Wednesday, August 3, 2011

೧. ಮಂಗಳಾಚರಣ ಸಂಧಿ - ೮ ನೇ ಚರಣಅನ್ಯ ಧರ್ಮೀಯರ ಪ್ರಚಾರದಲ್ಲಿ ಹಿಂದೂ ಧರ್ಮ ಒತ್ತಡಕ್ಕೆ ಸಿಕ್ಕಿ ನಲುಗಿದ್ದ ಕಾಲದಲ್ಲಿ, ಧರ್ಮ ಪುನಶ್ಚೇತನಕ್ಕಾಗಿಯೇ ಬಂದವರು ನಮ್ಮ ಆಚಾರ್ಯ ತ್ರಯರಾದ ಶ್ರೀ ಶಂಕರ, ಶ್ರೀ ರಾಮಾನುಜ ಮತ್ತು ಶ್ರೀ ಮಧ್ವಾಚಾರ್ಯರು.  ಶ್ರೀ ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಮೂಲ ಪುರುಷರು.  ಇವರನ್ನು ಶ್ರೀ ವಾಯುದೇವರ ಮೂರನೆಯ ಅವತಾರವೆಂದೇ ಭಾವಿಸಲಾಗುತ್ತದೆ.  ಸುಮಾರು ೭೭೨ ವರ್ಷಗಳ ಹಿಂದೆ ಕ್ರಿಸ್ತಶಕ ೧೨೩೮ ನ ದಶಮಿ ಬುಧವಾರ ಮಧ್ಯಾಹ್ನ “ಪಾಜಕ” ಕ್ಷೇತ್ರದಲ್ಲಿ ಶ್ರೀ ಮಧ್ವರ ಜನನವಾಗಿತ್ತು.  ಹಲವಾರು ವರ್ಷಗಳು ತಪಸ್ಸು ಮಾಡಿದ ಫಲವಾಗಿ, ಜನನವಾದ  ಮಗುವಿನ ಹೆಸರು ವಾಸುದೇವ ಭಟ್ಟ.

ಉಪನಯನದ ನಂತರ ವಾಸುದೇವ ಭಟ್ಟರು ತಮ್ಮ ಹದಿನಾರನೇ ವಯಸ್ಸಿಗೆ ಶ್ರೀ ಅಚ್ಯುತ ಪ್ರೇಕ್ಷಾಚಾರ್ಯರಿಂದ ಸನ್ಯಾಸ ಸ್ವೀಕರಿಸಿ ಅವರಲ್ಲೇ ತಮ್ಮ ವಿದ್ಯಾಭ್ಯಾಸ ಮುಂದುವರೆಸಿ “ಮಧ್ವ”, “ಪೂರ್ಣಪ್ರಜ್ಞ” ಮತ್ತು “ಆನಂದ ತೀರ್ಥ”ರೆಂಬ ಹೆಸರುಗಳನ್ನು ಪಡೆದು ಪ್ರಸಿದ್ಧರಾದರು.  ಇವರು “ಕುಲ”ವೆಂಬ ವೃಕ್ಷದ ಟೊಂಗೆಗಳು, ಟಿಸಿಲುಗಳು ತಮ್ಮ ಬೇರನ್ನೇ ಮರೆತು ಎಲ್ಲೆಡೆ ವ್ಯಾಪಿಸಿಬಿಟ್ಟಿವೆಯೆಂದೂ, ಈ ವೃಕ್ಷಕ್ಕೆ ತನ್ನ ಬೇರಿನ ಪರಿಚಯ ಮಾಡಿಕೊಡುವುದೇ ತಮ್ಮ ಇಚ್ಛೆಯೆಂದು ಹೇಳಿದವರು.  ಶ್ರೀ ಮಧ್ವಾಚಾರ್ಯರು ಅನೇಕ ವಿದ್ಯೆಗಳ ಜೊತೆಗೇ ಸಂಗೀತದಲ್ಲೂ, ಸಾಮಾಜಿಕ ಪ್ರಜ್ಞೆಯಲ್ಲೂ ಅದ್ವಿತೀಯರೆನಿಸಿಕೊಂಡವರು.

ಆಚಾರ್ಯರು ತಮ್ಮ ದ್ವೈತ ಸಿದ್ಧಾಂತದಲ್ಲಿ “ಜಗತ್ತಿನ ಒಡೆಯ ಆ ಗುಣಪೂರ್ಣನಾದ ಪರಮಾತ್ಮ, ಆತ ಒಬ್ಬನೇ, ಅವನೇ ಸರ್ವೋತ್ತಮ, ಪರಮಾತ್ಮನಿಗೂ, ಜೀವರಿಗೂ, ಜಡಗಳಿಗೂ ಪರಸ್ಪರ ಭೇದವಿದ್ದುದು ಸತ್ಯ.  ಪರಮಾತ್ಮನು ಜೀವರಿಂದ, ಜಡರಿಂದ, ವಿಭಿನ್ನನಾದವನು.  ಆದ್ದರಿಂದ ಅವರಲ್ಲಿ ತಾರತಮ್ಯವಿದೆ.  ಈ ತಾರತಮ್ಯ ವಾಸ್ತವಿಕವಾಗಿ, ವ್ಯವಹಾರಿಕವಾಗಿ, ಸತ್ಯವಿದೆ.  ನಿಷ್ಕಾಮ ಕರ್ಮದಿಂದ ಜ್ಞಾನ, ಜ್ಞಾನದಿಂದ ಮೋಕ್ಷ ಎಂದು ಕರ್ಮಕ್ಕೂ ಮಹತ್ವ ಕೊಟ್ಟು, ಹರಿ ಅನುಗ್ರಹ, ಹರಿ ಪ್ರಸಾದಗಳೇ ಮುಕ್ತಿಗೆ ಸಾಧನ ಮತ್ತು ಜ್ಞಾನ ಭಕ್ತಿಗಳಂತೆ ಕರ್ಮವೂ ಮೋಕ್ಷಕ್ಕೆ ಅವಶ್ಯಕವಾದ ಅಂಗವೆಂಬುದು ಶ್ರೀ ಮಧ್ವರ ಮತದ ಸಾರ “.

ಮಧ್ವಾಚಾರ್ಯರು “ಭಗವಂತನ ಸೃಷ್ಟಿಯಲ್ಲಿ ಯಾವ ಕುಂದೂ ಇಲ್ಲ, ಅದೆಂದಿಗೂಕೆಡುವುದಿಲ್ಲ.  ಕೆಟ್ಟಿರುವುದು ನಮ್ಮ ನಮ್ಮ ಒಳಗಿರುವ ಮನಸ್ಸುಗಳು.  ಮೊದಲು ನಮ್ಮ ಮನಸ್ಸುಗಳನ್ನು ಶುದ್ಧೀಕರಿಸುವ ಕೆಲಸದಲ್ಲಿ ನಾವು ತೊಡಗಬೇಕು.  ಭಗವಂತನ  ಬಗ್ಗೆ ಚಿಂತಿಸುತ್ತಾ, ಸದಾ ಅವನ ಧ್ಯಾನ ಮಾಡುತ್ತಾ  ಕೆಟ್ಟಿರುವ ನಮ್ಮ ಮನಸ್ಸುಗಳನ್ನು ಸ್ವಚ್ಛಮಾಡಿಕೊಳ್ಳಬೇಕು.  ನಮ್ಮ ಕೆಲಸಗಳನ್ನು ಶುದ್ಧ ಮನಸ್ಸಿನಿಂದ, ಪ್ರಾಮಾಣಿಕವಾಗಿ, ಅದು ಭಗವಂತನ ಸೇವೆಯೆಂದು ತಿಳಿದು ಮಾಡಬೇಕು.  ಪ್ರತಿಫಲ ಭಗವಂತನ ಕರುಣೆಯಿಂದ ಎಷ್ಟು ಸಿಕ್ಕುತ್ತದೋ ಅಷ್ಟಕ್ಕೇ ತೃಪ್ತರಾಗಬೇಕು.  ಸದ್ಧರ್ಮ, ಸದಾಚರಣೆಗಳನ್ನು ನಮ್ಮ ನಿತ್ಯ ಜೀವನದಲ್ಲಿ ಪಾಲಿಸುತ್ತಾ, ಸಾತ್ವಿಕ ಜೀವನದ ಲಕ್ಷಣಗಳಾದ ಭಗವಂತನ ಚಿಂತನೆ ನಿರಂತರ ಮಾಡಬೇಕು” ಎಂದು ಬೋಧಿಸಿದರು.  ಮತ್ತೊಂದು ಮಹತ್ವದ ಮಾತು ಆಚಾರ್ಯರು ಬೋಧಿಸಿರುವುದೆಂದರೆ.. “ಭಗವಂತ ಪರಿಪೂರ್ಣ, ಅವನು ಅಧರ್ಮಕ್ಕೆ ಎಂದೂ ಒಲಿಯನು, ಭೋಗ ಭೌತಿಕವಾದ್ದರಿಂದ ನಶ್ವರ, ತ್ಯಾಗ ಅಧ್ಯಾತ್ಮಿಕ ಆದ್ದರಿಂದಲೇ ಶಾಶ್ವತ” ಎಂಬ ಮಾತು.

ಶ್ರೀ ಮಧ್ವಾಚಾರ್ಯರು ಶ್ರೀ ಕೃಷ್ಣನ ಆರಾಧಕರು ಮತ್ತು ಸುಮಾರು ೩೭ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.  ಮುಖ್ಯವಾದವು ಗೀತಾಭಾಷ್ಯ, ಗೀತಾತಾತ್ಪರ್ಯ ನಿರ್ಣಯ, ಬ್ರಹ್ಮಸೂತ್ರ, ಅನುಭಾಷ್ಯ ಮತ್ತು ಭಾಗವತ ತಾತ್ಪರ್ಯ ನಿರ್ಣಯ.  ಮಧುವನ್ನು ಕೊಡುವ ಶಾಸ್ತ್ರ ಮಧ್ವ ಶಾಸ್ತ್ರ.  ಅದನ್ನು ರಚಿಸಿದವರು ಮಧ್ವಾಚಾರ್ಯರು. ಮಧ್ವಾಚಾರ್ಯರು ವೇದವ್ಯಾಸರ ಪರಮ ಶಿಷ್ಯರಾಗಿದ್ದು ಬದರಿಯಲ್ಲಿ ತಮ್ಮ ಗುರುಗಳಾದ ವ್ಯಾಸರಿಗೆ ಗೀತಾ ತಾತ್ಪರ್ಯ ನಿರ್ಣಯ, ಮಹಾಭಾರತ ತಾತ್ಪರ್ಯ ನಿರ್ಣಯ ಹಾಗೂ ಭಾಗವತ ತಾತ್ಪರ್ಯ ನಿರ್ಣಯಗಳನ್ನು ಒಪ್ಪಿಸಿದರು.  ತಾವೇ ದ್ವಾದಶ ಸ್ತೋತ್ರಗಳನ್ನು ರಚಿಸಿ, ಅಂಕಿತ ಹಾಕುವ ಪದ್ಧತಿಯನ್ನು ಪರಂಪರಾಬದ್ಧವಾಗಿಸಿದರು ಶ್ರೀ ಮಧ್ವಾಚಾರ್ಯರು.

ಕ್ಷಿತಿಯೊಳಗೆ ಮಣಿಮಂತ ಮೊದಲಾ
ದತಿ ದುರಾತ್ಮರು ಒಂದಧಿಕ ವಿಂ
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ |
ಸತಿಯ ಜಠರದೊಳವತರಿಸಿ ಭಾ
ರತಿರಮಣ ಮಧ್ಯಾಭಿಧಾನದಿ
ಚತುರದಶಲೋಕದಲಿ ಮೆರೆದಪ್ರತಿಮಗೊಂದಿಸುವೆ ||೮||


ಪ್ರತಿಪದಾರ್ಥ :  ಕ್ಷಿತಿಯೊಳಗೆ - ಭೂಮಿಯಲ್ಲಿ, ಮಣಿಮಂತ - ಕ್ರೋಧವಶಗಣಕ್ಕೆ ಸೇರಿದ ಮಹಾರಾಕ್ಷಸ {ಕುಬೇರನ ಭೃತ್ಯ (ಸೇವಕ)}, ಮೊದಲಾದ ಅತಿ ದುರಾತ್ಮರು - ಮಣಿಮಂತ ಮೊದಲಾದ ಇನ್ನೂ ಅನೇಕ ವಿಷ್ಣು ವಿರೋಧಿ ದುಷ್ಟರು, ಒಂದಧಿಕ ವಿಂಶತಿ - ೧+೨೧ = ಇಪ್ಪತ್ತೊಂದು, ಕುಭಾಷ್ಯವ - ವಿಷ್ಣು ಸರ್ವೋತ್ತಮತ್ವ ಮತ್ತು ಜಗತ್ಸತ್ಯತ್ವವನ್ನು ವಿರೋಧಿಸುವ ಭಾಷ್ಯಗಳಾಗಿರುವುದರಿಂದ ಇವುಗಳು ಕುಭಾಷ್ಯಗಳೆಂದು ಕರೆಯಲ್ಪಟ್ಟಿವೆ, ರಚಿಸೆ - ರಚನೆ ಮಾಡಿರಲು, ನಡುಮನೆಯೆಂಬ ಬ್ರಾಹ್ಮಣನ - ಮಧ್ಯಗೇಹನೆಂಬ ಕುಲನಾಮವುಳ್ಳ ಬ್ರಾಹ್ಮಣನ, ಸತಿಯ ಜಠರದೊಳವತರಿಸಿ - ಪತ್ನಿಯಾದ ವೇದವತಿಯ ಉದರದಲ್ಲಿ ಅವತಾರ ಮಾಡಿದ, ಭಾರತೀರಮಣ - ಭಾರತೀ ಪತಿಯಾದ ವಾಯುದೇವರು / ಮುಖ್ಯಪ್ರಾಣದೇವರು, ಮಧ್ವಾಭಿದಾನದಿ - ಮಧ್ವಾಚಾರ್ಯರೆಂಬ ಹೆಸರಿನಲ್ಲಿ, ಚತುರದಶ ಲೋಕದಿ - ಚತುರ ಎಂದರೆ ನಾಲ್ಕು ಮತ್ತು ದಶ ಎಂದರೆ ಹತ್ತು ಚತುರದಶವೆಂದರೆ ೧೪ ಲೋಕಗಳಲ್ಲಿ, ಮೆರೆದ - ಪ್ರಸಿದ್ಧಿಹೊಂದಿದ, ಅಪ್ರತಿಮಗೆ - ಸರಿ ಸಾಟಿಯಿಲ್ಲದವನಿಗೆ, ವಂದಿಸುವೆ - ನಮಸ್ಕರಿಸುವೆ.
 

ಈ ಚರಣದಲ್ಲಿ ಜಗನ್ನಾಥ ದಾಸರು ಶ್ರೀ ಮನ್ಮಧಾಚಾರ್ಯರನ್ನು ಸ್ತುತಿಸುತ್ತಾ  ಮಣಿಮಂತ ಮೊದಲಾದ ದೈತ್ಯರು ವೇದಗಳಿಗೆ ಹೇಳಿದ ವಿಪರೀತಾರ್ಥಗಳನ್ನು ಖಂಡಿಸಿ ಸರಿಯಾದ ಅರ್ಥವನ್ನು ಲೋಕಕ್ಕೆ ತೋರಿಸಿ ಉತ್ತಮರ ಸಾಧನೆಗೆ ಸಹಕರಿಸಲು ಅವತರಿಸಿ ಆನಂದತೀರ್ಥ ನಾಮದಲ್ಲಿ ಲೋಕವಿಖ್ಯಾತರಾದ ಅಸದೃಶ ಗುರುಗಳಿಗೆ ವಂದಿಸುವೆ ಎಂದು ಹೇಳಿದ್ದಾರೆ.   

ಹರಿದಾಸ ಪಂಥಕ್ಕೆ ಯಜಮಾನರಂತಿರುವ ಶ್ರೀಪಾದರಾಜರ ಮಧ್ವನಾಮ ಎಂಬ ಕೃತಿಗೆ ಜಗನ್ನಾಥ ದಾಸರು ಫಲಶ್ರುತಿಯನ್ನು ಬರೆದಿದ್ದಾರೆ.  ಈ ಮಧ್ವನಾಮದಲ್ಲಿ ಶ್ರೀ ಪಾದರಾಜರು ಹನುಮ-ಭೀಮ-ಮಧ್ವ ಅವತಾರ ತ್ರಯಗಳನ್ನು ಕುರಿತು ಹೇಳಿದ್ದಾರೆ.  ಅದಕ್ಕೆ ಫಲಸ್ತುತಿ ಬರೆಯುತ್ತಾ ಜಗನ್ನಾಥ ದಾಸರು ಈ ಮಧ್ವನಾಮ ಪಠಿಸಿದವರಿಗೆ ಗಂಗಾತೀರದಲ್ಲಿ ಮಾಡುವ ಸಹಸ್ರಾರು ಗೋದಾನದ ಫಲ ಮತ್ತು ಅಪುತ್ರರು ಸಪುತ್ರರಾಗುವ ಭಾಗ್ಯ ಸಿಗುವುದೆಂದು ತಿಳಿಸಿದ್ದಾರೆ.  ಭಕ್ತರೆಲ್ಲರ ಸಂತಾಪವನ್ನೂ ಕಳೆದು ಸೌಖ್ಯವನ್ನೇ ಕೊಟ್ಟು,  ಜಗನ್ನಾಥ ವಿಠಲನನ್ನೇ ತೋರಿಸಿ,  ಭವ ಕೂಪದಿಂದ ನಮ್ಮನ್ನು ಈ  ಮಧ್ವನಾಮ ಕಾಪಾಡುತ್ತದೆ  ಎಂದು ಬರೀ ತಾವು ಮಾಡಿರುವ ಮಧ್ವ ಸ್ತೋತ್ರವಲ್ಲದೆ, ತಮ್ಮ ಜನನದ ಮೊದಲೇ  ಹಿರಿಯರಾದ ಶ್ರೀ ಪಾದರಾಜರು ರಚಿಸಿದ್ದ ಮಧ್ವನಾಮಕ್ಕೂ ಮನ್ನಣೆ ಕೊಟ್ಟಿದ್ದಾರೆ.