Thursday, June 11, 2015

ಕರುಣಾ ಸಂಧಿ - ೩೦ ನೇ ಪದ್ಯ ( ವಾಮನಾವತಾರ )

ಅಜಿನ ದಂಡ ಕಮಂಡಲ ಮೇಖಲ ರುಚಿರ ಪಾವನ ವಾಮನ ಮೂರ್ತಯೇ |
ಮಿತ ಜಗತ್ರಿತಯಾಯ ಜಿತಾರಯೆ ನಿಗಮ ವಾಕ್ಪಟವೇ ವಟವೇ ನಮ: ||

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 
ಕಾಯ್ದ ಸುಜನರನು ||೩೦||

ಅತುಳಶೌರ್ಯ ವಾಮನ - ಪ್ರಹ್ಲಾದರಾಜರ ಮೊಮ್ಮಗನಾದ ಬಲಿರಾಜನು ಅಮೃತ ಸಿಗಲಿಲ್ಲವೆಂಬ ಕಾರಣದಿಂದ ದೈತ್ಯರ ಸೈನ್ಯದೊಡನೆ ದೇವತೆಗಳ ಮೇಲೆ ಯುದ್ಧ ಸಾರಿ ಬಂದಾಗ ಇಂದ್ರನು ಬಲಿರಾಜನನ್ನು ಹೊಡೆದು ಸೋಲಿಸಿ, ಇತರ ಪ್ರಮುಖ ದೈತ್ಯರನ್ನೆಲ್ಲಾ ಕೊಲ್ಲುವನು.  ಶುಕ್ರಾಚಾರ್ಯರ ಮೃತಸಂಜೀವನೀ ವಿದ್ಯೆಯ ಪ್ರಯೋಗದ ಕೃಪೆಯಿಂದ  ಮೃತರಾಗಿದ್ದ ದೈತ್ಯರೆಲ್ಲಾ ಮರಳಿ ಬದುಕುವರು.  ಬಲಿರಾಜನು ತನಗೆ ಜೀವದಾನ ಮಾಡಿ ಆಶ್ರಯ ಕೊಟ್ಟ ಶುಕ್ಲಾಚಾರ್ಯರ ಸೇವೆಯನ್ನು ಮಾಡುವನು.   ಮತ್ತೆ ಸ್ವರ್ಗಾಧಿಪತ್ಯವನ್ನು ಪಡೆಯಬೇಕೆಂಬ ಬಲಿರಾಜನ ಆಸೆಗೆ  ಶುಕ್ಲಾಚಾರ್ಯರು ಬಲಿರಾಜನ ಹತ್ತಿರ ವಿಶ್ವಜಿತ್ ಯಾಗವನ್ನು ಮಾಡಿಸುವರು.  ಸಂತೃಪ್ತನಾದ ಅಗ್ನಿದೇವನಿಂದ ಸುವರ್ಣರಥ, ಇಂದ್ರಾಶ್ವಗಳಂತಿರುವ ಅಶ್ವಗಳು, ಸಿಂಹಧ್ವಜ, ಬಿಲ್ಲು, ಬತ್ತಳಿಕೆಗಳು ಮತ್ತು ದಿವ್ಯ ಕವಚವನ್ನು ಬಲಿರಾಜನು ಪಡೆಯುವನು.  ಪಿತಾಮಹನಾದ ಪ್ರಹ್ಲಾದನಿಂದ ಅಮ್ಲಾನ ಪುಷ್ಪಮಾಲೆಯನ್ನೂ, ಶುಕ್ರಾಚಾರ್ಯರಿಂದ ಶಂಖವನ್ನೂ ಪಡೆಯುವನು.  ಸೈನ್ಯ ಸಮೇತನಾಗಿ ಮತ್ತೆ ಅಮರಾವತಿಗೆ ಮುತ್ತಿಗೆ ಹಾಕಿದಾಗ ಬೃಹಸ್ಪತ್ಯಾಚಾರ್ಯರ ಸಲಹೆಯಂತೆ ದೇವತೆಗಳು ರೂಪಾಂತರದಿಂದ ಸ್ವರ್ಗವನ್ನು ಬಿಟ್ಟು ಹೊರಟು ಹೋಗುವರು.  ಬಲಿರಾಜನು ನಿರಾಯಾಸವಾಗಿ ಮೂರು ಲೋಕಗಳನ್ನೂ ವಶಪಡಿಸಿಕೊಳ್ಳುವನು.  ಬಲಿರಾಜನ ಗುರುಗಳನ್ನು ಅನುಸರಿಸುವ ಭಕ್ತಿಯನ್ನು ಮೆಚ್ಚಿ ಶುಕ್ರಾಚಾರ್ಯರು ಇಂದ್ರ ಪದವಿಯು ಸ್ಥಿರವಾಗುವಂತೆ ಮಾಡಲು ನೂರು ಅಶ್ವಮೇಧ ಯಾಗಗಳನ್ನು ಮಾಡಿಸುವರು.

ವಾಮನ ಮಹಾಪುರಾಣದಲ್ಲಿ ತಿಳಿಸಿರುವಂತೆ,  ದೇವತೆಗಳ ತಾಯಿಯಾದ ಅದಿತಿಯು ಇಂದ್ರಾದಿ ದೇವತೆಗಳು ರಾಜ್ಯ ಕಳೆದುಕೊಂಡಿರುವುದನ್ನು ನೋಡಿ ದುಃಖಿಸುವಳು.  ಪತಿಯಾದ ಕಶ್ಯಪರು ದುಃಖಿಸುವುದನ್ನು ಬಿಟ್ಟು ಜಗದ್ಗುರುವಾದ ವಾಸುದೇವನನ್ನು ಸೇವಿಸು ಎನ್ನುವರು.  ಅವರ ಆದೇಶದಂತೆ ಸಂತಾನಾಪೇಕ್ಷೆಗಾಗಿ ಮಾಡುವ ’ಪಯೋವ್ರತ’ವನ್ನು ಮಾಡಿದಾಗ ಸಂತುಷ್ಟನಾದ ಭಗವಂತನು ಪ್ರತ್ಯಕ್ಷನಾಗಿ ವರವೀಯುವನು.  ದೈತ್ಯರು ಅತಿ ಬಲಿಷ್ಠರಾಗಿರುವುದರಿಂದ ಅವರನ್ನು ಉಪಾಯದಿಂದಲೇ ಗೆಲ್ಲಬೇಕೆಂದು ತಿಳಿಸುತ್ತಾ, ಒಂದು ಅಂಶದಿಂದ ನಿನ್ನ ಮಗನಾಗಿ ಜನಿಸಿ ನಿನ್ನ ಮಕ್ಕಳನ್ನು ರಕ್ಷಿಸುವೆನೆಂದು ಅಭಯವನ್ನು ಕೊಡುವನು.  ತಾನು ಕೊಟ್ಟ ವರವನ್ನೇ ನಿಮಿತ್ತ ಮಾಡಿಕೊಂಡು ಶ್ರೀಹರಿಯು, ಅದಿತಿಯ ಗರ್ಭದಿಂದ ವಾಮನಾವತಾರದಲ್ಲಿ ಅವತರಿಸಿದನು.  ಹುಟ್ಟಿದ ಕೂಡಲೇ ಬೆಳೆದು ನಿಂತ ಭಗವಂತನಿಗೆ ಬ್ರಹ್ಮದೇವರು ಜಾತಕರ್ಮಾದಿ ಸಂಸ್ಕಾರಗಳನ್ನು ಮಾಡಿ ಸಂತಸಪಡುವರು.   ದೇವತೆಗಳೆಲ್ಲರೂ ಹರುಷದಿಂದ ಸ್ತುತಿಸಿದಾಗ ಭಗವಂತನು ನಿಮ್ಮೆಲ್ಲರ ಪ್ರಾರ್ಥನೆಯಿಂದ ಅವತರಿಸಿರುವ ನಾನು ಮೂರು ಲೋಕಗಳ ಮುಳ್ಳುಗಳನ್ನೂ ದೂರಮಾಡಿ ಇಂದ್ರನನ್ನು ತ್ರಿಲೋಕಾಧಿಪತಿಯನ್ನಾಗಿ ಮಾಡುವೆನೆಂದನು.  ಓಂಕಾರ ಪ್ರಣವದಿಂದ ಭೂಷಿತವಾದ ವೇದಗಳು ಭಗವಂತನ ಸೇವೆಗೆ ಅಲ್ಲಿ ಉಪಸ್ಥಿತವಾದವು.  ಸಾಂಖ್ಯ, ಯೋಗ, ಸಕಲ ಶಾಸ್ತ್ರಗಳೂ ಆ ಭಗವತ್ ಕೈಂಕರ್ಯಕ್ಕಾಗಿ ಬಂದು ವಾಮನ ವಟುವಿನ ಸನ್ನಿಹಿತವಾದವು.  ಜಡೆ, ಕೊಡೆ, ದಂಡಗಳಿಂದ ಒಪ್ಪುವ ವಾಮನ ಮೂರ್ತಿಯು ಕೈಯಲ್ಲಿ ಕಮಂಡಲವನ್ನು ಪಿಡಿದು ಬಲಿರಾಜನ ಯಜ್ಞವಾಟದೆಡೆಗೆ ಹೊರಡುವನು.   ಬೇಡಲು ಬಂದ ಯಾರಿಗೂ ಇಲ್ಲವೆಂದೇ ಹೇಳದ ಬಲಿರಾಜನಲ್ಲಿ ಭಗವಂತನು  ಅಗ್ನಿಶಾಲೆಯನ್ನು ಕಟ್ಟಲಿಕ್ಕಾಗಿ ಮೂರು ಪಾದ ಭೂಮಿಯನ್ನು ಬೇಡಿದನು.  ಸಂಕಲ್ಪ ಮಾಡಿ ವಟುವಿನ ಕೈಯಲ್ಲಿ ಭೂಮಿ ದಾನದ ಸಂಕಲ್ಪದ ನೀರು ಬಿದ್ದ ಕೂಡಲೇ ಭಗವಂತನು ವಿರಾಟರೂಪವನ್ನು ತಳೆಯುತ್ತಾ ತ್ರಿವಿಕ್ರಮನಾಗುವನು. ಒಂದು ಪಾದದಿಂದ ಸಮಸ್ತ ಭೂಮಂಡಲವನ್ನೇ ಅಳೆಯುವನು, ಎರಡನೆಯ ಪಾದದಿಂದ ಅಂತರಿಕ್ಷವನ್ನಳೆಯುವನು, ಮೂರನೆಯ ಪಾದವನ್ನು ಬಲಿರಾಜನ ಇಚ್ಛೆಯಂತೆಯೇ ಅವನ ಶಿರದಲ್ಲಿರಿಸಿ, ಬಲಿರಾಜನನ್ನು ಸುತಳ ಎಂಬ ಪಾತಾಳ ಲೋಕಕ್ಕೆ ಕಳುಹಿಸುವನು.   

ಶ್ರೀಮದ್ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ವಾಮನಾವತಾರವನ್ನು
ಜ್ಯಾಯಾನ್ಗುಣೈರವರಜೋsಪ್ಯದಿತೇಃ ಸುತಾನಾಂ
ಲೋಕಾನ್ವಿಚಕ್ರಮ ಇಮಾನ್ಯದಥಾಧಿಯಜ್ಞಃ |
ಕ್ಷ್ಯಾಂ ವಾಮನೇನ ಜಗೃಹೇ ತ್ರಿಪದಚ್ಛಲೇನ
ಯಾಚ್ಞಾಮೃತೇ ಪಥಿ ಚರನ್ಪ್ರಭುಭಿರ್ನ ಚಾಲ್ಯಃ || - ಅದಿತಿಯ ಪುತ್ರರಲ್ಲಿ ಅತ್ಯಂತ ಚಿಕ್ಕವನಾದರೂ ಗುಣಗಳಲ್ಲಿ ಎಲ್ಲರಿಗಿಂತಲೂ ದೊಡ್ಡವನಾದ ದೇವದೇವನು, ವಾಮನ ಮೂರ್ತಿಯಾಗಿ ಅವತರಿಸಿ ಬಲಿಚಕ್ರವರ್ತಿಯಿಂದ ಮೂರು ಪಾದಗಳಷ್ಟು ಭೂಮಿಯನ್ನು ಬೇಡಿ ಪಡೆಯುವ ನೆಪದಿಂದ ತ್ರಿವಿಕ್ರಮನಾಗಿ ಬೆಳೆದು ನಿಂತವನು ಮೂರು ಲೋಕಗಳನ್ನೂ ಅಳೆಯುವನು.  ಎಂದಿಗೂ ಸನ್ಮಾರ್ಗವನ್ನು ಬಿಡದ ಬಲಿಯನ್ನು ಮಣಿಸಲು ಭಗವಂತನು ಯುಕ್ತಿಯಿಂದ ಬೇಡುವ ಉಪಾಯವನ್ನು ಹೂಡಿ  ಶಕ್ತಿಗಿಂತಲೂ ಯುಕ್ತಿಯಿಂದಲೇ ಜಯ ಸಾಧಿಸಬಹುದೆಂಬುದನ್ನು ಲೋಕಕ್ಕೆ ಸಾಧಿಸಿ ತೋರಿಸುವನು.

ಅಷ್ಟಮಸ್ಕಂಧದಲ್ಲಿ ೧೫ನೆಯ ಅಧ್ಯಾಯದಿಂದ ೨೩ನೆಯ ಅಧ್ಯಾಯದವರೆಗೂ ಬಲಿಚಕ್ರವರ್ತಿ ಹಾಗೂ ಭಗವಂತನ ವಾಮನಾವತಾರದ ಕಥೆಯನ್ನು ವಿಸ್ತಾರವಾಗಿ ತಿಳಿಸಲ್ಪಟ್ಟಿದೆ.  ವಾಮನಮೂರ್ತಿಯು ತ್ರಿವಿಕ್ರಮನಾಗಿ ಬೆಳೆದು ಮೂರು ಲೋಕಗಳನ್ನೂ ಅಳೆದು, ದೇವಾದಿದೇವತೆಗಳಿಗೆಲ್ಲಾ ತೋರಿದ ವಿಶ್ವವ್ಯಾಪಿ ರೂಪದ ವರ್ಣನೆಯು ಸುಂದರವಾಗಿ ಚಿತ್ರಿಸಲಾಗಿದೆ.  


ಶ್ರೀವಿಷ್ಣು ಸಹಸ್ರನಾಮದಲ್ಲಿ "ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ" - ವಾಮನ ಎಂದರೆ ಚಿಕ್ಕ ಗಾತ್ರದವನು ಎಂದರ್ಥವಾಗುತ್ತದೆ.  ಭಗವಂತ ಅಣುವಿಗಿಂತ ಅಣುವಾಗಿ ನಮ್ಮ ಹೃತ್ಕಮಲದಲ್ಲಿ ನೆಲೆಸಿರುವನು.  ’ವಾಮ’ ಎಂದರೆ ಸೌಂದರ್ಯ, ವಾಮನ ಎಂದರೆ ಸೌಂದರ್ಯವನ್ನು ಕೊಡುವವನು.  ಸೌಂದರ್ಯದ ಕೇಂದ್ರ ಬಿಂದು ಕಣ್ಣು ಮತ್ತು ಭಗವಂತನ ಸನ್ನಿಧಾನ ಕಣ್ಣಿನಲ್ಲಿರುವುದು.  ವಾಮನ ಎಂಬ ಪದವನ್ನು ವಾ+ಅಮ+ನ ಎಂದು ಬಿಡಿಸಿದಾಗ ’ವಾ’ ಎಂದರೆ ಜ್ಞಾನ, ’ಅಮ’ ಎಂದರೆ ಅಜ್ಞಾನ ಹಾಗೂ ’ನ’ ಎಂದರೆ ನಯತಿ ಎಂಬರ್ಥವಾಗುವುದು.  ಜ್ಞಾನವನ್ನಾಗಲೀ, ಅಜ್ಞಾನವನ್ನಾಗಲೀ, ಅವರವರ ಯೋಗ್ಯತೆಗೆ ತಕ್ಕಂತೆ ಕರುಣಿಸುವವನೂ, ಜ್ಞಾನಮೂರ್ತಿಯೂ, ಆನಂದಮೂರ್ತಿಯೂ ಆದ ಭಗವಂತನು ವಾಮನನೆನಿಸುವನು  (ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರಿತ).

ಕಾಠಕೋಪನಿಷತ್ತಿನ ದ್ವಿತೀಯಾಧ್ಯಾಯದ ಎರಡನೇ ವಲ್ಲಿಯಲ್ಲಿ
ಊರ್ಧ್ವಂ ಪ್ರಾಣಮುನ್ನಯತ್ಯಪಾನಂ ಪ್ರತ್ಯಗಸ್ಯತಿ | ಮಧ್ಯೇ ವಾಮನಮಾಸೀನಂ, ವಿಶ್ವೇದೇವಾ ಉಪಾಸತೇ || - ಪೂಜನೀಯವಾದ ಪರಮಾತ್ಮನು ಪ್ರಾಣವನ್ನು ಮೇಲಕ್ಕೂ, ಅಪಾನವನ್ನು ಕೆಳಕ್ಕೂ ಕಳುಹಿಸುವನು.  ಮಧ್ಯದಲ್ಲಿ ಆಸೀನನಾಗಿರುವ ಆ ವಾಮನ ರೂಪಿ ಭಗವಂತನನ್ನು ದೇವತೆಗಳೆಲ್ಲರೂ ಆರಾಧಿಸುವರು ಎಂದು ತಿಳಿಸಲಾಗಿದೆ.

ಶ್ರೀಮದಾಚಾರ್ಯರು  ಕಾಠಕೋಪನಿಷದ್ಭಾಷ್ಯದಲ್ಲಿ
ನಮೋ ಭಗವತೇ ತಸ್ಮೈ ಸರ್ವತಃ ಪರಮಾಯ ತೇ |
ಸರ್ವಪ್ರಾಣಿ ಹೃದಿಸ್ಥಾಯ ವಾಮನಾಯ ನಮೋ ನಮಃ || - ಐಶ್ವರ್ಯಾದಿ ಷಡ್ಗುಣ ಸಂಪನ್ನನಾದ ಭಗವಂತನಿಗೆ ನಮಸ್ಕಾರ.  ಇಂದ್ರಿಯಗಳಿಂದಾರಂಭಿಸಿ ಅವ್ಯಕ್ತದವರೆಗೆ ಇರುವ ಎಲ್ಲ ತತ್ವಗಳಿಗಿಂತಲೂ ಉತ್ತಮನಾದ ಎಲ್ಲ ಜೀವಿಗಳ ಹೃದಯದಲ್ಲಿ ವಾಸವಾಗಿರುವ ವಾಮನ ರೂಪಿಯಾದ ನಿನಗೆ ಪುನಃ ಪುನಃ ನಮಸ್ಕಾರ ಎಂದು ಸ್ತುತಿಸಿದ್ದಾರೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ವಾಮನಾವತಾರವನ್ನು
"ವಾಮನ ವಾಮನ ಮಾಣವಶೇಷ ದೈತ್ಯವರಾಂತಕ ಕಾರಣ ರೂಪ"  - ಜ್ಞಾನ ಭಕ್ತ್ಯಾದಿಗಳಿಂದ ಆರಾಧಿತನೂ, ವಟುವೇಷಧಾರಿಯೂ, ಬಲಿಯ ಅಭೀಷ್ಟವನ್ನು ನೆರವೇರಿಸಿದವನೂ, ಇಂದ್ರನಿಗೆ, ತ್ರೈಲೋಕ್ಯವನ್ನು ಕರುಣಿಸಿದವನೂ ವಾಮನನೂ ಆದ ನಿನಗೆ ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಬಲಿಮುಖದಿತಿಸುತ ವಿಜಯ ವಿನಾಶನ ಜಗದವನಾಜಿತ ಭವಮಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಬಲಿ ಮೊದಲಾದ ಮಹಾ ದೈತ್ಯರನ್ನು ಜಯಿಸಿದ ಜಗದ್ರಕ್ಷಕನಾದ, ಸರ್ವಶ್ರೇಷ್ಠನಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ
ಪಿಂಗಾಕ್ಷ ವಿಕ್ರಮ ತುರಂಗಾದಿಸೈನ್ಯ ಚತುರಂಗಾವಲಿಪ್ತ ದನುಜಾ-
ಸಾಂಗಾಧ್ವರಸ್ಥ ಬಲಿ ಸಾಂಗಾವಪಾತ ಹೃಷಿತಾಂಗಾಮರಾಲಿ ನುತ ತೇ |
ಶೃಂಗಾರ ಪಾದನಖ ತುಂಗಾಗ್ರಭಿನ್ನ ಕನಕಾಂಗಾಂಡಪಾತಿ ತಟಿನೀ-
ತುಂಗಾತಿ ಮಂಗಲ ತರಂಗಾಭಿಭೂತ ಭಜಕಾಂಗಾಘ ವಾಮನ ನಮಃ || - ಮಹಾಪರಾಕ್ರಮಿಗಳಾದ ಗರ್ವಿಷ್ಠ ದಾನವರಿಂದ ಕೂಡಿಕೊಂಡು ಯಜ್ಞದಲ್ಲಿ ದೀಕ್ಷಿತನಾದ ಬಲಿಚಕ್ರವರ್ತಿಯನ್ನು, ವಾಮನರೂಪಿಯಾಗಿ ಬಂದು ಮೂರಡಿ ಭೂಮಿಯನ್ನು ಯಾಚಿಸಿ, ತ್ರಿವಿಕ್ರಮ ರೂಪಿಯಾಗಿ ಬೆಳೆದು ಆ ಮೂರು ಅಡಿಯನ್ನೂ ಕೊಡಲು ಆತನನ್ನು ಅಶಕ್ತನನ್ನಾಗಿ ಮಾಡಿ ಸುತಲಕ್ಕೆ ಕಳುಹಿಸಿ, ಇಂದ್ರನಿಗೆ ಮೂರು ಲೋಕಗಳನ್ನೂ ಕೊಟ್ಟು ದೇವತೆಗಳನ್ನು ಹರ್ಷಗೊಳಿಸಿದ, ತ್ರಿವಿಕ್ರಮನಾಗಿ ಬೆಳೆದಾಗ ತನ್ನ ಪಾದಗ್ರದ ಉಗುರಿನಿಂದ ಬ್ರಹ್ಮಾಂಡ ಕಟಾಹವು ಭಿನ್ನವಾಗಿ ಒಳನುಗ್ಗಿದ ಪವಿತ್ರ ಗಂಗೆಯ ಅಲೆಗಳಿಂದ ಭಕ್ತರ ಸಮಸ್ತ ಪಾಪಸಮೂಹಗಳನ್ನೂ ನಾಶಗೊಳಿಸಿದ ವಾಮನರೂಪಿಯಾದ ಪರಮಾತ್ಮನೇ ನಿನಗೆ ನಮಸ್ಕಾರ ಎಂದು ಸ್ತುತಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ನರಸಿಂಹಾವತಾರವನ್ನು
ಛಲಯಸಿ ವಿಕ್ರಮಣೇ ಬಲಿಮದ್ಭುತ ವಾಮನ
ಪದ ನಖ ನೀರಜನಿತ ಜನ ಪಾವನ
ಕೇಶವ ಧೃತವಾಮನರೂಪ ಜಯ ಜಗದೀಶ ಹರೇ - ವಾಮನ ರೂಪಿಯಾದ ಭಗವಂತ ಅದ್ಭುತವಾದ ತ್ರಿವಿಕ್ರಮ ರೂಪವನ್ನು ತಳೆದು ಬಲಿಯನ್ನು ಮೋಹಕಗೊಳಿಸಿದ,  ತನ್ನ ಪಾದದ ಅಂಗುಷ್ಠದ ಉಗುರಿನಿಂದ ಬ್ರಹ್ಮಾಂಡ ಕರ್ಪರವನ್ನು ಒಡೆದು ಗಂಗಾಜನಕನೆನಿಸಿಕೊಂಡು ಬುಧಜನರನ್ನು ಪಾವನಗೊಳಿಸಿದ, ವಾಮನ ರೂಪದ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಶ್ರೀ ಪುರಂದರದಾಸರು ತಮ್ಮ "ಅಚ್ಯುತಾನಂತ ಗೋವಿಂದ" ಎಂದ ಕೃತಿಯಲ್ಲಿ
ವಾಮನ ರೂಪಿಲಿ ಬಂದು | ಬಲಿಯ | ದಾನವ ಬೇಡಲು ಉಚಿತವು ಎಂದು || ಧಾರೆಯನೆರೆಯಲು ಅಂದು | ಬೆಳೆದು | ಧಾರಿಣಿಯೆಲ್ಲವನಳೆದ್ಯೊ ನೀನಂದು || ಎನ್ನುತ್ತಾ ಪುಟ್ಟ ವಾಮನನಾಗಿ ಬಂದು ಬಲಿಯು ದಾನದ ತೀರ್ಥವನ್ನು ಕೈಯಲ್ಲಿ ಬಿಟ್ಟಾಕ್ಷಣ ಬೆಳೆದು ಧಾರಿಣಿಯೆಲ್ಲವನ್ನೂ ಅಳೆದೆಯೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ  ವಾಮನಾವತಾರವನ್ನು ಸಮನ್ವಯಿಸಿದರೆ  ವಿಷಯಾಸಕ್ತಿಗಳಿಂದ ದೂರ ಸರಿದು ಪುಟ್ಟ ವಟು ವಾಮನನಂತೆ ವಿಧೇಯತೆ, ವಿನಮ್ರತೆಯಿಂದಲೇ ಲೌಕಿಕ ಭೋಗಗಳನ್ನು ಮೆಟ್ಟಿ ಪಾತಾಳಕ್ಕೆ ಅಟ್ಟಿ,  ಇಂದ್ರಿಯ ನಿಗ್ರಹವನ್ನು ಮಾಡಿ ತ್ರಿವಿಕ್ರಮನಂತೆ ಬೆಳೆದು ನಿಲ್ಲಬೇಕು ಎಂದು ತಿಳಿಯುತ್ತದೆ.   ಯಾವಾಗ ನಮ್ಮ ದೇಹ ಹಾಗೂ ಮನಸ್ಸು ಪೂರ್ಣ ಶುದ್ಧಿಯಾಗುತ್ತದೋ, ಆಗ ನಮ್ಮೊಳಗೇ ಭಗವಂತನ ಇರುವಿಕೆಯ ಅರಿವು ನಮಗಾಗುತ್ತದೆ.  ನಮ್ಮ ಮನಸ್ಸು ಲೌಕಿಕ ಭೋಗಾಸಕ್ತಿಗಳಲ್ಲಿ ಮುಳುಗಿ ಅಸ್ತಿತ್ವವೇ ಇಲ್ಲದಂತಾಗಿರುವುದು.  ಭಗವಂತನ ಸಾಕ್ಷಾತ್ಕಾರವಾಗಲು ನಾವು ಧೃಡ ಮನಸ್ಸಿನವರಾಗಬೇಕು, ಆಧ್ಯಾತ್ಮಿಕವಾಗಿ ಬಲಿಷ್ಠರಾಗಬೇಕು.  ಪುಟ್ಟ ವಟುವಾಗಿ ಬರುವ ವಾಮನ ರೂಪಿ ಭಗವಂತನನ್ನು ಮನದಲ್ಲಿ ಸ್ಥಾಪಿಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಬೇಕು.  ಧ್ಯಾನದಲ್ಲಿ ವಾಮನರೂಪಿಯನ್ನು ಆರಾಧಿಸುತ್ತಾ ಭಗವಂತನ ವಿಶ್ವವ್ಯಾಪ್ತಿಯೆಡೆಗೆ ಮನಸ್ಸನ್ನು ತಿರುಗಿಸಬೇಕು.  ಪರಮಾತ್ಮನೆಂಬುದು ಒಂದು ಶಕ್ತಿ, ಅವನು ಸರ್ವಾಂತರ್ಯಾಮಿ, ನನ್ನೊಳಗೂ, ಹೊರಗೂ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ ಎಂದು ತ್ರಿವಿಕ್ರಮರೂಪಿ ಭಗವಂತನನ್ನು ಆರಾಧಿಸಬೇಕು.  ಸರ್ವ ಪ್ರಕಾರಗಳಿಂದಲೂ ನಮ್ಮನ್ನು ಉದ್ಧರಿಸುತ್ತಾನೆ ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು.  ಭೂಮಂಡಲವೊಂದು ಅನಂತ ಶಕ್ತಿಗಳ ಆಗರ, ಪ್ರತಿಕ್ಷಣ ಘರ್ಷಿಸುವ ಶಕ್ತಿಗಳಿಂದ ಹೊಯ್ದಾಡುವ ವಿಶ್ವವನ್ನು ಭಗವಂತನು ತನ್ನ ಮೂರು ಹೆಜ್ಜೆಗಳನ್ನು ಊರಿ ಸುಸ್ಥಿತಿಗೆ ತಂದನೆಂದು ಕೂಡ ತಿಳಿಯಬಹುದಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ನಾಸಿಕದಲ್ಲಿ ವಾಮನರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ವಾಮನರೂಪದಿಂದವತರಿಸಿದಾಗ ರಮಾದೇವಿಯು ’ಸುಖಾ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ವೈರೋಚನೀಯ ಭೂಮಿ ಮೂರು ಪಾದವು ಬೇಡಿ
ಈರಡಿಯೊಳಗಳದೆ ಭ್ಯೂವೋಮ | ಭೂವ್ಯೋಮವಳೆದ ಭಾ-
ಗೀರಥಿಯ ಜನಕ ದಯವಾಗೋ || - ವಿರೋಚನನ ಮಗ ಬಲಿಚಕ್ರವರ್ತಿಯನ್ನು ಮೂರು ಪಾದ ಭೂಮಿ ಬೇಡಿ, ಎರಡು ಪಾದಗಳಲ್ಲಿ, ಭೂಲೋಕ ಮತ್ತು ಅಂತರಿಕ್ಷಗಳನ್ನಳೆದು ಪಾದನಖದಿಂದ ಬ್ರಹ್ಮಾಂಡ ಕರ್ಪರವನ್ನು ಒಡೆದು ಭಾಗೀರಥಿಯ ಜನಕನೆಂದೆನಿಸಿಕೊಂಡ ಹೇ ವಾಮನನೇ ಕೃಪೆತೋರೋ ಎಂದು ಪ್ರಾರ್ಥಿಸಿದ್ದಾರೆ.

ಭಗವಂತನ ವಾಮನಾವತಾರವೂ ಕೂಡ ಅನಂತ ಕರುಣೆಯ ಕಾರ್ಯವೇ ಆಗಿದೆ.  ಬಲಿಯ ಅಹಂಕಾರವನ್ನು ಮೆಟ್ಟಿ,  ಇಂದ್ರನ ಪದವಿಯನ್ನು ಮರಳಿ ಇಂದ್ರನಿಗೆ ದೊರಕಿಸುವುದು ದೇವತೆಗಳ ಮೇಲಿನ ಅಪಾರ ಕಾರುಣ್ಯದಿಂದಲೇ ಎಂಬುದು ತಿಳಿಯುತ್ತದೆ.  ಮೂರು ಲೋಕವನ್ನು ಅಳೆಯುವ ನೆಪದಿಂದ ಬ್ರಹ್ಮಾಂಡ ಕಟಾಹವನ್ನು ಭೇದಿಸಿ, ಗಂಗಾಜನಕನೆಂದೆನಿಕೊಂಡಿದ್ದು ಲೋಕದ ಸಮಸ್ತ ಬುಧಜನರ ಉದ್ಧಾರಕ್ಕಾಗಿಯೂ ಹಾಗೂ ಪಾಪಿಜನರ ಪಾಪ ಪರಿಹಾರಕ್ಕಾಗಿಯೂ ಆಗಿದೆ.  ಇಂತಹ ಕರುಣಾಸಾಗರನ ಕಾರುಣ್ಯಕ್ಕೆ ಯಾವ ಸಾಟಿಯೂ ಇಲ್ಲವೆಂಬುದನ್ನು ತಿಳಿಯಬೇಕಾಗಿದೆ.  ಭಾಗವತ ಅಷ್ಟಮಸ್ಕಂಧದ ೨೨ನೆಯ ಅಧ್ಯಾಯದಲ್ಲಿ ಬಲಿನಿಗ್ರಹವಾದಾಗ ಅಲ್ಲಿಗೆ ಬಂದ ಬಲಿಯ ಪಿತಾಮಹ ಪ್ರಹ್ಲಾದನು ಭಗವಂತನನ್ನೂ, ಅವನ ಕಾರುಣ್ಯವನ್ನೂ ಸ್ತುತಿಸುತ್ತಾ "ಮನ್ಯೇ ಮಹಾನದ್ಯ ಕೃತೋ ಹ್ಯನುಗ್ರಹೋ | ವಿಭ್ರಂಶಿತೋ ಯಚ್ಛ್ರಿಯ ಆತ್ಮಮೋಹನಾತ್" - ಬಲಿಗೆ ಸಕಲೈಶ್ವರ್ಯವನ್ನು ಕೊಟ್ಟವನೂ ನೀನೆ, ಮನಸ್ಸನ್ನು ಮರುಳುಗೊಳಿಸುವ ಸಂಪತ್ತಿನಿಂದ ಜಾರಿಸಿದ್ದೂ ನೀನೆ.  ಇದು ನೀನು ಬಲಿಯ ಮೇಲೆ ತೋರಿರುವ ಅಪಾರ ಕರುಣೆ ಹಾಗೂ ಪರಮಾನುಗ್ರಹವೇ ಆಗಿದೆ ಎಂದಿರುವ ಉಲ್ಲೇಖವಿದೆ.

ಚಿತ್ರಕೃಪೆ : ಅಂತರ್ಜಾಲ

ಕೇರಳದಲ್ಲಿ ವಾಮನರೂಪಿ ಭಗವಂತನ ದೇವಾಲಯದ ಕೊಂಡಿ http://en.wikipedia.org/wiki/Thrikkakara_Temple

ಕಜುರಾಹೋನಲ್ಲಿರುವ ವಾಮನರೂಪಿ ಭಗವಂತನ ದೇವಸ್ಥಾನದ ಅತಿ ಸುಂದರ ಚಿತ್ರಗಳಿಗಾಗಿ ಕೊಂಡಿ http://www.tripadvisor.in/Attraction_Review-g297647-d2665517-Reviews-Vaman_Temple-Khajuraho_Madhya_Pradesh.html

 ತ್ರಿವಿಕ್ರಮ ದೇವಾಲಯದ ಕೊಂಡಿ http://en.wikipedia.org/wiki/Tirukoilur