Thursday, April 19, 2012

ಕರುಣಾ ಸಂಧಿ - ೨ನೇ ಪದ್ಯ
 

ಮಳೆಯ ನೀರೋಣಿಯೊಳು ಪರಿಯಲು |
ಬಳಸರೂರೊಳಗಿದ್ದ ಜನರಾ |
ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು ||
ಕಲುಷ ವಚನಗಳಾದರಿಯ ಬಾಂ |
ಬೊಳೆಯ ಪೆತ್ತನ ಪಾದ ಮಹಿಮಾ |
ಜಲಧಿ ಪೊಕ್ಕುದರಿಂದ ಮಾಣ್ದಪರೇ ಮಹೀಸುರರು || ೨ ||

ಪ್ರತಿಪದಾರ್ಥ : ಮಳೆಯ ನೀರೋಣಿಯಲಿ ಪರಿಯಲು - ಮಳೆ ಸುರಿದು ನೀರು ಓಣಿ ಬೀದಿಗಳಲ್ಲಿ ಹರಿಯಲು, ಬಳಸರು ಊರೊಳಗಿದ್ದ ಜನರು - ಊರಿನಲ್ಲಿರುವ ಜನರು ಆ ನೀರನ್ನು ಯಾವುದಕ್ಕೂ ಉಪಯೋಗಿಸುವುದಿಲ್ಲ, ಆ ಜಲವು ಹೆದ್ದೊರೆಗೂಡೆ - ಅದೇ ನೀರು ಯಾವುದಾದರೂ ದೊಡ್ಡ ನದಿಯನ್ನು ಸೇರಿದಾಗ, ಮಜ್ಜನ ಪಾನ ಗೈದಪರು - ಸ್ನಾನ ಮತ್ತು ಪಾನಗಳಿಗೆ ಉಪಯೋಗುವರು, ಕಲುಷ ವಚನಗಳಾದರಿವು - ದೇವವಾಣಿಯಾದ ಸಂಸ್ಕೃತವಲ್ಲದೆ ಪ್ರಾಕೃತ ಭಾಷೆಯಲ್ಲಿದ್ದರೂ, ಬಾಂಬೊಳೆಯ ಪೆತ್ತನ - ಬಾನಿನ ಹೊಳೆ ಅಥವಾ ಗಂಗಾನದಿಯ ಜನಕನಾದ ಶ್ರೀಹರಿಯ, ಪಾದ ಮಹಿಮಾಜಲಧಿ - ತ್ರಿವಿಕ್ರಮ ಅವತಾರದಲ್ಲಿ ಭಗವಂತನ ಪಾದವೆಂಬ ಮಹಿಮಾ ಸಾಗರದಲ್ಲಿ, ಪೊಕ್ಕುದರಿಂದ - ಭಗವಂತನ ಪಾದ ತೊಳೆದು ಮಹಿಮೆಯೆಂಬ ಸಾಗರವನ್ನು ಸೇರಿರುವ ಈ ಪ್ರಾಕೃತಿಕ ಭಾಷೆಯ ಪದಗಳು ಸೇರಿರುವುದರಿಂದ, ಮಾಣ್ದಪರೆ - ಬಿಟ್ಟು ಬಿಡುವರೆ, ಮಹೀಸುರರು - ವೇದ ಶಾಸ್ತ್ರ ನಿಪುಣರಾದ ವಿಪ್ರೋತ್ತಮರು.


ಮಳೆಯ ನೀರು ಬೀದಿಯಲ್ಲಿ ಹರಿದಾಗ ಕೊಚ್ಚೆ ನೀರು ಎಂದೆನಿಸಿಕೊಳ್ಳುತ್ತದೆ.  ಅದೇ ನೀರು ದೊಡ್ಡದಾದ ಹಾಗೂ ಪವಿತ್ರವಾದ ನದಿಗಳನ್ನು ಸೇರಿದಾಗ, ಸೇರಿದ ನದಿಯ ಹೆಸರನ್ನೇ ಪಡೆದು ಸ್ನಾನ – ಪಾನಾದಿಗಳಿಗೆ ಬಳಸಲ್ಪಡುತ್ತದೆ.  ಇಲ್ಲಿ ದಾಸರು “ಹೆದ್ದೊರೆ” ಎಂಬ ಪದವನ್ನು ಉಪಯೋಗಿಸಿ ಕೃಷ್ಣಾ ನದಿಯನ್ನು ಕುರಿತು ಹೇಳುತ್ತಾರೆ.  “ಕೃಷ್ಣೆ”ಯನ್ನು ಹೆದ್ದೊರೆಯೆಂದು ಗ್ರಾಮ್ಯ ಭಾಷೆಯಲ್ಲಿ ಕರೆಯುತ್ತಾರೆ. ಹೇಗೆ ಮಳೆಯ ನೀರು ನದಿಯನ್ನು ಸೇರಿದಾಗ ನದಿಯೇ ಆಗತ್ತದೆಯೋ ಹಾಗೆ ಪರಮಾತ್ಮನ ಬಗ್ಗೆ ಬರೆದಾಗ ಪ್ರಾಕೃತಭಾಷೆಯೂ “ಸಂಸ್ಕೃತ”ದಷ್ಟೇ ಪವಿತ್ರವಾಗಿದೆ ಎಂಬುದು ಜಗನ್ನಾಥ ದಾಸರ ಭಾವ. ಆದ್ದರಿಂದ ಪ್ರಾಕೃತ ಭಾಷೆಯಾದ ಕನ್ನಡದಲ್ಲಿ ಪರಮಾತ್ಮನ ಬಗ್ಗೆ ಹೇಳುತ್ತಿರುವುದು ದೋಷವಲ್ಲ ಎಂದು ದಾಸರು ನಿರೂಪಿಸಿದ್ದಾರೆ.

ಪ್ರಾಚೀನರೂ ಹಾಗೂ ಋಷಿಮುನಿಗಳು ಭಗವಂತನ ಸರ್ವವ್ಯಾಪ್ತತೆಯನ್ನು ಗುರುತಿಸುವಂತಹ ಸೂಕ್ಷ್ಮ ಸಂವೇದನೆಯನ್ನು ಹೊಂದಿದ್ದು ಅವನ ವಿಶೇಷತೆಯನ್ನು ಆರಾಧಿಸುತ್ತಿದ್ದರು. ಸುಪ್ರಸಿದ್ಧವಾದ "ತ್ವಮೇವ ಮಾತಾ ಚ ಪಿತಾ ತ್ವಮೇವ" ಶ್ಲೋಕದಲ್ಲಿ ಕೂಡ ಭಗವಂತನಿಗೆ ಅಸಾಧಾರಣವಾದ ಪಿತೃತ್ವ, ಮಾತೃತ್ವ, ಬಂಧುತ್ವ, ಗುರುತ್ವ ಇತ್ಯಾದಿ ಸಕಲ ಬಾಂಧವ್ಯವನ್ನೂ ಜಗತ್ತಿನೊಡನೆ ವಿಧಿಸುವ, ಗುರುತಿಸುವ ದಿವ್ಯ ದೃಷ್ಟಿಯನ್ನು ಹೊಂದಿದ್ದರು.  ಮಳೆಗರೆಯುವ ಮೇಘದ ಪ್ರಾಕೃತಿಕ ವ್ಯಾಪಾರದಲ್ಲಿಯೂ ಋಷಿಗಳು ಭಗವಂತನನ್ನು ಕಂಡು ಧನ್ಯತೆಯನ್ನು ಅನುಭವಿಸುತ್ತಿದ್ದರು.  ನೀರನ್ನು ತುಂಬಿಕೊಂಡ ಮೇಘಗಳನ್ನು, ಗರ್ಭಧರಿಸುವ ತಾಯಿಯೆಂದೂ ಸೃಷ್ಟಿರೂಪದಲ್ಲಿ ಮಳೆಗರೆಯುವ ಪುರುಷರ ಕಾರ್ಯವನ್ನೂ (ರೇತೋ ವಿಸರ್ಜನ) ಮಾಡುವುದರಿಂದ ತಂದೆಯೆಂದೂ ಕರೆದು, ಭಗವಂತನ ಜೊತೆಗಿನ ಆಪ್ತತೆಯನ್ನು ಅನುಭೂತಿಸುತ್ತಿದ್ದರು. ಜೀವ ನಳನಳಿಸಲು ’ಜೀವನಾಡಿ”ಯಾಗುವ ನದಿಗಳನ್ನು ದೇವತೆಗಳೆ೦ದು ಪೂಜಿಸುತ್ತಿದ್ದರು. ಭಗವ೦ತ ತ್ರಿವಿಕ್ರಮಾವತಾರದಲ್ಲಿ   ತನ್ನ ಎರಡನೆಯ ಪಾದದಿ೦ದ ಅ೦ತರಿಕ್ಷವನ್ನು ಅಳೆಯುವಾಗ, ಎಡಪಾದದ ಉಗುರಿನ ಬಿರಿದ ಭಾಗದಿಂದ ಸ್ಫುರಿಸಿದವಳು ಗಂಗೆ. ಈ ವಿಷ್ಣುಪದಿಯನ್ನು ಬೊಗಸೆಯಲ್ಲಿ ಹಿಡಿದ ಬ್ರಹ್ಮದೇವನು ಶ್ರೀಹರಿಯ ಪಾದಗಳನ್ನು ತೊಳೆದನಾದ್ದರಿಂದ ಗಂಗೆ ಸಕಲರ ಪಾಪಗಳನ್ನೂ ತೊಳೆವ ಪುಣ್ಯವತಿಯೆಂದು ಪೂಜಿಸಲ್ಪಡುವಳು.

ಹೀಗೆ ಉದ್ಭವಿಸಿದ ಗಂಗೆಯನ್ನು ಶ್ರೀ ಶಂಕರಾಚಾರ್ಯರು ತಮ್ಮ “ಗಂಗಾಸ್ತೋತ್ರ”ದಲ್ಲಿ- 
ತವ ಜಲಮಮಲಂ ಯೇನ ನಿಪೀತಂ | ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತ: | ಕಿಲ ತಂ ದ್ರಷ್ಟುಂ ನ ಯಮ: ಶಕ್ತ: ||

ಓ ತಾಯೇ ಗಂಗೇ, ನಿನ್ನ ನಿರ್ಮಲ ಜಲವನ್ನು ಕುಡಿಯುವವನು ಪರಮಾತ್ಮನ ಪರಮಪದವನ್ನೇ ಪಡೆಯುವನಲ್ಲವೇ ? ಆ ಯಮನಂತೂ ನಿನ್ನ ಭಕ್ತನ ಕಡೆ ಕಣ್ಣೆತ್ತಿ ನೋಡಲೂ ಶಕ್ತನಲ್ಲ ಎಂದು ಸ್ತುತಿಸುತ್ತಾರೆ.  ಹೀಗೆ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಬರಿಯ ಶರೀರ ಮಾತ್ರವಲ್ಲಾ ಮನಸ್ಸೂ ಶುದ್ಧವಾಗುತ್ತದೆ ಎಂಬ ನಂಬಿಕೆಯಿದೆ.

“ಕಲುಷ ವಚನಗಳಾದರಿವು ಬಾಂ | ಬೊಳೆಯ ಪೆತ್ತನ ಪಾದ ಮಹಿಮಾ | ಜಲಧಿ ಪೊಕ್ಕುದರಿಂದ ಮಾಣ್ದಪರೇ ಮಹೀಸುರರು” || ವಿಷ್ಣು ಪಾದೋದ್ಭವಳಾದ ಗಂಗೆಗೇ ಇಷ್ಟು ಮಹಿಮೆ ಇರುವಾಗ ಶ್ರೀಹರಿಯ ಕಥೆಗಳನ್ನೂ, ಮಹಿಮೆಯನ್ನೂ, ಅಹಂಕಾರವನ್ನು ತೊರೆದು, ಅತಿ ಆದರದಿಂದ, ಭಕ್ತಿಯಿಂದ, ಭಗವಂತನ ಸೇವೆಯೆಂಬ ಭಾವದಿಂದ, ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದೇನಾದ್ದರಿಂದ ಇದು ಕೂಡ ಸಂಸ್ಕೃತದಷ್ಟೇ ಪವಿತ್ರವಾಗಿದೆ. ಸಂಸ್ಕೃ ಪದಗಳು ವಸ್ತುವಿನ ಗುಣ - ಅಭಿರುಚಿ - ಎಂದು ನಾನಾ ಮುಖಗಳನ್ನು ವಿವರಿಸುತ್ತೆ.  ಆದ್ದರಿಂದ ಅಂತಹ ಒಂದು ಸಮೃದ್ಧ ಭಾಷೆ ಬಿಟ್ಟು, ಕನ್ನಡದಲ್ಲಿ ರಚಿಸಿರುವ ಕೃತಿ ಕೂಡ ಶ್ರೀಹರಿಯ ಸ್ತುತಿಯನ್ನು ಮಾಡುವುದರಿಂದ ಸಂಸ್ಕೃತದಷ್ಟೇ ವಿಶೇಷತೆಯನ್ನು ಡೆದಿದೆ   ಎಂದು ಜಗನ್ನಾಥ ದಾಸರು ಈ ಪದ್ಯದಲ್ಲಿ ಹೇಳುತ್ತಾರೆ.

ಶ್ರೀ ವಿಷ್ಣು ಸಹಸ್ರನಾಮದ  ಫಲಶ್ರುತಿಯಲ್ಲಿ :
"ದ್ಯೌ: ಸ ಚಂದ್ರಾರ್ಕನಕ್ಷತ್ರಂ ಖಂ ದಿಶೋ ಭೂ: ಮಹೋದಧಿ: |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನ:" ||

ಪರಮಾತ್ಮನ ವೀರ್ಯದಿಂದಲೇ ಸಕಲ ಜಗತ್ತೂ ಭರಿಸಲ್ಪಟ್ಟು ನಿಂತಿದೆಯೆಂದೂ, ಹಾಗೂ  ಜಗತ್ತಿನ ಸೃಷ್ಟಿಗೂ, ಮೇಘಗರ್ಭದಲ್ಲಿರುವ ನೀರಿಗೂ ನಡುವೆ ಒಂದು ದಿವ್ಯ ಸಂಬಂಧವನ್ನು ವೇದ ಇಲ್ಲಿ ಎತ್ತಿ ಹಿಡಿದಿದೆ.  ಸೃಜನ ಕಾರ್ಯಕ್ಕೆ ಅವಶ್ಯವಾಗಿ ಬೇಕಾಗುವ ಮೂಲದ್ರವ್ಯ ಉದಕವೆಂದೂ, ಆಪವೆಂದೂ, ಸಲಿಲವೆಂದೂ, ವನವೆಂದೂ ಮುಂತಾಗಿ ಸುಮಾರು ನೂರಾ ಒಂದು ದಿವ್ಯ ಶಬ್ದಗಳಲ್ಲಿ ಕರೆದಿದೆ.  “ಘೃತಂ” ಎಂದು ಕೂಡ ಒಂದು ಹೆಸರಿದೆ ನೀರಿಗೆ.  ’ಘೃ’ ಧಾತುವು ಸೇಚನ ಮಾಡುವುದು, ಸಿಂಪಡಿಸುವುದು ಎಂಬ ಕ್ರಿಯಾರ್ಥವನ್ನು ಹೊಂದಿರುವುದರಿಂದ ಮೇಲಿನಿಂದ ಮಳೆಯ ರೂಪದಲ್ಲಿ ಚೆಲ್ಲಲ್ಪಡುವ ನೀರು ಎಂಬುದನ್ನು ಸೂಚಿಸುತ್ತದೆ.  ಇದೇ ಧಾತುವಿಗೆ ’ಬೆಳಗು’ ಎಂಬ ಅರ್ಥವಾದಾಗ ತನ್ನ ಕಾಂತಿಯಿಂದಲೇ ಬೆಳಗುವ ನೀರಿನ ದೀಪ್ತಿಯನ್ನು, ದೈವೀ ಶಕ್ತಿಯನ್ನು ಸೂಚಿಸುತ್ತದೆ.  ಹಾಗೇ ಇದೇ ಧಾತುವಿಗೆ ’ಗತಿ’ ಎಂಬರ್ಥವನ್ನು ಹೇಳಿದಾಗ ಮಳೆಯ ರೂಪದಲ್ಲಿಯೂ ಪರ್ವತದಲ್ಲಿಯೂ ಕೆಳಗೆ ಬೀಳುವ ನೀರು ಎಂದು ಸೂಚಿಸುತ್ತದೆ. “ಜೀವ  ನಳನಳಿಸಲು ’ಜೀವನಾಡಿ"ಯಾಗುವ ಜಲ, ಜೀವನದ ಕಡೆಯ ಪಯಣದಲ್ಲಿ – "ಗಂಗಾಜಲ" ವಾಗುತ್ತದೆ.   ಹೀಗೆ ನೀರು ನಮಗೆ ಅತಿ ಅವಶ್ಯಕವಾದ ವಸ್ತುವಾಗುತ್ತದೆ.

“ಮಳೆಯ ನೀರೋಣಿಯೊಳು ಪರಿಯಲು” – ಪವಿತ್ರವಾದ ಮಳೆಯ ನೀರು ಕೊಳಚೆ ತುಂಬಿದ ಓಣಿಯಲ್ಲಿ ಸುರಿದು ಹರಿಯುತ್ತದೆ.  ಸುರಿವ ಮಳೆಗೆ ಕೊಳಚೆ ಓಣಿ, ಶುದ್ಧವಾದ ಓಣಿ ಎಂಬ ತಾರತಮ್ಯವಿರುವುದಿಲ್ಲ.  ಎಲ್ಲಾ ಕಡೆಯೂ ಸುರಿದು ಹರಿಯುತ್ತದೆ.  ಆಗಲೂ ನೀರು ಪವಿತ್ರವಾಗಿಯೇ ಇದ್ದರೂ ಕೂಡ ಅದು ಅಪವಿತ್ರವೆನ್ನಲಾಗುತ್ತದೆ. ಉಪಯೋಗಕ್ಕೆ ಬಾರದಿರುತ್ತದೆ.

“ಬಳಸರೂರೊಳಗಿದ್ದ ಜನರಾ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು” – ಕೊಳಚೆ ಓಣಿಯಲ್ಲಿ ಸುರಿದು ಹರಿದರೂ ಕೂಡ ಕೊನೆಗೆ ಮಳೆಯ ನೀರು ಹಿರಿದಾದ ತೊರೆಯನ್ನೋ, ನದಿಯನ್ನೋ ಸೇರಿದಾಗ, ತಾನೂ ಅದೇ ತೊರೆ ಅಥವಾ ನದಿಯೆಂದು ಗುರುತಿಸಲ್ಪಡುತ್ತದೆ.  ಊರಿನ ಜನಗಳು ಅದು ಕೊಳಚೆ ಓಣಿಯಲ್ಲಿ ಹರಿದಾಗ ಉಪಯೋಗ ಪಡಿಸಿಕೊಳ್ಳದವರು, ನದಿಯನ್ನೋ, ತೊರೆಯನ್ನೋ ಸೇರಿದಾಗ, ಕುಡಿಯಲು, ಸ್ನಾನ ಮಾಡಲು ಉಪಯೋಗಿಸುತ್ತಾರೆ.

ಸಾಗರದ  ನೀರು ಸೂರ್ಯ ರಶ್ಮಿಯ ಮಿಲನದಿಂದ ಆವಿಯಾಗಿ, ಮೋಡದ ಗರ್ಭದಲ್ಲಿ ಹನಿಯಾಗಿ ಸೇರಿ  ಮತ್ತೆ ಭೂಮಿಗೆ ಸುರಿದಾಗ ಎಲ್ಲಾ ರೀತಿಯಲ್ಲೂ ಬಹು ಪವಿತ್ರ ಹಾಗೂ ಪಾವನವಾಗಿರುತ್ತದೆ. ಅದೇ ರೀತಿಯಲ್ಲಿ ಯಾವುದೇ ವಸ್ತುವಾದರೂ ಕೂಡ ಭಗವಂತನ ಸಾನ್ನಿಧ್ಯವಿಲ್ಲದೆ ಪವಿತ್ರವಾಗುವುದಿಲ್ಲ.  ವಿಷ್ಣುಪದಿಯಾದ ಗಂಗೆ “ಹರಿವ ಹರಿಯೇ” ಎನ್ನುವಷ್ಟು ಶ್ರೀಹರಿಯ ಸಾ೦ಗತ್ಯವನ್ನು ಹೊ೦ದಿದ೦ತೆ, ದಾಸರು ರಚಿಸಿರುವ ’ಹರಿಕಥಾಮೃತಸಾರ’ ಗ್ರಂಥವೂ ಕೂಡ ಶ್ರೀಹರಿಯ ಸ್ತುತಿರೂಪವಾಗಿದ್ದು, ಭಗವಂತನ ಮಹಾಸನ್ನಿಧಾನ ಇರುವುದರಿಂದಲೇ ಅದು ಪವಿತ್ರವೆನ್ನಿಸಿದೆ.  

ಮೇಘೋಚ್ಛಿಷ್ಟ ವರ್ಷಧಾರೆಯು ಇಳೆಯನೆಲ್ಲಾ ಆವರಿಸಿ ಕಡಲ ತಡಿಯಲಿ ಹರಿದು ಒಡಲು ಸೇರುವ೦ತೆ, ಜೀವಿಗಳೂ ಕೂಡ ಮಳೆಯ ನೀರಿನಂತೆಯೇ ಹುಟ್ಟು ಸಾವುಗಳ ಚಕ್ರದಲ್ಲಿ ಬಂಧಿತರಾಗಿದ್ದೇವೆ. ಸಾಗರದ ನೀರು ಹೇಗೆ ಆವಿಯಾಗಿ-ಮೋಡವಾಗಿ ಮತ್ತೆ ಮಳೆಹನಿಯಾದಾಗ ಶುದ್ಧ ಮತ್ತು ಪವಿತ್ರವಾಗಿರುತ್ತದೆಯೋ,  ಹಾಗೆಯೇ ನಾವು ನಮ್ಮ ಮನಸ್ಸನ್ನು ಭಗವಂತನ ಪರ ಚಿ೦ತನೆಯಲ್ಲಿ ತೊಡಗಿಸಿಕೊಂಡು, ಮಾಡುವ ಎಲ್ಲಾ ಕರ್ಮಗಳನ್ನೂ ಪ್ರತಿಫಲಾಫೇಕ್ಷೆಯಿಲ್ಲದೆ ಮಾಡುತ್ತಾ ಬಂದರೆ, ನಮ್ಮ ಮನಸ್ಸೂ ಕೂಡ ಪರಿಶುದ್ಧವಾಗುತ್ತಾ ಭಗವಂತನಲ್ಲಿ ನೆಲೆ ಗಾಣುತ್ತದೆ.  ಸಾಗರದ ಗರ್ಭದಲ್ಲಿ ತಿಮಿಂಗಿಲಗಳೂ ಇವೆ, ಸುಂದರ ಮತ್ಸ್ಯಗಳೂ ಇವೆ ಮತ್ತು ಬೆಲೆಬಾಳುವ ಮುತ್ತು ರತ್ನಗಳೂ ಅಡಗಿವೆ.  ನಮ್ಮ ಹುಡುಕಾಟ ಮುತ್ತು ರತ್ನಗಳೆಂಬ ಬೆಲೆಬಾಳುವ ಭಗವಂತನ ಚಿಂತನೆಗಳಾಗಿರಬೇಕೆ ಹೊರತೂ, ವಿಷಯಾಸಕ್ತಿಗಳೆಂಬ ತಿಮಿಂಗಿಲಗಳಾಗಿರಬಾರದು ಎ೦ಬುದು ದಾಸರ ಚಿ೦ತನೆಯಾಗಿದೆ.

ಚಿತ್ರಕೃಪೆ : ಅಂತರ್ಜಾಲ 
ಆಧಾರ ಗ್ರಂಥ : "ವೇದ ಸಂಸ್ಕೃತಿಯ ಪರಿಚಯ"   ಡಾ|| ಕೆ ಎಸ್ ನಾರಾಯಣಾಚರ್ಯ