Thursday, September 13, 2012

ಕರುಣಾ ಸಂಧಿ - ೬ನೇ ಪದ್ಯಮನದೊಳಗೆ ತಾನಿದ್ದು ಮನವೆಂ

ದೆನಿಸಿಕೊಂಬನು ಮನದ ವೃತ್ತಿಗ

ಳನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ |

ಮನವನಿತ್ತರೆ ತನ್ನನೀವನು

ತನುವ ದಂಡಿಸಿ ದಿನದಿನದಿ ಸಾ

ಧನವ ಮಾಳ್ಪರಿಗಿತ್ತಪನು ಸ್ವರ್ಗಾದಿಭೋಗಗಳ  ||೬||

ಪ್ರತಿಪದಾರ್ಥ : ಮನದೊಳಗೆ ತಾನಿದ್ದು - ಹುಟ್ಟುವ ಪ್ರತೀ ಜೀವಿಯಲ್ಲೂ ಬಿಂಬರೂಪಿಯಾಗಿದ್ದು, ಮನವೆಂದೆನಿಸಿಕೊಂಬನು - ಜೀವಿಯ ’ಮನಸ್ಸು’ ಎಂದೇ ಕರೆಸಿಕೊಳ್ಳುವವನು, ಮನದ ವೃತ್ತಿಗಳನುಸರಿಸಿ - ಜೀವಿಯ ಮನಸ್ಸಿನ ವೃತ್ತಿಗಳಾದ ಮನಸ್ಸು - ಬುದ್ಧಿ - ಅಹಂಕಾರ - ಚಿತ್ತ ಹಾಗೂ ಚೇತನಗಳ ವರ್ತನೆಗಳನ್ನು ಅನುಸರಿಸುವವನು, ಭೋಗಗಳೀವನು - ವೃತ್ತಿಗಳನ್ನು ಅನುಸರಿಸುತ್ತಾ ಅವುಗಳಿಗೆ ತಕ್ಕಂತಹ ಸುಖ ದುಃಖಗಳೆಂಬ ಭೋಗಗಳನ್ನು ಜೀವಿಗಳಿಗೆ ನೀಡುವವನು, ತ್ರಿವಿಧ ಚೇತನಕೆ - ಸಾತ್ವಿಕ ರಾಜಸ ಮತ್ತು ತಾಮಸವೆಂಬ ಮೂರು ವಿಧವಾದ ಜೀವಿಗಳಿಗೆ, ಮನವನಿತ್ತರೆ ತನ್ನನೀವನು - ಮನಸ್ಸಿನಲ್ಲಿ ನೆಲೆಸಿ ಮನಸ್ಸೆಂದೇ ಕರೆಸಿಕೊಳ್ಳುವ ಭಗವಂತನಿಗೆ ಭಕ್ತರು ತಮ್ಮ ಮನವನ್ನು ಅರ್ಪಿಸಿದರೆ ಭಗವಂತನು ಆ ಭಕ್ತರಿಗೆ ತನ್ನನ್ನೇ ಒಪ್ಪಿಸಿಕೊಂಡು ಬಿಡುವನು, ತನುವ ದಂಡಿಸಿ ಸಾಧನವ ಮಾಳ್ಪರಿಗೆ -  ಇಷ್ಟಾರ್ಥಗಳ ಪೂರೈಕೆಗಾಗಿ ದೇಹವನ್ನು ದಂಡಿಸಿ ಭಗವಂತನನ್ನು ಸ್ಮರಿಸುತ್ತಾ ಸಾಧನೆಯನ್ನು ಮಾಡುವ  ಭಕ್ತರಿಗೆ, ಇತ್ತಪನು ಸ್ವರ್ಗಾದಿ ಭೋಗಗಳ - ಸಾಧನೆಗೆ  ತಕ್ಕಂತಹ ಸ್ವರ್ಗಾದಿಗಳಾದ ಭೋಗಗಳನ್ನು ನೀಡುವವನು.

"ಮನದೊಳಗೆ ತಾನಿದ್ದು ಮನವೆಂದೆನಿಸಿಕೊಂಬನು  -   ಮೂಲತಃ ಮನದೊಳಗೆ ತಾನೂ ಇದ್ದು, ಸ್ಥೂಲ ದೇಹದ ದಶೇಂದ್ರಿಯಗಳಲ್ಲಿ ಶ್ರೇಷ್ಠವಾದ ಮನದೊಳಗೆ, ತಾನೇ ಮನವಾಗಿರುವನು (ನಾಮಪದ) ಎ೦ದು ದಾಸರು ವಿಶ್ಲೇಷಿಸುತ್ತಾರೆ. ಸಾಧನೆಯ ಮೂಲಕ ಚೇತನವನ್ನು ಜೀವ ಜಾಗೃತಿಗೊಳಿಸಿಕೊಂಡರೆ ಮನದೊಳಗೆ ತಾನೇ ಇರುತ್ತಾನೆ.  ತಾನೇ ಇದ್ದು "ಮನ" ಎಂದೆನಿಸಿಕೊಳ್ಳುತ್ತಾನೆ.  ಇನ್ನು ಮನೋವೃತ್ತಿಗಳು ಎಂದರೆ ಬುದ್ಧಿ, ಚಿತ್ತ, ಅಹಂಕಾರ, ಅಂತಃಕರಣ - ಇವುಗಳನ್ನು ಅನುಸರಿಸಿ ಸುಖ-ದು:ಖಗಳನ್ನು ಅನುಭವಿಸುವಂತೆ ಮಾಡುತ್ತಾನೆ.  ಮನಸ್ಸನ್ನು ವಿಷಯಕ್ಕೆ ಎ೦ದರೆ ಲೋಕ ಸುಖಕ್ಕೇ ಮೀಸಲಿಟ್ಟರೆ ಪರಮಾತ್ಮ ನಮ್ಮತ್ತ ನೋಡುವುದಿಲ್ಲ.  ಎಲ್ಲವೂ ಅವನೇ ಆದರೂ ನಾವು ಅವನನ್ನು ಸ್ಮರಿಸುತ್ತೇವೆಂದಾಗ ಮಾತ್ರ ಅವನು ನಮ್ಮನ್ನು ಕಾಪಾಡುತ್ತಾನೆ.  ತ್ರಿವಿಧ ಚೇತನಗಳು - ತಾಮಸ, ರಾಜಸ ಮತ್ತು ಸಾತ್ವಿಕಗಳಿಗೆ ಅವನೇ ಒಡೆಯನಾದರೂ, ಮನಸ್ಸು ನಾವು ಕೊಟ್ಟ ಹಾಗೆ ಅವನು ನಮ್ಮನ್ನು ರಕ್ಷಿಸುತ್ತಾನೆ.  ಭಕ್ತಿ ಇಲ್ಲದೆ ಬರಿಯೆ ದೇಹ ದಂಡನೆ, ವ್ರತಗಳನ್ನು ಮಾಡುತ್ತಾ ಇದ್ದರೆ ಸ್ವರ್ಗಾದಿ ಫಲ ಮಾತ್ರ ಸಿಕ್ಕುತ್ತದೆ.  ಜ್ಞಾನ - ಅಜ್ಞಾನ - ಸಂಶಯ ಎಲ್ಲಕ್ಕೂ ಅವನೇ ಪ್ರೇರಕನಾಗಿದ್ದಾನೆ. ಭಕ್ತಿಭರಿತ ವ್ರತ, ಅನುಷ್ಟಾನುಗಳನ್ನು ಆಚರಿಕೊಳ್ಳುವವರು ಭಾಗವತೋತ್ತಮರು, ಸಾತ್ವಿಕರು, ಮುಕ್ತಿಯೋಗ್ಯರು, ಶ್ರೇಷ್ಠ ಭಕ್ತರೂ ಆಗುತ್ತಾರೆ.  ಮಧ್ಯಮ ವರ್ಗದ ಭಕ್ತರು ಭಗವದ್ವಿಷಯದಲ್ಲಿ ಆಸಕ್ತಿ, ಸರ್ವೋ ಭಗವಧೀನ ಎಂದು ತಿಳಿಯುತ್ತಾರೆ.  ಇವರಿಗೆ ಸ್ವರ್ಗ ಸುಖ ಲಭ್ಯವಾಗುತ್ತದೆ.  ಮನುಷ್ಯರಾಗಿಯೂ ಸುಖವಾಗಿರುತ್ತಾರೆ.  ಇನ್ನು ಅಧಮ ಭಕ್ತರಿಗೆ ತಾರತಮ್ಯ ಜ್ಜಾನ ಶೂನ್ಯ, ತಾವೇ ಭಕ್ತರು ಎಂದುಕೊಂಡು ಉಳಿದವರ ಬಗ್ಗೆ ತಿರಸ್ಕಾರ.  ಇಂಥವರಿಗೆ ಅವರವರ ಯೋಗ್ಯತೆಗನುಸಾರವಾಗಿ ಅಂತಹ ಲೋಕಗಳನ್ನೇ ಕೊಡುತ್ತಾನೆ.


ಪ್ರಾರಂಭದಲ್ಲಿ... ಜೀವದ ಕರ್ಮಾನುಸಾರ, ತ್ರಿವಿಧ ಗುಣಗಳನ್ನು ಆಯಾಯ ಜೀವಿಗಳಿಗೆ ಕೊಟ್ಟು ಮೊಮ್ಮೊದಲು ಪ್ರೇರಕನಾಗಿ ಕ್ರಿಯೆ ಮಾಡಿಸುವವನು (ಯ೦ತ್ರವನ್ನು ಪ್ರಾರ೦ಭಿಸುವ ಕ್ರಿಯೆ). ಮನದ ವೃತ್ತಿಗಳನನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ.  ಒಮ್ಮೆ ಯಂತ್ರ ಶುರುವಾದ ಮೇಲೆ, ಜೀವ ಮಾಡುವ ಕರ್ಮಕ್ಕೆ ಅನುಸಾರವಾಗಿ – ಚಿತ್ತ – ಬುದ್ಧಿ – ಅಹಂಕಾರ – ಅಂತಃಕರಣಕ್ಕೆ ಪೂರಕವಾಗಿ ಯೋಗ್ಯತಾನುಸಾರ – ಭೋಗಗಳನ್ನು ಕೊಡುತ್ತಾನೆ. ಉದಾಹರಣೆಗೆ ಜೀವಕ್ಕೆ ತಮೋಗುಣ ಹೆಚ್ಚಿದ್ದಾಗ, ಅದರ ಕರ್ಮಕ್ಕನುಸಾರವಾಗಿ, ಅದೇ ಅಹಂಕಾರ ಕೊಡುತ್ತಾನೆ ಅಂತ ಅಲ್ಲ. ಇಲ್ಲಿ ಇದು ಅಹಂಕಾರ ಅಲ್ಲ, ಫಲ. ವಾಹನವನ್ನು ಓಡಿಸುವವರು ನಾವೇ ಆದರೂ, ಪ್ರೇರಕನನ್ನು ನಿರುತ ನೆನೆಯುವುದರಿಂದ ಉತ್ತಮ ಭಾವಗಳನ್ನು ಒಡಗೂಡಿಸಿಕೊಂಡು ಸರಿಯಾದ ದಾರಿಯಲ್ಲಿ ವಾಹನವನ್ನು ನಡೆಸುತ್ತೇವೆ.  ಓಡಿಸುವುದು ರಜೋ ಗುಣ. ನೆನೆಯುವುದು ಸತ್ವ. ನಾನೇ ಎನ್ನುವ ’ಅಹಂ’ ಬಂದಾಗ ಮಾತ್ರ ತಮೋ ಜಾಗೃತವಾಗುತ್ತದೆ.

ಸಕಲ ಸಂಪತ್ತು, ಭೋಗಗಳೂ ನಮ್ಮ ಕರ್ಮ ಫಲದಿಂದ ದೊರಕುವುವು. ರಜೋ + ಸತ್ವ = ಉತ್ತಮ ಭೋಗಗಳ ಜೊತೆಗೆ, ಭಗವಂತನ ಅರಿವು, ಧ್ಯಾನ ಇವುಗಳನ್ನು ಒಗ್ಗೂಡಿಸುತ್ತದೆ.  ರಜೋ+ತಮ = ಭೋಗ ಫಲ ಇದ್ದರೂ, ಅಲ್ಲಿ ಅಹಂ ಅಥವಾ ನಾನೇ ಮಾಡಿದೆನೆಂಬ ಭಾವದಿಂದ ಅರಿವು (-) ಇರುವುದಿಲ್ಲ. ಅದಕ್ಕೆ ತಕ್ಕಂತೆ ಫಲ ಸಿಕ್ಕುತ್ತದೆ.  ಮನದ ವೃತ್ತಿಗಳನನುಸರಿಸಿ ಎಂದರೆ ಇಷ್ಟು ವ್ಯಾಪ್ತವಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ.

ಮನವನಿತ್ತರೆ ತನ್ನನೀವನು – ಇದು ಉತ್ತಮ ಮಾರ್ಗ. ಅಪರೋಕ್ಷ ಜ್ಞಾನ ಕೊಡುವವನು ಉದಾಹರಣೆ – ಧ್ರುವ, ಬಲಿ ಮೊದಲಾದವರು. ತನುವ ದಂಡಿಸಿ ದಿನದಿನದಿ ಸಾಧನವ ಮಾಳ್ಪರಿಗಿತ್ತಪನು  -  ಈ ದೇಹವನ್ನು ದಂಡಿಸಿ ಮಾಡುವ ವ್ರತಾದಿಗಳು, ಸಾಧನೆಗಳು, ಅನುಷ್ಠಾನಗಳು, ಇವುಗಳಿಗೆಲ್ಲಾ... ಸ್ವರ್ಗಾದಿ ಭೋಗಗಳನ್ನು ಕೊಡುವವನು ಎಂದು ಅರ್ಥೈಸಿದ್ದಾರೆ.  ಆದರೆ ಸಂಕಲ್ಪ ಮಾಡುವಾಗ ಜ್ಞಾನ, ಭಕ್ತಿ, ವೈರಾಗ್ಯ, ಮೋಕ್ಷ  ಇಷ್ಟನ್ನೇ ಗುರಿಯಾಗಿಟ್ಟುಕೊಂಡು ಮಾಡುವ ಸಾಧನೆ ಶ್ರೇಷ್ಠವಾಗುತ್ತದೆ.  ಪ್ರತಿ ಒಂದು ಕ್ರಿಯೆಗೂ “ನಾಹಂ ಕರ್ತ... ಹರೀರ್ ಕರ್ತ ಅನ್ನುವ ಭಾವ ಸದಾ ಜಾಗೃತವಾಗಿರಬೇಕು.

ಚೇತನವಿಲ್ಲದ ಜೀವಕ್ಕೆ ಯಾವ ಭಾವವೂ ಇಲ್ಲ, ಯಾವ ಗುಣಗಳೂ ಇಲ್ಲ. ಇಂಧನ ತುಂಬಿ ಯಂತ್ರ ಚಾಲನೆ ಮಾಡಿದರೆ ಮಾತ್ರ ಅದಕ್ಕೊಂದು ಚಲನೆ ಬರುವುದು.  ಪ್ರೇರಕ ಇಲ್ಲದಿದ್ದರೆ ಎಷ್ಟೊಂದು ಬೀಜರೂಪದಲ್ಲಿರುವ ಭಾವಗಳು ಚಾಲನೆ ಇಲ್ಲದೆ ಹೋಗಿ ಬಿಡುತ್ತವೆ.  ಪ್ರಾರಂಭದಲ್ಲಿ, ಎಲ್ಲರನ್ನೂ(ಜೀವಗಳನ್ನು) ಅವನೇ ಕ್ರಿಯಾಶೀಲರನ್ನಾಗಿ ಮಾಡಿದರೂ, ’ಅಹಂಭಾವ’ದಿಂದ ಇನ್ನೂ ಬೆಳಕಿಗೆ ಬರಬೇಕಾದ ಬೀಜ ರೂಪದಲ್ಲಿ ಇರುವ ಭಾವಗಳು / ವಿಚಾರಗಳು ಎಲ್ಲವನ್ನೂ ನಾವೇ ಮೊಳಕೆಯೊಡೆಯಲು ಅಡ್ಡಿ ಆಗಿಬಿಡುತ್ತೇವೆ.  ಆದ್ದರಿಂದಲೇ ನಾನು ಎಂಬುದು ಉಪಕರಣವಾಗಬೇಕು, ಸಾಧನವಾಗಬಾರದು. ಈ ದೇಹವೇ ಒಂದು ಸಾಧನ ಎ೦ದು ಭಾವಿಸಬೇಕು. ದೇಹವೇ ನಾವು ಎ೦ಬ ಭಾವ ಬ೦ದೊಡನೆ,  ’ನಾನು’ ಅನ್ನುವ ಭಾವ ಎಲ್ಲಕ್ಕಿಂತ ಹೆಚ್ಚು ಬಲಶಾಲಿಯಾಗಿ, ತಾನೇ ನಿರ್ದೇಶನ ಮಾಡಲು ಪ್ರಾರ೦ಭಿಸಿಬಿಡುತ್ತದೆ.   ’ಅಹಂ’ ಸಾಧನವೆಂದುಕೊಂಡಾಗ, ಅಲ್ಲಿ ಭಗವಂತ ಬರೋದಿಲ್ಲ.  ಅವನು ದೂರದಲ್ಲಿ ನಿಂತು ನೋಡುತ್ತಿರುತ್ತಾನೆ, ತನ್ನನ್ನು ಕರೆಯುತ್ತಾರೇನೋ ಅಂತ ಕಾಯುತ್ತಿರುತ್ತಾನೆ, ಆದರೆ ನಮ್ಮಲ್ಲಿರುವ ‘ಅಹಂ’ ಅವನನ್ನು ಆಹ್ವಾನಿಸುವುದೇ ಇಲ್ಲ.

ಜೀವ ಎಂದರೆ - ಎಲ್ಲಿ ಜ್ಞಾನವಿದೆಯೋ ಅದು, ಇಲ್ಲದ್ದು ಜಡ.  ವೇದಾಂತಿಗಳು ಜ್ಞಾನವೇ ಜೀವವೆಂದರು.  ಇಂದ್ರಿಯಗಳು ಜ್ಞಾನ ಹುಟ್ಟಿಸುವ ಸಾಧನಗಳು, ಅವುಗಳೇ ಜ್ಞಾನವಲ್ಲ. "ಆತ್ಮ" - ಸ್ವಯಂ ಜ್ಞಾನ, ಜ್ಞಾನದ ಸಾಧನ, ಎಲ್ಲವೂ. ಉಪನಿಷತ್ತಿನ ಪ್ರಕಾರ ಆತ್ಮನೇ ದೊಡ್ಡ ಬೆಳಕು.  ಸೂರ್ಯ, ಚಂದ್ರ, ಅಗ್ನಿ ಮೂರೂ ಇಲ್ಲದಾಗ, ನಾಲ್ಕನೆಯದು ಆತ್ಮ (ಬೆಳಕು).  ನಮ್ಮದಾದ ಜ್ಞಾನದ ಸಹಜ ಅರಿವಾಗದಂತೆ, ನಮ್ಮ ಇಂದ್ರಿಯಗಳು ಆವರಣಗಳಾಗಿವೆ.  ಅರಿವಿನ ಪ್ರಾಣನಾದ ಆತ್ಮನಿಗೆ ಅರಿವಿನ ಅನುಭವ ತರಲು ಇಂದ್ರಿಯಗಳ ಬಳಕೆಯಾಗುತ್ತದೆ.  ಜ್ಞಾನ ಬೇರೆ - ಅನುಭವ ಬೇರೆ.  ಅನುಭವ ಕೇವಲ ಚೇತನಕ್ಕೆ, ಜಡಕ್ಕಲ್ಲ. ಮನಸ್ಸೆಂಬ ಸಾಧನದ ಮೂಲಕ ಅನುಭವವನ್ನು ಆತ್ಮನಿಗೆ ಕೊಡಲು, ಭಗವಂತ ಮನದೊಳಗೆ ತಾನೇ ನಿಂತು ಮಾಡಬೇಕು. 

ಮನಸ್ಸು ಒಂದು ಜಡ ಪದಾರ್ಥ.  ಅದರಲ್ಲಿ ಆಲೋಚನೆಗಳು ಹುಟ್ಟಲು ಅದಕ್ಕೆ ಒಂದು ಚೇತನ ಬೇಕು. ಹರಿ ನಮ್ಮ ಮನಸ್ಸಿನಲ್ಲಿ ಎಲ್ಲ ಚಟುವಟಿಕೆಗಳನ್ನೂ ಉಂಟು ಮಾಡುತ್ತಾನೆ, ಅವನೇ ಮನಸ್ಸನ್ನು ಆಳುತ್ತಾನೆ, ಅವನಿಲ್ಲದಿರುತ್ತಿದ್ದರೆ ನಮ್ಮ ಮನಸ್ಸಿನಲ್ಲಿ ಯಾವ ಆಲೋಚನೆಯೂ ಹುಟ್ಟುವುದೇ ಇಲ್ಲ.  ವಿಷ್ಣು ಸಹಸ್ರನಾಮದಲ್ಲಿ "ಭಾವಾಯ ನಮಃ", "ಭೂತಭಾವನಾಯ ನಮಃ", ಮತ್ತು "ಮನುವೇ ನಮಃ" -  ಶ್ರೀಹರಿಯನ್ನು "ಭಾವ" ಎಂದು ಸಂಬೋಧಿಸಿದ್ದಾರೆ.  ಭಾವ ಎಂದರೆ ದ್ರವ್ಯ, ಗುಣ, ಆಲೋಚನಾ ತರಂಗಗಳು, ಭಾವನೆಗಳು, ಕಲ್ಪನೆಗಳು ಎಂದಾಗುತ್ತದೆ.  ಸರ್ವ ವಿಧವಾದ ಭಾವನೆಗಳಿಗೂ ಮೂಲ ಕಾರಣನು ಭಗವಂತನೆಂದೇ ಅರ್ಥವಾಗುತ್ತದೆ.  ಹೀಗೆ ತಾನೇ ಭಾವನೆಗಳಾಗಿ, ಭಾವನೂ ಆಗಿ ನಮ್ಮ ಬುದ್ಧಿ-ಕರ್ಮಗಳಿಗನುಗುಣವಾಗಿ, ಭಾವನೆಗಳನ್ನು ವರ್ಧಿಸುವವನಾಗುತ್ತಾನೆ.  ಮನನಕ್ಕೆ ಸಾಧನನಾದುದರಿಂದ ಭಗವಂತನನ್ನು ಮನಸ್ ಎಂದೂ ಮನುವೆಂದೂ ಕರೆಯಲ್ಪಟ್ಟಿದ್ದಾನೆ.  ಶ್ರೀಹರಿಗಿಂತ ಬೇರೆ ಮಂತ್ರವೇ ಇಲ್ಲ.  ಬ್ರಹ್ಮಾಂಡದ ಪ್ರತಿಯೊಂದು ವಸ್ತುವಿಗೂ ಮತ್ತು ಜೀವರಿಗೂ, ಯಾರು ಯಾರಿಗೆ ಏನೇನು ಕರುಣಿಸಬೇಕೆಂದು ಮನನ ಮಾಡುವ ಮಾಧವನನ್ನು ವಿಷ್ಣುವೆಂದು ಪೂಜಿಸುತ್ತೇವೆ.  ಯಾವ ಜೀವಿ ತನ್ನ ಬುದ್ಧಿಯನ್ನು (ಮನಸ್ಸನ್ನು) ತನ್ನಿಚ್ಛೆಯಂತೆ ಹರಿಯಲು ಬಿಡದೆ, ನಿಯಂತ್ರಿಸಿ ಶ್ರೀಹರಿಯ ಧ್ಯಾನದಲ್ಲಿ ಬಂಧಿಸುತ್ತಾನೋ, ಭಗವಂತನ ನಾಮವನ್ನು ಸದಾಕಾಲ ಮನನ ಮಾಡುತ್ತಿರುತ್ತಾನೋ ಅಂತಹ ಜೀವಿಯನ್ನು ಕಾಪಾಡುವವನು ಭಗವಂತನಾದ್ದರಿಂದ ಆ ಭಗವಂತನೇ ಮಂತ್ರನಾಗಿರುವನು.  ಮನಸ್ಸೆಂದರೆ ಸಂಕಲ್ಪಮಯ ಎಂದು ಅರ್ಥೈಸಿದರೆ, ಸಕಲ ಸಂಕಲ್ಪಕ್ಕೂ ದಿವ್ಯಸಂಕಲ್ಪ ಪೂರ್ಣನು ಪರಮಾತ್ಮನು. ಮಂತ್ರಗಳನ್ನು ಮಾನಸ ಜಪದ ಮೂಲಕ ಸಿದ್ಧಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುವವನು ಮತ್ತು ಪ್ರೇರೇಪಿಸುವವನು ಶ್ರೀಹರಿಯು.  ಹೀಗೆ ಮನದೊಳಗೆ ತಾನೆ ಇದ್ದು, ಸಾಧನೆಗೆ ತಾನೇ ಪ್ರೇರೇಪಿಸುತ್ತಾ, ತಾನೇ ಮನವೆಂದೆನಿಕೊಂಬನು.  ಭಗವಂತನು ಸರ್ವಶಬ್ದವಾಚ್ಯನು.

"ಮನದ ವೃತ್ತಿಗಳನುಸರಿಸಿ ಭೋಗಗಳನೀವ ತ್ರಿವಿಧ ಚೇತನಕೆ" - ಸಮುದ್ರದಲ್ಲಿ ನಿರಂತರ ಲಹರಿಗಳು ಏಳುತ್ತಲೇ ಇರುವಂತೆ ನಮ್ಮ ಮನಸ್ಸಿನಲ್ಲೂ ನಾನಾ ಬಗೆಯ ತರಂಗಗಳು / ಭಾವಗಳು ಏಳುತ್ತಲೇ ಇರುತ್ತವೆ.  ಬ್ರಹ್ಮಸೂತ್ರದಲ್ಲಿ ಹೇಳಿದಂತೆ ಅವುಗಳು ಐದು ಬಗೆ - ಮನಸ್, ಬುದ್ಧಿ, ಅಹಂಕಾರ, ಚಿತ್ತ, ಚೇತನಾ ಎಂದು.  ಮನಸ್ಸು ಒಂದು ಕೆಲಸವನ್ನು ಮಾಡಬೇಕೇ ಬೇಡವೇ, ಒಳ್ಳೆಯದೇ ಕೆಟ್ಟದ್ದೇ ಎಂದು ಯೋಚಿಸುತ್ತದೆ.  ಬುದ್ಧಿ ನಿರ್ಣಯ ಮಾಡುತ್ತದೆ.  ಅಹಂಕಾರ ನಾನು ಕಾರ್ಯ ಸಾಧಿಸುತ್ತೇನೆ, ನಾನು ಫಲ ಉಣ್ಣುತ್ತೇನೆ ಎಂದು ಅಭಿಮಾನ ತೋರುತ್ತದೆ.  ಚಿತ್ತ ಹಿಂದಿನ ಅನುಭವಗಳನ್ನು / ಸಂಸ್ಕಾರವನ್ನು (ಸಂಸ್ಕಾರವೆಂದರೆ ಅನುಭವಗಳ ದಾಖಲಾತಿ)  ನೆನಪಿಸಿಕೊಳ್ಳುತ್ತದೆ.  ಚೇತನ  ಎಲ್ಲಾ ವಿಷಯಗಳನ್ನೂ ಒಳಗೆ ದಾಖಲು ಮಾಡಿಟ್ಟುಕೊಂಡು ಬೇಕಾದಾಗ ಅದು ನಮಗೆ ಸಿಕ್ಕುವಂತೆ ಮಾಡುತ್ತದೆ.  ಸಾತ್ವಿಕರಿಗೆ ಒಳ್ಳೆಯ ರೀತಿಯಲ್ಲಿ ನಾಲ್ಕು ವೃತ್ತಿಗಳು ಬೆಳೆದು ಅಹಂಕಾರ ಇಲ್ಲದಂತಾಗುತ್ತದೆ ಮತ್ತು ಸಾತ್ವಿಕರಲ್ಲದವರಿಗೆ ಅಹಂಕಾರ ಬೆಳೆಯುತ್ತದೆ.  ನಾವು ಮಾಡುವ ಕೆಲಸದ ಬಗ್ಗೆ ಸರಿಯಾದ ಆಲೋಚನೆ, ಮಾಡುವ ಇಚ್ಛೆ, ಪ್ರಾಮಾಣಿಕ ಪ್ರಯತ್ನವಿದ್ದಲ್ಲಿ ಕೆಲಸ ಯಶಸ್ಕರವಾಗುವುದು ಮತ್ತು ಅದರಿಂದ ನಮಗೆ ಸುಖಭೋಗವು ಲಭಿಸುವುದು.  ಆದರೆ ಕೆಲಸದ ಬಗ್ಗೆ ಆಲೋಚನೆಯೇ ತಪ್ಪಾಗಿದ್ದರೆ, ಕೆಲಸವು ಕೈಗೂಡುವುದೂ ಇಲ್ಲ ಮತ್ತು ಅದರಿಂದ ನಮಗೆ ದುಃಖಭೋಗವು ಲಭಿಸುವುದು.  ಯಾವುದೇ ಕಾರ್ಯವನ್ನು ಮಾಡುವ ಸಂಕಲ್ಪದಲ್ಲೇ ನನಗೆ ಈ ಕಾರ್ಯದ ಫಲ ಬೇಡ, ಭಗವಂತನಿಗೇ ಅರ್ಪಿತ, ಅವನ ಕರುಣೆಯೊಂದಿದ್ದರೆ ಸಾಕು ಎಂದುಕೊಂಡಾಗ (ಆಲೋಚನೆಗೆ ಪ್ರೇರಣೆ ನೀಡುವವನೇ ಶ್ರೀಹರಿ) ಭಗವಂತ "ಮನದ"ನಾಗಿದ್ದು ಉತ್ತಮರಿಗೆ ಸುಖಭೋಗ, ಮಧ್ಯಮರಿಗೆ ಸುಖ-ದುಃಖ ಭೋಗ, ಅಧಮರಿಗೆ ದುಃಖಭೋಗಗಳನ್ನೇ ಕೊಡುವನು.  "ಮನದ"ನಾಗಿ ನಮಗೆ ವಿಚಾರಶಕ್ತಿ ನೀಡುವವನು ಭಗವಂತನಾದ್ದರಿಂದ, ನಾವು ನಮಗೆ ವಿಹಿತವಾದ ಕಾರ್ಯಗಳನ್ನೂ, ವೃತ್ತಿಗಳನ್ನೂ ಆರಿಸಿಕೊಳ್ಳಬೇಕು ಮತ್ತು ಆ ವೃತ್ತಿಯ / ಕಾರ್ಯದ ಮೂಲಕವೇ ನಾವು ಶ್ರೀಹರಿಯನ್ನು ಆರಾಧಿಸಬೇಕು.  ಅವಿಹಿತವಾದ ವೃತ್ತಿ / ಆರಾಧನೆಯನ್ನು ಭಗವಂತ ಸ್ವೀಕರಿಸುವುದಿಲ್ಲ ಎನ್ನುತ್ತಾರೆ ಶ್ರೀ ಜಗನ್ನಾಥದಾಸರು.

ಚೇತನರಲ್ಲಿ ಮೂರು ವಿಧರು - ಸಾತ್ವಿಕರು, ರಾಜಸರು ಮತ್ತು ತಾಮಸರು.  ದೇವರು ಹೇಗೆ ಅನಾದಿಯೋ, ಹಾಗೆ ಜೀವ ಕೂಡ ಅನಾದಿ ಮತ್ತು ನಿತ್ಯ.  ಜೀವದ ಪರಿಚಯ ನಮಗೆಂದಿನಿಂದ ಇದೆಯೋ, ಅಂದಿನಿಂದಲೂ ಜೀವ ಜಡದ ಜೊತೆಗೆ ಮಿಶ್ರಣಗೊಂಡಿದ್ದಾನೆ.  ಜಡತ್ವ ಹೋಗಿಸಿ ಜೀವನನ್ನು ನಾವೇ ಎಚ್ಚರಿಸಿಕೊಳ್ಳಬೇಕು.  ಉದಾಹರಣೆಯೊಂದಿಗೆ ಹೇಳುವುದಾದರೆ ತೆಂಗಿನಕಾಯಿಯಂತೆ ಶರೀರದ ಒಳಗೆ ಜೀವ ಬಂಧಿ.  ತೆಂಗಿನಕಾಯಿಯ ಮೇಲೆ ಗೆರಟೆ, ಜುಟ್ಟು ಎಂದಿನಿಂದ ಬಂದಿತು ಎಂಬುದು ತಿಳಿಯದು, ಹಾಗೇ ತೆಂಗಿನ ಗೆರಟೆಯಂತೆ ಸ್ಥೂಲಶರೀರ ಮತ್ತು ಜುಟ್ಟಿನಂತೆ ಲಿಂಗಶರೀರ.  ಹೀಗೆ ಅನಾದಿ ಕಾಲದಿಂದಲೂ ಚೇತನದ ಜೊತೆ ಅಚೇತನ ಸೇರಿಕೊಂಡಿದೆ.  ಅಚೇತನದಿಂದ ಬಿಡುಗಡೆ ಹೊಂದಲು ನಮ್ಮ ಪ್ರಯತ್ನದ ಜೊತೆಗೆ ಭಗವಂತನ ಕರುಣೆಯೂ ಬೇಕು.  ಇದನ್ನು ನಾವು ಅಸಹಜ ಸ್ಥಿತಿಯಿಂದ ಸಹಜ ಸ್ಥಿತಿಗೆ ಮರಳುವುದು - ಮುಕ್ತಿ ಎನ್ನುತ್ತೇವೆ.  ಇದನ್ನು ತಲುಪಲು ನಾವು ಮಾಡುವ ಸಾಧನೆಯೇ ನಮ್ಮ ವ್ಯಕ್ತಿತ್ವದ ವಿಕಾಸ ಹೊಂದುವಿಕೆ.

"ತನುವ ದಂಡಿಸಿ ಸಾಧನೆ ಮಾಳ್ಪರಿಗಿತ್ತಪನು" - ಆಧ್ಯಾತ್ಮದ ಮೊದಲ ಹಂತವೇ ದೇಹ ದಂಡನೆ.  ಮನವನ್ನು ಭಗವಂತನಿಗೇ ಕೊಡುವ ಸಾತ್ವಿಕರು ಕೂಡ ಕೆಲವೊಮ್ಮೆ ಪ್ರಾರಬ್ಧವಶದಿಂದ ವಿಷಯಾಸಕ್ತಿಗಳಿಗಾಗಿ ದೇಹವನ್ನು ದಂಡಿಸಿ, ಕರ್ಮದ ಕೊನೆಯಲ್ಲಿ ಕೃಷ್ಣಾರ್ಪಣ ಎಂದರೂ ಕೂಡ, ಭಗವಂತ ತಾನು ಕೊಟ್ಟ ಮನವನ್ನು ತನಗೆ ಕೊಡದೇ, ವಿಷಯಾಸಕ್ತಿಗಳಲ್ಲಿ ಮುಳುಗಿ, ಅನ್ಯದೇವತೆಗಳಿಗೆ ಕೊಟ್ಟೆವೆಂದು ಕೋಪಿಸಿಕೊಳ್ಳದೆ, ಕೊನೆಗೆ ಕರ್ಮವನ್ನಾದರೂ ಕೊಟ್ಟನಲ್ಲಾ ಎಂದು ಪರಮ ಕಾರುಣ್ಯದಿಂದಲಿ ಸ್ವೀಕರಿಸಿ, ಆ ಕರ್ಮಕ್ಕೆ ತಕ್ಕ ಫಲವಾಗಿ ಸ್ವರ್ಗಾದಿ ಫಲಗಳನ್ನು ಕೊಡುತ್ತಾನೆ.  ತಮ್ಮ ಮನವನ್ನು ಭಗವಂತನಿಗೆ ಅರ್ಪಿಸುವವರು ತನುವನ್ನು ವ್ರತಾಚರಣೆಗಳಲ್ಲಿಯೂ, ಏಕಾದಶಿ ಉಪವಾಸಗಳಲ್ಲಿಯೂ ದಂಡಿಸಿಯೇ ದಂಡಿಸುತ್ತಾರೆ.  ಆದರೆ ಸುಮ್ಮನೆ ತನುವನ್ನು ದಂಡಿಸಿ ಯಾಗ, ಪೂಜೆಗಳೆಂದು ಮಾಡುವವರು ತಮ್ಮ ಮನಸ್ಸನ್ನು ಭಗವಂತನಿಗೆ ಸಮರ್ಪಿಸುತ್ತಾರೆಂಬ ನಂಬಿಕೆಯೇನೂ ಇಲ್ಲ.  ಆದರೆ ಮನಸ್ಸನ್ನು ಕೊಡದೆ ಹೀಗೆ ತನುವನ್ನು ದಂಡಿಸುವುದು ಬರಿಯ ನಶ್ವರ ಫಲಕ್ಕೆ ದಾರಿಯಾಗುವುದು.  ಮಿತಿಮೀರಿ ಶರೀರವನ್ನು ದಂಡಿಸುವುದನ್ನು ಕೂಡ ಪರಮ ಕರುಣಾಮಯಿ ಭಗವಂತ ಒಲ್ಲ, ಯಾವ ಜೀವ ಸಹನೆ, ಶಾಂತಿ, ದಯೆ, ಔದಾರ್ಯಗಳಿಂದ ಬದುಕುತ್ತಾನೋ ಅವನೇ ಉತ್ತಮ ಭಕ್ತನೆಂದೆನಿಕೊಳ್ಳುತ್ತಾನೆ.

"ಸ್ವರ್ಗಾದಿ ಭೋಗಗಳ" - ತ್ರಿವಿಧ ಚೇತನರಲ್ಲಿ ಸಾತ್ವಿಕರಾದ ಉತ್ತಮರು ತಮ್ಮ ಮನಸ್ಸನ್ನೇ ಸರ್ಮರ್ಪಿಸಿದಾಗ ತನ್ನನ್ನೇ - ಮೋಕ್ಷವನ್ನೇ ಕೊಡುತ್ತಾನೆ ಭಗವಂತ.  ಹಾಗೇ ಮಧ್ಯಮರಾದ ರಾಜಸ ಜೀವಿಗಳಲ್ಲಿ ಸ್ವಲ್ಪವಾದರೂ ಭಕ್ತಿ ಇರುವುದರಿಂದ ಅವರಿಗೆ ಸ್ವರ್ಗಲೋಕವನ್ನೇ ನೀಡುತ್ತಾನೆ ಶ್ರೀಹರಿ.  ಆದರೆ ಬರಿಯ ದ್ವೇಷ, ಅಹಂಕಾರಗಳನ್ನೇ ಸಾಧನೆಯನ್ನಾಗಿ ಮಾಡಿಕೊಂಡ ಅಧಮರಾದ ತಾಮಸ ಜೀವಿಗಳಲ್ಲಿ ಲವಲೇಶವೂ ಭಕ್ತಿಯೇ ಇಲ್ಲದಿರುವುದರಿಂದ ಅವರು ದೇಹ ದಂಡಿಸಿ ಎಷ್ಟೇ ಕಾರ್ಯಗಳನ್ನು ಮಾಡಿದರೂ, ಅವರಿಗೆ ಶ್ರೀಹರಿ ಒಲಿಯುವುದಿಲ್ಲ ಮತ್ತು ನರಕವನ್ನೇ ಕೊಡುತ್ತಾನೆನ್ನುತ್ತಾರೆ ಶ್ರೀ ಜಗನ್ನಾಥ ದಾಸರಾಯರು.  ಸಜ್ಜನರಿಗೆ, ಸದ್ಭಕ್ತರಿಗೆ ಕರುಣೆ ತೋರುವುದು ಭಗವಂತನ ವಿಶೇಷ ಗುಣವಾಗುತ್ತದೆ.

ತತ್ವಸುವ್ವಾಲಿಯಲ್ಲಿ ದಾಸರು :
ಮನದೊಳಗೆ ನೀನಿದ್ದು ಮನವೆಂದೆನಿಸಿಕೊಂಡು
ಮನದ ವೃತ್ತಿಗಳನ್ನು ಸೃಜಿಸುವಿ | ಸೃಜಿಪಿ ಸಂಕರ್ಷಣನೆ
ನಿನ್ನ ಕರುಣಕ್ಕೆ ಎಣೆಗಾಣೆ || - ಮನೋವೃತ್ತಿಗಳಿಗೆ ಅಭಿಮಾನಿ ಹಾಗೂ ಅವಾಂತರಾಭಿಮಾನಿ ದೇವತೆಗಳು ಇದ್ದರೂ ಕೂಡ, ಅವರೊಳಗೆ ತಾನೇ ಅಂತರ್ಯಾಮಿಯಾಗಿದ್ದು ಸರ್ವ ಕಾರ್ಯಗಳನ್ನೂ ಮಾಡಿಸಿ, ಅವರನ್ನೂ ಅನುಗ್ರಹಿಸಿ, ಕರುಣೆ ತೋರುವ ಭಗವಂತ ಸಂಕರ್ಷಣನೇ ನಿನಗೆ ಯಾರೂ ಎಣೆಯಿಲ್ಲವೆನ್ನುತ್ತಾರೆ.

ಮರುಳು ಮನವೇ ಕೇಳು ಮರೆವರೇ ಹರಿನಾಮ
ಕರುಣಾಬ್ಧಿ ಕೃಷ್ಣ ಅನುಗಾಲ | ಅನುಗಾಲ ಸಲಹುವನು
ಬರಿದೆ ಚಿಂತ್ಯಾಕೋ ನಿನಗಿನ್ನು ||  -  ಮನದಲ್ಲಿ ಮನವಾಗಿ ನಿಂತಿರುವ ಭಗವಂತನ ಇರುವಿಕೆಯನ್ನು ಗ್ರಹಿಸದೇ, ಮರುಳುತನದಲ್ಲಿ ವಿಷಯಾಸಕ್ತಿಗಳಲ್ಲಿ ಮುಳುಗಿರಬೇಡ.  ಅನವರತ ಹರಿನಾಮ ಸ್ಮರಣೆ ಮಾಡುತ್ತಾ ಮನದ ಕಲ್ಮಶಗಳನ್ನು ತೊಡೆದಾಗ, ಅನುಗಾಲವೂ ತಂದೆ ತನ್ನ ಮಕ್ಕಳನ್ನು ಪೊರೆವಂತೆ ಬಿಡದೇ ಸಲಹುವನು, ಚಿಂತಿಸಬೇಡ ಎನ್ನುತ್ತಾರೆ.

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |
ನೆನೆಯದಿನ್ನೊಂದನೆಲ್ಲವ ನೀಡುತದರಾ ||
ಅನುಸಂಧಿಯಲಿ ಜೀವಭಾರವನು ಮರೆಯುವುದು |
ಹನುಮಂತನುಪದೇಶ - ಮಂಕುತಿಮ್ಮ ||  -  ಜೀವನದಲ್ಲಿ ಸಫಲತೆಯನ್ನು ಕಂಡುಕೊಳ್ಳಬೇಕಾದರೆ ಯಾವುದಾದರೊಂದು ಮಹತ್ತರವಾದ ಘನತತ್ತ್ವವೊಂದಕ್ಕೆ ಸಂಪೂರ್ಣ ಶರಣಾಗತರಾಗಲೇಬೇಕು.  ಮತ್ಯಾವ ವಿಚಾರವನ್ನೂ, ಮತ್ತೇನನ್ನೂ ಮನಸ್ಸಿನಲ್ಲಿ ನೆನೆಯದೆ, ಅನವರತ, ಉಸಿರಾಡುವಷ್ಟೇ ಸಹಜವಾಗಿ ನಾವು ನಂಬಿಕೊಂಡ ಘನತತ್ತ್ವದಲ್ಲಿ ಬೆರೆತು ಲೀನವಾಗಿ ಹೋಗಬೇಕು.  ಅದಕ್ಕಾಗಿ ಜೀವನವನ್ನೇ ಮುಡಿಪಾಗಿಸಿ ಬಿಡಬೇಕು.  ಇದೇ ಜನ್ಮಜನ್ಮಾಂತರಗಳಲ್ಲೂ ನಮ್ಮ ಗುರಿಯಾಗಬೇಕು. ಇಂತಹ ಒಂದು ಮಹಾಸಂಕಲ್ಪವನ್ನು ಮಾಡಿಕೊಂಡು ಅದಕ್ಕಾಗಿಯೇ ಸಾಧನೆ ಮಾಡಿದವನು ಹನುಮಂತ.  ಹೀಗೆ ನಾವು ನಮ್ಮೊಳಗೇ ಇರುವ ಆ ಮಹಾತತ್ತ್ವಕ್ಕೆ ಸಂಪೂರ್ಣ ಶರಣಾಗತರಾದಾಗಲೇ ನಮ್ಮ ಜೀವನ ನಮಗೆ ಭಾರವೆನಿಸದೆ ಭವಸಾಗರವನ್ನು ದಾಟುವುದು ಸಾಧ್ಯವಾಗುವುದು.  ಇಲ್ಲಿ ಡಿವಿಜಿಯವರು ಹನುಮಂತನ ದೃಷ್ಟಾಂತವನ್ನು ಕೊಟ್ಟು, ಮನಸ್ಸಿನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ.  ಒಂದೇ ಒಂದು ಗುರಿ, ಜೀವಿತದ ದಿಕ್ಕನ್ನೇ ಬದಲಿಸಿಬಿಡುತ್ತದೆ.

ಕೈವಾರ ತಾತಯ್ಯನವರು ತಮ್ಮ ಬ್ರಹ್ಮಾಂಡಪುರಿ ಶತಕದಲ್ಲಿ
ಮನಸೇ ಶ್ರೀಹರಿ ಭಜನಮು
ಮನಸೇ ವೈರಾಗ್ಯಶಕ್ತಿ ಮನಸೇ ತತ್ತ್ವಂ |
ಮನಸೇ ಯೋಗರಹಸ್ಯಮು
ಮನಸೇ ತನು ತಾನು ತೆಲುಸು ನಾರೇಯಣಕವಿ ||  -  ಮನಸ್ಸೇ ಶ್ರೀಹರಿಯ ಧ್ಯಾನಕ್ಕೂ, ಭಜನೆಗೂ, ಭಕ್ತಿಗೂ, ವೈರಾಗ್ಯಕ್ಕೂ, ಪರಮಾತ್ಮ ತತ್ತ್ವಕ್ಕೂ, ಯೋಗರಹಸ್ಯಕ್ಕೂ ಮತ್ತು ಆತ್ಮಜ್ಞಾನಕ್ಕೂ ಮೂಲವೆನ್ನುತ್ತಾ..
ಮನಸೇ ಮಾಯಪ್ರಪಂಚಮು
ಮನಸೇ ಮಹಗರ್ವಮೃಗಮು ಮನಸೇ ಲೋಭಂ |
ಮನಸೇ ಆಶಾಪಾಶಮು
ಮನಸೇ ತನ್ನೆರುಗನಿಯದು ನಾರೇಯಣಕವಿ ||  -  ಈ ಮನಸ್ಸೇ ಮದ, ಗರ್ವ, ಲೋಭ, ಆಸೆಗಳಿಗೆ ಕೂಡ ಮೂಲ.  ಆದ್ದರಿಂದ "ಮನಸು ತೆಗಿನವಾಡು ಮಹಾತ್ಮುಡೌನು" - ಅಂದರೆ ಮನಸ್ಸನ್ನು ವಿಷಯಾಸಕ್ತಿಗಳ ಕಡೆಗೆ ಹರಿಯಲು ಬಿಡದೆ, ತಗ್ಗಿಸಿ, ಬಯಕೆಗಳನ್ನು ಬಿಟ್ಟು ಶ್ರೀಹರಿಯ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುತ್ತಾ ಮನಸ್ಸಿನ ಮಹತ್ವದ ಬಗ್ಗೆ ತಿಳಿಸುತ್ತಾರೆ.

ಸಂಗೀತ ಪಿತಾಮಹ ಶ್ರೀತ್ಯಾಗರಾಜರು ತಮ್ಮ ಒಂದು ಕೃತಿ "ಮನಸು ನಿಲ್ಪಶಕ್ತಿಲೇಕ ಪೋತೇ | ಮಧುರ ಘಂಟ ವಿರುಲ ಪೂಜ ಏಮಿ ಜೇಯುನು"? - ಮನಸ್ಸನ್ನು ಭಗವಂತನ ಪಾದದಲ್ಲಿ ದೃಢವಾಗಿ ನಿಲ್ಲಿಸುವ ಸಾಮರ್ಥ್ಯವಿಲ್ಲದೆ, ಮಧುರವಾದ ನಾದ ಹೊರಡಿಸುವ ಘಂಟೆಯನ್ನು ಇಟ್ಟುಕೊಂಡು, ಸುವಾಸನಾಯುಕ್ತ ಹೂವುಗಳನ್ನು ಇಟ್ಟುಕೊಂಡು ಏನು ಪ್ರಯೋಜನವೆಂದು ಕೇಳುತ್ತಾರೆ.  ಇದೆಲ್ಲಾ ಇದ್ದರೂ ಮನಸ್ಸು ಎಲ್ಲೋ ಅಲೆಯುತ್ತಾ, ಯಾವುದೋ ವಿಷಯಾಸಕ್ತಿಗಳ ಬಗ್ಗೆ ಚಿಂತಿಸುತ್ತಾ ಇದ್ದರೆ, ಪೂಜೆ ಮಾಡುವುದರಿಂದ ಯಾವ ಫಲವೂ ಇಲ್ಲವೆನ್ನುತ್ತಾರೆ.  ಕೃತಿಯ ಅನುಪಲ್ಲವಿಯಲ್ಲಿ "ಘನ ದುರ್ಮದುಡೈ ತಾ ಮುನಿಗಿತೇ ? | ಕಾವೇರಿ ಮಂದಾಕಿನಿ ಎಟು ಬ್ರೋಚುನು "? - ಮನಸ್ಸಿನ ತುಂಬ ಬರಿಯ ಮದ ಮಾತ್ಸರ್ಯ, ದುರಹಂಕಾರಗಳನ್ನು ತುಂಬಿಕೊಂಡು ಕಾವೇರಿ, ಗಂಗಾ ನದಿಗಳಲ್ಲಿ ತೀರ್ಥಸ್ನಾನ ಮಾಡುತ್ತೇನೆಂದು ಮುಳುಗಿದರೆ ಅದು ಬರಿಯ ದೇಹಕ್ಕೆ ಬಾಹ್ಯ ಸ್ನಾನವಾಯಿತೇ ಹೊರತು, ಭಗವಂತನ ಸ್ಮರಣೆಯಲ್ಲಿ ಮಾಡಿದ ತೀರ್ಥಸ್ನಾನದ ಪ್ರಕ್ರಿಯೆಯಾಗುವುದಿಲ್ಲ.  ಇದೇ ಮಾತನ್ನು ಶ್ರೀಪುರಂದರ ದಾಸರು ತಮ್ಮ ಪದದಲ್ಲಿ "ತನುವ ನೀರೊಳಗದ್ದಿ ಫಲವೇನು | ಮನದಲ್ಲಿ ದೃಢಭಕ್ತಿ ಇಲ್ಲದ ಮನುಜನು"|| ಎಂದಿದ್ದಾರೆ.  ಶ್ರೀ ತ್ಯಾಗರಾಜರು ತಮ್ಮ ಕೃತಿಯ ಚರಣದಲ್ಲಿ "ಸೋಮಿದಮ್ಮ ಸೊಗಸುಗಂಡ್ರಗೋರಿತೇ | ಸೋಮಯಾಜಿ ಸ್ವರ್ಗಾರ್ಹುಡೌನೋ ? | ಕಾಮಕ್ರೋಧುಡು ತಂಪಂಬೊನರ್ಚಿತೇ | ಗಾಚಿ ರಕ್ಷಿಂಚುನೇ ? ತ್ಯಾಗರಾಜನುತ || -  ಮನಸ್ಸಿನ ನಿಗ್ರಹದ ವಿಷಯವನ್ನೇ ಬಹಳ ಪ್ರಮುಖವಾಗಿ ಇಲ್ಲಿ ಸಂತ ತ್ಯಾಗರಾಜರು ಪರಿಣಾಮಕಾರಿಯಾಗಿ ಒಂದು ನಿದರ್ಶನದಿಂದ ವಿವರಿಸಿದ್ದಾರೆ.  ಅರ್ಥ ತಿಳಿದು ಮಾಡುವ ಕರ್ಮಗಳಿಗೆ ಬಹು ವಿಶಿಷ್ಟವಾದ ಫಲಗಳಿವೆ ಎಂಬುದನ್ನು ತೋರಿಸಿದ್ದಾರೆ.  ಶ್ರೀರಾಮಚಂದ್ರ ಕೂಡ ಸೀತೆಯ ಸುವರ್ಣ ವಿಗ್ರಹವನ್ನು ಪಕ್ಕದಲ್ಲಿಟ್ಟುಕೊಂಡೇ ಅಶ್ವಮೇಧ ಯಾಗವನ್ನು ಆಚರಿಸಿದ್ದು.  ಅದರ ದೃಷ್ಟಾಂತದ ಹಿನ್ನೆಲೆಯಲ್ಲಿ ತ್ಯಾಗರಾಜರು ತಮ್ಮ ಈ ಕೃತಿಯ ಚರಣದಲ್ಲಿ "ಯಜ್ಞದೀಕ್ಷಿತನಾಗಿರುವವನ ಪತ್ನಿ ನವನಾಗರಿಕನನ್ನು ಅಪೇಕ್ಷಿಸಿದರೆ ಯಜ್ಞದ ಫಲವು ದೊರಕುವುದೇ ಎನ್ನುತ್ತಾ ಮನಸ್ಸು ಲೌಕಿಕ ಭೋಗಗಳಲ್ಲಿ ಮುಳುಗಿದ್ದಾಗ ಮಾಡುವ ಪೂಜೆಯಿಂದ ಭಗವಂತ ಪ್ರಸನ್ನನಾಗುವುದಿಲ್ಲ.  ಬಂಧ ಮೋಕ್ಷಗಳಿಗೆ ಕಾರಣವಾದ ಮನಸ್ಸನ್ನು ನಿಗ್ರಹಿಸಲೇ ಬೇಕು ಎಂದಿದ್ದಾರೆ.

ಭಗವದ್ಗೀತೆಯಲ್ಲಿ "ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಞಾನಾದ್ಧ್ಯಾನಂ ವಿಶಿಷ್ಯತೇ |
ಧ್ಯಾನಾತ್ ಕರ್ಮಫಲತ್ಯಾಗಸ್ಯಾಗಾಚ್ಛಾಂತಿರನಂತರಮ್" ||  - ಅಭ್ಯಾಸಯೋಗಕ್ಕಿಂತ ಜ್ಞಾನವು ಶ್ರೇಷ್ಠವಾದುದು ಏಕೆಂದರೆ ಆಧ್ಯಾತ್ಮಿಕ ಸಾಧನೆಗಳು ಭೌತಿಕ ಶರೀರಕ್ಕೆ ಸಂಬಂಧ ಪಟ್ಟವುಗಳಲ್ಲ.  ಅದು ಆಂತರಿಕ ವ್ಯಕ್ತಿತ್ವವನ್ನು ಸಮಗ್ರಗೊಳಿಸುವ ಸಾಧನೆ.  ಮೊದಲು ಜ್ಞಾನ ಸಂಪಾದನೆಯಾಗಬೇಕು.  ಅಭ್ಯಾಸಕ್ಕಿಂತಲೂ ಜ್ಞಾನ ಶ್ರೇಷ್ಠವಾದುದು.  ಜ್ಞಾನಕ್ಕಿಂತ ಧ್ಯಾನವು ಶ್ರೇಷ್ಠ - ಬರಿಯ ಜ್ಞಾನ ಸಂಪಾದಿಸಿಯೂ ಏನೂ ಫಲವಿಲ್ಲ.  ಗಳಿಸಿದ ಜ್ಞಾನವನ್ನು ಸತತವಾಗಿ ಧ್ಯಾನಿಸುತ್ತಿರಬೇಕು ಮತ್ತು ಜೀವನಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನ ನಿರಂತರ ಮಾಡುತ್ತಲೇ ಇರಬೇಕು.  ಇದು ಧ್ಯಾನದಿಂದ ಮಾತ್ರ ಸಾಧ್ಯ.  ಹಾಗೇ "ಧ್ಯಾನಕ್ಕಿಂತ ಕರ್ಮಫಲತ್ಯಾಗವು ಶ್ರೇಷ್ಠ" - ಧ್ಯಾನದ ಮೂಲಕ ಸಾಧಕರು ತಮ್ಮ ಮನಸ್ಸು ಮತ್ತು ಇತರ ಇಂದ್ರಿಯಗಳ ನಿಗ್ರಹ ಮಾಡಬೇಕು.  ಈ ಮನಸ್ಸು ಮತ್ತು ಇಂದ್ರಿಯಗಳ ಪರಿಧಿ ದಾಟಿ ಭಗವಂತನಲ್ಲಿ ಪ್ರಜ್ಞೆಯನ್ನು ಲೀನವಾಗಿಸಿಕೊಳ್ಳಲು ನಾವು ಕರ್ಮಫಲವನ್ನು ತ್ಯಾಗ ಮಾಡುವ ಮೂಲಕ ಮಾತ್ರ ಸಾಧ್ಯ ಮಾಡಿಕೊಳ್ಳ ಬಹುದು.  ಇಲ್ಲಿಯೂ ಭಗವಂತ ಮನೋನಿಗ್ರಹವೇ ಅತಿ ಮುಖ್ಯವೆಂಬ ಮಾತನ್ನು ಅರ್ಜುನನಿಗೆ ಉಪದೇಶಿಸುವುದರ ಮೂಲಕ ತಿಳಿಸಿದ್ದಾನೆ.


"ಮನವನಿತ್ತರೆ ತನ್ನನೀವನು" - ವಿದ್ಯುತ್ ಇಲ್ಲದೆ ಹೇಗೆ ಉಪಕರಣಗಳು ಜಡವೋ ಹಾಗೆ ನಮ್ಮ ಮನಸ್ಸೂ ಕೂಡ ಭಗವಂತನಿಲ್ಲದೆ ಜಡವಾಗಿರುತ್ತದೆ. ಮನಸ್ಸು ಕೊಡುವುದೆಂದರೆ ನಮ್ಮ ರಾಗ-ದ್ವೇಷಾದಿಗಳನ್ನೂ, ನಾನೆಂಬ ಅಹಂಕಾರವನ್ನೂ ತ್ಯಜಿಸುವುದು ಮತ್ತು ಸದಾ ಸರ್ವದಾ ಭಗವಂತನ ನಾಮಸ್ಮರಣೆ ಮಾಡುವುದು.  ಮನಸ್ಸೆಂಬುದು ಒಂದು ಪಾತ್ರೆಯಂತೆ ಎಂಬ ಆಲೋಚನೆ ಸಲ್ಲದು.  ಏಕೆಂದರೆ ಹಾಗೆ ಆಲೋಚಿಸಿದಾಗ ಅದರ ಒಳಗಿರುವ ಎಲ್ಲಾ ಕಲ್ಮಶಗಳನ್ನೂ ಹೊರಗೆ ಹಾಕಿ, ತೊಳೆಯಬಹುದೇನೋ ಎಂಬ ಭಾವ ಕೂಡ ಬರಬಹುದು.  ಆದರೆ ಹಾಗೆ ಮಾಡಲು ಸಾಧ್ಯವಿಲ್ಲ.  ಕಲ್ಮಶಗಳನ್ನು ಹೊರಚೆಲ್ಲಿ, ಪಾತ್ರೆಯನ್ನು ಶುದ್ಧಗೊಳಿಸಬೇಕೆಂದರೆ, ನಾವು ಪವಿತ್ರ ಗ್ರಂಥಗಳ ಪಾರಾಯಣ ಮಾಡುವುದು, ಪ್ರವಚನಗಳನ್ನು ಶ್ರವಣ ಮಾಡುವುದು ಮತ್ತು ಸತ್ಸಂಗದಲ್ಲಿ ಸದಾ ನಿರತರಾಗಿರುವುದನ್ನು ಬಿಡದೇ ಅನವರತ ಮಾಡುತ್ತಾ ಬಂದಾಗ ಮನದ ಕಲ್ಮಶಗಳೆಲ್ಲಾ ತೊಳೆದುಹೋಗಿ ಅಲ್ಲಿ ಸದ್ವಿಚಾರಗಳು, ಭಗವಂತನ ಚಿಂತನೆಗಳು ತುಂಬಿಕೊಳ್ಳುತ್ತವೆ.  ಹೀಗೆ ನಿರಂತರ ಶ್ರವಣ, ಪಾರಾಯಣಗಳಿಂದ ನಮ್ಮ ತಾದಾತ್ಮ್ಯತೆ / ತನ್ಮಯತೆ ಹೆಚ್ಚಿ, ಭಗವಂತನ ಕಡೆಗೆ ಮತ್ತಷ್ಟು, ಮಗದಷ್ಟು ಆಕರ್ಷಿತರಾಗುತ್ತೇವೆ. ಮಾನಸ ಪೂಜೆಯನ್ನು ಸದಾ ಮಾಡುತ್ತಿರುವ ಜೀವನಿಗೆ ಭಗವಂತ ಒಲಿದು ತನ್ನನ್ನೇ ಕೊಟ್ಟುಬಿಡುತ್ತಾನೆ.  ಮನಸ್ಸಿನಲ್ಲಿ ತಾನೇ ನಿಂತು ನಮಗೆ ಮನಸ್ಸಿನ ಸಮರ್ಪಣೆಗೆ ಪ್ರೇರಣೆ ಕೊಡುತ್ತಾ, ನಮ್ಮಲ್ಲಿರುವ ಅದ್ಭುತ ಶಕ್ತಿಯನ್ನು ಜಾಗೃತಿಗೊಳಿಸುವ ಕರುಣಾಸಮುದ್ರ ಶ್ರೀಹರಿಗೆ ಪ್ರತಿಯಾಗಿ ನಾವೇನು ಕೊಡಬಲ್ಲೆವು ? ಭಗವಂತ ತಾನು ಒಲಿದು ಕೊಟ್ಟ ಆ ಮನಸ್ಸಿನ ಸಂಪೂರ್ಣ ಚಟುವಟಿಕೆಗಳನ್ನು ಅವನಿಗೇ ಸಮರ್ಪಿಸಿಬಿಡುವುದೊಂದೇ ದಾರಿ.  ಆದರೆ ತಾನು ಕೊಟ್ಟ ಮನಸ್ಸನ್ನು ತನಗೇ ಮರಳಿ ಅರ್ಪಿಸುತ್ತಾರೆಂಬ ಭಾವವಾಗಲೀ, ಅಸಂತೋಷವಾಗಲಿ ಭಗವಂತನಿಗೆ ಇಲ್ಲವೇ ಇಲ್ಲ.  ಕೊಟ್ಟದ್ದನ್ನೇ, ಕೊಟ್ಟಷ್ಟನ್ನೇ ಸ್ವೀಕರಿಸಿ ಸಂತುಷ್ಟನಾಗಿ, ಹೆಚ್ಚಿಸಿ ನಮಗೇ ವಾಪಸ್ಸು ಕೊಡುವಂತಹ ಅಪಾರ ಉದಾರಿ, ಕರುಣಾಮಯಿ ಭಗವಂತ ಎ೦ದು ತಿಳಿಸುತ್ತಾರೆ ಜಗನ್ನಾಥದಾಸರು.

ಚಿ ತ್ರ ಕೃ ಪೆ : ಅಂ ತ ರ್ಜಾ ಲ