Friday, June 24, 2011

೧. ಮಂಗಳಾಚರಣ ಸಂಧಿ :- ( ೨ ಹಾಗೂ ೩ ನೇ ಚರಣಗಳು)


ಜಗದುದರನತಿ ವಿಮಲ ಗುಣ ರೂ
ಪಗಳನಾಲೋಚನದಿ ಭಾರತ
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ |
ಬಗೆಬಗೆಯ ನೂತನವ ಕಾಣುತ
ಮಿಗೆ ಹರುಷದಿಂ ಪೊಗಳಿ ಹಿಗ್ಗುತ
ತ್ರಿಗುಣಮಾನಿ ಮಹಾಲಕುಮಿಸಂತೈಸಲನುದಿನವು || ೨ ||

ಪ್ರತಿಪದಾರ್ಥ : ಜಗದುದರ - ಜಗತ್ತನ್ನೇ ಉದರದಲ್ಲಿ ಉಳ್ಳ ಶ್ರೀಹರಿ, ಅತಿ ವಿಮಲ ಗುಣ ರೂಪಗಳ - ದೋಷವಿಲ್ಲದ ಗುಣಗಳು, ರೂಪಗಳು, ಆಲೋಚನದಿ - ಕೇವಲ ಆಲೋಚನೆಯಿಂದಲೇ ಗ್ರಹಿಸುವ, ಭಾರತ - ಪಂಚಮವೇದ ಎನಿಸಿರುವ ಮಹಾಭಾರತದಲ್ಲಿ ಬಿಂಬಿತವಾಗಿರುವ ಪರಮಾತ್ಮನ ಗುಣಗಳು, ನಿಗಮತತಿಗಳು - ವೇದಗಳ ಸಮೂಹದಲ್ಲಿ  ಬಿಂಬಿತವಾಗಿರುವ  ಭಗವಂತನ ಗುಣಗಳು, ಅತಿಕ್ರಮಿಸಿ - ಮೀರಿಸುವ, ಕ್ರಿಯಾ ವಿಶೇಷಗಳ - ವಿಶೇಷವಾದ ಲೀಲೆಗಳು, ಬಗೆಬಗೆಯ ನೂತನವ ಕಾಣುವ - ವಿವಿಧ ಪ್ರಕಾರದ ಹೊಸತನ್ನು ಕಾಣುವ,  ಮಿಗೆ  ಹರುಷದಿಂ - ಅಪರಿಮಿತ ಆನಂದದಿಂದ, ಪೊಗಳಿ ಹಿಗ್ಗುವ - ಹಾಡಿ, ಸ್ತುತಿಸಿ ಆನಂದ ಪಡುವ, ತ್ರಿಗುಣ ಮಾನಿ -  ಸತ್ವ, ರಜೋ, ತಮೋ ಎಂಬ ಮೂರೂ ಗುಣಗಳಿಗೂ ಅಭಿಮಾನಿ ದೇವತೆಯಾದ, ಮಹಾಲಕುಮಿ - ಮಹಾಲಕ್ಷಿ, ಸಂತೈಸಲನುದಿನವು - ದಿನದಿನವೂ, ಪ್ರತಿದಿನವೂ ಸಲಹಲಿ.


ಜಗದುದರನ – “ಉದರ೦ ಚಿ೦ತ್ಯಮೀಶಸ್ಯ ತನುತ್ವೇsಪ್ಯಖಿಲಭರ೦ ಎ೦ಬ೦ತೆ ವರ್ತಮಾನ ಸ್ಥಾವರ-ಜ೦ಗಮಾತ್ಮಕ ಜಗತ್ತಲ್ಲದೇ ಇನ್ನೂ ಅನ೦ತಾನ೦ತ ಜಗತ್ತುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ರಕ್ಷಿಸುತ್ತಿರುವ, ಅತಿವಿಮಲಗುಣ - ಭಗವಂತನ ರೂಪಗುಣಗಳನ್ನು ಆಲೋಚನೆಯಿಂದಲೇ ತಿಳಿಯಬಲ್ಲವಳು ಲಕ್ಷ್ಮೀದೇವಿ.  ಅವನನ್ನೇ ಕುರಿತು ಇರುವ ಭಾರತ-ನಿಗಮಗಳನ್ನೂ ಮೀರಿದಂತಹ – “ನಿಗಮತತಿಗಳತಿಕ್ರಮಿಸಿ” – ಎಂದರೆ ವೇದಗಳು, ಶ್ರುತಿಗಳು ಹೇಳುವ ಪರಮಾತ್ಮನ ಗುಣಗಳಿಗಿಂತ ಅಧಿಕವಾಗಿರುವ ಕ್ರಿಯಾ ವಿಶೇಷಗಳನ್ನೂ ತಿಳಿಯಬಲ್ಲವಳು ಎಂದರ್ಥ. ಪರಮಾತ್ಮನ ನಿತ್ಯಾವಿಯೋಗಿನಿಯಾಗಿರುವ ಲಕ್ಷ್ಮಿದೇವಿಯು ಅವನ ಅನಂತ ರೂಪಗಳಲ್ಲಿನ ಹೊಸ ಹೊಸ ಅಚ್ಚರಿಗಳನ್ನು ಶ್ರೀಹರಿಯೊಡನೆ ಇದ್ದು  ಗಮನಿಸುತ್ತಾ, ಆಶ್ಚರ್ಯ ಪಡುತ್ತಾ, ಸಂತಸ ಪಡುವವಳಾಗಿದ್ದಾಳೆ.   ಇಷ್ಟು ಮಹಿಮಾನ್ವಿತಳಾದ, ಅಪಾರ ಜ್ಞಾನಿಯಾದ  ರಮಾದೇವಿಗೇ ಶ್ರೀಹರಿಯ ಪೂರ್ಣ ಗುಣಗಳನ್ನು ಅರಿಯುವುದು ಕಷ್ಟವೆಂದರೆ ಶ್ರೀ ಹರಿಯ ಮಹಿಮೆ ಅದಿನ್ನೆಂತ ಅಪಾರ..!! ಪ್ರಳಯ ಕಾಲದಲ್ಲಿ ನಾರಾಯಣನು ಜಗದುದರನಾಗಿ ಜಗದ್ಭುಕ್ ಎನ್ನಿಸಿಕೊಂಡಾಗಲೂಕ್ಷೀರ ಶರಧಿ ಶಯನನಾಗಿರುವಾಗಲೂ ಲಕ್ಷ್ಮೀದೇವಿ ವಟಪತ್ರ ರೂಪದಿಂದ ಭೂದೇವಿಯಾಗಿಯೂ.  ನೀರಿನ ರೂಪದಿಂದ ಶ್ರೀದೇವಿಯಾಗಿಯೂಕತ್ತಲ ರೂಪದಿಂದ ದುರ್ಗಾ ದೇವಿಯಾಗಿಯೂ ಇರುತ್ತಾಳೆ.  ಇದೇ ಇವಳ ಭೂದೇವಿ ಶ್ರೀದೇವಿ ಮತ್ತು ದುರ್ಗಾದೇವಿಯ ರೂಪಗಳು.  ಹಾಗೆಯೇ ಶ್ರೀ-ಸತ್ವ, ಭೂ-ರಜಸ್ಸು,ದುರ್ಗಾ-ತಮಸ್ಸು ಎಂಬ ತ್ರಿಗುಣಗಳ ಮಾನಿಯೂ ಆಗಿರುವ ಲಕ್ಷ್ಮೀದೇವಿ ನಮ್ಮನ್ನು ಅನವರತವೂ ಕಾಪಾಡಲಿ ಎಂದು ಕೇಳಿಕೊಳ್ಳುತ್ತಾರೆ.


ನೀನೇ ಗತಿ ಎನಗೇ | ವನಜ ನೇತ್ರೇ ||

ಕೈಲಾಸವೆಂಬೋದು ಕಣ್ಣಿಲಿ ಕಾಣೆನಾ  |
ಮೈಲು ವಾಹನ ಪಿತ ಎತ್ತ ಪೋದನೋ ಕಾಣೆ  ||

ಸತ್ಯಲೋಕವೆಂಬುದು ಮಿಥ್ಯವಾಯಿತು ಕಣೆ
ಎತ್ತ ಪೋದನೋ ಬ್ರಹ್ಮ ಏನು ಮಾಡಲಿ ಅಮ್ಮಾ
ಸರಸಿಜನಾಭನು ಶರಧಿಯೊಳ್ ಮುಳುಗಿದ
ಪುರಂದರ ವಿಠಲನ ಕರುಣೆಗೆ ಪಾತ್ರಳೆ  ||

ಶ್ರೀ ಪುರಂದರ ದಾಸರು... ಪ್ರಳಯ ಸಮಯದಲ್ಲಿ ಜಗದುದರನಾದ ಶ್ರೀಮನ್ನಾರಾಯಣನ ಕೃಪೆಗಾಗಿ ಲಕ್ಷ್ಮೀ ದೇವಿಯ ಮೂಲಕ ಪ್ರಾರ್ಥಿಸುವ ಈ ಪದ್ಯದಲ್ಲಿ... ರಮಾದೇವಿಯ ಅಧಿಕಾರ,ವ್ಯಾಪ್ತಿಯ ವಿವರಗಳನ್ನು ಸುಂದರವಾಗಿ ವರ್ಣಿಸಿದ್ದಾರೆ..

ಡಿವಿಜಿಯವರ “ಮಂಕುತಿಮ್ಮನ ಕಗ್ಗ” ಕೂಡ ಜಗತ್ತಿಗೇ ಮೂಲ ಪುರುಷನಾದ ಶ್ರೀ ಮಹಾವಿಷ್ಣುವಿಗೆ ನಮಿಸುತ್ತಲೇ ಪ್ರಾರಂಭವಾಗುತ್ತದೆ.

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ,
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮಳ್ತಿಯಿಂ  ನಂಬಿಹುದೊ |
ಆ ವಿಚಿತ್ರಕೆ ನಮಿಸೋ – ಮಂಕುತಿಮ್ಮ  ||

ಶ್ರೀ ವಿಷ್ಣು, ಜಗತ್ತಿಗೇ ಮೊದಲು ಮತ್ತು ಸೃಷ್ಟಿಗೆ ಕಾರಣನಾದ ಸೃಷ್ಟಿಕರ್ತ. ಅವನು ಮಾಯಾಲೋಲನಾಗಿರುವನು.  ಸರ್ವಾಂತರ್ಯಾಮಿ. ಅವನೇ ಸರ್ವರಿಗೂ ಈಶ್ವರ ಮತ್ತು ಪರಬ್ರಹ್ಮ (ಪರಬೊಮ್ಮ).  ಅವನನ್ನು ಜನಗಳು ವಿವಿಧ ನಾಮಗಳಿಂದ ಸ್ಮರಿಸುತ್ತಾರೆ, ಆರಾಧಿಸುತ್ತಾರೆ.  ಭಗವಂತ ನಮ್ಮ ಕಣ್ಣಿಗೆ ಕಾಣದಿದ್ದರೂ ಕೂಡ ನಾವು ಪ್ರೀತಿಯಿಂದ (ಅಳ್ತಿಯಂ), ಅವನನ್ನು ಅಗಾಧವಾಗಿ ನಂಬುತ್ತೇವೆ.  ಆ ಕಣ್ಣಿಗೆ ಕಾಣದ ಜಗತ್ತಿನ ವಿಚಿತ್ರಕ್ಕೆ ನಮಿಸು ಎನ್ನುತ್ತಾರೆ ಡಿವಿಜಿಯವರು.


ನಿರುಪಮಾನಂದಾತ್ಮಭವ ನಿ
ರ್ಜರ ಸಭಾಸಂಸೇವ್ಯ ಋಜುಗಣ
ದರಸೆ ಸತ್ವಪ್ರಚುರ ವಾಣೀಮುಖ ಸರೋಜೇನ |
ಗರುಡ ಶೇಷ  ಶಶಾಂಕದಳ ಶೇ
ಖರರ ಜನಕ ಜಗದ್ಗುರುವೆ ತ್ವ
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ  || ೩ ||

ಪ್ರತಿಪದಾರ್ಥ :  ನಿರುಪಮಾನಂದ - ಹೋಲಿಕೆಯೇ ಇಲ್ಲದಷ್ಟು ಆನಂದ ಅಥವಾ ಅನುಪಮ ಆನಂದ, ಆತ್ಮಭವ - ಶ್ರೀಹರಿಯ ಸಾಕ್ಷಾತ್ ಪುತ್ರ ಬ್ರಹ್ಮ, ನಿರ್ಜರ ಸಭಾ ಸಂಸೇವ್ಯ - ದೇವತೆಗಳ ಸಮೂಹದಿಂದ ಸೇವಿಸಿಕೊಳ್ಳಲ್ಪಟ್ಟವನು, ಋಜುಗಣದರಸೆ - ಋಜುಗಣದ ಒಡೆಯನಾದ (ಶ್ರೇಷ್ಠನಾದ), ಸತ್ವಪ್ರಚುರ - ಸತ್ವ ಗುಣವನ್ನೇ ಅಧಿಕವಾಗಿ ಉಳ್ಳಂತಹ, ವಾಣೀಮುಖ ಸರೋಜೇನ - ಸರಸ್ವತಿ ದೇವಿಯ ಮುಖವೆಂಬ ಕಮಲಕ್ಕೆ ಸೂರ್ಯನಂತಿರುವ, ಗರುಡ ಶೇಷ ಶಶಾಂಕದಳ ಶೇಖರರ ಜನಕ - ಗರುಡದೇವರು ಶೇಷದೇವರು ಮತ್ತು ಮೃಗಲಾಂಛನವಾದ ಚಂದ್ರ ಕಳೆಯನ್ನು ಶಿರದಲ್ಲಿ ಧರಿಸಿರುವ ರುದ್ರದೇವರುಗಳ ಜನಕನು, ಜಗದ್ಗುರುವೆ - ಜಗತ್ತಿಗೇ ಗುರುವಾಗಿರುವವನು, ತ್ವಚ್ಚರಣಗಳಿಗೆ - ನಿಮ್ಮ ಪಾದಗಳಿಗೆ, ಅಭಿವಂದಿಸುವೆ - ಚೆನ್ನಾಗಿ ನಮಸ್ಕರಿಸುವೆ, ಪಾಲಿಪುದು ಸನ್ಮತಿಯ - ಸುಬುದ್ಧಿ / ಒಳ್ಳೆಯ ಬುದ್ಧಿಯನ್ನು ಕರುಣಿಸು.

ಸದಾ ಆನಂದಮಯನಾಗಿರುವಂತಹವನು ಪರಮಾತ್ಮ, ಅವನ ಆನಂದ ಸೀಮಾತೀತ ಮತ್ತು ಬಣ್ಣಿಸಲಾಗ ದಂತಹುದು ಎನ್ನುತ್ತಾರೆ ದಾಸರು.  ಇಂತಹ ಪರಮಾತ್ಮನ ಭವ – ಅಂದರೆ ಮಗ, ಬ್ರಹ್ಮನನ್ನು ವರ್ಣಿಸುವಾಗ ಋಜುಗಣದ ವಿವರಣೆಯನ್ನೂ ಕೊಡುತ್ತಾರೆ ದಾಸವರ್ಯರು . ಋಜು ಎಂದರೆ  ೨೦೦ ಜನಗಳ ಒಂದು ಗಣ.  ೧೦೦ ಜನ ಬಿಂಬ ಸಾಕ್ಷಾತ್ಕಾರ ಪಡೆದವರು, ಇನ್ನೊಂದು ೧೦೦ ಜನ ಬಿಂಬ ಸಾಕ್ಷಾತ್ಕಾರಕ್ಕಾಗಿ ಸಾಧನೆ ಮಾಡುತ್ತಿರುವವರು.  ಇವರಿಗೆ ಬ್ರಹ್ಮ ದೇವರು ಅರಸರು. ಋಜುಗಣದವರು ೩೨ ಲಕ್ಷಣಗಳುಳ್ಳವರು ಮತ್ತು ಮುಖ್ಯವಾಗಿ ಅಚ್ಛಿನ್ನ ಭಕ್ತರು. ಇವರಿಗೆ ರೋಗ, ಮುಪ್ಪು ಇರುವುದಿಲ್ಲ.  ಅವರ ಮನಸ್ಸಿನಿಂದ ಪರಮಾತ್ಮ ಯಾವಾಗಲೂ ಮರೆಯಾಗುವುದೇ ಇಲ್ಲ.  ಋಜುಗಣಕ್ಕೆ ಬ್ರಹ್ಮ, ಸರಸ್ವತಿ, ವಾಯು, ಭಾರತಿ ಇವರುಗಳು ಸೇರುತ್ತಾರೆ.  ಇಲ್ಲಿ ಬ್ರಹ್ಮನನ್ನು ಉಪಮೆಗೆ ಸಿಗದಂತಹ ಪರಮಾತ್ಮನ "ಆತ್ಮಭವ" ಎಂದು ವರ್ಣಿಸುತ್ತಾರೆ.  ದೇವ ಸಭೆಯಿಂದಲೂ ವಂದಿಸಿಕೊಳ್ಳುವಂತಹವರು ಬ್ರಹ್ಮ ದೇವರು. ತ್ರಿಗುಣಗಳಲ್ಲಿ ಬ್ರಹ್ಮ ದೇವರು ಸತ್ವಗುಣಾಧಿಕರಾಗಿರುವುದರಿಂದ ಅವರು "ಸತ್ವಪ್ರಚುರರು". ಗರುಡ, ಶೇಷ, ರುದ್ರ ಇವರುಗಳ ಜನಕ, ಜಗದ್ಗುರು, ಬ್ರಹ್ಮದೇವನೇ ನಿನ್ನ ಚರಣಗಳಿಗೆ ವಂದಿಸುವೆ, ಸನ್ಮತಿಯನ್ನು ಪಾಲಿಸು.

Monday, June 13, 2011

೧. ಮಂಗಳಾಚರಣ ಅಥವಾ ನಾಂದಿ ಸಂಧಿ :-

ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು  ಪೇಳುವೆ
ಪರಮ ಭಗವದ್ಭಾಕ್ತರಿದನಾದರದಿ ಕೇಳುವುದು

ಪಲ್ಲವಿಯಾದ ತರುವಾಯ ಮಂಗಳಾಚರಣ ಸಂಧಿಯಲ್ಲಿ ಒಟ್ಟು ೧೩ ಪದ್ಯಗಳಲ್ಲಿ ಜಗತ್ ಸೃಷ್ಟಿಗೆ ಕಾರಣನಾದ ಪರಮಾತ್ಮನನ್ನು ಅನುಸರಿಸಿ ತಾರತಮ್ಯ ಪೂರ್ವಕವಾಗಿ ಲಕ್ಷ್ಮೀದೇವಿ ಮುಂತಾದ ದೇವತೆಗಳ ಮಂಗಳಸ್ತವನವಿದೆ. ೧೩ ಎಂದರೆ ಅಧ್ಯಾತ್ಮಿಕ ಸಂಖ್ಯಾ ಸೂಚಕದಲ್ಲಿ  ದೀಪ ಎಂಬ ಅರ್ಥ ಬರುತ್ತದೆ. ಹೇಗೆಂದರೆ ಸಂಸ್ಕೃತದ ಕಟಪಯಾದಿ ಸೂತ್ರದ ಪ್ರಕಾರ  ದೀಪ ಎಂಬ ಪದದಲ್ಲಿ... “ದ” ೩ನೇ ಸಂಖ್ಯೆ ಮತ್ತು “ಪ” “೧”ನೇ ಸಂಖ್ಯೆ.  ಎರಡೂ ಸೇರಿದಾಗ ೩೧ ಆಗುತ್ತದೆ.  ನಾವು ಸಂಖ್ಯೆಗಳನ್ನು ಬದಲಿಸಿದಾಗ ೧೩ ಆಗುತ್ತದೆ.  ಹೀಗೆ ೧೩ ಪದ್ಯಗಳಿಗೆ ದೀಪ ಎನ್ನುವ ಅರ್ಥ ಬಂದು ಮಂಗಳಾಚರಣ ಸಂಧಿಯು ಇಡೀ ಹರಿಕಥಾಮೃತಸಾರಕ್ಕೆ ಅಧ್ಯಾತ್ಮಿಕ ದೀಪದಂತೆ ಇದೆ.

ಜಗನ್ನಾಥ ವಿಠಲನ ಪರಮ ಭಕ್ತರಾದ ಜಗನ್ನಾಥ ದಾಸವರ್ಯರು ತಮ್ಮ ಶ್ರೇಷ್ಠ ಗ್ರಂಥವಾದ ಹರಿಕಥಾಮೃತಸಾರ ರಚನೆಗೆ "ಗುರುಗಳ" ಕರುಣೆಯಿಂದ.. "ಆಪನಿತು" ಎಂದರೆ ತಮ್ಮ ಯೋಗ್ಯತೆ ಇದ್ದಷ್ಟು ರಚಿಸುತ್ತೇನೆ ಎಂದು ಹೇಳಿಕೊಂಡು ಮುಂದಿನ ಪದ್ಯ ಮಾಲೆಯನ್ನು ಆರಂಭಿಸಿದ್ದಾರೆ.  ಮೊತ್ತ ಮೊದಲನೇ ಪದ್ಯದಲ್ಲಿ ತಮ್ಮ ಇಷ್ಟ ದೈವ, ಮನೆದೈವ, ಮನದೈವ ಆದಂತಹ ನಾರಸಿಂಹನನ್ನು ಈ  ಗ್ರಂಥ ರಚನೆಗೆ ಮಂಗಳವನ್ನು ಕರುಣಿಸು ಎಂದು ಬೇಡಿಕೊಳ್ಳುತ್ತಾರೆ.  ನಾರಸಿಂಹನ ಪರಮ ಭಕ್ತರಿವರು. ಇವರ ಪಿತೃದೇವತೆಯ ಹೆಸರು ನಾರಸಿಂಹಾಚಾರ್ಯ ಎಂದು.  ಆಚಾರ್ಯರು ಕೂಡ ನಾರಸಿಂಹ ವಿಠಲ ಅಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.  ಇನ್ನು ನಮ್ಮ ದಾಸವರ್ಯರಾದ ಜಗನ್ನಾಥ ದಾಸರು ಕೂಡ ನಾರಸಿಂಹನ ಬಗ್ಗೆ ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ  -  ೧) ಪಾಹಿ ಲಕ್ಷ್ಮೀ ನರಸಿಂಹ, ೨) ನಮಸ್ತೆ ನರಸಿಂಹ ೩) ನೀರಾತರಂಗಿಣಿ ನರಸಿಂಹ  ೪) ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದ.. ಈ ಕೃತಿಯಲ್ಲಿ ಮೊದಲ ಚರಣ "ಸಕಲ ಜೀವ ಜಡಾತ್ಮಕ ಜಗತಿನೊಳಗಿದ್ದು ಅಕಳಂಕನಾಮಕ ರೂಪದಲ್ಲಿ ಕರೆಸಿ "ಪ್ರಕಟನಾಗದೆಲೆ" ಮಾಡಿ  ವ್ಯಾಪಾರ ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ” ಎಂದು ನಾರಸಿಂಹನನ್ನು ಸ್ತುತಿಸಿದ್ದಾರೆ.  ಇವುಗಳೇ ಅಲ್ಲದೆ “ದುರಿತವನ ಕುಠಾರಿ, ದುರ್ಜನಾಕುಲವೈರಿ” ಎಂದು ಸಪ್ತ ತಾಳಗಳ ಸುಳಾದಿಯನ್ನೂ ರಚಿಸಿದ್ದಾರೆ.  ಒಬ್ಬ ಬಡ ಭಕ್ತನ ಬಡತನದ ಬೇಗೆಯನ್ನು ನೋಡಲಾರದೆ ಕರುಣೆಯಿಂದ ರಚಿಸಿದ್ದು ಈ ಸುಳಾದಿ.  ಇಂದಿಗೂ ಬಡತನದಲ್ಲಿರುವವರು ಈ ಸ್ತೋತ್ರವನ್ನು ಪಠಿಸಿದರೆ ಬಡವ ಬಲ್ಲಿದನಾಗುತ್ತಾನೆಂಬ ನಂಬಿಕೆ..


ಶ್ರೀ ರಮಣಿ ಕರಕಮಲ ಪೂಜಿತ
ಚಾರುಚರಣಸರೋಜ ಬ್ರಹ್ಮ ಸ
ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ |
ನೀರಜ ಭವಾಂಡೋದಯ ಸ್ಥಿತಿ
ಕಾರಣನೆ ಕೈವಲ್ಯದಾಯಕ
ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ  ||೧||

ಪ್ರತಿಪದಾರ್ಥ : ಶ್ರೀರಮಣಿ - ಮಹಾಲಕ್ಷ್ಮಿ, ಕರಕಮಲ - ಕಮಲದ ಹೂವಿನಂತಹ ಮೃದುವಾದ ಕೈಗಳು, ಪೂಜಿತ - ಪೂಜೆಗೊಳ್ಳುವ, ಚಾರು ಚರಣ ಸರೋಜ - ಮನೋಹರವಾದ ಪಾದ ಕಮಲಗಳುಳ್ಳವನು, ಬ್ರಹ್ಮ - ಚತುರ್ಮುಖ ಬ್ರಹ್ಮದೇವ, ಸಮೀರ - ವಾಯುದೇವ, ವಾಣಿ - ಸರಸ್ವತಿ ಹಾಗೂ ಭಾರತಿ, ಫಣೀಂದ್ರ - ಸರ್ಪಕುಲಕ್ಕೆ ಶ್ರೇಷ್ಠನಾದ ಶೇಷ, ವೀಂದ್ರ - ಪಕ್ಷಿಗಳ ರಾಜ ಗರುಡ, ಭವೇಂದ್ರ - ಭವ+ಇಂದ್ರ ರುದ್ರದೇವರು ಹಾಗೂ ದೇವತೆಗಳ ರಾಜನಾದ ಇಂದ್ರ, ಮುಖ ವಿನುತ - ಇತ್ಯಾದಿ ದೇವತಾ ಸಮೂಹದಿಂದ ಸ್ತುತಿಸಲ್ಪಡುವ, ನೀರಜ ಭವಾಂಡ ಉದಯ ಸ್ಥಿತಿ ಕಾರಣನೆ - ನೀರಿನಲ್ಲಿ ಹುಟ್ಟುವ ಕಮಲದಲ್ಲಿ ಉದ್ಭವಿಸಿದ ಬ್ರಹ್ಮನ ದೇಹ ಅಂದರೆ ಬ್ರಹ್ಮಾಂಡದ ಸೃಷ್ಟಿಗೆ ಕಾರಣನಾದವನು, ಸ್ಥಿತಿ ಕಾರಣನೆ - ಸೃಷ್ಟಿಸಿದ ಬ್ರಹ್ಮಾಂಡದ ಪಾಲನೆಗೆ ಕಾರಣನಾದವನು, ಕೈವಲ್ಯದಾಯಕ - ಕೇವಲ ಜ್ಞಾನ / ಮೋಕ್ಷ ಕೊಡುವವನು, ನಾರಸಿಂಹನೆ - ನರಸಿಂಹಸ್ವಾಮಿಯೇ, ನಮಿಪೆ - ನಮಸ್ಕರಿಸುವೆ,  ಕರುಣಿಪುದೆಮಗೆ - ಕರುಣಿಸು, ಮಂಗಳವ - ಸನ್ಮಾರ್ಗ / ಮಂಗಳವನ್ನು.

ಶ್ರೀ ರಮಣಿ ಕರ ಕಮಲ ಪೂಜಿತ ಎಂದು ಆರಂಭಿಸಿ, ಪರಮಾತ್ಮನ ಪಾರಮ್ಯತೆಯನ್ನು ತಿಳಿಸುತ್ತಾರೆ.  ಶ್ರೀ ರಮಣನಿಗೆ ಶ್ರೀ ರಮಣಿಯಿಂದಲೇ ಮೊದಲ ಪೂಜೆ.  ಲಕ್ಷ್ಮೀದೇವಿ ಪರಮಾತ್ಮನ ಅವಿಭಾಜ್ಯಳು.  ಪರಮಾತ್ಮ ಶ್ರೀ ರಮಣ ಲಕ್ಷ್ಮೀ ನಾರಸಿಂಹ, ಸೀತಾರಾಮ, ರುಕ್ಮಿಣೀಶ  ಹೀಗೆ ಕರೆಸಿಕೊಳ್ಳುತ್ತಾನೆ.  ಇದು ಲಕ್ಷ್ಮೀ ಮತ್ತು ಪರಮಾತ್ಮನ ಅನುಬಂಧ.  ಅದಾಗಿ ಶ್ರೀ ರಮಣಿಯೇ ಮೊದಲ ಪೂಜಾರ್ಹಳು.  ಇದಲ್ಲದೆ ಪರಶುಕ್ಲತ್ರಯರಲ್ಲಿ ಮೊದಲು ಲಕ್ಷ್ಮೀ ದೇವಿ ನಂತರ ಕ್ರಮವಾಗಿ ಬ್ರಹ್ಮ, ವಾಯು ಅವರುಗಳ ಪತ್ನಿಯರಾದ್ದರಿಂದ ಇದೇ ರೀತಿಯಲ್ಲಿ ಪರಮಾತ್ಮನು  ಸ್ತೋತ್ರಗೊಳ್ಳುತ್ತಾನೆ.  ಅನಂತರ ತತ್ವಾದಿ ಪತಿಗಳಿಂದ ಹಾಗೂ ಅಹಂಕಾರ ತ್ರಯರಾದ ಶೇಷ, ಗರುಡ, ರುದ್ರ ಇವರುಗಳಿಂದ ವಂದಿಸಿಕೊಳ್ಳುತ್ತಾನೆ.  ಕೊನೆಗೆ ದೇವೇಂದ್ರ ಮುಂತಾದ ಮುಖ್ಯ ದೇವತೆಗಳಿಂದ ನಮಸ್ಕರಿಸಿಕೊಳ್ಳುತ್ತಾನೆ.  ಇಂತಹ ಶ್ರೇಷ್ಠರಿಂದ ಪೂಜೆಗೊಳ್ಳುವಂತ ಪರಮಾತ್ಮ ಹೇಗಿದ್ದಾನೆಂದರೆ ಈ ಬ್ರಹ್ಮಾಂಡದ ಉದಯ ಸ್ಥಿತಿಗೆ ಕಾರಣನಾಗಿಯೂ  ಪರಬ್ರಹ್ಮ ಭಕ್ತರಿಗೆ ಕೈವಲ್ಯ ದಾತನಾಗಿಯೂ ಲಯಕ್ಕೆ ಕಾರಣನಾಗುತ್ತಾನೆ.  ಹೀಗೆ ದಾಸರು ನಾರಸಿಂಹನನ್ನು ಮಂಗಳವನ್ನು ಕರುಣಿಸು ಎಂದು ಬೇಡಿಕೊಳ್ಳುತ್ತಾರೆ.
ಶ್ರೀ ಎ೦ದರೆ ಕಾ೦ತಿ ಸ೦ಪನ್ನಳಾದಐಶ್ವರ್ಯ ಪೂರ್ಣಳಾದ ನಾರಾಯಣ ದೇವರಿಗೆ ರಮಣಿಯಾದ ಲಕ್ಷ್ಮೀ ದೇವಿಯ – ಶ್ರೀಭೂ, ದುರ್ಗಾ ರೂಪಗಳು.  ಕರಕಮಲಪೂಜಿತ – ಮಹಾಲಕ್ಷ್ಮೀದೇವಿಯ ಹಸ್ತಗಳಿಂದಲೇ ಸದಾ ಕಾಲ ಶ್ರೀಹರಿ ನೇರವಾಗಿ ಪೂಜಿಸಲ್ಪಡುವವನು.  ಪ್ರಳಯ ಕಾಲದಲ್ಲಿಯೂ ಕೂಡ ರಮಾದೇವಿಯಿ೦ದಲೇ ಸೇವಿತನಾಗುವವನುಅನ್ಯರಿ೦ದಲ್ಲ ಎ೦ದು ಅರ್ಥ.  ಚಾರುಚರಣ ಸರೋಜಮನೋಹರವಾದ ಕಮಲದ೦ತಹ ಪಾದ ಉಳ್ಳ ಶ್ರೀ ಹರಿಯನ್ನು  ಉಳಿದವರೆಲ್ಲಾ ಮಹಾಲಕ್ಷ್ಮಿಯ ಮೂಲಕವೇ ಪೂಜಿಸುವರು.  ಅವರಲ್ಲಿ ಚತುರ್ಮುಖ ಬ್ರಹ್ಮಪ್ರಧಾನ ವಾಯುದೇವರು ಸರಸ್ವತೀದೇವಿ ಮತ್ತು ಭಾರತೀ ದೇವಿಯರು ಫಣೀ೦ದ್ರ-ಶೇಷ,  ವೀ೦ದ್ರ-ಗರುಡ, ಭವೇ೦ದ್ರಏಕಾದಶರುದ್ರರಲ್ಲಿ ಶ್ರೇಷ್ಟರಾದ ರುದ್ರದೇವರು ಇವರೇ ಮೊದಲಾದ ಸಮೂಹಗಳಿ೦ದ ವಿನುತಸ್ತುತ್ಯನಾದವನು ಶ್ರೀಹರಿ ಎ೦ದು ಅರ್ಥೈಸಲಾಗಿದೆ.  ಗ್ರಂಥಕರ್ತೃ ಜಗನ್ನಾಥ ದಾಸರ ಕುಲದೈವ ಉಪಾಸ್ಯ ಮೂರುತಿಯಾದ ನಾರಸಿಂಹ.  ಅವನೇ ಕೈವಲ್ಯದಾಯಕ.  ಕೇವಲ ಎಂಬ ಹೆಸರುಳ್ಳ ನಾರಾಯಣ. “ಕೈವಲ್ಯ ಎಂದರೆ ಮುಕ್ತಿ ಎಂಬ ಅರ್ಥವೂ ಇದೆ.  ಸಾಧನೆಯನ್ನು ಪೂರೈಸಿದ ಸಾತ್ವಿಕ ಜ್ಞಾನಿಗಳಿಗೆ ಮುಕ್ತಿಯನ್ನು ನೀಡುವ ಪ್ರಭು ಎಂದೂ ಆಗುತ್ತದೆ.  ನಾರಸಿಂಹನೆಂದರೆ ಅನಿಷ್ಟವನ್ನು ಹೋಗಲಾಡಿಸಿ ಇಷ್ಟಾರ್ಥಗಳನ್ನು ಕರುಣಿಸುವವನು ಎಂದೂಅರ ಎಂದರೆ ದೋಷ – ನಾರ ಎಂದರೆ ದೋಷವಿಲ್ಲದ ಮುಕ್ತನಾದವನು ಎಂದೂ ಆಗುತ್ತದೆ. ನಾರ ಎಂದರೆ ಲಕ್ಷ್ಮೀದೇವಿ ಎಂಬ ಅರ್ಥವೂ ಇರುವುದರಿಂದ – ಆಕೆಗೆ ಒಡೆಯ ಮತ್ತು ಶ್ರೇಷ್ಠ  ನಾರಸಿಂಹ (ನಾರಾಯಣ).  

ಲಕ್ಷ್ಮೀನಾರಸಿಂಹ ಸ್ವಾಮಿಯು ರಮಾದೇವಿಯನ್ನು ತನ್ನ ಎಡತೊಡೆಯ ಮೇಲೆ ಕೂಡಿಸಿಕೊಂಡು ಕುಳಿತಿರುವ ಮನೋಹರ ರೂಪ ನೋಡಿ ಆಚಾರ್ಯ ಶಂಕರರು ತಮ್ಮ ಲಕ್ಷ್ಮೀನಾರಸಿಂಹ ಸ್ತೋತ್ರದಲ್ಲಿ ಸಂಸಾರ ಸಾಗರ ನಿಮಜ್ಜನ ಮುಹ್ಯಮಾನಂ ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಂ | ಪ್ರಹ್ಲಾದ ಖೇದ ಪರಿಹಾರ ಕೃತಾವತಾರ ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ || ಎಂದು ಸ್ತುತಿಸುತ್ತಾ ಸಂಸಾರ ಸಾಗರದಲ್ಲಿ ಮುಳುಗಿ ಕಂಗಾಲಾದ ನಮ್ಮೆಡೆಗೆ ನಿನ್ನ ಕೃಪಾದೃಷ್ಟಿ ಬೀರಿ ನಮಗೆ ನಿನ್ನ ಕರಗಳ ಆಶ್ರಯ ನೀಡಿ ಕಾಪಾಡು ಎಂದು ಪ್ರಾರ್ಥಿಸುತ್ತಾರೆ.

ಪ್ರತ್ಯಕ್ಷವಾಗಿರುವ ಪ್ರಪ೦ಚಕ್ಕೆ ಸೃಷ್ಟಿ ಲಯಾದಿಗಳು ಮನುಷ್ಯ ಯತ್ನಮಾತ್ರದಿ೦ದ ಸಾಧ್ಯವಲ್ಲದ್ದಾಗಿರುವುದರಿ೦ದ ವಿವೇಕಿಗಳಿಗೆ ಈ “ಜಗತ್ ಕರ್ತೃತ್ವ”  ಕಾರಣವಸ್ತು ಒ೦ದು ಇದೆ ಎ೦ದು ತಿಳಿದು ಬರುತ್ತದೆ. ಆ ವಸ್ತುವೇ ಪರಬ್ರಹ್ಮಪದವಾಚ್ಯನಾದ, ತಾರತಮ್ಯೋಪೇತನೂ, ಸರ್ವರಿ೦ದಲೂ ಅತ್ತ್ಯುತ್ತಮನಾದವನೂ, ಶ್ರೀ ನಾರಸಿ೦ಹಾಭಿನ್ನ ಶ್ರೀನಾರಾಯಣ ದೇವರು.  ಇವನನ್ನು ನಿರ್ದೋಷನು, ಜ್ಞಾನಾನ೦ದಾದ್ಯನ೦ತ ಗುಣಪರಿಪೂರ್ಣನೂ ಎ೦ದು ಭಜಿಸಬೇಕೆ೦ದು ಇದರ ತಾತ್ಪಯ೯ವಾಗಿದೆ.  ಹೀಗೆ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ ಕರ್ತನಾದ ನಾರಸಿಂಹ ದೇವರಿಗೆ ಲಕ್ಷ್ಮೀಬ್ರಹ್ಮವಾಯುಶೇಷಗರುಡರುದ್ರ, ಇಂದ್ರ ಮೊದಲಾದ ಮಹಾನ್ ದೇವತೆಗಳಿಂದ ತಾರತಮ್ಯ ಪೂರಕವಾಗಿ ವಂದಿಸಿ ಮಂಗಳವೆಂದರೆ ಮೋಕ್ಷವೆಂಬ ಅರ್ಥದಲ್ಲಿ, ಮಂಗಳವನ್ನು ಕರುಣಿಸು ಎಂದು ಜಗನ್ನಾಥ ದಾಸರು ಕೇಳಿಕೊಳ್ಳುತ್ತಿದ್ದಾರೆ.

ಡಿವಿಜಿಯವರು ಕೂಡ ತಮ್ಮ ಕಗ್ಗದಲ್ಲಿ “ನಂಬದಿದ್ದನು ತಂದೆ, ನಂಬಿದನು ಪ್ರಹ್ಲಾದ ; ನಂಬಿಯೂ ನಂಬದಿರುವಿಬ್ಬಂದಿ ನೀನು | ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು “ ಎನ್ನುತ್ತಾ  ಇಲ್ಲಿ ಪ್ರಹ್ಲಾದ ಆಸ್ತಿಕ ಅವನ ತಂದೆ ಹಿರಣ್ಯಾಕ್ಷ ನಾಸ್ತಿಕ.  ಕಂಬದಿಂದ ಪ್ರತ್ಯಕ್ಷನಾದ ನಾರಸಿಂಹ (ಬಿಂಬ) ಭಕ್ತ ಪ್ರಹ್ಲಾದನಿಗೆ ಮೋಕ್ಷ ಕೊಟ್ಟ ಎಂದು ನಾರಸಿಂಹನ ಕೈವಲ್ಯದಾಯಕತ್ವವನ್ನು ವರ್ಣಿಸಿದ್ದಾರೆ. 

ಮುಂದಿನ ಚರಣದಲ್ಲಿ ಮಹಾಲಕ್ಷ್ಮಿಯ ಭಕ್ತಿ ಮತ್ತು ಜವಾಬ್ದಾರಿಯ ವಿವರಣೆಯನ್ನು ನೀಡಿದ್ದಾರೆ.

ಚಿತ್ರಕೃಪೆ  : ಅಂತರ್ಜಾಲ

Sunday, June 5, 2011

ಹರಿಕಥಾಮೃತಸಾರ ಸೌರಭ


ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ

ಪರಮ ಭಗವದ್ಭಕ್ತರಿದನಾದರದಿ ಕೇಳುವುದು

“ಹರಿ” ಎಂಬ ಪದದ ಎರಡು ಅಕ್ಷರಗಳ ವಿಶೇಷತೆ ಏನೆಂದರೆ ’ಹ’ ವ್ಯಂಜನಾಕ್ಷರ ಶ್ರೇಣಿಯಲ್ಲಿ ೮ನೇ ಸ್ಥಾನದಲ್ಲಿದೆ ಮತ್ತು ‘ರಿ’ ವ್ಯಂಜನಾಕ್ಷರ ೨ನೇ ಸ್ಥಾನದಲ್ಲಿದೆ. “ಅಂಕಾನಾಂ ವಾಮತೋಗತಿ:” ಎಂಬ ಸಂಸ್ಕೃತದ ನಿಯಮದಂತೆ ೮೨ ಎಂಬುದು ೨೮ ಎಂದಾಗುವುದು. ೨೮ – ಹರಿ ಶಬ್ದದ ಭಗವದ್ರೂಪಗಳು. ಈ ಮೇಲಿನ ಮೂರು ಸಾಲುಗಳ ಪಲ್ಲವಿಯು ಪ್ರತಿ ಸಂಧಿಯ ಮೊದಲೂ ಹೇಳಲ್ಪಡುತ್ತದೆ. ಭಗವಂತನ ಅನಂತ ಕಲ್ಯಾಣ ಗುಣಗಳನ್ನು ಎಲ್ಲಿ ಸುಂದರವಾಗಿ ನಿರೂಪಣೆ ಮಾಡಿದ್ದಾರೋ ಅದೇ “ಹರಿಕಥೆ”. ಎಂಬರ್ಥದಲ್ಲಿ ಹರಿಕಥಾಮೃತಸಾರವನ್ನು ಕೇಳುವುದೂ, ಹಾಡುವುದೂ ಮತ್ತೆ ಮತ್ತೆ ನೆನಪಿಸಿಕೊಳ್ಳುವುದೂ ಮೋಕ್ಷಕ್ಕೆ ದಾರಿಯೆಂದೂ ಹರಿಯಲ್ಲಿ ನಿರಂತರವಾಗಿ ಅನುರಕ್ತರಾಗಿರುವ ಪರಮ ಭಕ್ತರು ಉದಾಸ ತೋರದೆ, ಆದರದಿಂದ, ಭಕ್ತಿಯಿಂದ, ಶ್ರದ್ಧೆಯಿಂದ ಕೇಳಿ ಮನನ ಮಾಡಿಕೊಳ್ಳಿರೆಂದೂ ಜಗನ್ನಾಥ ದಾಸರು ಪ್ರತಿಯೊಂದು ಸಂಧಿಯ ಮೊದಲೂ ವಿನಂತಿಸಿಕೊಳ್ಳುತ್ತಾರೆ. ವೇದ, ಪುರಾಣ, ಉಪನಿಷತ್ತುಗಳನ್ನು ಚೆನ್ನಾಗಿ ಕಡೆದು ತೆಗೆದ “ನವನೀತ” – ಹರಿಕಥಾಮೃತಸಾರವನ್ನು ಜಗನ್ನಾಥ ದಾಸರು ನಮಗೆ ಅರ್ಥವಾಗುವ, ನಮ್ಮದೇ ಕನ್ನಡ ಭಾಷೆಯಲ್ಲಿ ಸುಲಭವಾಗಿ ಸೇವಿಸಲು ಕೊಟ್ಟಿದ್ದಾರೆ ಮತ್ತು ನಮ್ಮ ದೈನಂದಿನ ಜೀವನದ ಅನುಷ್ಠಾನಕ್ಕೆ ಬೇಕಾದದ್ದೆಲ್ಲಾ ಕೊಟ್ಟು ಶ್ರೀ ಹರಿಯ ಪಾದಗಳಲ್ಲಿ ಶರಣಾಗಿ ಜೀವನ ಸಾರ್ಥಕ ಮಾಡಿಕೊಳ್ಳಿರಿ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ಶ್ರೀ ಪುರಂದರ ದಾಸರ ಒಂದು ಉಗಾಭೋಗ ನಮಗೆ 'ಗುರು'ವಿನ ಮಹಿಮೆಯನ್ನು ಹೃದಯ ಸ್ಪರ್ಶವಾಗುವಂತೆ ವರ್ಣಿಸುತ್ತದೆ..

ಗುರು ಉಪದೇಶವಿಲ್ಲದ ಜ್ಞಾನವು

ಗುರು ಉಪದೇಶವಿಲ್ಲದ ಸ್ನಾನವು

ಗುರು ಉಪದೇಶವಿಲ್ಲದ ಧ್ಯಾನವು

ಗುರು ಉಪದೇಶವಿಲ್ಲದ ಜಪವು

ಗುರು ಉಪದೇಶವಿಲ್ಲದ ತಪವು

ಗುರು ಉಪದೇಶವಿಲ್ಲದ ಮಂತ್ರ

ಗುರು ಉಪದೇಶವಿಲ್ಲದ ತಂತ್ರ

ಉಗ್ರನ ಉಪವಾಸದಂತೆ ಕಾಣಿರೋ.

ಇನ್ನೂ ಸುಲಭವಾದ ಮಾತುಗಳಲ್ಲಿ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ " ಎಂದಿದ್ದಾರೆ.
ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ :

ಬ್ರಹ್ಮರುದ್ರುಲಕೈನ - ಭಾವಿಂಪ ಶಕ್ಯಮಾ

ಅಧ್ಯಾತ್ಮವಿದ್ಯ ಗುರುಕೀಲು ಮಹಿಮ

ಅಧ್ಯಾತ್ಮ ವಿದ್ಯೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು ; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಅಧ್ಯಾತ್ಮ ವಿದ್ಯೆಯು ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಅಧ್ಯಾತ್ಮವಿದ್ಯ "ಗುರುಕೀಲು ಮಹಿಮೆ" - ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. "ಗುರುಕೀಲು" ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥ. ತಾತಯ್ಯನವರು ಗುರುವಿಗೆ 'ಮಾತೃಸ್ಥಾನ' ವನ್ನು ಕೊಟ್ಟಿದ್ದಾರೆ.

ಗುರು ಪ್ರಸಾದದಿಂದಲೇ ಹರಿ ಪ್ರಸಾದವು ಲಭ್ಯವಾಗಬೇಕು. ಆದ್ದರಿಂದಲೇ ಶ್ರೀ ವಾದಿರಾಜರ ಗುರು ಮಹಿಮೆಯನ್ನು ಸಾರುವ ಈ ಮಾತುಗಳನ್ನು ನಾವು ಸದಾ ನೆನೆಯುತ್ತಿರಬೇಕು.

ಗುರುಭಕುತಿಯಿರಬೇಕು ಹಿರಿಯ ಕರುಣವು ಬೇಕು

ಹರಿಕಥೆಗಳ ನಿತ್ಯದಲಿ ಕೇಳುತಿರಬೇಕು

ವಿರಕ್ತಿಯು ಬೇಕು ವಿಷ್ಣುವಿನಾರಾಧನೆ ಬೇಕು

ವರಮಂತ್ರ ಜಪ ಬೇಕು ತಪ ಬೇಕು ಪರಗತಿಗೆ

ಪರಿಪರಿಯ ವ್ರತ ಬೇಕು ಸಿರಿಪತಿ ಹಯವದನನ

ಪರಮಾನುಗ್ರಹ ಬೇಕು ವಿಷಯನಿಗ್ರಹ ಬೇಕು.

ಭಾಗವತ ದಶಮಸ್ಕಂದದಲ್ಲಿ ಹೇಳುವಂತೆ.....
ವಾಸುದೇವಕಥಾಪ್ರಶ್ನ: ಪುರುಷಾಂಸ್ತ್ರೀನ್ಪುನಾತಿ ಹಿ |

ವಕ್ತಾರಂ ಪೃಚ್ಛಕಂ ಶ್ರೋತೃಂಸ್ತತ್ಪಾದಸಲಿಲಂ ಯಥಾ ||

ವಿಷ್ಣು ಪಾದೋದ್ಭವಳಾದ ಗಂಗಾದೇವಿಯು ಹೇಗೆ ಮೂರೂ ಲೋಕಗಳನ್ನು ಪಾವನಗೊಳಿಸುತ್ತಿರುವಳೋ, ಹಾಗೆ ವಾಸುದೇವನ ಕಥೆಗಳನ್ನು ಕೇಳುವವರ, ಪ್ರವಚನಗಳನ್ನು ಮಾಡುವವರ ಎಲ್ಲ ಕಷ್ಟಗಳನ್ನೂ ಪರಿಹರಿಸಿ, ಜನ್ಮ ಪಾವನಗೊಳಿಸುವನು ಶ್ರೀಹರಿ. “ಅದ್ಭುತಂಬೈನ ಶ್ರೀಹರಿಕಥಲ್ ನಿರ್ಮಿಂಚಿ, ಇತರ ಚಿಂತಲನ್ನೀ ವಿಡಿಚಿನಾಡು” – ಅಂದರೆ ಅನ್ಯ ಚಿಂತೆಗಳನ್ನೆಲ್ಲಾ ಬಿಟ್ಟು ಶ್ರೀಹರಿಕಥೆಯೊಂದೇ ಅನನ್ಯ ಚಿಂತೆಯಾಗಬೇಕು ಎಂದರು ತಾತಯ್ಯನವರು. ಅನನ್ಯ ಚಿಂತೆ – ಗೀತೆಯಲ್ಲಿ ಭಗವಂತ “ಅನನ್ಯಾಶ್ಚಿಂತಯಂತೋ ಮಾಂ – ಯೇ ಜನಾ: ಪರ್ಯುಪಾಸತೇ “ : ಯಾರು ಉಳಿದ ಚಿಂತೆಗಳನ್ನು ಬಿಟ್ಟು ನನ್ನನ್ನೇ ಉಪಾಸಿಸುತ್ತ ಚಿಂತಿಸುವರೋ ಅವರನ್ನು ನಾನು ಕಾಪಾಡುತ್ತೇನೆ ಎಂಬ ಭರವಸೆ ಕೊಡುತ್ತಾನೆ.

ಇದೆಲ್ಲದರ ಜೊತೆಗೆ ನಮ್ಮ ಡಿವಿಜಿಯವರ “ಮಂಕುತಿಮ್ಮನ ಕಗ್ಗ”ವನ್ನೂ ನಾವು ಇಲ್ಲಿ ನೆನೆಯಲೇ ಬೇಕು. ನಮ್ಮ ಕನ್ನಡ ಭಾಷೆಯ ಇನ್ನೊಂದು ಮೇರು ಕೃತಿಯಲ್ಲಿ ಅನುಭವ ಪೂರ್ವಕವಾಗಿ ಡಿವಿಜಿಯವರು ನಮ್ಮ ನಿಮ್ಮೆಲ್ಲರಿಗೂ ಜೀವನ ನಡೆಸುವ ಕ್ರಮ, ಅಳವಡಿಸಿಕೊಳ್ಳಬೇಕಾದ ತತ್ವಗಳನ್ನು ಕೊಟ್ಟಿದ್ದಾರೆ...

ವ್ಯಾಕರಣ ಕಾವ್ಯ ಲಕ್ಷಣಗಳನ್ನು ಗಣಿಸದೆಯೆ
ಲೋಕ ತಾಪದಿ ಬೆಂದು ತಣಿಪನೆಳಸಿದವಂ
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು
ಸ್ವೀಕರಿಕೆ ಬೇಳ್ಪವರು - ಮಂಕುತಿಮ್ಮ ||

ಕಗ್ಗದ ಬಗ್ಗೆ ಮೇಲಿನ ಪದ್ಯದಲ್ಲಿ ಡಿವಿಜಿಯವರು ತಾವು ಇದನ್ನು ಬರೆಯುವಾಗ ಯಾವ ವ್ಯಾಕರಣ, ಛಂದಸ್ಸುಗಳನ್ನೂ ಬಳಸಿ ಒಂದು ಮಹಾಕಾವ್ಯ ರಚಿಸಬೇಕೆಂಬ ಮನಸ್ಥಿತಿಯಲ್ಲೇನು ಇರಲಿಲ್ಲವೆಂದು ಹೇಳಿದ್ದಾರೆ. ಬದುಕಿನ ಬೇಗೆಯಲ್ಲಿ ಬೆಂದು, ಬಳಲಿ, ಬಾಯಾರಿ ತಿಳಿಜಲವ ಬಯಸಿ ಬಂದ ವ್ಯಕ್ತಿಗೆ ಡಿವಿಜಿಯವರು ತಮ್ಮ ನಂಬಿಕೆಗಳನ್ನು ಇಲ್ಲಿ “ಕಗ್ಗ”ದ ರೂಪದಲ್ಲಿ ಪೋಣಿಸಿ ಕೊಟ್ಟಿದ್ದಾರೆ.

ಜಗನ್ನಾಥ ದಾಸರು ಹರಿಕಥಾಮೃತಸಾರವನ್ನು ಪರಮ ಭಗವದ್ಭಕ್ತರಿಗಾಗಿ ಎಂದು ಹೇಳಿರುವಂತೆ ಡಿವಿಜಿಯವರು “ಕಗ್ಗ”ದ ಸಾರ ಯಾರಿಗೆ ಬೇಕೋ ಅವರಿಗೆ ಮಾತ್ರ, ಬೇಡದವರು ಇದರ ರುಚಿ ತಿಳಿಯರು ಎಂದಿದ್ದಾರೆ.