ನು ದಾಸರಾಯರು ಮಣ್ಣಿನ ಇಟ್ಟಿಗೆ ಎಂಬರ್ಥದಲ್ಲಿ ಅಲ್ಲ, ಒಂದು ಬಗೆಯ ಮೃದುವಾದ ಕೆಂಪುಕಲ್ಲು ಎಂಬ ಅರ್ಥದಲ್ಲಿ ಬಳಸಿದ್ದಾರೆಂದು ತಿಳಿಯುತ್ತದೆ.  ಶ್ರೀ ಜಗನ್ನಾಥ ದಾಸರೇ ಕಲ್ಲು ಎಂಬ ಪದವನ್ನು ಸೇರಿಸಿರುವುದರಿಂದ ಅದನ್ನು ನಾವು ಭಕ್ತನೊಬ್ಬ ಭಗವಂತನಿಗೆ ಒಂದು ಕಲ್ಲನ್ನು ಇಟ್ಟು ಅದರ ಮೇಲೆ ನಿಂತಿರುವಂತೆ ಪ್ರಾರ್ಥಿಸಿಕೊಂಡ ಎಂದು ಅರ್ಥೈಸಿಕೊಳ್ಳಬಹುದು.  ಶ್ರೀ ವಿಜಯದಾಸರು ಮಂದರ ಪರ್ವತವನ್ನೂ ’ಕಲ್ಲು’ ಎನ್ನುತ್ತಾ "ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು" ಎಂದಿದ್ದಾರೆ.  ಆದ್ದರಿಂದ ಮಹಾಭಕ್ತನಾದ ಪುಂಡರೀಕ ಮುನಿಯು ಕೊಟ್ಟ ಕಲ್ಲು ಸಾಧಾರಣವಾದದ್ದಲ್ಲ ಅನರ್ಘ್ಯ ರತ್ನವೆಂಬ ಭಕ್ತಿ ಎನ್ನಬಹುದು.  ಇಂತಹ ಅತಿಶಯವಾದ ಭಕ್ತಿಗೆ ಒಲಿದು, ಮೆಚ್ಚಿ ಕರುಣಾಮಯನಾದ ಶ್ರೀಹರಿ ತನ್ನನ್ನೇ ಕೊಟ್ಟುಬಿಡುವನು. 

ಪುಂಡರೀಕನು ತನ್ನ ತಂದೆ-ತಾಯಿಯರ ಸೇವೆ ಪೂರೈಸಿ ಬರುವವರೆಗೂ ಸೊಂಟದಲ್ಲಿ ಕೈಯಿಟ್ಟು, ಮುನಿ ಕೊಟ್ಟ ಅದೇ ಇಟ್ಟಿಗೆಯ ಮೇಲೆ ನಿಂತೇ ಇದ್ದ ಭಗವಂತ.  ಅನನ್ಯ ಭಕ್ತಿಗೆ ಮೆಚ್ಚಿ ನನ್ನನ್ನೇ ನಿನಗೆ ಕೊಡುತ್ತಿದ್ದೇನೆಂದು ತಿಳಿಸಿದ.  ಅಂದು ಪುಂಡರೀಕವರದನಾಗಿ ಪಾಂಡುರಂಗ ವಿಟ್ಠಲ ನಿಂತಿದ್ದನ್ನು ಜಗನ್ನಾಥ ದಾಸರು ತಮ್ಮ ನೋಡಿದೆ ವಿಠಲನ ನೋಡಿದೆ ಎಂಬ ಪದದಲ್ಲಿ "ತನ್ನ ತಾಯ್ತಂದೆಗಳ ಹೃದಯವೆ ಪನ್ನಗಾರಿಧ್ವಜಗೆ ಸದನವೆಂದುನ್ನತ ಭಕುತಿ ಭರದಿ ಅರ್ಚಿಪ  ಧನ್ಯಪುರುಷನ ಕಂಡು ನಾರದ ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರಪನ್ನ ವತ್ಸಲ ಬಿರಿದು ಮೆರೆಯಲು "ಜೊನ್ನೊಡಲು ಭಾಗ"ದಿ  ನೆಲೆಸಿದ ಜಗನ್ನಾಥ ವಿಠ್ಠಲನ ಮೂರ್ತಿಯ ನೋಡಿದೆ ವಿಠಲನ ಮೂರ್ತಿಯ ನೋಡಿದೆ ಎಂದು ಹಾಡಿದ್ದಾರೆ.  ಇಲ್ಲಿ ’ಜೊನ್ನೊಡಲ ಭಾಗ’ವೆಂದರೆ ಚಂದ್ರಭಾಗಾ ನದಿ ತೀರ. ನಾರದರ ಪ್ರಾರ್ಥನೆಯಿಂದಾಗಿ ಚಂದ್ರಭಾಗಾ ತೀರದಲ್ಲಿ ನೆಲೆಸಿದನೆಂದು ತಿಳಿಸಿದ್ದಾರೆ ದಾಸರು.  ಆದ್ದರಿಂದ ಕಟಿಯಲ್ಲಿ ಕರವಿಟ್ಟು ನಿಂತ ಶ್ರೀಕೃಷ್ಣನೇ "ವಿಟ್ಠಲ"ನು.

"ಒಪ್ಪಿಡಿಯವಲಿಗಖಿಳಾರ್ಥ" - ಕುಸುಬಲಕ್ಕಿ ಅವಲಕ್ಕಿಗಳು ನೈವೇದ್ಯಕ್ಕೆ ಮತ್ತು ಬ್ರಾಹ್ಮಣರ ಭಕ್ಷಣಕ್ಕೆ ಹೆಚ್ಚು ಪ್ರಶಸ್ತವಲ್ಲವೆಂಬ ಮಾತಿದ್ದರೂ, ಬಡ ಬ್ರಾಹ್ಮಣನಾದ  ಸುಧಾಮನು ಕಡು ಬಡತನದ ಪ್ರಯುಕ್ತ ಪರರಿಂದ ಬೇಡಿ ಸಂಪಾದಿಸಿದ ಒಂದು ಹಿಡಿ ಅವಲಕ್ಕಿಯನ್ನೇ ತಂದ.  ಸ್ವೀಕರಿಸಿದ ಭಗವಂತ ಅಖಿಲಾಭೀಷ್ಟಗಳನ್ನೇ ಕೊಟ್ಟ.  ಇಲ್ಲಿ ದಾಸರಾಯರ ಪದ ಜೋಡಣೆಯ ಸೌಂದರ್ಯವನ್ನು ನಾವು ಕಾಣಬೇಕು.  ಹಿಂದಿನ ಸಾಲಿನ "ಕೊಟ್ಟ ಭಕುತಗೆ ಮೆಚ್ಚಿ ತನ್ನನೆ" ಎಂದು ಓದಿದಾಗ ಕಲ್ಲನ್ನು ಕೊಟ್ಟು ನಿಂತಿರುವಂತೆ ಹೇಳಿದ ಭಕುತನ ಭಕುತಿಗೆ ಮೆಚ್ಚಿ ತನ್ನನ್ನೇ ಕೊಟ್ಟನೆಂಬ ಅರ್ಥವಾಗುತ್ತದೆ.  ಹಾಗೇ "ತನ್ನನೆ" ಎಂಬ ಪದವನ್ನು ಮುಂದಿನ ಸಾಲಿಗೆ ಸೇರಿಸಿಕೊಂಡು "ತನ್ನನೆ ಕೊಟ್ಟ ಬಡ ಬ್ರಾಹ್ಮಣನ ಒಪ್ಪಿಡಿಯವಲಿಗಖಿಳಾರ್ಥ" ಎಂದಾಗ ಸುಧಾಮನು ಹಿಡಿ ಅವಲಕ್ಕಿಯ ಜೊತೆಗೆ ತನ್ನನ್ನೇ ಸಮರ್ಪಿಸಿಕೊಂಡ ಎಂಬ ಅರ್ಥ ಬರುತ್ತದೆ.  ತನ್ನನ್ನು ತಾನು ಭಗವಂತನಿಗೆ ಸಮರ್ಪಿಸಿಕೊಂಡ ಬಡ ಬ್ರಾಹ್ಮಣನ ಭಕ್ತಿಗೆ ಒಲಿದ ಭಗವಂತ ಅಖಿಳಾರ್ಥಗಳನ್ನು ಕೊಟ್ಟ.  ಅಲ್ಲದೇ ಬ್ರಹ್ಮಾಂಡದ ಐಶ್ವರ್ಯವೆಲ್ಲವನ್ನೂ ಕೊಟ್ಟರೂ ಖಂಡಿತವಾಗಿಯೂ ಒಲಿಯುತ್ತಿರಲಿಲ್ಲ ಎನ್ನುತ್ತಾರೆ ದಾಸರಾಯರು.
"ಕೆಟ್ಟ ಮಾತುಗಳೆಂದ ಚೈದ್ಯನ" - ಚೈದ್ಯ ಅರ್ಥಾತ್ ಶಿಶುಪಾಲ ಶ್ರೀಕೃಷ್ಣನ ಸೋದರತ್ತೆಯ ಮಗನಾದುದರಿಂದ ಅವನ ನೂರು ತಪ್ಪುಗಳನ್ನು ಕ್ಷಮಿಸುವುದಾಗಿ ತನ್ನ ಅತ್ತೆಗೆ ಮಾತು ಕೊಟ್ಟಿರುತ್ತಾನೆ ಭಗವಂತ.  ಶಿಶುಪಾಲ ಮಾಡಿದ ಎಲ್ಲಕ್ಕಿಂತ ದೊಡ್ಡ ಅಪರಾಧವೆಂದರೆ ರುಕ್ಮಿಣಿಯನ್ನು ಬಯಸಿದ್ದು ಮತ್ತು ರಾಜಸೂಯ ಸಭೆಯಲ್ಲಿ ಭಗವಂತನನ್ನು ನಿಂದಿಸಿದಾಗ ತಪ್ಪುಗಳು ಆಗಲೇ ನೂರರ ಸಂಖ್ಯೆಯನ್ನು ದಾಟಿದ್ದವು ಮತ್ತು ಶ್ರೀಕೃಷ್ಣ ಶಿಶುಪಾಲನ ಶಿರಚ್ಛೇದ ಮಾಡಿದ.  ಚೈದ್ಯನ ದೇಹದಲ್ಲಿದ್ದ ’ಜಯ’ ಹೊರಗೆ ಬಂದು ಭಕ್ತಿಯಿಂದ ನಮಿಸಿ ಭಗವಂತನ ಉದರದೊಳಗೆ ಸೇರಿ ಕೊಳ್ಳುತ್ತಾನೆ.  ಜಯ ಶಿಶುಪಾಲನ ಶರೀರದಲ್ಲಿ ಹಿರಣ್ಯಕಶಿಪುವಿನ ಜೊತೆಯಿದ್ದು, ಶ್ರೀಕೃಷ್ಣನನ್ನು ದ್ವೇಷಿಸಿದ್ದನಾದರೂ ಅವನು ಭಗವಂತನ ಭಕ್ತನೇ ಆಗಿದ್ದನು.  ತನ್ನ ಭಕ್ತನನ್ನು ಉದರದಲ್ಲಿಟ್ಟುಕೊಂಡು ಕಾಪಾಡಿದ ಭಗವಂತ. 

"ಬಾಣದಲ್ಲಿಟ್ಟ ಭೀಷ್ಮ" - ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮರು ಕೌರವರ ಪಕ್ಷವಹಿಸಿ ಹೋರಾಡಿದ್ದು ಅಧರ್ಮ.  ಯುದ್ಧದಲ್ಲಿ ತಾನು ಶಸ್ತ್ರ ಹಿಡಿಯುವುದಿಲ್ಲವೆಂದು  ಕೃಷ್ಣ ಪರಮಾತ್ಮ ಪ್ರತಿಜ್ಞೆ ಮಾಡಿದ್ದನ್ನು ತಿಳಿದೂ, ತಾನು ಭಗವಂತ ಶಸ್ತ್ರವೆತ್ತುವಂತೆ ಮಾಡುವೆನೆಂದು ಪ್ರತಿಜ್ಞೆ ಮಾಡಿದ್ದು ಅಧರ್ಮ.  ಯುದ್ಧದಲ್ಲಿ ಕೃಷ್ಣಾರ್ಜುನರ ಮೇಲೆ ಸತತವಾಗಿ ಬಾಣಗಳ ಮಳೆಕರೆದು ಶ್ರೀಕೃಷ್ಣ ತನ್ನ ಪ್ರತಿಜ್ಞೆ ಮರೆತು ಅಸ್ತ್ರ ಹಿಡಿಯುವಂತೆ ಮಾಡಿದ್ದು ಅಧರ್ಮವೇ ಎಂದು ಕಾಣಿಸುವುದು.  ಆದರೆ ಭಗವಂತ ನಿಜಕ್ಕೂ ಕೈಯಲ್ಲಿ ಚಕ್ರ ಹಿಡಿದು ಭೀಷ್ಮನೆಡೆಗೆ ಧಾವಿಸಿ ಬಂದಾಗ ಭೀಷ್ಮ ಅತ್ಯಂತ ಸಂತೋಷವಾಗಿ, ಧನ್ಯತಾ ಭಾವದಿಂದ ನಮಸ್ಕರಿಸುತ್ತಾನೆ.  ತನ್ನ ಪ್ರತಿಜ್ಞೆ ಪೂರೈಸದಿದ್ದರೂ ಲೆಕ್ಕಿಸದೆ ತನ್ನ ಭಕ್ತನ ಪ್ರತಿಜ್ಞೆಯನ್ನು ಪೂರೈಸುವಂತೆ ಮಾಡಿದ ಭಗವಂತ ನಿಜಕ್ಕೂ ಅತ್ಯಂತ ಕರುಣಾಮಯಿ.  ಚಕ್ರಪಾಣಿಯಾಗಿ ಬಂದ ಪರಮಾತ್ಮನನ್ನು ಭೀಷ್ಮರು ತನ್ನನ್ನು ಕೊಲ್ಲಬೇಕೆಂದು ಪ್ರಾರ್ಥಿಸಿಕೊಳ್ಳುತ್ತಾರೆ.  ಹೀಗೆ ನೀನು ಅಸ್ತ್ರ ಹಿಡಿದು ನನ್ನ ಕೀರ್ತಿಯನ್ನು ಮೂರು ಲೋಕದಲ್ಲಿಯೂ ಹರಡಿದೆ ಎಂದು ನಮಸ್ಕರಿಸುತ್ತಾರೆ.  ಭಗವಂತ ತನ್ನ ಮಾತನ್ನು ಮುರಿಯಲೋಸುಗ ಚಕ್ರಪಾಣಿಯಾಗಿ ಭೀಷ್ಮರೆಡೆಗೆ ಧಾವಿಸಿದ್ದು ಅವರನ್ನು ಕೊಲ್ಲಲೆಂದೇನೂ ಅಲ್ಲ.  ಬಂಧು ಮೋಹದಲ್ಲಿ ಸಿಲುಕಿ ತೊಳಲಾಡುತ್ತಾ ವೀರಾವೇಶವಿಲ್ಲದೆ ಯುದ್ಧ ಮಾಡುತ್ತಿದ್ದ ಅರ್ಜುನನಿಗೆ ಎಚ್ಚರಿಸಲಷ್ಟೇ ಆಗಿತ್ತು.  ಯುದ್ಧ ಮಾಡುವುದಿಲ್ಲವೆಂಬ ನಿನ್ನ ಮಾತು ಸುಳ್ಳಾಗಿ ಬಿಡಬಾರದು, ಕೇಶವಾ ಹಿಂದಿರುಗಿ ಬಾ, ನಾನು ವೀರಾವೇಶದಿಂದಲೇ ಹೋರಾಡುವೆ ಎಂದು ಅರ್ಜುನ ಕರೆದಾಗ ಶ್ರೀಕೃಷ್ಣ ಹಿಂತಿರುಗಿ ಬರುತ್ತಾನೆ.  ಇದೆಲ್ಲಾ ಭಗವಂತನ ಲೀಲಾವಿನೋದವಾಗಿತ್ತೇ ಹೊರತು, ವಸ್ತುತಃ ಭೀಷ್ಮರ ಪ್ರತಿಜ್ಞೆಯು ಶ್ರೀಕೃಷ್ಣನ ವಿರುದ್ಧವೂ ಆಗಿರಲಿಲ್ಲ.  ಹೀಗೆ ಭೀಷ್ಮರ ನಡವಳಿಕೆಯನ್ನು ಅವಗುಣಗಳೆಂದರೆ, ಕರುಣಾಮಯನಾದ ಶ್ರೀಹರಿ, ತನ್ನ ನಿಜ ಭಕ್ತನ ತಪ್ಪುಗಳನ್ನು ಮನ್ನಿಸಿ, ಅವನನ್ನು ಪೊರೆದ.  ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರೊಳಗೆ ತಾನಿದ್ದು, ಲೋಕ ಕಲ್ಯಾಣಕ್ಕಾಗಿ ಅವರಿಂದ ವಿಷ್ಣು ಸಹಸ್ರನಾಮ ನುಡಿಸಿದ.  ಹೊರಗೆ ಕುಳಿತು ಏನೂ ತಿಳಿಯದಂತೆ ನಾಟಕವಾಡಿ, ಸ್ವೀಕರಿಸಿ ಉದ್ಧರಿಸಿದ, ಪರಮ ಕರುಣಾಳು ಭಗವಂತ.

ಭಗವದ್ಗೀತೆಯಲ್ಲಿ ಭಗವಂತ
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ |
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ || - ಯಾರು ನನ್ನನ್ನು ನಿರಂತರ ಧ್ಯಾನಿಸುವರೋ, ಪ್ರೇಮ ಪ್ರೀತಿಗಳಿಂದ ಭಜಿಸುವರೋ ಮತ್ತು ಅವರು ಯಾವುದರಿಂದ ನನ್ನನ್ನು ಪಡೆಯಲಪೇಕ್ಷಿಸುತ್ತಾರೋ, ಅವರಿಗೆ ಅದೇ ತತ್ವಜ್ಞಾನ ರೂಪವಾದ ಯೋಗವನ್ನು ಕೊಡುತ್ತೇನೆ ಎಂದಿದ್ದಾನೆ.
ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ |
ನಾಶಯಾಮ್ಯಾತ್ಮ ಭಾವಸ್ಥೋ ಜ್ಞಾನದೀಪೇನ ಭಾಸ್ವತಾ || - ಅಂತಹ ಭಕ್ತರನ್ನು ಅನುಗ್ರಹಿಸಲೋಸುಗ ನಾನು ಅವರ ಅಂತಃಕರಣದಲ್ಲಿಯೇ ನೆಲೆಸಿ, ಸ್ವಯಂ ನಾನೇ ಅವರ ಅಜ್ಞಾನದಿಂದ ಉಂಟಾದ ಅಂಧಕಾರವನ್ನು ತತ್ವಜ್ಞಾನ ರೂಪದ ದೀಪದಿಂದ ನಾಶಗೊಳಿಸುತ್ತೇನೆ ಎಂದಿದ್ದಾನೆ.  ಅನವರತ ಭಗವಂತನ ಧ್ಯಾನದಲ್ಲಿ ತನ್ಮಯರಾದವರಿಗೆ ಭಗವಂತ ಕರುಣೆಯಿಂದ ತನ್ನನ್ನೇ ಕೊಟ್ಟು ಉದ್ಧರಿಸುತ್ತಾನೆಂಬುದನ್ನು ತಾನೇ ಗೀತೆಯಲ್ಲಿ ತಿಳಿಸಿದ್ದಾನೆ.

ಅಸುರಾವಿಷ್ಟರಾಗಿ ನಿಜ ಭಕ್ತರು ಮಾಡಿದ ಅಪರಾಧಗಳನ್ನು ಭಗವಂತ ಎಂದಿಗೂ ಪರಿಗಣಿಸುವುದಿಲ್ಲ.  ಎಲ್ಲಾ ತಪ್ಪುಗಳನ್ನೂ ಮನ್ನಿಸಿ, ಪೊರೆದು, ಉದ್ಧರಿಸುವನು.   ಶ್ರೀಪಾದರಾಜರ ಒಂದು ಉಗಾಭೋಗದಲ್ಲಿ
ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ
ಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲ
ಶರಣು ಬಂದವನ ರವಿಯ ತನಯನ ನೋಡು
ಮರೆಯದೇ ಭಜಿಸೋ ರಂಗವಿಠಲರೇಯನ || - ಎಂದು ಶ್ರೀಹರಿಯ ಅನಂತ ಕರುಣೆಯ ವಿವರಣೆ ಸುಂದರವಾಗಿ ಮಾಡಿದ್ದಾರೆ.

ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ
ಒಪ್ಪಿಡಿಯವಲಕ್ಕಿಗೊಪ್ಪಿಕೊಂಡ ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ-
ಮ್ಮಪ್ಪಗಿಂದಧಿಕ ದೊರೆಯುಂಟೆ || -  ಕಡುಬಡವನಾದ ಬಾಲ್ಯ ಸ್ನೇಹಿತನ ಒಂದೇ ಒಂದು ಹಿಡಿ ಅವಲಕ್ಕಿಗೆ ಒಲಿದು ಮಹದೈಶ್ವರ್ಯವನ್ನೇ ಕರುಣಿಸಿದ ನಮ್ಮೆಲ್ಲರಿಗೂ ತಂದೆಯಾದ ಭಗವಂತ, ಶ್ರೀಕೃಷ್ಣನಿಗಿಂತಲೂ ಅಧಿಕ ಉತ್ತಮನಾದ ದೊರೆ/ಅರಸನೆಲ್ಲಿಹನು ಎನ್ನುತ್ತಾರೆ.  ಹೀಗೆ ಭಗವಂತನ ಅಪಾರ ಕರುಣೆಯನ್ನು ವಿವರಿಸುವ, ಶುದ್ಧ ಭಕ್ತಿಗೆ ಒಲಿದು ತನ್ನನ್ನೇ ಕೊಟ್ಟುಬಿಡುವ ಅನಂತ ದಯೆಯನ್ನು ಅನೇಕ ದೃಷ್ಟಾಂತಗಳಿಂದ ತಿಳಿಸಿಕೊಡುತ್ತಾರೆ. 

ಡಿವಿಜಿಯವರು ಕಗ್ಗದಲ್ಲಿ :
ಸೃಷ್ಟಿಯದ್ಭುತ ಶಕ್ತಿಯುಳ್ಳೋರ್ವನಿರಲು ನ-
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ ?
ಇಷ್ಟವಾತನೊಳುದಿಸುವಂತೆ ಚೋದಿಪುದೆಂತು?
ಕಷ್ಟ ನಮಗಿಹುದಷ್ಟೇ ಮಂಕುತಿಮ್ಮ || - ಬ್ರಹ್ಮಾಂಡವೆಂಬ ಅದ್ಭುತವಾದ ಸೃಷ್ಟಿಯನ್ನು ನೋಡಿದಾಗ, ಅದರ ಸೃಷ್ಟಿಕರ್ತನ ಅತ್ಯದ್ಭುತ ಶಕ್ತಿಗಳು, ಅವನ ವ್ಯಾಪ್ತಿ, ಕೌಶಲಗಳನ್ನು ನಾವು ಊಹಿಸಿಕೊಳ್ಳಬಹುದು. ನಾವು ಊಹಿಸಿಕೊಳ್ಳುವಷ್ಟು ಶಕ್ತಿವಂತರಲ್ಲವೇ ಅಲ್ಲವಾದರೂ, ಅವನೊಬ್ಬ ಸರ್ವಶಕ್ತ, ಸರ್ವನಿಯಾಮಕ ಎಂಬ ಭಾವವು ತುಂಬಿಕೊಳ್ಳುವುದು.  ಇಂತಹ ಸರ್ವಶಕ್ತನಿಗೆ ನಮಗೆ ಬೇಕಾದ ವರಗಳನ್ನು ಕೊಡುವುದು ಅತೀ ಸುಲಭದ ಕೆಲಸ.  ಆದರೆ ಅದು ಆ ಸರ್ವಜ್ಞನಿಗೆ ತಿಳಿಯಪಡಿಸುವುದು ಮಾತ್ರ ನಮ್ಮದೇ ಕರ್ತವ್ಯ.  ಅವನ ಅನುಗ್ರಹ ನಮಗೆ ದೊರೆಯುವಂತೆ ನಾವು ಅವನನ್ನು ಒಲಿಸಿಕೊಂಡರೆ, ಅವನಿಗೆ ಸಂಪೂರ್ಣ ಶರಣಾಗಬೇಕು, ನಮ್ಮನ್ನೇ ನಾವು ಸಂಪೂರ್ಣವಾಗಿ ಕೊಟ್ಟುಕೊಳ್ಳಬೇಕೆಂಬುದು ತಿಳಿಯುತ್ತದೆ.
ಜೀವಸತ್ತ್ವದಪಾರ ಭಂಡಾರವೊಂದಿಹುದು
ಸಾವಕಾರನದೃಷ್ಟನ್ ಅದನಾಳುತಿಹನು |
ಆವಶ್ಯಕದ ಕಡವನವನೀವುದುಂಟಂತೆ
ನಾವೊಲಿಪುದೆಂತವನ ? ಮಂಕುತಿಮ್ಮ || - ಈ ಪದ್ಯದಲ್ಲಿ ಕೂಡ ಡಿವಿಜಿಯವರು ಭಗವಂತನು ತನ್ನ ಒಂದು ವಿಶೇಷವಾದ ಅಪಾರವಾದ ಭಂಡಾರದಿಂದ ಜೀವಸತ್ತ್ವವನ್ನು ಸೃಷ್ಟಿಸಿದ್ದಾನೆನ್ನುತ್ತಾರೆ.  ಅದರ ಒಡೆಯನಾದ ಅವನು ಅತೀ ದೊಡ್ಡ ಸಾಹುಕಾರ, ನಮ್ಮ ಕಣ್ಣಿಗೆ  ಕಾಣಿಸೋಲ್ಲ, ಆದರೆ ನಮಗೆ ಕಷ್ಟವೆಂದು ನಾವು ಭಕ್ತಿಯಿಂದ ಕರೆದಾಗ ಅವನು ನಮಗೆ ಸಾಲವನ್ನು ಕೊಡುತ್ತಾನೆನ್ನುತ್ತಾರೆ.  ಆದರೆ ಭಗವಂತನ ಆ ಸಾಲವೆನ್ನುವ ಕರುಣೆ ನಮಗೆ ಸಿಗಬೇಕಾದರೆ ನಾವು ಅವನನ್ನು ಒಲಿಸುವ ಪರಿ ತಿಳಿಯದೇ ಪರಿತಪಿಸುತ್ತೇವೆ ಎನ್ನುತ್ತಾರೆ.  ಮುಂದುವರೆಯುತ್ತಾ ಭಗವಂತನ ಕರುಣೆ ನಮಗೆ "ಧಗಧಗಿಸುವ ಧರೆಗೆ ರಾತ್ರಿಯಲಿ ತಂಪೆರೆವ ಮುಗಿಲವೊಲು" "ದೈವಕೃಪೆ" ಎನ್ನುತ್ತಾರೆ.  ಒಲಿದನೆಂದರೆ ಭಗವಂತ ತನ್ನನ್ನೇ ಕೊಟ್ಟುಬಿಡುವವನು ಎಂಬ ಮಾತು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಹೀಗೆ ಭಗವಂತನ ಅಪಾರವಾದ ಕರುಣೆಯನ್ನು ಪಡೆಯುವ ಸುಲಭ ಮಾರ್ಗವೇ ಭಕ್ತಿ ಎನ್ನುತ್ತಾರೆ ನಮ್ಮ ಜಗನ್ನಾಥದಾಸರು.  ಮೇಲೆ ತಿಳಿಸಿರುವ ದೃಷ್ಟಾಂತಗಳಿಂದ ನಾವು ಇದನ್ನು ಅರ್ಥೈಸಿಕೊಳ್ಳಬಹುದು.  ತನ್ನನ್ನು ತಾನು ಒಪ್ಪಿಸಿಕೊಳ್ಳದೇ, ಸಂಪೂರ್ಣ ಶರಣಾಗದೇ, ಬೇರೇನೇ ಕೊಟ್ಟರೂ ಭಗವಂತ ಒಲಿಯುವುದಿಲ್ಲ






























ಚಿತ್ರಕೃಪೆ : ಅಂತರ್ಜಾಲ

Saturday, August 24, 2013

ಕರುಣಾ ಸಂಧಿ - ೧೧ ನೇ ಪದ್ಯ






















ಜನನಿಯನು ಕಾಣದಿಹ ಬಾಲಕ
ನೆನೆನೆನೆದು ಹಲುಬುತಿರೆ ಕತ್ತಲೆ
ಮನೆಯೊಳಡಗಿದ್ದವನ ನೋಡುತ 
ಗುತ ಹರುಷದಲಿ |
ತನಯನಂ ಬಿಗಿದಪ್ಪಿ ರಂಭಿಸಿ
ಕನಲಿಕೆಯ ಕಳೆವಂತೆ ಮಧುಸೂ
ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು || ೧೧ ||



ಪ್ರತಿಪದಾರ್ಥ : ಜನನಿಯನು - ತನ್ನ ತಾಯಿಯನ್ನು, ಕಾಣದಿಹ ಬಾಲಕ - ನೋಡದಿದ್ದಾಗ ಪುಟ್ಟ ಮಗುವು, ನೆನೆನೆನೆದು ಹಲಬುತಿರೆ - ತಾಯಿಯನ್ನು ನೆನೆಪಿಸಿಕೊಂಡು ಹಂಬಲಿಸುತ್ತಿರುವಾಗ, ಕತ್ತಲೆ ಮನೆಯೊಳಗಡಗಿದ್ದವನ ನೋಡುತ - ಮಗುವಿಗೆ ತಾಯಿ ಕಾಣಿಸದಿದ್ದರೂ ಕೂಡ ತಾಯಿ ಮರೆಯಾಗಿ ನಿಂತು ಮಗುವನ್ನು ಗಮನಿಸುತ್ತಲೇ ಇರುವಳು. ಆದರೆ ಕಂಗಾಲಾದ ಮಗುವಿಗೆ ಸುತ್ತಲೂ ಕತ್ತಲು ಕವಿದಂತಾಗಿರುತ್ತದೆ.  ಹೀಗೆ ಕಂಗಾಲಾದ ಮಗುವನ್ನು ತಾಯಿ ನೋಡುವಂತೆ, ನಗುತ ಹರುಷದಲಿ - ತನಗಾಗಿ ಹಲುಬುತ್ತಿರುವ ಮಗುವನ್ನು ಕಂಡು ಸಂತೋಷದಿಂದ ನಗುನಗುತ್ತಾ, ತನಯನಂ ಬಿಗಿದಪ್ಪಿ ರಂಬಿಸಿ - ಮಗುವನ್ನು ಆಪ್ಯಾಯಮಾನವಾಗಿ ಬಿಗಿದಪ್ಪಿಕೊಂಡು ಮುದ್ದಿಸುತ್ತಾ, ಕನಲಿಕೆಯು ಕಳೆವಂತೆ - ಭಯ ಹಾಗೂ ನೋವುಗಳಿಂದ ಕಂಗಾಲಾಗಿದ್ದ ಮಗುವಿನ ನೋವನ್ನು ಪೂರ್ಣವಾಗಿ ಪರಿಹರಿಸಿಬಿಡುವಂತೆ, ಮಧುಸೂದನನು - ಆನಂದ ಸ್ವರೂಪಿಯಾದ ಭಗವಂತನು, ತನ್ನವರಿದ್ದೆಡೆಗೆ ಬಂದೊದಗಿ - ತನ್ನನ್ನು ಸ್ತುತಿಸುವ, ಆದರಿಸುವ ಭಕ್ತರಿದ್ದೆಡೆಗೆ ಬಂದು ಅವರ ಕ್ಲಿಷ್ಟ ಸಮಯಕ್ಕೆ ಒದಗುವನು, ಸಲಹುವನು - ಸರ್ವ ವಿಧವಾಗಿ ರಕ್ಷಿಸುವನು.

ಪರಮಾತ್ಮನು ತನ್ನ ಮತ್ತು ತನ್ನ ಭಕ್ತರ ಸಂಬಂಧವನ್ನು ತಾಯಿ - ಮಕ್ಕಳ ಸಂಬಂಧದಂತೆ ಎಂಬುವ ಒಂದು ಸುಂದರ ಚಿತ್ರಣವನ್ನು ದಾಸರು ಈ ಪದ್ಯದಲ್ಲಿ ಕೊಟ್ಟಿದ್ದಾರೆ.  ತಾಯಿಯು ಪ್ರೀತಿಯಿಂದ ಆಟಕ್ಕಾಗಿ ಮಗುವಿಗೆ ಕಾಣದಂತೆ ಬಚ್ಚಿಟ್ಟುಕೊಂಡು ಆ ಮಗುವಿನ ಹುಡುಕಾಟ, ಗೋಳಾಟ ಎಲ್ಲವನ್ನೂ ಕಂಡು ನಂತರ ಕರುಣೆಯಿಂದ, ಆನಂದದಿಂದ, ಆರ್ತತೆಯಿಂದ ಮಗುವನ್ನು ಅಪ್ಪಿ ರಂಭಿಸಿ ಮುದ್ದಿಸುವಂತೆ ಪರಮಾತ್ಮನೂ ಕೂಡ ಭಕ್ತರಿಗೆ ಸ್ವಲ್ಪ ಆಟವಾಡಿಸಿ ನಂತರ ಒಲಿದು ಅವರ ಕಷ್ಟಗಳನ್ನು ಪರಿಹರಿಸಿ ಆನಂದವನ್ನು ಕೊಡುತ್ತಾನೆ.  

ನಮ್ಮಲ್ಲಿ ಪರಮಾತ್ಮ ಇರುವುದರಿಂದಲೇ ನಮ್ಮ ಚೈತನ್ಯ ನಲಿಯುತ್ತಿರುತ್ತದೆ.  ಭಗವಂತ ಜೀವಿಗಳ ಹೃದಯದ ಗುಹೆಯಲ್ಲಿಯೇ ಅಡಗಿದ್ದರೂ ಜೀವಿಯು ಅಜ್ಞಾನ, ಅಹಂಕಾರ ಇವುಗಳ ಆವರಣದಿಂದ ಪರಮಾತ್ಮ ತನ್ನಲ್ಲೇ ಇದ್ದಾನೆಂದು ತಿಳಿಯದೆ ಒದ್ದಾಡುತ್ತಿರುತ್ತಾನೆ.  "ಸಂಕಟ ಬಂದಾಗ ವೆಂಕಟರಮಣ" ಎಂಬಂತೆ ತನಗೆ ತೊಂದರೆಯಾದಾಗ ಮಾತ್ರ ಭಗವಂತನ ಸ್ತೋತ್ರ, ಪೂಜೆ ಎಲ್ಲವನ್ನೂ ನಡೆಸುತ್ತಿರುತ್ತಾನೆ.  ಆದರೆ ಜೀವಿಗಳ ಕರ್ಮಫಲಗಳೂ ಕೂಡ ಪರಮಾತ್ಮ ಕರೆದ ಕೂಡಲೆ ಬರುವುದಕ್ಕೆ ಪ್ರತಿಬಂಧಕವಾಗಿರುತ್ತದೆ. ಕತ್ತಲೆ ಮನೆಯಲ್ಲಿ ಮಗು ತಾಯಿಯನ್ನು ಕಾಣಲು ಹಂಬಲಿಸಿದ ನಂತರ ತಾಯಿ ಬಂದು ಮಗುವನ್ನು ರಂಭಿಸುವಂತೆ, ಪರಮಾತ್ಮ ಕೂಡ ನಮ್ಮ ಕರ್ಮ ಬಂಧನಗಳನ್ನು ಕಳೆದು ನಂತರ, ಅವನನ್ನು ಭಕ್ತಿಯಿಂದ, ಪ್ರೇಮದಿಂದ ಕೂಗಿ ಕರೆಯುವ ನಮ್ಮನ್ನು ಕಾಪಾಡುತ್ತಾನೆ.

ತಾಯಿಯನ್ನು ಒಂದು ಕ್ಷಣ ಕಾಣದಿದ್ದರೂ ಸಾಕು ಕಂದ ಕಂಗಾಲಾಗಿ, ಅಬ್ಬರಿಸಿ ಅಳುವಾಗ ಹೇಗೆ ತಾಯಿ ಧಾವಿಸಿ ಬಂದು ಕಂದನನ್ನು ಅಪ್ಪಿ, ಮುದ್ದಿಸುವಳೋ ಹಾಗೆ ಭಗವಂತ ಕೂಡ ಭಕ್ತರು ಕಂಗೆಟ್ಟು ಕರೆದಾಗ ಧಾವಿಸಿ ಬರುತ್ತಾನೆ.  ಅವನು ಭಕ್ತರ ಹೃತ್ಕಮಲದಲ್ಲಿಯೇ ಅಡಗಿರುತ್ತಾನೆ.  ಆದರೆ ಜೀವಿಗಳು ಅದನ್ನು ತಿಳಿಯುವುದಿಲ್ಲ.  ನಿಷ್ಕಾಮ ಭಾವದಿಂದ, ಎಲ್ಲಕ್ಕೂ ಅವನೇ ಕಾರಣ, ಅವನ ಕರುಣೆಯಿಂದಲೇ ತಾನು ಎಲ್ಲವನ್ನೂ ಪಡೆದಿರುತ್ತೇನೆ ಮತ್ತು ಭಗವಂತ ತಾಯಿ ತನ್ನ ಮಗುವಿಗೆ ಅತ್ಯುತ್ತಮವಾದದ್ದೇ ಕೊಡುವಂತೆ ತನಗೂ ಅತ್ಯುತ್ತಮವಾದದ್ದನ್ನೇ ಕೊಟ್ಟಿರುತ್ತಾನೆ, ಅವನು ಕೊಟ್ಟ ಎಲ್ಲವನ್ನೂ ಅವನಿಗೇ ಸಮರ್ಪಣೆ ಮಾಡುತ್ತೇನೆಂಬ ಭಾವದಲ್ಲಿ ಸದಾ ಇದ್ದು, ಅರ್ತಿಯಿಂದ ಕರೆದಾಗ ಮಾತ್ರ, ಜೀವಿಯ ಅಜ್ಞಾನವೆಂಬ ಕತ್ತಲಿನ ಕೋಣೆಯಲ್ಲಿ ಮುಚ್ಚಿಟ್ಟುಕೊಂಡಿರುವ ಭಗವಂತ ತಾನು ಪ್ರಕಟಗೊಳ್ಳುತ್ತಾನೆ. 

ನಾನು-ನನ್ನದು ಎಂಬ ಮಮಕಾರದ ಅಜ್ಞಾನ ತೊಲಗಿಸಿ, ನೀನೇ ಗತಿಯೆಂದು ಶರಣಾಗತಿಯ ಭಾವದಲ್ಲಿ ಕರೆದಾಗ,  ಜ್ಞಾನದ ಬೆಳಕಲ್ಲಿ, ಭಗವಂತ ಗೋಚರಿಸುತ್ತಾನೆ.  ತಾಯಿಯಂತೆ ಬಿಗಿದಪ್ಪಿ ಮೋಹಿಸುತ್ತಾನೆ.  ಹತಾಶೆ ಕೋಪಗಳಿಂದ ಬಸವಳಿದ ಭಕ್ತನ ಪರಿಯನ್ನು ಕಂಡು ನಸು ನಗುತ್ತಾ ಸಂತೈಸುತ್ತಾನೆ.  ಆದರೆ ಕರೆದ ಕೂಡಲೇ ಭಗವಂತ ಬರಲು ಅಲ್ಲಿ ನಮ್ಮದೇ ಆದ ಕರ್ಮ ಫಲಗಳು ಪ್ರತಿಬಂಧಕವಾಗಿರುತ್ತವೆ.  ಜೀವಿಗಳ ಲಿಂಗದೇಹವೇ ಕತ್ತಲೆಯ ಅಜ್ಞಾನದ ಕೋಣೆ, ಸಾತ್ವಿಕ ಜೀವರು ಕತ್ತಲೆ ಕೋಣೆಯಲ್ಲಿ ತಮ್ಮ ತಾಯಿಗಾಗಿ, ಭಗವಂತನಿಗಾಗಿ ಧ್ಯಾನ, ಸ್ಮರಣೆ, ಆರಾಧನೆ, ಭಜನೆ ಇತ್ಯಾದಿಗಳನ್ನು ಅನವರತ ಮಾಡುತ್ತಾ ಹಂಬಲಿಸಬೇಕು. ಒಂದು ಉದಾಹರಣೆ ಭಾಗವತದಿಂದ ತೆಗೆದುಕೊಳ್ಳುವುದಾದರೆ, ಗೋಪಿಯರ ಕೃಷ್ಣ ಭಕ್ತಿ ಲೌಕಿಕ ಕಾಮನೆಯಾಗಿ ಬದಲಾದಾಗ, ಕೃಷ್ಣ ತಾನು ಲೌಕಿಕ ಕಾಮನೆಯುಳ್ಳ ಜನರಿಗೆ ಲಭ್ಯನಲ್ಲವೆಂದು ಪ್ರಪಂಚಕ್ಕೆ ಮನದಟ್ಟು ಮಾಡಲು, ಮರೆಯಾಗಿ ಹೋಗಿ, ಗೋಪಿಯರ ಅಜ್ಞಾನದ ಅಂಧಕಾರದಲ್ಲಿ ಅಡಗಿ ಕುಳಿತುಬಿಟ್ಟ.  ಅವರು ಪರಿವರ್ತನೆಗೊಂಡು ಶುದ್ಧ ಮನಸ್ಸಿನಿಂದ ಹಂಬಲಿಸಿ, ಭಕ್ತಿಯಿಂದ ಕರೆಯಲು, ನಸುನಗುತ್ತಾ ಪ್ರಕಟಗೊಂಡ, ಬಿಗಿದಪ್ಪಿದ, ರಮಿಸಿದ, ಸರಸವಾಡಿದ ಮತ್ತು ಶಾಶ್ವತವಾಗಿ ಅವರ ಹೃದಯ ಮಂದಿರದಲ್ಲಿ ನೆಲೆ ನಿಂತ. ಶ್ರುತಿಯಲ್ಲಿ ಭಗವಂತ ತಂದೆ ಎಂಬ ಉಲ್ಲೇಖ ಇದೆ.  ಆದರೆ ಭಗವಂತನಿಗೆ ಸ್ತ್ರೀ ಪುರುಷ ರೂಪಗಳೆರಡೂ  ಭೇದವಿಲ್ಲದೇ ಇರುವುದರಿಂದ ಅವನು ನಮಗೆ ತಂದೆಯೂ ಹೌದು ತಾಯಿಯೂ ಹೌದು.  

ಹರಿಕರುಣೆ ಅಪಾರ - ಭಗವಂತನನ್ನು ತಾಯಿ ಎನ್ನುವುದರ ಮೂಲಕ ಅವನ ಅಪಾರವಾದ ಕರುಣೆಯನ್ನು ಅಳೆಯಲು ಸಾಧ್ಯವಿಲ್ಲವೆನ್ನುತ್ತಾರೆ ಜಗನ್ನಾಥ ದಾಸರು.  ಹಾಗಂದರೆ ಶ್ರೀಹರಿ ಸಾತ್ವಿಕರಿಗೆ ಮಾತ್ರ ಕರುಣಾಮಯಿಯೇ ಹೊರತು ತಾಮಸಿಗರಿಗೆ ಅಲ್ಲ ಎಂದರ್ಥ ಮಾಡಿಕೊಳ್ಳಬೇಕು.  "ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹು ಕಠಿಣನಿವ" ಎಂದು ದಾಸರೇ ಹೇಳಿದ್ದಾರೆ.   ಅವನು ಅಪಾರ ಕರುಣಿಯೇ, ಅದು ಅವನ ಗುಣವೇ ಆಗಿದೆ.  ಆದರೆ ತಾಮಸಿಗರಿಗೆ, ದುಷ್ಟರಿಗೆ ಕರುಣೆ ತೋರಿಸಿದರೆ ಅದು ದೋಷವಾಗುತ್ತದೆಯಲ್ಲವೇ?  ಭಗವಂತ ತನ್ನೆಲ್ಲಾ ಭಕ್ತರಿಗೂ, ಅವರವರ ಭಕ್ತಿಗೆ, ಅವರವರ ಭಾವಕ್ಕೆ, ಅವರವರ ಯೋಗ್ಯತೆಗೆ ಅನುಗುಣವಾಗಿ ಕರುಣೆ ತೋರಿಸುತ್ತಾನೆ.  ಭಗವಂತನಿಗೆ ಭಗವಂತನೊಬ್ಬನೇ ಸಾಟಿ, ಸಮಾನ, ಬೇರೆ ಯಾರೂ ಇಲ್ಲ.  ನಮ್ಮ ಬುದ್ಧಿಯ ನಿಲುಕಿಗೆ ಸಿಕ್ಕಲಿ ಎಂಬ ಉದ್ದೇಶ ಮಾತ್ರದಿಂದಲೇ, ಭಗವಂತನನ್ನು ದಾಸರಾಯರು ಮಾತೆಗೆ ಹೋಲಿಸಿದ್ದಾರಷ್ಟೆ.  


ಜನನಿಯ ಕಾಣದಿಹ ಬಾಲಕ - ತಾಯಿಯೇ ತನ್ನ ಮಗುವನ್ನು ಬಿಟ್ಟು ಮರೆಯಾದಾಗಲೂ, ಕಾರಣಾಂತರಗಳಿಂದ ಮಗು ತಾಯಿಯಿಂದ ದೂರವಾದಾಗಲೂ ಮಗು ತಾಯಿಗಾಗಿ ಹಂಬಲಿಸುವುದು ಸಹಜ.  ಸದಾ ಭಗವಂತನ ಜೊತೆಯಲ್ಲೇ, ಪರಿವಾರದವರೇ ಆದ ದೇವತೆಗಳಿಂದ ಭಗವಂತ ತಾಯಿಯೇ ಮರೆಯಾಗುವಂತೆ ಮರೆಯಾಗಿ ಆಟವಾಡುತ್ತಾನೆ.  ಆದರೆ ಜೀವಿಗಳು ತಮ್ಮೊಳಗೇ ಇರುವ ಭಗವಂತನ ಇರುವಿಕೆಯನ್ನು ಅರಿಯದೇ ತಾಯಿಯಿಂದ ದೂರವಾದ ಮಗುವಿನಂತಿರುತ್ತಾರೆ.  ಅಜ್ಞಾನದ ಪೊರೆ ಕಳಚಿ, ಶರಣಾಗತರಾದಾಗ ಭಗವಂತ ತಾಯಿಯಂತೆ ಧಾವಿಸುತ್ತಾನೆ.

ನೆನೆನೆನೆದು ಹಲಬುತಿರೆ -  ಭಗವಂತನ ಮನೆಯಲ್ಲಿ  ದೇವತೆಗಳೂ, ಋಷಿಗಳೂ ಮತ್ತು  ಇತರ ಜ್ಞಾನಿಗಳೂ ಭಗವಂತ ಮರೆಯಾದಾಗ, ದರ್ಶನದ ಹಂಬಲದಿಂದ ಹಲುಬುವರು, ಹಂಬಲಿಸುವರು.  ಏಕೆಂದರೆ ಎಷ್ಟು ನೋಡಿದರೂ ನೋಡಬೇಕೆನ್ನಿಸುವ ತವಕ, ಒಂದು ಕ್ಷಣ ಮರೆಯಾದರೂ ಆಗುವ ದುಃಖ, ಜನನಿಯನ್ನು ಕಾಣದೆ ಹಂಬಲಿಸುವ ಬಾಲಕನ ದುಃಖಕ್ಕಿಂತ ಕಡಿಮೆಯೇನಿಲ್ಲ.  ಹೀಗೆ ದುಃಖ ಪಡುವ ಭಕ್ತರನ್ನು ಕಂಡು ಭಗವಂತ ನಸುನಗುತ್ತಾ ಬರುತ್ತಾನೆ.  ಅವರು ಪಟ್ಟ ದುಃಖದ ಅನೇಕ ಪಟ್ಟು ಹೆಚ್ಚು ಅಧಿಕ ಸಂತೋಷ ಕೊಟ್ಟು ಸಂತೈಸುತ್ತಾನೆ.  ಆದರೆ ಸಂಸಾರವೆಂಬ ಭವದಲ್ಲಿ ಸಿಲುಕಿದ ಜೀವಿ ತನ್ನನ್ನು ಮರೆತು ಕುಳಿತುಬಿಟ್ಟಾಗ, ಭಗವಂತ ಸ್ವಲ್ಪ ಸಂಕಟ ಕೊಟ್ಟು, ತನ್ನನ್ನು ನೆನಪಿಸುತ್ತಾನೆ.  ಜೀವಿಗೆ ಅನೇಕ ರೀತಿಯಲ್ಲಿ ಪ್ರೇರಣೆ ಕೊಟ್ಟು, ಆಸಕ್ತಿ ಹುಟ್ಟಿಸುತ್ತಾನೆ.  ಗುರುವನ್ನು ತೋರಿಸುತ್ತಾನೆ.  ಹೀಗೆ ಒಂದು ಸಲ ಆ ಭಗವಂತನ ಹಂಬಲ ಹುಟ್ಟಿ, ಭಕ್ತ ಹಂಬಲಿಸಿದಾಗ ಬಳಿಗೆ ಬಂದು ಕರುಣೆ ತೋರುತ್ತಾನೆ. ಭಗವಂತ ತನ್ನಲ್ಲಿ ಆಸಕ್ತಿ ಹುಟ್ಟಿಸಿ, ಭಕ್ತ ಹಂಬಲಿಸಿದಾಗ ಬಂದು ಅಪ್ಪಿ ಸಂತೈಸಿ, ಮರೆಯಾಗಿ ಆಟವಾಡಿಸುತ್ತಾನೆ.  ಹಂಬಲ ಅತ್ಯಧಿಕವಾಗಿ ಹುಚ್ಚು ಹಿಡಿಸಿ, ಅತ್ತು ಗೋಳಾಡುವಂತೆ ಮಾಡುತ್ತಾನೆ.  ಮತ್ತೆ ಧಾವಿಸಿ ಬಂದು ಬಿಗಿದಪ್ಪಿ ಸಂತೈಸಿದಾಗ, ನಕ್ಕು, ನಾಟ್ಯವಾಡಿ, ಎಲ್ಲಿದ್ದೆ ಮತ್ತು ಎಲ್ಲಿಂದ ಬಂದೆ ಎಂದು ಆಶ್ಚರ್ಯ ಪಡುವಂತೆ ಮಾಡುತ್ತಾನೆ.  ಹೀಗೆ  ಭಕ್ತ-ಭಗವಂತನ ತಾಯಿ-ಮಕ್ಕಳಾಟ ನಡೆಯುತ್ತಲೇ ಇರುತ್ತದೆ.

ಕತ್ತಲೆಯ ಮನೆಯೊಳಡಗಿದ್ದವನ ನೋಡುತ  - ಕತ್ತಲೆಮನೆ ಎಂದರೆ ಜೀವಿಯ ಅಜ್ಞಾನವೆಂದು ಅರ್ಥೈಸಬಹುದು ಅನ್ನಿಸುತ್ತದೆ.  ಏಕೆಂದರೆ ಭಗವಂತನ ಅರಿವು ಮೂಡಿದಾಕ್ಷಣ ಅಜ್ಞಾನ ಕಳೆಯುತ್ತದೆ.  ಅಜ್ಞಾನ ಕಳೆದ ಕೂಡಲೆ, ಭಗವಂತ ಕಾಣಿಸುತ್ತಾನೆ.  ಅಂದರೆ ನಾವು ಸಂಸಾರವೆಂಬ ಭವ ಸಾಗರದ ಕತ್ತಲೆಯಲ್ಲಿ ಮುಳುಗಿದ್ದೇವೆ, ಬೆಳಕು ಕಾಣದೆ ಸಂಕಟ ಪಡುತ್ತಿದ್ದೇವೆ.  ನಮ್ಮೊಳಗೇ ಇರುವ ಮೂಲೇಶನ ಅರಿವಿಲ್ಲದೆ ಕನಲುತ್ತಿದ್ದೇವೆ.  ಅಹಂ ಬಿಟ್ಟು ಶರಣಾಗತರಾದಾಗ ನಮ್ಮೊಳಗೇ ಇರುವ ಭಗವಂತನ ದರುಶನ ನಮಗಾಗುತ್ತದೆ.  ಭಗವಂತ ಕತ್ತಲಿನಲ್ಲಿಲ್ಲ, ಅವನೇ ಬೆಳಕು, ಆದರೆ ನಾವು ನಮ್ಮ ಸುತ್ತಲೂ ಅಹಂ ಎಂಬ ಅಂಧಕಾರವನ್ನು ಹರಡಿಕೊಂಡಿದ್ದೇವಾದ್ದರಿಂದ ಅವನು ನಮಗೆ ಕಾಣುತ್ತಿಲ್ಲ.  ಅಹಂಕಾರವೆಂಬ ಅಂಧಕಾರದ ತೆರೆ ಸರಿಸಿ   ಭಗವಂತನಿಗಾಗಿ  ನಾವು ಕಾಣದ ತಾಯಿಗಾಗಿ ಮಗು ಕನಲುವಂತೆ, ಕನಲಿದಾಗ ಅಕ್ಕರೆಯಿಂದ ಬಂದು ಕನಲಿಕೆಯನ್ನು ಕಳೆದು ತಾಯಿಯಂತೆ ಭಗವಂತನು ನಮ್ಮನ್ನು ಪೊರೆಯುವವನು.
 
ಮಧುಸೂದನನು ಬಂದೊದಗಿ ಸಲಹುವನು - ಬ್ರಹ್ಮನಿಂದ ವೇದಗಳನ್ನು ಅಪಹರಿಸಿದ ಮಧುಕೈಟಭರನ್ನು ವಧಿಸಿದವನು ಮಧುಸೂದನ.  ವೇದಗಳನ್ನೂ, ಬ್ರಹ್ಮನನ್ನೂ ರಕ್ಷಿಸಿದ ಭಗವಂತ ತನ್ನನ್ನು ಕಾಣಲು ಹಂಬಲಿಸುವ ಭಕ್ತರಿಗೆ ವೇದಶಾಸ್ತ್ರಗಳ ಜ್ಞಾನ ನೀಡುತ್ತಾನೆ.  ವೇದಗಳಿಂದ ಸ್ತುತಿಸುತ್ತಾ ಭಗವಂತನಲ್ಲಿ ಸದಾ ಅನುರಕ್ತರಾಗಿ, ಸಂಸಾರವೆಂಬ ಭವ ಪಾಶದಿಂದ ಬಿಡುಗಡೆ ಹೊಂದುವಂತೆ ಮಾಡುತ್ತಾನೆ. 

ತತ್ತ್ವಸುವ್ವಾಲಿಯಲ್ಲಿ ದಾಸರು :
ಸೇವ್ಯ ಸೇವಕರಲ್ಲಿ ಸೇವ್ಯ ಸೇವಕನಾಗಿ
ಅವ್ಯಕ್ತನಾಗಿ ನೆಲೆಸಿರ್ಪೆ | ನೆಲೆಸಿರ್ಪೆ ಸರ್ವದಾ
ಸೇವ್ಯ ನಾ ನಿನಗೆ ಸರಿಗಾಣೆ || -  ಸ್ವಾಮಿಯಲ್ಲಿದ್ದು, ಸೇವಿಸಲ್ಪಡುವವನೂ, ಭೃತ್ಯನಲ್ಲಿದ್ದು ಸೇವೆಮಾಡುವವನೂ ಆಗಿ, ಯಾರಿಗೂ ಕಾಣದಂತೆ, ಸದಾ ಇರುವ ಭಗವಂತ ಸರ್ವರಿಂದಲೂ (ರಮಾ ಬ್ರಹ್ಮಾದಿಗಳಿಂದಲೂ) ಸೇವ್ಯನಾದ ನಿನಗೆ ಸಮನಾದವನ್ನು ನಾ ಕಾಣೆ ಎನ್ನುತ್ತಾರೆ.
ತಂದೆ ಮಕ್ಕಳನು ಪೊರೆವಂದದಲಿ ಶ್ರೀಕಾಂತ
ಎಂದೆಂದು ತನ್ನ ಭಕತರ | ಭಕತರ ಸಲಹುವ
ಸಂದೇಹವ್ಯಾಕೋ ನಿನಗಿನ್ನು || - ತಂದೆಯು ತನ್ನ ಮಕ್ಕಳನ್ನು ಅವರವರ ಅವಶ್ಯಕತೆಗಳನ್ನು ಅರಿತು, ಭಯ ಶೋಕಗಳನ್ನು ಪರಿಹರಿಸಿ, ಇಚ್ಛೆಗಳನ್ನು ಪೂರೈಸಿ, ಸಲಹುವಂತೆ ಲಕ್ಷ್ಮೀಪತಿಯು ತನ್ನ ಭಕ್ತರನ್ನು ಸಲಹುವನು, ರಕ್ಷಿಸುವನು. ಓ ಮನವೇ ಸಂದೇಹ ಪಡಬೇಡ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ :
ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ | ಚರಿಸುತಿರೆ ನರನದರ ಗುರುತನರಿಯದೆಯೆ || - ಎನ್ನುತ್ತಾ ಭಗವಂತ ಜೀವಿಗಳಿಗೆ ಅತ್ಯಧಿಕ ಆನಂದ ಕೊಡುವೆನೆಂದೇ ಕಾಯುತ್ತಿದ್ದಾನೆ ಮತ್ತು ನಮ್ಮ ಮುಂದೇ, ನಮ್ಮೊಳಗೇ, ನಮ್ಮ ಹಿಂದೇ ಇದ್ದು, ಅನೇಕ ರೂಪದಲ್ಲಿ ತನ್ನನ್ನು ತೋರಿಸಿಕೊಳ್ಳುತ್ತಾನೆ, ಆದರೆ ನಾವು ಅದನ್ನು ಗುರುತಿಸದೇ, ಎಲ್ಲವೂ ನಮ್ಮದೇ ಎಂಬ ಅಹಂಕಾರದ ಅಂಧಕಾರದಲ್ಲಿ ಮುಳುಗಿದ್ದೇವೆ ಎನ್ನುತ್ತಾರೆ.
ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ |
ಎತ್ತಲೋ ಸಖನೋರ್ವನಿಹನೆಂದು ನಂಬಿ ||
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು |
ಭಕ್ತಿಯಂತೆಯೆ ನಮದು ಮಂಕುತಿಮ್ಮ || - ಕತ್ತಲೆಯಲ್ಲಿ ಏನನ್ನೋ ಕಂಡು ಹೆದರಿಕೆಯಿಂದ ತನಗೊಬ್ಬ ಸ್ನೇಹಿತನೋ, ಸಂಗಾತಿಯೋ ಬೇಕೆಂದು ನಾಯಿ ತನ್ನ ಕತ್ತನ್ನೆತ್ತಿ ಮೊರೆಯಿಡುತ್ತದೆ.  ಹಾಗೇ ನಾವೂ ಕೂಡ ಅಹಂಕಾರದ ಕತ್ತಲಲ್ಲಿ ಬೆದರಿ, ಸಂಸಾರವೆಂಬ ಸಾಗರವನ್ನು ದಾಟಲಾರದೇ ಆಸರೆಗಾಗಿ ಹುಡುಕಾಟ ನಡೆಸುತ್ತೇವೆ.  ಆ ಆಸರೆಯೇ ಭಕ್ತಿ, ಭಗವಂತನ ಆರಾಧನೆ ಎನ್ನುತ್ತಾ, ಸತತಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ ಗತಿ ಮನುಜ ಲೋಕಕ್ಕೆ - ಮನುಷ್ಯ ತನಗೆ ಬೇಕಾದ್ದೆಲ್ಲಾ ಸಿಕ್ಕಿಬಿಟ್ಟಿದೆ, ತಾನೇ ಸರ್ವಸ್ವ ಎಂದು ಅಹಂಕಾರದಿಂದ ಕುಳಿತುಬಿಟ್ಟರೆ, ಅವನ ಜನ್ಮವೇ ಶುದ್ಧ ಅಪ್ರಯೋಜಕವಾಗಿ ಬಿಡುತ್ತದೆ ಮತ್ತು ಇದರಿಂದ ಜಗತ್ತೇನೂ ಮುಳುಗಿಹೋಗೊಲ್ಲ.  ಭಗವಂತನ ಸೃಷ್ಟಿ ಇದಕ್ಕಾಗಿ ಅಲ್ಲ, ಅವನ ಲೀಲೆ, ಆಟಗಳು ನಡೆಯುತ್ತಲೇ ಇರುತ್ತವೆ, ಅದೇ ಅವನ ಇಚ್ಛೆ.  ಅದನ್ನು ಅರಿತು ನಾವು ಅವನಿಗಾಗಿ ಕನಲಿದಾಗ ಮಾತ್ರ ನಮ್ಮ ಸುತ್ತಲಿನ ಅಂದಕಾರ ಕಳೆದು, ಸಾಧನೆಯ ಮಾರ್ಗ ಗೋಚರಿಸುವುದು ಎನ್ನುತ್ತಾರೆ.

ಶ್ರೀಹರಿ ತನ್ನ ಭಕ್ತರನ್ನು ತಮ್ಮ ಸ್ವಭಾವದಲ್ಲಿ ಅಡಗಿರುವ ಜ್ಞಾನ ಆನಂದವನ್ನು ಪಡೆಯುವ, ಮೋಕ್ಷ ಸಾಧನೆಗೆ ಪ್ರೇರಣೆ ಕೊಡುತ್ತಾನೆ, ಅವರಿಗೆ ಸಂಸಾರ ಸುಖ ಭೋಗಗಳಲ್ಲಿ ವೈರಾಗ್ಯ ಬರಲೆಂದು ಪರೀಕ್ಷೆಗಳಿಗೆ ಒಡ್ಡುತ್ತಾನೆ.  ಹೀಗೆ ಮಾಡುವುದರಿಂದ ಸ್ವರೂಪ ಜ್ಞಾನಾನಂದಮಯನಾಗಿರುವ ಆ ಭಗವಂತನಿಗೆ ಯಾವ ಲಾಭವೂ, ಇಲ್ಲ.  ಜೀವಿಗಳು ಮೋಕ್ಷ ಸಾಧನೆ ಮಾಡಬೇಕೆಂಬುದೇ ಅವನ ಉದ್ದೇಶ ಅಷ್ಟೆ.  ಅದನ್ನೂ ಕೂಡ, ತಾನು ನಮ್ಮೊಳಗಿದ್ದು, ತಾನೇ ಮಾಡಿ ನಮ್ಮಿಂದ ಮಾಡಿಸುತ್ತಾನೆ ಮತ್ತು ಮರೆಯಾಗಿ ನೋಡುತ್ತಾನೆ.  ಜೀವಿಗಳು ತಾಯಿಯಿಂದ ಅಗಲಿದ ಮಗು ಸಹಿಸಲಾರದಂತೆ ಹಲುಬುವುದನ್ನು  ಕಂಡು ಕರುಣೆಯಿಂದ ಧಾವಿಸಿ ಬಂದು ದರ್ಶನ ನೀಡಿ ಸಂತೈಸುತ್ತಾನೆ.  ತಾನೇ ಮಾಡಿ, ಜೀವಿಗಳಿಂದ ಮಾಡಿಸಿದ ಕರ್ಮಕ್ಕೇ ಅವರವರ ಯೋಗ್ಯತೆಗನುಗುಣವಾಗಿ ಮಹಾಫಲಗಳನ್ನು ಕೊಟ್ಟು ಕಾಪಾಡುತ್ತಾನೆ.  ಅವನದೆಷ್ಟು ಸುಲಭನೂ, ಕರುಣಿಯೂ ಎಂದರೆ ಅವನಿಗೆ ಜೀವಿ ಸಮರ್ಪಿಸುವ ಒಂದು ದಳ ತುಳಸಿಯೇ ಸಾಕು, ಒಂದು ಹಿಡಿ ಅವಲಕ್ಕಿಯೇ ಸಾಕು, ಅಖಿಳಾರ್ಥಗಳನ್ನೇ ಕೊಟ್ಟು ಬಿಡುವವನು. ಹೀಗೆ ಜಗನ್ನಾಥ ದಾಸರು ಈ ಪದ್ಯದಲ್ಲಿ ಭಗವಂತ ಹಾಗೂ  ಭಕ್ತನಿಗೆ ತಾಯಿ-ಮಗು ಚಿತ್ರಣಗಳ ಹೋಲಿಕೆಯನ್ನು ಕೊಟ್ಟು ಸುಂದರವಾಗಿ ತಿಳಿಸಿದ್ದಾರೆ. 



 ಚಿತ್ರಕೃಪೆ : ಅಂತರ್ಜಾಲ

Wednesday, June 19, 2013

ಕರುಣಾ ಸಂಧಿ - ೧೦ ನೇ ಪದ್ಯ


ಶರಣ ಜನ ಮಂದಾರ ಶಾಶ್ವತ
ಕರುಣಿ ಕಮಲಾಕಾಂತ ಕಾಮದ
ಪರಮಪಾವನತರ ಸುಮಂಗಳಚರಿತ ಪಾರ್ಥಸಖ |
ನಿರುಪಮಾನಂದಾತ್ಮನಿರ್ಗತ
ಕುರಿತ ದೇವವರೇಣ್ಯನೆಂದಾ
ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ  || ೧೦ ||


ಪ್ರತಿಪದಾರ್ಥ : ಶರಣಜನಮಂದಾರ - ಮಂದಾರ ಎಂದರೆ ಸ್ವರ್ಗಲೋಕದಲ್ಲಿ ಜೀವಿಗಳಿಗೆ ಅವರು ಬೇಡಿದ್ದನ್ನು ನೀಡುವ ಒಂದು ವೃಕ್ಷ.  ಆದರೆ ಭಗವಂತನಾದ ಶ್ರೀಹರಿಯು ಶರಣಾಗತರಾಗಿ ಬಂದ ತನ್ನ ಭಕ್ತರಾದ ತ್ರಿವಿಧ ಜೀವರಿಗೆ ಎಲ್ಲ ಲೋಕಗಳಲ್ಲಿಯೂ ರಕ್ಷಣೆ ನೀಡುತ್ತಾ ಮಂದಾರ ವೃಕ್ಷದಂತೆ ಬಯಸಿದ್ದನ್ನೆಲ್ಲಾ ಕೊಡುವವನು, ಶಾಶ್ವತ - ಸದಾ ಸರ್ವದಾ ಏಕಪ್ರಕಾರವಾಗಿ, ಕರುಣಿ - ಅಂತಃಕರಣ ಉಳ್ಳವನಾದವನು, ಕಮಲಾಕಾಂತ - ಲಕ್ಷ್ಮೀದೇವಿಯ ಪತಿಯಾದವನು, ಕಾಮದ - ಅಪರೋಕ್ಷವನ್ನು ಬಯಸುವವರಿಗೆ ಸಾಧನೆಯನ್ನು ಮಾಡಿಸಿ ಅನುಗ್ರಹಿಸುವವನು, ಪರಮಪಾವನತರ - ರಮಾದೇವಿಗಿಂತಲೂ ಶ್ರೇಷ್ಠವಾದ ಅಪ್ರಾಕೃತ ಶರೀರವನ್ನುಳ್ಳವನು, ಸುಮಂಗಳಚರಿತ - ಪವಿತ್ರವಾದ ಮಂಗಳಕರವಾದ ಚರಿತ್ರೆಯನ್ನುಳ್ಳವನು, ಪಾರ್ಥಸಖ - ಅರ್ಜುನನಿಗೆ ಪ್ರಿಯನಾದ ಸಖನಾದವನು, ನಿರುಪಮಾನಂದಾತ್ಮ - ಉಪಮೆಯೇ ಇಲ್ಲದ ಆನಂದವೇ ದೇಹವಾಗಿ ಉಳ್ಳವನು, ನಿರ್ಗತದುರಿತ - ನಿರ್ಗತ ಎಂದರೆ ಹೋಗಲ್ಪಟ್ಟ ಮತ್ತು ದುರಿತ ಎಂದರೆ ಪಾಪಗಳು ಅಂದರೆ ದೋಷರಹಿತನಾದ ಭಗವಂತನು, ದೇವವರೇಣ್ಯ - ಸಮಸ್ತ ದೇವತೆಗಳಿಂದಲೂ ಸ್ತುತಿಸಲ್ಪಡುವವನು, ಆದರದಿ ಕರೆಯಲು - ಶ್ರದ್ಧೆ ಮತ್ತು ಭಕ್ತಿಗಳಿಂದ ಪ್ರೀತಿಯಿಂದ ಕರೆದಾಗ, ಬಂದೊದಗುವನು - ಭಕ್ತರ ಮೊರೆಯನ್ನು ಆಲಿಸಿ ಧಾವಿಸಿಕೊಂಡು ಬರುವನು, ತನ್ನವರ ಬಳಿಗೆ - ಒಂದೇ ಮನಸ್ಸಿನಿಂದ ನೀನೇ ಗತಿಯೆಂದು ಪ್ರಲಾಪಿಸುವ ಭಕ್ತರ ಕರೆಗೆ ಓಗೊಟ್ಟು ಅವರ ರಕ್ಷಣೆಗೆ ಸರಿಯಾದ ಸಮಯಕ್ಕೆ ಬರುವವನು.

ನಾಹಂ ಕರ್ತ ಹರಿಃ ಕರ್ತ ಎಂಬ ನ್ಯಾಯದಿಂದ ಶರಣ ಜನರಿಗೆ ಮಂದಾರವಾಗಿರುತ್ತಾನೆ, ಎಂದರೆ ದೇವಲೋಕದ ಕಲ್ಪವೃಕ್ಷದ ಮಂದರ ಹೂವಿನಂತೆ ಸದಾ ಕಂಗೊಳಿಸುತ್ತಿರುತ್ತಾನೆ.  ಅವನು ಅಂತಿಂತಹ ಕರುಣಿಯಲ್ಲ, ಶಾಶ್ವತ ಕರುಣಿ.  ಕಮಲೆಯನ್ನೇ ಕಾಂತೆಯಾಗಿ ಪಡೆದ ಕಮಲಾಕಾಂತ.  ಕೇಳಿದ್ದನ್ನೆಲ್ಲಾ ಕೊಡತಕ್ಕವ ಅಂದರೆ ಅಪರೋಕ್ಷವನ್ನು ಬಯಸುವವರಿಗೆ ಸಾಧನ ಮಾಡಿಸಿ ದರ್ಶನ ಕೊಡುವಂತ "ಕಾಮದ".  ರಮಾದೇವಿಗಿಂತಲೂ ಉತ್ತಮನಾದ್ದರಿಂದ ಪಾವನಕರ.  ರಮಾ ನಾರಾಯಣರು ಅವಿಭಾಜ್ಯರಾದರೂ ನಾರಾಯಣ ಅಲ್ಲಿಯೂ ಶ್ರೇಷ್ಠ ಚರಿತ.  ಅರ್ಜುನನಿಗೆ ಗೀತೆಯಂತಹ ಮಹಾತತ್ವವನ್ನು ಬೋಧಿಸಿ "ಪಾರ್ಥಸಖ" ಎನಿಸಿಕೊಂಡಿದ್ದಾನೆ.  ಉಪಮೆಯಿಲ್ಲದಂತ ಆನಂದವನ್ನು ಕೊಡುವುದರಿಂದ ಅವನು ನಿರುಪಮಾನಂದಾತ್ಮ.

ಕಲ್ಪವೃಕ್ಷಕ್ಕೆ ಹಿತವಾವುದು, ಅಹಿತವಾವುದೆಂದು ತಿಳಿಯದು.  ಬಯಸಿದ್ದನ್ನು ಕೊಡಬಲ್ಲದು ಆದರೆ ಬಯಸಿದ್ದೆಲ್ಲವನ್ನೂ ಕೊಡಲಾರದ್ದು.  ಹೊಟ್ಟೆ ತುಂಬಾ ಊಟ ಮಾಡಿರುವ ಮಗು ಮತ್ತೆ ಸಿಹಿ ತಿಂಡಿ ಅಥವಾ ಭಕ್ಷ್ಯಗಳನ್ನು ಕೇಳಿದರೆ, ತಾಯಿ ಆಮೇಲೆ ಕೊಡುವೆನೆಂದು ಹೇಳುವುದು ಅದರ ಆರೋಗ್ಯ ಕೆಡಬಾರದೆಂಬ ಒಂದೇ ಒಂದು ಕಾಳಜಿಯಿಂದ ಮಾತ್ರ.  ಅದೇ ರೀತಿ ಭಗವಂತ ಕೂಡ ಕೆಲವೊಮ್ಮೆ ನಾವು ಕೇಳಿದ ಎಲ್ಲವನ್ನೂ ನಮಗೆ ಯೋಗ್ಯತೆ ಇದ್ದರೂ ಕೂಡ ಕೊಡುವುದಿಲ್ಲ.  ಇತರ ದೇವತೆಗಳಂತೆ ಶ್ರೀಹರಿ ಅಷ್ಟು ಬೇಗ ಒಲಿಯುವುದಿಲ್ಲ, ಅವನು ತನ್ನ ಭಕ್ತರಾದ ಸಾತ್ವಿಕರ ಸತ್ವಗುಣ ಅಭಿವೃದ್ಧಿಯಾಗಲೆಂದು ಕಾಯುತ್ತಾನೆ. ಏಕೆಂದರೆ ಜೀವರು ಸಂಸಾರದಲ್ಲಿ ಅಜ್ಞಾನಿಗಳು, ತಮಗೆ ಯಾವುದು ಹಿತವೆಂದು ತಿಳಿಯದವರು.  ಎಲ್ಲವನ್ನೂ ಬೇಡುವ ಭರಾಟೆಯಲ್ಲಿ ಅಹಿತವನ್ನೂ ಬೇಡಿಬಿಡುವರು.  ಆದ್ದರಿಂದ ಶ್ರೀಹರಿ ಬೇಡಿದುದನ್ನೆಲ್ಲವನ್ನೂ ಕಣ್ಮುಚ್ಚಿ ಪೂರೈಸುವುದಿಲ್ಲ ಮತ್ತು ಈಡೇರಿಸಿದ ಲೌಕಿಕ ಪುರುಷಾರ್ಥಗಳಿಂದ ಭಕ್ತ ತನ್ನಿಂದ ವಿಮುಖನಾಗಬಾರದೆಂಬ ಕಾಳಜಿಯಿಂದ, ತಾಯಿಯಂತೆ ಪೊರೆವನು ಎಂದು ತಿಳಿಯಬೇಕು.  ಶ್ರೀಹರಿ ಎಂದಿಗೂ ತಾಮಸರಿಗೆ ಒಲಿಯುವುದೇ ಇಲ್ಲ.  ಭಗವಂತ ಕೇವಲ ಮೋಕ್ಷವನ್ನಷ್ಟೇ ಕೊಡುವುದಿಲ್ಲ, ಮೋಕ್ಷ ಸಾಧನೆಗೆ ಪೂರಕವಾದ ವಿಷಯ ಸುಖವನ್ನೂ, ಸುಸ್ಥಿತವಾದ ದೇಹವನ್ನೂ, ಅವನ ಪಾದದಲ್ಲಿ ನೆಲೆಸುವಂತಹ ಮನಸ್ಸನ್ನೂ ಕೂಡ ಕೊಟ್ಟು, ಸಲಹುತ್ತಾನೆ, ಸಾಧನೆಗೆ ಅವಕಾಶ ಮಾಡಿಕೊಡುತ್ತಾನೆಂಬ ವಿಚಾರವನ್ನು ಸ್ಪಷ್ಟ ಪಡಿಸುವುದಕ್ಕಾಗಿ ಇಲ್ಲಿ ’ಕಲ್ಪವೃಕ್ಷ’ದ ದೃಷ್ಟಾಂತವನ್ನು ಕೊಡಲಾಗಿದೆ.  ಕಲ್ಪವೃಕ್ಷ ಕೂಡ ಕೇವಲ ವಿಷಯ ಸುಖಗಳನ್ನು ಮಾತ್ರ ಕರುಣಿಸಬಲ್ಲದೆಂದೂ, ಮೋಕ್ಷ ಕೊಡಲಾರದೆಂದೂ ತಿಳಿಯಬಾರದು, ಅದು ತತ್ವಜ್ಞಾನವನ್ನೂ ಕೊಡಬಲ್ಲಂತಹದು.  ಹರಿ ಎಂದಿಗೂ ತನ್ನಲ್ಲಿ ಶರಣಾಗತರಾದ ತ್ರಿವಿಧ ಜೀವರಿಗೆ ಮಾತ್ರವೇ ಎಲ್ಲಾ ಲೋಕಗಳಲ್ಲೂ ಕಲ್ಪವೃಕ್ಷದಂತೆ ಅಪೇಕ್ಷಿತವಾದ ಸುಖವನ್ನು ನೀಡುತ್ತಾನಾದ್ದರಿಂದಲೇ ಅವನು ’ಶರಣಜನ’ ಎನಿಸಿಕೊಳ್ಳುತ್ತಾನೆ.  ತನ್ನನ್ನು ದ್ವೇಷಿಸುವವರಿಗೆ ಅವನು ಎಂದಿಗೂ, ಏನನ್ನೂ ನೀಡುವುದಿಲ್ಲ. 


ಶಾಶ್ವತ ಕರುಣಿ - ಭಗವಂತ ಶರಣಾಗತರಾದವರನ್ನು ಶಾಶ್ವತವಾಗಿ ಕರುಣೆಯಿಂದ ಕಾಣುವ.  ದುರ್ಯೋಧನನಿಗೆ ಐಶ್ವರ್ಯ, ರಾಜ್ಯ ಎಲ್ಲವನ್ನೂ ಕೊಟ್ಟರೂ ಕೂಡ, ಆ ಕರುಣೆ ಅಶಾಶ್ವತವಾಗಿತ್ತು.  ಆದರೆ ಪಾಂಡವರಿಗೆ ವನವಾಸವೇ ಕೊಟ್ಟರೂ ಕೂಡ, ಅವರ ಮೇಲೆ ಶ್ರೀಹರಿಯ ಕರುಣೆಯ ಕಟಾಕ್ಷ ನಿರಂತರ ಶಾಶ್ವತಕರುಣೆಯಾಗಿತ್ತು, ಅನರ್ಥ ಶಾಶ್ವತವಾಗಿರಲಿಲ್ಲ.  ಪಾಂಡವರಿಗೆ ಕೊನೆಯಲ್ಲಿ ಶಾಶ್ವತ ಸುಖವನ್ನೇ ಕರುಣಿಸಿದ.  ತಾನಿತ್ತ ಸಂಪತ್ತನ್ನು ಉಳಿಸಿಕೊಳ್ಳಲು ಅಥವಾ ಸಾರ್ಥಕವಾಗಿ ಬಳಸಿಕೊಳ್ಳಲು ತಿಳಿಯದಂತಹ ದುಷ್ಟನಿಗೆ, ಒಮ್ಮೆಲೇ ಅಪಾರ ಸಂಪತ್ತು ಕೊಟ್ಟು, ನಾಶಮಾಡಿಬಿಡುತ್ತಾನೆ.  ಆದರೆ ಸಜ್ಜನಾದ ವ್ಯಕ್ತಿಗೆ ನಾನಾ ತರಹದ ಅಗ್ನಿಪರೀಕ್ಷೆಗಳನ್ನೇ ಕೊಟ್ಟರೂ ಸಹ ಬಹುವಾಗಿ ಸಹನಾಶಕ್ತಿಯನ್ನೂ ನೀಡಿ, ಕೊನೆಯಲ್ಲಿ ಶಾಶ್ವತ ಸಂಪತ್ತನ್ನು ಕೊಡುತ್ತಾನೆ.  ಇದೇ ಭಗವಂತನ ಶಾಶ್ವತ ಕರುಣೆ ಅದಕ್ಕೇ ಅವನು ಎಂದಿಗೂ, ಯಾವ ಏರಿಳಿತಗಳೂ ಇಲ್ಲದಂತಹ ಶಾಶ್ವತ ಕರುಣಿ.   

ಭಗವಂತ ಕಮಲಾಕಾಂತ - ಯಾವ ರಮಾದೇವಿಯ ಕಟಾಕ್ಷಕ್ಕಾಗಿ ಇಡೀ ಜಗತ್ತು ಹಂಬಲಿಸುವುದೋ, ಅಂತಹ ಲಕ್ಷ್ಮೀದೇವಿಗೆ ಸುಖವನ್ನು ಕರುಣಿಸುವವನು.  ಕಾ - ಎಂದರೆ ನಿರಂತರ ಸುಖ ಕೊಡುವವನು ಎಂದರ್ಥ.  ಲಕ್ಷ್ಮೀದೇವಿಯನ್ನು ಎದೆಯಲ್ಲಿ ಕುಳ್ಳಿರಿಸಿಕೊಂಡಿರುವ ಶಾಶ್ವತಕರುಣಿ, ಶರಣಜನಮಂದಾರ  ಭಗವಂತ.  ಎಲ್ಲಾ ಕಾಲಗಳಲ್ಲೂ ಸದಾ ಲಕ್ಷ್ಮೀದೇವಿಯ ಜೊತೆ ಜೊತೆಗೇ ಇರುತ್ತಾನೆ.  ಲೋಕದ ಎಲ್ಲಾ ಸಂಪತ್ತಿಗೂ ಅವಳನ್ನೇ ಒಡತಿಯನ್ನಾಗಿ ಮಾಡಿದ್ದಾನೆ.  ರಮಾದೇವಿಗೆ ಶ್ರೀಹರಿ ಕಾಂತ, ಶ್ರೀಹರಿಗೆ ರಮಾದೇವಿ ಕಾಂತೆ - ಭಗವಂತ ಎರಡು ಅರ್ಥದಲ್ಲಿ ’ಕಮಲಾಕಾಂತ’. 

ಕಾಮದ - ಹರಿ ಒಲಿದರೆ ಕಾಮದ, ಬೇಗನೆ ಒಲಿಯುವುದಿಲ್ಲ ಏಕೆಂದರೆ ಒಲಿಸಲು ಅರಿಯದೆ ಬಳಲುವವರು ನಾವು ಪಾಮರರು.  ಕಾಮದ ಎಂದರೂ ಬೇಡಿದ್ದನ್ನು ಕೊಡುವವನು ಎಂದೇ ಅರ್ಥವಾಗುತ್ತದೆ.  ಶರಣಜನಮಂದಾರ ಮತ್ತು ಕಾಮದ ಎಂಬ ಎರಡೆರಡು ವಿಶೇಷಣಗಳ ಬಳಕೆಯಾಗಿದೆ ಇಲ್ಲಿ.    ಕಾಮದ ಎಂದರೆ ಕಾಮಿತಪ್ರದ ಮಾತ್ರವಲ್ಲ, ಕಾಮನೆಯನ್ನೂ ನೀಡುವವನು  ಕಲ್ಲಿನಂತೆ ಜಡವಾದ ಜೀವಿಯಲ್ಲಿ ತಾನು ಒಳಗೆ ಪ್ರವೇಶಿಸಿ, ನಾನಾ ಬಗೆಯ ಕಾಮನೆಗಳನ್ನು ಹುಟ್ಟಿಸಿ ಅವುಗಳನ್ನು ತಾನೇ ಕೊಟ್ಟು, ಸುಖಾನುಭವವಾಗುವಂತೆ ಮಾಡುವ ಕರುಣಾಮಯಿ.      ತನ್ನನ್ನೇ ನಂಬಿ ಶರಣು ಬಂದವರಿಗೆ  ಕಲ್ಪವೃಕ್ಷದಂತೆ ಬೇಡಿದ್ದನ್ನು ಕೊಡುವವನೂ ಜೊತೆಗೆ ಕಾಮದನೂ, ಎಂಬ ಎರಡು ವಿಶೇಷ ಗುಣಗಳನ್ನು ತೋರಿಸುವುದಕ್ಕಾಗಿ ಎರಡು ವಿಶೇಷಣಗಳ ಉಪಯೋಗವಾಗಿದೆ.  ಕಾಮದನೆಂದರೆ ಕಾಮನೆಗಳನ್ನು ನಾಶಮಾಡುವವನು ಎಂಬುದೇ ಅರ್ಥವಾದರೂ ಕೂಡ, ಆ ಕಾಮನೆಗಳನ್ನು ಕೊಡುವುದೂ ಕೂಡ ಅವನೇ. ಹೀಗೆ ಲೌಕಿಕದ ಅನೇಕ ಭೋಗಗಳನ್ನು ಕೊಟ್ಟು ಜೀವಿಗಳಿಗೆ ಕ್ಲೇಶಗಳನ್ನು ಉಂಟುಮಾಡಿದರೂ ಕೂಡ, ಕೊನೆಗೆ ಶಾಶ್ವತವಾದ ಮೋಕ್ಷ ಸುಖವನ್ನು ನೀಡಿ ಭವ ಪಾಶದಲ್ಲಿ ಬಳಲಿ ಬೆಂಡಾದ ಸಾತ್ವಿಕರನ್ನು ಅಕ್ಕರೆಯ ತಾಯಿಯಾಗಿ, ಲಾಲಿಸಿ, ಪಾಲಿಸಿ  ಸಂತೈಸುವವನೂ ಶ್ರೀಹರಿಯೇ.  ಇದು ಅವನ ಏರಿಳಿತಗಳಿಲ್ಲದ ಕರುಣೆಗೆ ಸಾಕ್ಷಿಯಾಗಿದೆ.

ಪರಮಪಾವನತರ - ಪ್ರತಿಯೊಂದು ವಸ್ತುವಿಗೂ ಭಗವಂತನ ಸ್ಮರಣೆ ಮಾತ್ರದಿಂದಲೇ ಪರಿಶುದ್ಧತೆ ಬರುತ್ತದೆ, ಅಂದರೆ ಅತೀ ಶುದ್ಧವಾದ ವಸ್ತುಗಳಿಗೂ ಕೂಡ ಪರಿಶುದ್ಧತೆಯನ್ನು ಕಲ್ಪಿಸುವವನು ಭಗವಂತ.  ಅವನ ಚರಿತ್ರೆಯೂ ಕೂಡ ಹಾಗೇ ಶುದ್ಧಾತಿ ಶುದ್ಧ, ದೋಷಗಳೇ ಇಲ್ಲದ, ಪರಮ ಪಾವನಪ್ರದ. ಭೋಗ ಭಾಗ್ಯಗಳನ್ನೆಲ್ಲಾ ಕೊಡುವುದು ಮಾತ್ರವಲ್ಲದೇ, ಅವುಗಳನ್ನು ಪಾವನಗೊಳಿಸುವುದೂ ಕೂಡ ಶ್ರೀಹರಿಯ ಕರುಣೆಯೇ.  ಪವನ ಎಂದರೆ ಎಲ್ಲವನ್ನೂ ಪಾವನಗೊಳಿಸುವವನು.  ಶ್ರೀಹರಿ ಆ ಪವನನನ್ನೂ ಪಾವನಗೊಳಿಸುವ ಪರಮಪಾವನತರನು.  "ಪವನಃ ಪಾವನೋನಲಃ" ಎಂದು ವಿಷ್ಣು ಸಹಸ್ರನಾಮದಲ್ಲಿ ಹೇಳಿದೆ.  ಪವನ ಹಾಗೂ ಪರಮಪಾವನತರ ಹರಿಯ ನಿರ್ಮಾಲ್ಯ ಮತ್ತು ನೈವೇದ್ಯವನ್ನು ಸೇವಿಸುವುದರಿಂದ ಸಾಧಕರ ಶರೀರ ಹಾಗೂ ಅಂತಃಕರಣಗಳು ಶುದ್ಧಿಗೊಳ್ಳುವುವು.  ತತ್ವಜ್ಞಾನ ಸಿದ್ಧಿಯಾಗುವುದು.  ಆದರೆ ಅದಕ್ಕೆ ನಾವು ಶ್ರೀಹರಿಯ ಸುಮಂಗಳ ಚರಿತೆಯನ್ನು ಶಾಸ್ತ್ರದ ಮೂಲಕ ತಿಳಿಯಬೇಕು, ತಿಳಿಯಪಡಿಸುತ್ತಾನೆ ಭಗವಂತ, ಇದು ಅವನ ಶಾಶ್ವತ ಕರುಣೆಯ ರೂಪ.

ಸುಮಂಗಳಚರಿತ - ಶ್ರೀಹರಿಯು ಮಂಗಳಕರನು, ಸದಾ ಮಂಗಳವನ್ನೇ ಕರುಣಿಸುವವನು.  ಕೃಷ್ಣಾವತಾರದ ಮಂಗಳಚರಿತೆಯನ್ನು ಮಾಡಿ ತೋರಿಸಿದವನು.  ವ್ಯಾಸರೂಪಿಯಾಗಿ ತಾನೇ ಅದನ್ನು ಬರೆದು ತೋರಿಸಿದವನು.  ತಾನು ಮಂಗಳಕರನು ಮತ್ತು ತಾನೇ ಮಂಗಳಚರಿತ್ರೆಯುಳ್ಳವನು.

ಪಾರ್ಥಸಖ - ಎಲ್ಲಿ ಧರ್ಮವಿರುವುದೋ ಅಲ್ಲಿ ಭಗವಂತ.  ಪಾಂಡವರ ಪಕ್ಷವಹಿಸಿ, ಅಧರ್ಮವನ್ನು ಮೆಟ್ಟಿ ಧರ್ಮವನ್ನು ನಿಲ್ಲಿಸಿದ ಭಗವಂತ.  ಪಾರ್ಥನಿಗೆ ಸಖನಾಗಿ ಸದಾ ಜೊತೆಗೇ ಇದ್ದು ಉದ್ಧರಿಸಿದ.  ಸಖ ಹಾಗೂ ಮಿತ್ರ ಮೇಲ್ನೋಟಕ್ಕೆ ಪರ್ಯಾಯ ಪದ ಎಂದೆನಿಸಿದರೂ ಅರ್ಥದಲ್ಲಿ ವ್ಯತ್ಯಾಸವಿದೆ.  ಮಿತ್ರನೆಂದರೆ ನಮ್ಮಿಂದ ಯಾವಾಗಲಾದರೂ, ಒಮ್ಮೆಯಾದರೂ ಪ್ರತ್ಯುಪಕಾರ ಬಯಸಿ ಸ್ನೇಹ ಬೆಳೆಸುವವನು.  ಆದರೆ ಸಖನೆಂದರೆ ನಮ್ಮಿಂದ ಯಾವುದೇ ನಿರೀಕ್ಷೆಯಿಲ್ಲದೇ, ಪ್ರತಿಯಾಗಿ, ಯಾವ ಕಾಲದಲ್ಲೇ ಆಗಲಿ, ಎಂತಹ ಸಂದರ್ಭದಲ್ಲೇ ಆಗಲಿ, ಏನನ್ನೂ ಬಯಸದೆ, ನಮಗೆ ಬೆಂಬಲವಾಗಿದ್ದು, ಉಪಕಾರ ಮಾಡುತ್ತಾ, ಸ್ನೇಹದ ಸಿಂಚನ ಮಾಡಿಸುವವನು.  ಇಲ್ಲಿ ಶ್ರೀಹರಿ ಅರ್ಜುನನಿಗೆ ಸಖನಾಗಿದ್ದ ಆದರೆ ಅರ್ಜುನ ಶ್ರೀಕೃಷ್ಣನಿಗೆ ಮಿತ್ರ ಮಾತ್ರನಾಗಬಲ್ಲವನು.  ನಿರ್ಮಲ, ನಿರ್ವಾಜ ಸ್ನೇಹವೆಂದರೆ ಹೇಗಿರಬೇಕೆಂದು, ತಾನು ಅರ್ಜುನನ ಸಖನಾಗಿದ್ದು, ತೋರಿಸಿಕೊಟ್ಟ ಶ್ರೀಕೃಷ್ಣನ ಕರುಣೆಯ ಮತ್ತೊಂದು ರೂಪ.

ನಿರುಪಮಾನಂದಾತ್ಮ - ಉದಾಹರಿಸಲಾಗಲೀ, ಹೋಲಿಕೆಗಾಗಲೀ ಬೇರೆ ಏನೂ ಇಲ್ಲದೇ ಇರುವಂತಹವನು ಭಗವಂತ, ನಿರುಪಮಾನಂದ.  ನಿರುಪಮ ಎಂದರೆ ಉಪಮೆ ಇಲ್ಲದ್ದು ಎಂಬರ್ಥ.  ಅವನು ತಾನೇ ಸ್ವತಃ ಸ್ವರೂಪದಿಂದಲೇ ನಿರುಪಮಾನಂದನು.  ನಮ್ಮ ಪೂಜೆಯಿಂದ ಅವನು ಆನಂದ ಹೊಂದಬೇಕಾಗಿಲ್ಲ ಅಥವಾ ನಿಂದೆಯಿಂದ ದುಃಖ ಪಡಬೇಕಾಗಿಲ್ಲ.  ಭಾಗವತದಲ್ಲಿ ಹೇಳಿರುವಂತೆ ಶ್ರೀಕೃಷ್ಣನು ಸದಾ ಆನಂದಸ್ವರೂಪನು. ಲಕ್ಷ್ಮೀದೇವಿಯ ಆನಂದ ಎಷ್ಟೇ ಇದ್ದರೂ ಕೂಡ  ಅದಕ್ಕಿಂತ ಶ್ರೇಷ್ಠವೆಂದು ನಾರಾಯಣನ ಆನಂದವನ್ನು ತೋರಿಸಬಹುದು, ಆದರೆ ಶ್ರೀಮನ್ನಾರಾಯಣನ ಆನಂದಕ್ಕೆ ಮೀರಿದ್ದು ಮತ್ತೊಂದು ಇಲ್ಲವೇ ಇಲ್ಲ.  ಭಗವಂತ ಹಾಗೂ ಅವನ ಗುಣಗಳಲ್ಲಿ ಯಾವ ಭೇದವೂ ಇಲ್ಲ, ಎಲ್ಲಾ ಗುಣಗಳೂ, ಯಾವಾಗಲೂ ಪರಿಪೂರ್ಣವಾಗಿಯೇ ಇರುತ್ತದೆ.  ಉದಾಹರಿಸಬೇಕೆಂದರೆ ಒಬ್ಬ ಶ್ರೀಮಂತನಾದ ವ್ಯಕ್ತಿಯೇ ಬೇರೆ ಹಾಗೂ ಅವನ ಶ್ರೀಮಂತಿಕೆಯೇ ಬೇರೆ.  ಶ್ರೀಮಂತಿಕೆಯೆಂದರೆ ಅವನ ಹಣ, ಆಸ್ತಿ, ಅಂತಸ್ತು ಎಂಬುದು, ಆದರೆ ಆ ವ್ಯಕ್ತಿ ಒಬ್ಬ ಸಾಧಾರಣ ವ್ಯಕ್ತಿಯಾಗಿಯೇ ಇರುತ್ತಾನೆ ಮತ್ತು ಆ ಶ್ರೀಮಂತನನ್ನೂ, ಶ್ರೀಮಂತಿಕೆಯನ್ನೂ ಬೇರ್ಪಡಿಸಬಹುದಾಗಿರುತ್ತದೆ.  ಆದರೆ ಭಗವಂತನೆಂದರೆ ಅವನ ಗುಣಗಳೂ, ಸ್ವರೂಪಗಳೂ, ಎಲ್ಲವೂ ಅವನೇ ಅವನಿಂದ ಅವುಗಳನ್ನು ಪ್ರತ್ಯೇಕಿಸಲಾಗುವುದಿಲ್ಲ.  ಬಂಗಾರದ ಮೂರ್ತಿಯಲ್ಲಿ ಹೇಗೆ ಬಂಗಾರವೇ ಮೂರ್ತಿ, ಮೂರ್ತಿಯೇ ಬಂಗಾರವಾಗುವುದೋ ಹಾಗೆ ಭಗವಂತ ಮತ್ತು ಅವನ ಗುಣಗಳು.

ನಿರ್ಗತದುರಿತ ದೇವವರೇಣ್ಯ - ನಿರ್ಗತದುರಿತನೆಂದರೆ ಮತ್ತೆ ಭಗವಂತನ ಅದೇ ವಿಶೇಷಣಗಳಲ್ಲೊಂದು.  ಅವನು ಯಾವ ದುರಿತವೂ, ದೋಷವೂ ಇಲ್ಲದವನು.  ಪಾಪಗಳಿಗೆ ಕಾರಣವಾದ ನಿರ್ಗತ (ದೋಷಗಳು) ನಮ್ಮಲ್ಲಿವೆಯೇ ಹೊರತು ಅವುಗಳು ಭಗವಂತನಲ್ಲಿಲ್ಲ. ಅವನು ಪರಿಪೂರ್ಣ.  ಸಕಲ ದೇವತೆಗಳಿಂದಲೂ ಅತ್ಯಂತ ಶ್ರೇಷ್ಠನೆಂದು ಸ್ತುತಿಸಿಕೊಳ್ಳಲ್ಪಡುವವನು.  ಬ್ರಹ್ಮಾದಿ ದೇವತೆಗಳೆಲ್ಲರಿಂದಲೂ ಆರಾಧಿಸಿಕೊಳ್ಳಲ್ಪಡುವವನು.  ಸಕಲ ಜೀವರಾಶಿಗಳನ್ನೂ ಪೋಷಿಸುವವನು.  ಸರ್ವಶ್ರೇಷ್ಠನು.  ವೇದಗಳಿಂದಲೂ ಶಾಸ್ತ್ರೋಕ್ತ ಮಂತ್ರಗಳಿಂದಲೂ ಸ್ತುತಿಸಿಕೊಳ್ಳಲ್ಪಡುವವನು, ದೇವತೆಗಳಲ್ಲೆಲ್ಲಾ ಅಗ್ರಗಣ್ಯನು.

ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ - ಅತೀ ಸುಲಭವಾದ ನಾಲ್ಕು ಅಕ್ಷರಗಳ "ನಾರಾಯಣ" ಎಂಬ ನಾಮದಿಂದ ಕರೆದರೇ ಸಾಕು, ಆದರದಿಂದಲೂ, ಪ್ರೇಮದಿಂದಲೂ ನಮ್ಮ ಬಳಿಗೆ ಬರುವವನೇ ಭಗವಂತ.  ಏನನ್ನು ಬೇಕಾದರೂ ನುಡಿಯಬಲ್ಲಂತಹ ನಾಲಿಗೆಯನ್ನು ಕರುಣಿಸಿದ್ದಾನೆ, ನಾವು ಮನಸ್ಸಿಟ್ಟರೆ ಸಾಕು, ನಮ್ಮ ನಾಲಿಗೆಯಲ್ಲಿ ತಾನೇ ಕುಳಿತು, ತನ್ನ ನಾಮವನ್ನು ನಮ್ಮಿಂದ ನುಡಿಸಿ, ತಾನೇ ಸಂಪ್ರೀತನಾಗಿ, ಸಕಲ ಸೌಭಾಗ್ಯವನ್ನೂ ಕೊಟ್ಟು, ಪಾಲಿಸುತ್ತಾನೆ ಭಗವಂತ.  ಆದರೆ ನಾವು ಕರೆಯುವುದೇ ಇಲ್ಲ.  ತನ್ನ ಭಕ್ತರಾದವನು ಪ್ರಾರಬ್ಧ ಕರ್ಮದ ಫಲದಿಂದ ತನ್ನ ಸೇವೆಯನ್ನು ಮರೆತಿದ್ದರೆ, ಭಗವಂತ ತಾನು ಅಂತಹ ಭಕ್ತರನ್ನು ಎಂದಿಗೂ ಮರೆಯುವುದೇ ಇಲ್ಲ.  ಹರಿಕಥಾಮೃತಸಾರ ಗ್ರಂಥ ಕರ್ತೃಗಳಾದ ಶ್ರೀ ಜಗನ್ನಾಥ ದಾಸರು ತಮ್ಮ ಕರ್ತವ್ಯ ಮರೆತು, ತಮ್ಮದೇ ಭ್ರಮೆಯ ಲೋಕದಲ್ಲಿ ಮುಳುಗಿದ್ದಾಗ, ಅವರನ್ನು ಶ್ರೀವಿಜಯದಾಸರ ಮುಖಾಂತರ, ಅವರಿಗೆ ಕರ್ತವ್ಯ ನೆನಪಿಸಿ, ತನ್ನೆಡೆಗೆ ತಾನೇ ಕರೆಸಿಕೊಂಡ ಶರಣಜನಮಂದಾರ, ಶಾಶ್ವತಕರುಣೀ, ಕಮಲಾಕಾಂತನು ಭಗವಂತನು.  ಈ ಕರುಣೆಗೆಲ್ಲಿಯ ಸಾಟಿ ಎನ್ನುತ್ತಾರೆ ಶ್ರೀಜಗನ್ನಾಥ ದಾಸರು.

ಶ್ರೀ ಜಗನ್ನಾಥ ದಾಸರು ತತ್ವಸುವ್ವಾಲಿಯಲ್ಲಿ :
ಶರಣಪಾಲಕನೆಂಬ ಬಿರುದಿದ್ದ ಮೇಲಿನ್ನು
ಪೊರೆಯದಿರಲೆನ್ನ ನಗರೇನೊ | ನಗರೇನೊ ಮೂರ್ಲೋಕ-
ದರಸ ನೀನಾಗಿ ಇರುತಿರ್ದು || - ಶರಣಾಗತರಾದ ಭಕ್ತರನು ರಕ್ಷಿಸದೆ ಕೈ ಬಿಟ್ಟು ಭಗವಂತ ಅಪಹಾಸಕ್ಕೆ ಎಂದೂ ಗುರಿಯಾಗನು,   ಮೂರ್ಲೋಕವಷ್ಟೇ ಅಲ್ಲ, ಎಲ್ಲಾ ಲೋಕಗಳಿಗೂ ಒಡೆಯನಾದ ನೀನು ಶರಣಾಗತರಾದವರನ್ನು ರಕ್ಷಿಸದಿದ್ದರೆ ’ನಗರೇನೋ’ ಎಂಬ ಯುಕ್ತಿಯನ್ನೂ ಸೇರಿಸಿದ್ದಾರೆ.
ಎಲ್ಲಿ ಹರಿರೂಪ ಮತ್ತಲ್ಲಿ ಗುಣಕ್ರಿಯೆಗಳು
ಅಲ್ಲೆ ಗುಣರೂಪಕ್ರಿಯೆಗಳು | ಕ್ರಿಯೆಗಳು ಗುಣರೂಪ
ಬಲ್ಲವನೆ ಜ್ಞಾನಿ ಜಗದೊಳು || - ಶ್ರೀಹರಿಯು ಎಲ್ಲಿರುತ್ತಾನೋ ಅಲ್ಲೇ, ಆ ರೂಪದಲ್ಲೇ ಅವನ ಗುಣಕ್ರಿಯೆಗಳು, ಅಲ್ಲೇ ಆ ರೂಪ ಗುಣಕ್ರಿಯೆಗಳಲ್ಲಿ ಒಂದೊಂದರಲ್ಲಿಯೂ ಗುಣರೂಪಕ್ರಿಯೆಗಳು, ಅನಂತ ಗುಣರೂಪಕ್ರಿಯೆಗಳೂ ಇರುವುವೆಂದೂ, ಕ್ರಿಯೆಗಳು ಕ್ರಿಯೆಗಳೇ, ಗುಣರೂಪಗಳು ಗುಣರೂಪಗಳೇ ಎಂದು ತಿಳಿದವನೇ ಜ್ಞಾನಿಯೆಂದೆನಿಸಲು ಅರ್ಹನು ಎನ್ನುತ್ತಾರೆ.

ತಮ್ಮದೇ ಆದ ಇನ್ನೊಂದು ಕೃತಿ "ಫಲವಿದು ಬಾಳ್ದುದಕೆ" ಎಂಬುದರಲ್ಲಿ :
ಒಂದುರೂಪದೊಳಂತರೂಪಗಳು
ಪೊಂದಿಪ್ಪವು ಗುಣಗಣಸಹಿತ
ಹಿಂದೆ ಮುಂದೆ ಎಂದೆಂದಿಗೆ ಶ್ರೀಗೋ
ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ
ಫಲವಿದು ಬಾಳ್ದುದಕೆ || - ಶ್ರೀಹರಿಯ ಎಲ್ಲಾ ರೂಪಗಳಲ್ಲೂ, ಒಂದೊಂದರಲ್ಲೂ ಅನಂತ ರೂಪಗಳನ್ನು ಹೊಂದಿದೆ, ಆ ಎಲ್ಲಾ ರೂಪಗಳೂ ಭಗವಂತನ ಎಲ್ಲಾ ಗುಣಗಳ ಸಹಿತವೇ ಆಗಿದೆ.  ಅಂದರೆ ಭಗವಂತ ಬೇರೆಯಲ್ಲ, ಅವನ ಗುಣಗಳೂ, ರೂಪಗಳೂ ಬೇರೆಯಲ್ಲವಾದ್ದರಿಂದ ಶ್ರೀಗೋವಿಂದನಾದ ಪರಮಾತ್ಮನಿಗೆ ಎಂದಿಗೂ ಯಾರೂ, ಏನೂ ಸರಿಯೂ ಅಲ್ಲ, ಅವನಿಗಿಂತ ಮಿಗಿಲೂ ಅಲ್ಲ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ :
ಸೃಷ್ಟಿಯದ್ಭುತಶಕ್ತಿಯೊಳ್ಳೊರ್ವನಿರಲು ನ - |
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||
ಇಷ್ಟವಾತನೊಳುದಿಸುವಂತೆ ಚೋದಿಪುದೆಂತು ? |
ಕಷ್ಟ ನಮಗಿಹುದಷ್ಟೆ - ಮಂಕುತಿಮ್ಮ ||  - ಅದ್ಭುತವಾದ ಬ್ರಹ್ಮಾಂಡವನ್ನು ಸೃಷ್ಟಿಸಿ, ಅದರೊಳಗೇ ತನ್ನ ವ್ಯಾಪ್ತಿಯನ್ನು ಪಸರಿಸಿರುವ, ತಾನೇ ಅದಾಗಿ ನೆಲೆಸಿರುವ ಅವನಿಗೆ (ಭಗವಂತ) ನಾವು ಬೇಡುವುದನ್ನು ಕೊಡುವುದು ಅವನಿಗೆ ತಿಳಿದಿಲ್ಲವೇ ಅಥವಾ ಅದು ಅವನಿಗೆ ಅಸಾಧ್ಯವೇ ? ಇಂತಹ ಅತ್ಯಂತ ಸುಂದರವಾದ, ಅದ್ಭುತವಾದ ಶಕ್ತಿಗಳನ್ನೊಳಗೊಂಡ ಬ್ರಹ್ಮಾಂಡವನ್ನೇ ಸೃಷ್ಟಿಸಬಲ್ಲವನಾದ ಅವನು ನಿಸ್ಸಂಶಯವಾಗಿಯೂ ಸರ್ವಶಕ್ತ, ಸರ್ವನಿಯಾಮಕ, ಸರ್ವಶ್ರೇಷ್ಠ.  ನಮ್ಮೆಲ್ಲಾ ಇಷ್ಟಗಳನ್ನೂ ಪೂರೈಸಬಲ್ಲವನು, ಪೊರೆಯುವವನು ಅವನೇ, ಆದರೆ ಅವನನ್ನು ಒಲಿಸುವ ಪರಿ, ನಮಗೆ ತಿಳಿದಿಲ್ಲ ಎನ್ನುವುದೇ ನಮ್ಮ ಕಷ್ಟ ಎನ್ನುತ್ತಾರೆ.

ದೈವಕೃಪೆಯೆನುವುದೇಂ ? ಪರಸತ್ತ್ವನವವೃಷ್ಟಿ |
ಜೀವಗುಣ ಪಕ್ವಪಟ್ಟಂತದರ ವೇಗ ||
ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ |
ತೀವಿ ದೊರೆಕೊಲುವುದದು - ಮಂಕುತಿಮ್ಮ ||  -  ದೈವಕೃಪೆ ಎಂಬುದಕ್ಕೆ ಅರ್ಥ ಭಗವಂತನ ಅಪಾರವಾದ ಕರುಣೆ, ನಿರಂತರ ನಿತ್ಯನೂತನವಾಗಿ ಅವನು ನಮ್ಮ ಮೇಲೆ ಸುರಿಸುತ್ತಿರುವ ಅನುಗ್ರಹವರ್ಷ.  ನಾವು ಸದಾ ನಮ್ಮ ಲೌಕಿಕ ಬೇಕುಗಳನ್ನೇ ಕಾರಣವಾಗಿಟ್ಟುಕೊಂಡು ಭಗವಂತನನ್ನು ಬೇಡುತ್ತಾ ಅವನ ಅನುಗ್ರಹವನ್ನೂ, ಕರುಣೆಯನ್ನೂ ನಿರೀಕ್ಷಿಸುತ್ತೇವೆ.  ಆದರೆ ಭಗವಂತ ಕೇವಲ ನಮ್ಮ ಬೇಡಿಕೆಗಳನ್ನು ಪೂರೈಸುವುದಕ್ಕಾಗಿಯೇ ಇರುವನೇ ?  ಇಂತಹ ಸುಂದರ ಸೃಷ್ಟಿಯನ್ನು ಮಾಡಿದ ಭಗವಂತನ ಉದ್ದೇಶ ಅದಲ್ಲ, ಸೃಷ್ಟಿಕ್ರಿಯೆ ಅವನ ಆನಂದ.  ಆ ಆನಂದದಲ್ಲಿ ನಾವು ಪಾಲುಗೊಂಡರೆ ಅದು ನಮಗೆ ಭವ ಬಂಧನದ ಭಾರ ತಗ್ಗಿಸುತ್ತದೆ.  ಆದರೆ ಇದಕ್ಕೆ ಜೀವ ಪಕ್ವವಾಗಬೇಕು, ನಿರಂತರ ಪ್ರಯತ್ನಗಳಿಂದ ಸಂಸ್ಕಾರಗೊಳ್ಳಬೇಕು.  ಎಷ್ಟು ಆಳಕ್ಕಿಳಿದು ಪಕ್ವಗೊಳ್ಳುತ್ತೇವೆಯೋ, ಅಷ್ಟು ಭಗವಂತನ ಕೃಪೆ ಹೆಚ್ಚುತ್ತದೆ.  ಮನಸನ್ನು ಪರಿಶುದ್ಧಗೊಳಿಸುತ್ತದೆ, ಗುರಿಯತ್ತ ಪಯಣಿಸಲು ಪ್ರೇರೇಪಿಸುತ್ತದೆ, ಅನುಕೂಲಗಳನ್ನು ಒದಗಿಸಿಕೊಡುತ್ತದೆ.  ಅದೇ ಅಲೆ, ಭಕ್ತಿ, ನಮ್ಮ ಒಳ ಹೊರಗೂ ತುಂಬಿ ಉದ್ದೀಪನಗೊಳಿಸುತ್ತದೆ.  

ಒಂದೊಮ್ಮೆ ಈ ಆನಂದದತ್ತ ಮುಖ ಮಾಡಿದರೆ ಸಾಕು, ಶರಣಜನಮಂದಾರನಾದ ಭಗವಂತನು, ಆದರದಿಂದ ನಮ್ಮ ಕೈ ಹಿಡಿಯುತ್ತಾನೆ ಮತ್ತು ಅನುಗ್ರಹಿಸುತ್ತಾನೆ.







 ಚಿತ್ರಕೃಪೆ : ಅಂತರ್ಜಾಲ

Tuesday, April 16, 2013

ಕರುಣಾ ಸಂಧಿ -೯ ನೇ ಪದ್ಯ



















ಒಬ್ಬನಲಿ ನಿಂತಾಡುವನು ಮ
ತ್ತೊಬ್ಬನಲಿ ನೋಡುವನು ಬೇಡುವ
ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ |
ಅಬ್ಬರದ ಹೆದ್ದೈವನಿವ ಮ
ತ್ತೊಬ್ಬರನು ಲೆಕ್ಕಿಸನು ಲೋಕದೊ
ಳೊಬ್ಬನೇ ತಾ ಬಾಧ್ಯಬಾಧಕನಾಹ ನಿರ್ಭೀತ || ೯ ||


ಪ್ರತಿಪದಾರ್ಥ : ಒಬ್ಬನಲಿ ನಿಂತಾಡುವನು - ಪಾದಗಳಿಗೆ ಅಭಿಮಾನಿ ದೇವತೆಯಾದ ಜಯಂತನಲ್ಲಿ ಅಂತರ್ಗತನಾಗಿದ್ದು ನಿಲ್ಲಲು ಓಡಾಡುವುದನ್ನು ಮಾಡುವನು, ಮತ್ತೊಬ್ಬನಲಿ ನೋಡುವನು - ಕಣ್ಣುಗಳಿಗೆ ಅಭಿಮಾನಿ ದೇವತೆಯಾದ ಸೂರ್ಯನಲ್ಲಿ ಅಂತರ್ಗತನಾಗಿದ್ದು ನೋಡುವುದನ್ನು ಮಾಡುವನು, ಬೇಡುವನು ಒಬ್ಬನಲಿ - ಹಸ್ತಗಳಿಗೆ ಅಭಿಮಾನಿ ದೇವತೆಯಾದ ದಕ್ಷ ಹಾಗೂ ಇಂದ್ರರಲ್ಲಿ ಅಂತರ್ಗತನಾಗಿದ್ದು ಬೇಡುವ ಹಾಗೂ ಕೊಡುವ ಕೆಲಸಗಳನ್ನು ಮಾಡುವನು, ಮಾತಾಡುವನು - ವದನದ ತತ್ವಾಭಿಮಾನಿ ದೇವತೆಯಾದ ಅಗ್ನಿಯಲ್ಲಿ ಅಂತರ್ಗತನಾಗಿದ್ದು ಮಾತನಾಡುವನು,  ಬೆರಗಾಗಿ - ಮನೋಭಿಮಾನಿಯಾದ  ರುದ್ರದೇವರಲ್ಲಿ ಅಂತರ್ಗತನಾಗಿದ್ದು  ಆಶ್ಚರ್ಯ ವ್ಯಕ್ತಪಡಿಸುವನು, ಅಬ್ಬರದ ಹೆದ್ದೈವನಿವ - ಜ್ಞಾನೇಂದ್ರಿಯ ಅಭಿಮಾನಿ ದೇವತೆಗಳಲ್ಲಿದ್ದು ಜ್ಞಾನ ಕಾರ್ಯಗಳನ್ನೂ ಕರ್ಮೇಂದ್ರಿಯ ಅಭಿಮಾನಿ ದೇವತೆಗಳಲ್ಲಿದ್ದು ಅವುಗಳ ಕಾರ್ಯಗಳನ್ನೂ ಮಾಡಿಸುವ ಅದ್ಭುತವಾದ ಹಿರಿಯ ದೈವನಿವನು, ಮತ್ತೊಬ್ಬರನು ಲೆಕ್ಕಿಸನು - ಸರ್ವೋತ್ತಮನೂ ದೇವದೇವೋತ್ತಮನೂ ಆದ ಭಗವಂತನು ಬೇರೆ ಯಾವ ದೇವತೆಗಳನ್ನೂ ಲೆಕ್ಕಿಸಬೇಕಾಗಿಲ್ಲದವನು, ಲೋಕದೊಳೊಬ್ಬನೇ ತಾ - ಸರ್ವ ವ್ಯಾಪ್ತನಾಗಿರುವಂತಹ ಭಗವಂತನು ತಾನು ಒಬ್ಬನೇ ಇನ್ನೊಬ್ಬರಿಲ್ಲ, ಬಾಧ್ಯ - ಎಲ್ಲದಕ್ಕೂ ತಾನೊಬ್ಬನೇ ಹೊಣೆಗಾರನಾಗಿರುವವನು ತನ್ನ ಭಕ್ತರಲ್ಲಿ ಅತ್ಯಂತ ಕರುಣೆಯುಳ್ಳವನಾಗಿರುವನು,  ಬಾಧಕನಾಹ - ತನ್ನನ್ನು ಲೆಕ್ಕಿಸದೆ ಲೋಕಕ್ಕೆ ಬಾಧಕರಾಗಿರುವ ತಮೋಜೀವಿಗಳಿಗೆ ಬಾಧಕನಾಗಿರುವವನು, ನಿರ್ಭೀತ - ಲವಲೇಶವೂ ಭಯವಿಲ್ಲದವನು.
ಜಗತ್ತಿನಲ್ಲಿ ನಡೆಯುವ ಸಕಲ ಕಾರ್ಯಗಳೂ ಪರಮಾತ್ಮನ ಶಕ್ತಿಯಿಂದ, ಅವನ ಇಚ್ಛೆಯಿಂದ, ಅವನು ನಡೆಸಿದಂತೆಯೇ ನಡೆಯುತ್ತದೆ.  ಸರ್ವಂ ಕಲ್ಪಿದ ಬ್ರಹ್ಮ ಎಂಬ ಮಾತನ್ನು ಇಲ್ಲಿ ಪೂರ್ಣವಾಗಿ ಹೇಳುತ್ತಾರೆ.  ಒಬ್ಬನಲಿ ನಿಂತಾಡುವನು ಎಂದರೆ  ಪಾದಗಳ ಅಭಿಮಾನಿ ದೇವತೆಯಾದ ಇಂದ್ರಪುತ್ರ ಜಯಂತನಲ್ಲಿ ಅಂತರ್ಗತನಾಗಿ ಶ್ರೀ ಹರಿಯು ’ಯಜ್ಞ’ ನಾಮಕನಾಗಿ ವಿಹರಿಸುತ್ತಾನೆ.  ಅಂದರೆ ಭಗವಂತನ ಕ್ರಿಯೆಯೇ ಜಯಂತನ ಕ್ರಿಯೆ - ಜಯಂತನ ಕ್ರಿಯೆಯೇ ಜೀವದ ಕ್ರಿಯೆ - ಜೀವದ ಕ್ರಿಯೆಯೇ ಸ್ಥೂಲದೇಹದ ಪಾದಗಳ (ಇಂದ್ರಿಯ) ಕ್ರಿಯೆಯಾಗಿ ನಿಲ್ಲುವ ಶಕ್ತಿ, ಓಡಾಡುವ ಶಕ್ತಿ ಕೊಡುತ್ತಾನೆ.  ಮತ್ತೊಬ್ಬನಲಿ ನೋಡುವ ಎಂದರೆ ನೇತ್ರಾಭಿಮಾನಿ ಸೂರ್ಯನ ಮೂಲಕ ನೋಡುವ ಶಕ್ತಿಯನ್ನು ಕೊಡುತ್ತಾನೆ.  ಇನ್ನು ಬೇಡುವ ಎಂದರೆ ಹಸ್ತಾಭಿಮಾನಿ ದಕ್ಷ ಪ್ರಜೇಶ್ವರನಲ್ಲಿ ಪದ್ಮನಾಭ ರೂಪದಿಂದ ಕೈ ಚಾಚುವಂತೆ ಮಾಡುತ್ತಾನೆ.  ವಾಗಾಭಿಮಾನಿ ಎಂದರೆ ಅಗ್ನಿ ಅಂತರ್ಗತ ಪರಶುರಾಮ, ಋಷಿಕೇಶ ರೂಪದಿಂದ ಮಾತನಾಡುವ ಶಕ್ತಿ ಕೊಡುತ್ತಾನೆ.  ಮನೋಭಿಮಾನಿ ರುದ್ರಾಂತರ್ಗತ ಗೋವಿಂದ ರೂಪದಿಂದ ಆಶ್ಚರ್ಯ ವ್ಯಕ್ತಪಡಿಸುವ ಶಕ್ತಿ ಕೊಡುತ್ತಾನೆ.  ಯಾರನ್ನೂ ಲೆಕ್ಕಿಸಬೇಕಿಲ್ಲ.  ಅವನೇ ಬಾಧ್ಯ ಮತ್ತು ಅವನೇ ಬಾಧಕ.

ಜಗನ್ನಾಥ ದಾಸರ  "ಆವ ಭಯವಿಲ್ಲ ಪರಾವರೇಶನ ಸಕಲ ಠಾವಿನಲಿ ಚಿಂತಿಸುವ ಭವಜ್ಞ ಜನರಿಗೆ" ಎನ್ನುವ ಕೃತಿಯ ೪ನೇ ಚರಣದಲ್ಲಿ "ನೋಡುವುದೆ ಹರಿಮೂರ್ತಿ, ಕೇಳುವುದೆ ಹರಿಕೀರ್ತಿ, ಆಡುವುದೆ ಹರಿವಾರ್ತೆ, ಮಾಡುವುದೆ ಹರಿಪೂಜೆ, ನೀಡುವುದೆ ಅವದಾನ, ಬೇಡುವುದೆ ಪುರುಷಾರ್ಥ, ಕೂಡುವುದು ಸಾಯುಜ್ಯ ಎಂದು ಹೇಳುತ್ತಾ ೫ನೇ ಚರಣದಲ್ಲಿ ಅಂತರ್ಬಹಿರ್ವ್ಯಾಪ್ತನಾದ ಶ್ರೀ ಜಗನ್ನಾಥ ವಿಠಲ ಆವ ದೇಶದಲಿ, ಆವ ಕಾಲದಲಿ, ಪಾಸಾಟಿ ಇಲ್ಲ ಎನ್ನುತ್ತಾ ಆರ್ಭಟಿಸುತಿಪ್ಪ ಜನರಿಗೆ ಆವ ಭಯವಿಲ್ಲ ಎಂದು ಪರಮಾತ್ಮನ ಪರಾಕಾಷ್ಠಯನ್ನು ನಮಿಸುತ್ತಾರೆ, ಕೊಂಡಾಡುತ್ತಾರೆ.

 "ಸರ್ವಂ ಕಲ್ವಿದಂ ಬ್ರಹ್ಮ" - ಎಲ್ಲವೂ ಭಗವಂತನೇ ಎಂದು ಉಪನಿಷತ್ ತಿಳಿಸುತ್ತದೆ.  ಜ್ಞಾನಿಗಳಿಗೆ ಪ್ರತಿಯೊಂದು ಚಟುವಟಿಕೆಯಲ್ಲೂ ದೇವರು ಕಾಣುತ್ತಾನೆ, ಆದರೆ ಅಜ್ಞಾನಿಗಳಾದ ನಾವು ಅದನ್ನು ತಿಳಿಯದೇ ಎಲ್ಲವನ್ನೂ ನಾವು ಮಾಡಿದೆವೆಂದುಕೊಳ್ಳುತ್ತೇವೆ.  ಯಾವುದೇ ಒಳ್ಳೆಯ ಕಾರ್ಯವಾದರೂ ಭಗವಂತ ತಾನೇ ನಮ್ಮೊಳಗೆ ನಿಂತು ನಮ್ಮ ಪರವಾಗಿ ಮಾಡಿ, ನಮ್ಮಿಂದ ಮಾಡಿಸುತ್ತಾನೆಂಬ ಸತ್ಯ ಅರಿತುಕೊಳ್ಳಬೇಕು.  ಶ್ರೀಹರಿಯು ಕರ್ತೃವೂ ತಾನೇ, ಕ್ರಿಯೆಯೂ ತಾನೇ, ದೃಷ್ಟಾರನೂ ಅವನೇ, ಭೋಕ್ತಾರನೂ ಅವನೇ, ಹೀಗೆ ಸರ್ವ ಕ್ರಿಯೆಗಳಲ್ಲೂ ವ್ಯಾಪಿಸಿಕೊಂಡಿದ್ದರೂ, ಅದು ಯಾವುದಕ್ಕೂ ಅಂಟಿಕೊಳ್ಳದಿರುವ ಸರ್ವಸ್ವತಂತ್ರನೂ ಅವನೇ.

ಒಬ್ಬನೊಳಗೆ ನಿಂತು ಆಡುವವನೂ ಅವನೆ ಅದಕ್ಕೆ ತದ್ವಿರುದ್ಧವಾಗಿ ಇನ್ನೊಬ್ಬನೊಳಗೆ ನಿಂತು ನೋಡುವವನೂ ಅವನೇ, ಹೀಗೆ ವಿರುದ್ಧ ಕ್ರಿಯೆಗಳನ್ನು ಮಾಡಿ ಮತ್ತೊಬ್ಬನಲ್ಲಿ ಅಚ್ಚರಿ ಹುಟ್ಟಿಸುವವನೂ ಅವನೇ.  ಅಬ್ಬರದ ಹೆದ್ದೈವನಿವನು, ಇವನಿಗೆ ಯಾರ ಅಂಕೆಯೂ ಇಲ್ಲ, ಇವನನ್ನು ಯಾರೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ, ಹಾಗೆ ಮಾಡಿದರೂ ಕೂಡ ಲೆಕ್ಕಿಸುವುದೂ ಇಲ್ಲ, ಇವನೇ ಭಗವಂತ.  ಜಗದುದರನಾಗಿದ್ದರೂ ಕೂಡ ಹಿಡಿ ಮಣ್ಣು ತಿಂದು, ಏಕೆ ತಿಂದೆಯೆಂದು ಕೇಳಿದರೆ, ಪುಟ್ಟ ಬಾಯಿ ತೆರೆದು ಬ್ರಹ್ಮಾಂಡವನ್ನೇ ತೋರಿಸಿಬಿಟ್ಟ.  ಆದರೆ ಅವನಿಗೆ ತನ್ನ ಭಕ್ತರು ಅತಿ ಪ್ರಿಯರು.  ಕರುಕಟ್ಟುವ ಹಗ್ಗದಿಂದ ಕಟ್ಟಿಸಿಕೊಂಡೂ ಬಿಟ್ಟ.  ಹಾಗೇ ಕೌರವರೂ ಹಗ್ಗದಿಂದ ಕಟ್ಟಲು ಬಂದಾಗ ವಿಶ್ವರೂಪವನ್ನೇ ತೋರಿ ಭಯಂಕರವಾಗಿ ಬೆದರಿಸಿ, ಯುದ್ಧದಲ್ಲಿ ಸರ್ವನಾಶವನ್ನೇ ಕೊಟ್ಟ.  ಇಲ್ಲಿ ಗೋಪಿಗೆ ಬಾಧ್ಯನಾದ, ಕೌರವರಿಗೆ ಬಾಧಕನಾದ.  ಭಗವಂತನು ಅಚಿಂತ್ಯಾದ್ಭುತ ಚರಿತನು, ಅಘಟನಾ ಘಟನ ಸಮರ್ಥನು, ಅತ್ಯಂತ ಶ್ರೇಷ್ಠನು, ಸರ್ವೋತ್ತಮನು, ಸರ್ವತಂತ್ರ ಸ್ವತಂತ್ರನು, ಆಪ್ತ ಕಾಮನು ಮತ್ತು ಸ್ವರಮಣನು.  ಯಾರ ಹಂಗಾಗಲೀ, ಭಯವಾಗಲೀ ಅವನಿಗಿಲ್ಲ.  ಆದ್ದರಿಂದಲೇ ಭಗವಂತ ಅಬ್ಬರದ ಹೆದ್ದೈವ, ನಿರ್ಭೀತ.  ವಿವಿಧ ರೂಪಗಳಿಂದ ಇಂದ್ರಿಯಾಭಿಮಾನಿ ದೇವತೆಗಳ ಮೂಲಕ ಕರ್ಮಗಳನ್ನು ಮಾಡಿಸುವ ಅದ್ಭುತವಾದ ಹಿರಿಯ ದೈವ ಭಗವಂತನೆಂದೂ ಅರ್ಥೈಸಿಕೊಳ್ಳಬಹುದು.

ಶ್ರೀಹಯವದನ ಪುರಾಣಿಕರು ತಮ್ಮ ಪುಸ್ತಕದಲ್ಲಿ "ಒಬ್ಬನಲಿ ನಿಂತಾಡುವನು...." ವಾಕ್ಯವನ್ನು ಜೀವಿಗಳ ಶರೀರದ ಇಂದ್ರಿಯ ಅಂತಃಕರಣಗಳನ್ನು ಪ್ರೇರೇಪಿಸುವ ರೀತಿಗೆ ಹೋಲಿಸುತ್ತಾರೆ.  ಶ್ರೀಹರಿ ಒಬ್ಬನಲ್ಲಿ ನಿಂತು ಕರ್ಮೇಂದ್ರಿಯಗಳಿಗೆ ಪ್ರೇರಣೆ ನೀಡಿ, ತೀರ್ಥಕ್ಷೇತ್ರ ಯಾತ್ರೆಗಳನ್ನು ಮಾಡಿ, ಮಾಡಿಸುತ್ತಾರೆ.  ಹಾಗೇ ಮತ್ತೊಬ್ಬನಲ್ಲಿ ನಿಂತು ಜ್ಞಾನೇಂದ್ರಿಯಗಳಿಗೆ ಪ್ರೇರಣೆ ನೀಡಿ, ಭಗವಂತನ ಚರಿತ್ರೆ ಓದುವುದು, ಕೇಳುವುದು, ಪೂಜೆಯ ನಿರ್ಮಾಲ್ಯವನ್ನು ಆಘ್ರಾಣಿಸುವುದು ಮುಂತಾದ ಕ್ರಿಯೆಗಳನ್ನು ಪ್ರಚೋದಿಸಿ, ಮಾಡಿ, ಮಾಡಿಸುತ್ತಾನೆ.  ಹೀಗೆ ಜೀವಿಗಳಿಗೆ ಅವರವರ ಕರ್ಮಗಳಿಗನುಸಾರವಾಗಿ, ಅವರಿಗೆ ಪ್ರೇರಣೆ ಕೊಟ್ಟು, ಒಬ್ಬೊಬ್ಬರಲ್ಲಿ ಒಬ್ಬೊಬ್ಬನಾಗಿ ನಿಂತು ಎಲ್ಲವನ್ನೂ ಮಾಡುತ್ತಾನೆ ಮತ್ತು ಮಾಡಿಸುತ್ತಾನೆ ಎನ್ನುತ್ತಾರೆ.  ಶ್ರೀಹರಿಯ ಕರುಣೆಗೆ ಪಾತ್ರರಾಗಿ, ಸತ್ಕಾರ್ಯಗಳನ್ನು ಮಾಡುವ ಅವಕಾಶ ಪಡೆಯುವವನು ಎಲ್ಲೋ ಸಾವಿರಾರು ಜೀವಿಗಳಲ್ಲಿ ಒಬ್ಬ ಪುಣ್ಯಾತ್ಮನಿರಬಹುದು ಎನ್ನುತ್ತದೆ ನಮ್ಮ ದಾಸ ಪರಂಪರೆ.  ಶ್ರೀಹರಿಯ ಕರುಣೆಗಾಗಿ ಶ್ರಮಿಸುವ ಸಾವಿರದಲ್ಲಿ ಒಬ್ಬ ಜೀವಿ ಸಿದ್ಧಿ ಹೊಂದಬಹುದು, ಸಿದ್ಧಿ ಪಡೆದ ಸಾವಿರಾರು ಜೀವಿಗಳಲ್ಲಿ ಒಬ್ಬನೇ ಒಬ್ಬ ತನ್ನನ್ನು ಸ್ಫುಟವಾಗಿ ತಿಳಿಯಬಲ್ಲನು ಎಂದಿದ್ದಾನೆ ಭಗವಂತ ಭಗವದ್ಗೀತೆಯಲ್ಲಿ.

"ವಾಯುಜೀವೋತ್ತಮ"ತ್ವಕ್ಕೆ ಒಳ್ಳೆಯ ವಿವರಣೆ ಎನ್ನುತ್ತಾರೆ ಶ್ರೀ ಪುರಾಣಿಕರು.  ಒಬ್ಬ ಮಾನವನಲ್ಲಿ ಅಲ್ಲ, ಒಬ್ಬ ತತ್ವಾಭಿಮಾನಿಯಲ್ಲಿಯೂ ಅಲ್ಲ, ಒಬ್ಬ ಮುಖ್ಯಪ್ರಾಣನಲ್ಲಿಯೇ ಅಂತರ್ಯಾಮಿಯಾಗಿದ್ದು ಆಡುತ್ತಾನೆ, ನೋಡುತ್ತಾನೆ, ಬೇಡುತ್ತಾನೆ, ನೀಡುತ್ತಾನೆ, ಮಾತಾಡುತ್ತಾನೆ, ಎಲ್ಲಾ ಕ್ರಿಯೆಗಳನ್ನೂ ನಡೆಸುತ್ತಾನೆ.  ಮುಖ್ಯಪ್ರಾಣ ದೇವರನ್ನು ಒಬ್ಬನನ್ನೇ ಸರ್ವಾಂತರ್ಯಾಮಿಯಾಗಿ ಸರ್ವರೊಳಗೂ ಇಟ್ಟು, ಅವನ ಅಂತರ್ಯಾಮಿಯಾಗಿ ತಾನು ನೆಲೆಸಿ, ಜೀವವನ್ನೇ ಕರುಣಿಸುವ ಜೀವೋತ್ತಮನಿಗೂ ಪ್ರಾಣನಾಗಿ ಸಕಲವನ್ನೂ ಮಾಡುವ ಭಗವಂತ ಅಬ್ಬರದ ಹೆದ್ದೈವನಲ್ಲದೇ ಮತ್ತೇನು ? ಆದರೂ ಸರ್ವೋತ್ತಮನಾದ ಶ್ರೀಹರಿ ಈ ಮುಖ್ಯಪ್ರಾಣನನ್ನಲ್ಲದೇ ಮತ್ತೊಬ್ಬರನ್ನು ಲೆಕ್ಕಿಸುವುದಿಲ್ಲ, ಏಕೆಂದರೆ ವಾಯುವಿನಂತಹ ಭಕ್ತರು ಮತ್ತೊಬ್ಬರು ಇಲ್ಲವೇ ಇಲ್ಲ, ಅವನೆಂದೂ ಭಗವಂತನನ್ನು ವಿರೋಧಿಸಲೂ ಇಲ್ಲ,  ಬಾಧಿಸಲೂ ಇಲ್ಲ.  ಆದ್ದರಿಂದ ಶ್ರೀಹರಿ ಮತ್ತು ಪ್ರಾಣದೇವರ ಸಂಬಂಧ ಬಾಧ್ಯ-ಬಾಧಕದಿಂದಲ್ಲದೆ "ಅಬಾಧ್ಯ-ಅಬಾಧಕ" ತತ್ವವಾಗಿದೆ.  ಶ್ರೀಹರಿಯಿಂದ ಹನುಮನಿಗೆ ಹೇಗೆ ಯಾವ ಆಪತ್ತೂ, ಭಯವೂ ಇಲ್ಲವೋ ಹಾಗೇ ಹನುಮನಿಂದ ಶ್ರೀಹರಿಗೂ ಯಾವ ಆಪತ್ತೂ, ಭಯವೂ ಇಲ್ಲ.  ಹನುಮನು ನಿರ್ಭೀತನು ಹಾಗೆ ಅವನನ್ನು ಸ್ಮರಿಸುವವರಿಗೂ ಭಯವೆಂಬುದೇ ಇಲ್ಲ.  "ನಿರ್ಭಯತ್ವಂ ಅರೋಗತಾ, ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ಭವೇತ್" - ಬುದ್ಧಿ, ಬಲ, ಯಶಸ್ಸು, ಧೈರ್ಯವೆಲ್ಲವನ್ನೂ ಕರುಣಿಸುವವನು ಹನುಮ. ಹನುಮನ ಸ್ಮರಣೆಯಿಂದಲೇ ಜೀವೋತ್ತಮನು ಕರುಣೆಯಿಂದ ಜೀವಿಗಳು ಸಾಧನೆ ಮಾಡುವಂತೆ ಪ್ರೇರೇಪಿಸಿ, ಸರ್ವೋತ್ತಮನಾದ ಶ್ರೀಹರಿಯಿಂದ ಮೋಕ್ಷ ಕೊಡಿಸುವವನು.  

ಜಗನ್ನಾಥ ದಾಸರ  "ಮುಖ್ಯಪ್ರಾಣ ದೇವ ನೀನಲ್ಲದೆ ಕಾಯ್ವರ ಕಾಣೆನೋ ಜಗದೊಳಗೇ" ಎಂಬ ಪದದಲ್ಲಿ "ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು | ಕರಣ ನಿಯಾಮಕ ಸುರರಗುರುವೆ ನೀ ಕರುಣಿಸೆ ಕರುಣಿಸುವಾ" ಎನ್ನುತ್ತಾ ಪ್ರಾಣದೇವರು ಇರುವ ಕಡೆ ಶ್ರೀಹರಿ ಇದ್ದೇ ಇರುವ, ಇಲ್ಲದಿದ್ದರೆ ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಶಾಂಡಿಲ್ಯ ತತ್ವದಲ್ಲಿ - "ಪ್ರತಿಬಿಂಬಕ್ರಿಯಾಯಾಃಬಿಂಬಕ್ರಿಯಾನುಸ್ಯೂತತಾ |  ಯದಾಶ್ನಾತಿ ತದಾಶ್ನಾತಿ ಯದಾ ವಕ್ತಿ ತದೈವ ಸಃ | ಕಿಮತ್ರ ಬಹುನೋಕ್ತೇನ ನಾ ಕೃತಂ ಕ್ರಿಯತೇ ಜನೈಃ || - ಬಿಂಬನು ಉಂಡರೆ ಪ್ರತಿಬಿಂಬನು ಉಣ್ಣುವನು, ಮಾತಾಡಿದರೆ ಮಾತಾಡುವನು, ಬಿಂಬ ಮಾಡದ ಏನನ್ನೂ ಪ್ರತಿಬಿಂಬ ಮಾಡನು ಎಂಬ ಅರ್ಥ.  
ತತ್ವಸುವಾಲಿಯಲ್ಲಿ ಜಗನ್ನಾಥ ದಾಸರು
ನಿಲ್ಲಲು ನಿಲ್ಲುವೆನು ಮಲಗಿದರೆ ಮಲಗುವೆನು
ತಿಳಿದು ತಿಳಿಸಿದರೆ ತಿಳಿವೆನು | ತಿಳಿವೆನೊ ದೇಹದ
ನೆಳಲಂತೆ ಇರ್ಪೆ ನಿನಗಾನು ||
ಜೀವನಾಮಕನಾಗಿ ಜೀವರೊಳು ನೀ ನಿಂತು
ಜೀವಕೃತಕರ್ಮ ನೀ ಮಾಡಿ | ನೀ ಮಾಡಿ ಮಾಡಿಸಿ
ಜೀವರಿಗೆ ಕೊಡುವೆ ಸುಖದುಃಖ || - ಎಲ್ಲಕ್ಕೂ ಭಗವಂತನದೇ ಪ್ರೇರಣೆ ಮತ್ತು ತಾನೆ ಮಾಡಿ ಜೀವಿಗಳಿಂದ ಮಾಡಿಸುತ್ತಾನೆ ಎನ್ನುತ್ತಾರೆ.









ಚಿತ್ರಕೃಪೆ : ಅಂತರ್ಜಾಲ

Thursday, March 14, 2013

ಕರುಣಾ ಸಂಧಿ - ೮ನೇ ಪದ್ಯ



ಜಗವನೆಲ್ಲವ ನಿರ್ಮಿಸುವ ನಾ |
ಲ್ಮೊಗನೊಳಗೆ ತಾನಿದ್ದು ಸಲಹುವ |
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ ||
ಸ್ವಗತ ಭೇದವಿವರ್ಜಿತನು ಸ |
ರ್ವಗ ಸದಾನಂದೈಕ ದೇಹನು |
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ  ||೮||

ಪ್ರತಿಪದಾರ್ಥ : ಜಗವನೆಲ್ಲವ ನಿರ್ಮಿಸುವ - ಜಗತ್ತನ್ನು ಸೃಷ್ಟಿ ಮಾಡುವ, ನಾಲ್ಮೊಗನೊಳಗೆ - ಚತುರ್ಮುಖ ಬ್ರಹ್ಮದೇವರಲ್ಲಿ ಅಂತರ್ಗತನಾಗಿದ್ದು, ತಾನಿದ್ದು ಸಲಹುವ - ಭಗವಂತ ತಾನೇ ಇದ್ದು ಸಲಹುವನು, ಗಗನಕೇಶನೊಳಿದ್ದು - ಗಂಗೆಗಾಗಿ ತನ್ನ ಕೇಶವನ್ನು ಕೆದರಿ ನಿಂತು ವ್ಯೋಮಕೇಶನೆನಿಸಿಕೊಂಡ ರುದ್ರದೇವರಲ್ಲಿ ಅಂತರ್ಗತನಾಗಿದ್ದು, ಸಂಹರಿಸುವನು - ಲೋಕಗಳ ಸಂಹಾರ ಅಥವಾ ಲಯವನ್ನು ಮಾಡುವನು, ಸ್ವಗತ ಭೇದ ವಿವರ್ಜಿತನು - ಸ್ವ ಎಂದರೆ ತನ್ನ ಶರೀರದಲ್ಲಿ ಗತ ಎಂದರೆ ಇರುವ ಉಗುರು ಕೂದಲು ಮುಂತಾದ ಅವಯವಗಳಿಗೂ ಅನಂತ ಅವತಾರಗಳಿಗೂ ಅಂತರ್ಯಾಮಿ ರೂಪಗಳಲ್ಲಿಯೂ, ಭೇದ ವಿವರ್ಜಿತನು ಎಂದರೆ ಯಾವ ವ್ಯತ್ಯಾಸವೂ ಇಲ್ಲದಂತಹವನು, ಸರ್ವ ಅವಯವಗಳೂ ಪರಿಪೂರ್ಣನಾಗಿರುವವನು ಎಂದರ್ಥ, ಸರ್ವಗ - ಸರ್ವತ್ರನಾಗಿ ವ್ಯಾಪ್ತನಾಗಿರುವವನು ಎಲ್ಲೆಡೆಯೂ ಇರುವವನು, ಸದಾನಂದೈಕ ದೇಹನು - ಸರ್ವಕಾಲದಲ್ಲಿಯೂ ಆನಂದಮಯವಾದ ದೇಹವುಳ್ಳಂಥವನು, ಬಗೆಬಗೆಯ ನಾಮದಲಿ ಕರೆಸುವ - ಅನೇಕ ವಿಧವಾದ ಸ್ವರ ವರ್ಣ ನಾದ ಹಾಗೂ ವೈದಿಕ ಲೌಕಿಕ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುವವನು, ಭಕುತರನು ಪೊರೆವ - ನಂಬಿ ಕರೆದ ಭಕುತರನು ಸದಾ ರಕ್ಷಿಸುವವನು.
ಸರ್ವ ಸ್ವಾಮಿಯಾದ ಪರಮಾತ್ಮ ಇಡೀ ಜಗತ್ತಿನ ನಿರ್ಮಾಪಕ, ನಿರ್ದೇಶಕನೂ ಅವನೇ.  ತನ್ನ ಮುಖ್ಯ ಭಕ್ತರುಗಳಿಂದ ಜಗತ್ತನ್ನು ಕಾಪಾಡಿಸುವವನೂ ಅವನೇ, ಹೇಗೆಂದರೆ ಬ್ರಹ್ಮನಲ್ಲಿದ್ದು ಜಗತ್ತು ಸೃಷ್ಟಿಮಾಡಿ, ಸೃಷ್ಟಿಕರ್ತನೆಂಬ ಬಿರುದು ಬ್ರಹ್ಮನಿಗೆ ಕೊಡುತ್ತಾನೆ.  ಗಗನಕೇಶಿಯಾದ ರುದ್ರನಲ್ಲಿದ್ದು ಜಗತ್ತನ್ನು ಸಂಹರಿಸಿ ಲಯಕಾರಿಯೆಂಬ ಬಿರುದನ್ನು ರುದ್ರನಿಗೆ ಕೊಡುತ್ತಾನೆ  ಸ್ವತಃ ಪರಮಾತ್ಮನು ತಾನೇ ಸ್ಥಿತಿ ಕಾರಣನಾಗಿದ್ದಾನೆ.  ಈ ಜಗತ್ಪತಿಗೆ ಸೃಷ್ಟಿ, ಸ್ಥಿತಿ, ಲಯ ಯಾವುದೂ ಬೇಕಿಲ್ಲ.  ಎಲ್ಲವೂ ಜೀವಿಗಳಿಗಾಗಿ ಮಾಡುವ ಉಪಕಾರ.  ಸ್ವಗತ ಭೇದ ವಿವರ್ಜಿತನು ಭಗವಂತ - ಅಂದರೆ ತನ್ನಲ್ಲಿರುವ ಪ್ರತ್ಯಂಗದಲ್ಲೂ ಸರ್ವಶಕ್ತಿ ಉಳ್ಳವನು ಮತ್ತು ಪರಿಪೂರ್ಣ.  ಸದಾನಂದೈಕ ದೇಹ ಮತ್ತು ಸರ್ವನಾಮಕ್ಕೂ ಅಧಿಕಾರಿ.  ದಾಸರ ಒಂದು ಉಗಾಭೋಗದಲ್ಲಿ "ಯಾರು ವಂದಿಸಿದರೂ, ನಿಂದಿಸಿದರೂ, ಶಪಿಸಿದರೂ, ಕೋಪಿಸಿದರೂ, ಮಾತಾಡದಿದ್ದರೂ ಕೂಡ ಜಗನ್ನಾಥ ವಿಠಲನ ಕಾರುಣ್ಯ ಪಾತ್ರರ ಕರುಣ ಎನ್ನೊಳಗಿರಲಿ" ಎಂದು ಕರುಣಾ ಮೂರ್ತಿಯನ್ನು ಬೇಡಿಕೊಳ್ಳುತ್ತಿದ್ದಾರೆ.

ವಿಷ್ಣು ಸಹಸ್ರನಾಮ ಪ್ರಾರಂಭವಾಗುವುದೇ " ಓಂ ವಿಶ್ವಸ್ಮೈ ನಮಃ " ಎಂದು.  ಇಲ್ಲಿ ಓಂ ಎಂದರೆ ಪರಮಾತ್ಮ, ಅವನೊಬ್ಬನೇ ಒಬ್ಬನಾಗಿದ್ದು ತನ್ನ ಮಹಿಮೆಯಿಂದ ಸೃಷ್ಟಿಸಬೇಕೆಂದು ಸಂಕಲ್ಪಿಸಿಕೊಂಡು ಏನೇನನ್ನು ಸೃಷ್ಟಿ ಮಾಡಿದನೋ ಅದರೊಳಗೆಲ್ಲಾ ತಾನೇ ಪ್ರವೇಶ ಮಾಡಿ, ತಾನೇ ಸೃಷ್ಟಿಸಿದ ಅತಿಶಯವನ್ನು ’ವಿಶ್ವ’ ಎಂದು ಕರೆದ.  ಎಲ್ಲದರ ಒಳ ಹೊರಗೂ ತಾನೇ ತಾನಾಗಿ ವ್ಯಾಪಿಸಿರುವವನು ಪರಿಪೂರ್ಣನಾದ ಭಗವಂತನು, ಆದ್ದರಿಂದಲೇ ಅವನೇ ವಿಶ್ವ.  ಅವನೇ ಸೃಷ್ಟಿಸಿದ ಬ್ರಹ್ಮನಲ್ಲಿ ತಾನೇ ನಿಂತು ಜಗತ್ತನ್ನು ಸೃಷ್ಟಿ ಮಾಡಿ, ಹಾಗೆ ಸೃಷ್ಟಿಸಿದ ಎಲ್ಲದರಲ್ಲೂ ತಾನೇ ನೆಲೆಸಿ, ಸೃಷ್ಟಿಕರ್ತನೆಂಬ ಬಿರುದನ್ನು ಬ್ರಹ್ಮದೇವರಿಗೆ ದಯಪಾಲಿಸಿ, ಎಲ್ಲರನ್ನೂ, ಎಲ್ಲವನ್ನೂ ಸಲಹುವವನು ಭಗವಂತ.  ಗಂಗೆಯ ಆಗಮನಕ್ಕಾಗಿ ತನ್ನ ತಲೆಕೂದಲನ್ನು ಕೆದರಿ ನಿಂತ ರುದ್ರದೇವರ ಒಳಗೆ ಕೂಡ ತಾನೇ ಇದ್ದು ಲೋಕದ ಲಯ ಕಾರ್ಯಗಳನ್ನು ತಾನೇ ಮಾಡಿ, ರುದ್ರ ದೇವರಿಂದ ಮಾಡಿಸಿ ಪೊರೆಯುವವನು ಭಗವಂತ.
ಸ್ವಗತ ಭೇದ ವಿವರ್ಜಿತ - ಭಗವಂತನ ಒಂದು ಅವಯವಕ್ಕೂ, ಮತ್ತೊಂದು ಅವಯವಕ್ಕೂ ಯಾವುದೇ ಭೇದ ಅಥವಾ ವ್ಯತ್ಯಾಸವಿಲ್ಲ.  ಒಂದು ಅವಯವದ ಕಾರ್ಯವನ್ನು ಮತ್ತೊಂದು ಅವಯವವು ಮಾಡಬಲ್ಲದಾಗಿದೆ. ಭಗವಂತನ ಅವಯವಗಳೆಲ್ಲವೂ ಪರಿಪೂರ್ಣವೇ.  ಅಂದರೆ ಅವನ ಎಲ್ಲ ಇಂದ್ರಿಯಗಳಿಗೂ ಮತ್ತೆಲ್ಲಾ ಇಂದ್ರಿಯಗಳ ಸಾಮರ್ಥ್ಯವೂ ಇದೆ.  ಅವನ ಗುಣಗಳಲ್ಲೂ ಯಾವ ಭೇದವೂ ಇಲ್ಲ.  ಒಂದೊಂದು ಗುಣದಲ್ಲೂ ಅವನ ಮತ್ತೆಲ್ಲಾ ಗುಣಗಳ ವಿಶೇಷಗಳನ್ನೂ ಕಾಣಬಹುದು.  ಪ್ರತಿಯೊಂದು ಅಣುವಿನಲ್ಲಿಯೂ ಭಗವಂತ ಇದ್ದಾನೆ. ಕೊಳಕಿನಲ್ಲಿ ಹೊರಳಾಡುವ ಕ್ರಿಮಿಯಲ್ಲೂ ದೇವರಿದ್ದಾನೆ, ಆದರೆ ಅವನು ಕೊಳಕಲ್ಲ.  ಭಗವಂತ ಯಾವುದೇ ಪದಾರ್ಥದ ಒಳಗಿದ್ದರೂ ಅವನು ಮಾತ್ರ ಚಿನ್ಮಯರೂಪನೇ ಆಗಿದ್ದಾನೆ.  ಅವನಿಗೆ ಯಾವ ವಿಕಾರವೂ ಇಲ್ಲವೇ ಇಲ್ಲ.  ಅವನ ಅವತಾರಗಳಿಗೂ, ಸರ್ವರಲ್ಲಿ ಅಂತರ್ಯಾಮಿಯಾಗಿರುವ ರೂಪಕ್ಕೂ ಯಾವುದೇ ವ್ಯತ್ಯಾಸವಿಲ್ಲ.  ಭಗವಂತ   ಸರ್ವಸಂಪೂರ್ಣನು.  ಗಾಳಿ, ಆಕಾಶಗಳು ಹೇಗೆ ಎಲ್ಲ ಕಡೆಯೂ ಇದ್ದೂ ನಿರ್ವಿಕಾರವೋ.. ಹಾಗೇ ಭಗವಂತನ ಧ್ಯಾನವೊಂದನ್ನು ಬಿಟ್ಟು, ಬೇರೆಲ್ಲಾ ಪ್ರಾಪಂಚಿಕ ವಿಷಯಗಳಿಗೆ ನಾವೂ ನಿರ್ವಿಕಾರರಾಗಬೇಕು. 

ಬಗೆಬಗೆಯ ನಾಮದಲಿ ಕರೆಸುವ - ಸ್ವರಗಳ, ವರ್ಣಗಳ, ಧ್ವನಿಗೆ ಸಂಬಂಧಿಸಿದ ವೈದಿಕ, ಲೌಕಿಕ ಇತ್ಯಾದಿ ಬಗೆಬಗೆಯ ಹೆಸರುಗಳಿಂದ ಕರೆಯಿಸಿಕೊಳ್ಳಲ್ಪಡುವವನು.  ಹರಿನಾಮಗಳೆಂದರೆ ಬರಿಯ ನಾಮಗಳಲ್ಲ, ಅವು ಅನ್ವರ್ಥ ನಾಮಗಳು. ಕೇವಲ ವ್ಯಕ್ತಿವಾಚಕಗಳಲ್ಲ, ಗುಣಗಳನ್ನೂ ಹೇಳುವಂತಹವು.  ಶ್ರೀಹರಿ ಅನಂತ ಗುಣಸಾಗರ, ಅವನ ಗುಣಗಳನ್ನು ಹೇಳಲು ಎಷ್ಟು ಶಬ್ದಗಳಿದ್ದರೂ ಸಾಲದೇ ಸಾಲದು.  ನಾಮಗಳು ಹರಿಯ ಗುಣಗಳನ್ನು ತಿಳಿಸಿಕೊಡುವ ರೀತಿ ಮಾತ್ರ ಅನೇಕ ಬಗೆಯದಾಗಿವೆ.  ಭಕ್ತರು ತನ್ನನ್ನು ಪ್ರೀತಿಯಿಂದ ಯಾವುದೇ ನಾಮದಲ್ಲಿ ಕರೆದರೂ ಕೂಡ, ಓಗೊಟ್ಟು, ಧಾವಿಸಿ ಬಂದು ಭಕುತರನ್ನು ಪೊರೆಯುವವನು ಭಗವಂತ.  " ಏಕ ರೂಪಃ  ಪರೋ  ವಿಷ್ಣುಃ ಸರ್ವತ್ರಾಪಿ ನ ಸಂಶಯಃ "  ಎಂಬ ಮತ್ಸ್ಯ ಪುರಾಣದ ಮಾತು -  ಯಾವುದೇ ರೂಪದಲ್ಲಿದ್ದರೂ ಯಾವುದೇ ಹೆಸರಿನಿಂದ ಉಪಾಸಿಸಲ್ಪಟ್ಟರೂ ಹರಿಯು ಸರ್ವವ್ಯಾಪಿಯಾಗಿರುವುದರಿಂದ ಅವನು "ವಿಷ್ಣು"ವೇ. ಉಪನಿಷತ್ತಿನಲ್ಲಿ ತಿಳಿಸಿರುವಂತೆ ಭಗವಂತ ಎಲ್ಲಾ ಶಬ್ದಗಳಲ್ಲೂ ಇದ್ದಾನೆ.  ದೋಷಗಳನ್ನು ಹೇಳುವ ಶಬ್ದಗಳಲ್ಲೂ, ಅವಗುಣಗಳನ್ನು ಹೇಳುವ ಶಬ್ದಗಳಲ್ಲೂ, ಎಲ್ಲದರಲ್ಲೂ ಭಗವಂತ ಇದ್ದಾನೆ.  ಯಾವುದೇ ಒಂದು ಶಬ್ದ ಬಳಕೆಯಾದರೆ, ಅದರ ಗುಣ ವಿಶೇಷ, ಬಳಕೆ ಮಾಡಿದ ಆ ವ್ಯಕ್ತಿಯಲ್ಲಿರುವುದು.  ಹಾಗಾಗಿ ನಾವು  ಶಬ್ದಗಳನ್ನು ಜಾಗ್ರತೆಯಾಗಿ ಬಳಸಬೇಕು.  

ಸರ್ವಗ ಸದಾನಂದೈಕ ದೇಹನು - ಪರಮಾತ್ಮನು ಸದಾ ಸರ್ವದ ಆನಂದವನ್ನೇ ಅನುಭವಿಸುವ ಶರೀರವುಳ್ಳವನು (ಜ್ಞಾನಾದಂದ ಸ್ವರೂಪನು).  ಸರ್ವಗ ಎಂದರೆ ಸರ್ವ ಕಡೆಯಲ್ಲೂ ವ್ಯಾಪಿಸಿರುವವನು ಏಕೆಂದರೆ ಭಗವಂತ ಭಕ್ತರ ರಕ್ಷಣೆಗೆ ’ಕಣ್ಣಿಗೆವೆಯಂದದಲಿ’ ಬಂದೊದಗುವವನು.  ಶ್ರೀ ಪುರಂದರ ದಾಸರು "ಅಣುರೇಣು ತೃಣಕಾಷ್ಠ ಪರಿಪೂರ್ಣ ಗೋವಿಂದ" ಎನ್ನುತ್ತಾ ಹರಿಯ ವ್ಯಾಪ್ತಿಯನ್ನು ಸರಳವಾಗಿ ತಿಳಿಸಿದ್ದಾರೆ. ಸರ್ವ ಶ್ರೇಷ್ಠನು.  ಭಕ್ತಿಯೆಂದರೆ ತನಗಿಂತ ಉತ್ತಮನಾದ ವ್ಯಕ್ತಿಯಲ್ಲಿ ತನ್ನನ್ನೇ ಅರ್ಪಿಸಿಕೊಂಡು ಬಿಡುವುದು, ಅವನನ್ನು ಯಾವುದೇ ನಿರ್ಬಂಧವಿಲ್ಲದಂತೆ ಪ್ರೇಮಿಸುವುದೇ ಭಕ್ತಿ.

ಬ್ರಹ್ಮನಲ್ಲಿ ಬ್ರಹ್ಮನೆಂಬ ರೂಪದ ನಾರಾಯಣ ಇದ್ದು ಸೃಷ್ಟಿಕಾರ್ಯ ಮಾಡುತ್ತಾನೆ.  ವಿಷ್ಣುವಿನಲ್ಲಿ ತನ್ನದೇ ರೂಪದಿಂದ ರಕ್ಷಣೆ ಕಾರ್ಯ ಮಾಡುತ್ತಾನೆ ಹಾಗೂ ರುದ್ರನಲ್ಲಿ ರುದ್ರ ರೂಪನಾಗಿ ಸಂಹಾರ ಮಾಡುತ್ತಾನೆ.  ಪ್ರಕೃತಿ ತತ್ವದ ವಿಕಾಸವಾಗುತ್ತಾ ಆಗುತ್ತಾ ಬಂದು ಕೊನೆಗೆ ಪಂಚಭೂತಗಳ ಈ ಬ್ರಹ್ಮಾಂಡ ಸೃಷ್ಟಿಯಾಯಿತು.  ಪ್ರಕೃತಿಗೂ ಹಿಂದೆ ಇನ್ನೂ ಅನೇಕ ತತ್ವಗಳಿವೆ, ಉದಾ.. ಅಹಂಕಾರ ತತ್ವ.  ಇಲ್ಲಿ ಭಗವಂತ ಲಯ ಮಾಡುತ್ತಾನೆಂದರೆ ಅದನ್ನು "ಉಪಸಂಹಾರ" ಎಂದು ಮಾತ್ರ ಅರ್ಥೈಸಿಕೊಳ್ಳಬೇಕು.  ಹೇಗೆಂದರೆ ತಾನೇ ಸೃಷ್ಟಿಸಿದ ಎಲ್ಲವನ್ನೂ ತನ್ನ ಉದರದೊಳಗೇ ಇಟ್ಟುಕೊಂಡು ಪೋಷಿಸುವವನು ಎಂದು.

ಉತ್ಪತ್ತಿಸ್ಥಿತಿಸಂಹಾರಾ ನಿಯತಿರ್ಜ್ಞಾನಮಾವೃತ್ತಿಃ |
ಬಂಧಮೋಕ್ಷೌ ಚ ಪುರುಷಾದ್ ಯಸ್ಮಾತ್ ಸ ಹರಿರೇಕರಾಟ್ || - ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಜ್ಞಾನ, ಆವರಣ, ಬಂಧ, ಮೋಕ್ಷ ಈ ಎಂಟನ್ನೂ ಮಾಡುವವ ಸ್ವತಂತ್ರನಾದ ಹರಿಯೇ ಎಂದು ಸ್ಪಷ್ಟವಾಗಿ ಸ್ಕಂದಪುರಾಣದಲ್ಲಿ ತಿಳಿಸಲಾಗಿದೆ (ಆಧಾರ ಗ್ರಂಥ - ಶ್ರೀ ಹಯವದನ ಪುರಾಣಿಕರ ’ಶ್ರೀ ಹರಿಕಥಾಮೃತಸಾರ, ಸಂಗ್ರಹ ಮತ್ತು ಅನುವಾದ ಪುಸ್ತಕ).

ಡಿವಿಜಿಯವರು
ಏಕದಿಂದಲನೇಕ ಮತ್ತನೇಕದಿನೇಕ |
ವೀ ಕ್ರಮವೆ ವಿಶ್ವದಂಗಾಂಗ ಸಂಬಂಧ ||
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ |
ಸಾಕಲ್ಯದರಿವಿರಲಿ - ಮಂಕುತಿಮ್ಮ ||  - ಒಂದೇ ಆಗಿದ್ದ ಬ್ರಹ್ಮವಸ್ತು, ತನ್ನದೇ ಆದ ಬಹುಸ್ಯಾಂ ಎಂಬ ಎಣಿಕೆಯಿಂದ ಎರಡಾಗಿ, ನಾಲ್ಕಾಗಿ, ಅನೇಕವಾಯಿತು.  ಈ ಅನೇಕಗಳೆಲ್ಲವೂ ಕೊನೆಗೆ ಪುನಃ ಅವನೇ.. ಭಗವಂತನನ್ನೇ ಸೇರಿ ಮತ್ತೆ ಒಂದೇ ಆಗಿಬಿಡುವುದು.  ಹೀಗೆ ಆಗುವ ಈ ಕ್ರಮವೇ, ಒಂದು ಅನೇಕವಾಗುವುದು, ಅನೇಕವು ಪುನಃ ಒಂದಾಗುವುದು, ’ಸೃಷ್ಟಿ’ಯ ಕಾರ್ಯ.  ಇದೇ ಇಡೀ ವಿಶ್ವದ ಅಂಗಾಂಗ ಸಂಬಂಧ.  ಇದೇ ಸೃಷ್ಟಿಯ ಎಲ್ಲಾದರಲ್ಲೂ ಇರುವ ಭಗವಂತನ ವ್ಯಾಪ್ತಿ.  "ಅಣುಮಹತ್ತಿನೊಳಿರುವವನೇ ಭಗವಂತ ಎಂಬುದೇ ಸತ್ಯ.