Wednesday, November 16, 2011

ಮಂಗಳಾಚರಣ ಸಂಧಿ - ೧೩ ನೇ (ಕೊನೆಯ) ಪದ್ಯ...


ಪರಿಮಳವು  ಸುಮನದೊಳಗನಲನು
ಅರಣಿಯೊಳಗಿಪ್ಪಂತೆ  ದಾಮೋ
ದರನು ಬ್ರಹ್ಮಾದಿಗಳ  ಮನದಲಿ ತೋರಿ ತೋರದೆಲೆ |
ಇರುತಿಹ ಜಗನ್ನಾಥ ವಿಠಲನ
ಕರುಣ ಪಡೆವ ಮುಮುಕ್ಷುಜೀವರು
ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು ||೧೩||

ಪ್ರತಿಪದಾರ್ಥ  : ಪರಿಮಳವು ಸುಮನದೊಳಗೆ - ಸುಮ ಎಂದರೆ ಹೂವು, ಹೂವಿನಲ್ಲಿರುವ ಸುವಾಸನೆ, ಅನಲನು ಅರಣಿಯೊಳಗೆ - ಅರಣಿ ಎಂದರೆ ಒಣಗಿದ ಅರಳಿ ಕಡ್ಡಿ ಮತ್ತು ಅನಲನೆಂದರೆ ಅಗ್ನಿ, ಇಪ್ಪಂತೆ - ಅಡಗಿಕೊಂಡಿರುವಂತೆ, ದಾಮೋದರನು - ದಾಮ ಎಂದರೆ ಹಗ್ಗ ಮತ್ತು ತಾಯಿ ಯಶೋದೆಯು ಹಗ್ಗದಿಂದ ಬಾಲಕೃಷ್ಣನನ್ನು ಕಟ್ಟಿದಾಗ, ದರ  ಎಂದರೆ ಉದರದಲ್ಲಿ ಧರಿಸಿದವನು, ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ - ಬ್ರಹ್ಮಾದಿ ಸಮಸ್ತ ದೇವತೆಗಳ ಮನದಲ್ಲಿ ಕಂಡೂ ಕಾಣಿಸದಂತೆ, ಇರುತಿಹ - ನೆಲೆಸಿರುವ, ಜಗನ್ನಾಥವಿಠಲನ - ಜಗತ್ತಿಗೇ ಒಡೆಯನಾದ ಶ್ರೀಹರಿಯ, ಕರುಣಪಡೆವ - ಕರುಣೆಗೆ ಪಾತ್ರರಾಗಬಯಸುವಂತಹ, ಮುಮುಕ್ಷು ಜೀವರು - ಮೋಕ್ಷಾಪೇಕ್ಷಿಗಳಾದ ಸುಜೀವರು, ಪರಮಭಾಗವತರನು - ಭಗವಂತನ ಶ್ರೇಷ್ಠ ಭಕ್ತರಾದ ಭಾಗವತರುಗಳನ್ನು, ಕೊಂಡಾಡುವುದು ಪ್ರತಿದಿನವು - ಪ್ರತಿದಿನವೂ ಅನವರತವೂ ಸ್ತುತಿಸುತ್ತಲೇ ಇರಬೇಕು.
 

ಮಂಗಳಾಚರಣದ  ಅಂತಿಮ ಚರಣದಲ್ಲಿ ಅಂತರ್ಯಾಮಿ ಬಿಂಬರೂಪಿ ಜಗನ್ನಾಥ ವಿಟ್ಠಲ ಜೀವಿಗಳೊಳಗೆ ಹೇಗೆ ಇರುತ್ತಾನೆಂದು ವರ್ಣಿಸುತ್ತಾರೆ.  ಭಗವಂತ ಸುಮನದೊಳು ಪರಿಮಳವಿದ್ದಂತೆ ಎಂದರೆ ಹೂವಿನಲ್ಲಿರುವ ಕಂಪಿನಂತೆ ಎಂದು ದೃಷ್ಟಾಂತ ಕೊಡುತ್ತಾರೆ. ಹೇಗೆಂದರೆ ಹೂವಿನಲ್ಲಿರುವ ಕಂಪು ನಮಗೆ ಕಣ್ಣಿಗೆ ಕಾಣುವುದಿಲ್ಲ, ಆದರೆ ಹೂವು ಚೆನ್ನಾಗಿ ಅರಳಿದ ನಂತರ ನಮಗೆ ಅದರ ಸುವಾಸನೆ ತಿಳಿಯುತ್ತದೆ.  “ಸುಮನ” ಎಂದರೆ ಹೂವು ಎಂದೂ ಹಾಗೂ “ಸು” ಮನಸ್ಸು ಎಂದೂ ಆಗುತ್ತದೆ.  ನಮ್ಮ ಮನಸ್ಸು ಸು – ಒಳ್ಳೆಯದಾಗಿರಬೇಕು, ಸಾತ್ವಿಕ ವಿಚಾರಗಳಿಂದ ತುಂಬಿ ಮನಸ್ಸು ಅರಳಿದಾಗ, ಭಗವಂತನಿರುವ ಅರಿವು ನಮಗೆ ಪರಿಮಳದಂತೆ ತಿಳಿಯುವುದು.  ಅಂದರೆ ಮನಸ್ಸೆಂಬ ಹೂವು ತನ್ನನ್ನು ಆವರಿಸಿ ಕೊಂಡಿರುವ ಅಹಂಕಾರ ಮತ್ತು ಮಮಕಾರಗಳಿಂದ ಬಿಡಿಸಿಕೊಂಡು, ಜ್ಞಾನ-ಭಕ್ತಿ-ವೈರಾಗ್ಯಗಳಿಂದ, ಸಾಧನೆಮಾಡಿ, ಹರಿ-ಗುರು ಕೃಪೆಯಿಂದ, ಭಗವತ್ಪ್ರಜ್ಞೆಯಿಂದ ಸುಂದರವಾಗಿ ಅರಳಿದರೆ, ಪರಿಮಳದಂತೆ ಪರಮಾತ್ಮ ನಮ್ಮೊಳಗೇ ವ್ಯಕ್ತವಾಗಿ ನಮ್ಮನ್ನು ಉದ್ಧರಿಸುತ್ತಾನೆ.  ಪರಿಮಳವು ಹೂವಿಗೆ ಸಹಜ ಅಥವಾ ಸ್ವಾಭಾವಿಕ ಗುಣ.  ಅದು ಅರಳಿದಾಗ ಮಾತ್ರ ಪರಿಮಳದ ಕಂಪು ಹೊರಸೂಸುವುದು.  ಹಾಗೇ ನಮ್ಮ ಮನಸ್ಸೂ ಕೂಡ.

ಇನ್ನೊಂದು ದೃಷ್ಟಾಂತವೆಂದರೆ ಕಟ್ಟಿಗೆಯಲ್ಲಿರುವ ಅತೀ ಸೂಕ್ಷ್ಮವಾದ ಅನಲ – ಬೆಂಕಿಯಂತೆ, ನಮಗೆ ಕಾಣುವುದೇ ಇಲ್ಲ.  ಆದರೆ ಎರಡು ಕಾಷ್ಟದ ಘರ್ಷಣೆ ಮಾಡಿದಾಗ, ಮಥನ ಮಾಡಿದಾಗ ಮಾತ್ರ ಅರಣಿ (ಕಟ್ಟಿಗೆ)ಯಲ್ಲಿ ಕಾಣುವಂತೆ, ಭಗವಂತ ಇರುತ್ತಾನೆ.  ನಾವು ನಮ್ಮ ಮನಸ್ಸೆಂಬ ಕಡಗೋಲಿನಿಂದ ಶಾಸ್ತ್ರದ ಸಮುದ್ರವನ್ನು ಮಥನ ಮಾಡಿ, ಮಾಡಿ ಆ ಭಗವಂತನ ಅರಿವು ತಿಳಿಯಬೇಕು.  ನಮ್ಮ ಮನಸ್ಸಿನಲ್ಲಿಯೇ ಅಸುರೀ ಗುಣಗಳು ಮತ್ತು ಸಾತ್ವಿಕ ಗುಣಗಳು ಎರಡೂ ಇವೆ.  ಯಾವಾಗ ಮನಸ್ಸಿನ ಮಥನ ಶುರುವಾಗುವುದೋ ಆಗ ಅಸುರೀ ಶಕ್ತಿಗಳು ಅಂದರೆ  ಅಹಂಕಾರ, ಮಮಕಾರ, ವಿಷಯಾಸಕ್ತಿಗಳು ಎಲ್ಲವೂ ಮೇಲೆ ಬರುತ್ತವೆ. ನಾವು ಆ ಯಾವ ಶಕ್ತಿಗಳನ್ನೂ ಗಣನೆಗೆ ತೆಗೆದುಕೊಳ್ಳದೇ... ಸತತವಾಗಿ ಭಗವಂತನ ಧ್ಯಾನ ಮಾಡಬೇಕು ಅವನಿಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಬಿಡಬೇಕು, ಅವನ ಇರುವನ್ನು ಅರಿಯಬೇಕು.  ಹೀಗೆ ನಾವು ನಿರಂತರವಾಗಿ ಮಾಡಿದಾಗಲೇ,   ನಮಗೆ, ಅರಣಿಯೊಳಗೆ ಅನಲ ಕಾಣುವಂತೆ, ಚಿನ್ಮಯನ ಅರಿವು ಮೂಡುವುದು.  ಸಮುದ್ರ ಮಥನದಲ್ಲಿ ಆದಂತೆ ನಾವು, ನಮ್ಮೊಳಗೇ ಇರುವ ಅಸುರೀ ಶಕ್ತಿಗಳನ್ನು ಜಯಿಸಿ ಸಾತ್ವಿಕ ಭಾವವನ್ನು ಅಪ್ಪಿಕೊಂಡಾಗ ನಮಗೆ  ಸಿಕ್ಕುವುದೇ - ಚಿನ್ಮಯನ ಇರುವಿನ  “ಜ್ಞಾನ”, ನಮ್ಮೊಳಗಿನ ದೈವೀಕ “ಶಕ್ತಿ”ಯ ಪರಿಚಯ, ಭಗವಂತನೆಂಬ ಅಮೃತದ ಗಡಿಗೆ.

ಬೇರೆ ಬೇರೆ ದೇವತೆಗಳಲ್ಲಿ ಕಲಿಯ ಆವೇಶ ಹೆಚ್ಚು ಇರುವುದರಿಂದ ಭಗವಂತ ಬೇಗ ಪ್ರಕಟವಾಗುವುದಿಲ್ಲ, ಅವ್ಯಕ್ತನಾಗಿರುತ್ತಾನೆ.  ಉಪಾಸನೆ – ಸಾಧನೆಗಳಿಂದ ವ್ಯಕ್ತನಾಗುತ್ತಾನೆ.  ಆದರೆ ವಿಭೂತಿ ಚೇತನಗಳಾದ ಬ್ರಹ್ಮ-ವಾಯು ದೇವರುಗಳಲ್ಲಿ ವ್ಯಕ್ತನಾಗಿಯೇ ಇರುತ್ತಾನೆ.  ರುದ್ರ ದೇವರಲ್ಲಿ ಪರಮಾತ್ಮ ತೋರಿಯೂ ತೋರದಂತೆ ಇರುತ್ತಾನೆ.  ಕಾಷ್ಠವನ್ನು ನಿರಂತರ ಘರ್ಷಣೆಗೆ ಒಳಪಡಿಸಿದಾಗ ಹೇಗೆ ಅಗ್ನಿಯ ದರ್ಶನವಾಗುವುದೋ, ಹಾಗೇ  ನಿರಂತರ ಘರ್ಷಣೆಯಿಂದ, ರುದ್ರ ದೇವರಲ್ಲಿ ಭಗವಂತ ಪ್ರಕಟಗೊಳ್ಳುತ್ತಾನೆ. 

ಜಗನ್ನಾಥ ದಾಸರು ಈ ಪದ್ಯದಲ್ಲಿ ಭಗವಂತನನ್ನು “ದಾಮೋದರ”ನೆಂದು ಸಂಬೋಧಿಸಿದ್ದಾರೆ.  “ದಾಮ” ಎಂದರೆ ಹಗ್ಗ – ಹೊಟ್ಟೆಗೆ ಹಗ್ಗದಿಂದ  ಕಟ್ಟಲ್ಪಟ್ಟವನು ದಾಮೋದರನೆಂದರೆ ಅದು ಕೃಷ್ಣಾವತಾರದ ಒಂದು ಪ್ರಸಂಗಕ್ಕೆ ಮಾತ್ರ ಸೀಮಿತವಾಗಿ ಬಿಡುತ್ತದೆ ಹಾಗೂ  ಇದು ಭಗವಂತನ ಅನಾದಿ ನಾಮವೂ ಹೌದು.  ಇದಕ್ಕೆ  ಆಧ್ಯಾತ್ಮಿಕವಾದ ಅನೇಕ ವಿಶಿಷ್ಟ ಅರ್ಥಗಳು ಇವೆ.  ನಾವು ಉಪಯೋಗಿಸುವ ಪ್ರತಿಯೊಂದು ಶಬ್ದಕ್ಕೂ ಒಂದು ಭೌತಿಕ, ಪ್ರಾಕೃತಿಕ ಮತ್ತು ಅಪ್ರಾಕೃತಿಕವೆಂಬ ಅರ್ಥಗಳಿರುತ್ತವೆ. ಇಲ್ಲಿ ದಾಮೋದರ ಎಂಬ ನಾಮ ಬೇರೆಯೇ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ. “ದಮ” ಎಂದರೆ “ಇಂದ್ರಿಯ ನಿಗ್ರಹ ಉಳ್ಳವನು, ಎಲ್ಲಾ ಇಂದ್ರಿಯಗಳನ್ನೂ ಭಗವಂತನೆಡೆಗೆ ಕೇಂದ್ರೀಕರಿಸಬಲ್ಲವನು” ಮತ್ತು ಇಂತಹ ಸಾಧಕರನ್ನು ಉದ್ಧಾರ ಮಾಡುವವನು / ಉದರದಲ್ಲಿ ಇಟ್ಟುಕೊಂಡು ಸಲಹುವವನು “ದಾಮೋದರ”.  ಅಕ್ಷರಗಳನ್ನು ಬಿಡಿಸಿ ನೋಡಿದಾಗ ದಾಮೋದರ ಎಂಬ ಪದ ಐದು ಭಾಗಗಳಾಗಿ ಬಿಡಿಸಿಕೊಳ್ಳುತ್ತದೆ – ದ + ಅಮ + ಉತ್ + ಅ + ರ ಆದಾಗ, ಉತ್ಕೃಷ್ಠನಾದ, ನಾವು ತಿಳಿಯಬಲ್ಲ ಈ ಪ್ರಪಂಚದಿಂದ ಅತೀತನಾದ, ಅಳತೆಯಿಲ್ಲದೆ ಅಪರಿಮಿತನಾಗಿ ಸಮಸ್ತ ಅಭೀಷ್ಟಗಳನ್ನೆಲ್ಲ ಪ್ರಸಾದಿಸುವವನಾದ, ಅನಂದಸ್ವರೂಪನು, ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದವನು ಎಂದರ್ಥವಾಗುತ್ತದೆ.  ಮತ್ತು ದಾಮರಾದ ಉದರು, ದಮನಶೀಲರು ಎಂದಾಗ – ಉದ ಎಂದರೆ ಜೀವಿ, ಇಂದ್ರಿಯ ನಿಗ್ರಹ ಮಾಡಿದ ಸಾತ್ವಿಕ ಜೀವಿ, ದಮನಶೀಲರಿಗೆ ರಂ – ಆನಂದ ನೀಡುವವನು ದಾಮೋದರ ಎಂದೂ ಆಗುತ್ತದೆ.  ಹೀಗೆ ದಾಮೋದರನೆಂಬ ಭಗವಂತನ ಒಂದು ಹೆಸರಿಗೆ ಇನ್ನೂ ಅನೇಕ ವಿಶೇಷ ಅರ್ಥಗಳು ಇವೆ.

ಮುಂದುವರೆಯುತ್ತಾ ಜಗನ್ನಾಥ ದಾಸರು  “ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ” ಎನ್ನುತ್ತಾರೆ.  ಬ್ರಹ್ಮಾದಿಗಳು ಎಂದರೆ ಬ್ರಹ್ಮ, ವಾಯು, ಲಕ್ಷ್ಮೀ, ಸರಸ್ವತಿ, ಭಾರತಿಯರಲ್ಲಿ ಸುಮನದಲ್ಲಿ ಪರಿಮಳದಂತೆಯೂ, ರುದ್ರಾದಿ ದೇವತೆಗಳಲ್ಲಿ ಅರನಣಿಯೊಳಗಿಪ್ಪಂತೆಯೂ ಇರುತ್ತಾನೆ.  ಅಂದರೆ ಪರಶುಕ್ಲತ್ರಯರಲ್ಲಿ “ತೋರಿ” ಇರುತ್ತಾನೆ.  ಬಾಕಿ ದೇವತೆಗಳಲ್ಲಿ “ತೋರದೆಲೆ” ಇರುತ್ತಾನೆ.   

ಪುಷ್ಪಗತ ದೃಷ್ಟಾಂತದಿಂದ ಕಾರ್ಯಭೂತವಾದ ಈ ಜಗತ್ತಿಗೇ ಕಾರಣಭೂತ ದೇವರು ಇದ್ದಾನೆ ಎಂದೂ ಸ್ಮೃತಿ, ಶೃತಿಗಳಿಂದ ಅಧರಿಸಿದ ದಾಸರು ಅರಣಿಗತ ಅಗ್ನಿ ಪ್ರಾಪ್ತಿಗೆ ಮಥನದಂತೆ ಗುರುಸೇವಾ, ಶಾಸ್ತ್ರಾಭ್ಯಾಸ ಮೊದಲಾದ ಸೇವಾ ಹೊರತು ದೇವರು ದೊರಕುವುದಿಲ್ಲ ಎಂಬರ್ಥ ತಿಳಿಸಲು ಎರಡು ದೃಷ್ಟಾಂತಗಳನ್ನು ಕೊಟ್ಟಿದ್ದಾರೆ.  ಕುಸುಮದಲ್ಲಿ ಪರಿಮಳವು ಇರುವ ಹಾಗೆ, ಆರಣಿಯಲ್ಲಿ ಅಗ್ನಿ ಇರುವ ಹಾಗೆ, ಬ್ರಹ್ಮಾದಿಗಳ ಮನಸ್ಸಿನಲ್ಲಿ ಕಾಣಿಸಿಕೊಂಡ, ಜ್ಞಾನಪ್ರದ ಸ್ವಾಮಿಯ ದಯ ಸಂಪಾದಿಸುವ ಮೋಕ್ಷಾಕಾಂಕ್ಷಿಗಳು ಪೂರ್ವೋಕ್ತ ಭಾಗವತರಾದ ಬ್ರಹ್ಮಾದಿಗಳನ್ನು ಸದಾ ತಾರತಮ್ಯ ಕ್ರಮದಿಂದ ಸ್ತುತಿಸತಕ್ಕದೆಂದು ಆದೇಶಿಸುತ್ತಾರೆ.

ನಾವು ಯಾರಿಗೆ ನಮಸ್ಕರಿಸಿದರೂ ಅದು ಅವರ ಒಳಗಿರುವಂತ ಭಗವಂತನಿಗೇ ನಮ್ಮ ನಮಸ್ಕಾರ ಸಲ್ಲುವುದು.  “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎಂಬ ಮಾತಿನಂತೆ, ಎಲ್ಲಿ, ಯಾವ ಸನ್ನಿಧಾನ ಶುದ್ಧವಾಗಿದೆಯೋ ಅಂತಹ ಸನ್ನಿಧಾನಕ್ಕೆ ನಾವು ನಮಸ್ಕರಿಸಬೇಕು.  ಇದಕ್ಕೆ ಉದಾಹರಣೆ ಕೊಡುವುದಾದರೆ : ಗೋವು, ವೃಕ್ಷಗಳಲ್ಲಿ ತುಳಸೀ, ಅರಳಿ.. ಅಂದರೆ ಇದರ ಅರ್ಥ ಈ ಸನ್ನಿಧಾನಗಳಲ್ಲಿ ಭಗವಂತನ ಅಭಿವ್ಯಕ್ತ ಶುದ್ಧವಾಗಿರುತ್ತದೆ, ಪವಿತ್ರವಾಗಿರುತ್ತದೆ ಎಂದು.  ಆದ್ದರಿಂದ ಎಲ್ಲಿ ವಿಶೇಷ ಅಭಿವ್ಯಕ್ತಿ ಇದೆಯೋ ಅಲ್ಲಿ ನಾವು ನಮಸ್ಕರಿಸುತ್ತೇವೆ. ಇಲ್ಲಿ ಪರಮ ಭಾಗವತರು ಎಂದರೆ ಭಗವಂತನನ್ನು ನಿರಂತರ ಧ್ಯಾನಿಸುವವರು, ಅವನ ಇರುವಿಕೆಯ ಅರಿವು ಉಳ್ಳವರು.  ಇವರಲ್ಲಿ ಭಗವಂತನ ಸನ್ನಿಧಾನ ತುಂಬಾ ವಿಶೇಷವಾಗಿ ಅಭಿವ್ಯಕ್ತವಾಗುವುದಾದ್ದರಿಂದ, ಅವರಿಗೆ ನಾವು ನಮಿಸೋಣ, ನಿರಂತರ ಅವರ ಸಂಪರ್ಕದಿಂದ ನಮ್ಮ ಮನಸ್ಸೂ ಅರಳಿ ನಮಗೂ ಭಗವಂತನ ಅರಿವಿನ ಪರಿಮಳವನ್ನು ಶ್ರೀ ವಾಯುದೇವರು ನಮ್ಮ ಅನುಭವಕ್ಕೆ ತಂದುಕೊಡಲಿ ಎಂದು ಪ್ರಾರ್ಥಿಸುತ್ತಾ ಶ್ರೀ ಜಗನ್ನಾಥ ದಾಸರು ಮಂಗಳಾಚರಣ ಸಂಧಿಯನ್ನು ಮುಗಿಸುತ್ತಾರೆ.