Tuesday, February 11, 2014

ಕರುಣಾ ಸಂಧಿ - ೧೬ ನೇ ಪದ್ಯ

ಏನು ಕರುಣಾನಿಧಿಯೊ ಹರಿ ಮ
ತ್ತೇನು ಭಕ್ತಾಧೀನನೋ ಇ
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ |
ತಾನೆ ಸೃಜಿಸುವ ಪಾಲಿಸುವ ನಿ
ರ್ವಾಣ ಮೊದಲಾದಖಿಳಲೋಕ
ಸ್ಥಾನದಲಿ ಮತ್ತವರನಿಟ್ಟಾನಂದ ಪಡಿಸುವನು  ||೧೬||

ಪ್ರತಿಪದಾರ್ಥ : ಏನು ಕರುಣಾನಿಧಿಯೋ ಹರಿ - ಶ್ರೀಹರಿಯು ಸಾಟಿಯಿಲ್ಲದಂತಹ ಕರುಣಾಸಾಗರನು, ಮತ್ತೇನು ಭಕ್ತಾಧೀನನೋ - ತನ್ನನ್ನು ಭಕ್ತಿ ಹಾಗೂ ಪ್ರೇಮದಿಂದ ಸ್ತುತಿಸುವ ಭಕ್ತರಿಗೆ ಅಧೀನನಾಗುವನು, ಇನ್ನೇನು ಈತನ ಲೀಲೆ - ಭಗವಂತ ಎಲ್ಲಾ ಕಾರ್ಯಗಳೂ ಲೀಲೆಗಳೇ (ಕ್ರೀಡೆಗಳೇ) ಆಗಿವೆ ಬಣ್ಣಿಸಲಾಗಲೀ ಹೋಲಿಸಲಾಗಲೀ ಸಾಧ್ಯವಿಲ್ಲದಂತಹುದು, ಇಚ್ಛಾಮಾತ್ರದಲಿ - ತನಗೆ ಇಚ್ಛೆಯಾದ ಕೂಡಲೆ,  ಜಗವ ತಾನೆ ಸೃಜಿಸುವ - ಬ್ರಹ್ಮಾಂಡವನ್ನು ಸೃಷ್ಟಿ ಮಾಡುವನು, ಪಾಲಿಸುವ - ಸಂರಕ್ಷಣೆಯನ್ನೂ ಮಾಡುವನು, ನಿರ್ವಾಣ - ಎಂದರೆ ಬಾಣವಿಲ್ಲದ ಸ್ಥಳ ಮತ್ತು ಬಾಣ ಎಂದರೆ ಬಾಹ್ಯದೇಹ - ಮೋಕ್ಷ, ಮೊದಲಾದಖಿಳ - ಸ್ವರ್ಗ ಹಾಗೂ ಇತರ ಭೋಗಗಳು, ಲೋಕ ಸ್ಥಾನದಲಿ - ಸ್ವರ್ಗಲೋಕ ಮಹರ್ಲೋಕ ಮುಂತಾದ ಲೋಕಗಳಲ್ಲಿ, ಮತ್ತವರನ್ನಿಟ್ಟು - ಭಕ್ತರನ್ನು ಅಲ್ಲಿ ಇಟ್ಟು, ಆನಂದಪಡಿಸುವನು - ಸಂತೋಷಪಡುವಂತೆ ಮಾಡುವನು.

ಹರಿ ಕರುಣಾ ಸಮುದ್ರನು ಮತ್ತು ಭಕ್ತರಿಗೆ ಅಧೀನನೂ ಆಗಿದ್ದಾನೆ.  ತನ್ನ ಖುಷಿಯಿಂದ ಜಗತ್ತನ್ನು ಸೃಷ್ಟಿಸುವವನು ಹಾಗೂ  ಪಾಲಿಸುವವನು.  ತನ್ನ ಇಷ್ಟವುಳ್ಳ ಭಕ್ತರಿಗೆ ಮೋಕ್ಷವನ್ನು ಕೊಟ್ಟು, ಅವರನ್ನು ಆನಂದ ಪಡಿಸುವನು.  ಅತ್ಯಂತ ಬಡವನಾದ ತನ್ನ ಸ್ನೇಹಿತ ಸುಧಾಮನಿಗೆ ಐಶ್ವರ್ಯವನ್ನು ಕೊಟ್ಟು ಕರುಣಾನಿಧಿ ಎನಿಸಿಕೊಂಡ.  ಭಕ್ತ ಪುಂಡರೀಕ ಕೊಟ್ಟ ಇಟ್ಟಿಗೆಯ ಮೇಲೆ ನಿಂತು ಭಕ್ತಾಧೀನನೆನಿಸಿಕೊಂಡ.  ಪುಟ್ಟ ಧೃವ ಮತ್ತು ಪ್ರಹ್ಲಾದರಿಗೆ ಏನೇ ಕಷ್ಟ ಬಂದರೂ ಅವರನ್ನು ಕಾಪಾಡಿದ.  ಧೃವನಿಗೆ ಒಂದು ಲೋಕವನ್ನೇ ಕೊಟ್ಟು ಲೋಕಾಧಿಪತಿಯನ್ನು ಮಾಡಿದ.  ಭಕ್ತ ಪ್ರಹ್ಲಾದನಿಗಾಗಿ ಒಂದು ಅವತಾರವನ್ನೇ ಎತ್ತಿದ.  ಹೀಗೆ ಇಚ್ಛಾಮಾತ್ರ ಲೀಲೆಯಿಂದ ಈ ಲೋಕವನ್ನು ಸೃಷ್ಟಿಸಿ, ಪಾಲಿಸಿ, ಲಯಗೊಳಿಸಿ, ವೈಕುಂಠವೇ ಮೊದಲಾದ ಮುಕ್ತ ಲೋಕಗಳಲ್ಲಿ ತನ್ನ ಭಕ್ತರನ್ನಿಟ್ಟು ಆನಂದಪಡಿಸುತ್ತಾನೆ.

ಭಗವಂತನ ಲೀಲೆಗಳಿಂದ ಆನಂದವಲ್ಲ, ಅವನು ಆನಂದದಿಂದಲೇ ಲೀಲೆಯಾಡುವನು.  ತನ್ನ ಒಂದು ಇಚ್ಛೆಯಿಂದಲೇ ಬ್ರಹ್ಮಾಂಡದ ಸೃಷ್ಟಿಯನ್ನು ಮಾಡುವಂತಹ ಪರಮಪುರುಷನಾದ ಶ್ರೀಹರಿ ಅದೆಷ್ಟು ಕರುಣಾಮಯನೆಂದರೆ, ನಿಜವಾದ ಭಕ್ತರಿಗೆ ತಾನೇ ಅಧೀನನಾಗಿ ಬಿಡುವಂತಹವನು.  ಕರುಣೆಗೆ ಗುರುತೇ ಭಕ್ತರಿಗಧೀನನಾಗುವುದು.  ಆನಂದದಿಂದ ಲೀಲೆಯಾಡುವಂತಹ ಸರ್ವಶಕ್ತನಾದ ಶ್ರೀಹರಿ ಭಕ್ತರ ನಿಷ್ಕಲ್ಮಷ ಪ್ರೇಮಕ್ಕೆ, ಭಕ್ತಿಗೆ ತನ್ನನ್ನೇ ಕೊಟ್ಟು, ಕಟ್ಟುಹಾಕಿಸಿಕೊಳ್ಳುವಂತಹವನು.  ಇಂತಹ ಕರುಣಾಮಯನ ಕರುಣೆ ಜೀವಿಗೆ ಸಿಗಬೇಕಾದರೆ, ಜೀವಿ ನಿಜವಾದ ಭಕ್ತಿಯಿಂದ ಪರಿಪೂರ್ಣವಾಗಿ ತನ್ನನ್ನೇ ಅವನಿಗೆ ಅರ್ಪಿಸಿಕೊಳ್ಳಬೇಕು.  ನಿಜವಾದ ಭಕ್ತನು ಯಾರು ಮತ್ತು ನಿಜವಾದ ಭಕ್ತಿಯೆಂದರೆ ಏನೆಂಬುದನ್ನು ಮೊದಲು ಅರಿಯಬೇಕು.  ಭಕ್ತರಲ್ಲಿಯೂ ವಿವಿಧ ಭಾವಗಳಿವೆ.  ಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆಂದು ಬಯಸುವ ಭಕ್ತನನ್ನು ’ಜಿಜ್ಞಾಸು’ (ಜ್ಞಾತುಂ ಇಚ್ಛಾ ಜಿಜ್ಞಾಸಾ) ಎನ್ನುತ್ತಾರೆ.   ವಾಸನೆಗಳನ್ನೂ, ವಿಷಯಗಳನ್ನೂ ಬಯಸುವ ಭಕ್ತನನ್ನು ’ಅರ್ಥಾರ್ಥಿ’ ಎನ್ನುತ್ತಾರೆ.  ಸದಾ ಸರ್ವದಾ ಭಗವಂತನನ್ನೇ ಬಯಸುವಂತಹ ಭಕ್ತನನ್ನು ’ಜ್ಞಾನೀಚ’ ಎನ್ನುತ್ತಾರೆ ಮತ್ತು ಇದೇ ನಿಜವಾದ ಭಕ್ತಿ ಹಾಗೂ ಇದನ್ನು ಬಯಸುವವನೇ ನಿಜವಾದ ಭಕ್ತನೂ ಆಗಿರುತ್ತಾನೆ.  ನಿರಂತರ ಸ್ಮರಿಸಬೇಕೆಂದಾಗ, ಭಗವಂತನಿಗೆ ಇದೇ ನಾಮ ಅದೇ ನಾಮವೆಂಬ ಯಾವುದೇ ನಿಯಮವಿಲ್ಲ.  ಅವನು ಪ್ರತಿ ಅಕ್ಷರ ಹಾಗೂ ಪದಗಳ ಪ್ರತಿಪಾದ್ಯನು.  ಯಾವುದೇ ಪದವನ್ನು ಉಪಯೋಗಿಸಿದರೂ, ಯಾವುದೇ ನಾಮವಾದರೂ , ಶುದ್ಧ ಭಕ್ತಿಯಿಂದ, ನುಡಿದಾಗ ಅದು ಭಗವಂತನ ನಾಮವೇ ಆಗುತ್ತದೆ.  ನಾವು ಆಡುವ ಪ್ರತಿ ಶಬ್ದವೂ ಭಗವಂತನಿಗೇ ಸಮರ್ಪಣೆಯೆಂಬ ಒಂದು ಅನುಸಂಧಾನವನ್ನು ದಿನವೂ ಬೆಳಿಗ್ಗೆ ಎದ್ದ ತಕ್ಷಣ ಮಾಡಿಕೊಂಡರೆ, ದಿನಪೂರ್ತಿಯೂ ಆಡುವ ಪ್ರತೀ ಮಾತೂ ಅವನಿಗೇ ಸಮರ್ಪಿತವಾಗುತ್ತದೆ.  ಹೀಗೆ ಮಾಡಿದಾಗ ತತ್ತ್ವಾಭಿಮಾನಿ ದೇವತೆಗಳು ಕೂಡ ನುಡಿಯುವ ಪ್ರತೀ ಶಬ್ದವೂ ಭಗವಂತನಿಗೆ ಪ್ರೀತಿಯಾಗುವಂತೆಯೇ ನುಡಿಸುತ್ತಾರೆ.  ಭಗವಂತನಿಗೆ ತನ್ನದೇ ಎಂಬ ಯಾವ ಕರ್ತವ್ಯವೂ ಯಾವ ಲೋಕದಲ್ಲಿಯೂ ಇಲ್ಲ.  ಅವನು ಕರುಣಾಸಾಗರ ಹಾಗೂ ಭಕ್ತಪರಾಧೀನನಾದ್ದರಿಂದಲೇ, ಜೀವಿಗೋಸ್ಕರವಾಗಿಯೇ, ತನ್ನದೇ ಕರ್ತವ್ಯವೋ ಎಂಬಂತೆ ತಾನು ಮಾಡಿ, ನಮ್ಮಿಂದ ಮಾಡಿಸಿ, ನಮ್ಮನ್ನು ಕಾಪಾಡುತ್ತಾನೆ.  


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು :

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ || -  ಮೂರೂ ಲೋಕಗಳಲ್ಲಿಯೂ ನನಗೆ ಗಳಿಸಲಾಗದಿರುವ ಯಾವುದೇ ವಸ್ತುವೂ ಇಲ್ಲ ಮತ್ತು ಇದ್ದರೂ ನನಗೆ ಅದರ ಅವಶ್ಯಕತೆ ಇಲ್ಲ.  ನನಗಾಗಿ ಯಾವ ಕರ್ತವ್ಯವೂ ಉಳಿದಿಲ್ಲವಾದರೂ ಕೂಡ ನಾನು ಕರ್ಮಗಳನ್ನು ತ್ಯಾಗ ಮಾಡುವುದಿಲ್ಲ.  ನಾನೇ ಸೃಷ್ಟಿಸಿರುವ ಈ ಲೋಕದ ಜೀವಿಗಳಿಗಾಗಿ, ಅವರ ಉದ್ಧಾರಕ್ಕಾಗಿ, ಅವರ ಮೇಲೆ ದಯೆಗೈದು ನಾನು ಕರ್ಮಗಳಲ್ಲಿ ತೊಡಗಿದ್ದೇನೆ ಎಂದು ಅರ್ಜುನನಿಗೆ ತಿಳಿಸಿದ್ದಾನೆ.  

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದಿತಃ |

ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ || - ನಾನು ಎಂದಾದರೂ ಎಚ್ಚರವಾಗಿ ಕರ್ಮಗಳನ್ನು  ಮಾಡದಿದ್ದರೆ ದೊಡ್ಡ ಹಾನಿಯುಂಟಾಗುವುದು.  ಏಕೆಂದರೆ ಎಲ್ಲಾ ಜೀವಿಗಳೂ ಪ್ರತಿಯೊಂದು ರೀತಿಯಲ್ಲೂ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ ಎಂದಿದ್ದಾನೆ.
ಭಗವಂತ ತಾನೇನೂ ಮಾಡಬೇಕಿಲ್ಲವಾದರೂ, ಅವನು ಮಾಡದಿದ್ದರೆ ಅಸ್ವತಂತ್ರರಾದ ಜೀವಿಗಳೂ ಏನೂ ಮಾಡಲಾರರು.   ಜೀವಿಗಳು ತಮಗೆ ಬೇಕಿದ್ದರೂ ಕೂಡ ತಾವೇ ಜನಿಸಲಾರರು,  ಸಾಧನೆ ಮಾಡಲಾರರು.  ಮುಕ್ತಿ, ಮೋಕ್ಷಗಳನ್ನು ಪಡೆಯಲಾರರು.  ಆದ್ದರಿಂದ ಕರುಣಾಮಯಿಯಾದ ಭಗವಂತ ತಾನೇ ಹುಟ್ಟಿಸಿ, ರಕ್ಷಿಸಿ, ಸಾಧನೆ ಮಾಡಿಸಿ, ಮೋಕ್ಷಾದಿ ಫಲಗಳನ್ನು ಕೊಟ್ಟು ಸಂತೋಷಪಡಿಸುತ್ತಾನೆ.   ಇಷ್ಟೆಲ್ಲಾ ಮಾಡುವ ಭಗವಂತನು ತಾನು ಮಾಡಿದ ಕೆಲಸಕ್ಕೆ ಪ್ರತಿಫಲವನ್ನೇನೂ ಬಯಸುವುದಿಲ್ಲ.

ಅನುಸಂಧಾನ ಪೂರ್ವಕವಾಗಿ ಮಾಡುವ ಪ್ರತೀ ಕರ್ಮವೂ ಭಗವಂತನಿಗೆ ಸಮರ್ಪಣೆಯಾಗುತ್ತದೆ.  ಸಮರ್ಪಣೆಯಾದಾಗ, ಪಾಪವೂ ಪಾಪವಾಗುವುದಿಲ್ಲ, ಪುಣ್ಯವೇ ಆಗುತ್ತದೆ.  ಪಾಪವೆಂಬಂತೆ ತೋರಿಸಿ, ಜೀವಿಯನ್ನು ಎಚ್ಚರಿಸಿ ಮತ್ತೆ ಪಾಪ ಮಾಡದಂತೆ, ಪ್ರೇರೇಪಿಸುತ್ತಾನೆ ಭಗವಂತ.  ಆದ್ದರಿಂದಲೇ ಅವನು ಕರುಣಾಸಮುದ್ರನು. ಭಕ್ತಾಧೀನನಾದ ಭಗವ೦ತನು ತನ್ನ ಕರುಣೆಯ ಅಧೀನತ್ವವನ್ನು ಯಾವಾಗ ತೋರಿಸುವನು ಎ೦ದರೆ ಜೀವಿಯು ಅನುಸ೦ಧಾನಪೂರ್ವಕವಾಗಿ ಕರ್ಮಗಳನ್ನು ಮಾಡಿದಲ್ಲಿ, ತನ್ನ ಭಕ್ತರು ಏನು ಪಾಪವನ್ನು ಮಾಡಿದರೂ, ತಜ್ಜನಿತವಾದ ಪಾಪ ಫಲಗಳನ್ನು ದೈತ್ಯರಿಗೆ ವಿಭಾಗ ಮಾಡಿಕೊಟ್ಟು, ದೈತ್ಯರು ಮಾಡಿದ ಪುಣ್ಯಕರ್ಮಗಳನ್ನು ತನ್ನ ಭಕ್ತರಿಗೆ ಕೊಡುತ್ತಾನೆ. 


ಏನು ಕರುಣಾನಿಧಿಯೊ - ಭಾಗವತದಲ್ಲಿ ತಿಳಿಸಿರುವಂತೆ ಬ್ರಹ್ಮಾಂಡ ಸೃಷ್ಟಿಯಾಗುವ ಮೊದಲೇ ೨೪ ತತ್ತ್ವಗಳ ಸೃಷ್ಟಿಯಾಗಿತ್ತು.  ಆದರೆ ತತ್ತ್ವಾಭಿಮಾನಿ ದೇವತೆಗಳು ಏನೂ ಮಾಡಲಾಗದೇ, ಭಗವಂತನಿಗೆ ಶರಣುಬಂದಾಗ, ಶ್ರೀಹರಿ ತಾನೇ ಎಲ್ಲ ದೇವತೆಗಳೊಳಗೂ ನಿಂತು, ಮಾಡಿ, ತತ್ತ್ವಾಭಿಮಾನಿ ದೇವತೆಗಳಿಂದ ಮಾಡಿಸಿ, ಬ್ರಹ್ಮಾಂಡ ಸೃಷ್ಟಿಸಿದ.  ಪ್ರತಿಯೊಬ್ಬರಿಗೂ ಅವರರವ ಯೋಗ್ಯತೆಗನುಸಾರವಾಗಿ ಕರ್ಮ ಮಾಡಿಸಿ, ತಕ್ಕ ಫಲವನ್ನು ಕೊಡುವವನು.  ಸಾಧನೆಯಿಲ್ಲದೇ ಯಾವ ಫಲವೂ ಸಿಕ್ಕುವುದಿಲ್ಲ.  ಈ ಜನ್ಮದಲ್ಲಿ ಕೊಟ್ಟಿರುವ ಭೌತಿಕ ಶರೀರವನ್ನುಪಯೋಗಿಸಿಕೊಂಡು ಭಗವಂತನಿಗೆ ಶರಣಾಗಿ ಪ್ರಾರ್ಥಿಸಿಕೊಂಡಾಗ ಮಾತ್ರ ನಮಗೆ ಮುಂದಿನ ಜನ್ಮಗಳಲ್ಲೂ ಸಾಧನೆಗೆ ಅನುಕೂಲವಾಗುವಂತಹ ಉತ್ತಮ ಶರೀರ ಕೊಟ್ಟು, ಹಣ, ಸ್ಥೈರ್ಯ, ಅನುಕೂಲಕರವಾಗಿರುವ ವಾತಾವರಣ ಕೊಟ್ಟು ಸಾಧನೆ ಮಾಡಿಸಿ, ಸಾಧನೆಯ ಫಲವಾಗಿ  ಸ್ವರ್ಗ ಹಾಗೂ ಮೋಕ್ಷಗಳನ್ನು ಕರುಣಿಸುತ್ತಾನೆ.


ಏನು ಭಕ್ತಾಧೀನನೋ -  ಭಗವಂತ ಭಕ್ತರ ಅಧೀನನು.  ಜೀವಿಗಳಿಂದ ಪ್ರಾರಂಭಿಸಿ, ದೇವತೆಗಳವರೆಗೂ ಎಲ್ಲರೂ ಅವನ ಭಕ್ತರೇ.  ಎಲ್ಲರಲ್ಲೂ ಅವನೇ ಇದ್ದು ಸಾಧನೆ ಮಾಡಿಸುವನು.  ಜೀವಿಗಳನ್ನು ಹುಟ್ಟಿಸಿ, ಅವರೊಳಗೆ ಭಗವತ್ತತ್ತ್ವಗಳ ಪ್ರೇರಣೆ ಕೊಟ್ಟು, ಸಾಧನೆ ಮಾಡಿಸುವುದು ತತ್ತ್ವಾಭಿಮಾನಿ ದೇವತೆಗಳ ಕೆಲಸ, ಕರ್ತವ್ಯ.  ಇದು ತತ್ತ್ವಾಭಿಮಾನಿ ದೇವತೆಗಳಿಗೆ ಮೋಕ್ಷ ಸಾಧನೆ.  ಆದರೆ ತತ್ತ್ವಾಭಿಮಾನಿ ದೇವತೆಗಳೂ ಕೂಡ ಅಸ್ವತಂತ್ರರೇ.  ಅವರು ಭಗವಂತನಲ್ಲಿ ತಮ್ಮ ಅಶಕ್ತತೆಯನ್ನು ನಿವೇದಿಸಿಕೊಂಡರು.  ಭಾಗವತ ತೃತೀಯ ಸ್ಕಂದದಲ್ಲಿ ತಿಳಿಸಿರುವಂತೆ ದೇವತೆಗಳು ಭಗವಂತನನ್ನು "ಪ್ರಪಂಚದ ಸೃಷ್ಟಿಗಾಗಿ ನೀನು ನಮ್ಮನ್ನು ತ್ರಿಗುಣಮಯವನ್ನಾಗಿ ಸೃಷ್ಟಿಸಿದರೂ, ನಮ್ಮಲ್ಲಿ ಪರಸ್ಪರ ಸಾಮ್ಯವಿಲ್ಲ.  ಎಲ್ಲರ ಸ್ವಭಾವವೂ ಬೇರೆ ಬೇರೆಯೇ ಆಗಿದೆ.  ಆದ್ದರಿಂದ ನಾವುಗಳೆಲ್ಲರೂ ಒಟ್ಟಾಗಿ ಸೇರಿ ನಿನ್ನ ಕ್ರೀಡೆಗಾಗಿ ಲೋಕವನ್ನು ಸೃಷ್ಟಿಮಾಡಿ, ನಿನಗೆ ಅರ್ಪಿಸಲು ಅಸಮರ್ಥರಾಗಿದ್ದೇವೆ" ಎಂದು ಪ್ರಾರ್ಥಿಸಿಕೊಂಡರು.  ಭಗವಂತ ಪ್ರತೀ ತತ್ತ್ವಾಭಿಮಾನಿ ದೇವತೆಯೊಳಗೂ ತಾನು ಪ್ರವೇಶಿಸಿ, ಅವರಲ್ಲಿದ್ದ ಸುಪ್ತ ಶಕ್ತಿಯನ್ನು ಉದ್ರೇಕಿಸಿ, ಪ್ರೇರಣೆ ಕೊಟ್ಟು, ಅವರೆಲ್ಲರ ಮೂಲಕವೇ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿಸಿದ.  ಹೀಗೆ ತನ್ನ ಭಕ್ತರಾದ ದೇವತೆಗಳ ಭಕ್ತಿಗೆ ಮೆಚ್ಚಿ ಅವರೊಳಗಿದ್ದು ತಾನು ಮಾಡಿ, ಅವರಿಂದ ಸಾಧನೆ ಮಾಡಿಸುವನಾದ್ದರಿಂದಲೇ ಅವನು ಭಕ್ತಪರಾಧೀನ.   ಭಗವಂತ ತಾನೇ ಎಲ್ಲವನ್ನೂ ಮಾಡಿದರೂ ಕೂಡ ಅದರಿಂದ ಬರುವ ಪ್ರತಿಫಲಗಳನ್ನು ಆಯಾ ದೇವತೆಗಳಿಗೇ ಅವರ ಸಾಧನೆಯ ಲೆಕ್ಕಕ್ಕೆ ಸೇರಿಸಿಬಿಡುವ ಕರುಣಾಸಮುದ್ರನಾಗಿದ್ದಾನೆ.    ಬ್ರಹ್ಮಾಂಡದ ಪಾಲನೆಯಲ್ಲಿಯೂ ದೇವತೆಗಳು ಅಶಕ್ತರೆಂಬುದು ಭಾಗವತದಲ್ಲಿ ಬರುವ "ಭಕ್ತ ಅಂಬರೀಷ ರಾಜ"ನ ಕಥೆಯಿಂದ ತಿಳಿಯಬಹುದು.  ರಾಜ ಅಂಬರೀಷನಲ್ಲಿ ಅಪರಾಧ ಮಾಡಿದ ದುರ್ವಾಸರನ್ನು ವಿಷ್ಣುಚಕ್ರ ಬೆನ್ನಟ್ಟಿಕೊಂಡು ಬಂದಾಗ, ದುರ್ವಾಸರು ಎಲ್ಲಾ ಲೋಕಗಳಲ್ಲಿಯೂ ಸಂಚರಿಸಿ, ದೇವತೆಗಳನ್ನು ಪ್ರಾರ್ಥಿಸಿದರು.  ಆದರೆ ಯಾರಿಂದಲೂ ವಿಷ್ಣುಚಕ್ರ ತಡೆಯುವುದಾಗಲಿಲ್ಲ.  ಕೊನೆಗೆ ಶ್ರೀಹರಿಯ ಪಾದಗಳಿಗೆ ದುರ್ವಾಸರು ಶರಣಾಗತರಾದಾಗ, ಭಗವಂತ ವಿಷ್ಣುಚಕ್ರ ತಡೆಯುವುದು, ತನ್ನಿಂದಲೂ ಸಾಧ್ಯವಿಲ್ಲವೆಂದು ತಿಳಿಸಿದನು.  ದುರ್ವಾಸರು ಅಪರಾಧ ಮಾಡಿದ್ದ ಭಗವಂತನ ಪರಮ ಭಕ್ತನಾದ ರಾಜ ಅಂಬರೀಷನು ಮಾತ್ರವೇ ವಿಷ್ಣುಚಕ್ರವನ್ನು ತಡೆಯಬಲ್ಲವನೆಂದು ದುರ್ವಾಸರಿಗೆ ತಿಳಿಸಿ, ತನ್ನ ಭಕ್ತಾಧೀನ ಗುಣವನ್ನು ಪ್ರಕಾಶಿಸಿದ.  ಭಗವಂತ ತಾನೇ "ಅಹಂ ಭಕ್ತಪರಾಧೀನೋ ಹ್ಯಸ್ವತನ್ತ್ರ ಇವ ದ್ವಿಜ | ಸಾಧುಭಿರ್ಗ್ರಸ್ತ ಹೃದಯೋ ಭಕ್ತೈರ್ಭಕ್ತ ಜನಪ್ರಿಯಃ || - ನಾನು ಸರ್ವಥಾ ಭಕ್ತಜನರಿಗೆ ಅಧೀನನು, ನನಗೆ ಯಾವ ಸ್ವಾತಂತ್ರವೂ ಇಲ್ಲ, ನನ್ನ ಭಕ್ತರನ್ನು ಬಹಳವಾಗಿ ಪ್ರೀತಿಸುತ್ತೇನೆ ಎಂದು  ತಿಳಿಸಿದ್ದಾನೆ.


ಏನು ಈತನ ಲೀಲೆ - ಭಗವಂತ ಸುಖವಾಗಿ ತಾನಿರುವ ವೈಕುಂಠದಿಂದಲೇ ತನ್ನ ಇಚ್ಛೆಮಾತ್ರದಿಂದಲೇ ಸಕಲ ಸೃಷ್ಟಿಯನ್ನೂ ಮಾಡಬಹುದು.  ಆದರೆ ಹಾಗೆ ಮಾಡದೆ ತನ್ನ ಭಕ್ತರಾದ ಬ್ರಹ್ಮಾದಿ ದೇವತೆಗಳ ಮೂಲಕ ಸೃಷ್ಟಿಯಾದಿ ಕೆಲಸಗಳನ್ನು ಮಾಡುವನು.  ತಾನೇ ಬೇರೆ ಬೇರೆ ರೂಪಗಳಲ್ಲಿ ಎಲ್ಲಾ ದೇವತೆಗಳೊಳಗೂ ಪ್ರವೇಶಿಸಿ ಎಲ್ಲವನ್ನೂ ಮಾಡಿ ಮಾಡಿಸುತ್ತಾನೆ.  ತನಗಾಗಿ ತನ್ನ ಲೀಲೆಗಾಗಿ ಭಗವಂತ ಸೃಷ್ಟಿಯ ಕಾರ್ಯ ಮಾಡುವುದಿಲ್ಲ.  ಅವನು ಪೂರ್ಣಾನಂದನಾಗಿರುವುದರಿಂದ ಸೃಷ್ಟಿಯನ್ನು ಲೀಲೆಯಿಂದ ಮಾಡಿಬಿಡುತ್ತಾನಷ್ಟೆ. 

ಭಗವದ್ಗೀತೆಯಲ್ಲಿ ಭಗವಂತ
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ | -   ಎನ್ನುತ್ತಾ ಸರ್ವ ಜಗತ್ತಿನ ಉತ್ಪತ್ತಿಗೆ ನಾನೇ ಕಾರಣನಾಗಿದ್ದೇನೆ ಮತ್ತು ನನ್ನಿಂದಲೇ ಇಡೀ ಜಗತ್ತು ವರ್ತಿಸುತ್ತಾ ಇದೆ ಎಂದೂ
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ |
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ || - ಕಲ್ಪದ ಕೊನೆಯಲ್ಲಿ ಸರ್ವ ಜೀವಕೋಟಿಯು ನನ್ನ ಪ್ರಕೃತಿಯಲ್ಲಿ ಲೀನವಾಗುತ್ತವೆ ಹಾಗೂ ಕಲ್ಪದ ಪ್ರಾರಂಭದಲ್ಲಿ ಪುನಃ ಅವುಗಳನ್ನು ನಾನು ಸೃಷ್ಟಿಸುತ್ತೇನೆ ಎಂದೂ ತಿಳಿಸಿದ್ದಾನೆ. 
ಸಕಲವೂ ಅವನದ್ದೇ, ಎಲ್ಲಾ ಚರಾ ಚರಗಳಲ್ಲೂ ಭಗವಂತನದ್ದೇ ಅನೇಕಾನೇಕ ವಿಭೂತಿರೂಪಗಳಿವೆ ಎಂಬುದನ್ನು ತಾನೇ ತಿಳಿಸಿರುವಾಗ ಸೃಷ್ಟಿಯೆಂಬುದು ಅವನಿಗೆ ಅನಾಯಾಸ ಕಾರ್ಯ.  ಸದಾನಂದನಾಗಿ ಅವನು ನಡೆಸುವ ಲೀಲೆಯೇ ಸೃಷ್ಟಿ.  ಲೀಲೆಗಾಗಿ ಸೃಷ್ಟಿಯಲ್ಲ, ಸೃಷ್ಟಿಯೇ ಲೀಲೆ.

ಇಚ್ಛಾಮಾತ್ರದಲಿ ಜಗವ ತಾನೆ ಸೃಜಿಸುವ - ಭಗವಂತ ಏತಕ್ಕಾಗಿ ಸೃಷ್ಟಿಯನ್ನು ಮಾಡಬೇಕು ಎಂದು ವಿಚಾರ ಮಾಡಿದಾಗ,  ಜಗತ್ತನ್ನು ಸೃಜಿಸುವುದರಿಂದ ಭಗವಂತನಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.  ಸೃಷ್ಟಿ ಕಾರ್ಯ ಎಂಬ ಕ್ರೀಡೆಯಿಂದ ಅವನಿಗೆ ಯಾವ ಆನಂದವೂ ಉಂಟಾಗುವುದಿಲ್ಲ,  ಏಕೆಂದರೆ ಅವನು ಸದಾನಂದನೂ, ಪೂರ್ಣಾನಂದನೂ ಆಗಿರುವನು.  ಹಾಗಿರುವಾಗ ಈ ಸೃಷ್ಟಿಯ ಕಾರ್ಯವನ್ನು ಭಗವಂತ ತನ್ನ ಆನಂದಕ್ಕಾಗಲೀ ಅಥವಾ ಉಪಯೋಗಕ್ಕಾಗಲೀ ಮಾಡುವುದಿಲ್ಲವೆಂಬುದು ತಿಳಿಯುತ್ತದೆ. ಭಗವಂತನು ಜೀವಿಗಳ ಮೇಲಿನ ಕರುಣೆಯಿಂದ ಮತ್ತು ಜೀವಿಗಳ ಉದ್ಧಾರಕ್ಕಾಗಿಯೇ ಜಗವನ್ನು ಸೃಷ್ಟಿಸಿ, ಸಾಧನೆ ಮಾಡಲು ಅನುಕೂಲ ಮಾಡಿಕೊಡುತ್ತಾನೆ.  ಕರುಣಾಸಮುದ್ರನಾದ ಭಗವಂತ ಭಕ್ತಾಪರಾಧೀನನಾಗಿ, ಭಕ್ತರಿಗೋಸ್ಕರ ಜಗತ್ತನ್ನು ಸೃಷ್ಟಿಸಿ, ಅವರೊಳಗೆ ತಾನಿದ್ದು, ಸಾಧನೆ ಮಾಡಿಸುತ್ತಾನೆ.  ಸಾಧನೆಗೆ ಪ್ರತಿಫಲವಾಗಿ ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ಸದಾ ಆನಂದದಿಂದಿರುವಂತೆ ರಕ್ಷಿಸುತ್ತಾನೆ.  ಭಗವಂತನಿಗೆ ಸೃಷ್ಟಿ ಕಾರ್ಯ ಮಾಡುವುದರಿಂದ ಯಾವುದೇ ಆಯಾಸವೂ ಆಗುವುದಿಲ್ಲ.  ತನ್ನ ಸ್ವಾಭಾವಿಕ ಗುಣವಾದ ಆನಂದದಿಂದಲೇ ಅನಾಯಾಸವಾಗಿಯೇ ಸೃಜಿಸುತ್ತಾನೆ.  ಸಾಧನೆ ಮಾಡಿದ ಭಕ್ತರನ್ನು ನಿರ್ವಾಣ ಮೊದಲಾದ ಅಖಿಳ ಲೋಕಗಳಲ್ಲಿಟ್ಟು ಆನಂದಪಡಿಸುತ್ತಾನೆ.  ನಿರ್ವಾಣವೆಂದರೆ ಶೂನ್ಯ ಅಥವಾ ಏನೂ ಇಲ್ಲದ ಸ್ಥಿತಿ ಎಂದರ್ಥ.  ನಿರ್ವಾಣ ಲೋಕವೆಂದರೆ ’ಲಿಂಗಶರೀರ’ ಭಂಗವಾದ ನಂತರ ಸಾಧಕನು ತಲುಪುವ ಸ್ಥಳ, ಅಂದರೆ ಮೋಕ್ಷವೆಂದರ್ಥವಾಗುತ್ತದೆ.   ಅ೦ತ:ಕರಣವೆ೦ಬ ಸಮುದ್ರ ಉಳ್ಳವ ಎ೦ದರೆ ಅಪಾರ ಕಾರುಣ್ಯವುಳ್ಳವನಾದ ಭಗವ೦ತ ಎ೦ದೂ ಭಕ್ತರವಶನು. ತಾನೇ ಸೃಜಿಸಿರುವ, ಸ೦ರಕ್ಷಣೆ ಮಾಡುವ, ಜಗತ್ತಿನಲ್ಲಿ ಮಾತ್ರವಲ್ಲದೆ, ಪ್ರಳಯಕಾಲದಲ್ಲಿ, ಲಿ೦ಗಭ೦ಗ ಉ೦ಟಾದ ಜೀವರನ್ನು ಶ್ವೇತದ್ವೀಪ, ಅನ೦ತಾಸನ, ವೈಕು೦ಠಾದಿ ಲೋಕಗಳಲ್ಲಿಯೂ ಆವಾಸರನ್ನಾಗಿ ಮಾಡಿ ಸ್ವರೂಪಾನ೦ದವನ್ನು ಪಡಿಸುವವನು ಎ೦ದು ಜಗನ್ನಾಥ ದಾಸರು ತಿಳಿಸುತ್ತಾರೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ :


ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣ

ತಾ ನಮ್ಮನಗಲಿ ಸೈರಿ-ಸ | ಸೈರಿಸದ ಕರುಣಿಯ
ನಾನೆಂತು ತುತಿಸಿ ಹಿಗ್ಗ-ಲಿ || - ಶ್ರೀಮಹಾಲಕ್ಷ್ಮೀ ರಮಣನೂ, ಅಪಾರ ಕರುಣಾಸಮುದ್ರನೂ ಆದ ಭಗವಂತ ಭಕ್ತರನ್ನು ಅಗಲಿ ಇರುವುದಿಲ್ಲ.  ಅವನು ಅಗಲಿಕೆಯನ್ನು ಸಹಿಸುವುದಿಲ್ಲ.  ಅಂತಹ ಸರ್ವ ಶ್ರೇಷ್ಟನಾದ ಭಗವಂತನನ್ನು ಎಷ್ಟು ವಿಧವಾಗಿ ಸ್ತುತಿಸಿದರೂ ಸಾಕಾಗುವುದಿಲ್ಲವೆಂದು ಭಗವಂತನ ಕರುಣೆಯ ಬಗ್ಗೆ ತಿಳಿಸಿದ್ದಾರೆ.

ಸರ್ವಸ್ವತಂತ್ರ ನೀನೋರ್ವನಲ್ಲದೆ ಮ

ತ್ತೋರ್ವನಿನ್ನುಂಟೇ ಜಗದೊಳು | ಜಗದೊಳಗಜಾದಿಗಳು
ದರ್ವಿಯಂದದಲಿ ಚರಿಸೋರು || - ಭಗವಂತನೊಬ್ಬನೇ ಸರ್ವ ಸ್ವತಂತ್ರನು, ಯಾರ ಅಧೀನನೂ ಅಲ್ಲದವನು.  ಎಲ್ಲವನ್ನೂ ನಿಯಂತ್ರಿಸುವವನು.  ಬ್ರಹ್ಮಾದಿ ದೇವತೆಗಳೂ ಮತ್ತು ಸಕಲ ಜೀವಿಗಳೂ ಜಡ ಉಪಕರಣವಾದ ’ಸೌಟು’ ಇದ್ದಂತೆ.  ಅಡುಗೆ ಬಡಿಸಲು ಉಪಯೋಗಿಸಿದರೆ ಮಾತ್ರ ಉಪಯೋಗವಾಗುವುದು ಸೌಟು.  ಹಾಗೇ ಬ್ರಹ್ಮಾದಿ ದೇವತೆಗಳೊಳಗೆ ನೀನಿದ್ದು ಸರ್ವ ಕಾರ್ಯಗಳನ್ನೂ ಮಾಡಿಸುವೆ ಎಂದಿದ್ದಾರೆ. 

ಏನು ಮಾಡುವ ಕರ್ಮ ನೀನೆ ಮಾಡಿಪೆ ಎಂಬ

ಜ್ಞಾನವೇ ಎನಗೆ ಜಿತವಾಗಿ | ಜಿತವಾಗಿ ಇರಲಿ ಮ-
ತ್ತೇನು ನಾನೊಲ್ಲೆ ನಿನ್ನಾಣೆ || - ಅಸ್ವತಂತ್ರನಾದ ನಾನು ಏನನ್ನೂ ಮಾಡಲಾರೆ.  ನಾನು ಮಾಡುವ ಎಲ್ಲಾ ಕಾರ್ಯಗಳನ್ನೂ ನನ್ನೊಳಗೆ  ಭಗವಂತ ನೀನು ನಿಂತು ಮಾಡಿ ಮಾಡಿಸುವೆ ಎಂಬ ಅರಿವು, ಜ್ಞಾನ ಮಾತ್ರ, ಯಾವ ಸಂಶಯವೂ ಇಲ್ಲದೆ ನನ್ನಲ್ಲಿ ಸ್ಥಿರವಾಗಿ ನಿಲ್ಲಲಿ.  ನಾನು ಸತ್ಯವಾಗಿಯೂ ಇನ್ನೇನನ್ನೂ ಬಯಸುವುದಿಲ್ಲ ಎಂದಿದ್ದಾರೆ.

ಗುಣಕಾಲ ಕರ್ಮಗಳ ಮನೆಮಾಡಿ ಜೀವರಿಗೆ

ಉಣಿಸುವಿ ನೀನೇ ಸುಖದುಃಖ | ಸುಖದುಃಖ ಮಿಶ್ರಫಲ
ಉಣದೆ ಸರ್ವತ್ರ ಬೆಳಗುವೆ || -  ಸತ್ವ ರಜಸ್ತಮೋ ಗುಣಗಳ, ಕಾಲ ಮತ್ತು ಕರ್ಮಗಳೆಂಬ ಮನೆಯನ್ನು ವಾಸಸ್ಥಾನವನ್ನಾಗಿ ಮಾಡಿ, ಸಂಸಾರಿಗಳಾದ ಜೀವಿಗಳನ್ನು ಬಂಧನಕ್ಕೆ ಒಳಪಡಿಸುತ್ತಾನೆ.  ಈ ಮನೆಗೆ ಭಗವಂತ ತಾನೇ ನಿಯಾಮಕನಾಗಿ ಜೀವಿಗಳಿಗೆ ಸುಖದುಃಖಗಳನ್ನು ಉಣಿಸುತ್ತಾನೆ.  ಭಗವಂತನು ತಾನು ಏನನ್ನೂ ಭೋಗಿಸದೆ ಎಲ್ಲೆಲ್ಲಿಯೂ ವಿರಾಜಮಾನನಾಗಿ ಬೆಳಗುತ್ತಾನೆ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ

ಶಶ್ವದ್ವಿಕಾಸನ ಹ್ರಾಸನ ಕ್ರಮಗಳಿಂ |
ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||
ಸ್ವಸ್ವರೂಪವನರಸುವಾಟ ಪರಚೇತನದ |
ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ || -  ಶಾಶ್ವತವಾದದ್ದು  (ಭಗವಂತ) ತನ್ನ ಆನಂದಕ್ಕೋಸ್ಕರ ವಿಕಾಸಗೊಂಡು ಪ್ರಪಂಚವಾಗಿ ಅರಳಿ, ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನ ಉದರದೊಳಗೆ ಸೇರಿಸಿಕೊಂಡು ವಿಶ್ವದಲ್ಲಿ ತನ್ನ ಪೌರುಷೋನ್ನತಿಯಿಂದ ನರ್ತನ ಮಾಡುತ್ತಿದೆ.   ತನ್ನದೇ ಶಕ್ತಿಯಾದ ಪ್ರಕೃತಿಯ ಮೂಲಕ ಲೀಲೆಗಳನ್ನು ಮಾಡುತ್ತಿದೆ.  ಈ ವಿಸ್ಮಯದ ಹಿಂದೆ ಅಡಗಿರುವ ತನ್ನ ನಿಜವಾದ ಸ್ವರೂಪವನ್ನು ಹುಡುಕಲಿಯೆಂದೇ ಆ ಪರ ಚೇತನದ (ಭಗವಂತನ) ಆಟ.  ಇದು ಪರಮಪುರುಷನ ಹೃಷ್ಯದ್ವಿಲಾಸ, ಅಂದರೆ ಆನಂದದ ವಿಲಾಸ.

ಪುರುಷಂ ಸ್ವತಂತ್ರನೋ ? ದೈವವಿಧಿ ಪರವಶನೊ? |

ಎರಡುಮನಿತಿನಿತುಳ್ಳ ತೋಳಿನಂತಿಹನೋ ? ||
ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |
ನರನಂತು ಮಿತಶಕ್ತ - ಮಂಕುತಿಮ್ಮ || - ಮನುಷ್ಯನು ಮಾಡುವ ಧರ್ಮ/ಕರ್ಮಗಳಲ್ಲಿ ಅವನು ಎಷ್ಟು ಸ್ವತಂತ್ರ ?  ದೈವವೇ ಮನುಷ್ಯನಿಂದ ಕರ್ಮಗಳನ್ನು ಮಾಡಿಸುತ್ತದೆ.  ಮನುಷ್ಯ ಅಸ್ವತಂತ್ರನು.  ಅವನ ಶಕ್ತಿ, ಪರಿಧಿಯೆಲ್ಲಾ ಭೌತಿಕ ದೇಹದವರೆಗೆ ಮಾತ್ರ.  ಮನುಷ್ಯ ತನ್ನ ಒಂದು ತೋಳನ್ನು ತನ್ನ ದೇಹದ ಕಟ್ಟಿನ ಪರಿಧಿಯಲ್ಲಿ ಮಾತ್ರ ತಿರುಗಿಸಬಹುದು, ಮಡಿಸಬಹುದು.  ಅದಕ್ಕಿಂತ ಆಚೆಗೆ ತೋಳನ್ನೇ ತೆಗೆಯುವುದಕ್ಕಾಗುವುದಿಲ್ಲ.  ತೋಳಿನ ಆಟ ದೇಹದ ಕಟ್ಟಿನ ಹಿಡಿತ ಬಿಟ್ಟು ನಡೆಯುವುದಿಲ್ಲ.  ತೋಳಿಗೆ ಭುಜದ ಕಡೆಯಿಂದ ನಿರ್ಬಂಧವಿದೆ, ಬೆರಳಿನ ಕಡೆಯಿಂದ ಸ್ವಾತಂತ್ರ್ಯವಿದೆ.  ಮನುಷ್ಯ ಆಕಾಶದಲ್ಲಿ ಎಷ್ಟು ಹಾರಾಡಿದರೂ ಭೂಮಿಯ ಆಕರ್ಷಣಾ ಶಕ್ತಿಯಿಂದ ನಿರ್ಬಂಧಿತನಾಗಿದ್ದಾನೆ.  ಆದರೆ  ಆಕಾಶಕ್ಕೆ ನೆಗೆಯುವುದಕ್ಕೂ ಮತ್ತು ಭೂಮಿಯ ಮೇಲೆ ಸಂಚರಿಸುವುದಕ್ಕೂ ಅವನು ಸ್ವತಂತ್ರನು.  ಇಷ್ಟು ಸ್ವಾತಂತ್ರ್ಯ ಕೂಡ ಭಗವಂತನ ಅಸೀಮ ಕರುಣೆಯಲ್ಲದೆ ಬೇರೇನೂ ಅಲ್ಲ.  ಇದೇ ಪರಮಪುರುಷನ ಸೀಮಾತೀತವಿಲ್ಲದ ಸ್ವಾತಂತ್ರ್ಯ ಹಾಗೂ ಮನುಷ್ಯನಿಗಿರುವ ಅಸ್ವತಂತ್ರತೆ ಅಥವಾ ನಿರ್ಬಂಧತೆ.
 ಚಿತ್ರಕೃಪೆ : ಅಂತರ್ಜಾಲ