Thursday, March 22, 2012

ಕರುಣಾ ಸಂಧಿ – ಮುನ್ನುಡಿ


ಕರುಣೆ ನವರಸಗಳಲ್ಲಿ ಪ್ರಮುಖವಾದದ್ದು.  “ಕರುಣೆ”ಯ ಭಾವ ಶೋಕವೆಂದೂ ಆಗುತ್ತದೆ.  ಕರುಣೆಯ ಅರ್ಥ ದಯೆ, ಕ್ಷಮೆ, ಕೃಪೆ ಎಂದೂ “ಕರುಣೆ ತೋರು” ಎಂದರೆ ಮರುಗು, ಕನಿಕರಪಡು ಎಂದೂ ಆಗುತ್ತದೆ.  ಕಷ್ಟದಲ್ಲಿರುವವರನ್ನು ಕಂಡು ಕರುಣೆ ತೋರಬೇಕು, ಕನಿಕರ ಪಡಬೇಕು. “ಕಾರುಣ್ಯ ಸರಸ ಸೌಂದರ್ಯ ರುಚಿಗಳೇ ಸೃಷ್ಟಿ” – ಕರುಣೆ, ಸರಸ ಹಾಗೂ ಸೌಂದರ್ಯಗಳೇ ಈ ಸೃಷ್ಟಿಗೆ ಕಾರಣ ಎನ್ನುತ್ತಾರೆ ಡಿವಿಜಿಯವರು.  ನಾವು ಯಾವ ಭಾವವನ್ನು ಮತ್ತೊಬ್ಬರೆಡೆಗೆ ಕಳುಹಿಸುತ್ತೇವೋ, ಅದೇ ಭಾವ ನಮ್ಮೆಡೆಗೆ ತಿರುಗಿ ಬರುತ್ತದೆ.  ಬದ್ಧ ದ್ವೇಷವನ್ನು ಸ್ಫುರಿಸುವ ಭಾವ ಕೂಡ ಪ್ರೀತಿಯ ಭಾವ ಸಿಂಚನದಿಂದ, ಕರುಣೆ ತೋರುವುದರಿಂದ ಕರಗುತ್ತದೆ.  ಹಾಗೇ ಪರಮಾತ್ಮನೆಡೆಗೆ ನಾವು ಅನನ್ಯ ಭಕ್ತಿಯನ್ನೂ, ಪ್ರೇಮವನ್ನೂ ತೋರಿಸಿದಾಗ ನಮಗೆ ಆ ಕಮಲನಾಭನ, ಕರುಣೆ ಅಪಾರವಾಗಿ ಸಿಕ್ಕುತ್ತದೆ.  ಭಗವಂತ ನಮ್ಮೆಡೆಗೆ ಸದಾ ಕರುಣೆಯ ಸಾಗರವನ್ನೇ ಹರಿಸಲು ಕಾಯುತ್ತಿರುತ್ತಾನೆ, ಆದರೆ ನಾವು ಅವನೆಡೆಗೆ ನಮ್ಮ ಭಕ್ತಿ ಹಾಗೂ ಪ್ರೇಮದ ನಿವೇದನೆಯನ್ನು ಹೊತ್ತು ಪ್ರಸ್ಥಾನಿಸಬೇಕು.  ಕರುಣೆಯೆಂಬ ಪಾಲ್ಗಡಲ ಒಡೆಯ ಶ್ರೀಹರಿ..

ಜಗನ್ನಾಥ ದಾಸರು ಮಂಗಳಾ ಚರಣ ಸಂಧಿಯಲ್ಲಿ ಪರಮಾತ್ಮ ಹೇಗೆ ಪರಮಾತ್ಮನಾಗಿದ್ದಾನೆಂದು ಹೇಳುತ್ತಾ ತಮ್ಮ ಕುಲದೈವವಾದ ನರಸಿಂಹನನ್ನು ಮಂಗಳವ ಕರುಣಿಸು ಎಂದು ಕೇಳಿಕೊಳ್ಳುತ್ತಾರೆ. ತಾರತಮ್ಯದಲ್ಲಿ ಎಲ್ಲಾ ದೇವಾನುದೇವತೆಗಳ ನಮಸ್ಕರಿಸುವ ಅಧಿಕಾರದ ನಂತರ, ಹರಿದಾಸರುಗಳ ನಂತರ ತುಂಬಾ ಎತ್ತರದಲ್ಲಿರುವ – ತುರೀಯಾವಾಸ್ಥೆಯಲ್ಲಿರುವ ಭಗವಂತನನ್ನು ಸಾಮಾನ್ಯರಲ್ಲಿ ಸಾಮಾನ್ಯ ಜೀವಿಗಳಾದ ನಮ್ಮಂತಹವರು ನಮಿಸುವುದು ಹೇಗೆ?  ನಮಗೂ ಪರಮಾತ್ಮ ತನ್ನ ಕರುಣೆ ತೋರುತ್ತಾನೆಯೇ ಎಂಬೆಲ್ಲಾ ಸಂದೇಹಗಳು  ನಮ್ಮಲ್ಲಿ ಹುಟ್ಟುವುದು ಸಹಜವೇ ಆಗಿದೆ.  ನಮ್ಮ ಈ ಎಲ್ಲಾ ಸಂದೇಹಗಳನ್ನೂ ಹೋಗಲಾಡಿಸಲೆಂದೇ ದಾಸರಾಯರು ಮಂಗಳಾಚರಣ ಸಂಧಿಯ ನಂತರ ಕರುಣಾ ಸಂಧಿಯನ್ನು ತೆಗೆದುಕೊಂಡಿದ್ದಾರೆ.  ಜಗನ್ನಾಥ ದಾಸರು ತಮ್ಮ ಪದ.. “ನಿನ್ನ ಪೋಲುವ ಕರುಣಿಗಳನಾರ ಕಾಣೆ.. ಪ್ರಪನ್ನ ತಾ ಪಾಪಹರನೆ... ಬನ್ನಬಡಿಸುವ ರೋಗವನ್ನು ಮೋಚನ ಮಾಡಿ ಚೆನ್ನಾಗಿ ಪಾಲಿಸುವುದೋ ಹರಿಯೆ...” ಎಂದೂ ಪ್ರಾರ್ಥಿಸಿದ್ದಾರೆ.  ಹಾಗೇ..

ಭಗವಂತನ ಕರುಣೆಯ ಬಗ್ಗೆ ಹೇಳಬೇಕೆಂದರೆ ವ್ಯಾಸರಾಯರು ತಮ್ಮ  ಉಗಾಭೋಗವೊಂದರಲ್ಲಿ

ಕರಿ ಹರಿ ಎನಲಾಕ್ಷಣದಿ ಸುಪ್ತಿಯಾ ತಳ್ಳಿ
ಉರಗ ಮಂಚದಿಂ ಧುಮುಕಿ ಸಿರಿಯಾ ಸಾರೆನುತ
ವಿರಿಂಚಿಯ ಕೈಲಾಘವನೊಲ್ಲದೆ ಹನುಮನಿತ್ತ
ಹಾವಿಗೆಯನು ದಾಂಟಿ ಗರುಡನೊದಗುತಿರೆ
ತಿರುಗಿ ನೋಡದೆ ಬಂದ ಕರುಣೆ ತೋರೆನಗೆ
ನಮೋ ನಮೋ ನಮೋ ಸಿರಿಕೃಷ್ಣ ||  ಎಂದು ಇಲ್ಲಿ ಪರಮಾತ್ಮನ ಕರುಣೆಯನ್ನು ನಿಚ್ಚಳವಾಗಿ ತೋರಿಸಿದ್ದಾರೆ.  ಪರಶುಕ್ಲತ್ರಯರಾದ ವಿರಿಂಚಿ ಹನುಮರನ್ನೂ ಲೆಕ್ಕಿಸದೆ, ಶೇಷ ಗರುಡರಂತ ಅಹಂಕಾರತ್ರಯರನ್ನೂ ಲೆಕ್ಕಿಸದೆ, ಕಕ್ಷೆಯೊಳಗೆ ಇವರುಗಳಿಂದ ಕೆಳಗಿನವನಾದ ಗಜೇಂದ್ರನ ಮೊರೆಗೆ ಆತುರದಿಂದ ಬಂದು ಭಕ್ತನಿಗೆ ತನ್ನ ಕರುಣೆ ಎಷ್ಟು ಅಪಾರವೆಂದು ತೋರಿಸಿದ್ದಾನೆ ಭಗವಂತ.  ಹಾಗೇ ಎಲ್ಲಾ ಪರಮ ಭಕ್ತರಿಗೂ ಕರುಣೆ ತೋರಿಸುತ್ತಾನೆ. 

ಸುಧಾಮನ ಅವಲಕ್ಕಿ ಭಕ್ತಿ, ಅದಕ್ಕಾಗಿ ಪರಮಾತ್ಮ ಸಂಪತ್ತನ್ನು ಕರುಣಿಸಿದ್ದು ಇಲ್ಲಿ ನೆನೆಯಬಹುದು.  ಅವ “ಲಕ್ಕಿ” ಎಂದರೆ, ಲಕ್ಷ್ಮೀ ದೇವಿಯನ್ನು ಗ್ರಾಮ್ಯ ಭಾಷೆಯಲ್ಲಿ “ಲಕ್ಕಿ”.. “ಲಕುಮಿ”.. “ಲಕ್ಕಮ್ಮಾ”.. ಎಂದೆಲ್ಲಾ ಕರೆಯುತ್ತಾರೆ.  ಸುಧಾಮನ ಭಕ್ತಿಗೆ ಮೆಚ್ಚಿ ಪರಮಾತ್ಮ ಅವನಿಗೆ ಲಕ್ಷ್ಮೀ ಕಟಾಕ್ಷ ಕರುಣಿಸಿದ. ತನ್ನ ಭಕ್ತರಿಗೆ ತೊಂದರೆಯಾದರೆ ಪರಮಾತ್ಮ ದೇವತೆಗಳನ್ನೂ ಬಿಡುವುದಿಲ್ಲ ಎಂಬ ಮಾತಿಗೆ ಉದಾಹರಣೆ “ಅಂಬರೀಶ”.  ಈ ರಾಜನಿಗೆ ದೂರ್ವಾಸ ಮುನಿ ಶಾಪ ಕೊಡಲು ಬಂದರೆ.. ಅಂಬರೀಶನಿಂದಲೇ ದೂರ್ವಾಸ ಮುನಿ ಶಾಪ ವಿಮೋಚನೆ ತೆಗೆದುಕೊಳ್ಳ ಬೇಕಾಗುತ್ತದೆ.  ಹೀಗೆ ಪರಮಾತ್ಮ ತನ್ನ ಭಕ್ತರಿಗೆ ಕರುಣೆ ತೋರುವ ಕರುಣಿ, ಕರುಣಾಳು, ಕರುಣಾಮಯಿ ಎಂಬುದನ್ನು ಜಗನ್ನಾಥ ದಾಸರು “ಕರುಣಾ ಸಂಧಿ”ಯಲ್ಲಿ ಹೇಳಿದ್ದಾರೆ.

ಮೊದಲ ಸಂಧಿಯಾದ ಮಂಗಳಾಚರಣ ಸಂಧಿಯಿಂದ ಎರಡನೆಯ ಸಂಧಿ “ಕರುಣಾ ಸಂಧಿ”ಗೆ ಬರುವ ಒಂದು ಕೊಂಡಿ ಎಂದರೆ, ಮಂಗಳಾಚರಣ ಸಂಧಿಯ ಕೊನೆಯ   “ಪರಿಮಳವು ಸುಮನದೊಳಗನಲನು....” ಪದ್ಯದಲ್ಲಿ ಜಗನ್ನಾಥ ವಿಠ್ಠಲನ “ಕರುಣೆ” ಪಡೆವ ಮುಮುಕ್ಷುಜೀವರು ಎಂದು ಹೇಳಿರುವುದು.  ದಾಸವರ್ಯರು ಮುಂದಿನ ಸಂಧಿಯಲ್ಲಿ ಭಗವಂತನ ಅಪಾರ ಕರುಣೆಯ ವಿಷಯ ತಿಳಿಸುತ್ತಾರೆಂಬ ಸೂಚನೆಯೆಂದುಕೊಳ್ಳಬಹುದು..


ಚಿತ್ರಕೃಪೆ : ಅಂತರ್ಜಾಲ

1 comment:

ಕ್ಷಣ... ಚಿಂತನೆ... said...

ಎಲ್ಲರಿಗೂ ನಂದನ ಸಂವತ್ಸರದ ಶುಭಾಶಯಗಳು.

ಕರುಣಾ ಸಂಧಿಯ ಬಗ್ಗೆ ಸರಳವಾದ ಮುನ್ನುಡಿಯನ್ನು ಕೊಟ್ಟಿರುವಿರಿ. ನಿಜಕ್ಕೂ ಭಗವಂತನ ಕರುಣೆ ಭಕ್ತರ ಮೇಲೆ ಯಾವ ವಿಧವಾಗಿ ಇರುತ್ತದೆ ಎಂಬುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದೀರಿ.

ಮುಂದಿನ ಬರಹಗಳಿಗಾಗಿ ಕಾದಿರುವೆ.
ಧನ್ಯವಾದಗಳು.
ಸ್ನೇಹದಿಂದ,
ಚಂದ್ರು