Wednesday, July 15, 2015

ಕರುಣಾ ಸಂಧಿ - ೩೦ ನೇ ಪದ್ಯ ( ರಾಮಾವತಾರ )

ರಾಮೋರಾಮೋರಾಮ ಇತಿ ಸರ್ವೇಷಾಮಭವತ್ತದಾ |
ಸರ್ವೋ ರಾಮಮಯೋ ಲೋಕೋ ಯದಾ ರಾಮಸ್ತ್ವ ಪಾಲಯತ್ ||


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||

ರಾವಣಾದಿನಿಶಾಚರಧ್ವಂಸಿ -  ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿ ದಶರಥ ಮಹಾರಾಜನು ಆಯಾ ದೇವತೆಗಳನ್ನು ಹವಿಸ್ಸನ್ನು ಸ್ವೀಕರಿಸಲು ಆಹ್ವಾನಿಸಿದನು.  ಆಹ್ವಾನ ಸ್ವೀಕರಿಸಿ ದಯಮಾಡಿಸಿದ ಸಮಸ್ತ ದೇವತೆಗಳೂ ಅಲ್ಲಿಯೇ ಉಪಸ್ಥಿತರಿದ್ದ ಬ್ರಹ್ಮ ದೇವರಲ್ಲಿ ತಮ್ಮ ಅಳಲನ್ನು ಬಿನ್ನಹ ಮಾಡುವರು.  ಬ್ರಹ್ಮ ದೇವರ ವರಪ್ರಸಾದದಿಂದ ಅತಿಶಯ ಮದದಿಂದ ಕೊಬ್ಬಿರುವ ರಾವಣನೆಂಬ ರಾಕ್ಷಸನು ತಮ್ಮನ್ನೆಲ್ಲಾ ಪೀಡಿಸುತ್ತಿರುವನೆಂದೂ, ಸ್ವರ್ಗಲೋಕಾಧಿಪತ್ಯವನ್ನು ಗಳಿಸಿ ಇಂದ್ರದೇವನನ್ನು ಸ್ಥಾನದಿಂದ ಚ್ಯುತರನ್ನಾಗಿಸಲು ಹೊಂಚು ಹಾಕುತ್ತಿರುವನೆಂದೂ, ದುರಹಂಕಾರದಿಂದ ಉನ್ಮತ್ತನಾಗಿ ಋಷಿಗಳನ್ನೂ, ಯಕ್ಷ-ಗಂಧರ್ವರನ್ನೂ ಬಹುವಾಗಿ ಪೀಡಿಸುತ್ತಿರುವನೆಂದು ತಿಳಿಸುತ್ತಾರೆ.  ಬ್ರಹ್ಮದೇವರಿಂದ  ’ಗಂಧರ್ವ-ಯಕ್ಷ-ದೇವ-ರಾಕ್ಷಸ’ರಿಂದ ತಾನು ಅವಧ್ಯನಾಗುವಂತೆ ಪಡೆದಿರುವ ವರಪ್ರಸಾದದಿಂದ ದುಷ್ಟ ರಾವಣನು ಲೋಕಕಂಟಕನಾಗಿರುವನು.  ಆದ್ದರಿಂದ ರಾವಣನ ವಧೆಗೆ ಉಪಾಯವೊಂದನ್ನು ನಿರೂಪಿಸಬೇಕೆಂದು ಸಮಸ್ತ ದೇವತೆಗಳೂ ಬ್ರಹ್ಮದೇವರನ್ನು ಪ್ರಾರ್ಥಿಸುವರು.  ಬ್ರಹ್ಮದೇವರು ರಾವಣನಿಗೆ ಮಾನವರ ವಿಷಯದಲ್ಲಿದ್ದ ಅನಾದರಣೆ ಮತ್ತು ತಾತ್ಸಾರವನ್ನು ತಿಳಿಸುತ್ತಾ ರಾವಣನು ಮಾನವನಿಂದ ತನಗೆ ಮೃತ್ಯು ಬಾರದಿರಲೆಂದು ವರ ಕೇಳಿಲ್ಲವೆಂದು ತಿಳಿಸುವರು.  ಆದ್ದರಿಂದಲೇ ರಾವಣನು ಮಾನವನಿಂದಲೇ ಹತನಾಗಬೇಕು ಮತ್ತು ಭಗವಂತನೇ ಸಾಕ್ಷಾತ್ ಈ ಕಾರ್ಯವನ್ನು ಮಾಡಬೇಕಾಗಿರುವುದರಿಂದ ಸರ್ವ ದೇವತೆಗಳೂ ಶ್ರೀಹರಿಯನ್ನು ಪ್ರಾರ್ಥಿಸಬೇಕೆಂದು ತಿಳಿಸುವರು.  ಅದೇ ಸಮಯಕ್ಕೆ ಅಲ್ಲಿಗೆ ಶಂಖ-ಚಕ್ರ-ಗದಾಪಾಣಿಯಾಗಿ ಆಗಮಿಸಿದ ಶ್ರೀಹರಿಯನ್ನು ದೇವತೆಗಳು ನಾನಾ ವಿಧದಿಂದ ಸ್ತುತಿಸುತ್ತಾ ದಶರಥನ ಸುತನಾಗಿ ಜನಿಸಬೇಕೆಂದು ಪ್ರಾರ್ಥಿಸುತ್ತಾರೆ.   ಭಗವಂತನು ದೇವತೆಗಳಿಗೆ ಅಭಯವನ್ನು ನೀಡುತ್ತಾ ರಾವಣನನ್ನು ಪುತ್ರ-ಪೌತ್ರ-ಅಮಾತ್ಮ-ಮಂತ್ರಿ-ಜ್ಞಾನಿ-ಬಾಂಧವರೊಡನೆ ಸಂಹರಿಸಿ, ಮಾನವ ರೂಪದಲ್ಲಿ ತಾನು ಭೂಲೋಕವನ್ನು ಸಂರಕ್ಷಿಸುವುದಾಗಿ ಆಶ್ವಾಸನೆ ನೀಡುವನು.  ಪುಂಡರೀಕಾಕ್ಷನಾದ ಶ್ರೀಮಹಾವಿಷ್ಣುವು ನಾಲ್ಕು ಅಂಶಗಳಿಂದ ದಶರಥ ಮತ್ತು ಆತನ ನಾಲ್ವರು ಪತ್ನಿಯರಲ್ಲಿ ಭೂಲೋಕದಲ್ಲಿ ಅವತರಿಸುವನು.  ರಾಮಚಂದ್ರನಾಗಿ ಭರತ, ಲಕ್ಷ್ಮಣ ಮತ್ತು ಶತ್ರುಘ್ನನೊಂದಿಗೆ ಅಯೋಧ್ಯೆಯಲ್ಲಿ ಪ್ರಾದುರ್ಭವಿಸುವನು.  ಭಾಗವತ ನವಮಸ್ಕಂಧ ೮ನೆಯ ಅಧ್ಯಾಯದಲ್ಲಿ ಭಗವಂತ ಶ್ರೀರಾಮನಾಗಿ ಅವತರಿಸಿದ್ದನ್ನು "ಅಂಶಾಂಶೇನ ಚತುರ್ಧಾSಗಾತ್ ಪುತ್ರತ್ವಂ ಪ್ರಾರ್ಥಿತಃ ಸುರೈಃ | ರಾಮ ಲಕ್ಷ್ಮಣ ಶತ್ರುಘ್ನ ಭರತಾಶ್ಚೇತಿ ಸಂಜ್ಞಯಾ"  ಎಂದು ವಿವರಿಸಿದ್ದಾರೆ.  ಬ್ರಹ್ಮದೇವರು  ಮಾನವ ರೂಪದಲ್ಲಿ ಅವತರಿಸುವ ಭಗವಂತನ ಭೂಭಾರ ಹರಣ ಕಾರ್ಯದಲ್ಲಿ ನೆರವಾಗಲು, ಸಹಭಾಗಿಗಳಾಗಲು ಸಮಸ್ತ ದೇವತೆಗಳಿಗೂ ಆದೇಶವೀಯುವರು.  ಸಮಸ್ತ ದೇವತೆಗಳೂ ನಾನಾ ವಿಧವಾದ ರೂಪಗಳಲ್ಲಿ ಪ್ರಾಣಿ, ಪಕ್ಷಿ, ಕಪಿಗಳಾಗಿ ಭಗವಂತ ರಾಮನಾಗಿ ನಡೆಸುವ ಲೀಲಾವಿನೋದದಲ್ಲಿ ಪಾಲ್ಗೊಳ್ಳಲು ಆಗಮಿಸುವರು.  ರಾಮಾವತಾರದ ಲೀಲೆ ಅನಾವರಣಗೊಳ್ಳುವುದು, ರಾಮಾಯಣವಾಗುವುದು.

ರಾಮಾಯಣವನ್ನು ಅರಿಯುವ ಪ್ರಯತ್ನವನ್ನು ಮಾಡಿದಾಗ ನಮಗೆ ಮೇಲ್ನೋಟಕ್ಕೆ ರಾಮಾವತಾರವು ರಾವಣನ ವಧೆಗಾಗಿಯೂ, ವಿಜೃಂಭಿಸುತ್ತಿದ್ದ ತಮಸ್ಸನ್ನು ಹತ್ತಿಕ್ಕುವುದಕ್ಕಾಗಿಯೂ ಆಗಿರುವುದೆಂಬ ಅಭಿಪ್ರಾಯವು ಮೂಡುವುದು.   ಆದರೆ ಮಾನವನಾಗಿ ಅವತರಿಸಿದ ಭಗವಂತನು ತನ್ನ ವ್ಯಕ್ತಿತ್ವದ ಮೂಲಕವೂ, ಅನಂತ ಗುಣಗಳ ಮೂಲಕವೂ ಅನೇಕ ದೃಷ್ಟಾಂತಗಳನ್ನು ಸೃಷ್ಟಿಸುವನು.  ಸಕಲ ಗುಣ ಪರಿಪೂರ್ಣನಾಗಿ, ಕಲ್ಯಾಣ ಗುಣಗಳಿಂದ ಶೋಭಿಸುವನು.  ಭಗವಂತನಾದ ಶ್ರೀರಾಮನು "ನಿತ್ಯಪೂರ್ಣ ಸುಖಜ್ಞಪ್ತಿ ಸ್ವರೂಪೋSಸೌ ಯತೋ ವಿಭುಃ" - ರಾಮ ಎಂಬ ಹೆಸರಿನಲ್ಲೇ ನಿತ್ಯಪೂರ್ಣ ಸುಖಜ್ಞಾನ ಸ್ವರೂಪನೆಂಬ ಅರ್ಥ ವಿವರಣೆಯಿದೆ.  ’ರ ಆ ಮ’ ಎಂಬ ಮೂರು ಅಕ್ಷರಗಳ ಸಮ್ಮಿನಲ ರಾಮನೆಂಬ ಶಬ್ದವಾಗುವುದು.  ರ ಎಂದರೆ ಸುಖ, ಮ ಎಂದರೆ ಜ್ಞಾನ ಮತ್ತು ಇವೆರಡರ ನಡುವೆ ಎರಡಕ್ಕೂ ಅನ್ವಯವಾಗುವಂತೆ ಇರುವ ಆ ಎಂದರೆ ಎರಡೂ ಗುಣಗಳೂ ನಿತ್ಯವಾಗಿವೆ, ಪೂರ್ಣವಾಗಿವೆ ಎಂಬರ್ಥವಾಗುತ್ತದೆ.  ಮಾನವನು ವಿಕಾರ ರಹಿತವಾದ ಆತ್ಮನಾಗಿರಬೇಕೆಂಬ ಸತ್ಯವನ್ನು ಪ್ರತಿಪಾದಿಸುವನು.  ಶಾಸ್ತ್ರ, ವೇದಗಳನ್ನು ಆಳವಾಗಿ ಅಭ್ಯಸಿಸಿ ನಾಡಿನ ಸಂಸ್ಕೃತಿಯನ್ನು ಉನ್ನತವಾಗಿಸಬೇಕೆಂಬುದನ್ನು ತಿಳಿಸುವನು.  ಒಬ್ಬ ರಾಜನಾಗಿ ಆಶ್ರಿತರಕ್ಷಕನಾಗಿರಬೇಕೆಂಬುದನ್ನು ತೋರಿಸುವನು.  ಶುದ್ಧಾತ್ಮನಾಗಿ ಗುರು-ಹಿರಿಯರಿಗೆ ವಿಧೇಯನಾಗಿರಬೇಕೆಂಬುದನ್ನು ಸಾಬೀತುಪಡಿಸುವನು.  ತನ್ನ ವನವಾಸಕ್ಕೆ ಕಾರಣಳಾದ ಕೈಕೇಯಿಯನ್ನೂ ಕೂಡ ದ್ವೇಷಿಸದೆ, ಪ್ರೀತಿಸಿ, ಹಿರಿಯರಲ್ಲಿ ಭಕ್ತಿ, ವಿನಯತೆಯನ್ನು ಪ್ರದರ್ಶಿಸುವನು.  ಅನುಜನಾಗಿ ತನ್ನ ಸಹೋದರರನ್ನು ಅಕ್ಕರೆಯಿಂದ ಕಾಣುತ್ತಾ, ಅವರಿಗೆ ತಾನು ದಾರಿತೋರುವನು.  ಧರ್ಮಕಾರ್ಯಗಳಿಗೆ ಅಡ್ಡಿ ಮಾಡುವವರನ್ನು ಸದೆಬಡಿದು ಧರ್ಮರಕ್ಷಕನಾಗಿ ಮೆರೆಯುವನು.   ದಕ್ಷ ರಾಜನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಏಕಪತ್ನೀ ವ್ರತಸ್ಥನಾಗಿ ಶ್ರೀರಾಮಚಂದ್ರನು ನಮ್ಮ ಬದುಕಿನಲ್ಲಿ, ಮನೆ-ಮನಗಳಲ್ಲಿ ಹಾಸುಹೊಕ್ಕಾಗಿ ಸುಂದರ ಭಾವವಾಗಿ ನಿಲ್ಲುವನು.

ಭಾಗವತ ಎರಡನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ರಾಮಾವತಾರವನ್ನು
ಅಸ್ಮತ್ಪ್ರಸಾದಸುಮುಖಃ ಕಲಯಾ ಕಲೇಶ
ಇಕ್ಷ್ವಾಕುವಂಶ ಅವತೀರ್ಯ ಗುರೋರ್ನಿದೇಶೇ |
ತಿಷ್ಠನ್ವನಂ ಸದಯಿತಾನುಜ ಆವಿವೇಶ
ಯಸ್ಮಿನ್ವಿರುಧ್ಯ ದಶಕನ್ಧರ ಆರ್ತಿಮಾರ್ಚ್ಛತ್ || - ಪರಿಪೂರ್ಣನಾದ ಭಗವಂತನು ನಮ್ಮನ್ನು ಅನುಗ್ರಹಿಸುವುದಕ್ಕಾಗಿಯೇ ತನ್ನ ಅಂಶಕಲೆಗಳಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರೊಡನೆ ಶ್ರೀರಾಮಚಂದ್ರನಾಗಿ ಇಕ್ಷ್ವಾಕು ವಂಶದಲ್ಲಿ ಅವತರಿಸುವನು.  ಅವತರಿಸಿ ತಂದೆಯ ಆಜ್ಞೆಯನ್ನು ಪಾಲಿಸುವ ಮಗನಾಗಿ ಪತ್ನೀ ಮತ್ತು ತಮ್ಮನೊಡನೆ ವನವಾಸ ಮಾಡುವನು.  ದೇವತೆಗಳಿಗೆ ಕಂಟಕಪ್ರಾಯನಾಗಿದ್ದು, ರಾಮಚಂದ್ರನ ವನವಾಸದ ಸಮಯದಲ್ಲಿ ವಿರೋಧ ಬೆಳೆಸಿಕೊಂಡಿದ್ದ ದುಷ್ಟದಶಾನನನ್ನು ಸಂಹಾರ ಮಾಡುವನು ಎಂದೂ ನವಮಸ್ಕಂಧದ ೧೦ನೆಯ ಮತ್ತು ೧೧ನೆಯ ಅಧ್ಯಾಯಗಳಲ್ಲಿ ಸಂಪೂರ್ಣ ರಾಮಾಯಣದ ಕಥೆಯನ್ನೂ ವಿವರಿಸಲಾಗಿದೆ.

ಶ್ರೀವಿಷ್ಣು ಸಹಸ್ರನಾಮದ ಫಲಶ್ರುತಿಯಲ್ಲಿ ಈಶ್ವರ ಉವಾಚವೆಂದು "ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ |  ಶ್ರೀ ರಾಮನಾಮ ವರಾನನೇ ಓಂ ನಮಃ ಇತಿ" ಎಂಬ ಶ್ಲೋಕವಿದೆ.  ರುದ್ರದೇವರು ವಿಷ್ಣು ಸಹಸ್ರನಾಮವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡ ಮೊದಲಿಗರು.  ಇದರ ಮಹತ್ವವನ್ನು ಪಾರ್ವತಿದೇವಿಗೆ ತಿಳಿಸುತ್ತಾ ಶ್ರೀರಾಮನಾಮದ ಜಪ ವಿಷ್ಣು ಸಹಸ್ರನಾಮದ ಪಾರಾಯಣಕ್ಕೆ ಸಮನಾದದ್ದು ಎಂದಿದ್ದಾರೆ.  ಹೇಗೆಂದರೆ “ರಾ” ಎನ್ನುವುದು ಅಕ್ಷರಮಾಲೆಯಲ್ಲಿ ೨ನೇ ಅಕ್ಷರ, “ಮ” ೫ನೇ ಅಕ್ಷರವಾಗುತ್ತದೆ.  ಆದ್ದರಿಂದ ೨X೫=೧೦, ೨X೫=೧೦, ೨X೫=೧೦, ಆಮೇಲೆ ೧೦X೧೦X೧೦=೧೦೦೦.  ಇದೊಂದೇ ಶ್ಲೋಕ ಪಠಿಸಿದರೆ ವಿಷ್ಣುವಿನ ೧೦೦೦ ನಾಮ ಜಪಿಸಿದಂತೆ ಆಗುತ್ತದೆ.  "ರಾಮನಾಮ"ದ ಜಪ ಅಷ್ಟು ಮಹತ್ವದ್ದೆಂದು ಸಾರಿದ್ದಾರೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ರಾಮಾವತಾರವನ್ನು
"ರಾಘವ ರಾಘವ ರಾಕ್ಷಸತ್ರೋ ಮಾರುತಿ ವಲ್ಲಭ ಜಾನಕಿಕಾಂತ" - ರಘುಕುಲತಿಲಕನೂ, ರಾಕ್ಷಸ ಶತ್ರುವೂ, ಆಂಜನೇಯನಿಗೆ ಸ್ವಾಮಿಯೂ, ಸೀತಾಪತಿಯೂ ಆದ ಶ್ರೀರಾಮನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಖರತರ ನಿಶಿಚರ ದಹನ ಪರಾಮೃತ ರಘುವರ ಮಾನದಭವ ಮಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ರಾವಣ ಕುಂಭಕರ್ಣಾದಿ ದುಷ್ಟ ದೈತ್ಯರನ್ನು ಸಂಹರಿಸಿದ, ಸರ್ವ ಸ್ವತಂತ್ರನಾದ, ಶ್ರೀ ಹನುಮದಾದಿಗಳಿಗೆ ಜ್ಞಾನದಾಯಕನಾದ, ರಾಮಾವತಾರಿಯೂ ಆದ ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀಶಂಕರಾಚಾರ್ಯರು  ತಮ್ಮ ಶ್ರೀರಾಮ ಸ್ತೋತ್ರಮ್ ನಲ್ಲಿ

ವಿಶುದ್ಧಂ ಪರಂ ಸಚ್ಚಿದಾನಂದರೂಪಂ | ಗುಣಾಧಾರಮಾಧಾರಹೀನಂ ವರೇಣ್ಯಮ್ ||
ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ | ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ || - ಅತ್ಯಂತ ಶುದ್ಧನಾದ, ಪರಮಾತ್ಮ, ಸಚ್ಚಿದಾನಂದ ಸ್ವರೂಪನನ್ನು, ಗುಣಗಳಿಗೆ ಆಧಾರನನ್ನು, ಶ್ರೇಷ್ಠನನ್ನು, ಮಹಾಂತನನ್ನು, ಯಾರಲ್ಲಿ ಬುದ್ಧಿ-ಗುಣ-ಸುಖಗಳು ಬೆಳಗಿ ಲೀನವಾಗುವವೋ, ಯಾರು ತನಗೆ ತಾನೇ ಆಶ್ರಯನೋ ಅಂತಹ ಶ್ರೀರಾಮನಿಗೆ ಶರಣು ಬಂದಿರುವೆನು ಎಂದೂ
ನಮೋ ವಿಶ್ವಕರ್ತ್ರೇ ನಮೋ ವಿಶ್ವಹರ್ತ್ರೇ | ನಮೋ ವಿಶ್ವಭೋಕ್ರ್ತೇ ನಮೋ ವಿಶ್ವಮಾತ್ರೇ ||
ನಮೋ ವಿಶ್ವನೇತ್ರೇ ನಮೋ ವಿಶ್ವಜೇತ್ರೇ | ನಮೋ ವಿಶ್ವಪಿತ್ರೇ ನಮೋ ವಿಶ್ವಮಾತ್ರೇ || - ವಿಶ್ವದ ನಿರ್ಮಾಪಕನೇ ನಿನಗೆ ನಮಸ್ಕಾರವು.  ವಿಶ್ವಸಂಹಾರಕನೇ ನಮಸ್ಕಾರವು.  ವಿಶ್ವದ ಭೋಗ ಮಾಡುವವನೇ ನಮಸ್ಕಾರವು.  ವಿಶ್ವಮಾತ್ರನೇ, ವಿಶ್ವದ ಮುಂದಾಳುವೇ, ವಿಶ್ವ ವಿಜಯಿಯೇ, ವಿಶ್ವದ ತಂದೆ-ತಾಯಿಯೇ ನಿನಗೆ ನಮಸ್ಕಾರವು ಎಂದೂ
ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ | ನರಾ ಯೇ ಸ್ಮರಂತ್ಯನ್ವಹಂ ರಾಮಚಂದ್ರ ||
ಭವಂತಂ ಭವಾಂತಂ ಭರಂತಂ ಭಜಂತೋ | ಲಭಂತೇ ಕೃತಾಂತಂ ನ ಪಶ್ಯಂತ್ಸ ತೋSನ್ತೇ || - ಶ್ರೀರಾಮಚಂದ್ರ ನಿನ್ನ ಚರಿತ್ರೆಯು ವಿಚಿತ್ರವೂ, ಪವಿತ್ರವೂ ಆಗಿದೆ.  ಯಾರು ಈ ಚರಿತ್ರೆಯನ್ನು ಯಾವಾಗಲೂ ಸ್ಮರಿಸುವರೋ ಅವರು ಕಾಲತ್ರಯಗಳನ್ನು ನಿವಾರಿಸಿ , ತಮ್ಮ ಭ್ರಮೆಗಳನ್ನು ಹೋಗಲಾಡಿಸಿ ನಿನ್ನನ್ನು ಭಜಿಸುತ್ತಾ ಕೃತಕೃತ್ಯರಾಗುವರು.  ಅವರು ನಿನ್ನನ್ನೇ ಹೊಂದುವರು, ಅವರಿಗೆ ಅಂತ್ಯಕಾಲದಲ್ಲಿ ಯಮನ ದರ್ಶನವಿರುವುದಿಲ್ಲ ಎಂದು  ಸ್ತುತಿಸಿದ್ದಾರೆ.  ಹಾಗೇ ತಮ್ಮ
"ಶ್ರೀರಾಮ ಮಾನಸ ಸ್ತೋತ್ರಮ್" ನಲ್ಲಿ
ಜಯ ಜಯತಿ ವಿಷ್ಣೂ ರಾಮನಾಮಾಭಿಧೇಯೋ | ಜಯತಿ ಜಯತಿ ಪೂರ್ಣಃ ಕೋಟಿ ಕಂದರ್ಪಭಾಸಃ || - ಶ್ರೀರಾಮನೆಂಬ ಹೆಸರಿನ ಶ್ರೀವಿಷ್ಣುವಿಗೆ ಜಯವಾಗಲಿ, ಕೋಟಿ ಮದನರ ತೇಜವುಳ್ಳವನೇ, ಪೂರ್ಣನೇ ನಿನಗೆ ಜಯವಾಗಲಿ ಎಂದೂ
ಜಯ ಜಯ ಕರುಣಾಬ್ಧೇSನಂತ ಭಾನುಪ್ರಕಾಶ | ಜಯ ಜಯ ಜಗದೀಶಾವ್ಯಕ್ತ ಮಾಯಾಧಿದೇವ ||
ಜಯ ಜಯ ಧರಣೀಜಾವಲ್ಲಭಾನಂತವೀರ್ಯ | ಜಯ ಜಯ ರಘುನಾಥಾನಾಥಾನಾಥ ಪ್ರಸೀದ || - ಕರುಣಾಸಾಗರ, ಅನಂತಸೂರ್ಯ ಪ್ರಕಾಶ ನಿನಗೆ ಜಯವಾಗಲಿ, ಜಗದೀಶ, ಅವ್ಯಕ್ತ, ಮಾಯಾಧಿಪನೇ ನಿನಗೆ ಜಯವಾಗಲಿ, ಭೂಮಾತೆಯ ಕನ್ಯೆ ಸೀತಾದೇವಿಯ ಪತಿಯೇ, ಅತುಲ ಪರಾಕ್ರಮಿಯೇ ನಿನಗೆ ಜಯವಾಗಲಿ, ಅನಾಥನಾಥ, ರಘುನಾಥ ಪ್ರಸನ್ನನಾಗು, ನಿನಗೆ ಜಯವಾಗಲಿ ಎಂದು ಸ್ತುತಿಸಿ ಪ್ರಾರ್ಥಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಶ್ರೀರಾಮಾವತಾರವನ್ನು ಒಟ್ಟು ಹನ್ನೆರಡು ಚರಣಗಳಲ್ಲಿ ಸ್ತುತಿಸಿ, ವರ್ಣಿಸಿದ್ದಾರೆ :

ಶ್ರೀರಾಮ ಲಕ್ಷ್ಮಣ ಶುಕಾರಾಮ ಭೂರವತು ಗೌರಾಮಲಾಮಿತಮಹೋ
ಹಾ ರಾಮರಸ್ತುತಯಶೋ ರಾಮಕಾಂತಿ ಸುತನೋ ರಾಮಲಬ್ಧಕಲಹ |
ಸ್ವಾರಾಮವರ್ಯರಿಪು ವೀರಾಮಯರ್ಧಿಕರ ಚೀರಾಮಲಾವೃತಕಟೇ
ಸ್ವಾರಾಮದರ್ಶನಜ ಮಾರಾಮಯಾಗತ ಸುಘೋರಾ ಮನೋರಥ ಹರ || - ಲಕ್ಷ್ಮಣನಿಗೆ ಆಶ್ರಯದಾತನಾದ, ಮನೋಹರವಾದ ಮುಕ್ತಾಹಾರಾದಿ ಆಭರಣಗಳುಳ್ಳ, ದೇವತೆಗಳಿಂದ ವರ್ಣಿಸಲ್ಪಡುವ, ಮಹಾಕೀರ್ತಿಯುಳ್ಳ, ಅತಿಮನೋಹರ ಕಾಂತಿಯುಕ್ತ ಶರೀರವುಳ್ಳ, ಪರಶುರಾಮನೊಂದಿಗೆ ಕಲಹದ ನಾಟಕವಾಡಿದ, ಸ್ವರ್ಗದ ಇಂದ್ರಾದಿ ದೇವತೆಗಳನ್ನು ಸೋಲಿಸಿದ ದೈತ್ಯರಿಗೆ ಹೆದರಿಕೆಯನ್ನುಂಟು ಮಾಡಿದ, ವಲ್ಕಲಧಾರಿಯಾದ, ಪಂಚವಟಿಯ ಉದ್ಯಾನವನ್ನು ಕಂಡು ಶೀರಾಮದರ್ಶನದಿಂದ ಕಾಮಬಾಣ ಪೀಡಿತೆಯಾದ ಶೂರ್ಪಣಖಿಯ ಇಷ್ಟಾರ್ಥ ಭಂಗ ಮಾಡಿದ ಶ್ರೀರಾಮಚಂದ್ರನೇ ನನ್ನನ್ನು ಸದಾಕಾಲ ರಕ್ಷಿಸು ಎಂದೂ
ಧೀಮಾನಮೇಯ ತನು ಧಾಮಾSSರ್ತ ಮಂಗಲದ ನಾಮಾ ರಮಾ ಕಮಲ ಭೂ
ಕಾಮಾರಿ ಪನ್ನಗಪ ಕಾಮಾಹಿವೈರಿ ಗುರು ಸೋಮಾದಿವಂದ್ಯ ಮಹಿಮಾ |
ಸ್ಥೇಮಾದಿನಾSಪಗತ ಸೀಮಾSವತಾತ್ಸಖಲ ಸಾಮಾಜ ರಾನಣರಿಪೂ
ರಾಮಾಭಿಧೋ ಹರಿರಭೌಮಾಕೃತಿಃ ಪ್ರತನ ಸಾಮಾದಿವೇದವಿಷಯಃ || - ಸರ್ವತತ್ತ್ವ ದೇವತೆಗಳಿಗೂ ಪ್ರೇರಕನಾದ, ಬ್ರಹ್ಮಾದಿ ದೇವತೆಗಳಿಂದಲೂ ಸಮಗ್ರವಾಗಿ ತಿಳಿಯಲು ಅಸಾಧ್ಯವಾದ ಮಹಿಮಾತಿಶಯವುಳ್ಳ, ಭಕ್ತಜನರ ದುಃಖಗಳನ್ನು ಪರಿಹರಿಸುವ ಮಂಗಲಕರವಾದ ನಾಮಗಳುಳ್ಳ, ಲಕ್ಷ್ಮೀ ಬ್ರಹ್ಮಾದಿ ದೇವತೆಗಳಿಂದ ವಂದಿತನಾದ, ಸಮಸ್ತ ಚರಾಚರ ಪ್ರಪಂಚದ ಸೃಷ್ಟಿ ಸ್ಥಿತಿ ಪ್ರಲಯಾದಿ ಕರ್ತನಾದ, ಸರ್ವ ಸೈನ್ಯ ಸಹಿತನಾದ ರಾವಣನನ್ನು ಸಂಹರಿಸಿದ, ಅಪ್ರಾಕೃತವಾದ ಶರೀರವುಳ್ಳ, ವೇದ ಪ್ರತಿಪಾದ್ಯನಾದ, ಶ್ರೀರಾಮನೆಂಬ ಹೆಸರಿನಿಂದ ಭೂಮಿಯಲ್ಲಿ ಅವತರಿಸಿದ ಶ್ರೀಹರಿಯು ನಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ರಾಮಾವತಾರವನ್ನು
ವಿತರಸಿ ದಿಕ್ಷು ರಣೇ ದಿಕ್ಪತಿಕಮನೀಯಂ
ದಶಮುಖ ಮೌಲಿಬಲಿಂ ರಮಣೀಯಂ
ಕೇಶವ ಧೃತ ರಾಮಶರೀರ ಜಯ ಜಗದೀಶ ಹರೇ || -  ದಿಕ್ಪಾಲಕರಿಗೆ ರಣದೀಕ್ಷೆಯನ್ನು ವಿತರಿಸುವ ರಮಣೀಯ ದೃಶ್ಯ, ದಶಕಂಠನ ಮುಕುಟವನ್ನು ಬಲಿಯಾಗಿಸುವ ರಮಣೀಯ ದೃಶ್ಯ, ಕೇಶವ ಧೃತ ರಾಮ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ ರಾಮಾವತಾರವನ್ನು ಸಮನ್ವಯಿಸಿದಾಗ ಶ್ರೀರಾಮನೆಂದರೆ ಮರ್ಯಾದಾ ಪುರುಷೋತ್ತಮನೆಂದೂ, ಅತ್ಯಂತ ಸಂಭಾವಿತನೆಂದೂ ಆರಾಧಿಸುತ್ತೇವೆ. ಸಮಯ ಬಂದಾಗ ದುಷ್ಟ ಶಕ್ತಿಗಳ ನಿವಾರಣೆ ಮಾಡಿದ ಭಗವಂತನೆಂದು ಕೊಂಡಾಗ, ನಮಗೆ ರಾಮ ನಮ್ಮಲ್ಲಿರುವ ದುರ್ವ್ಯಸನಗಳನ್ನು ದಮನ ಮಾಡಲು, ನಮ್ಮ ಮನಸ್ಸನ್ನು ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಗುರುವಾಗಿ ಹತ್ತಿರವಾಗುತ್ತಾನೆ. ಸಮಚಿತ್ತದಿಂದ ಬದುಕು ನಡೆಸಲು ಆದರ್ಶ ವ್ಯಕ್ತಿಯಾಗಿ ಕಾಣಿಸುತ್ತಾನೆ. ಅನುಕರಿಸಲೇ ಬೇಕಾದ ಸೌಮ್ಯ ಸ್ವಭಾವ, ಗಂಭೀರಾಕೃತಿ, ಇಂದ್ರಿಯಗಳ ನಿಗ್ರಹ ಶಕ್ತಿ, ರೂಪ, ಲಾವಣ್ಯ ಎಲ್ಲವೂ ರಾಮನನ್ನು ನಮ್ಮ ಮನದಲ್ಲಿ ನೆಲೆಗೊಳಿಸಲು ಸುಲಭ ಸಾಧ್ಯವಾಗುವಂತೆ ಮಾಡಿದೆ. ಪತ್ನಿಯೆಡೆಗಿನ ಅನುಪಮ ಪ್ರೇಮ, ಸೋದರ ವಾತ್ಸಲ್ಯ, ಹೀಗೆ ಪಟ್ಟಿ ಮಾಡುತ್ತಾ ಹೋದಾಗ ರಾಮ ಭಗವಂತ ಎನ್ನುವುದಕ್ಕಿಂತ ನಮ್ಮಲ್ಲೇ, ನಮ್ಮೊಳಗೇ ನೆಲೆಸಿರುವ ನಮ್ಮದೇ ಆತ್ಮಸಖ ಎನ್ನುವ ಅತಿ ನಿಕಟ ಸಂಬಂಧದ ಭಾವ ಬರುತ್ತದೆ.  ಪ್ರತಿಯೊಬ್ಬ ಮನುಷ್ಯನೂ ತನಗೊಂದು ಕಷ್ಟ ಬಂದಾಗಲಾಗಲೀ, ದುಃಖ ಬಂದಾಗಲಾಗಲೀ ಅಥವಾ ಅತಿಯಾದ ಸಂತೋಷವೇ ಆದಾಗಲೂ ಕೂಡ ಮೊಟ್ಟ ಮೊದಲು ಉದ್ಗರಿಸುವುದು "ರಾಮಾ" ಎಂದೇ.  ರಾಮಚಂದ್ರನು ನಮ್ಮ ಉಸಿರಿನಲ್ಲಿಯೇ ನೆಲೆಸಿದ್ದಾನೆಂಬುದನ್ನು ಗಮನಿಸಿಕೊಳ್ಳಬೇಕು.


ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಕೈಗಳಲ್ಲಿ ಶ್ರೀರಾಮ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ರಾಮಚಂದ್ರನ ರೂಪದಿಂದವತರಿಸಿದಾಗ ರಮಾದೇವಿಯು ’ಸೀತಾದೇವಿ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ಶತಧೃತಿಯ ನುಡಿಗೆ ದಶರಥನ ಗರ್ಬದಿ ಬಂದಿ
ದಿತಿಜರನು ಒರಸಿ ಸುಜನ-ರ | ಸುಜನರನು ಪೊರೆದ ರಘು-
ಪತಿಯೆ ನೀನೊಲಿದು ದಯವಾಗೋ || -  ಬ್ರಹ್ಮದೇವನ ವಿಜ್ಞಾಪನೆಗೆ ದಶರಥರಾಜನ ಹೊಟ್ಟೆಯಲ್ಲಿ ಅವತರಿಸಿ, ದೈತ್ಯರನ್ನು ನಾಶಮಾಡಿ, ಸಜ್ಜನರನ್ನು ರಕ್ಷಿಸಿದ, ಹೇ ರಘುಕುಲದೊಡೆಯ ರಾಮಚಂದ್ರ ನೀನು ಪ್ರಸನ್ನನಾಗಿ, ದಯವಾಗೋ ಎಂದು ಪ್ರಾರ್ಥಿಸಿದ್ದಾರೆ.


ರಾಮಾಯಣದಲ್ಲಿ ಉಲ್ಲೇಖವಿರುವಂತೆ
ಸರ್ವದೇವಮಯೋ ರಾಮಃ ಸ್ಮೃತಶ್ಚಾರ್ತಿ ಪ್ರಣಾಶನಃ | - ಶ್ರೀರಾಮನು ಸರ್ವದೇವಮಯನು.  ಶ್ರೀರಾಮನಲ್ಲಿಯೇ ಎಲ್ಲ ದೇವತೆಗಳೂ ಇರುವರು. ಸ್ಮರಿಸಿಕೊಂಡೊಡನೆಯೇ ಭಕ್ತರ ಪೀಡೆಗಳನ್ನು ವಿನಾಶಗೊಳಿಸುತ್ತಾನೆ.
ರಾಮನಾಮೈವ ನಾಮೈವ ನಾಮೈವ ಮಮ ಜೀವನಮ್ |
ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಮಥಾ || - ಶ್ರೀರಾಮನಾಮವೇ - ಜಯರಾಮನಾಮವೇ - ಜಯ ಜಯ ರಾಮನಾಮವೇ ನನ್ನ ಜೀವನವು.  ಕಲಿಯುಗದಲ್ಲಿ ಪರಮಗತಿಯನ್ನು ಹೊಂದಲು ಬೇರೆ ಯಾವ ಉಪಾಯವೂ ಇಲ್ಲ, ಇಲ್ಲ, ಇಲ್ಲ, ಇಲ್ಲವೇ ಇಲ್ಲ. 


ಚಿತ್ರಕೃಪೆ : ಅಂತರ್ಜಾಲ

https://en.wikipedia.org/wiki/Kodandarama_Temple
https://en.wikipedia.org/wiki/Ramateertham
http://www.karnataka.com/hampi/kodanda-rama-temple/