Saturday, March 31, 2012

ಕರುಣಾ ಸಂಧಿ - ೧ನೇ ಪದ್ಯ
ಶ್ರವಣ ಮನಕಾನಂದವೀವುದು
ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು |
ಭುವನಪಾವನವೆನಿಪ ಲಕುಮೀ
ಧವನ ಮಂಗಳ ಕಥೆಯ ಪರಮೋ
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ  ||೧||

ಮ೦ಗಳಾಚರಣದಲ್ಲಿ ಪರಮಾತ್ಮನಿ೦ದ ಮೊದಲುಗೊ೦ಡುಸಕಲ ಪರಿವಾರವನ್ನು ವ೦ದಿಸಿದ ಜಗನ್ನಾಥ ದಾಸರು,ಕರುಣಾಸ೦ಧಿಯಲ್ಲಿ ಪರಮಾತ್ಮನ ಕರುಣಾತಿಶಯವನ್ನುಆಲಿಸಿದಲ್ಲಿ ಆಗತಕ್ಕ ಫಲವನ್ನು ವಿಶ್ಲೇಷಿಸುತ್ತಾರೆ.  

ಪ್ರತಿಪದಾರ್ಥ : ಶ್ರವಣ ಮನಕಾನಂದವೀವುದು - ಶ್ರೀಹರಿಯ ಕಥಾ ಶ್ರವಣವು ಮನಸ್ಸಿಗೆ ಆನಂದವನ್ನು ಕೊಡುವುದು, ಭವಜನಿತ - ಸಂಸಾರದಿಂದ ಹುಟ್ಟುವಂಥಹ, ದುಃಖಗಳ ಕಳೆವುದು - ಸಂಸಾರದ ತಾಪತ್ರಯಗಳನ್ನು ನಾಶಮಾಡುವುದು, ವಿವಿಧ ಭೋಗಗಳಿಹಪರಂಗಳಲಿತ್ತು - ಬಹು ಪರಿಯಾದ ಸುಖಗಳನ್ನೂ/ಭೋಗಗಳನ್ನೂ ಇಹದಲ್ಲಿಯೂ ಪರದಲ್ಲಿಯೂ ಕೊಡುವುದು, ಸಲಹುವುದು - ಕಾಪಾಡುವುದು, ಭುವನಪಾವನನೆನಿಪ - ಲೋಕ ಪಾವನನೆನಿಸುವ, ಲಕುಮೀಧವನ - ಮಹಾಲಕ್ಷಿಯ ಪತಿಯಾದ ಶ್ರೀಹರಿಯ, ಮಂಗಳ ಕಥೆಯ - ಭಗವಂತನ ಗುಣಗಾನ, ಮಂಗಳಕರವಾಗಿರುವ ಕಥೆ, ಪರಮೋತ್ಸವದಿ - ಅತಿ ಸಂತೋಷದಿಂದ, ಕಿವಿಗೊಟ್ಟಾಲಿಪುದು - ಶ್ರದ್ಧೆ ಹಾಗೂ ಭಕ್ತಿಯಿಂದ ಕಿವಿಯಗಲಿಸಿ ಕೇಳುವುದು, ಭೂಸುರರು - ಬ್ರಾಹ್ಮಣರು ಹಾಗೂ ಜ್ಞಾನಿಗಳು, ದಿನದಿನದಿ - ಅನವರತವೂ.

ಶ್ರವಣ” ವೆನ್ನುವುದು ನವವಿಧ ಭಕ್ತಿಗಳಲ್ಲಿ ಮೊದಲನೆಯದು.  ಭಕ್ತಿಯ ಮೊದಲನೆಯ ಮೆಟ್ಟಿಲು.  ಭಗವಂತನ ಅರಿವು ತಿಳಿಯುವ ಪ್ರಯತ್ನಕ್ಕೆ ಮೊದಲ ಸೋಪಾನ.  ವಿಷ್ಣು ಸಹಸ್ರನಾಮ ಅರ್ಥ ವಿವರಣೆಯ ಮೊದಲು ಕೂಡ ನವವಿಧ ಭಕ್ತಿಯ ವಿವರ ತಿಳಿಸುತ್ತಾರೆ.  ಶ್ರವಣವೆಂದರೆ ಮಹಾವಿಷ್ಣುವಿನ ಮಹಿಮೆಯನ್ನು ಕೇಳುವುದು ಎಂದರ್ಥ.  ಮಹರ್ಷಿ ಯಾಜ್ಞವಲ್ಕ್ಯರು ಮೈತ್ರೇಯಿಯನ್ನು ಕುರಿತು “ಶ್ರೋತವ್ಯೋ ಮನ್ತವ್ಯೋ ನಿದಿಧ್ಯಾಸಿತವ್ಯ:” (ಬೃಹದಾರಣ್ಯಕ ಉಪನಿಷತ್ತು) ಎಂದರೆ ಪರಮಾತ್ಮನ ವಿಚಾರವನ್ನೇ ಕೇಳಬೇಕು, ಮನನ ಮಾಡಬೇಕು ಮತ್ತು ಆ ಪರಮಾತ್ಮನ ತತ್ತ್ವದಲ್ಲಿ ದೃಢವಾಗಿ ನೆಲೆ ನಿಂತುಬಿಡಬೇಕು ಎನ್ನುತ್ತಾರೆ.  ಭಗವದ್ಗೀತೆಯನ್ನು  ಅರ್ಜುನ ಶ್ರವಣ ಮಾಡಿದ್ದರಿಂದಲೇ ಅವನಿಗೆ ಕವಿದಿದ್ದ ಮೋಹ ಕಳೆಯಿತು.  ಹೀಗೆ ಶ್ರವಣದ ಮಹತ್ವ ಸಾರುವ ಅನೇಕ ಕಥೆಗಳು ನಮಗೆ ನಮ್ಮ ಪುರಾಣಗಳಲ್ಲಿ ಸಿಕ್ಕುತ್ತವೆ.  ಶ್ರವಣವೆಂದರೆ ಕಿವಿಯೆಂದೂ, ಕೇಳುವುದೆಂದೂ ಎರಡೂ ಅರ್ಥವಾಗುತ್ತದೆ.  ಏನನ್ನು ಕೇಳಬೇಕೆಂದರೆ ಶ್ರೀಹರಿಯ ಕಥೆಗಳನ್ನು ಆಲಿಸಬೇಕು.  ಏಕೆಂದರೆ ಶ್ರೀಹರಿಯು “ಶ್ರವಣ ಮಂಗಲಧಾಮನು” – ಶ್ರೀಹರಿ ತಾನೇ ಮಂಗಲಧಾಮನಾಗಿರುವುದರಿಂದ ಹರಿಕಥೆ ಶ್ರವಣ ಮಾಡುವ ಭಕ್ತರಿಗೆ ರಕ್ಷಣೆ, ಆಶ್ರಯ ಕೊಟ್ಟು ಕಾಪಾಡುತ್ತಾನೆಂಬ ನಂಬಿಕೆ.     ಭಾಗವತದ ದಶಮಸ್ಕಂದದಲ್ಲಿ 

೧)  ವಾಸುದೇವಕಥಾಪ್ರಶ್ನ: ಪುರುಷಾಂಸ್ತ್ರೀನ್ಪುನಾತಿ ಹಿ |
     ವಕ್ತಾರಂ ಪೃಚ್ಛಕಂ ಶ್ರೋತೄಂಸ್ತತ್ಪಾದಸಲಿಲಂ ಯಥಾ ||

ವಿಷ್ಣುಪಾದೋದ್ಭವಳಾದ ಗಂಗಾದೇವಿಯ ಪವಿತ್ರ ತೀರ್ಥವು ಸ್ವರ್ಗ-ಮರ್ತ್ಯ-ಪಾತಾಳಗಳೆಂಬ ಮೂರೂ ಲೋಕಗಳನ್ನೂ ಪಾವನಗೊಳಿಸುವಂತೆ ವಾಸುದೇವನ ಕಥೆಗಳನ್ನು ಕೇಳುವವರು, ಪ್ರವಚನ ಮಾಡುವವರು, ಕಥೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡುವವರ ಜನ್ಮಗಳು ಸಾರ್ಥಕಗೊಳ್ಳುವುವು.

೨)  ತವ ಕಥಾಮೃತಂ ತಪ್ತಜೀವನಂ | ಕವಿಭಿರೀಡಿತಂ ಕಲ್ಮಷಾಪಹಮ್ |
     ಶ್ರವಣಮಂಗಲಂ ಶ್ರೀಮದಾತತಂ | ಭುವಿ ಗೃಣನ್ತಿ ತೇ ಭೂರಿದಾ ಜನಾ: ||
ಎಂದು ಭಾಗವತದ ಗೋಪೀಗೀತದಲ್ಲಿ ಶ್ರವಣದ ಮಹತ್ವ ಹೇಳುತ್ತಾರೆ.  ಪ್ರಭುವೇ ನಿನ್ನ ಕಥಾಪ್ರಸಂಗಗಳು ಅಮೃತ ಸ್ವರೂಪಗಳು, ಅವುಗಳ ಶ್ರವಣ ಮಾತ್ರದಿಂದಲೇ ನಮ್ಮೆಲ್ಲಾ ಪಾಪವು ಪರಿಹಾರವಾಗುವುದು, ಸುಖ ಸಂಪತ್ತುಗಳು ಪ್ರಾಪ್ತವಾಗುವುವು ಮತ್ತು ಈ ಜನ್ಮದಲ್ಲಿ ನಿನ್ನ ಮಂಗಳಕರವಾದ ಕಥೆಗಳನ್ನು ಕೇಳಿ ಅಮೃತವನ್ನು ಯಾರು ಸವಿಯುವರೋ ಅವರು ತಮ್ಮ ಪೂರ್ವಜನ್ಮದ ಪುಣ್ಯ ಫಲದಿಂದಲೇ ನಿನ್ನ ಕಥೆ ಆಲಿಸುವುದಕ್ಕೆ ಅರ್ಹರಾಗಿರುತ್ತಾರೆ.  ಆದ್ದರಿಂದ ನಿನ್ನ ಅಭೂತಪೂರ್ವ ಲೀಲೆಗಳನ್ನು ಕೇಳಿ ಆನಂದಿಸುವ ಸುಖ ನಮಗೆ ನಿರಂತರ ಪ್ರಾಪ್ತವಾಗಲಿ ಎಂದು ಹೇಳಿದ್ದಾರೆ.

ಶ್ರೀ ವಿಜಯದಾಸರು ತಮ್ಮ ಒಂದು ವಾಯುದೇವರ ಕುರಿತ ಪದದಲ್ಲಿ
“ಪವಮಾನ ಜಗದ ಪ್ರಾಣ ಸಂಕರುಷಣ | ಭವಭಯಾರಣ್ಯದಹನ ||

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ” ಎಂದು ಪ್ರಾರ್ಥಿಸುತ್ತಾರೆ.
“ಶ್ರವಣ ಮನಕಾನಂದವೀವುದು” ಎಂದಾಗ ಇಲ್ಲಿ ಬರಿಯ ಕಥೆ ಎಂಬ ಅರ್ಥವಾಗುವುದಿಲ್ಲ. ಶ್ರೀಹರಿಯ ಗುಣ ನಾಮ ಕೀರ್ತನಗಳ ಪರವಾದ ವೇದ, ಉಪನಿಷತ್ತುಗಳು, ಪುರಾಣಗಳು, ತರ್ಕಗ್ರಂಥಗಳು, ಕಾವ್ಯಾಲಂಕಾರನಾಟಕಗಳು ಎಲ್ಲವೂ ಆಗುತ್ತವೆ.  ಭಾಗವತದಲ್ಲಿ

ಶೃಣ್ವತಾಂ ಸ್ವಕಥಾಂ ಕೃಷ್ಣ: ಪುಣ್ಯಶ್ರವಣಕೀರ್ತನ: |
ಹೃದ್ಯಂತಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್ ||

ಎಲ್ಲವೂ ಮಂಗಳಕರವಾದ ಕಥೆಗಳೇ, ಬೆಳಿಗ್ಗೆ ಎದ್ದ ಕೂಡಲೆ ಮಂಗಳಕರವಾದವುಗಳನ್ನು ಶ್ರವಣ ಮಾಡುವುದರಿಂದ, ಭಗವಂತ ನಮ್ಮ ಶ್ರವಣೇಂದ್ರಿಯಗಳ ಮೂಲಕ ನಮ್ಮ ಹೃದಯದಲ್ಲಿ ಬಂದು ನೆಲೆಸುತ್ತಾನೆ ಮತ್ತು ನಮ್ಮಲ್ಲಿರುವ ಎಲ್ಲಾ ಕಶ್ಮಲಗಳನ್ನೂ ತೊಳೆದು ಬಿಡುತ್ತಾನೆ ಎನ್ನುತ್ತಾರೆ.  ಸದಾ ಮಂಗಳಕರವಾದ ವಾಸುದೇವನ ಕಥೆಗಳನ್ನು ಕೇಳುತ್ತಿದ್ದರೆ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ, ಆನಂದವನ್ನು ಅನುಭೂತಿಸುತ್ತಿರುತ್ತದೆ.  ಹೀಗೆ ನಿರಂತರ ಆನಂದದಲ್ಲಿ ಮನಸ್ಸು ತೇಲಾಡಿದಾಗ, ಅದು ನಿಧಾನವಾಗಿ ನಮ್ಮ ಹೃದಯದಲ್ಲಿ ಗಟ್ಟಿಯಾಗಿ ನೆಲೆಯೂರಿ ಅದೇ ಧ್ಯಾನವಾಗಿ ಪರಿವರ್ತನೆಯಾಗಿ ಬಿಡುತ್ತದೆ.  ಈ ಧ್ಯಾನದ ಆನಂದ ಮೋಕ್ಷಾನಂದಕ್ಕಿಂತಲೂ ಮಿಗಿಲಾಗಿರುತ್ತದೆ. 

“ಭವಜನಿತ ದು:ಖಗಳ ಕಳೆವುದು “ – ಭಾಗವತದಲ್ಲಿ “ಭವೌಷಧಾತ್” ಎಂದಂತೆ ನಮ್ಮ ಎಲ್ಲಾ ದು:ಖಗಳ ಪರಿಹಾರಕ್ಕೂ ಒಂದೇ ಔಷಧಿ ಹರಿಕಥಾಮೃತಸಾರ.  ದು:ಖ ನಿಜವಾಗಿಯೂ ವಿಷಯ ಪದಾರ್ಥದಲ್ಲಿಲ್ಲ, ಅದನ್ನು ನೋಡುವ ಕಣ್ಣು ಮತ್ತು ಆಲೋಚಿಸುವ ಮನಸ್ಸಿನಲ್ಲಿರುತ್ತದೆ.  ಯಾವಾಗ ನಮ್ಮ ಮನಸ್ಸು ಸದಾ ಶ್ರೀಹರಿಯ ಧ್ಯಾನದಲ್ಲಿ ತೊಡಗಿರುವುದೋ ಆಗ ಅಲ್ಲಿ ನಮಗೆ ಭಗವಂತನ ಕರುಣೆ, ಅವನ ಸೃಷ್ಟಿಯಲ್ಲಿನ ಸಂತೋಷ, ಉಲ್ಲಾಸಗಳು ಕಾಣ ಸಿಕ್ಕುತ್ತವೆ.  ನಮ್ಮ ಭವದ ದು:ಖಗಳು ನಮ್ಮನ್ನು ಬಾಧಿಸುವುದೇ ಇಲ್ಲ. 

“ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು” – ನಿರಂತರವಾಗಿ ಕರ್ಮಗಳನ್ನು ಮಾಡುತ್ತಲೇ ಇರುವ ನಾವು ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಪಡೆಯಬೇಕು ಎಂದರೆ ಸದಾ ಸತ್ಕರ್ಮಗಳನ್ನು ಮಾಡುತ್ತಾ ಭಗವಂತನ್ನು ಒಲಿಸಿಕೊಳ್ಳಬೇಕು.  ಹೀಗೆ ಮಾಡಲು ನಮಗೆ ಇಂದ್ರಿಯಗಳು ಬೇಕು, ಅವುಗಳ ಸದುಪಯೋಗ ನಮಗೆ ಇಹದಲ್ಲೂ, ಪರದಲ್ಲೂ ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ಭೋಗಗಳನ್ನು ನೀಡುವುದು. ಇಹಲೋಕದಲ್ಲಿ  ವಿವಿಧ  ಭೋಗಗಳು  ಎ೦ದಾಗ ಲೌಕಿಕ  ಭೋಗಗಳು  ಎ೦ದು ಅರ್ಥವಲ್ಲ,  ಅಹ೦ ಮತ್ತು ಮಮತಾದಿಗಳಿ೦ದ  ರಹಿತರನ್ನಾಗಿ  ಮಾಡಿ ಶ್ರೀಹರಿಯ ಭಕ್ತಿಯಲ್ಲಿ ಮನಸ್ಸನ್ನು ಕೊಟ್ಟು,  ವಿಷಯಗಳಲ್ಲಿ ವೈರಾಗ್ಯವನ್ನು ಮೂಡಿಸುವುದರ ಮೂಲಕ ಜೀವಕ್ಕೆ ಒ೦ದು ದಿವ್ಯಸ್ಥಾನವನ್ನು ಕರುಣಿಸುವುದು ಎ೦ದು ಜಗನ್ನಾಥ ದಾಸರು ವಿಶ್ಲೇಷಿಸುತ್ತಾರೆ.  ಶ್ರೀಹರಿಯ ಕಥೆಗಳ ಶ್ರವಣ ಮಾತ್ರದಿಂದಲೇ ಇದು ಸಾಧ್ಯವೆಂದು  ವಿವರಿಸಿದ್ದಾರೆ.

  ಗ್ರ೦ಥವನ್ನು ಸ೦ಪೂರ್ಣವಾಗಿ ಆಲಿಸುವುದರಿ೦ದ ಮನಸ್ಸಿಗೆ  ಆನ೦ದವನ್ನು  ನೀಡುವುದರ  ಜೊತೆಗೆ  ಸ೦ಸಾರಕ್ಕೆ ಕಾರಣವಾದ ಲಿ೦ಗ ದೇಹದಿ೦ದ ಉತ್ಪನ್ನಗಳಾದ  ಜನನ, ಮರಣಾದಿ  ದು:ಖಗಳು  ಪರಿಹರಿಸಲ್ಪಡುತ್ತವೆ.  ಲಿ೦ಗದೇಹ ಇರುವವರೆಗೂ ಎ೦ದರೆ, ಕರ್ಮ  ಬ೦ಧನದಲ್ಲಿ ಸಿಲುಕಿರುವವರೆಗೂ  ಜೀವನ  ಚಕ್ರಗಳಿ೦ದ  ಮುಕ್ತರಾಗದೇ ಇರುವ  ಸ೦ಧರ್ಭದಲ್ಲಿ,  ಇಹದಲ್ಲಿ  ಸ೦ಸಾರ  ದು:ಖವನ್ನು ಪರಿಹಾರ  ಮಾಡುತ್ತದೆ.   ನಾನಾ ವಿಧವಾದ ಸುಖ ಭೋಗಗಳನ್ನು  ಭೂಲೋಕದಲ್ಲಿ, ನ೦ತರ  ಸ್ವರ್ಗಾದಿ ಮೊದಲಾದ ಲೋಕಗಳಲ್ಲೂ ಕೊಟ್ಟು ಸ೦ರಕ್ಷಣೆ ಮಾಡುತ್ತದೆ.  ನ೦ತರದಲ್ಲಿ ಜೀವನ್ಮುಕ್ತರನ್ನಾಗಿ ಮಾಡಿ,    ಲಿ೦ಗ - ಭ೦ಗವನ್ನು  ಐದಿಸಿ,  ಸ್ವರೂಪಾನ೦ದವನ್ನು  ಅಭಿವ್ಯಕ್ತಿ ಮಾಡಿಸಿ,  ರಕ್ಷಿಸುತ್ತದೆ ಎ೦ದು  ದಾಸರು ತಿಳಿಸುತ್ತಾರೆ.  ಆದ್ದರಿ೦ದ  ಹದಿನಾಲ್ಕು  ಲೋಕಗಳ ಭಕ್ತ  ಜೀವರನ್ನು  ಪವಿತ್ರ ಮಾಡತಕ್ಕ,  ಲಕ್ಶ್ಮೀಪತಿಯಾದ ಶ್ರೀಮನ್ನಾರಾಯಣನ  ಶುಭಕರ  ಚರಿತ್ರೆಯನ್ನು ಅತ್ಯ೦ತ ಮನೋಲ್ಲಾಸದಿ೦ದ,  ಅನ್ಯವಾರ್ತೆಗೆ  ಶ್ರವಣೇ೦ದ್ರಿಯವು  ಹೋಗದ೦ತೆ ಹರಿಕಥೆಗೆ  ದತ್ತ  ಮಾಡಿ ಶ್ರದ್ಧೆಯಿ೦ದ  ಕೇಳುವುದು  ಎ೦ದು  ತಿಳಿಸುತ್ತಾರೆ.

“ಕಥಾಶ್ರವಣ ಮಾಡೋ, ಹರಿಕಥಾ ಶ್ರವಣ ಮಾಡೋ.. ಪಥಾ ವೈಕುಂಠಕಿದು ನೋಡೋ”.. ಎಂದು ವಿಜಯದಾಸರೆಂದರೆ, "ಕಾಲಕಾಲಕ್ಕೆ ಹರಿಕಥಾ  ಶ್ರವಣ  ಗುರುಗಳ  ಮುಖದಿ೦ದ ಕೇಳಿದ್ದೇ  ಕೇಳುತ್ತಾ,  ಹಾಡುತ್ತಾ ಪಾಡುತ್ತಾ, ಮನನ ಮಾಡುತ್ತಾ ಧ್ಯಾನವನ್ನು ಮಾಡುವುದು" ಎ೦ಬುದು ಗೋಪಾಲದಾಸರ ಉಕ್ತಿ.  ಇನ್ನು ಕನಕದಾಸರು "ಹರಿಕಥಾ ಶ್ರವಣವೇ  ಮುಕ್ತಿಗೆ ಮೊದ ಪಾವಟಿಗೆ" ಎ೦ದು  ತಮ್ಮ ಹರಿಭಕ್ತಿಸಾರದಲ್ಲಿ ದಾಖಲಿಸಿದ್ದಾರೆ  ಹೀಗೆ ಶ್ರೀಹರಿಯ ಕಥೆಗಳನ್ನು ಪರಮ ಉತ್ಸಾಹದಿಂದ ಭಜಿಸುವುದರಿಂದಲೂ, ಕಿವಿಗೊಟ್ಟು ಆಲಿಸುವುದರಿಂದಲೂ ಕಷ್ಟ ಪರಿಹಾರ – ಇಷ್ಟ ಪ್ರಾಪ್ತಿಯಾಗುತ್ತದೆ, ಅರಿತು ಪೂಜಿಸುವವರನ್ನು ದುಃಖದಿಂದ ದೂರೈಸಿ ಸುಖಗಳನ್ನಿತ್ತು ಜಗನ್ನಾಥ ವಿಠಲ ಒಲಿದು ಕಾಪಾಡುವ  ಎನ್ನುತ್ತಾ  “ಭುವನ ಪಾವನನಾದ ಪರಮಾತ್ಮನ  ಕರುಣೆ”ಯ  ಬಗ್ಗೆ ತಿಳಿಸಿದ್ದಾರೆ.
ಚಿತ್ರಕೃಪೆ : ಅಂತರ್ಜಾಲ