Wednesday, June 18, 2014

ಕರುಣಾ ಸಂಧಿ - ೨೨ ನೇ ಪದ್ಯ


ಮನದೊಳಗೆ ಸುಂದರ ಪದಾರ್ಥವ
ನೆನೆದು ಕೊಡೆ ಕೈಕೊಂಡು ಬಲು ನೂ-
ತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ |
ದ್ಯುನದಿನಿವಹಗಳಂತೆ ಕೊಟ್ಟವ-
ರನು ಸದಾ ಸಂತೈಸುವನು ಸ-
ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸಿ  || ೨೨ ||


ಪ್ರತಿಪದಾರ್ಥ : ಮನದೊಳಗೆ - ಮನಸ್ಸಿನಲ್ಲಿಯೇ, ಸುಂದರ ಪದಾರ್ಥವ - ಭಗವಂತನ ಸಮರ್ಪಣೆಗೆ ಯೋಗ್ಯವಾದ ಪೂಜಾ ಪದಾರ್ಥಗಳನ್ನು, ನೆನೆದುಕೊಡೆ - ಅನುಸಂಧಾನದಲ್ಲಿ ಅರ್ಪಿಸಿದರೆ, ಕೈಗೊಂಡು - ಭಗವಂತನು ಸ್ವೀಕರಿಸಿ, ಬಲುನೂತನ - ಹೊಚ್ಚ ಹೊಸದಾದಂತಹ, ಸುಶೋಭಿತ - ಕಂಗೊಳಿಸುತ್ತಿರುವಂತಹ, ಗಂಧ ಸುರಸೋಪೇತ ಫಲರಾಶಿ - ಸಮೀಚೀನ ರಸಗಳೀಂದ ಯುಕ್ತವಾದ ಹಣ್ಣುಗಳ ರಾಶಿಯನ್ನು, ದ್ಯುನದಿ  - ಭಾಗೀರಥಿ, ನಿವಹಗಳಂತೆ - ನಿವಹ ಎಂದರೆ ಉದಕ ಎಂಬರ್ಥವಾಗುವುದಾದ್ದರಿಂದ  ಗಂಗಾ ಪ್ರವಾಹದಂತೆ,  ಕೊಟ್ಟು ಅವರನು ಸದಾ ಸಂತೈಸುವನು - ಅಪರಿಮಿತ ಪ್ರಮಾಣದಲ್ಲಿ ಕೊಟ್ಟು ತನ್ನ ಭಕ್ತರನ್ನು ಸದಾ ಸಂರಕ್ಷಿಸುವನು, ಸದ್ಗುಣವ ಕದ್ದವರ - ಭಗವಂತನ ಗುಣಗಳನ್ನು ಆರಾಧಿಸುವಂತಹ, ಅಘವ ಕದಿವನು - ಪಾಪಗಳನ್ನು ಪರಿಹರಿಸುವನು, ಅನಘನೆಂದೆನಿಸಿ - ದೋಷರಹಿತನಾದ ಭಗವಂತನು ಪಾಪ ಪರಿಹಾರಕನೆಂದೆನಿಸಿಕೊಳ್ಳುವನು.

ಸುಲಕ್ಷಣವಾದ ಪರಮಾತ್ಮನ ರೂಪವನ್ನು ಮನದಿ ನಿಲ್ಲಿಸಿ,  ಜಡ ಪದಾರ್ಥಗಳಾದ  ಪೂಜಾ  ಸಾಧನ ದ್ರವ್ಯಗಳಲ್ಲಿ ಪ್ರತಿಮಾಕಾರನಾದ ಪರಮಾತ್ಮನು ತದ್ವಾಚ್ಯ ಹಾಗೂ ತದಾಕಾರನಾಗಿ ಇರುವನೆ೦ದು  ಅನುಷ್ಠಾನ ಮಾಡಿಕೊ೦ಡು ಪೂಜೆ ಮಾಡಿದಲ್ಲಿ, ಪರಮಾತ್ಮನು ಅದನ್ನು ಸ್ವೀಕಾರಮಾಡುತ್ತಾನೆ. ಎ೦ದೂ ಭೋಗಮಾಡದ೦ತಹ, ಪರಮಾತ್ಮನ ಸ್ವಾಖ್ಯರಸದಿ೦ದ ಯುಕ್ತವಾದ ಫಲಸಮೂಹಗಳನ್ನು, ಉದಕಕ್ಕೂ ಅಲೆಗಳಿಗೂ ಇರುವ ಅಭೇದಂತೆ, ಪರಮಾತ್ಮನ ರೂಪ ಹಾಗೂ ಪದಾರ್ಥಾ೦ತರ್ಗತ  ರೂಪಕ್ಕೂ ಅಭೇದ ಎಂಬ ಐಕ್ಯ ಚಿ೦ತನೆಯಿಂದ ಸಮರ್ಪಿಸಿಕೊಂಡ ಭಕ್ತರನ್ನು ನಿರ೦ತರವಾಗಿ ಕಾಪಾಡುವನು. ಭಕ್ತರು ಕರ್ಮವಶಾತ್ ಮಾಡುವ ದುರ್ವ್ಯಾಪಾರರೂಪವಾದ ಪಾಪಗಳನ್ನು, ನಿರ್ದೋಷಿ ಎನಿಸಿಕೊಳ್ಳುವ ಪರಮಾತ್ಮನು ತಾನು ಅಪಹರಿಸಿ ಅಹಂಕಾರ, ಮಮಕಾರಗಳಿಂದ ಬಿಡಿಸಿ ದಿವ್ಯಜ್ಞಾನವನ್ನು ಕೊಟ್ಟು ಕಾಪಾಡುವನು. ನಮಗೆ ಏನೂ ಇಲ್ಲದಿದ್ದಾಗಲೂ ನಮ್ಮ ಮನಸ್ಸಿನಲ್ಲಿ ಅತ್ಯುತ್ತಮ ಪದಾರ್ಥಗಳನ್ನು ನೆನೆದು, ಅದನ್ನೇ ಪರಮಾತ್ಮನಿಗೆ ಅರ್ಪಿಸಿದರೆ, ಪರಮಾತ್ಮ ನಮಗೆ ಉತ್ತಮ ಫಲರಾಶಿಯನ್ನೇ ಕೊಡುತ್ತಾನೆ.  ಒಂದು ಬಿಂದು ಜಲ, ಒಂದು ತುಳಸೀದಳ, ಒಂದೇ ಒಂದು ಉತ್ತಮವಾದ ಪುಷ್ಪ ಕೊಟ್ಟರೂ ಅವನು ನಮ್ಮನ್ನು ಸಂತೈಸುತ್ತಾನೆ.  ನಾವು ಸದ್ಗುಣವನ್ನು ಕದ್ದರೆ, ನಮ್ಮ ’ಅಘ’ - ಎಂದರೆ ಪಾಪವನ್ನು ಕದ್ದು ಅಘವನ್ನು ಕಳೆವ ಅನಘ ಎನ್ನಿಸಿಕೊಳ್ಳುತ್ತಾನೆ.
 


ನಾವು ಮಾಡುವ ಪೂಜೆಯಲ್ಲಿ ಎರಡು ವಿಧಗಳಿವೆ.  ಮೊದಲನೆಯದು ಮತ್ತು ಅತಿ ಮುಖ್ಯವಾದದ್ದು ಮಾನಸಪೂಜೆ ಮತ್ತು ಎರಡನೆಯದು ಬಹಿರಂಗಪೂಜೆ.  ಮೊದಲನೆಯದಾದ ಮಾನಸಪೂಜೆಯನ್ನು ಬಹಿರಂಗಪೂಜೆಯ ಮೊದಲಿಗೇ ಮಾಡಬೇಕು.  ಮಾನಸಪೂಜೆ ನಮಗಾಗಿ, ನಮ್ಮ ಆತ್ಮೋನ್ನತಿಗಾಗಿ, ಸಾಧನೆಗಾಗಿ ಮಾಡಿಕೊಳ್ಳುವುದು.  ಬಹಿರಂಗಪೂಜೆ ಮನೆಯವರಿಗಾಗಿ, ಮತ್ತು ಸಮಾಜಕ್ಕಾಗಿ, ಸಮುದಾಯಕ್ಕಾಗಿ ಮಾಡುವುದು.  ಈ ಎರಡು ವಿಧದ ಪೂಜೆಗಳಲ್ಲಿ ಬಹಳ ಶ್ರೇಷ್ಠವಾದದ್ದು ಮಾನಸಪೂಜೆ.  ಮಾನಸಪೂಜೆಯಲ್ಲಿ ಪೂಜೆಗಾಗಿ ಬಳಸುವ ಯಾವ ಪೂಜಾ ಸಾಮಗ್ರಿಗಳ ಅವಶ್ಯಕತೆಯೂ ಇರುವುದಿಲ್ಲ.  ನಮ್ಮ ಹೃತ್ಕಮಲದಲ್ಲಿಯೇ ಸ್ಥಿತನಾಗಿರುವ ’ಮೂಲೇಶ’ನಾದ ಭಗವಂತನನ್ನು ಮನಸ್ಸಿನಲ್ಲಿಯೇ ಚೈತನ್ಯಗೊಳಿಸಿಕೊಂಡು, ಬಹಿರಂಗಪೂಜೆಯಲ್ಲಿ ಮಾಡುವ ವಿಧಾನವನ್ನೇ ಅನುಸರಿಸಬಹುದು.  ಆದರೆ ಪ್ರಾಕೃತಿಕವಾಗಿ ಯಾವ ಪದಾರ್ಥದ ಉಪಯೋಗವೂ ಇಲ್ಲಿರುವುದಿಲ್ಲ.  ಮನಸ್ಸಿನಲ್ಲಿಯೇ ರತ್ನಸಿಂಹಾಸನಕ್ಕೆ ಆಹ್ವಾನಿಸಬೇಕು.  "ಗಂಗೇಚ ಯಮುನೇಚೈವ ಗೋದಾವರೀ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುಂ" ಎಂದು ಪವಿತ್ರ ಮಾಡಿಟ್ಟುಕೊಂಡಿರುವ ಜಲದಿಂದ ಅರ್ಘ್ಯ, ಪಾದ್ಯಗಳನ್ನು ಕೊಟ್ಟು ಉಪಚರಿಸಬೇಕು.  ವಿಶಾಲವಾದ ಮನದಂಗಳದಲ್ಲಿಯೇ ನೆಟ್ಟು ಬೆಳೆಸಿದ ಗಿಡದಿಂದ ಸುಂದರವಾಗಿ ಅರಳಿ, ನಳನಳಿಸುತ್ತಿರುವ ಪುಷ್ಪವನ್ನು ಸಮರ್ಪಿಸಬೇಕು, ತುಪ್ಪದ ದೀಪವನ್ನು ಬೆಳಗಬೇಕು.  ಮನಸ್ಸೆಂಬ ಅಡುಗೆಯ ಮನೆಯಲ್ಲಿ ನಾವೇ ಸ್ವತಃ ತಯಾರು ಮಾಡಿದ ಅನೇಕ ವಿಧದ ಭಕ್ಷ್ಯ, ಭೋಜ್ಯಗಳನ್ನು ಶುದ್ಧಾತಿಶುದ್ಧ ಜಲದ ಸಹಿತವಾಗಿ ಸಮರ್ಪಿಸಬೇಕು.   ಭಗವಂತನಿಗೆ ಕರ್ಪೂರ ಮಂಗಳನೀರಾಜನದ ಸಹಿತವಾಗಿ ಪೂಜೆಯನ್ನು ಪೂರೈಸಬೇಕು.  ಇದು ಒಂದು ವಿಧವಾದರೆ, ನಮ್ಮ ದೇಹದಲ್ಲಿರುವ ಪಂಚತತ್ವಗಳನ್ನೇ ಸಮರ್ಪಿಸಿಕೊಂಡು ಪೂಜಿಸುವುದು ಇನ್ನೊಂದು ವಿಧವಿರುವುದು.  ಭಗವಂತನನ್ನು ಹೃತ್ಕಮಲದ ರತ್ನಸಿಂಹಾಸನದಲ್ಲಿ ಆಹ್ವಾನಿಸಿ ನಮ್ಮ ದೇಹದಲ್ಲಿರುವ ಪಂಚತತ್ವಗಳಲ್ಲಿ ಮೊದಲನೆಯದಾಗಿ ಪೃಥ್ವಿತತ್ವವನ್ನು ಗಂಧವನ್ನಾಗಿಯೂ,  ಆಕಾಶತತ್ವವನ್ನು ಪುಷ್ಪವನ್ನಾಗಿಯೂ,  ವಾಯು ತತ್ವವನ್ನು ಧೂಪವನ್ನಾಗಿಯೂ, ಅಗ್ನಿ ತತ್ವವನ್ನು ದೀಪವನ್ನಾಗಿಯೂ ಮತ್ತು ಜಲತತ್ವವನ್ನು ಅಮೃತವೆಂದು ನೈವೇದ್ಯವನ್ನಾಗಿಯೂ ಸಮರ್ಪಿಸುತ್ತಾ, ಸರ್ವಾತ್ಮನಿಗೆ ಸರ್ವವನ್ನೂ ಸಮರ್ಪಿಸುತ್ತಿದ್ದೇವೆಂಬ ಭಾವದಲ್ಲಿ ಶರಣಾಗತರಾಗುವುದು. 

ಮಾನಸಪೂಜೆಯಲ್ಲಿಯೇ ಮೂರನೆಯ ವಿಧವೆಂದು ಪರಿಗಣಿಸಬಹುದಾದದ್ದು ಭಗವಂತನನ್ನು ನಮಗೆ ಇಷ್ಟವಾದ ರೂಪದಲ್ಲಿ ಅಂತರಂಗದಲ್ಲಿ ಆಹ್ವಾನಿಸಿಕೊಳ್ಳುವುದು.  ಅಂದರೆ ಭಗವಂತನನ್ನು ಪುಟ್ಟ ಮಗುವಾಗಿ ಆಹ್ವಾನಿಸಿದರೆ, ನಾವು ನಮ್ಮ ಮನೆಯಲ್ಲಿನ ಪುಟ್ಟ ಮಗುವಿಗೆ ಹೇಗೆ ಸರ್ವೋಪಚಾರಗಳನ್ನೂ ಮಾಡುತ್ತೇವೋ, ಹಾಗೆಯೇ ಅಂತರಂಗದಲ್ಲಿಯೇ ಆಹ್ವಾನಿಸಿಕೊಂಡ ಮುದ್ದು ಮಗುವನ್ನು ಮೀಯಿಸಿ, ಲಾಲಿಸಿ, ಮುದ್ದಿಸಿ, ಓಲೈಸಿ, ತುತ್ತು ತಿನ್ನಿಸಿ, ಅಂತರಂಗದ ತೊಟ್ಟಿಲಲ್ಲಿ ಲಾಲಿ ಜೋಗುಳ ಹಾಡಿ ತೂಗಿ ಮಲಗಿಸುವುದು ಅತಿ ವಿಶೇಷವಾದ ವಿಧಾನವೆಂದೆನಿಸುವುದು.  ಮಗುವಿನೊಡನೆ ಮಗುವಾಗಿ, ನಾವೂ ಬೆರೆತು, ನಕ್ಕು, ನಲಿದು, ಹಾಡಿ ಪಾಡಿ ಸಂತೋಷಿಸಿದಾಗ ಮನಸ್ಸು ಸಂಪೂರ್ಣವಾಗಿ ಭಗವಂತನಲ್ಲಿಯೇ ಲೀನವಾಗುವುದು.  ಇದು ಅತ್ಯುತ್ಕೃಷ್ಟವಾದ, ಶುದ್ಧ ಭಕ್ತಿಯೆನಿಸುತ್ತದೆ.  ಹೀಗೆ ನಾವು ಯಾವುದೇ ವಿಧವನ್ನು ಅನುಸರಿಸಿ ಮಾನಸಿಕ ಪೂಜೆ ಮಾಡಿದರೂ, ಮನಸ್ಸಿನಲ್ಲಿ ಸಮರ್ಪಿಸಿದ ಸರ್ವವನ್ನೂ ಭಗವಂತ ನಮಗೆ ಪ್ರಾಕೃತಿಕವಾಗಿ ಕೊಟ್ಟು ರಕ್ಷಿಸುತ್ತಾನೆ.  ಮಾನಸಪೂಜೆಯನ್ನು ಮಾಡಿದ ನಂತರವೇ ನಾವು ಭಗವಂತನನ್ನು ನಮ್ಮ ಎದುರಿನಲ್ಲಿರುವ ಪ್ರತಿಮೆಯಲ್ಲಿ ಆಹ್ವಾನಿಸಿ, ಪ್ರತಿಮಾ ಪೂಜೆಯನ್ನು ಬಹಿರಂಗವಾಗಿ ಮಾಡಬೇಕು.  ಹಾಗೆ ಮಾಡದೇ ಪ್ರತಿಮೆಯನ್ನೇ ಭಗವಂತನೆಂದು ತಿಳಿದು ಪೂಜಿಸಬಾರದು. 



ಮನದೊಳಗೆ ಸುಂದರ ಪದಾರ್ಥವ ನೆನೆದು ಕೊಡೆ -  ಮನದೊಳಗೆ ಸುಂದರ ಪದಾರ್ಥವನ್ನು ನೆನೆಯುವುದೆಂದರೆ, ಭಗವಂತನಿಗೆ ನಾವು ಅನೇಕ ಭಕ್ಷ್ಯ ಭೋಜ್ಯಗಳನ್ನು ನೈವೇದ್ಯಕ್ಕೆಂದು ಮಂಡಲ ಮಾಡಿ ಇಟ್ಟಿರುತ್ತೇವೆ.  ಅದರಲ್ಲಿ ಭಗವಂತ ತನ್ನ ಅನೇಕಾನೇಕ ವಿಭೂತಿ ರೂಪಗಳಿಂದ ಸ್ಥಿತನಾಗಿದ್ದಾನೆಂದೂ, ಆ ರೂಪಗಳನ್ನು ನಾವು ಚಿಂತಿಸಿ, ಅವನಿಗೆ ಸಮರ್ಪಿಸಬೇಕು.  ವಿವಿಧ ಭಕ್ಷ್ಯಗಳಲ್ಲಿರುವ ಅವನ ವಿವಿಧ ರೂಪಗಳು ಆ ಪದಾರ್ಥದಲ್ಲಿ ನೆಲೆಸಿರುವ ಸಾಖ್ಯರಸವನ್ನು ಸ್ವೀಕರಿಸಿ, ಮಿಕ್ಕದ್ದನ್ನು ನಮಗೆ ಬಿಟ್ಟು ಬಿಡುತ್ತಾನೆ.  ಅದು ಅವನಿಗೆ ತ್ಯಾಜ್ಯ ಆದರೆ ನಮಗೆ ಮಹಾಪ್ರಸಾದ.  ನಾವು ಹಣ್ಣುಗಳನ್ನು ತಿಂದು ಸಿಪ್ಪೆಯನ್ನು ಹಸುವಿಗೆ ಕೊಡುವಂತೆ ಎನ್ನಬಹುದು.  ಭಗವಂತನಿಗೆ ಪ್ರಾಕೃತಿಕವಾಗಿ ನಾವು ಯಾವ ಪದಾರ್ಥವನ್ನೂ ಸಮರ್ಪಣೆ ಮಾಡಲಾಗುವುದಿಲ್ಲ.  ಏಕೆಂದರೆ ಎಲ್ಲವೂ ಅವನದೇ, ಎಲ್ಲವನ್ನೂ ಅವನೇ ಕೊಟ್ಟಿರುವುದು ಮತ್ತು ಪ್ರಾಕೃತಿಕ ವಸ್ತುಗಳಿಂದ ಭಗವಂತನಿಗೆ ಯಾವ ಲಾಭವೂ ಇಲ್ಲ ನಷ್ಟವೂ ಇಲ್ಲ, ಆನಂದವೂ ಇಲ್ಲ ದುಃಖವೂ ಇಲ್ಲ.  ಅವನು ಸರ್ವದಾ ಸದಾನಂದಮಯನಾಗಿರುವವನು.  ಸೃಷ್ಟಿಯಲ್ಲಿರುವ ಪ್ರತೀ ಪದಾರ್ಥವನ್ನೂ ನಮಗಾಗಿ ಭಗವಂತನೇ ಸೃಷ್ಟಿ ಮಾಡಿ ಕೊಟ್ಟಿದ್ದಾನೆ. ನಾವು ಅವುಗಳನ್ನೇ ಮತ್ತೆ ಭಗವಂತನಿಗೇ ಸಮರ್ಪಿಸಿ ಕೃತಾರ್ಥರಾಗಬೇಕು. ಆದರೆ ನಾವು ಹಾಗೆ ಮಾಡದೆ ಎಲ್ಲವನ್ನೂ ನಾವೇ ಸೃಷ್ಟಿಸಿಕೊಂಡಿದ್ದೇವೆಂಬ ಅಹಂಕಾರದಲ್ಲಿ ಬೀಗುತ್ತೇವೆ.  ಕಷ್ಟಗಳು ಬಂದಾಗ ಮಾತ್ರ ಭಗವಂತನನ್ನು ಸ್ಮರಿಸುತ್ತಾ ಕಾಪಾಡೆಂದು ಬೇಡುತ್ತೇವೆ.  ಎಲ್ಲವನ್ನೂ ಕೊಟ್ಟಿರುವ ಸ್ವಾಮಿಗೆ ನಾವು ಏನನ್ನಾದರೂ ಕೊಡಬಲ್ಲೆವಾದರೆ, ಅದು ನಮ್ಮ ಶುದ್ಧ ಭಕ್ತಿ ಮಾತ್ರವೇ ಆಗಿರುತ್ತದೆ.  ಪಂಚೇಂದ್ರಿಯಗಳನ್ನು ಕೊಟ್ಟು, ಅನುಭವಗಳ ಮೂಲಕ ನಾವು ಆನಂದಿಸುವಂತೆ ಮಾಡಿರುವ ಸರ್ವೇಶನಿಗೆ, ನಾವು ನಮ್ಮನ್ನೇ ಸಮರ್ಪಿಸಿಕೊಳ್ಳುವುದು ಮಾತ್ರವೇ ನಾವು ಅವನಿಗೆ ಸಲ್ಲಿಸುವ ಧನ್ಯವಾದಗಳಾಗುತ್ತವೆ.  ನಮ್ಮನ್ನೇ ನಾವು ಸಮರ್ಪಿಸಿಕೊಳ್ಳುವುದನ್ನೇ ಮಾನಸಪೂಜೆ ಎನ್ನುವುದು.   ಮಾನಸಪೂಜೆಯಿಂದ ನಮ್ಮ ಆತ್ಮದ ಶುದ್ಧಿಯಾಗುತ್ತದೆ, ಮನಸ್ಸು ಆತನಲ್ಲಿ ಲೀನವಾಗುತ್ತದೆ.    ಪೂಜೆಯನ್ನು ಮಾಡುವಾಗ ನಾವು ಎಲ್ಲಾ ತರಹದ ಉಪಚಾರಗಳನ್ನೂ ಭಗವಂತನಿಗೆ ಸಮರ್ಪಿಸಿ, ಪೂಜಿಸುತ್ತೇವೆ.  ಹಾಗೇ ಮನದಲ್ಲಿಯೇ ನೆಲೆಸಿರುವ ಭಗವಂತನನ್ನು ಮನದಲ್ಲಿಯೇ ಸ್ಮರಿಸುತ್ತಾ, ನಮ್ಮ ಕಲ್ಪನೆಯಲ್ಲಿಯೇ ನಾವು ಅತಿ ಸುಂದರವಾದ ಪದಾರ್ಥಗಳನ್ನು ಸಮರ್ಪಿಸಿ, ಷೋಡಶೋಪಚಾರಸಹಿತ ಪೂಜಾವಿಧಿಯನ್ನು ಪೂರೈಸಬೇಕು. 

ಬಹಿರಂಗ ಪೂಜೆಯಲ್ಲಿ ಪ್ರಾಕೃತಿಕವಾಗಿ ಕೊಡುವ ಪದಾರ್ಥಗಳನ್ನೇ ಹೇಗೆ ಭಗವಂತನು ಪ್ರೀತಿಪೂರ್ವಕವಾಗಿ ಸ್ವೀಕರಿಸುತ್ತಾನೆಯೋ, ಹಾಗೇ ಮಾನಸಪೂಜೆಯಲ್ಲಿ ಸಮರ್ಪಿಸುವ ಪದಾರ್ಥಗಳು ಮಾನಸವೇ ಆಗಿರುತ್ತವೆ ಮತ್ತು ಅವುಗಳನ್ನು ಇನ್ನೂ ಅಧಿಕ ಪ್ರೀತಿಯಿಂದ ಭಗವಂತನು ಸ್ವೀಕರಿಸುತ್ತಾನೆ.  ಮಾನಸಿಕವಾಗಿ ಸಮರ್ಪಣೆ ಮಾಡುವ  ಸಮಸ್ತ ಪದಾರ್ಥಗಳೂ ಅತ್ಯುತ್ಕೃಷ್ಟವಾದದ್ದೆಂದು ಭಾವಿಸಿ ಸಮರ್ಪಿಸಬೇಕು.  ನಿತ್ಯ ತೃಪ್ತನೂ, ಕರುಣಾನಿಧಿಯೂ ಆದ ಶ್ರೀಹರಿ, ಎಲ್ಲವನ್ನೂ ಪ್ರೇಮದಿಂದ ಸ್ವೀಕರಿಸಿ ತೃಪ್ತಿಪಡುತ್ತಾನೆ ಮತ್ತು ಒಲಿದು ನಮ್ಮನ್ನು ಕಾಪಾಡುತ್ತಾನೆ.  ಶ್ರೀ ಪುರಂದರ ದಾಸರು ತಮ್ಮ "ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ" ಎಂಬ ಕೃತಿಯಲ್ಲಿ ’ಮಂಗಳಾಭಿಷೇಕಕೆ ಉದಕ ತರುವೆನೆನೆ, ಗಂಗೆಯುಂಗುಷ್ಠದಿ ಪಡೆದಿರುವೆ’, ಪುಷ್ಪವನ್ನು ಸಮರ್ಪಿಸೋಣವೆಂದರೆ ’ಪುಷ್ಪ ಪಲ್ಲವಿಸಿದೆ ಪೊಕ್ಕುಳಲಿ’, ಹಾಸಿಗೆಯನ್ನಾದರೂ ತಂದು ಹಾಸೋಣವೆಂದರೆ ’ಶೇಷನ ಮೇಲೆ ನೀ ಪವಡಿಸಿರ್ಪೆ’ ಹೋಗಲಿ ಬೀಸಣಿಗೆಯನ್ನು ತಂದಾದರೂ ಬೀಸೋಣವೆಂದರೆ ’ಬೀಸುತಿಹನು ಖಗ ತನ್ನ ಪಕ್ಕದಲಿ’ ಎನ್ನುತ್ತಾ ಭಗವಂತನಿಗೆ ಕೊಡಲು ನಮ್ಮಲ್ಲಿ ಏನೂ ಇಲ್ಲವೆಂಬ ಸತ್ಯವನ್ನು ತಿಳಿಸುತ್ತಾರೆ.  ನಿತ್ಯಗುಣ ಪರಿಪೂರ್ಣನಾದ ಶ್ರೀಹರಿಯನ್ನು ಭಕ್ತಿದಾಯಕನೆಂದು ಸ್ತುತಿಸುತ್ತಾ ಕೊಂಡಾಡುವುದೊಂದೇ ನಮಗಿರುವ ಮಾರ್ಗವೆನ್ನುತ್ತಾ ನಮ್ಮ ಸಮರ್ಪಣೆಗಳೆಲ್ಲವೂ ಮಾನಸಪೂಜೆಯ ಮೂಲಕವೇ ಹೆಚ್ಚು ಮಹತ್ವ ಪಡೆಯುವುದೆಂಬುದನ್ನು ವಿವರಿಸುತ್ತಾರೆ.

ಶ್ರೀ ಶಂಕರಾಚಾರ್ಯರು ತಮ್ಮ "ಭಗವನ್ಮಾನಸಪೂಜಾ ಸ್ತೋತ್ರಮ್" ನಲ್ಲಿ

ಹೃದಂ ಭೋಜೇ ಕೃಷ್ಣಃ ಸಜಲ-ಜಲದ ಶ್ಯಾಮಲತನುಃ | ಸರೋಜಾಕ್ಷಃ ಸ್ರಗ್ವೀ ಮುಕುಟಕಟಕಾದ್ಯಾಭರಣವಾನ್ ||
ಶರದ್ರಾಕಾ-ನಾಥ-ಪ್ರತಿಮ-ವದನಃ ಶ್ರೀ ಮುರಲಿಕಾಂ | ವಹನ್ ಧ್ಯೇಯೋ ಗೋಪೀಗಣಪರಿವೃತಃ ಕುಂಕುಮಚಿತಃ || - ನೀರಿನಿಂದ ಕೂಡಿದ ಮೋಡದಂತೆ ಶ್ಯಾಮಲವರ್ಣದ ದೇಹ, ಕಮಲದಂತೆ ಕಣ್ಣುಳ್ಳ, ಕೊರಳಲ್ಲಿ ವನಮಾಲೆ ಧರಿಸಿರುವ, ಮುಕುಟ ಕಡಗ ಮುಂತಾದ ಆಭರಣ ಧರಿಸಿರುವ, ಶರದೃತುವಿನ ಹುಣ್ಣಿಮೆ ಚಂದ್ರದಂತೆ ಮುಖವುಳ್ಳ, ಕೊಳಲನ್ನು ಪಿಡಿದಿಹ, ಗೋಪಿಯರ ಸಮೂಹದಿಂದ ಕೂಡಿದ, ಸರ್ವಾಂಗ ಗಂಧ ಲೇಪಿಸಿರುವ ಶ್ರೀಕೃಷ್ಣನನ್ನು ನನ್ನ ಹೃದಯ ಕಮಲದಲ್ಲಿ ಧ್ಯಾನಿಸುತ್ತೇನೆ ಎನ್ನುತ್ತಾ ಮಾನಸಪೂಜೆಯನ್ನು ಪ್ರಾರಂಭಿಸುತ್ತಾರೆ.  ಮುಂದುವರೆಯುತ್ತಾ ಭಗವಂತನನ್ನು ಕ್ಷೀರಸಾಗರದ್ವೀಪದಿಂದ ಹೃತ್ಕಮಲಕ್ಕೆ ಆಗಮಿಸಿ, ರತ್ನ ಸಿಂಹಾಸನವನ್ನು ಅಲಂಕರಿಸೆಂದು  ಪ್ರಾರ್ಥಿಸುತ್ತಾರೆ.  ಆಚಮನ ಮಾಡಲು ದೇವನದಿ ಗಂಗಾಜಲವನ್ನು ತಂದಿರುವೆ ಸ್ವೀಕರಿಸು ಎನ್ನುತ್ತಾರೆ.  ರುಚಿಯಾದ,  ಪಕ್ವವಾದ ಫಲಗಳನ್ನೂ, ಪರಿಮಳಯುಕ್ತವಾದ ತಾಂಬೂಲವನ್ನೂ ಪ್ರೀತಿಯಿಂದ ತಂದಿರುವೆ, ಉಜ್ವಲವಾದ ಆರತಿಯನ್ನು ಮಾಡುವೆನೆನ್ನುತ್ತಾರೆ.  ಅನೇಕ ಬಗೆಯ ಸುವಾಸನಾ ಹೂಗಳು, ಬಿಲ್ವ, ತುಳಸಿಗಳಿಂದ ಕೂಡಿದ ಪುಷ್ಪಾಂಜಲಿಯನ್ನೂ, ಪ್ರದಕ್ಷಿಣಾ ನಮಸ್ಕಾರಗಳನ್ನೂ ಸ್ವೀಕರಿಸು ಎನ್ನುತ್ತಾ ಎಲ್ಲ ದುರಿತಗಳನ್ನೂ ನಾಶ ಮಾಡುವ ನಿನಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತೇನೆ ಎನ್ನುತ್ತಾರೆ.  ಈ ನಿನ್ನ ದಾಸನ ನೃತ್ಯ, ಸಂಗೀತ, ಸ್ತುತಿಗಳಿಂದ ಸಂತುಷ್ಟನಾಗು ಪ್ರಭುವೇ ನನ್ನಿಂದ ಆದ ನ್ಯೂನತೆಗಳನ್ನು ಬಗೆಯದಿರು ಎಂದು ಬೇಡಿಕೊಳ್ಳುತ್ತಾ ಮಾನಸ ಪೂಜೆಯನ್ನು ಸುಸಂಪನ್ನಗೊಳಿಸುತ್ತಾರೆ.  


ಶ್ರೀವಾದಿರಾಜರು ತಮ್ಮ "ಬಿಡೆನೊ ಬಿಡೆನೊ ನಿನ್ನ ಚರಣಕಮಲವ ಎನ್ನ ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ" ಎಂಬ ಕೃತಿಯಲ್ಲಿ ಭಗವಂತನು ನಮ್ಮೊಳಗೇ ಇದ್ದಾನೆ ಮತ್ತು ಅವನನ್ನು ಅನುದಿನ, ಅನವರತ ಭಜಿಸಿದರೆ "ಭಕ್ತಿಯಿಂದ ಭಜಿಸಲು ಸಿರಿ ಹಯವದನನೆ ಪ್ರತ್ಯಕ್ಷವಾಗಿ ಸಲಹುವ ನಮ್ಮನು" ಎಂದು ತಿಳಿಸಿದ್ದಾರೆ.

ಕೈಕೊಂಡು ಬಲು ನೂತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ -  ಭಗವಂತ ಭಕ್ತಿಯಿಂದ ಜೀವಿಯು ಸಮರ್ಪಿಸುವ ಪದಾರ್ಥಗಳೆಲ್ಲವನ್ನೂ ಸ್ವೀಕರಿಸುತ್ತಾನೆ.  ತನ್ನನ್ನೇ ಸಮರ್ಪಿಸಿಕೊಳ್ಳುವ ಭಕ್ತರನ್ನು ಭಗವಂತನು ತಂದೆ-ತಾಯಿಗಳು ಮಕ್ಕಳ ತಪ್ಪುಗಳನ್ನು ಎಣಿಸದೇ ಪ್ರೀತಿಸುವಂತೆ ಪ್ರೀತಿಸುತ್ತಾನೆ, ಬೇಡಿದ ಇಷ್ಟಾರ್ಥಗಳನ್ನು ಕೊಟ್ಟು ಸಂತೈಸುತ್ತಾನೆ.  ಜೀವಿಯು ಕಾಯಾ ವಾಚಾ ಮನಸಾ ಸಮರ್ಪಣೆಮಾಡಿಕೊಳ್ಳಬೇಕು.  ಶ್ರೀ ಜಗನ್ನಾಥದಾಸರು ತಮ್ಮ ನರಸಿಂಹ ಸುಳಾದಿಯಲ್ಲಿ "ಬಗೆಯದಿರೆನ್ನ ಅಪರಾಧಕೋಟಿಗಳ" ಎಂದು ಪ್ರಾರ್ಥಿಸುವಂತೆ, ಕ್ಷಣ ಕ್ಷಣವೂ ಜೀವಿ ಭಗವಂತನನ್ನು ಕೇಳಿಕೊಳ್ಳಬೇಕು.  ಹೀಗೆ ನಾವು ಸಮರ್ಪಿಸಿದ ವಸ್ತುಗಳನ್ನು ಸ್ವೀಕರಿಸುವುದರೆ, ಆ ವಸ್ತುಗಳಿಂದ ಅವನಿಗೆ ಯಾವ ಉಪಯೋಗವಾದೀತು ? ಏನೂ ಇಲ್ಲ !  ಸ್ವೀಕರಿಸಿದ ಪ್ರತಿಯೊಂದನ್ನೂ ಮತ್ತೆ ಹೊಚ್ಚ ಹೊಸದಾದ ಪದಾರ್ಥವನ್ನಾಗಿ ಮಾಡಿ,  ಕಂಗೊಳಿಸುವಂತೆ ಮಾಡಿ, ಅದನ್ನು ಸುವಾಸನಾಯುಕ್ತ ಹಾಗೂ ರಸಭರಿತ ಪದಾರ್ಥವನ್ನಾಗಿ ಮಾಡಿ, ನಮಗೇ ಹಿಂತಿರುಗಿಸಿ ಬಿಡುತ್ತಾನೆ.  ನಾವು ಕೊಡುವುದು ಅತ್ಯಲ್ಪವೇ ಆಗಿದ್ದರೂ ಅದನ್ನು ಸ್ವೀಕರಿಸಿ ನಮಗೆ ಅಪಾರವಾಗಿಸಿ ಕೊಡುತ್ತಾನೆ.  ಇದು ಭಗವಂತನ ಅಕ್ಕರೆಯ ಹಾಗೂ ಕಾರುಣ್ಯದ ವಿಧಾನ.

ದ್ಯುನದಿ ನಿವಹಗಳಂತೆ -  ಮಾನಸ ಪೂಜೆಯಲ್ಲಾಗಲೀ, ಬಹಿರಂಗ ಪೂಜೆಯಲ್ಲಾಗಲೀ ನಾವು ಭಕ್ತಿ   ಮತ್ತು ಶ್ರದ್ಧೆಯಿಂದ ಏನನ್ನು ಸಮರ್ಪಣ ಮಾಡುತ್ತೇವೆಯೋ ಅವುಗಳನ್ನು ಕರುಣೆಯಿಂದ ಸ್ವೀಕರಿಸಿ ಭಗವಂತ ಅದೇ ರೀತಿಯ ಅಥವಾ ಸಮರ್ಪಿಸಿದ  ಅದೇ ವಸ್ತುವನ್ನೇ ನಮಗೆ ಗಂಗಾಪ್ರವಾಹದಂತೆ ಅವಿಚ್ಛಿನ್ನವಾಗಿ ನಮ್ಮೆಡೆಗೆ ಹರಿಸುತ್ತಾನೆ.  ದೇವಗಂಗೆ, ವಿಷ್ಣುಪಾದೋದ್ಭವಿಯಾದ್ದರಿಂದ ಅವಳೆಂದೂ ಬತ್ತುವುದಿಲ್ಲ.  ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತಾಳೆ.  ಅದೇರೀತಿಯಲ್ಲಿ ತನ್ನ ಭಕ್ತರೆಡೆಗೆ ಪರಮಾತ್ಮನು ತನ್ನ ಕಾರುಣ್ಯವನ್ನೂ, ಭೋಗ ಭಾಗ್ಯಗಳನ್ನೂ ನಿರಂತರವಾಗಿ ಪ್ರವಹಿಸುತ್ತಲೇ ಇರುತ್ತಾನೆ.  ಶ್ರೀಹರಿಯ ಕಾರುಣ್ಯದ ಸುಧೆಯೇ ಹಾಗೆ, ಅಖಂಡವಾಗಿ, ಅನಂತವಾಗಿ ಪ್ರವಾಹದಂತೆ ಹರಿಯುತ್ತಲೇ ಇರುತ್ತದೆ.  ಇತರ ದೇವತೆಗಳಾಗಲೀ, ಕಾಮಧೇನು ಕಲ್ಪವೃಕ್ಷಗಳಾಗಲೀ ಸ್ವಲ್ಪ ಮಟ್ಟಿಗೆ ಮಾತ್ರವೇ ಕೊಡಬಲ್ಲರು, ನಿರಂತರವಾಗಿ ಕೊಡಲಾಗುವುದಿಲ್ಲ.  ಆದರೆ ಭಗವಂತನೊಬ್ಬನು ಮಾತ್ರ ತನ್ನನ್ನು ನಂಬಿದ ಭಕ್ತರಿಗೆ ಸತತವಾಗಿ, ಅವಿರತವಾಗಿ ಕೊಡುತ್ತಲೇ ಇರುತ್ತಾನೆ.  ಭಗವಂತನಿಗೆ ನಾವು ಏನನ್ನು ಸಮರ್ಪಿಸಿದರೂ ನಮಗೆ ಅದು ಪ್ರಸಾದ ರೂಪದಲ್ಲಿ ಸಿಕ್ಕುತ್ತದೆ.  ಪರಮಾತ್ಮ ಸ್ವೀಕರಿಸಿದ್ದನ್ನು ಪ್ರಸಾದವೆಂದು ಸೇವಿಸುವುದೆಂದರೆ ಅದು ಗಂಗೆಯಂತೆ ಪವಿತ್ರವಾದ ಮಹತ್ವವುಳ್ಳದ್ದಾಗಿರುತ್ತದೆ.

ಭಗವದ್ಗೀತೆಯ ಎಂಟನೇ ಅಧ್ಯಾಯದಲ್ಲಿ ಸಾಕ್ಷಾತ್ ಶ್ರೀಕೃಷ್ಣನೇ "ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್" - ಎಲ್ಲ ಇಂದ್ರಿಯಗಳನ್ನೂ ಮಣಿಸಿ, ಮನಸ್ಸನ್ನು ಹೃದಯದೊಳಗೆ ಸ್ಥಿರಗೊಳಿಸಿ, ಗೆದ್ದಿರುವ ಮನಸ್ಸಿನಿಂದ ಪ್ರಾಣವನ್ನು ಮಸ್ತಕದಲ್ಲಿ ಸ್ಥಾಪಿಸಿ, ಪರಮಾತ್ಮ ಸಂಬಂಧೀ ಯೋಗಧಾರಣೆಯಲ್ಲಿ ಸ್ಥಿರವಾಗಿ ಯಾವ ಪುರುಷನು ’ಓಂ’ ಎಂಬ ಏಕಾಕ್ಷರರೂಪೀ ಬ್ರಹ್ಮವನ್ನು ಉಚ್ಛರಿಸುವನೋ ಅವನು "ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಮ್" - ಹೇಗೆ ಪೂಜಿಸಿದರೂ, ಭಜಿಸಿದರೂ ಕೊನೆಗೆ ನನ್ನನ್ನೇ ಸೇರುತ್ತಾನೆ ಎಂದು ತಿಳಿಸಿದ್ದಾನೆ. 

ಕೊಟ್ಟವರನು ಸದಾ ಸಂತೈಸುವನು - ಯಾವ ಭಕ್ತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಭಕ್ತಿಯಿಂದ ಪೂಜಿಸುತ್ತಾನೋ ಅವರನ್ನು ಭಗವಂತ ಸದಾ ರಕ್ಷಿಸುತ್ತಾನೆ, ಸಂತೈಸುತ್ತಾನೆ.  ನಾವು ಮನದಲ್ಲಿ ಚಿಂತಿಸುವುದೆಂದರೆ, ಕನಸಿನಲ್ಲಿ ಕಂಡಂತೆ ಎನ್ನಬಹುದು.  ಕನಸಿನಲ್ಲಿ ಕಂಡದ್ದು ಸತ್ಯವಾದದ್ದೇ, ಆದರೆ ಪ್ರಾಕೃತಿಕವಾಗಿ ಅದು ಅಲ್ಲಿರುವುದಿಲ್ಲ ಅಷ್ಟೆ.  ಆದ್ದರಿಂದ ನಾವು ಮನದೊಳಗೆ ಏನನ್ನು ಚಿಂತಿಸುವೆವೋ  ಅದನ್ನು ಅತ್ಯುತ್ತಮವಾದದ್ದೆಂದು ಚಿಂತಿಸಿ ಸಮರ್ಪಿಸಿದಾಗ ಕೂಡ ಭಗವಂತ ಅದನ್ನು ಖಂಡಿತವಾಗಿ ಸ್ವೀಕರಿಸುತ್ತಾನೆ.  ಏಕೆಂದರೆ ನಾವು ಮನದಲ್ಲಿ ಚಿಂತಿಸಿದರೂ, ಕನಸಿನಲ್ಲಿ ಕಂಡರೂ, ಆ ಪದಾರ್ಥದಲ್ಲಿ ಭಗವಂತ ಸ್ವಯಂ ತನ್ನ ವಿಭೂತಿ ರೂಪದಿಂದ ನೆಲೆಸಿದ್ದಾನೆ.  ಅದನ್ನು ನಾವು ಸಮರ್ಪಣೆ ಮಾಡಿದಾಗ ಅವನು ತನ್ನನ್ನು ತಾನೇ ಸ್ವೀಕರಿಸಿದಂತಾಗುತ್ತದೆ.  ಆದ್ದರಿಂದಲೇ ಅವನು "ಸ್ವರಮಣ’ನೆನೆಸಿಕೊಳ್ಳುತ್ತಾನೆ.  ಹೀಗೆ ಅಂತಹ ಕಾಲ್ಪನಿಕವಾಗಿ ಮಾಡಿದ ಪೂಜೆಯನ್ನೂ, ಸಮರ್ಪಣೆಯನ್ನೂ ಸ್ವೀಕರಿಸುತ್ತಾನೆ.  ನಾವು ಮಾಡುವ ಅತ್ಯಲ್ಪ ಪೂಜೆಯನ್ನೂ ಅತಿ ಸಂತುಷ್ಟತೆಯಿಂದ ಸ್ವೀಕರಿಸಿ, ನಮಗೆ ಬೇಕು ಬೇಕಾದದ್ದನ್ನೆಲ್ಲಾ ಗಂಗಾ ಪ್ರವಾಹದಂತೆ ಕೊಡುತ್ತಾನೆ.

ಸದ್ಗುಣವ ಕದ್ದವರಘವ ಕದಿವನು -  ಮಾನವ ಶರೀರ ಸಿಕ್ಕಿರುವುದೇ ಪುರುಷಾರ್ಥಸಾಧನೆಗಾಗಿ  ಎಂಬ ಅರಿವಿನಿಂದ ಇಂದ್ರಿಯಗಳನ್ನು ವಿಷಯ ಪದಾರ್ಥಗಳಲ್ಲಿ ಹರಿಯಬಿಡದೆ, ನಿರಂತರ ಭಗವಂತನ ಧ್ಯಾನದಲ್ಲಿ ನಿಲ್ಲಿಸಬೇಕು.   ಭಾಗವತ ಏಕಾದಶಸ್ಕಂಧದಲ್ಲಿ ಭಗವತ್ಪ್ರೀತಿಯ ಲಕ್ಷಣಗಳನ್ನು ತಿಳಿಸುತ್ತಾ, "ಹರಿಯ ಸ್ಮರಣೆಯನ್ನು ಸದಾ ಮಾಡುತ್ತಾ, ಭಕ್ತಿಯಿಂದ ಹೃದಯದಲ್ಲಿ ಹರಿಯನ್ನು ನಿಲ್ಲಿಸಿಕೊಂಡಿರುವವನು ಭಾಗವತೋತ್ತಮನು" ಎಂದಿದ್ದಾರೆ.  ವೇದಗಳೆಲ್ಲವೂ ವಿವರಿಸುವ ಕರ್ಮಗಳನ್ನು ಜೀವಿಯು ಭಗವಂತನ ಪ್ರೀತಿಗೋಸ್ಕರವಾಗಿಯೇ ಮಾಡಬೇಕು ಎಂಬುದನ್ನು ಯಾರು ಅರಿತು ಶುದ್ಧ ಮನಸ್ಸಿನಿಂದ ಆಚರಿಸುತ್ತಾರೋ, ಅವರು ಭಗವಂತನ ಗುಣಗಳನ್ನು ಕದಿಯುವ ಕಳ್ಳರಾಗುತ್ತಾರೆ ಎಂದಿದೆ ಭಾಗವತ.  ಸದ್ಗುಣಗಳನ್ನು ಕದಿಯುವುದೆಂದರೆ ಭಗವನ್ನಾಮ ಸ್ಮರಣೆಯನ್ನು ಅನವರತ ಮಾಡುತ್ತಲೇ ಇರುವುದು ಎಂಬರ್ಥವಾಗುತ್ತದೆ.  ಯಾರು ಹೀಗೆ ಭಗವಂತನ ಧ್ಯಾನವನ್ನು ಹೃದಯದಲ್ಲಿ ಜತನವಾಗಿ ಮುಚ್ಚಿಟ್ಟುಕೊಂಡು ಸ್ಮರಿಸುತ್ತಾ, ಉಪಾಸನೆ ಮಾಡುತ್ತಾರೋ, ಅಂತಹವರ ಪಾಪಗಳನ್ನು ಭಗವಂತ ತಾನು ಕದ್ದು, ನಮಗೆ ಸುಖವನ್ನು ಕರುಣಿಸುತ್ತಾನೆ.  ಅಘ ಎಂದರೆ ಪಾಪವೆಂದರ್ಥ.  ಈ ಮಾನಸ ಪೂಜೆ ಅಥವಾ ಆರಾಧನೆಯನ್ನು ಮಾಡುವುದು ನಮಗೆ ಮೋಕ್ಷಸಾಧನೆಯಾಗುತ್ತದೆ. 


ಮೋಕ್ಷಪ್ರದನಾಗಿರುವ ಪರಮಾತ್ಮನ ಸ್ವಾತಂತ್ರ್ಯಾದಿ ಗುಣಗಳನ್ನು ನಮ್ಮ ಯೋಗ್ಯತಾನುಸಾರ, ಯಥಾಶಕ್ತಿಯಾಗಿ ಅಂತರಂಗದಲ್ಲಿರಿಸಿಕೊಂಡು ಧ್ಯಾನಿಸುವುದರಿಂದ ಮಾತ್ರ ನಮ್ಮ ಸಕಲ ಪಾಪಗಳೂ ಪರಿಹಾರವಾಗಬಹುದು.  ಭಗವಂತನ ಸದ್ಗುಣಗಳನ್ನು ಕದಿಯುವುದು ಕೂಡ ಅಸ್ವಾತಂತ್ರ್ಯನಾದ ಜೀವಿಗೆ ಸಾಧ್ಯವಿಲ್ಲ.  ಆದರೆ ನಿನ್ನಯ ಸದ್ಗುಣಗಳನ್ನು ಕದಿಯುವ ಯೋಗ್ಯನನ್ನಾಗಿ ಮಾಡು ಎಂದು ಭಗವಂತನಿಗೇ ಶರಣಾಗತರಾಗುವುದನ್ನು ಮಾತ್ರ ಮಾಡಬಹುದು.  ನಮ್ಮ ಮನಸ್ಸಿನಲ್ಲಿ ಏನಾದರೂ ಆಲೋಚನೆಗಳು ಹುಟ್ಟಿದರೆ ಅದು ಅವನ ಅನನ್ಯ ಕಾರುಣ್ಯವೇ ಆಗಿರುತ್ತದೆ.  ಮಾನಸ ಸರೋವರದಲ್ಲಿ ಸಂಚಲನ ಉಂಟಾಗಬೇಕಾದರೆ, ಭಗವತ್ಪ್ರೇರಣೆ ಖಂಡಿತಾ ಇರಲೇಬೇಕು.  ಅನ್ಯಥಾ ಶರಣಂ ನಾಸ್ತಿ ಎಂದು ತನ್ನ ಬಳಿಗೆ ಬಂದವರ ಅಘಗಳನ್ನೆಲ್ಲಾ ಕದ್ದು ಸರ್ವ ಸ್ವತಂತ್ರ್ಯನಾದ ಭಗವಂತನು ಅಘಹರನಾಗುತ್ತಾನೆ.  ಸದಾ ಸರ್ವದಾ "ನ ಹಂ ಕರ್ತಾ ಹರಿಃ ಕರ್ತಾ" ಎಂಬ ಅರಿವು, ಧ್ಯಾನವನ್ನು ಉಸಿರಾಟದಷ್ಟು ಸಹಜವಾಗಿ ಅಳವಡಿಸಿಕೊಳ್ಳುವುದೇ ಭಗವಂತನ ಸದ್ಗುಣಗಳನ್ನು ಕದಿಯುವುದು.  ಅಘವ ಕದಿವನೆಂದರೆ ಅದು ಭಗವಂತನ ಅತಿಶಯ ಕಾರುಣ್ಯವೆಂದು ತಿಳಿಯಬೇಕು.  ಸ್ಮರಣೆ ಮಾತ್ರಕ್ಕೇ ಅವನು, ನಮಗೇ ಅರಿವಿಲ್ಲದಂತೆ ನಮ್ಮ ಅಘಗಳನ್ನು ಕದಿಯದಿರುತ್ತಿದ್ದರೆ, ನಾವು ದಿನನಿತ್ಯ ಮಾಡುವ ಪಾಪಗಳ ಪರ್ವತದ ಅಡಿಯಲ್ಲಿ ಸಿಲುಕಿ, ನಸುಕಿ ನಾಶವಾಗಿಬಿಟ್ಟಿರುತ್ತಿದ್ದೆವು.  ಆದರೆ ಹಾಗಾಗಿಲ್ಲವೆಂದರೆ ನಾವು ಅವನಿಗಾಗಿ ಮಾಡುವ ಅತ್ಯಲ್ಪ ಪೂಜೆಯಿಂದಲೂ, ನಾಮ ಸ್ಮರಣೆಯಿಂದಲೂ ತೃಪ್ತನಾಗುವ ಭಗವಂತ, ಸದ್ದು ಮಾಡದೆ ನಮ್ಮ ಅಘಗಳನ್ನು ಕದ್ದು ಕಳೆದು ಬಿಡುತ್ತಿದ್ದಾನೆಂದೇ ಅರ್ಥೈಸಿಕೊಳ್ಳಬೇಕು.   ನಮ್ಮನ್ನು ಸದಾ ಕಾಡುವ ನಮ್ಮದೇ ಪಾಪಗಳ ರಾಶಿಯಲ್ಲಿ ಮುಳುಗಿದ್ದರೂ, ಅಕಸ್ಮಾತ್ತಾಗಿ ನಾವು ಮಾಡುವ ನಾಮ ಸ್ಮರಣೆಯಿಂದಲೇ ಪ್ರೀತನಾಗಿ ಅವನು, ನಮ್ಮ ಪಾಪಗಳ ದರ್ಶನವನ್ನು ಸಂಪೂರ್ಣವಾಗಿ ನಮಗೆ ಮಾಡಿಸದೆಲೇ, ನಮ್ಮ ಅರಿವಿಗೂ ಬರದಂತೆಯೇ ಕದ್ದೊಯುವುದೇ ಅವನ ಕಾರುಣ್ಯದ ಪರಾಕಾಷ್ಠೆಯನ್ನು ತೋರಿಸುತ್ತದೆ.

ಅನಘನೆಂದೆನಿಸಿ - ಅನಘನೆಂದರೆ ಪಾಪವಿಲ್ಲದವನು, ಶುದ್ಧ, ನಿರ್ಮಲನು ಎಂದರ್ಥ.  ಸಕಲ ಜೀವಾತ್ಮರಿಂದ ಪುಣ್ಯ ಪಾಪ ಕರ್ಮಗಳನ್ನು ಸ್ವತಂತ್ರನಾಗಿ, ನಿಯಾಮಕನಾಗಿ ನಿಂತು ನಿರ್ವಹಿಸುವವನು, ನೆರವೇರಿಸುವವನೂ ಆಗಿರುವುದರಿಂದ ಭಗವಂತನು ಪಾಪ ಪುಣ್ಯಗಳ ಲೇಪವಿಲ್ಲದವನಾಗಿದ್ದಾನೆ.  ಭಗವಂತನು ದಿನ ನಿತ್ಯವೂ, ಅನುಕ್ಷಣವೂ ಸರ್ವ ಸ್ವತಂತ್ರನಾಗಿ ಪಾಪ ಪುಣ್ಯಗಳನ್ನು ದಾಟಿ ಇರುವವನು.   "ಏಷ ಆತ್ಮಾ ಅಪಹತಪಾಪ್ಮಾ ವಿರಜಃ ವಿಶುದ್ಧಃ" - ಈ ಆತ್ಮನು ಯಾವ ದೋಷವೂ ಇಲ್ಲದವನು ಎಂದು ಛಾಂದೋಗ್ಯೋಪನಿಷತ್ತಿನಲ್ಲಿ ಭಗವಂತನನ್ನು ವರ್ಣಿಸಲ್ಪಟ್ಟಿದೆ.  ಭಗವಂತ ದುಃಖವಿಲ್ಲದನಾದ್ದರಿಂದ ಅವನು ಪಾಪರಹಿತನು.   ಕರ್ಮಗಳ ಫಲಕ್ಕೆ ಸ್ವಾಮಿಯಾಗಿರುವ ಭಗವಂತನಿಗೆ ಪಾಪದ ಲೋಪವಿಲ್ಲವಾದ್ದರಿಂದಲೇ ಅವನು ಅನಘನೆನಿಸಿಕೊಳ್ಳುವನು.   ನಾವು ಯಾರನ್ನು ಭಜಿಸುವುದರಿಂದ ನಮ್ಮ ಎಲ್ಲಾ ಅಘಗಳೂ ನಾಶವಾಗಿ ಬಿಡುತ್ತವೋ,  ಅವನು ಅನಘನೆಂದೆನಿಸಿಕೊಳ್ಳುತ್ತಾನೆ.


ಭಗವದ್ಗೀತೆಯ ೪ನೇ ಅಧ್ಯಾಯದ ೧೪ನೇಶ್ಲೋಕದಲ್ಲಿ

ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ |
ಇತಿ ಮಾಂ ಯೋಭಿಜಾನಾತಿ ಕರ್ಮಭಿರ್ನ ಸ ಬದ್ಧ್ಯತೇ || - ಕರ್ಮಗಳ ಫಲದಲ್ಲಿ ನನಗೆ ಸ್ಪೃಹೆ ಇರುವುದಿಲ್ಲ, ಅದಕ್ಕಾಗಿ ನನಗೆ ಕರ್ಮಗಳು ಅಂಟಿಕೊಳ್ಳುವುದಿಲ್ಲ.  ಹೀಗೆ ನನ್ನನ್ನು ತತ್ತ್ವತಃ ತಿಳಿದುಕೊಳ್ಳುವವನೂ ಕರ್ಮಗಳಿಂದ ಬಂಧಿತನಾಗುವುದಿಲ್ಲ ಎಂದು ಭಗವಂತನೇ ತಿಳಿಸಿದ್ದಾನೆ.

ವಿಷ್ಣು ಸಹಸ್ರನಾಮದಲ್ಲಿ ಬರುವಂತೆ "ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ" ಎನ್ನುತ್ತಾ ಭಗವಂತನು ಕೇವಲ ಸದ್ಗುಣಗಳ ಆಗರನು, ಪಾಪಾದಿ ದೋಷರಹಿತನು.  ಅವನನ್ನು ಆರಾಧಿಸುವ, ಸ್ಮರಿಸುವ ನಮ್ಮನ್ನೂ ದೋಷರಹಿತರನ್ನಾಗಿಯೂ, ಪಾಪರಹಿತರನ್ನಾಗಿಯೂ ಮಾಡು ಎಂದು ಪ್ರಾರ್ಥಿಸಬೇಕು.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ
ಹೃದಯದಲಿ ತವ ರೂಪ ವದನದಲಿ ತವ ನಾಮ
ಉದರದಲಿ ನೈವೇದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ
ಪದಜಲಗಳಿರಲು ಭಯವುಂಟೆ || -  ಮನಸ್ಸಿನಲ್ಲಿ ನಿನ್ನ ರೂಪವೂ, ಬಾಯಿಯಲ್ಲಿ ನಾಮಸ್ಮರಣೆಯೂ, ಹೊಟ್ಟೆಯಲ್ಲಿ ನಿನಗೆ ನೈವೇದ್ಯವಾಗಿರುವ ಆಹಾರವೂ, ತಲೆಯಲ್ಲಿ ನಿನಗೆ ಅರ್ಪಿಸಲಾಗಿದ್ದ ತುಳಸಿ, ಪುಷ್ಪಗಳ ನೈರ್ಮಾಲ್ಯವೂ ಮತ್ತು ನನ್ನ ಅವಯವಗಳಲ್ಲಿ ನಿನ್ನ ಪಾದೋದಕಗಳನ್ನೂ ಧರಿಸಿರಲು ನನಗೆಲ್ಲಿಯ ಸಂಸಾರ ಭಯವಿರುವುದು ಎಂದಿದ್ದಾರೆ.

ಮನದಲ್ಲಿ ಹರಿಯ ಚಿಂತನೆ ಉಳ್ಳ ನರನಿಗೆ
ಮನೆಯಾದರೇನು ವನವೇನು | ವನವೇನು ಸತತ ದು-
ರ್ಜನರ ಸಂಗದೊಳು ಇರಲೇನು || -  ಸದಾ ಶ್ರೀಹರಿಯ ಸ್ಮರಣೆ ಮನದಲ್ಲಿ ತುಂಬಿರುವಾಗ, ಮನೆಯಲ್ಲಿ ಗೃಹಸ್ಥನಾಗಿದ್ದರೇನು, ವನದಲ್ಲಿ ವಾಸಪ್ರಸ್ಥನಾಗಿದ್ದರೇನು ಅಥವಾ ಸತತವಾಗಿ ದುರ್ಜನರ ಸಂಗದೊಳಗಿದ್ದರೇನು, ಎಲ್ಲವೂ ಒಂದೇ, ಯಾವುದೂ ವಿಚಲಿತನನ್ನಾಗಿಸುವುದಿಲ್ಲ ಎನ್ನುತ್ತಾರೆ.

ಶೋಕನಾಶನ ವಿಗತಶೋಕ ನೀನೆಂದರಿದು
ನಾ ಕರವಮುಗಿವೆ ಕರುಣಾಳು | ಕರುಣಾಳು ಭಕತರ-
ಶೋಕಗಳ ಕಳೆದು ಸುಖವೀಯೋ || - ವಿಗತಶೋಕ (ದುಃಖರಹಿತ ಮತ್ತು ಶೋಕನಾಶಕ)ನಾದ ನೀನು ಭಕ್ತರ ದುಃಖ (ಪಾಪ)ಗಳನ್ನು ಪರಿಹರಿಸುವವನು ಎಂಬುದನ್ನು ನಾನು ಅರಿತು ನಿನಗೆ ಕರವ ಜೋಡಿಸಿ ಭಕ್ತ ಜನರ ಶೋಕಗಳ (ಪಾಪಗಳ) ಪರಿಹರಿಸಿ ಸುಖವನ್ನು ಅನುಗ್ರಹಿಸೆಂದು ಬೇಡುತ್ತಿರುವೆನು ಎನ್ನುತ್ತಾ ಮಾನಸ ಪೂಜೆಯ ಮಾಡಿ ನಮ್ಮನ್ನೇ ನಾವು ಸಮರ್ಪಿಸಿಕೊಂಡರೆ ಭಗವಂತ ನಮ್ಮನ್ನು ರಕ್ಷಿಸುತ್ತಾನೆಂದಿದ್ದಾರೆ.

ಡಿವಿಜಿಯವರು ತಮ್ಮ ಕಗ್ಗದಲ್ಲಿ
ಬಹಿರದ್ಭುತವ ಮನುಜನಂತರದ್ಭುತವರಿತು
ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್
ಬಹುಪರಿಯುಪಾಯಗಳ ನಿರವಿಸಿಹರದಕೇಕೆ - ಮನುಷ್ಯನ ಜನ್ಮವಾಗಿರುವುದೇ ಹಿರಿದಾದ ಒಂದು ಶಕ್ತಿಯಿದೆಯೆಂಬ ಅನ್ವೇಷಣೆಯನ್ನು ಮಾಡುವುದಕ್ಕೋಸ್ಕರವಾಗಿದೆ.  ಮಾನವ ಶರೀರದೊಳಗಿರುವ ಅಂತರಂಗವೆಂಬುದೊಂದು ಅದ್ಭುತವಾಗಿದೆ.  ಬ್ರಹ್ಮಾಂಡದಲ್ಲಿರುವುದೆಲ್ಲಾ ಪಿಂಡಾಂಡದಲ್ಲಿದೆಯೆಂಬ ಮಾತಿನಂತೆ, ನಮ್ಮಂತರಂಗದಲ್ಲಿರುವ ಶಕ್ತಿಯನ್ನು ಅಥವಾ ಸತ್ವವನ್ನು ಬಾಹ್ಯವಾಗಿರುವ ಶಕ್ತಿಯ / ಸತ್ವದ ಅದ್ಭುತವನ್ನು ಗ್ರಹಿಸಿ, ಎರಡರ ಸಮನ್ವಯವನ್ನು ಸಾಧಿಸಿ, ನಾವು ಅದೇ ಪಥದಲ್ಲಿ ನಡೆಯ ಬೇಕು ಮತ್ತು ಆನಂದಾನುಭವವನ್ನು ಪಡೆಯಬೇಕೆಂದು,  ನಮ್ಮ ಹಿರಿಯರು ಅನೇಕ ಉಪಾಯಗಳನ್ನು ಸೂಚಿಸಿದ್ದಾರೆ.  ಬಹುವಿಧದ ಉಪಾಯಗಳಲ್ಲಿ "ಭಕ್ತಿ"ಯೆಂಬುದು ಬಹು ಮುಖ್ಯವಾದ, ಮೂಲವಾದ ಉಪಾಯ.  ಅದನ್ನು ಡಿವಿಜಿಯವರು "ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ" - ಬಾಹ್ಯದಲ್ಲಿರುವ ಶುದ್ಧಸತ್ತ್ವವು ಅನಂತವಾದದ್ದು, ಅದನ್ನು ನಾವು ನಮ್ಮ ಹೊರಗಿನ ಕಣ್ಣು, ಕಿವಿಗಳಿಂದ ಅರಿಯಲಾರೆವು.  ಅದನ್ನು ತಿಳಿಯಬೇಕೆಂದರೆ ನಮ್ಮ ಅಂತರ್ಚಕ್ಷುಗಳು ತೆರೆಯಬೇಕು ಮತ್ತು ಶುದ್ಧಸತ್ತ್ವವು ನಮ್ಮೊಳಗಿದೆಯೆಂಬ ಅರಿವು, ನಂಬಿಕೆ ಬರಬೇಕು.  ಈ ಅರಿವು ಬರಲು ನಮ್ಮನ್ನೇ ನಾವು ಸಮರ್ಪಿಸಿಕೊಂಡು, ಮಾನಸಪೂಜೆ ಮಾಡಬೇಕು. 

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು
ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ
ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ
ಸಹಭಾವವದಕೆ ಸರಿ - ಮಂಕುತಿಮ್ಮ || - ನಮ್ಮಂತರಂಗದಲ್ಲಿರುವುದೂ, ಬಾಹ್ಯದಲ್ಲಿರುವುದೂ, ಎರಡೂ ಒಂದೇ ಎಂಬುದೇ ಸತ್ಯವಾದ ಮಾತು.  ಆ ಸತ್ಯವನ್ನೇ ಮತ್ತೆ ಮತ್ತೆ ಮನದಟ್ಟು ಮಾಡಿಕೊಂಡು ಅಂತರ್ಚಕ್ಷುಗಳನ್ನು ತೆರೆಯುವುದಕ್ಕೆ ಸಾಧನವಾಗಿರುವುದೇ ಷೋಡಶೋಪಚಾರದ ಪೂಜೆಯ ವಿಧಿ ವಿಧಾನಗಳು.  ಮಾನಸಪೂಜೆಯ ನಂತರ ನಾವು ಪ್ರತಿಮೆಯಲ್ಲಿ ಪ್ರಾಣಪ್ರತಿಷ್ಠಾಪನೆಯ ಕ್ರಿಯೆಯ ಮೂಲಕ ಒಳಗಿರುವ ಭಗವಂತನನ್ನೇ ಪ್ರತಿಮೆಯಲ್ಲಿ ಆಹ್ವಾನಿಸುತ್ತೇವೆ, ಸ್ಥಾಪಿಸಿ, ಪೂಜಿಸುತ್ತೇವೆ.  ಹೀಗೆ ಮಾಡುವ ವಿಧಾನದಲ್ಲಿ ಆಹ್ವಾನಿಸುವ ಆ ಶುದ್ಧವಾದ ಅನಂತವಾದ ಸತ್ತ್ವದ ಮಹತ್ವವನ್ನು ಒಪ್ಪಿಕೊಳ್ಳುವುದು, ವಿನಮ್ರತೆಯಿಂದ ಸ್ವಸಮರ್ಪಣೆ ಮಾಡಿಕೊಳ್ಳುವುದು ಮತ್ತು ನಾನಾ ವಿಧವಾದ ನೈವೇದ್ಯವನ್ನು ಅರ್ಪಿಸಿ ನಂತರ ಪ್ರಸಾದವೆಂದು ಎಲ್ಲರೊಂದಿಗೂ ಹಂಚಿಕೊಂಡು ಸ್ವೀಕರಿಸುವುದೆಂಬ ಮೂರು ವಿಧಾನಗಳಿವೆ.  ಮಾನಸಪೂಜೆಯಲ್ಲಿ ಮನಸ್ಸನ್ನು ಸಿದ್ಧ ಮಾಡಿಕೊಂಡು, ಬಾಹ್ಯಪೂಜೆಯಲ್ಲಿ ತೊಡಗಿದಾಗ, ಅಂತರಂಗದ ಕಣ್ಣುಗಳು ತೆರೆದು, ಭಗವಂತನೆಡೆಗೆ ಹೆಜ್ಜೆಯಿಡಲು ತೊಡಗುತ್ತೇವೆಂಬುದೇ ಇದರ ಒಳಾರ್ಥವಾಗುತ್ತದೆ.



ಚಿತ್ರಕೃಪೆ : ಅಂತರ್ಜಾಲ

Sunday, June 1, 2014

ಕರುಣಾ ಸಂಧಿ - ೨೧ ನೇ ಪದ್ಯ


ಕಾಮಧೇನು ಸುಕಲ್ಪತರು ಚಿಂ-
ತಾಮಣಿಗಳಮರೇಂದ್ರ ಲೋಕದಿ
ಕಾಮಿತಾರ್ಥಗಳೀವವಲ್ಲದೆ ಸೇವೆ ಮಾಳ್ಪರಿಗೆ |
ಶ್ರೀಮುಕುಂದನ ಪರಮ ಮಂಗಳ-
ನಾಮ ನರಕಸ್ಥರನು ಸಲಹಿತು
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು ||೨೧||


ಪ್ರತಿಪದಾರ್ಥ : ಕಾಮಧೇನು - ಇಷ್ಟಾರ್ಥಗಳನ್ನು ಪೂರೈಸುವ ಸ್ವರ್ಗಲೋಕದ ಹಸು, ಸುಕಲ್ಪತರು - ತನ್ನ ಸೇವೆ ಮಾಡಿದವರು ಕಲ್ಪಿಸಿಕೊಂಡದ್ದನ್ನೆಲ್ಲಾ ಕೊಡುವಂತಹ ವೃಕ್ಷ, ಚಿಂತಾಮಣಿ - ಚಿಂತಿಸಿದ್ದನ್ನು ಕೊಡತಕ್ಕಂತಹ ಮಣಿ, ಅಮರೇಂದ್ರಲೋಕದಿ - ದೇವಲೋಕ ಅಥವಾ ಸ್ವರ್ಗಲೋಕದಲ್ಲಿ, ಕಾಮಿತಾರ್ಥಗಳೀವುವಲ್ಲದೆ - ಬೇಡಿದ ಐಹಿಕ ಸುಖ ಭೋಗಗಳನ್ನು ಮಾತ್ರ ಕೊಡುತ್ತವೆ, ಸೇವೆ ಮಾಳ್ಪರಿಗೆ - ತಮ್ಮ ಸೇವೆ ಮಾಡುವಂತಹವರಿಗೆ, ಶ್ರೀಮುಕುಂದನ - ಭಗವಂತನಾದ ಶ್ರೀಹರಿಯ, ಪರಮಮಂಗಳ ನಾಮ - ಮಂಗಳಕರವಾದ / ಶುಭಕರವಾದ ನಾಮ ಸ್ಮರಣೆ, ನರಕಸ್ಥರನು ಸಲಹಿತು - ನರಕದಲ್ಲಿ ನರಳುತ್ತಿದ್ದ ನರಕವಾಸಿಗಳಿಗೂ ಮೋಕ್ಷ ದೊರೆಯುವಂತೆ ಮಾಡುವಂತಹ, ಪಾಮರರ ಪಂಡಿತರೆನಿಸಿ - ಅಜ್ಞಾನಿಗಳ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನಿಗಳನ್ನಾಗಿ ಮಾಡುವಂತಹುದು, ಪುರುಷಾರ್ಥ ಕೊಡುತಿಹುದು - ಧರ್ಮ ಅರ್ಥ ಕಾಮ ಮೋಕ್ಷಗಳನ್ನು ದೊರಕಿಸಿ ಕೊಡುವಂತಹುದು.

ಅಮರ ಲೋಕದಲ್ಲಿರುವಂತಹ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ ಇವೆಲ್ಲಾ ಸೇವೆ ಮಾಡುವಂತಹವರಿಗೆ, ಬೇಡಿದ ಇಷ್ಟಾರ್ಥವನ್ನೇ ಕೊಡುವ ಸಾಮರ್ಥ್ಯವನ್ನು ಹ್ಹೊಂದಿರುತ್ತದೆ. ಆದರೆ ಶಾಶ್ವತವಾದ ಸ್ವರ್ಗಲೋಕ, ಮೋಕ್ಷ, ಬಿಮ್ಬಾಪರೋಕ್ಷ ಇವುಗಳನ್ನು ಕೊಡುವುದಿಲ್ಲ.  ಮೋಕ್ಷಪ್ರದವಾದ  ಮುಕುಂದನ ಮಂಗಳ ನಾಮ ಉಚ್ಚಾರಣ ಮಾತ್ರದಿನ್ದಲೇ ಘೋರವಾದ  ನರಕದಲ್ಲಿ ಬಿದ್ದಂತಹ ಜೀವರುಗಳನ್ನು ಪಾಪಗಳಿಂದ ಮುಕ್ತರನ್ನಾಗಿ ಮಾಡಿ   ಧರ್ಮಾರ್ಥಗಳನ್ನು ಕೊಟ್ಟು ಸಂರಕ್ಷಣೆಯನ್ನು ಮಾಡುತ್ತದೆ.   ಅನಂತಾನಂತ ಕಾಲಗಳಲ್ಲಿ ಬ್ರಹಾಂಡದಲ್ಲಿ ಸೃಷ್ಟಿಗೆ ಬರುವ ಭಕ್ತ ಜನರಿಗೆ ಪುರುಷಾರ್ಥಗಳನ್ನು ಕೊಡುತ್ತದೆ. ಇದರಿಂದ ಭಗವನ್ನಾಮೋಚ್ಛಾರಣೆಯು  ಏತಾದೃಷವಾದದ್ದು ಎಂದು ಅರ್ಥಮಾಡಿಕೊಳ್ಳಬಹುದು.

ಕಾಮಧೇನು - ದೇವಲೋಕದ ಹಸು ಸುರಭಿಯು ಇಂಗಡಲ ಮಥನ ನಡೆದಾಗ ಉದ್ಭವಿಸಿದ ರತ್ನಗಳಲ್ಲಿ ಒಂದಾಗಿದ್ದು ಕಾಮಧೇನುವೆಂದು ಕರೆಯಲ್ಪಡುತ್ತದೆ.  ಕಾಮಧೇನುವೆಂಬುದು ಚಲಿಸುವಂತಹ ಒಂದು ಪಶು ಮತ್ತು ಕೇಳಿದ್ದನ್ನು ಕೊಡುವಂತಹುದು.  ಅಮರೇಂದ್ರರ ಲೋಕದಲ್ಲಿದ್ದು, ಅಲ್ಲಿರುವವರು ಸೇವೆ ಮಾಡಿ, ಒಲಿಸಿಕೊಂಡಾಗ ಮಾತ್ರ ಕೇಳಿದ್ದನ್ನು ಕೊಡುವಂತಹುದು.  ಅದರಲ್ಲೂ ಕೇಳಿದ್ದನ್ನೆಲ್ಲಾ ಕೊಡುವಷ್ಟು ಶಕ್ತಿಯಿಲ್ಲದಿದ್ದರೂ, ಅತಿ ಶ್ರೇಷ್ಠವಾದವುಗಳನ್ನು ಕೊಡಲಾಗದಿದ್ದರೂ, ತನ್ನದೇ ಮಿತಿಯಲ್ಲಿ ಏನನ್ನಾದರೂ ಕೊಡಬಲ್ಲದು.  ಗೋಮಾತೆಯಾಗಿ ಸುರಭಿಯು ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದಾಗ, ಕ್ಷೀರಾಭಿಷೇಕ ಮಾಡಿದವಳು. 

ಕಾಮಧೇನುವೆಂದು ದೇವಲೋಕದ ಸುರಭಿಗೆ ಮಾತ್ರ ಕರೆಯುವುದಿಲ್ಲ, ವಸಿಷ್ಠ ಮಹರ್ಷಿಗಳ ಗೋಮಾತೆ ನಂದಿನಿಯೂ ಕೂಡ ಕಾಮಧೇನುವೆನಿಸಿಕೊಂಡವಳು.  ವಿಶ್ವಾಮಿತ್ರ ಬ್ರಹ್ಮರ್ಷಿಯಾಗುವುದಕ್ಕೆ ಮುಂಚೆ ವಸಿಷ್ಠರ ಆಶ್ರಮದಲ್ಲಿ ನಂದಿನಿಯೆಂಬ ಕಾಮಧೇನುವಿನಿಂದ ಅತಿಥಿ ಸತ್ಕಾರ ಪಡೆದವನು.  ರಾಜನಾದ ತನಗೇ ಕಾಮಧೇನು ಬೇಕೆಂದು ಬಲವಂತವಾಗಿ ಕಟ್ಟಿ ಎಳೆದೊಯ್ಯಲು ಪ್ರಯತ್ನಿಸಿದನು.  ಸಾಧ್ಯವಾಗದೆ ಸೋತು, ತಪಸ್ಸು ಮಾಡಿ ’ಬ್ರಹ್ಮರ್ಷಿ’ಯಾದನು.  ಹಾಗೆಯೇ ಅಷ್ಟವಸುಗಳೂ ಕೂಡ ಈ ಗೋಮಾತೆಯನ್ನು ಅಪಹರಿಸಲು ಪ್ರಯತ್ನಿಸಿ ಶಾಪಗ್ರಸ್ತರಾದರು.  ಗಂಗಾದೇವಿಯ ಮಕ್ಕಳಾಗಿ ಜನಿಸಿ, ಏಳು ವಸುಗಳು ನೀರು ಪಾಲಾಗಿ ಕೊನೆಗೆ ಅಷ್ಟವಸುವು ಭೀಷ್ಮನಾಗಿ ಜನಿಸಿದನು.

ಜಮದಗ್ನಿ ಮುನಿಯ ಹಸುವಾದ ಕಪಿಲೆಯೂ ಕಾಮಧೇನುವೆಂದೇ ಕರೆಯಲ್ಪಟ್ಟವಳು.  ಭಗವಂತನಿಂದ ಬ್ರಹ್ಮದೇವರಿಗೂ, ಬ್ರಹ್ಮನಿಂದ ಭೃಗುಮುನಿಗೂ, ಭೃಗುಮುನಿಯಿಂದ ಜಮದಗ್ನಿಗೂ ಕೊಡಲ್ಪಟ್ಟವಳು.  ರಾಜಾ ಕಾರ್ತವೀರ್ಯಾರ್ಜುನನು ಜಮದಗ್ನಿ ಮುನಿಯ ಆಶ್ರಮಕ್ಕೆ ಬಂದಾಗ ಕಪಿಲೆಯು ರಾಜನಿಗೆ ಅತಿಥಿ ಸತ್ಕಾರ ಮಾಡಿದಳು.  ರಾಜನು ಗೋಮಾತೆ ತನಗೇ ಬೇಕೆಂದು ಕಟ್ಟಿ, ಸೈನ್ಯದ ಬಲದಿಂದ ಒಯ್ಯಲು ಪ್ರಯತ್ನಿಸಿದಾಗ, ಸಮಸ್ತ ಸೈನ್ಯವನ್ನೂ ನಾಶಗೊಳಿಸಿ, ಅಂತರಿಕ್ಷಕ್ಕೆ ಹಾರಿ ಮರೆಯಾದವಳು.  



ಕಲ್ಪವೃಕ್ಷ - ಕಲ್ಪವೃಕ್ಷವು ಚಲಿಸದಂತಹ ಸ್ಥಾವರ ಪದಾರ್ಥವು.  ಇದು ಸಣ್ಣ ಗಿಡವೂ ಆಗಬಹುದು, ಹೆಮ್ಮರವೂ ಆಗಬಹುದು.   ಈ ಮರದ ಕೆಳಗೆ ಕುಳಿತು ಅದರ ಸುಗಂಧವನ್ನು ಆಘ್ರಾಣಿಸಿದ ಮಾತ್ರಕ್ಕೇ ರೋಗಾದಿಗಳು ಗುಣವಾಗುವುವು, ನೆರಳಲ್ಲಿ ಕುಳಿತರೇ ಪೂರ್ವ ಜನ್ಮದ ಸ್ಮರಣೆ, ಹೀಗೆ ಕಲ್ಪವೃಕ್ಷದ ಮಹಿಮೆ ಅಪಾರವಾಗಿದೆ.  ಆದರೆ ಕಲ್ಪವೃಕ್ಷವೆಂಬ ಮರವು ಬಯಸಿದ್ದನ್ನೆಲ್ಲಾ ಕೊಡುವಷ್ಟು ಸಾಮರ್ಥ್ಯ ಹೊಂದಿದ್ದರೂ ಕೂಡ, ಭಗವಂತನ ನಾಮಸ್ಮರಣೆಯೊಂದೇ ನೀಡಬಲ್ಲಂತಹ ಮುಕ್ತಿ/ಮೋಕ್ಷವೆಂಬ ಅತಿಶಯವಾದ ಹಾಗೂ ಅತ್ಯುತ್ಕೃಷ್ಠವಾದ ಫಲವನ್ನು ನೀಡಲಾರದು.   


ಸತ್ಯಭಾಮದೇವಿಯ ಪ್ರೇರಣೆಯಿಂದ ಶ್ರೀಕೃಷ್ಣನು ದೇವಲೋಕದಲ್ಲಿದ್ದ ಪಾರಿಜಾತ ವೃಕ್ಷವನ್ನು ಕಿತ್ತು ಗರುಡನ ಮೇಲಿಟ್ಟು ಅದನ್ನು ಭೂಲೋಕಕ್ಕೆ ತರುವಾಗ, ದೇವತೆಗಳು  ಯುದ್ಧಕ್ಕೆ ಬರುತ್ತಾರೆ.  ಎಲ್ಲರನ್ನೂ ಸೋಲಿಸಿ ಶ್ರೀಕೃಷ್ಣನು ಹೊರಟಾಗ ಇಂದ್ರನು ಸ್ವಯಂ ಬಂದು ಭಗವಂತನಲ್ಲಿ ಪಾರಿಜಾತ ವೃಕ್ಷವನ್ನು ದೇವಲೋಕದಲ್ಲೇ ಬಿಟ್ಟು ತೆರಳುವಂತೆ ಕೇಳಿಕೊಳ್ಳುತ್ತಾನೆ.  ಈ ಕಲ್ಪವೃಕ್ಷವು ಭೂಲೋಕಕ್ಕೆ ಬಂದರೆ, ಅದರ ನೆರಳಿನಲ್ಲಿ ಕುಳಿತು ಆಲೋಚಿಸಿದ ಕಾಮನೆಗಳೂ ಫಲವಾಗಿ ಬಿಡುವುದರಿಂದ, ದೇವಲೋಕದ ಮಹಿಮೆಯು ತಗ್ಗಿ ಬಿಡುವುದೂ ಮತ್ತು ಜೀವಿಗಳು ಕರ್ಮ ಮಾಡುವುದನ್ನೇ ನಿಲ್ಲಿಸಿ ಬಿಡುವರಾದ್ದರಿಂದಲೇ ತಾನು ಭಗವಂತನ ಜೊತೆಗೆ ಯುದ್ಧ ಮಾಡುವ ಅನಿವಾರ್ಯವಾಯಿತೆಂದು ತಿಳಿಸುತ್ತಾನೆ.  ಶ್ರೀಕೃಷ್ಣನು ತಾನು ಅವತಾರ ಸಮಾಪ್ತಿಯಾಗಿ ವೈಕುಂಠಕ್ಕೆ ಮರಳಿದಾಗ ಕಲ್ಪವೃಕ್ಷವು ಕೂಡ ದೇವಲೋಕಕ್ಕೆ ಮರಳುವುದೆಂದು ತಿಳಿಸುತ್ತಾನೆ.  ಇಷ್ಟು ಮಹಿಮೆಯುಳ್ಳ ಕಲ್ಪವೃಕ್ಷಕ್ಕೂ ಕೂಡ ಮಿತಿಯಿದೆ.  ಆದರೆ ಭಗವಂತನ ಕರುಣೆಗೆ ಯಾವ ಮಿತಿಯೂ ಇಲ್ಲ. 

ಚಿಂತಾಮಣಿ - ಚಿಂತಾಮಣಿಯೆನ್ನುವುದು ಒಂದು ಅನರ್ಘ್ಯ ರತ್ನ.  ಒಂದು ಜಡವಸ್ತುವಾದ ಮಣಿಯ ಒಳಗಿದ್ದು  ಅಚ್ಚರಿಯನ್ನು ಮಾಡಿಸುವವನು ಭಗವಂತನೇ.  ಭಗವಂತ ಮಾಡಿಸದಿದ್ದರೆ, ಜಡವಸ್ತುವಿಗೆ ಇಂತಹ ಮಹಿಮೆಯು ಬರುವುದಿಲ್ಲ.  ಆದರೆ ಇಂತಹ ಅಚ್ಚರಿಯನ್ನು ಮಾಡುವ, ವಿಶೇಷವಾದ ವಸ್ತುಗಳು ಭೂಲೋಕದಲ್ಲಿದ್ದರೆ, ಭೂಮಿಯೇ ಸ್ವರ್ಗವಾಗಿ, ಜನರು ಪುಣ್ಯಕರ್ಮಗಳನ್ನು ಮಾಡುವುದನ್ನೇ ಮರೆತು ಬಿಡುವರೆಂದು ಭಗವಂತನು, ಕಾಮಧೇನು, ಕಲ್ಪತರು, ಚಿಂತಾಮಣಿಗಳೆಂಬ ಕಾಮಿತಾರ್ಥಗಳನ್ನು ಕೊಡುವ ವಿಶಿಷ್ಠ ಗುಣಗಳನ್ನು ಹೊಂದಿರುವವುಗಳನ್ನು ಅಮರಲೋಕದಲ್ಲಿಯೇ ಇಟ್ಟುಬಿಟ್ಟಿದ್ದಾನೆ.  ಸುಲಭದಲ್ಲಿ ಲಭ್ಯವಾಗದಂತೆ ಮಾಡಿದ್ದಾನೆ.  ನರ ಜನ್ಮ ಸಿಕ್ಕಿರುವುದೇ ಭಗವಂತನ ನಾಮಸ್ಮರಣೆ ಮಾಡಿ ಈ ಜನನ-ಮರಣಗಳ ಚಕ್ರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೆಂಬ ಉದ್ದೇಶವನ್ನು ಜನರು ಮರೆಯಬಾರದೆಂದು ಭಗವಂತ ಹೀಗೆ ಮಾಡಿದ್ದಾನೆ.

ಭಗವಂತನು ಕಾಮಧೇನು, ಕಲ್ಪತರು, ಚಿಂತಾಮಣಿಗಳ ಮೂಲಕ ಕಾಮಿತಗಳನ್ನು ಬೇಡಿದವರಿಗೆ ನೀಡುವುದು ಅವನ ಅನಂತ ಲೀಲೆಗಳಿಗೆ ದೃಷ್ಟಾಂತಗಳಿದ್ದಂತೆ.

ಅಮರೇಂದ್ರ ಲೋಕ - ಸ್ವರ್ಗಲೋಕ ಅಥವಾ ದೇವತೆಗಳ ಲೋಕವನ್ನು ಅಮರ ಲೋಕವೆನ್ನುತ್ತಾರೆ.  ಅಮರರು ಎಂದರೆ ಸದಾ ಇರುವವರು, ಸಾವಿಲ್ಲದವರು ಇರುವಂತಹ ಲೋಕ.  ಸಾವಿಲ್ಲದವರು ಎಂದರೆ ಸಂಸಾರದ ಜನನ ಮರಣಗಳಿಂದ ಮುಕ್ತರಾದವರು ಎಂಬರ್ಥವಾಗುತ್ತದೆ.  ಇಂತಹ ಅಮರರಿರುವ ಲೋಕಕ್ಕೆ ಇಂದ್ರನೇ ರಾಜನಾಗಿಹನು.  ಯಾವ ಲೋಕದಲ್ಲಿ ಇಂದ್ರನ ಆಳ್ವಿಕೆಯಿದೆಯೋ, ಎಲ್ಲಿ ಅಮರರು ನೆಲೆಸಿದ್ದಾರೋ, ಅಲ್ಲಿ ಬಯಸಿದ್ದನ್ನು ಕೊಡುವ ಕಾಮಧೇನು, ಕಲ್ಪತರು ಮತ್ತು ಚಿಂತಾಮಣಿಗಳೂ ಕೂಡ ನೆಲೆಸಿವೆ.

ಕಾಮಿತಾರ್ಥಗಳೀವುವು ಸೇವೆ ಮಾಳ್ಪರಿಗೆ - ಕಾಮಿತಾರ್ಥಗಳೆಂದರೆ ಬಯಸಿದ ಭಾಗ್ಯವೆಂದಾಗುತ್ತದೆ.   ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳು ತಮ್ಮ ಸೇವೆಯನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ, ಅಂತಹವರು ಬಯಸಿದ ಇಷ್ಟಾರ್ಥಗಳನ್ನೆಲ್ಲಾ ಕೊಡುತ್ತವೆ.  ಆದರೆ ಸುಮ್ಮನೆ ಕೇಳಿದವರಿಗೆ ಕೊಡುವುದಿಲ್ಲ, ಕಾಮಧೇನು, ಕಲ್ಪತರು, ಚಿಂತಾಮಣಿಗಳನ್ನು ಯಾರು ಓಲೈಸಿ, ಸೇವೆಮಾಡಿ, ಒಲಿಸಿಕೊಳ್ಳುತ್ತಾರೋ, ಅಂತಹವರಿಗೆ ಅವರು ಬಯಸಿದ್ದನ್ನು, ತಮ್ಮದೇ ಆದ ಮಿತಿಯೊಳಗೆ ಮಾತ್ರ ಕೊಡಬಲ್ಲವು ಅಷ್ಟೇ.  ಬಯಸಿದ್ದನ್ನೆಲ್ಲಾ ಎಂದಾಗ ಮಿತಿಯಿಲ್ಲದೆ, ಅಮಿತವಾಗಿ ಕೊಟ್ಟುಬಿಡುವುವೆಂದರ್ಥವಾಗುವುದಿಲ್ಲ. 

ಶ್ರೀಮುಕುಂದನ ಪರಮಮಂಗಳ ನಾಮ - ಭಗವಂತನ ನಾಮವಾದ ಮುಕುಂದನೆಂದರೆ ಮುಕ್ತಿಯನ್ನು ದಯಪಾಲಿಸುವವನು ಎಂದರ್ಥವಾಗುತ್ತದೆ.  ಕಾಮಧೇನು, ಕಲ್ಪತರು, ಚಿಂತಾಮಣಿಗಳು ಬಯಸಿದ್ದನ್ನು ಕೊಟ್ಟರೆ, ಭಗವಂತನಾದ ಮುಕುಂದನನ್ನು ಸ್ಮರಿಸಿದರೆ, ಅವನು ಅತ್ಯುತ್ತಮವಾದ ಮುಕ್ತಿಯನ್ನೇ ದಯಪಾಲಿಸಿ ಬಿಡುವನು.  ನಂಬಿದ ಭಕ್ತರನ್ನು ಸದಾ ಪೊರೆಯುವವನು, ಉದ್ಧರಿಸುವವನು, ತನ್ನ ತನುವಿನಲ್ಲೇ ಸ್ಥಳಕೊಟ್ಟು ಪಾಲಿಸುವವನು ಮುಕುಂದನಾಮಕ ಭಗವಂತನು.  ಭಗವಂತನ ನಾಮ ಸ್ಮರಣೆ ಮಾಡುವುದೆಂದರೆ, ಮನಸ್ಸಿನಲ್ಲಿ ಭಗವಂತನನ್ನು ಸ್ಮರಿಸಿಕೊಳ್ಳುತ್ತಾ, ನಾಲಿಗೆಯಲ್ಲಿ ಅವನ ನಾಮಗಳನ್ನು ಉಚ್ಛರಿಸುವುದು ಎಂದರ್ಥವಾಗುತ್ತದೆ. 

ಶ್ರೀ ಕುಲಶೇಖರ ಆಳ್ವಾರ್ ರವರ ರಚನೆಯಾದ "ಮುಕುಂದಮಾಲಾ" ದಲ್ಲಿ  

ಶ್ರೀವಲ್ಲಭೇತಿ ವರದೇತಿ ದಯಾಪರೇತಿ
ಭಕ್ತಪ್ರಿಯೇತಿ ಭವಲುಂಠನಕೋವಿದೇತಿ
ನಾಥೇತಿ ನಾಗಶಯನೇತಿ ಜಗನ್ನಿವಾಸೇತಿ
ಆಲಾಪನಂ ಪ್ರತಿಪದಂ ಕುರು ಮಾಂ ಮುಕುಂದ || - ತನ್ನನ್ನೇ ಸ್ಮರಿಸುವವರಿಗೆ ಭಗವಂತ ತನ್ನ ನಾಮ ಸ್ಮರಣೆಯನ್ನೇ ದಯಪಾಲಿಸುತ್ತಾನೆ, ಸಕಲ ಇಷ್ಟಾರ್ಥಗಳನ್ನೂ ನೆರವೇರಿಸುವ ನಿಧಿಯಂತಿದ್ದಾನೆ.  ಭಕ್ತಪ್ರಿಯನಾಗಿದ್ದಾನೆ, ಸಂಸಾರವೆಂಬ ದುಃಖವನ್ನು ನಾಶಪಡಿಸುವ ಜಗನ್ನಾಥನಾಗಿದ್ದಾನೆ  ಮತ್ತು ಫಣಿಶಾಯಿಯಾಗಿರುವ ಭಗವಂತನು ಮೋಕ್ಷಪ್ರದನಾಗುತ್ತಾನೆ ಎಂದಿದ್ದಾರೆ.

ಕಾಮಧೇನು, ಕಲ್ಪತರು, ಚಿಂತಾಮಣಿಗಳೆಲ್ಲಾ ಅಮರಲೋಕದಲ್ಲಿರುವವರಿಗೆ ಮಾತ್ರ ಕಾಮಿತಾರ್ಥಗಳನ್ನು ಕೊಡಬಲ್ಲವು, ಆದರೆ ಶ್ರೀಮುಕುಂದನ ಪರಮಮಂಗಳವಾದ ನಾಮಸ್ಮರಣೆ ಮಾಡಿದರೆ ಸ್ವರ್ಗಲೋಕ, ಮರ್ತ್ಯ್ಸಲೋಕಗಳಷ್ಟೇ ಅಲ್ಲದೆ ನರಕಲೋಕದಲ್ಲಿರುವವರನ್ನೂ ಕೂಡ ಉದ್ಧರಿಸಿ, ಅವರಿಗೂ ಸ್ವರ್ಗ, ಮೋಕ್ಷಾದಿಗಳೆಂಬ ಭಾಗ್ಯವನ್ನು ಕೊಡಬಲ್ಲದು.

ನರಕಸ್ಥರನು ಸಲಹಿತು -  ಭಗವಂತನ ಪುಣ್ಯ ನಾಮಸ್ಮರಣೆಯು ನರಕದಲ್ಲಿರುವವರನ್ನೂ ಸಲಹುದು ಎಂಬುದಕ್ಕೆ ಪೂರಕವಾಗಿ ಒಂದು ಕಥೆಯಿದೆ.  ನಾರದರು ಒಮ್ಮೆ ಭಗವಂತನ ಮುಂದೆ ನರಕವನ್ನು ನೋಡಬೇಕೆಂಬ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದರು.  ಭಗವಂತನ ಅನುಜ್ಞೆಯನ್ನು ಪಡೆದುಕೊಂಡು ಯಮಲೋಕಕ್ಕೆ ಬಂದರು.  ಅಲ್ಲಿಯ ವಾಸಿಗಳು ಯಾತನೆ ಪಡುವುದನ್ನು ಕಂಡರು ಮತ್ತು ಆಶ್ಚರ್ಯ ಪಟ್ಟರು.  "ನಾರಾಯಣೇತಿ ಮಂತ್ರೋಸ್ತಿ ವಾಗಸ್ತಿ ವಶವರ್ತಿನೀ | ತಥಾಪಿ ನರಕೇ ಘೋರೇ ಪತಂತೀತ್ಯೇತದದ್ಭುತಮ್" ಎಂಬ ಯಮನ ಮಾತುಗಳನ್ನು ಕೇಳಿ ನರಕವಾಸಿಗಳಿಗಾಗಿ ಮರುಕ ಪಟ್ಟರು.  ನಾರಾಯಣ ಎಂಬ ಪರಮ ಪವಿತ್ರವಾದ ಮಂತ್ರವಿದೆ ಮತ್ತು ನುಡಿಯಲು ತನ್ನದೇ ಸ್ವಾಧೀನದಲ್ಲಿರುವ ನಾಲಿಗೆಯಿದ್ದರೂ, ಮಂತ್ರವನ್ನು ಜಪಿಸದೆ ನರಕವಾಸಿಗಳಾಗುತ್ತಾರೆಂದು ಚಕಿತರಾದರು.  ಅವರಿಗೆ ತೀವ್ರವಾದ ದುಃಖದ ಜೊತೆಗೆ ಅತಿಯಾದ ವಿಷಾದವೂ ಆಯಿತು.  ಅವರು ನಾರಾಯಣ ನಾಮಸ್ಮರಣೆಯನ್ನು ಎತ್ತರದ ಧ್ವನಿಯಲ್ಲಿ ಮಾಡಲು ಪ್ರಾರಂಭಿಸಿದರು.  ಭಗವಂತನ ನಾಮಾಮೃತದ ಶ್ರವಣ ಮಾಡಿದ ನರಕವಾಸಿಗಳು, ತಮ್ಮ ಪಾಪ ಕಳೆದುಕೊಂಡರು ಮತ್ತು ನಾರದರನ್ನು ಸ್ತುತಿಸುತ್ತಾ ಪುಷ್ಪಕವಿಮಾನದಲ್ಲಿ ಸ್ವರ್ಗಕ್ಕೆ ತೆರಳಿದರು.  ಶ್ರೀಹರಿಯ ನಾಮಸ್ಮರಣೆಯೊಂದೇ ಸಾಕು ಕಲಿಯುಗದಲ್ಲಿ ನರಕವನ್ನು ತಪ್ಪಿಸಲು ಎಂಬುದನ್ನು ಶ್ರೀಪುರಂದರದಾಸರು "ಸ್ಮರಣೆಯೊಂದೇ ಸಾಲದೆ" ಎಂಬ ಕೃತಿಯಲ್ಲಿ ಹಾಡಿದ್ದಾರೆ.

ಶ್ರೀ ವಿಷ್ಣು ಸಹಸ್ರನಾಮದ ಪೂರ್ವ ಪೀಠಿಕೆಯಲ್ಲಿ | ಜಗತ್ಪ್ರಭುಂ ದೇವದೇವಮನನ್ತಂ ಪುರುಷೋತ್ತಮಮ್ | ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || - ಭಗವಂತನ ಸ್ತುತಿ, ಧ್ಯಾನ ಮುಂತಾದವುಗಳನ್ನು ಯಾರು ನಿರಂತರವಾಗಿ ಮಾಡುತ್ತಿರುತ್ತಾರೋ ಅವರಿಗೆ ಮೃತ್ಯು ಭಯವೂ ಕಾಡುವುದಿಲ್ಲ ಎಂದಿದ್ದಾರೆ.  ಹಾಗೇ ಫಲಶೃತಿಯ ಕೊನೆಯ ಶ್ಲೋಕದಲ್ಲಿ "ಸಂಕೀರ್ತ್ಯ ನಾರಾಯಣ ಶಬ್ದಮಾತ್ರಂ ವಿಮುಕ್ತ ದುಃಖಾ ಸುಖಿನೋ ಭವಂತಿ" - ನಾರಾಯಣ ಎಂಬ ಶಬ್ದವನ್ನು ಉಚ್ಛಾರಣೆ ಮಾಡುವುದರಿಂದ ಮಾತ್ರವೇ ಸಮಸ್ತ ದುಃಖಗಳೂ ಪರಿಹಾರವಾಗಿ ಸುಖಿಯಾಗುತ್ತಾರೆ ಎಂದಿದ್ದಾರೆ.  ಭಗವಂತನ ನಾಮಸ್ಮರಣೆಯ ಮಹಿಮೆಯಿದು.

ಶ್ರೀಕುಲಶೇಖರರು "ಮುಕುಂದಮಾಲ"ದಲ್ಲಿ
ಮಾಭೀಃ ಮಂದಮನೋ ವಿಚಿಂತ್ಯ ಬಹುಧಾ ಯಾಮೀಶ್ಚಿರಂ ಯಾತನಾಃ
ನಾಮೀ ನಃ ಪ್ರಭವಂತಿ ಪಾಪರಿಪವಃ, ಸ್ವಾಮೀ ನನು ಶ್ರೀಧರಃ |
ಆಲಸ್ಯಂ ವ್ಯಪನೀಯ ಭಕ್ತಿಸುಲಭಂ ಧ್ಯಾಯಸ್ವ ನಾರಾಯಣಂ
ಲೋಕಸ್ಯ ವ್ಯಸನಾಪನೋದನಕರೋ ದಾಸಸ್ಯ ಕಿಂ ನ ಕ್ಷಮಃ || - ಮೂಢ ಮನವೇ ನಾನಾಬಗೆಯ ನರಕದ ಯಾತನೆಗಳನ್ನು ನೆನೆದು ಭಯಪಡಬೇಡ.  ಶ್ರೀಹರಿಯೇ ಸ್ವಾಮಿ ಎಂದು ದೃಢವಾಗಿ ನಂಬಿದವರಿಗೆ ಪಾಪವೆಂಬ ಶತೃಗಳೂ ಏನೂ ಮಾಡಲಾರವು.  ಆದ್ದರಿಂದ ಆಲಸ್ಯ ತೊರೆದು ಭಕ್ತಿಗೆ ಸುಲಭವಾಗಿ ಒಲಿಯುವ ನಾರಾಯಣನನ್ನು ಸದಾ ಸ್ಮರಿಸು ಎಂದಿದ್ದಾರೆ.

ಶ್ರೀವಾದಿರಾಜರು "ಮಾತುಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ"  ಎಂದಿದ್ದಾರೆ.  ತಮ್ಮ ಇನ್ನೊಂದು ಕೃತಿ "ಹರಿ ನಾರಾಯಣ ಹರಿ ನಾರಾಯಣ ನಾಮಂ ಜಯ" ದಲ್ಲಿ "ನಾರಾಯಣ ನಾರದಪ್ರಿಯ ನಾರಾಯಣ ನರಕಾಂತಕ" ಎನ್ನುತ್ತಾ ನಾರಾಯಣನು ನರಕಕ್ಕೆ ಅಂತಕನು ಎಂದು ಸ್ತುತಿಸಿದ್ದಾರೆ.

ಪಾಮರರ ಪಂಡಿತರೆನಿಸುವುದು - ಭಗವಂತನ ಮಂಗಳಕರವಾದ ಪುಣ್ಯನಾಮಗಳನ್ನು ಸದಾ ಸ್ಮರಿಸುವುದರಿಂದ ಪಾಮರರೂ ಕೂಡ ಪಂಡಿತರಾಗಿ ಮಾರ್ಪಾಡಾಗುತ್ತಾರೆ.  ವಾಲ್ಮೀಕಿಯು ’ಮರ’ ಎಂಬ ಶಬ್ದವನ್ನು ಉಚ್ಛರಿಸುತ್ತಿರುವಾಗ ಅದು ’ರಾಮ’ ಶಬ್ದವಾಗಿ ಅವರಿಗೆ ಕೇಳಿಸಿ ಪಾಮರರಾಗಿದ್ದ ಅವರು ಪಂಡಿತರಾದ ವಾಲ್ಮೀಕಿಯಾದರು.  ಮಹಾಕಾವ್ಯವಾದ ರಾಮಾಯಣದ ರಚನೆಯಾಯಿತು.   ಕಾಮಧೇನು ಒಂದು ಹಸು, ಕಲ್ಪವೃಕ್ಷ ಒಂದು ಮರ ಮತ್ತು ಚಿಂತಾಮಣಿ ಒಂದು ಕಲ್ಲು.  ಹೀಗೆ ಪಶು, ಮರ ಮತ್ತು ಕಲ್ಲು ಬೇಡಿದ ಇಷ್ಟಾರ್ಥಗಳನ್ನು ನೀಡುವುದೆಂದರೆ, ಅದು ಭಗವಂತನ ಅಚಿಂತ್ಯ ಲೀಲೆಯೆಂದೇ ತಿಳಿಯಬೇಕು.  ಇವುಗಳಿಗೇ ಇಷ್ಟು ಶಕ್ತಿಯಿದ್ದರೆ, ಭಗವಂತನ ರೋಮರೋಮಗಳಲ್ಲೂ ನೆಲೆಸಿರುವ ಅವನ ನಾಮಗಳಿಗೆಷ್ಟು ಮಹಿಮೆಯಿದೆ ಎಂಬುದನ್ನು ಅರಿಯಬೇಕು.  ಭಗವಂತನು ಭಕ್ತಿ ಹಾಗೂ ಶ್ರದ್ಧೆಯಿಂದ ಸ್ಮರಣೆ ಮಾಡಿದ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನೂ ಕೊಟ್ಟು ಸಲಹುತ್ತಾನೆ.  ಭಗವಂತನ ನಾಮಸ್ಮರಣೆಯನ್ನು ಸದಾ ಮಾಡುವ ಮನಸ್ಸು ಮಲಿನಗೊಳ್ಳಲಾಗಲೀ, ವಿಷಯಾಸಕ್ತಿಗಳ ಬಂಧನಕ್ಕೆ ಸಿಲುಕುವುದಾಗಲೀ ಆಗುವುದೇ ಇಲ್ಲ.

ಶ್ರೀ ಜಗನ್ನಾಥ ದಾಸರು ತಮ್ಮ ತತ್ವ ಸುವ್ವಾಲಿ
ಮನದಲ್ಲಿ ಹರಿಯ ಚಿಂತನೆ ಉಳ್ಳ ನರನಿಗೆ
ಮನೆಯಾದರೇನು ವನವೇನು | ವನವೇನು ಸತತ ದು-
ರ್ಜನರ ಸಂಗದೊಳು ಇರಲೇನು || - ನಿರಂತರವಾಗಿ ಹರಿಸ್ಮರಣೆ ಮಾಡುವ ಭಕ್ತನು ವಿಷಯಭೋಗ ಮಾಡಿದರೂ,  ಲಂಪಟರ ಸಂಗದಲ್ಲಿದ್ದರೂ, ಯಾವ ಹಾನಿಯೂ ಆಗುವುದಿಲ್ಲ.  ಕಾಮಾದಿಗಳ ವಶವಾದವನಿಗೆ ಅರಣ್ಯದಲ್ಲಿದ್ದರೂ ಸಂಸಾರದ ಭಯವು ತಪ್ಪುವುದಿಲ್ಲ.  ಆದರೆ ಇಂದ್ರಿಯಗಳ ಜಯಿಸಿ, ಭಗವಂತನ ಪಾದದಲ್ಲಿ ಮನಸ್ಸು ನಿಲ್ಲಿಸಿ, ನಾಮಸ್ಮರಣೆ ಮಾಡುವವನಿಗೆ ಗೃಹಸ್ಥಾಶ್ರಮವೂ ಕೂಡ ಯಾವ ಭಯವನ್ನೂ ಉಂಟುಮಾಡುವುದಿಲ್ಲ ಎನ್ನುತ್ತಾ ನಾಮಸ್ಮರಣೆಯ ಮಹತ್ವವನ್ನು ತಿಳಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ