Thursday, July 14, 2011

೧. ಮಂಗಳಾಚರಣ ಸಂಧಿ - ೭ ನೇ ಚರಣ

ವೇದಪೀಠ ವಿರಿಂಚಿಭವ ಶ
ಕ್ರಾದಿ ಸುರವಿಜ್ಞಾನದಾಯಕ
ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ |
ಛೇದ ಭೇದ ವಿಷಾದ ಕುಟಿಲಾಂ
ತಾದಿಮಧ್ಯವಿದೂರ ಆದಾ
ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ  || ೭  ||

ಪ್ರತಿಪದಾರ್ಥ : ವೇದಪೀಠ - ಪೀಠವೆಂದರೆ ಆಶ್ರಯ; ವೇದಗಳಿಗೆ ಆಶ್ರಯವಾಗಿರುವ, ವಿರಿಂಚಿ - ಬ್ರಹ್ಮದೇವರು, ಭವ - ರುದ್ರದೇವರು, ಶಕ್ರ - ಇಂದ್ರದೇವರು, ಆದಿ ಸುರ - ಇತ್ಯಾದಿ ದೇವತೆಗಳಿಗೆ, ವಿಜ್ಞಾನದಾಯಕ - ವಿಶೇಷ ಜ್ಞಾನ ಅರಿವು, ಮೋದ ಚಿನ್ಮಯಗಾತ್ರ - ಆನಂದ ಹಾಗೂ ಜ್ಞಾನವನ್ನೇ ಶರೀರವಾಗಿ ಉಳ್ಳ, ಲೋಕಪವಿತ್ರ - ತಮ್ಮ ಜ್ಞಾನದಿಂದ ಲೋಕವನ್ನೇ ಪವಿತ್ರಗೊಳಿಸುವ, ಸುಚರಿತ್ರ - ಒಳ್ಳೆಯ ಚಾರಿತ್ರ್ಯ ಹೊಂದಿರುವ, ಛೇದ - ತುಂಡರಿಸಲಾಗದ, ಭೇದ - ಅಂಗ ಭೇದವಿಲ್ಲದ, ವಿಷಾದ - ವ್ಯಸನ, ಕುಟಿಲ - ಕಪಟ, ಅಂತ ಆದಿ ಮಧ್ಯ - ಕೊನೆ ಮೊದಲು ಮತ್ತು ಮಧ್ಯೆ, ವಿದೂರ - ದೋಷಗಳು ಸರ್ವತಾ ಇಲ್ಲದ, ಆದಾನಾದಿ ಕಾರಣ - ಆದಾನವೆಂದರೆ ತೆಗೆದುಕೊಳ್ಳುವುದು / ಅನಂತ ವೇದರಾಶಿಯಿಂದ ವೇದ ಭಾಗಗಳನ್ನು ತೆಗೆದು ಶಾಖೋಪಶಾಖೆಗಳಾಗಿ ವಿಂಗಡಿಸಿದ,  ಬಾದರಾಯಣ - ಬದರಿಯಲ್ಲಿ ನೆಲೆಸಿರುವ,  ಸತ್ರಾಣ - ಸಜ್ಜನರಿಗೆ ರಕ್ಷಣೆ ನೀಡುವ, ಪಾಹಿ - ನಮ್ಮನ್ನು ಕಾಪಾಡಿ.
ವ್ಯಾಸರು ಪರಾಶರ – ಸತ್ಯವತಿಯವರ ಪುತ್ರ. ಇವರ ಪುತ್ರರು ಬ್ರಹ್ಮ ಜ್ಞಾನಿಗಳಾದ ಶುಕಾಚಾರ್ಯರು.  ವೇದವ್ಯಾಸರಿಗೆ “ವೇದಪೀಠ”ವೆಂಬ ಹೆಸರೂ ಸಲ್ಲುತ್ತದೆ.  ವೇದ ಎಂದರೆ ಉಪಾಯ.  ಉಪಾಯ ಎಂದರೆ ಯೋಗ, ಯೋಗವನ್ನೇ ಪೀಠವನ್ನಾಗಿ ಉಳ್ಳವರು ಎಂದರ್ಥವಾಗುತ್ತದೆ.  ಶ್ರೀ ವೇದವ್ಯಾಸರು ಭಾರತ, ಭಾಗವತ, ಶ್ರುತಿ,  ಸ್ಮೃತಿಗಳಿಗೆ ಆಧಾರ ರೂಪವಾಗಿದ್ದಾರೆಂದು ಅವರಿಗೆ  ವೇದಪೀಠರೆಂದು ಹೆಸರು.  ಇವತ್ತಿಗೂ ನಾವು ಓದಲು / ಬರೆಯಲು ಉಪಯೋಗಿಸುವ ಪೀಠವನ್ನು “ವ್ಯಾಸಪೀಠ”ವೆಂದು ಸ್ಮರಿಸುತ್ತೇವೆ.  ಯಮುನಾ ನದಿಯ ದ್ವೀಪದಲ್ಲಿ ಜನಿಸಿದವರಾದ್ದರಿಂದ ಇವರನ್ನು ದ್ವೈಪಾಯನನೆಂದೂ ಕರೆಯುತ್ತಾರೆ.  ಬದರಿಕಾಶ್ರಮದಲ್ಲಿ ತಪಸ್ಸು ನಡೆಸುತ್ತಿರುವುದರಿಂದ ಬದರೀನಾರಾಯಣನೆಂದೂ, ಬೋರೇ ವೃಕ್ಷಗಳ ವನ (ಬಾದರ ಎಂದು ಹೆಸರು) ದಲ್ಲಿ ಯೋಗಾಸನಾರೂಢರಾಗಿರುವುದರಿಂದ ಅವರಿಗೆ “ಬಾದರಾಯಣ” ಎಂದೂ ಹೆಸರು.  ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದರಿಂದ “ವೇದವ್ಯಾಸ”ರು ಎಂಬ ಹೆಸರು ಬಂದಿತು.


ಜಗನ್ನಾಥ ದಾಸರು ತಮ್ಮ ಒಂದು ಕೃತಿಯಲ್ಲಿ ಶ್ರೀ ವೇದವ್ಯಾಸರ ಪೂರ್ಣ ಪರಿಚಯವನ್ನು ಹೀಗೆ ಮಾಡಿಕೊಡುತ್ತಾರೆ :ಮಧ್ವಾಂತರ್ಗತ ವೇದವ್ಯಾಸ ಮಮ - ಹೃದ್ವನರುಹಸನ್ನಿವಾಸ |
ಸದ್ವಿದ್ಯಾ ಕೊಡು ಶ್ರೀ ಕೃಷ್ಣದ್ವೈಪಾಯನ ಚಿದಚಿದ್ವಿ ಲಕ್ಷಣ ತ್ವತ್ಪಾದದ್ವಯಾಬ್ಜವ ತೋರೋ ||

ಬಾದರಾಯಣ ಬಹುರೂಪ ಸನಕಾದಿಸನ್ನುತ ಧರ್ಮಯೂಪ
ವೇದೋದ್ಧಾರಾದಾನಾದಿಕರ್ತ ಪೂರ್ಣಬೋಧ ಸದ್ಗುರು ವರರಾಧಿತ ಪದಯುಗ
ಮೇದಿನಿಯೊಳಾನೋರ್ವ ಪಾಮರಾಧಮನು ಕೈಪಿಡಿ ಕರುಣಮ
ಹೋದಧೇ ಕಮನೀಯಕಾಯ ಪ್ರಭೋಧಮುದ್ರಾಭಯಕರಾಂಬುಜ ||

ಹರಿತೋಪಲಾಭಶರೀರ ಪರಾಶರಮುನಿ ವರಸುಕುವರ
ಪರಮಪುರುಷಕಾರ್ತಸ್ವರಭರ್ಗ ಪ್ರಮುಖ ನಿರ್ಜರಗಣಮುನಿನುತ
ವರಪಾದಪಂಕಜ ಕುರುಕುಲದಿ ಧೃತರಾಷ್ಟ್ರಪಾಂಡುವಿದುರರ
ಪಡೆದೈವರಿಗೊಲಿದು ಸಂಹರಿಸಿ ದುರ್ಯೋಧನನ ಭಾರತ
ವಿರಚಿಸಿದ ಸುಂದರ ಕವೀಂದ್ರ ||

ಜಾತರೂಪ ಜಟಾಜೂಟ ಶ್ರೀನಿಕೇತನ ತಿಲಕಲಲಾಟ
ಪೀತಕೃಷ್ಣಾಜಿನ ಶ್ವೇತ ಶ್ರೀಯಜ್ಞೋಪವೀತ
ಮೇಖಲ ದಂಡಾನ್ವಿತ ಕಮಂಡಲ ಭೂತಭಾವನಭೂತಿಕೃತ್ಸ
ದ್ಬೂತಿದಾಯಕ ಶ್ರೀ ಜಗನ್ನಾಥ ವಿಠಲ ನಾ ತುತಿಸಬಲ್ಲೆನೆ ನಿನ್ನ ಮಹಿಮೆಯ
ಸುಖಾತ್ಮ ಪಾತಕನು ಅಲ್ಪಾತುಮನು ನಾ  ||

“ವ್ಯಾಸೋಚ್ಛಿಷ್ಟಂ ಜಗತ್ಸರ್ವಂ “  ಆದ್ದರಿಂದ ಯಾವುದೇ ಜ್ಞಾನಕ್ಕೂ ವ್ಯಾಸರೇ ಮೂಲ. ವೇದವ್ಯಾಸರ ಅಭಿಪ್ರಾಯವೇ ವೇದಗಳ ಅಭಿಪ್ರಾಯ.  ಅದರಂತೆಯೇ ಅವರಿಗೆ ವಿರೋಧವಲ್ಲದ ತತ್ವ ಜ್ಞಾನವನ್ನೇ ಇಲ್ಲಿ ಹೇಳಲಾಗಿದೆ.  ವೇದಾಧಿಕಾರಿಗಳಾದ ಬ್ರಹ್ಮ, ರುದ್ರ, ಇಂದ್ರರಿಗೂ ತತ್ವಜ್ಞಾನವನ್ನು ಕೊಡುವವರು, ಜ್ಞಾನವೇ ಶರೀರವಾಗುಳ್ಳವರು ವೇದವ್ಯಾಸರು.  ಬ್ರಹ್ಮಾದಿಗಳಿಂದಲೂ ಪೂಜೆಯನ್ನು ಸ್ವೀಕರಿಸುವವರು, ಸಜ್ಜನರ ರಕ್ಷಕರು ಆದ ಬಾದರಾಯಣರು ನಮಗೆ ಜ್ಞಾನವಿಟ್ಟು ರಕ್ಷಿಸಲಿ ಎಂದು ನಾರಾಯಣನ ಅವತಾರವಾದ ವೇದವ್ಯಾಸರಿಗೆ ಗುರುಮುಖತ್ವೇನ ನಮಸ್ಕರಿಸಿದ್ದಾರೆ. ಚಿತ್ರಕೃಪೆ : ಅಂತರ್ಜಾಲ

Sunday, July 10, 2011

೧. ಮಂಗಳಾಚರಣ ಸಂಧಿ - ೫ ಮತ್ತು ೬ ನೇ ಚರಣಗಳು


ಚತುರವದನನ ರಾಣಿ ಅತಿರೋ
ಹಿತ ವಿಮಲವಿಜ್ಞಾನಿ ನಿಗಮ ಪ್ರ
ತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ |
ನುತಿಸಿ ಬೇಡುವೆ ಜನನಿ ಲಕುಮೀ
ಪತಿಯ ಗುಣಗಳ ತುತಿಪುದಕೆ ಸ
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನಸದನದಲಿ || ೫ ||

ಪ್ರತಿಪದಾರ್ಥ :  ಚತುರವದನನರಾಣಿ - ನಾಲ್ಕು ಮುಖಗಳುಳ್ಳ ಬ್ರಹ್ಮನ ಪತ್ನಿಯೇ, ಅತಿರೋಹಿತ ವಿಮಲ ವಿಜ್ಞಾನಿ - ವಿಚಲನೆಗೊಳಗಾಗದ ನಿರ್ಮಲವಾದಂತಹ ವಿಶೇಷ ಜ್ಞಾನವುಳ್ಳವಳು, ನಿಗಮಪ್ರತತಿಗಳಿಗಭಿಮಾನಿ - ವೇದಗಳ ಸಮೂಹಕ್ಕೆ ಅಭಿಮಾನಿಯಾದ ದೇವತೆಯು, ವೀಣಾಪಾಣಿ - ಕಚ್ಛಪಿ ಎಂಬ ವೀಣೆಯನ್ನು ಕೈಯಲ್ಲಿ ಹಿಡಿದಿರುವವಳು, ಬ್ರಹ್ಮಾಣಿ - ಬ್ರಹ್ಮನ ಪತ್ನಿ, ಸಮಸ್ತ ವೇದಗಳನ್ನು ತಿಳಿದವಳು, ತತ್ವಜ್ಞಾನಿಯು, ನತಿಸಿ ಬೇಡುವೆ ಜನನಿ - ನಮಸ್ಕರಿಸಿ ಪ್ರಾರ್ಥಿಸುವೆ ತಾಯಿಯೇ, ಲಕುಮೀ ಪತಿಯ - ಲಕ್ಷ್ಮೀರಮಣನ, ಗುಣಗಳ ತುತಿಪುದಕೆ - ಗುಣಗಳನ್ನು ಸ್ತುತಿಸುವುದಕ್ಕೆ, ಸನ್ಮತಿಯ ಪಾಲಿಸಿ - ಶುದ್ಧವಾದ ಬುದ್ಧಿಯನ್ನು ದಯಪಾಲಿಸಿ, ನೆಲೆಸು ನೀ ಮದ್ವದನಸದನದಲಿ - ನನ್ನ ನಾಲಿಗೆಯಲ್ಲಿ ನೆಲೆಸು.

ಸರಸ್ವತಿ ದೇವಿಯು ವೇದಗಳ ಅಭಿಮಾನಿ. ಬ್ರಹ್ಮ ದೇವರ ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಅತಿರೋಹಿತವೆಂದರೆ ಮರೆವೆಯೇ ಇಲ್ಲದ, ತಡೆಯಿಲ್ಲದೇ ಪರಮಾತ್ಮನ ಸ್ತುತಿ ಮಾಡುವವಳು ಬ್ರಹ್ಮಾಣಿ – ತತ್ವಜ್ಞಾನಿ,  ಬ್ರಹ್ಮ ಮತ್ತು ಸರಸ್ವತಿ ಮಹತ್ತತ್ವಕ್ಕೆ ಸೇರಿದವರು. ಪರಮಾತ್ಮನ ಬಗ್ಗೆ ಶುದ್ಧವಾದ ವಿಮಲ ಜ್ಞಾನವು ನಿರಂತರವಾಗಿ ಹರಿಯುತ್ತಲೇ ಇರುತ್ತದೆ.  ಇವಳು ಪರಶುಕ್ಲತ್ರಯರಲ್ಲಿ ಒಬ್ಬಳು ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ತತ್ವಜ್ಞಾನಿ, ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.  ಬ್ರಹ್ಮ ದೇವರಿಗಿಂತ ೧೦೦ ಗುಣಗಳಲ್ಲಿ ಕಡಿಮೆ.  ಇವಳೂ ಋಜುಗಣಕ್ಕೆ ಸೇರಿದವಳಾದ್ದರಿಂದ ೩೨ ಲಕ್ಷಣಗಳು ಉಳ್ಳವಳು.  ೧೯೯ ಕಲ್ಪ ಸಾಧನೆಯಾದ ಮೇಲೆ ವಾಣೀ ಪದವಿಗೆ ಬರುವವಳು.  ವೇದಾಭಿಮಾನಿ, ವೇದದ್ವಾರ ಭಗವಂತನಲ್ಲಿ ಉಪಸಂಹಾರ ಮಾಡುವ ಚಿತ್ತಕ್ಕೆ ಅಭಿಮಾನಿ ಸರಸ್ವತಿ.  ನಾಲಿಗೆಗೂ ಅಭಿಮಾನಿ,    ಕ್ಷೀರಕ್ಕೂ ಅಭಿಮಾನಿ.  ಕ್ಷೀರದ ಬಣ್ಣ ಬಿಳುಪು ಮತ್ತು ಬಿಳುಪು ಎಂದರೆ ಜ್ಞಾನ.  ಜೀವರುಗಳಿಗೆ ಜ್ಞಾನ ಕ್ಷೀರ ಉಣಿಸುವವಳು ಸರಸ್ವತಿ ದೇವಿ. ಇಂತಹ ಅಭಿಮಾನಿ ದೇವತೆ ಸದ್ಗುಣಿ ಸರಸ್ವತಿಯು ನಮ್ಮ ವದನದಲ್ಲಿ ಇದ್ದು ಪರಮಾತ್ಮನ ಗುಣಗಳನ್ನು ನುಡಿಸಲಿ  ಎಂದು ದಾಸರು ಕೇಳಿಕೊಂಡಿದ್ದಾರೆ.

ಸರಸ್ವತಿ ದೇವಿಯ ಕುರಿತಾದ ಒಂದು ಪದದಲ್ಲಿ ದಾಸರು “ದಯಮಾಡೆ ದಯಮಾಡೆ ತಾಯೇ ವಾಗ್ದೇವಿ, ದಯದಿಂದ ನೀ ಎನ್ನ ನೋಡೆ..  ಜಗನ್ನಾಥ ವಿಠಲನ ಅಂಘ್ರಿಗಳ ಸೇವೆಯೊಳು.. ಸುಗುಣೆ ಸನ್ಮತಿ ಕೊಟ್ಟು ಬೇಗೆನ್ನ ಸಲಹೇ.. ಎಂದು ಕೇಳಿಕೊಳ್ಳುತ್ತಾರೆ.

ಇಂತಹ ವೀಣಾಪಾಣಿ ವಿಶ್ವ ಕಲ್ಯಾಣಿಯಾಗಿದ್ದಾಳೆ.  ಗಾಯನ, ನರ್ತನಗಳ ನಂದ ಪ್ರದಾಯಿನಿಯಾಗಿದ್ದಾಳೆ.  ಅವಳದು ಎಂತಹ ಗಾಯನವೆಂದರೆ ಮೌನದ ಗಾಯನ, ಎಂತಹ ನರ್ತನವೆಂದರೆ ಕಾಣದ ನರ್ತನ, ಧ್ಯಾನದ ಕಿವಿ ಕಣ್ಗಳಿಗೆ ಅಮೃತದ ಸ್ವಾದನ.  ಸಂಗೀತ ಶಾಸ್ತ್ರದಲ್ಲಿ ಬರುವ ಆಹತ – ಅನಾಹತ ನೆನಪಾಗುತ್ತದೆ.  ಆಹತವೆಂದರೆ ಕೇಳಿಸಿಕೊಳ್ಳುವ ಶಬ್ದ, ಅನಾಹತವೆಂದರೆ ಕೇಳಲು ಸಾಧ್ಯವಿಲ್ಲದಂತಹ ಶಬ್ದ.  ಇಂತಹ ಮೌನದ ಗಾಯನ, ಕಾಣದ ನರ್ತನವನ್ನು ಸರಸ್ವತಿ ದೇವಿ ಪರಮಾತ್ಮ ಚನ್ನಕೇಶವ ಸ್ವಾಮಿಗೆ ಅರ್ಪಿಸುತ್ತಾಳೆ.  ಡಿವಿಜಿಯವರು ತಮ್ಮ ಅಂತಃಪುರ ಗೀತೆಯ ಸಂಕಲನದಲ್ಲಿ ಯಾರು ಸದಾ ಸರಸ್ವತಿ ದೇವಿಯ ಧ್ಯಾನದಲ್ಲಿ ಇರುವರೋ ಅವರಿಗೆ ಈ ಗಾಯನ ಮತ್ತು ನರ್ತನ ಅಮೃತದ ಸ್ವಾದನದಂತೆ ಇರುತ್ತದೆ  ಎನ್ನುತ್ತಾರೆ . 

ಕೃತಿರಮಣ ಪ್ರದ್ಯುಮ್ನ ನಂದನೆ |
ಚತುರವಿಂಶತಿ ತತ್ವಪತಿ ದೇ |
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ ||
ಸತತ ಹರಿಯಲಿ ಗುರುಗಳಲಿ ಸ |
ದ್ರತಿಯ ಪಾಲಿಸಿ ಭಾಗವತ ಭಾ |
ತರಪುರಾಣರಹಸ್ಯ ತತ್ವಗಳರುಪು ಕರುಣದಲಿ  || ೬ ||


ಪ್ರತಿಪದಾರ್ಥ :  ಕೃತಿರಮಣ ಪ್ರದ್ಯುಮ್ನ - ರಮಾದೇವಿಯ ಮಾಯಾ ಮೊದಲಾದ ನಾಲ್ಕು ರೂಪಗಳಲ್ಲಿ ಮೂರನೆಯ ರೂಪ ಕೃತಿ, ರಮಣ - ಮಹಾಲಕ್ಷ್ಮಿಯ ಪತಿಯಾದ ಪ್ರದ್ಯುಮ್ನ ರೂಪಿ ಭಗವಂತ, ನಂದನೆ - ಪ್ರದ್ಯುಮ್ನ ರೂಪಿ ಭಗವಂತನಾದ ಶ್ರೀಹರಿಯ ಪುತ್ರಿ, ಚತುರವಿಂಶತಿ ತತ್ತ್ವಪತಿ - ೧೦ ದಶಕರಣ, ಪಂಚಭೂತ, ಪಂಚತನ್ಮಾತ್ರ, ಅವ್ಯಕ್ತತತ್ವ, ಅಹಂಕಾರ ತತ್ವ, ಬುದ್ಧಿ ತತ್ವ, ಮನಸ್ತತ್ವ ಎಂಬ ೨೪ ತತ್ತ್ವಗಳಿಗೆ ತತ್ವಾಭಿಮಾನಿ ದೇವತೆಗಳಲ್ಲಿ ಒಬ್ಬರಾದ ಹಾಗೂ ದೇವತೆಗಳಿಗೆ ಗುರುವೆನಿಸುತಿಹ - ಸಮಸ್ತ ದೇವತೆಗಳಿಗೂ ಗುರುವೆನ್ನಿಸಿರುವ, ಮಾರುತನ - ವಾಯುದೇವರ, ನಿಜಪತ್ನಿ - ನೀತಪತ್ನಿ ಸರ್ವ ಅವತಾರಗಳಲ್ಲಿಯೂ ವಾಯುದೇವರಿಗೇ ಪತ್ನಿಯಾಗಿರುವವಳು, ಸತತ ಹರಿಯಲಿ ಗುರುಗಳಲಿ - ನಿರಂತರವಾಗಿ ಭಗವಂತನಾದ ಶ್ರೀಹರಿಯಲ್ಲಿಯೂ ಮತ್ತು ಗುರುಗಳಲ್ಲಿಯೂ, ಸದ್ರತಿಯ - ಉತ್ತಮವಾದ ಭಕ್ತಿ, ರತಿ ಎಂದರೆ ಪ್ರೀತಿ-ಭಕ್ತಿ-ಸುಖವೆಂದು ಅರ್ಥವಾಗುವುದು.  ಈ ಮೂರಕ್ಕೂ ಭಾರತೀದೇವಿ ಅಭಿಮಾನಿ ದೇವತೆಯಾದ್ದರಿಂದ ಸದ್ರತಿಯನ್ನು ಬೇಡುವುದು, ಪಾಲಿಸಿ - ಕರುಣಿಸಿ, ಭಾಗವತ - ಶ್ರೀಮದ್ಭಾಗವತ, ಭಾರತ - ಮಹಾಭಾರತ, ಪುರಾಣ - ಇತರ ಎಲ್ಲಾ ಪುರಾಣಗಳು, ರಹಸ್ಯ ತತ್ತ್ವಗಳ - ಮೇಲ್ನೋಟದ ಅರ್ಥವನ್ನಲ್ಲದೇ ಅಂತರಾರ್ಥವನ್ನು, ಅರುಪು ಕರುಣದಲಿ - ಕರುಣೆಯಿಂದ ತಿಳಿಸಿಕೊಡು.

ಈ ಚರಣದಲ್ಲಿ ಭಾರತಿ ದೇವಿಯನ್ನು ಕುರಿತು ಸ್ತುತಿಸಿದ್ದಾರೆ.  ವಾಯು ಮತ್ತು ಭಾರತಿ ದೇವಿಯರೂ ಕೂಡ ಮಹತ್ತತ್ತ್ವಕ್ಕೆ ಸೇರಿದವರು.  ಭಾರತಿ ದೇವಿ ಕೃತಿ + ಪ್ರದ್ಯುಮ್ನನ ಮಗಳು.  ೨೪ ತತ್ವಗಳಿಗೂ ಪತಿ, ದೇವತೆ, ಗುರು ಎನಿಸುವ ವಾಯುದೇವರ ನೀತಪತ್ನಿ.  ಇವಳೂ ಕೂಡ ತತ್ವಾಭಿಮಾನಿ, ವೇದಾಭಿಮಾನಿ ದೇವತೆಯಾಗಿರುವುದರಿಂದ ಯಾವಾಗಲೂ ಹರಿ, ಗುರುಗಳಲ್ಲಿ ಸದ್ಭಕ್ತಿಯನ್ನು ಪಾಲಿಸಿ ಭಾಗವತ, ಭಾರತ, ಪುರಾಣ ಇವುಗಳ ರಹಸ್ಯ ತತ್ವಗಳನ್ನು ಕರುಣದಿಂದ ತಿಳಿಸಿಕೊಡಲಿ ಎಂದು ಬೇಡಿ ಕೊಳ್ಳುತ್ತಾರೆ.

ಭಾರತಿ ಮಜ್ಜನನಿ ಎಂಬ ದಿವ್ಯವಾದ ಪದ್ಯದಲ್ಲಿ ಭಾರತಿ ದೇವಿಯ ನಾನಾ ರೂಪಗಳ ವರ್ಣನೆಯನ್ನು ದಾಸರು ಮಾಡಿದ್ದಾರೆ.  ಭಾರತೀ ದೇವಿಯನ್ನು ವಿದ್ಯುನ್ನಾಮಕೆಯೆಂದು ಕರೆಯುತ್ತಾರೆ.  ಬ್ರಹ್ಮ ವಿದ್ಯೆಯನ್ನು ಪಾಲಿಸೆಂದು ಕೇಳಿಕೊಳ್ಳುತ್ತಾರೆ.  ಬುದ್ಧಿಯ ಅಭಿಮಾನಿ, ಸದ್ಯೋಜಾತನನ್ನು (ಈಶ್ವರ) ಹೆತ್ತ ಶ್ರದ್ಧಾ ಎಂಬ ಹೆಸರುಳ್ಳವಳೇ ಪರಮಾತ್ಮ ಅನಿರುದ್ಧನನ್ನು ತೋರಿಸು ಎಂದು ಬೇಡಿಕೊಳ್ಳುತ್ತಾರೆ.  ಮತ್ತೆ ಅವಳ ಅವತಾರಗಳಾದ ಇಂದ್ರಸೇನ ನಳನಂದಿನಿ ಜ್ಞಾನವನ್ನು ಕರುಣಿಸು,  ಪುರಂದರ (ದೇವೆಂದ್ರ)ರಿಂದ ಆರಾಧಿತಳಾದವಳೇ, ಕಾಳಿ, ದ್ರೌಪತಿ, ಶಿವಕನ್ಯಾ, ನಮ್ಮ ಮನ್ಮನದಲ್ಲಿ ನಿಂತು ಕಾಪಾಡು, ಅಲ್ಲದೇ ಶೈಲಜಾ, ಶ್ಯಾಮಲಾ, ಪೌಲೋಮಿ, ಉಷೆ ಇವರುಗಳಿಂದ ಓಲೈಸಿಕೊಳ್ಳುವವಳು ನೀನು ಎಂದು ಹೊಗಳುತ್ತಾರೆ.

ಚಿತ್ರಕೃಪೆ  : ಅಂತರ್ಜಾಲ

Friday, July 1, 2011

ಮಂಗಳಾಚರಣ ಸಂಧಿ - ೪ ನೇ ಚರಣ 
ಆರು ಮೂರೆರಡೊಂಡು ಸಾವಿರ

ಮೂರೆರಡು ಶತಶ್ವಾಸ ಜಪಗಳ

ಮೂರುವಿಧ ಜೀವರೊಳಗಬ್ಜಜ ಕಲ್ಪಪರಿಯಂತ|

ತಾ ರಚಿಸಿ ಸತ್ವರಿಗೆ ಸುಖ ಸಂ

ಸಾರ ಮಿಶ್ರರಿಗಧಮ ಜನರಿಗ

ಪಾರ ದು:ಖಗಳೀವ ಗುರು ಪವಮಾನ ಸಲಹೆಮ್ಮ || ೪ ||
 ಪ್ರತಿಪದಾರ್ಥ : ಆರು ಮೂರು - ೧೮ (೬x೩), ಎರಡೊಂದು - (೨+೧)೩, ೧೮+೩ = ೨೧ ಹೀಗೆ ಇಪ್ಪತ್ತೊಂದು ಸಾವಿರ, ಮೂರೆರಡು ಶತ - ೬೦೦ (೨೦೦x೨) ಅಂದರೆ ಒಟ್ಟು ಇಪ್ಪತ್ತೊಂದು ಸಾವಿರದ ಆರುನೂರು ಶ್ವಾಸಜಪಗಳು ಎಂದರ್ಥ, ಮೂರುವಿಧ ಜೀವರೊಳು - ಸತ್ವ ರಜಸ್ಸು ತಮಸ್ಸೆಂಬ ಮೂರು ಗುಣಗಳನ್ನು ಹೊಂದಿರುವ ಜೀವಿಗಳೊಳಗೆ,   ಅಬ್ಜಜಕಲ್ಪಪರಿಯಂತ - ಬ್ರಹ್ಮ ಕಲ್ಪ ಸಂಪೂರ್ಣವಾಗುವವರೆಗೂ, ತಾ ರಚಿಸಿ - ತಾನು ಮಾಡಿ, ಸಾತ್ವರಿಗೆ ಸುಖ - ಸತ್ವ ಗುಣ ಹೊಂದಿರುವ ಸಾತ್ವಿಕರಿಗೆ ಸುಖ (ಮೋಕ್ಷ) ಸಂಸಾರ ಮಿಶ್ರರಿಗೆ - ರಜೋಗುಣ (ಸತ್ವ ಹಾಗೂ ತಮೋಗುಣಗಳ ಮಿಶ್ರ) ಹೊಂದಿರುವವರಿಗೆ ಸಂಸಾರ (ಸುಖ ದುಃಖಗಳನ್ನು ಏಕವಾಗಿ ಭೋಜನ ಮಾಡುವಂತಹವರು), ಅಧಮ ಜನರಿಗಪಾರ ದುಃಖಗಳ - ತಮೋಗುಣ ಪ್ರಧಾನವಾದ ಜೀವಗಳಿಗೆ ಸಹಿಸಲಸಾಧ್ಯವಾದಷ್ಟು ದುಃಖವನ್ನು, ಈವ ಗುರುಪವಮಾನ - ಕೊಡುವ ಜೀವೋತ್ತಮರಾದ ವಾಯುದೇವರೆ, ಸಲಹೆಮ್ಮ - ನಮ್ಮನ್ನು ಪಾಲಿಸು.

ನಾಲ್ಕನೇ ಪದ್ಯದಲ್ಲಿ ವಾಯು ದೇವರಿಂದ ಜೀವರುಗಳು ಪಡೆಯುತ್ತಿರುವ ಉಪಕಾರವನ್ನು ಹೇಳಿ ವಾಯುದೇವರನ್ನು ಸ್ತುತಿಸಿದ್ದಾರೆ.  ಈ ಶ್ವಾಸ ಜಪವನ್ನು ಹಂಸಮಂತ್ರವೆಂದು ಕರೆಯುತ್ತಾರೆ.  ಉಚ್ವಾಸವಿಲ್ಲದ ವಿರಾಮ ಕಾಲದಲ್ಲಿ ಹಂಸ: ಎಂದರೆ ಆಯಾಸವಾಗುವುದಿಲ್ಲ.  ಹೀಗಾಗಿ ಇದನ್ನು ವಾಯುದೇವರು ಜೀವರುಗಳಲ್ಲಿ ನಿಂತು ಮಾಡುವ ಹಂಸಜಪ ಎನ್ನುತ್ತಾರೆ. 
ಹಂಸಜಪವು  ಬಾಹ್ಯದ ಭೋಗವಿಷಯಗಳ ಸಂಪರ್ಕವಿಲ್ಲದಂತೆ, ಧ್ಯಾನದಂತೆ ನಡೆಯುತ್ತಿರುತ್ತದೆ. ಯೋಗ ಗ್ರಂಥಗಳು ಇದನ್ನು ಪ್ರಾಣಾಯಾಮದ ಶ್ವಾಸೋಚ್ಛ್ವಾಸಗಳಲ್ಲಿ ನಡೆಯುವ ಓಂ ಎಂಬ “ಅಜಪಾ ಗಾಯತ್ರಿ” ಎಂದಿವೆ.  ಯೋಗ ಪರಿಭಾಷೆಯಲ್ಲಿ ಪ್ರಾಣಶಕ್ತಿಯಿಂದ ಮೂಗಿನ ಮೂಲಕ ಉಸಿರಾಡುತ್ತಾ ವಾಯುವನ್ನು ಒಳಕ್ಕೆ ಸೆಳೆಯುವುದು ಪೂರಕ (ಸೋಹಂ); ಅದೇ ರೀತಿ ಉಸಿರಾಡುತ್ತಾ ಒಳಗೆ ಸೆಳೆದಿದ್ದ ವಾಯುವನ್ನು ಹೊರಕ್ಕೆ ಬಿಡುವುದು ರೇಚಕ (ಸ್ವಾಹಾ); ಪೂರಕ-ರೇಚಕಗಳ ನಡುವೆ ಸೆಳೆದ ವಾಯು ತಾನಾಗಿ ಹೊರಕ್ಕೆ ಹೋಗದಂತೆಯೂ, ಹೊರಗಿನ ವಾಯು ಒಳಕ್ಕೆ ನುಗ್ಗದಂತೆಯೂ ತಡೆಯುವ ಕ್ರಿಯೆ ಕುಂಭಕ.  ಪೂರಕ-ರೇಚಕಗಳ ನಡುವೆ “ಹಂಸ:” ಎಂದರೆ ಆಯಾಸವಾಗುವುದಿಲ್ಲ ಮತ್ತು ಈ ಪೂರಕ-ರೇಚಕಗಳಲ್ಲಿ “ಅಜಹಾ ಹಂಸಗಾಯತ್ರಿ”ಯ “ಓಂ” ಜಪ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಒಕ ದಿನಮು ಲೆಕ್ಕ ಪೆಟ್ಟಿನ ಚಾಲು  ಎನ್ನುತ್ತಾ ತಾತಯ್ಯನವರು  ಒಂದೇ ಒಂದು ದಿನಕ್ಕೂ ಲೆಕ್ಕವಿಡುವುದು ಸಾಮಾನ್ಯ ಮನುಷ್ಯರಿಗೆ ನಿಲುಕದ್ದು  ಎನ್ನುತ್ತಾ  ಹಂಸಜಪದ ಮಹತ್ವವನ್ನು ತಿಳಿಯಪಡಿಸುತ್ತಾರೆ. 

ಈ ಹಂಸ ಮಂತ್ರದ ಸಂಖ್ಯೆಯನ್ನು ಜಗನ್ನಾಥ ದಾಸರು ಚಮತ್ಕಾರವಾಗಿ ವರ್ಣಿಸುತ್ತಾರೆ.  ೬ X ೩ = ೧೮ + ೨ +೧ = ೨೧,೦೦೦ ೩ ಎರಡು ಶತ = ೩೦೦ + ೩೦೦ = ೬೦೦.  ಒಟ್ಟು ೨೧,೬೦೦ ಶ್ವಾಸ ಜಪವನ್ನು ವಾಯುದೇವರು  ೩ ವಿಧ ಜೀವರೊಳಗೂ ನಿಂತು ಬ್ರಹ್ಮ ಕಲ್ಪದವರೆಗೂ ರಚಿಸುತ್ತಾರೆ.  

ಸತತವಾಗಿ ಎಷ್ಟು ಹೊತ್ತಿಗೆ ಎಷ್ಟು ಜಪ ನಮಗಾಗಿ ವಾಯುದೇವರು ಮಾಡುತ್ತಾರೆಂಬುದನ್ನು ಶ್ರೀ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ “ಶ್ರೀಮದ್ಧರಿಕಥಾಮೃತಸಾರ ಸಾರ ಸಂಗ್ರಹ ಹಾಗೂ ಶ್ರೀಜಗನ್ನಾಥದಾಸರ ಉಪಮೆಗಳು” ಎಂಬ ಪುಸ್ತಕದಲ್ಲಿ  ಹೀಗೆ ವಿವರಿಸಿದ್ದಾರೆ 


          ಒಂದು ಘಳಿಗೆಗೆ (೨೪ ನಿಮಿಷ)            ೩೬೬  ಜಪ

            ಒಂದು ತಾಸಿಗೆ (೬೦ ನಿಮಿಷ)           ೯೦೦  ಜಪ

            ಒಂದು ಯಾಮಕ್ಕೆ (೩ ತಾಸು)        ೨೭೦೦  ಜಪ

            ಎರಡು ಯಾಮಕ್ಕೆ                        ೫೪೦೦  ಜಪ

            ಮೂರು ಯಾಮಕ್ಕೆ                       ೮೧೦೦  ಜಪ

            ನಾಲ್ಕು ಯಾಮಕ್ಕೆ                    ೧೦೮೦೦  ಜಪ

            ಒಂದು ದಿನಕ್ಕೆ                         ೨೧೬೦೦  ಜಪ

ಸತ್ವರಿಗೆ ಸುಖ, ಸಂಸಾರಿಗಳಿಗೆ ಮಿಶ್ರ ಹಾಗೂ ಅಧಮ ಜೀವಿಗಳಗೆ ದು:ಖಾನು ದು:ಖವನ್ನು ಕೊಡುವ ಗುರು ಪವಮಾನ ಸಲಹು ಎಮ್ಮನು ಎಂದು ದಾಸರು ವಿನಮ್ರರಾಗಿ ಕೇಳಿ ಕೊಳ್ಳುತ್ತಾರೆ.

ಹೀಗೆ ವಾಯುದೇವರಲ್ಲಿ ದಾಸರ ಭಕ್ತಿ ಪಸರಿಸುತ್ತಾ ಹೋಗುತ್ತದೆ.  ಅದನ್ನೇ ತಮ್ಮ ಪದಗಳಲ್ಲೂ ತಂದಿದ್ದಾರೆ.  ಅವರು “ಹರಿ ಸರ್ವೋತ್ತಮ.. ವಾಯು ಜೀವೋತ್ತಮ” ಎಂದು ವಾಯುದೇವರನ್ನು ಸ್ತುತಿಸುತ್ತಿರುತ್ತಾರೆ.  “ಅಪಮೃತ್ಯು ಪರಿಹರಿಸು ಅನಿಲದೇವ” ಎಂಬ ಕೃತಿಯಲ್ಲಿ  ನಮ್ಮ ಶರೀರವು ಸಾಧನಾ ಶರೀರ, ನಿನ್ನ ದಯದಿಂದ ಸಿಕ್ಕಿದೆ.  ವೇದವಾದೋದಿತ ಜಗನ್ನಾಥ ವಿಠಲನ ಪಾದ ಭಕುತಿಯನ್ನು ಸದಾ ನಮಗೆ ಕೊಟ್ಟು ಮೋದವನ್ನು ಕೊಡಿಸು ಎಂದೂ, “ಪವಮಾನ ನಮ್ಮ ಗುರು ಶ್ರೀ ವಲ್ಲಭನಿಗೆ ಪ್ರತಿಬಿಂಬ” ಸೀತಾರಮಣ ಜಗನ್ನಾಥ ವಿಠಲ ದೂತ ಎಂದೂ ಹಾಡಿದ್ದಾರೆ.  “ಪ್ರಾಣದೇವ ನೀನಲ್ಲದೆ ಕಾಯುವರ ಕಾಣೆ” ಎಂದು ಸ್ತೋತ್ರ ಮಾಡುವಾಗ “ನೀನೇ ಪರಿಸರ, ಭೂತೇಂದ್ರಿಯಗಳ ಅಧಿನಾಥ ಜಗನ್ನಾಥ ವಿಠಲನ ಪ್ರೀತಿ ಪಾತ್ರನಾದೆ” ಎಂದು ಪ್ರಾರ್ಥಿಸಿದ್ದಾರೆ.  ಇನ್ನು “ಬಂದೆ ಗುರುರಾಯ ನಿನ್ನ ಸಂದರ್ಶನವ ಬಯಸಿ” ಎಂಬ ಕೃತಿಯಲ್ಲಂತೂ ವಾಯುದೇವರ ೩ ಅವತಾರಗಳನ್ನು ವರ್ಣಿಸುತ್ತಾ


ರಾಮದೂತನಾಗಿ ತ್ರಿಜಗದೊಳಗೆ ಮೆರೆದವರ

 ಕಾಮಿನೀಮಣಿಗೆ ನೇಮದಿಂದುಂಗುರವನಿತ್ತೆ  ||೧||


ಇನಕುಲದಿ ಜನಿಸಿ ಗುಣಸಾಂದ್ರನಾಗಿ ಬಂಡಿ

ಅನ್ನವನುಂಡು ದುರುಳರ ಚೆಂಡಾದಿದ್ದು ಕೇಳಿ  ||೨||


ಕಟ್ಟಾ ಕಡೆಯಲ್ಲಿ ಯತಿಯಾಗಿ ಕೆಟ್ಟ ಮತಗಳ ತರಿದು

ಪುಟ್ಟ ಜಗನಾಥ ವಿಠಲನ ದಾಸರ ಪೊರೆವುದ ಕೇಳಿ  ||೩||

ಯತಿಯಾಗಿ ಅಂದರೆ ಇಲ್ಲಿ ಮಧ್ವಾಚಾರ್ಯರಾಗಿ ಉಡುಪಿಯಲ್ಲಿ ಪುಟ್ಟ ಜಗನ್ನಾಥ ವಿಠಲ ಎಂದು ಪುಟ್ಟ ಕೃಷ್ಣನನ್ನು ಪೂಜಿಸಿ, ನಿನ್ನ ದಾಸರನ್ನು ಪೊರೆ ಎಂದು ಹಾಡಿ ಹೊಗಳಿ ನಮಿಸಿದ್ದಾರೆ.

ಡಿವಿಜಿಯವರು ತಮ್ಮ ಕಗ್ಗದಲ್ಲಿ  ವಾಯುವಂ ಕಾಣ್ಬನಾರ್ ? ತತ್ಕ್ರಿಯೆಯ ಕಾಣನಾರ್ ?  ಎನ್ನುತ್ತಾ  ಗಾಳಿಯನ್ನು (ವಾಯು ದೇವರನ್ನು) ಕಾಣಲು ಸಾಧ್ಯವಿಲ್ಲವಾದರೂ, ನಾವು ಅದರ ಕೆಲಸವನ್ನು ಕಂಡೇ ಕಾಣುತ್ತೇವೆ.  ರಾಯನಂ ಕಾಣಲಾಗದೆ ಮಂತ್ರಿಯೆಡೆ ಸಾರ್ವ | ದೇಯಾರ್ಥಿವೊಲು ನೀನು – ಮಂಕುತಿಮ್ಮ   -  ಎಂದರೆ ಒಳಗಿರುವ ಪರಮಾತ್ಮನ ಇರುವು ತಿಳಿಯಲು, ನಾವು ಮೊದಲು “ಹಂಸಜಪ”ದ ಮೂಲಕ ಅಂದರೆ “ವಾಯುದೇವಾಂತರ್ಗತ”ವೇ ಪರಮಾತ್ಮನ ಬಳಿಗೆ ಸಾರಬೇಕು ನೇರವಾಗಿ ಭಗವಂತನ ಅನುಗ್ರಹ ನಮಗೆ ಸಿಕ್ಕದು ಎಂಬ ಮಾತನ್ನು ಪುಷ್ಟೀಕರಿಸುತ್ತಾರೆ.