Friday, February 28, 2014

ಕರುಣಾ ಸಂಧಿ - ೧೮ ನೇ ಪದ್ಯ

ಭುವನ ಪಾವನಚರಿತ ಪುಣ್ಯ
ಶ್ರವಣ ಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳ ಶ್ಯಾಮ   ನಿಸ್ಸೀಮ |
ಯುವತಿ ವೇಷದಿ ಹಿಂದೆ ಗೌರೀ
ಧವನ ಮೋಹಿಸಿ ಕೆಡಿಸಿ ಉಳಿಸಿದ
ಇವನ ಮಾವಯ ಗೆಲುವನಾವನು ಈ ಜಗತ್ರಯದಿ  ||೧೮||

ಪ್ರತಿಪದಾರ್ಥ : ಭುವನ ಪಾವನಚರಿತ - ೧೪ ಲೋಕಗಳನ್ನೂ ಪವಿತ್ರಗೊಳಿಸುವಂತಹ ಮಹಿಮೆಯ ಕಥೆಯನ್ನುಳ್ಳವನು, ಪುಣ್ಯ ಶ್ರವಣ ಕೀರ್ತನ - ತನ್ನ ಕಥಾ ಶ್ರವಣ ಮಾಡುವವರಿಗೂ ಶ್ರವಣ ಮಾಡುವವರಿಗೂ ಪುಣ್ಯ ಕೊಡುವವನು, ಪಾಪನಾಶನ - ಸಮಸ್ತ ಪಾಪಗಳನ್ನೂ ನಾಶ ಮಾಡುವವನು, ಕವಿಭಿರೀಡಿತ - ಕವಿ ಎಂದರೆ ಜ್ಞಾನಿಗಳು ಈ ಡಿತ ಎಂದರೆ ಸ್ತುತನಾದವನು ಎಂದರ್ಥ, ಕೈರವದಳ ಶ್ಯಾಮ - ನೈದಿಲೆ ದಳದ ನೀಲವರ್ಣದಂತೆ ವಿಶಿಷ್ಟವಾದ ಕಾಂತಿಯುಳ್ಳವನು, ನಿಸ್ಸೀಮ - ದೇಶ ಕಾಲ ಗುಣಗಳಲ್ಲಿ ಮಿತಿಯಿಲ್ಲದವನು, ಯುವತಿ ವೇಶದಿ - ಸಮುದ್ರ ಮಥನ ಸಮಯದಲ್ಲಿ ಮೋಹಿನಿ ವೇಷ ಧರಿಸಿ, ಹಿಂದೆ - ಶಿವ ಮೋಹಿನಿ ರೂಪವನ್ನು ನೋಡಬೇಕೆಂದು ಪ್ರಾರ್ಥಿಸಿದಾಗ, ಗೌರಿಧವನ - ಪಾರ್ವತಿ ಪತಿಯಾದ ಶಿವನ, ಮೋಹಿಸಿ - ಮೋಹಗೊಳಿಸಿ, ಕೆಡಿಸಿ - ಆ ಸಮಯದಲ್ಲಿ ಶಿವನಿಗೆ ಅಜ್ಞಾನ ಕೊಟ್ಟು, ಉಳಿಸಿದ - ರಕ್ಷಿಸಿದ, ಇವನ ಮಾಯವ ಗೆಲುವನಾವನು - ಭಗವಂತನಾದ ಶ್ರೀಹರಿಯ ಮಾಯೆಯನ್ನು ಯಾರಿಂದ ಗೆಲ್ಲಲು ಸಾಧ್ಯವಿದೆ, ಈ ಜಗತ್ರಯದಿ - ಮೂರು ಲೋಕಗಳಲ್ಲಿಯೂ.
 

ಚತುರ್ದಶ ಲೋಕಗಳಲ್ಲಿ ಪವಿತ್ರತರವಾದ ಚರಿತ್ರೆಗಳುಳ್ಳ ಜೀವರು ಮೋಕ್ಷ ಪಡೆಯುವುದಕ್ಕಾಗಿ ಪುಣ್ಯಕಾರ್ಯವಾದ ಸಚ್ಚಾಸ್ತ್ರಗಳ ಶ್ರವಣ ಮತ್ತು ಪಠಣ ಮಾಡುವುದರಿ೦ದ, ಇ೦ತಹ ಸುಜೀವರ ಪಾಪನಾಶನೂ ಆದ  ಭಗವ೦ತನು, ಬ್ರಹ್ಮಾದಿ ದೇವತೆಗಳಿಂದ ಸ್ತುತಿಸಲ್ಪಟ್ಟವನೂ,  ನೈದಿಲೆಯಂತೆ ನೀಲವರ್ಣದವನೂ, ವಿಶಿಷ್ಟವಾದ ಕಾಂತಿಯುಳ್ಳವನೂ ಆಗಿರುವ ಮಹಾ ನಿಸ್ಸೀಮನು. ಬ್ರಹ್ಮಜ್ಞಾನಿಗಳಿ೦ದ ಸ್ತುತ್ಯನಾದ ಅತ್ಯ೦ತ ಪರಾಕ್ರಮಶಾಲಿಯೂ ಆಗಿದ್ದಾನೆ.   ಅಮೃತ ಮಂಥನ ಕಾಲದಲ್ಲಿ ಇವನು ಧರಿಸಿದ ಮೋಹಿನಿ ವೇಷವನ್ನು ನೋಡಲಿಲ್ಲವೆಂದು ಪಾರ್ವತೀ ಪತಿಯಾದ ರುದ್ರನು ಕೇಳಿದಾಗ, ಮೋಹಿನಿ ರೂಪವನ್ನು ತಾಳಿ ನಿಂತ ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಇಂತಹವನ ಮಾಯೆಯನ್ನು ಮೂರು ಜಗದಲ್ಲಿ ಯಾರಿಗಾದರೂ ಗೆಲ್ಲಲು ಸಾಧ್ಯವೇ ?  ಮನ್ಮಥ ದಹನ ಮಾಡಿದ ಫಾಲಾಕ್ಷನದೇ ಈ ಪಾಡಾದ ಮೇಲೆ ಬೇರೆಯವರ ಪಾಡೇನು ? 

ಹಿಂದಿನ ಪದ್ಯದಲ್ಲಿ ಶ್ರೀ ಜಗನ್ನಾಥದಾಸರು ಶ್ರೀಹರಿಯು ಸಜ್ಜನ ಭಕ್ತರಿಗೆ ಕರುಣಿಸುವ ಮೋಕ್ಷಸುಖದ ವಿಷಯವನ್ನು ತಿಳಿಸಿದ್ದರು.  ಈ ಪದ್ಯದಲ್ಲಿ, ಭಕ್ತನು ಸಂಸಾರದಲ್ಲಿದ್ದರೂ, ಅವನಿಗೆ ವಿಷಯ ಸುಖಗಳನ್ನು ನೀಡಿ, ಆ ಸುಖದಲ್ಲಿಯೇ ಅವನು ಮುಳುಗದಂತೆಯೂ ಎಚ್ಚರಿಸುವ, ರಕ್ಷಿಸುವ ಭಗವಂತನ ಕಾರುಣ್ಯವನ್ನು ವಿವರಿಸುತ್ತಾರೆ.  ಭಗವಂತನ ಕಾರುಣ್ಯಕ್ಕೆ ಮಿತಿಯಿಲ್ಲವೆಂಬುದಕ್ಕೆ,  ಅತ್ಯದ್ಭುತವಾದ, ಅತಿಶಯ ಸುಂದರವಾದ ಮೋಹಿನೀ ರೂಪವನ್ನು ನೋಡಿ ಮೋಹಿಸಿದ ರುದ್ರದೇವರ ದೃಷ್ಣಾಂತವನ್ನು ತಿಳಿಸಿದ್ದಾರೆ.  ಭಗವಂತನ ಗುಣಗಳನ್ನು ಅನೇಕ ವಿಶೇಷ ಪದಪುಂಜಗಳಿಂದ ವರ್ಣಿಸಿದ್ದಾರೆ.   

ಭುವನಪಾವನಚರಿತ - ಭಗವಂತನ ಪಾವನವಾದ ಪುಣ್ಯಕರವಾದ ಚರಿತ್ರೆಯನ್ನು ಕೇಳುವುದರಿಂದ ಭೂಮಂಡಲದ ಸಕಲ ಜೀವರಾಶಿಗಳಿಗೂ ಪುಣ್ಯ ಬರುತ್ತದೆ.  ಆದ್ದರಿಂದಲೇ ಭಗವಂತನು ಭುವನ ಪಾವನ ಚರಿತನು.  ಶ್ರೀಹರಿಯ ಕಥೆಯನ್ನು ಶ್ರವಣ ಮಾಡುವುದರಿಂದಲೇ ಅವನು ಭಕ್ತರ ಶ್ರವಣೇಂದ್ರಿಯಗಳ ಮೂಲಕ ಹೃದಯಕ್ಕೆ ಪ್ರವೇಶಿಸಿ, ಅಲ್ಲಿ ತುಂಬಿರುವ ಪಾಪಗಳನ್ನೆಲ್ಲಾ ನಾಶಮಾಡುತ್ತಾನೆ.

ಪುಣ್ಯಶ್ರವಣಕೀರ್ತನ - ಯಾರ ಗುಣಗಳನ್ನು ಉಪಾಸಿಸುವುದರಿಂದಲೂ, ಶ್ರವಣ ಮಾಡುವುದರಿಂದಲೂ, ಹೃದಯದಲ್ಲಿ ತುಂಬಿಸಿಕೊಳ್ಳುವುದರಿಂದಲೂ, ಅರಿಯುವ ಪ್ರಯತ್ನ ಮಾಡುವುದರಿಂದಲೂ ಮತ್ತು ಅರಿತ ಕಿಂಚಿತ್ತನ್ನು ಮತ್ತೊಬ್ಬರಿಗೆ ತಿಳಿಸುವೆವೋ, ಅವನು ಪುಣ್ಯಶ್ರವಣಕೀರ್ತನನು.  ಭಾಗವತದಲ್ಲಿ ಲಕ್ಷ್ಮೀದೇವಿಯಲ್ಲಿರುವ ಭಕ್ತಿ ಬೇರೆ ಯಾರಲ್ಲೂ ಇಲ್ಲವೆಂದೂ, ಭಗವಂತನ ಮಂಗಳಕರವಾದ ಕೀರ್ತಿಯನ್ನು ಆವೃತ್ತಿಮಾಡುವ ಇಚ್ಛೆಯಿಂದಲೂ ಮತ್ತು ಭಗವಂತನ ಗುಣಗಳ ಉಪದೇಶವನ್ನು ಹೊಂದಬೇಕೆಂಬ ಇಚ್ಛೆಯಿಂದಲೂ, ಸಾಕ್ಷಾತ್ ಲಕ್ಷ್ಮೀದೇವಿಯೇ ಸದಾ ಕಾಲವೂ ಭಗವಂತನ ಪುಣ್ಯಕೀರ್ತಿಯ ಶ್ರವಣವನ್ನು ಅಪೇಕ್ಷಿಸುವಳು ಎಂಬ ಮಾತು ಉಲ್ಲೇಖವಾಗಿದೆ.  ವಿಷ್ಣು ಸಹಸ್ರನಾಮದಲ್ಲಿ "ಪುಣ್ಯಕೀರ್ತಯೇ ನಮಃ" ಮತ್ತು "ಪುಣ್ಯಶ್ರವಣಕೀರ್ತನಾಯ ನಮಃ" ಎಂದಿದೆ.  ಭಗವಂತನು ಅನಂತ ಕಲ್ಯಾಣ ಗುಣ ಸಂಪನ್ನನು. ಅವನ ತೇಜಸ್ಸು ಅದ್ಭುತ ಹಾಗೂ ಅವನ ಕೀರ್ತಿ ಅಪಾರ.  ಭಗವಂತನ ಅಪಾರ ಕೀರ್ತಿಯನ್ನು ಸದಾ ಧ್ಯಾನಿಸುವವರಿಗೆ ಯಶಸ್ಸು ಖಂಡಿತವಾಗಿ ಸಿಕ್ಕುವುದು.  ಭಗವಂತನ ಅಪಾರ ಮಹಿಮೆಯನ್ನು ಕೇಳುವುದರಿಂದಲೇ ಆತ್ಮಲಾಭ, ಆತಿಶಯಾನಂದ, ನಿರತಿಶಯ ಸುಖವು ಲಭಿಸುವುದು ಮತ್ತು ಪುಣ್ಯ ಪ್ರಾಪ್ತಿಯಾಗುವುದು.  ಭಗವಂತನ ಸಾಕ್ಷಾತ್ಕಾರವಾದವರಿಂದ ಭಗವಂತನ ಅಚಿಂತ್ಯ ಮಹಿಮೆಯನ್ನು ಕೇಳುವುದೇ ಸದ್ಗತಿಗೆ ದಾರಿಯಾಗುತ್ತದೆ.  ಭಾಗವತದಲ್ಲಿ ತಿಳಿಸಿರುವಂತೆ ಪರೀಕ್ಷಿತ್ ಮಹಾರಾಜ ಭಗವಂತನ ಪುಣ್ಯ ಕಥೆಯನ್ನು ಶ್ರವಣ ಮಾಡಿಯೇ ಸದ್ಗತಿ ಪಡೆದನು.  ಭಾಗವತದ ಮೊದಲನೇ ಸ್ಕಂದದಲ್ಲಿ "ಶೃಣುತ್ವಾಂ ಸ್ವಕಥಾಂ ಕೃಷ್ಣಃ ಪುಣ್ಯಶ್ರವಣಕೀರ್ತನಃ | ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್"|| - ಪುಣ್ಯಶ್ರವಣಕೀರ್ತನ ಎಂಬ ನಾಮವುಳ್ಳವನಾದ ಶ್ರೀಕೃಷ್ಣ ಪರಮಾತ್ಮನು ತನ್ನ ಕಥೆಯನ್ನು ಕೇಳುವವರ ಅಂತಃಕರಣದೊಳಗೆ ಪ್ರವೇಶಿಸುತ್ತಾನೆ ಮತ್ತು ಅವರ ಸಕಲ ಪಾಪಗಳನ್ನೂ ಪರಿಹರಿಸುತ್ತಾನೆ ಎಂಬ ಮಾತು ತಿಳಿಸಲಾಗಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪುಣ್ಯೋ ವೈ ಪುಣ್ಯೇನ ಕರ್ಮಣಾ ಭವತಿ" - ಪುಣ್ಯ ಕರ್ಮಗಳನ್ನು ಮಾಡುವುದರಿಂದ ಮನುಷ್ಯನು ಪುಣ್ಯವಂತನಾಗುತ್ತಾನೆ ಎಂಬ ಉಲ್ಲೇಖವಿದೆ.  ಭಗವಂತನ ಗುಣಗಳನ್ನು ಉಪಾಸಿಸುವುದೇ ಜೀವಿ ಮಾಡಬಹುದಾದ ಪುಣ್ಯ ಕರ್ಮವು.  ಸದಾ ನಿರತವೂ ಸಂಕೀರ್ತನೆಯನ್ನು ಮಾಡುತ್ತಾ, ಶ್ರವಣ ಮಾಡುತ್ತಾ ಇರುವುದರಿಂದ ನಮ್ಮೊಳಗಿನಲ್ಲಿ ವಿಚಾರಶಕ್ತಿಯು ಬೆಳೆಯುತ್ತದೆ ಮತ್ತು ಧನಾತ್ಮಕ ಭಾವಗಳ ಧಾರೆಯೇ ಹರಿಯುತ್ತದೆ, ಸದಾಚಾರ ಬೆಳೆಯುತ್ತದೆ.  ಶಾಂತಿ, ಧೈರ್ಯ ಹೆಚ್ಚುತ್ತದೆ.   ಸಂತತಂ ಚಿಂತಯೇ ಅನಂತಂ ಎಂಬುದನ್ನು ಅಭ್ಯಾಸ ಮಾಡಿಕೊಂಡಾಗ, ಅಂತ್ಯಕಾಲದಲ್ಲಿ ವಿಶೇಷವಾಗಿ ಭಗವಂತನ ಸ್ಮರಣೆ ಸಿಕ್ಕುತ್ತದೆ.  ವಿಷ್ಣುಸಹಸ್ರನಾಮದ ಫಲಶ್ರುತಿಯಲ್ಲಿ "ಯ ಇದಂ ಶ್ರುಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ | ನಾ ಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || - ಯಾರು ಭಗವಂತನ ಸಹಸ್ರನಾಮವನ್ನು ನಿತ್ಯವೂ ಕೇಳುವರೋ, ಹಾಡುವರೋ ಅವರಿಗೆ ಇಲ್ಲಿಯಾಗಲೀ, ಪರಲೋಕದಲ್ಲಿಯಾಗಲೀ ಸ್ವಲ್ಪವೂ ಕೆಡುಕಾಗುವುದಿಲ್ಲ ಎಂದಿದ್ದಾರೆ. 

ಪಾಪನಾಶನ - ವಿಷ್ಣು ಸಹಸ್ರನಾಮದಲ್ಲಿ "ದೇವಕೀನನ್ದನಃ (ದೇವಕೀ ನಂದನ) ಸ್ರಷ್ಟಾ ಕ್ಷಿತೀಶಃ ಪಾಪನಾಶನಃ" -  ದೇವಕೀ ಪುತ್ರನಾದ ಏಕೋ ದೇವನಾದ ಶ್ರೀಕೃಷ್ಣನೇ ಏಕಮೇವಾದ್ವಿತೀಯನಾದ ನಾರಾಯಣನು.  ಇವನ ನಾಮ ಸಂಕೀರ್ತನೆ ಮಾಡಿದರೆ, ಬೆಂಕಿಯು ಧಾತುವನ್ನು ಕರಗಿಸಿಬಿಡುವಂತೆ, ಸರ್ವ ಪಾಪಗಳನ್ನೂ ಸುಟ್ಟು ಭಸ್ಮ ಮಾಡಿಬಿಡುವನು ಎಂದು ತಿಳಿಸಲಾಗಿದೆ.  ಹಾಗೇ  ಫಲಶೃತಿಯಲ್ಲಿ "ಸರ್ವ ಪಾಪ ವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್"  - ಸರ್ವ ಪಾಪಗಳನ್ನೂ ಶುದ್ಧಗೊಳಿಸುವ ಒಂದೇ ಒಂದು ಆತ್ಮ, ಅವನೇ  ಪರಬ್ರಹ್ಮ ಎಂಬ ಉಲ್ಲೇಖವಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪಾಪಃ ಪಾಪೇನೇತಿ" - ಭಗವಂತನನ್ನು ಧ್ಯಾನಿಸದೆ ಪಾಪ ಕರ್ಮಗಳನ್ನು ಮಾಡುವವನು ಪಾಪಿಯಾಗುತ್ತಾನೆ ಎಂದಿದೆ.  ಭಗವದ್ಗೀತೆಯ ೧೬ನೇ ಅಧ್ಯಾಯದಲ್ಲಿ ಭಗವಂತ "ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ | ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು"|| - ನನ್ನನ್ನು ದ್ವೇಷಿಸುವ ಪಾಪಿಗಳೂ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ ಪದೇ ಅಸುರೀ ಯೋನಿಗಳಲ್ಲಿ ಜನಿಸುವಂತೆ ಮಾಡುತ್ತೇನೆ ಎಂದಿದ್ದಾನೆ.  ಶರಣು ಬಂದ ಭಕ್ತರಿಗೆ ಭಗವಂತನು ಪಾಪನಾಶನನೂ ಹೌದು ಮತ್ತು ಪಾಪಿಗಳನ್ನು (ಅಸುರರನ್ನು) ಸಂಹರಿಸುವವನೂ ಆಗಿರುವನು.  ಪುಣ್ಯಧಾಮನ ಗುಣಗಳ ವಿಶೇಷತೆಯನ್ನು ಕೇಳುವುದರಿಂದಲೇ ಸಕಲ ಪಾಪವೂ ಪರಿಹಾರವಾಗುವುದಾದ್ದರಿಂದಲೇ ಭಗವಂತನು ಪಾಪನಾಶನ ನಾಮಕನು.   ಭಕ್ತಿಯಿಂದ ಒಮ್ಮೆ ಕೂಗಿದರೂ ಸಾಕು, ಓಡಿ ಬಂದು ಬಿಡುವ ಕರುಣಾಮಯಿ.  ಸಮುದ್ರ ಮಥನದ ಸಮಯದಲ್ಲಿ ಪಾಪಾಭಿಮಾನಿ ಅಸುರರಿಗೆ ಅಮೃತ ಸಿಕ್ಕದಂತೆ ಮಾಡಿ   ಅವರನ್ನು ನಾಶಮಾಡಿದವನು.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ಪ್ರಣತದೇಹಿನಾಂ ಪಾಪಕರ್ಶನಂ" - ಶರಣಾಗತರಾದವರ ಪಾಪಗಳನ್ನು ಹೋಗಲಾಡಿಸುವವನು ಎಂಬ ಉಲ್ಲೇಖವಿದೆ.

ಕವಿಭಿರೀಡಿತ - ಆದಿ ಕವಿಯಾದ ಬ್ರಹ್ಮನಿಂದಲೂ, ಜ್ಞಾನಿಗಳಿಂದಲೂ ಸ್ತುತಿಸಿಕೊಳ್ಳುವವನು.  ಋಷಿಗಳು, ಮುನಿಗಳು, ದೇವಾನುದೇವತೆಗಳೆಲ್ಲರೂ ಸರ್ವದಾ ಸ್ತುತಿಸಿದರೂ ಅವನ ಮಹಿಮೆಯ ಗುಣಗಾನ ಮಾಡುವುದಾಗುವುದಿಲ್ಲ.  ಸಾಕ್ಷಾತ್ ಮಹಾಲಕ್ಷ್ಮಿಯಿಂದಲೂ ಅವನ ಅನಂತ ಗುಣಗಳನ್ನು ಸಂಪೂರ್ಣವಾಗಿ ಅರಿತು ಸ್ತುತಿಸುವುದಾಗುವುದಿಲ್ಲ.  ಸ್ತುತಿಸಿದಷ್ಟೂ ಗೋಚರವಾಗದ ಅನೇಕ ಗುಣಗಳನ್ನು ಉಳಿಸಿಕೊಂಡಂತಹ ಭಗವಂತ ಅಪ್ರತಿಮ ಮಹಿಮೆಯುಳ್ಳವನು.  ದಾಸ ಪರಂಪರೆಯಲ್ಲಿ ಬಂದ ಎಲ್ಲಾ ದಾಸರುಗಳೂ ಭಗವಂತನ ಗುಣವಿಶೇಷಣಗಳನ್ನು ಸ್ತುತಿಸಿ, ಲಕ್ಷಾಂತರ ಕೀರ್ತನೆಗಳನ್ನು ಸುಲಭ ಹಾಗೂ ಸರಳ ಕನ್ನಡದಲ್ಲಿಯೇ ರಚಿಸಿ ಹಾಡಿದ್ದಾರೆ.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ತವ ಕಥಾಮೃತಂ ತಪ್ತಜೀವನಂ ಕವಿಭಿರೀಡಿತಂ ಕಲ್ಮಷಾಪಹಮ್" - ಭಗವಂತನ ಲೀಲೆಯ ಕಥಾಪ್ರಸಂಗಗಳು ಅಮೃತ ಸ್ವರೂಪಗಳೇ ಆಗಿವೆ.  ವಿರಹಿಗಳಿಗೆ ಅದನ್ನು ಬಿಟ್ಟು ಬೇರೇನೂ ಬೇಕಾಗುವುದೇ ಇಲ್ಲ.  ದೊಡ್ಡ ದೊಡ್ಡ ಜ್ಞಾನಿಗಳು ಮತ್ತು ಮಹಾ ಕವಿಗಳು ನಿನ್ನ ಚರಿತಾಮೃತವನ್ನು ಹಾಡಿ ಹೊಗಳಿದ್ದಾರೆ ಎಂದಿದ್ದಾರೆ.

ಕೈವರದಳಶ್ಯಾಮ - ಕನ್ನೈದಿಲೆಯ ಬಣ್ಣವನ್ನು ಹೋಲುವ ಕಪ್ಪುಬಣ್ಣದವನಾದವನು ಭಗವಂತ.  ಆದ್ದರಿಂದಲೇ ಅವನು ಕೈವರದಳಶ್ಯಾಮ.  ಅರಳಿದ ನೈದಿಲೆಯಂತೆ ಅತಿಮೋಹಕ ಬಣ್ಣವನ್ನೂ, ರೂಪವನ್ನೂ ಹೊಂದಿದವನು ಶ್ರೀಹರಿ.  ದರ್ಶನ ಮಾತ್ರದಿಂದಲೇ ಸರ್ವರನ್ನೂ ಸೆಳೆಯುವವನು, ಹೃತ್ಕಮಲವನ್ನು ಅರಳಿಸಿ, ಆನಂದಾನುಭೂತಿಯ ಅನುಭವವನ್ನು ಕೊಡುವವನು.  ದೇವಕಿ - ವಸುದೇವರ ಪುತ್ರನಾಗಿ ಸೆರೆಮನೆಯಲ್ಲಿ ಜನಿಸಿದರೂ ತನ್ನ ವಿಷ್ಣು ರೂಪವನ್ನು ತೋರಿಸಿ ಆನಂದಪಡಿಸಿದವನು.  ಬಾಲಕೃಷ್ಣನಾಗಿ ತನ್ನ ಲೀಲಾವಿನೋದಗಳಿಂದ ಸರ್ವರನ್ನೂ ಸಂತೋಷಪಡಿಸಿದವನು, ಕೈವರದಳಶ್ಯಾಮನು.

ನಿಸ್ಸೀಮ - ತನಗೆ ತಾನೇ ಸಾಟಿಯಾದಂತಹವನು, ಅಸಾಧ್ಯನು, ಎಲ್ಲಾ ಸೀಮೆಯನ್ನೂ ಮೀರಿ ಅಸೀಮಾತೀತನಾಗಿ ನಿಂತವನು, ಅತೀತನು, ಭಗವಂತನು ನಿಸ್ಸೀಮನು.  ಕಾಮದೇವನನ್ನೇ ಸುಟ್ಟು ಹಾಕಿದ ವೈರಾಗ್ಯಪತಿ ಮಹಾರುದ್ರನನ್ನೇ ಮೋಹಿನಿ ವೇಷದಲ್ಲಿ ಮರುಳು ಮಾಡಿ ಕಂಗೆಡಿಸಿದವನು ಭಗವಂತನು, ಅವನ ಮಹಿಮೆಗೆಲ್ಲಿದೆ ಸೀಮೆ?

ಯುವತಿವೇಷದಿ - ಅಮೃತ ಮಂಥನದ ಸಮಯದಲ್ಲಿ ಮೋಹಿನಿ ರೂಪದಿಂದ ಬಂದ ಭಗವಂತನ ಅಸಾಧಾರಣ ಸೌಂದರ್ಯವನ್ನು ನೋಡುವ ಅವಕಾಶ ದೇವತೆಗಳಿಗೆ ಲಭಿಸಿತು.  ಅಸುರರಿಗೆ ಭಗವಂತ ಕಣ್ಣು ಮುಚ್ಚಲು ತಿಳಿಸಿಬಿಟ್ಟ.  ಅಸುರರು ಸುಂದರಿ ಸ್ತ್ರೀಯೆಂಬ ದೃಷ್ಟಿಯಿಂದ ನೋಡಿದರು.  ಆದ್ದರಿಂದಲೇ ಅವರಿಗೆ ಕಣ್ಣುಮುಚ್ಚಲು ಆಜ್ಞಾಪಿಸಿದ ಭಗವಂತ.  ದೇವತೆಗಳು ಅತಿಶಯವಾದ, ಅನುಪಮ ಸೌಂದರ್ಯವನ್ನು ಕಣ್ಣರಳಿಸಿ ನೋಡಿ, ಮನದಲ್ಲಿ ತುಂಬಿಸಿಕೊಂಡರು.  ಅವರು ಸ್ತ್ರೀರೂಪವೆಂದು ನೋಡದೆ ಜಗನ್ಮಾತೆಯೆಂಬ ದೃಷ್ಟಿಯಿಂದಲೇ ನೋಡಿದ್ದರಿಂದ ಭಗವಂತನು ಅವರಿಗೆ ಕರುಣಿಸಿದ.

ಗೌರೀಧವನ ಮೋಹಿಸಿ - ಭಾಗವತ ಅಷ್ಟಮಸ್ಕಂದದಲ್ಲಿ ಭಗವಂತನು ಮೋಹಿನೀ ರೂಪ ಧರಿಸಿದ ಕಥೆಯು ಹೇಳಲ್ಪಟ್ಟಿದೆ.  ಮೋಹಿನೀರೂಪದ ವರ್ಣನೆಯನ್ನು ಕೇಳಿ ರುದ್ರದೇವರು ತಾವೂ ಶ್ರೀಹರಿಯ ಈ ಮನಮೋಹಕ ರೂಪವನ್ನು ಕಾಣಬೇಕೆಂದು ಗಿರಿಜಾ ಸಮೇತನಾಗಿ ವಿಷ್ಣು ಲೋಕಕ್ಕೆ ಬರುತ್ತಾನೆ.  ಭಗವಂತನನ್ನು ನಾನಾ ರೀತಿಯಲ್ಲಿ ಸ್ತುತಿಸುತ್ತಾ, ತಾನು ಎಲ್ಲಾ ಗುಣಪೂರ್ಣ ರೂಪಗಳನ್ನು ನೋಡಿದ್ದರೂ ಸ್ತ್ರೀರೂಪ ನೋಡಿಲ್ಲವಾಗಿ, ತನಗೆ ಆ ಅತಿಶಯ ಲಾವಣ್ಯವತಿಯ ರೂಪವನ್ನು ತೋರಿಸುವಂತ ಪ್ರಾರ್ಥಿಸಿಕೊಳ್ಳುತ್ತಾನೆ.  ಭಗವಂತ ಮಾಯವಾಗಿ ಹೋದಾಗ, ಶಂಕರನು ಪಾರ್ವತೀ ಹಾಗೂ ಪ್ರಥಮಗಣಗಳೊಡನೆ ಎಲ್ಲಾ ದಿಕ್ಕುಗಳಲ್ಲೂ ತಿರುಗಿ ನೋಡುತ್ತಾ ಇರುವಾಗಲೇ ಜಗನ್ಮೋಹಕ ಸುಂದರಿಯನ್ನು ಉಪವನದಲ್ಲಿ ಕಾಣುತ್ತಾನೆ.  ದರ್ಶನ ಮಾತ್ರದಿಂದಲೇ ಪಾರ್ವತೀ ಹಾಗೂ ಪ್ರಥಮಗಣಗಳನ್ನೂ ಮರೆತು ಧಾವಿಸಿಬಿಡುತ್ತಾನೆ.  ಮೋಹಿನಿಯು ಮರಗಳ ಮರೆಯಲ್ಲಿ ಅವಿತಿಟ್ಟುಕೊಂಡರೂ ರುದ್ರನು ಬಿಡದೇ ಬೆನ್ನಟ್ಟಿಹೋಗುವನು. ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಹೀಗೆ ಯುವತಿವೇಷವ ಧರಿಸಿ ಗೌರೀಧವನ
ನ್ನು ಮೋಹಿಸುವಂತೆ ಮಾಡಿದ ಭಗವಂತನು.   ಭಗವಂತನ ಅಪರಿಮಿತ ಮಹಿಮೆಯನ್ನು ವರ್ಣಿಸುತ್ತಾ ರುದ್ರದೇವರು ಪಾರ್ವತಿದೇವಿಗೆ ಈ ಪ್ರಸಂಗವನ್ನು ಯಾರು ಬಾರಿಬಾರಿಗೂ ಸಂಕೀರ್ತಿಸುತ್ತಾರೋ ಅಥವಾ ಶ್ರವಣ ಮಾಡುತ್ತಾರೋ ಅವರಿಗೆ ನಿಷ್ಫಲವೆಂಬುದೇ ಇರುವುದಿಲ್ಲ.  ಸಂಸಾರದ ಸಮಸ್ತ ಕ್ಲೇಶಗಳೂ ಕಳೆದುಹೋಗುವುವು ಎಂದಿದ್ದಾರೆಂಬುದನ್ನು  ಭಾಗವತದಲ್ಲಿ ಉಲ್ಲೇಖಿಸಲಾಗಿದೆ.

ಕೆಡಿಸಿ ಉಳಿಸಿದ - ಜಗದೇಕ ಸೌಂದರ್ಯವತಿಯಾದ ಪಾರ್ವತಿಯನ್ನು ಮದುವೆಯಾಗಿದ್ದರೂ ಶಿವನು ಕಾಮವನ್ನೇ ಸುಟ್ಟು, ಜಯಿಸಿದವನು.  ಆದರೆ ಅತಿಲಾವಣ್ಯಮತಿ ಮೋಹಿನಿಯನ್ನು ಕಂಡು ಭಗವಂತನ ಮಾಯೆಯಲ್ಲಿ ಸಿಲುಕಿ, ಶಿವನು ಮೋಹಿತನಾಗುತ್ತಾನೆ.   ಶ್ರೀಹರಿಯ ಮಾಯೆಯಿಂದ ತಾನು ಮೋಹಿತನಾದೆನೆಂದು ತಿಳಿದು ಶಿವನು ನಾಚುತ್ತಾನೆ.  ಭಗವಂತನು ರುದ್ರದೇವನಿಗೆ ನಾನು ನಿನ್ನನ್ನು ಮೋಹಗೊಳಿಸಿದರೂ ಕೂಡ ನೀನು ದೈವವಶದಿಂದ ದಾಟಿ ವಿವೇಕವನ್ನು ಹೊಂದಿದೆ.  ಆದ್ದರಿಂದ ನೀನು ನಿಜವಾಗಿಯೂ ಪರಮ ವಿರಕ್ತನು, ನಿನ್ನಂತೆ ಕಾಮಾದಿಗಳನ್ನು ಯಾರೂ ಜಯಿಸಲಾರರು ಎಂದನು.   ಭಗವಂತನನು ತನ್ನ ಮೋಹಿನಿ ರೂಪದಿಂದ ಶಿವನ ಚಿತ್ತ ಸ್ವಾಸ್ಥ್ಯ ಕೆಡಿಸಿದ, ಮೋಹಪಾಶದಿಂದ ಅರಿವು ತಳೆದ ರುದ್ರದೇವನನ್ನು ಹೊಗಳಿ ಉಳಿಸಿದನು.  ಇದು ಶ್ರೀಹರಿಯ ಕಾರುಣ್ಯದ ಮಹಿಮೆ.

ಇವನ ಮಾಯವ ಗೆಲುವನಾವನು ಈ ಜಗತ್ರಯದಿ -  ಭಗವಂತನ ಮಾಯೆ ಎಂದರೆ ಸಾಮರ್ಥ್ಯ, ಶಕ್ತಿ ಅಥವಾ ಇಚ್ಛೆ ಎಂಬರ್ಥವು ಮತ್ತು ಭಗವಂತನ ಪತ್ನಿ ಮಾಯಾದೇವಿ ರೂಪಿಯಾದ ಲಕ್ಷ್ಮೀದೇವಿ.  ಬ್ರಹ್ಮಾದಿ ದೇವತೆಗಳಿಂದ ಪ್ರಾರಂಭಿಸಿ ಜೀವಿಗಳವರೆಗೂ ಯಾರಿಗೂ ಈ ಎರಡೂ ಮಾಯೆಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲ,  ಭಗವಂತನ ಲೀಲೆಗಳೂ, ಅವನ ಮಾಯೆಯ ಪ್ರಭಾವವೂ ಇರುತ್ತದೆ.  ಯಾರಿಂದಲೂ ಅದನ್ನು ಗೆಲ್ಲುವುದಾಗುವುದಿಲ್ಲ.  ಆದರೆ ಭಗವಂತನ ಕರುಣೆಯೂ ಅಪಾರ.  ಶ್ರದ್ಧೆ ಹಾಗೂ ಭಕ್ತಿಯಿಂದ ಯಾರು ಸಂಪೂರ್ಣವಾಗಿ ಶರಣಾಗತರಾಗುವರೋ, ಅವರನ್ನು ಸಂಸಾರವೆಂಬ ಬಂಧನ ಅಥವಾ ಮಾಯೆಯಿಂದ ಬಿಡಿಸಿ ಉದ್ಧರಿಸುವನು.  ಭಗವಂತನು ದುರ್ಜನರನ್ನೂ, ತಾಮಸಿಗರನ್ನೂ ತನ್ನ ಮಾಯೆಯಿಂದ ಕೆಡಿಸಿ, ಪರಮಪುರುಷಾರ್ಥವಾದ ಮುಕ್ತಿ, ಮೋಕ್ಷದಿಂದ ಅವರು ವಂಚಿತರಾಗುವಂತೆ ಮಾಡುವನು.  ಸಜ್ಜನರನ್ನೂ, ಸಾತ್ವಿಕರನ್ನೂ ಮಾಯೆಯಿಂದ ಬಿಡಿಸಿ, ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ರಕ್ಷಿಸುವನು.  ಶ್ರೀ ಪುರಂದರ ದಾಸರು ತಮ್ಮ "ಚಂದ್ರಚೂಡ ಶಿವ ಶಂಕರ ಪಾರ್ವತಿ ರಮನ ನಿನಗೆ ನಮೋ ನಮೋ" ಎಂಬ ಕೃತಿಯಲ್ಲಿ "ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ | ಜಾಲಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ" || ಎಂದು ಸ್ತುತಿಸಿದ್ದಾರೆ.

ಭಗವದ್ಗೀತೆಯಲ್ಲಿ ಭಗವಂತ :
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ||  - ಎಲೈ ಭಾರತಾ ! ಎಲ್ಲಾ ಪ್ರಕಾರಗಳಿಂದಲೂ ಪರಮಾತ್ಮನಿಗೇ ಶರಣಾಗು.  ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮಧಾಮವನ್ನೂ ಹೊಂದುವೆ ಎಂದಿದ್ದಾನೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ :

ಎಲ್ಲರಂದದಿ ಲಕ್ಷ್ಮೀನಲ್ಲನೆಂದೆನಬೇಡ
ಬಲ್ಲಿದನು ಕಂಡ್ಯ ಭಗವಂತ | ಭಗವಂತನ ಮಹಿಮೆ
ಬಲ್ಲವರು ಇಲ್ಲ ಜಗದೊಳು || - ಎಲ್ಲರೂ ತಿಳಿದಂತೆ ಭಗವಂತನನ್ನು ಲಕ್ಷ್ಮೀರಮಣನೆಂದು ಮಾತ್ರ ತಿಳಿಯಬೇಡ.  ಶ್ರೀಹರಿಯು ಷಡ್ಗುಣೈಶ್ವರ್ಯಪೂರ್ಣನಾದ, ಅಚಿಂತ್ಯವಾದ, ಅದ್ಭುತವಾದ ಸಾಮರ್ಥ್ಯವುಳ್ಳವನು.  ಭಗವಂತನ ಮಹಿಮೆಗಳನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲವೇ ಇಲ್ಲ.

ಶ್ರೀಯರಸನೆ ನಿನ್ನ ಮಾಯಕ್ಕೆ ಎಣೆಗಾಣೆ
ಹೇಯವಿಷಯಗಳ ಜನರಿಗೆ | ಜನರಿಗುಣಿಸಿ ಉಪಾ-
ದೇಯವೆಂತೆಂದು ಸುಖಿಸುವಿ || - ಭಗವಂತನ ಇಚ್ಛೆ, ಶಕ್ತಿಗಳೆಂಬ ಮಾಯೆಗೆ ಯಾರೂ, ಯಾವುದೂ ಸಾಟಿಯಲ್ಲ.  ಪ್ರಾಕೃತಿಕ ಬಂಧನದಲ್ಲಿ ಸಿಲುಕಿಸಿ ಜೀವರಿಗೆ ಲೌಕಿಕ ಭೋಗಗಳೇ ಪರಮ ಪುರುಷಾರ್ಥಗಳೆಂದೂ, ಆದರರಿಂದ ಸ್ವೀಕರಿಸಲು ಯೋಗ್ಯವೂ ಎಂಬ ಮಾಯೆಯಲ್ಲಿ ಮುಳುಗಿಸಿ, ಅವರು ತಮ್ಮ ’ಅಹಂ ಮಮಕಾರ’ಗಳೊಳಗೇ ಮುಳುಗುವಂತೆ ಮಾಡುತ್ತಾನೆ.  ಭವವೆಂಬ ಪಾಶದಲ್ಲಿ ಬಂಧಿಸುವವನೂ ಅವನೇ, ಬಿಡಿಸಿ ಉದ್ಧರಿಸುವವನೂ ಅವನೇ.  ಜೀವಿಗಳಲ್ಲಿ ತಾನಿದ್ದು ಭಗವಂತನು ಶುಭವಿಷಯಗಳನ್ನು ಭೋಗಿಸಿದರೂ, ಎಲ್ಲದರಿಂದಲೂ ರಹಿತನಾಗಿದ್ದು ಸುಖಿಸುವ ಪೂರ್ಣಾನಂದನಾಗಿದ್ದಾನೆ.ಚಿತ್ರಕೃಪೆ : ಅಂತರ್ಜಾಲ