ವೇದಪೀಠ ವಿರಿಂಚಿಭವ ಶ
ಕ್ರಾದಿ ಸುರವಿಜ್ಞಾನದಾಯಕ
ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ |
ಛೇದ ಭೇದ ವಿಷಾದ ಕುಟಿಲಾಂ
ತಾದಿಮಧ್ಯವಿದೂರ ಆದಾ
ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ || ೭ ||
ಪ್ರತಿಪದಾರ್ಥ : ವೇದಪೀಠ - ಪೀಠವೆಂದರೆ ಆಶ್ರಯ; ವೇದಗಳಿಗೆ ಆಶ್ರಯವಾಗಿರುವ, ವಿರಿಂಚಿ - ಬ್ರಹ್ಮದೇವರು, ಭವ - ರುದ್ರದೇವರು, ಶಕ್ರ - ಇಂದ್ರದೇವರು, ಆದಿ ಸುರ - ಇತ್ಯಾದಿ ದೇವತೆಗಳಿಗೆ, ವಿಜ್ಞಾನದಾಯಕ - ವಿಶೇಷ ಜ್ಞಾನ ಅರಿವು, ಮೋದ ಚಿನ್ಮಯಗಾತ್ರ - ಆನಂದ ಹಾಗೂ ಜ್ಞಾನವನ್ನೇ ಶರೀರವಾಗಿ ಉಳ್ಳ, ಲೋಕಪವಿತ್ರ - ತಮ್ಮ ಜ್ಞಾನದಿಂದ ಲೋಕವನ್ನೇ ಪವಿತ್ರಗೊಳಿಸುವ, ಸುಚರಿತ್ರ - ಒಳ್ಳೆಯ ಚಾರಿತ್ರ್ಯ ಹೊಂದಿರುವ, ಛೇದ - ತುಂಡರಿಸಲಾಗದ, ಭೇದ - ಅಂಗ ಭೇದವಿಲ್ಲದ, ವಿಷಾದ - ವ್ಯಸನ, ಕುಟಿಲ - ಕಪಟ, ಅಂತ ಆದಿ ಮಧ್ಯ - ಕೊನೆ ಮೊದಲು ಮತ್ತು ಮಧ್ಯೆ, ವಿದೂರ - ದೋಷಗಳು ಸರ್ವತಾ ಇಲ್ಲದ, ಆದಾನಾದಿ ಕಾರಣ - ಆದಾನವೆಂದರೆ ತೆಗೆದುಕೊಳ್ಳುವುದು / ಅನಂತ ವೇದರಾಶಿಯಿಂದ ವೇದ ಭಾಗಗಳನ್ನು ತೆಗೆದು ಶಾಖೋಪಶಾಖೆಗಳಾಗಿ ವಿಂಗಡಿಸಿದ, ಬಾದರಾಯಣ - ಬದರಿಯಲ್ಲಿ ನೆಲೆಸಿರುವ, ಸತ್ರಾಣ - ಸಜ್ಜನರಿಗೆ ರಕ್ಷಣೆ ನೀಡುವ, ಪಾಹಿ - ನಮ್ಮನ್ನು ಕಾಪಾಡಿ.
ವ್ಯಾಸರು ಪರಾಶರ – ಸತ್ಯವತಿಯವರ ಪುತ್ರ. ಇವರ ಪುತ್ರರು ಬ್ರಹ್ಮ ಜ್ಞಾನಿಗಳಾದ ಶುಕಾಚಾರ್ಯರು. ವೇದವ್ಯಾಸರಿಗೆ “ವೇದಪೀಠ”ವೆಂಬ ಹೆಸರೂ ಸಲ್ಲುತ್ತದೆ. ವೇದ ಎಂದರೆ ಉಪಾಯ. ಉಪಾಯ ಎಂದರೆ ಯೋಗ, ಯೋಗವನ್ನೇ ಪೀಠವನ್ನಾಗಿ ಉಳ್ಳವರು ಎಂದರ್ಥವಾಗುತ್ತದೆ. ಶ್ರೀ ವೇದವ್ಯಾಸರು ಭಾರತ, ಭಾಗವತ, ಶ್ರುತಿ, ಸ್ಮೃತಿಗಳಿಗೆ ಆಧಾರ ರೂಪವಾಗಿದ್ದಾರೆಂದು ಅವರಿಗೆ ವೇದಪೀಠರೆಂದು ಹೆಸರು. ಇವತ್ತಿಗೂ ನಾವು ಓದಲು / ಬರೆಯಲು ಉಪಯೋಗಿಸುವ ಪೀಠವನ್ನು “ವ್ಯಾಸಪೀಠ”ವೆಂದು ಸ್ಮರಿಸುತ್ತೇವೆ. ಯಮುನಾ ನದಿಯ ದ್ವೀಪದಲ್ಲಿ ಜನಿಸಿದವರಾದ್ದರಿಂದ ಇವರನ್ನು ದ್ವೈಪಾಯನನೆಂದೂ ಕರೆಯುತ್ತಾರೆ. ಬದರಿಕಾಶ್ರಮದಲ್ಲಿ ತಪಸ್ಸು ನಡೆಸುತ್ತಿರುವುದರಿಂದ ಬದರೀನಾರಾಯಣನೆಂದೂ, ಬೋರೇ ವೃಕ್ಷಗಳ ವನ (ಬಾದರ ಎಂದು ಹೆಸರು) ದಲ್ಲಿ ಯೋಗಾಸನಾರೂಢರಾಗಿರುವುದರಿಂದ ಅವರಿಗೆ “ಬಾದರಾಯಣ” ಎಂದೂ ಹೆಸರು. ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದರಿಂದ “ವೇದವ್ಯಾಸ”ರು ಎಂಬ ಹೆಸರು ಬಂದಿತು.
ಜಗನ್ನಾಥ ದಾಸರು ತಮ್ಮ ಒಂದು ಕೃತಿಯಲ್ಲಿ ಶ್ರೀ ವೇದವ್ಯಾಸರ ಪೂರ್ಣ ಪರಿಚಯವನ್ನು ಹೀಗೆ ಮಾಡಿಕೊಡುತ್ತಾರೆ :
ಮಧ್ವಾಂತರ್ಗತ ವೇದವ್ಯಾಸ ಮಮ - ಹೃದ್ವನರುಹಸನ್ನಿವಾಸ |
ಸದ್ವಿದ್ಯಾ ಕೊಡು ಶ್ರೀ ಕೃಷ್ಣದ್ವೈಪಾಯನ ಚಿದಚಿದ್ವಿ ಲಕ್ಷಣ ತ್ವತ್ಪಾದದ್ವಯಾಬ್ಜವ ತೋರೋ ||
ಬಾದರಾಯಣ ಬಹುರೂಪ ಸನಕಾದಿಸನ್ನುತ ಧರ್ಮಯೂಪ
ವೇದೋದ್ಧಾರಾದಾನಾದಿಕರ್ತ ಪೂರ್ಣಬೋಧ ಸದ್ಗುರು ವರರಾಧಿತ ಪದಯುಗ
ಮೇದಿನಿಯೊಳಾನೋರ್ವ ಪಾಮರಾಧಮನು ಕೈಪಿಡಿ ಕರುಣಮ
ಹೋದಧೇ ಕಮನೀಯಕಾಯ ಪ್ರಭೋಧಮುದ್ರಾಭಯಕರಾಂಬುಜ ||
ಹರಿತೋಪಲಾಭಶರೀರ ಪರಾಶರಮುನಿ ವರಸುಕುವರ
ಪರಮಪುರುಷಕಾರ್ತಸ್ವರಭರ್ಗ ಪ್ರಮುಖ ನಿರ್ಜರಗಣಮುನಿನುತ
ವರಪಾದಪಂಕಜ ಕುರುಕುಲದಿ ಧೃತರಾಷ್ಟ್ರಪಾಂಡುವಿದುರರ
ಪಡೆದೈವರಿಗೊಲಿದು ಸಂಹರಿಸಿ ದುರ್ಯೋಧನನ ಭಾರತ
ವಿರಚಿಸಿದ ಸುಂದರ ಕವೀಂದ್ರ ||
ಜಾತರೂಪ ಜಟಾಜೂಟ ಶ್ರೀನಿಕೇತನ ತಿಲಕಲಲಾಟ
ಪೀತಕೃಷ್ಣಾಜಿನ ಶ್ವೇತ ಶ್ರೀಯಜ್ಞೋಪವೀತ
ಮೇಖಲ ದಂಡಾನ್ವಿತ ಕಮಂಡಲ ಭೂತಭಾವನಭೂತಿಕೃತ್ಸ
ದ್ಬೂತಿದಾಯಕ ಶ್ರೀ ಜಗನ್ನಾಥ ವಿಠಲ ನಾ ತುತಿಸಬಲ್ಲೆನೆ ನಿನ್ನ ಮಹಿಮೆಯ
ಸುಖಾತ್ಮ ಪಾತಕನು ಅಲ್ಪಾತುಮನು ನಾ ||
“ವ್ಯಾಸೋಚ್ಛಿಷ್ಟಂ ಜಗತ್ಸರ್ವಂ “ ಆದ್ದರಿಂದ ಯಾವುದೇ ಜ್ಞಾನಕ್ಕೂ ವ್ಯಾಸರೇ ಮೂಲ. ವೇದವ್ಯಾಸರ ಅಭಿಪ್ರಾಯವೇ ವೇದಗಳ ಅಭಿಪ್ರಾಯ. ಅದರಂತೆಯೇ ಅವರಿಗೆ ವಿರೋಧವಲ್ಲದ ತತ್ವ ಜ್ಞಾನವನ್ನೇ ಇಲ್ಲಿ ಹೇಳಲಾಗಿದೆ. ವೇದಾಧಿಕಾರಿಗಳಾದ ಬ್ರಹ್ಮ, ರುದ್ರ, ಇಂದ್ರರಿಗೂ ತತ್ವಜ್ಞಾನವನ್ನು ಕೊಡುವವರು, ಜ್ಞಾನವೇ ಶರೀರವಾಗುಳ್ಳವರು ವೇದವ್ಯಾಸರು. ಬ್ರಹ್ಮಾದಿಗಳಿಂದಲೂ ಪೂಜೆಯನ್ನು ಸ್ವೀಕರಿಸುವವರು, ಸಜ್ಜನರ ರಕ್ಷಕರು ಆದ ಬಾದರಾಯಣರು ನಮಗೆ ಜ್ಞಾನವಿಟ್ಟು ರಕ್ಷಿಸಲಿ ಎಂದು ನಾರಾಯಣನ ಅವತಾರವಾದ ವೇದವ್ಯಾಸರಿಗೆ ಗುರುಮುಖತ್ವೇನ ನಮಸ್ಕರಿಸಿದ್ದಾರೆ.
ಚಿತ್ರಕೃಪೆ : ಅಂತರ್ಜಾಲ
No comments:
Post a Comment