Sunday, November 30, 2014

ಕರುಣಾ ಸಂಧಿ - ೨೭ ನೇ ಪದ್ಯ



ಕಣ್ಣಿಗೆವೆಯಂದದಲಿ, ಕೈ ಮೈ
ತಿಣ್ಣಿಗೊದಗುವ ತೆರದಿ, ಪಲ್ಗಳು
ಪಣ್ಣು ಫಲಗಳನಗಿದು ಜಿಹ್ವೆಗೆ ರಸವೀವಂತೆ |
ಪುಣ್ಯ ಫಲವೀವಂದದಲಿ ನುಡಿ-
ವೆಣ್ಣುನಾಣ್ಮಾಂಡದೊಳು ಲಕ್ಷ್ಮಣ-
ನಣ್ಣನೊದಗುವ ಭಕ್ತರವಸರಕಮರಗಣಸಹಿತ  ||೨೭||

ಪ್ರತಿಪದಾರ್ಥ : ಕಣ್ಣಿಗೆವೆಯಂದದಲಿ - ಕಣ್ಣುಗಳೀಗೆ ಸದಾ ರಕ್ಷಣೆ ಕೊಡುವ ರೆಪ್ಪೆಗಳಂತೆ, ಕೈ ಮೈ ತಿಣ್ಣಿಗೊದಗುವ ತೆರದಿ - ತಿಣ್ಣು ಎಂದರೆ ತಿನಿಸು ದೇಹದಲ್ಲಿ ನೋವು ತುರಿಕೆ  ಉಂಟಾದಾಗ  ಕೈಗಳು  ಸಹಾಯಕ್ಕೆ ಧಾವಿಸುವಂತೆ,  ಪಲ್ಗಳು  ಪಣ್ಣು ಫಲಗಳನಗಿದು - ಹಲ್ಲುಗಳು ಪಕ್ವವಾದ ಫಲಗಳನ್ನು ಜಗಿದು ಜಗಿದು, ಜಿಹ್ವೆಗೆ ರಸವ ನೀವಂತೆ -  ನಾಲಿಗೆಗೆ ರಸವನ್ನು ಉಣಿಸುವಂತೆ, ಪುಣ್ಯ ಫಲವೀವಂದದಲಿ - ಜೀವಿಯು ಜನ್ಮಾಂತರಗಳಲ್ಲಿ ಸಂಪಾದಿಸಿದ ಪುಣ್ಯವು ಸುಖವನ್ನು ಕೊಡುವಂತೆ, ನುಡಿವೆಣ್ಣು - ವಾಗ್ದೇವತೆ ಸರಸ್ವತಿದೇವಿ, ಆಣ್ಮ - ವಾಗ್ದೇವತೆಯ ಪತಿಯಾದ ಬ್ರಹ್ಮದೇವನ, ಅಂಡದೊಳು - ಸೃಷ್ಟಿಯಾದ ಬ್ರಹ್ಮಾಂಡದೊಳಗೆ, ಲಕ್ಷ್ಮಣನಣ್ಣ - ಪ್ರೀತಿ ಕಾರುಣ್ಯಕ್ಕೆ ಪ್ರತೀಕನಾದ ಲಕ್ಷ್ಮಣಿಗೆ ಅಣ್ಣನಾದ ಶ್ರೀರಾಮಚಂದ್ರನು, ಒದಗುವ - ಧಾವಿಸಿ ಬರುವ, ಭಕ್ತರವಸರಕೆ - ಭಕ್ತರಿಗೆ ಸಂಕಷ್ಟದ ಸಮಯ ಬಂದಾಗಲೆಲ್ಲಾ, ಅಮರಗಣ ಸಹಿತ - ತನ್ನ ಪರಿವಾರ ದೇವತೆಗಳೆಲ್ಲರ ಸಮೇತನಾಗಿ,  ಒದಗುವ -  ದೊರಕುವನು.
ಸ್ವಪ್ರಯೋಜನರಹಿತನಾಗಿದ್ದರೂ ಭಗವ೦ತನು ತನ್ನ ನಿಜಭಕ್ತರನ್ನು ಹೇಗೆ ಸ೦ರಕ್ಷಿಸುವನು ಎ೦ಬುದನ್ನು ದಾಸರಾಯರು ತಮ್ಮ ಈ ಪದ್ಯದಲ್ಲಿ ದೇಹದಲ್ಲಿರುವ ಆವಯವಗಳನ್ನು ದೃಷ್ಟಾ೦ತವಾಗಿಸುತ್ತಾ ವಿವರಿಸುತ್ತಾರೆ. ಸರ್ವಪದಾರ್ಥಗಳನ್ನು ನೋಡುವ೦ತಹ ಕಣ್ಣುಗಳು, ತಮಗೆ ಸಹಾಯಭೂತವಾಗಿ ಅತಿ ಸಮೀಪದಲ್ಲಿ ಇರುವ ಕಣ್ಣುರೆಪ್ಪೆಗಳನ್ನು ದೃಷ್ಟಿಸಲು ಹೇಗೆ ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಬಿ೦ಬ-ಪ್ರತಿಬಿ೦ಬ ಜೀವರು ಕ್ಷೀರವಾರಿಯ೦ತೆ ಕಲೆತೇ ಇದ್ದರೂ, ಜೀವನಿಗೆ ಬಿ೦ಬ ಕಾಣಿಸುವುದಿಲ್ಲ, ಬಿ೦ಬನ ರಕ್ಷಣೆ ಇಲ್ಲದ ಪ್ರತಿಬಿ೦ಬನಿಗೆ ಅಸ್ತಿತ್ವವೇ ಇಲ್ಲ. ದೇಹದೊಳಗೆ ತಿನಸು(ತುರಿಕೆ) ಉದ್ಭವಿಸಿದರೆ, ಹಸ್ತಗಳು ತುರಿಸಿ ತಿನಸನ್ನು ಶಮನ ಮಾಡುವ೦ತೆ, ವಿಷಯಸ೦ಬ೦ಧವಾಗಿ ಕಷ್ಟಗಳು ಪ್ರಾಪ್ತವಾಗಲು, ಜ್ಞಾನಾನುಸ೦ಧಾನವೆ೦ಬ ಕರಗಳಿ೦ದ ದು:ಖಾದಿಗಳು ಪರಿಹಾರಗೊಳಿಸುತ್ತಾನೆ. ದ೦ತಗಳು ಹಣ್ಣುಗಳ ಭಕ್ಷಣೆಯನ್ನು ಮಾಡಿ ಸಿಪ್ಪೆಯನ್ನು ದೂರವಾಗಿಸಿ, ಸುರಸವನ್ನು ಜಿಹ್ವೆಗೆ ಕೊಡುವಾಗ ದ೦ತಗಳಿಗೆ ಹೇಗೆ ಯಾವ ಸ್ವಪ್ರಯೋಜನವೂ ಇಲ್ಲವೋ, ಅದೇ ರೀತಿಯಲ್ಲಿ ಪರಮಾತ್ಮನು ಸಿಪ್ಪೆ ಸದೃಶವಾದ ಈ ಲಿ೦ಗದೇಹವನ್ನು ಬೇರ್ಪಡಿಸಿ, ಜೀವನಿಗೆ ಸ್ವರೂಪಾನ೦ದದ ಅನುಭವವನ್ನು ಕೊಡುತ್ತಾನೆ. ಇವುಗಳು ಪರಮಾತ್ಮನ ಕಾರುಣ್ಯ ಹಾಗೂ ಗುಣಪೂರ್ಣತ್ವದ ನಿದರ್ಶನಗಳಾಗಿವೆ. ಲಕ್ಷ್ಮಣಾಗ್ರಜನು  ದೇವತೆಗಳ ಸಮೂಹ ಸಹಿತನಾಗಿ, ಭಕ್ತರ ಕಷ್ಟಕಾಲ ಪ್ರಾಪ್ತವಾದ ಸಮಯದಲ್ಲಿ ಬ೦ದು ರಕ್ಷಿಸುತ್ತಾನೆ ಎ೦ದು ದಾಸರಾಯರು ಸದೃಷ್ಟಾ೦ತವಾಗಿ ವಿವರಿಸುತ್ತಾರೆ.

ಭಗವಂತನ ಮೂರು ವಿಧದ ರಕ್ಷಣೆಯ ವಿವರಣೆಯನ್ನು ದಾಸರಾಯರು ಕೊಡುತ್ತಾರೆ.  ಮೂರು ವಿಧದ ರಕ್ಷಣೆಗೆ ಮೂರು ಸ್ಥರದ ಅಧಿಕಾರಿಗಳನ್ನು ಉಲ್ಲೇಖಿಸುತ್ತಾರೆ.  ಮೊದಲನೆಯವರಾಗಿ "ಉತ್ತಮ ಅಧಿಕಾರಿಗಳು" ಬರುತ್ತಾರೆ.  ಇವರು "ಬ್ರಹ್ಮಾದಿ ತತ್ತ್ವೇಶ್ವರ" ದೇವತೆಗಳಾಗುತ್ತಾರೆ.   ಇದಕ್ಕೆ ಉಪಮಾನವಾಗಿ ಕಣ್ಣುಗಳನ್ನು ರೆಪ್ಪೆಯು   ನಿರಂತರವಾಗಿ ಕಾಪಾಡುವಂತೆ ಉತ್ತಮ ಅಧಿಕಾರಿಗಳನ್ನು ಭಗವಂತ ಕಾಪಾಡುತ್ತಾನೆಂಬುದನ್ನು ತಿಳಿಸಿದ್ದಾರೆ.  ಎರಡನೆಯ ಸ್ಥರದ ಅಧಿಕಾರಿಗಳನ್ನು "ಮಧ್ಯಮಾಧಿಕಾರಿಗಳು" ಎನ್ನುತ್ತಾರೆ.  ಇವರು "ಕರ್ಮಜರಿಂದ ದೇವಗಂಧರ್ವ"ರವರೆಗಿನ ಜೀವರುಗಳು.   ಇವರನ್ನು ಭಗವಂತನು ಕೈ ಮೈ ತಿಣ್ಣಿಗೊದಗುವ ತೆರದಿ, ಅವರಿಗೆ ಬಾಧೆ ಅಥವಾ ಸಂಕಷ್ಟ ಬಂದಾಗ ಧಾವಿಸಿ ಬಂದು ಕಾಪಾಡುತ್ತಾನೆ.  ಮೂರನೆಯ ಸ್ಥರದವರು "ಅಧಮಾಧಿಕಾರಿ"ಗಳಾಗುತ್ತಾರೆ.  ಇವರು "ಮನುಷ್ಯ ಗಂಧರ್ವರು ಹಾಗೂ ಸಾತ್ವಿಕ" ಜೀವರುಗಳು.  ಇವರನ್ನು ಪಲ್ಲುಗಳು ಫಲವನ್ನು ಭಕ್ಷಿಸಿ, ಸಿಪ್ಪೆಯನ್ನು ಬೇರ್ಪಡಿಸುವಂತೆ, ಲಿಂಗ ದೇಹವನ್ನು ಬೇರೆಮಾಡಿ ಸ್ವರೂಪಾನಂದವನ್ನು ಕೊಟ್ಟು ರಕ್ಷಿಸುತ್ತಾನೆ.  

ಕಣ್ಣಿಗೆವೆಯಂದದಲಿ - ಕಣ್ಣಿಗೆ ಎವೆ ಎಂದರೆ ಅದು ಕಣ್ಣಿನ ರೆಪ್ಪೆಯೆಂದರ್ಥವಾಗುತ್ತದೆ.  ಕಣ್ಣುಗಳು ಮನುಷ್ಯನ ದೇಹದ ಒಂದು ಅತ್ಯಂತ ಪ್ರಮುಖವಾದ ಅಂಗವಾಗಿದೆ.  ಕಣ್ಣುಗಳಿಂದಲೇ ನಾವು ಪ್ರಪಂಚವನ್ನು ಕಾಣುವುದು.  ಕಣ್ಣುಗಳು ಅತ್ಯಂತ ಸೂಕ್ಷ್ಮವಾದ ಅಂಗವೂ ಆಗಿದೆ.  ಅಣು ಮಾತ್ರದ ಧೂಳಿನ ಕಣ ಕಣ್ಣೊಳಗೆ ಬಿದ್ದರೂ ಸಾಕು, ಕಣ್ಣು ಕೆಂಪಗಾಗಿ, ನೋವಾಗಿ, ಮುಚ್ಚಿಕೊಳ್ಳುತ್ತವೆ.  ರೆಪ್ಪೆಗಳು ಕಣ್ಣುಗಳನ್ನು ಅತೀ ಜತನದಿಂದ ರಕ್ಷಿಸುತ್ತವೆ.  ಅಪಾಯದ ಅರಿವು ನಮಗೆ ಆಗುವ ಮುನ್ನವೇ ರೆಪ್ಪೆಗಳು ಕಣ್ಣುಗಳನ್ನು ತಮ್ಮ ಮಡಿಲಿನಲ್ಲಿ  ಮುಚ್ಚಿ, ಸಂರಕ್ಷಿಸಿರುತ್ತವೆ.  ರೆಪ್ಪೆಗಳು ತಮ್ಮನ್ನು ಎಷ್ಟೊಂದು ಜತನದಿಂದ ಕಾಪಾಡುತ್ತಿವೆಯೆಂಬ ಸಣ್ಣ ಅರಿವು ಕೂಡ ಕಣ್ಣುಗಳಿಗೆ ಇರುವುದಿಲ್ಲ.  ರೆಪ್ಪೆಗಳಿಲ್ಲದೆ ಕಣ್ಣುಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾಗುವುದಿಲ್ಲ.  ರೆಪ್ಪೆಗಳು ಹಾಗೂ ಕಣ್ಣುಗಳ ಈ ಸಂಬಂಧ ಅತ್ಯಂತ ಆಳವಾದದ್ದು.  ಆದರೆ ಈ ಅನೂಹ್ಯ ಸಂಬಂಧದ ಮುಖ್ಯ ವಿಚಾರವೇನೆಂದರೆ, ಸದಾ ತಮ್ಮನ್ನು ಇಷ್ಟು ಚುರುಕಿನಿಂದ, ಜಾಗರೂಕತೆಯಿಂದ ಕಾಪಾಡುವ ರೆಪ್ಪೆಗಳನ್ನು ಕಣ್ಣುಗಳು ಎಂದಿಗೂ ವೀಕ್ಷಿಸುವುದಿಲ್ಲ.  ಜಗತ್ತಿನ ಸಮಸ್ತವನ್ನೂ ವೀಕ್ಷಿಸಿ, ಅಕ್ಷಿಪಟಲದ ಮೂಲಕ ಜೀವನಿಗೆ ಅರಿವು ಮೂಡಿಸುವ ಕಣ್ಣುಗಳು, ತಮ್ಮ ಆಪ್ತರಕ್ಷಕರಾದ, ತಮಗೆ ಸಮೀಪದಲ್ಲಿಯೇ ಇರುವ ರೆಪ್ಪೆಗಳನ್ನು ಮಾತ್ರ ಒಮ್ಮೆಯೂ ಭೇಟಿಯಾಗುವುದೇ ಇಲ್ಲ.  ರೆಪ್ಪೆಗಳೂ, ಕಣ್ಣುಗಳೂ ಎದುರೆದುರಿಗೆ ಬರುವ ಸಾಧ್ಯತೆ ಇಲ್ಲವೇ ಇಲ್ಲ.  ಹೀಗೇ ಭಗವಂತನು ಜೀವನ ಒಳಗೂ, ಹೊರಗೂ ಇದ್ದು, ಸದಾ ರಕ್ಷಿಸುತ್ತಿದ್ದರೂ, ಜೀವನು ಭಗವಂತನನ್ನು ಗುರುತಿಸುವುದೇ ಇಲ್ಲ.  ರೆಪ್ಪೆಗಳು, ಕಣ್ಣುಗಳನ್ನು ಕೇವಲ ಹೊರಗಿನಿಂದ ಮಾತ್ರ ರಕ್ಷಿಸುತ್ತವೆ, ಆದರೆ ಭಗವಂತನು ಜೀವನನ್ನು ಒಳಗೆ, ಹೊರಗೆ, ಹಿಂದೆ, ಮುಂದೆಲ್ಲಾ ಆಗಸದವೋಲ್ ಇದ್ದು ಅನವರತ ರಕ್ಷಿಸುತ್ತಲೇ ಇದ್ದಾನೆ.  ಇದೇ ಗ್ರಂಥದ ಮಾತೃಕಾ ಸಂಧಿಯ ೮ನೆಯ ಚರಣದಲ್ಲಿ ದಾಸರಾಯರು ಭಗವಂತನು ಯಾವ ಇಂದ್ರಿಯದಲ್ಲಿ ಯಾವ ರೂಪದಲ್ಲಿ ನೆಲೆಸಿದ್ದಾನೆಂಬುದನ್ನು ಸೂಚಿಸುತ್ತಾ "ಭೇಶ ಭಾಸ್ಕರರಕ್ಷಿಯುಗಳಕೆ" - ಬಲದ ಕಣ್ಣಿಗೆ ಸೂರ್ಯದೇವ, ಅಂತರ್ಗತ ಶ್ರೀ ನಾರಾಯಣ ರೂಪದಿಂದಲೂ, ಎಡದ ಕಣ್ಣಿಗೆ ಚಂದ್ರದೇವ, ಅಂತರ್ಗತನಾಗಿ ದಧಿವಾಮನ ರೂಪದಿಂದಲೂ ಇದ್ದು ನೇತ್ರೇಂದ್ರಿಯಗಳನ್ನು ನಿಯಮನ ಮಾಡುತ್ತಾ ಸಂರಕ್ಷಿಸುತ್ತಿದ್ದಾನೆಂಬುದನ್ನು ವಿವರಿಸಿದ್ದಾರೆ.

ಕೇನೋಪನಿಷತ್ತಿನಲ್ಲಿ "ಯಚ್ಚಕ್ಷುಷಾ ನ ಪಶ್ಯತಿ ಯೇನ ಚಕ್ಷೂಂಪಿ ಪಶ್ಯತಿ" - ಯಾರನ್ನು ಜೀವಾತ್ಮನು ಚಕ್ಷುಸ್ಸಿನಿಂದ ಕಾಣಲಾರನೋ, ಯಾರಿಂದ ಚಕ್ಷುರಿಂದ್ರಿಯಗಳು ಕಾಣಲು ಶಕ್ತಿ ಪಡೆಯುತ್ತವೋ ಅವನೇ ಬ್ರಹ್ಮನೆಂದು ತಿಳಿ ಎಂದು ಹೇಳಲಾಗಿದೆ.

ಕಠೋಪನಿಷತ್ತಿನಲ್ಲಿ "ಸೂರ್ಯೋ ಯಥಾ ಸರ್ವಲೋಕಸ್ಯ ಚಕ್ಷುಃ" - ಎಲ್ಲ ಜೀವರ ಚಕ್ಷುರಿಂದ್ರಿಯಗಳಲ್ಲಿ ಅಭಿಮಾನಿ ದೇವತೆಯಾಗಿರುವ ಸೂರ್ಯನಿದ್ದಾನೆಂದು ತಿಳಿಸಿದೆ.  ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ  
ಸೂರ್ಯೋ ಯಥಾಂತರಂ ಚಕ್ಷುಃ ಪ್ರತಿಬಿಂಬೋಸ್ಯ ಬಾಹ್ಯಕಃ |
ಬಾಹ್ಯಚಕ್ಷುರ್ಗತೈರ್ ದೋಷೈಃ ಅಂತಶ್ಚಕ್ಷುರ್ನ ಲಿಪ್ಯತೇ ||
ಅಂತಶ್ಚಕ್ಷುರ್ದೇವತಾ ತು ಬಾಹ್ಯ ಚಕ್ಷುರಚೇತನಮ್ |
ಏವಂ ಬಾಹ್ಯಃ ಸ್ವತಂತ್ರತ್ವಾತ್ ಜೀವೇಭ್ಯಃ ಪುರುಷೋತ್ತಮಃ |
ಅಸ್ವತಂತ್ರಸ್ಯ ಜೀವಸ್ಯ ದುಃಖೈರ್ನೈವ ಹಿ ಲಿಪ್ಯತೇ  || - ಚಕ್ಷುರಿಂದ್ರಿಯಗಳಿಗೆ ಅಭಿಮಾನಿಯಾದ ಸೂರ್ಯನು ’ಅಂತರ್ ಚಕ್ಷು’ ಎನಿಸುತ್ತಾನೆ.  ಬಾಹ್ಯದಲ್ಲಿ ಕಾಣುವ ಈ ಇಂದ್ರಿಯ ಚಕ್ಷುವು ಒಳಗಿರುವ ಸೂರ್ಯನ ಪ್ರತಿಬಿಂಬವಾಗಿದೆ.  ಹೊರಗಿನ ಜಡವಾದ ಇಂದ್ರಿಯ, ಕಣ್ಣುಗಳಿಂದ ಉಂಟಾಗುವ ಯಾವುದೇ ದೋಷವೂ ಒಳಗಿನ ಅಭಿಮಾನಿದೇವತೆ ಸೂರ್ಯನಿಗೆ ಲೇಪನವಾಗುವುದಿಲ್ಲ.  ಇದೇ ರೀತಿಯಲ್ಲಿಯೇ ಎಲ್ಲಾ ಜೀವರಿಗಿಂತಲೂ ಅತ್ಯಂತ ಭಿನ್ನನಾಗಿ ಭಗವಂತನು ಸ್ವತಂತ್ರನಾಗಿರುತ್ತಾನೆ.  ಅಸ್ವತಂತ್ರನಾದ ಜೀವನ ಸುಖ-ದುಃಖಗಳು ಭಗವಂತನಿಗೆ ಲೇಪನವಾಗುವುದಿಲ್ಲ ಎಂದಿದ್ದಾರೆ.

ಪ್ರಶ್ನೋಪನಿಷತ್ತಿನ ತೃತೀಯ ಪ್ರಶ್ನಃ ಅಧ್ಯಾಯದಲ್ಲಿ ಭಗವಂತನು ಮುಖ್ಯ ಪ್ರಾಣನ ರೂಪದಲ್ಲಿ ಜೀವನ ಸರ್ವೇಂದ್ರಿಯಗಳಲ್ಲೂ ವ್ಯಾಪಿಸಿದ್ದಾನೆಂಬುದನ್ನು "ಪಾಯೂಪಸ್ಥೇSಪಾನಂ ಚಕ್ಷುಃ ಶ್ರೋತ್ರೇ ಮುಖನಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರಾತಿಷ್ಠತೇ" - ಮುಖ್ಯ ಪ್ರಾಣವು ಪಾಯೂಪ ಸ್ಥಲದಲ್ಲಿ (ಅಪಾನ) ಅಪಾನವನ್ನು ನೇಮಕ ಮಾಡುತ್ತದೆ ಮತ್ತು ತಾನು ಸ್ವತಃ ಮುಖದಲ್ಲಿಯೂ ನಾಸಿಕದಿಂದಲೂ ಪ್ರಕಟಗೊಂಡು ಚಕ್ಷುಗಳಲ್ಲಿಯೂ, ಶ್ರೋತ್ರಗಳಲ್ಲಿಯೂ ಸಂಚರಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

ಕಣ್ಣಿಗೆ ರೆಪ್ಪೆಗಳು ಸದಾ ರಕ್ಷಣೆ ಒದಗಿಸುವಂತೆ ಶ್ರೀಕೃಷ್ಣನು ಅರ್ಜುನನಿಗೆ ಸದಾ ಜೊತೆಯಲ್ಲಿಯೇ ಇದ್ದು ರಕ್ಷಣೆಯನ್ನು ಒದಗಿಸಿದನೆಂಬುದು ಭಾಗವತದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. 

ದಾಸರಾಯರು ತಮ್ಮ "ಫಲವಿದು ಬಾಳ್ದುದಕೆ" ಕೃತಿಯಲ್ಲಿ
ಪಕ್ಷ್ಮಗಳಕ್ಷಿಗಳ್ ರಕ್ಷಿಸುವಂದದಿ | ಅಕ್ಷರ ಪುರುಷನಪೇಕ್ಷೆಯಲಿ | ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ | ಈಕ್ಷಿಸಿ ಕರುಣದಿ ರಕ್ಷಿಪನಂದದಿ || - ಧೂಳು ಎದ್ದಾಗ ಕಣ್ಣಿಗೆ ಯಾರೂ ನಿನ್ನ ರಕ್ಷಣೆಯನ್ನು ನೀನೇ ಮಾಡಿಕೋ ಎಂದು ತಿಳಿಸುವುದಿಲ್ಲ.  ಅದಕ್ಕೆ ತನ್ನ ರಕ್ಷಣೆ ಮಾಡಿಕೊಳ್ಳುವಷ್ಟು ಬುದ್ಧಿಯಾಗಲೀ, ಸಾಮರ್ಥ್ಯವಾಗಲಿ ಇಲ್ಲ.  ಅದನ್ನು ರಕ್ಷಿಸಲು, ಅದರ ಆಜ್ಞೆ, ಅಪೇಕ್ಷೆ ಏನನ್ನೂ ಪಡೆಯದೆ ನಿರ್ವ್ಯಾಜವಾಗಿ ರೆಪ್ಪೆಯು ಕಣ್ಣನ್ನು ಸರಿಯಾದ ಸಮಯಕ್ಕೆ ರಕ್ಷಣೆ ಮಾಡುವುದು.  ಹಾಗೆಯೇ ಅಕ್ಷರ ಪುರುಷನಾದ ಶ್ರೀಹರಿ ಯಾವ ಅಪೇಕ್ಷೆಯೂ ಇಲ್ಲದೆ ನಮ್ಮನ್ನು ರಕ್ಷಿಸುವನು ಎಂದಿದ್ದಾರೆ.

ಕೈ ಮೈತಿಣ್ಣಿಗೊದಗುವ ತೆರದಿ -  ತಿಣ್ಣಿ ಎಂದರೆ ತಿಂಡಿ, ತಿನಿಸಾಗುವುದು (ನವೆ, ಕೆರೆಯುವಿಕೆ) ಎಂದರ್ಥವಾಗುತ್ತದೆ.  ದೇಹದ ಯಾವುದೇ ಭಾಗದಲ್ಲಿಯಾದರೂ ನವೆ, ತುರಿಕೆಯಾದಾಗ ನಮ್ಮ ಕೈಗಳು ತುರಿಸಲು ಧಾವಿಸುತ್ತವೆ.  ಮನಸ್ಸು ತುರಿಸಿಕೊಳ್ಳುವುದು ಬೇಡವೆಂದುಕೊಂಡರೂ, ಕೈ ಸುಮ್ಮನಿರುವುದಿಲ್ಲ.  ಹಾಗೇ ಜೀವನು ತನ್ನನ್ನು ತಾನೇ ರಕ್ಷಿಸಿಕೊಂಡು ಬಿಡುವೆ, ಭಗವಂತನೇಕೆ ಬೇಕು ಎಂದು ಕೊಂಡರೂ, ಆ ಕಾರುಣ್ಯನಿಧಿಯಾದ ಪರಮಾತ್ಮನು ಸುಮ್ಮನಿರುವುದಿಲ್ಲ, ರಕ್ಷಿಸಲು ಧಾವಿಸುತ್ತಾನೆ.  ತುರಿಸಲು ಧಾವಿಸುವ ಕೈಗೂ, ತುರಿಕೆಯುಂಟಾದ ಚರ್ಮಕ್ಕೂ ಸಾಮ್ಯತೆಯಿದೆ.  ಏಕೆಂದರೆ ಎರಡೂ ನಮ್ಮದೇ ದೇಹದ ಎರಡು ಭಾಗಗಳಾಗಿವೆ.  ಆದರೆ ಧಾವಿಸಿ ಬರುವ ಭಗವಂತನಿಗೂ ಮತ್ತು ಭಕ್ತನಿಗೂ ಯಾವ ಸಾಮ್ಯತೆಯೂ ಇಲ್ಲವೇ ಇಲ್ಲ.    ತನಗೆ ಯಾವ ಉಪಯೋಗ ಅಥವಾ ಪ್ರಯೋಜನವೇನೂ ಇಲ್ಲದಿದ್ದರೂ ಭಗವಂತನು ಭಕ್ತನನ್ನು ರಕ್ಷಿಸುತ್ತಾನೆಂದರೆ ಅದು ಅವನ ಅಪಾರವಾದ ಕರುಣೆ ಮತ್ತು  ಅವನು ’ಭಕ್ತ’ನೆಂಬ ಒಂದೇ ಒಂದು ಕಾರಣ ಮಾತ್ರವಾಗಿರುತ್ತದೆ.   ಬಿಂಬರೂಪಿಯಾದ ಭಗವಂತನ ಕ್ರಿಯೆಗಳೆಲ್ಲವೂ ಯಾವಾಗಲೂ ಪ್ರಬಲವಾಗಿರುತ್ತವೆ.  ಆದರೆ ಪ್ರತಿಬಿಂಬನಾದ ಜೀವನ ಕ್ರಿಯೆಗಳೆಲ್ಲವೂ ಅಲ್ಪವಾಗಿರುತ್ತವೆ.  ಏಕೆಂದರೆ ಜೀವನು ಭಗವಂತನ ಅಧೀನನೇ ಆಗಿದ್ದಾನೆ.  ಈ ಉಪಮಾನ ಅನ್ವಯವಾಗುವ ’ಮಧ್ಯಮಾಧಿಕಾರಿ’ಗಳಿಗೆ ತಿನಿಸಾಗುವುದೆಂದರೆ, ವಿಷಯ ಸಂಬಂಧವಾದ ದುಃಖವೆಂದು ತಿಳಿಯಬಹುದು.  ಹೀಗೆ ತಿನಿಸಾದಾಗ, ಭಗವಂತನು ಜ್ಞಾನದ ಅನುಸಂಧಾನ (ತುರಿಸಲು ಧಾವಿಸುವ ಕೈಯಿದ್ದಂತೆ)ವಿತ್ತು, ಅವರನ್ನು ರಕ್ಷಿಸುತ್ತಾನೆಂದು ತಿಳಿಯಬೇಕು.  ಈ ದೃಷ್ಟಾಂತದಲ್ಲಿ ಭಕ್ತನ ಕಣ್ಣುಗಳು, ತುರಿಸಲು ಧಾವಿಸುವ ಕೈಗಳನ್ನು ನೋಡಬಹುದಾಗಿದೆ. 

ಮೈಗೊದಗುವ ತಿನಿಸು ತುರಿಸಿಕೊಂಡಾಗ ತತ್ಕಾಲಕ್ಕೆ ಅಲ್ಪ ಸಮಾಧಾನ ಹಾಗೂ ಸುಖವನ್ನು ಕೊಟ್ಟರೂ ಕೂಡ, ಕೊನೆಯಲ್ಲಿ ನೋವು, ಉರಿಗಳನ್ನು ಉಳಿಸಿ ದುಃಖಕ್ಕೆ ದೂಡುತ್ತದೆ.  ಹಾಗೆಯೇ ತಾಮಸಿಗರಿಗೆ ಶ್ರೀಹರಿಯು ಸಂಸಾರದಲ್ಲಿ ಕೊಡುವ ಸುಖವು ಕೊನೆಗೆ ತಮಸ್ಸಿನಲ್ಲಿ ಅಧಿಕ ದುಃಖಕ್ಕೆ ಕಾರಣವಾಗಿಸುತ್ತದೆ.

ಮೈ ತಿಣ್ಣಿಗೆ ದೂರದಿಂದ ಧಾವಿಸಿ ಬರುವ ಕೈಗಳಂತೆ, ಗಜೇಂದ್ರ ಮೋಕ್ಷದ ಕಥೆಯಲ್ಲಿ ಗಜೇಂದ್ರನ ರಕ್ಷಣೆಗೆ ಭಗವಂತ ಗರುಡಾರೂಢನಾಗಿ ಹಾರಿ ಬಂದನೆಂಬುದನ್ನು ಭಾಗವತ ತಿಳಿಸುತ್ತದೆ.

ಪಲ್ಗಳು ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ - ಹಲ್ಲುಗಳು ಹಣ್ಣುಗಳನ್ನು ಅಗಿದಗಿದು, ನಾಲಿಗೆಗೆ ಅದರ ಸವಿ, ರಸವನ್ನು ನೀಡುತ್ತದೆ.  ನಾಲಿಗೆಯು ರುಚಿಯನ್ನು ಆಸ್ವಾದಿಸುತ್ತದೆ.  ಹಲ್ಲುಗಳು ತಾವು ಏನನ್ನೂ ಸವಿಯುವುದಿಲ್ಲ.  ಭಗವಂತನು ಕೂಡಾ ಹಾಗೆಯೇ, ಭಕ್ತನ ಸಾಧನಾ ಶರೀರದಲ್ಲಿ ತಾನು ನಿಂತು, ತಾನೇ ಸುಕರ್ಮಗಳನ್ನು ಮಾಡಿ, ಭಕ್ತನಿಂದ ಮಾಡಿಸಿ, ಅದರ ಫಲವನ್ನು ಮಾತ್ರ ಜೀವನಿಗೆ ಉಣಿಸುತ್ತಾನೆ.  ತಾನೇನನ್ನೂ ತೆಗೆದುಕೊಳ್ಳುವುದಿಲ್ಲ.  ಜೀವನ ಸಾಧನಾ ಶರೀರದಲ್ಲಿ ತಾನಿದ್ದು, ಅನೇಕ ಬಗೆಯ ಶಾಸ್ತ್ರ ಸಮ್ಮತವಾದ ಆಚರಣೆಗಳನ್ನೂ, ಪೂಜಾ ವಿಧಿ-ವಿಧಾನಗಳನ್ನೂ, ಉಪವಾಸ-ವ್ರತಗಳನ್ನೂ ಮಾಡಿಸಿ, ಅದರಿಂದ ಉತ್ಪತ್ತಿಯಾದ ಶುಭ ಕರ್ಮಫಲ ರಸವನ್ನು ಜೀವಿಗೇ ಉಣ್ಣಿಸುತ್ತಾನೆ.  ಇದರಿಂದ ಹಲ್ಲಿಗೇನೂ ಫಲವಿರುವುದಿಲ್ಲ.  ಹಾಗೇ ಭಗವಂತನು ಭಕ್ತನ ಲಿಂಗ ದೇಹವನ್ನು ಬಿಡಿಸಿ, ಸ್ವರೂಪ ದೇಹದಿಂದ ಬೇರ್ಪಡಿಸಿ ಜೀವನಿಗೆ ಸ್ವರೂಪಾನಂದ ಸುಖವನ್ನು ಉಣಿಸುತ್ತಾನೆ.  ಎಲ್ಲಿಯವರೆಗೆ ಜೀವನಿಗೆ ಲಿಂಗ ದೇಹವೆಂಬ ಹೊದಿಕೆ ಇರುತ್ತದೋ ಅಲ್ಲಿಯವರೆಗೆ ಸ್ವರೂಪವು ವ್ಯಕ್ತವಾಗುವುದಿಲ್ಲ.  ಭಗವಂತನ ಅಪರಿಮಿತವಾದ ಕಾರುಣ್ಯದಿಂದಲೇ ಜೀವನ ಉದ್ಧಾರವಾಗುತ್ತದೆ.  ತನಗೆ ಯಾವ ಪ್ರಯೋಜನವೂ ಇಲ್ಲದೇ ಶ್ರೀಹರಿಯು ಇದನ್ನು ಏಕೆ ಮಾಡುತ್ತಾನೆಂದರೆ ಅಲ್ಲಿ ಪಾಲಕನಾದ ಅರಸನಾಗಿ ಜೀವನನ್ನು ಪಾಲಿಸುವುದು ಭಗವಂತನ ಸಲ್ಲಕ್ಷಣವಾಗುತ್ತದೆ.  ಅನಂತ ಗುಣಪೂರ್ಣನಾದ ಸ್ವಾಮಿಯು ತನ್ನ ಭಕ್ತರನ್ನು ಪಾಲಿಸಲೇ ಬೇಕೆಂಬ ತನ್ನದೇ ನಿಯಮಕ್ಕೆ ಬದ್ಧನಾಗಿದ್ದಾನೆಂದು ತಿಳಿಯಬಹುದಾಗಿದೆ.

ಪುಣ್ಯಫಲವೀವಂದದಲಿ - ನಾವು ಮಾಡುವ ಎಲ್ಲಾ ಪುಣ್ಯ ಕರ್ಮಗಳೂ ಹೇಗೆ ನಮಗೆ ಸಕಾಲದಲ್ಲಿ ಫಲ ನೀಡುತ್ತವೆಯೋ ಹಾಗೆಯೇ ಭಗವಂತನು ನಮಗೆ ಸಕಾಲದಲ್ಲಿ ರಕ್ಷಣೆಯನ್ನು  ನೀಡುತ್ತಾನೆ.  ಹಲ್ಲುಗಳು ಕೆಲವೊಮ್ಮೆ ಹಣ್ಣುಗಳನ್ನು ಅಗೆದು ತಿನ್ನುವಾಗ, ನಾಲಿಗೆಯನ್ನೂ ಕಚ್ಚುತ್ತದೆ.  ಇದೂ ಕೂಡ ಭಗವಂತನ ಕಾರುಣ್ಯವೆಂದೇ ತಿಳಿಯಬೇಕು.  ಏಕೆಂದರೆ ಭಗವಂತನು ತನ್ನನ್ನು ಮರೆತು ವಿಷಯ ಸುಖದಲ್ಲಿ ಮುಳುಗುವ ಭಕ್ತನನ್ನು ಎಚ್ಚರಿಸುವುದಕ್ಕಾಗಿಯೇ ಹಲ್ಲುಗಳು ನಾಲಿಗೆಯನ್ನು ಕಡಿಯುವಂತೆ ಮಾಡಿರುತ್ತಾನೆ.  ನಾವು ಮಾಡಿದ ಸುಕರ್ಮಗಳು ಹೀಗೆ ನಾಲಿಗೆಯನ್ನು ಕಚ್ಚುವ ಸಂದರ್ಭ ಬರುವುದಿಲ್ಲ.  ಪುಣ್ಯ ಕರ್ಮಗಳು ಪುಣ್ಯ ಫಲಗಳನ್ನೇ ಕೊಡುತ್ತವೆ.  ಅಂದರೆ ಪುಣ್ಯ ಕರ್ಮಗಳಿಂದ ಸಂಗ್ರಹವಾದ ಪುಣ್ಯವೇ ನಮಗೆ ಫಲವನ್ನು ಕೊಡುವುದಿಲ್ಲ.  ನಮ್ಮ ಪುಣ್ಯದ ಶೇಖರಣೆಯ ಅನುಸಾರವಾಗಿ ಭಗವಂತ ನಮಗೆ ಸುಫಲಗಳನ್ನೂ, ಸುಖವನ್ನೂ ನೀಡುತ್ತಾನೆ.  ಇದನ್ನೇ ನಾವು ’ಮಾಡಿದ ಪುಣ್ಯ’ ಕಾಪಾಡಿತು ಎಂದುಕೊಳ್ಳುತ್ತೇವೆ ಅಷ್ಟೇ.  ಪುಣ್ಯ ಎಂಬ ಶಬ್ದಕ್ಕೇ ನಾವು ’ಸುಫಲ’ ಎಂಬ ಅರ್ಥವನ್ನು ಗ್ರಹಿಸುತ್ತೇವೆ.

ಭಗವದ್ಗೀತೆಯ ೨ನೆಯ ಅಧ್ಯಾಯದ ೧೬ನೆಯ ಶ್ಲೋಕದಲ್ಲಿ
ನಾಸತೋ ವಿದ್ಯತ್ಯೇ ಭಾವೋ ನಾಭಾವೋ ವಿದ್ಯತೇ ಸತಃ |
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ || - ಪ್ರಕೃತಿಗೂ ಅಳಿವಿಲ್ಲ, ಭಗವಂತನಿಗೂ ಅಳಿವಿಲ್ಲ.  ಅರ್ಜುನನು ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ ಎಂದು ಶ್ರೀಕೃಷ್ಣನನ್ನು ಪ್ರಶ್ನಿಸಿದಾಗ, ಭಗವಂತನು ’ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ’ ಎಂದು ಉತ್ತರಿಸಿದನು.  ಹಾಗೆಂದರೆ ಒಳ್ಳೆಯ ಕೆಲಸ ಅಥವಾ ಸತ್ಕರ್ಮಗಳನ್ನು ಮಾಡುವುದರಿಂದ ದುಃಖವಾಗುವುದಿಲ್ಲ ಮತ್ತು ಅಸತ್ಕರ್ಮಗಳನ್ನು ಮಾಡುವುದರಿಂದ ಸುಖವಾಗುವುದಿಲ್ಲ ಎಂದರ್ಥವಾಗುತ್ತದೆ.  ಆದ್ದರಿಂದ ಸತ್ಕರ್ಮಗಳನ್ನೇ ಮಾಡುತ್ತಿದ್ದರೆ, ಅದರ ಫಲಗಳನ್ನು ಭಗವಂತ ನಮಗೆ ಸರಿಯಾದ ಸಮಯಕ್ಕೆ ಒದಗಿಸಿ, ರಕ್ಷಿಸುತ್ತಾನೆ.  ಕರ್ಮ ಮಾಡುವುದಷ್ಟೇ ನಮ್ಮ ಕೆಲಸವಾಗಬೇಕೇ ಹೊರತು, ಅದರ ಫಲದಲ್ಲಿ ಅಧಿಕಾರ ಸಾಧಿಸುವುದಾಗಬಾರದು.  ಇದನ್ನು ಭಗವದ್ಗೀತೆಯ ಇದೇ ಅಧ್ಯಾಯದಲ್ಲಿ ಭಗವಂತನು
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂತೋಸ್ತ್ವ ಕರ್ಮಣಿ || - ಕರ್ಮ ಮಾಡುವುದು ಜೀವನ ಕೈಯಲ್ಲಿದೆ ಆದರೆ ಕರ್ಮಫಲ ಮಾತ್ರ ಭಗವಂತನ ಕೈಯಲ್ಲಿದೆ.  ಯಾವಾಗಲೂ ನಾವು ಕರ್ತವ್ಯಶೀಲರಾಗಿ ಇರಬೇಕು ಮತ್ತು ಮಾಡಿದ ಕರ್ಮವನ್ನು ಭಗವದರ್ಪಣೆ ಮಾಡಬೇಕು.  ಇಂತಹ ಕರ್ಮ ಮಾಡಿದರೆ, ನನಗಿಂತಹುದೇ ಫಲಬೇಕೆಂದು ಬಯಸುವುದು ತಪ್ಪಲ್ಲ, ಆದರೆ ಅದನ್ನು ಕೊಡುವವನು ಭಗವಂತನೆಂಬ ಭಾವ ಜಾಗೃತವಾಗಿರಬೇಕು.  ನಾವು ಬಯಸಿದ್ದು ನಮಗೆ ಒಳ್ಳೆಯದಲ್ಲದೇ ಇರಬಹುದು.  ಸರಿ ತಪ್ಪುಗಳ ಪರಿಜ್ಞಾನ ಜೀವನಿಗೆ ಇರುವುದಿಲ್ಲ.  ಭಗವಂತ ನಮ್ಮ ಯೋಗ್ಯತಾನುಸಾರವಾಗಿ, ನಮಗೆ ಸರಿಯಾದದ್ದನ್ನೇ, ಸರಿಯಾದ ಸಮಯದಲ್ಲಿಯೇ ಕೊಡುತ್ತಾನೆಂಬ ನಂಬಿಕೆ ಇರಬೇಕು.  ಹೀಗೆ ಫಲಾಫಲಗಳ ಅಪೇಕ್ಷೆಯಿಲ್ಲದೆ ಮಾಡಿದ ಸುಕರ್ಮ ಪುಣ್ಯವಾಗುತ್ತದೆ.  ಪುಣ್ಯವೇ ಫಲವನ್ನು ಕೊಡುವುದಿಲ್ಲ, ಆದರೆ ಅದು ಸುಖಕ್ಕೆ ಸಾಧನವಾಗುತ್ತದೆ.  ಭಗವಂತನು ನಮ್ಮಿಂದ ಕರ್ಮಗಳನ್ನು ಮಾಡಿಸುವುದೂ, ಅದಕ್ಕೆ ತಕ್ಕ ಫಲವೀಯುವುದೂ, ಎರಡೂ ಸುಂದರವಾಗಿಯೇ ಇರುತ್ತವೆಯೆಂದು ಕಣ್ಣು-ರೆಪ್ಪೆ, ಕೈ-ಹಲ್ಲುಗಳ ದೃಷ್ಟಾಂತದಿಂದ ತಿಳಿಯುತ್ತದೆ.  ಶೇಖರಿಸಿಟ್ಟ ಪುಣ್ಯ ಮುಂದೆ ಬರಬಹುದಾದ ಪಾಪಗಳಿಂದ ತೀವ್ರವಾಗಿ ಬಾಧಿಸುವುದನ್ನು ತಡೆಯುತ್ತದೆ.  ಪುಣ್ಯವೆನ್ನುವುದು ಜಡವಸ್ತುವಲ್ಲ, ಅದು ಸುಂದರವಾದ, ಸೂಕ್ಷ್ಮವಾದ ಸಾತ್ವಿಕವಾದ ದಿವ್ಯ ಚೇತನವಾದ್ದರಿಂದಲೇ ಪೂರ್ಣಾನಂದಮಯನಾದ ಭಗವಂತನು  ಕರ್ಮ ಮಾಡಿಸುವಲ್ಲಿ, ಫಲ ಕೊಡುವುದರಲ್ಲಿ, ಎಲ್ಲದರಲ್ಲಿಯೂ ಒಂದು ಸುಂದರತೆಯಿದೆ, ಅಂದವಿದೆ ಎನ್ನಬಹುದಾಗಿದೆ.  ಪುಣ್ಯಫಲವೆಂಬುದು ನಾವು ಶಾರೀರಿಕವಾಗಿ ಮಾಡುವ ಕರ್ಮಗಳಿಗನುಗುಣವಾಗಿ ದೊರೆಯುವುದಿಲ್ಲ.  ಆದರೆ ಆ ಕರ್ಮವನ್ನು ಮಾಡುವಾಗ ನಮಗಿದ್ದ ಭಾವನೆಗೆ ಅನುಗುಣವಾಗಿ ದೊರೆಯುತ್ತದೆ.  ಯಾವುದೇ ಕರ್ಮವನ್ನಾದರೂ ಸುಮನಸ್ಸಿನಿಂದ ಮತ್ತು ಶ್ರದ್ಧೆಯಿಂದ ಮಾಡಿದಾಗ ಮಾತ್ರ ನಾವು ಅದರಿಂದ ಒಳ್ಳೆಯ ಫಲವನ್ನು ಅಪೇಕ್ಷಿಸಬಹುದಾಗಿದೆ.

ನುಡಿವೆಣ್ಣಿನಾಣ್ಮಾಂಡದೊಳು - ಭಗವಂತನು  ನುಡಿವೆಣ್ಣಿನ ಮೂಲಕವೇ ಜೀವನ ಹತ್ತಿರ ಪುಣ್ಯ ಕರ್ಮಗಳನ್ನು ಮಾಡಿಸುವುದು.   ಸಕಲ ಶಾಸ್ತ್ರಗಳು, ವಿಧಿ ನಿಷೇಧ ವಚನಗಳೆಲ್ಲವೂ ಶ್ರೀಹರಿಯ ಆಜ್ಞೆಯಾಗಿದೆ.  ಭಗವಂತನ ಆಜ್ಞೆಯಿಂದಲೇ ವಾಗಿಂದ್ರಿಯವು ಕೆಲಸ ಮಾಡುತ್ತದೆ.    
ಕೇನೋಪನಿಷತ್‍ನಲ್ಲಿ | ಯದ್ವಾಚಾಽನಭ್ಯುದಿತಂ, ಯೇನ ವಾಗಭ್ಯುದ್ಯತೇ | ತದೇವ ಬ್ರಹ್ಮಾ ತ್ವಂವಿದ್ಧಿ, ನೇದಂ ಯದಿದಮುಪಾಸತೇ || - ಯಾವ ಆತ್ಮವನ್ನು ವಾಗಿಂದ್ರಿಯದಿಂದ ಗ್ರಹಿಸಲಾಗುವುದಿಲ್ಲವೋ, ಯಾವ ಶಕ್ತಿಯ ಮೂಲಕ ವಾಗಿಂದ್ರಿಯವು ಕೆಲಸ ಮಾಡುವುದೋ, ಆ ಆತ್ಮನೇ ಪರಮಾತ್ಮನೆಂದು ತಿಳಿಯಬೇಕು ಎಂಬ ಉಲ್ಲೇಖವಿದೆ. 
ನುಡಿವೆಣ್ಣಿನಾಣ್ಮ(ಪತಿ)ನಾದ ಬ್ರಹ್ಮನ ಅಂಡ ಬ್ರಹ್ಮಾಂಡ.  ಬ್ರಹ್ಮಾಂಡದಲ್ಲಿ ಸಕಲ ಜೀವರಾಶಿಗಳಿಗೂ ಭಗವಂತನ ವಿಧಿ ನಿಷೇಧಗಳು ಅನ್ವಯಿಸುತ್ತವೆ.  ಭಗವಂತನ ಆಜ್ಞೆಯನ್ನು ಮೀರುವುದು ನಿಷಿದ್ಧ ಮತ್ತು ಪಾಪಕರ್ಮವಾಗುತ್ತದೆ.  ಹರಿಯಾಜ್ಞೆಯೇನೆಂದರೆ ಜೀವನು ಸಾಧನಾ ಶರೀರವನ್ನು ಪಡೆದಿರುವುದರಿಂದ ಮೂರು ರೀತಿಯ ತಪಸ್ಸನ್ನು ಅವಶ್ಯವಾಗಿ ಮಾಡಲೇಬೇಕೆಂಬುದು.  ಅವುಗಳನ್ನು ಶ್ರೀಕೃಷ್ಣನು ಭಗವದ್ಗೀತೆಯ ೧೭ನೆಯ ಅಧ್ಯಾಯದ ೧೪, ೧೫ ಮತ್ತು ೧೬ನೇ ಶ್ಲೋಕಗಳಲ್ಲಿ ಶರೀರ ಸಂಬಂಧವಾದ ಕರ್ಮಗಳ ಮೂಲಕ ಮಾಡುವ "ಶಾರೀರಿಕ ತಪಸ್ಸು", ವಾಣಿಯ ಸಂಬಂಧೀ ಮಾಡುವ "ವಾಙ್ಮಯ ತಪಸ್ಸು" ಮತ್ತು ಮನಸಂಬಂಧೀ ಮಾಡುವ "ಭಾವನೆಗಳ ತಪಸ್ಸು" ಎಂದು ವಿವರಿಸಿದ್ದಾನೆ.  ಭಗವಂತ ಹೀಗೆ ವಿಧಿ ನಿಷೇಧಗಳನ್ನರಿತು ಮೂರು ವಿಧದ ತಪಸ್ಸನ್ನು ಮಾಡುವ ಭಕ್ತರಿಗೆ ಪುಣ್ಯ ಫಲಗಳನ್ನು ಅಂದವಾಗಿ ನೀಡುತ್ತಾನೆ ಎಂದಿದ್ದಾರೆ ದಾಸರಾಯರು.

ನುಡಿವೆಣ್ಣು ಎಂಬುದು ವಾಗ್ದೇವಿಯಾದ ಸರಸ್ವತಿಗೆ ಅನ್ವಯಿಸುತ್ತದೆ. ಭಗವಂತನು ನುಡಿವೆಣ್ಣಿನ ಮೂಲಕವೇ ಜೀವನ ಹತ್ತಿರ ಪುಣ್ಯ ಕರ್ಮಗಳನ್ನು ಮಾಡಿಸುವುದು.  ಭಗವಂತನ ಆರಾಧನೆಯಾಗಿ ಯಾವುದೇ ಮಂತ್ರ, ವೇದಘೋಷ, ಸೂಕ್ತ ಪಾರಾಯಣಗಳನ್ನು ಪ್ರಾರಂಭಿಸುವ ಮೊದಲು ನಾವು ವಾಗ್ದೇವಿಯಾದ ಸರಸ್ವತಿಯನ್ನು "ಓಂ ಪ್ರಣೋ ದೇವೀ ಸರಸ್ವತೀ ವಾಜೇಭಿ ರ್‍ವಾಜಿನೀವತಿ, ಧೀನಾ ಮವಿತ್ರ್ಯವತು" ಎಂದು ಪ್ರಾರ್ಥಿಸುತ್ತೇವೆ. ಒಂದೊಂದು ಅಕ್ಷರವೂ ಭಗವಂತನ ರೂಪವೆಂದು ನಮ್ಮ ಶಾಸ್ತ್ರಗಳು ತಿಳಿಸುತ್ತವೆ.  ನಾವು ಆಡುವ ಪ್ರತೀ ಮಾತು ಕೂಡ ಭಗವಂತನ ಕುರಿತಾಗಿಯೇ ಇರಬೇಕು ಮತ್ತು ಅದನ್ನು ತಪಸ್ಸೆಂದು ಗ್ರಹಿಸಿ ಆಚರಿಸಬೇಕೆಂಬುದನ್ನು ಭಗವದ್ಗೀತೆಯ ೧೭ನೆಯ ಅಧ್ಯಾಯದ ೧೫ನೆಯ ಶ್ಲೋಕದಲ್ಲಿ ಶ್ರೀ ಕೃಷ್ಣನು
ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ | ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ || - ಆಡುವ ಮಾತುಗಳು ಉದ್ವೇಗರಹಿತವಾಗಿರಬೇಕು, ಮತ್ತೊಬ್ಬರ ಮನ ನೋಯಿಸದಂತಿರಬೇಕು, ಅರ್ಥಪೂರ್ಣವಾಗಿರಬೇಕು, ವ್ಯರ್ಥಾಲಾಪವಾಗಿರಬಾರದು, ಶ್ರವಣ ಮನಕಾನಂದವೀಯುವಂತಿರಬೇಕು.  ಯಾವುದು ಭಗವಂತನ ಗುಣಗಳನ್ನು ತಿಳಿಸುವುದೋ, ಭಗವಂತನ ನಾಮ ಜಪವಾಗಿದೆಯೋ, ಶಾಸ್ತ್ರಗಳ ಅಧ್ಯಯನವಾಗಿದೆಯೋ ಅದೇ ವಾಣಿಯ ಮೂಲಕ ಮಾಡುವ "ವಾಙ್ಮಯ ತಪಸ್ಸು" ಎಂದಿದ್ದಾನೆ.  ಹೀಗೆ ವಾಙ್ಮಯ ತಪಸ್ಸನ್ನು ಮಾಡುವುದು ಪುಣ್ಯಕರ್ಮವಾಗುತ್ತದೆ.  ಅದರ ಫಲವನ್ನು ಭಗವಂತನು ನಮಗೆ ಸರಿಯಾದ ಸಮಯಕ್ಕೆ ಕೊಟ್ಟು ಕಾಪಾಡುತ್ತಾನೆ.

ಲಕ್ಷ್ಮಣನ ಅಣ್ಣ -  ಲಕ್ಷ್ಮಣನು ಚಿಕ್ಕಂದಿನಿಂದಲೂ ತನ್ನ ಹಿರಿಯಣ್ಣನಾದ ರಾಮನಿಗೆ ಅತಿ ಪ್ರಿಯನಾಗಿದ್ದನು.  ತನ್ನದೇ ಮತ್ತೊಂದು ಪ್ರಾಣವು ಹೊರಗೆ ಬಂದು ತಮ್ಮ ಲಕ್ಷ್ಮಣನ ರೂಪದಲ್ಲಿದೆಯೆಂದೇ ಶ್ರೀರಾಮನು ಭಾವಿಸಿದ್ದನು.  ಲಕ್ಷ್ಮಣನು ಸದಾ ಅಣ್ಣನ ಜೊತೆಗೇ ಇರುತ್ತಿದ್ದನು.  ಶ್ರೀರಾಮಚಂದ್ರನ ಪಟ್ಟಾಭಿಷೇಕದ ಸಮಯದಲ್ಲಿ ಕೈಕೇಯಿಗೆ ಕೊಟ್ಟ ವರಗಳ ಪ್ರಭಾವದಿಂದ  ಧರ್ಮ ಪಾಶದಿಂದ ಕಟ್ಟಲ್ಪಟ್ಟ ದಶರಥ ಮಹಾರಾಜನು ರಾಮನನ್ನು, ಕಾಡಿಗೆ ಕಳುಹಿಸಬೇಕಾಯಿತು.  ತಂದೆಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ರಾಮನನ್ನು, ಅವನಿಗೆ ಅತಿ ಪ್ರಿಯನಾದ ಲಕ್ಷ್ಮಣನು ಅತೀ ಶ್ರೇಷ್ಠವಾದ ಸೋದರ ಭಾವವನ್ನು ವ್ಯಕ್ತಪಡಿಸುತ್ತಾ ಅನುಸರಿಸುತ್ತಾನೆ.  ದಂಡಕಾರಣ್ಯದಲ್ಲಿ ಅಣ್ಣನನ್ನು ಬೆನ್ನು ಬಿಡದೆ ಸದಾ ಜೊತೆಯಲ್ಲಿದ್ದು ಸೇವೆ ಮಾಡುತ್ತಾನೆ.  ಲಕ್ಷ್ಮಣನು ಉತ್ಕೃಷ್ಠವಾದ ಭಕ್ತಿ ಮತ್ತು ಸೋದರ ಪ್ರೇಮದ ಪ್ರತೀಕನಾಗುತ್ತಾನೆ.  ಹೀಗೆ ಆದರ್ಶವನ್ನು ಮೆರೆದ ಲಕ್ಷ್ಮಣನ ಅಣ್ಣನೆಂದು ಸಂಬೋಧಿಸಿಕೊಂಡು, ಭಗವಂತನು ತನ್ನ ಭಕ್ತನಾದ ಲಕ್ಷ್ಮಣನಿಗೆ ಧನ್ಯತಾ ಭಾವವನ್ನು ಕೊಟ್ಟಿರುವುದು ಕೂಡ ಶ್ರೀಹರಿಯ ಕಾರುಣ್ಯವೇ ಆಗಿದೆ.

ಒದಗುವ ಭಕ್ತರವಸರಕೆ -  ಅವಸರಕೆ ಎಂದರೆ ಜೀವನ ಸುಕರ್ಮಗಳು ಪರಿಪಕ್ವವಾಗುವ ಕಾಲಕ್ಕೆ ಸರಿಯಾಗಿ ಎಂದು ಅರ್ಥೈಸಬಹುದು.  ಭಕ್ತರಾಧೀನನಾದ ಶ್ರೀರಾಮಚಂದ್ರನು  ಎಲ್ಲಾ ಆಪತ್ತುಗಳನ್ನೂ ಪರಿಹರಿಸತಕ್ಕವನೆಂಬುದು ರಾಮಾಯಣದಲ್ಲಿ "ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ | ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್" - ಭಕ್ತರ ಆಪತ್ತುಗಳನ್ನು ಪರಿಹರಿಸತಕ್ಕವನೂ, ಸಕಲ ಸಂಪತ್ತುಗಳನ್ನು ಕೊಡತಕ್ಕವನೂ, ಸರ್ವಲೋಕ ಮನೋಹರನೂ ಆಗಿರುವ ಶ್ರೀರಾಮನಿಗೆ ಪುನಃ ಪುನಃ ನಮಸ್ಕರಿಸುತ್ತೇನೆ ಎಂದು ಪ್ರಾರ್ಥಿಸುವುದನ್ನು ತಿಳಿಸುತ್ತದೆ.  ಆಪತ್ತುಗಳು ಎದುರಾದಾಗ "ಆಪತ್ಕಾಲೇ ತು ಸಮ್ಪ್ರಾಪ್ತೇ ಸ್ಮರ್ತವ್ಯೋ ಹರಿರೀಶ್ವರಃ" - ಆಪತ್ಕಾಲವು ಒದಗಿ ಬಂದಾಗ ಸರ್ವಲೋಕೇಶ್ವರನಾದ ಹರಿಯನ್ನು ಸ್ಮರಿಸಬೇಕು ಎಂದು ಕೂಡ ತಿಳಿಸಿದೆ.  ಹೀಗೆ ಶರಣಾಗತರಾಗಿ ಪ್ರಾರ್ಥಿಸಿಕೊಂಡಾಗ
ಅಗ್ರತಃ ಪೃಷ್ಠತಶ್ಚೈವ ಪಾರ್ಶ್ವತಶ್ಚ ಮಹಾಬಲೌ |  ಆಕರ್ಣಪೂರ್ಣಧನ್ವಾನೌ ರಕ್ಷೇತಾಂ ರಾಮಲಕ್ಷ್ಮಣೌ || - ಕರ್ಣ ಪರ್ಯಂತವಾಗಿ ಧನುಸ್ಸಿನ ಶಿಂಜಿನಿಯನ್ನು ಸೆಳೆದು ಹಿಡಿದಿರುವ ಮಹಾಬಲಿಷ್ಠನಾದ ಲಕ್ಷ್ಮಣನ ಅಣ್ಣನಾದ ರಾಮಚಂದ್ರನು ತಮ್ಮ ಲಕ್ಷ್ಮಣ ಸಮೇತವಾಗಿ ಮುಂದೆ-ಹಿಂದೆ ಮತ್ತು ಅಕ್ಕ-ಪಕ್ಕಗಳಲ್ಲಿ ನಮ್ಮನ್ನು ರಕ್ಷಿಸಲು ಸಕಾಲಕ್ಕೆ ಧಾವಿಸಿ ಬಂದೊದಗುತ್ತಾನೆ ಎಂಬ ಉಲ್ಲೇಖವಿದೆ.   ಶ್ರೀರಾಮಚಂದ್ರನು ಸಾವಿರಾರು ವರ್ಷಗಳ ಕಾಲ ’ರಾಮರಾಜ್ಯ’ದಲ್ಲಿ ಪಶು, ಪಕ್ಷಿ, ಪ್ರಜೆಗಳೆಲ್ಲರನ್ನೂ ಆನಂದ ಪಡಿಸಿ, ಸಂತೃಪ್ತಿಯಿಂದ ರಾಜ್ಯವಾಳಿದ.  ಅವತಾರವನ್ನು ಮುಗಿಸಿ ತನ್ನ ಧಾಮಕ್ಕೆ ಹೊರಟ ಭಗವಂತನ ಹಿಂದೆ ಹಿಂಡು ಹಿಂಡಾಗಿ ವನಚರಗಳು, ಪಶುಗಳು, ಪಕ್ಷಿಗಳು, ಮನುಷ್ಯರು, ಮರ-ಗಿಡ-ಬಳ್ಳಿಗಳೂ ಕೂಡ ರಾಮಚಂದ್ರನನ್ನು ಅನುಸರಿಸಿಕೊಂಡು ಹೋಗುವರೆಂಬ ಉಲ್ಲೇಖವಿದೆ.  ಭಗವಂತನ ನಿರ್ಗಮನದ ಸಮಯದಲ್ಲಿ ಅಯೋಧ್ಯೆಯಲ್ಲಿ ಉಸಿರಾಡುವ ಒಂದೇ ಒಂದು ಪ್ರಾಣಿಯೂ ಉಳಿದಿರುವುದಿಲ್ಲ.  ಭಕ್ತಪರಾಧೀನನೂ, ಕರುಣಾಸಾಗರನೂ ಆದ ಭಗವಂತನು ಬ್ರಹ್ಮದೇವರಿಗೆ "ಏಷಾಂ ಲೋಕಂ ಜನೌಘಾನಾಂ ದಾತುಮಹರ್ಸಿ ಸುವ್ರತ" - ನನ್ನನ್ನನುಸರಿಸಿ ಬಂದಿರುವ ಈ ನನ್ನ ಭಕ್ತ ಸಮುದಾಯಕ್ಕೆ ಉತ್ತಮವಾದ ಲೋಕಗಳನ್ನು ಅನುಗ್ರಹಿಸು ಎಂದು ಆದೇಶಿಸುತ್ತಾನೆ.  ಇದು ಲಕ್ಷ್ಮಣನ ಅಣ್ಣನಾದ ಶ್ರೀರಾಮನ ಕಾರುಣ್ಯವಾಗಿದೆ.

ಅಮರಗಣಸಹಿತ - ಜೀವನು ಸಾಧನಾ ಶರೀರವನ್ನು ಪಡೆದುಕೊಂಡು ಬಂದಿದ್ದರೂ ಕೂಡ, ಅವನು ಅಸ್ವತಂತ್ರನು ಮತ್ತು ಭಗವಂತನ ಅಧೀನನೇ ಆಗಿರುವುದರಿಂದ, ತಾನೇ ಸ್ವತಃ ಏನನ್ನೂ ಮಾಡಲಾರದವನಾಗಿದ್ದಾನೆ.  ಭಗವಂತನೇ ಜೀವನಲ್ಲಿ ನಿಂತು, ಮಾಡಿ ಮಾಡಿಸುತ್ತಾನೆ.  ತಾನೊಬ್ಬನೇ ಅಲ್ಲದೆ, ತನ್ನ ಜೊತೆ ಜೊತೆಗೇ ರಮಾದೇವಿ, ಬ್ರಹ್ಮ, ವಾಯು ಮುಂತಾದ ದೇವತೆಗಳ ಸಮೂಹವನ್ನೇ, ಜೀವಿಯ ಪ್ರತಿ ಅಂಗಗಳಲ್ಲೂ ನಿಲ್ಲಿಸಿ, ಅವರಿಂದ ಪ್ರೇರಿಸಿ, ಮಾಡಿಸುತ್ತಾನೆ.  ಯಾವ ಜೀವನೂ ಭಗವಂತನಿಗೆ ಹೆಚ್ಚೂ ಅಲ್ಲ, ತೃಣವೂ ಅಲ್ಲ.  ಸಾಧನಾ ಮಾರ್ಗದಲ್ಲಿ ನಡೆಯಬೇಕೆಂಬ ಜೀವನಿಗೆ ತನ್ನ ಪರಿವಾರದ ಎಲ್ಲಾ ದೇವತೆಗಳಿಂದಲೂ ಅವಕಾಶ ಒದಗಿಸಿ ಜೀವನ ಸಾಧನೆ ಮುನ್ನಡೆಯುವಂತೆ ಮಾಡುತ್ತಾನೆ.  ಭಗವಂತ ಯಾವುದೇ ಕೆಲಸವನ್ನು ಮಾಡಲು ನಿರ್ಧರಿಸಿದರೂ, ಅವನ ಪರಿವಾರ ದೇವತೆಗಳು, ಭಗವಂತನ ಅವತಾರಕ್ಕೆ ಮೊದಲೇ ಬಂದು, ಅಲ್ಲಿ ಎಲ್ಲವನ್ನೂ ಸಜ್ಜುಗೊಳಿಸಿ, ಭಗವಂತನ ಆಗಮನಕ್ಕೆ ಕಾತುರದಿಂದ ಕಾಯುತ್ತಾರೆ.  ರಾವಣನ ವಧೆಯಾಗಿ, ಭೂಭಾರ ಹರಣವಾಗಬೇಕಾದ ಕಾಲದಲ್ಲಿ, ಶ್ರೀಹರಿಗೆ ಸಹಾಯಕ್ಕೆ ಯೋಗ್ಯರಾದ ಪ್ರಾಣಿವಿಶೇಷಗಳನ್ನು ಭೂಮಿಯಲ್ಲಿ ಸೃಷ್ಟಿಸಿ ಎಂದು ಬ್ರಹ್ಮ ದೇವರು ದೇವತೆಗಳಿಗೆ ಆದೇಶಿಸುತ್ತಾರೆ.  ಹೀಗೆ ಭಗವಂತ ಭಕ್ತನನ್ನು ಅನುಗ್ರಹಿಸಲು, ತಾನೊಬ್ಬನೇ ಬರದೆ ತನ್ನ ಅಮರಗಣ ಸಹಿತವಾಗಿ ಬಂದು ಉದ್ಧರಿಸುತ್ತಾನೆ.  ತನ್ನ ಇಚ್ಛಾಮಾತ್ರದಿಂದಲೇ, ತಾನೊಬ್ಬನೇ ಎಲ್ಲಾ ಕಾರ್ಯವನ್ನೂ ನಡೆಸಬಲ್ಲ ಭಗವಂತನು ತನ್ನ ಅಮಿತ ಕಾರುಣ್ಯ, ವಾತ್ಸಲ್ಯಗಳಿಂದಾಗಿ ಹೀಗೆ ತನ್ನ ಅಮರಗಣ ಸಹಿತವಾಗಿ, ತನ್ನ ಭಕ್ತರನ್ನು ಉದ್ಧರಿಸುತ್ತಾನೆ.
 
ಮೇಲಿನ ದೃಷ್ಟಾಂತಗಳನ್ನು ಗಮನಿಸಿದಾಗ, ಕಣ್ಣುಗಳನ್ನು ಅಪಾಯ ಬಾರದಂತೆ ಜೋಪಾನ ಮಾಡುವ ರೆಪ್ಪೆಯ೦ತೆ, ನವೆಯು೦ಟಾದಾಗ ತುರಿಸುವ ಕೈಗಳ೦ತೆ, ಸಾಧನಾ ಪಥದಲ್ಲಿ ಸಾಗುವ ಜೀವಿಗೆ ಭಗವ೦ತನು ನಡುನಡುವೆ ಬರುವ ಪ್ರತಿಬ೦ಧಕಗಳ ಸರಣಿಯನ್ನು ಸರಿಪಡಿಸಿ ನ೦ತರ ಅದನ್ನು ನಿವಾರಿಸುತ್ತಾನೆ ಎ೦ಬುದು ವೇದ್ಯವಾಗುತ್ತದೆ.


ಚಿತ್ರಕೃಪೆ : ಅಂತರ್ಜಾಲ