Friday, July 11, 2014

ಕರುಣಾ ಸಂಧಿ - ೨೩ ನೇ ಪದ್ಯ

ಚೇತನಾ ಚೇತನ ವಿಲಕ್ಷಣ
ನೂತನ ಪದಾರ್ಥಗಳೊಳಗೆ ಬಲು
ನೂತನತಿ ಸುಂದರಕೆ ಸುಂದರ ರಸಕೆ ರಸರೂಪ |
ಜಾತರೂಪೋದರಭವಾದ್ಯರೊ-
ಳಾತತಪ್ರತಿಮ ಪ್ರಭಾವ ಧ-
ರಾತಳದೊಳೆಮ್ಮೊಡನೆಯಾಡುತಲಿಪ್ಪ ನಮ್ಮಪ್ಪ
  || ೨೩ || 


ಪ್ರತಿಪದಾರ್ಥ : ಚೇತನಾಚೇತನ ವಿಲಕ್ಷಣ - ಭಗವಂತನು ಅಪ್ರಾಕೃತ ಸ್ವರೂಪದವನು, ನೂತನ ಪದಾರ್ಥಗಳೊಳಗೆ ಬಲು ನೂತನ - ಹೊಸತರಲ್ಲಿ ಹೊಸದಾದ ನವನವೀನ, ಅತಿ ಸುಂದರಕೆ ಸುಂದರ -  ಅತ್ಯಂತ ಸುಂದರ ಎಂದು ಯಾವುದಿದೆಯೋ ಅದಕ್ಕಿಂತಲೂ ಭಗವಂತನು ಅತಿ ಸುಂದರನು, ರಸಕೆ ರಸ ರೂಪ -  ರಸಗಳಲ್ಲಿ ಅಂತರ್ಗತನಾಗಿರುವ ಭಗವಂತನಿಂದಲೇ ಆ ಪದಾರ್ಥಗಳು ಸವಿಯಾಗಿರುವುದು, ಜಾತರೂಪೋದರ - ಬ್ರಹ್ಮ ದೇವರು, ಭವ - ಈಶ್ವರ, ಆದ್ಯರೊಳು - ಮೊದಲಾದ ದೇವತೆಗಳಲ್ಲಿ, ಆತತ - ವ್ಯಾಪ್ತನಾಗಿರುವವನು, ಅಪ್ರತಿಮ ಪ್ರಭಾವ - ಅಸಾಮಾನ್ಯ ಅಸದೃಶನಾದವನು, ಧರಾತಳದೊಳು - ಈ ಬ್ರಹ್ಮಾಂಡದಲ್ಲಿ, ನಮ್ಮೊಡನೆಯಾಡುತಲಿಪ್ಪ - ಸದಾ ನಮ್ಮ ಜೊತೆಯಲ್ಲೇ ಇದ್ದು ನಮ್ಮೊಡನೆಯೇ ವಿಹರಿಸುವವನು, ನಮ್ಮಪ್ಪ - ನಮ್ಮನ್ನೆಲ್ಲಾ ಸೃಷ್ಟಿಸಿರುವ ಜಗದೊಡೆಯ.
 
ಸರ್ವಜಗತ್ತಿಗೆ ಸೃಷ್ಟಿಕರ್ತನಾದ ಭಗವ೦ತನು, ತಾನು ಸೃಷ್ಟಿ ಮಾಡಿದ ಜೀವ, ಜಡಪದಾರ್ಥಗಳು ದೋಷಯುಕ್ತವಾಗಿದ್ದರೂ, ತಾನು ಮಾತ್ರ ಸುಲಕ್ಷಣನಾಗಿಯೂ ಮತ್ತು ಪೂರ್‍ಣನಾಗಿಯೂ ಇರುತ್ತಾನೆ. ನವನವೀನವಾಗಿ ನಿರ್ಮಾಣವಾಗುವ ಪದಾರ್ಥಗಳೊಳಗೆ ಆದ್ಯ೦ತನಾಗಿಯೂ, ಸು೦ದರ ಶಬ್ದವಾಚ್ಯನಾಗಿರುವುದರಿ೦ದಲೂ ಅದೇ ಆಕಾರದಲ್ಲಿಯೂ, ನೂತನ ನಾಮಾ೦ಕಿತನಾಗಿಯೂ ಇರುತ್ತಾನೆ. ಸು೦ದರ ಪದಾರ್ಥಗಳಲ್ಲಿನ ಸೌ೦ದರ್ಯನಾಗಿಯೂ, ರಸಪದಾರ್ಥಗಳಲ್ಲಿ ರಸರೂಪನಾಗಿಯೂ, ಬ್ರಹ್ಮರುದ್ರಾದಿ ದೇವತೆಗಳಲ್ಲಿ ವ್ಯಾಪ್ತನಾಗಿಯೂ, ಅಧಿಷ್ಠಾನಸದೃಶವಾದ ಆಕಾರನಾಗಿರುತ್ತಾನೆ. ಈ ಜಗತ್ತಿನಲ್ಲಿ, ಸಮಸ್ತ ಜೀವರಲ್ಲಿಯೂ ಅ೦ತರ್ಗತನಾಗಿದ್ದು, ಬಿ೦ಬಕ್ರಿಯಾದ್ವಾರ ಇ೦ದ್ರಿಯವ್ಯಾಪಾರಗಳನ್ನು ನಡೆಸುವ ಆಟಗಳನ್ನು ಆಡಿಸುತ್ತಿರುತ್ತಾನೆ. ಜೀವನಿಗೂ ಪರಮಾತ್ಮನಿಗೂ ಇರುವ ಸಂಬಂಧ ಅನಂತ ಮತ್ತು ಅನಾದಿಯಾಗಿದೆ.  ಪರಮಾತ್ಮನ ಬಿಂಬರೂಪದ ಚೇತನ ಜೀವದ ಚೇತನಕ್ಕೆ ಚೇತನವನ್ನು ಕೊಡುವುದರಿ೦ದ ಪರಮಾತ್ಮನು ಚೇತನಾಚೇತನ ವಿಲಕ್ಷಣನು.  ಬ್ರಹ್ಮ-ರುದ್ರಾದಿಗಳಿಗೆ ಆ ಶಕ್ತಿ ಕೊಡುವ ಬಿ೦ಬರೂಪಿ ಪರಮಾತ್ಮನು,  ಬ್ರಹ್ಮನ ಶಕ್ತಿಯನ್ನು ತೆಗೆದುಕೊಂಡು ಬ್ರಹ್ಮ ಎನಿಸಿಕೊಳ್ಳುತ್ತಾನೆ, ರುದ್ರನ ಶಕ್ತಿಯನ್ನು ತೆಗೆದುಕೊಂಡು ರುದ್ರ ಎನಿಸಿಕೊಳ್ಳುತ್ತಾನೆ.  ಇಂತಹ ಅತೀವ ಶಕ್ತಿಗಳನ್ನು ಬ್ರಹ್ಮ ರುದ್ರರಿಗೆ ಕೊಟ್ಟು, ಅದೇ ಹೆಸರಿನಿಂದ ಕರೆಸಿಕೊಂಡು, ಅಲ್ಪ ಜೀವಿಗಳಲ್ಲೂ ಅವರದೇ ಹೆಸರಿನಿಂದ ಆಡುತ್ತಿದ್ದಾನೆ.  ಎಲ್ಲರ ಅಪ್ಪ ನಮ್ಮಪ್ಪನಾಗಿದ್ದಾನೆ.

ಭಗವಂತ ಜಗತ್ತನ್ನು ಜೀವ ಅಥವಾ ಚೇತನ, ಜಡ ಅಥವಾ ಅಚೇತನಗಳನ್ನಾಗಿ ವಿಂಗಡಿಸಿ ಸೃಷ್ಟಿಸಿದ.  ಇವೆರಡಕ್ಕೂ ಚೈತನ್ಯ ನೀಡುವವನಾಗಿ ಪರಮಾತ್ಮನಾದ.  ಜಗತ್ತಿನ ಮೂಲ ಕಾರಣಗಳು ಚೇತನ ಮತ್ತು ಅಚೇತನರೆಂದಾಯಿತು.  ಚೇತನರೊಳಗೆ ಚೇತನವನ್ನೂ, ಅಚೇತನಕ್ಕೆ ಅಚೇತನವನ್ನೂ ಕೊಡುವವನು ಭಗವಂತನೇ ಆಗಿದ್ದಾನೆ.    ಅವನು ಸರ್ವಸ್ವತಂತ್ರನಾದವನು ಆದರೆ ಜೀವಿಗಳು ಅಸ್ವತಂತ್ರ ಚೇತನರು.  ಚೇತನಾಚೇತನ ಪ್ರಪಂಚವೆಂದು ನಾವು ಸದಾ ನೋಡುವುದು ಅಸ್ವತಂತ್ರ ಜೀವಿಗಳಿರುವ  ಪ್ರಪಂಚವೇ ಆಗಿರುತ್ತದೆ. 

 

ಚೇತನಾಚೇತನವಿಲಕ್ಷಣ - ಜೀವರಾಶಿಗಳೆಲ್ಲಾ ಅಚೇತನದ ಮುಸುಕಿನೊಳಗಿರುವ ಚೇತನಗಳೇ ಆಗಿವೆ.   ರಮಾ ಬ್ರಹ್ಮಾದಿ ದೇವತೆಗಳೂ ಕೂಡ ಅಚೇತನದ ಮುಸುಕಿನೊಳಗಿರುವ ಚೇತನಗಳೇ ಆಗಿರುತ್ತಾರೆ.  ಭಗವಂತನು ಮಾತ್ರ ಶುದ್ಧ ಚೇತನನು, ಅಚೇತನದ ಆವರಣವಿಲ್ಲದವನು.   ರಮಾ ಬ್ರಹ್ಮಾದಿ ದೇವತೆಗಳೆಲ್ಲರಿಗೂ ಅಚೇತನದ ಆವರಣ ಅನಾವರಣಗೊಳ್ಳುವಿಕೆಯಿದೆ, ಆದರೆ ಭಗವಂತನೊಬ್ಬನಿಗೆ ಮಾತ್ರ ಅನಾದಿ ಕಾಲದಿಂದಲೂ, ಅನಂತ ಕಾಲದಲ್ಲೂ ಯಾವ ಬದಲಾವಣೆಯೂ ಇಲ್ಲ.  ಅವನು ಸದಾ ಚೈತನ್ಯದಾಯಕನಾಗಿರುವವನು.    ಚೇತನರೆಂದರೆ ಜ್ಞಾನಿಗಳು ಎಂದಾಗುತ್ತದೆ.   ಅಚೇತನವನ್ನು ಅ+ಚೇತನ ಎಂದು ಬಿಡಿಸಿದರೆ ’ಅ’ ಅಕ್ಷರ ವಾಚ್ಯನು ಭಗವಂತನೇ ಆಗಿದ್ದಾನೆ.  ಅ ಅಕ್ಷರವು ಓಂಕಾರದ ಪ್ರಥಮ ಅಕ್ಷರವಾಗಿದೆ.  ಭಗವಂತನು ಓಂಕಾರ ವಾಚ್ಯನಾಗಿದ್ದಾನೆ.    ಭಗವಂತನು ಅಕಾರ ವಾಚ್ಯನಾದ ಶುದ್ಧಾತಿಶುದ್ಧವಾದ ಪರಮ ಚೇತನವಾಗಿದ್ದಾನೆ.  ಯಾರಲ್ಲಿಯೂ, ಯಾವಾಗಲೂ ಬಳಕೆಯೇ ಆಗದಂತಹ ವಿಶೇಷ ನಾಮಗಳಿಂದ ಭಗವಂತ ಮಾತ್ರನೇ ವಾಚ್ಯನಾಗುತ್ತಾನೆ.  ಅ, ಅಹಃ, ಅಹಂ ಎಂಬೆಲ್ಲಾ ಅಕ್ಷರಗಳೂ ಭಗವಂತನ ಉಪಾಸನೆಗಾಗಿ ಇರುವ ರಹಸ್ಯ ನಾಮಗಳು.  ವಿಷ್ಣು ಸಹಸ್ರನಾಮದಲ್ಲಿ "ಅಹಃ ಸಂವತ್ಸರೋವ್ಯಾಳಃ..." - ಜ್ಞಾನ ಸ್ವರೂಪಿಯಾದ, ಸ್ವಯಂ ಪ್ರಕಾಶಿತನಾದ, ಅಜ್ಞಾನವಾಗಲೀ, ಅಂಧಕಾರವಾಗಲೀ ಆವರಿಸಲಾಗದವನು ಎಂದು ಸ್ತುತಿಸಲ್ಪಟ್ಟಿದೆ.  ಉಳಿದ ಎಲ್ಲಾ ಪದಾರ್ಥಗಳೂ, ಭಗವಂತನ ಸ್ವಪ್ರಕಾಶಿತ ಪ್ರಕಾಶವನ್ನು ಅನುಸರಿಸಿ ಪ್ರಕಾಶಿಸುವುವು.  ಅವುಗಳಲ್ಲಿ ಭಗವಂತ ಅದೇ ರೂಪದಲ್ಲಿ ಸ್ಥಿತನಾದ್ದರಿಂದಲೇ ಅವುಗಳು ಪ್ರಕಾಶಗೊಳ್ಳುವುವು.    ಭಗವಂತನೆಂಬ ಶುದ್ಧ ಚೇತನವು ಉಳಿದ ಎಲ್ಲಾ ಪದಾರ್ಥಗಳಲ್ಲೂ, ಜೀವಿಗಳಲ್ಲೂ, ರಮಾ ಬ್ರಹ್ಮಾದಿ ದೇವತೆಗಳಲ್ಲೂ ನೆಲೆಸಿ ಪ್ರಕಾಶಿಸಿ ಆ ಚೇತನಗಳು ಪ್ರಕಾಶಿಸುವಂತೆ ಮಾಡುವನು.  ಭಗವಂತನಿಗಿಂತಲೂ ಮಿಗಿಲಾದ ಯಾವುದೇ ಚೇತನವೂ ಇಲ್ಲವೇ ಇಲ್ಲವಾದ್ದರಿಂದಲೇ ಅವನು ಅಚೇತನನೆಸಿಕೊಳ್ಳುತ್ತಾನೆ.  ಭಗವದ್ಗೀತೆಯ ೧೦ನೆಯ ಅಧ್ಯಾಯದಲ್ಲಿ ಭಗವಂತ "ಅಕ್ಷರಾಣಾಮಕಾರೋಸ್ಮಿ".. - ಅಕ್ಷರಗಳಲ್ಲಿ ಅಕಾರವು ನಾನು  ಮತ್ತು "ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ" - ಇಂದ್ರಿಯಗಳಲ್ಲಿ ಮನಸ್ಸು ಮತ್ತು ಭೂತಪ್ರಾಣಿಗಳ ಚೈತನ್ಯ, ಅಂದರೆ ಜೀವನ ಶಕ್ತಿಯು ನಾನು ಎಂದು ತಿಳಿಸಿದ್ದಾನೆ.   

ಭಗವಂತನು  ಯಾರಿಂದಲೂ ನಿಯಂತ್ರಿಸಲಾಗದವನು, ಪರಿಪೂರ್ಣನು, ಸ್ವತಂತ್ರನು.  ಯಾರನ್ನು ಬಿಟ್ಟು ಉಳಿದ ಚೇತನಗಳು ಸ್ವತಂತ್ರವಾಗಿ ಇರಲಾರರೋ, ಅಂತಹವನು ಭಗವಂತನು.  ಭಗವಂತನು "ಅಹಂ" ಎಂದು ಉಪಾಸಿಸಲ್ಪಡುತ್ತಾನೆ.  ಜೀವಿಗಳು ಅನೇಕ ಬಾರಿ ದೇಹ ಬಿಟ್ಟು, ಬಟ್ಟೆ ಬದಲಿಸುವಂತೆ ಅನೇಕ ದೇಹಗಳನ್ನು ಹೊಂದುತ್ತಾರಾದ್ದರಿಂದ ಅವರು "ಹಂ".  ಅಕಾರ ವಾಚ್ಯನಾದವನು ಭಗವಂತನಾದ್ದರಿಂದ ಅವನು ಭಿನ್ನವಾದವನು.  ತಾನು ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ ಭಿನ್ನವಾದವನು ತಾನೇ ’ಪುರುಷೋತ್ತಮ’ನು ಏಕೆಂದು ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ ಭಗವಂತನು
ದ್ವಾವಿಮೌ ಪುರುಷೌ ಲೋಕೇ, ಕ್ಷರಾಶ್ಚಾಕ್ಷರ ಏವ ಚ |
ಕ್ಷರಃ ಸರ್ವಾಣಿ ಭೂತಾನಿ, ಕೂಟಸ್ಥೋಕ್ಷರ ಉಚ್ಯತೇ || - ಜಗತ್ತಿನಲ್ಲಿ ನಾಶವಾಗುವ ಹಾಗೂ ನಾಶವಾಗದೇ ಉಳಿಯುವ ಎರಡು ಪ್ರಕಾರದ ಪುರುಷರಿದ್ದಾರೆ. ಇದರಲ್ಲಿ ಸಂಪೂರ್ಣ ಭೂತಪ್ರಾಣಿಗಳ ಶರೀರಗಳು ನಾಶವಾಗುವಂತಹುದು ಮತ್ತು ಜೀವಾತ್ಮನು ಅವಿನಾಶಿಯೆಂದು ಹೇಳಲಾಗಿದೆ.
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ || - ಮೇಲೆ ಹೇಳಿದ ಎರಡು ಪ್ರಕಾರದ ಪುರುಷರಿಗಿಂತಲೂ ಉತ್ತಮನಾದ, ಬೇರೆಯೇ ಆದ ಪುರುಷನೊಬ್ಬನಿದ್ದಾನೆ.  ಅವನು ಮೂರು ಲೋಕಗಳಲ್ಲಿ ಪ್ರವೇಶ ಮಾಡಿ ಎಲ್ಲರ ಧಾರಣೆ - ಪೋಷಣೆ ಮಾಡುತ್ತಾನೆ.  ಆದ್ದರಿಂದ ಅವನನ್ನು ಅವಿನಾಶಿ, ಪರಮೇಶ್ವರ, ಪರಮಾತ್ಮ ಎಂದು ಹೇಳಲಾಗಿದೆ.
ಯಸ್ಮಾತ್ ಕ್ಷರಮತೀತೋಹಮಕ್ಷರಾದಪಿ ಚೋತ್ತಮಃ |
ಅತೋಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || - ನಾನು ನಾಶವಾಗುವ ಜಡವರ್ಗ, ಕ್ಷೇತ್ರಕ್ಕಿಂತಲೂ ಸರ್ವಥಾ ಅತೀತನಾಗಿದ್ದೇನೆ ಮತ್ತು ಅವಿನಾಶಿ ಎನಿಸಿಕೊಂಡಿರುವ ಜೀವಾತ್ಮನಿಗಿಂತಲೂ ಉತ್ತಮನಾಗಿದ್ದೇನೆ.  ಆದ್ದರಿಂದ ಲೋಕದಲ್ಲಿ ಮತ್ತು ವೇದದಲ್ಲಿ ಕೂಡ "ಪುರುಷೋತ್ತಮ"ನೆಂದು ಸ್ತುತಿಸಲ್ಪಟ್ಟಿದ್ದೇನೆ ಎಂದು ತಿಳಿಸಿದ್ದಾನೆ.
ಭಾಗವತದ ಎರಡನೆಯ ಸ್ಕಂದದಲ್ಲಿ ಭಗವಂತನ ರೂಪವನ್ನು ವಿವರಿಸುತ್ತಾ "ಬ್ರಹ್ಮಾಂಡದಲ್ಲಿ ವ್ಯಕ್ತವಾದ ಭಗವಂತನಿಗೆ ಪುರುಷ ಎಂದು ಹೆಸರು.  ಅವನಿಗೆ ಅನಂತ ತೊಡೆ, ಕಾಲು, ತೋಳು, ಕಣ್ಣು, ಮುಖ ಮತ್ತು ಶಿರಸ್ಸುಗಳುಂಟು.  ೫೦ ಕೋಟಿ ಯೋಜನ ವಿಸ್ತಾರವಾದ ಬ್ರಹ್ಮಾಂಡದಷ್ಟೇ ದೊಡ್ಡ ದೇಹವುಳ್ಳ ಪುರುಷನ ಅವಯವಗಳನ್ನು ಆಶ್ರಯಿಸಿ ೧೪ ಲೋಕಗಳೂ ಸೃಷ್ಟಿಯಾದವು.  ಲೋಕಗಳನ್ನು ಸೃಷ್ಟಿಸಿ ಅವಕ್ಕೆ ಆಧಾರನಾಗಿ, ಅವುಗಳಲ್ಲಿ ವ್ಯಾಪ್ತನಾಗಿ ಅವುಗಳಿಗಿಂತ ಉತ್ತಮನಾದ್ದರಿಂದ ವಿರಾಟಪುರುಷನಾಮಕನಾದ ಭಗವಂತನಿಗೆ ಲೋಕಮಯನೆಂದು ಹೆಸರು" ಎಂದಿದ್ದಾರೆ.
ಕಠೋಪನಿಷತ್ತಿನಲ್ಲಿ
ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮೇಕೋ ಬಹೂನಾಂ ಯೋ ವಿದಧಾತಿ ಕಾಮಾನ್ |
ತಮಾತ್ಮಸ್ಥಂ ಯೇನುಪಶ್ಯನ್ತಿ ಧೀರಾಸ್ತೇಷಾಂ ಶಾನ್ತಿಃ ಶಾಶ್ವತೀ ನೇತರೇಷಾಮ್ || - ಪರಮಾತ್ಮನು ಅನಿತ್ಯರಲ್ಲಿ ನಿತ್ಯನು.  ಚೇತನರಲ್ಲಿ ಚೇತನನು.  ಏಕೈಕನಾದರೂ ಬಹುಕಾಮಗಳನ್ನು ನೆರವೇರಿಸುವಂತಹ ಆತ್ಮವನ್ನು ತಮ್ಮ ಆತ್ಮದಲ್ಲಿಯೇ ದರ್ಶಿಸುವಂತಹ ಪ್ರಾಜ್ಞರಿಗೆ ಮಾತ್ರವೇ ಶಾಶ್ವತ ಶಾಂತಿ ಲಭಿಸುತ್ತದೆ, ಇತರರು ಆ ಶಾಂತಿಯನ್ನು ಹೊಂದಲಾರರು ಎಂದು ತಿಳಿಸಿದೆ.

ಭಾಗವತದಲ್ಲಿ ಭಗವಂತನು "ವಿಲಕ್ಷಣ"ನು ಏಕೆಂದರೆ ಚೇತನ ರೂಪಕವಾದ ಈ ಜಗತ್ತು, ಭಗವಂತನ ದೇಹದೊಳಗೆ/ಉದರದೊಳಗೆ ಲಯ ಹೊಂದುತ್ತದೆ,  ಅವನು ಸ್ವತಂತ್ರನಾಗಿ ಚೇತನಾ ಜಗತ್ತು ಪ್ರವರ್ತಿಸುವಂತೆ ಮಾಡುತ್ತಾನಾದ್ದರಿಂದಲೇ ಅವನು ಚೇತನಾ ಚೇತನರಿಗಿಂತಲೂ ವಿಲಕ್ಷಣನಾದವನು ಎಂದಿದ್ದಾರೆ.  ನಮ್ಮ ಯೋಗ್ಯತೆಯಿಂದ ಯಾವ ವಿಷಯಗಳನ್ನು ಅರ್ಥ ಮಾಡಿಕೊಳ್ಳಬಹುದೋ, ನಮ್ಮ ಯೋಗ್ಯತೆಗೆ ಯಾವುದು ನಿಲುಕುವುದೋ, ಅದ್ಯಾವುದೂ ಅಲ್ಲವಾದವನು ಮತ್ತು ಎಲ್ಲವನ್ನೂ ಮೀರಿದವನೇ ಭಗವಂತನು.  ಆದ್ದರಿಂದಲೇ ಅವನು ವಿಲಕ್ಷಣನು. 
ಅಷ್ಟಮಸ್ಕಂಧದ ೩ನೇ ಅಧ್ಯಾಯದಲ್ಲಿ ಬರುವ ಗಜೇಂದ್ರಮೋಕ್ಷದಲ್ಲಿ :
ಸ ವೈ ನ ದೇವಾಸುರಮರ್ತ್ಯತಿರ್ಯಕ್
ಜ್ನ ಸ್ತ್ರೀ ನ ಷಣ್ಡೋ ನ ಪುಮಾನ್ನ ಜನ್ತುಃ |
ನಾಯಂ ಗುಣಃ ಕರ್ಮ ನ ಸನ್ನ ಚಾಸ-
ನ್ನಿಷೇಧಶೇಷೋ ಜಯತಾದಶೇಷಃ ||  - ಭಗವಂತನು ದೇವತೆಯಲ್ಲ, ರಾಕ್ಷಸನಲ್ಲ, ಮನುಷ್ಯನಲ್ಲ, ತಿರ್ಯಗ್ಜಂತುವಲ್ಲ, ಹೆಣ್ಣಲ್ಲ, ಗಂಡಲ್ಲ, ನಪುಂಸಕನೂ ಅಲ್ಲ, ಅಸಾಧಾರಣವಾದ ಅಥವಾ ಸಾಧಾರಣವಾದ ಪ್ರಾಣಿಯೂ ಅಲ್ಲ, ಗುಣವಲ್ಲ, ಕರ್ಮ ಕಾರ್ಯವೂ ಅಲ್ಲ, ಕಾರಣವೂ ಅಲ್ಲ, ಸತ್ತಲ್ಲ-ಅಸತ್ತಲ್ಲ.  ಈ ಸಕಲ ವಸ್ತುಗಳಿಗಿಂತಲೂ ಬೇರೆಯಾಗಿರುವ, ಇವು ಯಾವುವೂ ಅಲ್ಲವೆಂದು ನಿಷೇಧಿಸಿದ ಬಳಿಕ ಉಳಿಯುವ ಸರ್ವಾತ್ಮನಾದವನು ಎಂದು ವರ್ಣಿಸಲಾಗಿದೆ.

ನೂತನ ಪದಾರ್ಥಗಳೊಳಗೆ ಬಲು ನೂತನ - ನೂತನವೆಂದರೆ ಆಗ ತಾನೇ ತಯಾರಿಸಲ್ಪಟ್ಟ ವಸ್ತು ಅಥವಾ ಆಗ ತಾನೇ ಅರಳಿದ ಹೂವು ಎನ್ನಬಹುದು.  ಯಾವುದೇ ವಸ್ತುವಾಗಲೀ, ಹೂವಾಗಲೀ, ಹಣ್ಣಾಗಲೀ ಅದು ಕೆಲವು ದಿನಗಳು, ನಿಮಿಷಗಳು, ಘಳಿಗೆಗಳು ಮಾತ್ರ ನೂತನವಾಗಿರುತ್ತದೆ.  ಈ ಹೊಸತನ ಸ್ವಾಭಾವಿಕವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತದೆ.  ಹೊಸತನದ ವಿಜೃಂಭಣೆ ಆ ವಸ್ತುವಿನಲ್ಲಿರುವ, ಹೂವಿನಲ್ಲಿರುವ ಅದರ ಗುಣಗಳಾದ ರೂಪ, ರಸ ಹಾಗೂ ಗಂಧವಾಗಿರುತ್ತದೆ.  ಈ ನೂತನ ಪದಾರ್ಥಗಳಿಗೆಲ್ಲ ಕಾರಣವಾದ ಅದರ ಗುಣಗಳು ಪ್ರಕೃತಿಗನುಗುಣವಾಗಿ ಕಡಿಮೆಯಾಗುತ್ತಾ ಬರುತ್ತದೆ.  ಉದಾಹರಣೆಗೆ ಆಗ ತಾನೆ ಸೂರ್ಯ ರಶ್ಮಿ ಸೋಕಿ ಅರಳಿದ ಸುಮ, ಕೆಲವು ಗಂಟೆಗಳಿಗೆಲ್ಲಾ ತನ್ನ ಹೊಸತನ ಕಳೆದುಕೊಂಡು ಬಾಡುತ್ತದೆ, ತನ್ನ ಹೊಸತನ ಅಥವಾ ತಾಜಾತನ ಕಳೆದುಕೊಂಡು ಬಿಡುತ್ತದೆ.  ಆದರೆ ಭಗವಂತನಲ್ಲಿರುವ ರೂಪ ರಸ ಗಂಧಾದಿಗಳು ಎಂದಿಗೂ ನಿತ್ಯ ನೂತನ, ನಿತ್ಯ ಶುದ್ಧವಾದವುಗಳು.  ಎಂದಿಗೂ ಮಾಸದ, ಹಳಸದ ದಿವ್ಯ ಗುಣಗಳು.  ಆದ್ದರಿಂದಲೇ ಅವನು ನಿತ್ಯನೂತನನಾಗಿದ್ದಾನೆ.  ಅನಾದಿಕಾಲದಿಂದಲೂ ಅನವರತ  ಸೇವಿಸುತ್ತಿರುವ ಮಹಾಲಕ್ಷ್ಮಿಯೇ ಎಣಿಸಲಾಗದ ನೂತನಾತಿ ನೂತನ ಗುಣಗಳನ್ನು ಕಂಡು ರೋಮಾಂಚಿತಳಾಗುತ್ತಾಳೆ. 
ಭಗವದ್ಗೀತೆಯ ೭ನೇ ಅಧ್ಯಾಯದ ೮/೯ ಶ್ಲೋಕಗಳಲ್ಲಿ ಭಗವಂತ ಅರ್ಜುನನಿಗೆ
ರಸೋಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ |
ಪ್ರಣವಃ ಸರ್ವವೇದೇಷು ಶಬ್ಧಃ ಖೇ ಪೌರುಷಂ ನೃಷು || - ನೀರಿನಲ್ಲಿ ರಸವಾಗಿ, ಚಂದ್ರ ಸೂರ್ಯರಲ್ಲಿ ಪ್ರಕಾಶನಾಗಿ, ಎಲ್ಲಾ ವೇದಗಳಲ್ಲಿ ಓಂಕಾರನಾಗಿ, ಆಕಾಶದಲ್ಲಿ ಶಬ್ದ ಮತ್ತು ಪುರುಷರಲ್ಲಿನ ಪುರುಷತ್ವನಾಗಿದ್ದೇನೆ.
ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ - ಪೃಥ್ವಿಯಲ್ಲಿ ಪವಿತ್ರ ಪರಿಮಳ ಮತ್ತು ಅಗ್ನಿಯಲ್ಲಿ ತೇಜಸ್ಸು ನಾನಾಗಿದ್ದೇನೆ ಎಂದಿದ್ದಾನೆ.  ಹೀಗೆ ಎಲ್ಲಾ ಪದಾರ್ಥಗಳಲ್ಲೂ ಭಗವಂತ ಅದೇ ರೂಪದಿಂದ ನೆಲೆಸಿರುವುದರಿಂದಲೇ ಆಯಾ ಪದಾರ್ಥಗಳು ತಮ್ಮ ರಸ, ಗಂಧ, ರೂಪಗಳಿಂದ ಕೆಲವು ಘಳಿಗೆ, ಕೆಲವು ದಿನಗಳಾದರೂ ನೂತನವಾಗಿರುತ್ತವೆ.  ಹೀಗೆ ಸಕಲ ಚರಾಚರಗಳಲ್ಲೂ ಸ್ಥಿತನಾಗಿರುವ ಭಗವಂತ ಸದಾ ನಿತ್ಯನೂತನನೇ ಆಗಿದ್ದಾನೆ.  ಉಳಿದ ಎಲ್ಲಾ ನೂತನ ವಸ್ತುಗಳಲ್ಲೂ ಅತಿ ನೂತನವಾಗಿ ಶೋಭಿಸುವವನಾಗಿದ್ದಾನೆ.   
ಶ್ರೀ ಶಂಕರಾಚಾರ್ಯರು ತಮ್ಮ "ಕೃಷ್ಣಾಷ್ಟಕಮ್" ನಲ್ಲಿ ಭಗವಂತನನ್ನು
ಗುಣಾಕರಂ ಸುಖಾಕರಂ ಕೃಪಾಕರಂ ಕೃಪಾವರಂ |
ಸುರದ್ವಿಷನ್ನಿ ಕಂದನಂ ನಮಾಮಿ ಗೋಪನಂದನಮ್ ||
ನವೀನ ಗೋಪನಾಗರಂ ನವೀನಕೇಲಿಲಂಪಟಂ |
ನಮಾಮಿ ಮೇಘಸುಂದರಂ ತಡಿತ್ಪ್ರಭಾಲಸತ್ಪಟಮ್ || - ಗುಣಗಳ ಖಣಿ, ಸುಖ ಸಮೂಹನ, ಕೃಪಾಕರ, ಶ್ರೇಷ್ಠ ದಯಾಮಯಿ, ದೇವತೆಗಳ ಶತೃಗಳನ್ನು ಸದೆಬಡಿದವನು, ಗೋಪಾಲನು, ನವೀನ ಚತುರ ಗೋಪನು, ನವೀನ ಶೀಲಾ ವಿಹಾರಿ, ಮೋಡವರ್ಣದಂತೆ ಸುಂದರವಾಗಿರುವವನು, ಆಕಾಶದ ಪ್ರಭೆಯಂತೆ ತೇಜವುಳ್ಳ ಪೀತಾಂಬರ ವಸ್ತ್ರ ಧರಿಸಿರುವವನು ಎಂದು ವರ್ಣಿಸುತ್ತಾರೆ.  ಸಕಲ ನೂತನ ಪದಾರ್ಥಗಳಲ್ಲೂ ಭಗವಂತನು ನೆಲೆಸಿರುವುದರಿಂದಲೇ ಆ ವಸ್ತುವಿನ ರೂಪ, ರಸ ಗಂಧಾದಿಗಳು ನೂತನವಾಗಿ ಕಾಣುತ್ತವೆ.

ಅತಿ ಸುಂದರಕೆ ಸುಂದರ -   ಅತಿಶಯವಾದ ಸುಂದರವೆಂದು ಗುರುತಿಸಲ್ಪಡುವ ಎಲ್ಲಾ ವಸ್ತುಗಳಿಗಿಂತಲೂ ಅತೀ ರಮಣೀಯವಾಗಿಯೂ, ಸುಂದರವಾಗಿಯೂ ಇರುವವನು ಭಗವಂತನಾದ್ದರಿಂದಲೇ ಅವನು ಸುಂದರಕೆ ಸುಂದರನು.  ಶ್ರೀ ವಾದಿರಾಜರು ತಮ್ಮ ವೈಕುಂಠ ವರ್ಣನೆಯಲ್ಲಿ :
ಎಂದೆಂದು ನಾಶವಿಲ್ಲದ ಪ್ರಕೃತಿಯು ತಾನೆ ನಿ-
ನ್ನಂದವ ಕಾಣಲಾಗಿ
ಇಂದ್ವರ್ಕಕೋಟಿಗಳ ಪ್ರಭೆಯು ನಿನ್ನ ತೇಜೋ-
ವೃಂದಕ್ಕೆ ಇನ್ನೊಬ್ಬರಿದನೇ || - ನಿತ್ಯ ನಿರ್ವಿಕಾರಳೂ, ತಾನೇ ಅತಿಶಯ ಲಾವಣ್ಯವತಿಯೂ ಆದ ಲಕ್ಷ್ಮೀದೇವಿಯು ಸ್ವಯಂ ಭಗವಂತನ ಅಂದವನ್ನೂ, ಪರಿಯನ್ನೂ ಕಂಡು ಅನಂತ ಚಂದ್ರ ಸೂರ್ಯರಂತಿರುವ ಕಾಂತಿಯುಳ್ಳವನು ಮತ್ತು ಅವನ ಕಾಂತಿಪುಂಜಕ್ಕೆ ಸಮನಾದವನೂ, ಅಧಿಕನೂ ಯಾರೂ ಇಲ್ಲವೇ ಇಲ್ಲವೆಂದು ಆಶ್ಚರ್ಯ ಪಡುತ್ತಿರುವಳೆಂದು ವರ್ಣಿಸಿದ್ದಾರೆ. 
ತತ್ವಸಾರ ಕೃತಿಯ ’ಸ್ಥಿತಿ ಸಂಧಿ’ಯಲ್ಲಿ
ಕಂಜಕಂಬುಕಂಠ ಕೌಮೋದಕೀ ಹಸ್ತ
ಮಂಜುಳಮೂರ್ತಿ ಮಾರಮಣ
ಕುಂಜರಭಯಹಾರಿ ಕುಜನಸಂಹಾರಿ ನಿ-
ರಂಜನ ರಕ್ಷಿಸೋ ಜನರ || - ಪದ್ಮವರ್ಣದ ಶಂಖದಂತಿರುವ ಕಂಠವುಳ್ಳ, ಕೌಮೋದಕೀ ಎಂಬ ಗದೆಯನ್ನು ಧರಿಸಿರುವ ಮೋಹನಾಕಾರನು, ಲಕ್ಷ್ಮೀಪತಿಯು, ಗಜೇಂದ್ರನ ಭಯವನ್ನು ಪರಿಹರಿಸಿದ, ದೈತ್ಯ ಸಂಹಾರಕ, ದೋಷದೂರ ಭಕ್ತಜನರನ್ನು ರಕ್ಷಿಸೋ ಎನ್ನುತ್ತಾ ಮಂಜುಳಮೂರ್ತಿಯ ರೂಪ ವರ್ಣನೆ ಮಾಡುತ್ತಾರೆ.
ಲಕ್ಷ್ಮೀ ಶೋಭಾನೆಯಲ್ಲಿ ಲಕ್ಷ್ಮೀದೇವಿಯು "ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು" - ಯಾವ ಕುಂದೂ ಇಲ್ಲದ ಅತಿಶಯ ಸುಂದರನಾದ ಮುಕುಂದನು ತನಗೆ ಪತಿಯಾಗಲೆಂದಳು ಎಂದಿದ್ದಾರೆ.  ಮುಂದುವರೆಯುತ್ತಾ
ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ
ಚಂದವಾಗಿದ್ದ ಚೆಲುವನ |
ಇಂದಿರೆ ಕಂಡು ಇವನೆ ತನಗೆ ಪತಿ
ಯೆಂದವನ ಬಳಿಗೆ ನಡೆದಳು || - ಕೋಟಿ ಮನ್ಮಥರನ್ನೂ ಗೆಲ್ಲುವಂಥ ಸೌಂದರ್ಯದಿಂದ ಚಂದವಾಗಿರುವವನು ಭಗವಂತ.  ಅಪಾರವಾದ ಸೌಂದರ್ಯ ರಾಶಿಯಾಗಿರುವ ಮಹಾಲಕ್ಷ್ಮಿಗೆ ಕೋಟಿ ಮನ್ಮಥರನ್ನು ಮೀರಿಸುವ ಸೌಂದರ್ಯದ ಚೆಲುವ ಶ್ರೀಹರಿ ಮಾತ್ರವೇ ಅನುರೂಪನಾದ ಪತಿಯಾಗುತ್ತಾನೆ.  ಆದ್ದರಿಂದಲೇ ಇಂದಿರೆಯು ’ಇವನೇ ತನಗೆ ಪತಿ’ ಎಂದವನ ಬಳಿಯೇ ಸಾಗಿದಳು ಎಂದಿದ್ದಾರೆ.
ತನ್ನ ಸೌಂದರ್ಯದಿಂದನ್ನಂತ ಮಡಿಯಾದ ಲಾ-
ವಣ್ಯದಿ ಮೆರೆವ ನಿಜ ಪತಿಯ |
ಹೆಣ್ಣು ರೂಪವ ಕಂಡು ಕನ್ನೆ ಮಹಲಕ್ಷುಮಿ ಇವ-
ಗನ್ಯರೇಕೆಂದು ಬೆರಗಾದಳು || - ಅತಿಶಯ ಲಾವಣ್ಯವತಿಯಾದ ತನ್ನ ಸೌಂದರ್ಯಕ್ಕಿಂತಲೂ ಅನಂತ ಪಟ್ಟು ಅಧಿಕವಾದ ಲಾವಣ್ಯದಿಂದ ಮೆರೆಯುವ ತನ್ನ ಪತಿಯ ಸ್ತ್ರೀರೂಪವನ್ನು ಕಂಡು ಮಹಾಲಕ್ಷೀದೇವಿಯು ದಿಗ್ಭ್ರಮೆಯಿಂದ ಇವನಿಗೆ ಬೇರೆ ಹೆಣ್ಣುಗಳೇಕೆ ಎಂದುದ್ಗರಿಸಿದಳು ಎನ್ನುತ್ತಾ ಭಗವಂತನ ಸುಂದರೆಕೆ ಅತಿ ಸುಂದರವಾದ ರೂಪವನ್ನು ವರ್ಣಿಸಿದ್ದಾರೆ.
ಉಪನಿಷತ್ತುಗಳೂ, ಶ್ರುತಿಯಲ್ಲಿಯ ಪ್ರಮಾಣ ವಾಕ್ಯಗಳು ಭಗವಂತನು ಸರ್ವದಾ ಸೂರ್ಯಕೋಟಿ ಸಮಪ್ರಭನು, ಶಶಿಕೋಟಿಸಮ ಆಹ್ಲಾದಕ ಕಾಂತಿಯುಳ್ಳವನೆಂದು ಸಾರುತ್ತವೆ.  ಈಶಾವಾಸ್ಯೋಪನಿಷತ್ತಿನಲ್ಲಿ "ಯತ್ತೇ ರೂಪಂ ಕಲ್ಯಾಣತಮಂ" - ಪೂರ್ಣನಾದ ಭಗವಂತನೇ ಜ್ಯೋತಿರ್ಮಯವಾದ ಸೂರ್ಯಮಂಡಲದಿಂದ ಸದ್ಗುಣಪೂರ್ಣಾದ ನಿನ್ನ ರೂಪವು ಮುಚ್ಚಿಕೊಂಡಿದೆ.  ನಿನ್ನ ಕಲ್ಯಾಣತಮವಾದ ರೂಪವನ್ನು ಕಾಣುವಂತೆ ನನ್ನ ಜ್ಞಾನವನ್ನು ವಿಸ್ತರಿಸು, ನಿನ್ನ ಪ್ರಸಾದದಿಂದ ಸುಂದರಕೆ ಅತಿ ಸುಂದರವಾದ ನಿನ್ನ ರೂಪವನ್ನು ಕಾಣುವೆನೆಂದು ಪ್ರಾರ್ಥಿಸಲಾಗಿದೆ.
ಶ್ರೀ ಶಂಕರಾಚಾರ್ಯರು ತಮ್ಮ "ಶ್ರೀ ಕೃಷ್ಣಾಷ್ಟಕಮ್" ನಲ್ಲಿ ಭಗವಂತನ ಸುಂದರ ರೂಪವನ್ನು "ಸುಪಿಚ್ಛಗುಚ್ಛಮಸ್ತಕಂ ಸುನಾದ ವೇಣುಹಸ್ತಕಂ" - ಮನೋಹರವಾದ ನವಿಲುಗರಿಯನ್ನು ತಲೆಯಲ್ಲಿ ಧರಿಸಿರುವವನು, ಮಧುರನಾದದ ಕೊಳಲನ್ನು ಹಿಡಿದಿರುವವನು.  "ಕಸಾರವಿಂದ ಭೂಧರಂ ಸ್ಮಿತಾವಲೋಕ ಸುಂದರಂ" - ಕಮಲದಂತೆ ಕೋಮಲವಾದ ಕೈಯಿಂದ ಭೂಮಿಯನ್ನು (ಗೋವರ್ಧನ ಗಿರಿ) ಎತ್ತಿದ, ಮುಗುಳು ನಗೆಯಿಂದ ಮನೋಹರವಾಗಿ ಕಾಣುವವನು.  "ಕದಂಬ ಸೂನ ಕುಂಡಲಂ ಸುಚಾರುಗಂಡಮಂಡಲಂ" - ಕದಂಬ ಪುಷ್ಪಗಳನ್ನು ಧರಿಸಿರುವ, ಅಂದವಾದ ದುಂಡು ಗಲ್ಲಗಳುಳ್ಳವನು ಎಂದು ವರ್ಣಿಸಿದಾರೆ.  ಶ್ರೀ ಜಗನ್ನಾಥಾಷ್ಟಕ ಸ್ತೋತ್ರಮ್ ನಲ್ಲಿ "ಭಜೇ ಸವ್ಯೇ ವೇಣುಂ ಶಿರಸಿ ಶಿಖಿಪಿಚ್ಛಂ ಕಟಿತಟೇ" - ಬಲಗೈಯಲ್ಲಿ ಕೊಳಲು ಹಿಡಿದಿರುವ, ತಲೆಯಲ್ಲಿ ನವಿಲುಗರಿ ಧರಿಸಿರುವವನು ಎಂದೆಲ್ಲಾ ವಿಧವಿಧವಾಗಿ ವರ್ಣಿಸಿದ್ದಾರೆ.

ಶ್ರೀ ಕುಲಶೇಖರ್ ಆಳ್ವಾರ್ ವಿರಚಿತ "ಮುಕುಂದಮಾಲಾ" ದಲ್ಲಿ
ಚಿಂತಯಾಮಿ ಹರಿಮೇವ ಸಂತತಂ
ಮಂದಮಂದಹಿಸಿತಾನನಾಂಬುಜಮ್ - ಮಂದಹಾಸದಿಂದ ಕೂಡಿದ ಆ ಶ್ರೀಕೃಷ್ಣನ ಮುಖಾರವಿಂದವನ್ನೇ ಧ್ಯಾನಿಸುತ್ತೇನೆಂದಿದ್ದಾರೆ.

ಭಗವದ್ಗೀತೆಯಲ್ಲಿ ವಿಶ್ವರೂಪವನ್ನು ದಿವ್ಯಚಕ್ಷುಗಳನ್ನು ಪಡೆದುಕೊಂಡು ನೋಡಿದ ಅರ್ಜುನನು ಭಗವಂತನಿಗೆ
ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ವಾ
ಭಯೇನ ಚ ಪ್ರವ್ಯಥಿತಂ ಮನೋ ಮೇ |
ತದೇವ ಮೇ ದರ್ಶಯ ದೇವರೂಪಂ
ಪ್ರಸೀದ ದೇವೇಶ ಜಗನ್ನಿವಾಸ || -  ಮೊದಲೆಂದೂ ನೋಡದ ನಿನ್ನ ಈ ಆಶ್ಚರ್ಯಕರ ರೂಪವನ್ನು ಕಂಡು ಆನಂದಿತನಾಗಿದ್ದರೂ ಕೂಡ ನನ್ನ ಮನಸ್ಸು ಭಯದಿಂದ ವ್ಯಾಕುಲವಾಗಿದೆ.  ನಿನ್ನ ಮನೋಹರವಾದ, ಸುಂದರಕೆ ಅತಿ ಸುಂದರವಾದ ಚತುರ್ಭುಜ ವಿಷ್ಣು ರೂಪವನ್ನೇ ನನಗೆ ತೋರಿಸು ದೇವಾ ಎನ್ನುತ್ತಾ "ಕಿರೀಟಿನಂ ಗದಿನಂ ಚಕ್ರಹಸ್ತಮಿಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ" - ಮುಕುಟವನ್ನು ಧರಿಸಿದ, ಗದೆ ಮತ್ತು ಚಕ್ರವನ್ನು ಕೈಯಲ್ಲಿ ಪಿಡಿದ ನಿನ್ನ ಸುಂದರ ರೂಪವನ್ನೇ ಕಣ್ಣುಗಳಲ್ಲಿಯೂ, ಮನಸ್ಸಿನಲ್ಲಿಯೂ ತುಂಬಿಕೊಳ್ಳಲು ಬಯಸುತ್ತೇನೆ ಅನುಗ್ರಹಿಸು ಎಂದು ಪ್ರಾರ್ಥಿಸುತ್ತಾನೆ.

ಭಗವಂತನ ರೂಪವನ್ನು ಶ್ರೀ ಪುರಂದರ ದಾಸರು "ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ ಗೋಪೀಜನಪ್ರಿಯ ಗೋಪಾಲಗಲ್ಲದೆ" ಎಂಬ ಕೃತಿಯಲ್ಲಿ ಭಗವಂತನನ್ನು ವರ್ಣಿಸುತ್ತಾ "ಲಾವಣ್ಯದಲಿ ನೋಡೆ ಲೋಕ ಮೋಹಕನಯ್ಯ" ಎಂದು ಸುಂದರಕೆ ಅತಿ ಸುಂದರತೆಯನ್ನು ಬಲು ಸೊಗಸಾಗಿ ಮಾಡಿದ್ದಾರೆ.

ರಸಕೆ ರಸರೂಪ -  ತೈತ್ತಿರೋಯೋಪನಿಷತ್ತಿನ ಆನಂದಮಯ ಪ್ರಕರಣದಲ್ಲಿ ಅಸದ್ವಾ ಇದಮಗ್ರ ಆಸೀತ್ | ತತೋ ವೈ ಸದಜಾಯತ ತದಾತ್ಮಾನಗ್ಂ ಸ್ವಯಮಕುರುತ | ತಸ್ಮಾತ್ತತ್ಸುಕೃತಮುಚ್ಯತ ಇತಿ | ಯದ್ವೈತತ್ಸುಕೃತಮ್ | ರಸೋ ವೈ ಸಃ | ರಸಗ್ಂ ಹ್ಯೇವಾಯಂ ಲಭ್ಧ್ಯಾನಂದೀ ಭವತಿ | ಕೋ ಹ್ಯೇವಾಸ್ಯಾತ್ಕಃ ಪ್ರಾಣ್ಯಾತ್ ಯದೇಷ ಆಕಾಶ ಆನಂದೋ ನ ಸ್ಯಾತ್ | ಏಷ ಹ್ಯೇವಾನಂದಯಾತಿ || - ಪ್ರಪಂಚದ ಸೃಷ್ಟಿಗೆ ಪೂರ್ವದಲ್ಲಿ ಅಸನ್ ಎಂದು ಕರೆಯಲ್ಪಟ್ಟ, ಮೂಲರೂಪಿಯಾದ ನಾರಾಯಣನೊಬ್ಬನೇ ಇದ್ದನು.  ನಾರಾಯಣನಿಂದ ವಾಸುದೇವ ರೂಪ ಆವಿರ್ಭವಿಸಿತು.  ವಾಸುದೇವ ರೂಪದಿಂದ ಸಂಕರ್ಷಣ, ಪ್ರದ್ಯುಮ್ನಾದಿ ರೂಪಗಳು ರೂಪಾಂತರಗೊಂಡು ಬಂದವು.  ಹೀಗೆ ರೂಪಾಂತರಗೊಂಡಿದ್ದರಿಂದಲೇ ವಾಸುದೇವ ರೂಪಿ ಭಗವಂತನನ್ನು ’ಸುಕೃತ’ನಾಮಕನೆಂದು ಕರೆಯಲ್ಪಡುವುದು.   ಈ  ಸುಕೃತನಾಮಕನಾದ ವಾಸುದೇವನು ಪೂರ್ಣಾನಂದಮಯನಾಗಿ ತೃಪ್ತಿ ಹೇತುವಾದ ಆನಂದಕರವಾದ ರಸ ಸ್ವರೂಪವಾಗಿ ಇದ್ದಾನೆ.  ಇಂತಹ ರಸ ಸ್ವರೂಪವನ್ನು ಜೀವಿಯು ಹೊಂದಿ, ಭಗವಂತನನ್ನು ಪಡೆದು ಆನಂದವನ್ನು ಪಡೆಯಬಲ್ಲನೇ ಹೊರತು ಬೇರೆ ರೀತಿಯಿಂದಲ್ಲವೆಂದು ತಿಳಿಸುತ್ತಾ ಶ್ರೀಹರಿಯು ರಸರೂಪವೆನ್ನುತ್ತದೆ.  ಪೂರ್ಣಾನಂದಮಯನೂ, ಸದಾನಂದಮಯನೂ ಹಾಗೂ ರಸರೂಪನೂ ಆಗಿರುವ ಭಗವಂತನು ಚೇತನಾಚೇತನರೊಳಗೆ ಆನಂದಮಯರೂಪನಾಗಿಯೇ ಸ್ಥಿತನಾಗಿರುತ್ತಾನೆ.  ಆದ್ದರಿಂದಲೇ ಚೇತನರ ಸ್ವರೂಪಭೂತವಾದ ಆನಂದ ಭಗವಂತನ ಅಧೀನ.  ಭಗವಂತ ಆನಂದಸಾಗರ, ಜೀವಿಗಳು ಆ ಆನಂದದ ಕಣಗಳು.  ಹೀಗೆ ಅನುಸಂಧಾನಪೂರ್ವಕವಾಗಿ ಭಗವಂತನನ್ನು ಧ್ಯಾನಿಸಬೇಕು.

ಶ್ರೀ ಶಂಕರಾಚಾರ್ಯರು ತಮ್ಮ ಜಗನ್ನಾಥಾಷ್ಟಕ ಸ್ತೋತ್ರದಲ್ಲಿ  "ಮುದಾ ಗೋಪೀನಾರೀವದನ ಕಮಲಾಸ್ವಾದಮ ಧುಪಃ" - ತನ್ನ ಸ್ತುತಿ ಮಾಡುತ್ತಾ ಶ್ರೇಷ್ಠವಾದ ಗೀತೆಗಳನ್ನು ಹಾಡುತ್ತಾ, ತನ್ನ ನಾಮ ಸ್ಮರಣೆಯಿಂದಲೇ ಗೋಪಿಕಾ ಸ್ತ್ರೀಯರ ವದನದಲ್ಲಿ ಉಕ್ಕುವ ಆನಂದದ ರಸವನ್ನು ಹೀರುವ ಭ್ರಮರದಂತಿರುವ ಪಾದಗಳುಳ್ಳ ಜಗನ್ನಾಥ ಸ್ವಾಮಿಯೆಂದು ಸ್ತುತಿಸುತ್ತಾರೆ.  ಮುಂದುವರೆಯುತ್ತಾ
ಪರಬ್ರಹ್ಮಾಪೀಡಃ ಕುವಲಯದಲೋತ್ಫುಲ್ಲ ನಯನೋ | ನಿವಾಸೀ ನೀಲಾದ್ರೌ ನಿಹಿತಚರನೋನಂತ ಶಿರಸಿ ||
ರಸಾನಂದೋ ರಾಧಾ ಸರಸವಪುರಾಲಿಂಗನ ಸುಖೋ | ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ || - ಪರಬ್ರಹ್ಮ ಸ್ವರೂಪನು ಅರಳಿದ ಕಮಲದ ದಳಗಳಂತೆ ಪ್ರಫುಲ್ಲಿಕ ಕಣ್ಣುಗಳುಳ್ಳವನು, ನೀಲಾದ್ರಿವಾಸಿ, ಕಾಲಿಯ ಸರ್ಪದ ತಲೆಯ ಮೇಲೆ ತನ್ನ ಚರಣಗಳನ್ನಿಟ್ಟು, ರಸಸ್ವರೂಪಿ ಪರಬ್ರಹ್ಮನು ಅನನ್ಯ ಪ್ರೇಮದ ರಾಧೆಯ ಆಲಿಂಗನದಿಂದ ಆನಂದನಾಗುವ ಜಗನ್ನಾಥ ಸ್ವಾಮಿಯ ದರ್ಶನವಾಗಲಿ ಎಂದಿದ್ದಾರೆ.

ನೂತನಕೆ ನೂತನನಾದವನು, ಸುಂದರಕೆ ಅತಿ ಸುಂದರನು, ರಸಕೆ ರಸರೂಪನಾದವನು ನಮ್ಮಲ್ಲಿ ಯಾವ ನೂತನತೆಯನ್ನು ಕಾಣುತ್ತಾನೆ, ಏನು ಸೌಂದರ್ಯ ಅಥವಾ ಸುಂದರತೆಯನ್ನು ನೋಡುತ್ತಾನೆ ಹಾಗೂ ನಮ್ಮಲ್ಲಿ ಯಾವ ರಸವಿದೆಯೆಂದು ಹೀರುತ್ತಾನೆ ? ಎಲ್ಲವೂ ಅವನ ಸನ್ನಿಧಾನವಿದ್ದಲ್ಲಿ ಮಾತ್ರವೇ ವ್ಯಕ್ತವಾಗುವ ಗುಣಗಳು.  ಕರುಣಾಸಾಗರನಾದ ಭಗವಂತನು ಈ ಎಲ್ಲಾ ರೂಪಗಳಿಂದಲೂ ಚೇತನರೊಳಗೆ ತಾನೇ ಸ್ವಯಂ ಇದ್ದು ಪ್ರಕಾಶಿಸುತ್ತಾ, ನಮ್ಮಿಂದ ಸಮರ್ಪಿಸಲ್ಪಟ್ಟ ಅವುಗಳನ್ನು ತಾನು ಸ್ವೀಕರಿಸಿದಂತೆ ಮಾಡಿ, ನಮಗೆ ಆನಂದವನ್ನು ಕೊಡುತ್ತಾನೆ.

ಜಾತರೂಪೋದರ ಭವಾದ್ಯರೊಳಾತತ - ಜಾತರೂಪ  ಎಂದರೆ ಬಂಗಾರ.  ಬಂಗಾರದ ಮೊಟ್ಟೆಯಂತೆ ಫಳಫಳನೆ ಹೊಳೆಯುವ ಬ್ರಹ್ಮಾಂಡ.  ಬ್ರಹ್ಮಾಂಡವೆಂಬ ಬಂಗಾರದ ಗರ್ಭದಲ್ಲಿ ಜನಿಸಿದವನು ಹದಿನಾಲ್ಕು ಲೋಕಗಳಲ್ಲಿ ವ್ಯಾಪಿಸಿರುವ ಬ್ರಹ್ಮದೇವನು.  ಆದ್ದರಿಂದಲೇ ಬ್ರಹ್ಮದೇವರು ’ಜಾತರೂಪೋದರ’ ಅಥವಾ ಹಿರಣ್ಯಗರ್ಭವೆನ್ನಬಹುದು.  ಅದಲ್ಲದೆ ಮಹತ್ತತ್ವಾವರಣದ ಪರ್ಯಂತ ವ್ಯಾಪ್ತನಾಗಿ, ಅಭಿಮಾನಿ ದೇವತೆಯಾಗಿರುವ ಬ್ರಹ್ಮನ ಗರ್ಭದಲ್ಲಿ ಜಾತರೂಪ ಅಥವಾ ಬಂಗಾರದಂತೆ ಹೊಳೆಯುವ ಬ್ರಹ್ಮಾಂಡವಿದೆಯಾದ್ದರಿಂದಲೇ ಬ್ರಹ್ಮನು ಹಿರಣ್ಯಗರ್ಭ ಅಥವಾ ಜಾತರೂಪೋದರ.  ಇಂತಹ ವಿರಾಟ್ ಸ್ವರೂಪನಾದ ಬ್ರಹ್ಮನಲ್ಲಿ ಭಗವಂತನು ಬ್ರಹ್ಮ ರೂಪದಿಂದಲೇ ಸರ್ವ ವ್ಯಾಪ್ತನಾಗಿದ್ದಾನೆ ಅಥವಾ ’ಆತತ’ನಾಗಿದ್ದಾನೆ.  ’ಭವ’ ಎಂದರೆ ಅಹಂಕಾರ ತತ್ತ್ವಕ್ಕೆ ಅಭಿಮಾನಿ ದೇವತೆಯಾದ ರುದ್ರದೇವನು.  ಅಹಂಕಾರಾವರಣ ಪರ್ಯಂತ ವ್ಯಾಪಿಸಿರುವ ರುದ್ರದೇವನಲ್ಲಿ ಭಗವಂತನು ರುದ್ರರೂಪಿಯಾಗಿ ’ಆತತ’ನಾಗಿದ್ದಾನೆ ಅಥವಾ ವ್ಯಾಪ್ತನಾಗಿದ್ದಾನೆ.  ಉಳಿದ ಇಂದ್ರಾರಿ ಸಕಲ ದೇವತೆಗಳಲ್ಲೂ ಅವರ ವ್ಯಾಪ್ತಿ ಪರ್ಯಂತವೂ ಅದೇ ರೂಪದಲ್ಲಿಯೇ ವ್ಯಾಪ್ತನಾಗಿದ್ದು ಸಕಲ ವ್ಯಾಪಾರಗಳನ್ನು ಮಾಡಿ ಮಾಡಿಸುತ್ತಾನೆ.  ಅಚಿಂತ್ಯ ಶಕ್ತಿಯಾಗಿರುವ ಭಗವಂತನು ಆಯಾ ದೇವತೆಗಳಲ್ಲಿ ಆತತನಾಗಿ, ಆ ತತ್ತ್ವದ, ದೇವತೆಯ ಪ್ರಭಾವಗಳನ್ನು ಪ್ರಕಟಗೊಳಿಸುತ್ತಾನೆ.   ದೇವತೆಗಳಲ್ಲಿ ನೆಲೆಸಿ ತಾನು ಆನಂದಮಯನಾಗಿ ಆಟವಾಡುತ್ತಾನೆ ಮತ್ತು ದೇವತೆಗಳಿಂದ ಆಡಿಸುತ್ತಾನೆ.  ಸರ್ವವ್ಯಾಪ್ತನಾಗಿದ್ದು, ಮಾಡಿ ಮಾಡಿಸುವವನು ಭಗವಂತನೇ ಆದ್ದರಿಂದಲೇ ಆತನು ’ಆತತ’ನಾಗಿದ್ದಾನೆ.

ಶ್ರೀ ವಾದಿರಾಜ ಗುರುಗಳು ತಮ್ಮ ವೈಕುಂಠ ವರ್ಣನೆಯ ತತ್ವಸಾರ ಕೃತಿಯಲ್ಲಿ ಬರುವ ’ಸ್ಥಿತಿ ಸಂಧಿ’ಯಲ್ಲಿ ಭಗವಂತನನ್ನು
ನಾರಾಯಣಾಯ ಪರಿಪೂರ್ಣ ಗುಣಾರ್ಣವಾಯ
ವಿಶ್ವೋದಯ ಸ್ಥಿತಿ ಲಯೋನ್ನಿಯತಿ ಪ್ರದಾಯ |
ಜ್ಞಾನ ಪ್ರದಾಯ ವಿಬುಧಾಸುರ ಸೌಖ್ಯ ದುಃಖ-
ಸತ್ಕಾರಣಾಯ ವಿತತಾಯ ನಮೋ ನಮಸ್ತೇ || - ನಾರಾಯಣನೆಂಬ ನಾಮವು ಭಗವಂತನ ಬಹು ಮಹಿಮೆಗಳನ್ನು ನಿರೂಪಿಸುವ ಅನೇಕ ಅರ್ಥವುಳ್ಳ ನಾಮವು.  ಗುಣಪೂರ್ಣತ್ವ, ನಿರ್ದೋಷತ್ವ, ಸರ್ವಾಶ್ರಯತ್ವ, ಸರ್ವಜ್ಞತ್ವ, ಜ್ಞಾನಪ್ರದತ್ವವೆಲ್ಲವನ್ನೂ ತಿಳಿಸುತ್ತದೆ.  ಸರ್ವ ಕಾಲದಲ್ಲಿಯೂ ಇರುವವನು, ಸ್ವಾತಂತ್ರ್ಯಾದಿ ಗುಣಗಳುಳ್ಳವನು ಅಥವಾ ದೇಶ-ಕಾಲ-ಗುಣಗಳಿಂದ ವ್ಯಾಪ್ತನಾದವನಾದ್ದರಿಂದಲೇ ಜಗತ್ಕರ್ತನಾಗಬಲ್ಲವನು ಎಂದರ್ಥವಾಗುತ್ತದೆ.  ಹೀಗೆ ಅಣುರೇಣು ತೃಣಕಾಷ್ಠನಾಗಿರುವನೆಂಬ ಗುಣವನ್ನು ತಿಳಿಸಲಿಕ್ಕಾಗಿಯೇ ಭಗವಂತನನ್ನು "ವಿತತಾಯ" ಎಂದಿದ್ದಾರೆ.

ಎಮ್ಮೊಡನೆಯಾಡುತಲಿಪ್ಪ ನಮ್ಮಪ್ಪ - ಭಗವಂತ ನಮಗೆ ’ನಮ್ಮಪ್ಪ’ ಮಾತ್ರವಲ್ಲ, ಅವನು ಅಮ್ಮ-ಅಪ್ಪ, ಬಂಧು-ಬಳಗ, ಆತ್ಮಸಖ ಎಲ್ಲವೂ ಆಗಿದ್ದಾನೆ.  ನಮ್ಮೊಳಗಿರುವ ಅಂತರಂಗದ ಅನೇಕ ಮಾತುಗಳನ್ನೂ, ಭಾವಗಳನ್ನೂ ನಾವು ಅವನಲ್ಲಿ ನಿವೇದಿಸಿಕೊಳ್ಳುತ್ತೇವೆ.  ದುಃಖವಾದಾಗ ತಾಯಿಯ ಮಡಿಲಿನಲ್ಲಿ ದುಃಖಿಸುವಂತೆ ಭಗವಂತನ ಸನ್ನಿಧಿಯಲ್ಲಿ ಕಣ್ಣೀರು ಹಾಕುತ್ತೇವೆ.  ಸಂತೋಷವಾದಾಗಲೂ ಸಂಭ್ರಮದಿಂದ ಭಗವಂತನಿಗೆ ವಿಶೇಷ ಪೂಜೆ, ಧ್ಯಾನಗಳ ಮೂಲಕ ಸಮರ್ಪಿಸಿಕೊಳ್ಳುತ್ತೇವೆ.  ಹೀಗೆ ಅವನ ಕರುಣೆಯಿಂದಲೇ ಸಿಕ್ಕಿರುವ ಈ ಬದುಕಿನ ಪ್ರತೀ ಕ್ಷಣವೂ, ಯಾವ ನಿರೀಕ್ಷೆಯನ್ನೂ ಮಾಡದೆ, ನಿಸ್ಸಂಶಯವಾಗಿ ನಮ್ಮನ್ನು ಕಾಪಾಡುವವನು, ನಮ್ಮೊಡನಿರುವವನು ಭಗವಂತನು ಮಾತ್ರನಾಗಿದ್ದಾನೆ.   ಪುಟ್ಟ ಕಂದನಾಗಿ ಶ್ರೀಕೃಷ್ಣನು ಅವತರಿಸಿ, ಭಕ್ತರ ಮನ ಸೂರೆಗೊಂಡು, ಅತಿಶಯವಾದ ಅಕ್ಕರೆಯ ಭಾವವನ್ನು ಎಲ್ಲರೊಳಗೂ ಜಾಗೃತವಾಗಿಸಿ, ದುಷ್ಟ ಸಂಹಾರ ಮಾಡಿ, ಸದಾ ಪ್ರತೀ ಜೀವಿಯನ್ನೂ ಆಕರ್ಷಿಸುತ್ತಿರುವವನಾಗಿದ್ದಾನೆ.  ಅವತಾರ ಮುಗಿದರೂ, ನಮ್ಮೊಳಗೆ, ನಮ್ಮೊಡನೆ ಒಂದಾಗಿ ಉಸಿರಂತೆ ಬೆರೆತು ಹೋಗಿದ್ದಾನೆ.  ಬದುಕೆಂದರೆ ಏನು, ಜೀವನದ ಅರ್ಥವೇನು, ಹೇಗೆ ಬಾಳಬೇಕು ಎಂಬುದನ್ನು ಭಗವಂತನು ಸ್ವಯಂ ರಾಮನಾಗಿ ಅವತರಿಸಿ ನಮಗೆ ತೋರಿಸಿಕೊಟ್ಟಿದ್ದಾನೆ.  ನಮ್ಮೊಡನೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಬಂದು, ಸಕಲ ದುಃಖಗಳನ್ನೂ ಅನುಭವಿಸಿ, ವನವಾಸದಂತಹ ಕಷ್ಟವನ್ನೂ ತಾನು ಸಹಿಸಿ, ನಮಗೆ ಆದರ್ಶಪ್ರಾಯನಾಗಿದ್ದಾನೆ.  ಧೀಮಂತ ವ್ಯಕ್ತಿತ್ವವನ್ನು ಪ್ರದರ್ಶಿಸಿ ಜೀವನದ ಉನ್ನತಿಯನ್ನು ಪಡೆಯುವುದನ್ನು ತಿಳಿಸಿದ್ದಾನೆ.  ಕೃಷ್ಣನಾಗಿ ಬಂದು ’ಪ್ರಜ್ಞೆ’ಯಾಗಿ ನಿರಂತರವಾಗಿ ನೆಲೆಸಿದರೆ ರಾಮನಾಗಿ ಬಂದು ಸದಾ ಸರ್ವದಾ
ಮಾತಾ ರಾಮೋ ಮತ್ಪಿತಾ ರಾಮಚಂದ್ರೋ
ಭ್ರಾತಾ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ
ನಾನ್ಯದ್ ದೈವಂ ನೈವ ಜಾನೇ ನ ಜಾನೇ || ಎಂದು ಸ್ಮರಿಸುವಂತೆ ಮಾಡಿದ್ದಾನೆ.  ಸರ್ವಸ್ವವೂ ಆಗಿರುವ, ಕರುಣಾಸಾಗರನಾಗಿರುವ  ಭಗವಂತನನ್ನು ಕರೆಯಲು, ಸ್ಮರಿಸಲು ನಮಗೆ ಇದಕ್ಕಿಂತ ಬೇರೆ ಯಾವ ಉತ್ತಮ ಶಬ್ದಗಳೂ ಸಿಕ್ಕುವುದಿಲ್ಲವೆಂದೇ ಹೇಳಬೇಕು.

ಶ್ರೀ ಜಗನ್ನಾಥ ದಾಸರು ತಮ್ಮ ತತ್ವಸುವ್ವಾಲಿಯಲ್ಲಿ ಜಾತರೂಪೋದರನಾದ ಬ್ರಹ್ಮನನ್ನು ಕುರಿತು
ಸತ್ಯ ಲೋಕವೆ ಸದನ ತತ್ವಾಭಿಮಾನಿಗಳು
ಭೃತ್ಯರೆನಿಸುವರು ಮಹಲಕ್ಷ್ಮೀ | ಮಹಲಕ್ಷ್ಮಿ ಜನನಿ ಪುರು-
ಷೋತ್ತಮನೆ ಜನಕನೆನಿಸುವ || - ಸತ್ಯಲೋಕದಲ್ಲಿ ನೆಲೆಸಿರುವ ಬ್ರಹ್ಮನಿಗೆ ಮಹಲಕ್ಷ್ಮಿ ದೇವಿಯು ತಾಯಿ, ಭಗವಂತನೇ ತಂದೆ ಎಂದಿದ್ದಾರೆ.

ಆನಂದದ ರಸಮಯನಾದ ಭಗವಂತನನ್ನು ಕುರಿತು
ಆನಂದಮಯ ಪರಮಾನಂದ ರೂಪ ನಿ-
ತ್ಯಾನಂದವರದ ಅಧಮ-ರ | ಅಧಮರಿಗೆ ನಾರಾಯ-
ಣಾನಂದಮಯನೆ ದಯವಾಗೊ || - ಸ್ವರೂಪಾನಂದದಿಂದಲೇ ಸದಾ ಆನಂದ ಪಡುವ, ಪೂರ್ಣಾನಂದನೇ ದೇಹವಾಗುಳ್ಳ, ನಿತ್ಯಾನಂದವನ್ನು ಸಾರ್ವಕಾಲಿಕವಾಗಿ ಅನುಭವಿಸುವವನು ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ
ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ |
ಥಳಥಳಿಕೆ ವಜ್ರದಲಿ ನೈಜವಿರುವಂತೆಯು
ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ || - ಈ ವಿಶ್ವದ ವಿಸ್ತಾರ, ಚಲನೆಯೆಂಬುವುದು ಒಂದು ಆಟ.  ಬ್ರಹ್ಮವಸ್ತುವಿನ ಶಕ್ತಿಯ ವ್ಯಕ್ತತೆ.  ಒಂದು ವಜ್ರ ತಾನು ಥಳಥಳಿಸದೆ ಇರದು. ಥಾಳಥಳ್ಯ ಅದರ ನಿಜವಾದ ಗುಣ.  ಅನೇಕ ವಿಧವಾಗಿ ಉಜ್ಜ್ವಲವಾಗಿ ಪ್ರಕಶಿಸುವುದು ಬ್ರಹ್ಮವಸ್ತುವಿದೆ ಬಹಳ ಸಹಜವೇ ಆಗಿದೆ.
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ
ಸುಮವಪ್ಪುದಂತೆ ಮರವಗಲು ಮಗುಳ್ದಂತು |
ಅಮಿತ ಪ್ರಪಂಚನಾಕುಂಚನಾವರ್ತನ
ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ || -  ಕಮಲದ ಹೂವು ಬೆಳಗಾದರೆ ಅರಳುತ್ತದೆ, ಸಂಜೆಯಾದ ಕೂಡಲೇ ಮೊಗ್ಗಿನಂತಾಗುತ್ತದೆ.  ಪುನಃ ಬೆಳಗಾದರೆ ಅರಳುವಿಕೆ, ಸಂಜೆಯಾದರೆ ಮುದುಡುವಿಕೆ.  ಇದರಂತೆಯೇ ಪ್ರಪಂಚದ ಕಥೆಯೂ ಆಗಿದೆ.  ವಿಶ್ಚವು ಅಮಿತ ಪ್ರಪಂಚನ, ಆಕುಂಚನ, ಆವರ್ತನ, ಹೀಗೆ ಕೊನೆಮೊದಲಿಲ್ಲದೆ ಅರಳುವುದು, ಸಂಕುಚಿಸುವುದು ನಡೆಯುತ್ತಲೇ ಇರುತ್ತದೆ.
ಎತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತ
ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ |
ಬಿತ್ತರಿಸುತಿಹುದು ಹೊಸ ಹೊಸತನವನೆಡೆಬಿಡದೆ
ನಿತ್ಯ ನಿತ್ಯವು ಜಗದಿ - ಮಂಕುತಿಮ್ಮ || -  ಹಾಗಾದರೆ ಈ ಪ್ರಪಂಚ / ಬ್ರಹ್ಮಶಕ್ತಿ ಹಳೆಯದಾಯಿತೇ ಎಂದರೆ ಖಂಡಿತಾ ಇಲ್ಲ.  ಎಲ್ಲಿಂದಲೋ ನಮ್ಮ ಕಣ್ಣಿಗೆ ಕಾಣದಂತಹ ದೂರದಿಂದ ಒಂದು ಅನಂತವಾದ ಸತ್ತ್ವ ತೆರೆತೆರೆಯಾಗಿ ಬೀಸುತ್ತಲೇ ಇರುತ್ತದೆ.  ಬ್ರಹ್ಮಶಕ್ತಿ ನಮಗೆ ಗೋಚರಿಸುವುದಿಲ್ಲ, ಆದರೆ ಅದರ ಪ್ರಭಾವ ಮಾತ್ರ ಅನವರತವಾದದ್ದು, ಗೂಢವಾದದ್ದು.  ಹೀಗೆ ಎಡೆಬಿಡದೆ ತನ್ನ ಪ್ರಭಾವವನ್ನು ಹರಿಸುತ್ತಲೇ ಇರುವುದರಿಂದಲೇ ಅದು ದಿನದಿನವೂ ಕಾಣುವ ಹೊಸತನವಾಗಿದೆ ಎಂದಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ

No comments: