Saturday, August 24, 2013

ಕರುಣಾ ಸಂಧಿ - ೧೧ ನೇ ಪದ್ಯ






















ಜನನಿಯನು ಕಾಣದಿಹ ಬಾಲಕ
ನೆನೆನೆನೆದು ಹಲುಬುತಿರೆ ಕತ್ತಲೆ
ಮನೆಯೊಳಡಗಿದ್ದವನ ನೋಡುತ 
ಗುತ ಹರುಷದಲಿ |
ತನಯನಂ ಬಿಗಿದಪ್ಪಿ ರಂಭಿಸಿ
ಕನಲಿಕೆಯ ಕಳೆವಂತೆ ಮಧುಸೂ
ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು || ೧೧ ||



ಪ್ರತಿಪದಾರ್ಥ : ಜನನಿಯನು - ತನ್ನ ತಾಯಿಯನ್ನು, ಕಾಣದಿಹ ಬಾಲಕ - ನೋಡದಿದ್ದಾಗ ಪುಟ್ಟ ಮಗುವು, ನೆನೆನೆನೆದು ಹಲಬುತಿರೆ - ತಾಯಿಯನ್ನು ನೆನೆಪಿಸಿಕೊಂಡು ಹಂಬಲಿಸುತ್ತಿರುವಾಗ, ಕತ್ತಲೆ ಮನೆಯೊಳಗಡಗಿದ್ದವನ ನೋಡುತ - ಮಗುವಿಗೆ ತಾಯಿ ಕಾಣಿಸದಿದ್ದರೂ ಕೂಡ ತಾಯಿ ಮರೆಯಾಗಿ ನಿಂತು ಮಗುವನ್ನು ಗಮನಿಸುತ್ತಲೇ ಇರುವಳು. ಆದರೆ ಕಂಗಾಲಾದ ಮಗುವಿಗೆ ಸುತ್ತಲೂ ಕತ್ತಲು ಕವಿದಂತಾಗಿರುತ್ತದೆ.  ಹೀಗೆ ಕಂಗಾಲಾದ ಮಗುವನ್ನು ತಾಯಿ ನೋಡುವಂತೆ, ನಗುತ ಹರುಷದಲಿ - ತನಗಾಗಿ ಹಲುಬುತ್ತಿರುವ ಮಗುವನ್ನು ಕಂಡು ಸಂತೋಷದಿಂದ ನಗುನಗುತ್ತಾ, ತನಯನಂ ಬಿಗಿದಪ್ಪಿ ರಂಬಿಸಿ - ಮಗುವನ್ನು ಆಪ್ಯಾಯಮಾನವಾಗಿ ಬಿಗಿದಪ್ಪಿಕೊಂಡು ಮುದ್ದಿಸುತ್ತಾ, ಕನಲಿಕೆಯು ಕಳೆವಂತೆ - ಭಯ ಹಾಗೂ ನೋವುಗಳಿಂದ ಕಂಗಾಲಾಗಿದ್ದ ಮಗುವಿನ ನೋವನ್ನು ಪೂರ್ಣವಾಗಿ ಪರಿಹರಿಸಿಬಿಡುವಂತೆ, ಮಧುಸೂದನನು - ಆನಂದ ಸ್ವರೂಪಿಯಾದ ಭಗವಂತನು, ತನ್ನವರಿದ್ದೆಡೆಗೆ ಬಂದೊದಗಿ - ತನ್ನನ್ನು ಸ್ತುತಿಸುವ, ಆದರಿಸುವ ಭಕ್ತರಿದ್ದೆಡೆಗೆ ಬಂದು ಅವರ ಕ್ಲಿಷ್ಟ ಸಮಯಕ್ಕೆ ಒದಗುವನು, ಸಲಹುವನು - ಸರ್ವ ವಿಧವಾಗಿ ರಕ್ಷಿಸುವನು.

ಪರಮಾತ್ಮನು ತನ್ನ ಮತ್ತು ತನ್ನ ಭಕ್ತರ ಸಂಬಂಧವನ್ನು ತಾಯಿ - ಮಕ್ಕಳ ಸಂಬಂಧದಂತೆ ಎಂಬುವ ಒಂದು ಸುಂದರ ಚಿತ್ರಣವನ್ನು ದಾಸರು ಈ ಪದ್ಯದಲ್ಲಿ ಕೊಟ್ಟಿದ್ದಾರೆ.  ತಾಯಿಯು ಪ್ರೀತಿಯಿಂದ ಆಟಕ್ಕಾಗಿ ಮಗುವಿಗೆ ಕಾಣದಂತೆ ಬಚ್ಚಿಟ್ಟುಕೊಂಡು ಆ ಮಗುವಿನ ಹುಡುಕಾಟ, ಗೋಳಾಟ ಎಲ್ಲವನ್ನೂ ಕಂಡು ನಂತರ ಕರುಣೆಯಿಂದ, ಆನಂದದಿಂದ, ಆರ್ತತೆಯಿಂದ ಮಗುವನ್ನು ಅಪ್ಪಿ ರಂಭಿಸಿ ಮುದ್ದಿಸುವಂತೆ ಪರಮಾತ್ಮನೂ ಕೂಡ ಭಕ್ತರಿಗೆ ಸ್ವಲ್ಪ ಆಟವಾಡಿಸಿ ನಂತರ ಒಲಿದು ಅವರ ಕಷ್ಟಗಳನ್ನು ಪರಿಹರಿಸಿ ಆನಂದವನ್ನು ಕೊಡುತ್ತಾನೆ.  

ನಮ್ಮಲ್ಲಿ ಪರಮಾತ್ಮ ಇರುವುದರಿಂದಲೇ ನಮ್ಮ ಚೈತನ್ಯ ನಲಿಯುತ್ತಿರುತ್ತದೆ.  ಭಗವಂತ ಜೀವಿಗಳ ಹೃದಯದ ಗುಹೆಯಲ್ಲಿಯೇ ಅಡಗಿದ್ದರೂ ಜೀವಿಯು ಅಜ್ಞಾನ, ಅಹಂಕಾರ ಇವುಗಳ ಆವರಣದಿಂದ ಪರಮಾತ್ಮ ತನ್ನಲ್ಲೇ ಇದ್ದಾನೆಂದು ತಿಳಿಯದೆ ಒದ್ದಾಡುತ್ತಿರುತ್ತಾನೆ.  "ಸಂಕಟ ಬಂದಾಗ ವೆಂಕಟರಮಣ" ಎಂಬಂತೆ ತನಗೆ ತೊಂದರೆಯಾದಾಗ ಮಾತ್ರ ಭಗವಂತನ ಸ್ತೋತ್ರ, ಪೂಜೆ ಎಲ್ಲವನ್ನೂ ನಡೆಸುತ್ತಿರುತ್ತಾನೆ.  ಆದರೆ ಜೀವಿಗಳ ಕರ್ಮಫಲಗಳೂ ಕೂಡ ಪರಮಾತ್ಮ ಕರೆದ ಕೂಡಲೆ ಬರುವುದಕ್ಕೆ ಪ್ರತಿಬಂಧಕವಾಗಿರುತ್ತದೆ. ಕತ್ತಲೆ ಮನೆಯಲ್ಲಿ ಮಗು ತಾಯಿಯನ್ನು ಕಾಣಲು ಹಂಬಲಿಸಿದ ನಂತರ ತಾಯಿ ಬಂದು ಮಗುವನ್ನು ರಂಭಿಸುವಂತೆ, ಪರಮಾತ್ಮ ಕೂಡ ನಮ್ಮ ಕರ್ಮ ಬಂಧನಗಳನ್ನು ಕಳೆದು ನಂತರ, ಅವನನ್ನು ಭಕ್ತಿಯಿಂದ, ಪ್ರೇಮದಿಂದ ಕೂಗಿ ಕರೆಯುವ ನಮ್ಮನ್ನು ಕಾಪಾಡುತ್ತಾನೆ.

ತಾಯಿಯನ್ನು ಒಂದು ಕ್ಷಣ ಕಾಣದಿದ್ದರೂ ಸಾಕು ಕಂದ ಕಂಗಾಲಾಗಿ, ಅಬ್ಬರಿಸಿ ಅಳುವಾಗ ಹೇಗೆ ತಾಯಿ ಧಾವಿಸಿ ಬಂದು ಕಂದನನ್ನು ಅಪ್ಪಿ, ಮುದ್ದಿಸುವಳೋ ಹಾಗೆ ಭಗವಂತ ಕೂಡ ಭಕ್ತರು ಕಂಗೆಟ್ಟು ಕರೆದಾಗ ಧಾವಿಸಿ ಬರುತ್ತಾನೆ.  ಅವನು ಭಕ್ತರ ಹೃತ್ಕಮಲದಲ್ಲಿಯೇ ಅಡಗಿರುತ್ತಾನೆ.  ಆದರೆ ಜೀವಿಗಳು ಅದನ್ನು ತಿಳಿಯುವುದಿಲ್ಲ.  ನಿಷ್ಕಾಮ ಭಾವದಿಂದ, ಎಲ್ಲಕ್ಕೂ ಅವನೇ ಕಾರಣ, ಅವನ ಕರುಣೆಯಿಂದಲೇ ತಾನು ಎಲ್ಲವನ್ನೂ ಪಡೆದಿರುತ್ತೇನೆ ಮತ್ತು ಭಗವಂತ ತಾಯಿ ತನ್ನ ಮಗುವಿಗೆ ಅತ್ಯುತ್ತಮವಾದದ್ದೇ ಕೊಡುವಂತೆ ತನಗೂ ಅತ್ಯುತ್ತಮವಾದದ್ದನ್ನೇ ಕೊಟ್ಟಿರುತ್ತಾನೆ, ಅವನು ಕೊಟ್ಟ ಎಲ್ಲವನ್ನೂ ಅವನಿಗೇ ಸಮರ್ಪಣೆ ಮಾಡುತ್ತೇನೆಂಬ ಭಾವದಲ್ಲಿ ಸದಾ ಇದ್ದು, ಅರ್ತಿಯಿಂದ ಕರೆದಾಗ ಮಾತ್ರ, ಜೀವಿಯ ಅಜ್ಞಾನವೆಂಬ ಕತ್ತಲಿನ ಕೋಣೆಯಲ್ಲಿ ಮುಚ್ಚಿಟ್ಟುಕೊಂಡಿರುವ ಭಗವಂತ ತಾನು ಪ್ರಕಟಗೊಳ್ಳುತ್ತಾನೆ. 

ನಾನು-ನನ್ನದು ಎಂಬ ಮಮಕಾರದ ಅಜ್ಞಾನ ತೊಲಗಿಸಿ, ನೀನೇ ಗತಿಯೆಂದು ಶರಣಾಗತಿಯ ಭಾವದಲ್ಲಿ ಕರೆದಾಗ,  ಜ್ಞಾನದ ಬೆಳಕಲ್ಲಿ, ಭಗವಂತ ಗೋಚರಿಸುತ್ತಾನೆ.  ತಾಯಿಯಂತೆ ಬಿಗಿದಪ್ಪಿ ಮೋಹಿಸುತ್ತಾನೆ.  ಹತಾಶೆ ಕೋಪಗಳಿಂದ ಬಸವಳಿದ ಭಕ್ತನ ಪರಿಯನ್ನು ಕಂಡು ನಸು ನಗುತ್ತಾ ಸಂತೈಸುತ್ತಾನೆ.  ಆದರೆ ಕರೆದ ಕೂಡಲೇ ಭಗವಂತ ಬರಲು ಅಲ್ಲಿ ನಮ್ಮದೇ ಆದ ಕರ್ಮ ಫಲಗಳು ಪ್ರತಿಬಂಧಕವಾಗಿರುತ್ತವೆ.  ಜೀವಿಗಳ ಲಿಂಗದೇಹವೇ ಕತ್ತಲೆಯ ಅಜ್ಞಾನದ ಕೋಣೆ, ಸಾತ್ವಿಕ ಜೀವರು ಕತ್ತಲೆ ಕೋಣೆಯಲ್ಲಿ ತಮ್ಮ ತಾಯಿಗಾಗಿ, ಭಗವಂತನಿಗಾಗಿ ಧ್ಯಾನ, ಸ್ಮರಣೆ, ಆರಾಧನೆ, ಭಜನೆ ಇತ್ಯಾದಿಗಳನ್ನು ಅನವರತ ಮಾಡುತ್ತಾ ಹಂಬಲಿಸಬೇಕು. ಒಂದು ಉದಾಹರಣೆ ಭಾಗವತದಿಂದ ತೆಗೆದುಕೊಳ್ಳುವುದಾದರೆ, ಗೋಪಿಯರ ಕೃಷ್ಣ ಭಕ್ತಿ ಲೌಕಿಕ ಕಾಮನೆಯಾಗಿ ಬದಲಾದಾಗ, ಕೃಷ್ಣ ತಾನು ಲೌಕಿಕ ಕಾಮನೆಯುಳ್ಳ ಜನರಿಗೆ ಲಭ್ಯನಲ್ಲವೆಂದು ಪ್ರಪಂಚಕ್ಕೆ ಮನದಟ್ಟು ಮಾಡಲು, ಮರೆಯಾಗಿ ಹೋಗಿ, ಗೋಪಿಯರ ಅಜ್ಞಾನದ ಅಂಧಕಾರದಲ್ಲಿ ಅಡಗಿ ಕುಳಿತುಬಿಟ್ಟ.  ಅವರು ಪರಿವರ್ತನೆಗೊಂಡು ಶುದ್ಧ ಮನಸ್ಸಿನಿಂದ ಹಂಬಲಿಸಿ, ಭಕ್ತಿಯಿಂದ ಕರೆಯಲು, ನಸುನಗುತ್ತಾ ಪ್ರಕಟಗೊಂಡ, ಬಿಗಿದಪ್ಪಿದ, ರಮಿಸಿದ, ಸರಸವಾಡಿದ ಮತ್ತು ಶಾಶ್ವತವಾಗಿ ಅವರ ಹೃದಯ ಮಂದಿರದಲ್ಲಿ ನೆಲೆ ನಿಂತ. ಶ್ರುತಿಯಲ್ಲಿ ಭಗವಂತ ತಂದೆ ಎಂಬ ಉಲ್ಲೇಖ ಇದೆ.  ಆದರೆ ಭಗವಂತನಿಗೆ ಸ್ತ್ರೀ ಪುರುಷ ರೂಪಗಳೆರಡೂ  ಭೇದವಿಲ್ಲದೇ ಇರುವುದರಿಂದ ಅವನು ನಮಗೆ ತಂದೆಯೂ ಹೌದು ತಾಯಿಯೂ ಹೌದು.  

ಹರಿಕರುಣೆ ಅಪಾರ - ಭಗವಂತನನ್ನು ತಾಯಿ ಎನ್ನುವುದರ ಮೂಲಕ ಅವನ ಅಪಾರವಾದ ಕರುಣೆಯನ್ನು ಅಳೆಯಲು ಸಾಧ್ಯವಿಲ್ಲವೆನ್ನುತ್ತಾರೆ ಜಗನ್ನಾಥ ದಾಸರು.  ಹಾಗಂದರೆ ಶ್ರೀಹರಿ ಸಾತ್ವಿಕರಿಗೆ ಮಾತ್ರ ಕರುಣಾಮಯಿಯೇ ಹೊರತು ತಾಮಸಿಗರಿಗೆ ಅಲ್ಲ ಎಂದರ್ಥ ಮಾಡಿಕೊಳ್ಳಬೇಕು.  "ಬಿಟ್ಟವರ ಭವಪಾಶದಿಂದಲಿ ಕಟ್ಟುವನು ಬಹು ಕಠಿಣನಿವ" ಎಂದು ದಾಸರೇ ಹೇಳಿದ್ದಾರೆ.   ಅವನು ಅಪಾರ ಕರುಣಿಯೇ, ಅದು ಅವನ ಗುಣವೇ ಆಗಿದೆ.  ಆದರೆ ತಾಮಸಿಗರಿಗೆ, ದುಷ್ಟರಿಗೆ ಕರುಣೆ ತೋರಿಸಿದರೆ ಅದು ದೋಷವಾಗುತ್ತದೆಯಲ್ಲವೇ?  ಭಗವಂತ ತನ್ನೆಲ್ಲಾ ಭಕ್ತರಿಗೂ, ಅವರವರ ಭಕ್ತಿಗೆ, ಅವರವರ ಭಾವಕ್ಕೆ, ಅವರವರ ಯೋಗ್ಯತೆಗೆ ಅನುಗುಣವಾಗಿ ಕರುಣೆ ತೋರಿಸುತ್ತಾನೆ.  ಭಗವಂತನಿಗೆ ಭಗವಂತನೊಬ್ಬನೇ ಸಾಟಿ, ಸಮಾನ, ಬೇರೆ ಯಾರೂ ಇಲ್ಲ.  ನಮ್ಮ ಬುದ್ಧಿಯ ನಿಲುಕಿಗೆ ಸಿಕ್ಕಲಿ ಎಂಬ ಉದ್ದೇಶ ಮಾತ್ರದಿಂದಲೇ, ಭಗವಂತನನ್ನು ದಾಸರಾಯರು ಮಾತೆಗೆ ಹೋಲಿಸಿದ್ದಾರಷ್ಟೆ.  


ಜನನಿಯ ಕಾಣದಿಹ ಬಾಲಕ - ತಾಯಿಯೇ ತನ್ನ ಮಗುವನ್ನು ಬಿಟ್ಟು ಮರೆಯಾದಾಗಲೂ, ಕಾರಣಾಂತರಗಳಿಂದ ಮಗು ತಾಯಿಯಿಂದ ದೂರವಾದಾಗಲೂ ಮಗು ತಾಯಿಗಾಗಿ ಹಂಬಲಿಸುವುದು ಸಹಜ.  ಸದಾ ಭಗವಂತನ ಜೊತೆಯಲ್ಲೇ, ಪರಿವಾರದವರೇ ಆದ ದೇವತೆಗಳಿಂದ ಭಗವಂತ ತಾಯಿಯೇ ಮರೆಯಾಗುವಂತೆ ಮರೆಯಾಗಿ ಆಟವಾಡುತ್ತಾನೆ.  ಆದರೆ ಜೀವಿಗಳು ತಮ್ಮೊಳಗೇ ಇರುವ ಭಗವಂತನ ಇರುವಿಕೆಯನ್ನು ಅರಿಯದೇ ತಾಯಿಯಿಂದ ದೂರವಾದ ಮಗುವಿನಂತಿರುತ್ತಾರೆ.  ಅಜ್ಞಾನದ ಪೊರೆ ಕಳಚಿ, ಶರಣಾಗತರಾದಾಗ ಭಗವಂತ ತಾಯಿಯಂತೆ ಧಾವಿಸುತ್ತಾನೆ.

ನೆನೆನೆನೆದು ಹಲಬುತಿರೆ -  ಭಗವಂತನ ಮನೆಯಲ್ಲಿ  ದೇವತೆಗಳೂ, ಋಷಿಗಳೂ ಮತ್ತು  ಇತರ ಜ್ಞಾನಿಗಳೂ ಭಗವಂತ ಮರೆಯಾದಾಗ, ದರ್ಶನದ ಹಂಬಲದಿಂದ ಹಲುಬುವರು, ಹಂಬಲಿಸುವರು.  ಏಕೆಂದರೆ ಎಷ್ಟು ನೋಡಿದರೂ ನೋಡಬೇಕೆನ್ನಿಸುವ ತವಕ, ಒಂದು ಕ್ಷಣ ಮರೆಯಾದರೂ ಆಗುವ ದುಃಖ, ಜನನಿಯನ್ನು ಕಾಣದೆ ಹಂಬಲಿಸುವ ಬಾಲಕನ ದುಃಖಕ್ಕಿಂತ ಕಡಿಮೆಯೇನಿಲ್ಲ.  ಹೀಗೆ ದುಃಖ ಪಡುವ ಭಕ್ತರನ್ನು ಕಂಡು ಭಗವಂತ ನಸುನಗುತ್ತಾ ಬರುತ್ತಾನೆ.  ಅವರು ಪಟ್ಟ ದುಃಖದ ಅನೇಕ ಪಟ್ಟು ಹೆಚ್ಚು ಅಧಿಕ ಸಂತೋಷ ಕೊಟ್ಟು ಸಂತೈಸುತ್ತಾನೆ.  ಆದರೆ ಸಂಸಾರವೆಂಬ ಭವದಲ್ಲಿ ಸಿಲುಕಿದ ಜೀವಿ ತನ್ನನ್ನು ಮರೆತು ಕುಳಿತುಬಿಟ್ಟಾಗ, ಭಗವಂತ ಸ್ವಲ್ಪ ಸಂಕಟ ಕೊಟ್ಟು, ತನ್ನನ್ನು ನೆನಪಿಸುತ್ತಾನೆ.  ಜೀವಿಗೆ ಅನೇಕ ರೀತಿಯಲ್ಲಿ ಪ್ರೇರಣೆ ಕೊಟ್ಟು, ಆಸಕ್ತಿ ಹುಟ್ಟಿಸುತ್ತಾನೆ.  ಗುರುವನ್ನು ತೋರಿಸುತ್ತಾನೆ.  ಹೀಗೆ ಒಂದು ಸಲ ಆ ಭಗವಂತನ ಹಂಬಲ ಹುಟ್ಟಿ, ಭಕ್ತ ಹಂಬಲಿಸಿದಾಗ ಬಳಿಗೆ ಬಂದು ಕರುಣೆ ತೋರುತ್ತಾನೆ. ಭಗವಂತ ತನ್ನಲ್ಲಿ ಆಸಕ್ತಿ ಹುಟ್ಟಿಸಿ, ಭಕ್ತ ಹಂಬಲಿಸಿದಾಗ ಬಂದು ಅಪ್ಪಿ ಸಂತೈಸಿ, ಮರೆಯಾಗಿ ಆಟವಾಡಿಸುತ್ತಾನೆ.  ಹಂಬಲ ಅತ್ಯಧಿಕವಾಗಿ ಹುಚ್ಚು ಹಿಡಿಸಿ, ಅತ್ತು ಗೋಳಾಡುವಂತೆ ಮಾಡುತ್ತಾನೆ.  ಮತ್ತೆ ಧಾವಿಸಿ ಬಂದು ಬಿಗಿದಪ್ಪಿ ಸಂತೈಸಿದಾಗ, ನಕ್ಕು, ನಾಟ್ಯವಾಡಿ, ಎಲ್ಲಿದ್ದೆ ಮತ್ತು ಎಲ್ಲಿಂದ ಬಂದೆ ಎಂದು ಆಶ್ಚರ್ಯ ಪಡುವಂತೆ ಮಾಡುತ್ತಾನೆ.  ಹೀಗೆ  ಭಕ್ತ-ಭಗವಂತನ ತಾಯಿ-ಮಕ್ಕಳಾಟ ನಡೆಯುತ್ತಲೇ ಇರುತ್ತದೆ.

ಕತ್ತಲೆಯ ಮನೆಯೊಳಡಗಿದ್ದವನ ನೋಡುತ  - ಕತ್ತಲೆಮನೆ ಎಂದರೆ ಜೀವಿಯ ಅಜ್ಞಾನವೆಂದು ಅರ್ಥೈಸಬಹುದು ಅನ್ನಿಸುತ್ತದೆ.  ಏಕೆಂದರೆ ಭಗವಂತನ ಅರಿವು ಮೂಡಿದಾಕ್ಷಣ ಅಜ್ಞಾನ ಕಳೆಯುತ್ತದೆ.  ಅಜ್ಞಾನ ಕಳೆದ ಕೂಡಲೆ, ಭಗವಂತ ಕಾಣಿಸುತ್ತಾನೆ.  ಅಂದರೆ ನಾವು ಸಂಸಾರವೆಂಬ ಭವ ಸಾಗರದ ಕತ್ತಲೆಯಲ್ಲಿ ಮುಳುಗಿದ್ದೇವೆ, ಬೆಳಕು ಕಾಣದೆ ಸಂಕಟ ಪಡುತ್ತಿದ್ದೇವೆ.  ನಮ್ಮೊಳಗೇ ಇರುವ ಮೂಲೇಶನ ಅರಿವಿಲ್ಲದೆ ಕನಲುತ್ತಿದ್ದೇವೆ.  ಅಹಂ ಬಿಟ್ಟು ಶರಣಾಗತರಾದಾಗ ನಮ್ಮೊಳಗೇ ಇರುವ ಭಗವಂತನ ದರುಶನ ನಮಗಾಗುತ್ತದೆ.  ಭಗವಂತ ಕತ್ತಲಿನಲ್ಲಿಲ್ಲ, ಅವನೇ ಬೆಳಕು, ಆದರೆ ನಾವು ನಮ್ಮ ಸುತ್ತಲೂ ಅಹಂ ಎಂಬ ಅಂಧಕಾರವನ್ನು ಹರಡಿಕೊಂಡಿದ್ದೇವಾದ್ದರಿಂದ ಅವನು ನಮಗೆ ಕಾಣುತ್ತಿಲ್ಲ.  ಅಹಂಕಾರವೆಂಬ ಅಂಧಕಾರದ ತೆರೆ ಸರಿಸಿ   ಭಗವಂತನಿಗಾಗಿ  ನಾವು ಕಾಣದ ತಾಯಿಗಾಗಿ ಮಗು ಕನಲುವಂತೆ, ಕನಲಿದಾಗ ಅಕ್ಕರೆಯಿಂದ ಬಂದು ಕನಲಿಕೆಯನ್ನು ಕಳೆದು ತಾಯಿಯಂತೆ ಭಗವಂತನು ನಮ್ಮನ್ನು ಪೊರೆಯುವವನು.
 
ಮಧುಸೂದನನು ಬಂದೊದಗಿ ಸಲಹುವನು - ಬ್ರಹ್ಮನಿಂದ ವೇದಗಳನ್ನು ಅಪಹರಿಸಿದ ಮಧುಕೈಟಭರನ್ನು ವಧಿಸಿದವನು ಮಧುಸೂದನ.  ವೇದಗಳನ್ನೂ, ಬ್ರಹ್ಮನನ್ನೂ ರಕ್ಷಿಸಿದ ಭಗವಂತ ತನ್ನನ್ನು ಕಾಣಲು ಹಂಬಲಿಸುವ ಭಕ್ತರಿಗೆ ವೇದಶಾಸ್ತ್ರಗಳ ಜ್ಞಾನ ನೀಡುತ್ತಾನೆ.  ವೇದಗಳಿಂದ ಸ್ತುತಿಸುತ್ತಾ ಭಗವಂತನಲ್ಲಿ ಸದಾ ಅನುರಕ್ತರಾಗಿ, ಸಂಸಾರವೆಂಬ ಭವ ಪಾಶದಿಂದ ಬಿಡುಗಡೆ ಹೊಂದುವಂತೆ ಮಾಡುತ್ತಾನೆ. 

ತತ್ತ್ವಸುವ್ವಾಲಿಯಲ್ಲಿ ದಾಸರು :
ಸೇವ್ಯ ಸೇವಕರಲ್ಲಿ ಸೇವ್ಯ ಸೇವಕನಾಗಿ
ಅವ್ಯಕ್ತನಾಗಿ ನೆಲೆಸಿರ್ಪೆ | ನೆಲೆಸಿರ್ಪೆ ಸರ್ವದಾ
ಸೇವ್ಯ ನಾ ನಿನಗೆ ಸರಿಗಾಣೆ || -  ಸ್ವಾಮಿಯಲ್ಲಿದ್ದು, ಸೇವಿಸಲ್ಪಡುವವನೂ, ಭೃತ್ಯನಲ್ಲಿದ್ದು ಸೇವೆಮಾಡುವವನೂ ಆಗಿ, ಯಾರಿಗೂ ಕಾಣದಂತೆ, ಸದಾ ಇರುವ ಭಗವಂತ ಸರ್ವರಿಂದಲೂ (ರಮಾ ಬ್ರಹ್ಮಾದಿಗಳಿಂದಲೂ) ಸೇವ್ಯನಾದ ನಿನಗೆ ಸಮನಾದವನ್ನು ನಾ ಕಾಣೆ ಎನ್ನುತ್ತಾರೆ.
ತಂದೆ ಮಕ್ಕಳನು ಪೊರೆವಂದದಲಿ ಶ್ರೀಕಾಂತ
ಎಂದೆಂದು ತನ್ನ ಭಕತರ | ಭಕತರ ಸಲಹುವ
ಸಂದೇಹವ್ಯಾಕೋ ನಿನಗಿನ್ನು || - ತಂದೆಯು ತನ್ನ ಮಕ್ಕಳನ್ನು ಅವರವರ ಅವಶ್ಯಕತೆಗಳನ್ನು ಅರಿತು, ಭಯ ಶೋಕಗಳನ್ನು ಪರಿಹರಿಸಿ, ಇಚ್ಛೆಗಳನ್ನು ಪೂರೈಸಿ, ಸಲಹುವಂತೆ ಲಕ್ಷ್ಮೀಪತಿಯು ತನ್ನ ಭಕ್ತರನ್ನು ಸಲಹುವನು, ರಕ್ಷಿಸುವನು. ಓ ಮನವೇ ಸಂದೇಹ ಪಡಬೇಡ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ :
ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ | ಚರಿಸುತಿರೆ ನರನದರ ಗುರುತನರಿಯದೆಯೆ || - ಎನ್ನುತ್ತಾ ಭಗವಂತ ಜೀವಿಗಳಿಗೆ ಅತ್ಯಧಿಕ ಆನಂದ ಕೊಡುವೆನೆಂದೇ ಕಾಯುತ್ತಿದ್ದಾನೆ ಮತ್ತು ನಮ್ಮ ಮುಂದೇ, ನಮ್ಮೊಳಗೇ, ನಮ್ಮ ಹಿಂದೇ ಇದ್ದು, ಅನೇಕ ರೂಪದಲ್ಲಿ ತನ್ನನ್ನು ತೋರಿಸಿಕೊಳ್ಳುತ್ತಾನೆ, ಆದರೆ ನಾವು ಅದನ್ನು ಗುರುತಿಸದೇ, ಎಲ್ಲವೂ ನಮ್ಮದೇ ಎಂಬ ಅಹಂಕಾರದ ಅಂಧಕಾರದಲ್ಲಿ ಮುಳುಗಿದ್ದೇವೆ ಎನ್ನುತ್ತಾರೆ.
ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ |
ಎತ್ತಲೋ ಸಖನೋರ್ವನಿಹನೆಂದು ನಂಬಿ ||
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು |
ಭಕ್ತಿಯಂತೆಯೆ ನಮದು ಮಂಕುತಿಮ್ಮ || - ಕತ್ತಲೆಯಲ್ಲಿ ಏನನ್ನೋ ಕಂಡು ಹೆದರಿಕೆಯಿಂದ ತನಗೊಬ್ಬ ಸ್ನೇಹಿತನೋ, ಸಂಗಾತಿಯೋ ಬೇಕೆಂದು ನಾಯಿ ತನ್ನ ಕತ್ತನ್ನೆತ್ತಿ ಮೊರೆಯಿಡುತ್ತದೆ.  ಹಾಗೇ ನಾವೂ ಕೂಡ ಅಹಂಕಾರದ ಕತ್ತಲಲ್ಲಿ ಬೆದರಿ, ಸಂಸಾರವೆಂಬ ಸಾಗರವನ್ನು ದಾಟಲಾರದೇ ಆಸರೆಗಾಗಿ ಹುಡುಕಾಟ ನಡೆಸುತ್ತೇವೆ.  ಆ ಆಸರೆಯೇ ಭಕ್ತಿ, ಭಗವಂತನ ಆರಾಧನೆ ಎನ್ನುತ್ತಾ, ಸತತಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ ಗತಿ ಮನುಜ ಲೋಕಕ್ಕೆ - ಮನುಷ್ಯ ತನಗೆ ಬೇಕಾದ್ದೆಲ್ಲಾ ಸಿಕ್ಕಿಬಿಟ್ಟಿದೆ, ತಾನೇ ಸರ್ವಸ್ವ ಎಂದು ಅಹಂಕಾರದಿಂದ ಕುಳಿತುಬಿಟ್ಟರೆ, ಅವನ ಜನ್ಮವೇ ಶುದ್ಧ ಅಪ್ರಯೋಜಕವಾಗಿ ಬಿಡುತ್ತದೆ ಮತ್ತು ಇದರಿಂದ ಜಗತ್ತೇನೂ ಮುಳುಗಿಹೋಗೊಲ್ಲ.  ಭಗವಂತನ ಸೃಷ್ಟಿ ಇದಕ್ಕಾಗಿ ಅಲ್ಲ, ಅವನ ಲೀಲೆ, ಆಟಗಳು ನಡೆಯುತ್ತಲೇ ಇರುತ್ತವೆ, ಅದೇ ಅವನ ಇಚ್ಛೆ.  ಅದನ್ನು ಅರಿತು ನಾವು ಅವನಿಗಾಗಿ ಕನಲಿದಾಗ ಮಾತ್ರ ನಮ್ಮ ಸುತ್ತಲಿನ ಅಂದಕಾರ ಕಳೆದು, ಸಾಧನೆಯ ಮಾರ್ಗ ಗೋಚರಿಸುವುದು ಎನ್ನುತ್ತಾರೆ.

ಶ್ರೀಹರಿ ತನ್ನ ಭಕ್ತರನ್ನು ತಮ್ಮ ಸ್ವಭಾವದಲ್ಲಿ ಅಡಗಿರುವ ಜ್ಞಾನ ಆನಂದವನ್ನು ಪಡೆಯುವ, ಮೋಕ್ಷ ಸಾಧನೆಗೆ ಪ್ರೇರಣೆ ಕೊಡುತ್ತಾನೆ, ಅವರಿಗೆ ಸಂಸಾರ ಸುಖ ಭೋಗಗಳಲ್ಲಿ ವೈರಾಗ್ಯ ಬರಲೆಂದು ಪರೀಕ್ಷೆಗಳಿಗೆ ಒಡ್ಡುತ್ತಾನೆ.  ಹೀಗೆ ಮಾಡುವುದರಿಂದ ಸ್ವರೂಪ ಜ್ಞಾನಾನಂದಮಯನಾಗಿರುವ ಆ ಭಗವಂತನಿಗೆ ಯಾವ ಲಾಭವೂ, ಇಲ್ಲ.  ಜೀವಿಗಳು ಮೋಕ್ಷ ಸಾಧನೆ ಮಾಡಬೇಕೆಂಬುದೇ ಅವನ ಉದ್ದೇಶ ಅಷ್ಟೆ.  ಅದನ್ನೂ ಕೂಡ, ತಾನು ನಮ್ಮೊಳಗಿದ್ದು, ತಾನೇ ಮಾಡಿ ನಮ್ಮಿಂದ ಮಾಡಿಸುತ್ತಾನೆ ಮತ್ತು ಮರೆಯಾಗಿ ನೋಡುತ್ತಾನೆ.  ಜೀವಿಗಳು ತಾಯಿಯಿಂದ ಅಗಲಿದ ಮಗು ಸಹಿಸಲಾರದಂತೆ ಹಲುಬುವುದನ್ನು  ಕಂಡು ಕರುಣೆಯಿಂದ ಧಾವಿಸಿ ಬಂದು ದರ್ಶನ ನೀಡಿ ಸಂತೈಸುತ್ತಾನೆ.  ತಾನೇ ಮಾಡಿ, ಜೀವಿಗಳಿಂದ ಮಾಡಿಸಿದ ಕರ್ಮಕ್ಕೇ ಅವರವರ ಯೋಗ್ಯತೆಗನುಗುಣವಾಗಿ ಮಹಾಫಲಗಳನ್ನು ಕೊಟ್ಟು ಕಾಪಾಡುತ್ತಾನೆ.  ಅವನದೆಷ್ಟು ಸುಲಭನೂ, ಕರುಣಿಯೂ ಎಂದರೆ ಅವನಿಗೆ ಜೀವಿ ಸಮರ್ಪಿಸುವ ಒಂದು ದಳ ತುಳಸಿಯೇ ಸಾಕು, ಒಂದು ಹಿಡಿ ಅವಲಕ್ಕಿಯೇ ಸಾಕು, ಅಖಿಳಾರ್ಥಗಳನ್ನೇ ಕೊಟ್ಟು ಬಿಡುವವನು. ಹೀಗೆ ಜಗನ್ನಾಥ ದಾಸರು ಈ ಪದ್ಯದಲ್ಲಿ ಭಗವಂತ ಹಾಗೂ  ಭಕ್ತನಿಗೆ ತಾಯಿ-ಮಗು ಚಿತ್ರಣಗಳ ಹೋಲಿಕೆಯನ್ನು ಕೊಟ್ಟು ಸುಂದರವಾಗಿ ತಿಳಿಸಿದ್ದಾರೆ. 



 ಚಿತ್ರಕೃಪೆ : ಅಂತರ್ಜಾಲ