Monday, May 25, 2015

ಕರುಣಾ ಸಂಧಿ - ೩೦ ನೇ ಪದ್ಯ ( ನರಸಿಂಹಾವತಾರ)

ಭೂಖಂಡಂ ವಾರಣಾಂಡಂ ಪರವರವಿರಟಂ ಡಂಪಡಂಪೋರುಡಂಪಂ |  
ಡಿಂಡಿಂಡಿಂಡಿಂ ಡಿಡಿಂಬಂ ದಹಮಪಿವಹಮೈರ್ಝಂಪಝಂಪೈಶ್ಚ ಝಂಪೈಃ ||
ತ್ಯುಲ್ಯಾಸ್ತುಲ್ಯಾಸ್ತುತುಲ್ಯಾಃ ಧುಮಧುಮಧುಮಕೈಃ ಕುಂಕುಮಾಂಕೈಃಕುಮಾಂಕೈಃ | 
ಏತತ್ತೇ ಪೂರ್ಣಯುಕ್ತಂ ಅಹರಹಕರಹಃ ಪಾತುಮಾಂ ನಾರಸಿಂಹಃ ||

ಮೀನ ಕೂರ್ಮ ವರಾಹ ನರಪಂ-
ಚಾನನಾ
ತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು ||೩೦||


ನರಪಂಚಾನನ - ನರಸಿಂಹಾವತಾರ : ಸನಕಾದಿಗಳ ಶಾಪದಿಂದಾಗಿ ದೈತ್ಯ ಜನ್ಮವನ್ನು ಪಡೆದಿದ್ದ ಜಯ-ವಿಜಯರು ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷನಾಗಿ ಹುಟ್ಟುತ್ತಾರೆ.  ತಾನು ಅಜರಾಮರನಾಗಬೇಕೆಂದು ಬಯಸಿ ಹಿರಣ್ಯಕಶಿಪುವು ಮಂದರಗಿರಿಯ ತಪ್ಪಲಿನಲ್ಲಿ ಘೋರ ತಪಸ್ಸನ್ನು ಪ್ರಾರಂಭಿಸುವನು.  ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದ ಹಿರಣ್ಯಕಶಿಪುವಿನ ಶಿರಸ್ಸಿನಿಂದ ಹೊರಟ ಸಧೂಮಾಗ್ನಿಯು ಮೂರುಲೋಕಗಳನ್ನೂ ದಹಿಸಲಾರಂಭಿಸುವುದು.  ಜ್ವಾಲೆಯಿಂದ ತಪ್ತರಾದ ದೇವತೆಗಳು ದೈತ್ಯನ ತಾಮಸ ತಪಸ್ಸಿನ ಜ್ವಾಲೆ ಸಹಿಸಲಸದಳವಾಗಿದೆಯೆಂದು ಬ್ರಹ್ಮದೇವರಲ್ಲಿ ಮೊರೆಯಿಡುವರು.  ಬ್ರಹ್ಮದೇವರು ಹಿರಣ್ಯಕಶಿಪುವಿಗೆ ಪ್ರತ್ಯಕ್ಷರಾಗಿ ಉಗ್ರ ತಪಸ್ಸಿಗೆ ಮೆಚ್ಚಿ ವರ ಬೇಡೆನ್ನಲು, ದೈತ್ಯನು ಬ್ರಹ್ಮದೇವರಿಂದ ಸೃಷ್ಟಿಯಾದ ಯಾವುದರಿಂದಲೂ ತನಗೆ ಮರಣ ಬರಬಾರದೆಂದೂ, ಮರಣವು ಹೊರಗೂ-ಒಳಗೂ ಆಗಬಾರದೆಂದೂ, ಆಯುಧಗಳಿಂದಲೂ, ನೆಲದಲ್ಲಿಯೂ, ಆಕಾಶದಲ್ಲಿಯೂ, ನರಸುರಾಸುರ ಮಹೋರಗರಿಂದಲೂ, ಪ್ರಾಣವಿರುವ - ಇಲ್ಲದಿರುವ ವಸ್ತುಗಳಿಂದಲೂ ಬರಬಾರದೆಂದು ಪ್ರಾರ್ಥಿಸುತ್ತಾನೆ.  ತಾನು ಏಕಛತ್ರಾದಿಪತಿಯಾಗಬೇಕೆಂದೂ, ಲೋಕಪಾಲಕರ ದಿವ್ಯಶಕ್ತಿಗಳು (ಬೇಕಾದವರಿಗೆ ವರವನ್ನೂ, ಬೇಡದವರಿಗೆ ಶಾಪವನ್ನೂ ಕೊಡುವ ಶಕ್ತಿ) ತನಗೂ ಬರಬೇಕೆಂದೂ, ತನ್ನ ತಪೋಮಹಿಮೆಯಿಂದ ಯಾವ ಕುಂದು-ಕೊರತೆಯೂ ಇಲ್ಲದಂತೆ ಆನಂದವಾಗಿರಬೇಕೆಂದೂ ವರವನ್ನು ಬೇಡುತ್ತಾನೆ.  ಬ್ರಹ್ಮದೇವರು ಅಸುರನು ಕೇಳಿದ ವರಗಳನ್ನೆಲ್ಲಾ ಕೊಡುವರು.  ವರಗಳನ್ನು ಪಡೆದ ದೈತ್ಯನು ಅತಿಯಾದ ಮದದಿಂದ ಶ್ರೀಹರಿಯನ್ನು ದ್ವೇಷ ಮಾಡುವನು.  ತಮ್ಮನಾದ ಹಿರಣ್ಯಾಕ್ಷನನ್ನು ಶ್ರೀಹರಿಯು ಕೊಂದನೆಂದು ನಿಂದಿಸುತ್ತಾ ರೋಷ ಕಾರುವನು.  ವಿಪರೀತ ಅಹಂಕಾರದಿಂದ ದೇವಾಸುರ ನರ ಗಂಧರ್ವರನ್ನೆಲ್ಲಾ ಗೆದ್ದು ಹಿಂಸಿಸುವನು.  ಮೂರು ಲೋಕಗಳನ್ನೂ ಆಳಲುಪಕ್ರಮಿಸುವನು.  ಅದೆಷ್ಟು ಭೋಗಗಳನ್ನು ಅನುಭವಿಸಿದರೂ ತೃಪ್ತನಾಗದೆ ಶಾಸ್ತ್ರವಿಹಿತ ಕಾರ್ಯಗಳನ್ನೂ ಮಾಡುವನು.  ಹಿರಣ್ಯಕಶಿಪುವಿನ ಅಟ್ಟಹಾಸವನ್ನು ತಡೆಯಲಾರದ ಸುರಕಿನ್ನರಸಿದ್ಧಸಾಧ್ಯ ಮುನಿಶ್ರೇಷ್ಠರೆಲ್ಲಾ ಪರಮಾತ್ಮನಲ್ಲಿ ಶರಣುಹೊಕ್ಕು ರಕ್ಷಿಸೆಂದು ಪ್ರಾರ್ಥಿಸುವರು.  ಅಶರೀರವಾಣಿಯ ಮೂಲಕ ಭಗವಂತನು ಹಿರಣ್ಯಕಶಿಪುವಿಗೆ ’ಪ್ರಹ್ಲಾದ’ನೆಂಬ ಮಹಾನ್ ಹರಿಭಕ್ತನು ಮಗನಾಗಿ ಜನಿಸುವನೆಂದೂ, ಹಿರಣ್ಯಕಶಿಪುವು ಮಗುವನ್ನು ಕೊಲ್ಲುವ ಪ್ರಯತ್ನ ಮಾಡಿದಾಗ, ದೈತ್ಯನಿಗದೆಷ್ಟೇ ವರಗಳ ಬಲವಿದ್ದರೂ, ತಾನೇ ಆ ದೈತ್ಯನನ್ನು ಸಂಹರಿಸುವುದಾಗಿಯೂ ಭಗವಂತನು ಅಭಯವನ್ನೀಯುವನು.  ಭಗವಂತನ ವಾಣಿಯಂತೆಯೇ ಮುಂದೆ ಪ್ರಹ್ಲಾದನು ಹಿರಣ್ಯಕಶಿಪುವಿನ ಮಗನಾಗಿ ಜನಿಸಿ, ಹರಿಭಕ್ತಿಯನ್ನು ಮೆರೆಸಿದಾಗ, ಹಿರಣ್ಯಕಶಿಪುವು ಮಗುವನ್ನು ಅನೇಕಾನೇಕ ರೀತಿಯಲ್ಲಿ ಹಿಂಸಿಸುವನು.  ಹರಿಸರ್ವೋತ್ತಮನೆಂದು ಸದಾ ಜಪಿಸುವ ಮಗನನ್ನು ತಿದ್ದಲಾಗದೆ ಹಿರಣ್ಯಕಶಿಪುವು ಮಗುವನ್ನು ಶ್ರೀಹರಿಯನ್ನು ತೋರಿಸು, ಇಲ್ಲಿಯೇ ತೋರಿಸು, ಕಂಭದಲ್ಲಿ ತೋರಿಸು ಎಂದು ಆರ್ಭಟಿಸುವನು. ಆ ಕ್ಷಣದಲ್ಲಿ ಭೀಕರ ಶಬ್ದದೊಂದಿಗೆ ಕಂಭವ ನ್ನೊಡೆದುಕೊಂಡು, ನರನೂ ಅಲ್ಲದ, ಸಿಂಹವೂ ಅಲ್ಲದ, ಮೃಗವೂ ಆದ, ನರನೂ ಆದ ಅತಿ ಭಯಂಕರ ರೂಪದಲ್ಲಿ ಭಗವಂತನು "ನರಪಂಚಾನ"ನಾಗಿ ಪ್ರಾದುರ್ಭವಿಸುವನು.   ಪಂಚಾಸ್ಯ ಅಥವಾ ಪಂಚಾನನ ಎಂದರೆ ಸಿಂಹವೆಂದರ್ಥವಾಗುತ್ತದೆ.  ಖಡ್ಗವನ್ನು ಹಿಡಿದು ತನ್ನ ಮೇಲೇರಿ ಬರುತ್ತಿದ್ದ ಹಿರಣ್ಯಕಶಿಪುವಿನ ಕುತ್ತಿಗೆಯನ್ನು ಹಿಡಿದು ಎಳೆದು ತಂದು, ಹೊಸ್ತಿಲ ಮೇಲೆ ಕುಳಿತು, ತನ್ನ ನಖಗಳಿಂದಲೇ ಉದರವನ್ನು ಬಗೆದು, ಕರುಳಿನ ಮಾಲೆಯನ್ನು ತನ್ನ ಕೊರಳಿಗೆ ಧರಿಸಿ ಘರ್ಜಿಸುವನು.  ದೇವತೆಗಳೆಲ್ಲಾ ಪುಷ್ಪವೃಷ್ಟಿ ಮಾಡುತ್ತಾ ಭಗವಂತನನ್ನು ನಾನಾ ವಿಧವಾಗಿ ಸ್ತುತಿಸುವರು.

ಪದ್ಮಪುರಾಣದಲ್ಲಿ ನರಸಿಂಹಾವತಾರದ ವರ್ಣನೆಯನ್ನು ವಿಸ್ತಾರವಾಗಿ ಮಾಡಲಾಗಿದೆ.  ಕಂಭವನ್ನು ಸೀಳಿಕೊಂಡು ಬಂದ ನರಸಿಂಹ ರೂಪಿ ಭಗವಂತನ ಕಾಂತಿಯು ಕೋಟಿಸೂರ್ಯರಿಗಿಂತ ಮಿಗಿಲಾಗಿತ್ತು, ಭೀಕರವಾದ ಹಲ್ಲುಗಳೂ, ನಿಮಿರಿನಿಂತ ಆಯಾಲದ ಕೂದಲುಗಳು, ಮೂರು ಕಣ್ಣುಗಳಲ್ಲಿಯೂ ಕೆಂಗಿಡಗಳು, ಸಾವಿರತೋಳು, ಕೊರಳಲ್ಲಿ ದಿವ್ಯಮಾಲೆ, ಉದರದಲ್ಲಿ ಕೌಸ್ತುಭ, ಮೈ ತುಂಬಾ ದಿವ್ಯಾಭರಣಗಳನ್ನು ಧರಿಸಿ ಪ್ರಾದುರ್ಭಸುತ್ತಾನೆಂದು ವಿವರಿಸಲಾಗಿದೆ.  ಭಗವಂತನ ಇಂತಹ ದಿವ್ಯರೂಪದಲ್ಲಿ ಪುಟ್ಟ ಬಾಲಕ, ಭಕ್ತಾಗ್ರೇಸರ ಪ್ರಹ್ಲಾದನ ಕಣ್ಣುಗಳಿಗೆ ಬ್ರಹ್ಮಾಂಡವೇ ಕಾಣಿಸುತ್ತದೆ.  ನರಹರಿಯ ಕೊರಳ ಮೇಲಿನ ಕೂದಲಿನ ತುದಿಯಲ್ಲಿ ಒಂದೊಂದು ಬ್ರಹಾಂಡವು ಕಾಣಿಸುತ್ತದೆ.  ಮೂರು ಕಣ್ಣುಗಳಲ್ಲಿಯೂ ಸೂರ್ಯ ಚಂದ್ರರು, ಕಿವಿಗಳಲ್ಲಿ ಅಶ್ವಿನೀ ದೇವತೆಗಳು, ಹಣೆಯಲ್ಲಿ ಬ್ರಹ್ಮ ರುದ್ರರು, ಮೂಗಿನಲ್ಲಿ ಆಕಾಶ ಹಾಗೂ ವಾಯುಮುಖದಲ್ಲಿ ಇಂದ್ರ, ಅಗ್ನಿ, ನಾಲಿಗೆಯ ಮೇಲೆ ಸರಸ್ವತಿ, ಕೊರಳಲ್ಲಿ ಮೇರು ಪರ್ವತ, ಹೆಗಲ ಮೇಲೆ ದೊಡ್ಡ ದೊಡ್ಡ ಗುಡ್ಡಗಳು, ಹೊಕ್ಕಳಲ್ಲಿ ಅಂತರಿಕ್ಷ, ಪಾದಗಳಲ್ಲಿ ಪರ್ವತಗಳು, ಬೆರಳುಗಳಲ್ಲಿನ ಕೂದಲುಗಳಲ್ಲಿ ಔಷಧಿಗಳು, ಕಾಲಿನ ಉಗುರುಗಳಲ್ಲಿ ಎಲ್ಲ ಗಿಡಗಳು, ಉಸಿರಿನಲ್ಲಿ ಸಾಂಗ ವೇದಗಳು, ಆದಿತ್ಯ ವಸು, ರುದ್ರ, ವಿಶ್ವೇದೇವತೆಗಳು, ಮರುದ್ಗಣಗಳು, ಗಂಧರ್ವರು, ಅಪ್ಸರೆಯರು ಭಗವಂತನ ಅಂಗಾಂಗಗಳಲ್ಲಿ ಕಾಣಿಸುವರು.  ಕೊರಳಲ್ಲಿ ಶ್ರೀವತ್ಸ ಕೌಸ್ತುಭ, ವನಮಾಲಾ, ವೈಜಯಂತೀ, ಎಲ್ಲ ಕೈಗಳಲ್ಲಿ ಶಂಖ, ಚಕ್ರ, ಗದಾ, ಖಡ್ಗ ಮೊದಲಾದ ಆಯುಧಗಳು ಶೋಭಿಸುವುದನ್ನು ಕಂಡು ಪ್ರಹ್ಲಾದನು ಆನಂದಭಾಷ್ಪಗಳನ್ನುದುರಿಸುತ್ತಾ ಗದ್ಗದ ಕಂಠನಾಗಿ , ಭಕ್ತಿಯಿಂದ ಜಯದೇವ ಜಗನ್ನಾಥ  ನಮಸ್ತೇಸ್ತು ನಮಸ್ತೇಸ್ತು   ಎಂದು ಸ್ತುತಿಸುತ್ತಾ ದೀರ್ಘವಾಗಿ ನಮಸ್ಕರಿಸುತ್ತಾನೆ.

ಶ್ರೀಮದ್ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ನೃಸಿಂಹಾವತಾರವನ್ನು
ತ್ರೈವಿಷ್ಟಪೋರುಭಯಹಾ ಸ ನೃಸಿಂಹರೂಪಂ
ಕೃತ್ವಾ ಭ್ರಮದ್ಭ್ರುಕುಟಿದಂಷ್ಟ್ರಕರಾಲವಕ್ತ್ರಮ್ |
ದೈತ್ಯೇನ್ದ್ರಮಾಶು ಗದಯಾಭಿಪತನ್ತಮಾರಾ-
ದೂರೌ ನಿಪಾತ್ಯ ವಿದದಾರ ನಖೈಃ ಸ್ಫುರನ್ತಮ್ || - ದೇವತೆಗಳಿಗೆ ಉಂಟಾಗಿದ್ದ ಮಹಾಭಯವನ್ನು ಧ್ವಂಸ ಮಾಡುವುದಕ್ಕಾಗಿ ಭಗವಂತನು ಅದುರುತ್ತಿರುವ, ಗಂಟುಮುಖ ಮತ್ತು ತೀಕ್ಷ್ಣವಾದ ಕೋರೆದಾಡೆಗಳನ್ನು ಹೊಂದಿದ ಕಡು ಉಗ್ರವಾದ ನೃಸಿಂಹರೂಪವನ್ನು ತಾಳಿದನು.  ಗದೆಯ ಸಮೇತ ತನ್ನ ಮೇಲೆ ಬೀಳಲು ಬಂದ ದೈತ್ಯಚಕ್ರವರ್ತಿ ಹಿರಣ್ಯಕಶಿಪುವನ್ನು ತಡೆದು ತನ್ನ ತೊಡೆಯ ಮೇಲೆ ಬೀಳಿಸಿಕೊಂಡು, ತನ್ನ ನಖಗಳಿಂದಲೇ ಉದರವನ್ನು ಸೀಳಿದನು ಎಂಬ ವರ್ಣನೆಯಿದೆ.

ಭಾಗವತ ಸಪ್ತಮಸ್ಕಂಧ ೮ನೆಯ ಅಧ್ಯಾಯದಲ್ಲಿ ಭಗವಂತ ನರಸಿಂಹಾವತಾರದಲ್ಲಿ ಕಂಭದಿಂದ ಪ್ರಕಟಗೊಂಡಾಗ
ಸತ್ಯಂ ವಿಧಾತುಂ ನಿಜಭೃತ್ಯಭಾಷಿತಂ
ವ್ಯಾಪ್ತಿಂ ಚ ಭೂತೇಷವಖಿಲೇಷು ಚಾತ್ಮನಃ |
ಅದೃಶ್ಯತಾತ್ಯದ್ಭುತರೂಪಮುದ್ವಹನ್
ಸ್ತಮ್ಭೇ ಸಭಾಯಾಂ ನ ಮೃಗಂ ನ ಮಾನುಷಮ್ || - ಪ್ರಕಟಗೊಂಡ ಪರಮಪುರುಷನು ಕೇವಲ  ಮೃಗವೂ ಅಲ್ಲದೆ ಕೇವಲ ಮನುಷ್ಯನೂ ಅಲ್ಲದೆ ಮೃಗ-ಮಾನುಷರೂಪಗಳೆರಡೂ ಕೂಡಿದಂತಿರುವನು.  ತನ್ನ ಭಕ್ತ ಹಾಗೂ ಬ್ರಹ್ಮದೇವರ ಮಾತುಗಳನ್ನು ಸತ್ಯಗೊಳಿಸುವುದಕ್ಕಾಗಿಯೂ ಮತ್ತು ತಾನು ಸಮಸ್ತಭೂತಗಳಲ್ಲಿಯೂ ವ್ಯಾಪ್ತನೆಂಬುದನ್ನು ಪ್ರಮಾಣೀಕರಿಸುವುದಕ್ಕಾಗಿಯೂ ಭಗವಂತನು ನರಸಿಂಹ ರೂಪದಲ್ಲಿ ಪ್ರಕಟಗೊಂಡಿರುವನು.  ರೌದ್ರತೆಯಿಂದ ಕೂಡಿದ್ದ ಭಗವಂತನ ರೂಪವು ಭಯ ಹುಟ್ಟಿಸುವಂತಿರುವುದು. ಹಿರಣ್ಯಕಶಿಪುವನ್ನು ಸಂಹರಿಸಿದ ಭಗವಂತನು ಶಾಂತನಾಗಬೇಕೆಂದು ಎಲ್ಲಾ ದೇವತೆಗಳೂ ಸ್ತುತಿಸಿ ಪಾಡುತ್ತಾರೆ.  ಪ್ರಹ್ಲಾದನೂ ಕೂಡ
ಬ್ರಹ್ಮಾದಯಃ ಸುರಗಣಾ ಮುನಯೋSಥ ಸಿದ್ಧಾಃ
ಸತ್ತ್ವೈಕತಾನಮತಯೋ ವಚಸಾಂ ಪ್ರವಾಹೈಃ |
ನಾರಾಧಿತುಂ ಪುರುಗುಣೈರಧುನಾಪಿ ಪಿಪ್ರುಃ
ಕಿಂ ತೋಷ್ಟುಮರ್ಹತಿ ಸ ಮೇ ಹರಿರುಗ್ರಜಾತೇಃ || -  ಸದಾ ಸತ್ವಗುಣವನ್ನೇ ಹೊಂದಿರುವ ಬ್ರಹ್ಮಾದಿದೇವತೆಗಳು, ಋಷಿ-ಮುನಿಗಳು, ಸಿದ್ಧಪುರುಷರುಗಳ ಸ್ತುತಿಯಿಂದಲೇ ಶಾಂತನಾಗದ ಭಗವಂತನನ್ನು ಅಸುರನಾದ ನಾನು ಸ್ತುತಿಸಿ ಹೇಗೆ ಸಂತೋಷಪಡಿಸಲಿ ಎನ್ನುತ್ತಾ ಅತಿಯಾದ ಪ್ರೇಮದಿಂದ, ಗದ್ಗದನಾಗಿ ಸ್ತುತಿಸಲು ಪ್ರಾರಂಭಿಸುತ್ತಾನೆ.  ನಾನಾ ವಿಧವಾಗಿ ಸ್ತುತಿಸುವ ಪ್ರಹ್ಲಾದನ ಪ್ರೇಮ-ಭಕ್ತಿಯಿಂದ ಸಂತುಷ್ಟನಾಗಿ, ಶಾಂತನಾಗುವ ನರಸಿಂಹನು "ಪ್ರಹ್ಲಾದ ಭದ್ರಂ ಭದ್ರಂ ತೇ ಪ್ರೀತೋSಹಂ ತೇSಸುರೋತ್ತಮ | ವರಂ ವೃಣೀಷ್ವಾಭಿಮತಂ ಕಾಮಪೂರೋSಸ್ಮ್ಯಹಂ ನೃಣಾಮ್ " - ಅಸುರೋತ್ತಮನೇ ನಿನಗೆ ಮಂಗಳವಾಗಲಿ, ಬೇಕಾದ ವರಗಳನ್ನು ಕೇಳಿಕೋ ಎಂದು ಪ್ರಸನ್ನನಾಗಿ ಅಭಯವೀಯುವನು.  ಪ್ರಹ್ಲಾದನು ತನಗೆ ಭಕ್ತಿಯೊಂದೇ ಬೇಕೆನ್ನುತ್ತಾ ತಾನು ನಾರದರು ಹೇಳಿಕೊಟ್ಟ
"ಓಂ ನಮೋ ಭಗವತೇ ತುಭ್ಯಂ ಪುರುಷಾಯ ಮಹಾತ್ಮನೇ | ಹರಯೇ ಅದ್ಭುತಸಿಂಹಾಯ ಬ್ರಹ್ಮಣೇ ಪರಮಾತ್ಮನೇ" - ಸರ್ವೋತ್ತಮನೂ, ಸರ್ವರಿಗೂ ಸ್ವಾಮಿಯೂ, ಅದ್ಭುತ ಸಿಂಹನೂ, ಪ್ರಣವ ಪ್ರತಿಪಾದ್ಯನೂ ಆದ ನಿನಗೆ ನಮಸ್ಕಾರಗಳು ಎಂದು ಸದಾ ಜಪಿಸುವೆನು ಎನ್ನುವನು.

ಶ್ರೀವಿಷ್ಣು ಸಹಸ್ರನಾಮದಲ್ಲಿ "ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ" - ಮೇಲ್ನೋಟಕ್ಕೆ ನರಸಿಂಹನಾಗಿ ಉದ್ಭವಿಸಿ ಹಿರಣ್ಯಕಶಿಪುವನ್ನು ಸಂಹರಿಸಿದ ಎಂಬ ಅರ್ಥವಿದ್ದರೂ, ’ನಾರಸಿಂಹವಪುಃ’ ಎನ್ನುವುದಕ್ಕೆ ವಿಶಿಷ್ಟವಾದ ಅರ್ಥಗಳೂ ಇವೆ.  ’ನಾರ’ ಎಂದರೆ ನರರಲ್ಲಿ ತುಂಬಿರುವ ಅಜ್ಞಾನ, ’ಸಿಂಹ’ ಎಂದರೆ ಸಿಮ್ಮತಿ ಅಥವಾ ನಿವಾರಿಸುವವನು, ’ವ’ ಎಂದರೆ ಜ್ಞಾನ, ’ಪುಃ’ ಎಂದರೆ ಕರುಣಿಸುವವನು ಎಂಬರ್ಥವಿದೆ.  ಆದ್ದರಿಂದ ’ನಾರಸಿಂಹವಪುಃ ಎಂದರೆ ನರರಲ್ಲಿ ತುಂಬಿರುವ ಅಜ್ಞಾನವನ್ನು ಅಳಿಸಿ, ಜ್ಞಾನದ ಬೀಜ ಬಿತ್ತುವವನು ಎಂದರ್ಥವಾಗುತ್ತದೆ.  ಹಾಗೂ ನಾರ (ನಾ+ಅರ) ಎಂದರೆ ದೋಷವಿಲ್ಲದವನು ಮತ್ತು ಸಿಂಹ ಎಂದರೆ ಭಯಂಕರವಾಗಿ ಸರ್ವ ದೋಷವನ್ನೂ ನಾಶಮಾಡುವವನು.  ಆದ್ದರಿಂದ ’ನಾರಸಿಂಹವಪುಃ’ ಎಂದರೆ ಸರ್ವ ದೋಷವನ್ನೂ ನಾಶಮಾಡಿಯೂ ಕೂಡ, ಯಾವುದೇ ದೋಷವಿಲ್ಲದೇ ಇರುವವನು.  ಪ್ರಳಯ ಕಾಲದಲ್ಲಿ ನರವಂಶವನ್ನು ನಾಶಮಾಡಿ, ಸೃಷ್ಟಿ ಕಾಲದಲ್ಲಿ ಪುನಃ ಬೀಜ ಬಿತ್ತಿ ಸೃಷ್ಟಿ ಮಾಡುವವನು.  ಮನುಕುಲದ ಸೃಷ್ಟಿ ಸಂಹಾರಕ್ಕೆ ಕಾರಣನಾದ ಭಗವಂತ ನಾರಸಿಂಹವಪುಃ ಎಂದರ್ಥವಾಗುತ್ತದೆ (ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರ).

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ನರಸಿಂಹಾವತಾರವನ್ನು "ದೇವ ನೃಸಿಂಹ ಹಿರಣ್ಯಕಶತ್ರೋ ಸರ್ವ ಭಯಾಂತಕ ದೈವತ ಬಂಧೋ" - ತನ್ನಲ್ಲೇ ರಮಿಸುತ್ತಿರುವ ಹಿರಣ್ಯಕಶಿಪು ಸಂಹಾರಕನಾದ ಸರ್ವ ಭಕ್ತರ ಭಯವನ್ನು ನಿರ್ಮೂಲಗೊಳಿಸುವ, ಇಂದ್ರಾದಿ ದೇವತೆಗಳಿಗೆ ಬಂಧುವಾದ, ನರಸಿಂಹ ಸ್ವಾಮಿಯೇ ನಿನಗೆ ನಮಸ್ಕ ರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಅತಿಬಲ ದಿತಿಸುತ ಹೃದಯ ವಿಭೇದನ ಜಯನೃಹರೇSಮಲ ಭವಮಮ ಶರಣಂ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಹಿರಣ್ಯಕಶಿಪು ಸಂಹಾರಕನಾದ, ನಿರ್ದೋಷನಾದ ನೃಸಿಂಹಸ್ವಾಮಿಯೇ ನೀನು ಸರ್ವೋತ್ಕೃಷ್ಟನಾಗಿರುವೆ.  ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದಿದ್ದಾರೆ.

ಶ್ರೀ ಶಂಕರಾಚಾರ್ಯರು ತಮ್ಮ ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನ ಸ್ತೋತ್ರಮ್ ನಲ್ಲಿ "ತ್ವತ್ಪ್ರಜೀವ-ಪ್ರಿಯಮಿಚ್ಛಸಿ ಚೇನ್ನರಹರಿ - ಪೂಜಾಂ ಕುರು ಸತತಂ" ಎನ್ನುತ್ತಾ ಮನೋರೂಪಿಯಾದ ಭ್ರಮರವೇ ಸಂಸಾರದ ಒಣ ಮರುಭೂಮಿಯಲ್ಲಿ ತಿರುಗುವುದು ಬಿಟ್ಟು ಧ್ಯೇಯವನ್ನು ಬಯಸುವಿಯಾದರೆ "ಭಜಭಜ ಲಕ್ಷ್ಮೀನರಸಿಂಹಾನಘ ಪದ-ಸರಸಿಜ ಮಕರಂದಮ್" - ಶ್ರೀ ಲಕ್ಷ್ಮೀನರಸಿಂಹನ ಸುಂದರ ಚರಣ ಕಮಲಗಳನ್ನು ಭಜಿಸು, ಮಕರಂದವನ್ನು ಸೇವಿಸು ಎನ್ನುತ್ತಾರೆ. 
ಶ್ರೀ ಲಕ್ಷ್ಮೀನೃಸಿಂಹ ಸ್ತೋತ್ರಮ್ ನಲ್ಲಿ  | ಶ್ರೀಮತ್ಪಯೋನಿಧಿ ನಿಕೇತನ ಚಕ್ರಪಾಣೇ | ಭೋಗೀಂದ್ರ ಭೋಗಮಣಿರಂಜಿತ ಪುಣ್ಯ ಮೂರ್ತೇ || ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿ ಪೋತ | ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ || - ಕ್ಷೀರಸಾಗರ ನಿವಾಸಿಯೇ, ಸುದರ್ಶನ ಚಕ್ರ ಧರಿಸಿರುವವನೇ, ಭೋಗಾಧಿಪತಿಯೇ, ಸರ್ಪರಾಜನ ಹೆಡೆಯಲ್ಲಿನ ರತ್ನದಿಂದ ಶೋಭಿಸುವವನೇ, ಪುಣ್ಯಮೂರ್ತಿಯೇ, ಯೋಗೀಶ್ವರನೇ, ನಿತ್ಯನೇ, ಸಂಸಾರವೆಂಬ ಸಾಗರದ ನೌಕೆಯಾಗಿರುವವನೇ, ಶ್ರೀ ಲಕ್ಷ್ಮೀನೃಸಿಂಹನೇ ನಿನ್ನ ಕೈಗಳ ಆಶ್ರಯವನ್ನು ಕೊಡು ಎನ್ನುತ್ತಾ ನಾನಾವಿಧವಾಗಿ ಸ್ತುತಿಸುತ್ತಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ
ದಂಭೋಲಿ ತೀಕ್ಷ್ಣನಖ ಸಂಭೇದಿತೇಂದ್ರರಿಪು  ಕುಂಭೀಂದ್ರ ಪಾಹಿ ಕೃಪಯಾ
ಸ್ತಂಭಾರ್ಭಕಾಸಹನ ಡಿಂಭಾಯ ದತ್ತವರ ಗಂಭೀರನಾದ ನೃಹರೇ |
ಅಂಭೋಧಿಜಾನುಸರಣಾಂಭೋಜಭೂ ಪವನ ಕುಂಭೀನಸೇಶ ಖಗರಾಟ್
ಕುಂಭೀಂದ್ರ ಕೃತ್ತಿಧರ ಜಂಭಾರಿ ಷಣ್ಮುಖ ಮುಖಾಂಭೊರುಹಾಭಿನುತ ಮಾಮ್ || - ತನ್ನ ಭಕ್ತನಾದ ಪ್ರಹ್ಲಾದನಿಗೆ ದೈತ್ಯನು ಕೊಡುವ ಉಪಟಳವನ್ನು ನೋಡಿ ಸಹಿಸಲಾರದೆ, ಕಂಭದಿಂದ ಉದ್ಭವಿಸಿ, ಗಂಭೀರವಾಗಿ ಗರ್ಜಿಸಿ, ತೀಕ್ಷ್ಣವಾದ ವಜ್ರಾಯುಧದಂತಿರುವ ತನ್ನ ಉಗುರುಗಳಿಂದಲೇ ಮದಗಜದಂತೆ ಮಹಾಪರಾಕ್ರಮಿಯಾದ ಹಿರಣ್ಯಕಶಿಪುವನ್ನು ಸೀಳಿ, ಭಕ್ತ ಪ್ರಹ್ಲಾದನಿಗೆ ವರಗಳನ್ನು ಕರುಣಿಸಿ, ಬ್ರಹ್ಮ ರುದ್ರೇಂದ್ರಾದಿ ಸಕಲ ದೇವತೆಗಳಿಂದಲೂ ಸ್ತುತ್ಯನಾದ ಮಹಾಲಕ್ಷ್ಮೀ ಸಹಿತನಾದ ಶ್ರೀ ನರಸಿಂಹ ಸ್ವಾಮಿಯೇ ನನ್ನನ್ನು ಸರ್ವ ಆಪತ್ತುಗಳಿಂದಲೂ ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ನರಸಿಂಹಾವತಾರವನ್ನು
ತವ ಕರಕಮಲವರೇ  ನಖಮದ್ಭುತಶೃಂಗಂ
ದಲಿತಹಿರಣ್ಯಕಶಿಪು ತನುಭೃಂಗಂ
ಕೇಶವ ಧೃತನರಹರಿರೂಪ ಜಯ ಜಗದೀಶ ಹರೇ || - ನಿನ್ನ ತಾವರೆಯಂತಹ ಕರದಲ್ಲಿರುವ ಬೆಟ್ಟದಂತೆ ಅದ್ಭುತವಾದ ಉಗುರುಗಳಿಂದ ದೈತ್ಯ ಹಿರಣ್ಯಕಶಿಪುನಿನ ದೇಹವನ್ನು ನಾಶಗೊಳಿಸಿದ ನರಹರಿ ರೂಪದ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಶ್ರೀ ಪುರಂದರದಾಸರು ತಮ್ಮ "ಅಚ್ಯುತಾನಂತ ಗೋವಿಂದ" ಎಂದ ಕೃತಿಯಲ್ಲಿ
ನರಸಿಂಹರೂಪವ ತಾಳಿ - ಬಂದೆ | ಕರೆಯೆ ಕಂಭದಿ ಕಂದನ ಮಾತಕೇಳಿ ||
ದುರುಳ ರಕ್ಕಸನನು ಸೀಳಿ - ನಿನ್ನ | ಕೊರಳಲಿ ಧರಿಸಿದೆ ಕರುಳಿನ ಮಾಲಿ || - ಎಂದೂ
"ಮಹದಾದಿ ದೇವ ನಮೋ ಮಹದಾದಿ ದೇವ ನಮೋ | ಮಹಾಮಹಿಮನೆ ನಮೋ | ಪ್ರಹ್ಲಾದವರದ ಅಹೋಬಲ ನಾರಸಿಂಹ"... ಎಂಬ ಕೃತಿಯಲ್ಲಿ ಭಗವಂತನು ನರಸಿಂಹ ರೂಪವ ಧರಿಸಿ ಉದ್ಭವಿಸಿದಾಗ "ತುರುಗಿರಗಳಲ್ಲಾಡೆ ಶರಧಿಗಳು ಕುದಿದುಕ್ಕೆ | ಉರಿಯನುಗುಳುತ ಉದ್ಭವಿಸಿದೆ ನರಸಿಂಹ" - ಸಿಡಿಲಿನಂತೆ ಗರ್ಜಿಸುತ್ತಾ ರಕ್ಕಸನ ಸಂಹಾರಕ್ಕೆ ಬೆಂಕಿಯನ್ನುಗುಳುತ್ತಾ ಪ್ರತ್ಯಕ್ಷವಾದಾಗ ಸಾಗರಗಳು ಕುದಿದು ಉಕ್ಕಿದವು ಎನ್ನುತ್ತಾ ಗಂಭೀರವಾಗಿ, ಭಯ ಭಕ್ತಿಯಿಂದ ವಿವರಿಸುತ್ತಾರೆ.

ಶ್ರೀ ವಿಜಯದಾಸರು ತಮ್ಮ  "ವೀರ ಸಿಂಹನೆ ನಾರ ಸಿಂಹನೆ.." ಎಂಬ ಸುಳಾದಿಯಲ್ಲಿ ನರಸಿಂಹರೂಪಿ ಭಗವಂತನ ರೌದ್ರ ರೂಪವನ್ನು ವರ್ಣಿಸುತ್ತಾ ಭೂಮಂಡಲದಲ್ಲೆಲ್ಲಾ ಸೃಷ್ತಿಯಾದ ಅಲ್ಲೋಲ ಕಲ್ಲೋಲಗಳನ್ನು ತಿಳಿಸುತ್ತಾರೆ.  ಕೋಟಿ ಸಿಡಿಲು ಗಿರಿಗೆ ಬಡಿದಂತೆ ನರಪಂಚಾನನು ಕಂಭದಿಂದ ಪ್ರಾದುರ್ಭವಿಸಿದನೆಂದು ವರ್ಣಿಸುತ್ತಾರೆ.

ಮಾನವನ ವಿಕಾಸಕ್ಕೆ ಭಗವಂತನ ನರಸಿಂಹಾವತಾರವನ್ನು ಸಮನ್ವಯಿಸಿದರೆ ನರಸಿಂಹನು ಹಿರಣ್ಯಕಶಿಪುವಿಗೆ ಉಗ್ರವಾದ ಸಿಂಹನಾದರೆ ಪ್ರಹ್ಲಾದನಿಗೆ ಮನುಷ್ಯ ಹೃದಯದ ಮೃದು ಭಾವವಾಯಿತು.  ಇದು ಶ್ರೀಹರಿಯ ಪರಮ ಕಾರುಣ್ಯ ಹಾಗೂ ಭಕ್ತಪರಾಧೀನತೆಯ ಪ್ರತೀಕವೆನ್ನಬಹುದು.  ಹಿರಣ್ಯಕಶಿಪುವು ತನ್ನ ತಂದೆಯಾದರೂ ಪ್ರಹ್ಲಾದನು ಅವನನ್ನು ತೊರೆದು ಹರಿ ಭಕ್ತಿಯನ್ನು ಅಪ್ಪಿಕೊಂಡನಾದ್ದರಿಂದ ಪುಟ್ಟ ಬಾಲಕನಿಗೆ ಭಗವಂತನ ನರಸಿಂಹರೂಪದ ದರ್ಶನವಾಯಿತು.  ನಾವು ಕೂಡ ಹಿರಣ್ಯಕಶಿಪುಗಳಾದ ಅರಿಶಡ್ವರ್ಗಗಳ ಬೆನ್ನು ಹತ್ತುವುದನ್ನು ಬಿಟ್ಟರೆ, ಶ್ರೀಹರಿಯ ಕರುಣೆಯನ್ನು ಪಡೆಯಬಹುದು ಎಂಬುದಕ್ಕೆ  ಇದು ನಿದರ್ಶನವಾಗುತ್ತದೆ.  ಪ್ರಾಣಿಗಳಲ್ಲಿ ಸಿಂಹ ಅತಿ ಶಕ್ತಿಶಾಲಿ ಪ್ರಾಣಿಯಾದ್ದರಿಂದ ಭಗವಂತನೂ ಸರ್ವ ಶ್ರೇಷ್ಠನಾದವನು.  ನರಸಿಂಹ ರೂಪದ ಉಪಾಸನೆಯನ್ನು ಮಾಡುವ ಸಾಧಕರಿಗೆ ಬರುವ ವಿಘ್ನಗಳೆಲ್ಲವೂ ಹಿರಣ್ಯಕಶಿಪುವಿನಂತೆ ಸಂಹಾರಗೊಂಡು, ಸಾಧನೆಯ ಹಾದಿ ಸುಗಮವಾಗುವುದೆಂಬುದೂ ಕೂಡ ನಂಬಿಕೆಯಾಗಿದೆ.  ತನ್ನ ಭಕ್ತರಾದವರನ್ನು ಭಗವಂತ ರಕ್ಷಿಸಿಯೇ ರಕ್ಷಿಸುತ್ತಾನೆಂಬುದು ಕೂಡ ಸಾಬೀತಾಗುತ್ತದೆ.  ಏಕೆಂದರೆ ಹಿರಣ್ಯಕಶಿಪುವಿನೊಳಗಿದ್ದವನು ಶ್ರೀಹರಿಯ ದ್ವಾರಪಾಲಕರಲ್ಲಿ ಒಬ್ಬನಾದ ಜಯನೆಂಬುವನು.  ನೋಡಲು ಅತ್ಯಂತ ಭೀಕರವಾದ ರೂಪವನ್ನು ಧರಿಸಿ ಬಂದಿದ್ದರೂ ಕೂಡ ಅದು ಭಗವಂತನ ಕಾರುಣ್ಯವೇ ಆಗಿದೆ.  ಏಕೆಂದರೆ ತನ್ನ ಪ್ರಿಯ ಭಕ್ತನಾದ ಜಯನನ್ನು ಉದ್ಧರಿಸುವುದಕ್ಕಾಗಿ ದೈತ್ಯನ ಕರಾರುಗಳಿಗೆಲ್ಲಾ ಹೊಂದುವಂತೆ ಭಗವಂತನು ವಿಶೇಷವಾದ ರೂಪವನ್ನು ಧರಿಸಿ ತನ್ನ ಭಕ್ತನಿಗೆ ಶಾಪವಿಮೋಚನೆ ಮಾಡಿ ಮುಕ್ತಿ ಕೊಡುವುದಕ್ಕಾಗಿಯೇ ಬರುವನು.   ನೋಡುವವರಿಗೆ ಹೊರನೋಟಕ್ಕೆ ಇದು ಉಗ್ರನರಸಿಂಹನ ರೌದ್ರತೆಯೆಂದು ತೋರಿದರೂ, ತನ್ನ ಭಕ್ತನಾದ ಜಯನನ್ನು ಭಗವಂತ ತನ್ನ ತೊಡೆಯ ಮೇಲೆ ಹಾಕಿಕೊಂಡು ಕರುಳು ಬಗೆದು, ದೈತ್ಯನ ಪಾಪ ಕರ್ಮಗಳನ್ನೆಲ್ಲಾ ಕ್ಷಮಿಸಿ ಉದ್ಧರಿಸುವನು.  ಇದು ಎಲ್ಲಾ ತಪ್ಪುಗಳನ್ನೂ ಮನ್ನಿಸಿ, ಮಗುವನ್ನು ಎದೆಗವಚಿಕೊಳ್ಳುವ ತಾಯಿ ವಾತ್ಸಲ್ಯವನ್ನು ತೋರುತ್ತದೆ.  ಸಾಧಕನು ತನ್ನೆಲ್ಲಾ ಅಹಂಕಾರ ಮಮಕಾರಗಳನ್ನು ಬಿಟ್ಟು ಭಗವಂತನನಿಗೆ ಶರಣಾಗತನಾದರೆ, ಕ್ಷಮಿಸಿ, ಮುದ್ದಿಸಿ ಉದ್ಧರಿಸುತ ತಾಯಿಯೇ ಆಗುವನು.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ  ನಾಲಿಗೆಯಲ್ಲಿ ನರಸಿಂಹರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ನರಸಿಂಹರೂಪವೆತ್ತಿದಾಗ ರಮಾದೇವಿಯು ಮಹಾಲಕ್ಷ್ಮೀದೇವಿಯಾಗಿರುತ್ತಾಳೆ ಎಂದಿದ್ದಾರೆ.

ಶ್ರೀಜಗನ್ನಾಥದಾಸರು ನರಸಿಂಹ ರೂಪಿ ಭಗವಂತನು ಕೈವಲ್ಯದಾಯಕನು, ಎಲ್ಲಾ ದುಷ್ಟ ಶಕ್ತಿಗಳಿಂದಲೂ ರಕ್ಷಿಸುವವನು, ದುರ್ಜನ ಕುಲವೈರಿಯೆಂದು ತಮ್ಮ ಸುಳಾದಿ "ದುರಿತವನ ಕುಠಾರಿ ದುರ್ಜನ ಕುಲ ವೈರಿ ಶರಣಾಗತ ವಜ್ರ ಪಂಜರ ಕುಂಜರ" ಎನ್ನುತ್ತಾ ಶರಣಾಗತರನ್ನು ವಜ್ರದಂತಹ ಪಂಜರವನ್ನು ನಿರ್ಮಿಸಿ ಕಾಪಾಡುವವನು ಎಂದು ಸ್ತುತಿಸಿದ್ದಾರೆ.  ತಮ್ಮ ತತ್ವಸುವ್ವಾಲಿಯಲ್ಲಿ

ಕಂದ ಕರೆಯಲು ಕಂಭದಿಂದುದಿಸಿ ರಕ್ಷಿಸಿದಿ
ವಂದಿಸಿದ ಸುರರ ಸಲಹಿದಿ | ಸಲಹಿದಿ ನರಸಿಂಹ
ತಂದೆ ನೀನೆಮಗೆ ದಯವಾಗೋ || - ಕಂದನಾದ ಪ್ರಹ್ಲಾದನು ಕರೆಯಲು ಕಂಭದಿಂದ ಉದ್ಭವಿಸಿ ಕಾಪಾಡಿದೆ. ವಂದಿಸಿದ, ಪ್ರಾರ್ಥಿಸಿದಿ ದೇವಾನುದೇವತೆಗಳನ್ನು ರಕ್ಷಿಸಿದ ಜಗಜ್ಜನಕನಾದ ತಂದೆಯೇ ನಮ್ಮ ಮೇಲೆ ದಯೆತೋರು ಎಂದು ಪ್ರಾರ್ಥಿಸಿದ್ದಾರೆ.

ಶ್ರೀ ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ "ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ.... ಪ್ರೇಮಘೋರಗಳೊಂದೆ" - ಸರ್ವರನ್ನೂ ರಕ್ಷಿಸುವ ಭಗವಂತನು ತನ್ನನ್ನು ಪ್ರೇಮದಿಂದ, ಭಕ್ತಿಯಿಂದ ಸೇವಿಸುವ ಗೋಪಿಕೆಯರಿಗೆ ಶ್ಯಾಮಸುಂದರನಾದ ನಾರಾಯಣನಾಗಿ ಕಮನೀಯ ಸ್ವರೂಪನಾಗಿ ಕಾಣುವನು.  ದುಷ್ಟರನ್ನು ಶಿಕ್ಷಿಸಲು ಭಗವಂತನೇ ಶಿಶುಪಾಲನಿಗೆ ಚಕ್ರಧಾರಿಯಾಗಿಯೂ, ಹಿರಣ್ಯಕಶಿಪುವಿಗೆ ನರಸಿಂಹನಾಗಿಯೂ ಅವತರಿಸಿ ಮೃತ್ಯುವಾಗುತ್ತಾನೆ ಎಂದಿದ್ದಾರೆ.

ಚಿತ್ರಕೃಪೆ : ಅಂತರ್ಜಾಲ

 ಆಂಧ್ರಪ್ರದೇಶದ ’ಅಹೋಬಿಲ" ನರಸಿಂಹ ದೇವಸ್ಥಾನದ ಚಿತ್ರಗಳು, ಕೊಂಡಿ - https://www.google.co.in/search?q=Ahobila+Narasimha+temple&tbm=isch&tbo=u&source=univ&sa=X&ei=7eliVbT8AtfluQSiy4KYCA&ved=0CCoQsAQ&biw=1146&bih=692


 http://www.ahobilamutt.org/us/information/visitingahobilam.asp

Saturday, May 2, 2015

ಕರುಣಾ ಸಂಧಿ - ೩೦ ನೇ ಪದ್ಯ (ವರಾಹಾವತಾರ)




 ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


ವರಾಹ - ವರಾಹಾವತಾರ : ಭಗವಂತನ ಅಸಂಖ್ಯಾತ ಅವತಾರಗಳಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟಿರುವ ದಶಾವತಾರಗಳಲ್ಲಿ ಮೂರನೆಯ ಅವತಾರವಾಗಿ ವರಾಹಾವತಾರವಾಯಿತು.    ಭಾಗವತ ಎರಡನೆಯ ಸ್ಕಂಧ ಏಳನೆಯ ಅಧ್ಯಾಯದಲ್ಲಿ ಶ್ವೇತವರಾಹ ಕಲ್ಪದಲ್ಲಿ ಮೊದಲು ಭಗವಂತನ ವರಾಹಾವತಾರವಾಯಿತು ಎಂಬ ಉಲ್ಲೇಖವಿದೆ.  ಅಪ್ರಾಕೃತ ದೇಹದಿಂದಲೇ ಯಾಗಕ್ಕೆ ಬೇಕಾದ ಸರ್ವ ಸಾಮಗ್ರಿಗಳನ್ನು ಸೃಷ್ಟಿ ಮಾಡಿ ’ಯಜ್ಞವರಾಹ’ನೆಂದು ಪ್ರಸಿದ್ಧನಾದನು.  ತಾನಾಗಿಯೇ ಮುಳುಗಿ ಹೋಗಿದ್ದ ಭೂಮಿಯನ್ನು ಶ್ವೇತವರಾಹ ಸ್ವಾಮಿಯು ರಸಾತಳದಿಂದ ಕೋರೆದಾಡಿಯ ಕೊನೆಯಲ್ಲಿಟ್ಟುಕೊಂಡು ಮೇಲಕ್ಕೆ ತರುವಾಗ ಆದಿದೈತ್ಯ ಹಿರಣ್ಯಾಕ್ಷನು ತಡೆದಾಗ ಸ್ವಾಮಿಯು ಗದೆಯಿಂದ ಹಿರಣ್ಯಾಕ್ಷನ ದೇಹವನ್ನು ಸೀಳಿ  ಸಂಹರಿಸಿದನೆಂಬ ವಿವರಣೆ ಇದೆ.

ಶ್ರೀವಿಷ್ಣು ಪುರಾಣಮ್ ವರಾಹಾವತಾರವನ್ನು ವರಾಹ ರೂಪವು ದೇವಯಜ್ಞಮಯವಾದದ್ದು ಎಂದು ಸ್ತುತಿಸಲಾಗಿದೆ.  ನೀರಿನಲ್ಲಿ ಮುಳುಗಿದ್ದ ಪೃಥಿವಿಯನ್ನು ಎತ್ತಿ ತರಬೇಕೆಂಬ ಉದ್ದೇಶದಿಂದ ಜನಲೋಕದಲ್ಲಿದ್ದ ಸನಕಾದಿ ಸಿದ್ಧಪುರುಷರಿಂದ ಸ್ತುತಿಸಲ್ಪಡುತ್ತಿದ್ದಾಗ, ನೀರಿನೊಳಗೆ ಪ್ರವೇಶವಾಯಿತು.  ಪಾತಾಳಕ್ಕೆ ಬಂದ ವರಾಹ ರೂಪಿ ಭಗವಂತನನ್ನು ಕಂಡು ಭೂದೇವಿಯು ಅನೇಕ ವಿಧವಾಗಿ ಸ್ತುತಿಸುತ್ತಾ, ನೀನೇ ನನಗೆ ಆಧಾರನೆಂದು ಮೊರೆಯಿಡುತ್ತಾ ನಮಸ್ಕರಿಸುವಳು.  ಪೃಥಿವಿಯ ಸ್ತುತಿಯಿಂದ ಸಂತುಷ್ಟನಾದ ವರಾಹವು ಸಾಮಗಾನದ ಧ್ವನಿಯಲ್ಲಿ ಗರ್ಜಿಸುತ್ತಾ, ತನ್ನ ಕೋರೆದಾಡಿಯಿಂದ ಭೂಮಿಯನ್ನೆತ್ತಿಕೊಂಡು ದೊಡ್ಡ ನೀಲಾಚಲದಂತೆ ರಸಾತಳದಿಂದ ಮೇಲೆದ್ದಿತು.  ಜಲದಿಂದ ಮೇಲೇಳುವಾಗ ವರಾಹದ ಬಾಯಿಯಿಂದ ಬಿರುಗಾಳಿ ಎದ್ದು ಸಮುದ್ರದ ನೀರು, ಉಕ್ಕಿ ಪುಟಿದು ಜನಲೋಕದಲ್ಲಿ ಆಶ್ರಯ ಪಡೆದಿದ್ದ ಸನಂದನಾದಿ ತೇಜಸ್ವಿ ಮುನಿಗಳನ್ನು ತೊಳೆಯುತ್ತದೆ.  ವರಾಹದ ಹೊಟ್ಟೆಯು ನೀರಿನಿಂದ ಒದ್ದೆಯಾಗಿ, ಅದು ತನ್ನ ವೇದೋಮಯ ಶರೀರವನ್ನು ಕೊಡಹುವುದು.  ರೋಮ ರೋಮಗಳಲ್ಲಿ ಆಶ್ರಯ ಪಡೆದಿದ್ದ ಮುನಿಗಳು ಭಯದಿಂದ ನಿರಂತರ ಸ್ತೋತ್ರ ಮಾಡುತ್ತಾರೆ.  ಸಕಲ ದೇವಾದಿದೇವತೆಗಳೂ, ಜನಲೋಕದ ಸಮಸ್ತ ಯೋಗಿಗಳೂ ವರಾಹಾವತಾರವನ್ನು ಯಜ್ಞಪುರುಷನೆಂದೂ, ಪಾದಗಳು ನಾಲ್ಕು ವೇದಗಳೆಂದೂ, ಕೋರೆದಾಡಿಯೇ ಯೂಪವೆಂದೂ, ಹಲ್ಲುಗಳೇ ಯಜ್ಞಗಳೆಂದೂ, ಮುಖವೇ ಹೋಮಕುಂಡವೆಂದೂ, ನಾಲಿಗೆಯೇ ಅಗ್ನಿಯೆಂದೂ, ರೋಮಗಳೇ ದರ್ಭೆಗಳೆಂದೂ ಪರಮಪುರುಷನ ಅವಯವಗಳನ್ನು ಸ್ತುತಿಸುತ್ತಾ ನಮಿಸುತ್ತಾರೆ.  ವರಾಹರೂಪಿ ಭಗವಂತನು ಪೃಥಿವಿಯನ್ನು ಜಲರಾಶಿಯ ಮೇಲೆ ಸ್ಥಾಪಿಸಿ, ಭೂಮಿಯ ಮೇಲ್ಮೈಯನ್ನು ಸಮವಾಗಿ ಮಾಡಿ, ಪರ್ವತಗಳನ್ನು ವಿಭಾಗ ಮಾಡಿ ಸ್ಥಾಪಿಸುವನು.  ಸಪ್ತದ್ವೀಪಗಳಾಗಿ ವಿಂಗಡಿಸಲ್ಪಟ್ಟು, ಭೂಃ ಭುವಃ ಸುವಃ ಮಹಃ ಎಂಬ ನಾಲ್ಕು ಲೋಕಗಳು ನಿರ್ಮಾಣವಾಯಿತೆಂದು ಸುಂದರವಾಗಿ ವರ್ಣಿಸಲ್ಪಟ್ಟಿದೆ.

ಪದ್ಮ ಮಹಾಪುರಾಣದಲ್ಲಿ ವರಾಹಾವತಾರವು ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ.  ಭಗವಂತನು ವಿಚಿತ್ರವಾದ ವಿಶ್ವರೂಪಿ ವರಾಹ ಅವತಾರವನ್ನು ಧರಿಸಿದನೆಂಬ ಉಲ್ಲೇಖವಿದೆ.  ವರಾಹದ ಮೂಲ ಎಲ್ಲಿದೆಯೆಂಬುದೇ ತಿಳಿಯದಂತೆ, ಮಧ್ಯವು ಗೋಚರಿಸದೆ, ತುದಿಯಂತೂ ಇಲ್ಲದಂತಹ ವ್ಯಾಪ್ತತೆಯಿರುತ್ತದೆ.  ಮೈ ತುಂಬ ಕಣ್ಣು, ನೋಡಿದಲ್ಲೆಲ್ಲ ಕೈ, ಎಲ್ಲ ಕಡೆಗೂ ಕಾಲು, ಅತೀ ಉದ್ದವಾದ ಕೋರೆದಾಡಿಯನ್ನು ಹೊಂದಿತ್ತೆಂಬ ವಿವರಣೆ ಸಿಕ್ಕುತ್ತದೆ.  ನಾಲ್ಕು ವೇದಗಳು, ಆರು ವೇದಾಂಗಗಳನ್ನು ದೇಹವಾಗಿ ಹೊಂದಿದ್ದ ಯಜ್ಞ ವರಾಹ ರೂಪಿಯನ್ನು ದೇವತೆಗಳು "ನಮೋ ಯಜ್ಞ ವರಾಹಾಯ ಕೃಷ್ಣಾಯ ಶತಬಾಹವೇ | ನಮಸ್ತೇ ವೇದವೇದಾಂಗ ತನವೇ ವಿಶ್ವರೂಪಿಣೇ" ಎಂದು ಸ್ತುತಿಸುತ್ತಾರೆ.



ಭಾಗವತ ಎರಡನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ವರಾಹಾವತಾರವನ್ನು
ಯತ್ರೋದ್ಯತಃ ಕ್ಷಿತಿತಲೋದ್ಧರಣಾಯ ಬಿಭ್ರ-
ತ್ಕ್ರೌಡೀಂ ತನುಂ ಸಕಲ ಯಜ್ಞಮಯೀಮನನ್ತಃ |
ಅನ್ತರ್ಮಹಾರ್ಣವ ಉಪಾಗತಮಾದಿದೈತ್ಯಂ
ತಂ ದಂಷ್ಟ್ರಯಾದ್ರಿಮಿವ ವಜ್ರಧರೋ ದದಾರ || - ಪ್ರಳಯ ಜಲದಲ್ಲಿ ಮುಳುಗಿದ್ದ ಭೂಮಿಯನ್ನು ಉದ್ಧರಿಸುವುದಕ್ಕೋಸ್ಕರ ಅನಂತನಾದ ಶ್ರೀಭಗವಂತನು ಸಮಸ್ತ ಯಜ್ಞಮಯವಾದ ವರಾಹ ದೇಹವನ್ನು ಕೈಗೊಂಡನು.  ಆ ಅವತಾರದಲ್ಲಿ ಆತನು ಮಹಾ ಸಮುದ್ರದೊಳಗಡೆಯೇ ತನ್ನನ್ನು ಎದುರಿಸಲು ಬಂದ ಆದಿದೈತ್ಯನಾದ ಹಿರಣ್ಯಾಕ್ಷನನ್ನು - ಇಂದ್ರನು ವಜ್ರಾಯುಧದಿಂದ ಪರ್ವತವನ್ನು ಭೇದಿಸಿದಂತೆ - ತನ್ನ ಕೋರೆದಾಡೆಯಿಂದ ಸೀಳಿಹಾಕಿದನು ಎಂದು ವರ್ಣಿಸಲ್ಪಟ್ಟಿದೆ.

ಭಾಗವತ ಮೂರನೆಯ ಸ್ಕಂಧ, ಹದಿಮೂರನೆಯ ಅಧ್ಯಾಯದಲ್ಲಿ ಸ್ವಾಯಂಭುವ ಮನುವು ಭೂಮಿಯು ದಿನ ಪ್ರಳಯದ ನೀರಿನಲ್ಲಿ ಮುಳುಗಿರುವುದರಿಂದ ಪ್ರಜೆಗಳ ವಾಸಕ್ಕೆ ಸ್ಥಳವಿಲ್ಲವಾಗಿದೆ, ಭೂಮಿಯನ್ನು ನೀರಿನಿಂದ ಮೇಲಕ್ಕೆ ತರಬೇಕೆಂದು ಕೇಳಿಕೊಳ್ಳುತ್ತಾರೆ.  ಬ್ರಹ್ಮದೇವರು ಶ್ರೀಮನ್ನಾರಾಯಣನೇ ಭೂಮಿಯನ್ನು ಮೇಲಕ್ಕೆ ತರಬೇಕೆಂದು, ಭಗವಂತನನ್ನು ಧ್ಯಾನಿಸುತ್ತಾರೆ.  ಧ್ಯಾನದ ಸಮಯದಲ್ಲಿಯೇ ಬ್ರಹ್ಮದೇವರ ಮೂಗಿನ ಹೊಳ್ಳೆಯಿಂದ ಅಂಗುಷ್ಠ ಗಾತ್ರದ ವರಾಹವು ಹೊರಗೆ ಬಂದು ಕೂಡಲೇ ಬೃಹದಾಕಾರವಾಗಿ ಬೆಳೆಯಿತು.  ಇದು ಭಗವಂತನದ್ದೇ ಲೀಲೆಯೆಂದು ಬ್ರಹ್ಮದೇವರು ಮತ್ತು ಸ್ವಾಯಂಭುವ ಮನುವು ಯೋಚಿಸುತ್ತಿರಲು ವರಾಹವು ಒಮ್ಮೆ ಗರ್ಜಿಸಿ, ದೇವತೆಗಳೆಲ್ಲರನ್ನೂ ಸಂತೋಷಪಡಿಸುತ್ತದೆ.  ಸಮಸ್ತರೂ ವರಾಹರೂಪಿ ಭಗವಂತನನ್ನು ವೇದಗಳಿಂದ ಸ್ತುತಿಸುತ್ತಿರಲು, ವರಾಹವು ತನ್ನ ಬಾಲವನ್ನು ಮೇಲಕ್ಕೆತ್ತಿಕೊಂಡು, ನೀರೊಳಗೆ ಹೋಗಿ ರಸಾತಳದಲ್ಲಿ ಸೆರೆಸಿಕ್ಕಿದ್ದ ಭೂಮಿಯನ್ನು ಮೇಲಕ್ಕೆ ತರುತ್ತಿರಲು, ಬ್ರಹ್ಮದೇವರಿಂದ ಹುಟ್ಟಿದ್ದ ಆದಿ ಹಿರಣ್ಯಾಕ್ಷನೆಂಬ ದೈತ್ಯನು ಗದಾಪಾಣಿಯಾಗಿ ಭಗವಂತನನ್ನು ಅಡ್ಡಗಟ್ಟುತ್ತಾನೆ.  ವರಾಹದೇವನು ತನ್ನ ದಾಡೆಯಿಂದ ಅವನನ್ನು ಕೊಂದು ಭೂಮಿಯೊಡನೆ ಮೇಲಕ್ಕೆ ಬರುತ್ತಾನೆ.    ತಾನಾಗಿಯೇ ದಿನಪ್ರಳಯ ಜಲದಲ್ಲಿ ಮುಳುಗಿದ್ದ ಭೂಮಿಯನ್ನು ತರುವಾಗ ಅಡ್ಡಬಂದ ಆದಿಹಿರಣ್ಯಾಕ್ಷನನ್ನು ಭಗವಂತನು ಶ್ವೇತವರಾಹ ರೂಪದಲ್ಲಿ, ದಾಡೆಯಿಂದ ಸಂಹರಿಸುತ್ತಾನೆ.    ಏಳನೆಯ ಮನ್ವಂತರದಲ್ಲಿ ಕಶ್ಯಪ-ದಿತಿಯ ಮಗನಾಗಿ ಹುಟ್ಟಿದ್ದ ಹಿರಣ್ಯಾಕ್ಷನು ಭೂಮಿಯನ್ನು ಅಪಹರಿಸಿ, ನೀರಿನಲ್ಲಿ ಮುಳುಗಿದ್ದಾಗ ಭಗವಂತನು ನೀಲವರಾಹ ರೂಪದಿಂದ ಅವತರಿಸಿ, ಹಿರಣ್ಯಾಕ್ಷನ ಕಿವಿಯ ಬುಡದಲ್ಲಿ ಹಸ್ತದಿಂದಲೇ ಹೊಡೆದು ಕೊಲ್ಲುತ್ತಾನೆ.  ಹೀಗೆ ಭಗವಂತನು ಒಂದು ಬಾರಿ ’ಶ್ವೇತವರಾಹ’ನಾಗಿಯೂ ಮತ್ತೊಂದು ಬಾರಿ ’ನೀಲವರಾಹ’ನಾಗಿಯೂ ಅವತರಿಸುತ್ತಾನೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ವರಾಹಾವತಾರವನ್ನು "ಸೂಕರ ರೂಪಕ ದಾನವಶತ್ರೋ ಭೂಮಿವಿಧಾರಕ ಯಜ್ಞವರಾಂಗ" - ರಾಕ್ಷಸ ಸಂಹಾರಿಯೂ, ಭೂಮಿಯನ್ನು ಧರಿಸಿರುವವನೂ, ಬ್ರಹ್ಮಾದಿ ದೇವತೆಗಳನ್ನು ತನ್ನ ಶರೀರದಲ್ಲೇ ಧರಿಸಿರುವ ವರಾಹಾವತಾರಿಯಾದ ಶ್ರೀಮಹಾವಿಷ್ಣುವೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಸಗಿರಿವರಧರಾತಲವಹ ಸುಸೂಕರ ಪರಮ ವಿಬೋಧ ಹೇ ಭವ ಮಮ ಶರಣಮ್ |
ಶುಭತಮ ಕಥಾಶಯ ಪರಮಸದೋದಿತ ಜಗದೇಕ ಕಾರಣ ರಾಮರಮಾರಮಣ || -  ವರಾಹರೂಪಿಯಾಗಿ ಭೂಮಿಯನ್ನುದ್ಧರಿಸಿದ, ಪೂರ್ಣಜ್ಞಾನ ರೂಪಿಯಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ವರಾಹಾವತಾರವನ್ನು
ನೀಲಾಂಬುದಾಭ ಶುಭ ಶೀಲಾದ್ರಿ ದೇಹಧರ ಖೇಲಾಹೃತೋದಧಿಧುನೀ
ಶೈಲಾದಿಯುಕ್ತ ನಿಖಿಲೇಲಾಕಟಾದ್ಯಸುರ ತೂಲಾಟವೀ ದಹನ ತೇ |
ಕೋಲಾಕೃತೇ ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರ ಧರಣೀ
ಲೀಲಾಸ್ಪದೋರುತಲ ಮೂಲಾಶಿಯೋಗಿವರ ಜಾಲಾಭಿ ವಂದಿತ ನಮಃ || - ನೀಲಮೇಘಶ್ಯಾಮನಾದ, ಸಜ್ಜನರಿಗೆ ಇಷ್ಟಾರ್ಥಪ್ರದನಾದ, ಪರ್ವತ ಸಮಾನ ದೇಹಧಾರಿಯಾದ, ಅಸುರನಿಂದ ಅಪಹರಿಸಲ್ಪಟ್ಟ ಭೂಮಿಯನ್ನು ಉದ್ಧರಿಸಲಿಕ್ಕಾಗಿ ಆದಿದೈತ್ಯ ಹಿರಣ್ಯಾಕ್ಷನನ್ನು ಸಂಹರಿಸಿ, ನೀಲಕಮಲದಂತೆ ಭೂಮಿಯನ್ನು ಎತ್ತಿ ದಾಡೆಯಲ್ಲಿಟ್ಟುಕೊಂಡು ಸಮುದ್ರ ಜಲದಲ್ಲಿ ಕ್ರೀಡಾರ್ಥವಾಗಿ ವಿಹರಿಸಿದ, ಭೂಮಿದೇವಿಯನ್ನು ಮಡಿಲಲ್ಲಿರಿಸಿಕೊಂಡು ರಮಿಸಿದ, ಮಹಾಯೋಗಿಗಳಿಂದ ಸದಾ ಧ್ಯಾನಿಸಲ್ಫಡುತ್ತಿರುವ, ಭೂವರಾಹರೂಪಿಯಾದ ಶ್ರೀ ಮಹಾವಿಷ್ಣುವೇ ನಿನಗೆ ಅನಂತ ನಮಸ್ಕಾರಗಳು ಎಂದು ಸ್ತುತಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ವರಾಹಾವತಾರವನ್ನು
ವಸತಿ ದಶನಶಿಖರೇ ಧರಣೀ ತವ ಲಗ್ನಾ
ಶಶಿನಿ ಕಲಂಕಕತ್ರೇವ ನಿಮಗ್ನಾ
ಕೇಶವ ಧೃತಶೂಕರರೂಪ ಜಯ ಜಗದೀಶ ಹರೇ || - ವಿಸ್ತಾರವಾದ ಧರಣಿಯನ್ನು ನಿನ್ನ ಶಿರೋ ಭಾಗದಲ್ಲಿ ಹೊತ್ತಿರುವ ಸೂಕರ ರೂಪದಲ್ಲಿ ಸ್ಥಿತನಾಗಿರುವ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಜೀವ ವಿಕಸನದ ಸಂಕೇತವಾಗಿ ಮತ್ಸ್ಯರೂಪದಲ್ಲಿಯೂ, ಧ್ಯಾನಿಸಲು ಬೇಕಾದ ಭದ್ರವಾದ ಆಸನ ಹಾಗೂ ವಿಷಯಾಸಕ್ತಿಗಳಿಂದ ರಕ್ಷಿಸಿಕೊಳ್ಳಲು ಗಟ್ಟಿಯಾದ ಹೊರ ಕವಚವನ್ನು ಮನೋನಿಗ್ರಹವನ್ನು ಕೂರ್ಮರೂಪದಲ್ಲಿಯೂ ಅನುಸಂಧಾನ ಮಾಡಿಕೊಂಡ ನಂತರ ಬರುವುದು ವರಾಹಾವತಾರ.  ಸಾಧಕನು ವಿಕಸಿತನಾಗಿ, ದೃಢವಾಗಿ ಕುಳಿತ ನಂತರ ಸಮುದ್ರದ ತಳದಲ್ಲಿರುವಂತೆ ಅಂತರಂಗದಲ್ಲಿರುವ ವಿಷಯಾಸಕ್ತಿಗಳೊಳಗೆ ವರಾಹದಂತೆ ನುಗ್ಗಿ, ಬಗ್ಗಡವನ್ನು ಭಕ್ತಿಯೆಂಬ ಕೋರೆದಾಡಿಯಿಂದ ಬಗೆದು ರಸಾತಳದಲ್ಲಿ ಹುದುಗಿರುವ ಶುದ್ಧಾತ್ಮನನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು.  ಬಗ್ಗಡವನ್ನು ಬಿಟ್ಟು, ವಿಷಯಾಸಕ್ತಿಗಳೆಂಬ ಹಿರಣ್ಯಾಕ್ಷನನ್ನು ಭಕ್ತಿಯೆಂಬ ಕೋರೆದಾಡಿಯಿಂದ ವಧಿಸಿ, ಶುದ್ಧಾತ್ಮನನ್ನು ಪರಿಶುಭ್ರವಾದ ಹೃತ್ಕಮಲದಲ್ಲಿ ನೆಲೆಸುವಂತೆ ಮಾಡಿ ಧ್ಯಾನಿಸಬೇಕು.  ಭಗವಂತನ ದಶಾವತಾರಗಳು ಹಂತ ಹಂತವಾಗಿ ಸಾಧಕನನ್ನು ಒಂದೊಂದೇ ಮೆಟ್ಟಿಲು ಏರುವಂತೆ ಮಾಡುವ ಅತಿ ಸುಂದರವಾದ ಅನುಸಂಧಾನವಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ  ಚರ್ಮದಲ್ಲಿ ವರಾಹರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ವರಾಹರೂಪವೆತ್ತಿದಾಗ ಲಕ್ಷ್ಮೀದೇವಿಯು ಧಾತ್ರಿಯಾಗಿರುತ್ತಾಳೆ ಎಂದಿದ್ದಾರೆ.

ಆದಿ ಹಿರಣ್ಯಾಕ್ಷನನ್ನು ಕೊಂದ ಭಗವಂತನನ್ನು ಭೂದೇವಿಯು ನಾನಾವಿಧವಾಗಿ ಸ್ತುತಿಸುತ್ತಾ, ತನ್ನನ್ನು ಉದ್ಧರಿಸಿದ ಭಗವಂತನ ಸ್ವರೂಪವು ತನಗೆ ತಿಳಿಯದೆಂದು ಪ್ರಾರ್ಥಿಸಿಕೊಳ್ಳಲಾಗಿ, ಭಗವಂತನು ಭೂಮಿದೇವಿಗೆ ನೀಡಿದ ತತ್ವೋಪದೇಶವು ವರಾಹಪುರಾಣವೆಂದು ಪ್ರಸಿದ್ಧವಾಯಿತು.  ಆದಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮೇಲಕ್ಕೆ ತಂದದ್ದೂ, ಮತ್ತೆ ನೀಲವರಾಹನಾಗಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮೇಲಕ್ಕೆ ತಂದದ್ದು ಭೂಮಿಯ ಮೇಲೆ ಸಾಧನೆಗೋಸ್ಕರ ಹುಟ್ಟಬೇಕಾಗಿದ್ದ ಜೀವರಾಶಿಯ ಮೇಲಿನ ಅಪಾರ ಕಾರುಣ್ಯದಿಂದಲೇ ಎಂದು ತಿಳಿಯುತ್ತದೆ.

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ ವರಾಹಾವತಾರವನ್ನು
ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿ
ಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿ ಭೂವರಹ ದಯವಾಗೋ || - ಸೋಮಪನ (ಚತುರ್ಮುಖ ಬ್ರಹ್ಮ) ಪ್ರಾರ್ಥನೆಯನ್ನು ಕೇಳಿ ಹಿರಣ್ಯಾಕ್ಷನೆಂಬ ದೈತ್ಯನನ್ನು ಸಂಹರಿಸಿ ಕೋರೆದಾಡಿಯಿಂದ ಭೂಮಿಯನ್ನು ಮೇಲಕ್ಕೆ ಎತ್ತಿದಂತಹ ಸ್ವಾಮಿ ಜಗತ್ತಿನ ಒಡೆಯನೇ ಭೂವರಹನೇ ಕೃಪೆಮಾಡು ಎಂದು ಪ್ರಾರ್ಥಿಸಿದ್ದಾರೆ.

ಶ್ರೀವಿಜಯದಾಸರು ತಮ್ಮ "ವರಾಹ ಸ್ತೋತ್ರ" ಎಂಬ ಸುಳಾದಿಯಲ್ಲಿ ’ಭೂವರಾಹ ಅವತಾರ ಶೃಂಗಾರ ಗುಣಾಕಾರ’, ’ಧಾರುಣೀಧರ’ ’ಸರ್ವಸಾರಭೋಕ್ತ’ ಎಂದೆಲ್ಲಾ ಸ್ತುತಿಸುತ್ತಾ ’ಸೂಕರ ರೂಪವ ತಾಳಿ ಕೋರಿದಾಡಿಲಿಂದ, ಭೀಕರ ಶಬ್ದದಿ ದಶದಿಶೆಗಳೆಲ್ಲ ಬೀರುತ್ತ’...  ಎಂದು ಭೀಕರರೂಪವನ್ನು ವರ್ಣಿಸಿದ್ದಾರೆ.  ’ಇಳೆಯಾ ಬಗೆದು’.. ಎಂದು ಮುಂದುವರೆಸುತ್ತಾ ವರಾಹಾವತಾರದ ಮೂಲ ಉದ್ದೇಶವನ್ನು ಸುಂದರವಾಗಿ ಚಿತ್ರಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ


ಭಾರತದಲ್ಲಿರುವ ವರಾಹಸ್ವಾಮಿ ದೇವಸ್ಥಾನದ ಕೊಂಡಿಗಳು..
http://gotirupati.com/sri-bhoo-varahaswamy/

https://www.google.co.in/search?q=varahaswamy&safe=active&tbm=isch&tbo=u&source=univ&sa=X&ei=Sds3VbSTCNSdugTa1oH4Cw&ved=0CC4Q7Ak&biw=1105&bih=703#imgrc=hHcaFQzLMW-ixM%253A%3BqwzAaaaMZ2OriM%3Bhttp%253A%252F%252Fwww.tourismguideindia.com%252Fimages%252FKarnataka%252FMysore%252FVarahaswamy%252520Temple.jpg%3Bhttp%253A%252F%252Fwww.tourismguideindia.com%252Fmysore-gallery.htm%3B600%3B398