ಪಾಕಶಾಸನ ಮುಖ್ಯ ಸಕಲ ದಿ
ವೌಕಸರಿಗಭಿನಮಿಪೆ ಋಷಿಗಳಿ
ಗೇಕ ಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ |
ಆ ಕಮಲನಾಭಾದಿ ಯತಿಗಳ
ನೀಕಕಾ ನಮಿಸುವೆನು ಬಿಡದೆ ರ
ಮಾಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||
ಪ್ರತಿಪದಾರ್ಥ : ಪಾಕಶಾಸನ - ಪಾಕನೆಂಬ ಅಸುರನನ್ನು ಕೊಂದ ಇಂದ್ರದೇವ, ಮುಖ್ಯ ಸಕಲದಿವೌಕಸರಿಗೆ - ಮುಖ್ಯವಾದ ಮತ್ತು ಸಮಸ್ತ ತತ್ತ್ವಾಭಿಮಾನಿ ದೇವತೆಗಳಿಗೆ, ಅಭಿನಮಿಪೆ - ನಮಸ್ಕರಿಸುವೆ, ಋಷಿಗಳಿಗೆ ಏಕ ಚಿತ್ತದಿ - ಸಮಸ್ತ ಋಷಿಗಳಿಗೂ ಒಂದೇ ಮನಸ್ಸಿನಿಂದ, ಪಿತೃಗಳಿಗೆ - ಪಿತೃದೇವತೆಗಳಿಗೆ, ಗಂಧರ್ವ ಕ್ಷಿತಿಪರಿಗೆ - ತಾರತಮ್ಯದ ಪ್ರಕಾರ ಪಿತೃದೇವತೆಗಳ ನಂತರ ಗಂಧರ್ವರಿಗೆ ಮತ್ತು ಕ್ಷಿತಿಪರು ಎಂದರೆ ಚಕ್ರವರ್ತಿಗಳಿಗೆ, ಆ ಕಮಲ ನಾಭಾದಿಯತಿಗಳ ಅನೀಕಕೆ - ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀಪದ್ಮನಾಭ ತೀರ್ಥರಾದಿಯಾಗಿ ಸಮಸ್ತ ಯತಿ ಶ್ರೇಷ್ಠರುಗಳ ಸಮೂಹಕ್ಕೆ, ಆ ನಮಿಸುವೆನು - ನಾನು ನಮಸ್ಕರಿಸುವೆನು, ಬಿಡದೆ - ಮರೆಯದೇ, ರಮಾಕಳತ್ರನ - ರಮೆಯ ವಲ್ಲಭನಾದ ಶ್ರೀಹರಿಯ, ದಾಸವರ್ಗಕೆ - ವಿಷ್ಣು ಭಕ್ತರಾದ ದಾಸ ಪರಂಪರೆಗೆ, ನಮಿಪೆನನವರತ - ಅನವರತವಾಗಿ ನಮಸ್ಕರಿಸುವೆನು.
ಸಮಸ್ತ ತತ್ವಾಭಿಮಾನಿ ದೇವತೆಗಳನ್ನು ವಂದಿಸಿದ ನಂತರ ಈ ಚರಣದಲ್ಲಿ ಇಂದ್ರಾದಿ ದೇವತೆಗಳಿಂದ ಹಿಡಿದು ದಿಗ್ದೇವತೆಗಳೂ, ಋಷಿಗಳೂ, ಪಿತೃಗಳೂ, ಗಂಧರ್ವರೂ, ಉತ್ತಮ ರಾಜರುಗಳು, ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರ ಸ್ವೋತ್ತಮ ಜೀವಿಗಳೆಲ್ಲರಿಗೂ ನಮಸ್ಕರಿಸಿ, ಹರಿದಾಸರುಗಳಾದ ಪುರಂದರ ದಾಸರಿಂದ ಗೋಪಾಲದಾಸರವರೆಗೂ ಎಲ್ಲರಿಗೂ ನಮಸ್ಕರಿಸುತ್ತಾರೆ. ಇಲ್ಲಿ ವ್ಯಾಸಕೂಟಕ್ಕೂ – ದಾಸಕೂಟಕ್ಕೂ ಅಬೇಧವನ್ನು ತೋರಿಸಿದ್ದಾರೆ.
ಸಮಸ್ತ ತತ್ವಾಭಿಮಾನಿ ದೇವತೆಗಳನ್ನು ವಂದಿಸಿದ ನಂತರ ಈ ಚರಣದಲ್ಲಿ ಇಂದ್ರಾದಿ ದೇವತೆಗಳಿಂದ ಹಿಡಿದು ದಿಗ್ದೇವತೆಗಳೂ, ಋಷಿಗಳೂ, ಪಿತೃಗಳೂ, ಗಂಧರ್ವರೂ, ಉತ್ತಮ ರಾಜರುಗಳು, ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರ ಸ್ವೋತ್ತಮ ಜೀವಿಗಳೆಲ್ಲರಿಗೂ ನಮಸ್ಕರಿಸಿ, ಹರಿದಾಸರುಗಳಾದ ಪುರಂದರ ದಾಸರಿಂದ ಗೋಪಾಲದಾಸರವರೆಗೂ ಎಲ್ಲರಿಗೂ ನಮಸ್ಕರಿಸುತ್ತಾರೆ. ಇಲ್ಲಿ ವ್ಯಾಸಕೂಟಕ್ಕೂ – ದಾಸಕೂಟಕ್ಕೂ ಅಬೇಧವನ್ನು ತೋರಿಸಿದ್ದಾರೆ.
“ಪಾಕ”ನೆಂಬ ಅಸುರನನ್ನು ನಾಶ ಮಾಡಿದವನು ಇಂದ್ರ, ಅದಕ್ಕೆಂದೇ ಅವನು “ಪಾಕಶಾಸನ” ಹಾಗೂ ನಮ್ಮ ಮನಸ್ಸನ್ನು ಪಾಕ ಮಾಡುವವನು ಎಂದೂ ಅರ್ಥವಾಗುತ್ತದೆ. ಇಂದ್ರ ಚಂದ್ರರು ಕೂಡ ಮನೋಭಿಮಾನಿ ದೇವತೆಗಳೇ. ಪಾಕಶಾಸನನಾದ ಇಂದ್ರ ಕಶ್ಯಪ-ಅದಿತಿಯರ ಜ್ಯೇಷ್ಠ ಪುತ್ರ ಮತ್ತು ಅತಿ ಸುಂದರಾಂಗ. ದೇವತೆಗಳಲ್ಲೇ ಅತ್ಯಂತ ಎತ್ತರವಿರುವ, ವಜ್ರಾಯುಧ ಹಿಡಿದಿರುವ, ಐರಾವತ ಮತ್ತು ಉತ್ತಮ ಅಶ್ವವನ್ನು ಹೊಂದಿದ, ಸ್ವರ್ಗಾಧಿಪತಿ. ಇಂದ್ರ ದೇವನು ಮಾನಸಿಕ ಸಂರಚನೆ ಹಾಗೂ ತತ್ಸಂಬಂಧಿತ ಕ್ರಿಯೆಗಳಿಗಾಗಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದಕ್ಕೆ ಮಾನವರಿಗೆ ನೆರವು ನೀಡುವವನು. ಋಗ್ವೇದದಲ್ಲಿ ಸುಮಾರು ೨,೫೦೦ ಮಂತ್ರಗಳು ಇಂದ್ರ ದೇವನಿಗೆ ಅರ್ಪಿತವಾಗಿವೆ. ಋಗ್ವೇದದಲ್ಲಿ ಸಕಲ ಕ್ರಿಯೆಗಳ ಅಧಿದೈವವೆಂದು ಇಂದ್ರನನ್ನು ‘ಮಹೀ’ ಎಂದರೆ ವೈಶಾಲ್ಯತೆಯ ದೇವತೆಯೆಂದೂ, ‘ಸೂನೃತ’ ಎಂದರೆ ಪ್ರಿಯ ಮತ್ತು ಶುಭವಾಣಿಗಳನ್ನು ಉಳ್ಳವನೆಂದೂ, ‘ವಿರಪ್ಶಿ’ ಎಂದರೆ ಸಮೃದ್ಧಿಯಿಂದ ಕಾಂತಿಯುಕ್ತ ಆಗಿರುವವನೆಂದೂ, ‘ಗೋಮತಿ’ ಎಂದರೆ ಪ್ರಕಾಶಮಾನವಾದ ಜ್ಞಾನಭರಿತನೆಂದೂ ಹಾಗೂ ಯಜ್ಞಕರ್ತನಿಗೆ ಮಾಗಿದ ಹಣ್ಣಿನಂತೆ ಲಭ್ಯವಾಗುವನೆಂದೂ ವರ್ಣಿಸಲಾಗಿದೆ. ಹಾಗೇ ಇಂದ್ರನ ಅನೇಕ ಗುಣಗಳಲ್ಲಿ ಈ ಕೆಲವು ಪ್ರಮುಖವಾದವುಗಳನ್ನು ಹೆಸರಿಸಿದ್ದಾರೆ :
೧. ಪರಿಪೂರ್ಣ ಆಕೃತಿಗಳನ್ನು ವಿನ್ಯಾಸ ಮಾಡುವವನು
೨) ಇಂದ್ರನು ಬೆಳಕನ್ನು ಸುರಿಸುವವನು
೩) ಇಂದ್ರನು ಗೆಳೆಯನಿಗೆ ಸಂತೋಷ ನೀಡುವವನು
೪) ವೃತ್ರ ಸಂಹಾರಕ
ಶ್ರೇಷ್ಠವಾದ ಮಾನಸಿಕ ಚಲನೆಯನ್ನುಂಟು ಮಾಡುವ ಹಾಗೂ ದಿನೇ ದಿನೇ ಅದನ್ನು ವೃದ್ಧಿಸುವ ಸಾಮರ್ಥ್ಯ ಉಳ್ಳವನಾದ್ದರಿಂದ ಅವನು ಪರಿಪೂರ್ಣ ಆಕೃತಿಗಳನ್ನು ವಿನ್ಯಾಸ ಮಾಡುವವನು, ಅಧ್ಯಾತ್ಮಿಕ ಜ್ಯೋತಿಯ ಕಿರಣಗಳನ್ನು ಸುರಿಸುತ್ತಾ, ರಾಕ್ಷಸೀ ಶಕ್ತಿಯಾದ ವೃತ್ರನ ಸಂಹಾರ ಮಾಡುತ್ತಾ ಎಲ್ಲಾ ಆರಾಧಕರನ್ನೂ ರಕ್ಷಿಸುವವನು ಎನ್ನುತ್ತಾರೆ. ಇಂತಹ ಇಂದ್ರಾದಿ ಸಕಲ ದೇವತೆಗಳು ನನ್ನ ಮನದೊಳಗಿದ್ದು ಒಳ್ಳೆಯದು ಮಾಡಲಿ ಎಂದು ಜಗನ್ನಾಥ ದಾಸರು ಪ್ರಾರ್ಥಿಸುತ್ತಾರೆ.
“ದಿವೌಕಸ”ರೆಂದರೆ ಸ್ವರ್ಗದಲ್ಲಿರುವ ಎಲ್ಲಾ ದೇವತೆಗಳು ಎಂದು ಅರ್ಥವಾಗುತ್ತದೆ. ದೇವತೆಗಳ ನಂತರ ಜ್ಞಾನ ಮಾರ್ಗ ತೋರುವ ಋಷಿಗಳಿಗೆ ವಂದಿಸುತ್ತಾರೆ. ಏಕಚಿತ್ತದಿ ಪಿತೃದೇವತೆಗಳಾದ ಯಮ, ಚಂದ್ರ, ಅಗ್ನಿ, ವಾಸು-ರುದ್ರ-ಆದಿತ್ಯರು ಎಲ್ಲರಿಗೂ, ನಂತರ ಗಂಧರ್ವರಿಗೂ, ಕ್ಷಿತಿಪರಿಗೂ (ಹಿಂದೆ ಈ ಭೂಮಿಯನ್ನಾಳಿದ ದೇವತೆಗಳಿಗೆ ಸಮರಾಗಿ ನಿಂತ ಚಕ್ರವರ್ತಿಗಳು) ಕೊನೆಗೆ ಈ ಭೂಮಿಯಲ್ಲಿ ಜನ್ಮಿಸಿದ ಆಚಾರ್ಯರು, ಅವರ ಶಿಷ್ಯರಾದ “ಕಮಲನಾಭಾದಿ” (ಪದ್ಮನಾಭ ತೀರ್ಥರು) ಯತಿಗಳ ಸಮೂಹಕ್ಕೂ ವಂದಿಸಿ, ಬಿಡದೆ ನಿರಂತರವಾಗಿ ಶ್ರೀಹರಿಯ ಸ್ಮರಣೆ ಮಾಡುವ ಆ ರಮಾಕಳತ್ರನ ಸಮಸ್ತ ಭಕ್ತ ವರ್ಗದವರೆಲ್ಲರಿಗೂ ಕೂಡ ನಮಿಸುತ್ತಾರೆ.
ಜಗನ್ನಾಥ ದಾಸರು ತಮ್ಮ ಒಂದು ಸುಳಾದಿಯಲ್ಲಿ :
ಆ ಸರಸಿಜಭವ ವಾಸವಾದಿಗಳನು ಬ್ಯಾಸರವಿಲ್ಲದೆ ಪೊರೆವೆ | ಶಾಶ್ವತ ಮೂರುತಿ ವಾಸವಾನುಜ ಜಗನ್ನಾಥ ವಿಟ್ಠಲ ನಿನ್ನ ದಾಸನ ಅಪರಾಧ ಲೇಶ ನೋಡದೆ ಕಾಯೋ ||
ಎನ್ನುತ್ತಾ ಎಲ್ಲರಿಗೂ ನಮಿಸುತ್ತಾರೆ..
ವಿಷಯಾಧಾರ : ಶ್ರೀ ಅರ ಎಲ್ ಕಶ್ಯಪ್ ಅವರ "ಇಂದ್ರ" ಪುಸ್ತಕ
4 comments:
ಶಾಶ್ವತ ಮೂರುತಿ ವಾಸವಾನುಜ ಜಗನ್ನಾಥ ವಿಟ್ಠಲ ನಿಮ್ಮ ಅಪರಾಧ ಲೇಶ ನೋಡದೆ ನಿಮ್ಮನ್ನು ಸದಾ ಕಾಯಲಿ ಎಂದು ನನ್ನ ಹಾರೈಕೆ
|| ಹರಿಃ ಓಂ ||
ಧನ್ಯವಾದಗಳು ಪ್ರಕಾಶ್... ನಿಮ್ಮ ನಿರಂತರ ಪ್ರೋತ್ಸಾಹಕ್ಕೆ...
ತುಂಬಾ ಒಳ್ಳೇ ಪಠ್ಯ.
ಸ್ವರ್ಗಾಧಿಪತಿಯಾದ ಇಂದ್ರನ ಬಗ್ಗೆ, ಮಾನವಾಧಮರಾದ ನಮಗಷ್ಟೇ ಅಲ್ಲ ಸ್ವತಃ ದೇವಾನು ದೇವತೆಗಳಿಗೆ ಹೊಟ್ಟೆ ಉರಿ!
ಕಾಮಧೇನು, ಕಲ್ಪವೃಕ್ಷ, ಸ್ವರ್ಗದಂತಹ ಸಾಕ್ಷಾತ್ ಸ್ವರ್ಗ. ಆಹಾ, ರಂಭೆ ಊರ್ವಶಿ ಮೇನಕೆ ಮತ್ತು ತಿಲೋತ್ತಮೆ! ಇಂದ್ರ ತಮ್ಮದೇ ಐರಾವತೋಪಖ್ಯಾನ...
ಧನ್ಯವಾದಗಳು , ಮುಂದುವರಿಸಿ
Post a Comment