Thursday, November 20, 2014

ಕರುಣಾ ಸಂಧಿ - ೨೬ ನೇ ಪದ್ಯ


ಬಿಟ್ಟವರ ಭವಪಾಶದಿಂದಲಿ
ಕಟ್ಟುವನು ಬಹು ಕಠಿಣನಿವ ಶಿ-
ಷ್ಟೇಷ್ಟನೆಂದರಿದನವರತ ಸದ್ಭಕ್ತಿಪಾಶದಲಿ |
ಕಟ್ಟುವರ ಭವ ಕಟ್ಟು ಬಿಡಿಸುವ
ಸಿಟ್ಟಿನವನಿವನಲ್ಲ ಕಾಮದ
ಕೊಟ್ಟು ಕಾವನು ಸಕಲ ಸೌಖ್ಯವನಿಹಪರಂಗಳಲಿ || ೨೬ ||

ಪ್ರತಿಪದಾರ್ಥ : ಬಿಟ್ಟವರ - ಭಗವಂತನನ್ನು ಸ್ಮರಿಸದೆ ಭಜಿಸದೆ ಅರ್ಚಿಸದೆ ಮರೆತವರನ್ನು, ಭವಪಾಶದಿಂದಲಿ - ಸಂಸಾರವೆಂಬ ಹಗ್ಗದಿಂದಲಿ, ಕಟ್ಟುವನು - ಬಿಗಿಯುವನು ಕಟ್ಟಿ ಹಾಕುವನು, ಬಹು ಕಠಿಣನಿವ - ನಿಷ್ಠುರನಾಗುವವನು, ಶಿಷ್ಟೇಷ್ಟನೆಂದು ಅರಿತು - ಯೋಗ್ಯರಿಗೆ ಇಷ್ಟನಾದವನು ಶಿಷ್ಟಜನರನ್ನು ಉದ್ಧರಿಸುವವನು ಬ್ರಹ್ಮಾದಿ ದೇವತೆಗಳಿಗೆ ಪ್ರಿಯನಾದವನು ಎಂದು ತಿಳಿದು, ಅನವರತ - ನಿರಂತರವೂ, ಸದ್ಭಕ್ತಿ ಪಾಶದಲಿ - ಸದ್ಭಕ್ತಿ ಎಂಬ ಹಗ್ಗದಲ್ಲಿ, ಕಟ್ಟುವರ - ಕಟ್ಟಿಹಾಕುವವನು, ಭವಕಟ್ಟು ಬಿಡಿಸುವ - ಸಂಸಾರದ ಬಂಧನದಿಂದ ಮುಕ್ತಿಗೊಳಿಸುವವನು ಸದ್ಗತಿ ಕೊಡುವವನು, ಸಿಟ್ಟಿನವನಿವನಲ್ಲ - ತನ್ನ ಪ್ರೀತಿಯ ಭಕ್ತರ ಮೇಲೆಂದಿಗೂ ಸಿಟ್ಟು ಮಾಡಿಕೊಳ್ಳದವನು, ಕಾಮದ - ಬೇಡಿದ ಇಷ್ಟಾರ್ಥಗಳನ್ನು ಕೊಡುವವನು, ಸಕಲ ಸೌಖ್ಯವನು ಇಹಪರಂಗಳಲಿ - ಇಹದಲ್ಲಿ ಸಕಲ ಭೋಗಗಳನ್ನೂ ಪರಲೋಕದಲ್ಲಿ ಸಮಸ್ತ ಸುಖವನ್ನೂ ಕೊಟ್ಟು ಸಂರಕ್ಷಿಸುವವನು (ಪರದಲ್ಲಿ ಸುಖವೆಂದರೆ ಮುಕ್ತಿ ಎಂಬ ಅರ್ಥವಾಗುವುದು).

ಲೌಕಿಕ ಭೋಗಗಳಿ೦ದ, ಸ೦ಪತ್ತುಗಳಿ೦ದ ಮದೋನ್ಮತ್ತನಾಗಿ ಭಗವ೦ತನ ಸರ್ವೋತ್ತಮತ್ವವನ್ನು ತಿಳಿಯದೆ, ತತ್ವಜ್ಞಾನವನ್ನು ಸ೦ಪಾದಿಸದೆ, ಸತ್ಕಾಮಕರ್ಮಗಳನ್ನು ಅನುಷ್ಟಾನ ಮಾಡದೇ ಇರುವ೦ತಹ ಜೀವನನ್ನು, ಪರಮಾತ್ಮನು ಜನನ ಮರಣಾಖ್ಯರೂಪವಾದ ಸ೦ಸಾರವೆ೦ಬ ಹಗ್ಗದಿ೦ದ ಬಿಗಿದು, ನರಕವಾಸವಾಗುವ ಸಮಯದಲ್ಲಿ ದಯಾರಹಿತನಾಗಿ ಬಹು ತರವಾದ ಕ್ಲೇಷಗಳನ್ನು ಉ೦ಟು ಮಾಡುತ್ತಾನೆ. ಜೀವನು ಭಗವ೦ತನನ್ನು ಗುಣಪೂರ್ಣನೆ೦ತಲೂ, ಸರ್ವೋತ್ತಮನೆ೦ತಲೂ ಅರಾಧಿಸುತ್ತ, ಸತ್ಕಾಮಕರ್ಮಗಳಲ್ಲಿ ತನ್ನನ್ನು ತೊಡಗಿಸಿಕೊ೦ಡು, ಮಾಹಾತ್ಮ್ಯಜ್ಞಾನಪೂರ್ವಕ ಸುಧೃಡಸ್ನೇಹದಿ೦ದ, ಪರಮಾತ್ಮನ ಪ್ರತಿಮೆಯನ್ನು ತನ್ನ ಹೃದಯಾಕಾಶದಲ್ಲಿ ಧ್ಯಾನೋಪಾಸನೆಯಿ೦ದ ನಿಲ್ಲಿಸಿ, ಭಕ್ತಿಪೂರ್ವಕವಾಗಿ ತನ್ನನ್ನು ಸಮರ್ಪಿಸಿಕೊಳ್ಳಬೇಕಾಗುತ್ತದೆ ಎ೦ದು ದಾಸರಾಯರು ತಿಳಿಸುತ್ತಾರೆ. ಅ೦ತಹ ಸುಜೀವನನ್ನು ಭಗವ೦ತನು ಸ೦ಸಾರಕ್ಕೆ ಕಾರಣವಾದ ಲಿ೦ಗದೇಹವೆ೦ಬ ಹಗ್ಗದ ಕಟ್ಟನ್ನು ವಿರಜಾಸ್ನಾನದಿ೦ದ ಭೇದಿಸಿ, ದಿವ್ಯಲೋಕಗಳನ್ನು ಕೊಟ್ಟು ಕಾಪಾಡುತ್ತಾನೆ. ಬೇಡಿದಿಷ್ಟಾರ್ಥಗಳನ್ನು ಅನುಗ್ರಹಿಸಿ, ತ್ರಿಗುಣೋಪಾಧಿಯಿ೦ದ ಮಾಡುವ ದೋಷಕಾರ್ಯಗಳಲ್ಲಿ, ಪರಮಾತ್ಮನ ಅನುಸ೦ಧಾನವಿರುವುದರಿ೦ದ, ತಾನು ಕೋಪಿಸಿಕೊಳ್ಳದೆ ಅಪರೋಕ್ಷಜ್ಞಾನವನ್ನು ಕೊಟ್ಟು, ಸ೦ಚಿತಾಗಾಮಿಗಳಿ೦ದ ಬರುವ ಪಾಪಕರ್ಮಗಳಿ೦ದ ನಿರ್ಲಿಪ್ತನನ್ನಾಗಿ ಮಾಡುತ್ತಾ, ಜೀವನ್ಮುಕ್ತರನ್ನಾಗಿಸಿ, ಪ್ರಳಯಾ೦ತಕ್ಕೆ ಮೋಕ್ಷವನ್ನು ದಯಪಾಲಿಸುತ್ತಾನೆ.

ಬಿಟ್ಟವರ ಭವಪಾಶದಿಂದಲಿ ಕಟ್ಟುವನು - ಬಿಟ್ಟವರ ಎಂದರೆ ಯಾರು ಭಗವಂತನನ್ನು ಬಿಟ್ಟರೋ ಅವರು ಎಂದರ್ಥವಾಗುತ್ತದೆ.  ಭಗವಂತನನ್ನು ಬಿಡುವುದೆಂದರೆ ಏನು ಎಂಬ ಪ್ರಶ್ನೆ ಬಂದಾಗ, ಭಗವಂತನನ್ನು ಜೀವನು ಎಂದಿಗೂ, ಒಂದು ಕ್ಷಣಕ್ಕೂ ಬಿಡಲಾಗುವುದಿಲ್ಲವೆಂದು ತಿಳಿಯುತ್ತದೆ.  "ದ್ವಾ ಸುಪರ್ಣ" ಎಂಬ ಶ್ರುತಿಗಣುಗುಣವಾಗಿ, ಭಗವಂತನೂ ಜೀವನೂ ಇಬ್ಬರೂ ದೇಹವೆಂಬ ವೃಕ್ಷದಲ್ಲಿ ಎರಡು ಪಕ್ಷಿಗಳು.  ಸದಾ ಒಟ್ಟಿಗೇ ಇರುವಂತಹವರು.  ಜೀವನೂ ಪರಮಾತ್ಮನನ್ನು ಬಿಟ್ಟು ಇರಲಾರ, ಪರಮಾತ್ಮನೂ ಜೀವನನ್ನು ಬಿಟ್ಟು ಒಂದರೆಕ್ಷಣವೂ ಇರಲಾರನು.  ಆದರೆ ಇಲ್ಲಿ ಬಿಟ್ಟವರ ಎಂದು ಉಪಯೋಗವಾಗಿರುವ ಪದಕ್ಕೆ ದಾಸರಾಯರು, ಭಗವಂತನನ್ನು ವಿಸ್ಮರಣೆ ಮಾಡಿದವರು ಎಂದರ್ಥೈಸುತ್ತಾರೆ.  ಭಗವಂತನನ್ನು ಭಕ್ತಿಯಿಂದ ಆರಾಧಿಸುವುದಕ್ಕಾಗಿಯೇ ಜೀವನು ಸಾಧನಾ ಶರೀರವನ್ನು ಪಡೆದಿರುತ್ತಾನೆ.  ಆದರೆ ತಾನು ಬಂದ ಮೂಲ ಉದ್ದೇಶವನ್ನೇ ಮರೆತು, ಭಗವಂತನನ್ನೇ ವಿಸ್ಮರಣೆ ಮಾಡುತ್ತಾ ವಿಷಯಾಸಕ್ತಿಗಳಲ್ಲಿ ಮುಳುಗಿದವರನ್ನು ’ಬಿಟ್ಟವರು’ ಎಂದು ಕರೆದಿದ್ದಾರೆ.  ಹೀಗೆ ಯಾರು ತನ್ನನ್ನು ಮರೆತು ಲೌಕಿಕ ಜಗತ್ತಿನಲ್ಲಿ ಮುಳುಗುತ್ತಾರೋ, ಅಂತಹವರನ್ನು ಭಗವಂತನು ಸಂಸಾರ ಬಂಧನಗಳಲ್ಲಿ ಕಟ್ಟಿಹಾಕಿ ಪುನಃ ಪುನಃ ಜನ್ಮವೆತ್ತುವಂತೆ ಮಾಡುತ್ತಾನೆ.  ಭವ ಎಂದರೆ ಸಂಸಾರವೆಂದೂ ಪಾಶವೆಂದರೆ ಹಗ್ಗವೆಂದೂ ತಿಳಿಯುತ್ತದೆ.  ಸಾಧನೆಯ ಮಾರ್ಗವನ್ನು ಆಯ್ದುಕೊಂಡು, ಭಗವಂತನಲ್ಲಿ ಭಕ್ತಿ ಮೂಡುವ ತನಕವೂ ವ್ಯರ್ಥ ಜನ್ಮಗಳು ಆಗುತ್ತಲೇ ಇರುತ್ತವೆ. ವ್ಯರ್ಥ ಜನ್ಮಗಳೆಂದರೆ ಮಾನವ ಜನ್ಮವಲ್ಲವೆಂದೂ ಕೂಡ ಊಹಿಸಬಹುದು.  ಅರಿವಿಲ್ಲದ, ಜ್ಞಾನದಾಹವಿಲ್ಲದ ಕ್ರಿಮಿ, ಕೀಟಗಳ, ಪ್ರಾಣಿಗಳ ಜನ್ಮಗಳನ್ನು ಕೂಡ ಪಡೆಯಬಹುದು. ನಾವು ಪಡೆದಿರುವ ಈ ಮಾನವ ಜನ್ಮವು ಹಿಂದೆ ನಾವು ಮಾಡಿದ ಯಾವುದೋ ಪುಣ್ಯ ವಿಶೇಷದಿಂದಾಗಿಯೇ ನಮಗೆ ಲಭ್ಯವಾಗಿದೆಯೆಂದು ತಿಳಿಯಬೇಕು.  ಆದರೆ ಸಿಕ್ಕಿರುವ ಈ ಅದ್ಭುತವಾದ, ಅಮೂಲ್ಯವಾದ ಅವಕಾಶದ ಜನ್ಮವನ್ನು ಭಗವಂತನ ಸ್ಮರಣೆ ಮಾಡದೇ ಬಿಟ್ಟು ಬಿಟ್ಟರೆ, ಮುಂದೆ ನಮಗೆ ಮತ್ತೊಂದು ಉತ್ತಮ ಜನ್ಮ ಸಿಕ್ಕುವುದೆಂಬ ಭರವಸೆಯೇ ಇಲ್ಲವಾಗುತ್ತದೆ.   ಆದ್ದರಿಂದ ಭಗವಂತನಲ್ಲಿ ಶರಣಾಗಿ, ಅವನನ್ನು ಭಕ್ತಿಯ ಪಾಶದಿಂದ ಕಟ್ಟಿದರೆ ಮಾತ್ರ ನಮಗೆ ಭವಪಾಶದಿಂದ ಬಿಡುಗಡೆ ಸಿಕ್ಕುತ್ತದೆ.  ನಾವು ಅವನನ್ನು ಕಟ್ಟಿದರೆ ಮಾತ್ರ ಅವನು ನಮ್ಮನ್ನು ಬಿಡಿಸುತ್ತಾನೆ.  ನಾವು ಅವನನ್ನು ಬಿಟ್ಟರೆ ಅವನು ನಮ್ಮನ್ನು ಕಟ್ಟಿಹಾಕಿ ಬಿಡುತ್ತಾನೆ. 

ಶ್ರೀ ಶಂಕರಾಚಾರ್ಯರು ತಮ್ಮ "ಭಜಗೋವಿಂದ ಸ್ತೋತ್ರ"ದಲ್ಲಿ
ಪುನರಪಿ ಜನನಂ ಪುನರಪಿ ಮರಣಂ | ಪುನರಪಿ ಜನನೀ ಜಠರೇ ಶಯನಮ್ ||
ಇಹ ಸಂಸಾರೇ ಖಲು ದುಸ್ತಾರೇ | ಕೃಪಯಾ ಪಾರೇ ಪಾಹಿ ಮುರಾರೇ || - ವಿಷಯಾಸಕ್ತಿಗಳಲ್ಲಿ ಮುಳುಗಿ ಪುನಃ ಹುಟ್ಟುವುದು, ಪುನಃ ಸಾಯುವುದು, ಪುನಃ ತಾಯಿಯ ಗರ್ಭವಾಸದ ದುಃಖ ಅನುಭವಿಸುವುದು, ಈ ದುಸ್ತಾರವಾದ ಸಂಸಾರದಲ್ಲಿ ಸಿಲುಕುವಿದರಿಂದ ಪಾರು ಮಾಡು ಮುರಾರೇ ಎಂದು ಪ್ರಾರ್ಥಿಸುತ್ತಾ ಭಗವಂತನಲ್ಲಿ ಶರಣಾಗು ಮೂಢ ಮನುಜನೇ, ಸದಾ ಗೋವಿಂದನನ್ನು ಭಜಿಸು ಎನ್ನುತ್ತಾರೆ.  ಭಗವಂತನನ್ನು ಬಿಟ್ಟರೆ ಹೀಗೇ ಜನನ ಮರಣಗಳ ಚಕ್ರದಲ್ಲಿ ತಿರುಗುತ್ತಲೇ ಇರಬೇಕಾಗುತ್ತದೆ.  ಆದ್ದರಿಂದಲೇ  | ಗೇಯಂ ಗೀತಾ ನಾಮ ಸಹಸ್ರಂ | ಧ್ಯೇಯಂ ಶ್ರೀಪತಿರೂಪ ಮಜಸ್ರಮ್ || - ಭಗವದ್ಗೀತೆಯನ್ನೂ, ವಿಷ್ಣು ಸಹಸ್ರನಾಮವನ್ನೂ ನಿರಂತರವಾಗಿ ಪಠಿಸುತ್ತಿರಬೇಕು ಮತ್ತು ಶ್ರೀಪತಿಯ ಅದ್ಭುತವಾದ ರೂಪವನ್ನು ಸದಾ ಸ್ಮರಿಸುತ್ತಾ ಇರಬೇಕು.  ಆಗಲೇ ಭಗವಂತ ಕಟ್ಟಿದ್ದ ಭವ ಪಾಶವನ್ನು ಬಿಡಿಸುವನು ಎಂದಿದ್ದಾರೆ.

ನಮ್ಮ ಹೃದಯಾಕಾಶದಲ್ಲಿರುವ ಭಗವಂತನನ್ನು ಒಳಗಣ್ಣು ತೆರೆದು ನೋಡುವ ಪ್ರಯತ್ನ ಮಾಡುತ್ತಾ, ಸದಾ ಚಿನ್ಮಯನ ಚಿಂತನೆ ಮಾಡುತ್ತಾ ಅವನನ್ನು ನಾವು ಕಟ್ಟಿದರೆ, ಅವನು ನಮ್ಮ ಲಿಂಗ ದೇಹವನ್ನು ಭಂಗ ಮಾಡಿ, ನಮಗೆ ಮುಕ್ತಿ ಕೊಡುವನು ಎಂಬ ಅರ್ಥ ಕೂಡ ಆಗುತ್ತದೆ.  ಭಕ್ತರನ್ನು ಭಗವಂತನು ಇಹ-ಪರ ಎರಡರಲ್ಲೂ ಪೊರೆಯುವವನು.  ಯಾವುದೋ ಕಾರಣಕ್ಕೆ ತನ್ನ ನಿಜವಾದ ಭಕ್ತ ತನ್ನಿಂದ ದೂರವಾದರೆ, ಭಗವಂತನು ಪರಮ ಕಾರುಣ್ಯದಿಂದ ಅವರನ್ನು ಮತ್ತೆ ತನ್ನ ಸನಿಹಕ್ಕೆ ಕರೆದುಕೊಳ್ಳುತ್ತಾನೆ.

ಕೆಲವು ಸಂದರ್ಭಗಳಲ್ಲಿ ಪ್ರಾರಬ್ಧ ವಶದಿಂದ ಕೂಡಾ ಭಗವಂತನ ವಿಸ್ಮರಣೆಯಾಗುವುದು.  ಇದಕ್ಕೆ ಉದಾಹರಣೆಯಾಗಿ ಭಾಗವತದ ನವಮಸ್ಕಂದದಲ್ಲಿ ಬರುವ ಸೌಭರಿಮುನಿಗಳ ಕಥೆಯನ್ನು ಉಲ್ಲೇಖಿಸಬಹುದು.  ಸೌಭರಿ ಮುನಿಗಳು ತಪಸ್ವಿಗಳಾದರೂ, ಒಂದು ದಿನ ಯಮುನಾ ನದಿಯಲ್ಲಿ ಮೀನಿನ ಜೋಡಿಗಳು ಜೊತೆಯಾಗಿ ವಿಹರಿಸುವುದನ್ನು ಕಂಡು ವಿಚಲಿತರಾಗಿ ತಮಗೂ ಗೃಹಸ್ಥ ಜೀವನ ಬೇಕೆಂದು ಬಯಸುತ್ತಾರೆ.  ವೃದ್ಧರಾದ ಮುನಿಗಳು ತಮ್ಮ ತಪೋಬಲದಿಂದ ನವಯುವಕನಾಗಿ ಮಾಂಧಾತೃ ರಾಜನ ೫೦ ಮಂದಿ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಾರೆ.  ಒಮ್ಮೆಲೇ ೫೦ ಶರೀರಗಳನ್ನು ಧರಿಸಿ ಏಕಕಾಲದಲ್ಲಿ ಪತ್ನಿಯರೊಡನೆ ಗೃಹಸ್ಥ ಜೀವನ ನಡೆಸಿ, ಒಬ್ಬೊಬ್ಬರಲ್ಲಿ ನೂರು ನೂರು ಮಕ್ಕಳನ್ನು ಪಡೆಯುತ್ತಾರೆ.  ಕೊನೆಗೊಂದು ದಿನ ವಿರಕ್ತರಾಗಿ ಕಾಡಿಗೆ ಹೋಗಿ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಕಠಿಣ ತಪಸ್ಸು ಮಾಡಿ ಅಗ್ನಿಯಿಂದ ದೇಹವನ್ನು ದಹಿಸುತ್ತಾರೆ.  ಅವರ  ಪತ್ನಿಯರೂ ಸಹಗಮನ ಮಾಡುತ್ತಾರೆ.  ಹೀಗೆ ಅಪರೋಕ್ಷ ಜ್ಞಾನಿಯಾಗಿದ್ದ ಮುನಿಗಳಿಗೇ ಭಗವಂತನ ವಿಸ್ಮರಣೆಯಾಗುತ್ತದೆ.  ಮೀನುಗಳು ಕ್ರೀಡಿಸುವುದನ್ನು ಕಂಡ ಮಾತ್ರಕ್ಕೇ ಅವರು ಗೃಹಸ್ಥ ಜೀವನಕ್ಕೇ ಸಿಲುಕಿಬಿಡುತ್ತಾರೆ.  ಹೀಗೆ ಸಾತ್ವಿಕರಲ್ಲೂ ಕೂಡ ಕೆಲವೊಮ್ಮೆ ಪ್ರಾರಬ್ಧ ವಶದಿಂದ ಭಗವಂತನಲ್ಲಿ ವಿಸ್ಮರಣೆ ಉಂಟಾಗುತ್ತದೆ, ಆದರೆ ಭಗವಂತನು ಅವರನ್ನು ಕಠಿಣವಾಗಿ ಶಿಕ್ಷಿಸುವುದಿಲ್ಲ.  ಸಾತ್ವಿಕರಿಗೆ ಹೀಗೆ ಪ್ರಾರಬ್ಧದಿಂದ ಭಗವಂತನ ವಿಸ್ಮರಣೆಯಾದರೆ, ರಾಜಸಿಗರು ಸ್ವಭಾವತಃ ಸಂಸಾರದಲ್ಲಿ ಮಗ್ನರಾಗಿದ್ದು, ಭಗವಂತನನ್ನು ಉದಾಸೀನ ಮಾಡುತ್ತಾರೆ.  ಆದರೆ ತಾಮಸಿಗರು ಮಾತ್ರ ತಮ್ಮ ತಮೋ ಗುಣದಿಂದಲೇ ಭಗವಂತನನ್ನು ದ್ವೇಷಿಸುತ್ತಾರೆ.  ಅಂತಹವರಿಗೆ ಭಗವಂತನು ಭಗವದ್ಗೀತೆಯ ೧೬ನೇ ಅಧ್ಯಾಯದ ೧೯ ಮತ್ತು ೨೦ನೇ ಶ್ಲೋಕಗಳಲ್ಲಿ :
ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ | ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು || - ನನ್ನನ್ನು ದ್ವೇಷಿಸುವ ಪಾಪಿ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ-ಪದೇ ಅಸುರೀ ಯೋನಿಗಳಲ್ಲಿ ಹಾಕುತ್ತಲೇ ಇರುತ್ತೇನೆ

ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ | ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ || - ಆ ಮೂಢರು ನನ್ನನ್ನು ಪಡೆಯದೆ ಜನ್ಮ ಜನ್ಮಗಳಲ್ಲಿ ಅಸುರೀ ಯೋನಿಯನ್ನೇ ಪಡೆಯುತ್ತಾರೆ.  ಬಳಿಕ ಅದಕ್ಕಿಂತಲೂ ಅತಿ ನೀಚ ಗತಿಯನ್ನೇ ಹೊಂದುತ್ತಾ, ಘೋರವಾದ ನರಕದಲ್ಲಿ ಬೀಳುತ್ತಾರೆ ಎಂದಿದ್ದಾನೆ.

ಬಹು ಕಠಿಣನಿವ - ತಪ್ಪು ಮಾಡಿದವರ ಕಡೆಗೆ ಮೃದು ಭಾವವನ್ನು ಹೊಂದುವುದು  ಕೂಡ ತಪ್ಪು ಮಾಡಿದಂತೆಯೇ ಆಗುತ್ತದೆ.  ತಪ್ಪಿತಸ್ಥರನ್ನು ಶಿಕ್ಷಿಸಬೇಕು ಮತ್ತು ಸರಿಯಾದ ದಾರಿಗೆ ತರಬೇಕಾಗುತ್ತದೆ.  ಮಾಡಿದ ತಪ್ಪನ್ನು ಬೆಂಬಲಿಸಿದಾಗ ಮಗುವಿನ ಮೇಲೆ ಅತೀ ಮೋಹ ಅಥವಾ ಕುರುಡು ಪ್ರೀತಿಯ ಪ್ರದರ್ಶನವಾಗುತ್ತದೆಯೇ ಹೊರತು, ಮಗುವಿಗೆ ಒಳ್ಳೆಯದಾಗುವುದಿಲ್ಲ.  ತಂದೆ ತಾಯಿಗಳು ಒಂದೊಂದು ಜನ್ಮಕ್ಕಷ್ಟೇ ಸೀಮಿತರಾಗಿರುವವರು.  ಪ್ರಸ್ತುತ ಜನ್ಮದಲ್ಲಿಯ ಸಂಸಾರವೆಂಬ ನಾಟಕದ ಪಾತ್ರಧಾರಿಗಳು.  ಆದರೆ ಭಗವಂತ ಸಮಸ್ತ ಜನ್ಮಗಳಲ್ಲೂ ಜೊತೆಗಿರುವ  ಪಾಲಕನಾಗಿದ್ದಾನೆ.  ಭಗವಂತನು ಪಾತ್ರಧಾರಿಯಲ್ಲ, ಜೀವನ ನಾಟಕದ ಸೂತ್ರಧಾರಿಯಾಗಿದ್ದಾನೆ.  ಅನಾದಿ ಕಾಲದಿಂದಲೂ ಮತ್ತು ಅನಂತ ಕಾಲದವರೆಗೂ ಜೊತೆಗಿರುವ ಭಗವಂತನು ಜೀವನು ಮಾಡುವ ತಪ್ಪಿಗೆ ಶಿಕ್ಷೆಕೊಟ್ಟು, ಉದ್ಧರಿಸುತ್ತಾನೆ.  ತನ್ನ ಮಗುವಿಗೆ ಏನು ಬೇಕೆಂದು ಅದು ಕೇಳದೆಯೇ ತಿಳಿದುಕೊಂಡು ಒದಗಿಸುವ ತಾಯಿಯಂತೆ, ಭಗವಂತನು ನಮಗೆ ಅತ್ಯವಶ್ಯಕವಾಗಿ ಬೇಕಿರುವುದನ್ನು ಕೊಟ್ಟು ನಮ್ಮ ಸ್ವರೂಪೋದ್ಧಾರವನ್ನು ಮಾಡುವವನು.  ಶಿಕ್ಷಿಸುತ್ತಾನೆಂದು ತಿಳಿದರೂ ಕೂಡ ಭಗವಂತನು ಎಂದಿಗೂ ಕಠಿಣನಲ್ಲ.  ಅವನು ಶಿಕ್ಷಿಸಿದರೂ ಕೂಡ, ಅದು ಅವನ ಕಾರುಣ್ಯದ ಪರಮಾವಧಿಯೇ ಆಗಿರುತ್ತದೆಯೇ ಹೊರತು ಬೇರೇನೂ ಅಲ್ಲ.  ತನ್ನನ್ನು ದ್ವೇಷಿಸುವವರನ್ನು ಭಗವಂತ ಶಿಕ್ಷಿಸುತ್ತಾನೆಂಬುದಕ್ಕೆ ಮಹಾಭಾರತದ ಪ್ರಸಂಗದ ದೃಷ್ಟಾಂತವಿದೆ.  ಶ್ರೀಕೃಷ್ಣನು ಸಂಧಾನಕ್ಕಾಗಿ ಬಂದಾಗ, ವಿದುರನ ಮನೆಯಲ್ಲಿ ಹಾಲು ಕುಡಿದು ದುರ್ಯೋದನನ ಮಾನವನ್ನು ಕಳೆಯುತ್ತಾನೆ, ಅವನನ್ನು ಶಿಕ್ಷಿಸುತ್ತಾನೆ.  ಆದರೆ ಭಗವಂತನು ಎಲ್ಲಿ ಅಧರ್ಮವಿರುವುದೋ, ಯಾರು ತನ್ನನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೋ, ಅವರನ್ನು ಮಾತ್ರ, ಅವರ ಉದ್ಧಾರಕ್ಕಾಗಿಯೇ ಕಠಿಣನಾಗುವವನು.  ಯಾರು ತನ್ನ ನಿಯಮಗಳನ್ನು ಅನುಸರಿಸಿಕೊಂಡು ಸಾತ್ವಿಕ ಜೀವನವನ್ನು ನಡೆಸುತ್ತಾರೋ, ಅವರ ಮೇಲೆ ಸಿಟ್ಟು ಮಾಡಿಕೊಳ್ಳುವಂತಹ ಕಠಿಣನಿವನಲ್ಲ ಎಂದಿದ್ದಾರೆ ದಾಸರಾಯರು.  

ಭಾಗವತದ ನವಮ ಸ್ಕಂದದಲ್ಲಿ ಬರುವ ಅಂಬರೀಷನ ಕಥೆಯಲ್ಲಿ ಭಗವಂತನ ಕಾರುಣ್ಯದ ಬಗ್ಗೆ ಮತ್ತು ತನ್ನ ಭಕ್ತರನ್ನು ಹೇಗೆ ರಕ್ಷಿಸುತ್ತಾನೆಂಬುದನ್ನು ತಿಳಿಸಲಾಗಿದೆ.  ಪರಮ ಭಕ್ತನಾದ ಅಂಬರೀಷನು ದೂರ್ವಾಸರ ಶಾಪಕ್ಕೆ ಒಳಗಾದಾಗ, ಭಗವಂತನು ತನ್ನ ಭಕ್ತನ ರಕ್ಷಣೆಗಾಗಿ ಸುದರ್ಶನ ಚಕ್ರವನ್ನೇ ಕಳುಹಿಸುತ್ತಾನೆ.  ಭಗವಂತನಲ್ಲಿ ಸಂಪೂರ್ಣವಾಗಿ ಶರಣಾಗಿದ್ದ ಭಕ್ತ ಅಂಬರೀಷನು, ದೂರ್ವಾಸರ ಶಾಪಕ್ಕೆ ಹೆದರದೆ, ಭಗವಂತನ ಧ್ಯಾನ ಮಾಡುತ್ತಾನೆ.  ಕರೆ ಕೇಳಿ ಭಗವಂತ ಸುದರ್ಶನ ಚಕ್ರವನ್ನು ಕಳುಹಿಸಿ ಭಕ್ತನನ್ನು ರಕ್ಷಿಸುತ್ತಾನೆ.  ತನ್ನನ್ನು ನಂಬಿದವರನ್ನು ತಾನು ರಕ್ಷಿಸುತ್ತೇನೆ ಎಂಬುದನ್ನು ಲೋಕಕ್ಕೆ ತಿಳಿಸುತ್ತಾನೆ.  ಅಂಬರೀಷನ ಕಥೆಯನ್ನು ಶ್ರೀ ಪುರಂದರದಾಸರು ತಮ್ಮ "ಒಂದೇ ಕೂಗಳತೆ ವೈಕುಂಠ" ಎಂಬ ಕೃತಿಯಲ್ಲಿ  
ಅಂಬರೀಷ ದ್ವಾದಶಿವ್ರತ ಮಾಡಲು | ದೊಂಬಿ ಮಾಡಿದ ದೂರ್ವಾಸಮುನಿ ||
ಕುಂಭಿನೀಪತಿ ಕೃಷ್ಣ ಕಾಯೆಂದು ಮೊರೆಯಿಡೆ | ಬೆಂಬತ್ತಿ ಚಕ್ರದಿಂ ಮುನಿಶಾಪವ ಕಳೆದ || ಎಂದು ೪ ಸಾಲುಗಳಲ್ಲಿಯೇ ಕಥೆಯನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.

ಶಿಷ್ಟೇಷ್ಟನೆಂದರಿತು -  ಶಿಷ್ಟರನ್ನು ಇಷ್ಟ ಪಡುವವನಾದ್ದರಿಂದ ಭಗವಂತನು ಶಿಷ್ಟೇಷ್ಟ ನಾಮಕನಾಗುತ್ತಾನೆ.  ಶಿಷ್ಟರೆಂದರೆ ಸಜ್ಜನರು ಎಂದರ್ಥವಾಗುತ್ತದೆ.  ಯಾರು ಸದಾಚಾರಿಗಳಾಗಿದ್ದು ತಮಗೆ ಲಭ್ಯವಾಗಿರುವ ಧನ, ದ್ರವ್ಯಗಳನ್ನು ಭಗವಂತನ ಅನುಗ್ರಹವೆಂದು ತಿಳಿದು, ಸದ್ವಿನಿಯೋಗ ಮಾಡುತ್ತಾರೋ ಅವರು ಶಿಷ್ಟರೆನಿಸಿಕೊಳ್ಳುತ್ತಾರೆ.  ಸಂಪ್ರದಾಯದಿಂದ ಬಂದಿರುವ ಅನುಷ್ಠಾನಗಳನ್ನು ಮಾಡುವವರು, ವಿಧಿ ನಿಯಮಗಳನ್ನು ಅನುಸರಿಸುವವರು, ಶಾಸ್ತ್ರಗಳನ್ನು ಓದಿದವರು ಶಿಷ್ಟರೆನಿಸಿಕೊಳ್ಳುತ್ತಾರೆ.  ರಮಾ ಬ್ರಹ್ಮಾದಿ  ದೇವತೆಗಳು ಶಿಷ್ಟರಾದ್ದರಿಂದಲೇ ಶ್ರೀಹರಿಗೆ ಇಷ್ಟವಾಗುತ್ತಾರೆ. ಎಂದು ಎಲ್ಲಾ ಶೃತಿ, ಸ್ಮೃತಿ, ವೇದ, ಪುರಾಣಗಳು ತಿಳಿಸುತ್ತವೆ.  ಭಗವಂತನು ಶಿಷ್ಟೇಷ್ಟನೆಂದು ಅರಿಯುವುದು ಶಾಸ್ತ್ರಗಳ ಅಧ್ಯಯನದಿಂದ ಮಾತ್ರ ಸಾಧ್ಯವಿದೆ.  ಭಗವಂತನ ಅನಂತ ಗುಣಗಳನ್ನು ಅರಿಯುವ ಪ್ರಯತ್ನ ಮಾಡಲು ನಾವು ನಿರಂತರವಾಗಿ ಹರಿಕಥಾ ಶ್ರವಣ, ಮನನ, ಧ್ಯಾನ, ನಿದಿಧ್ಯಾಸನಗಳನ್ನು ಮಾಡುತ್ತಲೇ ಇರಬೇಕು. ಭಗವಂತನಲ್ಲಿ ಭಕ್ತಿ ಮಾಡಬೇಕೆಂದರೆ ಅವನ ಗುಣಗಳನ್ನು ಅರಿಯಬೇಕು.  ಯಾರು ಹೀಗೆ ಶಿಷ್ಟರೆನಿಸಿಕೊಳ್ಳುವರೋ ಅವರು ಭಗವಂತನಿಗೆ ಇಷ್ಟವಾಗುತ್ತಾರೆ.  ಅವರನ್ನು ರಕ್ಷಿಸುವವನಾಗಿ ಭಗವಂತನು ಶಿಷ್ಟೇಷ್ಟನೆನಿಸಿಕೊಳ್ಳುತ್ತಾನೆ. 

ಶ್ರೀ ವಿಷ್ಣು ಸಹಸ್ರನಾಮದಲ್ಲಿ "ಇಷ್ಟೋ ವಿಶಿಷ್ಟಃ ಶಿಷ್ಟೇಷ್ಟಃ.." ಎಂಬ ಉಲ್ಲೇಖವಿದೆ.  ತನ್ನನ್ನು ನಿರಂತರವೂ ಸ್ತುತಿಸುವ, ಧ್ಯಾನಿಸುವ ಸಂತರಿಗೆ ತಾನು ಪ್ರಿಯನಾದವನು ಎಂದರ್ಥವಾಗುತ್ತದೆ.  ಭಗವದ್ಗೀತೆಯ ೭ನೇ ಅಧ್ಯಾಯ ೧೭ನೆಯ ಶ್ಲೋಕದಲ್ಲಿ "ಪ್ರಿಯೋ ಹಿ ಜ್ಞಾನಿನೋSತ್ಯರ್ಥಮಹಂ ಸ ಚ ಮಮ ಪ್ರಿಯಃ" - ನನ್ನನ್ನು ತತ್ತ್ವದಿಂದ ತಿಳಿದ ಜ್ಞಾನಿಗೆ ನಾನು ಅತ್ಯಂತ ಪ್ರಿಯನಾಗಿದ್ದೇನೆ ಮತ್ತು ಆ ಜ್ಞಾನಿಯು ನನಗೆ ಅತ್ಯಂತ ಪ್ರಿಯನಾಗಿದ್ದಾನೆಂದು ಭಗವಂತನೇ ತಿಳಿಸಿದ್ದಾನೆ.

ಭಾಗವತದ ಅಷ್ಟಮಸ್ಕಂದ, ೨೪ನೆಯ ಅಧ್ಯಾಯದ ೫೨ನೆಯ ಶ್ಲೋಕದಲ್ಲಿ
ತ್ವಂ ಸರ್ವಲೋಕಸ್ಯ ಸುಹೃತ್ಪ್ರಿಯೇಶ್ವರೋ ಹ್ಯಾತ್ಮಾ ಗುರುರ್ಜ್ಞಾನಮಭೀಷ್ಟ ಸಿದ್ಧಿಃ | ತಥಾಪಿ ಲೋಕೋ ನ ಭಗನ್ತಮನ್ದಧೀರ್ಜಾನಾತಿ ಸನ್ತಂ ಹೃದಿ ಬದ್ಧಕಾಮಃ || - ಸಮಸ್ತ ಜನರಿಗೂ ಹಿತೈಷಿಯೂ, ಪ್ರಿಯನಾದವನೂ, ಆತ್ಮ ಸ್ವರೂಪನೂ ಆಗಿರುವೆ ಎಂಬ ಮಾತು ಇದೆ.

ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯರು ಶ್ರೀವಿಷ್ಣು ಭಗವಂತನೇ ಇಷ್ಟನು, ವಿಶಿಷ್ಟನು, ಶಿಷ್ಟನು ಎಂಬುದನ್ನು  ತಮ್ಮ ಷಟ್ಪ್ರಶ್ನೋಪನಿಷತ್ ಭಾಷ್ಯದಲ್ಲಿ
ನಮೋ ನಮೋSಸ್ತು ಹರಯೇ ಪ್ರೇಷ್ಠ ಪ್ರೇಷ್ಠತಮಾಯ ತೇ | ಪರಮಾನಂದಸಂದೋಹಸಾಂದ್ರಾನಂದವಪುಷ್ಮತೇ || - ಅತ್ಯಂತ ಪ್ರೀತಿಪಾತ್ರರಾದವರಲ್ಲಿಯೇ ಅತ್ಯಂತ ಪ್ರೀತಿಪಾತ್ರನಾದ, ಅಪರಿಮಿತಾನಂದ ಸ್ವರೂಪನಾದ, ಆನಂದಮಯ ಶರೀರವುಳ್ಳ, ಪಾಪಹರನಾದ ನಿನಗೆ ನಮಸ್ಕಾರ ಎಂದೂ
ತಲವಕಾರೋಪನಿಷದ್ಭಾಷ್ಯದಲ್ಲಿ
ಯಶ್ಚಿದಾನಂದಸಚ್ಛಕ್ತಿ ಸಂಪೂರ್ಣೋ ಭಗವಾನ್ ಪರಃ | ನಮೋSಸ್ತು ವಿಷ್ಣವೇ ತಸ್ಮೈ ಪ್ರೇಯಸೇ ಮೇ ಪರಾತ್ಮನೇ || - ಜ್ಞಾನ, ಆನಂದ ಹಾಗೂ ನಿರ್ದುಷ್ಟವಾದ ಶಕ್ತಿ ಇವುಗಳಿಂದ ಪೂರ್ಣನಾಗಿರುವ ನನಗೆ ಪ್ರಿಯ ವಸ್ತುಗಳಲ್ಲೆಲ್ಲ ಅತ್ಯಧಿಕ ಪ್ರಿಯನಾಗಿರುವ, ಆ ಸರ್ವೋತ್ತಮನಾದ ಶ್ರೀವಿಷ್ಣುವಿಗೆ ನನ್ನ ನಮಸ್ಕಾರ ಎಂದು ತಿಳಿಸಿದ್ದಾರೆ.

ದಾಸರಾಯರು ತಮ್ಮ ತತ್ವಸುವ್ವಾಲಿಯಲ್ಲಿ
ನೀ ನಡೆದು ನುಡಿದಂತೆ ನಾ ನಡೆದು ನುಡಿಯುವೆ
ಜ್ಞಾನಿಗಳ ಅರಸ ಗುಣಪೂರ್ಣ | ಗುಣಪೂರ್ಣ ದೊರೆ ಎನ್ನ
ಹೀನತೆಯ ನೋಡಿ ಬಿಡುವರೇ || - ನೀನು ಮಾಡಿಸಿದಂತೆ ನಾನು ಮಾಡುವವನು, ನೀನು ಜ್ಞಾನಿಗಳ ಅರಸನೂ, ಗುಣಪೂರ್ಣನೂ ಆಗಿರುವೆ ಎಂದು ಭಗವಂತನನ್ನು ಸ್ತುತಿಸಿದ್ದಾರೆ.

ಅನವರತ ಸದ್ಭಕ್ತಿಪಾಶದಲಿ -   ಶ್ರೀಮದಾಚಾರ್ಯರ ಬ್ರಹ್ಮಸೂತ್ರಾಣುಭಾಷ್ಯಕ್ಕೆ ವ್ಯಾಖ್ಯಾನವಾಗಿರುವ ಶ್ರೀ ರಾಘವೇಂದ್ರ ತೀರ್ಥ ವಿರಚಿತ ’ತತ್ವಮಂಜರಿ’ಯಲ್ಲಿ "ಮಾಹಾತ್ಮ್ಯ ಜ್ಞಾನ ಪೂರ್ವಕ ಸುದೃಢ ಸ್ನೇಹವೇ ಭಕ್ತಿಯು" ಎಂದು ತಿಳಿಸಲ್ಪಟ್ಟಿದೆ.   ಭಗವಂತನಲ್ಲಿ ಭಕ್ತಿ ಮಾಡುವುದೆಂದರೆ, ಅವನ ಗುಣಗಳನ್ನು ಆಳವಾಗಿ ಅಭ್ಯಸಿಸುವುದು.  ಭಗವಂತನಿಗೆ ಅತ್ಯಂತ ಪ್ರಿಯರಾದ ಸಾಧು ಸಂತರನ್ನು ಸತ್ಕರಿಸುವುದು.  ಹಾಗೂ ಸಕಲ ಜೀವರಾಶಿಯಲ್ಲೂ ಸ್ನೇಹದಿಂದ ವರ್ತಿಸುವುದೇ, ಮೊದಲಾದವುಗಳಾಗುತ್ತವೆ.  ಸದ್ಭಕ್ತಿ ಪಾಶವೆಂದರೆ, ಭಗವಂತನೆಡೆಗಿನ ಪ್ರೇಮವನ್ನು ಉತ್ಕೃಷ್ಟವಾಗಿ, ಆಳವಾಗಿ ಬೆಳೆಸಿಕೊಳ್ಳುವುದು.  ಭಕ್ತಿಯು ಉತ್ತುಂಗದ ಶಿಖರವೇರಿದಾಗ, ಅದೇ ಸಪ್ರೇಮದ, ಭಕ್ತಿಯ ಪಾಶವಾಗಿ ಭಗವಂತನನ್ನು ಕಟ್ಟಿಹಾಕುತ್ತದೆ.  ಅನವರತವೂ ಧ್ಯಾನ ಮಾಡುತ್ತಾ, ಗುಣಗಳನ್ನು ಚಿಂತಿಸುತ್ತಾ, ಸಮಸ್ತವನ್ನೂ ಭಗವದರ್ಪಣ ಮಾಡಿ, ಸಾತ್ವಿಕ ಜೀವನ ನಡೆಸುವುದು ಎಂದರ್ಥವಾಗುತ್ತದೆ.  ಭಕ್ತಿಯಲ್ಲಿಯೂ ಕೂಡ ನವವಿಧಗಳಿವೆ.  ಅವುಗಳು "ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದ ಸೇವನಂ | ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ" ಎಂದು ಹೇಳಲ್ಪಟ್ಟಿವೆ.  ಹರಿಯ ಕಥೆಗಳನ್ನು ಶ್ರವಣ ಮಾಡುತ್ತಾ, ಹರಿಯ ಗುಣಗಳನ್ನು ಕೀರ್ತನೆ ಮಾಡುತ್ತಾ, ಸ್ಮರಣೆಯೊಂದೇ ಸಾಲದೇ ಗೋವಿಂದನ ಎಂದು ಸ್ಮರಣೆ ಮಾಡುತ್ತಾ, ಅರ್ಚಿಸುತ್ತಾ, ಪೂಜಿಸುತ್ತಾ, ವಂದಿಸುತ್ತಾ, ನಿನ್ನ ದಾಸರ ದಾಸಾನುದಾಸನು ನಾನು ಎಂದು ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತಾ ಇರಬೇಕು.  ಶುದ್ಧ ಮನಸ್ಸಿನಿಂದ ಭಗವಂತನನ್ನು ಹೇಗೆ ಅರ್ಚಿಸಿದರೂ, ಕರೆದರೂ ಅವನು ಒಲಿಯುತ್ತಾನೆ.  ಅರ್ಜುನ ಭಗವಂತನನ್ನು ತನ್ನ ’ಸಖ’ನೆಂದೇ ತಿಳಿದಿದ್ದ.  ಎಲ್ಲದರಲ್ಲೂ, ಯಾವಾಗಲೂ, ಎಲ್ಲರಲ್ಲೂ ಭಗವಂತನ ಗುಣಗಳನ್ನೇ ಕಾಣುತ್ತಾ, ಅನವರತ ಚಿಂತಿಸಿದವರ ಭಕ್ತಿಪಾಶಕ್ಕೆ ಭಗವಂತನು ಖಂಡಿತವಾಗಿಯೂ ಒಲಿಯುತ್ತಾನೆ.  ಶ್ರೀ ವಿಜಯದಾಸರು ತಮ್ಮ "ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ" ಎಂಬ ಕೃತಿಯಲ್ಲಿ ’ನಿನ್ನ ನಾಮ ಬಿಡುವನಲ್ಲ, ನನ್ನ ನೀನು ಬಿಡಲುಸಲ್ಲ’ ಎಂದು ಭಗವಂತನನ್ನು ಭಕ್ತಿಯ ಪಾಶದಲ್ಲಿ ಕಟ್ಟಿ ಹಾಕುವ ಮಾತನಾಡುತ್ತಾರೆ. 

ದಾಸರಾಯರು ತಮ್ಮ ಫಲವಿದು ಬಾಳ್ದುದಕೆ ಎಂಬ ಕೃತಿಯಲ್ಲಿ
ನಿಚ್ಚ ಸುಭಕುತಿಯೊಳಚ್ಯುತನಂಘ್ರಿಗ-
ಳರ್ಚಿಸಿ ಮೆಚ್ಚಿಸುತೆಚ್ಚರದಿ |
ತುಚ್ಛ ವಿಷಯಗಳನಿಚ್ಛೈಸದೆ ಯ-
ದೃಚ್ಛಾ ಲಾಭದಿ ಪ್ರೋಚ್ಯನಾಗುವದೇ || - ಅಚ್ಯುತನ ಅಂಘ್ರಿಗಳ ಅರ್ಚಿಸುವುದೇ ಬದುಕಿನ ಉದ್ದೇಶವಾಗಬೇಕು. ಭಗವಂತನಲ್ಲಿ ಮಾತ್ರ ಭಕ್ತಿ ಮಾಡಿದರೆ ಸಾಲದು, ಅವನ ಸೇವಕರಾದ, ನಮ್ಮ ಇಂದ್ರಿಯಗಳ ಅಭಿಮಾನಿ ದೇವತೆಗಳ ಸಮೇತ ನಾವು ಸುಭಕುತಿಯನು ಮಾಡಬೇಕು ಎನ್ನುತ್ತಾರೆ.  ಹಾಗೇ ಅನ್ಯಥಾ ಶರಣಂ ನಾಸ್ತಿ ಎಂದು ’ನಿಚ್ಚ ಭಕುತಿ’ - ನಿಶ್ಚಯವಾದ ಭಕುತಿಯನ್ನು ಮಾಡಬೇಕು ಎನ್ನುತ್ತಾರೆ
ಹರಿಕಥೆ ಪರಮಾದರದಲಿ ಕೇಳುತ | ಮರೆದು ತನುವ ಸುಖ ಸುರಿಯುತಲಿ || - ಸಾರ್ಥಕ ಬದುಕಿಗಾಗಿ ಹರಿಕಥೆಯನ್ನು, ಹರಿಯ ದಶಾವತಾರಾದಿ ಕಥೆಗಳನ್ನು, ರಾಮಕೃಷ್ಣಾವತಾರಾದಿ ಮಹಿಮೆಗಳನ್ನು ಪರಮಾದರದಿ ಕೇಳುತ್ತಲೇ ಇರಬೇಕು ಎನ್ನುತ್ತಾರೆ.

ಕಟ್ಟುವರ ಭವಕಟ್ಟು ಬಿಡಿಸುವ - ಭಗವಂತನು ತನ್ನನ್ನು ಯಾರು ಭಕ್ತಿಯ ಪಾಶದಿಂದ ಕಟ್ಟಿ ಹಾಕುತ್ತಾರೋ ಅವರನ್ನು ಸಂಸಾರವೆಂಬ ಭವ ಬಂಧನದಿಂದ ಬಿಡಿಸುತ್ತಾನೆ.  ತನ್ನನ್ನು ಕಟ್ಟಿಹಾಕಿದರೆ ನಮ್ಮನ್ನು ಬಿಡಿಸುತ್ತಾನೆ, ನಾವು ಭಗವಂತನನ್ನು ಬಿಟ್ಟರೆ, ನಮ್ಮನ್ನು ಕಟ್ಟಿಹಾಕುತ್ತಾನೆಂದು ಅರ್ಥವಾಗುತ್ತದೆ.  ಭಕ್ತರ ಭಕ್ತಿಯ ಕಟ್ಟು ಎಂಬುದು ಭಗವಂತನಿಗೆ ನಿಜ ಅರ್ಥದಲ್ಲಿ ಯಾವ ಕಟ್ಟೂ ಆಗುವುದಿಲ್ಲ, ಏಕೆಂದರೆ ಅವನು ಯಾವ ಕಟ್ಟಿಗೂ ನಿಲುಕದವನು, ಎಲ್ಲವನ್ನೂ ಮೀರಿದ ಸರ್ವತಂತ್ರ ಸ್ವತಂತ್ರನಾಗಿದ್ದಾನೆ.  ಆದರೆ ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಅವನನ್ನು ಹೃತ್ಕಮಲವೆಂಬ ಸಿಂಹಾಸನದಲ್ಲಿ ಕೂಡಿಸಿ, ಆರಾಧಿಸುತ್ತಾರೋ, ಸೇವಿಸುತ್ತಾರೋ, ಅವರ ಪ್ರೀತಿಗೆ ವಶನಾಗಿ, ಅಲ್ಲಿಯೇ ನೆಲೆಸುತ್ತಾನೆ ಎಂದರ್ಥವಾಗುತ್ತದೆ.  ಅಪಾರ ಕರುಣೆ, ವಾತ್ಸಲ್ಯದಿಂದ ಸದಾ ದರ್ಶನವಿತ್ತು, ಉದ್ಧರಿಸುತ್ತಾನೆ.  ಒಮ್ಮೆ ಭವ ಪಾಶದ ಕಟ್ಟು ಬಿಡಿಸಿಕೊಂಡರೆ, ಭಗವಂತನ ನಿಜ ಮಂದಿರದಲ್ಲಿ ಆಶ್ರಯಕೊಟ್ಟು, ಜನನ ಮರಣ ರಹಿತವಾದ ಆನಂದದಲ್ಲಿ ನೆಲೆಸುವಂತೆ ಮಾಡುತ್ತಾನೆ.

ಸಿಟ್ಟಿನವನಿವನಲ್ಲ - ಅಪರೋಕ್ಷ ಜ್ಞಾನಿಗಳಾದ ದೇವತೆಗಳು ಕೂಡ ಪ್ರಮಾದವಶಾತ್  ಅಪರಾಧಗಳಿ೦ದ ಕ್ಷೋಭೆಗೊಳಗಾಗಿ ಪರಿತಪಿಸುತ್ತಿರುವಾಗ, ಅವರ ಸಾಧನೆಯ ಹಾದಿಯಲ್ಲಿ ಯಾವ ಶಿಕ್ಷೆಯೂ ಆಗದೆ, ಮುಕ್ತಿಯಲ್ಲಿ ಸಿಗುವ ಸ್ವರೂಪಾನ೦ದದಲ್ಲಿ ಕಿ೦ಚಿತ್ ಹ್ರಾಸ ಮಾಡುತ್ತಾನೆ ಎ೦ದು ತಿಳಿಸಲ್ಪಟ್ಟಿದೆ. ಸಾಧನಾ ಹಾದಿಯಲ್ಲಿರುವವರಿಗೆ ಭಗವ೦ತನ ಸ೦ಪೂರ್ಣ ಕಾರುಣ್ಯದ ಅನುಗ್ರಹ ಎ೦ದಿಗೂ ಇರುತ್ತದೆ ಎನ್ನುವ ಈ ಅ೦ಶದಿ೦ದ, ಭಗವ೦ತನು 'ಸಿಟ್ಟಿನವನಿವನಲ್ಲ' ಎ೦ದು ದಾಸರಾಯರು ವರ್ಣಿಸಿದ್ದಾರೆ.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋವರ್ಧನಗಿರಿಯ ದೃಷ್ಟಾಂತ ಕೂಡ ಭಗವಂತನು ಕಠಿಣನಲ್ಲವು ಎಂಬುದನ್ನು ನಿರೂಪಿಸುತ್ತದೆ.  ಇಂದ್ರನು ಕುಂಭದ್ರೋಣಾಕಾರವಾಗಿ ಏಳು ದಿನಗಳ ಕಾಲ ಎಡೆಬಿಡದೆ ಮಳೆ ಸುರಿಸಿದಾಗ ಭಗವಂತನು ತನ್ನ ಕಿರುಬೆರಳಿನಲ್ಲಿ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು, ಗೋಪಾಲಕರನ್ನು ರಕ್ಷಿಸಿ, ಇಂದ್ರನ ಗರ್ವ ಮುರಿದನು.  ಇಂದ್ರನ ಗರ್ವ ಮುರಿಯುವಂತಹ ಸಣ್ಣ ಶಿಕ್ಷೆಯನ್ನು ಮಾತ್ರವೇ ಕೊಟ್ಟ ಭಗವಂತ ಕಠಿಣನಲ್ಲದೆ, ಕರುಣಾಸಾಗರನು ಎಂಬುದು ರುಜುವಾತಾಗುತ್ತದೆ.  ’ಸಿಟ್ಟಿನವನಿವನಲ್ಲ’ ಎಂದರೆ ಕಂಡ ಕಂಡದ್ದಕ್ಕೆಲ್ಲಾ ಕೋಪಿಸಿಕೊಂಡು, ಶಿಕ್ಷಿಸುವವನಲ್ಲವೆಂದೂ ಅರ್ಥವಾಗುತ್ತದೆ.  ಕೆಟ್ಟ ಮಾತುಗಳಿಂದ ನಿಂದಿಸಿದ ಶಿಶುಪಾಲನ ಶಿರಚ್ಛೇದನ ಮಾಡಿ, ಭಗವಂತನು ಅವನನ್ನು ಉದ್ಧರಿಸಿದನು.  ಹರಿದ್ವೇಷ ಮಾಡಿದ ಹಿರಣ್ಯಕಶಿಪು ಹಾಗೂ ಹಿರಣ್ಯಾಕ್ಷರನ್ನು ಕೂಡ ಉದ್ಧರಿಸಿ ಅವರನ್ನು ದೈತ್ಯಾಂಶದಿಂದ ಬೇರ್ಪಡಿಸಿ, ತನ್ನ ಉದರದೊಳಗೇ ಸೇರಿಸಿಕೊಂಡ.  ಏಕೆಂದರೆ ಇವರು ಸ್ವರೂಪದಲ್ಲಿ ಭಗವಂತನ ಪರಮ ಭಕ್ತರಾದ ಜಯವಿಜಯರೇ ಆಗಿದ್ದರು.  ಹೀಗೆ ವಿಸ್ಮರಣೆಯಲ್ಲಿ ಸಿಲುಕಿದ ಭಕ್ತರನ್ನು ಭಗವಂತ ತಾನೇ ತನ್ನ ಹತ್ತಿರ ಕರೆದುಕೊಳ್ಳುತ್ತಾನೆ.

ಕಾಮದ ಕೊಟ್ಟು ಕಾವನು ಸಕಲ ಸೌಖ್ಯವನಿಹಪರಂಗಳಲಿ - ಕಾಮದ ಎಂದರೆ ಸಕಲವನ್ನೂ ಕೊಡುವವನು.  ಬೇಡಿದ ವರವನ್ನು, ಇಚ್ಛೆಯನ್ನು ಪೂರೈಸುವವನು ಎಂದರ್ಥವಾಗುತ್ತದೆ.  ಭಾಗವತದ ಒಂದು ದೃಷ್ಟಾಂತದಲ್ಲಿ ಗೋಪಾಲರು ಶ್ರೀಕೃಷ್ಣನಲ್ಲಿ ಅಧಿಕ ಭಕ್ತಿಯನ್ನು ಮಾಡಿ, ತಮಗೆ ವೈಕುಂಠವನ್ನು ತೋರಿಸುವಂತೆ ಮನಸ್ಸಿನಲ್ಲಿಯೇ ಆಸೆ ಪಡುತ್ತಾರೆ.  ಭಗವಂತನು ಅವರನ್ನು ಯಮುನಾ ನದಿಯಲ್ಲಿ ಮುಳುಗಿಸಿ, ವೈಕುಂಠವನ್ನೂ, ಅಲ್ಲಿರುವ ತನ್ನನ್ನೂ ತೋರಿಸಿ, ಅನುಗ್ರಹಿಸುತ್ತಾನೆ.  ಹೀಗೆ ಭಗವಂತನು ಇಹದಲ್ಲಿ ಬಯಸಿದ್ದನ್ನು ಕೊಡುವುದು ಮಾತ್ರವಲ್ಲದೇ ಪರದಲ್ಲಿಯೂ ಮುಕ್ತಿಯನ್ನು ಕೊಟ್ಟು, ಮುಕ್ತಿಯಲ್ಲಿ ಆನಂದವನ್ನೂ ಕರುಣಿಸಿ ಕಾಯುತ್ತಾನೆ.

ಡಿವಿಜಿಯವರು ಕಗ್ಗದಲ್ಲಿ
ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ | ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು || - ನಾವು ಮಾಡುವ ಪ್ರತಿಯೊಂದು ಕರ್ಮವೂ ಪೂರ್ವಾರ್ಜಿತವೇ ಆಗಿರುತ್ತದೆ.  ಪ್ರತಿಯೊಂದು ಪಾಪ ಕರ್ಮವೂ ಹೊಸ ಋಣಗಳನ್ನು ಬೆಳೆಸುತ್ತದೆ.  ಋಣದ ಹುರಿಯ ಕುಣಿಕೆಯಲಿ ಕೊರಳನ್ನು ಬಿಗಿದು ’ವಿಧಿ’ ನಾಮಕ ಭಗವಂತನು ಮತ್ತೆ ಮತ್ತೆ ಸಂಸಾರವೆಂಬ ಭವ ಕಟ್ಟಿನಲ್ಲಿ ಬೀಳಿಸುತ್ತಾನೆ ಎಂದಿದ್ದಾರೆ.
ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು | ಸಂಧಿಪುದು ಕಡಲ ನೀರ್ಗಳನ್ ; ಅಂತು ಜೀವನ್ ||
ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ | ಸಂದರುಶಿಪನು ಪರನ ಮಂಕುತಿಮ್ಮ || - ಜೀವನು ಇಂದ್ರಿಯಗಳ ಕಟ್ಟುಗಳಿಂದ ಬಿಡಿಸಿಕೊಂಡು, ಒಂದು ಹೊಳೆಯ ನೀರು ಹೇಗೆ ಎಲ್ಲಾ ಅಡಚಣೆಗಳನ್ನೂ ದಾಟಿ ಹರಿದು ಸಮುದ್ರ ಸೇರುವುದೋ, ಹಾಗೆ ಭಗವಂತನ ದರ್ಶನಕ್ಕೆ ಮನಸ್ಸು ತಿರುಗಿಸಬೇಕು ಎನ್ನುತ್ತಾರೆ.



 ಚಿತ್ರಕೃಪೆ : ಅಂತರ್ಜಾಲ

No comments: