Wednesday, March 12, 2014

ಕರುಣಾ ಸಂಧಿ - ೧೯ ನೇ ಪದ್ಯ


ಪಾಪಕರ್ಮವ ಸಹಿಸುವರೆ ಲ-
ಕ್ಷ್ಮೀಪತಿಗೆ ಸಮರಾದ ದಿವಿಜರ-
ನೀ ಪಯೋಜಭವಾಂಡದೊಳಗಾವಲ್ಲಿ ನಾ ಕಾಣೆ |
ಗೋಪ ಗುರುವಿನ ಮಡದಿ ಭೃಗು ನಗ-
ಚಾಪ ಮೊದಲಾದವರು ಮಾಡ್ದ ಮ-
ಹಾಪರಾಧಗಳೆಣಿಸಿದನೆ ಕರುಣಾಸಮುದ್ರ ಹರಿ  ||೧೯||
 

ಪ್ರತಿಪದಾರ್ಥ : ಪಾಪಕರ್ಮವ ಸಹಿಸುವರೆ - ಅಸುರಾವೇಶದಿಂದಾಗಲೀ ಅಜ್ಞಾನದಿಂದಾಗಲೀ ಮಾಡುವ ಪಾಪಕೃತ್ಯಗಳನ್ನು ಸಹಿಸಿಕೊಳ್ಳುವಲ್ಲಿ, ಲಕ್ಷ್ಮೀಪತಿಗೆ - ಲಕ್ಶ್ಮೀದೇವಿಯ ಪತಿಯಾದ ಶ್ರೀಹರಿಗೆ, ಸಮರಾದ - ಸಾಟಿಯಿಲ್ಲದ ಸಮವಿಲ್ಲದ, ದಿವಿಜರನು - ದೇವತೆಗಳನ್ನೂ, ಈ ಪಯೋಜ ಭವಾಂಡದೊಳಗೆ - ಈ ಬ್ರಹ್ಮಾಂಡದಲ್ಲಿ, ಆವಲ್ಲಿ ನಾ ಕಾಣೆ - ಎಲ್ಲಿಯೂ ನಾನು ಕಂಡಿಲ್ಲ, ಗೋಪ - ಎಂದರೆ ಸ್ವರ್ಗಾಧಿಪತಿ ಇಂದ್ರ (ಅತಿಶಯವಾಗಿ ಮಳೆ ಸುರಿಸಿ ಗೋವುಗಳಿಗೂ ಜನರಿಗೂ ಹಿಂಸೆ ಕೊಟ್ಟವನು) ಮತ್ತು ಗೋಪ ಎಂದರೆ ನಂದಗೋಪ ಗೋವುಗಳ ಪರಿಪಾಲಕ, ಗುರುವಿನ ಮಡದಿ - ದೇವಗುರು ಬೃಹಸ್ಪತಿಯ ಪತ್ನಿ ತಾರೆ ಚಂದ್ರನ ಸಂಗ ಮಾಡಿ ಬುಧನನ್ನು ಪಡೆದವಳು, ಭೃಗು - ತ್ರಿಮೂರ್ತಿಗಳಲ್ಲಿ ಶ್ರೇಷ್ಠರಾರೆಂದು ಪರೀಕ್ಷಿಸುವ ಸಂದರ್ಭದಲ್ಲಿ ಶ್ರೀ ಹರಿಯ ವಕ್ಷಸ್ಥಳಕ್ಕೆ ಪಾದಪ್ರಹಾರ ಮಾಡಿದವರು, ನಗಚಾಪ - ತ್ರಿಪುರಾಸುರಸ ಸಂಹಾರದಲ್ಲಿ ಈಶ್ವರ ವಿಷ್ಣುವನ್ನೇ ಬಾಣವಾಗಿ ಉಪಯೋಗಿಸಿದ ಮತ್ತು ರಾವಣನ ಸಂಹಾರದ ನಂತರ ಬೆಟ್ಟವನ್ನೇ ಧನುಸ್ಸಾಗಿಸಿಕೊಂಡು (ನಗಚಾಪ) ಶ್ರೀರಾಮನ ಮೇಲೆ ಉಪಯೋಗಿಸಿದ, ಮೊದಲಾದವರು - ಇವರುಗಳೆಲ್ಲ, ಮಾಡಿದ ಮಹಾಪರಾಧಗಳ - ಮಾಡಿದ ಇಂತಹ ಮಹಾ ಅಪರಾಧಗಳನ್ನೆಲ್ಲಾ, ಎಣಿಸಿದನೆ - ಲಕ್ಷ್ಯಕ್ಕೆ ತೆಗೆದುಕೊಂಡನೇ, ಕರುಣಾಸಮುದ್ರ ಹರಿ - ಕರುಣೆಯ ಸಾಗರವೇ ಆಗಿರುವಂತಹ ಶ್ರೀಹರಿ.                               

ಶ್ರೀಹರಿಯು ತನ್ನ ಭಕ್ತರು ಅವಿದ್ಯಾವಶಾತ್ ಅಸುರಾವೇಷಗಳಿಂದ ಮಾಡಿದ ಪಾಪಗಳನ್ನು ನಂತರ ಪಶ್ಚಾತ್ತಾಪ ಪಟ್ಟು ಕ್ಷಮೆ ಬೇಡಿದರೆ, ಕ್ಷಮಾಗುಣದಲ್ಲಿ  ಅಸೀಮನಾದುದರಿ೦ದ, ಭಗವ೦ತನು ಕ್ಷಮಿಸಿಬಿಡುತ್ತಾನೆ.  ಏಕೆಂದರೆ ಅಸುರಾವೇಶಾದಿಗಳು ಪಾಪ ಪರಿಹಾರವಾದ ಉತ್ತರದಲ್ಲಿ, ಅನುಸ೦ಧಾನಪೂರ್ವಕವಾಗಿ, ಬಿ೦ಬಕ್ರಿಯಾದ್ವಾರ ಪ್ರತಿಬಿ೦ಬಕ್ರಿಯಾದಿ೦ದ ಆದದ್ದೆ೦ದು ತಿಳಿದು ದೇವರನ್ನು ಪ್ರಾಥಿ೯ಸುವುದರಿ೦ದ, ಸಹನೆಯಿ೦ದ ಕ್ಷಮಿಸಿಬಿಡುತ್ತಾನೆ.  ಪಾಪ ಮಾಡಿದ ಗೋಪ ಎಂದರೆ ಚಂದ್ರನ ತಪ್ಪನ್ನೂ,   ಲೋಕಪಾಲಕನಾದ ಚಂದ್ರನ ಗುರುಪತ್ನಿ-ಗಮನ ದೋಷವನ್ನು ಕ್ಷಮಿಸಿದ.  ಗೋಪ ಎಂದರೆ ಸ್ವರ್ಗ ಪಾಲಕ ಇಂದ್ರನೆಂದೂ ಅರ್ಥ ಮಾಡಬಹುದು.  ಈ ದೇವೇಂದ್ರನನ್ನು ಪಾರಿಜಾತ ಪ್ರಸಂಗ, ಗೋವರ್ಧನಗಿರಿ ಪ್ರಸಂಗ, ಖಾಂಡವ ದಹನ, ಅಹಲ್ಯಾ ಪ್ರಸಂಗವೆಂಬಷ್ಟೂ ಅಪರಾಧಗಳನ್ನು ಕ್ಷಮಿಸಿದ್ದಾನೆ.  ಹಾಗೇ ಬೃಹಸ್ಪತಾಚಾರ್ಯರ ಪತ್ನಿ ತಾರಾದೇವಿಯ ಚಂದ್ರ ಪರಿಗ್ರಹಣವನ್ನೂ ಮನ್ನಿಸಿ ಪಂಚ ಪತಿವ್ರತೆಯರಲ್ಲಿ ಒಬ್ಬಳನ್ನಾಗಿ ಮಾಡಿದ.  ಇನ್ನು ನಗಚಾಪ ಎಂದರೆ ರುದ್ರ ದೇವರು.  ರುದ್ರದೇವರು ಬಾಣಾಸುರನ ಪ್ರಸಂಗದಲ್ಲಿ ಹರಿ ವಿರುದ್ಧ ಯುದ್ಧಕ್ಕೆ ನಿಂತವರು.  ರಾವಣ ಸಂಹಾರವಾದ ಮೇಲೆ ರಾಮನನ್ನೇ ಯುದ್ಧಕ್ಕೆ ಕರೆದರು.  ಅಂತಹ ರುದ್ರದೇವರನ್ನು ಸ್ನೇಹಿತನಂತೆ ಕಂಡಿದ್ದಾನೆ ಶ್ರೀಹರಿ.  ಭೃಗುಮುನಿಗಳು ಸರ್ವೋತ್ತಮರು ಯಾರೆಂದು ಪರೀಕ್ಷೆ ಮಾಡಲು ಹರಿಯ ಎದೆಯನ್ನೇ ಒದ್ದರು.  ಇನ್ನು ದ್ವಾಪರದಲ್ಲಿ ವ್ಯಾಧನಾಗಿ ಕೃಷ್ಣನ ಕಾಲಿಗೆ ಹಕ್ಕಿಯೆಂದು ತಿಳಿದು ಬಾಣದಲ್ಲಿ ಹೊಡೆದವರು. ಕ್ಷಮಾಮಹಿಮನಾದ ಪರಮಾತ್ಮ ಅಂತಹವರನ್ನು ಕೂಡಾ ಕ್ಷಮಿಸಿದ್ದಾನೆ, ತನ್ನ ಭಕ್ತರನ್ನು ಮಕ್ಕಳಂತೆ ಕಾಣುತ್ತಾನೆ.  ವಿಶೇಷ ಕಾರಣದಿಂದ ತಪ್ಪು ಮಾಡಿದರೂ ಕ್ಷಮೆಕೋರಿ ಪಶ್ಚಾತ್ತಾಪ ಪಡುತ್ತಾರೆ ಈ ಭಕ್ತರುಗಳು.  ದೇವತೆಗಳು ಮಾಡಿದ ಪಾಪಕರ್ಮವನ್ನು ಸಹಿಸುವ ರೀತಿಯಲ್ಲಿ ಪರಮಾತ್ಮನು ದೈತ್ಯರು ಮಾಡಿದ ಪಾಪಕರ್ಮವನ್ನು ಸಹಿಸುವುದಿಲ್ಲ. ಏಕೆ೦ದರೆ ದೇವತೆಗಳ೦ತೆ ಸ್ವಾಮಿಭೃತ್ಯನ್ಯಾಯದಿ೦ದ ಶ್ರೀಹರಿಯಲ್ಲಿ ಭಕ್ತಿ ಮಾಡದೆ, ದೈತ್ಯರು ದ್ವೇಷ ಮಾಡುವುದರಿ೦ದ, ಅವರ ಪಾಪಕೃತ್ಯಗಳನ್ನು ಕ್ಷಮಿಸುವುದಿಲ್ಲ."

ಪಾಪಕರ್ಮವ ಸಹಿಸುವರೆ -     ಪಾಪ ಕರ್ಮವನ್ನು ಭಗವಂತನಲ್ಲದೆ ಇನ್ಯಾವ ದೇವತೆಗಳೂ ಸಹಿಸುವುದಿಲ್ಲ.  ಹೀಗೇಕೆಂದರೆ ಅನ್ಯ ದೇವತೆಗಳೆಲ್ಲರೂ ಪರಮಾತ್ಮನ ಅನನ್ಯ ಭಕ್ತರು.  ಪರಮಾತ್ಮನ ನಿಂದನೆಯನ್ನಾಗಲೀ, ಅವನ ಪೂಜೆಯಲ್ಲಿ ಲೋಪವನ್ನಾಗಲೀ ಅನ್ಯ ದೇವತೆಗಳು ಸಹಿಸುವುದಿಲ್ಲ.  ಭಗವಂತನ ವಿಸ್ಮರಣೆಯನ್ನು ಕೂಡ ಬೇರೆ ದೇವತೆಗಳು ಸಹಿಸುವುದಿಲ್ಲ.  ಭಗವಂತ ಅದೆಷ್ಟು ಕರುಣಾಮಯಿಯೆಂದರೆ, ಅವನನ್ನು ಪೂಜಿಸುತ್ತೇವೆಂಬ ಸಂಕಲ್ಪ ಮಾಡಿದರೇ ಸಾಕು, ಪೂಜೆಯ ಪ್ರಾರಂಭದಲ್ಲೇ ಫಲಕೊಟ್ಟು, ರಕ್ಷಿಸುವನು.    ದಾಸರಾಯರು ತಮ್ಮ "ಕಾಯೋ ಕಾಯೋ" ಎಂಬ ಕೃತಿಯಲ್ಲಿ  "ನೀ ದಯ ಮಾಡದಿರೀ ದಿವಿಜರು ಒಲಿದಾದರಿಸುವರೆ ವೃಕೋದರ ವಂದ್ಯ" ಎಂದಿದ್ದಾರೆ.  ಪಾಪ ಕರ್ಮವೆಂದರೆ ನಿಷಿದ್ಧವಾದ, ಧರ್ಮ ಶಾಸ್ತ್ರಕ್ಕೆ ವಿರೋಧವಾದ ಕರ್ಮಗಳನ್ನು ಮಾಡುವುದು ಮತ್ತು ವಿಹಿತವಾದ ಕರ್ಮಗಳನ್ನೂ, ಅನುಷ್ಠಾನಗಳನ್ನೂ ಮಾಡದೇ ಇರುವುದು ಎಂದರ್ಥವಾಗುತ್ತದೆ.  ಶ್ರೀಹರಿಯ ವಿಸ್ಮರಣೆಗೆ ಕಾರಣವಾಗುವಂತಹ ಕರ್ಮಗಳೆಲ್ಲವೂ ಪಾಪಕರ್ಮಗಳಾಗುತ್ತವೆ.  ಸಜ್ಜನರು ಹರಿಸ್ಮರಣೆಯನ್ನು ಮರೆತರೆ ಶ್ರೀಹರಿ ಕುಪಿತನಾಗುತ್ತಾನೆ.  ಅದೂ ಕೂಡ ಅವನ ಕರುಣೆಯೆಂದೇ ತಿಳಿಯಬೇಕು.  ಏಕೆಂದರೆ ಮಕ್ಕಳು ತಪ್ಪು ಮಾಡಿದಾಗ ತಂದೆ-ತಾಯಿಗಳು ಮಕ್ಕಳ ಮೇಲೆ ಕುಪಿತರಾಗುತ್ತಾರೆ.  ಕೋಪಿಸಿಕೊಂಡರೂ, ಬುದ್ಧಿ ಹೇಳಿ ತಿದ್ದುತ್ತಾರೆ.  ಸಜ್ಜನರಿಗೂ, ಸದ್ಭಕ್ತರಿಗೂ ಭಗವಂತ ತಂದೆ-ತಾಯೆಯಾಗಿ ಕಾಪಾಡುತ್ತಾನೆ.  ಆದ್ದರಿಂದಲೇ ಸಜ್ಜನರು ತನ್ನ ಸ್ಮರಣೆಯನ್ನು ಮರೆತಾಗ ಕೋಪಿಸಿಕೊಂಡು, ಅವರಿಗೆ ಅರಿವು ಕೊಡುತ್ತಾನೆ.  ವಿಸ್ಮರಣೆಯಿಂದಾಗಿ ಅವರು ಮಾಡಿದ ಪಾಪಕರ್ಮವನ್ನು ಸಹಿಸುತ್ತಾನೆ.  ಎಲ್ಲಾ ದೇವತೆಗಳನ್ನೂ ಭಗವಂತನ ಪರಿವಾರವೆಂದು ಆರಾಧಿಸುವವರಿಗೆ ಮಾತ್ರ ಪಾಪ ಪರಿಹಾರವಾಗುತ್ತದೆ.  
ಶ್ರೀ ಜಗನ್ನಾಥದಾಸರು ತಮ್ಮ "ಆ ವೆಂಕಟಗಿರಿನಿಲಯನಂಘ್ರಿ ರಾಜೀವ ಯುಗಳಗಾ ನಮಿಸುವೆನು" ಎಂಬ ಕೃತಿಯಲ್ಲಿ
ಮನವಾಕ್ಕಾಯದಿ ಬಿಡದೆ ಸೇವಿಸುವ
ಜನರ ಸಂಚಿತ ಕುಕರ್ಮಗಳ
ಮನೆಯ ಮುರಿದು ಆಗಾಮಿ ಫಲಂಗಳ
ಅನುಭವಕೀಯದೆ ಪ್ರಾರಬ್ದಾ
ಉಣಿಸಿ ಸುಲಭದಲಿ ತನ್ನ ಮೂರ್ತಿ ಚಿಂ
ತನೆ ಇತ್ತು ಸ್ವರೂಪಸುಖಾ
ಅನುದಿನದಲಿ ವ್ಯಕ್ತಮಾಡಿಸಿ ಕೊ
ಟ್ಟನಿಮಿತ್ತಾಪ್ತನೆನಿಸುತಿಪ್ಪ || ಎಂದು ಸದಾ ಸರ್ವದಾ ಸೇವಿಸುವ ಭಕ್ತರ ಕುಕರ್ಮಗಳನ್ನು ಕಳೆದು ಉದ್ಧರಿಸುವನೆಂದು ತಿಳಿಸಿದ್ದಾರೆ. 

ಶ್ರೀಮದಾಚಾರ್ಯರು ತಮ್ಮ ’ಸದಾಚಾರ ಸ್ಮೃತಿ’ಯಲ್ಲಿ "ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಚಾತುಚಿತ್" ಎಂದಿದ್ದಾರೆ.  ಭಗವಂತನ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡಿದಾಗ ಮಾತ್ರ ಪಾಪ ಕರ್ಮಗಳನ್ನು ಕಳೆಯುವನು.  ಸುಮ್ಮನೆ ಮಾಡಬೇಕೆಂದಾಗಲೀ ಅಥವಾ ತಾನು ಮಾಡಿರುವ ಪಾಪಗಳನ್ನು ಕಳೆದುಕೊಳ್ಳಬೇಕೆಂದಾಗಲೀ ಮಾಡಬಾರದು.  ಹರಿನಾಮೋಚ್ಛಾರಣೆಯನ್ನು ಭಕ್ತಿರಹಿತವಾಗಿ ಮಾಡಿದರೆ ಅದು ದೋಷ ಅಥವಾ ಪಾಪವಾಗುತ್ತದೆ.  ಅದರಿಂದ ಪಾಪವು ಹೆಚ್ಚಾಗುತ್ತದೆ.  ಭಕ್ತಿ ಪೂರ್ವಕವಾಗಿ ನಾಮೋಚ್ಛಾರಣೆ ಮಾಡುವುದಕ್ಕೆ ಯಾವ ವಿಧಿ ವಿಧಾನ, ಆಸನ, ನಿಯಮವೆಂದು ಏನೂ ಇಲ್ಲ.  ಮನಸ್ಸನ್ನು ಭಗವಂತನ ಪಾದದಲ್ಲಿ ಸ್ಥಿರಗೊಳಿಸಿ, ನಾಮಸ್ಮರಣೆ ಮಾಡಬೇಕು.

ಭಾಗವತ ಆರನೇ ಸ್ಕಂದದ ಎರಡನೆಯ ಅಧ್ಯಾಯದಲ್ಲಿ
ಸರ್ವೇಷಾಮಪ್ಯಘವತಾಮಿದಮೇವ ಸುನಿಷ್ಕೃತಮ್ |
ನಾಮವ್ಯಾಹರಣಂ ವಿಷ್ಣೋರ್ಯತಸ್ತದ್ವಿಷಯಾ ಮಶಿಃ || - ಜೀವಿಯು ಯಾವ ವಿಧದ ಪಾಪವನ್ನೇ ಮಾಡಿದ್ದರೂ ಕೂಡ, ಅವನ ಎಲ್ಲಾ ಪಾತಕಗಳಿಗೂ ನಾರಾಯಣ ನಾಮವನ್ನು ಉಚ್ಛರಿಸುವುದೇ ಮುಖ್ಯವಾದ ಪ್ರಾಯಶ್ಚಿತ್ತವೆಂದು ತಿಳಿಸಲಾಗಿದೆ.  ಇದೇ ಸ್ಕಂದ ಹಾಗೂ ಅಧ್ಯಾಯದಲ್ಲಿ ಬರುವ ಅಜಾಮಿಳನ ಕಥೆಯಲ್ಲಿ ನಾರಾಯಣ ನಾಮೋಚ್ಛಾರಣೆಯ ಮಹತ್ವವನ್ನು ವಿವರಿಸಿದ್ದಾರೆ .  ಅಜಾಮಿಳನು ಮೊದಲಿಗೆ ಒಬ್ಬ ಸದಾಚಾರಿ ಬ್ರಾಹ್ಮಣನಾಗಿದ್ದನು.  ಆದರೆ ಒಂದು ದಿನ ಅವನು ಪೂಜೆಗಾಗಿ ಹೂವು, ಹಣ್ಣು ಹಾಗೂ ಸಮಿತ್ತುಗಳನ್ನು ತರಲು ಕಾಡಿಗೆ ಹೋಗಿದ್ದಾಗ ಹೆಣ್ಣಿನ ಮೋಹಕ್ಕೆ ಬಿದ್ದು ಸದಾಚಾರವನ್ನು ಬಿಟ್ಟು, ಧರ್ಮಪತ್ನಿಯನ್ನು ತೊರೆದ.  ಗಳಿಸಿದ್ದ ಸಂಪತ್ತೆಲ್ಲಾ ಕರಗಿ ಬೀದಿಗೆ ಬಿದ್ದ, ಕಳ್ಳತನ ಮಾಡಿ, ಜೂಜಾಡಿ ಹಣ ಸಂಪಾದಿಸಿದ.  ಅಷ್ಟುಹೊತ್ತಿಗೆ ಅಜಾಮಿಳನಿಗೆ ವಯಸ್ಸಾಗಿ, ಅಂತ್ಯಕಾಲ ಸಮೀಪಿಸಿತ್ತು.  ಯಮಕಿಂಕರರು ಬಂದು ಎಳೆದೊಯ್ಯುವಾಗ, ಭಯದಿಂದ ಅಜಾಮಿಳ ತನ್ನ ೮ ವರ್ಷದ ಕೊನೆಯ ಮಗನನ್ನು ’ನಾರಾಯಣ’ ಎಂದು ಕರೆದ.  ಮಗನ ಹೆಸರೆಂದು ಉಚ್ಛರಿಸಿದ ನಾಮ ಭಗವಂತನ ನಾಮವೆಂಬ ಸತ್ಯ ಅವನಿಗೆ ತನ್ನ ಪೂರ್ವ ಸಂಸ್ಕಾರದಿಂದ ತಿಳಿಯಿತು.  ಅರಿವು ಮೂಡಿದ ಅಜಾಮಿಳ ಭಕ್ತಿಪೂರ್ವಕವಾಗಿ ಭಗವಂತನ ನಾಮೋಚ್ಛಾರಣೆ ಮಾಡತೊಡಗಿದ.  ವಿಷ್ಣುದೂತರು ಬಂದು ಅವನನ್ನು ಬಿಡಿಸಿದರು.  ಅರಿವು ಮೂಡಿದ್ದ ಅಜಾಮಿಳ, ತಾನು ಅದುವರೆಗೆ ಮಾಡಿದ್ದ ಪಾಪಗಳನ್ನು ನೆನೆದು ಪಶ್ಚಾತ್ತಾಪಗೊಂಡು ಹರಿದ್ವಾರಕ್ಕೆ ಹೋಗಿ ನಿರಂತರ ಭಗವಂತನ ಸ್ಮರಣೆಯನ್ನು ಮಾಡುತ್ತಾ ಕಾಲಕಳೆದ.  ಕೊನೆಗೊಂದು ದಿನ ದಿವ್ಯವಿಮಾನದಲ್ಲಿ ವಿಷ್ಣುಲೋಕಕ್ಕೆ ತೆರಳಿದ.  ಈ ದೃಷ್ಟಾಂತದಿಂದ ಹರಿಸ್ಮರಣೆಯನ್ನು ಭಕ್ತಿಪೂರ್ವಕವಾಗಿಯೂ, ಶುದ್ಧ ಮನಸ್ಸಿನ ಪಶ್ಚಾತ್ತಾಪದಿಂದಲೂ ಮಾಡಿದಾಗ ಮಾತ್ರ ಪಾಪ ಪರಿಹಾರವಾಗುವುದೆಂಬುದು ಅರ್ಥವಾಗುತ್ತದೆ. 

ಶ್ರೀ ಪುರಂದರ ದಾಸರ ತಮ್ಮ "ಯಾರಿದ್ದರೇನಯ್ಯಾ ನೀನಿಲ್ಲದೆನಗಿಲ್ಲ" ಎಂಬ ಕೃತಿಯಲ್ಲಿ  |ಅಜಾಮಿಳನು ಕುಲಗೆಡಲು ಕಾಲದೂತರು ಬರಲು | ನಿಜಸುತನ ಕರೆಯೆ ನೀ ಅತಿ ವೇಗದಿ | ತ್ರಿಜಗದೊಡೆಯಾ ಪುರಂದರ ವಿಟ್ಠಲನ ಕರುಣದಲಿ | ನಿಜದೂತರನು ಕಳುಹಿ ಪೊರೆದೆಗಡ ಹರಿಯೇ || ಎಂದು ಅಜಾಮಿಳನ ಕಥೆಯನ್ನು ತಿಳಿಸಿದ್ದಾರೆ.

ಗೋಪ - ಗೋ ಎಂದರೆ ಮೇಲ್ನೋಟಕ್ಕೆ ಗೋವು, ಹಸು ಎಂಬರ್ಥವಿದ್ದರೂ ಕೂಡ, ಹಸುಗಳನ್ನು ಮೇಯಿಸುವವನೂ ಗೋಪನು.  ಇಂದ್ರನು ಕೃಷ್ಣನನ್ನು ಇಂತಹ ಒಬ್ಬ ಗೋಪನೆಂದು ತಿಳಿದು ಅಪರಾಧ ಮಾಡಿದ.  ಆ ಸಮಯದಲ್ಲಿ ಇಂದ್ರ ಸ್ವತಃ ಅಸುರಾವೇಶಕ್ಕೆ ಸಿಲುಕಿದ್ದ.  ಇಂದ್ರನೂ ’ಗೋಪ’ನೇ ಆಗುತ್ತಾನೆ, ’ಗೋ’ ಎಂದರೆ ಸ್ವರ್ಗ ಮತ್ತು ’ಪ’ ಎಂದರೆ ಅಧಿಪತಿ ಎಂದಾಗುತ್ತದೆ.  ಸ್ವರ್ಗಾಧಿಪತಿಯಾದ ಇಂದ್ರನೂ ಗೋಪನೇ ಆಗುತ್ತಾನೆ.  ಗೋವರ್ಧನಗಿರಿ ಪ್ರಕರಣದಲ್ಲಿ ಇಂದ್ರ ಕೃಷ್ಣನನ್ನು ಸಾಧಾರಣ ಗೋಪನೆಂದೇ ತಿಳಿದು ತಪ್ಪು ಮಾಡಿದ.  ಭಗವಂತ ಗೋವರ್ಧನಗಿರಿ ಎತ್ತಿ ಹಿಡಿದು ಭಕ್ತರನ್ನು ರಕ್ಷಿಸಿದ ಮತ್ತು ಇಂದ್ರನ ಅಹಂಕಾರವನ್ನು ದಮನ ಮಾಡಿದ.  ಹಾಗೇ ಪಾರಿಜಾತಪ್ರಕರಣದಲ್ಲಿ ಕೂಡ ಎಲ್ಲಾ ದೇವತೆಗಳನ್ನೂ ಸೇರಿಸಿಕೊಂಡು ಭಗವಂತನ ಮೇಲೆ ಆಕ್ರಮಣ ಮಾಡಿದ್ದ.  ಅಪರಾಧಗಳನ್ನು ಮಾಡಿ ಪಶ್ಚಾತ್ತಾಪದಿಂದ ಶರಣು ಬಂದಾಗ, ಭಗವಂತನು ಕರುಣೆಯಿಂದ ಇಂದ್ರನ ಈ ಎರಡೂ ಅಪರಾಧಗಳನ್ನೂ ಕ್ಷಮಿಸಿದ.

ಗುರುವಿನ ಮಡದಿ - ದೇವಗುರು ಭೃಹಸ್ಪತ್ಯಾಚಾರ್ಯರ  "ಮಡದಿ ತಾರೆಯನ್ನು," ಚಂದ್ರ ಮೋಹಿತಗೊಂಡು ಬಲಾತ್ಕಾರ ಮಾಡಿದಾಗ, ಅವಳು ಪ್ರತಿಭಟಿಸಲಿಲ್ಲ.  ಚಂದ್ರನನ್ನು ಸೇರಿ ’ಬುಧ’ನನ್ನು ಮಗನಾಗಿ ಪಡೆದಳು.  ಪತಿಯ ಶಿಷ್ಯನಾದ ಚಂದ್ರ ಅವಳಿಗೆ ಮಗನಿದ್ದಂತೆ.  ಹೀಗಿದ್ದರೂ ಅವಳು ಚಂದ್ರನನ್ನು ಪ್ರತಿಭಟಿಸದೇ ಇದ್ದದ್ದು ಮಹಾಪರಾಧವೇ.  ಆದರೆ ಪಶ್ಚಾತ್ತಾಪದಿಂದ ದಗ್ಧಳಾಗಿ ಬಂದು ಭಗವಂತನಲ್ಲಿ ಶರಣಾದಾಗ, ಭಗವಂತ ಅವಳನ್ನು ಈ ಅಪರಾಧಕ್ಕೆ ಶಿಕ್ಷಿಸಲಿಲ್ಲ.  ತಾರೆಯನ್ನು ಪ್ರಾತಃಸ್ಮರಣೀಯರಾದ ಪಂಚಕನ್ಯೆಯರಲ್ಲಿ ಒಬ್ಬಳನ್ನಾಗಿಸಿದ "ಕರುಣಾಮಯಿಯಾಗಿದ್ದಾನೆ.

ಭೃಗು - ಮಹಾಜ್ಞಾನಿಯಾದ ಭೃಗು ಋಷಿಗಳು ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರೆಂದು ನಿರ್ಣಯಿಸುತ್ತೇನೆಂದು ಹೊರಟಿರುತ್ತಾರೆ.  ವೈಕುಂಠಕ್ಕೆ ತೆರಳಿ ಅಲ್ಲಿ ಭಗವಂತ ರಮಾದೇವಿಯೊಡನಿರುವುದನ್ನು ಕಾಣುತ್ತಾರೆ.  ಕಣ್ಣು ಮುಚ್ಚಿ ಕುಳಿತ ಶ್ರೀಹರಿಯ ವಕ್ಷಸ್ಥಳಕ್ಕೆ ಕ್ರೋಧಾವೇಶದಿಂದ ಕಾಲಿನಿಂದ ಒದೆಯುತ್ತಾರೆ.  ಸರ್ವೋತ್ತಮನಾದ, ಸಾಕ್ಷಾತ್ ಭಗವಂತನಿಗೇ ಕಾಲಲ್ಲಿ ಒದ್ದು ಅಪರಾಧವೆಸಗುತ್ತಾರೆ.  ಪಾಪ ಮಾಡಿದ ಋಷಿಗಳು ಪಶ್ಚಾತ್ತಾಪ ಪಡುವುದಿಲ್ಲವಾದ್ದರಿಂದ ಅವರನ್ನು ಭಗವಂತ ಶಿಕ್ಷಿಸುತ್ತಾನೆ.  ಪರಮ ಜ್ಞಾನಿಯಾದ ಋಷಿಗಳನ್ನು, ಅವಿವೇಕಿ, ಅಜ್ಞಾನಿಯಾಗಿ ನೀಚಕುಲದಲ್ಲಿ ’ಜರಾ’ ಎಂಬ ಬೇಡನಾಗಿ ಹುಟ್ಟುವಂತೆ ಮಾಡುತ್ತಾನೆ.  ಬೇಡನಾಗಿ ಜರಾ ಬಿಟ್ಟ ಬಾಣವನ್ನು ಹೂವೆಂದು ಸ್ವೀಕರಿಸುತ್ತಾನೆ.  ಬಾಣ ಬಿಟ್ಟ ಬೇಡನಿಗೆ ತನ್ನ ಸ್ವರೂಪದ ಅರಿವನ್ನು ಕೊಡುತ್ತಾನೆ.  ಆಗ ಪಶ್ಚಾತ್ತಾಪದಿಂದ ಶರಣಾಗಿ, ತನ್ನ ಅಪರಾಧಕ್ಕೆ ಮತ್ತೆಂತಹ ಘೋರ ಶಿಕ್ಷೆಯನ್ನು ಕೊಡುವೆಯೋ ಪರಮಾತ್ಮ ಎಂದು ದುಃಖಿತರಾದಾಗ, ಭಗವಂತ ಅವರನ್ನು ಉದ್ಧರಿಸಿ ಕರುಣಾಸಾಗರನಾಗುತ್ತಾನೆ.

ನಗಚಾಪ - ನಗ ಎಂದರೆ ಬೆಟ್ಟವೆಂದು ಅರ್ಥ.  ಯಾರು ಬೆಟ್ಟವನ್ನೇ ಧನುಸ್ಸಾಗಿ ಮಾಡಿಕೊಂಡಿರುವನೋ ಅವನೇ ’ನಗಚಾಪ’ನಾದ, ಶಿವನು.  ಭಾಗವತದ ಸಪ್ತಮಸ್ಕಂದದಲ್ಲಿ ತ್ರಿಪುರಾಸುರರ ಸಂಹಾರದ ಕಥೆ ಬರುತ್ತದೆ.  ಮಯನ ಸಹಾಯದಿಂದ ಅಸುರರು ಬೆಳ್ಳಿ, ಬಂಗಾರ ಹಾಗೂ ಕಬ್ಬಿಣಗಳಿಂದ ಮಾಡಿದ ಮೂರು ಪಟ್ಟಣಗಳನ್ನು ಮಾಡಿಕೊಳ್ಳುತ್ತಾರೆ.  ಅದರಲ್ಲಿ ಅಡಗಿ ಸುರರನ್ನು ಪೀಡಿಸುತ್ತಾರೆ.  ದೇವತೆಗಳು ಶಿವನನ್ನ ಮೊರೆಹೋಗುತ್ತಾರೆ.  ಶಿವ ಪಾಶುಪತಾಸ್ತ್ರದಿಂದ ಎಲ್ಲವನ್ನೂ ಸುಟ್ಟುಬಿಡುತ್ತಾನೆ,  ಆದರೆ ಮಯನು ತಯಾರಿಸಿದ ಸಿದ್ಧಾಮೃತರಸದಲ್ಲಿ ಅಸುರರನ್ನು ಅದ್ದಿ ತೆಗೆದಾಗ ಅವರು ಇಮ್ಮಡಿ ಶಕ್ತಿಯಿಂದ ವಿಜೃಂಭಿಸುತ್ತಾರೆ.  ಶಿವನ ಸಹಾಯಕ್ಕೆ ಬಂದ ವಿಷ್ಣುವು ಗೋವಾಗಿಯೂ, ಬ್ರಹ್ಮ ಕರುವಾಗಿಯೂ ಬಂದು ಸಿದ್ಧಾಮೃತರಸವನ್ನು ಸಂಪೂರ್ಣವಾಗಿ ಕುಡಿದುಬಿಡುತ್ತಾರೆ.  ಆಕಳು ಮತ್ತು ವತ್ಸನನ್ನು ನೋಡಿದರೂ ಏನೂ ಮಾಡದೆ, ಕಾವಲಿದ್ದ ಅಸುರರು ಮೋಹಪಾಶಕ್ಕೆ ಒಳಗಾಗುತ್ತಾರೆ.  ಭಗವಂತ ಸಮಸ್ತ ದೇವತೆಗಳ ಶಕ್ತಿಗಳಿಂದ ಕೂಡಿದ ಆಯುಧಗಳನ್ನು ಶಿವನಿಗೆ ಒದಗಿಸುತ್ತಾನೆ.  ರಥ, ಸೂತ, ಧ್ವಜ, ಧನಸ್ಸು ಮತ್ತು ಕವಚಗಳನ್ನು ಕೊಟ್ಟು, ಅಭಿಮಾನಿ ದೇವತೆಗಳನ್ನು ನಿಲ್ಲಿಸುತ್ತಾನೆ .  ತಾನೇ ’ಬಾಣ’ರೂಪನಾಗಿ ಶಿವನ ಧನುಸ್ಸಿನಿಂದ ’ನಾರಾಯಣಬಾಣ’ವಾಗಿ ಅಸುರರ ಸಂಹಾರ ಮಾಡುತ್ತಾನೆ.   ಹೀಗೆ  ಭಗವಂತನು ತ್ರಿಪುರಾಸುರರ ಸಂಹಾರದ ಕೀರ್ತಿಯನ್ನು ಕೊಟ್ಟು ರುದ್ರದೇವರನ್ನು "ತ್ರಿಪುರಾರಿ" ಎನ್ನಿಸಿ, ಕರುಣಿಸಿದವನು.   ದಶಮಸ್ಕಂದದಲ್ಲಿ ಬಾಣಾಸುರನ ವಧೆಯ ಕಥೆ ತಿಳಿಸಲ್ಪಟ್ಟಿದೆ.   ಬಾಣಾಸುರನು ಬಲಿಚಕ್ರವರ್ತಿಯ ಮಗನು ಮತ್ತು ಸಾವಿರ ತೋಳುಗಳನ್ನು ಹೊಂದಿದ್ದನು.  ಒಮ್ಮೆ ಶಂಕರನ ತಾಂಡವ ನೃತ್ಯಕ್ಕೆ ಸಾವಿರಾರು ವಾದ್ಯಗಳನ್ನು ಒಟ್ಟಾಗಿ ನುಡಿಸಿ, ಪ್ರಸನ್ನಗೊಳಿಸಿ, ಶಿವ ತನ್ನ ಪಟ್ಟಣವನ್ನು ರಕ್ಷಣೆ ಮಾಡಬೇಕೆಂಬ ಕೋರಿಕೆಯನ್ನು ವರವಾಗಿ ಪಡೆಯುತ್ತಾನೆ.  ಒಮ್ಮೆ ಬಾಣಾಸುರನು ತನ್ನ ಸಾವಿರ ತೋಳುಗಳಿಂದ ಯುದ್ಧ ಮಾಡಿ ಜಯಿಸಲು ಸಮಾನರು ಯಾರೂ ಇಲ್ಲವೆಂಬ ಅಹಂಕಾರದಿಂದ ಮಾತಾಡುತ್ತಾನೆ. ಶಂಕರ ಅಂತಹ ಮಹಾತ್ಮನೊಬ್ಬ ಬರುವನೆಂದು ಎಚ್ಚರಿಸಿದ್ದನು.  ರುಗ್ಮಿಯ ಮಗಳು ರುಗ್ಮವತಿ ತನ್ನ ನೀತಪತಿಯಾದ ಪ್ರದ್ಯುಮ್ನನನ್ನು ವರಿಸಿ, ಅನಿರುದ್ಧನನ್ನು ಪುತ್ರನನ್ನಾಗಿ ಪಡೆಯುತ್ತಾಳೆ.  ಬಾಣಾಸುರನ ಮಗಳಾದ ಉಷೆ ತನ್ನ ನೀತಪತಿಯಾದ ಅನಿರುದ್ಧನನ್ನು ಮಿತ್ರಳಾದ ಚಿತ್ರಲೇಖೆಯ ಮೂಲಕ ಗಗನಮಾರ್ಗದಿಂದ ಕರೆಸಿಕೊಂಡು, ಗಾಂಧರ್ವ ವಿವಾಹವಾಗುತ್ತಾಳೆ.  ತನ್ನ ಮಗಳ ಅಂತಃಪುರದಲ್ಲಿ ಅನಿರುದ್ಧನಿರುವುದನ್ನು ತಿಳಿದು ಬಾಣಾಸುರನು ಯುದ್ಧ ಪ್ರಾರಂಭಿಸಿದನು.  ನಾರದರಿಂದ ಯುದ್ಧದ ವಿಷಯ ತಿಳಿದು ಶ್ರೀಕೃಷ್ಣನು ಬಾಣನ ಪಟ್ಟಣಕ್ಕೆ ಬಂದು ಸಮಸ್ತ ಸೈನ್ಯವನ್ನೂ ನಾಶಮಾಡಿದನು.  ಬಾಣಾಸುರವ ಪಟ್ಟಣವನ್ನು ರಕ್ಷಣೆ ಮಾಡುತ್ತೇನೆಂಬ ವರಕೊಟ್ಟಿದ್ದ ಶಿವನು ಅನಿವಾರ್ಯವಾಗಿ ಶ್ರೀಕೃಷ್ಣನೊಡನೆ ಯುದ್ಧಕ್ಕೆ ನಿಲ್ಲುತ್ತಾನೆ.  ಯುದ್ಧದಲ್ಲಿ ಪರಾಜಯಗೊಂಡ ಶಿವನು ತನ್ನ ಭಕ್ತನಾದ ಬಾಣನನ್ನು ಕೊಲ್ಲಬೇಡವೆಂದು ಶ್ರೀಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.  ಭಗವಂತ ಬಾಣಾಸುರನ ೧೦೦೦ ತೋಳುಗಳನ್ನು ಕತ್ತರಿಸಿ, ಕೇವಲ ಎರಡು ತೋಳುಗಳನ್ನು ಉಳಿಸುತ್ತಾನೆ.  ತನಗೆ ಎದುರಾಗಿ ಯುದ್ಧಮಾಡಿದ ಶಂಕರನ ಅಪರಾಧವನ್ನು ಪರಿಗಣಿಸದೇ,  ಶಿವನ ಪ್ರಾರ್ಥನೆಯಂತೆ ಬಾಣನನ್ನು ಉಳಿಸಿ ಕರುಣಿಸುತ್ತಾನೆ.

ಪಾಪಕರ್ಮವನ್ನು ಸಹಿಸುವುದೆಂದರೆ ನಿಷಿದ್ಧ ಕರ್ಮಗಳನ್ನು ಮಾಡುತ್ತಲೇ ಇರುವುದನ್ನು ಸಹಿಸುವುದೆಂದರ್ಥವಲ್ಲ.  ಅಸುರಾವೇಶಕ್ಕೊಳಗಾಗಿ, ತಾಮಸ ಕರ್ಮಗಳನ್ನು ಮಾಡುತ್ತಾ ಯಾರು ಭಗವಂತನ ವಿಸ್ಮರಣೆ ಮಾಡುತ್ತಾರೋ ಅವರು ತಮ್ಮ ಕುಕರ್ಮಗಳಿಗೆ ತಕ್ಕ ಫಲವನ್ನು ಅನುಭವಿಸಲೇಬೇಕು.  ಆದರೆ ಯಾರು ತಮ್ಮ ಪಾಪಕರ್ಮಗಳನ್ನು ಅರಿತು ನಿಜವಾಗಿಯೂ ಪಶ್ಚಾತ್ತಾಪದಿಂದ ಭಗವಂತನ ಸ್ಮರಣೆ ಮಾಡುತ್ತಾರೋ, ಅಂತಹ ಪಾಪಕರ್ಮಗಳನ್ನು ಭಗವಂತನು ಸಹಿಸುತ್ತಾನೆಂದು ಅರ್ಥವಾಗುತ್ತದೆ.  ಹಾಗೆಂದು ಎಲ್ಲರಿಗೂ ಪ್ರಾಯಶ್ಚಿತ್ತ ಕರ್ಮಗಳು ಫಲಪ್ರದವಾಗುವುದಿಲ್ಲ.  ಪ್ರಾಯಶ್ಚಿತ್ತದಲ್ಲೂ ಯಾರು ಭಗವಂತನಿಗೆ ವಿನಮ್ರರಾಗಿರುತ್ತಾರೋ ಅವರಿಗೆ ಮಾತ್ರ ಇದು ಫಲಪ್ರದವಾಗುತ್ತದೆ.  ಯಾರು ಶುದ್ಧ ಭಕ್ತಿಯಿಂದ ಸ್ಮರಣೆ ಮಾಡುತ್ತಾರೋ ಅವರು ಪಾಪಿಗಳಾಗಿದ್ದರೂ ಕೂಡ ಭಗವಂತ ಅವರ ಅಪರಾಧಗಳನ್ನು ಸ್ಮರಿಸಿ, ಇಷ್ಟಾರ್ಥಗಳನ್ನು ಕರುಣೆಯಿಂದ ಪೂರೈಸುತ್ತಾನೆ.  ಶ್ರೀ ಕುಲಶೇಖರ್ ಆಳ್ವಾರ್ ವಿರಚಿತ ’ಮುಕುಂದಮಾಲಾ ಸ್ತೋತ್ರ’ದಲ್ಲಿ "ಶ್ರೀಮನ್ನಾಮ ಪ್ರೋಚ್ಯ ನಾರಾಯಣಾಖ್ಯಂ | ಕೇನ ಪ್ರಾಪುರ್ವಾಂಛಿತಂ ಪಾಪಿನೋSಪಿ|| - ನಾರಾಯಣ ಎಂಬ ನಾಮ ಸ್ಮರಣೆಯಿಂದ ಪಾಪಿಗಳೂ ಕೂಡ ಇಷ್ಟಾರ್ಥಗಳನ್ನು ಪಡೆಯುತ್ತಾರಾದ್ದರಿಂದ ಯಾರು ಬೇಕಾದರೂ ಭಗವನ್ನಾಮ ಸ್ಮರಣೆ ಮಾಡಬಹುದು ಎಂದಿದ್ದಾರೆ.

ಭಗವದ್ಗೀತೆಯಲ್ಲಿ ಭಗವಂತ
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇSಪಿ ಸ್ಯುಃ ಪಾಪಯೋನಯಃ |
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇSಪಿ ಯಾಂತಿ ಪರಾಂ ಗತಿಮ್ || - ಎಲ್ಲೈ ಅರ್ಜುನ ಸ್ತ್ರೀಯರು, ವೈಶ್ಯರು, ಶೂದ್ರರು ಹಾಗೆಯೇ ಚಂಡಾಲರು / ಪಾಪಿಗಳು ಯಾರೇ ಆಗಿರಲಿ, ಅವರು ಕೂಡ ನನ್ನಲ್ಲಿ ಶರಣಾಗಿ ಪರಮ ಗತಿಯನ್ನೇ ಪಡೆಯುತ್ತಾರೆ ಎಂದಿದ್ದಾನೆ.

ಶ್ರೀ ಶಂಕರಾಚಾರ್ಯರು ತಮ್ಮ "ಗೋವಿಂದಾಷ್ಟಕಮ್" ನಲ್ಲಿ :
ಗೋವಿಂದಾಷ್ಟಕಮೇತದಧೀತೇ ಗೋವಿಂದಾರ್ಪಿತ ಚೇತಾಯೋ |
ಗೋವಿಂದಾಚ್ಯುತ ಮಾಧವ ವಿಷ್ಣೋ  ಗೋಕುಲನಾಯಕ ಕೃಷ್ಣೇತಿ ||
ಗೋವಿಂದಾಂಘ್ರಿ ಸರೋಜಧ್ಯಾನ ಸುಧಾಜಲಧೌತ ಸಮಸ್ತಾಘಃ |
ಗೋವಿಂದಂ ಪರಮಾನಂದಾಮೃತ ಮಂತಸ್ಥಂಸ ಸಮಭ್ಯೇತಿ || - ಯಾರು ಗೋವಿಂದನಿಗೆ ಮನವನ್ನರ್ಪಿಸಿ ಗೋವಿಂದ, ಅಚ್ಯುತ, ಮಾಧವ, ವಿಷ್ಣುವೇ, ಗೋಕುಲನಾಯಕ, ಕೃಷ್ಣನೆನ್ನುತ್ತ ಗೋವಿಂದನನ್ನು ಸ್ಮರಿಸುತ್ತಾರೋ ಅವರು ಗೋವಿಂದನ ಚರಣ ಕಮಲ ಸುಧಾಜಲದಿಂದ ಎಲ್ಲ ಪಾಪಗಳನ್ನೂ ತೊಳೆದು ತನ್ನಲ್ಲಿರುವ ಪರಮಾನಂದಾಮೃತ ರೂಪಿ ಗೋವಿಂದನನ್ನೇ ಪಡೆಯುವರು ಎಂದಿದ್ದಾರೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ
ಪುಣ್ಯಪಾಪಾದಿಗಳು ನಿನ್ನಾಧೀನದೊಳಿರಲು
ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ
ನಿನ್ನರಿವ ಜ್ಞಾನ ಕರುಣಿಸೊ || -  ನೀನೇ ಸರ್ವಕರ್ತ, ಪುಣ್ಯಪಾಪಾದಿ ಕರ್ಮಗಳನ್ನು ಮಾಡಿ, ನಿನ್ನ ಅಧೀನನು, ದಾಸನೂ ಆದ ನನ್ನಿಂದ ಮಾಡಿಸುವೆ ಎಂಬ  ಜ್ಞಾನವನ್ನು ನನಗೆ ಕೊಟ್ಟು, ಆ ಮೂಲಕ ಪಾಪಪುಣ್ಯಗಳ ಲೇಪನವಾಗದಂತೆ ಅನುಗ್ರಹಿಸು ಎಂದಿದ್ದಾರೆ.

ಪಾಪ ಪುಣ್ಯಗಳು ಬರಲಾಪವೆ ನಿನ್ನುಳಿದು
ಪ್ರಾಪಕನು ನೀನೆ ಇರಲಾಗಿ | ಇರಲಾಗಿ ತಿಳಿಯದುದೆ
ಪಾಪ ತಿಳಿಯುವುದೆ ಮಹಪುಣ್ಯ || - ಭಗವಂತ ಪಾಪಪುಣ್ಯಗಳೆಲ್ಲಕ್ಕೂ ನೀನೇ ಪ್ರಾಪಕನು ಎಂದು ಅರಿಯದಿರುವುದೇ ಪಾಪ ಹಾಗೂ ಸರ್ವನಿಯಾಮಕ ನೀನೇ ಎಂಬುದನ್ನು ತಿಳಿಯುವುದೇ ಪುಣ್ಯ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ "ಪುಣ್ಯಪಾಪ ಋಣಾನುಬಂಧ ವಾಸಗೆಗಳಿವು | ಜನ್ಮಾಂತರದ ಕರ್ಮಶೇಷದಂಶಗಳು|| ಎಂದಿದ್ದಾರೆ.  ಎಲ್ಲದಕ್ಕೂ ಭಗವಂತನೇ ಕಾರಣವೆಂಬುದನ್ನು "ಪಾರಬ್ಧ ಕರ್ಮಮುಂ ದೈವಿಕದ ಲೀಲೆಯುಂ" ಎಂದಿದ್ದಾರೆ.  ಭಗವಂತನಿಗೆ ಶರಣಾಗದ "ಪಾಪಿಯನ್ನು ಪ್ರೋತ್ಸಹಿಸಿ (ಪಾಪಕರ್ಮಗಳನ್ನೇ ಮಾಡುವ ಪ್ರೇರಣೆ ಕೊಡುವುದು) ಸುಕೃತಿಯ ಪರೀಕ್ಷಿಸುತ ವೇಪಿಪನು ವಿಧಿ" - ಸುಜೀವಿಗಳನ್ನು ನಾನಾವಿಧವಾಗಿ ಪರೀಕ್ಷಿಸುತ್ತಾ ಪಕ್ವ ಮಾಡುತ್ತಾನೆ.  ಭೂಮಂಡಲದಲ್ಲಿ ಒಂದು ಸತ್ವಯುತವಾದ ಪಾಕವನ್ನು ಭಗವಂತ ತಯಾರಿಸುತ್ತಾನೆಂಬುದನ್ನು "ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ | ಭೂಪುಟದಿ ಜೀವರಸಗಳ ಪಚಿಸುವಂತೆ" || - ಸೂರ್ಯ ತನ್ನ ತಾಪದಿಂದ ಭೂಮಂಡಲದ ವಸ್ತುಗಳನ್ನು ಕಿರಣಗಳ ಮೂಲಕ ಗ್ರಹಿಸಿ ಪಾಕ ಮಾಡುತ್ತಾನೆ ಮತ್ತು ವೈದ್ಯನಾಗಿ ಋತುಗಳ ಮೂಲಕ ಸುಡುತ್ತಾನೆ, ಮಳೆಗೆ ಕಾರಣನಾಗಿ ತಂಪು ಮಾಡುತ್ತಾನೆ, ಪ್ರವಾಹ, ಭೂಕಂಪಗಳನ್ನು ಮಾಡಿ ಕುಲುಕಿಸುತ್ತಾನೆ.  ಹೀಗೆ ಮಾಡಿ ಪಾಕ ಸೃಷ್ಟಿಮಾಡಿ ಪಾಪಿಗಳನ್ನು ಪ್ರಚೋದಿಸಿ, ಸುಕೃತಿಗಳನ್ನು ತಾವು ಮಾಡಿದ ಒಳ್ಳೆಯ ಕರ್ಮಗಳ ಮೂಲಕ ಪರೀಕ್ಷಿಸಿ ಅವರವರಿಗೆ ತಕ್ಕುದಾದ ಗತಿಯನ್ನು ಕೊಡುತ್ತಾನೆ ಎಂದಿದ್ದಾರೆ.  ಒಟ್ಟಿನಲ್ಲಿ ಎಲ್ಲಕ್ಕೂ ಆ ಭಗವಂತನೇ ಒಡೆಯ ಸರ್ವಸ್ವತಂತ್ರ ಮತ್ತು ಕಾರಣಪುರುಷ ಎಂಬುದನ್ನು "ಒಟ್ಟಿನಲಿ ತತ್ತ್ವವಿದು ವಿಕಟರಸಿಕನೊ ಧಾತ | ತೊಟ್ಟಿಲನು ತೂಗುವನು, ಮಗುವ ಜಿಗುಟುವನು"| ಎಂಬ ಮಾತಿನಲ್ಲಿ ವ್ಯಕ್ತಪಡಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ