Thursday, March 14, 2013

ಕರುಣಾ ಸಂಧಿ - ೮ನೇ ಪದ್ಯಜಗವನೆಲ್ಲವ ನಿರ್ಮಿಸುವ ನಾ |
ಲ್ಮೊಗನೊಳಗೆ ತಾನಿದ್ದು ಸಲಹುವ |
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ ||
ಸ್ವಗತ ಭೇದವಿವರ್ಜಿತನು ಸ |
ರ್ವಗ ಸದಾನಂದೈಕ ದೇಹನು |
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ  ||೮||

ಪ್ರತಿಪದಾರ್ಥ : ಜಗವನೆಲ್ಲವ ನಿರ್ಮಿಸುವ - ಜಗತ್ತನ್ನು ಸೃಷ್ಟಿ ಮಾಡುವ, ನಾಲ್ಮೊಗನೊಳಗೆ - ಚತುರ್ಮುಖ ಬ್ರಹ್ಮದೇವರಲ್ಲಿ ಅಂತರ್ಗತನಾಗಿದ್ದು, ತಾನಿದ್ದು ಸಲಹುವ - ಭಗವಂತ ತಾನೇ ಇದ್ದು ಸಲಹುವನು, ಗಗನಕೇಶನೊಳಿದ್ದು - ಗಂಗೆಗಾಗಿ ತನ್ನ ಕೇಶವನ್ನು ಕೆದರಿ ನಿಂತು ವ್ಯೋಮಕೇಶನೆನಿಸಿಕೊಂಡ ರುದ್ರದೇವರಲ್ಲಿ ಅಂತರ್ಗತನಾಗಿದ್ದು, ಸಂಹರಿಸುವನು - ಲೋಕಗಳ ಸಂಹಾರ ಅಥವಾ ಲಯವನ್ನು ಮಾಡುವನು, ಸ್ವಗತ ಭೇದ ವಿವರ್ಜಿತನು - ಸ್ವ ಎಂದರೆ ತನ್ನ ಶರೀರದಲ್ಲಿ ಗತ ಎಂದರೆ ಇರುವ ಉಗುರು ಕೂದಲು ಮುಂತಾದ ಅವಯವಗಳಿಗೂ ಅನಂತ ಅವತಾರಗಳಿಗೂ ಅಂತರ್ಯಾಮಿ ರೂಪಗಳಲ್ಲಿಯೂ, ಭೇದ ವಿವರ್ಜಿತನು ಎಂದರೆ ಯಾವ ವ್ಯತ್ಯಾಸವೂ ಇಲ್ಲದಂತಹವನು, ಸರ್ವ ಅವಯವಗಳೂ ಪರಿಪೂರ್ಣನಾಗಿರುವವನು ಎಂದರ್ಥ, ಸರ್ವಗ - ಸರ್ವತ್ರನಾಗಿ ವ್ಯಾಪ್ತನಾಗಿರುವವನು ಎಲ್ಲೆಡೆಯೂ ಇರುವವನು, ಸದಾನಂದೈಕ ದೇಹನು - ಸರ್ವಕಾಲದಲ್ಲಿಯೂ ಆನಂದಮಯವಾದ ದೇಹವುಳ್ಳಂಥವನು, ಬಗೆಬಗೆಯ ನಾಮದಲಿ ಕರೆಸುವ - ಅನೇಕ ವಿಧವಾದ ಸ್ವರ ವರ್ಣ ನಾದ ಹಾಗೂ ವೈದಿಕ ಲೌಕಿಕ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುವವನು, ಭಕುತರನು ಪೊರೆವ - ನಂಬಿ ಕರೆದ ಭಕುತರನು ಸದಾ ರಕ್ಷಿಸುವವನು.
ಸರ್ವ ಸ್ವಾಮಿಯಾದ ಪರಮಾತ್ಮ ಇಡೀ ಜಗತ್ತಿನ ನಿರ್ಮಾಪಕ, ನಿರ್ದೇಶಕನೂ ಅವನೇ.  ತನ್ನ ಮುಖ್ಯ ಭಕ್ತರುಗಳಿಂದ ಜಗತ್ತನ್ನು ಕಾಪಾಡಿಸುವವನೂ ಅವನೇ, ಹೇಗೆಂದರೆ ಬ್ರಹ್ಮನಲ್ಲಿದ್ದು ಜಗತ್ತು ಸೃಷ್ಟಿಮಾಡಿ, ಸೃಷ್ಟಿಕರ್ತನೆಂಬ ಬಿರುದು ಬ್ರಹ್ಮನಿಗೆ ಕೊಡುತ್ತಾನೆ.  ಗಗನಕೇಶಿಯಾದ ರುದ್ರನಲ್ಲಿದ್ದು ಜಗತ್ತನ್ನು ಸಂಹರಿಸಿ ಲಯಕಾರಿಯೆಂಬ ಬಿರುದನ್ನು ರುದ್ರನಿಗೆ ಕೊಡುತ್ತಾನೆ  ಸ್ವತಃ ಪರಮಾತ್ಮನು ತಾನೇ ಸ್ಥಿತಿ ಕಾರಣನಾಗಿದ್ದಾನೆ.  ಈ ಜಗತ್ಪತಿಗೆ ಸೃಷ್ಟಿ, ಸ್ಥಿತಿ, ಲಯ ಯಾವುದೂ ಬೇಕಿಲ್ಲ.  ಎಲ್ಲವೂ ಜೀವಿಗಳಿಗಾಗಿ ಮಾಡುವ ಉಪಕಾರ.  ಸ್ವಗತ ಭೇದ ವಿವರ್ಜಿತನು ಭಗವಂತ - ಅಂದರೆ ತನ್ನಲ್ಲಿರುವ ಪ್ರತ್ಯಂಗದಲ್ಲೂ ಸರ್ವಶಕ್ತಿ ಉಳ್ಳವನು ಮತ್ತು ಪರಿಪೂರ್ಣ.  ಸದಾನಂದೈಕ ದೇಹ ಮತ್ತು ಸರ್ವನಾಮಕ್ಕೂ ಅಧಿಕಾರಿ.  ದಾಸರ ಒಂದು ಉಗಾಭೋಗದಲ್ಲಿ "ಯಾರು ವಂದಿಸಿದರೂ, ನಿಂದಿಸಿದರೂ, ಶಪಿಸಿದರೂ, ಕೋಪಿಸಿದರೂ, ಮಾತಾಡದಿದ್ದರೂ ಕೂಡ ಜಗನ್ನಾಥ ವಿಠಲನ ಕಾರುಣ್ಯ ಪಾತ್ರರ ಕರುಣ ಎನ್ನೊಳಗಿರಲಿ" ಎಂದು ಕರುಣಾ ಮೂರ್ತಿಯನ್ನು ಬೇಡಿಕೊಳ್ಳುತ್ತಿದ್ದಾರೆ.

ವಿಷ್ಣು ಸಹಸ್ರನಾಮ ಪ್ರಾರಂಭವಾಗುವುದೇ " ಓಂ ವಿಶ್ವಸ್ಮೈ ನಮಃ " ಎಂದು.  ಇಲ್ಲಿ ಓಂ ಎಂದರೆ ಪರಮಾತ್ಮ, ಅವನೊಬ್ಬನೇ ಒಬ್ಬನಾಗಿದ್ದು ತನ್ನ ಮಹಿಮೆಯಿಂದ ಸೃಷ್ಟಿಸಬೇಕೆಂದು ಸಂಕಲ್ಪಿಸಿಕೊಂಡು ಏನೇನನ್ನು ಸೃಷ್ಟಿ ಮಾಡಿದನೋ ಅದರೊಳಗೆಲ್ಲಾ ತಾನೇ ಪ್ರವೇಶ ಮಾಡಿ, ತಾನೇ ಸೃಷ್ಟಿಸಿದ ಅತಿಶಯವನ್ನು ’ವಿಶ್ವ’ ಎಂದು ಕರೆದ.  ಎಲ್ಲದರ ಒಳ ಹೊರಗೂ ತಾನೇ ತಾನಾಗಿ ವ್ಯಾಪಿಸಿರುವವನು ಪರಿಪೂರ್ಣನಾದ ಭಗವಂತನು, ಆದ್ದರಿಂದಲೇ ಅವನೇ ವಿಶ್ವ.  ಅವನೇ ಸೃಷ್ಟಿಸಿದ ಬ್ರಹ್ಮನಲ್ಲಿ ತಾನೇ ನಿಂತು ಜಗತ್ತನ್ನು ಸೃಷ್ಟಿ ಮಾಡಿ, ಹಾಗೆ ಸೃಷ್ಟಿಸಿದ ಎಲ್ಲದರಲ್ಲೂ ತಾನೇ ನೆಲೆಸಿ, ಸೃಷ್ಟಿಕರ್ತನೆಂಬ ಬಿರುದನ್ನು ಬ್ರಹ್ಮದೇವರಿಗೆ ದಯಪಾಲಿಸಿ, ಎಲ್ಲರನ್ನೂ, ಎಲ್ಲವನ್ನೂ ಸಲಹುವವನು ಭಗವಂತ.  ಗಂಗೆಯ ಆಗಮನಕ್ಕಾಗಿ ತನ್ನ ತಲೆಕೂದಲನ್ನು ಕೆದರಿ ನಿಂತ ರುದ್ರದೇವರ ಒಳಗೆ ಕೂಡ ತಾನೇ ಇದ್ದು ಲೋಕದ ಲಯ ಕಾರ್ಯಗಳನ್ನು ತಾನೇ ಮಾಡಿ, ರುದ್ರ ದೇವರಿಂದ ಮಾಡಿಸಿ ಪೊರೆಯುವವನು ಭಗವಂತ.
ಸ್ವಗತ ಭೇದ ವಿವರ್ಜಿತ - ಭಗವಂತನ ಒಂದು ಅವಯವಕ್ಕೂ, ಮತ್ತೊಂದು ಅವಯವಕ್ಕೂ ಯಾವುದೇ ಭೇದ ಅಥವಾ ವ್ಯತ್ಯಾಸವಿಲ್ಲ.  ಒಂದು ಅವಯವದ ಕಾರ್ಯವನ್ನು ಮತ್ತೊಂದು ಅವಯವವು ಮಾಡಬಲ್ಲದಾಗಿದೆ. ಭಗವಂತನ ಅವಯವಗಳೆಲ್ಲವೂ ಪರಿಪೂರ್ಣವೇ.  ಅಂದರೆ ಅವನ ಎಲ್ಲ ಇಂದ್ರಿಯಗಳಿಗೂ ಮತ್ತೆಲ್ಲಾ ಇಂದ್ರಿಯಗಳ ಸಾಮರ್ಥ್ಯವೂ ಇದೆ.  ಅವನ ಗುಣಗಳಲ್ಲೂ ಯಾವ ಭೇದವೂ ಇಲ್ಲ.  ಒಂದೊಂದು ಗುಣದಲ್ಲೂ ಅವನ ಮತ್ತೆಲ್ಲಾ ಗುಣಗಳ ವಿಶೇಷಗಳನ್ನೂ ಕಾಣಬಹುದು.  ಪ್ರತಿಯೊಂದು ಅಣುವಿನಲ್ಲಿಯೂ ಭಗವಂತ ಇದ್ದಾನೆ. ಕೊಳಕಿನಲ್ಲಿ ಹೊರಳಾಡುವ ಕ್ರಿಮಿಯಲ್ಲೂ ದೇವರಿದ್ದಾನೆ, ಆದರೆ ಅವನು ಕೊಳಕಲ್ಲ.  ಭಗವಂತ ಯಾವುದೇ ಪದಾರ್ಥದ ಒಳಗಿದ್ದರೂ ಅವನು ಮಾತ್ರ ಚಿನ್ಮಯರೂಪನೇ ಆಗಿದ್ದಾನೆ.  ಅವನಿಗೆ ಯಾವ ವಿಕಾರವೂ ಇಲ್ಲವೇ ಇಲ್ಲ.  ಅವನ ಅವತಾರಗಳಿಗೂ, ಸರ್ವರಲ್ಲಿ ಅಂತರ್ಯಾಮಿಯಾಗಿರುವ ರೂಪಕ್ಕೂ ಯಾವುದೇ ವ್ಯತ್ಯಾಸವಿಲ್ಲ.  ಭಗವಂತ   ಸರ್ವಸಂಪೂರ್ಣನು.  ಗಾಳಿ, ಆಕಾಶಗಳು ಹೇಗೆ ಎಲ್ಲ ಕಡೆಯೂ ಇದ್ದೂ ನಿರ್ವಿಕಾರವೋ.. ಹಾಗೇ ಭಗವಂತನ ಧ್ಯಾನವೊಂದನ್ನು ಬಿಟ್ಟು, ಬೇರೆಲ್ಲಾ ಪ್ರಾಪಂಚಿಕ ವಿಷಯಗಳಿಗೆ ನಾವೂ ನಿರ್ವಿಕಾರರಾಗಬೇಕು. 

ಬಗೆಬಗೆಯ ನಾಮದಲಿ ಕರೆಸುವ - ಸ್ವರಗಳ, ವರ್ಣಗಳ, ಧ್ವನಿಗೆ ಸಂಬಂಧಿಸಿದ ವೈದಿಕ, ಲೌಕಿಕ ಇತ್ಯಾದಿ ಬಗೆಬಗೆಯ ಹೆಸರುಗಳಿಂದ ಕರೆಯಿಸಿಕೊಳ್ಳಲ್ಪಡುವವನು.  ಹರಿನಾಮಗಳೆಂದರೆ ಬರಿಯ ನಾಮಗಳಲ್ಲ, ಅವು ಅನ್ವರ್ಥ ನಾಮಗಳು. ಕೇವಲ ವ್ಯಕ್ತಿವಾಚಕಗಳಲ್ಲ, ಗುಣಗಳನ್ನೂ ಹೇಳುವಂತಹವು.  ಶ್ರೀಹರಿ ಅನಂತ ಗುಣಸಾಗರ, ಅವನ ಗುಣಗಳನ್ನು ಹೇಳಲು ಎಷ್ಟು ಶಬ್ದಗಳಿದ್ದರೂ ಸಾಲದೇ ಸಾಲದು.  ನಾಮಗಳು ಹರಿಯ ಗುಣಗಳನ್ನು ತಿಳಿಸಿಕೊಡುವ ರೀತಿ ಮಾತ್ರ ಅನೇಕ ಬಗೆಯದಾಗಿವೆ.  ಭಕ್ತರು ತನ್ನನ್ನು ಪ್ರೀತಿಯಿಂದ ಯಾವುದೇ ನಾಮದಲ್ಲಿ ಕರೆದರೂ ಕೂಡ, ಓಗೊಟ್ಟು, ಧಾವಿಸಿ ಬಂದು ಭಕುತರನ್ನು ಪೊರೆಯುವವನು ಭಗವಂತ.  " ಏಕ ರೂಪಃ  ಪರೋ  ವಿಷ್ಣುಃ ಸರ್ವತ್ರಾಪಿ ನ ಸಂಶಯಃ "  ಎಂಬ ಮತ್ಸ್ಯ ಪುರಾಣದ ಮಾತು -  ಯಾವುದೇ ರೂಪದಲ್ಲಿದ್ದರೂ ಯಾವುದೇ ಹೆಸರಿನಿಂದ ಉಪಾಸಿಸಲ್ಪಟ್ಟರೂ ಹರಿಯು ಸರ್ವವ್ಯಾಪಿಯಾಗಿರುವುದರಿಂದ ಅವನು "ವಿಷ್ಣು"ವೇ. ಉಪನಿಷತ್ತಿನಲ್ಲಿ ತಿಳಿಸಿರುವಂತೆ ಭಗವಂತ ಎಲ್ಲಾ ಶಬ್ದಗಳಲ್ಲೂ ಇದ್ದಾನೆ.  ದೋಷಗಳನ್ನು ಹೇಳುವ ಶಬ್ದಗಳಲ್ಲೂ, ಅವಗುಣಗಳನ್ನು ಹೇಳುವ ಶಬ್ದಗಳಲ್ಲೂ, ಎಲ್ಲದರಲ್ಲೂ ಭಗವಂತ ಇದ್ದಾನೆ.  ಯಾವುದೇ ಒಂದು ಶಬ್ದ ಬಳಕೆಯಾದರೆ, ಅದರ ಗುಣ ವಿಶೇಷ, ಬಳಕೆ ಮಾಡಿದ ಆ ವ್ಯಕ್ತಿಯಲ್ಲಿರುವುದು.  ಹಾಗಾಗಿ ನಾವು  ಶಬ್ದಗಳನ್ನು ಜಾಗ್ರತೆಯಾಗಿ ಬಳಸಬೇಕು.  

ಸರ್ವಗ ಸದಾನಂದೈಕ ದೇಹನು - ಪರಮಾತ್ಮನು ಸದಾ ಸರ್ವದ ಆನಂದವನ್ನೇ ಅನುಭವಿಸುವ ಶರೀರವುಳ್ಳವನು (ಜ್ಞಾನಾದಂದ ಸ್ವರೂಪನು).  ಸರ್ವಗ ಎಂದರೆ ಸರ್ವ ಕಡೆಯಲ್ಲೂ ವ್ಯಾಪಿಸಿರುವವನು ಏಕೆಂದರೆ ಭಗವಂತ ಭಕ್ತರ ರಕ್ಷಣೆಗೆ ’ಕಣ್ಣಿಗೆವೆಯಂದದಲಿ’ ಬಂದೊದಗುವವನು.  ಶ್ರೀ ಪುರಂದರ ದಾಸರು "ಅಣುರೇಣು ತೃಣಕಾಷ್ಠ ಪರಿಪೂರ್ಣ ಗೋವಿಂದ" ಎನ್ನುತ್ತಾ ಹರಿಯ ವ್ಯಾಪ್ತಿಯನ್ನು ಸರಳವಾಗಿ ತಿಳಿಸಿದ್ದಾರೆ. ಸರ್ವ ಶ್ರೇಷ್ಠನು.  ಭಕ್ತಿಯೆಂದರೆ ತನಗಿಂತ ಉತ್ತಮನಾದ ವ್ಯಕ್ತಿಯಲ್ಲಿ ತನ್ನನ್ನೇ ಅರ್ಪಿಸಿಕೊಂಡು ಬಿಡುವುದು, ಅವನನ್ನು ಯಾವುದೇ ನಿರ್ಬಂಧವಿಲ್ಲದಂತೆ ಪ್ರೇಮಿಸುವುದೇ ಭಕ್ತಿ.

ಬ್ರಹ್ಮನಲ್ಲಿ ಬ್ರಹ್ಮನೆಂಬ ರೂಪದ ನಾರಾಯಣ ಇದ್ದು ಸೃಷ್ಟಿಕಾರ್ಯ ಮಾಡುತ್ತಾನೆ.  ವಿಷ್ಣುವಿನಲ್ಲಿ ತನ್ನದೇ ರೂಪದಿಂದ ರಕ್ಷಣೆ ಕಾರ್ಯ ಮಾಡುತ್ತಾನೆ ಹಾಗೂ ರುದ್ರನಲ್ಲಿ ರುದ್ರ ರೂಪನಾಗಿ ಸಂಹಾರ ಮಾಡುತ್ತಾನೆ.  ಪ್ರಕೃತಿ ತತ್ವದ ವಿಕಾಸವಾಗುತ್ತಾ ಆಗುತ್ತಾ ಬಂದು ಕೊನೆಗೆ ಪಂಚಭೂತಗಳ ಈ ಬ್ರಹ್ಮಾಂಡ ಸೃಷ್ಟಿಯಾಯಿತು.  ಪ್ರಕೃತಿಗೂ ಹಿಂದೆ ಇನ್ನೂ ಅನೇಕ ತತ್ವಗಳಿವೆ, ಉದಾ.. ಅಹಂಕಾರ ತತ್ವ.  ಇಲ್ಲಿ ಭಗವಂತ ಲಯ ಮಾಡುತ್ತಾನೆಂದರೆ ಅದನ್ನು "ಉಪಸಂಹಾರ" ಎಂದು ಮಾತ್ರ ಅರ್ಥೈಸಿಕೊಳ್ಳಬೇಕು.  ಹೇಗೆಂದರೆ ತಾನೇ ಸೃಷ್ಟಿಸಿದ ಎಲ್ಲವನ್ನೂ ತನ್ನ ಉದರದೊಳಗೇ ಇಟ್ಟುಕೊಂಡು ಪೋಷಿಸುವವನು ಎಂದು.

ಉತ್ಪತ್ತಿಸ್ಥಿತಿಸಂಹಾರಾ ನಿಯತಿರ್ಜ್ಞಾನಮಾವೃತ್ತಿಃ |
ಬಂಧಮೋಕ್ಷೌ ಚ ಪುರುಷಾದ್ ಯಸ್ಮಾತ್ ಸ ಹರಿರೇಕರಾಟ್ || - ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, ಜ್ಞಾನ, ಆವರಣ, ಬಂಧ, ಮೋಕ್ಷ ಈ ಎಂಟನ್ನೂ ಮಾಡುವವ ಸ್ವತಂತ್ರನಾದ ಹರಿಯೇ ಎಂದು ಸ್ಪಷ್ಟವಾಗಿ ಸ್ಕಂದಪುರಾಣದಲ್ಲಿ ತಿಳಿಸಲಾಗಿದೆ (ಆಧಾರ ಗ್ರಂಥ - ಶ್ರೀ ಹಯವದನ ಪುರಾಣಿಕರ ’ಶ್ರೀ ಹರಿಕಥಾಮೃತಸಾರ, ಸಂಗ್ರಹ ಮತ್ತು ಅನುವಾದ ಪುಸ್ತಕ).

ಡಿವಿಜಿಯವರು
ಏಕದಿಂದಲನೇಕ ಮತ್ತನೇಕದಿನೇಕ |
ವೀ ಕ್ರಮವೆ ವಿಶ್ವದಂಗಾಂಗ ಸಂಬಂಧ ||
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ |
ಸಾಕಲ್ಯದರಿವಿರಲಿ - ಮಂಕುತಿಮ್ಮ ||  - ಒಂದೇ ಆಗಿದ್ದ ಬ್ರಹ್ಮವಸ್ತು, ತನ್ನದೇ ಆದ ಬಹುಸ್ಯಾಂ ಎಂಬ ಎಣಿಕೆಯಿಂದ ಎರಡಾಗಿ, ನಾಲ್ಕಾಗಿ, ಅನೇಕವಾಯಿತು.  ಈ ಅನೇಕಗಳೆಲ್ಲವೂ ಕೊನೆಗೆ ಪುನಃ ಅವನೇ.. ಭಗವಂತನನ್ನೇ ಸೇರಿ ಮತ್ತೆ ಒಂದೇ ಆಗಿಬಿಡುವುದು.  ಹೀಗೆ ಆಗುವ ಈ ಕ್ರಮವೇ, ಒಂದು ಅನೇಕವಾಗುವುದು, ಅನೇಕವು ಪುನಃ ಒಂದಾಗುವುದು, ’ಸೃಷ್ಟಿ’ಯ ಕಾರ್ಯ.  ಇದೇ ಇಡೀ ವಿಶ್ವದ ಅಂಗಾಂಗ ಸಂಬಂಧ.  ಇದೇ ಸೃಷ್ಟಿಯ ಎಲ್ಲಾದರಲ್ಲೂ ಇರುವ ಭಗವಂತನ ವ್ಯಾಪ್ತಿ.  "ಅಣುಮಹತ್ತಿನೊಳಿರುವವನೇ ಭಗವಂತ ಎಂಬುದೇ ಸತ್ಯ.