Friday, February 28, 2014

ಕರುಣಾ ಸಂಧಿ - ೧೮ ನೇ ಪದ್ಯ

ಭುವನ ಪಾವನಚರಿತ ಪುಣ್ಯ
ಶ್ರವಣ ಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳ ಶ್ಯಾಮ   ನಿಸ್ಸೀಮ |
ಯುವತಿ ವೇಷದಿ ಹಿಂದೆ ಗೌರೀ
ಧವನ ಮೋಹಿಸಿ ಕೆಡಿಸಿ ಉಳಿಸಿದ
ಇವನ ಮಾವಯ ಗೆಲುವನಾವನು ಈ ಜಗತ್ರಯದಿ  ||೧೮||

ಪ್ರತಿಪದಾರ್ಥ : ಭುವನ ಪಾವನಚರಿತ - ೧೪ ಲೋಕಗಳನ್ನೂ ಪವಿತ್ರಗೊಳಿಸುವಂತಹ ಮಹಿಮೆಯ ಕಥೆಯನ್ನುಳ್ಳವನು, ಪುಣ್ಯ ಶ್ರವಣ ಕೀರ್ತನ - ತನ್ನ ಕಥಾ ಶ್ರವಣ ಮಾಡುವವರಿಗೂ ಶ್ರವಣ ಮಾಡುವವರಿಗೂ ಪುಣ್ಯ ಕೊಡುವವನು, ಪಾಪನಾಶನ - ಸಮಸ್ತ ಪಾಪಗಳನ್ನೂ ನಾಶ ಮಾಡುವವನು, ಕವಿಭಿರೀಡಿತ - ಕವಿ ಎಂದರೆ ಜ್ಞಾನಿಗಳು ಈ ಡಿತ ಎಂದರೆ ಸ್ತುತನಾದವನು ಎಂದರ್ಥ, ಕೈರವದಳ ಶ್ಯಾಮ - ನೈದಿಲೆ ದಳದ ನೀಲವರ್ಣದಂತೆ ವಿಶಿಷ್ಟವಾದ ಕಾಂತಿಯುಳ್ಳವನು, ನಿಸ್ಸೀಮ - ದೇಶ ಕಾಲ ಗುಣಗಳಲ್ಲಿ ಮಿತಿಯಿಲ್ಲದವನು, ಯುವತಿ ವೇಶದಿ - ಸಮುದ್ರ ಮಥನ ಸಮಯದಲ್ಲಿ ಮೋಹಿನಿ ವೇಷ ಧರಿಸಿ, ಹಿಂದೆ - ಶಿವ ಮೋಹಿನಿ ರೂಪವನ್ನು ನೋಡಬೇಕೆಂದು ಪ್ರಾರ್ಥಿಸಿದಾಗ, ಗೌರಿಧವನ - ಪಾರ್ವತಿ ಪತಿಯಾದ ಶಿವನ, ಮೋಹಿಸಿ - ಮೋಹಗೊಳಿಸಿ, ಕೆಡಿಸಿ - ಆ ಸಮಯದಲ್ಲಿ ಶಿವನಿಗೆ ಅಜ್ಞಾನ ಕೊಟ್ಟು, ಉಳಿಸಿದ - ರಕ್ಷಿಸಿದ, ಇವನ ಮಾಯವ ಗೆಲುವನಾವನು - ಭಗವಂತನಾದ ಶ್ರೀಹರಿಯ ಮಾಯೆಯನ್ನು ಯಾರಿಂದ ಗೆಲ್ಲಲು ಸಾಧ್ಯವಿದೆ, ಈ ಜಗತ್ರಯದಿ - ಮೂರು ಲೋಕಗಳಲ್ಲಿಯೂ.
 

ಚತುರ್ದಶ ಲೋಕಗಳಲ್ಲಿ ಪವಿತ್ರತರವಾದ ಚರಿತ್ರೆಗಳುಳ್ಳ ಜೀವರು ಮೋಕ್ಷ ಪಡೆಯುವುದಕ್ಕಾಗಿ ಪುಣ್ಯಕಾರ್ಯವಾದ ಸಚ್ಚಾಸ್ತ್ರಗಳ ಶ್ರವಣ ಮತ್ತು ಪಠಣ ಮಾಡುವುದರಿ೦ದ, ಇ೦ತಹ ಸುಜೀವರ ಪಾಪನಾಶನೂ ಆದ  ಭಗವ೦ತನು, ಬ್ರಹ್ಮಾದಿ ದೇವತೆಗಳಿಂದ ಸ್ತುತಿಸಲ್ಪಟ್ಟವನೂ,  ನೈದಿಲೆಯಂತೆ ನೀಲವರ್ಣದವನೂ, ವಿಶಿಷ್ಟವಾದ ಕಾಂತಿಯುಳ್ಳವನೂ ಆಗಿರುವ ಮಹಾ ನಿಸ್ಸೀಮನು. ಬ್ರಹ್ಮಜ್ಞಾನಿಗಳಿ೦ದ ಸ್ತುತ್ಯನಾದ ಅತ್ಯ೦ತ ಪರಾಕ್ರಮಶಾಲಿಯೂ ಆಗಿದ್ದಾನೆ.   ಅಮೃತ ಮಂಥನ ಕಾಲದಲ್ಲಿ ಇವನು ಧರಿಸಿದ ಮೋಹಿನಿ ವೇಷವನ್ನು ನೋಡಲಿಲ್ಲವೆಂದು ಪಾರ್ವತೀ ಪತಿಯಾದ ರುದ್ರನು ಕೇಳಿದಾಗ, ಮೋಹಿನಿ ರೂಪವನ್ನು ತಾಳಿ ನಿಂತ ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಇಂತಹವನ ಮಾಯೆಯನ್ನು ಮೂರು ಜಗದಲ್ಲಿ ಯಾರಿಗಾದರೂ ಗೆಲ್ಲಲು ಸಾಧ್ಯವೇ ?  ಮನ್ಮಥ ದಹನ ಮಾಡಿದ ಫಾಲಾಕ್ಷನದೇ ಈ ಪಾಡಾದ ಮೇಲೆ ಬೇರೆಯವರ ಪಾಡೇನು ? 

ಹಿಂದಿನ ಪದ್ಯದಲ್ಲಿ ಶ್ರೀ ಜಗನ್ನಾಥದಾಸರು ಶ್ರೀಹರಿಯು ಸಜ್ಜನ ಭಕ್ತರಿಗೆ ಕರುಣಿಸುವ ಮೋಕ್ಷಸುಖದ ವಿಷಯವನ್ನು ತಿಳಿಸಿದ್ದರು.  ಈ ಪದ್ಯದಲ್ಲಿ, ಭಕ್ತನು ಸಂಸಾರದಲ್ಲಿದ್ದರೂ, ಅವನಿಗೆ ವಿಷಯ ಸುಖಗಳನ್ನು ನೀಡಿ, ಆ ಸುಖದಲ್ಲಿಯೇ ಅವನು ಮುಳುಗದಂತೆಯೂ ಎಚ್ಚರಿಸುವ, ರಕ್ಷಿಸುವ ಭಗವಂತನ ಕಾರುಣ್ಯವನ್ನು ವಿವರಿಸುತ್ತಾರೆ.  ಭಗವಂತನ ಕಾರುಣ್ಯಕ್ಕೆ ಮಿತಿಯಿಲ್ಲವೆಂಬುದಕ್ಕೆ,  ಅತ್ಯದ್ಭುತವಾದ, ಅತಿಶಯ ಸುಂದರವಾದ ಮೋಹಿನೀ ರೂಪವನ್ನು ನೋಡಿ ಮೋಹಿಸಿದ ರುದ್ರದೇವರ ದೃಷ್ಣಾಂತವನ್ನು ತಿಳಿಸಿದ್ದಾರೆ.  ಭಗವಂತನ ಗುಣಗಳನ್ನು ಅನೇಕ ವಿಶೇಷ ಪದಪುಂಜಗಳಿಂದ ವರ್ಣಿಸಿದ್ದಾರೆ.   

ಭುವನಪಾವನಚರಿತ - ಭಗವಂತನ ಪಾವನವಾದ ಪುಣ್ಯಕರವಾದ ಚರಿತ್ರೆಯನ್ನು ಕೇಳುವುದರಿಂದ ಭೂಮಂಡಲದ ಸಕಲ ಜೀವರಾಶಿಗಳಿಗೂ ಪುಣ್ಯ ಬರುತ್ತದೆ.  ಆದ್ದರಿಂದಲೇ ಭಗವಂತನು ಭುವನ ಪಾವನ ಚರಿತನು.  ಶ್ರೀಹರಿಯ ಕಥೆಯನ್ನು ಶ್ರವಣ ಮಾಡುವುದರಿಂದಲೇ ಅವನು ಭಕ್ತರ ಶ್ರವಣೇಂದ್ರಿಯಗಳ ಮೂಲಕ ಹೃದಯಕ್ಕೆ ಪ್ರವೇಶಿಸಿ, ಅಲ್ಲಿ ತುಂಬಿರುವ ಪಾಪಗಳನ್ನೆಲ್ಲಾ ನಾಶಮಾಡುತ್ತಾನೆ.

ಪುಣ್ಯಶ್ರವಣಕೀರ್ತನ - ಯಾರ ಗುಣಗಳನ್ನು ಉಪಾಸಿಸುವುದರಿಂದಲೂ, ಶ್ರವಣ ಮಾಡುವುದರಿಂದಲೂ, ಹೃದಯದಲ್ಲಿ ತುಂಬಿಸಿಕೊಳ್ಳುವುದರಿಂದಲೂ, ಅರಿಯುವ ಪ್ರಯತ್ನ ಮಾಡುವುದರಿಂದಲೂ ಮತ್ತು ಅರಿತ ಕಿಂಚಿತ್ತನ್ನು ಮತ್ತೊಬ್ಬರಿಗೆ ತಿಳಿಸುವೆವೋ, ಅವನು ಪುಣ್ಯಶ್ರವಣಕೀರ್ತನನು.  ಭಾಗವತದಲ್ಲಿ ಲಕ್ಷ್ಮೀದೇವಿಯಲ್ಲಿರುವ ಭಕ್ತಿ ಬೇರೆ ಯಾರಲ್ಲೂ ಇಲ್ಲವೆಂದೂ, ಭಗವಂತನ ಮಂಗಳಕರವಾದ ಕೀರ್ತಿಯನ್ನು ಆವೃತ್ತಿಮಾಡುವ ಇಚ್ಛೆಯಿಂದಲೂ ಮತ್ತು ಭಗವಂತನ ಗುಣಗಳ ಉಪದೇಶವನ್ನು ಹೊಂದಬೇಕೆಂಬ ಇಚ್ಛೆಯಿಂದಲೂ, ಸಾಕ್ಷಾತ್ ಲಕ್ಷ್ಮೀದೇವಿಯೇ ಸದಾ ಕಾಲವೂ ಭಗವಂತನ ಪುಣ್ಯಕೀರ್ತಿಯ ಶ್ರವಣವನ್ನು ಅಪೇಕ್ಷಿಸುವಳು ಎಂಬ ಮಾತು ಉಲ್ಲೇಖವಾಗಿದೆ.  ವಿಷ್ಣು ಸಹಸ್ರನಾಮದಲ್ಲಿ "ಪುಣ್ಯಕೀರ್ತಯೇ ನಮಃ" ಮತ್ತು "ಪುಣ್ಯಶ್ರವಣಕೀರ್ತನಾಯ ನಮಃ" ಎಂದಿದೆ.  ಭಗವಂತನು ಅನಂತ ಕಲ್ಯಾಣ ಗುಣ ಸಂಪನ್ನನು. ಅವನ ತೇಜಸ್ಸು ಅದ್ಭುತ ಹಾಗೂ ಅವನ ಕೀರ್ತಿ ಅಪಾರ.  ಭಗವಂತನ ಅಪಾರ ಕೀರ್ತಿಯನ್ನು ಸದಾ ಧ್ಯಾನಿಸುವವರಿಗೆ ಯಶಸ್ಸು ಖಂಡಿತವಾಗಿ ಸಿಕ್ಕುವುದು.  ಭಗವಂತನ ಅಪಾರ ಮಹಿಮೆಯನ್ನು ಕೇಳುವುದರಿಂದಲೇ ಆತ್ಮಲಾಭ, ಆತಿಶಯಾನಂದ, ನಿರತಿಶಯ ಸುಖವು ಲಭಿಸುವುದು ಮತ್ತು ಪುಣ್ಯ ಪ್ರಾಪ್ತಿಯಾಗುವುದು.  ಭಗವಂತನ ಸಾಕ್ಷಾತ್ಕಾರವಾದವರಿಂದ ಭಗವಂತನ ಅಚಿಂತ್ಯ ಮಹಿಮೆಯನ್ನು ಕೇಳುವುದೇ ಸದ್ಗತಿಗೆ ದಾರಿಯಾಗುತ್ತದೆ.  ಭಾಗವತದಲ್ಲಿ ತಿಳಿಸಿರುವಂತೆ ಪರೀಕ್ಷಿತ್ ಮಹಾರಾಜ ಭಗವಂತನ ಪುಣ್ಯ ಕಥೆಯನ್ನು ಶ್ರವಣ ಮಾಡಿಯೇ ಸದ್ಗತಿ ಪಡೆದನು.  ಭಾಗವತದ ಮೊದಲನೇ ಸ್ಕಂದದಲ್ಲಿ "ಶೃಣುತ್ವಾಂ ಸ್ವಕಥಾಂ ಕೃಷ್ಣಃ ಪುಣ್ಯಶ್ರವಣಕೀರ್ತನಃ | ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್"|| - ಪುಣ್ಯಶ್ರವಣಕೀರ್ತನ ಎಂಬ ನಾಮವುಳ್ಳವನಾದ ಶ್ರೀಕೃಷ್ಣ ಪರಮಾತ್ಮನು ತನ್ನ ಕಥೆಯನ್ನು ಕೇಳುವವರ ಅಂತಃಕರಣದೊಳಗೆ ಪ್ರವೇಶಿಸುತ್ತಾನೆ ಮತ್ತು ಅವರ ಸಕಲ ಪಾಪಗಳನ್ನೂ ಪರಿಹರಿಸುತ್ತಾನೆ ಎಂಬ ಮಾತು ತಿಳಿಸಲಾಗಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪುಣ್ಯೋ ವೈ ಪುಣ್ಯೇನ ಕರ್ಮಣಾ ಭವತಿ" - ಪುಣ್ಯ ಕರ್ಮಗಳನ್ನು ಮಾಡುವುದರಿಂದ ಮನುಷ್ಯನು ಪುಣ್ಯವಂತನಾಗುತ್ತಾನೆ ಎಂಬ ಉಲ್ಲೇಖವಿದೆ.  ಭಗವಂತನ ಗುಣಗಳನ್ನು ಉಪಾಸಿಸುವುದೇ ಜೀವಿ ಮಾಡಬಹುದಾದ ಪುಣ್ಯ ಕರ್ಮವು.  ಸದಾ ನಿರತವೂ ಸಂಕೀರ್ತನೆಯನ್ನು ಮಾಡುತ್ತಾ, ಶ್ರವಣ ಮಾಡುತ್ತಾ ಇರುವುದರಿಂದ ನಮ್ಮೊಳಗಿನಲ್ಲಿ ವಿಚಾರಶಕ್ತಿಯು ಬೆಳೆಯುತ್ತದೆ ಮತ್ತು ಧನಾತ್ಮಕ ಭಾವಗಳ ಧಾರೆಯೇ ಹರಿಯುತ್ತದೆ, ಸದಾಚಾರ ಬೆಳೆಯುತ್ತದೆ.  ಶಾಂತಿ, ಧೈರ್ಯ ಹೆಚ್ಚುತ್ತದೆ.   ಸಂತತಂ ಚಿಂತಯೇ ಅನಂತಂ ಎಂಬುದನ್ನು ಅಭ್ಯಾಸ ಮಾಡಿಕೊಂಡಾಗ, ಅಂತ್ಯಕಾಲದಲ್ಲಿ ವಿಶೇಷವಾಗಿ ಭಗವಂತನ ಸ್ಮರಣೆ ಸಿಕ್ಕುತ್ತದೆ.  ವಿಷ್ಣುಸಹಸ್ರನಾಮದ ಫಲಶ್ರುತಿಯಲ್ಲಿ "ಯ ಇದಂ ಶ್ರುಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ | ನಾ ಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || - ಯಾರು ಭಗವಂತನ ಸಹಸ್ರನಾಮವನ್ನು ನಿತ್ಯವೂ ಕೇಳುವರೋ, ಹಾಡುವರೋ ಅವರಿಗೆ ಇಲ್ಲಿಯಾಗಲೀ, ಪರಲೋಕದಲ್ಲಿಯಾಗಲೀ ಸ್ವಲ್ಪವೂ ಕೆಡುಕಾಗುವುದಿಲ್ಲ ಎಂದಿದ್ದಾರೆ. 

ಪಾಪನಾಶನ - ವಿಷ್ಣು ಸಹಸ್ರನಾಮದಲ್ಲಿ "ದೇವಕೀನನ್ದನಃ (ದೇವಕೀ ನಂದನ) ಸ್ರಷ್ಟಾ ಕ್ಷಿತೀಶಃ ಪಾಪನಾಶನಃ" -  ದೇವಕೀ ಪುತ್ರನಾದ ಏಕೋ ದೇವನಾದ ಶ್ರೀಕೃಷ್ಣನೇ ಏಕಮೇವಾದ್ವಿತೀಯನಾದ ನಾರಾಯಣನು.  ಇವನ ನಾಮ ಸಂಕೀರ್ತನೆ ಮಾಡಿದರೆ, ಬೆಂಕಿಯು ಧಾತುವನ್ನು ಕರಗಿಸಿಬಿಡುವಂತೆ, ಸರ್ವ ಪಾಪಗಳನ್ನೂ ಸುಟ್ಟು ಭಸ್ಮ ಮಾಡಿಬಿಡುವನು ಎಂದು ತಿಳಿಸಲಾಗಿದೆ.  ಹಾಗೇ  ಫಲಶೃತಿಯಲ್ಲಿ "ಸರ್ವ ಪಾಪ ವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್"  - ಸರ್ವ ಪಾಪಗಳನ್ನೂ ಶುದ್ಧಗೊಳಿಸುವ ಒಂದೇ ಒಂದು ಆತ್ಮ, ಅವನೇ  ಪರಬ್ರಹ್ಮ ಎಂಬ ಉಲ್ಲೇಖವಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪಾಪಃ ಪಾಪೇನೇತಿ" - ಭಗವಂತನನ್ನು ಧ್ಯಾನಿಸದೆ ಪಾಪ ಕರ್ಮಗಳನ್ನು ಮಾಡುವವನು ಪಾಪಿಯಾಗುತ್ತಾನೆ ಎಂದಿದೆ.  ಭಗವದ್ಗೀತೆಯ ೧೬ನೇ ಅಧ್ಯಾಯದಲ್ಲಿ ಭಗವಂತ "ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ | ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು"|| - ನನ್ನನ್ನು ದ್ವೇಷಿಸುವ ಪಾಪಿಗಳೂ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ ಪದೇ ಅಸುರೀ ಯೋನಿಗಳಲ್ಲಿ ಜನಿಸುವಂತೆ ಮಾಡುತ್ತೇನೆ ಎಂದಿದ್ದಾನೆ.  ಶರಣು ಬಂದ ಭಕ್ತರಿಗೆ ಭಗವಂತನು ಪಾಪನಾಶನನೂ ಹೌದು ಮತ್ತು ಪಾಪಿಗಳನ್ನು (ಅಸುರರನ್ನು) ಸಂಹರಿಸುವವನೂ ಆಗಿರುವನು.  ಪುಣ್ಯಧಾಮನ ಗುಣಗಳ ವಿಶೇಷತೆಯನ್ನು ಕೇಳುವುದರಿಂದಲೇ ಸಕಲ ಪಾಪವೂ ಪರಿಹಾರವಾಗುವುದಾದ್ದರಿಂದಲೇ ಭಗವಂತನು ಪಾಪನಾಶನ ನಾಮಕನು.   ಭಕ್ತಿಯಿಂದ ಒಮ್ಮೆ ಕೂಗಿದರೂ ಸಾಕು, ಓಡಿ ಬಂದು ಬಿಡುವ ಕರುಣಾಮಯಿ.  ಸಮುದ್ರ ಮಥನದ ಸಮಯದಲ್ಲಿ ಪಾಪಾಭಿಮಾನಿ ಅಸುರರಿಗೆ ಅಮೃತ ಸಿಕ್ಕದಂತೆ ಮಾಡಿ   ಅವರನ್ನು ನಾಶಮಾಡಿದವನು.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ಪ್ರಣತದೇಹಿನಾಂ ಪಾಪಕರ್ಶನಂ" - ಶರಣಾಗತರಾದವರ ಪಾಪಗಳನ್ನು ಹೋಗಲಾಡಿಸುವವನು ಎಂಬ ಉಲ್ಲೇಖವಿದೆ.

ಕವಿಭಿರೀಡಿತ - ಆದಿ ಕವಿಯಾದ ಬ್ರಹ್ಮನಿಂದಲೂ, ಜ್ಞಾನಿಗಳಿಂದಲೂ ಸ್ತುತಿಸಿಕೊಳ್ಳುವವನು.  ಋಷಿಗಳು, ಮುನಿಗಳು, ದೇವಾನುದೇವತೆಗಳೆಲ್ಲರೂ ಸರ್ವದಾ ಸ್ತುತಿಸಿದರೂ ಅವನ ಮಹಿಮೆಯ ಗುಣಗಾನ ಮಾಡುವುದಾಗುವುದಿಲ್ಲ.  ಸಾಕ್ಷಾತ್ ಮಹಾಲಕ್ಷ್ಮಿಯಿಂದಲೂ ಅವನ ಅನಂತ ಗುಣಗಳನ್ನು ಸಂಪೂರ್ಣವಾಗಿ ಅರಿತು ಸ್ತುತಿಸುವುದಾಗುವುದಿಲ್ಲ.  ಸ್ತುತಿಸಿದಷ್ಟೂ ಗೋಚರವಾಗದ ಅನೇಕ ಗುಣಗಳನ್ನು ಉಳಿಸಿಕೊಂಡಂತಹ ಭಗವಂತ ಅಪ್ರತಿಮ ಮಹಿಮೆಯುಳ್ಳವನು.  ದಾಸ ಪರಂಪರೆಯಲ್ಲಿ ಬಂದ ಎಲ್ಲಾ ದಾಸರುಗಳೂ ಭಗವಂತನ ಗುಣವಿಶೇಷಣಗಳನ್ನು ಸ್ತುತಿಸಿ, ಲಕ್ಷಾಂತರ ಕೀರ್ತನೆಗಳನ್ನು ಸುಲಭ ಹಾಗೂ ಸರಳ ಕನ್ನಡದಲ್ಲಿಯೇ ರಚಿಸಿ ಹಾಡಿದ್ದಾರೆ.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ತವ ಕಥಾಮೃತಂ ತಪ್ತಜೀವನಂ ಕವಿಭಿರೀಡಿತಂ ಕಲ್ಮಷಾಪಹಮ್" - ಭಗವಂತನ ಲೀಲೆಯ ಕಥಾಪ್ರಸಂಗಗಳು ಅಮೃತ ಸ್ವರೂಪಗಳೇ ಆಗಿವೆ.  ವಿರಹಿಗಳಿಗೆ ಅದನ್ನು ಬಿಟ್ಟು ಬೇರೇನೂ ಬೇಕಾಗುವುದೇ ಇಲ್ಲ.  ದೊಡ್ಡ ದೊಡ್ಡ ಜ್ಞಾನಿಗಳು ಮತ್ತು ಮಹಾ ಕವಿಗಳು ನಿನ್ನ ಚರಿತಾಮೃತವನ್ನು ಹಾಡಿ ಹೊಗಳಿದ್ದಾರೆ ಎಂದಿದ್ದಾರೆ.

ಕೈವರದಳಶ್ಯಾಮ - ಕನ್ನೈದಿಲೆಯ ಬಣ್ಣವನ್ನು ಹೋಲುವ ಕಪ್ಪುಬಣ್ಣದವನಾದವನು ಭಗವಂತ.  ಆದ್ದರಿಂದಲೇ ಅವನು ಕೈವರದಳಶ್ಯಾಮ.  ಅರಳಿದ ನೈದಿಲೆಯಂತೆ ಅತಿಮೋಹಕ ಬಣ್ಣವನ್ನೂ, ರೂಪವನ್ನೂ ಹೊಂದಿದವನು ಶ್ರೀಹರಿ.  ದರ್ಶನ ಮಾತ್ರದಿಂದಲೇ ಸರ್ವರನ್ನೂ ಸೆಳೆಯುವವನು, ಹೃತ್ಕಮಲವನ್ನು ಅರಳಿಸಿ, ಆನಂದಾನುಭೂತಿಯ ಅನುಭವವನ್ನು ಕೊಡುವವನು.  ದೇವಕಿ - ವಸುದೇವರ ಪುತ್ರನಾಗಿ ಸೆರೆಮನೆಯಲ್ಲಿ ಜನಿಸಿದರೂ ತನ್ನ ವಿಷ್ಣು ರೂಪವನ್ನು ತೋರಿಸಿ ಆನಂದಪಡಿಸಿದವನು.  ಬಾಲಕೃಷ್ಣನಾಗಿ ತನ್ನ ಲೀಲಾವಿನೋದಗಳಿಂದ ಸರ್ವರನ್ನೂ ಸಂತೋಷಪಡಿಸಿದವನು, ಕೈವರದಳಶ್ಯಾಮನು.

ನಿಸ್ಸೀಮ - ತನಗೆ ತಾನೇ ಸಾಟಿಯಾದಂತಹವನು, ಅಸಾಧ್ಯನು, ಎಲ್ಲಾ ಸೀಮೆಯನ್ನೂ ಮೀರಿ ಅಸೀಮಾತೀತನಾಗಿ ನಿಂತವನು, ಅತೀತನು, ಭಗವಂತನು ನಿಸ್ಸೀಮನು.  ಕಾಮದೇವನನ್ನೇ ಸುಟ್ಟು ಹಾಕಿದ ವೈರಾಗ್ಯಪತಿ ಮಹಾರುದ್ರನನ್ನೇ ಮೋಹಿನಿ ವೇಷದಲ್ಲಿ ಮರುಳು ಮಾಡಿ ಕಂಗೆಡಿಸಿದವನು ಭಗವಂತನು, ಅವನ ಮಹಿಮೆಗೆಲ್ಲಿದೆ ಸೀಮೆ?

ಯುವತಿವೇಷದಿ - ಅಮೃತ ಮಂಥನದ ಸಮಯದಲ್ಲಿ ಮೋಹಿನಿ ರೂಪದಿಂದ ಬಂದ ಭಗವಂತನ ಅಸಾಧಾರಣ ಸೌಂದರ್ಯವನ್ನು ನೋಡುವ ಅವಕಾಶ ದೇವತೆಗಳಿಗೆ ಲಭಿಸಿತು.  ಅಸುರರಿಗೆ ಭಗವಂತ ಕಣ್ಣು ಮುಚ್ಚಲು ತಿಳಿಸಿಬಿಟ್ಟ.  ಅಸುರರು ಸುಂದರಿ ಸ್ತ್ರೀಯೆಂಬ ದೃಷ್ಟಿಯಿಂದ ನೋಡಿದರು.  ಆದ್ದರಿಂದಲೇ ಅವರಿಗೆ ಕಣ್ಣುಮುಚ್ಚಲು ಆಜ್ಞಾಪಿಸಿದ ಭಗವಂತ.  ದೇವತೆಗಳು ಅತಿಶಯವಾದ, ಅನುಪಮ ಸೌಂದರ್ಯವನ್ನು ಕಣ್ಣರಳಿಸಿ ನೋಡಿ, ಮನದಲ್ಲಿ ತುಂಬಿಸಿಕೊಂಡರು.  ಅವರು ಸ್ತ್ರೀರೂಪವೆಂದು ನೋಡದೆ ಜಗನ್ಮಾತೆಯೆಂಬ ದೃಷ್ಟಿಯಿಂದಲೇ ನೋಡಿದ್ದರಿಂದ ಭಗವಂತನು ಅವರಿಗೆ ಕರುಣಿಸಿದ.

ಗೌರೀಧವನ ಮೋಹಿಸಿ - ಭಾಗವತ ಅಷ್ಟಮಸ್ಕಂದದಲ್ಲಿ ಭಗವಂತನು ಮೋಹಿನೀ ರೂಪ ಧರಿಸಿದ ಕಥೆಯು ಹೇಳಲ್ಪಟ್ಟಿದೆ.  ಮೋಹಿನೀರೂಪದ ವರ್ಣನೆಯನ್ನು ಕೇಳಿ ರುದ್ರದೇವರು ತಾವೂ ಶ್ರೀಹರಿಯ ಈ ಮನಮೋಹಕ ರೂಪವನ್ನು ಕಾಣಬೇಕೆಂದು ಗಿರಿಜಾ ಸಮೇತನಾಗಿ ವಿಷ್ಣು ಲೋಕಕ್ಕೆ ಬರುತ್ತಾನೆ.  ಭಗವಂತನನ್ನು ನಾನಾ ರೀತಿಯಲ್ಲಿ ಸ್ತುತಿಸುತ್ತಾ, ತಾನು ಎಲ್ಲಾ ಗುಣಪೂರ್ಣ ರೂಪಗಳನ್ನು ನೋಡಿದ್ದರೂ ಸ್ತ್ರೀರೂಪ ನೋಡಿಲ್ಲವಾಗಿ, ತನಗೆ ಆ ಅತಿಶಯ ಲಾವಣ್ಯವತಿಯ ರೂಪವನ್ನು ತೋರಿಸುವಂತ ಪ್ರಾರ್ಥಿಸಿಕೊಳ್ಳುತ್ತಾನೆ.  ಭಗವಂತ ಮಾಯವಾಗಿ ಹೋದಾಗ, ಶಂಕರನು ಪಾರ್ವತೀ ಹಾಗೂ ಪ್ರಥಮಗಣಗಳೊಡನೆ ಎಲ್ಲಾ ದಿಕ್ಕುಗಳಲ್ಲೂ ತಿರುಗಿ ನೋಡುತ್ತಾ ಇರುವಾಗಲೇ ಜಗನ್ಮೋಹಕ ಸುಂದರಿಯನ್ನು ಉಪವನದಲ್ಲಿ ಕಾಣುತ್ತಾನೆ.  ದರ್ಶನ ಮಾತ್ರದಿಂದಲೇ ಪಾರ್ವತೀ ಹಾಗೂ ಪ್ರಥಮಗಣಗಳನ್ನೂ ಮರೆತು ಧಾವಿಸಿಬಿಡುತ್ತಾನೆ.  ಮೋಹಿನಿಯು ಮರಗಳ ಮರೆಯಲ್ಲಿ ಅವಿತಿಟ್ಟುಕೊಂಡರೂ ರುದ್ರನು ಬಿಡದೇ ಬೆನ್ನಟ್ಟಿಹೋಗುವನು. ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಹೀಗೆ ಯುವತಿವೇಷವ ಧರಿಸಿ ಗೌರೀಧವನ
ನ್ನು ಮೋಹಿಸುವಂತೆ ಮಾಡಿದ ಭಗವಂತನು.   ಭಗವಂತನ ಅಪರಿಮಿತ ಮಹಿಮೆಯನ್ನು ವರ್ಣಿಸುತ್ತಾ ರುದ್ರದೇವರು ಪಾರ್ವತಿದೇವಿಗೆ ಈ ಪ್ರಸಂಗವನ್ನು ಯಾರು ಬಾರಿಬಾರಿಗೂ ಸಂಕೀರ್ತಿಸುತ್ತಾರೋ ಅಥವಾ ಶ್ರವಣ ಮಾಡುತ್ತಾರೋ ಅವರಿಗೆ ನಿಷ್ಫಲವೆಂಬುದೇ ಇರುವುದಿಲ್ಲ.  ಸಂಸಾರದ ಸಮಸ್ತ ಕ್ಲೇಶಗಳೂ ಕಳೆದುಹೋಗುವುವು ಎಂದಿದ್ದಾರೆಂಬುದನ್ನು  ಭಾಗವತದಲ್ಲಿ ಉಲ್ಲೇಖಿಸಲಾಗಿದೆ.

ಕೆಡಿಸಿ ಉಳಿಸಿದ - ಜಗದೇಕ ಸೌಂದರ್ಯವತಿಯಾದ ಪಾರ್ವತಿಯನ್ನು ಮದುವೆಯಾಗಿದ್ದರೂ ಶಿವನು ಕಾಮವನ್ನೇ ಸುಟ್ಟು, ಜಯಿಸಿದವನು.  ಆದರೆ ಅತಿಲಾವಣ್ಯಮತಿ ಮೋಹಿನಿಯನ್ನು ಕಂಡು ಭಗವಂತನ ಮಾಯೆಯಲ್ಲಿ ಸಿಲುಕಿ, ಶಿವನು ಮೋಹಿತನಾಗುತ್ತಾನೆ.   ಶ್ರೀಹರಿಯ ಮಾಯೆಯಿಂದ ತಾನು ಮೋಹಿತನಾದೆನೆಂದು ತಿಳಿದು ಶಿವನು ನಾಚುತ್ತಾನೆ.  ಭಗವಂತನು ರುದ್ರದೇವನಿಗೆ ನಾನು ನಿನ್ನನ್ನು ಮೋಹಗೊಳಿಸಿದರೂ ಕೂಡ ನೀನು ದೈವವಶದಿಂದ ದಾಟಿ ವಿವೇಕವನ್ನು ಹೊಂದಿದೆ.  ಆದ್ದರಿಂದ ನೀನು ನಿಜವಾಗಿಯೂ ಪರಮ ವಿರಕ್ತನು, ನಿನ್ನಂತೆ ಕಾಮಾದಿಗಳನ್ನು ಯಾರೂ ಜಯಿಸಲಾರರು ಎಂದನು.   ಭಗವಂತನನು ತನ್ನ ಮೋಹಿನಿ ರೂಪದಿಂದ ಶಿವನ ಚಿತ್ತ ಸ್ವಾಸ್ಥ್ಯ ಕೆಡಿಸಿದ, ಮೋಹಪಾಶದಿಂದ ಅರಿವು ತಳೆದ ರುದ್ರದೇವನನ್ನು ಹೊಗಳಿ ಉಳಿಸಿದನು.  ಇದು ಶ್ರೀಹರಿಯ ಕಾರುಣ್ಯದ ಮಹಿಮೆ.

ಇವನ ಮಾಯವ ಗೆಲುವನಾವನು ಈ ಜಗತ್ರಯದಿ -  ಭಗವಂತನ ಮಾಯೆ ಎಂದರೆ ಸಾಮರ್ಥ್ಯ, ಶಕ್ತಿ ಅಥವಾ ಇಚ್ಛೆ ಎಂಬರ್ಥವು ಮತ್ತು ಭಗವಂತನ ಪತ್ನಿ ಮಾಯಾದೇವಿ ರೂಪಿಯಾದ ಲಕ್ಷ್ಮೀದೇವಿ.  ಬ್ರಹ್ಮಾದಿ ದೇವತೆಗಳಿಂದ ಪ್ರಾರಂಭಿಸಿ ಜೀವಿಗಳವರೆಗೂ ಯಾರಿಗೂ ಈ ಎರಡೂ ಮಾಯೆಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲ,  ಭಗವಂತನ ಲೀಲೆಗಳೂ, ಅವನ ಮಾಯೆಯ ಪ್ರಭಾವವೂ ಇರುತ್ತದೆ.  ಯಾರಿಂದಲೂ ಅದನ್ನು ಗೆಲ್ಲುವುದಾಗುವುದಿಲ್ಲ.  ಆದರೆ ಭಗವಂತನ ಕರುಣೆಯೂ ಅಪಾರ.  ಶ್ರದ್ಧೆ ಹಾಗೂ ಭಕ್ತಿಯಿಂದ ಯಾರು ಸಂಪೂರ್ಣವಾಗಿ ಶರಣಾಗತರಾಗುವರೋ, ಅವರನ್ನು ಸಂಸಾರವೆಂಬ ಬಂಧನ ಅಥವಾ ಮಾಯೆಯಿಂದ ಬಿಡಿಸಿ ಉದ್ಧರಿಸುವನು.  ಭಗವಂತನು ದುರ್ಜನರನ್ನೂ, ತಾಮಸಿಗರನ್ನೂ ತನ್ನ ಮಾಯೆಯಿಂದ ಕೆಡಿಸಿ, ಪರಮಪುರುಷಾರ್ಥವಾದ ಮುಕ್ತಿ, ಮೋಕ್ಷದಿಂದ ಅವರು ವಂಚಿತರಾಗುವಂತೆ ಮಾಡುವನು.  ಸಜ್ಜನರನ್ನೂ, ಸಾತ್ವಿಕರನ್ನೂ ಮಾಯೆಯಿಂದ ಬಿಡಿಸಿ, ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ರಕ್ಷಿಸುವನು.  ಶ್ರೀ ಪುರಂದರ ದಾಸರು ತಮ್ಮ "ಚಂದ್ರಚೂಡ ಶಿವ ಶಂಕರ ಪಾರ್ವತಿ ರಮನ ನಿನಗೆ ನಮೋ ನಮೋ" ಎಂಬ ಕೃತಿಯಲ್ಲಿ "ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ | ಜಾಲಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ" || ಎಂದು ಸ್ತುತಿಸಿದ್ದಾರೆ.

ಭಗವದ್ಗೀತೆಯಲ್ಲಿ ಭಗವಂತ :
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ||  - ಎಲೈ ಭಾರತಾ ! ಎಲ್ಲಾ ಪ್ರಕಾರಗಳಿಂದಲೂ ಪರಮಾತ್ಮನಿಗೇ ಶರಣಾಗು.  ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮಧಾಮವನ್ನೂ ಹೊಂದುವೆ ಎಂದಿದ್ದಾನೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ :

ಎಲ್ಲರಂದದಿ ಲಕ್ಷ್ಮೀನಲ್ಲನೆಂದೆನಬೇಡ
ಬಲ್ಲಿದನು ಕಂಡ್ಯ ಭಗವಂತ | ಭಗವಂತನ ಮಹಿಮೆ
ಬಲ್ಲವರು ಇಲ್ಲ ಜಗದೊಳು || - ಎಲ್ಲರೂ ತಿಳಿದಂತೆ ಭಗವಂತನನ್ನು ಲಕ್ಷ್ಮೀರಮಣನೆಂದು ಮಾತ್ರ ತಿಳಿಯಬೇಡ.  ಶ್ರೀಹರಿಯು ಷಡ್ಗುಣೈಶ್ವರ್ಯಪೂರ್ಣನಾದ, ಅಚಿಂತ್ಯವಾದ, ಅದ್ಭುತವಾದ ಸಾಮರ್ಥ್ಯವುಳ್ಳವನು.  ಭಗವಂತನ ಮಹಿಮೆಗಳನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲವೇ ಇಲ್ಲ.

ಶ್ರೀಯರಸನೆ ನಿನ್ನ ಮಾಯಕ್ಕೆ ಎಣೆಗಾಣೆ
ಹೇಯವಿಷಯಗಳ ಜನರಿಗೆ | ಜನರಿಗುಣಿಸಿ ಉಪಾ-
ದೇಯವೆಂತೆಂದು ಸುಖಿಸುವಿ || - ಭಗವಂತನ ಇಚ್ಛೆ, ಶಕ್ತಿಗಳೆಂಬ ಮಾಯೆಗೆ ಯಾರೂ, ಯಾವುದೂ ಸಾಟಿಯಲ್ಲ.  ಪ್ರಾಕೃತಿಕ ಬಂಧನದಲ್ಲಿ ಸಿಲುಕಿಸಿ ಜೀವರಿಗೆ ಲೌಕಿಕ ಭೋಗಗಳೇ ಪರಮ ಪುರುಷಾರ್ಥಗಳೆಂದೂ, ಆದರರಿಂದ ಸ್ವೀಕರಿಸಲು ಯೋಗ್ಯವೂ ಎಂಬ ಮಾಯೆಯಲ್ಲಿ ಮುಳುಗಿಸಿ, ಅವರು ತಮ್ಮ ’ಅಹಂ ಮಮಕಾರ’ಗಳೊಳಗೇ ಮುಳುಗುವಂತೆ ಮಾಡುತ್ತಾನೆ.  ಭವವೆಂಬ ಪಾಶದಲ್ಲಿ ಬಂಧಿಸುವವನೂ ಅವನೇ, ಬಿಡಿಸಿ ಉದ್ಧರಿಸುವವನೂ ಅವನೇ.  ಜೀವಿಗಳಲ್ಲಿ ತಾನಿದ್ದು ಭಗವಂತನು ಶುಭವಿಷಯಗಳನ್ನು ಭೋಗಿಸಿದರೂ, ಎಲ್ಲದರಿಂದಲೂ ರಹಿತನಾಗಿದ್ದು ಸುಖಿಸುವ ಪೂರ್ಣಾನಂದನಾಗಿದ್ದಾನೆ.



ಚಿತ್ರಕೃಪೆ : ಅಂತರ್ಜಾಲ

Tuesday, February 18, 2014

ಕರುಣಾ ಸಂಧಿ - ೧೭ ನೇ ಪದ್ಯ

ಜನಪ ಮೆಚ್ಚಿದರೀವ ಧನವಾ
ಹನ ವಿಭೂಷಣವಸನ ಭೂಮಿಯ
ತನು ಮನೆ ಗಳಿತ್ತಾದರಿಪರುಂಟೇನೋ ಲೋಕದೊಳು |
ಅನವರತ ನೆನೆವವರನಂತಾ
ಸನವೆ ಮೊದಲಾದಾಲಯದೊಳಿ
ಟ್ಟುಣುಗನಂದದವರ ವಶನಾಗುವ ಮಹಾಮಹಿಮ  ||೧೭||



ಪ್ರತಿಪದಾರ್ಥ : ಜನಪ - ಅರಸು, ಮೆಚ್ಚಿದರೆ - ಇಷ್ಟವಾದರೆ, ಧನ ವಾಹನ ವಿಭೂಷಣ ವಸನ ಮತ್ತು ಭೂಮಿ - ಧನಕನಕ ಕುದುರೆ ಆನೆ ಮೊದಲಾದ ವಾಹನ ಆಭರಣಗಳು ವಸ್ತ್ರಗಳು ಜಮೀನು ಇತ್ಯಾದಿಗಳನ್ನು ಕೊಡುವನು, ತನು ಮನೆಗಳಿತ್ತಾದರಿಪರುಂಟೇನೋ  - ಶ್ರೀಹರಿಯು ತನ್ನನ್ನೇ ಕೊಡುವುದಲ್ಲದೇ ಅನಂತಾಸನ ಶ್ವೇತದ್ವೀಪ ಮತ್ತು ವೈಕುಂಠ ಎಂಬ ಭಗವಂತನ ಮಂದಿರಗಳು ಎಂದರ್ಥ,  ಲೋಕದೊಳು - ಈ ಜಗತ್ತಿನಲ್ಲಿ, ಅನವರತ ನೆನೆವವರ - ಸದಾ ನಿರಂತರವಾಗಿ ಶ್ರೀಹರಿಯನ್ನೇ ಧ್ಯಾನಿಸುವವರನ್ನು, ಅನಂತಾಸನವೆ ಮೊದಲಾದ ಆಲಯದೊಳಿಟ್ಟು - ತನ್ನ ಮಂದಿರಗಳಾದ ಅನಂತಾಸನ ಶ್ವೇತದ್ವೀಪ ಮತ್ತು ವೈಕುಂಠಗಳೆಂಬ ಮಂದಿರಗಳಲ್ಲಿ ನೆಲೆಸುವಂತೆ ಮಾಡಿ, ಅಣುಗನಂದದಲಿ ಅವರ ವಶನಾಗುವ - ಪುಟ್ಟ ಮಗುವಿನಂತೆ ಭಗವಂತನು ಮುಕ್ತರಾದ ಜೀವಿಗಳ ವಶಕ್ಕೆ ಸಿಲುಕುವನು, ಮಹಾಮಹಿಮ - ಅಂತಹ ಮಹಿಮಾವಂತನಾಗಿರುವನು.

ಲೌಕಿಕದಲ್ಲಿ ಪ್ರಭುವಾದವನು ಕಷ್ಟಪಟ್ಟು, ಮೈ ಮುರಿದು ದುಡಿಯುವ ಸೇವಕರಿಗೆ ಹಣ ಕೊಡಬಹುದು, ವಾಹನಗಳನ್ನು ಕೊಡಬಹುದು, ಒಡವೆ ಬಟ್ಟೆಗಳನ್ನೂ, ಭೂಮಿಯನ್ನೂ ಕೊಡಬಹುದು.  ಆದರೆ ದೇಹ ಮನಸ್ಸು ಕೊಡಲಿಕ್ಕವನಿಗೆ ಸಾಧ್ಯವಿಲ್ಲ.  ಅಂತಹುದನ್ನು ಯಾವ ದೊರೆ ಕೊಟ್ಟಿದ್ದಾನೆ ?  ಪರಮಾತ್ಮನಿಗೊಬ್ಬನಿಗೇ ಅದನ್ನು ಕೊಡಲು ಸಾಧ್ಯವಿರುವುದು.  ಹೀಗೆ ಸದಾ ಸ್ಮರಿಸುವ ಭಕ್ತರನ್ನು ಅನಂತಾಸನದಂತಹ ಆಲಯದೊಳಗಿಟ್ಟು ತಾನು ಮಗುವಿನಂತೆ  ಈ ಮಹಾಮಹಿಮನು ಭಕ್ತರ ವಶನಾಗುವನು.  ಪ್ರಾಕೃತ ಲೋಕದ ದೊರೆಯು ನಮ್ಮನ್ನು ಮೆಚ್ಚಿದರೆ ಒಡವೆ-ವಸನಗಳನ್ನು ಕೊಟ್ಟು ಆದರಿಸಬಹುದು.  ಆದರೆ ಹರಿಯು ಎಲ್ಲಾ ಮೋಹವನ್ನೂ ಹರಿಸುವಂತಹ ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಕೊಟ್ಟು ನಮಗೆ ತನ್ನ ಲೋಕಗಳಲ್ಲಿ ಇರುವಂತಹ ವೈಭವವನ್ನು ಕೊಡುತ್ತಾನೆ.  ಇಂತಹ ಕಾರ್ಯಕ್ಕೆ ನಾವು ಸಿದ್ಧರಾಗಲು ನಮಗೆ ದೇಹ, ಮನಸ್ಸು ಎಲ್ಲವನ್ನೂ ಕೊಟ್ಟಿರುತ್ತಾನೆ.  ಪರಮಾತ್ಮನು ನಮ್ಮ ಜೊತೆಗೆ ಮಗುವಿನಂತೆ ಇರುತ್ತಾನೆ, ಮಿತ್ರನಂತೆ ಸಹಾಯ ಮಾಡುತ್ತಾನೆ.  ತಂದೆಯಂತೆ ನಮ್ಮನ್ನು ರಕ್ಷಿಸುತ್ತಾನೆ, ಪ್ರಭುವಿನಂತೆ ಕಾಪಾಡುತ್ತಾನೆ.  ನಾವು ನಿಜಕ್ಕೂ ಅವನ ವಶವಾದರೆ ನಮ್ಮನ್ನು ತನ್ನ ಮಗುವಿನಂತೆಯೇ ಕಾಪಾಡುತ್ತಾನೆ ಮತ್ತು ತಾನೂ ನಮ್ಮ ಮಗುವಾಗಿ ವಶನಾಗುತ್ತಾನೆ.

ಜನಪ ಮೆಚ್ಚಿದರೀವ -  ರಾಜಾ ಹರಿಶ್ಚಂದ್ರನಂತಹವರು ತಾವು ಕೊಟ್ಟ ಮಾತು ಪಾಲಿಸುವುದಕ್ಕಾಗಿ, ಸತ್ಯ, ಧರ್ಮವನ್ನು ನಿಲ್ಲಿಸುವುದಕ್ಕಾಗಿ, ಶರಣಾಗತರಾದವರನ್ನು ಕಾಪಾಡುವುದಕ್ಕಾಗಿ ತಮ್ಮ ಸರ್ವಸ್ವವನ್ನೂ, ಪ್ರಾಣವನ್ನೂ ಕೊಡಲು ಸಿದ್ಧರಿದ್ದರು.  ಆದರೆ ಅವರು ತಮ್ಮ ಅರಮನೆಯನ್ನು ಯಾರಿಗೂ ಕೊಡಲಿಲ್ಲ, ಇವೆಲ್ಲಾ ತಮ್ಮ ಸಾಧನೆಗಾಗಿಯಾಗಿಯೂ ಪುಣ್ಯ ಸಂಪಾದನೆಗಾಗಿಯೂ ಮಾಡಿದರು.  ರಾಜನೇ ಆದರೂ ತಮ್ಮ ಹತ್ತಿರ ಇರುವ ವಸ್ತುಗಳು ತಮ್ಮ ಉಪಯೋಗಕ್ಕೆ ಆಗಿ ಹೆಚ್ಚಿಗೆಯಿದ್ದರೆ ಕೊಡಬಹುದು.  ಹಾಗೆ ಕೊಡುವುದೂ ಅಪರೂಪವೇ ಆಗಿರುತ್ತದೆ. ಆದರೆ ಭಗವಂತನ ಕರುಣೆಗೆ ಯಾವ ಮಿತಿಯೂ, ದೃಷ್ಟಾಂತವೂ ಇಲ್ಲ.  ಜಗತ್ತಿಗೇ ಜನಪನಾದ ಭಗವಂತ, ನಿರಂತರ ಧ್ಯಾನಿಸುವ ತನ್ನ ಭಕ್ತರಿಗೆ ತನ್ನ ಮನೆ, ಮನ, ತನು ಸಕಲವನ್ನೂ ಕೊಡುವನು.

ತನುಮನೆಗಳಿತ್ತಾದರಿಪರುಂಟೇನೋ - ದೇಶವನ್ನಾಳುವ ರಾಜನು ತನಗೆ ಅತ್ಯಂತ ಪ್ರಿಯರಾದವರಿಗೆ ಹಣ, ವಾಹನ, ಬಂಗಾರ, ವಸ್ತ್ರ, ಭೂಮಿ, ಇನ್ನೂ ಏನನ್ನು ಬೇಕಾದರು ಕೊಡುತ್ತಾನೆ.  ತಾನು ಮೆಚ್ಚಿದ  ಆ ವ್ಯಕ್ತಿ ಅದೆಷ್ಟೇ ಪ್ರಿಯನಾದವನಾದರೂ ಅವನಿಗೆ ತನ್ನ ಅರಮನೆಯನ್ನಾಗಲೀ ಅಥವಾ ತನ್ನ ಪಟ್ಟಣವನ್ನಾಗಲೀ ಕೊಡುವುದಿಲ್ಲ ಮತ್ತು ತನ್ನ ಶರೀರ ಹಾಗೂ ಮನಸ್ಸುಗಳನ್ನು ಕೊಡುವುದಿಲ್ಲ.  ಆದರೆ  ಅತ್ಯಂತ ಕರುಣಾಮಯಿಯಾದ ಭಗವಂತನು ಪ್ರಾಪಂಚಿಕ ಭೋಗಗಳನ್ನೂ ಕೊಡುತ್ತಾನೆ, ಧನಕನಕಾದಿಗಳನ್ನೂ ಕೊಡುತ್ತಾನೆ.  ಸದಾ ತನ್ನನ್ನೇ ಧ್ಯಾನಿಸುತ್ತಾ, ತನ್ನಲ್ಲಿ ನಿಷ್ಮಾಮ ಭಕ್ತಿಯನ್ನಿಟ್ಟಿರುವ ಭಕ್ತರಿಗೆ ಮುಕ್ತಿಯನ್ನೂ ಕೊಡುತ್ತಾನೆ.  ತನ್ನ ಪಟ್ಟಣವನ್ನೇ ಕೊಡುತ್ತಾನೆ, ತನುವನ್ನೇ ಕೊಡುತ್ತಾನೆ, ಜೊತೆಗೆ ಮನವನ್ನೂ ಕೊಟ್ಟುಬಿಡುತ್ತಾನೆ.  ತನುವನ್ನೂ ಮನವನ್ನೂ ಕೊಟ್ಟುಬಿಡುವುದರ ಅರ್ಥವೆಂದರೆ ಮುಕ್ತರಿಗೆ ಮೋಕ್ಷ ಕರುಣಿಸುವುದು ಎಂದಾಗುತ್ತದೆ.  ಭಕ್ತಿಯಲ್ಲಿ ಬಹುವಿಧಗಳಿವೆ ಹಾಗೇ ಮೋಕ್ಷದಲ್ಲೂ ಐದು ವಿಧವಾದ ಮೋಕ್ಷಗಳಿವೆ.  ಭಕ್ತಿಯಲ್ಲಿ ಬಹುವಿಧವಿದೆಯೆಂಬುದನ್ನು ಭಾಗವತದ ತೃತೀಯಸ್ಕಂದದಲ್ಲಿ 

ಭಕ್ತಿಯೋಗೋ ಬಹುವಿಧೋ ಮಾರ್ತೈರ್ಭಾಮಿನಿ ಭಾವ್ಯತೇ |
ಸ್ವಭಾವಗುಣ ಮಾರ್ಗೇಣ ಪುಂಸಾಂ ಭಾವೋ ವಿಭಿದ್ಯತೇ || - ಸಾಧಕರ ಭಾವಕ್ಕೆ ತಕ್ಕಂತೆ ಭಕ್ತಿಯೋಗವು ಅನೇಕ ಪ್ರಕಾರವಾಗಿ ಪ್ರಕಾಶಿಸುತ್ತದೆ.  ಮನುಷ್ಯರ ಮನೋವೃತ್ತಿಗಳ ಮತ್ತು ಸತ್ತ್ವಾದಿಗುಣಗಳ ಭೇದಕ್ಕೆ ಅನುಗುಣವಾಗಿ ಅವರ ಭಾವಗಳಲ್ಲೂ ಅನೇಕ ಪ್ರಕಾರದ ಭೇದಗಳಿರುತ್ತವೆ.  ಅದರಿಂದಾಗಿಯೇ ಭಕ್ತಿಯಲ್ಲಿ ಮಾತ್ರ ವಿವಿಧತೆಯಲ್ಲ, ಭಕ್ತರಲ್ಲೂ ವಿವಿಧ ಭೇದಗಳಿವೆ.  ನಿಜವಾದ ಭಕ್ತರ ಲಕ್ಷಣಗಳು ಹೀಗಿರುತ್ತವೆಯೆಂದು ಭಾಗವತದಲ್ಲಿ ತಿಳಿಸಿದೆ.
ಲಕ್ಷಣಂ ಭಕ್ತಿಯೋಗಸ್ಯ ನಿರ್ಗುಣಸ್ಯ ಹ್ಯುದಾಹೃತಮ್ |
ಅಹೈತುಕ್ಯವ್ಯವಹಿತಾ ಯಾ ಭಕ್ತಿಃ ಪುರುಷೋತ್ತಮೇ || - ಗಂಗೆಯ ಪ್ರವಾಹವು ಅಖಂಡರೂಪವಾಗಿ, ಸಹಜವೇ ಎನ್ನುವಂತೆ ಸಮುದ್ರದೆಡೆಗೆ ಹೇಗೆ ಧಾವಿಸುವುದೋ, ಹಾಗೆ ಭಗವಂತನ ಗುಣಗಳನ್ನು ಕೇಳಿ, ಅನ್ಯವ್ಯಾಪಾರರಹಿತವಾಗಿ ಗಂಗಾಪ್ರವಾಹದಂತೆ ಸ್ವಾಭಾವಿಕವಾಗಿರುವ ಅಂತಃಕರಣ ಸ್ಥಿತಿಯಲ್ಲಿ ಸರ್ವಾಂತರ್ಯಾಮಿ ಹಾಗೂ ಪುರುಷೋತ್ತಮನಾದ ಭಗವಂತನ ಕಡೆಗೆ  ಅನನ್ಯ ಭಾವದಿಂದ ಸೆಳೆಯಲ್ಪಡುವುದೋ ಅದೇ ಉತ್ತಮ ಭಕ್ತಿ ಅಥವಾ ’ನಿರ್ಗುಣ ಭಕ್ತಿ’ಯ ಲಕ್ಷಣ. ನಿರ್ಗುಣ ಭಕ್ತಿಯೆಂದರೆ ಜಗತ್ತೆಲ್ಲವೂ ಪರಮಾತ್ಮನ ಸ್ಥೂಲರೂಪ, ಹಾಗೂ ಜಗತ್ ಸೃಷ್ಟಿಗೆ ಏಕಮೇವ ಕಾರಣ ಎಂದು ತಿಳಿಯುವುದು.  ಬಾಹ್ಯ ಉಪಾಧಿಗಳನ್ನೆಲ್ಲಾ ಬಿಟ್ಟು ಸರ್ವದಾ ಭಗವಂತನ ಸ್ವರೂಪವನ್ನು ಅತ್ಯಧಿಕ ಪ್ರೇಮದಿಂದ ಚಿಂತಿಸುತ್ತ ಇರುವುದು ಎಂಬುದನ್ನು ಸ್ಕಂದಮಹಾಪುರಾಣದಲ್ಲಿ ತಿಳಿಸಲ್ಪಟ್ಟಿದೆ.  ಈ ನಿರ್ಗುಣ ಭಕ್ತಿಯು ಸತ್ವ, ರಜೋ, ತಮೋ ಎಂಬ ತ್ರಿಗುಣಗಳನ್ನೂ ಹೋಗಲಾಡಿಸಿ, ಮುಕ್ತಿಗೆ ತಲುಪಿಸುತ್ತದೆ.

ಅನ್ಯವ್ಯಾಪಾರರಹಿತವಾಗಿ ಭಕ್ತಿಯನ್ನು ಮಾಡುವ ಭಕ್ತನನ್ನು ಕುರಿತು ಭಗವದ್ಗೀತೆಯ ೧೧ನೇ ಅಧ್ಯಾಯದಲ್ಲಿ  ಭಗವಂತ
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋರ್ಜುನ |
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ || - ಅನನ್ಯ ಭಕ್ತಿಯ ಮೂಲಕ ಚತುರ್ಭುಜರೂಪವುಳ್ಳ ನನ್ನನ್ನು ಪ್ರತ್ಯಕ್ಷವಾಗಿ ನೋಡಲು, ತತ್ವದಿಂದ ತಿಳಿಯಲು ಹಾಗೂ ಪ್ರವೇಶಿಸಲು ಶಕ್ತ್ಯವಿದೆಯೆಂದಿದ್ದಾನೆ
ಮತ್ಕರ್ಮ ಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ |
ನಿವೈರಃ ಸರ್ವ ಭೂತೇಷು ಯಃ ಸ ಮಾಮೇತಿ ಪಾಂಡವ || - ಕೇವಲ ನನಗಾಗಿಯೇ ಸಮಸ್ತ ಕರ್ತವ್ಯ, ಕರ್ಮಗಳನ್ನು ಮಾಡುವ, ನನ್ನಲ್ಲಿ ಪರಾಯಣನಾದ, ನನ್ನ ಭಕ್ತನಾದ, ಆಸಕ್ತಿರಹಿತನಾದ ಮತ್ತು ಸರ್ವ ಪ್ರಾಣಿಗಳಲ್ಲಿ ವೈರಭಾವರಹಿತನಾದ ಅನನ್ಯ ಭಕ್ತನು ನನ್ನನ್ನೇ ಹೊಂದುತ್ತಾನೆ ಎಂದಿದ್ದಾನೆ.

ಮುಕ್ತಿಯಲ್ಲಿಯೂ ಐದು ವಿಧ ಮುಕ್ತಿಗಳಿವೆಯೆಂದು ಭಾಗವತ ತೃತೀಯ ಸ್ಕಂದದಲ್ಲಿ ತಿಳಿಸಿದೆ.
ಸಾಲೋಕ್ಯಸಾರ್ಷ್ಟಿ ಸಾಮೀಪ್ಯ ಸಾರೂಪ್ಯೈಕತ್ವಮಪ್ಯುತ |
ದೀಯಮಾನಂ ನ ಗೃಹ್ಣನ್ತಿ ವಿನಾ ಮತ್ಸೇವನಂ ಜನಾಃ || - ಐದು ವಿಧ ಮುಕ್ತಿಗಳೆಂದರೆ ಸಾಲೋಕ್ಯ ಸಾರ್ಷ್ಟಿ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯ.  ಸಾಲೋಕ್ಯವೆಂದರೆ ಭಗವಂತನ ಲೋಕದಲ್ಲಿಯೇ  ಅಂದರೆ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳಲ್ಲಿ ನಿವಾಸಮಾಡುವುದು.  ಸಾರ್ಷ್ಟಿಯೆಂದರೆ ಭಗವಂತನನೊಡನೆ ಸಮಾನವಾದ ಐಶ್ವರ್ಯವನ್ನು ಹೊಂದುವುದು.  ಸಾಮೀಪ್ಯವೆಂದರೆ ಸದಾ ಭಗವಂತನ ಬಳಿಯಲ್ಲಿ, ಅಂದರೆ ವಿಷ್ಣುಲೋಕಗಳೆನಿಸಿರುವ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳ ಸಮೀಪದಲ್ಲಿ ಇರುವುದು.  ಸಾರೂಪ್ಯವೆಂದರೆ ಭಗವಂತನ ರೂಪದಂತೆಯೇ ರೂಪವನ್ನು ಹೊಂದುವುದು, ಅಂದರೆ ಭಗವಂತನಂತೆಯೇ ನಾಲ್ಕು ತೋಳುಗಳನ್ನೂ, ಕಿರೀಟಾದಿ ಆಭರಣಗಳನ್ನೂ ಧರಿಸಿ ವಿಮಾನಗಳಲ್ಲಿ ವಿಹರಿಸುವಂತಹದು.  ಸಾಯುಜ್ಯವೆಂದರೆ ಭಗವಂತನ ತನುಮನಗಳಲ್ಲೇ ವಾಸಿಸುವುದು.  ಭಗವಂತ ತನ್ನ ಶರೀರ ಹಾಗೂ ಮನಸ್ಸುಗಳನ್ನು ಕೊಡುತ್ತಾನೆಂದರೆ, ಮುಕ್ತರು ಭಗವಂತನ ಶರೀರ ಮನಸ್ಸುಗಳನ್ನೇ ಉಪಯೋಗಿಸಿಕೊಂಡು ತಮ್ಮ ಇಚ್ಛಾನುಸಾರ ಚಟುವಟಿಕೆಗಳನ್ನು ಮಾಡುವುದೆಂದರ್ಥವಾಗುತ್ತದೆ.  ಅಂದರೆ ಇಲ್ಲಿಯೂ ಭಗವಂತನ ಅಧೀನವೇ ಇರುತ್ತದೆ, ಸ್ವತಂತ್ರತೆಯಲ್ಲ. ಮುಕ್ತರಾದರೂ ಅವರ ಇಚ್ಛೆ ಹರಿಯ ಇಚ್ಛಾನುಸಾರವೇ ಆಗಿರುತ್ತದೆ ಎಂದರ್ಥವಾಗುತ್ತದೆ.

ಮೋಕ್ಷಕ್ಕೆ ಅಂತರ್ಯಾಮಿಯಾಗಿ ಮಾಡುವ ಅಂತರಂಗ ಸಾಧನೆಗೆ ಭಕ್ತಿಯೊಂದೇ ಪ್ರಧಾನವಾಗಿರುವುದು.  "ಮನಸಾ ಧ್ಯಾಯನ್ ವಿಷ್ಣುಂ" ಎಂಬ ಒಂದೇ ಮಾರ್ಗ ಹಾಗೂ ಗುರಿಯಾಗಬೇಕು.  ಮುಕ್ತಿಗಳಲ್ಲಿ "ಸಾಯುಜ್ಯ" ಮುಕ್ತಿಯೇ ಶ್ರೇಷ್ಠವಾದದ್ದು.   ಸಾಯುಜ್ಯ ಮುಕ್ತಿಗೆ ಯೋಗ್ಯರಾದ ಭಕ್ತರು ಸಾಯುಜ್ಯವನ್ನೂ ಬಯಸಿರುವುದಿಲ್ಲ.  ಅವರಿಗೆ ಶ್ರೀಹರಿಯ ತನುಮನಗಳ ಆಶ್ರಯ ಬೇಕಾಗಿರುತ್ತದಷ್ಟೆ.  ಬೇರೇನೂ ಅಲ್ಲ.  ಭಗವಂತ ಪ್ರೀತಿಯಿಂದ ಕೊಟ್ಟ ಸಾಯುಜ್ಯವನ್ನು ಅವರು ಶ್ರೀಹರಿಯ ಆಜ್ಞೆಯೆಂದು ಮಾತ್ರ ಸ್ವೀಕರಿಸುತ್ತಾರೆ, ಬೇರಾವ ಕಾರಣಕ್ಕೂ ಅಲ್ಲ.

ಶ್ರೀ ವಾದಿರಾಜರು ತಮ್ಮ ವೈಕುಂಠವರ್ಣನೆಯಲ್ಲಿ " ಸಾಯುಜ್ಯ ಸಾಲೋಕ್ಯ ಸಾಮೀಪ್ಯ ಮತ್ತು ಸಾರೂಪ್ಯವೆಂದು ನಾಲ್ಕು ವಿಧ ಮುಕ್ತಿಗಳನ್ನು  ಉಲ್ಲೇಖಿಸಿದ್ದಾರೆ. ಸಾಯುಜ್ಯ ಮುಕ್ತಿಯನ್ನು "ಹರಿಯಂಗವಾಶ್ರೈಸಿ ಮುಕ್ತಿಯಲಿಹರಾಗಿ ಆ ಪಿರಿಯಸುರರೆ ಸಾಯುಜ್ಯ ಮೋಕ್ಷಕರು" ಎಂದಿದ್ದಾರೆ.  ಸಾಲೋಕ್ಯ ಮುಕ್ತಿಯನ್ನು "ಸಾಲೋಕ್ಯ ಹರಿಯ ಲೋಕದೊಳಗೆ ತುಂಬಿಪ್ಪುದು" ಎಂದಿದ್ದಾರೆ.   ಸಾಮೀಪ್ಯ ಮುಕ್ತಿಯನ್ನು  "ಪಾಲಸಾಗರದಲ್ಲಿ ಸುಖಿಸುವ ಜೀವರ ಸಾಲಿಗೆ ಸಾಮೀಪ್ಯ ಮುಕ್ತಿ ಕಾಣಿರೋ" ಎಂದಿದ್ದಾರೆ.    ಸಾಯುಜ್ಯ, ಸಾಮೀಪ್ಯ ಮತ್ತು ಸಾಲೋಕ್ಯ ಮುಕ್ತಿಯನ್ನು ಹೊಂದಿದವರಿಗೂ ಸಾರೂಪ್ಯವೆಂಬುದು ಇದ್ದೇ ಇರುತದೆಂಬುದನ್ನು
ಮೂರು ಶಾಕವ ಮಾಡಿ ಲವಣವ ಕೂಡಿದರೂ
ಮೂರು ಶಾಕವೆಂದು ಕರೆಯರೈಸೆ
ಬೇರೆ ಬೇರೆ ಬಡಿಸಿದರೂ ಲವಣವೆನಿಪುದು ಈ-
ಪರಿಯಲ್ಲಿ ಸಾರೂಪ್ಯದ ಮುಕ್ತರಿಗೂ || - ಮೂರು ತರಹದ ಪಲ್ಯಗಳನ್ನು ಮಾಡಿ, ಅವುಗಳನ್ನು ಉಪ್ಪಿನೊಡನೆ ಸೇರಿಸಿದರೂ ಕೂಡ, ಮೂರು ತರಹದ ಪಲ್ಯಗಳೆಂದೇ ಕರೆಯಲ್ಪಡುತ್ತವೆ.   ಅದರಲ್ಲಿ ಉಪ್ಪು ಬೇರೆಯೆಂದು ವ್ಯವಹರಿಸುವುದಿಲ್ಲ.  ಆದರೆ ಎಲೆಯ ತುದಿಯಲ್ಲಿ ಬೇರೆಯಾಗಿಯೇ ಬಡಿಸಿದ ಉಪ್ಪನ್ನು ಮಾತ್ರ ಉಪ್ಪು ಎಂದೇ ವ್ಯವಹರಿಸುತ್ತಾರೆ.  ಸಾಮೀಪ್ಯ ಮತ್ತು ಸಾಯುಜ್ಯ ಮುಕ್ತಿಗಳು ವಿಶೇಷವಾದವು.  ಅವುಗಳಿಲ್ಲದ ಬೇರೆ ಎಲ್ಲಾ ಮುಕ್ತರಿಗೂ ಸಾರೂಪ್ಯಮುಕ್ತಿಯು ಇದ್ದೇ ಇರುತ್ತದೆ.

ಸತ್ಯಲೋಕದವರೆಗಿನ ಲೋಕಗಳಲ್ಲಿ ವಾಸಿಸುವವರು ಸಾರೂಪ್ಯ ಮುಕ್ತರು.  ಭಗವಂತನ ಮನೆಗಳಾದ ಧಾಮತ್ರಯಗಳ ಆಸುಪಾಸಿನಲ್ಲಿ ವಾಸಿಸುವವರು ಸಾಮೀಪ್ಯ ಮುಕ್ತರು.  ಶ್ರೀಹರಿಯ ಮನೆಗಳಾದ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳಲ್ಲಿ ವಾಸಿಸುವವರು ಸಾಲೋಕ್ಯ ಮುಕ್ತರು ಮತ್ತು ಪರಮಾತ್ಮನ ತನುಮನಗಳಲ್ಲಿ ವಾಸಿಸುವವರು ಸಾಯುಜ್ಯ ಮುಕ್ತರು.  ಭಗವಂತ ಹೀಗೆ ತನ್ನನ್ನೇ ಸದಾ ಸ್ಮರಿಸುವ, ಸೇವಿಸುವ ಭಕ್ತರಿಗೆ ತನ್ನ ತನುಮನಗಳೆರಡನ್ನೂ ಕೊಟ್ಟು ಮುಕ್ತಿಯನ್ನು ಕರುಣಿಸುವ ಕರುಣಾಮಯಿಯು.

ಅನವರತ ನೆನೆವವರ - ಅನವರತವೂ ನೆನೆವವರೇ ನಿಜವಾದ ಭಕ್ತರು. ಧ್ಯಾನದಿಂದಲೇ ಅವರು ಶುದ್ಧಿಯಾಗುವರು ಮತ್ತು ಎಲ್ಲವನ್ನೂ ಪಡೆಯುವರು.  ಸ್ಕಂದಮಹಾಪುರಾಣದಲ್ಲಿ
ಧ್ಯಾನೇನ ಸರ್ವಮಾಪ್ನೋತಿ ಧ್ಯಾನೇ ನಾಪ್ನೋತೊ ಶುದ್ಧತಾಂ |
ಧ್ಯಾನೇನ ಪರಮಂ ಬ್ರಹ್ಮ ಮೂರ್ತೌ ಯೋಗಸ್ತು ಧ್ಯಾನಜಃ || - ಪರಬ್ರಹ್ಮ ಪ್ರಾಪ್ತಿಯೂ, ಸಾಕ್ಷಾತ್ಕಾರವೂ ಉತ್ಕಟ ಹಾಗೂ ಅನವರತ ಧ್ಯಾನದಿಂದಲೇ ಸಾಧ್ಯವೆಂದು ತಿಳಿಸಲ್ಪಟ್ಟಿದೆ.
ಭಗವದ್ಗೀತೆಯಲ್ಲಿ ಭಗವಂತ ಅರ್ಜುನನಿಗೆ
ಮಯ್ಯೇವ ಮನ ಆಧಸ್ಸ್ವಮಯಿ ಬುದ್ಧಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ || - ನನ್ನಲ್ಲೇ ಮನಸ್ಸು ಹಾಗೂ ಬುದ್ಧಿಯನ್ನು ತೊಡಗಿಸಿದರೆ ಯಾವ ಸಂಶಯವೂ ಇಲ್ಲದೆ ನೀನು ನನ್ನಲ್ಲೇ ನೆಲೆಸುವೆ ಎಂದಿದ್ದಾನೆ.  ಮನಸ್ಸು ಮತ್ತು ಬುದ್ಧಿ ಎರಡನ್ನೂ ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಧ್ಯಾನದ ಮೂಲಕ ಅನವರತ ನೆನೆವುದಲ್ಲದೆ ಬೇರೆ ಉಪಾಯವಿಲ್ಲವೇ ಇಲ್ಲ.
"ನಿನ್ನ ಧ್ಯಾನವನು ಕೊಡು ಎನ್ನ ಧನ್ಯನ ಮಾಡು" ಎಂದು ಪುರಂದರ ದಾಸರು ಹೇಳಿದ್ದಾರೆ.  "ನಿನ್ನ ಧ್ಯಾನದ ಶಕ್ತಿಯ ಕೊಡು, ಅನ್ಯರಲಿ ವಿರಕ್ತಿಯ ಕೊಡು..... ತುದಿಯಲಿ ಎನಗೆ ಮುಕ್ತಿ ಕೊಡು" ಎಂದು ಶ್ರೀವಾದಿರಾಜರು ಕೂಡ ತಿಳಿಸಿದ್ದಾರೆ.

ಅನಂತಾಸನವೆ ಮೊದಲಾದಾಲಯ -   ಧಾಮತ್ರಯಗಳೆಂದೇ ಪ್ರಸಿದ್ಧಿಗೊಂಡಿರುವುದು ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳು.  ಈ ಧಾಮತ್ರಯಗಳು ಶ್ರೀಹರಿಯ ಸಾಕ್ಷಾತ್ ನಿವಾಸಗಳು.  ವಿಷ್ಣುರಹಸ್ಯ ಹಾಗೂ ಇತರ ಪುರಾಣಗಳಲ್ಲಿ ವೈಕುಂಠ ಲೋಕದಲ್ಲಿ, ವೈಕುಂಠವೆಂದೇ ಕರೆಯಲ್ಪಡುವ ವೈಕುಂಠನಾಮಕ ಶ್ರೀಹರಿಯು ವಿಹರಿಸುವುದೇ ವೈಕುಂಠನಗರಿಯು ಎಂದಿದೆ.
ಭಗವದ್ಗೀತೆಯ ೮ನೇ ಅಧ್ಯಾಯದಲ್ಲಿ ಭಗವಂತ
ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹುಃ ಪರಮಾ ಗತಿಮ್ |
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ || - ಅದನ್ನು ಅವ್ಯಕ್ತ, ಅಕ್ಷರ ಎಂದು ಹೇಳುತ್ತಾರೆ ಮತ್ತು ಶ್ರೇಷ್ಠಗತಿಯೆಂದೂ ತಿಳಿಸುತ್ತಾರೆ.  ಆ ಸನಾತನ ಅವ್ಯಕ್ತ ಭಾವವನ್ನು ಪಡೆದುಕೊಂಡ ಬಳಿಕ ಮನುಷ್ಯನು ಮರಳಿ ಹುಟ್ಟುವುದಿಲ್ಲ, ಅದು ನನ್ನ ಸರ್ವಶ್ರೇಷ್ಠ ಸ್ಥಾನವಾಗಿದೆ ಎಂದಿದ್ದಾನೆ.
ಶ್ರೀ ವಾದಿರಾಜರು ತಮ್ಮ ವೈಕುಂಠ ವರ್ಣನೆಯಲ್ಲಿ "ಸಾಕ್ಷಾನ್ನಾರಾಯಣನಿಪ್ಪ ವೈಕುಂಠ"ವೆಂದಿದ್ದಾರೆ.   "ಅರ್ಕಕೋಟಿಗಳಂತೆ ವೈಕುಂಠಲೋಕ ದಶ ದಿಕ್ಕಿನೊಳಗೆ ಬೆಳಗುವುದು"  -  ವೈಕುಂಠಲೋಕವನ್ನು ಮಾತ್ರ ಲಕ್ಷ್ಮೀದೇವಿಯ ಕಾಂತಿಯು ಸಾಕ್ಷಾತ್ತಾಗೆ ಪ್ರಕಾಶಗೊಳಿಸುತ್ತದೆ ಎಂದಿದ್ದಾರೆ.
ಭಗವದ್ಗೀತೆಯಲ್ಲಿ ಭಗವಂತ ಸ್ವಯಂ
ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |
ಯದ್ಗತ್ವಾನ ನಿವರ್ತಂತೇ ತದ್ಧಾಮ ಪರಮಂ ಮಮ || - ಆ ಸ್ವಯಂ ಪ್ರಕಾಶಿತ ಪರಮಪದವನ್ನು ಸೂರ್ಯ ಚಂದ್ರರಾಗಲೀ, ಅಗ್ನಿಯಾಗಲೀ ಪ್ರಕಾಶಿಸಲಾರರು.  ಆ ಪರಮಪದವನ್ನು ಪಡೆದ ಮನುಷ್ಯ ಮರಳಿ ಸಂಸಾರಕ್ಕೆ ಬರುವುದಿಲ್ಲ.  ಅದೇ ನನ್ನ ಪರಮಧಾಮವಾಗಿದೆ ಎಂದಿದ್ದಾನೆ.
ಶ್ರೀ ವಾದಿರಾಜರು ವೈಕುಂಠವರ್ಣನೆಯಲ್ಲಿ ಮುಂದುವರೆಯುತ್ತಾ "ಶಿರಿದೇವಿ ತಾನೆ ಮುರಹರನ ಪಟ್ಟಣದೊಳು | ಪರಿಪರಿಯ ಮನೆಯ ರೂಪದಲ್ಲಿ | ಮಿರಮಿರನೆ ಮಿಂಚುವಳು ಹಚ್ಚಪ್ರಕೃತಿಯಿಂದ | ವಿರಚಿತಗೃಹಗಳೊಪ್ಪಿಹವು || - ಮುರಹರನ ಪಟ್ಟಣದಲ್ಲಿ ಶಿರಿದೇವಿಯಾದ ಶ್ರೀಮಹಾಲಕ್ಷ್ಮಿಯೇ ಸ್ವಯಂ ಪರಿಪರಿಯ, ನಾನಾವಿಧದ ಮನೆಯ ರೂಪಗಳಲ್ಲಿ ಪ್ರಕಾಶಿಸುತ್ತಾಳೆ ಎಂದಿದ್ದಾರೆ.  ಇಂತಹ ಪರಮ ಪವಿತ್ರವಾದ ಮತ್ತು ಲಕ್ಷ್ಮೀದೇವಿಯೇ ಸ್ವಯಂ ರೂಪದಲ್ಲಿರುವ ತನ್ನ ತ್ರಿಧಾಮಗಳನ್ನೇ ಭಗವಂತ ಸಾಲೋಕ್ಯ ಮುಕ್ತರಿಗೆ ಕೊಟ್ಟುಬಿಡುತ್ತಾನೆ.  ಇದು ಅವನ ಪರಮಕಾರುಣ್ಯವಲ್ಲದೇ ಬೇರೇನೂ ಅಲ್ಲ.

ಅಣುಗನಂದದಲವರ ವಶನಾಗುವ -  ಅನುಗನೆಂದರೆ ಸಂಸ್ಕೃತದಲ್ಲಿ ಸಹಚರ, ಸೇವಕ, ಅನುಚರ, ಹಿಂಬಾಲಿಸುವವ ಎಂದರ್ಥ.  ಲೌಕಿಕ ಪ್ರಪಂಚದ ಎಲ್ಲಾ ಸಂಬಂಧಗಳಲ್ಲೂ ಒಬ್ಬರಿಗೊಬ್ಬರು ತಮ್ಮನ್ನು ಅರ್ಪಿಸಿಕೊಂಡಾಗ ಅಲ್ಲಿ ಸ್ವಾರ್ಥದ ಲೇಪವಿದ್ದೇ ಇರುತ್ತದೆ.  ಆದರೆ ಪರಮಾತ್ಮನಿಗೆ ಪರಮ ಭಕ್ತರು ತಮ್ಮನ್ನೇ ಅರ್ಪಿಸಿಕೊಂಡಾಗ ಅಲ್ಲಿ ಎಲ್ಲವೂ ಮುಕ್ತವಾಗಿರುತ್ತದೆ.  ಭಗವಂತ ತನ್ನ ತನು ಮನ ಧಾಮಗಳೆಲ್ಲವನ್ನೂ ಭಕ್ತರಿಗೆ ಕೊಟ್ಟಾಗಲೂ ಅದರಿಂದ ಅವನಿಗೆ ಯಾವ ಲಾಭವೂ ಇಲ್ಲ.  ತನ್ನದೆಲ್ಲವನ್ನೂ ಕೊಟ್ಟು, ತಾನೂ ಅನುಗನಂತೆ ಭಕ್ತರನ್ನು ಸೇವಿಸುವ.  ಪುಟ್ಟ ಮಗು ತನ್ನ ತಂದೆಯನ್ನೇ ಅನುಸರಿಸುತ್ತಾ ಹಿಂದೆ ಮುಂದೆ ತಿರುಗುವಂತೆ ಭಗವಂತ ತನ್ನ ಭಕ್ತರ ವಶನಾಗಿಬಿಡುವನು.  ಇದೇ ಆ ಪರಮಪುರುಷನ ಅತಿಶಯವಾದ ಕಾರುಣ್ಯವು  ಹಾಗೂ ಮಹಾಮಹಿಮೆಯು ಆಗಿರುತ್ತದೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ
ಏನು ಕೊಟ್ಟರೂ ಕೊಡೋ ಶ್ರೀನಿವಾಸನೆ ನಿನ್ನ-
ಧೀನದವನಯ್ಯ ಎಂದೆಂದು | ಎಂದೆಂದು ಸುಖದುಃಖ-
ಮಾನಾದಿಗಳಿಗೆ ಪ್ರಭು ನೀನು || - ಶ್ರೀನಿವಾಸನೇ ನೀನು ಏನು ಕೊಡುತ್ತೀಯೋ ಕೊಡು, ನಿನ್ನ ಇಚ್ಛೆಗೆ ಬಂದದ್ದನ್ನು ಕೊಡು.  ನಾನು ಎಂದೆಂದಿಗೂ, ಯಾವ ಕಾಲಕ್ಕೂ (ಮುಕ್ತಿಯಲ್ಲೂ) ನಿನ್ನ ದಾಸನು.  ನನ್ನ ಸುಖ-ದುಃಖ ಮಾನಾಪಮಾನಾದಿ ದ್ವಂದ್ವಗಳಿಗೆ ನೀನೇ ಪ್ರಭು, ನೀನೇ ಸ್ವತಂತ್ರನು.  ನಾನು ನಿನ್ನ ಅಧೀನನು ಎಂದಿದ್ದಾರೆ.

ನಿತ್ಯ ಬುದ್ಧನು ನಾನು ನಿತ್ಯ ಮುಕ್ತನು ನೀನು
ಭೃತ್ಯನು ನಾನು ಪ್ರಭು ನೀನು | ಪ್ರಭು ನೀನು ಮೂರ್ಲೋಕ-
ವ್ಯಾಪ್ತನು ನೀನು ಅಣು ನಾನು || - ನಾನು ನಿತ್ಯ ಪರಾಧೀನನು, ನಿತ್ಯ ಸಂಸಾರಿಯು ಮತ್ತು ನಿನ್ನ ಸೇವಕನು.  ನೀನು ನಿತ್ಯ ಸ್ವತಂತ್ರನು, ಆಳುವ ಪ್ರಭು,  ಮೂರ್ಲೋಕ ವ್ಯಾಪ್ತನು.  ಆದರೆ ನಾನಾದರೋ ಅಣು ಮಾತ್ರ ಸ್ವರೂಪನು ಎಂದಿದ್ದಾರೆ.  ದುಃಖ ವಿಮೋಚನೆಯೇ ಮುಕ್ತನೆಂಬ ನಾಮಕ್ಕೆ ಕಾರಣವಾದರೆ, ಸದಾ ಶ್ರೀಹರಿಯ ಅಧೀನನು ಎಂಬುದೇ ಬದ್ಧನೆಂಬ ನಾಮಕ್ಕೆ ಕಾರಣವಾಗುತ್ತದೆ.

ಡಿವಿಜಿಯವರು ಕಗ್ಗದಲ್ಲಿ "ಮುಕ್ತಿಸುಖವಾಂತರಿಕವದು ನಿರವಧಿಸುಖ" - ಮುಕ್ತಿಸುಖವೆನ್ನುವುದು ಬಾಹ್ಯವಲ್ಲ,  ಆಂತರಿಕ.  ಪ್ರತೀ ಜೀವಿಯೂ ತನ್ನ ದೃಷ್ಟಿಯನ್ನು ತನ್ನೊಳಗೆ ತಿರುಗಿಸಿಕೊಂಡು ಅಲ್ಲಿ ಆಗುವ ಬ್ರಹ್ಮಾನಂದವನ್ನು ಅನುಭವಿಸಬೇಕು, ಅದು ನಿರವಧಿಸುಖ ಎಂದಿದ್ದಾರೆ.
ನೆನೆನೆನೆದು ಗಹನವನು, ಜೀವನರಹಸ್ಯವನು
ಮನವ ಬಳಲಿಸಿ ಸೋಲಿಸಿರುವ ತತ್ತ್ವವನು |
ಮನನದೇಕಾಂತದಲಿ ಮೌನದ ಧ್ಯಾನದಲಿ
ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ || - ವಿಶ್ವಕ್ಕೆಲ್ಲಾ ಆದಿಮೂಲವಾಗಿರುವ ಬ್ರಹ್ಮ ವಸ್ತುವನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿರು.  ಏಕಾಂತದಲ್ಲಿ ಮೌನವಾಗಿ ಕುಳಿತು ತದೇಕ ಚಿತ್ತನಾಗಿ ಧ್ಯಾನಿಸು.  ಧ್ಯಾನಿಸುತ್ತಾ ಪುನಃ ಪುನಃ ಸಾಷ್ಟಾಂಗ ನಮಸ್ಕಾರ ಮಾಡು ಎಂದಿದ್ದಾರೆ.

ಚಿತ್ರಕೃಪೆ : ಅಂತರ್ಜಾಲ

Tuesday, February 11, 2014

ಕರುಣಾ ಸಂಧಿ - ೧೬ ನೇ ಪದ್ಯ

ಏನು ಕರುಣಾನಿಧಿಯೊ ಹರಿ ಮ
ತ್ತೇನು ಭಕ್ತಾಧೀನನೋ ಇ
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ |
ತಾನೆ ಸೃಜಿಸುವ ಪಾಲಿಸುವ ನಿ
ರ್ವಾಣ ಮೊದಲಾದಖಿಳಲೋಕ
ಸ್ಥಾನದಲಿ ಮತ್ತವರನಿಟ್ಟಾನಂದ ಪಡಿಸುವನು  ||೧೬||

ಪ್ರತಿಪದಾರ್ಥ : ಏನು ಕರುಣಾನಿಧಿಯೋ ಹರಿ - ಶ್ರೀಹರಿಯು ಸಾಟಿಯಿಲ್ಲದಂತಹ ಕರುಣಾಸಾಗರನು, ಮತ್ತೇನು ಭಕ್ತಾಧೀನನೋ - ತನ್ನನ್ನು ಭಕ್ತಿ ಹಾಗೂ ಪ್ರೇಮದಿಂದ ಸ್ತುತಿಸುವ ಭಕ್ತರಿಗೆ ಅಧೀನನಾಗುವನು, ಇನ್ನೇನು ಈತನ ಲೀಲೆ - ಭಗವಂತ ಎಲ್ಲಾ ಕಾರ್ಯಗಳೂ ಲೀಲೆಗಳೇ (ಕ್ರೀಡೆಗಳೇ) ಆಗಿವೆ ಬಣ್ಣಿಸಲಾಗಲೀ ಹೋಲಿಸಲಾಗಲೀ ಸಾಧ್ಯವಿಲ್ಲದಂತಹುದು, ಇಚ್ಛಾಮಾತ್ರದಲಿ - ತನಗೆ ಇಚ್ಛೆಯಾದ ಕೂಡಲೆ,  ಜಗವ ತಾನೆ ಸೃಜಿಸುವ - ಬ್ರಹ್ಮಾಂಡವನ್ನು ಸೃಷ್ಟಿ ಮಾಡುವನು, ಪಾಲಿಸುವ - ಸಂರಕ್ಷಣೆಯನ್ನೂ ಮಾಡುವನು, ನಿರ್ವಾಣ - ಎಂದರೆ ಬಾಣವಿಲ್ಲದ ಸ್ಥಳ ಮತ್ತು ಬಾಣ ಎಂದರೆ ಬಾಹ್ಯದೇಹ - ಮೋಕ್ಷ, ಮೊದಲಾದಖಿಳ - ಸ್ವರ್ಗ ಹಾಗೂ ಇತರ ಭೋಗಗಳು, ಲೋಕ ಸ್ಥಾನದಲಿ - ಸ್ವರ್ಗಲೋಕ ಮಹರ್ಲೋಕ ಮುಂತಾದ ಲೋಕಗಳಲ್ಲಿ, ಮತ್ತವರನ್ನಿಟ್ಟು - ಭಕ್ತರನ್ನು ಅಲ್ಲಿ ಇಟ್ಟು, ಆನಂದಪಡಿಸುವನು - ಸಂತೋಷಪಡುವಂತೆ ಮಾಡುವನು.

ಹರಿ ಕರುಣಾ ಸಮುದ್ರನು ಮತ್ತು ಭಕ್ತರಿಗೆ ಅಧೀನನೂ ಆಗಿದ್ದಾನೆ.  ತನ್ನ ಖುಷಿಯಿಂದ ಜಗತ್ತನ್ನು ಸೃಷ್ಟಿಸುವವನು ಹಾಗೂ  ಪಾಲಿಸುವವನು.  ತನ್ನ ಇಷ್ಟವುಳ್ಳ ಭಕ್ತರಿಗೆ ಮೋಕ್ಷವನ್ನು ಕೊಟ್ಟು, ಅವರನ್ನು ಆನಂದ ಪಡಿಸುವನು.  ಅತ್ಯಂತ ಬಡವನಾದ ತನ್ನ ಸ್ನೇಹಿತ ಸುಧಾಮನಿಗೆ ಐಶ್ವರ್ಯವನ್ನು ಕೊಟ್ಟು ಕರುಣಾನಿಧಿ ಎನಿಸಿಕೊಂಡ.  ಭಕ್ತ ಪುಂಡರೀಕ ಕೊಟ್ಟ ಇಟ್ಟಿಗೆಯ ಮೇಲೆ ನಿಂತು ಭಕ್ತಾಧೀನನೆನಿಸಿಕೊಂಡ.  ಪುಟ್ಟ ಧೃವ ಮತ್ತು ಪ್ರಹ್ಲಾದರಿಗೆ ಏನೇ ಕಷ್ಟ ಬಂದರೂ ಅವರನ್ನು ಕಾಪಾಡಿದ.  ಧೃವನಿಗೆ ಒಂದು ಲೋಕವನ್ನೇ ಕೊಟ್ಟು ಲೋಕಾಧಿಪತಿಯನ್ನು ಮಾಡಿದ.  ಭಕ್ತ ಪ್ರಹ್ಲಾದನಿಗಾಗಿ ಒಂದು ಅವತಾರವನ್ನೇ ಎತ್ತಿದ.  ಹೀಗೆ ಇಚ್ಛಾಮಾತ್ರ ಲೀಲೆಯಿಂದ ಈ ಲೋಕವನ್ನು ಸೃಷ್ಟಿಸಿ, ಪಾಲಿಸಿ, ಲಯಗೊಳಿಸಿ, ವೈಕುಂಠವೇ ಮೊದಲಾದ ಮುಕ್ತ ಲೋಕಗಳಲ್ಲಿ ತನ್ನ ಭಕ್ತರನ್ನಿಟ್ಟು ಆನಂದಪಡಿಸುತ್ತಾನೆ.

ಭಗವಂತನ ಲೀಲೆಗಳಿಂದ ಆನಂದವಲ್ಲ, ಅವನು ಆನಂದದಿಂದಲೇ ಲೀಲೆಯಾಡುವನು.  ತನ್ನ ಒಂದು ಇಚ್ಛೆಯಿಂದಲೇ ಬ್ರಹ್ಮಾಂಡದ ಸೃಷ್ಟಿಯನ್ನು ಮಾಡುವಂತಹ ಪರಮಪುರುಷನಾದ ಶ್ರೀಹರಿ ಅದೆಷ್ಟು ಕರುಣಾಮಯನೆಂದರೆ, ನಿಜವಾದ ಭಕ್ತರಿಗೆ ತಾನೇ ಅಧೀನನಾಗಿ ಬಿಡುವಂತಹವನು.  ಕರುಣೆಗೆ ಗುರುತೇ ಭಕ್ತರಿಗಧೀನನಾಗುವುದು.  ಆನಂದದಿಂದ ಲೀಲೆಯಾಡುವಂತಹ ಸರ್ವಶಕ್ತನಾದ ಶ್ರೀಹರಿ ಭಕ್ತರ ನಿಷ್ಕಲ್ಮಷ ಪ್ರೇಮಕ್ಕೆ, ಭಕ್ತಿಗೆ ತನ್ನನ್ನೇ ಕೊಟ್ಟು, ಕಟ್ಟುಹಾಕಿಸಿಕೊಳ್ಳುವಂತಹವನು.  ಇಂತಹ ಕರುಣಾಮಯನ ಕರುಣೆ ಜೀವಿಗೆ ಸಿಗಬೇಕಾದರೆ, ಜೀವಿ ನಿಜವಾದ ಭಕ್ತಿಯಿಂದ ಪರಿಪೂರ್ಣವಾಗಿ ತನ್ನನ್ನೇ ಅವನಿಗೆ ಅರ್ಪಿಸಿಕೊಳ್ಳಬೇಕು.  ನಿಜವಾದ ಭಕ್ತನು ಯಾರು ಮತ್ತು ನಿಜವಾದ ಭಕ್ತಿಯೆಂದರೆ ಏನೆಂಬುದನ್ನು ಮೊದಲು ಅರಿಯಬೇಕು.  ಭಕ್ತರಲ್ಲಿಯೂ ವಿವಿಧ ಭಾವಗಳಿವೆ.  ಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆಂದು ಬಯಸುವ ಭಕ್ತನನ್ನು ’ಜಿಜ್ಞಾಸು’ (ಜ್ಞಾತುಂ ಇಚ್ಛಾ ಜಿಜ್ಞಾಸಾ) ಎನ್ನುತ್ತಾರೆ.   ವಾಸನೆಗಳನ್ನೂ, ವಿಷಯಗಳನ್ನೂ ಬಯಸುವ ಭಕ್ತನನ್ನು ’ಅರ್ಥಾರ್ಥಿ’ ಎನ್ನುತ್ತಾರೆ.  ಸದಾ ಸರ್ವದಾ ಭಗವಂತನನ್ನೇ ಬಯಸುವಂತಹ ಭಕ್ತನನ್ನು ’ಜ್ಞಾನೀಚ’ ಎನ್ನುತ್ತಾರೆ ಮತ್ತು ಇದೇ ನಿಜವಾದ ಭಕ್ತಿ ಹಾಗೂ ಇದನ್ನು ಬಯಸುವವನೇ ನಿಜವಾದ ಭಕ್ತನೂ ಆಗಿರುತ್ತಾನೆ.  ನಿರಂತರ ಸ್ಮರಿಸಬೇಕೆಂದಾಗ, ಭಗವಂತನಿಗೆ ಇದೇ ನಾಮ ಅದೇ ನಾಮವೆಂಬ ಯಾವುದೇ ನಿಯಮವಿಲ್ಲ.  ಅವನು ಪ್ರತಿ ಅಕ್ಷರ ಹಾಗೂ ಪದಗಳ ಪ್ರತಿಪಾದ್ಯನು.  ಯಾವುದೇ ಪದವನ್ನು ಉಪಯೋಗಿಸಿದರೂ, ಯಾವುದೇ ನಾಮವಾದರೂ , ಶುದ್ಧ ಭಕ್ತಿಯಿಂದ, ನುಡಿದಾಗ ಅದು ಭಗವಂತನ ನಾಮವೇ ಆಗುತ್ತದೆ.  ನಾವು ಆಡುವ ಪ್ರತಿ ಶಬ್ದವೂ ಭಗವಂತನಿಗೇ ಸಮರ್ಪಣೆಯೆಂಬ ಒಂದು ಅನುಸಂಧಾನವನ್ನು ದಿನವೂ ಬೆಳಿಗ್ಗೆ ಎದ್ದ ತಕ್ಷಣ ಮಾಡಿಕೊಂಡರೆ, ದಿನಪೂರ್ತಿಯೂ ಆಡುವ ಪ್ರತೀ ಮಾತೂ ಅವನಿಗೇ ಸಮರ್ಪಿತವಾಗುತ್ತದೆ.  ಹೀಗೆ ಮಾಡಿದಾಗ ತತ್ತ್ವಾಭಿಮಾನಿ ದೇವತೆಗಳು ಕೂಡ ನುಡಿಯುವ ಪ್ರತೀ ಶಬ್ದವೂ ಭಗವಂತನಿಗೆ ಪ್ರೀತಿಯಾಗುವಂತೆಯೇ ನುಡಿಸುತ್ತಾರೆ.  ಭಗವಂತನಿಗೆ ತನ್ನದೇ ಎಂಬ ಯಾವ ಕರ್ತವ್ಯವೂ ಯಾವ ಲೋಕದಲ್ಲಿಯೂ ಇಲ್ಲ.  ಅವನು ಕರುಣಾಸಾಗರ ಹಾಗೂ ಭಕ್ತಪರಾಧೀನನಾದ್ದರಿಂದಲೇ, ಜೀವಿಗೋಸ್ಕರವಾಗಿಯೇ, ತನ್ನದೇ ಕರ್ತವ್ಯವೋ ಎಂಬಂತೆ ತಾನು ಮಾಡಿ, ನಮ್ಮಿಂದ ಮಾಡಿಸಿ, ನಮ್ಮನ್ನು ಕಾಪಾಡುತ್ತಾನೆ.  


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು :

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ || -  ಮೂರೂ ಲೋಕಗಳಲ್ಲಿಯೂ ನನಗೆ ಗಳಿಸಲಾಗದಿರುವ ಯಾವುದೇ ವಸ್ತುವೂ ಇಲ್ಲ ಮತ್ತು ಇದ್ದರೂ ನನಗೆ ಅದರ ಅವಶ್ಯಕತೆ ಇಲ್ಲ.  ನನಗಾಗಿ ಯಾವ ಕರ್ತವ್ಯವೂ ಉಳಿದಿಲ್ಲವಾದರೂ ಕೂಡ ನಾನು ಕರ್ಮಗಳನ್ನು ತ್ಯಾಗ ಮಾಡುವುದಿಲ್ಲ.  ನಾನೇ ಸೃಷ್ಟಿಸಿರುವ ಈ ಲೋಕದ ಜೀವಿಗಳಿಗಾಗಿ, ಅವರ ಉದ್ಧಾರಕ್ಕಾಗಿ, ಅವರ ಮೇಲೆ ದಯೆಗೈದು ನಾನು ಕರ್ಮಗಳಲ್ಲಿ ತೊಡಗಿದ್ದೇನೆ ಎಂದು ಅರ್ಜುನನಿಗೆ ತಿಳಿಸಿದ್ದಾನೆ.  

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದಿತಃ |

ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ || - ನಾನು ಎಂದಾದರೂ ಎಚ್ಚರವಾಗಿ ಕರ್ಮಗಳನ್ನು  ಮಾಡದಿದ್ದರೆ ದೊಡ್ಡ ಹಾನಿಯುಂಟಾಗುವುದು.  ಏಕೆಂದರೆ ಎಲ್ಲಾ ಜೀವಿಗಳೂ ಪ್ರತಿಯೊಂದು ರೀತಿಯಲ್ಲೂ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ ಎಂದಿದ್ದಾನೆ.
ಭಗವಂತ ತಾನೇನೂ ಮಾಡಬೇಕಿಲ್ಲವಾದರೂ, ಅವನು ಮಾಡದಿದ್ದರೆ ಅಸ್ವತಂತ್ರರಾದ ಜೀವಿಗಳೂ ಏನೂ ಮಾಡಲಾರರು.   ಜೀವಿಗಳು ತಮಗೆ ಬೇಕಿದ್ದರೂ ಕೂಡ ತಾವೇ ಜನಿಸಲಾರರು,  ಸಾಧನೆ ಮಾಡಲಾರರು.  ಮುಕ್ತಿ, ಮೋಕ್ಷಗಳನ್ನು ಪಡೆಯಲಾರರು.  ಆದ್ದರಿಂದ ಕರುಣಾಮಯಿಯಾದ ಭಗವಂತ ತಾನೇ ಹುಟ್ಟಿಸಿ, ರಕ್ಷಿಸಿ, ಸಾಧನೆ ಮಾಡಿಸಿ, ಮೋಕ್ಷಾದಿ ಫಲಗಳನ್ನು ಕೊಟ್ಟು ಸಂತೋಷಪಡಿಸುತ್ತಾನೆ.   ಇಷ್ಟೆಲ್ಲಾ ಮಾಡುವ ಭಗವಂತನು ತಾನು ಮಾಡಿದ ಕೆಲಸಕ್ಕೆ ಪ್ರತಿಫಲವನ್ನೇನೂ ಬಯಸುವುದಿಲ್ಲ.

ಅನುಸಂಧಾನ ಪೂರ್ವಕವಾಗಿ ಮಾಡುವ ಪ್ರತೀ ಕರ್ಮವೂ ಭಗವಂತನಿಗೆ ಸಮರ್ಪಣೆಯಾಗುತ್ತದೆ.  ಸಮರ್ಪಣೆಯಾದಾಗ, ಪಾಪವೂ ಪಾಪವಾಗುವುದಿಲ್ಲ, ಪುಣ್ಯವೇ ಆಗುತ್ತದೆ.  ಪಾಪವೆಂಬಂತೆ ತೋರಿಸಿ, ಜೀವಿಯನ್ನು ಎಚ್ಚರಿಸಿ ಮತ್ತೆ ಪಾಪ ಮಾಡದಂತೆ, ಪ್ರೇರೇಪಿಸುತ್ತಾನೆ ಭಗವಂತ.  ಆದ್ದರಿಂದಲೇ ಅವನು ಕರುಣಾಸಮುದ್ರನು. ಭಕ್ತಾಧೀನನಾದ ಭಗವ೦ತನು ತನ್ನ ಕರುಣೆಯ ಅಧೀನತ್ವವನ್ನು ಯಾವಾಗ ತೋರಿಸುವನು ಎ೦ದರೆ ಜೀವಿಯು ಅನುಸ೦ಧಾನಪೂರ್ವಕವಾಗಿ ಕರ್ಮಗಳನ್ನು ಮಾಡಿದಲ್ಲಿ, ತನ್ನ ಭಕ್ತರು ಏನು ಪಾಪವನ್ನು ಮಾಡಿದರೂ, ತಜ್ಜನಿತವಾದ ಪಾಪ ಫಲಗಳನ್ನು ದೈತ್ಯರಿಗೆ ವಿಭಾಗ ಮಾಡಿಕೊಟ್ಟು, ದೈತ್ಯರು ಮಾಡಿದ ಪುಣ್ಯಕರ್ಮಗಳನ್ನು ತನ್ನ ಭಕ್ತರಿಗೆ ಕೊಡುತ್ತಾನೆ. 


ಏನು ಕರುಣಾನಿಧಿಯೊ - ಭಾಗವತದಲ್ಲಿ ತಿಳಿಸಿರುವಂತೆ ಬ್ರಹ್ಮಾಂಡ ಸೃಷ್ಟಿಯಾಗುವ ಮೊದಲೇ ೨೪ ತತ್ತ್ವಗಳ ಸೃಷ್ಟಿಯಾಗಿತ್ತು.  ಆದರೆ ತತ್ತ್ವಾಭಿಮಾನಿ ದೇವತೆಗಳು ಏನೂ ಮಾಡಲಾಗದೇ, ಭಗವಂತನಿಗೆ ಶರಣುಬಂದಾಗ, ಶ್ರೀಹರಿ ತಾನೇ ಎಲ್ಲ ದೇವತೆಗಳೊಳಗೂ ನಿಂತು, ಮಾಡಿ, ತತ್ತ್ವಾಭಿಮಾನಿ ದೇವತೆಗಳಿಂದ ಮಾಡಿಸಿ, ಬ್ರಹ್ಮಾಂಡ ಸೃಷ್ಟಿಸಿದ.  ಪ್ರತಿಯೊಬ್ಬರಿಗೂ ಅವರರವ ಯೋಗ್ಯತೆಗನುಸಾರವಾಗಿ ಕರ್ಮ ಮಾಡಿಸಿ, ತಕ್ಕ ಫಲವನ್ನು ಕೊಡುವವನು.  ಸಾಧನೆಯಿಲ್ಲದೇ ಯಾವ ಫಲವೂ ಸಿಕ್ಕುವುದಿಲ್ಲ.  ಈ ಜನ್ಮದಲ್ಲಿ ಕೊಟ್ಟಿರುವ ಭೌತಿಕ ಶರೀರವನ್ನುಪಯೋಗಿಸಿಕೊಂಡು ಭಗವಂತನಿಗೆ ಶರಣಾಗಿ ಪ್ರಾರ್ಥಿಸಿಕೊಂಡಾಗ ಮಾತ್ರ ನಮಗೆ ಮುಂದಿನ ಜನ್ಮಗಳಲ್ಲೂ ಸಾಧನೆಗೆ ಅನುಕೂಲವಾಗುವಂತಹ ಉತ್ತಮ ಶರೀರ ಕೊಟ್ಟು, ಹಣ, ಸ್ಥೈರ್ಯ, ಅನುಕೂಲಕರವಾಗಿರುವ ವಾತಾವರಣ ಕೊಟ್ಟು ಸಾಧನೆ ಮಾಡಿಸಿ, ಸಾಧನೆಯ ಫಲವಾಗಿ  ಸ್ವರ್ಗ ಹಾಗೂ ಮೋಕ್ಷಗಳನ್ನು ಕರುಣಿಸುತ್ತಾನೆ.


ಏನು ಭಕ್ತಾಧೀನನೋ -  ಭಗವಂತ ಭಕ್ತರ ಅಧೀನನು.  ಜೀವಿಗಳಿಂದ ಪ್ರಾರಂಭಿಸಿ, ದೇವತೆಗಳವರೆಗೂ ಎಲ್ಲರೂ ಅವನ ಭಕ್ತರೇ.  ಎಲ್ಲರಲ್ಲೂ ಅವನೇ ಇದ್ದು ಸಾಧನೆ ಮಾಡಿಸುವನು.  ಜೀವಿಗಳನ್ನು ಹುಟ್ಟಿಸಿ, ಅವರೊಳಗೆ ಭಗವತ್ತತ್ತ್ವಗಳ ಪ್ರೇರಣೆ ಕೊಟ್ಟು, ಸಾಧನೆ ಮಾಡಿಸುವುದು ತತ್ತ್ವಾಭಿಮಾನಿ ದೇವತೆಗಳ ಕೆಲಸ, ಕರ್ತವ್ಯ.  ಇದು ತತ್ತ್ವಾಭಿಮಾನಿ ದೇವತೆಗಳಿಗೆ ಮೋಕ್ಷ ಸಾಧನೆ.  ಆದರೆ ತತ್ತ್ವಾಭಿಮಾನಿ ದೇವತೆಗಳೂ ಕೂಡ ಅಸ್ವತಂತ್ರರೇ.  ಅವರು ಭಗವಂತನಲ್ಲಿ ತಮ್ಮ ಅಶಕ್ತತೆಯನ್ನು ನಿವೇದಿಸಿಕೊಂಡರು.  ಭಾಗವತ ತೃತೀಯ ಸ್ಕಂದದಲ್ಲಿ ತಿಳಿಸಿರುವಂತೆ ದೇವತೆಗಳು ಭಗವಂತನನ್ನು "ಪ್ರಪಂಚದ ಸೃಷ್ಟಿಗಾಗಿ ನೀನು ನಮ್ಮನ್ನು ತ್ರಿಗುಣಮಯವನ್ನಾಗಿ ಸೃಷ್ಟಿಸಿದರೂ, ನಮ್ಮಲ್ಲಿ ಪರಸ್ಪರ ಸಾಮ್ಯವಿಲ್ಲ.  ಎಲ್ಲರ ಸ್ವಭಾವವೂ ಬೇರೆ ಬೇರೆಯೇ ಆಗಿದೆ.  ಆದ್ದರಿಂದ ನಾವುಗಳೆಲ್ಲರೂ ಒಟ್ಟಾಗಿ ಸೇರಿ ನಿನ್ನ ಕ್ರೀಡೆಗಾಗಿ ಲೋಕವನ್ನು ಸೃಷ್ಟಿಮಾಡಿ, ನಿನಗೆ ಅರ್ಪಿಸಲು ಅಸಮರ್ಥರಾಗಿದ್ದೇವೆ" ಎಂದು ಪ್ರಾರ್ಥಿಸಿಕೊಂಡರು.  ಭಗವಂತ ಪ್ರತೀ ತತ್ತ್ವಾಭಿಮಾನಿ ದೇವತೆಯೊಳಗೂ ತಾನು ಪ್ರವೇಶಿಸಿ, ಅವರಲ್ಲಿದ್ದ ಸುಪ್ತ ಶಕ್ತಿಯನ್ನು ಉದ್ರೇಕಿಸಿ, ಪ್ರೇರಣೆ ಕೊಟ್ಟು, ಅವರೆಲ್ಲರ ಮೂಲಕವೇ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿಸಿದ.  ಹೀಗೆ ತನ್ನ ಭಕ್ತರಾದ ದೇವತೆಗಳ ಭಕ್ತಿಗೆ ಮೆಚ್ಚಿ ಅವರೊಳಗಿದ್ದು ತಾನು ಮಾಡಿ, ಅವರಿಂದ ಸಾಧನೆ ಮಾಡಿಸುವನಾದ್ದರಿಂದಲೇ ಅವನು ಭಕ್ತಪರಾಧೀನ.   ಭಗವಂತ ತಾನೇ ಎಲ್ಲವನ್ನೂ ಮಾಡಿದರೂ ಕೂಡ ಅದರಿಂದ ಬರುವ ಪ್ರತಿಫಲಗಳನ್ನು ಆಯಾ ದೇವತೆಗಳಿಗೇ ಅವರ ಸಾಧನೆಯ ಲೆಕ್ಕಕ್ಕೆ ಸೇರಿಸಿಬಿಡುವ ಕರುಣಾಸಮುದ್ರನಾಗಿದ್ದಾನೆ.    ಬ್ರಹ್ಮಾಂಡದ ಪಾಲನೆಯಲ್ಲಿಯೂ ದೇವತೆಗಳು ಅಶಕ್ತರೆಂಬುದು ಭಾಗವತದಲ್ಲಿ ಬರುವ "ಭಕ್ತ ಅಂಬರೀಷ ರಾಜ"ನ ಕಥೆಯಿಂದ ತಿಳಿಯಬಹುದು.  ರಾಜ ಅಂಬರೀಷನಲ್ಲಿ ಅಪರಾಧ ಮಾಡಿದ ದುರ್ವಾಸರನ್ನು ವಿಷ್ಣುಚಕ್ರ ಬೆನ್ನಟ್ಟಿಕೊಂಡು ಬಂದಾಗ, ದುರ್ವಾಸರು ಎಲ್ಲಾ ಲೋಕಗಳಲ್ಲಿಯೂ ಸಂಚರಿಸಿ, ದೇವತೆಗಳನ್ನು ಪ್ರಾರ್ಥಿಸಿದರು.  ಆದರೆ ಯಾರಿಂದಲೂ ವಿಷ್ಣುಚಕ್ರ ತಡೆಯುವುದಾಗಲಿಲ್ಲ.  ಕೊನೆಗೆ ಶ್ರೀಹರಿಯ ಪಾದಗಳಿಗೆ ದುರ್ವಾಸರು ಶರಣಾಗತರಾದಾಗ, ಭಗವಂತ ವಿಷ್ಣುಚಕ್ರ ತಡೆಯುವುದು, ತನ್ನಿಂದಲೂ ಸಾಧ್ಯವಿಲ್ಲವೆಂದು ತಿಳಿಸಿದನು.  ದುರ್ವಾಸರು ಅಪರಾಧ ಮಾಡಿದ್ದ ಭಗವಂತನ ಪರಮ ಭಕ್ತನಾದ ರಾಜ ಅಂಬರೀಷನು ಮಾತ್ರವೇ ವಿಷ್ಣುಚಕ್ರವನ್ನು ತಡೆಯಬಲ್ಲವನೆಂದು ದುರ್ವಾಸರಿಗೆ ತಿಳಿಸಿ, ತನ್ನ ಭಕ್ತಾಧೀನ ಗುಣವನ್ನು ಪ್ರಕಾಶಿಸಿದ.  ಭಗವಂತ ತಾನೇ "ಅಹಂ ಭಕ್ತಪರಾಧೀನೋ ಹ್ಯಸ್ವತನ್ತ್ರ ಇವ ದ್ವಿಜ | ಸಾಧುಭಿರ್ಗ್ರಸ್ತ ಹೃದಯೋ ಭಕ್ತೈರ್ಭಕ್ತ ಜನಪ್ರಿಯಃ || - ನಾನು ಸರ್ವಥಾ ಭಕ್ತಜನರಿಗೆ ಅಧೀನನು, ನನಗೆ ಯಾವ ಸ್ವಾತಂತ್ರವೂ ಇಲ್ಲ, ನನ್ನ ಭಕ್ತರನ್ನು ಬಹಳವಾಗಿ ಪ್ರೀತಿಸುತ್ತೇನೆ ಎಂದು  ತಿಳಿಸಿದ್ದಾನೆ.


ಏನು ಈತನ ಲೀಲೆ - ಭಗವಂತ ಸುಖವಾಗಿ ತಾನಿರುವ ವೈಕುಂಠದಿಂದಲೇ ತನ್ನ ಇಚ್ಛೆಮಾತ್ರದಿಂದಲೇ ಸಕಲ ಸೃಷ್ಟಿಯನ್ನೂ ಮಾಡಬಹುದು.  ಆದರೆ ಹಾಗೆ ಮಾಡದೆ ತನ್ನ ಭಕ್ತರಾದ ಬ್ರಹ್ಮಾದಿ ದೇವತೆಗಳ ಮೂಲಕ ಸೃಷ್ಟಿಯಾದಿ ಕೆಲಸಗಳನ್ನು ಮಾಡುವನು.  ತಾನೇ ಬೇರೆ ಬೇರೆ ರೂಪಗಳಲ್ಲಿ ಎಲ್ಲಾ ದೇವತೆಗಳೊಳಗೂ ಪ್ರವೇಶಿಸಿ ಎಲ್ಲವನ್ನೂ ಮಾಡಿ ಮಾಡಿಸುತ್ತಾನೆ.  ತನಗಾಗಿ ತನ್ನ ಲೀಲೆಗಾಗಿ ಭಗವಂತ ಸೃಷ್ಟಿಯ ಕಾರ್ಯ ಮಾಡುವುದಿಲ್ಲ.  ಅವನು ಪೂರ್ಣಾನಂದನಾಗಿರುವುದರಿಂದ ಸೃಷ್ಟಿಯನ್ನು ಲೀಲೆಯಿಂದ ಮಾಡಿಬಿಡುತ್ತಾನಷ್ಟೆ. 

ಭಗವದ್ಗೀತೆಯಲ್ಲಿ ಭಗವಂತ
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ | -   ಎನ್ನುತ್ತಾ ಸರ್ವ ಜಗತ್ತಿನ ಉತ್ಪತ್ತಿಗೆ ನಾನೇ ಕಾರಣನಾಗಿದ್ದೇನೆ ಮತ್ತು ನನ್ನಿಂದಲೇ ಇಡೀ ಜಗತ್ತು ವರ್ತಿಸುತ್ತಾ ಇದೆ ಎಂದೂ
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ |
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ || - ಕಲ್ಪದ ಕೊನೆಯಲ್ಲಿ ಸರ್ವ ಜೀವಕೋಟಿಯು ನನ್ನ ಪ್ರಕೃತಿಯಲ್ಲಿ ಲೀನವಾಗುತ್ತವೆ ಹಾಗೂ ಕಲ್ಪದ ಪ್ರಾರಂಭದಲ್ಲಿ ಪುನಃ ಅವುಗಳನ್ನು ನಾನು ಸೃಷ್ಟಿಸುತ್ತೇನೆ ಎಂದೂ ತಿಳಿಸಿದ್ದಾನೆ. 
ಸಕಲವೂ ಅವನದ್ದೇ, ಎಲ್ಲಾ ಚರಾ ಚರಗಳಲ್ಲೂ ಭಗವಂತನದ್ದೇ ಅನೇಕಾನೇಕ ವಿಭೂತಿರೂಪಗಳಿವೆ ಎಂಬುದನ್ನು ತಾನೇ ತಿಳಿಸಿರುವಾಗ ಸೃಷ್ಟಿಯೆಂಬುದು ಅವನಿಗೆ ಅನಾಯಾಸ ಕಾರ್ಯ.  ಸದಾನಂದನಾಗಿ ಅವನು ನಡೆಸುವ ಲೀಲೆಯೇ ಸೃಷ್ಟಿ.  ಲೀಲೆಗಾಗಿ ಸೃಷ್ಟಿಯಲ್ಲ, ಸೃಷ್ಟಿಯೇ ಲೀಲೆ.

ಇಚ್ಛಾಮಾತ್ರದಲಿ ಜಗವ ತಾನೆ ಸೃಜಿಸುವ - ಭಗವಂತ ಏತಕ್ಕಾಗಿ ಸೃಷ್ಟಿಯನ್ನು ಮಾಡಬೇಕು ಎಂದು ವಿಚಾರ ಮಾಡಿದಾಗ,  ಜಗತ್ತನ್ನು ಸೃಜಿಸುವುದರಿಂದ ಭಗವಂತನಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.  ಸೃಷ್ಟಿ ಕಾರ್ಯ ಎಂಬ ಕ್ರೀಡೆಯಿಂದ ಅವನಿಗೆ ಯಾವ ಆನಂದವೂ ಉಂಟಾಗುವುದಿಲ್ಲ,  ಏಕೆಂದರೆ ಅವನು ಸದಾನಂದನೂ, ಪೂರ್ಣಾನಂದನೂ ಆಗಿರುವನು.  ಹಾಗಿರುವಾಗ ಈ ಸೃಷ್ಟಿಯ ಕಾರ್ಯವನ್ನು ಭಗವಂತ ತನ್ನ ಆನಂದಕ್ಕಾಗಲೀ ಅಥವಾ ಉಪಯೋಗಕ್ಕಾಗಲೀ ಮಾಡುವುದಿಲ್ಲವೆಂಬುದು ತಿಳಿಯುತ್ತದೆ. ಭಗವಂತನು ಜೀವಿಗಳ ಮೇಲಿನ ಕರುಣೆಯಿಂದ ಮತ್ತು ಜೀವಿಗಳ ಉದ್ಧಾರಕ್ಕಾಗಿಯೇ ಜಗವನ್ನು ಸೃಷ್ಟಿಸಿ, ಸಾಧನೆ ಮಾಡಲು ಅನುಕೂಲ ಮಾಡಿಕೊಡುತ್ತಾನೆ.  ಕರುಣಾಸಮುದ್ರನಾದ ಭಗವಂತ ಭಕ್ತಾಪರಾಧೀನನಾಗಿ, ಭಕ್ತರಿಗೋಸ್ಕರ ಜಗತ್ತನ್ನು ಸೃಷ್ಟಿಸಿ, ಅವರೊಳಗೆ ತಾನಿದ್ದು, ಸಾಧನೆ ಮಾಡಿಸುತ್ತಾನೆ.  ಸಾಧನೆಗೆ ಪ್ರತಿಫಲವಾಗಿ ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ಸದಾ ಆನಂದದಿಂದಿರುವಂತೆ ರಕ್ಷಿಸುತ್ತಾನೆ.  ಭಗವಂತನಿಗೆ ಸೃಷ್ಟಿ ಕಾರ್ಯ ಮಾಡುವುದರಿಂದ ಯಾವುದೇ ಆಯಾಸವೂ ಆಗುವುದಿಲ್ಲ.  ತನ್ನ ಸ್ವಾಭಾವಿಕ ಗುಣವಾದ ಆನಂದದಿಂದಲೇ ಅನಾಯಾಸವಾಗಿಯೇ ಸೃಜಿಸುತ್ತಾನೆ.  ಸಾಧನೆ ಮಾಡಿದ ಭಕ್ತರನ್ನು ನಿರ್ವಾಣ ಮೊದಲಾದ ಅಖಿಳ ಲೋಕಗಳಲ್ಲಿಟ್ಟು ಆನಂದಪಡಿಸುತ್ತಾನೆ.  ನಿರ್ವಾಣವೆಂದರೆ ಶೂನ್ಯ ಅಥವಾ ಏನೂ ಇಲ್ಲದ ಸ್ಥಿತಿ ಎಂದರ್ಥ.  ನಿರ್ವಾಣ ಲೋಕವೆಂದರೆ ’ಲಿಂಗಶರೀರ’ ಭಂಗವಾದ ನಂತರ ಸಾಧಕನು ತಲುಪುವ ಸ್ಥಳ, ಅಂದರೆ ಮೋಕ್ಷವೆಂದರ್ಥವಾಗುತ್ತದೆ.   ಅ೦ತ:ಕರಣವೆ೦ಬ ಸಮುದ್ರ ಉಳ್ಳವ ಎ೦ದರೆ ಅಪಾರ ಕಾರುಣ್ಯವುಳ್ಳವನಾದ ಭಗವ೦ತ ಎ೦ದೂ ಭಕ್ತರವಶನು. ತಾನೇ ಸೃಜಿಸಿರುವ, ಸ೦ರಕ್ಷಣೆ ಮಾಡುವ, ಜಗತ್ತಿನಲ್ಲಿ ಮಾತ್ರವಲ್ಲದೆ, ಪ್ರಳಯಕಾಲದಲ್ಲಿ, ಲಿ೦ಗಭ೦ಗ ಉ೦ಟಾದ ಜೀವರನ್ನು ಶ್ವೇತದ್ವೀಪ, ಅನ೦ತಾಸನ, ವೈಕು೦ಠಾದಿ ಲೋಕಗಳಲ್ಲಿಯೂ ಆವಾಸರನ್ನಾಗಿ ಮಾಡಿ ಸ್ವರೂಪಾನ೦ದವನ್ನು ಪಡಿಸುವವನು ಎ೦ದು ಜಗನ್ನಾಥ ದಾಸರು ತಿಳಿಸುತ್ತಾರೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ :


ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣ

ತಾ ನಮ್ಮನಗಲಿ ಸೈರಿ-ಸ | ಸೈರಿಸದ ಕರುಣಿಯ
ನಾನೆಂತು ತುತಿಸಿ ಹಿಗ್ಗ-ಲಿ || - ಶ್ರೀಮಹಾಲಕ್ಷ್ಮೀ ರಮಣನೂ, ಅಪಾರ ಕರುಣಾಸಮುದ್ರನೂ ಆದ ಭಗವಂತ ಭಕ್ತರನ್ನು ಅಗಲಿ ಇರುವುದಿಲ್ಲ.  ಅವನು ಅಗಲಿಕೆಯನ್ನು ಸಹಿಸುವುದಿಲ್ಲ.  ಅಂತಹ ಸರ್ವ ಶ್ರೇಷ್ಟನಾದ ಭಗವಂತನನ್ನು ಎಷ್ಟು ವಿಧವಾಗಿ ಸ್ತುತಿಸಿದರೂ ಸಾಕಾಗುವುದಿಲ್ಲವೆಂದು ಭಗವಂತನ ಕರುಣೆಯ ಬಗ್ಗೆ ತಿಳಿಸಿದ್ದಾರೆ.

ಸರ್ವಸ್ವತಂತ್ರ ನೀನೋರ್ವನಲ್ಲದೆ ಮ

ತ್ತೋರ್ವನಿನ್ನುಂಟೇ ಜಗದೊಳು | ಜಗದೊಳಗಜಾದಿಗಳು
ದರ್ವಿಯಂದದಲಿ ಚರಿಸೋರು || - ಭಗವಂತನೊಬ್ಬನೇ ಸರ್ವ ಸ್ವತಂತ್ರನು, ಯಾರ ಅಧೀನನೂ ಅಲ್ಲದವನು.  ಎಲ್ಲವನ್ನೂ ನಿಯಂತ್ರಿಸುವವನು.  ಬ್ರಹ್ಮಾದಿ ದೇವತೆಗಳೂ ಮತ್ತು ಸಕಲ ಜೀವಿಗಳೂ ಜಡ ಉಪಕರಣವಾದ ’ಸೌಟು’ ಇದ್ದಂತೆ.  ಅಡುಗೆ ಬಡಿಸಲು ಉಪಯೋಗಿಸಿದರೆ ಮಾತ್ರ ಉಪಯೋಗವಾಗುವುದು ಸೌಟು.  ಹಾಗೇ ಬ್ರಹ್ಮಾದಿ ದೇವತೆಗಳೊಳಗೆ ನೀನಿದ್ದು ಸರ್ವ ಕಾರ್ಯಗಳನ್ನೂ ಮಾಡಿಸುವೆ ಎಂದಿದ್ದಾರೆ. 

ಏನು ಮಾಡುವ ಕರ್ಮ ನೀನೆ ಮಾಡಿಪೆ ಎಂಬ

ಜ್ಞಾನವೇ ಎನಗೆ ಜಿತವಾಗಿ | ಜಿತವಾಗಿ ಇರಲಿ ಮ-
ತ್ತೇನು ನಾನೊಲ್ಲೆ ನಿನ್ನಾಣೆ || - ಅಸ್ವತಂತ್ರನಾದ ನಾನು ಏನನ್ನೂ ಮಾಡಲಾರೆ.  ನಾನು ಮಾಡುವ ಎಲ್ಲಾ ಕಾರ್ಯಗಳನ್ನೂ ನನ್ನೊಳಗೆ  ಭಗವಂತ ನೀನು ನಿಂತು ಮಾಡಿ ಮಾಡಿಸುವೆ ಎಂಬ ಅರಿವು, ಜ್ಞಾನ ಮಾತ್ರ, ಯಾವ ಸಂಶಯವೂ ಇಲ್ಲದೆ ನನ್ನಲ್ಲಿ ಸ್ಥಿರವಾಗಿ ನಿಲ್ಲಲಿ.  ನಾನು ಸತ್ಯವಾಗಿಯೂ ಇನ್ನೇನನ್ನೂ ಬಯಸುವುದಿಲ್ಲ ಎಂದಿದ್ದಾರೆ.

ಗುಣಕಾಲ ಕರ್ಮಗಳ ಮನೆಮಾಡಿ ಜೀವರಿಗೆ

ಉಣಿಸುವಿ ನೀನೇ ಸುಖದುಃಖ | ಸುಖದುಃಖ ಮಿಶ್ರಫಲ
ಉಣದೆ ಸರ್ವತ್ರ ಬೆಳಗುವೆ || -  ಸತ್ವ ರಜಸ್ತಮೋ ಗುಣಗಳ, ಕಾಲ ಮತ್ತು ಕರ್ಮಗಳೆಂಬ ಮನೆಯನ್ನು ವಾಸಸ್ಥಾನವನ್ನಾಗಿ ಮಾಡಿ, ಸಂಸಾರಿಗಳಾದ ಜೀವಿಗಳನ್ನು ಬಂಧನಕ್ಕೆ ಒಳಪಡಿಸುತ್ತಾನೆ.  ಈ ಮನೆಗೆ ಭಗವಂತ ತಾನೇ ನಿಯಾಮಕನಾಗಿ ಜೀವಿಗಳಿಗೆ ಸುಖದುಃಖಗಳನ್ನು ಉಣಿಸುತ್ತಾನೆ.  ಭಗವಂತನು ತಾನು ಏನನ್ನೂ ಭೋಗಿಸದೆ ಎಲ್ಲೆಲ್ಲಿಯೂ ವಿರಾಜಮಾನನಾಗಿ ಬೆಳಗುತ್ತಾನೆ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ

ಶಶ್ವದ್ವಿಕಾಸನ ಹ್ರಾಸನ ಕ್ರಮಗಳಿಂ |
ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||
ಸ್ವಸ್ವರೂಪವನರಸುವಾಟ ಪರಚೇತನದ |
ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ || -  ಶಾಶ್ವತವಾದದ್ದು  (ಭಗವಂತ) ತನ್ನ ಆನಂದಕ್ಕೋಸ್ಕರ ವಿಕಾಸಗೊಂಡು ಪ್ರಪಂಚವಾಗಿ ಅರಳಿ, ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನ ಉದರದೊಳಗೆ ಸೇರಿಸಿಕೊಂಡು ವಿಶ್ವದಲ್ಲಿ ತನ್ನ ಪೌರುಷೋನ್ನತಿಯಿಂದ ನರ್ತನ ಮಾಡುತ್ತಿದೆ.   ತನ್ನದೇ ಶಕ್ತಿಯಾದ ಪ್ರಕೃತಿಯ ಮೂಲಕ ಲೀಲೆಗಳನ್ನು ಮಾಡುತ್ತಿದೆ.  ಈ ವಿಸ್ಮಯದ ಹಿಂದೆ ಅಡಗಿರುವ ತನ್ನ ನಿಜವಾದ ಸ್ವರೂಪವನ್ನು ಹುಡುಕಲಿಯೆಂದೇ ಆ ಪರ ಚೇತನದ (ಭಗವಂತನ) ಆಟ.  ಇದು ಪರಮಪುರುಷನ ಹೃಷ್ಯದ್ವಿಲಾಸ, ಅಂದರೆ ಆನಂದದ ವಿಲಾಸ.

ಪುರುಷಂ ಸ್ವತಂತ್ರನೋ ? ದೈವವಿಧಿ ಪರವಶನೊ? |

ಎರಡುಮನಿತಿನಿತುಳ್ಳ ತೋಳಿನಂತಿಹನೋ ? ||
ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |
ನರನಂತು ಮಿತಶಕ್ತ - ಮಂಕುತಿಮ್ಮ || - ಮನುಷ್ಯನು ಮಾಡುವ ಧರ್ಮ/ಕರ್ಮಗಳಲ್ಲಿ ಅವನು ಎಷ್ಟು ಸ್ವತಂತ್ರ ?  ದೈವವೇ ಮನುಷ್ಯನಿಂದ ಕರ್ಮಗಳನ್ನು ಮಾಡಿಸುತ್ತದೆ.  ಮನುಷ್ಯ ಅಸ್ವತಂತ್ರನು.  ಅವನ ಶಕ್ತಿ, ಪರಿಧಿಯೆಲ್ಲಾ ಭೌತಿಕ ದೇಹದವರೆಗೆ ಮಾತ್ರ.  ಮನುಷ್ಯ ತನ್ನ ಒಂದು ತೋಳನ್ನು ತನ್ನ ದೇಹದ ಕಟ್ಟಿನ ಪರಿಧಿಯಲ್ಲಿ ಮಾತ್ರ ತಿರುಗಿಸಬಹುದು, ಮಡಿಸಬಹುದು.  ಅದಕ್ಕಿಂತ ಆಚೆಗೆ ತೋಳನ್ನೇ ತೆಗೆಯುವುದಕ್ಕಾಗುವುದಿಲ್ಲ.  ತೋಳಿನ ಆಟ ದೇಹದ ಕಟ್ಟಿನ ಹಿಡಿತ ಬಿಟ್ಟು ನಡೆಯುವುದಿಲ್ಲ.  ತೋಳಿಗೆ ಭುಜದ ಕಡೆಯಿಂದ ನಿರ್ಬಂಧವಿದೆ, ಬೆರಳಿನ ಕಡೆಯಿಂದ ಸ್ವಾತಂತ್ರ್ಯವಿದೆ.  ಮನುಷ್ಯ ಆಕಾಶದಲ್ಲಿ ಎಷ್ಟು ಹಾರಾಡಿದರೂ ಭೂಮಿಯ ಆಕರ್ಷಣಾ ಶಕ್ತಿಯಿಂದ ನಿರ್ಬಂಧಿತನಾಗಿದ್ದಾನೆ.  ಆದರೆ  ಆಕಾಶಕ್ಕೆ ನೆಗೆಯುವುದಕ್ಕೂ ಮತ್ತು ಭೂಮಿಯ ಮೇಲೆ ಸಂಚರಿಸುವುದಕ್ಕೂ ಅವನು ಸ್ವತಂತ್ರನು.  ಇಷ್ಟು ಸ್ವಾತಂತ್ರ್ಯ ಕೂಡ ಭಗವಂತನ ಅಸೀಮ ಕರುಣೆಯಲ್ಲದೆ ಬೇರೇನೂ ಅಲ್ಲ.  ಇದೇ ಪರಮಪುರುಷನ ಸೀಮಾತೀತವಿಲ್ಲದ ಸ್ವಾತಂತ್ರ್ಯ ಹಾಗೂ ಮನುಷ್ಯನಿಗಿರುವ ಅಸ್ವತಂತ್ರತೆ ಅಥವಾ ನಿರ್ಬಂಧತೆ.
 ಚಿತ್ರಕೃಪೆ : ಅಂತರ್ಜಾಲ

Wednesday, January 29, 2014

ಕರುಣಾ ಸಂಧಿ - ೧೫ ನೇ ಪದ್ಯ



ಸ್ಮರಿಸುವವರಪರಾಧಗಳ ತಾ
ಸ್ಮರಿಸ ಸಕಲೇಷ್ಟಪ್ರದಾಯಕ
ಮರಳಿ ತನಗರ್ಪಿಸಲು ಕೊಟ್ಟುದನಂತಮಡಿ ಮಾಡಿ |
ಪರಿಪರಿಯಲುಂಡುಣಿಸಿ ಸುಖಸಾ
ಗರದಿ ಲೋಲಾಡಿಸುವ ಮಂಗಳ
ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ||೧೫||


ಪ್ರತಿಪದಾರ್ಥ : ಸ್ಮರಿಸುವವರ - ಯಾರು ಭಗವಂತನ ಸ್ಮರಣೆಯನ್ನು ಸದಾ ಸರ್ವದಾ ಮಾಡುವರೋ ಅವರ, ಅಪರಾಧಗಳ - ಅಂತಹ ಭಕ್ತರು ಮಾಡುವ ತಪ್ಪುಗಳನ್ನು, ತಾ ಸ್ಮರಿಸ - ಲಕ್ಷ್ಯಕ್ಕೆ ತೆಗೆದುಕೊಳ್ಳುವವನಲ್ಲ, ಸಕಲೇಷ್ಟಪ್ರದಾಯಕ - ಅಂತಹ ತನ್ನ ಭಕ್ತರ ಸಮಸ್ತ ಕೋರಿಕೆಗಳನ್ನೂ ನೆರವೇರಿಸುವನು, ಮರಳಿ ತನಗರ್ಪಿಸಲು - ಸರ್ವಕ್ಕೂ ಒಡೆಯನು ಭಗವಂತನೇ ಅವನಿಂದಲೇ ಇದು ತನಗೆ ಸಿಕ್ಕಿರುವುದೆಂಬ ಮನೋಭಾವದಿಂದ ಪುನಃ ಅವನಿಗೇ ಅರ್ಪಿಸಿದರೆ, ಕೊಟ್ಟುದನಂತಮಡಿ ಮಾಡಿ - ಭಕ್ತರು ತನಗೆ ಒಪ್ಪಿಸಿದ್ದನ್ನು ಅವರು ಕೊಟ್ಟಿದ್ದಕ್ಕಿಂತ ಅನೇಕ ಪಟ್ಟುಗಳಷ್ಟು ಹೆಚ್ಚಿಸಿ, ಪರಿಪರಿಯಲುಂಡುಣಿಸಿ - ಜ್ಞಾನಾನಂದಾದಿ ಫಲಗಳನ್ನು ಕೊಡುವನು ವಿವಿಧ ಬಗೆಗಳಲ್ಲಿ ತಾನೂ ಉಂಡು ಭಕ್ತರಿಗೂ ಉಣಿಸುವನು, ಸುಖಸಾಗರದಲಿ - ಐಶ್ವರ್ಯ ಭೋಗಗಳನ್ನಿತ್ತು ಸುಖ ಸಾಗರದಲ್ಲಿ, ಓಲಾಡಿಸುವ - ತೇಲುವಂತೆ ಮಾಡುವನು ಹೊರಳಾಡಿಸುವನು,  ಮಂಗಳಚರಿತ - ಮಂಗಳಮಯವಾದ ಚಾರಿತ್ರ್ಯವನ್ನು ಉಳ್ಳವನು ಲವಲೇಶವೂ ದುಃಖವಿಲ್ಲದವನು, ಚಿನ್ಮಯ ಗಾತ್ರ - ಸಚ್ಚಿದಾನಂದ ಶರೀರವುಳ್ಳವನು, ಲೋಕ ಪವಿತ್ರ - ಪವಿತ್ರವಾದ ಲಿಂಗ ದೇಹವನ್ನು ಭಂಗಗೊಳಿಸಿ ಪವಿತ್ರ ಮಾಡುವವನು, ಸುಚರಿತ್ರ - ಸಜ್ಜನರ ಸಾತ್ವಿಕರನ್ನು ರಕ್ಷಿಸುವಂತಹ ಒಳ್ಳೆಯ ಚರಿತ್ರೆಯುಳ್ಳವನು.

ಭಗವಂತನನ್ನು ನಾವು ಭಕ್ತಿಯಿಂದ ಸ್ಮರಿಸಿದಾಗ, ಅವನು ನಮ್ಮನ್ನು ಸ್ಮರಿಸುತ್ತಾನೆ.  ಆದರೆ ನಮ್ಮ ಅಪರಾಧಗಳನ್ನು ಸ್ಮರಿಸುವುದಿಲ್ಲ, ಕ್ಷಮಿಸಿ ಬಿಡುತ್ತಾನೆ.  ದೇವೇಂದ್ರನು ಕೃಷ್ಣನನ್ನು ಗೊಲ್ಲನೆಂದು ತಿಳಿದು ಅಪರಾಧ ಮಾಡಿದ್ದಾನೆ.  ಮಳೆಗಾಗಿ ತನ್ನನ್ನು ಪೂಜಿಸಲಿಲ್ಲವೆಂದು ಮುಸಲಧಾರೆಯನ್ನುಂಟುಮಾಡಿ ಶ್ರೀಕೃಷ್ಣ ಮತ್ತು ಅವನ ಭಕ್ತರಿಗೆ ಅಪರಾಧ ಮಾಡಿದ್ದಾನೆ.  ಆದರೆ ಅದನ್ನು ತಿಳಿದು ಕೃಷ್ಣನಲ್ಲಿ ಕ್ಷಮೆ ಯಾಚಿಸಿದಾಗ, ಕೃಷ್ಣ ಅವನನ್ನು ಕ್ಷಮಿಸಿದ್ದಾನೆ.  ಇನ್ನು ಭೃಗು ಮುನಿಗಳು ವೈಕುಂಠಕ್ಕೆ ಬಂದಾಗ ವೈಕುಂಠನಾಥ ಪರಮಾತ್ಮ ಎದ್ದು ತಮ್ಮನ್ನು ಆದರಿಸಲಿಲ್ಲವೆಂದು ಪರಮಾತ್ಮನಿಗೆ ಅಪರಾಧ ಮಾಡಿದ್ದಾರೆ.  ಆದರೆ ವೈಕುಂಠಪತಿಯನ್ನು ಅವರು ಕ್ಷಮೆ ಕೋರಿದಾಗ ಅವರಿಗಾಗಿ, ಧರೆಗಿಳಿದುಬಂದು ತಿರುಪತಿ ತಿಮ್ಮಪ್ಪನೆಂದು ಬೇಡಿದ್ದನ್ನು ಕೊಡುವವನೆಂಬ ಖ್ಯಾತಿಗೆ ಒಳಗಾಗಿದ್ದಾನೆ.  ಹೀಗೆ ಮಂಗಳಚರಿತ, ಚಿನ್ಮಯಗಾತ್ರ, ಲೋಕಪವಿತ್ರ, ಸುಚರಿತ್ರನಾದ ಭಗವಂತ ಸ್ಮರಿಸುವವರ ಅಪರಾಧಗಳನ್ನು ಸ್ಮರಿಸದೆ, ಸಕಲೇಷ್ಟಪ್ರದಾಯಕನಾಗಿ ಪ್ರಸಿದ್ಧಿಗೊಂಡಿದ್ದಾನೆ.

ಭಕ್ತಿಯೆಂದರೆ ನನ್ನಿಂದ ಭಗವಂತ ಸಾಧನೆ ಮಾಡಿಸುತ್ತಿದ್ದಾನೆಂಬ ಅರಿವು ಬರುವುದೇ ಆಗಿದೆ.  ಭಕ್ತರು ಭಗವಂತ ಕರುಣೆಯಿಂದ  ಕೊಟ್ಟಿರುವುದನ್ನೇ, ಮರಳಿ ಅವನಿಗೆ ಸಮರ್ಪಣೆ ಮಾಡಿದರೂ ಕೂಡ ಅವನು ಭಕ್ತರ  ಅಪರಾಧಗಳನ್ನು ಸ್ಮರಿಸುವುದಿಲ್ಲ.  ನಾವು ಕೊಟ್ಟಿದ್ದನ್ನೇ ಮತ್ತೆ ಅನಂತಮಡಿ ಮಾಡಿ, ವಿಧವಿಧವಾಗಿ ತಾನು ಉಂಡು, ನಮಗೇ ಉಣಿಸುತ್ತಾನೆ.  ಸುಖ ಭೋಗಗಳನ್ನು ಕೊಟ್ಟು ಓಲಾಡಿಸುತ್ತಾನೆ.  ಸಕಲಾರ್ಥಗಳನ್ನೂ ಕೊಟ್ಟು ರಕ್ಷಿಸುತ್ತಾನೆ.  ಭಕ್ತರು ಪೂಜೆ ಮಾಡುವಾಗ ಮಾಡುವ ಅನೇಕ ಅಪರಾಧಗಳನ್ನು ಕ್ಷಮಿಸುತ್ತಾನೆ.  ಹೂವು ತಂದು ತೊಳೆಯದೇ ಸಮರ್ಪಿಸುತ್ತೇವೆ, ತುಳಸಿಯನ್ನು ತೊಳೆದು ಸಮರ್ಪಿಸುತ್ತೇವೆ, ಪೂಜೋಪಕರಣಗಳಿಗೆ ಪಾದ ಸ್ಪರ್ಶ ಮಾಡಿಬಿಟ್ಟಿರುತ್ತೇವೆ, ಕಪ್ಪು ಬಣ್ಣದ ಬಟ್ಟೆ ತೊಟ್ಟಿರುತ್ತೇವೆ, ಒದ್ದೆ ಬಟ್ಟೆ ಉಟ್ಟು ಪೂಜಾ ವಿಧಿಗಳನ್ನು ಮಾಡಿರುತ್ತೇವೆ.  ಹೀಗೆ ನಾವು ಮಾಡುವ ಅನಂತ ಅಪರಾಧಗಳನ್ನು ಸ್ಮರಿಸದೆ, ಶುದ್ಧ ಮನಸ್ಸು, ಭಕ್ತಿಯಿಂದ ಮಾಡಿದ ಪೂಜೆಯನ್ನು ಸಕಲೇಷ್ಟಪ್ರದಾಯಕನಾಗಿ ಭಗವಂತನು ಸ್ವೀಕರಿಸುತ್ತಾನೆ.  ಶ್ರೀಮಧಾಚಾರ್ಯರು ಸದಾಚಾರ ಸ್ಮೃತಿಯಲ್ಲಿ ತಿಳಿಸಿರುವ ಮುಖ್ಯ ಸಂದೇಶವೇ "ಭಗವಂತನ ವಿಸ್ಮರಣೆ".  ಯಾವಾಗ ನಾವು ಭಗವಂತನ ಆದೇಶಗಳನ್ನು ಪಾಲಿಸುವುದಿಲ್ಲವೋ, ಆಗ ’ವಿಸ್ಮರಣೆ’ಯಾಗುತ್ತದೆ.  ಈ ವಿಸ್ಮರಣೆಗೆ ಪ್ರಾಯಶ್ಚಿತ್ತವೆಂದರೆ ನಿರಂತರ ಭಗವಂತನ "ಸ್ಮರಣೆ’ ಮಾಡುವುದು ಎಂದಿದ್ದಾರೆ.


ಸ್ಮರಿಸುವವರಪರಾಧಗಳ ತಾ ಸ್ಮರಿಸ - ನಮಗೆ ತಂದೆ-ತಾಯಿಯಾಗಿ ಜೋಪಾನ ಮಾಡುವ ಭಗವಂತನನ್ನು ಸ್ಮರಿಸದಿರುವುದೇ ಮಹಾಪರಾಧವಾಗುತ್ತದೆ.  ನಮ್ಮೊಳಗೂ ತಾನು ಅನೇಕ ವಿಭೂತಿರೂಪಗಳಲ್ಲಿದ್ದು ಸರ್ವ ಕಾರ್ಯಗಳನ್ನೂ ಮಾಡಿ, ನಮ್ಮಿಂದ ಮಾಡಿಸುತ್ತಾನೆ.  ನಮ್ಮ ಹೊರಗೂ ಇದ್ದು ನಮ್ಮನ್ನು ಕರುಣೆಯಿಂದ ರಕ್ಷಿಸುತ್ತಾನೆ.  ನಮಗೆ ಸುಖ, ಭೋಗಗಳನ್ನು ಕೊಟ್ಟು ಸಂತೋಷ ಪಡಿಸುತ್ತಾನೆ, ಮೋಕ್ಷ ಸಾಧನೆಯನ್ನೂ ಮಾಡಿಸುತ್ತಾನೆ.  ತಂದೆ ಹೇಗೆ ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ತನ್ನ ಮಗುವನ್ನು ಅತೀ ಜತನದಿಂದಲೂ, ಅಕ್ಕರೆಯಿಂದಲೂ ಕಾಪಾಡುತ್ತಾನೋ ಹಾಗೆ ಭಗವಂತ ತನ್ನ ಮಕ್ಕಳಾದ ನಮ್ಮನ್ನು ಯಾವ ಪ್ರತಿಫಲಾಪೇಕ್ಷೆಯನ್ನೂ ಬಯಸದೆ ರಕ್ಷಿಸುತ್ತಾನೆ.  ಮಕ್ಕಳಾದ ನಾವು ಅವನನ್ನು ಮರೆಯುವುದೆಂದರೆ ಅದು ಘೋರ ಅಪರಾಧ ಮಾಡಿದಂತೆ.  ಭಕ್ತರು ಭಗವಂತನ ಉಪಕಾರವನ್ನು ಸ್ಮರಿಸಿದರೆ ಸಾಕು, ಅವನು ಪ್ರಸನ್ನನಾಗಿ ಎಲ್ಲಾ ಅಪರಾಧಗಳನ್ನೂ ಮರೆತುಬಿಡುತ್ತಾನೆ.  ಶುದ್ಧ ಮನಸ್ಸಿನಿಂದ ಸ್ಮರಿಸಿ ನಾವು ಏನನ್ನು ಕೊಟ್ಟರೂ ಭಗವಂತ ಅದನ್ನು ಅನಂತಮಡಿ ಮಾಡಿ ಸ್ವೀಕರಿಸುತ್ತಾನೆ.  ಒಂದೇ ಒಂದು ಉದ್ಧರಣೆ ನೀರನ್ನು ಸಮರ್ಪಿಸಿದರೂ ಕೂಡ ಅದನ್ನೇ ಮಹಾನೈವೇದ್ಯವೆಂದು ಸ್ವೀಕರಿಸಿ ಸಲಹುತ್ತಾನೆ. 


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು :

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ || -  ಯಾವ ಭಕ್ತನು ಪತ್ರ, ಪುಷ್ಪ, ಫಲ, ಜಲ ಇತ್ಯಾದಿಗಳನ್ನು ಭಕ್ತಿಯಿಂದ ನನಗೆ ಸಮರ್ಪಿಸುತ್ತಾನೋ, ಆ ಶುದ್ಧ ಬುದ್ಧಿಯುಳ್ಳ ನಿಷ್ಮಾಮ ಪ್ರೇಮೀ ಭಕ್ತನು ಭಕ್ತಿಯಿಂದ ಅರ್ಪಿಸಿದ ಆ ಪತ್ರ ಪುಷ್ಪಾದಿಗಳನ್ನು ನಾನು ಸಗುಣರೂಪದಿಂದ ಪ್ರಕಟನಾಗಿ ಪ್ರೀತಿಯಿಂದ ತಿಂದುಬಿಡುವೆನೆಂದಿದ್ದಾನೆ.

ಅನನ್ಯ ಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ |

ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ || - ಯಾರು ಅನನ್ಯ ಚಿತ್ತನಾಗಿ ನನ್ನನ್ನು ಸದಾಕಾಲ ಸ್ಮರಿಸುತ್ತಾ ನಿತ್ಯ  ನಿರಂತರ ಧ್ಯಾನಿಸುವರೋ ಅವರಿಗೆ ನಾನು ಸುಲಭವಾಗಿ ಪ್ರಾಪ್ತವಾಗುತ್ತೇನೆ ಎಂದಿದ್ದಾನೆ. ಪ್ರತಿಯೊಂದು ರೀತಿಯ ಅಪರಾಧಗಳಿಗೂ ಒಂದು ಪ್ರಾಯಶ್ಚಿತ್ತವಿದೆ.  ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ, ಭಗವದ್ಗೀತೆಯ ಒಂದು ಅಧ್ಯಾಯ ಪಠಣ ಮಾಡುತ್ತೇವೆ.  "ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ ರಮಾಪತೇ | ಯತ್ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ" ಎಂದು ನಾವು ಮಾಡಿದ ಮಂತ್ರಲೋಪ, ವರ್ಣಲೋಪ ದೋಷಗಳನ್ನು ಸರಿಪಡಿಸೆಂದು ಕೋರುತ್ತಾ, "ಅಚ್ಯುತ, ಅನಂತ, ಗೋವಿಂದ" ನಾಮತ್ರಯ ಸ್ಮರಣೆ ಮಾಡುವುದು ನಮ್ಮ ಶತಾಪರಾಧಗಳಿಗೆ ಪ್ರಾಯಶ್ಚಿತ್ತವಾಗುತ್ತದೆ.  ನಾಮಸ್ಮರಣೆ ಅತ್ಯಂತ ಶ್ರೇಷ್ಠ ಹಾಗೂ ಸಾಮರ್ಥ್ಯವುಳ್ಳದ್ದು.  ದೇವತೆಗಳೂ ಕೂಡ ಕೆಲವೊಮ್ಮೆ ಅಸುರಾವೇಶದಿಂದ ಅಪರಾಧ ಮಾಡುತ್ತಾರೆ.  ಕೃಷ್ಣನನ್ನು ವಿರೋಧಿಸಿ  ಇಂದ್ರದೇವ ಅಪರಾಧ ಮಾಡಿದ ಆದರೆ ಗೋವರ್ಧನೋದ್ಧಾರನಾದ ಭಗವಂತನನ್ನು ಕಂಡು ಪಶ್ಚಾತ್ತಾಪದಿಂದ ನಾಮ ಸ್ಮರಣೆ ಮಾಡಿ, ಭಗವಂತನನ್ನು ಒಲಿಸಿಕೊಂಡು, ಅಪರಾಧದಿಂದ ಮುಕ್ತನಾದ.  ಜೊತೆಗೇ ತನ್ನ ಮಗನಾದ ಅರ್ಜುನನನ್ನು ಸದಾ ಕಾಪಾಡುವ ವರವನ್ನೂ ಪಡೆದುಕೊಂಡ.  ಜಗನ್ನಾಥ ದಾಸರು ತಮ್ಮ "ಇದು ನಿನಗೆ ಧರ್ಮವೇ ಇಂದಿರೇಶ" ಎಂಬ ಕೃತಿಯಲ್ಲಿ ಶರಣಾಗತ ರಕ್ಷಕನಾದ ನೀನು  ಕ್ಷಣಕನಂತಪರಾಧವೆಣಿಸದೆ ನನ್ನ ಬಿನ್ನಹ ಸ್ವೀಕರಿಸಿ ಉದ್ಧರಿಸು ಎಂದಿದ್ದಾರೆ.  "ನಿನ್ನ ಪೋಲುವ ಕರುಣಿಗಳನಾರ ಕಾಣೆ ಪ್ರಪನ್ನ ತಾ ಪಾಪಹರನೇ" ಎಂಬ ಕೃತಿಯಲ್ಲಿ "ಸದ್ಧರ್ಮ ತೊರೆದು ಮರೆದು" ಬಿದ್ದಿರುವ ಎನ್ನಪರಾಧಗಳ ಎಣಿಸದಿರು ಅಜಭವಶರಣ್ಯ ಪರಿಪೂರ್ಣೇಂದಿರಾಗಾರ ಎಂದು ಬೇಡಿದ್ದಾರೆ.  ಕರುಣಾಳುಗಳಿಗೇ ದೊರೆಯಾದ ಭಗವಂತನನ್ನು ಸದಾ "ಸ್ಮರಿಸು ಸಂತತ ಹರಿಯನು ಮನವೇ" ಎನ್ನುತ್ತಾ ಅಂತರಂಗಕ್ಕೆ ತಾನು ಮಾಡಬೇಕಾಗಿರುವ ಒಂದೇ ಒಂದು ಕೆಲಸವನ್ನು ನೆನಪು ಮಾಡಿಕೊಟ್ಟಿದ್ದಾರೆ.  ಹೀಗೆ ಸದಾ ಸ್ಮರಿಸುತ್ತಿರುವ ಭಕ್ತರನ್ನು ಅಪರಾಧಗಳೆಣಿಸದಲೇ ಪೊರೆಯುವವನೇ ಪರಮ ಕರುಣಾಳು ಶ್ರೀಹರಿ.  ಸದಾ ಮಾಡುವ ಸ್ಮರಣೆಯಿಂದ ಭಗವಂತನಿಗೇನೂ ಆಗಬೇಕಿಲ್ಲ, ಆದರೆ ಸ್ಮರಿಸುವ ಭಕ್ತರು ಮಾತ್ರ ಸದಾ ಆನಂದದಿಂದಿರುವ ಉತ್ತಮ ಅವಕಾಶ ಪಡೆದುಕೊಳ್ಳುತ್ತಾರೆ.

ಸಕಲೇಷ್ಟಪ್ರದಾಯಕ - ಸಕಲ ಇಷ್ಟಾರ್ಥಗಳನ್ನೂ ಕರುಣಿಸುವವನು.  ಭಕ್ತರು ತನ್ನನ್ನು ಮರೆತು ಸ್ಮರಿಸದೇ ಇದ್ದಾಗ ಕೂಡ ಭಗವಂತ ಅವರ ಮೇಲಿನ ಕರುಣೆಯಿಂದಲೇ, ಪ್ರೇಮದಿಂದಲೇ ಅವರ ಅಪರಾಧಕ್ಕೆ ಸಿಟ್ಟಾಗುತ್ತಾನೆ.  ಆದರೆ ತನ್ನ ಭಕ್ತರನ್ನೆಂದಿಗೂ ಕೈಬಿಡುವುದಿಲ್ಲ.  ಅವರನ್ನು ಶಿಕ್ಷಿಸಿ, ಸರಿದಾರಿಗೆ ತರುತ್ತಾನೆ.  ಮಕ್ಕಳು ತಪ್ಪು ಮಾಡಿದಾಗ ಕೆಲವೊಮ್ಮೆ ತಾಯಿಯಿಂದ ಪೆಟ್ಟು ತಿನ್ನುತ್ತವೆ.  ಆದರೆ ಪೆಟ್ಟು ತಿಂದು ಅಳಲು ಪ್ರಾರಂಭಿಸಿದ ಮಗುವನ್ನು ತಾಯಿ ಎದೆಗವಚಿಕೊಂಡು ಮುದ್ದಿಸುತ್ತಾಳೆ.  ಹಾಗೇ ಭಕ್ತರು ಕೂಡ ತಾವು ಮಾಡಿದ ಅಪರಾಧದಿಂದ ಪಶ್ಚಾತ್ತಾಪಗೊಂಡು, ಶರಣಾಗತರಾಗಿ ಸ್ಮರಿಸಿದಾಗ ಅತಿಶಯವಾದ ಅಕ್ಕರೆಯಿಂದ ಅವರು ಬೇಡಿದ ಎಲ್ಲಾ ಇಷ್ಟಾರ್ಥಗಳನ್ನೂ ಕೊಟ್ಟು ’ಸಕಲೇಷ್ಟಪ್ರದಾಯಕ’ನಾಗುತ್ತಾನೆ.  


ಮರಳಿ ತನಗರ್ಪಿಸಲು - ನಮದೆನ್ನುವುದೇನೂ ಇಲ್ಲ ಎಲ್ಲವೂ ಭಗವಂತನದೇ, ಎಲ್ಲಕ್ಕೂ ಒಡೆಯನು ಅವನೇ.  ಹಾಗೆ ಅವನು ನಮಗೆ, ನಮ್ಮ ಸುಖಕ್ಕೆ ಕೊಟ್ಟಿರುವುದನ್ನೇ ನಾವು ಮರಳಿ ಅವನಿಗರ್ಪಿಸಿದರೆ ಅವನು ತನ್ನದೇ ವಸ್ತುವನ್ನು ತನಗೇ ಮರಳಿ ಕೊಟ್ಟಿದ್ದಾರೆಂದು ನಮ್ಮ ಅಪರಾಧವನ್ನು ಸ್ಮರಿಸುವುದಿಲ್ಲ.  ತನಗೆ ಶುದ್ಧ ಭಕ್ತಿಯಿಂದ ಸಮರ್ಪಿಸಿದಾಗ ಅದನ್ನು ಸ್ವೀಕರಿಸಿ, ನಮಗೆ ಸಕಲ ಇಷ್ಟಾರ್ಥಗಳನ್ನೂ ಕೊಡುತ್ತಾನೆ.  ಭಗವಂತನಿಂದ ಪಡೆದುದನ್ನೇ ನಾವು ಮರಳಿ ಅವನಿಗೆ ಸಮರ್ಪಿಸುವುದೇ ಮೋಕ್ಷ ಸಾಧನೆಯಾಗುತ್ತದೆ.  ನಾವೆಷ್ಟೇ ಅಲ್ಪವಾದುದನ್ನು ಕೊಟ್ಟರೂ ಅವನೆಂದೂ ಅದನ್ನು ಉಪೇಕ್ಷೆ ಮಾಡುವುದಿಲ್ಲ.  ಶುದ್ಧ ಭಕ್ತಿಯಿಂದಾದ ಸಮರ್ಪಣೆಯನ್ನು ಸ್ವೀಕರಿಸಿ ಅದನ್ನು ಅನಂತಮಡಿ ಮಾಡಿ ಮತ್ತೆ ನಮಗೇ ಮರಳಿಸುತ್ತಾನೆ.   


ಪರಿಪರಿಯಲುಂಡುಣಿಸಿ ಸುಖಸಾಗರದಿ ಲೋಲಾಡಿಸುವ - ತಾನೇ ಕೊಟ್ಟದ್ದನ್ನು ತನಗೇ ಮರಳಿ ಸಮರ್ಪಣೆ ಮಾಡಿದಾಗ ಅತ್ಯಂತ ಸಂತೋಷದಿಂದ ಸ್ವೀಕರಿಸುತ್ತಾನೆ.  ಬಿಂಬರೂಪಿಯಾದ ಭಗವಂತ ತಾನು ಮೊದಲು ಉಂಡು ಪ್ರತಿಬಿಂಬರೂಪಿಗಳಾದ ನಮಗೆ ಉಣಿಸುತ್ತಾನೆ.    ಅಸ್ವತಂತ್ರ ಜೀವಿಗಳು ಸ್ವತಃ ಏನನ್ನೂ ಮಾಡಲಾರೆವಾದ್ದರಿಂದ ಭಗವಂತ ತಾನು ಉಂಡು, ನಮಗೆ ಉಣಿಸುತ್ತಾನೆ.   ನಮ್ಮನ್ನು ಸುಖ ಸಾಗರದಿ ಓಲಾಡುಸುತ್ತಾನೆ.  ಪ್ರತೀ ಜೀವಿಗೂ ಅವರವರ ಯೋಗ್ಯತಾನುಸಾರ ಸುಖ, ಭೋಗಗಳನ್ನು ಕೊಟ್ಟರೂ, ತಮಗೆ ಲಭ್ಯವಿದ್ದಷ್ಟರಿಂದಲೇ ಜೀವಿಗಳು ಪೂರ್ಣ ಸುಖದ ಅನುಭವ ಪಡೆಯುತ್ತಾರೆ.  ಮಾಡಿದ ಅಪರಾಧಗಳನ್ನು ಅರಿತು ಪಶ್ಚಾತ್ತಾಪದಿಂದ ನೊಂದ ಭಕ್ತರ ಸಮರ್ಪಿಸಿದ್ದನ್ನು ಸ್ವೀಕರಿಸಿ ಅವರಿಗೆ ಸಂತೋಷವಿತ್ತು ಸುಖ ಸಾಗರದಲ್ಲಿ ತೇಲಾಡಿಸುತ್ತಾನೆ.


ಮಂಗಳಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ - ಮಂಗಳಚರಿತನೆಂದರೆ ಶುಭಕರ, ಮಂಗಳವನ್ನುಂಟುಮಾಡುವವನು.  ಚಿನ್ಮಯಗಾತ್ರನೆಂದರೆ ಆನಂದ ಸ್ವರೂಪನಾದ ಲಕ್ಷ್ಮಿಯ ರಕ್ಷಕನು.  ಲೋಕಪವಿತ್ರನೆಂದರೆ  ಅಪವಿತ್ರವಾದ, ದೋಷಪೂರಿತವಾದ ಲಿಂಗ ದೇಹವನ್ನು ಭಂಗಗೊಳಿಸಿ ಸಕಲ ಜೀವರನ್ನೂ ಪವಿತ್ರವಾಗಿಸುವವನು.  ಮಾಡಿದ ಅಪರಾಧಗಳಿಗೆ ಪಶ್ಚಾತ್ತಾಪಪಟ್ಟ ಪ್ರತಿ ಜೀವಿಗೂ ಅವರ ಪಾಪಗಳನ್ನು ಕಳೆದು ಕರುಣೆಯಿಂದ ಪವಿತ್ರರನ್ನಾಗಿಸುವವನು.  ಸುಚರಿತ್ರನೆಂದರೆ ಒಳ್ಳೆಯ ಚರಿತ್ರೆಯುಳ್ಳವನು ಮತ್ತು ಸಜ್ಜನರನ್ನು ರಕ್ಷಿಸುವವನು.  ತನ್ನಲ್ಲೇ ಸಕಲವನ್ನೂ ಸಮಸ್ತವನ್ನೂ ಸಮರ್ಪಣೆ ಮಾಡಿರುವ ಭಕ್ತರನ್ನು ಭಗವಂತ ಮಿತ್ರನಾಗಿ, ಸಖನಾಗಿ ಸದಾಕಾಲವೂ ಕರುಣೆಯಿಂದ ಕಾಪಾಡುತ್ತಾನೆ.


ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ


ನಡೆನುಡಿಗಳಪರಾಧ ಒಡೆಯ ನೀನೆಣಿಸಿದರೆ

ಬಡವ ನಾನೆಂತು ಬದುಕ-ಲೋ | ಬದುಕಲೋ ಕರುಣಾಳು
ಕಡೆಬೀಳ್ವದೆಂತೋ ಭವದಿಂದ || -  ಕರುಣಾಳುವಾದ ಭಗವಂತ, ಜಗದೊಡೆಯನಾದ ನೀನು ನನ್ನ ನಡೆ ನುಡಿಗಳಲ್ಲಿರುವ ಅಪರಾಧಗಳನ್ನು ಎಣಿಸಲಾರಂಭಿಸಿದರೆ ದೀನನೂ ಮತ್ತು ಬಡವನೂ ಆದ ನಾನು ಬದುಕುವುದೇ ಸಾಧ್ಯವಿಲ್ಲ. 

ಕೃಪಣವತ್ಸಲನೆ ಎನ್ನಪರಾಧಗಳ ನೋಡೆ

ಕುಪಿತನಾಗುವುದೆ ಕಮಲಾಕ್ಷ | ಕಮಲಾಕ್ಷ ನೀನೆನಗೆ
ಉಪಕಾರಿ ಎಂದು ಸ್ಮರಿಸುವೆ || - ದೀನಬಂಧುವಾದ ಭಗವಂತನೇ ನನ್ನ ಅಪರಾಧಗಳಿಗೆ ನೀನು ಕುಪಿತನಾಗುವುದು ಸರಿಯೇ ? ನೀನು ನನಗೆ ಅನಿಮಿತ್ತ ಉಪಕಾರಿಯೆಂದು ನಿನ್ನನ್ನು ನಾನು ಸದಾ ಸ್ಮರಿಸುವೆ, ಉದ್ಧರಿಸು.

ಎನಗೆ ನಿನ್ನಲಿ ಭಕುತಿ ಇನಿತಿಲ್ಲದಿದ್ದರೂ

ಅನಿಮಿತ್ತ ಬಂಧು ಸಲಹುವಿ | ಸಲಹುವಿ ಸರ್ವದಾ
ಎಣೆಗಾಣೆ ನಿನ್ನ ಕರುಣಕ್ಕೆ || - ಮಾಡುವ ಪ್ರತೀ ಕರ್ಮಕ್ಕೂ ಪ್ರತ್ಯುಪಕಾರ ಬಯಸುವ ಲೌಕಿಕ ಭಾವಗಳಂತಲ್ಲ ನೀನು.  ನಿಮಿತ್ತವೇ ಇಲ್ಲದೆ ಉಪಕಾರ ಮಾಡುವ, ಕರುಣೆ ತೋರುವ, ರಕ್ಷಿಸುವ, ಸದಾ ಸಲಹುವ  ಆತ್ಮಬಂಧು.  ಸರ್ವದಾ, ಸರ್ವ ದೇಹಗಳಲ್ಲೂ, ಸರ್ವ ದೇಶಗಳಲ್ಲೂ, ಸರ್ವ ಕಾಲಗಳಲ್ಲೂ ನನ್ನನ್ನು ಪೊರೆಯುವ ನಿನ್ನ ಕಾರುಣ್ಯಕ್ಕೆ ಸಮನಾದದ್ದು ಬೇರೊಂದು ಇಲ್ಲವೇ ಇಲ್ಲ.  ದಯಾಮೂರ್ತಿಯೇ ನನ್ನನ್ನು ಸಲಹು.

ನಿತ್ಯವೂ ಜೀವಿಗಳು "ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ" ಎಂದು ಪ್ರಾರ್ಥಿಸುತ್ತೇವೆ.  ಭಗವಂತ ಗೀತೆಯಲ್ಲಿ "ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ" ಎನ್ನುತ್ತಾ ತಾನು ಸದಾ ಭಕ್ತರನ್ನು ರಕ್ಷಿಸುವೆನೆಂದು ತಿಳಿಸಿದ್ದಾನೆ.


ಡಿವಿಜಿಯವರು ಕಗ್ಗದಲ್ಲಿ "ಪರದೈವವನು ತೊರೆಯೆ ಗತಿ ನರನಿಗಿಲ್ಲ" ಎನ್ನುತ್ತಾ "ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ"  ಎಂದಿದ್ದಾರೆ -  ಜೀವಿಗಳಿಗೆ ಭಗವಂತನೇ ಸರ್ವಸ್ವ, ಬಿಂಬರೂಪಿಯಾದ ಅವನ ಸ್ಮರಣೆ ಬಿಟ್ಟರೆ ಬೇರೆ ಗತಿಯಿಲ್ಲ.


ದಂಡನಿರ್ಣಯದಿ  ನೀಂ ಕ್ಷಮಿಸೆನಲ್ ನ್ಯಾಯಪತಿ |

ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ||
ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು |
ಕುಂದಿಸಲಿಕಾಗದೇಂ ? - ಮಂಕುತಿಮ್ಮ || - ಅಪರಾಧಿಯು ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ತನ್ನನ್ನು ಕ್ಷಮಿಸೆಂದು ಬೇಡಿದರೆ, ನ್ಯಾಯಾಧೀಶರು ಅಪರಾಧಿಯ ಹಿಂದಿನ ಒಳ್ಳೆಯ ನಡವಳಿಕೆಯನ್ನೂ, ಅಪರಾಧ ಮಾಡಿದ ಸನ್ನಿವೇಶ-ಸಂದರ್ಭವನ್ನೂ ಅವಲೋಕಿಸಿ ಶಿಕ್ಷೆಯನ್ನು ಸ್ವಲ್ಪವಾದರೂ ಕಡಿಮೆ ಮಾಡುವುದಿಲ್ಲವೇ, ಹಾಗೇ ಭಗವಂತನೂ ಕೂಡ ಪಶ್ಚಾತ್ತಾಪದಿಂದ ಬೇಡಿಕೊಂಡ ಭಕ್ತರ ಅಪರಾಧಗಳನ್ನು ಸ್ಮರಿಸದೆ, ರಕ್ಷಿಸುತ್ತಾನೆ.  ಮಗು ಸಚ್ಚಾರಿತ್ರನಾಗಲಿ ಎಂಬ ಆಸೆಯಿಂದ ಹೇಗೆ ತಂದೆಯು ಮಗುವನ್ನು ಶಿಕ್ಷಿಸುತ್ತಾನೋ, ಹಾಗೇ ಭಗವಂತ ಕೂಡ.

ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ |

ಒಕ್ಕುವುದು ಬಿಡದೆ ಜೀವಿಯ ಪಾಪಚಯವ ||
ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ |
ಭಕ್ತಿ ಪಶ್ಚಾತ್ತಾಪ - ಮಂಕುತಿಮ್ಮ || - ಭಗವಂತ ನ್ಯಾಯ ನಿರ್ಣಯ ಮಾಡಲು ತಕ್ಕಡಿ ಹಿಡಿದಿರುವನಂತೆ.  ಒಂದು ತಟ್ಟೆಯಲ್ಲಿ ಜೀವಿಯ ಮಾಡಿರುವ ಅಪರಾಧಗಳನ್ನೂ, ಪಾಪಗಳನ್ನೂ  ಮತ್ತೊಂದು ತಟ್ಟೆಯಲ್ಲಿ ಜೀವಿಯು ಮಾಡಿರುವ ಒಳ್ಳೆಯ ಕೆಲಸಗಳನ್ನೂ, ಪುಣ್ಯರಾಶಿಯನ್ನೂ ಇಡುವನಂತೆ.  ಪಾಪದ ತಟ್ಟೆ ಭಾರವಾಗಿದ್ದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.  ಶಿಕ್ಷೆ ಕಡಿಮೆ ಮಾಡೆಂದು ಬೇಡಿದರೂ ಕೂಡ ಭಗವಂತ ಕರಗುವುದಿಲ್ಲ.  ಆದರೆ ತಾನು ಮಾಡಿದ ಪಾಪಗಳಿಗಾಗಿಯೂ, ಅಪರಾಧಗಳಿಗಾಗಿಯೂ ಜೀವಿ ಪಶ್ಚಾತ್ತಾಪ ಪಟ್ಟಾಗ ಮಾತ್ರ ಭಗವಂತ ಅಪರಾಧಗಳನ್ನು ಸ್ಮರಿಸದೆ ಕಾಪಾಡುತ್ತಾನೆ.

ಪ್ರಾರಬ್ಧದಲಿ ನಿನ್ನ ಪುಣ್ಯವಿನಿತಾನುಮಿರೆ |

ಸೇರೆ ಪಶ್ಚಾತ್ತಾಪ ಭಾರವದರೊಡನೆ ||
ದಾರುಣದ ಕರ್ಮನಿಯತಿಯನಿನಿತು ಶಿಥಿಲಿಪುದು |
ಕಾರುಣ್ಯದಿಂ ದೈವ - ಮಂಕುತಿಮ್ಮ || - ಜೀವಿಯು ಅನುಭವಿಸುತ್ತಿರುವ ಪ್ರಾರಬ್ಧ ಕರ್ಮದಲ್ಲಿ ಕಿಂಚಿತ್ತೇನಾದರೂ ಪುಣ್ಯವು ಇದ್ದರೆ, ಅದರ ಜೊತೆಗೆ ತಾನು ಮಾಡಿದ ಅಪರಾಧಗಳಿಗೆಲ್ಲಾ ಪಶ್ಚಾತ್ತಾಪ ಪಟ್ಟರೆ ಅನುಭವಿಸಬೇಕಾದ ಉಗ್ರ ಶಿಕ್ಷೆ ಸ್ವಲ್ಪ ಕಡಿಮೆಯಾಗುತ್ತದೆ.  ಇದು ಬೇರೆ ಏನೂ ಅಲ್ಲ, ಭಗವಂತನ ಕಾರುಣ್ಯ ಅಷ್ಟೆ ಎಂದಿದ್ದಾರೆ.



 ಚಿತ್ರಕೃಪೆ : ಅಂತರ್ಜಾಲ

Wednesday, January 15, 2014

ಕರುಣಾ ಸಂಧಿ - ೧೪ ನೇ ಪದ್ಯ

ಬಾಲಕನ ಕಲಭಾಷೆ ಜನನಿಯು
ಕೇಳಿ ಸುಖಪಡುವಂತೆ ಲಕುಮೀ
ಲೋಲ ಭಕುತರು ಮಾಡುತಿಹ 
ಸಂಸ್ತುತಿಗೆ ಹಿಗ್ಗುವನು |
ತಾಳ ತನ್ನವರಲ್ಲಿ ಮಾಡುವ
ಹೇಳನವ ಹೆದ್ದೈವ ವಿದುರನ
ಆಲಯದಿ ಪಾಲುಂಡು ಕುರುಪನ 
ಮಾನವನೆ ಕೊಂಡ ||೧೪||
ಪ್ರತಿಪದಾರ್ಥ : ಬಾಲಕನ ಕಲಭಾಷೆ - ಮುದ್ದು ಮಗುವಿನ ಅಸ್ಪಷ್ಟ ತೊದಲು ನುಡಿಗಳನ್ನು, ಜನನಿಯು ಕೇಳಿ ಸುಖ ಪಡುವಂತೆ - ತಾಯಿಯು ಮಗುವಿನ ಇಂಪಾದ ತೊದಲು ನುಡಿಗಳನ್ನು ಕೇಳಿ ಆನಂದದಿಂದ ಸುಖ ಪಡುವಂತೆ, ಲಕುಮೀ ಲೋಲ - ಲಕ್ಷ್ಮೀಪತಿಯಾದ ಶ್ರೀಹರಿಯು, ಭಕುತರು ಮಾಡುತಿಹ - ತನ್ನ ಭಕ್ತರು ತನ್ನನ್ನು ಆರಾಧಿಸುತ್ತಾ ತನ್ನ ಗುಣಗಳನ್ನು, ಸ್ತುತಿಸುವಂತೆ - ಹೊಗಳಿ ಸ್ತುತಿಸುವುದನ್ನು ಕೇಳಿ, ಹಿಗ್ಗುವನು - ಅತ್ಯಂತ ಪ್ರಸನ್ನನಾಗುವನು, ತಾಳ ತನ್ನವರಲ್ಲಿ ಮಾಡುವ ಹೇಳನವ - ತನ್ನ ಭಕ್ತರ ಬಗ್ಗೆ ಬೇರೆಯವರು ಮಾಡುವ ಅವಮಾನವನ್ನು ನಿಂದನೆಯನ್ನು ಭಗವಂತನು ಸಹಿಸಲಾರನು, ಹೆದ್ದೈವ - ಎಲ್ಲರಿಗೂ ಹಿಯಿಯವನಾದ ಸರ್ವೋತ್ತಮನಾದ ಭಗವಂತನು, ವಿದುರನ ಆಲಯದಿ - ವಿದುರನೆಂಬ ಪ್ರೀತಿಯ ಭಕ್ತನ ಮನೆಯಲ್ಲಿ, ಪಾಲುಂಡು - ಹಾಲು ಕುಡಿದು ಆತಿಥ್ಯ ಸ್ವೀಕರಿಸಿ, ಕುರುಪನ - ಕುರು ಕುಲಾಧಿಪತಿಯಾದ ದುರ್ಯೋಧನನ, ಮಾನವನೆ ಕೊಂಡ - ದುರ್ಯೋಧನನ ಆಹ್ವಾನ ತಿರಸ್ಕರಿಸಿ ಅವನ ಅವಮಾನಕ್ಕೆ ಕಾರಣನಾಗಿ ಕೊನೆಗೆ ಅವನ ಸರ್ವನಾಶಕ್ಕೂ ಕಾರಣನಾದನು.

ಪುಟ್ಟ ಮಗುವಿನ ತಪ್ಪು / ತೊದಲು ಮಾತು ಕೇಳಿ ತಾಯಿ ಆನಂದ ಪಡುವಂತೆ, ಭಗವಂತ ಭಕ್ತರ ತಪ್ಪುಗಳನ್ನೆಲ್ಲಾ ಕ್ಷಮಿಸಿ, ಭಕ್ತರು ತೋರುವ ಅಲ್ಪ ಭಕ್ತಿಗೆ ಕರುಣೆ ತೋರಿಸುತ್ತಾನೆ.  ’ಬಾಲ ಕ’ ಎಂದರೆ ಕ - ಬ್ರಹ್ಮದೇವ, ಬಾಲ - ಪರಮಾತ್ಮನ ಮಗ, ಸತತವಾಗಿ ಹಿಂಬಾಲಿಸುವವನು.  ಬ್ರಹ್ಮದೇವ ಭಗವಂತನ ಮಗ ಹಾಗೂ ಸತತ ಹಿಂಬಾಲಕ.  ಬ್ರಹ್ಮ ದೇವರು ಪುಟ್ಟ ಬಾಲಕ, ಅವರು ತೊದಲುತ್ತಾರೆ, ಅವರ ಈ ತೊದಲು ನುಡಿಯೇ ಜನನಿಯಾದ ಲಕ್ಷ್ಮೀದೇವಿಗೂ ಜನನಿಯಂತಿರುವ ಭಗವಂತನಿಗೂ  ಅತೀ ಪ್ರಿಯವಾಗುವುದು.  ಭಗವಂತ ಲಕ್ಷ್ಮೀದೇವಿಗೆ ಗರ್ಭಧಾರಣೆ ಮಾಡಿಸಿ, ಬ್ರಹ್ಮಾಂಡವನ್ನು ಸೃಷ್ಟಿಸುತ್ತಾನೆ.  ಜೊತೆಗೇ ತಾನು ನೇರವಾಗಿಯೂ ಮತ್ತು ತನ್ನ ಅಂಗಾಂಗಗಳಿಂದಲೂ ಸೃಷ್ಟಿಸುತ್ತಾನೆ,  ಆದ್ದರಿಂದ ಅವನು ಜನನಿಯೂ ಹೌದು ಜನಕನೂ ಹೌದು.  ಅಚಿಂತ್ಯಾದ್ಭುತನಾದ ಪರಮಾತ್ಮ ಜೀವಿಗಳಿಗೆ ಜನನ ಕೊಡುವುದು ಸಾಧನೆಗಾಗಿ, ಸ್ಥಿತಿ ಕೊಡುವುದು ಸಾಧನೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಮತ್ತು ಸಾವನ್ನು ಕೊಡುವುದು ಝರ್ಝರಿತವಾದ ದೇಹ ಕಳಚಿ ಹೊಸ ದೇಹವನ್ನು ಕೊಡುವುದಕ್ಕೋಸ್ಕರ.  ಹೀಗೆ ಸಾಧನೆಯನ್ನು ಸತತವಾಗಿ ಮುಂದುವರೆಯುವಂತೆ ಮಾಡುವವನು, ಜನನಿಯೂ ಜನಕನೂ ಆದ ಭಗವಂತನು.  ಸಾಧನೆಯಿಲ್ಲದೇ ಫಲವಿಲ್ಲ.  ಜೀವಿಗಳು ಏನನ್ನು ಮಾಡಿದರೂ, ಮಾಡುವಾಗ ಲಕ್ಷ್ಮೀನಾರಾಯಣ ’ಪ್ರೇರಣಯ’ ಎಂದು ಹೇಳಿಕೊಂಡು ಮಾಡಬೇಕು.  "ನ ಹಂ ಕರ್ತಾ ಹರಿಃ ಕರ್ತ" ಎನ್ನುವ ಅರಿವು ಸದಾ ಜಾಗೃತವಾಗಿರಬೇಕು. 

ಪ್ರಳಯ ಕಾಲದಲ್ಲಿ ವಟಪತ್ರಶಾಯಿಯಾಗಿ ಮಗುವಾಗಿ ಮಲಗಿದಾಗ ಲಕ್ಷ್ಮೀದೇವಿ ತಾಯಿಯಾಗಿಯೂ ಲಾಲಿಸುತ್ತಾಳೆ.  ಹಾಗೇ ಸೃಷ್ಟಿ ಕಾರ್ಯ ಮಾಡೆಂದು ವೇದಗಳಿಂದ ಸ್ತುತಿಸುತ್ತಾ, ಜೀವರುಗಳಿಗೆ ಮೋಕ್ಷ ಕೊಡಲೇಳೆಂದು ಎಬ್ಬಿಸುವಳು.   ಬ್ರಹ್ಮ ದೇವನ ತೊದಲು ನುಡಿಯು ನಿಜ ಅರ್ಥದಲ್ಲಿ ಭಗವಂತನ ಸಂಸ್ತುತಿಯೇ ಆಗಿದೆ.  ಹಾಗೆ ನಾವು ಕೂಡ ಪರಮಾತ್ಮನ ಸ್ಮರಣೆ ಮಾಡುವಾಗ ನಮ್ಮ ತನು ಮನವೆಲ್ಲವೂ ಅದೇ ಭಾವದಲ್ಲಿ ಲೀನವಾಗಿಟ್ಟುಕೊಂಡು, ನಮ್ಮ ಪ್ರಾರ್ಥನೆಯನ್ನು ಸಂಸ್ತುತಿಯಾಗಿಸಬೇಕು.   ಭಕ್ತಿಯಿಲ್ಲದೇ ಮಾಡುವ ಆರಾಧನೆಯಿಂದಾಗಿ ಯಾವ ಫಲವೂ ಸಿಕ್ಕುವುದಿಲ್ಲ.  ಸಂಸ್ತುತಿ ಎಂದರೆ, ಭಕ್ತಿಯಿಂದ ಆರಾಧಿಸುವುದು.   ಭಗವಂತನ ಮುಂದೆ ಕುಳಿತಾಗ ಎಂದಿಗೂ ದುಖಃದಿಂದ ಕಣ್ಣೀರು ಸುರಿಸಬಾರದು.  ಭಗವಂತನ ಪಾದದಲ್ಲಿ ಮನಸ್ಸನ್ನು ನೆಲೆಗೊಳಿಸಿ, ಒಳಗಿನಿಂದ ಬರುವ ಸಾತ್ವಿಕ ತರಂಗಗಳಿಂದ, ಆನಂದ ಭಾಷ್ಪ ಸುರಿಸಬೇಕು.  ಭಗವಂತನ ಸ್ಮರಣೆ ಮಾಡುವಾಗಲೂ, ಸ್ತುತಿಸುವಾಗಲೂ ಶುದ್ಧವಾಗಿಯೂ, ಸ್ಪಷ್ಟವಾಗಿಯೂ ಇದ್ದು, ಶಕ್ತಿ ಮತ್ತು ಜ್ಞಾನವನ್ನು ಕೊಡುಯೆಂದು ಪ್ರಾರ್ಥಿಸಿಕೊಳ್ಳಬೇಕು.  ಏನೇನೋ ಕ್ಷುಲ್ಲಕ ಕಾರಣಗಳನ್ನು ನಮಗೆ ನಾವೇ ಕೊಟ್ಟುಕೊಳ್ಳುತ್ತಾ, ಭಗವದಾರಾಧನೆಯನ್ನು ತಪ್ಪಿಸಬಾರದು.  ಪೂಜೆಯ ಸಮಯದಲ್ಲಿ ಕೂಡ, ನಮ್ಮದೇ ಭೌತಿಕ ಕಾರಣಗಳಿಂದ ಭಗವಂತನ ಸ್ಮರಣೆ / ಸ್ತೋತ್ರದಲ್ಲಿ ತಪ್ಪು ಮತ್ತು ತೊದಲು ನುಡಿಗಳು ಇರಬಾರದು. 


ಬಾಲಕನ ಕಲಭಾಷೆ ಜನನಿಯು ಕೇಳಿ ಸುಖಪಡುವಂತೆ - ’ಕಲ’ ಎಂದರೆ ಮಂದವಾಗಿ ಅಸ್ಪಷ್ಟವಾಗಿದ್ದರೂ ಕೇಳಲು ಮಧುರವಾದಂತಹ ಧ್ವನಿ ಅಥವಾ ಭಾಷೆಯಾಗಿದೆ.  ಮಗುವಿನ ತೊದಲು ನುಡಿ ಕೇಳುವುದೆಂದರೆ ತಾಯಿಗೆ ಅಪರಿಮಿತ ಸಂತೋಷವಿರುತ್ತದೆ.  ಹಾಗೇ ತನ್ನ ಭಕ್ತರು ನುಡಿವ ಅಸ್ಪಷ್ಟವಾದ ತೊದಲು ನುಡಿಗಳ ಸ್ತುತಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ ಭಗವಂತನು ಹಿಗ್ಗುತ್ತಾನೆ.  ಪುಟ್ಟ ಮಕ್ಕಳ ತೊದಲು ನುಡಿ ಎಂದರೆ ಅದು ಅಸ್ಪಷ್ಟವಾಗಿರುವುದರ ಜೊತೆಗೆ ಅಸಂಬದ್ಧವೂ ಮತ್ತು ಅಶುದ್ಧವೂ ಕೂಡ ಆಗಿರುತ್ತದೆ.  ಹಾಗೇ ತನ್ನ ಭಕ್ತರ ಅಸಂಬದ್ಧ, ಅಶುದ್ಧ ನುಡಿಗಳನ್ನು ಭಗವಂತ ಅಪಾರ ಕರುಣೆಯಿಂದಲೇ ಸ್ವೀಕರಿಸುತ್ತಾನೆ.  ಜನನಿಯಂತೆ ಸುಖಿಸುತ್ತಾ, ತಪ್ಪುಗಳನ್ನು ಎಣಿಸದೆಲೆ, ಸ್ತೋತ್ರ ಮಾಡುವ ಭಾವವನ್ನೂ, ಭಕ್ತಿಯನ್ನೂ ಮಾತ್ರ ಸ್ವೀಕರಿಸಿ, ಭಕ್ತರನ್ನು ಪೊರೆಯುತ್ತಾನೆ.  ಜಗನ್ನಾಥ ದಾಸರು  "ನೀಚನಲ್ಲವೇ ಇವನು ನೀಚನಲ್ಲವೇ"  ಎಂಬ ತಮ್ಮ ಕೃತಿಯಲ್ಲಿ "ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು | ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು ನೀಚನು ಎಂದಿದ್ದಾರೆ.   ದಾಸರಾಯರು ತಮ್ಮ ನರಸಿಂಹ ಸುಳಾದಿಯಲ್ಲಿ "ಭಗವಂತ ನೀನೆ ದಯಾಳು ಎಂದರಿದು ನಾ ಪೊಗಳಿದೆನೊ, ಯಥಾಮತಿಯೊಳಗೆ ಲೇಶ, ಬಗೆಯದಿರೆನ್ನಪರಾಧ ಕೋಟಿಗಳನು, ಜಗತೀಪತಿ ತನ್ನ ಮಗುವಿನ ತೊದಲು ಮಾತುಗಳನು ಕೇಳಿ ತಾ ನಗುತಲಿ ಕಾಮಿತ ಬಗೆ ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ ಬಿಗಿದಪ್ಪಿ ಮೋದಿಪನಲ್ಲದೆ ಶಿಶುವಿನ ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈಯುಗನೇ" ಎನ್ನುತ್ತಾ ಭಗವಂತ ಭಕ್ತರನ್ನು ಜನನಿಯಾಗಿಯೂ ಜನಕನಾಗಿಯೂ ಪೊರೆಯುವನೆಂಬುದನ್ನು ತಿಳಿಸುತ್ತಾರೆ.


ಲಕುಮೀಲೋಲ ಹೆದ್ದೈವ - ಲಕ್ಷ್ಮೀಪತಿಯಾದ ಶ್ರೀಹರಿಯು ಸರ್ವ ದೇವಾನು ದೇವತೆಗಳಲ್ಲೂ ಉತ್ತಮನು, ಪರಮ ಪುರುಷನು ಆಗಿದ್ದಾನೆ.  ಅವನೇ ಹಿರಿದಾದ ದೈವ ಮತ್ತು ಹೆದ್ದೈವವು.  ಸಮುದ್ರ ಮಥನದಲ್ಲಿ ಲಕ್ಷ್ಮೀದೇವಿ ಉದಿಸಿದಾಗ ಬೇರೆ ಎಲ್ಲಾ ದೇವತೆಗಳನ್ನೂ ತಿರಸ್ಕರಿಸಿ, ಹರಿ ಸರ್ವೋತ್ತಮನೆಂದು ಅವನಿಗೇ ಒಲಿದಳು, ವರಿಸಿದಳು, ವಂದಿಸಿದಳು.  ಸಮಸ್ತ ಜೀವರಾಶಿಗಳ ಮನದೊಳಗೆ ಮನವಾಗಿ, ಆನಂದಮಯನಾಗಿರುವವನು ಭಗವಂತ.  ಅವನಿಗೆ ಯಾರು ಸ್ತುತಿಸಿದರೂ ಅಥವಾ ಬಿಟ್ಟರೂ ಏನೂ ಆಗಬೇಕಿಲ್ಲ.  ಅವನು ಭಕ್ತರ ಸಂಸ್ತುತಿಯನ್ನು ಆಲಿಸಿ, ಹಿಗ್ಗುವನೆಂದರೆ, ಅದು ನಮ್ಮ ಉದ್ಧಾರಕ್ಕಾಗಿಯೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ.


ತಾಳ ತನ್ನವರಲ್ಲಿ ಮಾಡುವ ಹೇಳನವ - ಭಗವಂತ ತನ್ನ ಭಕ್ತರನ್ನು ತನ್ನ ಮಕ್ಕಳಂತೇ ಪಾಲಿಸುವ, ಪೋಷಿಸುವ, ಪೊರೆಯುವ.  ಭಕ್ತ ಪರಾಧೀನನಾಗಿದ್ದಾನೆ.  ತನ್ನ ಮಗುವಿನಲ್ಲಿ ಅದೆಷ್ಟೇ ದೋಷವಿದ್ದರೂ ಕೂಡ ಬೇರೆಯವರು ಅವಹೇಳನ ಮಾಡಿದಾಗ ತಾಯಿ ಹೇಗೆ ಸಹಿಸುವುದಿಲ್ಲವೋ ಹಾಗೆ ಭಗವಂತ ಕೂಡ ತನ್ನ ಭಕ್ತರನ್ನು ಯಾರಾದರೂ ಅವಮಾನಿಸಿದರೆ, ನೋಯಿಸಿದರೆ, ಅದನ್ನು ಸಹಿಸನು.  ತನ್ನ ಭಕ್ತರನ್ನು ದ್ವೇಷಿಸುವವರನ್ನು ಕಂಡು ಶ್ರೀಹರಿ ಉಗ್ರನಾಗುತ್ತಾನೆ.  ನವವಿಧ ಭಕ್ತಿಯಿರುವಂತೆ, ನವವಿಧ ದ್ವೇಷಗಳಲ್ಲಿ ತನ್ನ ಭಕ್ತರನ್ನು ದ್ವೇಷಿಸುವುದೂ ಒಂದೆಂದು ಪರಿಗಣಿಸಿಬಿಟ್ಟಿದ್ದಾನೆ.  ಪುಟ್ಟ ಬಾಲಕ ಪ್ರಹ್ಲಾದನನ್ನು ದ್ವೇಷಿಸಿದ ತಂದೆ ಹಿರಣ್ಯಕಶಿಪುವನ್ನು ಉಗ್ರವಾಗಿಯೇ ಭಗವಂತ ಶಿಕ್ಷಿಸಿದರೂ ಅದು ಭಗವಂತನ ಕ್ರೋಧವಲ್ಲ, ವಾಸ್ತವವಾಗಿ ಪ್ರಹ್ಲಾದನ ಭಕ್ತಿಗೆ ಒಲಿದ ಕಾರುಣ್ಯವೇ ಆಗಿದೆ.   "ದಾಸರಿಗುಂಟೆ ಭಯ ಶೋಕ ಹರಿ" ಎಂಬ ಕೃತಿಯಲ್ಲಿ "ಏನು ಮಾಡಿದಪರಾಧವ ಕ್ಷಮಿಸುವ | ಏನು ಕೊಟ್ಟುದನು ಕೈಗೊಂಬ | ಏನು ಬೇಡಿದಿಷ್ಟಾರ್ಥವ ಕೊಡುವ | ದಯಾನಿಧಿ ಅನುಪಮನೆಂಬ ಹರಿ" ಎಂದಿದ್ದಾರೆ.


ವಿದುರನ ಆಲಯದಿ ಪಾಲುಂಡ - ಸಂಧಾನಕ್ಕಾಗಿ ಬಂದ ಶ್ರೀಕೃಷ್ಣ ಕೌರವೇಂದ್ರನು ನೀಡಿದ ಭೋಜನದ ಆಮಂತ್ರಣವನ್ನು ತಿರಸ್ಕರಿಸಿ, ವಿದುರನ ಮನೆಗೆ ಹೋಗಿ ಹಾಲು ಕುಡಿದ.  ಇದು ದುರ್ಯೋಧನನಿಗೆ ದೊಡ್ಡ ಅವಮಾನವಾಗಿತ್ತು.  ಶ್ರೀಮದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ "ಸಂಪೂಜಿತಃ ಸರ್ವ ಸಮರ್ಪಣೇನ" ಎಂದಿದ್ದಾರೆ.  ಇದರ ಅರ್ಥ ವಿದುರ ಭಗವಂತನಿಗೆ ಬರಿಯ ಹಾಲನ್ನಲ್ಲದೆ, ತನ್ನನ್ನೇ ಸಮರ್ಪಿಸಿಕೊಳ್ಳುತ್ತಾನೆ.  ಕಡುಬಡವನಾದರೂ ವಿದುರ ಹಾಲಿನ ಜೊತೆ ತನ್ನ ಆತ್ಮ ಸಮರ್ಪಣೆ ಮಾಡಿಕೊಂಡಿದ್ದನ್ನು ಶ್ರೀಕೃಷ್ಣ ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ಉದ್ಧರಿಸುತ್ತಾನೆ.  ದುರ್ಯೋಧನ ರಾಜಾತಿಥ್ಯವನ್ನೇ ನೀಡಬಲ್ಲವನಾಗಿದ್ದರೂ ಭಗವಂತ ಅದನ್ನು ಸ್ವೀಕರಿಸಲಿಲ್ಲ.  ವಿದುರ ಕಡುಬಡವನಾದರೂ ತನ್ನಲ್ಲಿದ್ದ ಎಲ್ಲವನ್ನೂ, ಜೊತೆಗೆ ತನ್ನನ್ನೂ ಭಗವಂತನಿಗೆ ಸಮರ್ಪಿಸಿಕೊಂಡುಬಿಡುತ್ತಾನೆ.   ಶ್ರೀಕೃಷ್ಣನು ಸಂಧಾನಕ್ಕಾಗಿ ಕೌರವರ ಅರಮನೆಗೆ ಬಂದಾಗ, ಪರಮ ಭಕ್ತನಾದ ವಿದುರನು ’ಅತಿಥಿ ದೇವೋ ಭವ’ ಎಂದು ಒಂದು ಕುಡಿಕೆ ಹಾಲನ್ನು ಕೊಡುತ್ತಾನೆ.  ಶ್ರೀಕೃಷ್ಣನಿಗೆ ಪಾದಾಭಿಷೇಕವಾದ ಹಾಲಿನ ಬಿಂದುಗಳು ಸಮೃದ್ಧಿಯಾಗಿ, ಕಡಲಾಗಿ, ಕೌರವ ಚಕ್ರವರ್ತಿ ದುರ್ಯೋಧನನ ಅರಮನೆಯೇ ಮುಳುಗುವಂತೆ ಮಾಡಿ, ಕೃಷ್ಣ ಪರಮಾತ್ಮನು ಕೌರವನ ಮಾನವನ್ನೇ ಕೊಂಡ ಎಂದು ಗದುಗಿನ ಭಾರತದಲ್ಲಿ ಕುಮಾರವ್ಯಾಸರು ಹೇಳುತ್ತಾರೆ.


ಅನವರತವೂ ಭಗವಂತನ ನಾಮ ಸ್ಮರಣೆ ಮಾಡುತ್ತಾ, ಹರಿಕಥೆಗಳನ್ನು ಆಲಿಸುತ್ತಾ ಮನವನ್ನು ಭಗವಂತನೆಂಬ ಮನದೊಳಗೆ ನೆಲೆಯಾಗಿಸಿದ್ದರೆ, ಭಗವಂತನೆಂದಿಗೂ ನಮ್ಮನ್ನು ಪೊರೆಯುವನು.  ಇಂತಹ ಕರುಣಾಮಯಿಯಾದ ಶ್ರೀಹರಿಯ ಕಾರುಣ್ಯ ನಮಗೆ ಲಭಿಸಬೇಕಾದರೆ ನಾವು "ಹರಿಭಕ್ತರಿದ್ದೆಡೆಗೆ ಹರಿದು ಹೋಗಲಿ ಬೇಕು | ಹರಿಯ ನಾಮತ್ರಯಾಂಕಿತರಿಗೆರಗಲು ಬೇಕು | ಗುರುಹಿರಿಯರವಗುಣಗಳೆಣಿಸದಿರ ಬೇಕು || ಎಂದು ಜಗನ್ನಾಥ ದಾಸರು ತಮ್ಮ "ಇನಿತೆಂದು ಶಾಸ್ತ್ರ ಪೇಳುವವು" ಎಂಬ ಕೃತಿಯಲ್ಲಿ ತಿಳಿಸಿದ್ದಾರೆ.


ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ :

ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು | ಸುರರೊಳು ನೀನು ಬೆಂ-
ಬಲವಾಗಿ ಇರಲು ಭಯವುಂಟೆ - ಭಕ್ತರಿಗೆ ತಮ್ಮ ಜೀವಿತ ಕಾಲದಲ್ಲಿ ಬರುವ ಎಲ್ಲಾ ತರಹದ ಭಯಗಳನ್ನೂ ಪರಿಹರಿಸುವವನು ಶ್ರೀಹರಿಯೊಬ್ಬನೇ ಆಗಿದ್ದಾನೆ.  ಸ್ಮರಿಸಿದ ಮಾತ್ರವೇ, ಕರೆಗೆ ಓಗೊಡುವ ಮಗುವಿನಂತೆ ಧಾವಿಸುವ ಭಗವಂತನು ಅತೀ ಸುಲಭನೂ ಹಾಗೂ ಅಷ್ಟೇ ಬಲವಂತನು.  ಅವನೇ ಸ್ವತಃ ಭಕ್ತರಿಗೆ ಬೆಂಬಲವಾಗಿರಲು ಯಾವುದೇ ಚಿಂತೆಯೂ, ಭಯವೂ ಇಲ್ಲವೇ ಇಲ್ಲ.

ಶ್ರೀನಾಥ ನಿನ್ನವರ ನಾನಾಪರಾಧಗಳ

ನೀನೆಣಿಸದವರ ಸಲಹಿದಿ | ಸಲಹಿದಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ - ಶ್ರುತಿ ಸ್ಮೃತಿಗಳು ಸ್ವಯಂ ಭಗವಂತನ ಆಜ್ಞೆಗಳು ಮತ್ತು ನಾನಾ ವಿಧಿನಿಷೇಧಗಳನ್ನು ನಿರೂಪಿಸುವಂತಹವು.  ಭಕ್ತರು ಅವುಗಳನ್ನು ನಿಷ್ಠವಾಗಿ ಆಚರಣೆ ಮಾಡಬೇಕು ಮತ್ತು ಅವುಗಳನ್ನು ಅತಿಕ್ರಮಿಸುವುದು ಅಪರಾಧವಾಗುತ್ತದೆ.  ಹಾಗೆ ಮಾಡುವುದು ಶ್ರೀಹರಿಯ ಆಜ್ಞೆಯನ್ನು ಉಲ್ಲಂಘಿಸಿದಂತೆಯೇ.  ಆದರೆ ಈ ರೀತಿಯ ಅಪರಾಧಗಳನ್ನು ಎಣಿಕೆಗೆ ಬಾರದಷ್ಟು ಸಂಖ್ಯೆಯಲ್ಲಿ ಪ್ರತಿದಿನವೂ ಭಕ್ತರು ಮಾಡುತ್ತಲೇ ಇರುತ್ತಾರೆ.  ಸರ್ವಾಂತರ್ಯಾಮಿಯಾದ ಭಗವಂತ  ಎಲ್ಲವೂ ತಿಳಿದಿದ್ದರೂ ಕೂಡ, ನಾವು ಮಾಡುವ ಸಂಸ್ತುತಿಗೆ ಹಿಗ್ಗುತ್ತಾ, ನಮ್ಮನ್ನು ಉದ್ಧರಿಸುವವನು ಆ ಹೆದ್ದೈವನಾಗಿದ್ದಾನೆ.

ನಾ ನಿನ್ನ ಮರೆತರೂ ನೀನೆನ್ನ ಮರೆಯದಲೆ

ಸಾನುರಾಗದಲಿ ಸಲಹುವಿ | ಸಲಹುವಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ -  ತಾಯಿಯೆಂದಿಗೂ ತನ್ನ ಮಗುವನ್ನು ಮರೆಯುವುದಿಲ್ಲ, ಅಲಕ್ಷಿಸುವುದಿಲ್ಲ.  ಹಾಗೇ ಭಗವಂತ ಕೂಡ ತನ್ನ ಭಕ್ತರು ತನ್ನನ್ನು ಮರೆತರೂ ಕೂಡ, ತಾನು ಅವರನ್ನು ಮರೆಯದೇ, ವಾತ್ಸಲ್ಯದಿಂದ, ಕಾರುಣ್ಯದಿಂದ ಕಾಪಾಡುವನು.

ಪರಮಾತ್ಮನಿಗೆ ತನ್ನ ಭಕ್ತ ಕಡುಬಡವನೋ  ಅಥವಾ ಶ್ರೀಮಂತನೋ, ರಾಜಾತಿಥ್ಯ ನೀಡಬಲ್ಲವನೋ ಅಥವಾ ಇಲ್ಲವೋ ಎಂಬ ಯಾವ ಅಂಶಗಳೂ ಮುಖ್ಯವಲ್ಲವೇ ಅಲ್ಲ.  ಬ್ರಹ್ಮಾಂಡದಲ್ಲಿರುವ ಪ್ರತೀ ಜೀವಿಗೂ ಜನನಿಯೂ ಮತ್ತು ಜನಕನೂ ಎರಡೂ ಆಗಿರುವ ಭಗವಂತನಿಗೆ ಪ್ರಿಯರು - ಅಪ್ರಿಯರು, ಮಿತ್ರರು - ದ್ವೇಷಿಗಳು ಎಂಬೆಲ್ಲಾ ತಾರತಮ್ಯಗಳು ಖಂಡಿತವಾಗಿಯೂ ಇಲ್ಲ.  ಆದರೆ ತನ್ನ ಭಕ್ತರನ್ನು ದ್ವೇಷಿಸುವವರನ್ನು ಭಗವಂತ ತಾಳನು ಎಂದು ಮಾತ್ರ ತಿಳಿಯುತ್ತದೆ.  ಶ್ರೀಹರಿಯು ಎಲ್ಲರಲ್ಲೂ ಸಮಾನವಾಗಿ ವ್ಯಾಪಿಸಿರುವನು.  

ಭಗವದ್ಗೀತೆಯಲ್ಲಿ ಭಗವಂತ
ಸಮೋಹಂ ಸರ್ವಭೂತೇಷು ನ ಮೇ ದ್ವೇಷ್ಯೋಸ್ತಿನಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ || - ನಾನು ಎಲ್ಲಾ ಪ್ರಾಣಿಗಳಲ್ಲಿಯೂ ಸಮಭಾವದಿಂದ  ವ್ಯಾಪಕವಾಗಿದ್ದೇನೆ.  ನನಗೆ ಅಪ್ರಿಯರಾದವರು ಯಾರೂ ಇಲ್ಲ ಮತ್ತು ಪ್ರಿಯರಾದವರೂ ಯಾರೂ ಇಲ್ಲ.  ಆದರೆ ಯಾವ ಭಕ್ತರು ನನ್ನನ್ನು ಪ್ರೇಮಭಾವದಿಂದ ಭಜಿಸುತ್ತಾರೋ ಅವರು ನನ್ನಲ್ಲಿದ್ದಾರೆ ಮತ್ತು ನಾನು ಕೂಡ ಅವರಲ್ಲಿ ಪ್ರತ್ಯಕ್ಷವಾಗಿ ಪ್ರಕಟವಾಗಿದ್ದೇನೆ ಎಂದು ತಿಳಿಸಿದ್ದಾನೆ.
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ | ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ || - ನಿರಂತರವಾಗಿ ನನ್ನ ಧ್ಯಾನಾದಿಗಳಲ್ಲಿ ತೊಡಗಿರುವ ಹಾಗೂ ಪ್ರೇಮದಿಂದ ಭಜಿಸುವ ಭಕ್ತರಿಗೆ ನಾನು ನನ್ನನ್ನು ಪಡೆಯುವಂತಹ ತತ್ತ್ವಜ್ಞಾನರೂಪ ಯೋಗವನ್ನು ಕರುಣಿಸುತ್ತೇನೆ ಎಂದಿದ್ದಾನೆ.

ವಿಷ್ಣು ಸಹಸ್ರನಾಮದಲ್ಲಿ "ವಸುರ್ವ ಸುಮನಾಃ ಸತ್ಯ ಸಮಾತ್ಮ ಸಮ್ಮಿತ ಸಮಃ" : ವಸವೇ ನಮಃ - ವಸವಃ ಎಂದರೆ ಎಲ್ಲವನ್ನೂ ಆಚ್ಛಾದಿಸಿ ವ್ಯಾಪಿಸಿರುವವನು.  ವಸು ಮನಸೇ ನಮಃ - ವಸು ಮನಸೇ ಎಂದರೆ ನಿತ್ಯ ನಿರ್ಮಲನು, ಕ್ಷಮಾಶೀಲನು ಮತ್ತು ಸರ್ವರಲ್ಲಿರುವ ಸದ್ಗುಣಗಳನ್ನು ಮಾತ್ರ ಗುರುತಿಸಿ ಉದ್ಧರಿಸುವವನು ಎಂದರ್ಥ.  ಸಮಾತ್ಮನೇ ನಮಃ - ಸಮಾತ್ಮನೇ ಎಂದರೆ ಯಾವ ವಿಕಾರಗಳೂ ಇಲ್ಲದೆ ರಾಗ ದ್ವೇಷಾದಿ ಭಿನ್ನ ಭಾವಗಳಿಲ್ಲದೆ ಸಕಲ ವಸ್ತುಗಳಲ್ಲಿಯೂ, ಜೀವಿಗಳಲ್ಲಿಯೂ ಚೈತನ್ಯ ರೂಪದಲ್ಲಿ ಸಮವಾಗಿ ಏಕಪ್ರಕಾರವಾಗಿರುವವನು.  ಎಲ್ಲವೂ ತನ್ನದೇ ಸೃಷ್ಟಿಯಾಗಿರುವುದರಿಂದ ಎಲ್ಲರನ್ನೂ, ಎಲ್ಲರಲ್ಲೂ ತಾನೇ ವ್ಯಾಪಿಸಿದ್ದೇನೆಂಬ ಅರ್ಥ.  
 
ಚಿತ್ರಕೃಪೆ : ಅಂತರ್ಜಾಲ

Tuesday, December 31, 2013

ಕರುಣಾ ಸಂಧಿ - ೧೩ ನೇ ಪದ್ಯ



ಧನವ ಸಂರಕ್ಷಿಸುವ ಫಣಿ ತಾ
ನುಣದೆ ಮತ್ತೊಬ್ಬರಿಗೆ ಕೊಡದನು
ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು|
ಪ್ರಣತರನು ಕಾಯ್ದಿಹನು ನಿಷ್ಕಾ
ಮನದಿ ನಿತ್ಯಾನಂದಮಯ ದು
ರ್ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ ||೧೩||



ಪ್ರತಿಪದಾರ್ಥ :  ಧನವ ಸಂರಕ್ಷಿಸುವ ಫಣಿ - ಭೂಮಿಯಲ್ಲಿ ಹೂತಿಟ್ಟ ನಿಧಿಯನ್ನು ಸಂರಕ್ಷಿಸುವ ಸರ್ಪವು,  ತಾನುಣದೆ, ಮತ್ತೊಬ್ಬರಿಗೆ ಕೊಡದೆ -   ತಾನೂ ಅನುಭವಿಸದೆ, ಮತ್ತೊಬ್ಬರಿಗೂ ನೀಡದೆ, ಅನುದಿನದಿ - ಪ್ರತಿದಿನವೂ, ನೋಡುತ - ಸುಮ್ಮನೆ ಧನವನ್ನು ನೋಡುತ್ತಲೇ ಕುಳಿತು, ಸುಖಿಸುವಂದದಿ - ಧನವು ಜೋಪಾನವಾಗಿದೆ ಎಂಬ ಸಂತೃಪ್ತ ಭಾವದಿಂದ ಸುಖ ಪಡುವ ರೀತಿಯಲ್ಲಿ, ಲಕುಮಿವಲ್ಲಭನು - ಲಕ್ಷ್ಮೀಪತಿಯಾದ ಶ್ರೀಹರಿಯು, ಪ್ರಣತರನು - ಶರಣಾಗತರಾದ ಭಕ್ತರನ್ನು, ನಿಷ್ಕಾಮನದಿ - ಯಾವುದೇ ತರಹದ ಪ್ರತಿಫಲಾಪೇಕ್ಷೆಯೂ ಇಲ್ಲದೆ, ಕಾಯ್ದಿಹನು - ಸರ್ಪ ನಿಧಿಯನ್ನು ಕಾಯುವಂತೆ (ಸರ್ಪಗಾವಲಿನಂತೆ) ಕಾಪಾಡುತ್ತಾನೆ, ನಿತ್ಯಾನಂದಮಯ - ಭಗವಂತನು ನಿತ್ಯವೂ ನಿರತವೂ ಆನಂದಮಯನು, ದುರ್ಜನರ ಸೇವೆಯನೊಲ್ಲ - ನಿಜವಾದ ಶ್ರದ್ಧೆ ಭಕ್ತಿಗಳಿಲ್ಲದೆ ತೋರಿಕೆಗಾಗಿ ಸೇವೆಯನ್ನು  ಮಾಡುವವರ  ಸೇವೆಯನ್ನು ಸ್ವೀಕರಿಸುವವನಲ್ಲ, ಅಪ್ರತಿಮಲ್ಲ - ಮೂರು ಲೋಕಗಳಿಗೂ ಸಾಟಿಯಿಲ್ಲದ 
ಜಗಕೆಲ್ಲ - ಜಗಜ್ಜಟ್ಟಿಯಾಗಿರುವನು.                                                                                                                                      

                                                                                                                               
ಇಲ್ಲಿ ದಾಸರಾಯರು ಫಣಿಯು ಹಣವನ್ನು ಹೇಗೆ ಕಾಪಾಡುತ್ತದೆಯೆಂಬುದನ್ನು ವಿವರಿಸುತ್ತಾರೆ.  ಅದು  ಹಣವನ್ನು ತಾನೂ ಉಪಯೋಗಿಸುವುದಿಲ್ಲ ಮತ್ತೊಬ್ಬರಿಗೂ ಕೊಡುವುದಿಲ್ಲ, ಹೇಗೆ ತನಗೆ ಉಪಯೋಗವಿಲ್ಲದಿದ್ದರೂ ಹಣವನ್ನು ಕಾಪಾಡುತ್ತದೆಯೋ ಹಾಗೆ ಫಣಿಶಯನನಾದ ಭಗವಂತನು ಜೀವಿಗಳಿಗೆ ಸುಖವನ್ನು ಕೊಡುತ್ತಾನೆ.  ಕಾದಿಟ್ಟು ಕೊಡುತ್ತಾನೆ ಆದರೆ ಅದರಿಂದ ಅವನಿಗೆ ಪ್ರಯೋಜನವೇನೂ ಇಲ್ಲ.  ಕೇವಲ ಜೀವಿಗಳ ಸುಖಕ್ಕಾಗಿ ಆನಂದವನ್ನು ಕಾದಿಟ್ಟು ಕೊಡುತ್ತಾನೆ.  ಇದನ್ನು ದಾಸರು ಫಣಿ ಕಾಯುವ ಧನದ ಉಪಮೆಯ ಮೂಲಕ  ಪರಮಾತ್ಮನ ಕರುಣೆಯನ್ನು ಹೇಳುತ್ತಿದ್ದಾರೆ.  ಪರಮಾತ್ಮ ಪ್ರಣತರನ್ನು ತತ್ವಾಭಿಮಾನಿಗಳಾದ ಬ್ರಹ್ಮ, ವಾಯು, ಶೇಷ ಮೊದಲಾದವರಿಗೆ ಕೊಡುತ್ತಾನೆ.  ಅಸುರ ತತ್ವಾಭಿಮಾನಿಗಳಿಗೆ ಕೊಡುವುದಿಲ್ಲ.  ಪಾಪ ಪುರುಷನೆಂಬ ಪಾಪಿಯ ಕೈಗೆ ಕೊಡದೆ ನಮ್ಮನ್ನು ಕಾಪಾಡುತ್ತಾನೆ.  ಭಗವಂತನು ಪ್ರತೀ ಜೀವಿಗೂ ಸ್ವರೂಪ ಶರೀರದ ಮೇಲೆ ೨೫ ಶರೀರಗಳನ್ನು ಕೊಟ್ಟಿದ್ದಾನೆ.  ಪರಮಾತ್ಮನ ರಕ್ಷಾ ಕವಚ ಜೀವಿಗಳಿಗೆ ಹೀಗಿರುತ್ತದೆ .  ಸಜ್ಜನರು ಕರುಣಾಳು ಭಗವಂತನಿಗೆ ನಿಧಿಯಿದ್ದಂತೆ.  ಹಾಗಾಗಿ ಪರಮಾತ್ಮ ಅವರನ್ನು ಕರುಣೆಯಿಂದ ಕಾಪಾಡುತ್ತಾನೆ.  ಹಾಗೇ ಪರಮಾತ್ಮ ಕೂಡ ಸಜ್ಜನರಿಗೆ ನಿಧಿಯಂತೆ.  ಸಜ್ಜನರು ಪರಮಾತ್ಮನನ್ನು ಬಿಟ್ಟು ಆಲೋಚಿಸಬಾರದು, ಅಗಲಬಾರದು.  ಪರಮಾತ್ಮನು ಎಂತಹ ಕರುಣಿ ಎಂಬುದನ್ನು ದಾಸರಾಯರು ಈ ಕೃತಿಯಲ್ಲಿ ಕರುಣಿಸೆನಗಿನಿತು ಕರುಣಾಳು | ನಿನ್ನ ಚರಣದಲ್ಲಿ ಭಕುತಿ ವಿಷಯದ ವಿರುಕುತಿ ||  ಚರಣದಲ್ಲಿ ಬಿಂಬನೇ ಸರ್ವ ಪ್ರಯೋಜನವ ಮಾಡಿ ಪ್ರತಿ ಬಿಂಬರಿಗೆ ತತ್ಫಲಗಳೀವ.   ಕಾವ ಬಿಂಬ ಸ್ವತಂತ್ರ - ಪ್ರತಿಬಿಂಬ ಅಸ್ವತಂತ್ರತಮನೆಂಬ ಸುಜ್ಞಾನ ಪೂರ್ವಕ ನಿನ್ನ ಭಜಿಪ ಸುಖ.. ಕರುಣಿಸೆನಗಿನಿತು ಕರುಣಾಳು ಎಂದು ಕೇಳಿಕೊಳ್ಳುತ್ತಿದ್ದಾರೆ. 

ಧನವ ಸಂರಕ್ಷಿಸುವ ಫಣಿ - "ಫಣಿ" ಎಂದರೆ ಶೇಷನ ಅವತಾರ.   ರಾಮಾವತಾರವಾದಾಗ ಶೇಷನು ಲಕ್ಷ್ಮಣನಾಗಿ ತನ್ನ ಸ್ವಾಮಿಯನ್ನು ಅತೀ ಜೋಪಾನವಾಗಿ ಕಾಪಾಡಿದ.  ದಂಡಕಾರಣ್ಯದಲ್ಲಿ ಪರ್ಣಕುಟೀರದೊಳಗೆ ತನ್ನ ಸ್ವಾಮಿ ಶ್ರೀರಾಮ ಹಾಗೂ ಸೀತೆಯರನ್ನಿರಿಸಿ, ರಾತ್ರಿಯೆಲ್ಲಾ ನಿದ್ರಿಸದೆ ಎಚ್ಚರದಿಂದ ಕಾವಲು ಕಾಯ್ದ ಶೇಷ.  ಪ್ರೀತಿ ಭಕ್ತಿಗಳಿಂದ ಅವರನ್ನು ಅನುದಿನವೂ ಶೇಷನು
 ನೋಡುತ್ತಾ ಸುಖಿಸುತ್ತಾನೆ. 
ತಾನುಣದೆ ಮತ್ತೊಬ್ಬರಿಗೆ ಕೊಡದನುದಿನದಿ ನೋಡುತ -   ಭೂಮಿಯಲ್ಲಿ ಹುದುಗಿಸಿಟ್ಟ ನಿಧಿಯನ್ನು ನಾಗರಹಾವು ಬಹಳ ಜತನದಿಂದ ಕಾಯುತ್ತದೆ.  ಆ ನಿಧಿಯನ್ನು ಅನುಭವಿಸುವುದೂ ಇಲ್ಲ, ಮತ್ತೊಬ್ಬರಿಗೆ ಅನುಭವಿಸಲು ಬಿಡುವುದೂ ಇಲ್ಲ ಆದರೆ ಸದಾ ನಿಧಿಯನ್ನು ನೋಡುತ್ತಾ ಸುಖಿಸುತ್ತದೆ.  ಭಗವಂತನಿಗೂ ಹೀಗೆ ತನ್ನ ಭಕ್ತರನ್ನು ಸುಖದಿಂದ ಕಾಪಾಡುವ ಆಸೆ, ತನಗೇನೂ ಸುಖ ಬರಬೇಕಾಗಿಲ್ಲವಾದರೂ,  ಅಥವಾ ತನಗೇನೂ ದುಃಖ ನಿವಾರಣೆ ಆಗಬೇಕಾಗಿಲ್ಲದಿದ್ದರೂ ಅವನು ನಮ್ಮನ್ನು ನಿಧಿ ಕಾಯುವ ಫಣಿಯಂತೆ ಕಾಯುತ್ತಾನೆ, ಪೊರೆಯುತ್ತಾನೆ.  ನಿಧಿ ಕಾಯುವ ಫಣಿಯೂ ನಿಷ್ಕಾಮನೆಯಿಂದಲೇ ಕಾಯುತ್ತದೆ ಮತ್ತು ಭಗವಂತನಿಗೂ ಕಾಮನೆಯಿಲ್ಲ.  ಎಲ್ಲವೂ ತನ್ನದೇ, ಬ್ರಹ್ಮಾಂಡದ ಒಡೆಯನೇ ಅವನು.  ಆದರೂ ಭಕ್ತರು / ಸಜ್ಜನರೆಂದರೆ ಅವನಿಗೆ "ನಿಧಿ"ಯಂತೆ.  ಪ್ರತಿಫಲಾಪೇಕ್ಷೆಯೇ ಇಲ್ಲದೆ ಸಂರಕ್ಷಿಸುವವನು ಪರಮಾತ್ಮ.  ಗುಪ್ತವಾಗಿ ನಿಧಿಯನ್ನು ನಾನಾ ವಿಧದಲ್ಲಿ ಜತನವಾಗಿರಿಸಿ ಹೇಗೆ ಭೂಗತ ಮಾಡಿ ಕಾಪಾಡುವೆವೋ ಹಾಗೆ  ಭಗವಂತ ನಮ್ಮನ್ನು ಕಾಪಾಡುತ್ತಾನೆ.   "ಜೀವ" ಭಗವಂತನಿಗೆ ಬಂಗಾರವಿದ್ದಂತೆ, ಅದನ್ನು ಶರೀರವೆಂಬೋ ಅಭೇದ್ಯವಾದ ಸ್ಥೂಲ ಕೋಟೆಯೊಳಗೆ ಅನೇಕ ಆವರಣಗಳನ್ನು ಸೃಷ್ಟಿಸಿ ಒಳಗಿಟ್ಟು ಜತನವಾಗಿ ಕಾಪಾಡುತ್ತಾನೆ.  ಹೀಗೆ ಸೃಷ್ಟಿ ಮಾಡಿದ ಜೀವನನ್ನು ಭಗವಂತ ಯೋಗ್ಯರಾದವರಿಗೆ ಮಾತ್ರವೇ ಕೊಡುತ್ತಾನೆ, ಅಸುರರಿಗಲ್ಲ.  ಯೋಗ್ಯರೆಂದರೆ ತತ್ವಾಭಿಮಾನಿ ದೇವತೆಗಳೆಂದರ್ಥ.  ಅಸಂಖ್ಯಾತ ತತ್ವಾಭಿಮಾನಿ ದೇವತೆಗಳು ಜೀವಿಯೆಂಬ ಭಕ್ತನನ್ನು (ನಿಧಿಯನ್ನು) ಅನುಭವಿಸುತ್ತಾರೆ.  ಶರೀರವೆಂಬ ಸ್ಥೂಲದೇಹದಲ್ಲೇ ಆಗಲಿ, ಸೂಕ್ಷ್ಮ ದೇಹದಲ್ಲೇ ಆಗಲಿ, ಎಲ್ಲಿಯೂ ಅಸುರರಿಗೆ ಪ್ರವೇಶವಿಲ್ಲ.  ಈ ರೀತಿಯ ಭದ್ರವಾದ ಕೋಟೆಯಂತಹ ಶರೀರವನ್ನು ಕೊಟ್ಟು ಸಂಸಾರದಲ್ಲಿ ಬಂಧಿಸಿಟ್ಟು ಶ್ರೀಹರಿಯು ರಕ್ಷಣೆಯನ್ನು ಮಾಡಿ, ಸಾಧನೆಯನ್ನೂ ಮಾಡಿಸುವವನು ಭಗವಂತ.  ಆದ್ದರಿಂದಲೇ ಈ ಶರೀರವನ್ನು ಸಾಧನಾ ಶರೀರವೆಂದು ಕರೆಯುವುದು.
ಲಕುಮಿ ವಲ್ಲಭನು - ಜೀವರನ್ನು ಕಾಪಾಡಿ ಶ್ರೀಹರಿಗೆ ಯಾವ ಲಾಭವಾಗಲೀ, ನಷ್ಟವಾಗಲೀ ಇಲ್ಲ.  ಆತ ತನ್ನ ಮನದನ್ನೆಯಾದ ಲಕ್ಷ್ಮಿಯ ಮುದ್ದು ಮಕ್ಕಳು ಜೀವರು, ಮತ್ತು ಅವರ ಮೇಲಿನ ಪ್ರೀತಿ ಮತ್ತು ಕರುಣೆಯಿಂದ ಲಕ್ಷ್ಮೀದೇವಿಯು ಅವರನ್ನು ಕಾಪಾಡೆಂದು ಕೇಳಿಕೊಳ್ಳುತ್ತಾಳಾದ್ದರಿಂದಲೇ ಕಾಪಾಡುತ್ತಾನೆ.  ಸಂಪತ್ತಿಗೇ ಅಧಿದೇವತೆಯಾದ ಲಕ್ಷ್ಮೀದೇವಿಯ ವಲ್ಲಭನಾದ ಭಗವಂತನಿಗೆ ಜೀವರು ಏನನ್ನು ತಾನೇ ಕೊಟ್ಟು ತೃಪ್ತಿಪಡಿಸಲು ಸಾಧ್ಯ?

ಪ್ರಣತರನು ಕಾದಿಹನು - ಜೀವರನ್ನು ತತ್ವಾಭಿಮಾನಿ ದೇವತೆಗಳಾದ ಬ್ರಹ್ಮದೇವರು, ವಾಯುದೇವರು ಮುಂತಾದವರಿಗೆ ಕೊಟ್ಟು ಬಿಡುತ್ತಾನೆ ಭಗವಂತ.  ಪ್ರಣತರು ಎಂದರೆ ವಾಯುದೇವರ ಭಕ್ತರು.  ಯಾರು ವಾಯುದೇವರ ಮುಖಾಂತರ ಭಗವಂತನನ್ನು ಪ್ರಾರ್ಥಿಸುತ್ತೇವೋ ಅವರಿಗೆ ಮಾತ್ರ ಅವನು ಒಲಿಯುತ್ತಾನೆ.  "ವಾಯುದೇವಾಂತರ್ಗತ" ಎನ್ನಬೇಕು.  ಪ್ರಣತರನ್ನು ಭಗವಂತ ಕಾಯುತ್ತಾನೆ.  ಪ್ರಣತರು ನಮ್ಮನ್ನು ಕಾಯುತ್ತಾರೆ.
ನಿಷ್ಮಾಮನದಿ ನಿತ್ಯಾನಂದಮಯ - ಸಕಲ ಸಜ್ಜನರೂ, ಭಕ್ತರೂ ತಮ್ಮ ತಮ್ಮ ಹೃದಯ ಕಮಲವೆಂಬ ಗುಹೆಯಲ್ಲಿ ಸದಾ ಬಚ್ಚಿಟ್ಟುಕೊಂಡಿರುವಂತಹ ಮಹಾ ಶ್ರೇಷ್ಠವಾದ ನಿಧಿ ಭಗವಂತ.   ನಿತ್ಯಾನಂದಮಯನಾದ ಶ್ರೀಹರಿಗೆ ಭಕ್ತರು ’ನಿಧಿ’ ಮತ್ತು ಭಕ್ತರಿಗೆ ಭಗವಂತ ’ನಿಧಿ’.  ಭಕ್ತರು ಭಗವಂತನನ್ನು ಭಕ್ತಿ ಪ್ರೀತಿಗಳಿಂದ ಆರಾಧಿಸಿದರೆ, ಭಗವಂತನು ತನ್ನ ಭಕ್ತರನ್ನು ಅತ್ಯಂತ ವಾತ್ಸಲ್ಯ ಮತ್ತು ಕರುಣೆಯಿಂದ ಕಾಪಾಡುತ್ತಾನೆ ಎಂದರ್ಥ.
ದುರ್ಜನರ ಸೇವೆಯನೊಲ್ಲ - ಭಗವಂತನು ಸಜ್ಜನರನ್ನು ಅವರ ಭಕ್ತಿಗೆ ಮೆಚ್ಚಿ ಅವರಿಂದ ಸೇವೆ ಸ್ವೀಕರಿಸಿ ಅವರನ್ನು ಕಾಪಾಡುತ್ತಾನೆ.  ಅದೂ ಕೂಡ ತನಗಾಗಿಯೇನೂ ಅಲ್ಲ, ಜೀವರಿಗೆ ಮೋಕ್ಷ ಕೊಡುವುದಕ್ಕಾಗಿ ಮತ್ತು ಅವರಿಂದ ಸಾಧನೆಯನ್ನು ಮಾಡಿಸುವುದಕ್ಕಾಗಿ ಅಷ್ಟೆ.  ತನ್ನನ್ನು ಪೂಜಿಸದ ದುರ್ಜನರನ್ನು ಅವನು ಕೋಪದಿಂದಲಾಗಲೀ, ದ್ವೇಷದಿಂದಲಾಗಲೀ ನಾಶವನ್ನೇನೂ ಪಡಿಸುವುದಿಲ್ಲ.  ಆದರೆ ಅವರು ತಮ್ಮ ಸ್ವಾರ್ಥಕ್ಕಾಗಿ ಸೇವೆ ಮಾಡಲಿಚ್ಛಿಸಿದರೆ, ಅದನ್ನು ಭಗವಂತ ಒಲ್ಲ.

ಜಗಕೆಲ್ಲ ಅಪ್ರತಿಮಲ್ಲ - ಭಗವಂತನು ಸರ್ವ ಶಕ್ತನು.  ಅವನನ್ನು ಯಾರು ಏನೂ ಮಾಡಲಾರರು.  ಅವನಿಗೆ ಯಾರಿಂದಲೂ ಯಾವ ಅಪಾಯವಾಗಲೀ, ಭಯವಾಗಲೀ ಇಲ್ಲ.  ಅವನಿಗೆ ಯಾರ ಸಹಾಯವೂ ಬೇಕಾಗಿಲ್ಲ.   ಅವನು ಸಜ್ಜನರಿಂದ ಮಾತ್ರ ಸೇವೆಯನ್ನು ಸ್ವೀಕರಿಸುತ್ತಾನೆ ಮತ್ತು ಅವರನ್ನು ಅನುಗ್ರಹಿಸಿ, ರಕ್ಷಣೆ ಮಾಡುತ್ತಾನೆ.


ನಿಷ್ಕಾಮನದಿ ಕಾದಿಹನು - ಶೇಷದೇವರು ಭಗವಂತನಿಗೆ ಪರ್ಯಂಕ.  ಶೇಷಶಯನನಾದ ಶ್ರೀಹರಿ ಸದಾ ಶೇಷನ ಸೇವೆಯನ್ನು ಸ್ವೀಕರಿಸುತ್ತಿರುವನು.  ಲಕ್ಷ್ಮಣನಾಗಿ  ನಿತ್ಯ ನಿರಂತರವಾಗಿ ನಿಷ್ಕಾಮದಿಂದ ಸ್ವಾಮಿಯ ಪಾದವಂದನೆ ಮಾಡುತ್ತಿದ್ದನು. 


ಭಕ್ತರು ಭಗವಂತನನ್ನು  ಭಕ್ತಿ ಹಾಗೂ ಪ್ರೀತಿಗಳಿಂದ ಆರಾಧಿಸಿದಾಗ ಭಗವಂತ ಭಕ್ತರನ್ನು ವಾತ್ಸಲ್ಯ ಕರುಣೆಗಳಿಂದ ರಕ್ಷಿಸುತ್ತಾನೆ.  ನಮ್ಮ ಹೃತ್ಕಮಲದಲ್ಲಿಯೇ ನೆಲೆಸಿರುವ ಮೂಲೇಶನನ್ನು ನಾವು ಸದಾ ಧ್ಯಾನಿಸುತ್ತಾ ವಿಷಯಾಸಕ್ತ ವಿಚಾರಗಳೆಂಬ ರಾಕ್ಷಸರು ಬಾಧೆ ಮಾಡದಂತೆ ಜತನವಾಗಿ ಕಾಯ್ದುಕೊಳ್ಳಬೇಕು.  ಎಲ್ಲಿ ಈ ರಾಕ್ಷಸರು ನೆಲೆಸಿರುತ್ತಾರೋ ಅಲ್ಲಿ ಭಗವಂತ ಇರುವುದಿಲ್ಲ, ಮರೆಯಾಗಿಬಿಡುತ್ತಾನೆ.  ಹಾಗಾಗದಂತೆ ನೋಡಿಕೊಳ್ಳುವುದೆಂದರೆ ’ಫಣಿ’ ನಿಧಿಯನ್ನು ಕಾಯ್ದಂತೆ ಕಾಯ್ದುಕೊಂಡು ನಮ್ಮ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳಬೇಕು.  ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳುವುದೆಂದರೆ ನಾವು ನಿಷಿದ್ಧಾನ್ನ ಪದಾರ್ಥಗಳನ್ನೂ, ಪಾನಗಳನ್ನೂ ತ್ಯಜಿಸಬೇಕು, ಉಪವಾಸ, ವ್ರತ, ಪೂಜೆ, ಧ್ಯಾನಗಳನ್ನು  ಮಾಡಿಕೊಳ್ಳುವುದೆಂದು ಅರ್ಥ. 


ಪ್ರಣತರಲ್ಲಿ ಮುಖ್ಯನಾದ ವಾಯುದೇವರನ್ನು ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ :


ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ

ಶ್ರೀಕಂಠಮುಖ್ಯಸುರರಿಗೆ | ಸುರರಿಗಿಲ್ಲವೊ ಭಾರ-
ತೀಕಾಂತ ನಿನಗೆ ಬಹದೆಂತೋ || - ದೇವಾಸುರರಲ್ಲಿ ಯುದ್ಧವಾದಾಗ ಅಸುರರು ರುದ್ರದೇವರ ಬಲದಿಂದ ವಿಜೃಂಭಿಸಿದರು.  ದೇವತೆಗಳು ಉದ್ಗೀಥನಾಮಕ ಶ್ರೀಹರಿಯನ್ನು ಉಪಾಸಿಸಿ ಅಸುರರನ್ನು ಗೆಲ್ಲುವ ಪ್ರಯತ್ನ ಮಾಡಿದರು.  ಯಾವುದೇ ದೇವತೆಯ ಪ್ರತಿಮೆಯನ್ನು ಮಾಡಿ ಅದರಲ್ಲಿ ಉದ್ಗೀಥನನ್ನು ಉಪಾಸಿಸಲು ಆರಂಭಿಸಿದರೂ ಅಸುರರು ಆ ಪ್ರತಿಮೆಯನ್ನು ಅಪವಿತ್ರ ಮಾಡಿ ಬಿಡುತ್ತಿದ್ದರು.  ಕೊನೆಗೆ ದೇವತೆಗಳು ಮುಖ್ಯಪ್ರಾಣನ ಪ್ರತಿಮೆಯನ್ನು ಮಾಡಿ ಉಪಾಸನೆ ಮಾಡಲಾರಂಭಿಸಿದರು.  ಅಸುರರು ಮುಖ್ಯಪ್ರಾಣ ದೇವರ ಪ್ರತಿಮೆಯ ಮೇಲೆ ಬೀಳಲು, ಮಣ್ಣು ಹೆಂಟೆಯು ವಜ್ರದ ಬಂಡೆಯ ಮೇಲೆ ಬಿದ್ದರೆ ಹೇಗೆ ಪುಡಿಯಾಗುವುದೋ ಹಾಗೆ ಚದುರಿ ಹೋದರು.  ಶ್ರೀಹರಿಗೆ ವಾಯುದೇವರು ಶ್ರೇಷ್ಠ ಪ್ರತಿಮೆ.  ಯಾರು ಅತಿ ಶುದ್ಧವಾದ ವಾಯುದೇವರ ಪ್ರತಿಮೆಯಲ್ಲಿ ಭಗವಂತನನ್ನು ಆರಾಧಿಸುವರೋ ಅವರು ಭಗವಂತನಿಗೆ ಅತಿ ಪ್ರಿಯರಾಗುತ್ತಾರೆಂದು ನುಡಿದಿದ್ದಾರೆ. 

ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿ-ಕೊಳುವೆ

ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜಭಾಗ-
ವತರ ಸಂಗವನೆ ಕರುಣಿಸೋ || - ಸತತವೂ ಸ್ಮರಿಸುತ್ತಾ  ಸ್ತೋತ್ರ ಮಾಡುತ್ತಾ ನಿನ್ನನ್ನೇ ಬೇಡುತ್ತಾ ಶರಣಾಗುವೆ.  ನನ್ನ ಉದ್ಧರಿಸಲೋಸುಗ ನಿನ್ನ ಸಂಬಂಧವಾದ ಜ್ಞಾನವನ್ನೂ, ವಿಜ್ಞಾನವನ್ನೂ ಕೊಟ್ಟು, ಪರಮ ಭಾಗವತರ ಸಂಗವನ್ನೂ ದಯಪಾಲಿಸಿ, ಕರುಣೆಯಿಂದ ರಕ್ಷಿಸು ಎನ್ನುತ್ತಾರೆ.  ಇದೇ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳುವುದರ ಅರ್ಥ.  ಸದಾ ಸ್ಮರಣೆ, ನಿತ್ಯ ನಿರಂತರ ಧ್ಯಾನ, ಸ್ತೋತ್ರಗಳೇ ನಮ್ಮೊಳಗಿರುವ ಎಲ್ಲಾ ಕೊಳೆಯನ್ನೂ ತೊಳೆದು ಪವಿತ್ರವಾಗಿಸುವ ಸಾಧನವಾಗಿದೆ.

ಚಿತ್ರಕೃಪೆ : ಅಂತರ್ಜಾಲ












Wednesday, December 11, 2013

ಕರುಣಾ ಸಂಧಿ - ೧೨ ನೇ ಪದ್ಯ



ಇಟ್ಟಿಕಲ್ಲನು ಭಕುತಿಯಿಂದಲಿ
ಕೊಟ್ಟ ಭಕುತಗೆ ಮೆಚ್ಚಿ ತನ್ನನೆ
ಕೊಟ್ಟ ಬಡಬ್ರಾಹ್ಮಣನ ಉಪ್ಪಿಡಿಯವಲಿಗಖಿಳಾರ್ಥ |
ಕೆಟ್ಟ ಮಾತುಗಳೆಂದ ಚೈದ್ಯನ
ಪೊಟ್ಟೆಯೊಳಗಿಂಬಿಟ್ಟ ಬಾಣದ
ಲಿಟ್ಟ ಭೀಷ್ಮನ ಅವಗುಣಗಳೆಣಿಸಿದನೆ ಕರುಣಾಳು  ||೧೨||


ಪ್ರತಿಪದಾರ್ಥ : ಇಟ್ಟಿಕಲ್ಲನು - ಯಜ್ಞಕುಂಡ ನಿರ್ಮಾಣ ಮಾಡಲು ಬಳಸುವ ಇಟ್ಟಿಗೆ (ಮೃದುವಾದ ಕೆಂಪು) ಕಲ್ಲು, ಭಕುತಿಯಿಂದಲಿ ಕೊಟ್ಟ - ಭಕ್ತಿಯಿಂದ ಕೂಡಿ ಕೊಟ್ಟಂತಹ, ಭಕುತಗೆ - ಭಕ್ತನಾದ ಪುಂಡರೀಕನಿಗೆ, ಮೆಚ್ಚಿ ತನ್ನನೆ ಕೊಟ್ಟ - ಭಕ್ತಿಗೆ ಪ್ರಸನ್ನನಾಗಿ ಶ್ರೀಹರಿಯು ತನ್ನ ಭಕ್ತನಿಗೆ ತನ್ನನ್ನೇ ಕೊಡುವನು, ಬಡ ಬ್ರಾಹ್ಮಣನ - ಅತ್ಯಂತ ದೀನ ಸ್ಥಿತಿಯಲ್ಲಿದ್ದ ಸುಧಾಮನೆಂಬ ಬ್ರಾಹ್ಮಣನ, ಒಪ್ಪಿಡಿಯವಲಿಗೆ - ಒಂದೇ ಒಂದು ಮುಷ್ಟಿ ಅವಲಕ್ಕಿಗೆ, ಅಖಿಳಾರ್ಥ - ಸಕಲ ಸಂಪತ್ತುಗಳನ್ನೂ, ಕೆಟ್ಟ ಮಾತುಗಳೆನದೆ - ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಅವುಗಳನ್ನು ಲಕ್ಷಿಸದೆ ಕ್ಷಮಿಸಿ, ಚೈದ್ಯನ - ಚೇದಿ ರಾಜನ ಮಗನಾದ ಶಿಶುಪಾಲನನ್ನು ಸಂಹರಿಸಿ, ಪೊಟ್ಟೆಯೊಳಗಿಂಬಿಟ್ಟ - ಅವನಲ್ಲಿದ್ದ ವೈಕುಂಠದ ದ್ವಾರಪಾಲಕನಾದ ಜಯನನ್ನು ತನ್ನ ಹೊಟ್ಟೆಯೊಳಗೆ ಜೋಪಾನವಾಗಿಟ್ಟುಕೊಂಡು ಉದ್ಧರಿಸಿದ, ಬಾಣದಲಿಟ್ಟ ಭೀಷ್ಮನ - ಅರ್ಜುನನ ಸಾರಥಿಯಾಗಿ ಕುರುಕ್ಷೇತ್ರ ಯುದ್ಧದಲ್ಲಿದ್ದ ತನ್ನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದ ಭೀಷ್ಮರ, ಅವಗುಣಗಳೆಣಿಸಿದನೆ - ಕೆಟ್ಟ ನಡತೆಯೆಂದೂ, ದುಷ್ಟ ಗುಣಗಳೆಂದೂ ಎಣಿಸಿದನೇ, ಕರುಣಾಳು - ಅತ್ಯಂತ ದಯಾಮಯನಾದವನು, ಕರುಣಾಸಾಗರನು.


ಭಗವಂತ ಎಂಥಹ ಕರುಣಾಳು ಎಂದರೆ ಅವನ ಭಕ್ತನಾದ ಪುಂಡರೀಕನು ಪ್ರತ್ಯಕ್ಷನಾದ ಪಾಂಡುರಂಗನಿಗೆ ನಿಲ್ಲು, ಕಾದಿರು ಎಂದು ಹೇಳಿ ಇಟ್ಟಿಗೆಯನ್ನು ಕೊಟ್ಟು ಅವನನ್ನು ನಿಲ್ಲಿಸಿ, ತನ್ನ ತಂದೆ-ತಾಯಿಗಳ ಕರ್ತವ್ಯವನ್ನು ಮುಗಿಸಿ ನಂತರ ಭಗವಂತನಾದ ಪಾಂಡುರಂಗನನ್ನು ಉಪಚರಿಸುತ್ತಾನೆ. ಅವನ ಭಕ್ತಿಗೆ ಮೆಚ್ಚಿ ಪಾಂಡುರಂಗ ಇಂದಿಗೂ ಇಟ್ಟಿಗೆಯ ಮೇಲೆ ನಿಂತು ಸೊಂಟದ ಮೇಲೆ ಕೈಯಿಟ್ಟುಕೊಂಡು ಬಂದ ಭಕ್ತರಿಗೆಲ್ಲಾ ದರುಶನವನ್ನು ಕೊಡುತ್ತಲೇ ಇದ್ದಾನೆ. ಮತ್ತೊಬ್ಬ ಬಡ ಬ್ರಾಹ್ಮಣನಾದ ಸುಧಾಮ ತನ್ನ ಬಡತನದ ಬೇಗೆಯನ್ನು ತಾಳಲಾರದೆ ಭಗವಂತನಲ್ಲಿಗೆ ಬಂದಾಗ ಅವನನ್ನು ಆದರದಿಂದ ಉಪಚರಿಸಿ ಅವನು ತಂದು ಕೊಟ್ಟ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಸಂತೋಷಿಸಿ ಅವನಿಗೆ ಮಹದೈಶ್ವರ್ಯವನ್ನು ಕರುಣಿಸುತ್ತಾನೆ. ಇನ್ನು ತನ್ನ ಬಳಗದವನೇ ಆದ ಚೈದ್ಯರಾಜ ಶಿಶುಪಾಲನನ್ನು ಅವನ ತಾಯಿಯ ಬೇಡಿಕೆಯ ಪ್ರಕಾರ ಆ ಚೈದ್ಯ/ಶಿಶುಪಾಲ ನೂರು ಬೈಗುಳ ಬೈಯುವ ತನಕ ಕಾದು ನಂತರ ಅವನಿಗೆ ತನ್ನ ಚಕ್ರದಿಂದ ಮೋಕ್ಷವನ್ನು ಕರುಣಿಸಿ ಅವನಲ್ಲಿದ್ದ ದೈತ್ಯನನ್ನು ತಮಸ್ಸಿಗೆ ಕಳುಹಿಸುತ್ತಾನೆ. ಮತ್ತೊಬ್ಬ ಮಹಾನ್ ಭಕ್ತ ಭೀಷ್ಮಾಚಾರ್ಯರು, ಇವರು ಭಗವಂತನ ಕೈಯಲ್ಲಿ ಶಸ್ತ್ರವನ್ನು ಹಿಡಿಸುತ್ತೇನೆಂದು ಪಣತೊಟ್ಟಿದ್ದರು. ಕರುಣಾಳುವಾದ ಭಗವಂತ ಅವರ ಇಚ್ಛೆಯನ್ನು ಪೂರೈಸಲೆಂದು ಆಯುಧವನ್ನು ಎತ್ತಿ ಹಿಡಿದ. ಅಂಥಾ ಭೀಷ್ಮಾಚಾರ್ಯರಿಗೆ ಶರಮಂಚದ ಮೇಲೆ ಮಲಗಿದ್ದಾಗ ಅವರಿಂದ ವಿಷ್ಣು ಸಹಸ್ರನಾಮವನ್ನು ಜಗತ್ತಿಗೆ ಕೊಡಿಸಿದ ಕರುಣಾಳು ನಮ್ಮ ಭಗವಂತ. ಅಂದರೆ ನಾವು ಪ್ರಾಮಾಣಿಕ ಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಿದರೆ ನಮ್ಮ ಅವಗುಣಗಳನ್ನು ಎಣಿಸದೆಲೇ ಕರುಣಿಸುವವ.

ಈ ಪದ್ಯದಲ್ಲಿ ದಾಸರಾಯರು ಭಗವಂತನನ್ನು ಸದುಪಾಸನೆಯಿಂದ ಒಲಿಸಿಕೊಂಡಾಗ ಯಾರು ಯಾರಿಗೆ ಕರುಣೆ ತೋರಿದನೆಂದು ಉದಾಹರಿಸುತ್ತಾರೆ.  ಅಸದುಪಾಸನೆಯಿಂದ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಆತ್ಮಘಾತುಕತನದಿಂದ ಸದುಪಾಸನೆ ಸಾಧ್ಯವಿಲ್ಲ.  ಸುಧಾಮ, ಶಿಶುಪಾಲ ಮತ್ತು ಭೀಷ್ಮರನ್ನು ಉಧ್ಧರಿಸಿದ್ದಾನೆ.  ಅಸದುಪಾಸನೆಗೆ ಸೂಕ್ತವಾದ ಉದಾಹರಣೆಯಾಗಿ ದುರ್ಯೋಧನ ನಿಲ್ಲುತ್ತಾನೆ.  ಸದುಪಾಸನೆಯನ್ನು ಸಾರುವ ಉದಾಹರಣೆಗಳಿಗೆ ಮೊದಲನೆಯದಾಗಿ ಪುಂಡರೀಕನ ಪ್ರಕರಣವನ್ನು ವಿವರಿಸುತ್ತಾರೆ.  ತಾಯಿ ತಂದೆಯರನ್ನೇ ಪ್ರತ್ಯಕ್ಷ ದೇವರುಗಳೆಂದು ಅವರ ಸೇವೆಯಲ್ಲಿ ನಿರತನಾಗಿದ್ದ ಪುಂಡರೀಕ ದರ್ಶನ ಇತ್ತ ಪಾಂಡುರಂಗನಿಗೆ ನಿಲ್ಲಲು ಒಂದು ಇಟ್ಟಿಗೆಯನ್ನು ಕೊಟ್ಟು ಉಪಚರಿಸಿ, ತಂದೆ-ತಾಯಿಯರ ಕರ್ತವ್ಯವನ್ನು ಪೂರೈಸಿದ.  ಪುಂಡರೀಕನ ಭಕ್ತಿಗೆ ಮೆಚ್ಚಿದ ಭಗವಂತ, ತನ್ನ ಭಕ್ತ ಕೊಟ್ಟ ಇಟ್ಟಿಗೆಯ ಮೇಲೆ ಕಾಯುತ್ತಾ ನಿಂತು ಅವನನ್ನು ಉದ್ಧರಿಸಿದ.  ಅದೇ ರೂಪದಲ್ಲಿ ಪುಂಡರೀಕಪುರ (ಫಂಡರ)ದಲ್ಲಿ ವಿಠಲನಾದ.  ಶುದ್ಧ ಭಕ್ತಿಗೆ ಒಲಿಯುವ ಭಗವಂತ ಭಕ್ತರು ಆದೇಶಿಸಿದಂತೆ ನಡೆಯುವವನು.  ತಾನು "ಅಹಂ ಭಕ್ತ ಪರಾಧೀನ" ಎಂದು ಹೇಳಿದವನು.  ಸುಧಾಮನ ಹಿಡಿ ಅವಲಕ್ಕಿಯನ್ನು ಸ್ವೀಕರಿಸಿ ಅಖಿಳಾರ್ಥಗಳನ್ನೇ ಕೊಟ್ಟ. ಚೈದ್ಯ- ಶಿಶುಪಾಲನ ಒಳಗೆ ಜಯ ಇದ್ದ.  ಜಯ ಭಕ್ತನಾದರೂ ಶಿಶುಪಾಲನ ಕೆಟ್ಟ ಮಾತುಗಳಿಂದ ಜಯನ ಪಾಲಿಗೂ ಬಂದ ಕರ್ಮವನ್ನು ಭಗವಂತ ಕಳೆದುಬಿಟ್ಟ.  ಅರ್ಜುನನನ್ನು ಕಂಗೆಡಿಸಲು ವಾಸುದೇವನ ಮೇಲೆ ಬಾಣಗಳ ಮಳೆಗರೆದ ಭೀಷ್ಮನ ಅವಗುಣಗಳೆಣಿಸಲಿಲ್ಲ.  ಶರಶಯ್ಯೆಯಲ್ಲಿ ಮರಣಕ್ಕೆ ಸನ್ನಿಹಿತನಾಗಿ ಮಲಗಿದ್ದ ಭೀಷ್ಮನ ಬಳಿ ಬಂದು, ವಿಷ್ಣು ಸಹಸ್ರನಾಮ ನುಡಿಸಿ ಉದ್ಧರಿಸಿದ ಭಗವಂತನ ಕಾರುಣ್ಯಕ್ಕೆ ಎಣೆಯೇ ಇಲ್ಲ.  ಅಸುರಾವೇಶ ಹಾಗೂ ಕಲಿ ಪವೇಶದಿಂದ ನಿಜ ಭಕ್ತರು ಮಾಡಿದ ಅಪರಾಧಗಳನ್ನು ಭಗವಂತ ಎಂದಿಗೂ ಪರಿಗಣಿಸದೇ ಕ್ಷಮಿಸಿ ಉದ್ಧರಿಸುವನು. ನಾವು ಪ್ರಾಮಾಣಿಕ ಭಕ್ತಿಯಿಂದ ಪೂಜಿಸಿದರೆ ನಮಗೊಲಿಯುವ ಸುಲಭನು ಹರಿ ಎನ್ನುತ್ತಾರೆ ದಾಸರಾಯರು. 
"ಇಟ್ಟಿಕಲ್ಲು" - ಶ್ರೀ ಹಯವದನ ಪುರಾಣಿಕರು ತಮ್ಮ ಪುಸ್ತಕದಲ್ಲಿ ಇಟ್ಟಿಕಲ್ಲು ಶಬ್ದದ ಅರ್ಥ ವಿವರಣೆಗೆ ಶ್ರೀ ಜಗನ್ನಾಥ ದಾಸರದೇ ರಚನೆ ’ಪಾಂಡುರಂಗ ಪಾರಿಜಾತ’ದಲ್ಲಿ "ಇಟ್ಟಿಗೆ ಪೀಠ ಸಂಸ್ಥಿತಪಾದ ! ಮಂಗಳಪ್ರದ!" ಎಂಬ ಉಕ್ತಿಯನ್ನು ಉಲ್ಲೇಖಿಸುತ್ತಾ, ಮೂರ್ತಿ ಪ್ರತಿಷ್ಠಾಪನೆಗೆ ಮಣ್ಣಿನ ಇಟ್ಟಿಗೆ ಬಳಕೆಯಾಗುವುದಿಲ್ಲ, ಕಲ್ಲಿನ ಪೀಠವೇ ಆಗಬೇಕು ಎನ್ನುತ್ತಾರೆ.  ಇದನ್ನು ನಾವು ಅವಗಾಹನೆಗೆ ತೆಗೆದುಕೊಂಡರೆ ’ಇಟ್ಟಿಕಲ್ಲನು’ ಎಂಬ ಪದದ ಬಳಕೆಯನ್ನು ದಾಸರಾಯರು ಮಣ್ಣಿನ ಇಟ್ಟಿಗೆ ಎಂಬರ್ಥದಲ್ಲಿ ಅಲ್ಲ, ಒಂದು ಬಗೆಯ ಮೃದುವಾದ ಕೆಂಪುಕಲ್ಲು ಎಂಬ ಅರ್ಥದಲ್ಲಿ ಬಳಸಿದ್ದಾರೆಂದು ತಿಳಿಯುತ್ತದೆ.  ಶ್ರೀ ಜಗನ್ನಾಥ ದಾಸರೇ ಕಲ್ಲು ಎಂಬ ಪದವನ್ನು ಸೇರಿಸಿರುವುದರಿಂದ ಅದನ್ನು ನಾವು ಭಕ್ತನೊಬ್ಬ ಭಗವಂತನಿಗೆ ಒಂದು ಕಲ್ಲನ್ನು ಇಟ್ಟು ಅದರ ಮೇಲೆ ನಿಂತಿರುವಂತೆ ಪ್ರಾರ್ಥಿಸಿಕೊಂಡ ಎಂದು ಅರ್ಥೈಸಿಕೊಳ್ಳಬಹುದು.  ಶ್ರೀ ವಿಜಯದಾಸರು ಮಂದರ ಪರ್ವತವನ್ನೂ ’ಕಲ್ಲು’ ಎನ್ನುತ್ತಾ "ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು" ಎಂದಿದ್ದಾರೆ.  ಆದ್ದರಿಂದ ಮಹಾಭಕ್ತನಾದ ಪುಂಡರೀಕ ಮುನಿಯು ಕೊಟ್ಟ ಕಲ್ಲು ಸಾಧಾರಣವಾದದ್ದಲ್ಲ ಅನರ್ಘ್ಯ ರತ್ನವೆಂಬ ಭಕ್ತಿ ಎನ್ನಬಹುದು.  ಇಂತಹ ಅತಿಶಯವಾದ ಭಕ್ತಿಗೆ ಒಲಿದು, ಮೆಚ್ಚಿ ಕರುಣಾಮಯನಾದ ಶ್ರೀಹರಿ ತನ್ನನ್ನೇ ಕೊಟ್ಟುಬಿಡುವನು. 

ಪುಂಡರೀಕನು ತನ್ನ ತಂದೆ-ತಾಯಿಯರ ಸೇವೆ ಪೂರೈಸಿ ಬರುವವರೆಗೂ ಸೊಂಟದಲ್ಲಿ ಕೈಯಿಟ್ಟು, ಮುನಿ ಕೊಟ್ಟ ಅದೇ ಇಟ್ಟಿಗೆಯ ಮೇಲೆ ನಿಂತೇ ಇದ್ದ ಭಗವಂತ.  ಅನನ್ಯ ಭಕ್ತಿಗೆ ಮೆಚ್ಚಿ ನನ್ನನ್ನೇ ನಿನಗೆ ಕೊಡುತ್ತಿದ್ದೇನೆಂದು ತಿಳಿಸಿದ.  ಅಂದು ಪುಂಡರೀಕವರದನಾಗಿ ಪಾಂಡುರಂಗ ವಿಟ್ಠಲ ನಿಂತಿದ್ದನ್ನು ಜಗನ್ನಾಥ ದಾಸರು ತಮ್ಮ ನೋಡಿದೆ ವಿಠಲನ ನೋಡಿದೆ ಎಂಬ ಪದದಲ್ಲಿ "ತನ್ನ ತಾಯ್ತಂದೆಗಳ ಹೃದಯವೆ ಪನ್ನಗಾರಿಧ್ವಜಗೆ ಸದನವೆಂದುನ್ನತ ಭಕುತಿ ಭರದಿ ಅರ್ಚಿಪ  ಧನ್ಯಪುರುಷನ ಕಂಡು ನಾರದ ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರಪನ್ನ ವತ್ಸಲ ಬಿರಿದು ಮೆರೆಯಲು "ಜೊನ್ನೊಡಲು ಭಾಗ"ದಿ  ನೆಲೆಸಿದ ಜಗನ್ನಾಥ ವಿಠ್ಠಲನ ಮೂರ್ತಿಯ ನೋಡಿದೆ ವಿಠಲನ ಮೂರ್ತಿಯ ನೋಡಿದೆ ಎಂದು ಹಾಡಿದ್ದಾರೆ.  ಇಲ್ಲಿ ’ಜೊನ್ನೊಡಲ ಭಾಗ’ವೆಂದರೆ ಚಂದ್ರಭಾಗಾ ನದಿ ತೀರ. ನಾರದರ ಪ್ರಾರ್ಥನೆಯಿಂದಾಗಿ ಚಂದ್ರಭಾಗಾ ತೀರದಲ್ಲಿ ನೆಲೆಸಿದನೆಂದು ತಿಳಿಸಿದ್ದಾರೆ ದಾಸರು.  ಆದ್ದರಿಂದ ಕಟಿಯಲ್ಲಿ ಕರವಿಟ್ಟು ನಿಂತ ಶ್ರೀಕೃಷ್ಣನೇ "ವಿಟ್ಠಲ"ನು.

"ಒಪ್ಪಿಡಿಯವಲಿಗಖಿಳಾರ್ಥ" - ಕುಸುಬಲಕ್ಕಿ ಅವಲಕ್ಕಿಗಳು ನೈವೇದ್ಯಕ್ಕೆ ಮತ್ತು ಬ್ರಾಹ್ಮಣರ ಭಕ್ಷಣಕ್ಕೆ ಹೆಚ್ಚು ಪ್ರಶಸ್ತವಲ್ಲವೆಂಬ ಮಾತಿದ್ದರೂ, ಬಡ ಬ್ರಾಹ್ಮಣನಾದ  ಸುಧಾಮನು ಕಡು ಬಡತನದ ಪ್ರಯುಕ್ತ ಪರರಿಂದ ಬೇಡಿ ಸಂಪಾದಿಸಿದ ಒಂದು ಹಿಡಿ ಅವಲಕ್ಕಿಯನ್ನೇ ತಂದ.  ಸ್ವೀಕರಿಸಿದ ಭಗವಂತ ಅಖಿಲಾಭೀಷ್ಟಗಳನ್ನೇ ಕೊಟ್ಟ.  ಇಲ್ಲಿ ದಾಸರಾಯರ ಪದ ಜೋಡಣೆಯ ಸೌಂದರ್ಯವನ್ನು ನಾವು ಕಾಣಬೇಕು.  ಹಿಂದಿನ ಸಾಲಿನ "ಕೊಟ್ಟ ಭಕುತಗೆ ಮೆಚ್ಚಿ ತನ್ನನೆ" ಎಂದು ಓದಿದಾಗ ಕಲ್ಲನ್ನು ಕೊಟ್ಟು ನಿಂತಿರುವಂತೆ ಹೇಳಿದ ಭಕುತನ ಭಕುತಿಗೆ ಮೆಚ್ಚಿ ತನ್ನನ್ನೇ ಕೊಟ್ಟನೆಂಬ ಅರ್ಥವಾಗುತ್ತದೆ.  ಹಾಗೇ "ತನ್ನನೆ" ಎಂಬ ಪದವನ್ನು ಮುಂದಿನ ಸಾಲಿಗೆ ಸೇರಿಸಿಕೊಂಡು "ತನ್ನನೆ ಕೊಟ್ಟ ಬಡ ಬ್ರಾಹ್ಮಣನ ಒಪ್ಪಿಡಿಯವಲಿಗಖಿಳಾರ್ಥ" ಎಂದಾಗ ಸುಧಾಮನು ಹಿಡಿ ಅವಲಕ್ಕಿಯ ಜೊತೆಗೆ ತನ್ನನ್ನೇ ಸಮರ್ಪಿಸಿಕೊಂಡ ಎಂಬ ಅರ್ಥ ಬರುತ್ತದೆ.  ತನ್ನನ್ನು ತಾನು ಭಗವಂತನಿಗೆ ಸಮರ್ಪಿಸಿಕೊಂಡ ಬಡ ಬ್ರಾಹ್ಮಣನ ಭಕ್ತಿಗೆ ಒಲಿದ ಭಗವಂತ ಅಖಿಳಾರ್ಥಗಳನ್ನು ಕೊಟ್ಟ.  ಅಲ್ಲದೇ ಬ್ರಹ್ಮಾಂಡದ ಐಶ್ವರ್ಯವೆಲ್ಲವನ್ನೂ ಕೊಟ್ಟರೂ ಖಂಡಿತವಾಗಿಯೂ ಒಲಿಯುತ್ತಿರಲಿಲ್ಲ ಎನ್ನುತ್ತಾರೆ ದಾಸರಾಯರು.
"ಕೆಟ್ಟ ಮಾತುಗಳೆಂದ ಚೈದ್ಯನ" - ಚೈದ್ಯ ಅರ್ಥಾತ್ ಶಿಶುಪಾಲ ಶ್ರೀಕೃಷ್ಣನ ಸೋದರತ್ತೆಯ ಮಗನಾದುದರಿಂದ ಅವನ ನೂರು ತಪ್ಪುಗಳನ್ನು ಕ್ಷಮಿಸುವುದಾಗಿ ತನ್ನ ಅತ್ತೆಗೆ ಮಾತು ಕೊಟ್ಟಿರುತ್ತಾನೆ ಭಗವಂತ.  ಶಿಶುಪಾಲ ಮಾಡಿದ ಎಲ್ಲಕ್ಕಿಂತ ದೊಡ್ಡ ಅಪರಾಧವೆಂದರೆ ರುಕ್ಮಿಣಿಯನ್ನು ಬಯಸಿದ್ದು ಮತ್ತು ರಾಜಸೂಯ ಸಭೆಯಲ್ಲಿ ಭಗವಂತನನ್ನು ನಿಂದಿಸಿದಾಗ ತಪ್ಪುಗಳು ಆಗಲೇ ನೂರರ ಸಂಖ್ಯೆಯನ್ನು ದಾಟಿದ್ದವು ಮತ್ತು ಶ್ರೀಕೃಷ್ಣ ಶಿಶುಪಾಲನ ಶಿರಚ್ಛೇದ ಮಾಡಿದ.  ಚೈದ್ಯನ ದೇಹದಲ್ಲಿದ್ದ ’ಜಯ’ ಹೊರಗೆ ಬಂದು ಭಕ್ತಿಯಿಂದ ನಮಿಸಿ ಭಗವಂತನ ಉದರದೊಳಗೆ ಸೇರಿ ಕೊಳ್ಳುತ್ತಾನೆ.  ಜಯ ಶಿಶುಪಾಲನ ಶರೀರದಲ್ಲಿ ಹಿರಣ್ಯಕಶಿಪುವಿನ ಜೊತೆಯಿದ್ದು, ಶ್ರೀಕೃಷ್ಣನನ್ನು ದ್ವೇಷಿಸಿದ್ದನಾದರೂ ಅವನು ಭಗವಂತನ ಭಕ್ತನೇ ಆಗಿದ್ದನು.  ತನ್ನ ಭಕ್ತನನ್ನು ಉದರದಲ್ಲಿಟ್ಟುಕೊಂಡು ಕಾಪಾಡಿದ ಭಗವಂತ. 

"ಬಾಣದಲ್ಲಿಟ್ಟ ಭೀಷ್ಮ" - ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮರು ಕೌರವರ ಪಕ್ಷವಹಿಸಿ ಹೋರಾಡಿದ್ದು ಅಧರ್ಮ.  ಯುದ್ಧದಲ್ಲಿ ತಾನು ಶಸ್ತ್ರ ಹಿಡಿಯುವುದಿಲ್ಲವೆಂದು  ಕೃಷ್ಣ ಪರಮಾತ್ಮ ಪ್ರತಿಜ್ಞೆ ಮಾಡಿದ್ದನ್ನು ತಿಳಿದೂ, ತಾನು ಭಗವಂತ ಶಸ್ತ್ರವೆತ್ತುವಂತೆ ಮಾಡುವೆನೆಂದು ಪ್ರತಿಜ್ಞೆ ಮಾಡಿದ್ದು ಅಧರ್ಮ.  ಯುದ್ಧದಲ್ಲಿ ಕೃಷ್ಣಾರ್ಜುನರ ಮೇಲೆ ಸತತವಾಗಿ ಬಾಣಗಳ ಮಳೆಕರೆದು ಶ್ರೀಕೃಷ್ಣ ತನ್ನ ಪ್ರತಿಜ್ಞೆ ಮರೆತು ಅಸ್ತ್ರ ಹಿಡಿಯುವಂತೆ ಮಾಡಿದ್ದು ಅಧರ್ಮವೇ ಎಂದು ಕಾಣಿಸುವುದು.  ಆದರೆ ಭಗವಂತ ನಿಜಕ್ಕೂ ಕೈಯಲ್ಲಿ ಚಕ್ರ ಹಿಡಿದು ಭೀಷ್ಮನೆಡೆಗೆ ಧಾವಿಸಿ ಬಂದಾಗ ಭೀಷ್ಮ ಅತ್ಯಂತ ಸಂತೋಷವಾಗಿ, ಧನ್ಯತಾ ಭಾವದಿಂದ ನಮಸ್ಕರಿಸುತ್ತಾನೆ.  ತನ್ನ ಪ್ರತಿಜ್ಞೆ ಪೂರೈಸದಿದ್ದರೂ ಲೆಕ್ಕಿಸದೆ ತನ್ನ ಭಕ್ತನ ಪ್ರತಿಜ್ಞೆಯನ್ನು ಪೂರೈಸುವಂತೆ ಮಾಡಿದ ಭಗವಂತ ನಿಜಕ್ಕೂ ಅತ್ಯಂತ ಕರುಣಾಮಯಿ.  ಚಕ್ರಪಾಣಿಯಾಗಿ ಬಂದ ಪರಮಾತ್ಮನನ್ನು ಭೀಷ್ಮರು ತನ್ನನ್ನು ಕೊಲ್ಲಬೇಕೆಂದು ಪ್ರಾರ್ಥಿಸಿಕೊಳ್ಳುತ್ತಾರೆ.  ಹೀಗೆ ನೀನು ಅಸ್ತ್ರ ಹಿಡಿದು ನನ್ನ ಕೀರ್ತಿಯನ್ನು ಮೂರು ಲೋಕದಲ್ಲಿಯೂ ಹರಡಿದೆ ಎಂದು ನಮಸ್ಕರಿಸುತ್ತಾರೆ.  ಭಗವಂತ ತನ್ನ ಮಾತನ್ನು ಮುರಿಯಲೋಸುಗ ಚಕ್ರಪಾಣಿಯಾಗಿ ಭೀಷ್ಮರೆಡೆಗೆ ಧಾವಿಸಿದ್ದು ಅವರನ್ನು ಕೊಲ್ಲಲೆಂದೇನೂ ಅಲ್ಲ.  ಬಂಧು ಮೋಹದಲ್ಲಿ ಸಿಲುಕಿ ತೊಳಲಾಡುತ್ತಾ ವೀರಾವೇಶವಿಲ್ಲದೆ ಯುದ್ಧ ಮಾಡುತ್ತಿದ್ದ ಅರ್ಜುನನಿಗೆ ಎಚ್ಚರಿಸಲಷ್ಟೇ ಆಗಿತ್ತು.  ಯುದ್ಧ ಮಾಡುವುದಿಲ್ಲವೆಂಬ ನಿನ್ನ ಮಾತು ಸುಳ್ಳಾಗಿ ಬಿಡಬಾರದು, ಕೇಶವಾ ಹಿಂದಿರುಗಿ ಬಾ, ನಾನು ವೀರಾವೇಶದಿಂದಲೇ ಹೋರಾಡುವೆ ಎಂದು ಅರ್ಜುನ ಕರೆದಾಗ ಶ್ರೀಕೃಷ್ಣ ಹಿಂತಿರುಗಿ ಬರುತ್ತಾನೆ.  ಇದೆಲ್ಲಾ ಭಗವಂತನ ಲೀಲಾವಿನೋದವಾಗಿತ್ತೇ ಹೊರತು, ವಸ್ತುತಃ ಭೀಷ್ಮರ ಪ್ರತಿಜ್ಞೆಯು ಶ್ರೀಕೃಷ್ಣನ ವಿರುದ್ಧವೂ ಆಗಿರಲಿಲ್ಲ.  ಹೀಗೆ ಭೀಷ್ಮರ ನಡವಳಿಕೆಯನ್ನು ಅವಗುಣಗಳೆಂದರೆ, ಕರುಣಾಮಯನಾದ ಶ್ರೀಹರಿ, ತನ್ನ ನಿಜ ಭಕ್ತನ ತಪ್ಪುಗಳನ್ನು ಮನ್ನಿಸಿ, ಅವನನ್ನು ಪೊರೆದ.  ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರೊಳಗೆ ತಾನಿದ್ದು, ಲೋಕ ಕಲ್ಯಾಣಕ್ಕಾಗಿ ಅವರಿಂದ ವಿಷ್ಣು ಸಹಸ್ರನಾಮ ನುಡಿಸಿದ.  ಹೊರಗೆ ಕುಳಿತು ಏನೂ ತಿಳಿಯದಂತೆ ನಾಟಕವಾಡಿ, ಸ್ವೀಕರಿಸಿ ಉದ್ಧರಿಸಿದ, ಪರಮ ಕರುಣಾಳು ಭಗವಂತ.

ಭಗವದ್ಗೀತೆಯಲ್ಲಿ ಭಗವಂತ
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ |
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ || - ಯಾರು ನನ್ನನ್ನು ನಿರಂತರ ಧ್ಯಾನಿಸುವರೋ, ಪ್ರೇಮ ಪ್ರೀತಿಗಳಿಂದ ಭಜಿಸುವರೋ ಮತ್ತು ಅವರು ಯಾವುದರಿಂದ ನನ್ನನ್ನು ಪಡೆಯಲಪೇಕ್ಷಿಸುತ್ತಾರೋ, ಅವರಿಗೆ ಅದೇ ತತ್ವಜ್ಞಾನ ರೂಪವಾದ ಯೋಗವನ್ನು ಕೊಡುತ್ತೇನೆ ಎಂದಿದ್ದಾನೆ.
ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ |
ನಾಶಯಾಮ್ಯಾತ್ಮ ಭಾವಸ್ಥೋ ಜ್ಞಾನದೀಪೇನ ಭಾಸ್ವತಾ || - ಅಂತಹ ಭಕ್ತರನ್ನು ಅನುಗ್ರಹಿಸಲೋಸುಗ ನಾನು ಅವರ ಅಂತಃಕರಣದಲ್ಲಿಯೇ ನೆಲೆಸಿ, ಸ್ವಯಂ ನಾನೇ ಅವರ ಅಜ್ಞಾನದಿಂದ ಉಂಟಾದ ಅಂಧಕಾರವನ್ನು ತತ್ವಜ್ಞಾನ ರೂಪದ ದೀಪದಿಂದ ನಾಶಗೊಳಿಸುತ್ತೇನೆ ಎಂದಿದ್ದಾನೆ.  ಅನವರತ ಭಗವಂತನ ಧ್ಯಾನದಲ್ಲಿ ತನ್ಮಯರಾದವರಿಗೆ ಭಗವಂತ ಕರುಣೆಯಿಂದ ತನ್ನನ್ನೇ ಕೊಟ್ಟು ಉದ್ಧರಿಸುತ್ತಾನೆಂಬುದನ್ನು ತಾನೇ ಗೀತೆಯಲ್ಲಿ ತಿಳಿಸಿದ್ದಾನೆ.

ಅಸುರಾವಿಷ್ಟರಾಗಿ ನಿಜ ಭಕ್ತರು ಮಾಡಿದ ಅಪರಾಧಗಳನ್ನು ಭಗವಂತ ಎಂದಿಗೂ ಪರಿಗಣಿಸುವುದಿಲ್ಲ.  ಎಲ್ಲಾ ತಪ್ಪುಗಳನ್ನೂ ಮನ್ನಿಸಿ, ಪೊರೆದು, ಉದ್ಧರಿಸುವನು.   ಶ್ರೀಪಾದರಾಜರ ಒಂದು ಉಗಾಭೋಗದಲ್ಲಿ
ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ
ಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲ
ಶರಣು ಬಂದವನ ರವಿಯ ತನಯನ ನೋಡು
ಮರೆಯದೇ ಭಜಿಸೋ ರಂಗವಿಠಲರೇಯನ || - ಎಂದು ಶ್ರೀಹರಿಯ ಅನಂತ ಕರುಣೆಯ ವಿವರಣೆ ಸುಂದರವಾಗಿ ಮಾಡಿದ್ದಾರೆ.

ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ
ಒಪ್ಪಿಡಿಯವಲಕ್ಕಿಗೊಪ್ಪಿಕೊಂಡ ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ-
ಮ್ಮಪ್ಪಗಿಂದಧಿಕ ದೊರೆಯುಂಟೆ || -  ಕಡುಬಡವನಾದ ಬಾಲ್ಯ ಸ್ನೇಹಿತನ ಒಂದೇ ಒಂದು ಹಿಡಿ ಅವಲಕ್ಕಿಗೆ ಒಲಿದು ಮಹದೈಶ್ವರ್ಯವನ್ನೇ ಕರುಣಿಸಿದ ನಮ್ಮೆಲ್ಲರಿಗೂ ತಂದೆಯಾದ ಭಗವಂತ, ಶ್ರೀಕೃಷ್ಣನಿಗಿಂತಲೂ ಅಧಿಕ ಉತ್ತಮನಾದ ದೊರೆ/ಅರಸನೆಲ್ಲಿಹನು ಎನ್ನುತ್ತಾರೆ.  ಹೀಗೆ ಭಗವಂತನ ಅಪಾರ ಕರುಣೆಯನ್ನು ವಿವರಿಸುವ, ಶುದ್ಧ ಭಕ್ತಿಗೆ ಒಲಿದು ತನ್ನನ್ನೇ ಕೊಟ್ಟುಬಿಡುವ ಅನಂತ ದಯೆಯನ್ನು ಅನೇಕ ದೃಷ್ಟಾಂತಗಳಿಂದ ತಿಳಿಸಿಕೊಡುತ್ತಾರೆ. 

ಡಿವಿಜಿಯವರು ಕಗ್ಗದಲ್ಲಿ :
ಸೃಷ್ಟಿಯದ್ಭುತ ಶಕ್ತಿಯುಳ್ಳೋರ್ವನಿರಲು ನ-
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ ?
ಇಷ್ಟವಾತನೊಳುದಿಸುವಂತೆ ಚೋದಿಪುದೆಂತು?
ಕಷ್ಟ ನಮಗಿಹುದಷ್ಟೇ ಮಂಕುತಿಮ್ಮ || - ಬ್ರಹ್ಮಾಂಡವೆಂಬ ಅದ್ಭುತವಾದ ಸೃಷ್ಟಿಯನ್ನು ನೋಡಿದಾಗ, ಅದರ ಸೃಷ್ಟಿಕರ್ತನ ಅತ್ಯದ್ಭುತ ಶಕ್ತಿಗಳು, ಅವನ ವ್ಯಾಪ್ತಿ, ಕೌಶಲಗಳನ್ನು ನಾವು ಊಹಿಸಿಕೊಳ್ಳಬಹುದು. ನಾವು ಊಹಿಸಿಕೊಳ್ಳುವಷ್ಟು ಶಕ್ತಿವಂತರಲ್ಲವೇ ಅಲ್ಲವಾದರೂ, ಅವನೊಬ್ಬ ಸರ್ವಶಕ್ತ, ಸರ್ವನಿಯಾಮಕ ಎಂಬ ಭಾವವು ತುಂಬಿಕೊಳ್ಳುವುದು.  ಇಂತಹ ಸರ್ವಶಕ್ತನಿಗೆ ನಮಗೆ ಬೇಕಾದ ವರಗಳನ್ನು ಕೊಡುವುದು ಅತೀ ಸುಲಭದ ಕೆಲಸ.  ಆದರೆ ಅದು ಆ ಸರ್ವಜ್ಞನಿಗೆ ತಿಳಿಯಪಡಿಸುವುದು ಮಾತ್ರ ನಮ್ಮದೇ ಕರ್ತವ್ಯ.  ಅವನ ಅನುಗ್ರಹ ನಮಗೆ ದೊರೆಯುವಂತೆ ನಾವು ಅವನನ್ನು ಒಲಿಸಿಕೊಂಡರೆ, ಅವನಿಗೆ ಸಂಪೂರ್ಣ ಶರಣಾಗಬೇಕು, ನಮ್ಮನ್ನೇ ನಾವು ಸಂಪೂರ್ಣವಾಗಿ ಕೊಟ್ಟುಕೊಳ್ಳಬೇಕೆಂಬುದು ತಿಳಿಯುತ್ತದೆ.
ಜೀವಸತ್ತ್ವದಪಾರ ಭಂಡಾರವೊಂದಿಹುದು
ಸಾವಕಾರನದೃಷ್ಟನ್ ಅದನಾಳುತಿಹನು |
ಆವಶ್ಯಕದ ಕಡವನವನೀವುದುಂಟಂತೆ
ನಾವೊಲಿಪುದೆಂತವನ ? ಮಂಕುತಿಮ್ಮ || - ಈ ಪದ್ಯದಲ್ಲಿ ಕೂಡ ಡಿವಿಜಿಯವರು ಭಗವಂತನು ತನ್ನ ಒಂದು ವಿಶೇಷವಾದ ಅಪಾರವಾದ ಭಂಡಾರದಿಂದ ಜೀವಸತ್ತ್ವವನ್ನು ಸೃಷ್ಟಿಸಿದ್ದಾನೆನ್ನುತ್ತಾರೆ.  ಅದರ ಒಡೆಯನಾದ ಅವನು ಅತೀ ದೊಡ್ಡ ಸಾಹುಕಾರ, ನಮ್ಮ ಕಣ್ಣಿಗೆ  ಕಾಣಿಸೋಲ್ಲ, ಆದರೆ ನಮಗೆ ಕಷ್ಟವೆಂದು ನಾವು ಭಕ್ತಿಯಿಂದ ಕರೆದಾಗ ಅವನು ನಮಗೆ ಸಾಲವನ್ನು ಕೊಡುತ್ತಾನೆನ್ನುತ್ತಾರೆ.  ಆದರೆ ಭಗವಂತನ ಆ ಸಾಲವೆನ್ನುವ ಕರುಣೆ ನಮಗೆ ಸಿಗಬೇಕಾದರೆ ನಾವು ಅವನನ್ನು ಒಲಿಸುವ ಪರಿ ತಿಳಿಯದೇ ಪರಿತಪಿಸುತ್ತೇವೆ ಎನ್ನುತ್ತಾರೆ.  ಮುಂದುವರೆಯುತ್ತಾ ಭಗವಂತನ ಕರುಣೆ ನಮಗೆ "ಧಗಧಗಿಸುವ ಧರೆಗೆ ರಾತ್ರಿಯಲಿ ತಂಪೆರೆವ ಮುಗಿಲವೊಲು" "ದೈವಕೃಪೆ" ಎನ್ನುತ್ತಾರೆ.  ಒಲಿದನೆಂದರೆ ಭಗವಂತ ತನ್ನನ್ನೇ ಕೊಟ್ಟುಬಿಡುವವನು ಎಂಬ ಮಾತು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಹೀಗೆ ಭಗವಂತನ ಅಪಾರವಾದ ಕರುಣೆಯನ್ನು ಪಡೆಯುವ ಸುಲಭ ಮಾರ್ಗವೇ ಭಕ್ತಿ ಎನ್ನುತ್ತಾರೆ ನಮ್ಮ ಜಗನ್ನಾಥದಾಸರು.  ಮೇಲೆ ತಿಳಿಸಿರುವ ದೃಷ್ಟಾಂತಗಳಿಂದ ನಾವು ಇದನ್ನು ಅರ್ಥೈಸಿಕೊಳ್ಳಬಹುದು.  ತನ್ನನ್ನು ತಾನು ಒಪ್ಪಿಸಿಕೊಳ್ಳದೇ, ಸಂಪೂರ್ಣ ಶರಣಾಗದೇ, ಬೇರೇನೇ ಕೊಟ್ಟರೂ ಭಗವಂತ ಒಲಿಯುವುದಿಲ್ಲ






























ಚಿತ್ರಕೃಪೆ : ಅಂತರ್ಜಾಲ