Sunday, March 8, 2015

ಕರುಣಾ ಸಂಧಿ - ೩೦ ನೇ ಪದ್ಯ (ಮತ್ಸ್ಯಾವತಾರ )

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ  ಸಂಹರಿಸಿ  ಧರ್ಮದಿ  ಕಾಯ್ದ  ಸುಜನರನು  || ೩೦ ||

ವೈವಸ್ವತ ಮನ್ವಂತರದ ಕಾಲದಲ್ಲಿ ಭಗವಂತ ಎತ್ತಿದ ಅವತಾರಗಳಲ್ಲಿ ದಶ ಅವತಾರಗಳ ವರ್ಣನೆಯನ್ನು ಈ ಪದ್ಯದಲ್ಲಿ ದಾಸರಾಯರು ಮಾಡಿಕೊಟ್ಟಿದ್ದಾರೆ.  ವೈವಸ್ವತ ಮನ್ವಂತರದ ಕಾಲದಲ್ಲಿ ಭಗವಂತನದು ಒಟ್ಟು ೧೩ ಅವತಾರಗಳಾಗಿದ್ದವೆಂದು ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿವೆ.  ಅದರಲ್ಲಿ ೧೦ ಅವತಾರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರುತ್ತಾರೆ.  ಏಕೆಂದರೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಅವತಾರಗಳಾದಾಗ, ಮುಖ್ಯ ಅವತಾರಕ್ಕೆ ಪೋಷಕ ಅವತಾರವಾಗಿ ಬರುವ ಅವತಾರಗಳನ್ನು ಬಿಟ್ಟಿರುತ್ತಾರೆ.  ಈ ಮನ್ವಂತರದಲ್ಲಿಯೂ ಆದ ೧೩ ಅವತಾರಗಳಲ್ಲಿ ಧನ್ವಂತರಿ, ವೇದವ್ಯಾಸರು ಮತ್ತು ಮೋಹಿನಿ ಎಂಬ ಮೂರು ಅವತಾರಗಳನ್ನು ಬಿಟ್ಟಿರುವುದರಿಂದಲೇ ದಶಾವತಾರವೆಂಬ ಲೆಕ್ಕವಾಗಿದೆ.

ಮೀನ  : ಮತ್ಸ್ಯಾವತಾರ -  ಭಾಗವತದ ಪ್ರಥಮ ಸ್ಕಂಧದಲ್ಲಿ ವಿವರಿಸಿರುವಂತೆ,  ಸೃಷ್ಟಿಗೆ ಕಾರಣವಾದ ಜಲದಲ್ಲಿ ಯೋಗನಿದ್ರೆಯಲ್ಲಿ ಪವಡಿಸಿದ್ದ ಭಗವಂತನ ನಾಭಿ ಸರೋವರದಲ್ಲಿ ಹುಟ್ಟಿದ ಕಮಲದಿಂದ ಬ್ರಹ್ಮದೇವರ ಜನ್ಮವಾಯಿತು.  ಭಗವಂತನ ಅಂಗ-ಉಪಾಂಗಗಳ ವಿನ್ಯಾಸದಿಂದ ಸಮಸ್ತ ಲೋಕಗಳ ಕಲ್ಪನೆಯಾಯಿತು.  ಪರಮ ಪವಿತ್ರವಾದ ಭಗವಂತನ ಈ ವಿರಾಟ್ಪುರುಷ ರೂಪದ ಸಾವಿರಾರು ತಲೆಗಳು, ತೋಳುಗಳು, ತೊಡೆಗಳು, ಮುಖಗಳಿಂದಲೇ ಭಗವಂತನ ಅಸಂಖ್ಯ ಅವತಾರಗಳು ಪ್ರಕಟಗೊಳ್ಳುವುವು.  ವಿರಾಟ್ಪುರುಷ ರೂಪದಿಂದ ಅನೇಕ ಅವತಾರಗಳು ಆವಿರ್ಭವಿಸಿದವು.  ಸೃಷ್ಟಿಯ ಕಾರಣಕ್ಕಾಗಿ ಪ್ರಕಟಗೊಂಡ ರೂಪಗಳಲ್ಲಿ ಮತ್ಸ್ಯಾವತಾರವು ಹತ್ತನೆಯ ಅವತಾರವಾಗುತ್ತದೆ.  ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ ಭಗವಂತನ ನಾಭಿ ಸರೋವರದ ಕಮಲದಿಂದ ಹುಟ್ಟಿದ ಬ್ರಹ್ಮದೇವರು ತಮಗೆ ಯಜ್ಞ ಮಾಡಲು ಯಾವ ಸಾಮಗ್ರಿಯೂ ಇರಲಿಲ್ಲವಾಗಿ ವಿರಾಟ್ಪುರುಷನ ಅವಯವಗಳಲ್ಲಿಯೇ ಯಜ್ಞದ ಪಶು, ಯೂಪಸ್ಥಂಭ, ಕುಶ, ಯಜ್ಞಭೂಮಿ ಮತ್ತು ಯಜ್ಞಕ್ಕೆ ಪ್ರಶಸ್ತವಾದ ಕಾಲಗಳನ್ನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಭಗವಂತನನ್ನು ಯಜ್ಞದ ಮೂಲಕ ಪೂಜಿಸುತ್ತಾರೆ.  ಬ್ರಹ್ಮದೇವರ ಸತ್ರಯಾಗದಲ್ಲಿ ಅವತರಿಸುವ ಹಯಗ್ರೀವ ರೂಪಿ ಭಗವಂತನು ಮೂಗಿನಿಂದ ಶ್ವಾಸ ಬಿಡುವಾಗ ಅಪೌರುಷೇಯವಾದ ಮತ್ತು ನಿರ್ದೋಷವಾದ ವೇದಗಳು ಪ್ರಾದುರ್ಭವಿಸುತ್ತವೆ.  ಹೀಗೆ ಪ್ರಾದುರ್ಭವಿಸಿದ ವೇದಗಳನ್ನು ಹಯಗ್ರೀವನೆಂಬ ಅಸುರನು ಅಪಹರಿಸಿದಾಗ, ಭಗವಂತನ ಮೊಟ್ಟ ಮೊದಲ ಮತ್ಸ್ಯಾವತಾರವು ಶ್ವೇತವರಾಹ ಕಲ್ಪದಲ್ಲಿ ಆಗುತ್ತದೆ.  ಮತ್ಸ್ಯಾವತಾರಿಯಾಗಿ ಅವತರಿಸಿ ಹಯಗ್ರೀವಾಸುರನನ್ನು ಸಂಹರಿಸಿ ವೇದಗಳನ್ನು ಬ್ರಹ್ಮದೇವರಿಗೆ ತಂದು ಕೊಡುತ್ತಾನೆ.  ನಂತರ ಚಾಕ್ಷುಷ ಮನ್ವಂತರದ ಪ್ರಳಯ ಕಾಲದಲ್ಲಿ ಎರಡನೆಯ ಬಾರಿಗೆ ಮತ್ಸ್ಯಾವತಾರವಾಗುತ್ತದೆ.  ಭಾಗವತ ದ್ವಿತೀಯ ಸ್ಕಂಧದ ೭ನೆಯ ಅಧ್ಯಾಯದಲ್ಲಿ ಯುಗಾಂತರ ಸಮಯದಲ್ಲಾದ ಮತ್ಸ್ಯಾವತಾರದ ವರ್ಣನೆ ಹೀಗಿದೆ

ಮಸ್ತ್ಯೋ ಯುಗಾಂತಸಮಯೇ ಮನುನೋಪಲಬ್ಧಃ | ಕ್ಷೋಣೀಮಯೋ ನಿಖಿಲಜೀವನಿಕಾಯಕೇತಃ ||
ವಿಸ್ತಂಸಿತಾನುರುಭಯೇ ಸಲಿಲೇ ಮುಖಾನ್ಮ | ಆದಾಯ ತತ್ರ ವಿಜಹಾರ ಹ ವೇದಮಾರ್ಗಾನ್ || 

ಮತ್ಸ್ಯ ಮಹಾಪುರಾಣದಲ್ಲಿ ಶ್ರೀಹರಿಯ ಮತ್ಸ್ಯಾವತಾರದ ವರ್ಣನೆ ವಿಸ್ತಾರವಾಗಿದೆ :
ವಿಷ್ಣೋರ್ಮತ್ಸ್ಯಾವತಾರೇ ಸಕಲ ವಸುಮತೀಮಂಡಲಂ ವ್ಯಶ್ನುವಾನ |
ಸ್ತಸ್ಯಾಸ್ಯೋದೀರಿತಾನಾಂ ಧ್ವನಿರಪಹರತಾದಶ್ರಿಯಂ ವಃ ಶ್ರುತೀನಾಮ್ || - ಅದ್ಭುತವಾದ ಮತ್ಸ್ಯಾವತಾರದ ಆದಿಯಲ್ಲಿ ಮೀನು ಪಾತಾಲ ಮೂಲದಿಂದ ಸಿಡಿದು ಮೇಲೆದ್ದಾಗ ಅದರ ಬಾಲದ ಹೊಡೆತದ ರಭಸದಿಂದ ಸಾಗರದ ನೀರೆಲ್ಲಾ ಚಿಮ್ಮಿ ಪುಟಿದು ಬ್ರಹ್ಮಾಂಡದ ಕೊಪ್ಪರಕ್ಕೇ ಅಪ್ಪಳಿಸಿ ಮತ್ತೆ ಮರಳಿ ಕೆಳಗೆ ಉರುಳಿತು.  ಇಂತಹ ದಿವ್ಯವಾದ ಮೀನಮೂರುತಿಯ ಮುಖದಿಂದ ವೇದಘೋಷವು ಹೊರಹೊಮ್ಮಿತು.  ಮತ್ಸ್ಯಪುರಾಣವು ಸಾಕ್ಷಾತ್ ನಾರಾಯಣನಿಂದಲೇ ಹೇಳಲ್ಪಟ್ಟಿದೆಯೆಂಬ ಮಾತಿದೆ.  ಮತ್ಸ್ಯಾವತಾರದ ಹಿನ್ನೆಲೆಯಲ್ಲಿ ಒಂದು ಕಥೆಯಿದೆ.  ಮಹಾ ಭಕ್ತನಾದ ರಾಜಾ ಸತ್ಯವ್ರತನು ರಾಜ್ಯಭಾರದಿಂದ ವಿಮುಕ್ತನಾಗಿ ಮಲಯಗಿರಿಯಲ್ಲಿ ಉಗ್ರತಪಸ್ಸಿಗೆ ತೊಡಗುತ್ತಾನೆ.  ತಪಸ್ಸಿಗೆ ಮೆಚ್ಚಿ ಬಂದ ಬ್ರಹ್ಮದೇವನನ್ನು ಸತ್ಯವ್ರತನು ವಿಚಿತ್ರವಾದ ಬೇಡಿಕೆಯೊಂದನ್ನು ಕೇಳುತ್ತಾನೆ.  ಪ್ರಳಯ ಕಾಲದಲ್ಲಿ ವಿಶ್ವವನ್ನು ರಕ್ಷಿಸುವ ಭಗವಂತನ ವಿಶಿಷ್ಟ ಲೀಲೆಯನ್ನು ಕಾಣುವ ಶಕ್ತಿಯನ್ನು ಕರುಣಿಸಬೇಕೆಂದು ಬೇಡಲು ಬ್ರಹ್ಮದೇವನು ಒಪ್ಪಿ ವರವೀಯುತ್ತಾನೆ.  ಒಂದು ದಿನ ಸತ್ಯವ್ರತ ರಾಜನು ತನ್ನ ಆಶ್ರಮದಲ್ಲಿ ಪಿತೃದೇವತೆಗಳಿಗೆ ತರ್ಪಣ ಕೊಡುತ್ತಿದ್ದಾಗ ನೀರಿನಲ್ಲಿ ಒಂದು ಪುಟ್ಟ ಮೀನು ರಾಜನ ಬೊಗಸೆಗೆ ಬರಲು  ರಾಜನು ಅದನ್ನು ಕೂಡಲೆ ತನ್ನ ಕಮಂಡಲದಲ್ಲಿ ಇಟ್ಟು ರಕ್ಷಿಸುತ್ತಾನೆ.  ಒಂದು ಹಗಲಿನಲ್ಲಿ ಮೀನು ಕಮಂಡಲುವಿಗಿಂತ ದೊಡ್ಡದಾಗಿ ಬೆಳೆದು ರಕ್ಷಿಸೆಂದು ರಾಜನನ್ನು ಕೇಳುತ್ತದೆ.  ರಾಜನು ಆ ಮೀನಿನ ಮರಿಯನ್ನು ನೀರು ತುಂಬುವ ಹಂಡೆಯಲ್ಲಿ ಇಡಲು, ಹಂಡೆಯಲ್ಲಿ ನಂತರ ಕೊಳಗದಲ್ಲಿ, ಬಾವಿಯಲ್ಲಿ, ಕೆರೆಯಲ್ಲಿ, ದೊಡ್ಡ ಸರೋವರ, ಗಂಗಾನದಿ ಎಲ್ಲವನ್ನೂ ಮೀರಿ ಅತಿಶಯವಾಗಿ ಬೆಳೆದ ಮೀನನ್ನು ಸತ್ಯವ್ರತ ರಾಜನು ಸಾಗರಕ್ಕೇ ತಂದು ಬಿಡುತ್ತಾನೆ.  ಅಚ್ಚರಿಯಿಂದ  ಈ ಪರಿ ಬೆಳೆಯುವ ಸಾಮರ್ಥ್ಯ ಭಗವಂತನಿಗಲ್ಲದೇ ಬೇರೆ ಯಾರಿಗೂ ಇರಲಾಗದೆಂದು ಪ್ರಾರ್ಥಿಸಲು  ಭಗವಂತನು ಕೆಲವು ದಿನಗಳಲ್ಲಿ ಘಟಿಸುವ ಕಲ್ಪ ಪ್ರಳಯದಲ್ಲಿ ಸಮಸ್ತವೂ ಜಲಾವೃತವಾದಾಗ, ತಾನು ಒಂದು ನಾವೆಯನ್ನು ಕಳುಹಿಸುವೆನೆಂದು ತಿಳಿಸುತ್ತಾನೆ.  ಆ ನಾವೆಯಲ್ಲಿ ಜೀವರಾಶಿಯ ಬೀಜಗಳನ್ನೂ, ಔಷಧಿ ವನಸ್ಪತಿಗಳನ್ನೂ ಇಟ್ಟು, ಸತ್ಯವ್ರತ ರಾಜನೂ ಆ ನೌಕೆಯಲ್ಲಿ ಹತ್ತಿದಾಗ, ತಾನು ಸತ್ಯವ್ರತನಿಗೆ ಪ್ರಳಯ ಜಲದಲ್ಲಿ ತೇಲಾಡಿಸಿ, ತಿರುಗಾಡಿಸುವೆನೆಂದು ಅಭಯವೀಯುತ್ತಾನೆ.  ಸತ್ಯವ್ರತನು ಪ್ರಳಯ ಕಾಲದಲ್ಲಿ ತೇಲಿ ಬಂದ ನೌಕೆಯಲ್ಲಿ ಭಗವಂತನ ಆದೇಶದಂತೆಯೇ  ಮಾಡಿ,  ಹಗ್ಗವಾಗಿ ಹರಿದು ಬಂದ ಆದಿಶೇಷನನ್ನು ನೌಕೆಗೆ ಕಟ್ಟಿ ಇನ್ನೊಂದು ತುದಿಯನ್ನು ಭಗವಂತನಾದ ಮತ್ಸ್ಯದ ಕೊಂಬಿಗೆ ಕಟ್ಟುತ್ತಾನೆ.  ಪ್ರಳಯ ಜಲದಿಂದ ಭಗವಂತನು ಸತ್ಯವ್ರತ ರಾಜನನ್ನೂ, ನೌಕೆಯನ್ನೂ ರಕ್ಷಿಸಿ, ಪ್ರಳಯ ಜಲದಲ್ಲಿ ತೇಲಾಡಿಸುತ್ತಾ ತತ್ತ್ವೋಪದೇಶವನ್ನೂ ನೀಡುತ್ತಾನೆ.  ಭಗವಂತನ ಈ ಜ್ಞಾನೋಪದೇಶವೇ ಮತ್ಸ್ಯಪುರಾಣವಾಗಿದೆ.  ಭಗವಂತ ಸತ್ಯವ್ರತ ರಾಜನಿಗೆ ಮಾತ್ರವೇ ಉಪದೇಶ ಮಾಡಲಿಲ್ಲ.  ವೈವಸ್ವತ ಮನ್ವಂತರದಲ್ಲಿ ಮನುವಾಗುವ ಸತ್ಯವ್ರತ ರಾಜನ ಮೂಲಕ ಮುಂದಿನ ಪೀಳಿಗೆಗೆ ಕೊಟ್ಟ ಉಪದೇಶವಾಗಿದೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋದ್ಯಾಯದಲ್ಲಿ ಭಗವಂತನ ದಶಾವತಾರವನ್ನು ವರ್ಣಿಸಿದ್ದಾರೆ.  ಮತ್ಸ್ಯಾವತಾರವನ್ನು ಕುರಿತು "ಮತ್ಸ್ಯಕರೂಪ ಲಯೋದವಿಹಾರಿನ್ ವೇದವಿನೇತ್ರ ಚತುರ್ಮುಖ ವಂದ್ಯ - ಪ್ರಳಯ ಜಲದಲ್ಲಿ ವಿಹರಿಸುತ್ತಿರುವ, ಬ್ರಹ್ಮದೇವರಿಂದ ಸ್ತುತ್ಯನಾದ, ವೇದ ಪ್ರವರ್ತಕನಾದ, ಮತ್ಸ್ಯರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಪ್ರಚಲಿತ ಲಯಜಲವಿಹರಣ ಶಾಶ್ವತ ಸುಖಮಯಮೀನ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮರಮಾರಮಣ || - ಪ್ರಲಯ ಜಲದಲ್ಲಿ ಕ್ರೀಡಿಸುತ್ತಿರುವ ನಿತ್ಯ ಸತ್ಯನಾದ, ಸುಖ ಸ್ವರೂಪಿಯಾದ, ಮತ್ಸ್ಯಾವತಾರಿಯಾದ, ಬ್ರಹ್ಮತತ್ವ ಸ್ವರೂಪನಾದ, ಜ್ಞಾನಪ್ರದ ರಮಣೀಯ ಕಥೆಗಳಿಗೆ ಆಶ್ರಯನಾದವನೂ ಸದಾ ಪ್ರಕಾಶಕನೂ, ಜಗತ್ತಿನ ಅಸ್ತಿತ್ವಕ್ಕೆ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀ ಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದೂ ಸ್ತುತಿಸಿದ್ದಾರೆ.


ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋದ್ಯಾಯದಲ್ಲಿ ಭಗವಂತನ ದಶಾವತಾರವನ್ನು ವರ್ಣಿಸಿದ್ದಾರೆ.  ಮತ್ಸ್ಯಾವತಾರವನ್ನು ಕುರಿತು "ಮತ್ಸ್ಯಕರೂಪ ಲಯೋದವಿಹಾರಿನ್ ವೇದವಿನೇತ್ರ ಚತುರ್ಮುಖ ವಂದ್ಯ - ಪ್ರಳಯ ಜಲದಲ್ಲಿ ವಿಹರಿಸುತ್ತಿರುವ, ಬ್ರಹ್ಮದೇವರಿಂದ ಸ್ತುತ್ಯನಾದ, ವೇದ ಪ್ರವರ್ತಕನಾದ, ಮತ್ಸ್ಯರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಪ್ರಚಲಿತ ಲಯಜಲವಿಹರಣ ಶಾಶ್ವತ ಸುಖಮಯಮೀನ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕಕಾರಣ ರಾಮರಮಾರಮಣ || - ಪ್ರಲಯ ಜಲದಲ್ಲಿ ಕ್ರೀಡಿಸುತ್ತಿರುವ ನಿತ್ಯ ಸತ್ಯನಾದ, ಸುಖ ಸ್ವರೂಪಿಯಾದ, ಮತ್ಸ್ಯಾವತಾರಿಯಾದ, ಬ್ರಹ್ಮತತ್ವ ಸ್ವರೂಪನಾದ, ಜ್ಞಾನಪ್ರದ ರಮಣೀಯ ಕಥೆಗಳಿಗೆ ಆಶ್ರಯನಾದವನೂ ಸದಾ ಪ್ರಕಾಶಕನೂ, ಜಗತ್ತಿನ ಅಸ್ತಿತ್ವಕ್ಕೆ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀ ಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದೂ ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಮತ್ಸ್ಯಾವತಾರವನ್ನು

ಪ್ರೋಷ್ಠೀಶವಿಗ್ರಹ ಸುನಿಷ್ಟೀವನೋದ್ಧತ ವಿಶಿಷ್ಟಾಂಬುಚಾರಿ ಜಲಧೇ
ಕೋಷ್ಠಾಂತರಾಹಿತ ವಿಚೇಷ್ಟಾಗಮೌಘ ಪರಮೇಷ್ಠೀಡಿತ ತ್ವಮವ ಮಾಮ್ |
ಪ್ರೇಷ್ಠಾರ್ಕಸೂನುಮನು ಚೇಷ್ಟಾರ್ಥಮಾತ್ಮವಿದತೀಷ್ಟೋ ಯುಗಾಂತಸಮಯೇ
ಸ್ಥೇಷ್ಟಾತ್ಮಶೃಂಗಧೃತ ಕಾಷ್ಟಾಂಬುವಾಹನ ವರಾಷ್ಟಾಪದಪ್ರಭತನೋ || - ಪ್ರಳಯ ಕಾಲದಲ್ಲಿ ಶ್ರೇಷ್ಠವಾದ ಮತ್ಸ್ಯಶರೀರಧಾರಿಯಾಗಿ, ವಿಶಿಷ್ಟವಾದ ತಿಮಿಂಗಿಲಾದಿ ದೊಡ್ಡ ಪ್ರಾಣಿಗಳುಳ್ಳ ಸಾಗರವನ್ನು ಬಾಯಿಯಿಂದೊಮ್ಮೆ ಥೂತ್ಕರಿಸಿ ಉಕ್ಕೇರುವಂತೆ ಮಾಡಿದ, ಉದರಾಂತರ್ಗತದಲ್ಲಿ ಸಮಸ್ತ ವೇದಗಳನ್ನು ಹೊಂದಿರುವ, ಬ್ರಹ್ಮದೇವರಿಂದ ವಂದಿಸಲ್ಪಡುವ, ಅತಿ ದೃಢವಾದ ತನ್ನ ಕೊಂಬಿನಲ್ಲಿ ಮರದ ಶ್ರೇಷ್ಠ ನೌಕೆಯನ್ನು ರಚಿಸಿ, ಆ ನೌಕೆಯಲ್ಲಿ ಮುಂದಿನ ಸೃಷ್ಟಿಗೆ ಅವಶ್ಯಕವಾಗಿರುವ ಬೀಜರೂಪದ ಜೀವರಾಶಿಗಳನ್ನೂ, ಮುಂದೆ ವೈವಸ್ವತ ಮನ್ವಂತರದಲ್ಲಿ ಮನುವಾಗಿ ಬರಬೇಕಾಗಿದ್ದ ರಾಜಾ ಸತ್ಯವ್ರತನ್ನೂ ಕುಳ್ಳಿರಿಸಿಕೊಂಡು, ತತ್ತ್ವೋಪದೇಶ ಮಾಡಿದ, ಚಿನ್ನದಂತೆ ಹೊಳೆಯುವ ಶರೀರವುಳ್ಳ, ಬ್ರಹ್ಮ ಜ್ಞಾನಿಗಳಿಗೆ ಅತಿಪ್ರಿಯನಾದ ಮತ್ಸ್ಯರೂಪಿಯಾದ ಭಗವಂತನೇ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿ ದಶಾವತಾರದ ವರ್ಣನೆಯನ್ನು ಮಾಡಿದ್ದಾನೆ.  ಮತ್ಸ್ಯಾವತಾರವನ್ನು
ಪ್ರಲಯಪಯೋಧಿಜಲೇ ಧೃತವಾನಸಿ ವೇದಂ
ವಿಹಿತವಹಿತ್ರ ಚರಿತ್ರಮಖೇದಂ
ಕೇಶವ ಧೃತ ಮೀನ ಶರೀರ ಜಯ ಜಗದೀಶ ಹರೇ || ಪ್ರಲಯ ಸಮುದ್ರದ ಜಲದಲ್ಲಿ ವೇದ ರಕ್ಷಕನಾಗಿ ಅವತರಿಸಿದ ಧೃತ (ಧರಿಸಿದ) ಮೀನಿನ ಶರೀರದ ಕೇಶವನೇ, ಜಗದೀಶನೇ ನಿನಗೆ ಜಯ ಜಯವು ಎಂದು ಸ್ತುತಿಸಿದ್ದಾರೆ. 

ಭಗವಂತನ ದಶಾವತಾರಗಳಿಗೂ ಮನು ಕುಲಕ್ಕೂ ಅತ್ಯಂತ ಸಮೀಪದ ಹೋಲಿಕೆ ಇದೆ.  ನೀರಿನಿಂದ ಜೀವ ಚೈತನ್ಯದ ಉತ್ಪನ್ನವಾಯಿತೆಂಬುದರ ಸಂಕೇತ ಮತ್ಸ್ಯಾವತಾರವಾಗಿದೆ. ಭಗವಂತನು ಮತ್ಸ್ಯಾವತಾರಿಯಾಗಿ ಬಂದು ಬ್ರಹ್ಮಾಂಡವನ್ನು ಒಂದು ಪುಟ್ಟ ನೌಕೆಯನ್ನಾಗಿಸಿ, ಅದರೊಳಗೆ ಅನಾದಿಯಾದ ಜೀವರಾಶಿಯನ್ನು ಬೀಜರೂಪದಲ್ಲಿ ರಕ್ಷಿಸಿದಾಗ ನೌಕೆ ಪ್ರಳಯ ಜಲದಲ್ಲಿ ತೇಲಿತು ಮತ್ತು ಮುಂದೆ ಅದರಲ್ಲಿ ಸಂರಕ್ಷಿಸಲ್ಪಟ್ಟ ಬೀಜರೂಪದ ಜೀವರಾಶಿಯಿಂದಲೇ ಭಗವಂತನಿಂದ ಸೃಷ್ಟಿ ಪ್ರಾರಂಭವಾಯಿತು.  ನಮ್ಮ ಪ್ರಸ್ತುತ ಜೀವನದಲ್ಲಿಯೂ ಮತ್ಸ್ಯಾವತಾರವನ್ನು ಹೋಲಿಸಿಕೊಂಡು ನಮಗೆ ನಾವೇ ವಿಶ್ಲೇಷಣೆ ಮಾಡಿಕೊಳ್ಳಬಹುದು.  ಲೌಕಿಕದಲ್ಲಿ ನಮ್ಮ ಕರ್ಮಕ್ಕನುಗುಣವಾಗಿ ಅಸಂಖ್ಯ ಸಮಸ್ಯೆಗಳನ್ನು ತಂದಿರುತ್ತೇವೆ.  ಸಮಸ್ಯೆಯ ಸಾಗರದಲ್ಲಿ ನಾವು ಸಿಕ್ಕಿಕೊಂಡಾಗ, ನಮ್ಮ ಅಂತರಂಗದಲ್ಲಿ ದುಃಖ ಹಾಗೂ ಪ್ರಳಯದ ಜಲವೇ ತುಂಬಿಕೊಂಡಿರುವಾಗ ಭಗವಂತನ ಧ್ಯಾನವನ್ನು ಮಾಡಬೇಕು.  ಬರೀ ಕತ್ತಲು ತುಂಬಿರುವ ಅಂತರಂಗದಲ್ಲಿ, ಮುಳುಗದೆ ತೇಲುವ ಅವಕಾಶವನ್ನು ಭಗವಂತ ನಮ್ಮ ಅಂತಃಸತ್ವದಲ್ಲಿ ಬೆಳಕಿನ ಕಿರಣದ ಮೂಲಕ ಪರಿಹಾರವನ್ನು ಕೊಡುತ್ತಾನೆ.  "ಸಂಕಟ ಬಂದಾಗ ವೆಂಕಟರಮಣ"ನೆನ್ನದೆ "ಸಂತತಂ ಚಿಂತಯೇ ಅನಂತಂ ಅಂತ್ಯಕಾಲೇ ವಿಶೇಷತಃ" ಎಂಬ ಮಾತನ್ನು ಅನ್ವಯಿಸಿಕೊಳ್ಳುತ್ತಾ ಪ್ರಾರ್ಥಿಸಿದಾಗ ನಮ್ಮ ಸಮಸ್ಯೆಗಳಿಗೆ ನಮ್ಮೊಳಗಿನಿಂದಲೇ ಉತ್ತರವೂ ಸಿಕ್ಕುತ್ತದೆ ಎಂಬುದನ್ನು ಮತ್ಸ್ಯಾವತಾರವು ಬಿಂಬಿಸುತ್ತದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೧೮ನೆಯ ಪದ್ಯದಲ್ಲಿ "ಕರ್ಣದಲಿ ಇಪ್ಪನು ವಿಷ್ಣುನಾಮಕ ಶ್ರವಣನೆಂದೆನಿಸಿ" ಎಂದಿದ್ದಾರೆ.  ಕಿವಿಗಳಲ್ಲಿ ನೆಲೆಸಿರುವ ದಿಗ್ದೇವತೆಗಳಿಗೆ ವಿಷ್ಣುನಾಮಕ ಪರಮಾತ್ಮನು ಅಭಿಮಾನಿ ದೇವತೆಯಾಗಿದ್ದಾನೆ .  ಮುಂದುವರೆಯುತ್ತಾ ೩೪ನೆಯ ಪದ್ಯದಲ್ಲಿ ಕೂಡ ಶ್ರವಣಗಳಲ್ಲಿ ಮತ್ಸ್ಯರೂಪಿ ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಮತ್ಸ್ಯಾವತಾರವೆತ್ತಿದಾಗ ಲಕ್ಷ್ಮೀದೇವಿಯು ವೇದ ರೂಪಿಯಾಗಿ ಇರುತ್ತಾಳೆ ಎಂದಿದ್ದಾರೆ.

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿಯೂ ದಶಾವತಾರದ ವರ್ಣನೆ ಮಾಡಿದ್ದಾರೆ.  ಮತ್ಸ್ಯಾವತಾರವನ್ನು
ವೇದತತಿಗಳನು; ಕದ್ದೊಯ್ದವನ ಕೊಂದು ಪ್ರಳ-
ಯೋದಧಿ-ಯೊಳಗೆ ಚರಿಸಿ-ದಿ | ಚರಿಸಿ ವೈವಸ್ವತನ
ಕಾಯ್ದ ಮಹಮಹಿಮ ದಯವಾಗೋ || - ವೇದಗಳನ್ನು ಕದ್ದೊಯ್ದಿದ್ದ ಹಯಗ್ರೀವಾಸುರನೆಂಬ ದೈತ್ಯನನ್ನು ಕೊಂದು, ಪ್ರಳಯೋದಕದಲ್ಲಿ ಚರಿಸಿದ, ವಿಹರಿಸಿದ ಭಗವಂತನು ಚಾಕ್ಷುಷ ಮನ್ವಂತರದ ಪ್ರಳಯೋದಕದಲ್ಲಿ ಪುನಃ ಸಂಚಾರ ಮಾಡಿ ವೈವಸ್ವತನನ್ನು ಕಾಪಾಡಿದ ಅದ್ಭುತ ಮಹಿಮನಾದ ಹೇ ಮತ್ಸ್ಯ ಕೃಪೆಮಾಡು ಎನ್ನುತ್ತಾರೆ.
 


ಭಗವಂತನ ಮತ್ಸ್ಯಾವತಾರ ದೇವಸ್ಥಾನದ ಕೊಂಡಿ
http://en.m.wikipedia.org/wiki/Nagalapuram#Vedanarayana_Swamy_Temple
ಚಿತ್ರಕೃಪೆ : ಅಂತರ್ಜಾಲ