Sunday, November 9, 2014

ಕರುಣಾ ಸಂಧಿ - ೨೫ ನೇ ಪದ್ಯ


ಒಡಲ ನೆಳಲ೦ದದಲಿ ಹರಿ ನ |
ಮ್ಮೊಡನೆ ತಿರುಗುವ ಒ೦ದರಕ್ಷಣ|
ಬಿಡದೆ ಬೆ೦ಬಲನಾಗಿ      ಭಕ್ತಾಧೀನನೆ೦ದೆನಿಸಿ ||
ತಡೆವ ದುರಿತೌಘಗಳ ಕಾಮದ |
ಕೊಡುವ ಸಕಲೇಷ್ಟಗಳ ಸ೦ತತ |
ನಡೆವ ನಮ್ಮ೦ದದಲಿ ನವಸುವಿಶೇಷ ಸನ್ಮಹಿಮ || ೨೫ ||

ಪ್ರತಿಪದಾರ್ಥ : ಒಡಲ - ದೇಹದ, ನೆಳಲಂದದಲಿ - ನೆರಳಿನಂತೆ, ಹರಿ - ಭಗವಂತನು, ನಮ್ಮೊಡನೆ - ನಮ್ಮ ಜೊತೆಯಲ್ಲಿ, ತಿರುಗುವನೊಂದರೆಕ್ಷಣ - ಅನುಸರಿಸುವನು ಒಂದೇ ಒಂದು ಕ್ಷಣವೂ, ಬಿಡದೆ - ಬಿಡದೆ, ಬೆಂಬಲನಾಗಿ - ನಮ್ಮ ಜೊತೆಗಾರನಾಗಿ ನಮ್ಮ ಬೆನ್ನುಬಲವಾಗಿ, ಭಕ್ತಾಧೀನನೆಂದೆನಿಸಿ - ಭಕ್ತರಿಗೆ ಅಧೀನನೆಂದೆನಿಸಿಕೊಳ್ಳುತ್ತಾ, ತಡೆವ - ನಿಲ್ಲಿಸುವ ಅಥವಾ ದೂರ ಮಾಡುವ, ದುರಿತ - ಪಾಪ, ಓಘ - ರಾಶಿಗಳನ್ನು, ಕಾಮದ - ಮನೋಭೀಷ್ಟಗಳನ್ನು, ಕೊಡುವ - ಅನುಗ್ರಹಿಸುವ, ಸಕಲೇಷ್ಟಗಳ - ಸಮಸ್ತ ಇಷ್ಟಗಳನ್ನೂ, ಸಂತತ - ಸದಾ ಕಾಲವೂ, ನಡೆವ - ನಮ್ಮ ಜೊತೆಯಲ್ಲಿಯೇ ಸಾಗುವ, ನಮ್ಮಂದದಲಿ - ನಮ್ಮ ಇಚ್ಛೆಯಂತೆಯೇ,  ನವ ಸುವಿಶೇಷ ಸನ್ಮಹಿಮ - ಹೊಸತರಲ್ಲಿಯೇ ಹೊಚ್ಚ ಹೊಸತಾಗಿಯೇ ಕಾಣುವಂತಹ ಅಪಾರ ಮಹಿಮೆಯನ್ನುಳ್ಳವನು.


ನಮ್ಮ ದೇಹದ ನೆರಳು ನಮ್ಮನ್ನು ಅನುಸರಿಸಿಕೊ೦ಡು ಬರುವ ರೀತಿಯಲ್ಲಿ, ಭಕ್ತಾಧೀನ ಎ೦ದೆನಿಸಿಕೊಳ್ಳುವುದಕ್ಕಾಗಿ, ಕ್ಷಣಕಾಲವೂ ಬಿಡದೆ, ಭಕ್ತರ ಸ೦ಗಡ ನಿಬ೯೦ದವಿಲ್ಲದೆ, ಪರಮಾತ್ಮನು ಬೆ೦ಬಲನಾಗಿ ಇರುತ್ತಾನೆ. ಭಕ್ತರ ಸಾಧನೆಗೆ ಪ್ರತಿಬ೦ಧಕಗಳಾಗುವ, ದುಷ್ಟವಾದ ಪೂರ್ವಕೃತ ಪಾಪಕರ್ಮಗಳು ಒದಗುವ ಕಾಲದಲ್ಲಿ, ಅವುಗಳನು ನಿಗ್ರಹಿಸುತ್ತಾನೆ. ಅಷ್ಟೇ ಅಲ್ಲದೆ ತನ್ನ ಭಕ್ತರ ಅಲೌಕಿಕ ಅಭೀಷ್ಟಗಳನ್ನು ಪೂರೈಸುತ್ತ, ಸ್ವರೂಪಯೋಗ್ಯತಾನುಸಾರ ಅನುಗ್ರಹಿಸುತ್ತಾನೆ. ಭಗವ೦ತನ ಗುಣಗಳಲ್ಲಿ ಅವರ್ಣನೀಯವಾದ, ನೂತನವಾದ, ಸಮೀಚೀನವಾದ, ನಿರ್ದುಷ್ಟವಾದ ಮಹಿಮೆಯನ್ನು ಉಳ್ಳವನಾಗಿದ್ದಾನೆ. ದೇಹ ಎ೦ಬುದು ಬಿ೦ಬ ಸದೃಶವಾದರೆ, ನೆರಳು ಎ೦ಬುದು ಪ್ರತಿಬಿ೦ಬವಾಗುತ್ತದೆ. ಬಿ೦ಬ ಸದೃಶನಾದ, ಬಿ೦ಬರೂಪನಾದ ಪರಮಾತ್ಮನು,  ಹರಿಯೇ ಎ೦ದು ಅರ್ಥೈಸಿಕೊಳ್ಳಬೇಕು. ಅದರ೦ತೆಯೇ ಪ್ರತಿಬಿ೦ಬನು ಜೀವನಾಗುತ್ತಾನೆ, ಪ್ರತಿಬಿ೦ಬ ಸದೃಶನಾಗುತ್ತಾನೆ. ಪರಮಾತ್ಮನಿಗೂ, ಜೀವಿಗೂ ಅನಾದ್ಯನ೦ತ ಕಾಲಕ್ಕೂ ಅವಿಯೋಗವಿರುವುದರಿ೦ದ ಬಿ೦ಬರೂಪಿ ಪರಮಾತ್ಮನು ಪ್ರತಿಬಿ೦ಬರೂಪನಾದ ಜೀವನನ್ನು ನಿರ೦ತರವಾಗಿ ಕಾಪಾಡುತ್ತಲೇ ಇರುತ್ತಾನೆ.

ನಮ್ಮ ದೇಹದ ನೆರಳು ನಮ್ಮನ್ನು ಬಿಡದೆ ಇರುವ ಹಾಗೆ, ಪರಮಾತ್ಮನು ಸ೦ಚಾರಮಾಡುವನು ಎ೦ದರೆ, ದೇಹದ ನೆರಳಿಗೆ, ದೇಹದ ಕ್ರಿಯೆಯನ್ನು ಹೊರತು ಪಡಿಸಿದರೆ ಕ್ರಿಯೆ ಇರುವುದಿಲ್ಲವೂ, ಹಾಗೆಯೇ ಬಿ೦ಬ ಕ್ರಿಯೆ ಇರದ ಹೊರತು ಪ್ರತಿಬಿ೦ಬ ಕ್ರಿಯೆ ಇರುವುದಿಲ್ಲ ಎ೦ದು ದಾಸರು ತಿಳಿಸುತ್ತಾರೆ. ಬಿ೦ಬರೂಪಿಯಾದ ಪರಮಾತ್ಮನು ಸ್ವರೂಪಯೋಗ್ಯತಾನುಸಾರ ವ್ಯಾಪಾರಗಳನ್ನು ಮಾಡಿದರೆ ಜೀವನಾದ ಪ್ರತಿಬಿ೦ಬನೂ ಮಾಡುತ್ತಾನೆ. ಪರಮಾತ್ಮ ತನ್ನ ಸವೋ೯ತ್ತಮತ್ವಾದಿ ಮಹಾತ್ಮೆಯು ಭಕ್ತರಲ್ಲದೇ ಅನ್ಯರಿ೦ದ ಅಚ್ಛಾದಿತವಾದಾಗ ಭಕ್ತರ ದ್ವಾರ ಪ್ರಚುರ ಮಾಡಿಸುವುನಾದ್ದರಿ೦ದ ತಾನು ಭಕ್ತರಾಧೀನನೆನೆಸಿಕೊಳ್ಳುತ್ತಾನೆ.

ಒಡಲ ನೆಳಲಂದದಲಿ - ಭಗವಂತನ ಹಾಗೂ ಭಕ್ತನ ಸಂಬಂಧವು ದೇಹ ಮತ್ತು ನೆರಳಿನ ಸಂಬಂಧದಂತೆ ಶಾಶ್ವತವಾದದ್ದು.  ಈ ದೃಷ್ಟಾಂತದಲ್ಲಿ ಭಗವಂತ ಭಕ್ತನಿಗೆ ನೆರಳಿನಂತೆ ಎಂದಾಗ, ಭಕ್ತನು ಬಿಂಬನಾಗುತ್ತಾನೆ ಮತ್ತು ಭಗವಂತ ಪ್ರತಿಬಿಂಬನಾಗುತ್ತಾನೆ.  ಪ್ರತಿಬಿಂಬವೆಂಬುದು ಸದಾ ಬಿಂಬಕ್ಕೆ ಅಧೀನವಾಗಿರುವಂತಹುದು.  ಬಿಂಬ ಚಲಿಸಿದರೆ ಮಾತ್ರ ಪ್ರತಿಬಿಂಬದಲ್ಲಿ ಚಲನೆಯುಂಟಾಗುವುದು.  ಆದರೆ ವಾಸ್ತವದಲ್ಲಿ ಭಗವಂತನೇ ಬಿಂಬರೂಪಿಯಾಗಿರುವುದು.  ತಾನು ಮಾಡಿ, ಭಕ್ತನಿಂದ ಮಾಡಿಸಿದರೆ ಮಾತ್ರ ಪ್ರತಿಬಿಂಬನಾದ ಭಕ್ತನಲ್ಲಿ ಚಲನೆ ತೋರುವುದು, ಇಲ್ಲದಿದ್ದರೆ ಇಲ್ಲ.  ತಂದೆ ತಾಯಿಗಳು ಮಗುವು ಬೆದರಿ ಅತ್ತಾಗ, ಬಿದ್ದು ಪೆಟ್ಟುಮಾಡಿಕೊಂಡಾಗ, ಕಿರುಚಿಕೊಂಡಾಗ ಮಾತ್ರ ಓಡಿ ಬಂದು ಓಲೈಸುತ್ತಾರೆ.  ಆದರೆ ದಾಸರಾಯರು ಇಲ್ಲಿ ಭಗವಂತನನ್ನು ನಮ್ಮ ದೇಹದ ನೆರಳಿನಂತೆ ಸದಾ ನಮ್ಮೊಡನೆಯೇ ಇರುವವನು ಎಂದು ಬಿಂಬಿಸಿದ್ದಾರೆ.  ಎಲ್ಲಿ ಬೆಳಕಿರುತ್ತದೋ ಅಲ್ಲಿ ಮಾತ್ರ ನೆರಳಿರುತ್ತದೆ.  ಭಗವಂತನು ನೆರಳೂ ಆಗಿದ್ದಾನೆ, ಬಿಸಿಲೂ ಆಗಿದ್ದಾನೆ.  ನಂಬಿದ ಭಕ್ತರಿಗೆ ಬೆಳಕಿನಂತೆ ಜ್ಞಾನ ಕೊಟ್ಟು ಅವರಿಗೆ ಅವರದೇ ಶರೀರದ ನೆರಳಿನಂತಿದ್ದು ಸದಾ ಕಾಪಾಡುತ್ತಾನೆ.  ಆದರೆ ನಂಬದ ತಾಮಸಿಗರಿಗೆ ಬಿಸಿಲಿನ ತಾಪವನ್ನು ಅಧಿಕ ಪಡಿಸುತ್ತಾ ಸುಡುತ್ತಾನೆ.  ಸೂರ್ಯನಿಗೆ ಮುಖ ಮಾಡಿ ನಾವು ನಿಂತಾಗ, ನಮ್ಮ ನೆರಳು ನಮ್ಮ ಹಿಂದಿರುತ್ತದೆ.  ನಮ್ಮ ಮುಂದೆ ಸೂರ್ಯನಾರಾಯಣನಿರುತ್ತಾನೆ, ನಮ್ಮ ಹಿಂದೆ ನಮ್ಮದೇ ನೆರಳಿನಂತಿದ್ದು, ಭಗವಂತನು ನಮ್ಮನ್ನು ರಕ್ಷಿಸುತ್ತಿರುತ್ತಾನೆ.  ನಾವು ಭಗವಂತನಿಗೆ ವಿಮುಖರಾಗಿ, ಸೂರ್ಯನಿಗೆ ಬೆನ್ನು ತಿರುಗಿಸಿ ನಿಂತಾಗ ನಮ್ಮ ನೆರಳು ಎಲ್ಲಿಯೂ ಕಾಣಿಸುವುದೇ ಇಲ್ಲ.  ಭಗವಂತನೂ ಇಲ್ಲ, ನೆರಳೂ ಇಲ್ಲದಂತಾಗುತ್ತದೆ.  ಸಂಸಾರವೆಂಬ ತಾಪತ್ರಯಗಳ ಕೋಟಲೆಯಲ್ಲಿ ಬೆಂದು, ಬಳಲಿ ಅನನ್ಯ ಭಾವದಿಂದ ಭಗವಂತನಿಗೆ ಶರಣಾದರೆ, ಬರಡು ಹಾದಿಯಲ್ಲಿ ಒಂದೇ ಒಂದು ಮರ ತಂಪಾಗಿ ಕಾಣಸಿಗುತ್ತದೆ.  ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡು, ದಣಿವಾರಿಸಿಕೊಳ್ಳುವಂತೆ ಮಾಡಿ, ತಂಪೆರೆದು ಭಗವಂತನು ರಕ್ಷಿಸುತ್ತಾನೆ.  ಶ್ರೀ ಬನ್ನಂಜೆಯವರು ನೆರಳನ್ನು ತಮಸ್ಸು ಅಥವಾ ಕತ್ತಲು ಎಂದೂ ಬೆಳಕನ್ನು ಜ್ಞಾನವೆಂದೂ ವಿಶ್ಲೇಷಿಸಿದ್ದಾರೆ.  ಬೆಳಕಿದ್ದಲ್ಲಿ ಮಾತ್ರ ನೆರಳಿರುತ್ತದೆ.  ಹಾಗೆಯೇ ಭಗವಂತನೆಂಬ ಬೆಳಕಿನ ಜ್ಞಾನ ಯಾರಿಗಿರುತ್ತದೋ, ಅವರಿಗೆ ಭಗವಂತನು ಸ್ವಯಂ ನೆರಳಿನಂತಿದ್ದು ಕಾಪಾಡುತ್ತಾನೆ.  ಬಿಂಬನಾದ ಭಗವಂತನನ್ನು ಪ್ರತಿಬಿಂಬನಾದ ಭಕ್ತನು "ನನ್ನನ್ನು ಹೀಗೇ ಪಾಲಿಸು, ಹೀಗೇ ಲಾಲಿಸು, ಸದಾ ಹೀಗೇ ನನ್ನೊಡನೆ ಇದ್ದು ರಕ್ಷಿಸು, ಬಿಂಬ ಚಲಿಸಿದರೆ ಮಾತ್ರವೇ ಪ್ರತಿಬಿಂಬ ಚಲಿಸುವುದು,  ನನ್ನನ್ನು ನಿನ್ನ ಪ್ರತಿಬಿಂಬವಾಗಿ ಸ್ವೀಕರಿಸಿ, ಸದಾ ಕಾಪಾಡು" ಎಂದು ಕೇಳಿಕೊಳ್ಳಬೇಕು.  ಬಿಂಬನಾದ ಶ್ರೀಹರಿ ಎಲ್ಲರಿಗೂ ಪ್ರತಿಬಿಂಬದಂತೆ ವರ್ತಿಸುತ್ತಾನೆಂದರೆ ಅದು ಅವನ ಕಾರುಣ್ಯದ ಪರಮಾವಧಿ ಮತ್ತು ಉತ್ಕೃಷ್ಟ ಭಕ್ತಪರಾಧೀನತೆಯ ಸಂಕೇತವೆಂದು ತಿಳಿಯಬೇಕು.  
ತತ್ವಸುವ್ವಾಲಿಯಲ್ಲಿ ಶ್ರೀ ಜಗನ್ನಾಥ ದಾಸರು
ತತ್ತತ್ಪದಾರ್ಥದೊಳು ತತ್ತದಾಕಾರನಾಗಿ
ಎತ್ತ ನೋಡಿದರು ಇರುತಿರ್ಪ | ಇರುತಿರ್ಪ ಹರಿಗೆ ನಾ
ಭೃತ್ಯನೆಂಬುವುದೇ ಬಲು ಧರ್ಮ || - ಆಯಾ ವಸ್ತುಗಳಲ್ಲಿ, ಆಯಾ ರೂಪಗಳಲ್ಲಿಯೇ ಎಲ್ಲೆಲ್ಲಿ ನೋಡಿದರೂ, ಅಲ್ಲಿ ಇರುತ್ತಿರುವ ಶ್ರೀಹರಿಗೆ ನಾನು (ಜೀವಿಯು) ಎಂದೆಂದಿಗೂ ಸರ್ವಾಧೀನನು ಮತ್ತು ದಾಸನು.  ಹಾಗೆ ತಿಳಿಯುವುದೇ ಉತ್ತಮವಾದ ಧರ್ಮವು ಎಂದಿದ್ದಾರೆ.
ಎನ್ನಪ್ಪ ಎನ್ನಮ್ಮ ಎನ್ನಯ್ಯ ಎನ್ನಣ್ಣ
ಎನ್ನರಸ ಎನ್ನ ಕುಲದೈವ | ಕುಲದೈವ ಇಹಪರದಿ
ಎನ್ನ ಬಿಟ್ಟಗಲದೇ ಇರು ಕಂಡ್ಯ || -  ನನಗೆ ಅಪ್ಪ, ಅಮ್ಮ, ಅಯ್ಯ, ಅಣ್ಣ, ಅರಸ, ಕುಲದೈವ ಎಲ್ಲವೂ ನೀನೇ, ಇಹದಲ್ಲಿಯೂ ಹಾಗೂ ಪರದಲ್ಲಿಯೂ ಎಂದು ಯಾರು ಭಗವಂತನನ್ನು ಸಂಪೂರ್ಣ ಶರಣಾಗತಿಯಿಂದ ಆರಾಧಿಸುತ್ತಾರೋ, ಅವರನ್ನು ಭಗವಂತ ಒಡಲನೆರಳಂದದಲಿ ಮುಚ್ಚಟೆಯಿಂದ ಕಾಪಾಡುತ್ತಾನೆ ಎಂದಿದ್ದಾರೆ.

ಹರಿ ನಮ್ಮೊಡನೆ ತಿರುಗುವ - ಒಂದರೆಕ್ಷಣವೂ ನಮ್ಮನ್ನು ಬಿಟ್ಟಗಲದೆ ಶ್ರೀಹರಿಯು ನಮ್ಮೊಡನೆಯೇ ಇದ್ದು, ನಮ್ಮೊಡನೆಯೇ ತಿರುಗುತ್ತಾ ನಮ್ಮನ್ನು ರಕ್ಷಿಸುತ್ತಿದ್ದಾನೆ.   ಜೀವಿಯು ತನ್ನ ಕರ್ಮಕ್ಕನುಗುಣವಾಗಿ, ಶಿಥಿಲವಾದ ಹಿಂದಿನ ದೇಹವನ್ನು ಬಿಟ್ಟು ಮತ್ತೊಂದು ಹೊಸ ದೇಹ ಧರಿಸುವಾಗಲೂ, ಭಗವಂತ ಕೂಡ ಜೀವಿಯ ಜೊತೆಗೇ ದೇಹದಿಂದ ದೇಹಕ್ಕೆ ತಿರುಗುತ್ತಾನೆ.  ಜೀವಾತ್ಮನಿಗೂ ಹುಟ್ಟು ಸಾವುಗಳಿಲ್ಲ,  ಪರಮಾತ್ಮನಿಗೂ ಹುಟ್ಟು ಸಾವುಗಳಿಲ್ಲ. ಜೀವ ದೇಹ ಬಿಟ್ಟು ನಿರ್ಗಮಿಸಿದಾಗ ಅದನ್ನು ಸಾವೆಂದೂ, ಮತ್ತೊಂದು ದೇಹದಲ್ಲಿ ಪ್ರವೇಶಿಸಿದಾಗ ಹುಟ್ಟು ಎಂದೂ ಗುರುತಿಸಲ್ಪಡುತ್ತದೆ.  ಇದೇ ಪ್ರಕಾರ ಭಗವಂತನೂ ಕೂಡ ದೇಹದಿಂದ ದೇಹಕ್ಕೆ ತಿರುಗುತ್ತಾನೆ.  ಯಾವ ಕ್ಷಣ ದೇವನು ಶರೀರದಿಂದ ನಿರ್ಗಮಿಸುತ್ತಾನೋ, ಅದು ಜೀವನ ಸಾವಾಗುತ್ತದೆ.  ಸಾವಿನ ದುಃಖ, ಸಂಕಟಗಳೆಲ್ಲಾ ಜೀವಿಗೆ ಮಾತ್ರವೇ ಹೊರತು ಅದು ಭಗವಂತನಿಗಿಲ್ಲ.  ಬಿಂಬನಾದ ಭಗವಂತ ದೇಹದಿಂದ ನಿರ್ಗಮಿಸಿದರೆ, ಪ್ರತಿಬಿಂಬನಾದ ಜೀವನೂ ನಿರ್ಗಮಿಸಲೇಬೇಕು.  ಬಿಂಬ-ಪ್ರತಿಬಿಂಬ ಕ್ರಿಯೆಯಾಗುತ್ತದೆ.  ಬಿಂಬ ಪ್ರತಿಬಿಂಬಗಳಿಗೆ ಪೂರ್ಣವಾಗಿ ಸಾಮ್ಯತೆ ಎಂದಿಗೂ ಇಲ್ಲ.  ಶರೀರಕ್ಕೆ ಕಣ್ಣು, ಮೂಗುಗಳೆಂಬ ಇಂದ್ರಿಯಗಳಿವೆಯೇ ಹೊರತು, ನೆರಳಿಗೆ ಅವುಗಳ್ಯಾವುವೂ ಇಲ್ಲ.  ಆದ್ದರಿಂದಲೇ ಇಲ್ಲಿ ಭಗವಂತನನ್ನು ಒಡಲನೆರಳಂದದಲಿ ಹರಿ ನಮ್ಮೊಡನೆ ತಿರುಗುವ ಎಂದು ದಾಸರಾಯರು ವರ್ಣಿಸಿದ್ದಾರೆ.  ಭಗವಂತನು ಜನ್ಮ ಜನ್ಮಗಳಲ್ಲೂ, ನಮ್ಮೊಡನೆಯೇ ಇದ್ದು ಕಾಪಾಡುವ ತಂದೆ-ತಾಯಿಯು ಎಂಬುದನ್ನು ದಾಸರಾಯರು ತಮ್ಮ ಕೃತಿ "ಸಂತರೆನಬಹುದು ಸಜ್ಜನರಿವರನಾ" ಎಂಬುದರಲ್ಲಿ "ಜನುಮ ಜನುಮಗಳಲ್ಲಿ ಎನಗೆ ಜನನೀ ಜನಕ | ಅನುಜ ತನುಜಾಪ್ತ ಪೋದನ ಭೂಷಣಾ | ಅನಿಮಿತ್ತ ಬಂಧು ಒಬ್ಬನೇ ಎನಿಸುತಿಪ್ಪ ಸ | ಜ್ಜನರಿಗಿಹ ಪರ ಸೌಖ್ಯ ರೂಪನೆಂಬುವರಾ" ಎಂದು ಹೇಳುವುದರ ಮೂಲಕ ಖಚಿತ ಪಡಿಸುತ್ತಾನೆ.  ಭಗವಂತನು ಸದಾ ನಮ್ಮೊಡನೆಯೇ ಇದ್ದು ರಕ್ಷಿಸುತ್ತಾನೆಂಬುದನ್ನು ದಾಸರಾಯರು ತಮ್ಮ ತತ್ವಸುವ್ವಾಲಿಯಲ್ಲಿ

ಏಸೇಸು ಕಲ್ಪ(ಜನ್ಮ)ದಲಿ ಬೇಸರಾಗದೆ ಜೀವ-
ರಾಶಿಗಳಿಗನ್ನ ಕೊಡುತಿರ್ಪ | ಕೊಡುತಿರ್ಪ ನಮ್ಮನ್ನು
ಉದಾಸೀನ ಮಾಡಿ ಬಿಡುವೋನೆ || - ಸ್ವಲ್ಪವೂ ಬೇಸರ ಪಡದೆ ಭಗವಂತನು ಪ್ರತಿ ಜನ್ಮದಲ್ಲಿಯೂ ನಮ್ಮೊಡನಿದ್ದು, ನಮಗನ್ನವನ್ನು ಒದಗಿಸುತ್ತಿದ್ದಾನಾದ್ದರಿಂದ ಈಗಲೂ ನಮ್ಮನ್ನು ಉದಾಸೀನ ಮಾಡದೆ ಕಾಪಾಡುವನು ಎನ್ನುತ್ತಾರೆ.  ಮುಂದುವರೆಯುತ್ತಾ
ಹಿಂದೆ ಜನ್ಮಾಂತರದಿ ತಂದು ಕೊಟ್ಟವರಾರು
ಇಂದು ಮುಂದೀಪ ಪ್ರಭುವಾರು | ಪ್ರಭುವಾರು ಎಲೆ ಮನವೆ
ಮಂದಮತಿಯಾಗಿ ಕೆಡಬೇಡ || -  ಜನ್ಮಜನ್ಮಾಂತರಗಳಿಂದಲೂ ಬೇಕು ಬೇಡಗಳನ್ನೆಲ್ಲಾ ಒದಗಿಸಿಕೊಟ್ಟು ಕಾಪಾಡಿದವನಾದ ಪ್ರಭುವು ಭಗವಂತನೇ ಎಂಬುದನ್ನು ಮಂದಮತಿಯಾಗಿ (ಅಹಂ ಎಂಬ ಅಹಂಕಾರದಲ್ಲಿ) ಮರೆತು ಬಿಡಬೇಡ ಎಂದು ಜೀವನಿಗೆ ಆದೇಶಿಸುತ್ತಾರೆ.

ಭಗವಂತನು ನಮಗೆ ಎಂದಿಗೂ ಅನಿಮಿತ್ತ ಬಂಧುವೇ ಆಗಿದ್ದಾನೆಂಬುದನ್ನು
ಎನಗೆ ನಿನ್ನಲಿ ಭಕುತಿ ಇನಿತಿಲ್ಲದಿದ್ದರೂ
ಅನಿಮಿತ್ತಬಂಧು ಸಲಹೂವಿ | ಸಲಹೂವಿ ಸರ್ವದಾ
ಎಣೆಗಾಣೆ ನಿನ್ನ ಕರುಣಕ್ಕೆ || - ಭಗವಂತನಿಗೆ ಯಾರಲ್ಲಿಯೂ ದ್ವೇಷವಾಗಲೀ, ತಾರತಮ್ಯವಾಗಲಿ ಇಲ್ಲವೇ ಇಲ್ಲ.  ನಾವು ಅವನಲ್ಲಿ ಭಕುತಿಯನ್ನು ಮಾಡದಿದ್ದರೂ, ಅವನು ನಮಗಾಗಿಯೇ ಸುಂದರವಾದ ಪ್ರಪಂಚವನ್ನು ಸೃಷ್ಟಿಸಿದ್ದಾನೆ.   ಯಾರ ಅನುಮತಿಗೂ ಕಾಯದೆ ಉಪಯೋಗಿಸಲು ಯಥೇಚ್ಛವಾಗಿ ಗಾಳಿ, ನೀರು, ಬೆಳಕು ಎಲ್ಲವನ್ನೂ ದಯಪಾಲಿಸಿದ್ದಾನೆ.  ಹೀಗೆ ಕೇಳದೆಯೇ ಸೌಲಭ್ಯಗಳನ್ನು ಕೊಟ್ಟಿದ್ದೂ ಅಲ್ಲದೆ, ಬೇಡಿದ್ದನ್ನೂ ಕೊಟ್ಟು ಸದಾ ರಕ್ಷಿಸುತ್ತಾನಾದ್ದರಿಂದಲೇ ಭಗವಂತ ನಮಗೆ ಅನಿಮಿತ್ತ ಬಂಧುವಾಗಿದ್ದಾನೆ ಎಂದಿದ್ದಾರೆ.

ಒಳಹೊರಗೆ ನೀನಿದ್ದು ತಿಳಿಯಗೊಡದೆ ಜಗವ
ಹಲವು ಕರ್ಮಗಳ ನೀ ಮಾಡಿ | ನೀ ಮಾಡಿ ಮಾಡಿಸುತ
ಫಲಗಳನೀವೆ ಜನರೀಗೆ || - ಹರಿನಮ್ಮೊಡನೆ ತಿರುಗುವ ಎನ್ನುವ ಮಾತಿಗೆ ಪುಷ್ಟಿಕೊಡುವಂತೆ ತತ್ವಸುವ್ವಾಲಿಯಲ್ಲಿ ಒಳಗೂ, ಹೊರಗೂ ನೀನಿದ್ದು, ಎಷ್ಟು ಜನ್ಮಗಳನ್ನೆತ್ತಿದೆನೋ, ಯಾವ ಯಾವ ತಾಪತ್ರಯಗಳ ಕೋಟಲೆಗಳನ್ನು ದಾಟಿ ಬಂದೆನೋ, ಅದ್ಯಾವುದೂ ಅರಿವಾಗದಂತೆ, ಹಲವಾರು ಸುಕರ್ಮಗಳನ್ನು ನೀನು ಮಾಡಿ, ನಮ್ಮಿಂದ ಮಾಡಿಸುತ್ತಿದ್ದೀಯ.  ಅದರ ಫಲಗಳನ್ನು ಮಾತ್ರ ನೀನು ತೆಗೆದುಕೊಳ್ಳದೆ, ನಮಗೇ ಕೊಟ್ಟು ಬಿಟ್ಟಿದ್ದೀಯ ಎಂದಿದ್ದಾರೆ.

ಒಂದರೆಕ್ಷಣ ಬಿಡದೆ ಬೆಂಬಲನಾಗಿ - ಜನ್ಮ ಜನ್ಮಾಂತರಗಳಲ್ಲೂ ಶ್ರೀಹರಿ ನಮ್ಮೊಡನೆಯೇ, ನಮ್ಮೊಳಗೇ ಇದ್ದು ಪ್ರತಿ ಕ್ಷಣವೂ ರಕ್ಷಿಸುತ್ತಿರುವನೆಂಬುದು ಸತ್ಯವಾದ ವಿಷಯ.  ಪ್ರತೀ ಬಾರಿ ಜೀವನು ದೇಹ ಬದಲಿಸಬೇಕಾದಾಗಲೂ ಭಗವಂತನು ಕೂಡ ಜೀವನ ಜೊತೆಗೆ ಶಿಥಿಲವಾದ ದೇಹದಿಂದ ಹೊರ ನಡೆದು ಹೊಸತೊಂದು ಶರೀರದೊಳಗೆ ಸೇರುತ್ತಾನೆ.  ಜೀವನು ದೇವನ ಅರಿವನ್ನು ಮರೆತು ಅಜ್ಞಾನಿಯಾದರೂ ಕೂಡ ಭಗವಂತನು ಜೀವನನ್ನು ಎಂದಿಗೂ ಮರೆಯುವುದೂ ಇಲ್ಲ, ಉದಾಸೀನ ಮಾಡುವುದೂ ಇಲ್ಲ.  ಸರ್ವ ವ್ಯಾಪ್ತನಾದ ಶ್ರೀಹರಿಯು ಜೀವನ ರಕ್ಷಣೆಯನ್ನು ಹಿಂದೆ ಮುಂದೆ, ಎಡ ಬಲ ಎಲ್ಲ ಕಡೆಯೂ ಇದ್ದು, ಜೀವನ ಒಳಗೂ, ಹೊರಗೂ ಇದ್ದು ಸದಾ ರಕ್ಷಿಸುತ್ತಿರುತ್ತಾನೆಂಬ ಮಾತನ್ನು ದಾಸರಾಯರು ತಮ್ಮ ಫಲವಿದು ಬಾಳ್ದುದಕೆ ಎಂಬ ಕೃತಿಯಲ್ಲಿ
ಒಂ-ದು ರೂಪದೊಳನಂತ ರೂಪವು
ಪೊಂದಿಪ್ಪವು ಗುಣಗಣ ಸಹಿತ
ಹಿಂದೆ-ಮುಂದೆ ಎಂದೆಂದಿಗೂ ಶ್ರೀ ಗೋ-
ವಿಂದಗೆ ಸರಿ ಮಿಗಿಲಿಲ್ಲೆಂತೆಂಬುದೆ || - ಭಗವಂತನ ಗುಣ ರೂಪಗಳು ಅನಂತ ಮಾತ್ರವೇ ಅಲ್ಲ, ಆ ಅನಂತಗಳಲ್ಲಿ ಮತ್ತೆ ಅನಂತ ರೂಪಗಳಿವೆ.  ಸಂಪೂರ್ಣ ಬ್ರಹ್ಮಾಂಡವನ್ನೇ ವ್ಯಾಪಿಸಿರುವ ಒಂದು ರೂಪವಾದರೆ, ಹಿಂದಿನ ಬ್ರಹ್ಮಾಂಡಗಳು, ಮುಂದೆ ಬರಬೇಕಾದ ಬ್ರಹ್ಮಾಂಡಗಳೆಲ್ಲದರಲ್ಲೂ ಭಗವಂತನ ಅನಂತ ರೂಪಗಳಿವೆ.  ಒಂದೊಂದು ಬ್ರಹ್ಮಾಂಡದಲ್ಲೂ ಅನಂತ ವಸ್ತುಗಳು, ಪದಾರ್ಥಗಳು, ಜೀವ ರಾಶಿಗಳೂ ಇವೆ.  ಅವೆಲ್ಲವುಗಳಲ್ಲೂ ಭಗವಂತನ ಒಂದೊಂದು ರೂಪಗಳಿವೆ.  ಜೀವನನ್ನು ವ್ಯಾಪಿಸಿರುವ ರೂಪವೂ ಒಂದಾದರೆ, ಜೀವನ ಅಂಗಾಂಗಗಳಲ್ಲಿಯೂ, ನರನಾಡಿಗಳಲ್ಲಿಯೂ ಅನಂತಾನಂತ ರೂಪಗಳಿಂದ ವ್ಯಾಪಿಸಿದ್ದಾನೆ.  ಇದನ್ನೇ ದಾಸರಾಯರು ತಮ್ಮ ತತ್ವಸುವ್ವಾಲಿಯಲ್ಲಿ "ನಾನಾ ಪದಾರ್ಥದೊಳು ನಾನಾ ಪ್ರಕಾರದಲ್ಲಿ ನೀನಿದ್ದು ಜಗವ ನಡೆಸುವಿ" ಎಂದು ಸ್ತುತಿಸಿದ್ದಾರೆ.  ದಾಸರಾಯರು ತಮ್ಮ "ಪಿಡಿ ಎನ್ನ ಕೈಯ್ಯ ರಂಗಯ್ಯ" ಎಂಬ ಕೃತಿಯಲ್ಲಿ ಭಗವಂತನನ್ನು "ಅನಿಮಿತ್ತ ಬಂಧೋ ನೀನೇ ಗತಿ ಗುಣ ಗಣ ಸಿಂಧೋ" ಎಂದೂ ಇನ್ನೊಂದು ಕೃತಿ "ನಮೋ ನಮಸ್ತೇ ನರಸಿಂಹ ದೇವಾ | ಸ್ಮರಿಸುವವರ ಕಾವಾ" ಎಂಬುದರಲ್ಲಿ "ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ | ನಿನಗೆ ಬಿನ್ನೈಸುವೆ" ಎನ್ನುತ್ತಾ ಭಗವಂತನು ನಮ್ಮನ್ನು ಒಂದರೆಕ್ಷಣ ಬಿಡದೆ ಬೆಂಬಲನಾಗಿ, ಅನಿಮಿತ್ತ ಬಂಧುವಾಗಿ, ನಮ್ಮೊಡನೆಯೇ ತಿರುಗುತ್ತಿರುತ್ತಾನೆ ಎಂದಿದ್ದಾರೆ.  ಇನ್ನೊಂದು ಕೃತಿ "ಅಪಮೃತ್ಯು ಪರಿಹರಿಸೊ ಅನಿಲದೇವಾ | ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು" ಎಂಬುದರಲ್ಲಿ ಭಗವಂತನು ಭಕ್ತರನ್ನು ಒಂದರೆಕ್ಷಣವೂ ಬಿಟ್ಟಿರುವುದಿಲ್ಲವೆಂಬುದನ್ನು "ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು | ಎನಗಿಲ್ಲವಾವಾವ ಜನ್ಮದಲ್ಲಿ | ಅನುದಿನ ನೀನೆಮ್ಮನುದಾಸೀನ ಮಾಡುವುದು | ಅನುಚಿತವು ಜಗಕೆ ಸಜ್ಜ ಶಿಖಾಮಣಿಯೆ" ಎನ್ನುತ್ತಾ ಭಕ್ತರ ಹಾಗೂ ಭಗವಂತನ ಸಂಬಂಧದ ತೀವ್ರತೆಯನ್ನು ತೋರಿಸಿದ್ದಾರೆ.

ಭಕ್ತಾಧೀನನೆಂದೆನಿಸಿ -  ಭಗವಂತನು ಭಕ್ತರಾಧೀನನೆಂಬುದನ್ನು ದಾಸರಾಯರು ಕರುಣಾಸಂಧಿಯಲ್ಲಿ ವಿಧವಿಧವಾಗಿ ವರ್ಣಿಸಿದ್ದಾರೆ.  ಪುಂಡರೀಕ, ಸುಧಾಮ, ಶಿಶುಪಾಲ, ಭೀಷ್ಮಾಚಾರ್ಯರ ದೃಷ್ಟಾಂತಗಳನ್ನು ಕೊಟ್ಟು, ಸದುಪಾಸನೆಯಿಂದ ಭಗವಂತನನ್ನು ಒಲಿಸಿಕೊಂಡಲ್ಲಿ, ಭಕ್ತಿಗೆ ಒಲಿದು ತನ್ನನ್ನೇ ಕೊಟ್ಟು ಬಿಡುವನು ಎಂಬುದನ್ನು ನಿರೂಪಿಸಿದ್ದಾರೆ.  ತನಗಾಗಿ ಏನನ್ನೂ ಮಾಡಿಕೊಳ್ಳದೆ, ಸಕಲವನ್ನೂ ಭಕ್ತರಿಗಾಗಿಯೇ ಸೃಷ್ಟಿಸಿ, ತಾನೂ ಎಲ್ಲ ವಸ್ತುಗಳಲ್ಲೂ, ಜೀವರಾಶಿಯಲ್ಲೂ ನೆಲೆಸಿ, ಆನಂದಿಸುತ್ತಾನೆ.  ಅವರವರ ಯೋಗ್ಯತೆಗೆ ಅನುಸಾರವಾಗಿ ಆನಂದವನ್ನು ಕೊಟ್ಟು ಕಾಪಾಡುತ್ತಾನೆ.  ಭಗವಂತ ಮಾಡಿರುವ ಅತಿಶಯವಾದ ಸೃಷ್ಟಿಯೊಂದೇ ಅಲ್ಲ, ಭಗವಂತನ ಅಪಾರ ಕಾರುಣ್ಯವು, ಅನಂತ ಗುಣಗಳೂ ಭಕ್ತರಿಗಾಗಿಯೇ, ಭಕ್ತರಿಂದಲೇ ಪ್ರಕಟವಾಗುತ್ತವೆ.  ಭಕ್ತರು ಭಗವಂತನನ್ನು ದೀನನಾಗಿ ಮೊರೆಯಿಡದಿದ್ದರೆ, ಭಗವಂತನ ಕಾರುಣ್ಯವು ಹೇಗೆ ವ್ಯಕ್ತವಾಗಬೇಕು.  ಗಜೇಂದ್ರನು ಹತ್ತು ಸಾವಿರ ವರ್ಷಗಳ ಕಾಲ ತಾನೇ ಹೋರಾಡಿ, ಮೊಸಳೆಯಿಂದ ಬಿಡುಗಡೆಯಾಗದಿದ್ದಾಗ, ದೀನನಾಗಿ ಮೊರೆಯಿಟ್ಟ.  ಕಾರುಣ್ಯನಿಧಿ ಶ್ರೀಹರಿಯು "ಕರಿ ಹರಿ ಎನ್ನಲು ಮೊರೆಯ ಲಾಲಿಸಿ" ಧಾವಿಸಿ ಬಂದು ರಕ್ಷಿಸಿದವನು.  ಇದರಿಂದ ಭಗವಂತನ ಕಾರುಣ್ಯದ ಗುಣ ಲೋಕಕ್ಕೇ ವ್ಯಕ್ತವಾಯಿತು. ಶ್ರೀ ಜಗನ್ನಾಥ ದಾಸರು ತಮ್ಮ ಒಂದು ಕೃತಿ "ಇದನೆ ಪಾಲಿಸು ಜನ್ಮ ಜನ್ಮಗಳಲಿ" ಎಂಬುದರಲ್ಲಿ "ಪುಣ್ಯಪಾಪ ಜಯಾಪಜಯ ಕೀರ್ತಿ ಅಪಕೀರ್ತಿ | ಮನ್ಯುಮೋಹಾಸಕ್ತಿ ಕಾಮಲೋಭ | ನಿನ್ನಾಧೀನವು ಎನ್ನದಲ್ಲವೆಂದಿಗು" ಎಂದಿದ್ದಾರೆ.  ಇನ್ನೊಂದು ಕೃತಿ "ನಿನ್ನ ಸಂಕಲ್ಪಾನುಸಾರ ಮಾಡೋ | ಎನ್ನ ಸಾಕುವ ದೊರೆಯೆ ತಿಳಿದು ನೀ ನೋಡೋ" ಎನ್ನುವುದರಲ್ಲಿ "ಜನರೊಳಗೆ ನೀನಿದ್ದು ಜನ್ಮಗಳಲ್ಲಿ | ಗುಣಕಾಲಕರ್ಮ ಸ್ವಭಾವಂಗಳಾ | ಅನುಸರಿಸಿ ಪುಣ್ಯ ಪಾಪಗಳ ಮಾಡಿಸಿ ಫಲಗ | ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು " ಎಂದು ಭಗವಂತನ ಕಾರುಣ್ಯವನ್ನೂ, ಅವನು ಭಕ್ತಾಧೀನನೆಂಬುದನ್ನೂ ವಿವರಿಸಿದ್ದಾರೆ.  ಇನ್ನೊಂದು ಕೃತಿ "ಶ್ರೀ ವೆಂಕಟಾಚಲ ನಿವಾಸ ನಿನ್ನ | ಸೇವಾನುಸೇವಕರ ದಾಸಾ ಎನಿಸಿ" ಎಂಬುದರಲ್ಲಿ "ಅನಿಮಿತ್ತ ಬಂಧು ನೀಯೆನ್ನ ಬಿಡುವುದನುಚಿತವೋ ಲೋಕಪಾವನ್ನಚರಿತ" ಎನ್ನುತ್ತಾ "ನೀನಲ್ಲದೆನಗೆ ಗತಿಯಿಲ್ಲ ಪವ | ಮಾನವಂದಿತ ಕೇಳೋ ಸೊಲ್ಲ ಎನ್ನ | ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ | ಧೀನವಲ್ಲವೆ ಲಕ್ಷ್ಮೀನಲ್ಲಾ" ಎನ್ನುತ್ತಾರೆ.  ಹೀಗೆ ಅರ್ತಿಯಿಂದ ಶರಣಾದವರಿಗೆ ಭಗವಂತನು ತನ್ನನ್ನೇ ಕೊಟ್ಟು, ಭಕ್ತಿಗೆ ಅಧೀನನಾಗಿ ಬಿಡುತ್ತಾನೆ.   ಭಕ್ತರು ಹೇಗೆ ಬಿಂಬನಾದ ಭಗವಂತನಿಗೆ ಸಂಪೂರ್ಣ ಅಧೀನರಾಗಿದ್ದಾರೋ, ಹಾಗೇ ಭಗವಂತನೂ ಕೂಡ ಭಕ್ತರ ಅಪರಿಮಿತ ಭಕ್ತಿಗೆ ಅಧೀನನಾಗಿದ್ದಾನೆ.  ಕರು ತಾಯಿಯ ಹಾಲು ಕುಡಿಯಲು ಕೆಚ್ಚಲನ್ನು ಗುದ್ದುತ್ತದೆ, ಕಂದನ ಸ್ಪರ್ಶ ಮಾತ್ರದಿಂದಲೇ ತಾಯ ಕೆಚ್ಚಲಲ್ಲಿ ಹಾಲು ಸುರಿಯಲಾರಂಭಿಸುತ್ತದೆ.  ಹಾಗೇ ಭಕ್ತನೆನಿಸಿಕೊಂಡವನು ತನ್ನ ನಾಲಿಗೆಯಿಂದ ಶ್ರೀಹರಿಯ ಸ್ಮರಣೆ / ಜಪ ಮಾಡಿದರೆ ಮಾತ್ರವೇ ಭಗವಂತನ ಕಾರುಣ್ಯ ಸುಧೆ ಹರಿಯಲಾರಂಭಿಸುವುದು.  ಕಾರುಣ್ಯಸುಧೆ ಹರಿದಾಗ ಮಾತ್ರವೇ ಅವನಿಗೆ ಕರುಣಾಸಾಗರನೆಂಬ ಬಿರುದು ಸಲ್ಲುವುದು.  ಹೀಗೆ ಭಕ್ತರಿಂದಲೇ ಭಗವಂತನ ಗುಣಗಳು ಕೂಡ ಶೋಭಿಸುವುದು.  ಭಕ್ತರು ತನ್ನ ನಾಮ ಸ್ಮರಣೆ ಮಾಡಿದಾಗ ಭಗವಂತ ಅಧೀನನಾದರೆ, ಭಕ್ತರು ಸಕಲ ಅರ್ಥಗಳಲ್ಲೂ ಎಂದೆಂದಿಗೂ ಭಗವಂತನ ಅಧೀನರೇ ಆಗಿದ್ದಾರೆ. 

ದಾಸರಾಯರು ತತ್ವಸುವ್ವಾಲಿಯಲ್ಲಿ

ಹಗಲು ಇರುಳು ಸ್ಮರಣೆ ಒದಗುತಿರೆ ಜಿಹ್ವೆಯೊಳು
ಬಗೆಯಲಿನ್ನುಂಟೆ ಸಾಧನಗಳು | ಸಾಧನಗಳೇತಕ್ಕೆ
ಜಗದೊಳಗೆ ಇನ್ನು ಅವರಿಗೆ || - ಸದಾ ನಾಲಿಗೆಯ ಮೇಲೆ ಭಗವಂತನ ನಾಮ ಸ್ಮರಣೆ ಇರುವವರಿಗೆ ಬೇರೆ ಯಾವ ಸಾಧನೆಗಳೂ ಬೇಡವೆಂಬ ಅರ್ಥವಲ್ಲ.  ಅಪರೋಕ್ಷ ಜ್ಞಾನಿಗಳೂ, ಮೋಕ್ಷ ನಿಶ್ಚಿತರಾದವರೂ ಕೂಡ, ಸದಾಕಾಲವೂ ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಲೇ ಇರಬೇಕು.  ಹೀಗೆ ಮಾಡುವುದರಿಂದ ಅವನ ಅನಂತ ಗುಣಗಳನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳಲಾಗುತ್ತದೆ.  ಮೋಕ್ಷದಲ್ಲಿ ಸಿಗುವ ಆನಂದವನ್ನು ಕೂಡ ಭಗವಂತ ಅನೇಕ ಪಟ್ಟು ಅಧಿಕವಾಗಿ ಕೊಡುತ್ತಾನೆ ಎಂದು ತಿಳಿಯಬೇಕು ಎನ್ನುತ್ತಾರೆ.

ತಡೆವ ದುರಿತೌಘಗಳ - ಭಗವಂತನು ಸರ್ವ ವ್ಯಾಪ್ತನಾದವನು.  ಎಲ್ಲಾ ಜೀವರಾಶಿಗಳಲ್ಲೂ, ತಾನಿದ್ದು, ತಾನು ಮಾಡಿ ನಮ್ಮಿಂದ ಮಾಡಿಸುತ್ತಾನೆ.  ನಮ್ಮ ಯೋಗ್ಯತಾನುಸಾರವಾಗಿ ನಮ್ಮಿಂದ ಕರ್ಮಗಳು ನಡೆಯುವಂತೆ ಮಾಡುತ್ತಾನೆ.  ಹೀಗೆ ಭಕ್ತರು ನಿಯಮದಂತೆ ಮಾಡುವ ವಿಧಿವಿಧಾನಗಳಿಗೆ ತಕ್ಕುದಾದ ಪುಣ್ಯಫಲಗಳನ್ನು ಜೀವಿಗಳಿಗೇ ಉಣ್ಣಿಸುತ್ತಾನೆ.  ಸುಖ ದುಃಖಗಳ ಬಾಧ್ಯತೆ ಜೀವಿಗೆ ಆಗುವುದೇ ಹೊರತು ದೇವನಿಗಲ್ಲ.  ಜೀವಿಗಳು ಭಗವಂತನಿಗೆ ವಿಮುಖರಾಗಿದ್ದರೆ, ನಮ್ಮನ್ನು ರಕ್ಷಿಸುವವರು ಬೇರೆ ಯಾರೂ ಇರುವುದಿಲ್ಲ.  ಎಲ್ಲರನ್ನೂ, ಎಲ್ಲಾ ಕಾಲದಲ್ಲಿಯೂ, ಎಲ್ಲಾ ರೀತಿಯಿಂದಲೂ ಕಾಪಾಡುವವನು ಭಗವಂತನೊಬ್ಬನೇ.  ಹಾಗೆಂದರೆ ಈ ಮಾತಿಗೆ ಭಗವಂತ ಅನಿರ್ದಿಷ್ಟವಾಗಿ, ಸರ್ವರನ್ನೂ ಕಾಪಾಡುತ್ತಾನೆಂದು ಅರ್ಥವಲ್ಲ.  ಭಗವಂತನ ಕಾರುಣ್ಯ ಆಯಾ ಜೀವಿಗಳಿಗೆ ಅವರವರ ಯೋಗ್ಯತಾನುಸಾರವಾಗಿ ಮಾತ್ರವೇ ಲಭಿಸುವುದು ಎಂದರ್ಥವಾಗುತ್ತದೆ.   ಸಣ್ಣ ಸಾಮರ್ಥ್ಯದ ವಿದ್ಯುತ್ ಬಲ್ಬಿನಲ್ಲಿ ಹೆಚ್ಚಿನ ವಿದ್ಯುಚ್ಚಕ್ತಿ ಹರಿಸಿದಾಗ, ಅದು ತಡೆದುಕೊಳ್ಳಲಾಗದೆ ಸುಟ್ಟು ಕರಕಲಾಗುತ್ತದೆ.  ಹಾಗೇ ಯಾರಿಗೆ ಎಷ್ಟು ಮಾತ್ರ ಲಭ್ಯವಿದೆಯೋ ಅಷ್ಟನ್ನು ಮಾತ್ರ ಭಗವಂತನು ಕರುಣಿಸುತ್ತಾನೆ.   ದಾಸರಾಯರು ತಮ್ಮ "ದಾಸೋಹಂ ತವ ದಾಸೋಹಂ" ಎಂಬ ಕೃತಿಯಲ್ಲಿ ಭಗವಂತನನ್ನು "ಕರ್ಮಬಂಧ ಮಹಕರ್ಮ ವಿಮೋಚಕ ಕರ್ಮನಿಗ್ರಹ ವಿಕರ್ಮನಾಶತವ" ಎಂದು ವರ್ಣಿಸುತ್ತಾ ಜೀವಿಯು ಅನುಭವಿಸುವ ಎಲ್ಲಾ ಕರ್ಮಗಳನ್ನೂ ನಿಗ್ರಹಿಸುವವನೂ, ನಾಶಪಡಿಸುವವನೂ ಭಗವಂತನೊಬ್ಬನೇ ಎಂದು ತಿಳಿಸಿದ್ದಾರೆ. 

ದಾಸರಾಯರು ತತ್ವಸುವ್ವಾಲಿಯಲ್ಲಿ
ಕರ್ತೃ ಕರ್ಮಗಳಲ್ಲಿ ಕಾರಣಕ್ರಿಯೆಗಳಲಿ
ನಿತ್ಯ ನೀನಿದ್ದು ನಡೆಸೂವೆ | ನಡೆಸೂವಿ ಜೀವರ
ಕೃತಕೃತ್ಯರನು ಮಾಡಿ ಸಲಹೂವಿ || - ಕರ್ತೃನಲ್ಲಿ, ಕರ್ಮಗಳಲ್ಲಿ, ಕಾರಣ ಕ್ರಿಯೆಗಳಲ್ಲಿ, ದೇಹೇಂದ್ರಿಯಗಳಲ್ಲಿ, ಕಾಲದಲ್ಲಿ, ಎಲ್ಲದರಲ್ಲೂ ನೀನೇ ಅಂತರ್ಯಾಮಿಯಾಗಿದ್ದು, ಮಾಡಿ ಮಾಡಿಸುವೆ.  ಜೀವರಿಗೆ ಸುಫಲಗಳನ್ನು ಕೊಟ್ಟು, ಅವರನ್ನು ಕೃತಕೃತ್ಯರನ್ನಾಗಿ ಮಾಡುವೆ ಎಂದಿದ್ದಾರೆ.
ಅಧಿಭೂತ ಅಧ್ಯಾತ್ಮ ಅಧಿದೈವ ತಾಪ ಕಳೆ-
ಯುವುದು ನಿನ್ನ ದಿವ್ಯತ್ರಯನಾಮ | ತ್ರಯನಾಮ ಸರ್ವದಾ
ಒದಗಲೊ ಬಂದು ವದನಕ್ಕೆ || - ಸರ್ವ ವಿಧದ ತಾಪತ್ರಯಗಳನ್ನೂ ಕಳೆದು ರಕ್ಷಿಸುವವನು ನೀನೇ ಎಂದಿದ್ದಾರೆ.

ಕಾಮದ ಕೊಡುವ ಸಕಲೇಷ್ಟಗಳ ಸಂತತ - ಕಾಮದ ಎಂದರೆ ಬೇಡಿದ್ದನ್ನೆಲ್ಲಾ ಕೊಡುವವನು ಎಂದರ್ಥವಾಗುತ್ತದೆ.  ಭಗವಂತನು ನಮಗೆ ತಾಯಿ-ತಂದೆಯಾದ್ದರಿಂದ ಬೇಡಿದ್ದನ್ನು ಕೊಡುವುದರ ಜೊತೆಗೇ ಬೇಡದೆ ಇದ್ದ ಅನೇಕ ಅಗತ್ಯಗಳನ್ನು ಪೂರೈಸಿ ಜೀವಿಗೆ ಅನುಕೂಲ ಮಾಡಿಕೊಟ್ಟಿದ್ದಾನೆ.  ಮಗುವಿಗೆ ತನಗೇನು ಬೇಕು ಎಂದು ಗೊತ್ತಿರುವುದಿಲ್ಲ.  ಹಸಿವಾದರೂ ಅಳುತ್ತದೆ, ನಿದ್ರೆ ಬಂದರೂ ಅಳುತ್ತದೆ, ನೋವಾಗಲೀ, ಬೇಸರವಾಗಲೀ, ಎಲ್ಲದಕ್ಕೂ ಅಳುವುದೊಂದೇ ಗೊತ್ತಿರುವುದು.  ಆದರೆ ತಾಯಿಯಾದವಳಿಗೆ ತನ್ನ ಪುಟ್ಟ ಕಂದ ಯಾವಾಗ ಯಾವುದಕ್ಕಾಗಿ ಅಳುತ್ತಾನೆ, ಯಾವುದರ ಅವಶ್ಯಕತೆ ಆ ಸಮಯದಲ್ಲಿ ಇದೆ ಎಂಬುದನ್ನು ತಿಳಿದು, ಅದನ್ನು ಕೊಟ್ಟು, ಸಂತೈಸುತ್ತಾಳೆ.  ಮಗು ಕೇಳದೆಯೇ ಅಪಾರ ಮಮತೆ, ಅಕ್ಕರೆಯ ಧಾರೆಯನ್ನೇ ಹರಿಸುತ್ತಾಳೆ.  ಯಾವಾಗಲೂ ಮಗುವಿನ ನೆಮ್ಮದಿಗಾಗಿ ಸುಖಕ್ಕಾಗಿ ಅನುಕೂಲಗಳನ್ನು ಮಾಡುತ್ತಲೇ ಇರುತ್ತಾಳೆ.  ಭಗವಂತನು ಹಾಗೆಯೇ ಅಪಾರ ಕರುಣೆ, ವಾತ್ಸಲ್ಯದಿಂದ ತನ್ನ ಭಕ್ತರ ಸುಖಕ್ಕಾಗಿ ಅನುಕೂಲಗಳನ್ನು ಒದಗಿಸಿ, ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತಲೇ ಇರುತ್ತಾನೆ.  ಕಾಮದ ಎನ್ನುವ ಪದದಲ್ಲಿ "ಕಾ" ಎಂಬ ಅಕ್ಷರವನ್ನು ಕಾ+ಅಮ್ ಎಂದು ಬಿಡಿಸಿದಾಗ, ಕಾ ಎಂದರೆ ಆನಂದ ಮತ್ತು ಅಮ ಎಂದರೆ ಕೊಡುವವನು ಎಂದರ್ಥವಾಗುತ್ತದೆ.  ಜ್ಞಾನಿಗಳಿಗೆ ಸದಾ ಕಾಲವೂ ಆನಂದವನ್ನು ಕೊಡುವವನೇ ಕಾಮದನೆನಿಸಿಕೊಳ್ಳುತ್ತಾನೆ.  ಹಾಗೇ ಅಜ್ಞಾನಿಗಳಿಗೂ, ಅದರಲ್ಲೇ ಆನಂದ ಕೊಡುವವನು ಎನ್ನಿಸಿಕೊಳ್ಳುತ್ತಾನೆ.  ಭಗವಂತ ಯಾರು ಯಾವುದನ್ನು ಬೇಡಿದರೆ ಅದನ್ನೇ ಕೊಟ್ಟು ಆನಂದಪಡಿಸುತ್ತಾನೆ.

ವಿಷ್ಣು ಸಹಸ್ರನಾಮದಲ್ಲಿ "ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ" ಎಂಬ ಉಲ್ಲೇಖವಿದೆ.  ಸರ್ವಕಾಮದಃ ಎಂದರೆ ಎಲ್ಲರ ಇಷ್ಟಗಳನ್ನು ಅಥವಾ ಎಲ್ಲಾ ಇಷ್ಟಗಳನ್ನೂ ನೀಡುವವನು ಎಂದಾಗುತ್ತದೆ.  ನಮಗೆ ನಿಜವಾಗಲೂ ನಮ್ಮ ನಿಜವಾದ ಕಾಮನೆ ಏನು ಎಂಬುದೇ ತಿಳಿದಿಲ್ಲ.  ಮಕ್ಕಳಂತೆ ಅರಿವಿಲ್ಲದೆ, ಆರೋಗ್ಯಕ್ಕೆ ಹಾನಿಕರವಾದ್ದನ್ನೆಲ್ಲಾ, ಕಾಮನೆಗೆ ಬಲಿಯಾಗಿ ಬಯಸುತ್ತೇವೆ, ಹಟಮಾಡಿ ಆಪತ್ತು ತಂದುಕೊಳ್ಳುತ್ತೇವೆ.  ಆದ್ದರಿಂದ ಸರ್ವಕಾಮದನಾದ ಭಗವಂತನಲ್ಲಿ ನಾವು ಏನನ್ನೂ ಬೇಡದೆ ಶರಣಾಗತರಾಗಬೇಕು.  ತಾಯಿಯಂತೆ ಭಗವಂತನಿಗೂ ನಮಗೇನು ಬೇಕು ಎನ್ನುವುದು ತಿಳಿದಿರುವುದು ಮತ್ತು ಅವನು ಅದನ್ನು ಕೊಡುವನು.  ಧರ್ಮಕ್ಕೆ ವಿರೋಧವಾದದ್ದನ್ನು ಬಯಸಿ ನಮ್ಮ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬಾರದು.  ಬಯಸಿದರೂ ಪರಮಾತ್ಮನ ದರ್ಶನವನ್ನೂ, ಮುಕ್ತಿಯನ್ನೂ ಬೇಡಬೇಕು.  ಇದನ್ನೇ ತಮ್ಮ ಜೀವಿತದ ಕಾಮನೆಯಾಗುಳ್ಳವರು, ಭಗವಂತ ಪರೀಕ್ಷೆಗಾಗಿ ಭೋಗವನ್ನು ಕೊಟ್ಟರೂ ಸ್ವೀಕರಿಸುವುದಿಲ್ಲ.  ಸಂತ ತ್ಯಾಗರಾಜರು ತಮ್ಮ ಮನೆಗೆ ಹುಡುಕಿಕೊಂಡು ಬಂದಿದ್ದ ಐಶ್ವರ್ಯವನ್ನು ಸ್ವೀಕರಿಸದೆ, ಹಿಂತಿರುಗಿಸಿಬಿಟ್ಟರು.  ರಾಮನಾಮಕ್ಕೆ ಸಮವಾದ್ದು ಯಾವುದೂ ಇಲ್ಲವೆಂದೂ ಭೋಗ ದ್ರವ್ಯ ಪದಾರ್ಥಗಳು ಮನೆಯಲ್ಲಿದ್ದರೆ ಶ್ರೀರಾಮ ದರ್ಶನಕ್ಕೆ ಅಡ್ಡಿಯಾಗುವುದೆಂದು ತಿರಸ್ಕರಿಸಿಬಿಟ್ಟರು.

ಭಾಗವತ ದ್ವಿತೀಯಸ್ಕಂದದ ೩ನೆಯ ಅಧ್ಯಾಯದ ೧೦ನೇ ಶ್ಲೋಕದಲ್ಲಿ ಶುಕಮುನಿಗಳು ಪರೀಕ್ಷಿತ್ ರಾಜನಿಗೆ
ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರಧೀಃ | ತೀವ್ರೇಣ ಭಕ್ತಿಯೋಗೇನ ಯಜೇತ ಪುರುಷಂ ಪರಂ || - ಯಾವುದೇ ತರಹದ ಕಾಮನೆಯುಳ್ಳವನಾದರೂ, ಭಗವಂತನನ್ನೆ ಬಯಸುವವನಾದರೂ, ಮುಮುಕ್ಷುವೇ ಆಗಿದ್ದರೂ ಕೂಡ ತೀವ್ರವಾದ ಭಕ್ತಿಯೋಗದಿಂದ ಪರಮಪುರುಷ ನಾರಾಯಣನನ್ನೇ ಸೇವಿಸಬೇಕು ಎಂದು ತಿಳಿಸಿದ್ದಾರೆ.

ಸ್ಕಾಂದ ಪುರಾಣದಲ್ಲಿಯೂ
ಅಕಾಮೋ ಧರ್ಮಕಾಮೋ ವಾ ಮೋಕ್ಷಕಾಮೋಪಿ ಯೋ ಭವೇತ್ | ಅಥವಾ ಸರ್ವಕಾಮೋ ಯಃ ಸ ವಿಷ್ಣುಂ ಪುರುಷಂ ಯಜೇತ್ || - ಕೇವಲ ಭಗವಂತನನ್ನೇ ಬಯಸುವ ಏಕಾಂತ ಭಕ್ತನಾದರೂ ಸರಿ, ಅಥವಾ ಮೋಕ್ಷಾರ್ಥಿಯಾದರೂ ಸರಿ ಎಲ್ಲರೂ ಪರಮಪುರುಷ ನಾರಾಯಣನನ್ನೇ ಸೇವಿಸಬೇಕು ಎಂದಿದ್ದಾರೆ.
ಕಠೋಪನಿಷತ್ತಿನ ದ್ವಿತೀಯೋಧ್ಯಾಯದ ಪಂಚಮವಲ್ಲಿಯಲ್ಲಿ ಕೂಡ "ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್" - ಭಗವಂತನು ಏಕೈಕನಾಗಿದ್ದರೂ ಕೂಡ ಬಹುಕಾಮಗಳನ್ನು ನೆರವೇರಿಸುವಂತಹವನು ಎಂದು ಉಲ್ಲೇಖಿಸಿದ್ದಾರೆ.

ನಡೆವ ನಮ್ಮಂದದಲಿ - ಭಗವಂತನು ಸರ್ವ ಶ್ರೇಷ್ಠನೂ, ಪರಮಪುರುಷನೂ ಆಗಿದ್ದರೂ ಕೂಡ ರಾಮಾವತಾರದಲ್ಲಿ ತಾನು ಸಾಮಾನ್ಯನಾದ ಮಾನವ, ರಾಜಾ ದಶರಥನ ಪುತ್ರ ಎಂದುಕೊಂಡೇ, ನಮ್ಮೊಡನೆಯೇ ಬೆರೆತು, ಕಷ್ಟ ಹಾಗೂ ವನವಾಸಗಳನ್ನು ಅನುಭವಿಸಿದವನು.  ಬಂದ ದುರಿತಗಳನ್ನೆಲ್ಲಾ ಹೇಗೆ ಎದುರಿಸಬೇಕೆಂದು ಮರ್ಯಾದಾ ಪುರುಷೋತ್ತಮನಾಗಿ ತೋರಿಸಿಕೊಟ್ಟವನು.  ಜನನ ಮರಣಗಳಿಲ್ಲದ ಭಗವಂತನು ದೇವಕಿ ಗರ್ಭದಲ್ಲುದಿಸಿ, ಪುಟ್ಟ ಮಗುವಾಗಿ ಅನೇಕ ಲೀಲೆಗಳನ್ನು ತೋರಿಸಿ ಎಲ್ಲರನ್ನೂ ಕರ್ಷಿಸಿದವನು ಶ್ರೀಕೃಷ್ಣ ಪರಮಾತ್ಮನು.  ಗೋವತ್ಸನಾಗಿ, ಬಾಲಲೀಲೆಗಳಿಂದ ತಾಯಿಯನ್ನೂ, ಗೋಪಿಕೆಯರನ್ನೂ, ಸರ್ವರನ್ನೂ ಬೆರಗುಗೊಳಿಸಿದವನು.  ಹೀಗೆ ನಮ್ಮೊಳಗೇ ಇದ್ದು, ನಮ್ಮೊಡನೆಯೇ ಬೆರೆತು, ನಮ್ಮಂತೆಯೇ ವ್ಯವಹರಿಸುವ ಭಗವಂತನು ಇದೆಲ್ಲವನ್ನೂ ತನ್ನ ಭಕ್ತರ ಮೇಲಿನ ಅಪಾರ ಕರುಣೆಯಿಂದ ಮಾತ್ರವೇ ಮಾಡುವವನು.  ನಮ್ಮನ್ನು ಸದಾ ರಕ್ಷಿಸುವವನು.  ಗೋಪಿಕೆಯರು ಭಾಗವತದ ದಶಮಸ್ಕಂದದ ೩೧ನೆಯ ಅಧ್ಯಾಯದಲ್ಲಿ ಬರುವ "ಗೋಪಿಕಾಗೀತೆ" ಯಲ್ಲಿ
ವಿಷಜಲಾಪ್ಯಯಾದ್ವ್ಯಾಲರಾಕ್ಷಸಾ -
ದ್ವರ್ಷಮಾರುತಾದ್ವೈದ್ಯುತಾನಲಾತ್ |
ವೃಷಮಯಾತ್ಮಜಾದ್ವಿಶ್ವತೋಭಯಾ -
ದೃಷಭ ತೇ ವಯಂ ರಕ್ಷಿತಾ ಮುಹುಃ || - ಯಮುನಾ ನದಿಯಲ್ಲಿದ್ದ ವಿಷಮಿಶ್ರಿತವಾದ ಜಲದ ಪಾನದಿಂದ ಸನ್ನಿಹಿತವಾಗಿದ್ದ ಮೃತ್ಯುವಿನಿಂದಲೂ, ಹೆಬ್ಬಾವಿನ ರೂಪದಲ್ಲಿದ್ದ ಅಘಾಸುರನಿಂದಲೂ, ಇಂದ್ರನ ದೆಸೆಯಿಂದ ಬಂದ ಪ್ರಚಂಡ ಮಳೆ-ಗಾಳಿ-ಸಿಡಿಲಿನಿಂದಲೂ ನಮ್ಮನ್ನು ರಕ್ಷಿಸಿರುವೆ.  ವೃಷಭಾಸುರನಿಂದಲೂ, ಮಯಾಸುರನ ಮಗನಾದ ತೃಣಾವರ್ತನಿಂದಲೂ ನಮ್ಮನ್ನು ಕಾಪಾಡಿರುವೆ.  ಹೀಗೆ ಸದಾ ಸರ್ವದಾ ನಮ್ಮನ್ನು ರಕ್ಷಿಸುತ್ತಿರುವವನು ಪರಮಪುರುಷನಾದ ನೀನೇ ಭಗವಂತ ಎಂದು ಕೊಂಡಾಡಿದ್ದಾರೆ.

ನವಸುವಿಶೇಷ ಸನ್ಮಹಿಮ - ಭಗವಂತನು ಯಾವಾಗಲೂ ’ನವ’ ಎಂದರೆ ಹೊಸತಾಗಿರುವವನು.  ಅವನನ್ನು ಹೇಗೆ ವರ್ಣಿಸಿದರೂ ಹೊಸದಾಗಿ ಕಾಣುವವನು.  ಹೇಗೆ ಹೊಗಳಿದರೂ ಸಾಲದಾಯಿತೆಂಬ ಭಾವವನ್ನು ಕೊಡುವವನು, ಹೋಲಿಕೆಗೇ ನಿಲುಕದಂತಹ ಅಸಾಮಾನ್ಯನು, ಅಪ್ರತಿಮನು, ಅಕಳಂಕನು ಎಂದು ಗುಣವಿಶೇಷಣಗಳನ್ನು ಹೇಳುತ್ತಲೇ ಹೋಗಬಹುದು.  ಯಾವುದೇ ದೃಷ್ಟಾಂತ ಕೊಟ್ಟರೂ ಅದು ಅವನ ಒಂದೇ ಒಂದು ಗುಣಕ್ಕೂ ಸಮವಲ್ಲದೇ ಹೋಗುವುದು.  ಎಲ್ಲವನ್ನೂ ಮೀರಿ ನಿಂತಿರುವವನು, ಪರಮಪುರುಷನು ಭಗವಂತನು. ದೃಷ್ಟಾಂತಗಳನ್ನು ಕೊಟ್ಟಷ್ಟೂ, ದೃಷ್ಟಾಂತಗಳು ಹಳತಾಗುವುವೇ ಹೊರತು ಭಗವಂತನು ನವನವೀನನಾಗಿಯೇ ಕಂಗೊಳಿಸುವನು.  ಇನ್ನು ’ನವ’ ಎಂದರೆ ಒಂಬತ್ತು ಮಂದಿ ಪ್ರಜಾಪತಿಗಳನ್ನು ಸೃಷ್ಟಿಸಿ, ಇವರ ಮೂಲಕ ಮುಂದಿನ ಸೃಷ್ಟಿ ಕಾರ್ಯವನ್ನು ವಿಸ್ತರಿಸಿದವನು ಎಂದು ಕೂಡ ಅರ್ಥೈಸಬಹುದು.  ಶ್ರೀ ಬನ್ನಂಜೆಯವರು ತಮ್ಮ ವ್ಯಾಖ್ಯಾನದಲ್ಲಿ ಭಗವಂತನು ’ಪ್ರಣವ’ನು ಎಂದಿದ್ದಾರೆ.  ಈ ಪ್ರಣವ ಎನ್ನುವ ಪದದಲ್ಲಿ ಕೂಡ ನವ ಇದೆಯಾದ್ದರಿಂದ ಭಗವಂತನು ಎಲ್ಲಾ ವೇದಗಳಿಂದಲೂ ಸ್ತುತಿಸಲ್ಪಟ್ಟಿರುವವನು ಎಂದಿದ್ದಾರೆ.  "ಸು" ಎಂಬ ಅಕ್ಷರದಿಂದ ಸ್ತುತ್ಯನು, ಆನಂದಮಯನು, ಆನಂದರೂಪನು ಎಂದು ಕೂಡ ತಿಳಿಯಬಹುದು.  "ವಿಶೇಷ" ಎಂದರೆ ನವ ಪ್ರಜಾಪತಿಗಳನ್ನು ಸೃಷ್ಟಿಸುವ ಮೊದಲು ವಿ - ಶೇಷರನ್ನು ಸೃಷ್ಟಿಸಿದವನು ಎಂದು ಕೂಡ ಅರ್ಥಮಾಡಿಕೊಳ್ಳಬಹುದು. ’ವಿ’ ಎಂದರೆ ಗರುಡ ಮತ್ತು ’ಶೇಷ’ ಎಂದರೆ ಶೇಷದೇವರು (ರುದ್ರದೇವರು) ಎಂದರ್ಥ.  ಸನ್ಮಹಿಮನು ಎಂದರೆ ಬ್ರಹ್ಮಾಂಡದಲ್ಲಿರುವ ಎಲ್ಲರಿಗಿಂತಲೂ, ಎಲ್ಲಕ್ಕಿಂತಲೂ ಅತ್ಯಧಿಕವಾದ ಮಹಿಮೆಯುಳ್ಳವನು, ಮಹತ್ವವುಳ್ಳವನು  ಎಂದಾಗುತ್ತದೆ.

ಭಗವದ್ಗೀತೆಯ ೧೦ನೆಯ ಅಧ್ಯಾಯದ ೨೦ನೆಯ ಶ್ಲೋಕದಲ್ಲಿ
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |
ಅಹಮಾದಿಶ್ವ ಮಧ್ಯಂ ಚ ಭೂತಾನಾಮಂತ ಏವ ಚ || - ಎಲ್ಲಾ ಪ್ರಾಣಿಗಳ ಹೃದಯಗಳಲ್ಲಿ ಇರುವ ಆತ್ಮನು ನಾನಾಗಿದ್ದೇನೆ.  ಹಾಗೆಯೇ ಸಮಸ್ತ ಪ್ರಾಣಿಗಳ ಆದಿ, ಮಧ್ಯ ಮತ್ತು ಅಂತ್ಯವೂ ನಾನೇ ಆಗಿದ್ದಾನೆ ಎನ್ನುತ್ತಾ  ಭಗವಂತ ನಮ್ಮೊಳಗೇ, ನಮ್ಮೊಡನೇ ಸದಾ ಇದ್ದು  ಎಲ್ಲವನ್ನೂ ತಾನು ಮಾಡಿ ಮಾಡಿಸುತ್ತಾ,  ರಕ್ಷಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ.  ನಮ್ಮೊಳಗೇ ಇರುವವನು, ಒಡಲನೆಳಲಿನಂದದಲ್ಲಿರುವವನು, ನಮ್ಮೊಡನೆಯೇ ತಿರುಗುವವನಾದ ಭಗವಂತನ ಕಾರುಣ್ಯಕ್ಕೆ ಎಲ್ಲೆ, ಪರಿಧಿ ಯಾವುದೂ ಇಲ್ಲ.  
ಚಿತ್ರಕೃಪೆ : ಅಂತರ್ಜಾಲ