Tuesday, August 16, 2011

ಮಂಗಳಾಚರಣ ಸಂಧಿ - ೯ ನೇ ಪದ್ಯ...


ಪಂಚಭೇದಾತ್ಮಕ ಪ್ರಪಂಚಕೆ
ಪಂಚ ರೂಪಾತ್ಮಕನೆ ದೈವಿಕ
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ |
ಪಂಚವಿಂಶತಿ ತತ್ವ ತರತಮ
ಪಂಚಿಕೆಗಳನು ಪೇಳ್ದ ಭಾವಿ ವಿ
ರಿಂಚಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||

ಪ್ರತಿಪದಾರ್ಥ :  ಪಂಚಭೇದಾತ್ಮಕ ಪ್ರಪಂಚ - ಜೀವ-ಜೀವರ ಭೇದ, ಜೀವ-ಜಡರ ಭೇದ, ಜಡ-ಜಡ ಭೇದ, ಜೀವೇಶ ಭೇದ, ಜಡೇಶ ಭೇದ ಎಂಬ ಐದು ಭೇದಗಳುಳ್ಳ ಪ್ರಪಂಚ, ಪಂಚರೂಪಾತ್ಮಕನೆ ದೈವತ - ನಾರಾಯಣ, ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ಎಂಬ ಶ್ರೀಹರಿಯ ಐದು ರೂಪಗಳೇ ಅಧಿದೇವತೆಗಳು, ಪಂಚಮುಖ - ರುದ್ರದೇವರು, ಶಕ್ರಾದಿಗಳು - ಇಂದ್ರ ಮೊದಲಾದವರು, ಕಿಂಕರರು ಶ್ರೀಹರಿಗೆ - ಭಗವಂತನಾದ ಶ್ರೀಹರಿಯ ಸಹಚರರು (ಸೇವಕರು), ಪಂಚವಿಂಶತಿತತ್ವ - ಮಹದಾದಿ ೨೫ ತತ್ವಗಳು, ತರತಮ - ತಾರತಮ್ಯದಲ್ಲಿ ದೇವತೆಗಳು, ಪಂಚಿಕೆಗಳನು ಪೇಳ್ದ - ಪಂಚಭೇದಗಳ ವಿವರಗಳನ್ನು ವಿವರಿಸಿದ, ಭಾವಿ ವಿರಿಂಚಿ - ಭಾವಿ ಬ್ರಹ್ಮರು (ಮುಂದಿನ ಕಲ್ಪದಲ್ಲಿ ಬ್ರಹ್ಮ ಪದವಿಗೆ ಬರುವವರು), ಎನಿಪ ಆನಂದತೀರ್ಥರ - ಎಂದು ಕರೆಯುವ ಆನಂದಕರವಾದ ಮಧ್ವ ಸಿದ್ಧಾಂತವನ್ನು ನೀಡಿದ ಮಧ್ವರು, ನೆನೆವೆನನುದಿನವು - ನಿರಂತರವೂ ಸ್ಮರಿಸುವೆನು. 

ಈ ಪದ್ಯ  ಕೂಡ ಆನಂದತೀರ್ಥರನ್ನೇ ಕುರಿತದ್ದಾಗಿದೆ.  ಇಲ್ಲಿ ಆಚಾರ್ಯರು ಬೋಧಿಸಿದ ಪಂಚಭೇದ, ಪಂಚರೂಪ, ಇವೆಲ್ಲದರ ಕುರಿತು ತತ್ವವನ್ನು ಹೇಳುತ್ತದೆ. ಪಂಚ ಭೇದವೆಂದರೆ ೧) ಜೀವ ಮತ್ತು ಈಶ್ವರನಲ್ಲಿರುವ ಭೇದ.  ಜೀವವೆಂದರೆ ಬ್ರಹ್ಮನಿಂದಾರಂಭಿಸಿ ಅತೀ ಸೂಕ್ಷ್ಮ ಜೀವಿಗಳವರೆಗೂ ಇರುವ  ೨)  ಜಡ ಮತ್ತು ಈಶ್ವರ ಭೇದ. ಜಡವೆಂದರೆ ಚಲನೆ ಇಲ್ಲದ್ದು ಮತ್ತು  ಈಶ್ವರನಿಗೂ ಇರುವ ಭೇದ.  ೩) ಜಡಕ್ಕೂ ಜೀವಕ್ಕೂ ಇರುವ ಭೇದ.  ೪)  ಜಡ - ಜಡ  ಭೇದ.   ಜಡ   ವಸ್ತುಗಳಲ್ಲಿ ಒಂದರಿಂದ   ಒಂದಕ್ಕಿರುವ ಭೇದ.   ೫) ಜೀವ – ಜೀವ ಭೇದ.  ಹೀಗೆ ಪಂಚ ಭೇದಗಳಿಂದ ಕೂಡಿದ ಈ ಪ್ರಪಂಚಕ್ಕೆ “ಪಂಚ ಭೇದಾತ್ಮಕ ಪ್ರಪಂಚ” ಎಂದು ಹೆಸರು. ಈ ಪ್ರಪಂಚದಲ್ಲಿ ಈಶ (ಪರಮಾತ್ಮ) – ಜೀವ – ಜಡ ಪದಾರ್ಥ ಈ ಮೂರು ವಸ್ತುಗಳ ಹೊರತು ಪ್ರಸಿದ್ಧವಾದವು ಯಾವುದೂ ಇಲ್ಲ ಮತ್ತು ಈ ಮೂರು ವಸ್ತುಗಳೇ ಆಚಾರ್ಯರು ಬೋಧಿಸಿದ ಪಂಚಭೇದ ತತ್ವಕ್ಕೆ ಆಧಾರ.  ಪ್ರತೀ ಜೀವವೂ ತನ್ನದೇ ಆದ ಸ್ವಂತಿಕೆ ಹೊಂದಿರುತ್ತದೆ. ಜೀವ – ಜೀವಗಳಿಗೆ ಎಷ್ಟೇ ಹೋಲಿಕೆ ಇದ್ದರೂ.. ಅಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ.  ಉದಾ – ಅವಳಿ ಮಕ್ಕಳು.  ಸಾಮಾನ್ಯವಾಗಿ ಬೇರೆ ಯಾರೂ ಗುರುತಿಸಲಾಗದಿದ್ದರೂ ತಾಯಿಯಾದವಳು ಗುರುತಿಸುತ್ತಾಳೆ.  ಜಡ – ಜಡ ಭೇದ. ಜಡವಸ್ತುಗಳಲ್ಲಿರುವ ವ್ಯತ್ಯಾಸಗಳು.

ಇನ್ನು ಪಂಚರೂಪವೆಂದರೆ  - ಪರಮಾತ್ಮನ ಐದು ರೂಪಗಳು.  ಲಕ್ಷ್ಮೀ – ನಾರಾಯಣ, ಮಾಯಾ – ವಾಸುದೇವ, ಜಯ – ಸಂಕರ್ಷಣ, ಕೃತಿ – ಪ್ರದ್ಯುಮ್ನ ಮತ್ತು  ಶಾಂತಿ – ಅನಿರುದ್ಧ.  ಈ ಐದು ರೂಪಗಳುಳ್ಳ ನರಸಿಂಹನೇ ಸರ್ವೋತ್ತಮ ದೇವರು.

ಪಂಚಮುಖನಾದ ರುದ್ರ, ಶಕ್ರ ಎಂದರೆ ಇಂದ್ರ, ದೇವತೆಗಳೆಲ್ಲಾ ಶ್ರೀಹರಿಗೆ ಕಿಂಕರರಾಗಿರುತ್ತಾರೆಪಂಚವೆಂದರೆ ಐದು, ವಿಂಶತಿಯೆಂದರೆ ೨೦, ಇವುಗಳಲ್ಲಿ ಮೊದಲಿನ ನಾಲಕ್ಕು ತತ್ವಗಳಾದ ) ಅವ್ಯಕ್ತತತ್ವ ) ಮಹತ್ತತ್ವ ) ಅಹಂಕಾರತತ್ವ ಮತ್ತು ) ಮನಸ್ತತ್ವ, ಇವುಗಳನ್ನು ಸೂಕ್ಷ್ಮತತ್ವಗಳುಎಂದು ಕರೆಯುತ್ತಾರೆಉಳಿದವುಗಳು  ) ಪಂಚ ಭೂತಗಳು ಪಂಚತನ್ಮಾತ್ರ  ) ಪಂಚ ಜ್ಞಾನೇಂದ್ರಿಯಗಳು  ಹಾಗು ೮) ಪಂಚ  ಕರ್ಮೇಂದ್ರಿಯಗಳು ,  ಒಟ್ಟು  ೨೫ ತತ್ವಗಳುಇದರ ಅಭಿಮಾನಿ ದೇವತೆಗಳು ಮತ್ತು ಅವರ ತಾರತಮ್ಯವನ್ನು ತಿಳಿಸುತ್ತಾರೆ ತಾರತಮ್ಯ ಪಂಚಭೇದಗಳು ಎಂಬುದೇ ಆನಂದತೀರ್ಥರು ಪ್ರತಿಪಾದಿಸಿದ ತತ್ವಗಳಲ್ಲಿ ಬಹು ಮುಖ್ಯವಾದವುಇದರಿಂದಲೇ ಬಹು ಮುಖ್ಯವಾದಹರಿಸರ್ವೋತ್ತಮತ್ವಸಾಧಿಸುವುದುಅವ್ಯಕ್ತ ತತ್ವಾಭಿಮಾನಿ ರಮಾದೇವಿ, ಸರ್ವೋತ್ತಮನಾದ ಶ್ರೀಹರಿಗಿಂತ ಅನಂತ ಗುಣಗಳಲ್ಲಿ ಕಡಿಮೆಮಹತ್ತತ್ವಾಭಿಮಾನಿಗಳಾದ ಬ್ರಹ್ಮ, ವಾಯುಗಳು ರಮಾದೇವಿಗಿಂತ ಕೋಟಿ ಗುಣ ಕಡಿಮೆಯಾಗಿದ್ದಾರೆಅವರವರ ಪತ್ನಿ ವಾಣೀ, ಭಾರತೀ ತಮ್ಮ ಪತಿಗಳಿಗಿಂತ ೧೦೦ ಗುಣ ಕಡಿಮೆ ಇದ್ದಾರೆಅಹಂಕಾರಾಭಿಮಾನಿಗಳಲ್ಲಿ ಕಾಲಾಭಿಮಾನಿ ಗರುಡ, ಜೀವಾಭಿಮಾನಿ ಶೇಷ, ಅಹಂಕಾರಾಭಿಮಾನಿ ರುದ್ರ  ಸಮರಾದರೂ ವಾಣೀ ಭಾರತಿಯರಿಗಿಂತ ೧೦೦ ಕಡಿಮೆ.

ಜೀವ ಜೀವರಲ್ಲಿ ಭೇದ ಚೆನ್ನಾಗಿ ಉಂಟು ಎಂದು ತಿಳಿಯಬೇಕು.  ಪುರಂದರ ದಾಸರು ತಮ್ಮ “ಸ್ನಾನವ  ಮಾಡಿರೋ ಜ್ಞಾನ ತೀರ್ಥದಲಿ | ನಾನು ನೀನೆಂಬ ಅಹಂಕಾರ ಬಿಟ್ಟು || ಎಂಬ ಪದದಲ್ಲಿ “ವೇದಶಾಸ್ತ್ರವನೋದುವುದೊಂದು ಸ್ನಾನ | ಭೇದಾಭೇದ ತಿಳಿದರೊಂದು ಸ್ನಾನ || ಸಾಧು ಸಜ್ಜನರ ಸಂಗ ಒಂದು ಸ್ನಾನ | ಪುರಂದರ ವಿಠಲನ ಜ್ಞಾನವೇ ಗಂಗಾ ಸ್ನಾನ || ಎಂದಿದ್ದಾರೆ. 

ಜೀವರು ತ್ರಿವಿಧ – ಸಾತ್ವಿಕರು, ರಾಜಸರು ಮತ್ತು ತಾಮಸರು.  ಹೀಗೆ ಪರಮಾತ್ಮನಿಂದ ಹಿಡಿದು ತೃಣದ ತನಕ ತಾರತಮ್ಯ ಮತ್ತು ಪಂಚಭೇದಗಳು ಇವೆ.  ಎಲ್ಲರೂ ಎಲ್ಲವೂ ಎಲ್ಲೂ ಒಂದೇ ಅಲ್ಲ ಎಂಬ ತತ್ವ ನಿರೂಪಿಸಿದವರು ಶ್ರೀ ಆನಂದತೀರ್ಥರು.  ಇವರೇ ಮುಂದಿನ ಕಲ್ಪದಲ್ಲಿ ಬರುವ ಭಾವೀ ಬ್ರಹ್ಮರು.



ಈ ದೇವತಾ ತಾರತಮ್ಯವನ್ನು ಶ್ರೀ ಪುರಂದರ ದಾಸರು ತಮ್ಮ ಒಂದು ಪದದಲ್ಲಿ ಹೀಗೆ..

ಸತ್ಯ ಜಗಕಿದು ಪಂಚ ಭೇದವು ನಿತ್ಯ ಶ್ರೀಗೋವಿಂದನ |

ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ||


ಜೀವ ಈಶಗೆ ಭೇದಸರ್ವತ್ರ | ಜೀವಜೀವಕೆ ಭೇದವು ||

ಜೀವಜಡಕೆ ಜಡಜಡಕೆ ಭೇದ | ಜೀವಜಡ ಪರಮಾತ್ಮಗೆ ||೧||



ಮಾನುಷೋತ್ತಮಗಧಿಪ ಕ್ಷಿತಿಪರು | ಮನುಜ ದೇವ ಗಂಧರ್ವರು

ಜ್ಞಾನಿ ಪಿತ್ರಾಜಾನ ಕರ್ಮಜ | ದಾನವಾರಿ ತತ್ವಾತ್ಮರು ||೨||



ಗಣಪ ಮಿತ್ರರು ಸಪ್ತ ಋಷಿಗಳು | ವಹ್ನಿನಾರದ ವರುಣನು ||

ಇನಜಗೆ ಸಮ ಚಂದ್ರ ಸೂರ್ಯರು | ಮನುಸತಿಯು ಹೆಚ್ಚು ಪ್ರವಹನು ||೩||



ದಕ್ಷ ಸಮ ಅನಿರುದ್ಧ ಗುರುಶಚಿ | ರತಿ ಸ್ವಾಯಂಭುವರಾರ್ವರು ||

ಪಕ್ಷ ಪ್ರಾಣನಿಗಿಂತ ಕಾಮನು | ಕಿಂಚಿದಧಿಕನು ಇಂದ್ರನು ||೪||



ದೇವೇಂದ್ರನಿಗಿಂದಧಿಕ ಮಹರುದ್ರ ದೇವಸಮ ಶೇಷ ಗರುಡರು ||

ಕೇವಲಧಿಕರು ಶೇಷ ಗರುಡಗೆ ದೇವಿ ಭಾರತೀ ಸರಸ್ವತಿ ||೫||



ವಾಯುವಿಗೆ ಸಮರಿಲ್ಲ ಜಗದೊಳು | ವಾಯುದೇವರೇ ಬ್ರಹ್ಮರು ||

ವಾಯು ಬ್ರಹ್ಮಗೆ ಕೋಟಿಗುಣದಿಂದ | ಅಧಿಕ ಶಕ್ತಳು ಶ್ರೀರಮಾ  ||೬||



ಅನಂತ ಗುಣದಿಂ ಲಕುಮಿಗಿಂತ | ಅಧಿಕ ಪುರಂದರ ವಿಠಲನು |

ಘನಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ || ೭ ||  ಎಂದು ವಿವರಿಸಿದ್ದಾರೆ.

ಕೈವಾರ ತಾತಯ್ಯನವರು "ಪಂಚವಿಂಶತಿ ಮೀದ ಪ್ರಬಲು ಪರಂಜ್ಯೋತಿ" ಎಂದಿದ್ದಾರೆ.  ಪರಂಜ್ಯೋತಿ ಎಂದರೆ ದಿವ್ಯಜ್ಯೋತಿ.. ಪರಮಾತ್ಮ.  ಅದು ತಾನಾಗಿಯೇ ಬೆಳಗುತ್ತದೆ, ಬೇರೆ ಯಾರೂ ಹೊತ್ತಿಸಬೇಕಾಗಿಲ್ಲ.  ಅದು ಸ್ವಯಂಪ್ರಕಾಶಮಾನವಾಗಿ ಉರಿಯುತ್ತಿರುತ್ತದೆ.  ದೇಹದಲ್ಲಿ ಆಧ್ಯಾತ್ಮಿಕ ಹೃದಯವೇ ಹಣತೆ, ಅನುಭೂತಿಯೇ ಪ್ರಕಾಶ, ತತ್ತ್ವರೂಪಿಯಾದ ಪರಮಾತ್ಮನೇ ಪರಂಜ್ಯೋತಿ.  

ಡಿವಿಜಿಯವರು ತಮ್ಮ ಕಗ್ಗದಲ್ಲಿ ಇದೇ ಜೀವ – ಜಡ ಎಂಬುದೊಂದು ಅಗೋಚರ ಶಕ್ತಿ ಎನ್ನುತ್ತಾ..

ಜೀವ ಜಡರೂಪ ಪ್ರಪಂಚವನಾವುದೋ |

ಆವರಿಸಿಕೊಂಡುಮೊಳನೆರೆದುಮಿಹುದಂತೆ ||

ಭಾವಕೊಳಪಡದಂತೆ ಅಳತೆಗಳವಡದಂತೆ |

ಆ ವಿಶೇಷಕೆ ಮಣಿಯೋ – ಮಂಕುತಿಮ್ಮ ||

ಜೀವ  ಚೈತನ್ಯ ಹೊಂದಿರುವಂತದ್ದೂ, ಜಡ ರೂಪದಲ್ಲಿರುವಂತದ್ದೂ ಆದ ಈ ಪ್ರಪಂಚವನ್ನು ಅದ್ಯಾವುದೋ ಒಂದು ಪ್ರಚಂಡ ಶಕ್ತಿ ಆವರಿಸಿ ಕೊಂಡಿದೆ.  ಅದು ಎಲ್ಲಾ ಜೀವ-ಜಡ ವಸ್ತುಗಳ ಒಳಗಡೆಯೂ, ಹೊರಗಡೆಯೂ, ಎರಡು ಕಡೆಯೂ ಪಸರಿಸಿಕೊಂಡಿದೆ.  ಆ ಮಹಾನ್  ಶಕ್ತಿಗೆ, ಅಸಾಮಾನ್ಯ ಚೇತನಕ್ಕೆ ನಮಿಸು ಎನ್ನುತ್ತಾರೆ.