Wednesday, December 11, 2013

ಕರುಣಾ ಸಂಧಿ - ೧೨ ನೇ ಪದ್ಯಇಟ್ಟಿಕಲ್ಲನು ಭಕುತಿಯಿಂದಲಿ
ಕೊಟ್ಟ ಭಕುತಗೆ ಮೆಚ್ಚಿ ತನ್ನನೆ
ಕೊಟ್ಟ ಬಡಬ್ರಾಹ್ಮಣನ ಉಪ್ಪಿಡಿಯವಲಿಗಖಿಳಾರ್ಥ |
ಕೆಟ್ಟ ಮಾತುಗಳೆಂದ ಚೈದ್ಯನ
ಪೊಟ್ಟೆಯೊಳಗಿಂಬಿಟ್ಟ ಬಾಣದ
ಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು  ||೧೨||


ಪ್ರತಿಪದಾರ್ಥ : ಇಟ್ಟಿಕಲ್ಲನು - ಯಜ್ಞಕುಂಡ ನಿರ್ಮಾಣ ಮಾಡಲು ಬಳಸುವ ಇಟ್ಟಿಗೆ (ಮೃದುವಾದ ಕೆಂಪು) ಕಲ್ಲು, ಭಕುತಿಯಿಂದಲಿ ಕೊಟ್ಟ - ಭಕ್ತಿಯಿಂದ ಕೂಡಿ ಕೊಟ್ಟಂತಹ, ಭಕುತಗೆ - ಭಕ್ತನಾದ ಪುಂಡರೀಕನಿಗೆ, ಮೆಚ್ಚಿ ತನ್ನನೆ ಕೊಟ್ಟ - ಭಕ್ತಿಗೆ ಪ್ರಸನ್ನನಾಗಿ ಶ್ರೀಹರಿಯು ತನ್ನ ಭಕ್ತನಿಗೆ ತನ್ನನ್ನೇ ಕೊಡುವನು, ಬಡ ಬ್ರಾಹ್ಮಣನ - ಅತ್ಯಂತ ದೀನ ಸ್ಥಿತಿಯಲ್ಲಿದ್ದ ಸುಧಾಮನೆಂಬ ಬ್ರಾಹ್ಮಣನ, ಒಪ್ಪಿಡಿಯವಲಿಗೆ - ಒಂದೇ ಒಂದು ಮುಷ್ಟಿ ಅವಲಕ್ಕಿಗೆ, ಅಖಿಳಾರ್ಥ - ಸಕಲ ಸಂಪತ್ತುಗಳನ್ನೂ, ಕೆಟ್ಟ ಮಾತುಗಳೆನದೆ - ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಅವುಗಳನ್ನು ಲಕ್ಷಿಸದೆ ಕ್ಷಮಿಸಿ, ಚೈದ್ಯನ - ಚೇದಿ ರಾಜನ ಮಗನಾದ ಶಿಶುಪಾಲನನ್ನು ಸಂಹರಿಸಿ, ಪೊಟ್ಟೆಯೊಳಗಿಂಬಿಟ್ಟ - ಅವನಲ್ಲಿದ್ದ ವೈಕುಂಠದ ದ್ವಾರಪಾಲಕನಾದ ಜಯನನ್ನು ತನ್ನ ಹೊಟ್ಟೆಯೊಳಗೆ ಜೋಪಾನವಾಗಿಟ್ಟುಕೊಂಡು ಉದ್ಧರಿಸಿದ, ಬಾಣದಲಿಟ್ಟ ಭೀಷ್ಮನ - ಅರ್ಜುನನ ಸಾರಥಿಯಾಗಿ ಕುರುಕ್ಷೇತ್ರ ಯುದ್ಧದಲ್ಲಿದ್ದ ತನ್ನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದ ಭೀಷ್ಮರ, ಅವಗುಣಗಳೆಣಿಸಿದನೆ - ಕೆಟ್ಟ ನಡತೆಯೆಂದೂ, ದುಷ್ಟ ಗುಣಗಳೆಂದೂ ಎಣಿಸಿದನೇ, ಕರುಣಾಳು - ಅತ್ಯಂತ ದಯಾಮಯನಾದವನು, ಕರುಣಾಸಾಗರನು.


ಭಗವಂತ ಎಂಥಹ ಕರುಣಾಳು ಎಂದರೆ ಅವನ ಭಕ್ತನಾದ ಪುಂಡರೀಕನು ಪ್ರತ್ಯಕ್ಷನಾದ ಪಾಂಡುರಂಗನಿಗೆ ನಿಲ್ಲು, ಕಾದಿರು ಎಂದು ಹೇಳಿ ಇಟ್ಟಿಗೆಯನ್ನು ಕೊಟ್ಟು ಅವನನ್ನು ನಿಲ್ಲಿಸಿ, ತನ್ನ ತಂದೆ-ತಾಯಿಗಳ ಕರ್ತವ್ಯವನ್ನು ಮುಗಿಸಿ ನಂತರ ಭಗವಂತನಾದ ಪಾಂಡುರಂಗನನ್ನು ಉಪಚರಿಸುತ್ತಾನೆ. ಅವನ ಭಕ್ತಿಗೆ ಮೆಚ್ಚಿ ಪಾಂಡುರಂಗ ಇಂದಿಗೂ ಇಟ್ಟಿಗೆಯ ಮೇಲೆ ನಿಂತು ಸೊಂಟದ ಮೇಲೆ ಕೈಯಿಟ್ಟುಕೊಂಡು ಬಂದ ಭಕ್ತರಿಗೆಲ್ಲಾ ದರುಶನವನ್ನು ಕೊಡುತ್ತಲೇ ಇದ್ದಾನೆ. ಮತ್ತೊಬ್ಬ ಬಡ ಬ್ರಾಹ್ಮಣನಾದ ಸುಧಾಮ ತನ್ನ ಬಡತನದ ಬೇಗೆಯನ್ನು ತಾಳಲಾರದೆ ಭಗವಂತನಲ್ಲಿಗೆ ಬಂದಾಗ ಅವನನ್ನು ಆದರದಿಂದ ಉಪಚರಿಸಿ ಅವನು ತಂದು ಕೊಟ್ಟ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಸಂತೋಷಿಸಿ ಅವನಿಗೆ ಮಹದೈಶ್ವರ್ಯವನ್ನು ಕರುಣಿಸುತ್ತಾನೆ. ಇನ್ನು ತನ್ನ ಬಳಗದವನೇ ಆದ ಚೈದ್ಯರಾಜ ಶಿಶುಪಾಲನನ್ನು ಅವನ ತಾಯಿಯ ಬೇಡಿಕೆಯ ಪ್ರಕಾರ ಆ ಚೈದ್ಯ/ಶಿಶುಪಾಲ ನೂರು ಬೈಗುಳ ಬೈಯುವ ತನಕ ಕಾದು ನಂತರ ಅವನಿಗೆ ತನ್ನ ಚಕ್ರದಿಂದ ಮೋಕ್ಷವನ್ನು ಕರುಣಿಸಿ ಅವನಲ್ಲಿದ್ದ ದೈತ್ಯನನ್ನು ತಮಸ್ಸಿಗೆ ಕಳುಹಿಸುತ್ತಾನೆ. ಮತ್ತೊಬ್ಬ ಮಹಾನ್ ಭಕ್ತ ಭೀಷ್ಮಾಚಾರ್ಯರು, ಇವರು ಭಗವಂತನ ಕೈಯಲ್ಲಿ ಶಸ್ತ್ರವನ್ನು ಹಿಡಿಸುತ್ತೇನೆಂದು ಪಣತೊಟ್ಟಿದ್ದರು. ಕರುಣಾಳುವಾದ ಭಗವಂತ ಅವರ ಇಚ್ಛೆಯನ್ನು ಪೂರೈಸಲೆಂದು ಆಯುಧವನ್ನು ಎತ್ತಿ ಹಿಡಿದ. ಅಂಥಾ ಭೀಷ್ಮಾಚಾರ್ಯರಿಗೆ ಶರಮಂಚದ ಮೇಲೆ ಮಲಗಿದ್ದಾಗ ಅವರಿಂದ ವಿಷ್ಣು ಸಹಸ್ರನಾಮವನ್ನು ಜಗತ್ತಿಗೆ ಕೊಡಿಸಿದ ಕರುಣಾಳು ನಮ್ಮ ಭಗವಂತ. ಅಂದರೆ ನಾವು ಪ್ರಾಮಾಣಿಕ ಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಿದರೆ ನಮ್ಮ ಅವಗುಣಗಳನ್ನು ಎಣಿಸದೆಲೇ ಕರುಣಿಸುವವ.

ಈ ಪದ್ಯದಲ್ಲಿ ದಾಸರಾಯರು ಭಗವಂತನನ್ನು ಸದುಪಾಸನೆಯಿಂದ ಒಲಿಸಿಕೊಂಡಾಗ ಯಾರು ಯಾರಿಗೆ ಕರುಣೆ ತೋರಿದನೆಂದು ಉದಾಹರಿಸುತ್ತಾರೆ.  ಅಸದುಪಾಸನೆಯಿಂದ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಆತ್ಮಘಾತುಕತನದಿಂದ ಸದುಪಾಸನೆ ಸಾಧ್ಯವಿಲ್ಲ.  ಸುಧಾಮ, ಶಿಶುಪಾಲ ಮತ್ತು ಭೀಷ್ಮರನ್ನು ಉಧ್ಧರಿಸಿದ್ದಾನೆ.  ಅಸದುಪಾಸನೆಗೆ ಸೂಕ್ತವಾದ ಉದಾಹರಣೆಯಾಗಿ ದುರ್ಯೋಧನ ನಿಲ್ಲುತ್ತಾನೆ.  ಸದುಪಾಸನೆಯನ್ನು ಸಾರುವ ಉದಾಹರಣೆಗಳಿಗೆ ಮೊದಲನೆಯದಾಗಿ ಪುಂಡರೀಕನ ಪ್ರಕರಣವನ್ನು ವಿವರಿಸುತ್ತಾರೆ.  ತಾಯಿ ತಂದೆಯರನ್ನೇ ಪ್ರತ್ಯಕ್ಷ ದೇವರುಗಳೆಂದು ಅವರ ಸೇವೆಯಲ್ಲಿ ನಿರತನಾಗಿದ್ದ ಪುಂಡರೀಕ ದರ್ಶನ ಇತ್ತ ಪಾಂಡುರಂಗನಿಗೆ ನಿಲ್ಲಲು ಒಂದು ಇಟ್ಟಿಗೆಯನ್ನು ಕೊಟ್ಟು ಉಪಚರಿಸಿ, ತಂದೆ-ತಾಯಿಯರ ಕರ್ತವ್ಯವನ್ನು ಪೂರೈಸಿದ.  ಪುಂಡರೀಕನ ಭಕ್ತಿಗೆ ಮೆಚ್ಚಿದ ಭಗವಂತ, ತನ್ನ ಭಕ್ತ ಕೊಟ್ಟ ಇಟ್ಟಿಗೆಯ ಮೇಲೆ ಕಾಯುತ್ತಾ ನಿಂತು ಅವನನ್ನು ಉದ್ಧರಿಸಿದ.  ಅದೇ ರೂಪದಲ್ಲಿ ಪುಂಡರೀಕಪುರ (ಫಂಡರ)ದಲ್ಲಿ ವಿಠಲನಾದ.  ಶುದ್ಧ ಭಕ್ತಿಗೆ ಒಲಿಯುವ ಭಗವಂತ ಭಕ್ತರು ಆದೇಶಿಸಿದಂತೆ ನಡೆಯುವವನು.  ತಾನು "ಅಹಂ ಭಕ್ತ ಪರಾಧೀನ" ಎಂದು ಹೇಳಿದವನು.  ಸುಧಾಮನ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಅಖಿಳಾರ್ಥಗಳನ್ನೇ ಕೊಟ್ಟ. ಚೈದ್ಯ- ಶಿಶುಪಾಲನ ಒಳಗೆ ಜಯ ಇದ್ದ.  ಜಯ ಭಕ್ತನಾದರೂ ಶಿಶುಪಾಲನ ಕೆಟ್ಟ ಮಾತುಗಳಿಂದ ಜಯನ ಪಾಲಿಗೂ ಬಂದ ಕರ್ಮವನ್ನು ಭಗವಂತ ಕಳೆದುಬಿಟ್ಟ.  ಅರ್ಜುನನನ್ನು ಕಂಗೆಡಿಸಲು ವಾಸುದೇವನ ಮೇಲೆ ಬಾಣಗಳ ಮಳೆಗರೆದ ಭೀಷ್ಮನ ಅವಗುಣಗಳೆಣಿಸಲಿಲ್ಲ.  ಶರಶಯ್ಯೆಯಲ್ಲಿ ಮರಣಕ್ಕೆ ಸನ್ನಿಹಿತನಾಗಿ ಮಲಗಿದ್ದ ಭೀಷ್ಮನ ಬಳಿ ಬಂದು, ವಿಷ್ಣು ಸಹಸ್ರನಾಮ ನುಡಿಸಿ ಉದ್ಧರಿಸಿದ ಭಗವಂತನ ಕಾರುಣ್ಯಕ್ಕೆ ಎಣೆಯೇ ಇಲ್ಲ.  ಅಸುರಾವೇಶ ಹಾಗೂ ಕಲಿ ಪವೇಶದಿಂದ ನಿಜ ಭಕ್ತರು ಮಾಡಿದ ಅಪರಾಧಗಳನ್ನು ಭಗವಂತ ಎಂದಿಗೂ ಪರಿಗಣಿಸದೇ ಕ್ಷಮಿಸಿ ಉದ್ಧರಿಸುವನು. ನಾವು ಪ್ರಾಮಾಣಿಕ ಭಕ್ತಿಯಿಂದ ಪೂಜಿಸಿದರೆ ನಮಗೊಲಿಯುವ ಸುಲಭನು ಹರಿ ಎನ್ನುತ್ತಾರೆ ದಾಸರಾಯರು. 
"ಇಟ್ಟಿಕಲ್ಲು" - ಶ್ರೀ ಹಯವದನ ಪುರಾಣಿಕರು ತಮ್ಮ ಪುಸ್ತಕದಲ್ಲಿ ಇಟ್ಟಿಕಲ್ಲು ಶಬ್ದದ ಅರ್ಥ ವಿವರಣೆಗೆ ಶ್ರೀ ಜಗನ್ನಾಥ ದಾಸರದೇ ರಚನೆ ’ಪಾಂಡುರಂಗ ಪಾರಿಜಾತ’ದಲ್ಲಿ "ಇಟ್ಟಿಗೆ ಪೀಠ ಸಂಸ್ಥಿತಪಾದ ! ಮಂಗಳಪ್ರದ!" ಎಂಬ ಉಕ್ತಿಯನ್ನು ಉಲ್ಲೇಖಿಸುತ್ತಾ, ಮೂರ್ತಿ ಪ್ರತಿಷ್ಠಾಪನೆಗೆ ಮಣ್ಣಿನ ಇಟ್ಟಿಗೆ ಬಳಕೆಯಾಗುವುದಿಲ್ಲ, ಕಲ್ಲಿನ ಪೀಠವೇ ಆಗಬೇಕು ಎನ್ನುತ್ತಾರೆ.  ಇದನ್ನು ನಾವು ಅವಗಾಹನೆಗೆ ತೆಗೆದುಕೊಂಡರೆ ’ಇಟ್ಟಿಕಲ್ಲನು’ ಎಂಬ ಪದದ ಬಳಕೆಯನ್ನು ದಾಸರಾಯರು ಮಣ್ಣಿನ ಇಟ್ಟಿಗೆ ಎಂಬರ್ಥದಲ್ಲಿ ಅಲ್ಲ, ಒಂದು ಬಗೆಯ ಮೃದುವಾದ ಕೆಂಪುಕಲ್ಲು ಎಂಬ ಅರ್ಥದಲ್ಲಿ ಬಳಸಿದ್ದಾರೆಂದು ತಿಳಿಯುತ್ತದೆ.  ಶ್ರೀ ಜಗನ್ನಾಥ ದಾಸರೇ ಕಲ್ಲು ಎಂಬ ಪದವನ್ನು ಸೇರಿಸಿರುವುದರಿಂದ ಅದನ್ನು ನಾವು ಭಕ್ತನೊಬ್ಬ ಭಗವಂತನಿಗೆ ಒಂದು ಕಲ್ಲನ್ನು ಇಟ್ಟು ಅದರ ಮೇಲೆ ನಿಂತಿರುವಂತೆ ಪ್ರಾರ್ಥಿಸಿಕೊಂಡ ಎಂದು ಅರ್ಥೈಸಿಕೊಳ್ಳಬಹುದು.  ಶ್ರೀ ವಿಜಯದಾಸರು ಮಂದರ ಪರ್ವತವನ್ನೂ ’ಕಲ್ಲು’ ಎನ್ನುತ್ತಾ "ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು" ಎಂದಿದ್ದಾರೆ.  ಆದ್ದರಿಂದ ಮಹಾಭಕ್ತನಾದ ಪುಂಡರೀಕ ಮುನಿಯು ಕೊಟ್ಟ ಕಲ್ಲು ಸಾಧಾರಣವಾದದ್ದಲ್ಲ ಅನರ್ಘ್ಯ ರತ್ನವೆಂಬ ಭಕ್ತಿ ಎನ್ನಬಹುದು.  ಇಂತಹ ಅತಿಶಯವಾದ ಭಕ್ತಿಗೆ ಒಲಿದು, ಮೆಚ್ಚಿ ಕರುಣಾಮಯನಾದ ಶ್ರೀಹರಿ ತನ್ನನ್ನೇ ಕೊಟ್ಟುಬಿಡುವನು. 

ಪುಂಡರೀಕನು ತನ್ನ ತಂದೆ-ತಾಯಿಯರ ಸೇವೆ ಪೂರೈಸಿ ಬರುವವರೆಗೂ ಸೊಂಟದಲ್ಲಿ ಕೈಯಿಟ್ಟು, ಮುನಿ ಕೊಟ್ಟ ಅದೇ ಇಟ್ಟಿಗೆಯ ಮೇಲೆ ನಿಂತೇ ಇದ್ದ ಭಗವಂತ.  ಅನನ್ಯ ಭಕ್ತಿಗೆ ಮೆಚ್ಚಿ ನನ್ನನ್ನೇ ನಿನಗೆ ಕೊಡುತ್ತಿದ್ದೇನೆಂದು ತಿಳಿಸಿದ.  ಅಂದು ಪುಂಡರೀಕವರದನಾಗಿ ಪಾಂಡುರಂಗ ವಿಟ್ಠಲ ನಿಂತಿದ್ದನ್ನು ಜಗನ್ನಾಥ ದಾಸರು ತಮ್ಮ ನೋಡಿದೆ ವಿಠಲನ ನೋಡಿದೆ ಎಂಬ ಪದದಲ್ಲಿ "ತನ್ನ ತಾಯ್ತಂದೆಗಳ ಹೃದಯವೆ ಪನ್ನಗಾರಿಧ್ವಜಗೆ ಸದನವೆಂದುನ್ನತ ಭಕುತಿ ಭರದಿ ಅರ್ಚಿಪ  ಧನ್ಯಪುರುಷನ ಕಂಡು ನಾರದ ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರಪನ್ನ ವತ್ಸಲ ಬಿರಿದು ಮೆರೆಯಲು "ಜೊನ್ನೊಡಲು ಭಾಗ"ದಿ  ನೆಲೆಸಿದ ಜಗನ್ನಾಥ ವಿಠ್ಠಲನ ಮೂರ್ತಿಯ ನೋಡಿದೆ ವಿಠಲನ ಮೂರ್ತಿಯ ನೋಡಿದೆ ಎಂದು ಹಾಡಿದ್ದಾರೆ.  ಇಲ್ಲಿ ’ಜೊನ್ನೊಡಲ ಭಾಗ’ವೆಂದರೆ ಚಂದ್ರಭಾಗಾ ನದಿ ತೀರ. ನಾರದರ ಪ್ರಾರ್ಥನೆಯಿಂದಾಗಿ ಚಂದ್ರಭಾಗಾ ತೀರದಲ್ಲಿ ನೆಲೆಸಿದನೆಂದು ತಿಳಿಸಿದ್ದಾರೆ ದಾಸರು.  ಆದ್ದರಿಂದ ಕಟಿಯಲ್ಲಿ ಕರವಿಟ್ಟು ನಿಂತ ಶ್ರೀಕೃಷ್ಣನೇ "ವಿಟ್ಠಲ"ನು.

"ಒಪ್ಪಿಡಿಯವಲಿಗಖಿಳಾರ್ಥ" - ಕುಸುಬಲಕ್ಕಿ ಅವಲಕ್ಕಿಗಳು ನೈವೇದ್ಯಕ್ಕೆ ಮತ್ತು ಬ್ರಾಹ್ಮಣರ ಭಕ್ಷಣಕ್ಕೆ ಹೆಚ್ಚು ಪ್ರಶಸ್ತವಲ್ಲವೆಂಬ ಮಾತಿದ್ದರೂ, ಬಡ ಬ್ರಾಹ್ಮಣನಾದ  ಸುಧಾಮನು ಕಡು ಬಡತನದ ಪ್ರಯುಕ್ತ ಪರರಿಂದ ಬೇಡಿ ಸಂಪಾದಿಸಿದ ಒಂದು ಹಿಡಿ ಅವಲಕ್ಕಿಯನ್ನೇ ತಂದ.  ಸ್ವೀಕರಿಸಿದ ಭಗವಂತ ಅಖಿಲಾಭೀಷ್ಟಗಳನ್ನೇ ಕೊಟ್ಟ.  ಇಲ್ಲಿ ದಾಸರಾಯರ ಪದ ಜೋಡಣೆಯ ಸೌಂದರ್ಯವನ್ನು ನಾವು ಕಾಣಬೇಕು.  ಹಿಂದಿನ ಸಾಲಿನ "ಕೊಟ್ಟ ಭಕುತಗೆ ಮೆಚ್ಚಿ ತನ್ನನೆ" ಎಂದು ಓದಿದಾಗ ಕಲ್ಲನ್ನು ಕೊಟ್ಟು ನಿಂತಿರುವಂತೆ ಹೇಳಿದ ಭಕುತನ ಭಕುತಿಗೆ ಮೆಚ್ಚಿ ತನ್ನನ್ನೇ ಕೊಟ್ಟನೆಂಬ ಅರ್ಥವಾಗುತ್ತದೆ.  ಹಾಗೇ "ತನ್ನನೆ" ಎಂಬ ಪದವನ್ನು ಮುಂದಿನ ಸಾಲಿಗೆ ಸೇರಿಸಿಕೊಂಡು "ತನ್ನನೆ ಕೊಟ್ಟ ಬಡ ಬ್ರಾಹ್ಮಣನ ಒಪ್ಪಿಡಿಯವಲಿಗಖಿಳಾರ್ಥ" ಎಂದಾಗ ಸುಧಾಮನು ಹಿಡಿ ಅವಲಕ್ಕಿಯ ಜೊತೆಗೆ ತನ್ನನ್ನೇ ಸಮರ್ಪಿಸಿಕೊಂಡ ಎಂಬ ಅರ್ಥ ಬರುತ್ತದೆ.  ತನ್ನನ್ನು ತಾನು ಭಗವಂತನಿಗೆ ಸಮರ್ಪಿಸಿಕೊಂಡ ಬಡ ಬ್ರಾಹ್ಮಣನ ಭಕ್ತಿಗೆ ಒಲಿದ ಭಗವಂತ ಅಖಿಳಾರ್ಥಗಳನ್ನು ಕೊಟ್ಟ.  ಅಲ್ಲದೇ ಬ್ರಹ್ಮಾಂಡದ ಐಶ್ವರ್ಯವೆಲ್ಲವನ್ನೂ ಕೊಟ್ಟರೂ ಖಂಡಿತವಾಗಿಯೂ ಒಲಿಯುತ್ತಿರಲಿಲ್ಲ ಎನ್ನುತ್ತಾರೆ ದಾಸರಾಯರು.
"ಕೆಟ್ಟ ಮಾತುಗಳೆಂದ ಚೈದ್ಯನ" - ಚೈದ್ಯ ಅರ್ಥಾತ್ ಶಿಶುಪಾಲ ಶ್ರೀಕೃಷ್ಣನ ಸೋದರತ್ತೆಯ ಮಗನಾದುದರಿಂದ ಅವನ ನೂರು ತಪ್ಪುಗಳನ್ನು ಕ್ಷಮಿಸುವುದಾಗಿ ತನ್ನ ಅತ್ತೆಗೆ ಮಾತು ಕೊಟ್ಟಿರುತ್ತಾನೆ ಭಗವಂತ.  ಶಿಶುಪಾಲ ಮಾಡಿದ ಎಲ್ಲಕ್ಕಿಂತ ದೊಡ್ಡ ಅಪರಾಧವೆಂದರೆ ರುಕ್ಮಿಣಿಯನ್ನು ಬಯಸಿದ್ದು ಮತ್ತು ರಾಜಸೂಯ ಸಭೆಯಲ್ಲಿ ಭಗವಂತನನ್ನು ನಿಂದಿಸಿದಾಗ ತಪ್ಪುಗಳು ಆಗಲೇ ನೂರರ ಸಂಖ್ಯೆಯನ್ನು ದಾಟಿದ್ದವು ಮತ್ತು ಶ್ರೀಕೃಷ್ಣ ಶಿಶುಪಾಲನ ಶಿರಚ್ಛೇದ ಮಾಡಿದ.  ಚೈದ್ಯನ ದೇಹದಲ್ಲಿದ್ದ ’ಜಯ’ ಹೊರಗೆ ಬಂದು ಭಕ್ತಿಯಿಂದ ನಮಿಸಿ ಭಗವಂತನ ಉದರದೊಳಗೆ ಸೇರಿ ಕೊಳ್ಳುತ್ತಾನೆ.  ಜಯ ಶಿಶುಪಾಲನ ಶರೀರದಲ್ಲಿ ಹಿರಣ್ಯಕಶಿಪುವಿನ ಜೊತೆಯಿದ್ದು, ಶ್ರೀಕೃಷ್ಣನನ್ನು ದ್ವೇಷಿಸಿದ್ದನಾದರೂ ಅವನು ಭಗವಂತನ ಭಕ್ತನೇ ಆಗಿದ್ದನು.  ತನ್ನ ಭಕ್ತನನ್ನು ಉದರದಲ್ಲಿಟ್ಟುಕೊಂಡು ಕಾಪಾಡಿದ ಭಗವಂತ. 

"ಬಾಣದಲ್ಲಿಟ್ಟ ಭೀಷ್ಮ" - ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮರು ಕೌರವರ ಪಕ್ಷವಹಿಸಿ ಹೋರಾಡಿದ್ದು ಅಧರ್ಮ.  ಯುದ್ಧದಲ್ಲಿ ತಾನು ಶಸ್ತ್ರ ಹಿಡಿಯುವುದಿಲ್ಲವೆಂದು  ಕೃಷ್ಣ ಪರಮಾತ್ಮ ಪ್ರತಿಜ್ಞೆ ಮಾಡಿದ್ದನ್ನು ತಿಳಿದೂ, ತಾನು ಭಗವಂತ ಶಸ್ತ್ರವೆತ್ತುವಂತೆ ಮಾಡುವೆನೆಂದು ಪ್ರತಿಜ್ಞೆ ಮಾಡಿದ್ದು ಅಧರ್ಮ.  ಯುದ್ಧದಲ್ಲಿ ಕೃಷ್ಣಾರ್ಜುನರ ಮೇಲೆ ಸತತವಾಗಿ ಬಾಣಗಳ ಮಳೆಕರೆದು ಶ್ರೀಕೃಷ್ಣ ತನ್ನ ಪ್ರತಿಜ್ಞೆ ಮರೆತು ಅಸ್ತ್ರ ಹಿಡಿಯುವಂತೆ ಮಾಡಿದ್ದು ಅಧರ್ಮವೇ ಎಂದು ಕಾಣಿಸುವುದು.  ಆದರೆ ಭಗವಂತ ನಿಜಕ್ಕೂ ಕೈಯಲ್ಲಿ ಚಕ್ರ ಹಿಡಿದು ಭೀಷ್ಮನೆಡೆಗೆ ಧಾವಿಸಿ ಬಂದಾಗ ಭೀಷ್ಮ ಅತ್ಯಂತ ಸಂತೋಷವಾಗಿ, ಧನ್ಯತಾ ಭಾವದಿಂದ ನಮಸ್ಕರಿಸುತ್ತಾನೆ.  ತನ್ನ ಪ್ರತಿಜ್ಞೆ ಪೂರೈಸದಿದ್ದರೂ ಲೆಕ್ಕಿಸದೆ ತನ್ನ ಭಕ್ತನ ಪ್ರತಿಜ್ಞೆಯನ್ನು ಪೂರೈಸುವಂತೆ ಮಾಡಿದ ಭಗವಂತ ನಿಜಕ್ಕೂ ಅತ್ಯಂತ ಕರುಣಾಮಯಿ.  ಚಕ್ರಪಾಣಿಯಾಗಿ ಬಂದ ಪರಮಾತ್ಮನನ್ನು ಭೀಷ್ಮರು ತನ್ನನ್ನು ಕೊಲ್ಲಬೇಕೆಂದು ಪ್ರಾರ್ಥಿಸಿಕೊಳ್ಳುತ್ತಾರೆ.  ಹೀಗೆ ನೀನು ಅಸ್ತ್ರ ಹಿಡಿದು ನನ್ನ ಕೀರ್ತಿಯನ್ನು ಮೂರು ಲೋಕದಲ್ಲಿಯೂ ಹರಡಿದೆ ಎಂದು ನಮಸ್ಕರಿಸುತ್ತಾರೆ.  ಭಗವಂತ ತನ್ನ ಮಾತನ್ನು ಮುರಿಯಲೋಸುಗ ಚಕ್ರಪಾಣಿಯಾಗಿ ಭೀಷ್ಮರೆಡೆಗೆ ಧಾವಿಸಿದ್ದು ಅವರನ್ನು ಕೊಲ್ಲಲೆಂದೇನೂ ಅಲ್ಲ.  ಬಂಧು ಮೋಹದಲ್ಲಿ ಸಿಲುಕಿ ತೊಳಲಾಡುತ್ತಾ ವೀರಾವೇಶವಿಲ್ಲದೆ ಯುದ್ಧ ಮಾಡುತ್ತಿದ್ದ ಅರ್ಜುನನಿಗೆ ಎಚ್ಚರಿಸಲಷ್ಟೇ ಆಗಿತ್ತು.  ಯುದ್ಧ ಮಾಡುವುದಿಲ್ಲವೆಂಬ ನಿನ್ನ ಮಾತು ಸುಳ್ಳಾಗಿ ಬಿಡಬಾರದು, ಕೇಶವಾ ಹಿಂದಿರುಗಿ ಬಾ, ನಾನು ವೀರಾವೇಶದಿಂದಲೇ ಹೋರಾಡುವೆ ಎಂದು ಅರ್ಜುನ ಕರೆದಾಗ ಶ್ರೀಕೃಷ್ಣ ಹಿಂತಿರುಗಿ ಬರುತ್ತಾನೆ.  ಇದೆಲ್ಲಾ ಭಗವಂತನ ಲೀಲಾವಿನೋದವಾಗಿತ್ತೇ ಹೊರತು, ವಸ್ತುತಃ ಭೀಷ್ಮರ ಪ್ರತಿಜ್ಞೆಯು ಶ್ರೀಕೃಷ್ಣನ ವಿರುದ್ಧವೂ ಆಗಿರಲಿಲ್ಲ.  ಹೀಗೆ ಭೀಷ್ಮರ ನಡವಳಿಕೆಯನ್ನು ಅವಗುಣಗಳೆಂದರೆ, ಕರುಣಾಮಯನಾದ ಶ್ರೀಹರಿ, ತನ್ನ ನಿಜ ಭಕ್ತನ ತಪ್ಪುಗಳನ್ನು ಮನ್ನಿಸಿ, ಅವನನ್ನು ಪೊರೆದ.  ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರೊಳಗೆ ತಾನಿದ್ದು, ಲೋಕ ಕಲ್ಯಾಣಕ್ಕಾಗಿ ಅವರಿಂದ ವಿಷ್ಣು ಸಹಸ್ರನಾಮ ನುಡಿಸಿದ.  ಹೊರಗೆ ಕುಳಿತು ಏನೂ ತಿಳಿಯದಂತೆ ನಾಟಕವಾಡಿ, ಸ್ವೀಕರಿಸಿ ಉದ್ಧರಿಸಿದ, ಪರಮ ಕರುಣಾಳು ಭಗವಂತ.

ಭಗವದ್ಗೀತೆಯಲ್ಲಿ ಭಗವಂತ
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ |
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ || - ಯಾರು ನನ್ನನ್ನು ನಿರಂತರ ಧ್ಯಾನಿಸುವರೋ, ಪ್ರೇಮ ಪ್ರೀತಿಗಳಿಂದ ಭಜಿಸುವರೋ ಮತ್ತು ಅವರು ಯಾವುದರಿಂದ ನನ್ನನ್ನು ಪಡೆಯಲಪೇಕ್ಷಿಸುತ್ತಾರೋ, ಅವರಿಗೆ ಅದೇ ತತ್ವಜ್ಞಾನ ರೂಪವಾದ ಯೋಗವನ್ನು ಕೊಡುತ್ತೇನೆ ಎಂದಿದ್ದಾನೆ.
ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ |
ನಾಶಯಾಮ್ಯಾತ್ಮ ಭಾವಸ್ಥೋ ಜ್ಞಾನದೀಪೇನ ಭಾಸ್ವತಾ || - ಅಂತಹ ಭಕ್ತರನ್ನು ಅನುಗ್ರಹಿಸಲೋಸುಗ ನಾನು ಅವರ ಅಂತಃಕರಣದಲ್ಲಿಯೇ ನೆಲೆಸಿ, ಸ್ವಯಂ ನಾನೇ ಅವರ ಅಜ್ಞಾನದಿಂದ ಉಂಟಾದ ಅಂಧಕಾರವನ್ನು ತತ್ವಜ್ಞಾನ ರೂಪದ ದೀಪದಿಂದ ನಾಶಗೊಳಿಸುತ್ತೇನೆ ಎಂದಿದ್ದಾನೆ.  ಅನವರತ ಭಗವಂತನ ಧ್ಯಾನದಲ್ಲಿ ತನ್ಮಯರಾದವರಿಗೆ ಭಗವಂತ ಕರುಣೆಯಿಂದ ತನ್ನನ್ನೇ ಕೊಟ್ಟು ಉದ್ಧರಿಸುತ್ತಾನೆಂಬುದನ್ನು ತಾನೇ ಗೀತೆಯಲ್ಲಿ ತಿಳಿಸಿದ್ದಾನೆ.

ಅಸುರಾವಿಷ್ಟರಾಗಿ ನಿಜ ಭಕ್ತರು ಮಾಡಿದ ಅಪರಾಧಗಳನ್ನು ಭಗವಂತ ಎಂದಿಗೂ ಪರಿಗಣಿಸುವುದಿಲ್ಲ.  ಎಲ್ಲಾ ತಪ್ಪುಗಳನ್ನೂ ಮನ್ನಿಸಿ, ಪೊರೆದು, ಉದ್ಧರಿಸುವನು.   ಶ್ರೀಪಾದರಾಜರ ಒಂದು ಉಗಾಭೋಗದಲ್ಲಿ
ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ
ಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲ
ಶರಣು ಬಂದವನ ರವಿಯ ತನಯನ ನೋಡು
ಮರೆಯದೇ ಭಜಿಸೋ ರಂಗವಿಠಲರೇಯನ || - ಎಂದು ಶ್ರೀಹರಿಯ ಅನಂತ ಕರುಣೆಯ ವಿವರಣೆ ಸುಂದರವಾಗಿ ಮಾಡಿದ್ದಾರೆ.

ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ
ಒಪ್ಪಿಡಿಯವಲಕ್ಕಿಗೊಪ್ಪಿಕೊಂಡ ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ-
ಮ್ಮಪ್ಪಗಿಂದಧಿಕ ದೊರೆಯುಂಟೆ || -  ಕಡುಬಡವನಾದ ಬಾಲ್ಯ ಸ್ನೇಹಿತನ ಒಂದೇ ಒಂದು ಹಿಡಿ ಅವಲಕ್ಕಿಗೆ ಒಲಿದು ಮಹದೈಶ್ವರ್ಯವನ್ನೇ ಕರುಣಿಸಿದ ನಮ್ಮೆಲ್ಲರಿಗೂ ತಂದೆಯಾದ ಭಗವಂತ, ಶ್ರೀಕೃಷ್ಣನಿಗಿಂತಲೂ ಅಧಿಕ ಉತ್ತಮನಾದ ದೊರೆ/ಅರಸನೆಲ್ಲಿಹನು ಎನ್ನುತ್ತಾರೆ.  ಹೀಗೆ ಭಗವಂತನ ಅಪಾರ ಕರುಣೆಯನ್ನು ವಿವರಿಸುವ, ಶುದ್ಧ ಭಕ್ತಿಗೆ ಒಲಿದು ತನ್ನನ್ನೇ ಕೊಟ್ಟುಬಿಡುವ ಅನಂತ ದಯೆಯನ್ನು ಅನೇಕ ದೃಷ್ಟಾಂತಗಳಿಂದ ತಿಳಿಸಿಕೊಡುತ್ತಾರೆ. 

ಡಿವಿಜಿಯವರು ಕಗ್ಗದಲ್ಲಿ :
ಸೃಷ್ಟಿಯದ್ಭುತ ಶಕ್ತಿಯುಳ್ಳೋರ್ವನಿರಲು ನ-
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ ?
ಇಷ್ಟವಾತನೊಳುದಿಸುವಂತೆ ಚೋದಿಪುದೆಂತು?
ಕಷ್ಟ ನಮಗಿಹುದಷ್ಟೇ ಮಂಕುತಿಮ್ಮ || - ಬ್ರಹ್ಮಾಂಡವೆಂಬ ಅದ್ಭುತವಾದ ಸೃಷ್ಟಿಯನ್ನು ನೋಡಿದಾಗ, ಅದರ ಸೃಷ್ಟಿಕರ್ತನ ಅತ್ಯದ್ಭುತ ಶಕ್ತಿಗಳು, ಅವನ ವ್ಯಾಪ್ತಿ, ಕೌಶಲಗಳನ್ನು ನಾವು ಊಹಿಸಿಕೊಳ್ಳಬಹುದು. ನಾವು ಊಹಿಸಿಕೊಳ್ಳುವಷ್ಟು ಶಕ್ತಿವಂತರಲ್ಲವೇ ಅಲ್ಲವಾದರೂ, ಅವನೊಬ್ಬ ಸರ್ವಶಕ್ತ, ಸರ್ವನಿಯಾಮಕ ಎಂಬ ಭಾವವು ತುಂಬಿಕೊಳ್ಳುವುದು.  ಇಂತಹ ಸರ್ವಶಕ್ತನಿಗೆ ನಮಗೆ ಬೇಕಾದ ವರಗಳನ್ನು ಕೊಡುವುದು ಅತೀ ಸುಲಭದ ಕೆಲಸ.  ಆದರೆ ಅದು ಆ ಸರ್ವಜ್ಞನಿಗೆ ತಿಳಿಯಪಡಿಸುವುದು ಮಾತ್ರ ನಮ್ಮದೇ ಕರ್ತವ್ಯ.  ಅವನ ಅನುಗ್ರಹ ನಮಗೆ ದೊರೆಯುವಂತೆ ನಾವು ಅವನನ್ನು ಒಲಿಸಿಕೊಂಡರೆ, ಅವನಿಗೆ ಸಂಪೂರ್ಣ ಶರಣಾಗಬೇಕು, ನಮ್ಮನ್ನೇ ನಾವು ಸಂಪೂರ್ಣವಾಗಿ ಕೊಟ್ಟುಕೊಳ್ಳಬೇಕೆಂಬುದು ತಿಳಿಯುತ್ತದೆ.
ಜೀವಸತ್ತ್ವದಪಾರ ಭಂಡಾರವೊಂದಿಹುದು
ಸಾವಕಾರನದೃಷ್ಟನ್ ಅದನಾಳುತಿಹನು |
ಆವಶ್ಯಕದ ಕಡವನವನೀವುದುಂಟಂತೆ
ನಾವೊಲಿಪುದೆಂತವನ ? ಮಂಕುತಿಮ್ಮ || - ಈ ಪದ್ಯದಲ್ಲಿ ಕೂಡ ಡಿವಿಜಿಯವರು ಭಗವಂತನು ತನ್ನ ಒಂದು ವಿಶೇಷವಾದ ಅಪಾರವಾದ ಭಂಡಾರದಿಂದ ಜೀವಸತ್ತ್ವವನ್ನು ಸೃಷ್ಟಿಸಿದ್ದಾನೆನ್ನುತ್ತಾರೆ.  ಅದರ ಒಡೆಯನಾದ ಅವನು ಅತೀ ದೊಡ್ಡ ಸಾಹುಕಾರ, ನಮ್ಮ ಕಣ್ಣಿಗೆ  ಕಾಣಿಸೋಲ್ಲ, ಆದರೆ ನಮಗೆ ಕಷ್ಟವೆಂದು ನಾವು ಭಕ್ತಿಯಿಂದ ಕರೆದಾಗ ಅವನು ನಮಗೆ ಸಾಲವನ್ನು ಕೊಡುತ್ತಾನೆನ್ನುತ್ತಾರೆ.  ಆದರೆ ಭಗವಂತನ ಆ ಸಾಲವೆನ್ನುವ ಕರುಣೆ ನಮಗೆ ಸಿಗಬೇಕಾದರೆ ನಾವು ಅವನನ್ನು ಒಲಿಸುವ ಪರಿ ತಿಳಿಯದೇ ಪರಿತಪಿಸುತ್ತೇವೆ ಎನ್ನುತ್ತಾರೆ.  ಮುಂದುವರೆಯುತ್ತಾ ಭಗವಂತನ ಕರುಣೆ ನಮಗೆ "ಧಗಧಗಿಸುವ ಧರೆಗೆ ರಾತ್ರಿಯಲಿ ತಂಪೆರೆವ ಮುಗಿಲವೊಲು" "ದೈವಕೃಪೆ" ಎನ್ನುತ್ತಾರೆ.  ಒಲಿದನೆಂದರೆ ಭಗವಂತ ತನ್ನನ್ನೇ ಕೊಟ್ಟುಬಿಡುವವನು ಎಂಬ ಮಾತು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಹೀಗೆ ಭಗವಂತನ ಅಪಾರವಾದ ಕರುಣೆಯನ್ನು ಪಡೆಯುವ ಸುಲಭ ಮಾರ್ಗವೇ ಭಕ್ತಿ ಎನ್ನುತ್ತಾರೆ ನಮ್ಮ ಜಗನ್ನಾಥದಾಸರು.  ಮೇಲೆ ತಿಳಿಸಿರುವ ದೃಷ್ಟಾಂತಗಳಿಂದ ನಾವು ಇದನ್ನು ಅರ್ಥೈಸಿಕೊಳ್ಳಬಹುದು.  ತನ್ನನ್ನು ತಾನು ಒಪ್ಪಿಸಿಕೊಳ್ಳದೇ, ಸಂಪೂರ್ಣ ಶರಣಾಗದೇ, ಬೇರೇನೇ ಕೊಟ್ಟರೂ ಭಗವಂತ ಒಲಿಯುವುದಿಲ್ಲ


ಚಿತ್ರಕೃಪೆ : ಅಂತರ್ಜಾಲ