Thursday, December 1, 2011

ಮಂಗಳಾಚರಣ ಸಂಧಿಗೆ ಮಂಗಳದ ಮುಕ್ತಾಯ....


ಯಾವುದೇ ಒಂದು ಶುಭ ಕಾರ್ಯ ಮಾಡುವ ಮುನ್ನ ನಿರ್ವಿಘ್ನವಾಗಿ ಕಾರ್ಯ ಸಂಪೂರ್ಣಗೊಳ್ಳಬೇಕು ಎಂಬ ಭಾವದ ಪುಷ್ಟೀಕರಣಕ್ಕೆ ಅನುಸಾರವಾಗಿ ಹರಿಕಥಾಮೃತಸಾರದ ಕರ್ತೃ ಶ್ರೀ ಜಗನ್ನಾಥ ದಾಸರು ಕೂಡ ಆರಂಭದ ಒಂದು ಪರಿಪೂರ್ಣ ಸಂಧಿಯನ್ನೇ ದೇವತಾ ಪ್ರಾರ್ಥನೆಗೆ ಮೀಸಲಿಟ್ಟಿದ್ದಾರೆ.  ಯಾವುದೇ ಒಂದು ಬೃಹತ್ ಗ್ರಂಥ / ಕಾವ್ಯ ರಚನೆಯಾದಾಗ ಅದರ ಮೊದಲ ಪದ್ಯವು ಗ್ರಂಥದ ವಿಷಯ ಸೂಚಕವೂ ಆಗಿರಬೇಕಲ್ಲವೇ..? ಹಾಗೇ ಅದೇ ಪದ್ಧತಿಗನುಗುಣವಾಗಿ ಈ ಗ್ರಂಥದ ವಿಚಾರ ನಾರಾಯಣಾದಿ ಪಂಚರೂಪ ಪರಮಾತ್ಮನ ಉಪಾಸನೆಯಾಗಿರುವುದರಿಂದ, ದಾಸರು ಮೊದಲ ಸಂಧಿಯಾದ ಮಂಗಳಾಚರಣ ಸಂಧಿಯ ಮೊಟ್ಟ ಮೊದಲ ಪದ್ಯವನ್ನು “ಶ್ರೀ ರಮಣಿಕರಕಮಲ ಪೂಜಿತ” ಎಂದೂ, ನೀರಜಭವಾಂಡ ಉದಯ ಸ್ಥಿತಿ ಕಾರಣನೆ ಎಂದು ಪ್ರದ್ಯುಮ್ನ, ಅನಿರುದ್ಧ ರೂಪಗಳನ್ನೂ, ಕೈವಲ್ಯದಾಯಕವಾದ ಸಂಕರ್ಷಣರೂಪವನ್ನೂ ಸ್ತುತಿಸಿದ್ದಾರೆ.  ಆಮೇಲೆ ಲಕ್ಷ್ಮೀ, ಬ್ರಹ್ಮ, ವಾಯು, ಸರಸ್ವತಿ, ಭಾರತೀ ದೇವಿಯವರನ್ನು ಸ್ತುತಿಸಿ, ನಮಿಸಿದ್ದಾರೆ.  ನಂತರ ಗುರುಗಳ ನಮಸ್ಕಾರವಾಗಿ ವೇದವ್ಯಾಸರು, ಆಚಾರ್ಯರು, ರುದ್ರ, ಇಂದ್ರ, ಋಷಿಗಳು, ಪಿತೃಗಳು, ಚಕ್ರವರ್ತಿಗಳು, ಯತಿವರ್ಯರು ಹಾಗೂ ಕೊನೆಯದಾಗಿ ಸಕಲ ದಾಸವರೇಣ್ಯರಿಗೂ ನಮಿಸಿದ್ದಾರೆ.

ಹೀಗೆ ಪಂಚಭೇದ ತಾರತಮ್ಯ ಪಂಚವಿಂಶತಿ ತತ್ವ ಇವುಗಳ ವಿವರಣೆ ಕೊಟ್ಟು ಮಂಗಳಾಚರಣ ಸಂಧಿಯಲ್ಲಿ ಸ್ವೋತ್ತಮರಿಗೆಲ್ಲಾ ವಂದಿಸಿ ಅಂತರ್ಯಾಮಿ ಬಿಂಬರೂಪಿ ಜಗನ್ನಾಥ ವಿಠಲನ “ಕರುಣೆ”ಯನ್ನು ಕೇಳಿಕೊಂಡು ಮುಂದಿನ “ಕರುಣಾಸಂಧಿ” ಪದ್ಯಗಳಿಗೆ ನಾಂದಿ ಹಾಡುತ್ತಾರೆ ಜಗನ್ನಾಥ ದಾಸರು.  ಈ ಮಂಗಳಾಚರಣ ಸಂಧಿಯನ್ನು ಓದಿದವರಿಗೆ, ಕೇಳಿದವರಿಗೆ, ಬರೆದವರಿಗೆ ಎಲ್ಲರಿಗೂ ಶ್ರೀಹರಿಯ ಪ್ರಸಾದ ಲಭ್ಯವಾಗಲೆಂದು ಪ್ರಾರ್ಥಿಸಿದ್ದಾರೆ.  ಶ್ರೀಹರಿಯ ಪ್ರಸಾದವೆಂದರೆ ಭಗವಂತನ “ಅನುಗ್ರಹ”.  ನಮಗೆ ಆ ಪ್ರಸಾದ ಸಿಕ್ಕಬೇಕಾದರೆ ನಾವು ಕಾಯಾ ವಾಚಾ ಮನಸಾ ಭಗವಂತನ ಪಾದಗಳಿಗೆ ಶರಣಾಗಿ, ಪರಾಪರ ತತ್ವಜ್ಞಾನದ ಆಶ್ರಯದಿಂದ ನಮ್ಮೊಳಗಿನ ಜೀವ ಕುಸುಮದ ವಿಕಸನೆಯನ್ನು ನಿರಂತರ ಮಾಡಿಕೊಳ್ಳುತ್ತಲೇ ಇರಬೇಕು ಎಂಬ ಸಂದೇಶ ಸಾರುತ್ತಾ ಶ್ರೀ ಜಗನ್ನಾಥ ದಾಸರು “ಹರಿಕಥಾಮೃತಸಾರ” ಗ್ರಂಥ ರಚನೆಯ ಕೆಲಸ ಸುಗಮವಾಗಿ ಸಾಗಿ, ಮುಕ್ತಾಯಹೊಂದಿ, ಶ್ರೀಹರಿಯ ಕೃಪೆ, ಅನುಗ್ರಹದ ಪ್ರಸಾದ ಎಲ್ಲರಿಗೂ ಲಭ್ಯವಾಗಲೆಂದು ಪ್ರಾರ್ಥಿಸುತ್ತಾ ಮಂಗಳಾಚರಣ ಸಂಧಿಗೆ ಮಂಗಳವನ್ನು  ಕೋರುತ್ತಾ 

ಜಯ ಮಂಗಳಂ ನಿತ್ಯ ಶುಭ ಮಂಗಳಂ |
ದಯದಿ ಭಕ್ತರ ಕಾಯ್ದ ದಾಶರತಿಗೆ ||

ಅವನಿಜಾವಲ್ಲಭಾಗೆ ಪವನಾತ್ಮನ ಸಖಗೆ |
ಪ್ಲವಗ ನಾಯಕರಾಳ್ದ ರವಿಜ ಸುತಗೆ |
ಶಿವನ ವರ ಪಡೆದಕ್ಷಕುವರ ಮುಖ್ಯ ರಕ್ಕಸರ |
ಬವರಮುಖದಲಿ ಸದೆದ ಪ್ರವಿತತನಿಗೆ ||

ಪಾವಮಾನಿಯ ಪೆಗಲನೇರಿ ಅತಿ ಹರ್ಷದಲಿ |
ರಾವಣಾದ್ಯರ ಸದೆದ ರಘುರಾಮಗೆ |
ಭಾವಿ ಬ್ರಹ್ಮನಿಗೆ ಭಕ್ತಿಯನಿತ್ತು ಮಿಕ್ಕ ಸು |
ಗ್ರೀವಾದಿಗಳಿಗೆ ಮುಕ್ತಿಯ  ನೀಡ್ದಗೆ ||

ತ್ರಿಗುಣವರ್ಜಿತ ತ್ರಿವಿಕ್ರಮ ತೀರ್ಥಪಾದನಿಗೆ |
ಭಗೃ ಕುಲೋದ್ವಹ ಭಕ್ತಜನಪಾಲಗೆ |
ಸ್ವಾಗತ ನಾಮಗಳ ಸರ್ವರಿಗಿತ್ತು ಸಂತೈಪ |
ಅಗಣಿತಮಹಿಮ ಜಗನ್ನಾಥ ವಿಠಲಗೆ || 

ಜಯ ಮಂಗಳಂ ನಿತ್ಯ ಶುಭ ಮಂಗಳಂ ಎಂದು ಪ್ರಾರ್ಥಿಸುತ್ತಾರೆ.


ಚಿತ್ರಕೃಪೆ : ಅಂತರ್ಜಾಲ

No comments: