Sunday, September 18, 2011

ಮಂಗಳಾಚರಣ ಸಂಧಿ - ೧೧ ನೇ ಪದ್ಯ...

ಕೃತ್ತಿವಾಸನೆ ಹಿಂದೆ ನೀ ನಾ
ಲ್ವತ್ತು ಕಲ್ಪಸಮೀರನಲಿ ಶಿ
ಷ್ಯತ್ವ ವಹಿಸಿ ಅಖಿಳಾಗಮಾರ್ಥಗಳೋದಿ ಜಲಧಿಯಲಿ |
ಹತ್ತು ಕಲ್ಪದಿ ತಪವ ಗೈದಾ
ದಿತ್ಯರೊಳಗುತ್ತಮನೆನಿಸಿ ಪುರು
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ ||೧೧||


ಪ್ರತಿಪದಾರ್ಥ : ಕೃತ್ತಿವಾಸನೆ - ಮೃಗದ ಚರ್ಮವನ್ನು ಧರಿಸಿರುವ ರುದ್ರದೇವನೆ, ಹಿಂದೆ ನೀ - ರುದ್ರ ಪದವಿಗೆ ಬರುವ ಮೊದಲು ನೀನು, ನಾಲ್ವತ್ತು ಕಲ್ಪ - ಬ್ರಹ್ಮನ ೪೦ ದಿನಗಳ ಕಾಲ, ಸಮೀರನಲಿ - ವಾಯುದೇವರಲ್ಲಿ, ಶಿಷ್ಯತ್ವವಹಿಸಿ - ಶಿಷ್ಯನಾಗಿದ್ದುಕೊಂಡು, ಅಖಿಳಾಗಮಾರ್ಥಗಳೋದಿ - ಸಮಸ್ತ ಶಾಸ್ತ್ರಗಳ ಅಧ್ಯಯನವನ್ನು ಮಾಡಿ, ಜಲಧಿಯೊಳು - ಲವಣ ಸಮುದ್ರದಲ್ಲಿ, ಹತ್ತು ಕಲ್ಪದಿ - ಬ್ರಹ್ಮನ ೧೦ ದಿನಗಳ ಕಾಲ, ತಪವ ಗೈದು - ತಪಸ್ಸನ್ನು ಮಾಡಿ, ಆದಿತ್ಯರೊಳಗೆ - ದೇವತೆಗಳಲ್ಲಿ, ಉತ್ತಮನೆನಿಸಿ - ಶ್ರೇಷ್ಠನೆಂದೆನಿಸಿಕೊಂಡು, ಪುರುಷೋತ್ತಮನ - ಶ್ರೀಹರಿಯ, ಪರಿಯಂಕಪದವ - ಶಯನವಾದ ಶೇಷ ಪದವಿಯನ್ನು, ಐದಿದೆಯೋ ಮಹದೇವ - ಪಡೆದೆಯೋ ಮಹದೇವ.

ಇಲ್ಲಿ ರುದ್ರದೇವರನ್ನು “ಕೃತ್ತಿವಾಸನೆ” ಎಂದು ಸಂಬೋಧಿಸಿದ್ದಾರೆ. “ಕೃತ್ತಿ” ಎಂದರೆ ಚರ್ಮ ಎಂಬ ಅರ್ಥ ಬರುತ್ತದೆ, ಸಂಸ್ಕೃತದಲ್ಲಿ ಕೃತ್ತಿ ಎಂದರೆ ಛೇದನ - ಕತ್ತರಿಸಲಿಕ್ಕೆ ಬರುವಂತಹುದು. ರುದ್ರ ದೇವರು ಹುಲಿಯ ತೊಗಲನ್ನು ಬಟ್ಟೆಯಾಗಿ ಉಳ್ಳವರು. ಚರ್ಮಮಯವಾದ ಶರೀರದ ಒಳಗೆ “ಮನೋಮಯ” ಸ್ವರೂಪದಲ್ಲಿ ಇರುತ್ತಾರೆ ರುದ್ರ ದೇವರು. ಆದ್ದರಿಂದ ಅವರಿಗೆ ಚರ್ಮಾಂಬರನೆಂದೂ ಕರೆಯುತ್ತಾರೆ (“ಗಜ ಚರ್ಮಾಂಬರ”ನೆಂದೂ ಕರೆಯುವ ಕಾರಣವೇನೆಂದರೆ – “ಗಜ” ಸಂಪತ್ತಿನ ಸಂಕೇತ. ಶಿವ ಗಜನನ್ನು, ಸಂಪತ್ತನ್ನು ಬಿಟ್ಟು ಅದರ ತೊಗಲನ್ನು ತೊಟ್ಟವನು. ಇದು ವೈರಾಗ್ಯದ ಸೂಚಕ). ನಾವು ಈ ಚರ್ಮವನ್ನು (ಶರೀರ) ಛೇದಿಸಿಕೊಂಡು, ಮನೋಮಯ ಕೋಶಕ್ಕೆ ತಲುಪಿದಾಗಲೇ ನಮಗೆ ರುದ್ರ ದೇವರ ಅನುಗ್ರಹವಾಗುವುದೆಂದು ಅರ್ಥೈಸಿ ಕೊಳ್ಳಬಹುದು.


ಶ್ರೀ ಶಂಕರರು "ಶಿವ ಮಾನಸ ಪೂಜಾ" ಎಂಬ ರಚನೆಯಲ್ಲಿ

"ಆತ್ಮಾ ತ್ವಂ ಗಿರಿಜಾ ಮತಿ: ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿ: |
ಸಂಚಾರಃ ಪದಯೋ: ಪ್ರದಕ್ಷಿಣವಿಧಿ: ಸ್ತೋತ್ರಾಣಿ ಸರ್ವಾಗಿರೋ
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||


ನಮ್ಮ ಶರೀರವನ್ನೇ ಆಲಯವನ್ನಾಗಿಸಿ, ನಮ್ಮ ಸಂಚಾರವನ್ನು ಪ್ರದಕ್ಷಿಣೆಯಾಗಿಸಿ, ನಿದ್ರೆಯನ್ನು ಸಮಾಧಿ ಸ್ಥಿತಿ ಎಂದು ವಿವರಿಸುತ್ತಾ ನಮ್ಮ ಮನಸ್ಸನ್ನು ಹೇಗೆ ಶಿವನಲ್ಲಿ ಲೀನವಾಗಿಸಿ ಮಾನಸ ಪೂಜೆಯನ್ನು ಮಾಡಬೇಕೆಂದು ತಿಳಿಸುತ್ತಾರೆ.


ಹಾಗೇ ಶಿವಾನಂದಲಹರಿಯಲ್ಲಿ

ಆಶಾಪಾಶ ಕ್ಲೇಶಕುರ್ವಾಸನಾದಿ -
ಭೇದೋಧ್ಯುಕ್ತೈರ್ದಿವ್ಯಗಂಧೈರಮಂದೈ: |
ಆಶಾಶಾಟೀಕಸ್ಯ ಪಾದಾರವಿಂದಂ
ಚೇತಃಪೇಟೀಂ ವಾಸಿತಾಂ ಮೇ ತನೋತು ||


ಇಲ್ಲಿ ಮನಸ್ಸನ್ನು ಪೆಟ್ಟಿಗೆಗೆ ಹೋಲಿಸುತ್ತಾರೆ. ಲೌಕಿಕ ವಿಷಯಗಳ ಆಸೆಗಳಲ್ಲಿ ಆಸಕ್ತಿ ಸಾಕು, ಅದು ಹಗ್ಗದಂತೆ ನಮ್ಮನ್ನು ಬಂಧಿಸುತ್ತದೆ. ಆದ್ದರಿಂದ ಈ ವಿಷಯಾಸಕ್ತಿಗಳನ್ನೆಲ್ಲಾ ನಿನ್ನ ಪಾದಾರವಿಂದಕ್ಕರ್ಪಿಸುವಂತೆ ಮಾಡಿ, ನನ್ನ ಮನಸ್ಸೆಂಬ ಪೆಟ್ಟಿಗೆಯನ್ನು ದಿವ್ಯ ಪರಿಮಳದಿಂದ ಕೂಡಿರುವಂತೆ ಮಾಡು, ಅಲ್ಲಿ ನೀನು ನೆಲೆಸು ಎಂದು ಪ್ರಾರ್ಥಿಸುತ್ತಾರೆ. ಆಶಾಪಾಶಕ್ಲೇಶಗಳು ದುರ್ಗಂಧದ ವಸ್ತುಗಳು ಎಂಬರ್ಥ.

ಜಗನ್ನಾಥ ದಾಸರು ರುದ್ರ ದೇವರ ಸಾಧನಾ ಪದವಿ ಬಗ್ಗೆ ತಿಳಿಸುತ್ತಾ ಹಿಂದೆ ಅವರು ಶಿವ ಪದವಿಗೆ ಬರುವ ಮುನ್ನವೂ ಸಾಧನೆ ಮಾಡಿದ್ದರು. ಈಗಲೂ ಮಾಡುತ್ತಿದ್ದಾರೆನ್ನುತ್ತಾರೆ. ಈ ಸಾಧನೆಯಿಂದ ಅವರು ಶ್ರೀ ಹರಿಯ ಪರಿಯಂಕ ಅಂದರೆ ಶೇಷ ಪದವಿಯನ್ನು ಪಡೆಯುವವರಾಗುತ್ತಾರೆ. ಶೇಷ ಹಾಗೂ ರುದ್ರ ಇಬ್ಬರೂ ಒಂದೇ ರೂಪದವರು. ರುದ್ರ ದೇವರೇ ಮುಂದೆ ಶೇಷನಾಗುವವರು. ರುದ್ರ ದೇವರು ಶೇಷದೇವನಾದಾಗ ಅವರೇ ನಮಗೆ ವಾಕ್ ಕೊಡುವವರು ಹಾಗೂ ನಮ್ಮ ಮಾತುಗಳನ್ನು ನಿಯಂತ್ರಿಸುವವರು. ರುದ್ರ ದೇವರ ಅನುಗ್ರಹವಿಲ್ಲದೆ ಯಾವ ಸಾಧನೆಯೂ ಇಲ್ಲ. ನಾವು ಎಷ್ಟೇ ತಿಳಿದರೂ ತಿಳಿಯುವುದು ಇನ್ನೂ ಉಳಿದೇ ಇರುತ್ತದೆ. ಆದ್ದರಿಂದ ದೇವತೆಗಳೂ ಕೂಡ ಕಲ್ಪ ಕಲ್ಪದಲ್ಲಿಯೂ ತಮ್ಮ ಸಾಧನೆಯನ್ನು ಮುಂದುವರೆಸುತ್ತಲೇ ಇರುತ್ತಾರೆ. ರುದ್ರ ದೇವರು ಶೇಷ ಪದವಿಗಾಗಿ ೫೦ ಕಲ್ಪಗಳು ಸಾಧನೆ ಮಾಡುತ್ತಾರೆ. ೪೦ ಕಲ್ಪಗಳು ವಾಯುದೇವರಲ್ಲಿ ಅಭ್ಯಾಸ ಮಾಡಿ ಇನ್ನೂ ೧೦ ಕಲ್ಪ ತಾವು ಅಧ್ಯಯನ ಮಾಡಿದ ಜ್ಞಾನವನ್ನು ಲವಣ ಸಮುದ್ರದಲ್ಲಿ ಕುಳಿತು ಧ್ಯಾನ ಮಾಡಿ ಮನನ ಮಾಡಿಕೊಂಡರೆಂದು ತಿಳಿಯುತ್ತದೆ. ಇದರಿಂದ ಅವರ ಶೇಷ ಪದವಿಯ ಸಾಧನೆ ೫೦ ಕಲ್ಪಗಳು ಮತ್ತು ಈ ಸಾಧನೆಯ ನಂತರ ೧೦೦ನೆಯ ಕಲ್ಪದಲ್ಲಿ ಅವರು ಶೇಷ ಪದವಿಯನ್ನು ಪಾರ್ವತಿ ಸಹಿತವಾಗಿ ಸೇರುತ್ತಾರೆ. ಸಾಧನೆಯಲ್ಲಿ ರುದ್ರ ದೇವರು ಅತ್ಯುತ್ತಮ ಪದವಿಗೇರಿದವರು.

ಜಗನ್ನಾಥ ದಾಸರು ಶೇಷದೇವರ ಕುರಿತು ರಚಿಸಿರುವ ಒಂದು ಕೀರ್ತನೆಯಲ್ಲಿ ಶೇಷದೇವರನ್ನು..

ಬಲು ರಮ್ಯವಾಗಿದೆ ಶ್ರೀಹರಿಯ ಮಂಚ | ಯಲ ಋಣಿ ಕುಳರಾಜ ರಾಜೇಶ್ವರನ ಮಂಚ || ||

ಪವನತನಯನೆನಿಪ ಪಾವನಕರ ಮಂಚ | ಭುವನತ್ರಯನ ಪೊತ್ತ ಭಾರಿ ಮಂಚ |
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ | ಶಿವರೂಪದಲ್ಲಿ ಶ್ರೀಹರಿಯ ವಲಿಸಿದ ಮಂಚ ||||

ನೀರಾಂಬರವನ್ನುಟ್ಟು ನಳನಳಿಸುವ ಮಂಚ | ನಾಲಿಗೆ ಎರಡುಳ್ಳ ನೈಜ ಮಂಚ |
ನಾಲ್ವತ್ತು ಕಲ್ಪದಿ ತಪವಮಾಡಿದ ಮಂಚ | ತಾಲ ಮುಲ ಹಲವ ಪಿಡಿದಿಹ ಮಂಚ ||||

ರಾಮನನುಜನಾಗಿ ಶರಾದ ಜಯಿಸಿದ ಮಂಚ | ತಾಮಸ ರುದ್ರನ ಪಡೆದ ಮಂಚ |
ಭೀಮನನುಜನೊಳು ಆವೇಶಿಸಿದ ಮಂಚ | ಜೀಮೂತ ಮಲ್ಲರನು ಕಟ್ಟಿದ ಮಂಚ ||||

ಜೀವನಾಮಕನಾಗಿ ವ್ಯಾಪ್ತನಾದ ಹರಿಯ | ಸೇವಿಸಿ ಸುಖಿಸುವ ದಿವ್ಯ ಮಂಚ |
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ | ದೇವಕಿಯ ಜಠರದಿ ಜನಿಸಿದ ಮಂಚ ||||

ವಾರುಣಿ ದೇವಿಗೆ ವರನೆನಿಸಿದ ಮಂಚ | ಸಾರುವ ಭಕ್ತರ ಪೊರೆವ ಮಂಚ |
ಕಾರುಣ್ಯ ನಿಧಿ ಜಗನ್ನಾಥ ವಿಠಲನ | ವಿಹಾರಕ್ಕೆ ಯೋಗ್ಯವಾದ ಶೇಷ ಮಂಚ ||||

ಎನ್ನುತ್ತಾ ಸುಂದರವಾಗಿ ವರ್ಣಿಸುತ್ತಾರೆ.


ಶೇಷ - ಕಾಲದ ಸಂಕೇತ. ಎಲ್ಲಾ ನಾಶವಾದ ನಂತರ ಉಳಿಯುವುದು “ಕಾಲ” ಮಾತ್ರ. ಶೇಷ ಶಕ್ತಿಯೆಂದರೆ ಇಡೀ ವಿಶ್ವವನ್ನು ಧಾರಣೆ ಮಾಡುವ ಶಕ್ತಿ ಎಂದರ್ಥ. ಕಾಲಾಭಿಮಾನಿ, ಕಾಲವನ್ನು ನಿಯಂತ್ರಿಸುವವನು ಎಂದರ್ಥ. ಭಗವಂತ ಕಾಲಾತೀತ, ಏಕೆಂದರೆ ಅವನು ಕಾಲನನ್ನು ತನ್ನಡಿಯಲ್ಲಿ ಹಾಕಿಕೊಂಡು ಮಲಗಿರುವವನು.

ಶೇಷ ಕುಂಡಲಿನಿ ಶಕ್ತಿ, ನಮ್ಮೊಳಗೇ ಇರುವವನು. ಈ ಶೇಷ ದೇವರು (ಶಕ್ತಿ) ಜಾಗೃತವಾದಾಗ, ಸರ್ಪದ ಸಹಸ್ರಾರು ಹೆಡೆಗಳು ಬಿಚ್ಚಿ ನಮಗೆ ಭಗವಂತ ಕಾಣುತ್ತಾನೆ. ಅವನು ಶೇಷಶಾಯಿ. ಕ್ಷೀರ ಸಮುದ್ರವೆಂದರೆ ಜ್ಞಾನಾನಂದಮಯವಾದ ಲೋಕ ಎಂದರ್ಥವಾಗುತ್ತದೆ. ಆ ಜ್ಞಾನಾನಂದಮಯ ಲೋಕದ ಅರಿವು ಶೇಷ ಶಕ್ತಿ ಜಾಗೃತವಾದಾಗ ನಮ್ಮ ಹೃದಯ ಸಮುದ್ರದಲ್ಲಿ ಮಾತ್ರ ಕಾಣ ಸಿಗುವಂತಹುದು. ಪ್ರಪಂಚ ಸೃಷ್ಟಿಯಾಗುವುದಕ್ಕಿಂತ ಮುಂಚಿನಿಂದಲೂ ಸಾಧನೆ ಮಾಡುತ್ತಿರುವ ಆದಿತ್ಯರೆಲ್ಲರಲ್ಲೂ ಉತ್ತಮರು ರುದ್ರ ದೇವರು. ಪುರುಷೋತ್ತಮನ ಪರಿಯಂಕನಾಗುವವ ಎಂದರೆ ಉತ್ತರ ಕಲ್ಪಕ್ಕೆ ದೇವರ ಪರಿಯಂಕಪದವಿ (ಮಂಚದ) “ಶೇಷ” ಪದವಿ ಪಡೆಯುವವರಾಗಿ ಸದಾ ಭಗವಂತನ ಜೊತೆಯಲ್ಲೇ ಇರುವಂತಹ ಮಹಾಭಾಗ್ಯ ಪಡೆದವರಾದ್ದರಿಂದಲೇ ರುದ್ರ ದೇವರು “ಮಹಾದೇವನು”.

ಶ್ರೀ ಮಧ್ವಾಚಾರ್ಯರ ಶಿಷ್ಯರೂ ಹಾಗೂ ತ್ರಿವಿಕ್ರಮ ಪಂಡಿತರ ಮಗನೂ ಆದ ಶ್ರೀ ನಾರಾಯಣ ಪಂಡಿತರು
ರುದ್ರ ದೇವರ ಕುರಿತು ಹೇಳಿದಂತೆ ನಾವು ಸದಾ ರುದ್ರ ದೇವರನ್ನು


ನಮಃ ಶಿವ ಶಿವಾ ಶಿವ ಶಿವ ಶಿವಾರ್ದ್ರಗ್ರಂಥಾ ಶಿವಂ |
ನಮೋ ಹರ ಹರಾ ಹರ ಅಂತರೀಮೇದೃಶಂ |
ನಮೋ ಭವ ಭವಾ ಭವ ಪ್ರಭಾವ ಭೂತಯೇ ಸಂಪದಂ |
ನಮೋ ಮೃಡನಂ ನಮೋ ನಮೋ ಉಮೇಶ ತುಭ್ಯಂ ನಮಃ ||


ಎಂದು ಪ್ರಾರ್ಥಿಸುತ್ತಿದ್ದರೆ ಮನೋನಿಯಾಮಕರಾದ ರುದ್ರ ದೇವರು ನಮ್ಮ ಮನಸ್ಸು ಧೃಡವಾಗಿ ಶ್ರೀಹರಿಯಲ್ಲಿ ನೆಲೆಸುವಂತೆ ಅನುಗ್ರಹಿಸುತ್ತಾರೆ.

ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೀಗೇ ಹೇಳುತ್ತಾ..


ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು |  

ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||  
ಬೇಸರದ ಪಾತಕ ಸ್ಮೃತಿಯ ಚುಚ್ಚದಿರ್ : ಎನ್ನು - |  
ತೀಶನನು ಬೇಡುತಿರೊ – ಮಂಕುತಿಮ್ಮ ||


ಈ ಪ್ರಪಂಚ ಬ್ರಹ್ಮನ ವೈಭವೋಪೇತವಾದ ಒಂದು ಆಲಯ. ಇದರ ವೈಭವದ ಛಲಕುಗಳನ್ನು ನೋಡಿ, ನನಗೂ ಬೇಕು ಎಂಬ ಆಸೆ ಬರಬಹುದು. ಆದ್ದರಿಂದ ತಿಮ್ಮಗುರುವೆ ನೀನು ಈಶ್ವರನನ್ನು ಆಸೆಗಳನ್ನು ಕೆಣಕಿ ಅವು ನನಗೇ ಬೇಕು ಎಂಬ ಮನಸ್ಸು ಕೊಡಬೇಡ. ಈ ಲೌಕಿಕದ ವಸ್ತುಗಳು, ವ್ಯಕ್ತಿಗಳು ನನ್ನನ್ನು ಪಾಶದಂತೆ ಬಿಗಿಯದಿರಲಿ, ನಿನ್ನನ್ನು ಮರೆತು ನಾನು ಯಾವಾಗ ಪಾಪ ಮಾಡುತ್ತೇನೋ ಮತ್ತು ಅದು ನನ್ನ ಅಂತರಂಗ ಚುಚ್ಚುವುದೋ ತಿಳಿಯುವುದಿಲ್ಲ. ಆ ನೋವು, ಯಾತನೆಯನ್ನು ನಾನು ಭರಿಸಲಾರೆ. ನನಗೆ ಆ ಕಷ್ಟ ಕೊಡಬೇಡ, ನಿನ್ನ ಸ್ಮರಣೆಯೇ ಎಂದೆಂದೂ ನನಗೆ ಇರಲಿ ಎಂದು ಕೇಳಿ ಕೊಳ್ಳುತ್ತಾರೆ.
 




ಚಿತ್ರಕೃಪೆ : ಅಂತರ್ಜಾಲ

Monday, August 29, 2011

ಮಂಗಳಾಚರಣ ಸಂಧಿ - ೧೦ ನೇ ಪದ್ಯ...

 
ವಾಮದೇವ ವಿರಿಂಚಿತನಯ ಉ

ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ|
ಕಾಮಹರ ಕೈಲಾಸಮಂದಿರ
ಸೋಮಸೂರ್ಯಾನಲ ವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ ||೧೦||

ಪ್ರತಿಪದಾರ್ಥ : ವಾಮದೇವ - ಸುಂದರನಾದಂತಹ ದೇವ, ವಿರಿಂಚಿತನಯ - ಬ್ರಹ್ಮದೇವನ ಪುತ್ರ, ಉಮಾಮನೋಹರ - ಉಮಾದೇವಿಯ ಮನಸ್ಸನ್ನು ಮುದಗೊಳಿಸುವವ, ಉಗ್ರ - ಉ ಎಂದರೆ ಸಂಸಾರ ಮತ್ತು ಗ್ರ ಎಂದರೆ ಸಂಸಾರವನ್ನು ಗ್ರಸನ ಮಾಡುವವನು, ಧೂರ್ಜಟಿ - ಜಟೆಯಲ್ಲಿ ಗಂಗೆಯನ್ನು ಧರಿಸಿರುವವನು, ಸಾಮಜಾಜಿನ ವಸನಭೂಷಣ - ಸಾಮಜ ಎಂದರೆ ಗಜ, ಆಜಿನ ಎಂದರೆ ಚರ್ಮ, ವಸನ ಎಂದರೆ ವಸ್ತ್ರ, ಭೂಷಣ ಎಂದರೆ ಅಲಂಕರಿಸಿಕೊಂಡವ, ಸುಮನಸೋತ್ತಂಸ - ಸುಮನಸರು ಎಂದರೆ ಜ್ಞಾನಿಗಳಾದ ದೇವತೆಗಳು ಮತ್ತು ಅಂತಹವರಲ್ಲಿ ಉನ್ನತಸ್ಥಾನದಲ್ಲಿರುವವನು, ಕಾಮಹರ - ಕಾಮ (ಮನ್ಮಥ)ನನ್ನು ಸಂಹರಿಸಿದ ಪರಮ ವೈರಾಗಿ, ಕೈಲಾಸ ಮಂದಿರ - ಕೈಲಾಸವನ್ನು ತನ್ನ ಮನೆಯನ್ನಾಗಿಸಿಕೊಂಡವ, ಸೋಮಸೂರ್ಯಾನಲ ವಿಲೋಚನ - ಸೋಮ ಎಂದರೆ ಚಂದ್ರ ಮತ್ತು ಸೂರ್ಯರನ್ನು ಎಡ ಹಾಗೂ ಬಲ ಕಣ್ಣುಗಳಲ್ಲಿಯೂ,  ಅನಲ ಎಂದರೆ ಅಗ್ನಿಯನ್ನು ಹಣೆಯಲ್ಲಿಯೂ ಧರಿಸಿರುವವನು, ಕಾಮಿತಪ್ರದ - ಬೇರೆಲ್ಲಾ ದೇವತೆಗಳಿಗಿಂತಲೂ ಅತಿ ಶ್ರೀಘ್ರವಾಗಿ ಒಲಿಯುವವನು, ಸದಾಸುಮಂಗಳವ - ಒಳ್ಳೆಯ ಜ್ಞಾನವನ್ನೂ, ಭಕ್ತಿಯನ್ನೂ,  ಕರುಣಿಸೆಮಗೆ - ಕರುಣೆಯಿಂದ ನಮಗೆ ಕೊಡು.


ಈ ಪದ್ಯದಲ್ಲಿ  ದಾಸರು ರುದ್ರ ದೇವರನ್ನು ನಮಿಸುತ್ತಾರೆ
ರುದ್ರ ದೇವರು "ವಿರಿಂಚಿ" ಎಂದರೆ ಬ್ರಹ್ಮ ತನಯರುಅವರಿಗೆ ಮೂರು ಮುಖ್ಯವಾದ ಹೆಸರುಗಳು : ) ಅತ್ಯಂತ ಸುಂದರ ರೂಪನಾದವನು, ತನ್ನ ಎಡಭಾಗದಲ್ಲಿರುವ ಪರಮಾತ್ಮನನ್ನು ಸರ್ವದಾ ಉಪಾಸನೆ ಮಾಡುವವನು ವಾಮದೇವ. ಸುಂದರನೆಂದರೆ ನಮ್ಮನ್ನು ಮರುಳುಗೊಳಿಸುವಂತಹ ರೂಪವುಳ್ಳವನು ವಾಮದೇವ. ನಮ್ಮ ಮನಸ್ಸಿಗೆ ಸತ್ಯದ ಅರಿವನ್ನೂ ಮತ್ತು ಮೋಹವನ್ನೂ - ಎರಡನ್ನೂ ಕೊಡುವವನು.    ೨) "ಉ" ಏಕಾಕ್ಷರದ ಅರ್ಥ "ಶಿವ". ಉಮಾ ಎಂದರೆ ಶಿವನಲ್ಲಿ ಮನಸ್ಸಿಟ್ಟವಳುಹಾಗೂ ಉಮಾ ದೇವಿಯ ಮನಸ್ಸಿಗೆ ಸಂತೋಷ ಕೊಡುವವನು, ಉಮಾಳ ಪತಿ ಉಮಾ ಮನೋಹರ. ೩) ಶತೃಗಳಿಗೆ ಕ್ರೂರನಾದುದರಿಂದ ಉಗ್ರ. "ಉ" ಎಂದರೆ ಉತ್ಪನ್ನವಾಗಿರುವ ಪ್ರಪಂಚ ಮತ್ತು "ಉ" ಎಂದರೆ "ಉಗ್ರ".  ಇಲ್ಲಿ ’ಗ್ರ’ ಎಂದರೆ "ಗ್ರಸನ" "ಗ್ರಸತಿ" ಎಂದು ಅರ್ಥ ಆದಾಗ, ಉತ್ಪನ್ನವಾಗಿರುವ ಪ್ರಪಂಚವನ್ನು  ಗ್ರಸನ - ಸಂಹಾರ ಮಾಡುವವನು ಎಂದು ಅರ್ಥವಾಗುತ್ತದೆಹಾಗೇ "ಉಗ್" ಜ್ಞಾನಿಗಳ ಸಮುದಾಯ "ರ" - ರಮಯತಿ ಎಂದರೆ ಆನಂದ ಕೊಡತಕ್ಕವನು ಎಂದೂ ಅರ್ಥೈಸಬಹುದು.   ತ್ರಿನೇತ್ರನಾದ ರುದ್ರ ದೇವರು ಬಲಗಣ್ಣಿನಲ್ಲಿ ಸೂರ್ಯ - ಇಚ್ಛೆ ಹಾಗೂ ರಜೋಗುಣವನ್ನೂ, ಎಡಗಣ್ಣಿನಲ್ಲಿ ಚಂದ್ರ - ಜ್ಞಾನ ಹಾಗೂ ಸತ್ವಗುಣವನ್ನೂ ಮತ್ತು ಹಣೆಗಣ್ಣಿನಲ್ಲಿ ಅಗ್ನಿ - ಕ್ರಿಯೆ ಹಾಗೂ ತಮೋ ಗುಣಗಳನ್ನು ಹೊಂದಿರುತ್ತಾರೆ.   ಇಲ್ಲಿ ನಮಗೆ ಯಾವುದೇ ಸಾಧನೆಗೂ ಅಥವಾ ವಸ್ತು ನಿರ್ಮಾಣಕ್ಕೂ ಮೊದಲು ಇಚ್ಛೆ ಬರಬೇಕು ನಂತರ ಆ ಇಚ್ಛೆಯನ್ನು ಪೂರೈಸಿಕೊಳ್ಳಲು ಜ್ಞಾನ ಬೇಕು, ಕೊನೆಗೆ ಸಾಧನೆಗೂ, ಯಾವುದೇ ವಸ್ತು ನಿರ್ಮಾಣಕ್ಕೂ  ಕ್ರಿಯೆ ಬೇಕಾಗುತ್ತದೆ ಎಂಬುದನ್ನು ತಿಳಿಸುತ್ತದೆ.  ರುದ್ರ ದೇವರು  ಗಂಗೆಯನ್ನು ಶಿರದಲ್ಲಿ ಧರಿಸಲು ತಮ್ಮ ಜಟೆಯನ್ನು ಆಕಾಶದಲ್ಲಿ ಒಗೆದು ಹರಡಿದಾಗ ಅದು ಹೊಗೆಯಂತೆ ಕಂಡಿದ್ದರಿಂದ ಅವರನ್ನು ವ್ಯೋಮಕೇಶ’  ಅಥವಾ ಧೂರ್ಜಟಿಎಂಬ ಹೆಸರಿನಿಂದಲೂ ಕರೆಯುತ್ತಾರೆಧೂರ್ಜಟಿ ಮತ್ತು ಸಾಮಜಾಜಿನವಸನ ಎಂಬ ಹೆಸರುಗಳು ವೈರಾಗ್ಯವನ್ನು ಸೂಚಿಸುತ್ತವೆ.  ಸುಮನಸೋತ್ತಂಸ - ’ಸು’ ಎಂದರೆ ಭಗವಂತ, ಯಾರು ಅವನನ್ನು ಸದಾ ಧ್ಯಾನಿಸುವರೋ ಅವರು ಸುಮನಸರು, ದೇವತೆಗಳು ಎಂದರ್ಥ.  ಅಂತಹ ಸುಮನಸರಲ್ಲಿ ರುದ್ರ ದೇವರು ಉತ್ತಮರು. ಕಾಮಹರ - ರುದ್ರ ದೇವರು ತನ್ನ ಕಾಮವನ್ನು ಮಾತ್ರ ಬಿಡಲಿಲ್ಲ.  ನಮ್ಮ ಸಾಧನೆಗೆ ಬಾಧಕವಾದಾಗ ನಮ್ಮ ಕಾಮವನ್ನು ಹರಿಸಿದವರು ಎಂದರೆ, ಇಂದ್ರಿಯಗಳ ನಿಗ್ರಹಣೆಗೆ ಅನುಕೂಲ ಮಾಡಿಕೊಡುವಂತಹ ಮನೋಕಾರಕ ದೇವರು ಎಂದರ್ಥ. ಕೈಲಾಸ ಮಂದಿರ - ಕೈಲಾಸವೆಂದರೆ ಹಿಮದ ರಾಶಿ ಎಂದರ್ಥ.  "ಕಿಲ" ಎಂದರೆ ಶೈತ್ಯ.  ಛಳಿ ಬರಿಸುವಂತಹ ಹಿಮದ ರಾಶಿಯನ್ನು ಮನೆಯನ್ನಾಗಿಸಿಕೊಂಡವನು.  ಎಲ್ಲಿ ಮನುಷ್ಯರು ಮೈ ಕೈ ಬಿಟ್ಟಿರಲು ಸಾಧ್ಯವಿಲ್ಲವೋ ಅಂತಹ ಶೈತ್ಯದಲ್ಲಿ ದಿಗಂಬರನಾದವನು ರುದ್ರ.  ಇದು ಅತ್ಯಂತ ಉನ್ನತವಾದ ಭಾವ - ಎಲ್ಲಾ ಕಾಮನೆಗಳನ್ನೂ ಬಿಟ್ಟವನು ಎಂಬ ಅರ್ಥ ಕೊಡುವ ಶಬ್ದ.  ಶಿವನಿಗೆ ಉಪನಿಷತ್ತಿನಲ್ಲಿ ಶರೀರಪುರುಷ ಎಂದೂ ಹೆಸರಿದೆ.  ನಮ್ಮ ಈ ಶರೀರವೇ ರುದ್ರನಿಗೆ ಬಟ್ಟೆ.  ಶರೀರ ಬಿದ್ದು ಹೋದಾಗ.. ಅವನು ದಿಗಂಬರ.  ಆದ್ದರಿಂದಲೇ ರುದ್ರ ದೇವರು “ತ್ವಂ ಪ್ರಾಣ ತೇಜಸಾ ರುದ್ರಃ”. ರುದ್ರ ಶಬ್ದ ವೇದದಲ್ಲಿ ನಾಲಕ್ಕು ಅರ್ಥಗಳಲ್ಲಿ ಬಳಕೆಯಾಗಿದೆ – ೧) ಅಗ್ನಿ ೨) ಶಂಕರ ೩) ಪ್ರಾಣ ೪) ನಾರಾಯಣ.  ಶ್ರೀ ವಿಷ್ಣು ಸಹಸ್ರನಾಮದಲ್ಲಿ “ಓಂ ರುದ್ರಾಯ ನಮ:” ಎಂದಾಗ - ರುದ್ರ ಎಂದರೆ ಮೇಲ್ನೋಟಕ್ಕೆ ದುಃಖ ಕೊಡುವವನು, ಸುಡುವವನು, ಎನ್ನುವ ಅರ್ಥವನ್ನು ಕೊಡುತ್ತದೆ. ವೇದಗಳಲ್ಲಿರುವ ರುದ್ರಸೂಕ್ತಗಳಿಗೆ ಸಾಯಣರು ಅರ್ಥ ಬರೆಯುವಾಗ, ರುದ್ರ ಎಂದರೆ ಅಗ್ನಿ ಎಂದು ಬರೆಯುತ್ತಾರೆ. ಮುಟ್ಟಿದರೆ ಕಣ್ಣೀರು ಬರುವುದು ಪಂಚಭೂತಗಳಲ್ಲಿ ಅಗ್ನಿಯಿಂದ ಮಾತ್ರ. ಆದ್ದರಿಂದ ಅಗ್ನಿ ಕೂಡ ರುದ್ರ. ಆದರೆ ಭಗವಂತ ನಮಗೆ ಏಕೆ ದುಃಖ ಕೊಡುತ್ತಾನೆ? ಭಗವಂತ ದುಃಖ ಕೊಡುವುದು ಪಾಪಿಗಳಿಗೆ ಮಾತ್ರ. ಇಲ್ಲಿ ಭಗವಂತ ದುಃಖ ಕೊಡುವ ಉದ್ದೇಶ ನಮಗೆ ಶಿಕ್ಷಣ ಕೊಡುವುದು, ಉದ್ಧರಿಸುವುದು ಎಂದೇ ಅರ್ಥವಾಗುತ್ತದೆ.   ಹಾಗೇ ಈ ಪದ “ರುದ್ರ”ವನ್ನು ಬಿಡಿಸಿ ನೋಡಿದಾಗ ರುಕ್+ದ್ರಾ ಎಂದಾಗುತ್ತದೆ.  'ರುಕ್' ಎಂದರೆ ಭವರೋಗ, ಮತ್ತು 'ದ್ರಾ' ಎಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ. ಆದ್ದರಿಂದ ರುದ್ರ ಎಂದರೆ ಭವರೋಗ ನಾಶಕ. ಈ ನಾಮವನ್ನು ನಾವು ರುತ್+ದ್ರಾ ಎಂದೂ ಒಡೆದು ಅರ್ಥೈಸಬಹುದು. ಇಲ್ಲಿ ರುತ್ ಅಂದರೆ ದುಃಖ. ಆದ್ದರಿಂದ ರುದ್ರ ಅಂದರ ದುಃಖನಾಶಕ.  ರುದ್ರನು ಮಹಾ ತೇಜಸ್ವಿ ಮತ್ತು ಅಹಂಕಾರ ತತ್ವದ ಪ್ರತೀಕ.  ನಮ್ಮಲ್ಲಿರುವ ಅಹಂಕಾರ, ಅತಿಯಾದ ಅಭಿಮಾನ, ಆಲಸ್ಯವೆಂಬ ದೌರ್ಬಲ್ಯಗಳು  ನಮ್ಮನ್ನು ದುರವಸ್ಥೆಗೀಡು ಮಾಡಿದಾಗ ನಮಗೆ ಭಗವಂತನಲ್ಲಿ ಶರಣಾಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂಬ ಅರಿವು ಮೂಡಿಸುವುದೂ ಹಾಗೂ ಭಗವಂತನ ಸರ್ವೋತ್ತಮತ್ವದೆಡೆಗೆ ಸಾಗಲು ಪ್ರೇರೇಪಿಸುವವರೇ ರುದ್ರ ದೇವರು.

ಶಿವಾನಂದಲಹರಿಯಲ್ಲಿ ಶ್ರೀ ಶಂಕರರು ರುದ್ರನನ್ನು ಇನ್ನೂ ಅನೇಕ ಹೆಸರುಗಳಿಂದ ಸ್ತುತಿಸುತ್ತಾರೆ.  ಅದರಲ್ಲಿ  ಅ) ಚದುರಗಹಾರ - ದಾರುಕಾವನದಲ್ಲಿ ಮುನಿಗಳು ಹರಿಬಿಟ್ಟ ಹಾವುಗಳನ್ನೂ, ಗರುಡನ ಭಯದಿಂದ ಹೆದರಿ ಶರಣು ಬಂದ ಹಾವುಗಳನ್ನೂ ತನಗೆ ಆಭರಣವಾಗಿ ಮಾಡಿಕೊಂಡವನು ಆ) ಮೃಗಧರಂ - ಜಿಂಕೆಯನ್ನು ಧರಿಸಿದವನು ಇ) ಪಶುಪತಿಂ - ಬ್ರಹ್ಮನಿಂದ ಸ್ಥಾವರದವರೆಗಿನ ಪಶುಸಮೂಹಕ್ಕೆ ಒಡೆಯನಾದವನು ಈ) ಚಿದಾಲಂಬಂ - ಚೈತನ್ಯಾಶ್ರಯನಾದವನು ಉ) ಜಟಾಭಾರೋದಾರಂ - ಜಟಾಸಮೂಹದಿಂದ ರಮಣೀಯನಾದವನು ಊ)  ಅತಿವಿಡಂಬಂ - ಲೋಕ ವಿಲಕ್ಷಣನಾದವನು, ತ್ರಿಲೋಚನತ್ವ, ದಿಗಂಬರತ್ವ, ಸ್ಮಶಾನವಾಸ ಮುಂತಾದವುಗಳು.

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿ: |
ಸಮರ್ಪ್ಯೈಕಂ ಚೇತ: ಸರಸಿಜಮುಮಾನಾಥ ಭವತೇ
ಸುಖೇನೈವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ||
ಪರಮೇಶ್ವರನಿಗೆ ಬಾಹ್ಯಾರ್ಚನೆಗಿಂತಲೂ ಅಂತರಂಗದ ಅರ್ಚನೆ ಬಹಳ ಪ್ರಿಯವಾದದ್ದು.  ಎಷ್ಟೇ ಕಷ್ಟ ಪಟ್ಟು ಬಾಹ್ಯ ವಸ್ತುಗಳನ್ನು ಸಂಗ್ರಹಿಸಿ ಶಿವನಿಗೆ ಅರ್ಪಿಸಿ ಪೂಜಿಸಿದರೂ, ನಮ್ಮ ಮನಸ್ಸನ್ನು ಶಿವನಲ್ಲಿ ಲೀನವಾಗಿಸದೆ, ಅರ್ಪಿಸದೆ ಹೋದರೆ ನಾವು ಸಂಸಾರದ ವಿಷಯಾಸಕ್ತಿಗಳಿಂದ ಹೊರ ಬರುವುದು ಸಾಧ್ಯವಿಲ್ಲ.  ಮನಸ್ಸನ್ನು ಶಿವನಿಗೆ ಅರ್ಪಿಸಿದ್ದಾದ ಮೇಲೆ ಬೇರೆ ಯಾವ ಆರಾಧನೆಯೂ, ಪೂಜೆಯೂ ಬೇಕಾಗಿಯೇ ಇಲ್ಲ. ಅದರಿಂದಲೇ ಶಿವನನ್ನು "ಮನಸ್ಸಿನಂತೆ ಮಹಾದೇವ" ಎನ್ನುವುದು. 

ಸ್ತೋತ್ರಕಾವ್ಯಗಳ ಕವಿ ನಾರಾಯಣ ಪ೦ಡಿತಾಚಾರ್ಯರ ವಿರಚಿತ ಶಿವಸ್ತುತಿ :
ಮಹೇಶ ಮಹಿತೋsಸಿ ತತ್ಪುರುಷ ಪೂರುಷಾಗ್ರ್ಯೋ ಭವಾನ್
ಅಘೋರ ರಿಪು-ಘೋರ ತೇsನವಮ ವಾಮ-ದೇವಾ೦ಜಲಿ:|
ನಮ: ಸಪದಿ-ಜಾತ ತೇ ತ್ವಮಿತಿ ಪ೦ಚ-ರೂಪೋs೦ಚಿತ:
ಪ್ರಪ೦ಚಯ ಚ ಪ೦ಚ-ವೃನ್ಮಮ ಮನಸ್ತಮಸ್ತಾಡಯ ||

ಓ ಮಹೇಶ, ಎಲ್ಲರಿ೦ದಲೂ ಪೂಜೆಗೊಳ್ಳುವವನು ನೀನು. ಓ ತತ್ಪುರುಷ, ಪುರುಷರಿಗೂ ಮಿಗಿಲಾದ ಪುರುಷ ನೀನು. ಹಗೆಗಳ ಎದೆಗೆಡಿಸಿದ ಓ ಅಘೋರ, ಹಿರಿಯ ದೈವತವಾದ ಓ ವಾಮದೇವ, ಇದೋ ನಿನಗೆ ಕೈಮುಗಿದೆ. ಓ ಸದ್ಯೋಜಾತ, ಇದೋ ನಿನಗೆ ವ೦ದನೆ, ಹೀಗೆ ಪ೦ಚರೂಪನಾದ ನಿನ್ನನ್ನು ಪೂಜಿಸುವೆ. ಪ೦ಚವಿಧವಾದ ನನ್ನ ಒಳ ಬಗೆಯನ್ನು ವಿಸ್ತಾರಗೊಳಿಸು. ಪ೦ಚವಿಧವಾದ ಬಗೆಯ ಕತ್ತಲನ್ನು ಒದ್ದೋಡಿಸು.


ರುದ್ರ ದೇವರು ಮುಖ್ಯವಾಗಿ “ಮನೋನಿಯಾಮಕರು” ಎಂಬ ಮಾತನ್ನು  “ಪಂಪಾಪುರ ನಿವಾಸ ಪ್ರಮಥೇಶ “ ಎಂಬ ಪದದಲ್ಲಿ ಜಗನ್ನಾಥ ದಾಸರು “ಮನೋ ಮೈಲಿಗೆಯ ಪರಿಹರಿಸು ನೀಲಕಂಠ..” ಎಂದು ಆರ್ದ್ರರಾಗಿ ಬೇಡಿಕೊಳ್ಳುವುದರ ಮೂಲಕ ಹೇಳುತ್ತಾರೆ.  ಅಮೃತ ಮಂಥನ ಕಾಲದಲ್ಲಿ ಬಂದ ವಿಷವನ್ನು ಕಂಠದಲ್ಲಿಟ್ಟು ಕೊಂಡಿದ್ದರಿಂದ ಅವನು “ನೀಲಕಂಠ”ನಾಗಿದ್ದಾನೆ.  ಇದಲ್ಲದೆ ದೂರ್ವಾಸ, ಶುಕ, ವ್ಯಾಧ, ಜೈಗೀಶ ಎಂಬ ರೂಪಗಳಲ್ಲೂ ಹರಿಯ ಪರಿಚರವನ್ನು ಮಾಡಿ ಮೆಚ್ಚಿಸಿದ್ದಾನೆ. 


“ನೀಲಲೋಹಿತ” ಎಂಬ ಪದದಲ್ಲಿ ಡಮರುಗ, ತ್ರಿಶೂಲಗಳನ್ನು ಹೊಂದಿರುವವನು, ಹಣೆಯಲ್ಲಿ ಕಣ್ಣನ್ನಿಟ್ಟುಕೊಂಡು ಫಾಲನಯನನಾಗಿದ್ದಾನೆ. ತಲೆಯಲ್ಲಿ ಚಂದ್ರನನ್ನು ಧರಿಸಿಕೊಂಡು ಶಶಿಧರನೂ, ಇಂದ್ರನಿಂದ ವಂದಿಸಿಕೊಳ್ಳುವವನೂ  ಹಾಗೂ ನಾಗಭೂಷಣನೂ ಆಗಿದ್ದಾನೆ.  ಇಂತಹ ರುದ್ರ ದೇವರು ನಮಗೆ ಸದಾ ಸುಮಂಗಳವ ಕರುಣಿಸಲೆಂದು ದಾಸರು ಕೇಳಿ ಕೊಳ್ಳುತ್ತಾರೆ.

ಜಗನ್ನಾಥ ದಾಸರು ತಮ್ಮ ತತ್ವ ಸುವ್ವಾಲಿಯಲ್ಲಿ ಪರಮೇಶ್ವರನನ್ನು ಕುರಿತು..

ಭೂತನಾಥನ ಗುಣ ಪ್ರಭಾತಕಾಲದಲೆದ್ದು
ಪ್ರೀತಿಪೂರ್ವಕದಿ ಪಠಿಸುವ | ಪಠಿಸುವವರ ಜಗ-
ನ್ನಾಥ ವಿಠಲನು ಸಲಹುವ ||   ಎನ್ನುತ್ತಾರೆ.

"ಶಿವ"ನೆಂದರೇ ಮಂಗಲ, ಮಂಗಲವೆಂದರೆ ಮೇಲಕ್ಕೇರುವುದು, ಎತ್ತರಕ್ಕೇರುವುದು ಎಂದರ್ಥ.  ಇದಕ್ಕಾಗಿಯೇ ಅಲ್ಲವೇ ನಾವು ಕೈಲಾಸವಾಸನನ್ನು ಎಲ್ಲಾ ವಿಷಯಾಸಕ್ತಿಗಳನ್ನೂ ನಿಗ್ರಹಿಸಿ, ಅತ್ಯಂತ ಎತ್ತರದಲ್ಲಿರುವ ಭಗವಂತನ ಅರಿವನ್ನು ಮೂಡಿಸಿ, ಹರಿಯಲ್ಲಿ ತೈಲಧಾರೆಯಂತೆ ನಮ್ಮ ಮನಸ್ಸನ್ನು ನೆಲೆ ನಿಲ್ಲಿಸು, ನಮಗೆ ಮಂಗಲವನ್ನು ಕರುಣಿಸು ಎಂದು ಕೇಳಿಕೊಳ್ಳುವುದು.  ನಮ್ಮ ಮನಸ್ಸಿನಲ್ಲಿ ಸದಾ ಭಗವಂತನ ಎಚ್ಚರ ಇರುವಂತೆ  ಮಾಡು ಎಂದು ಜಗನ್ನಾಥ ದಾಸರು ರುದ್ರದೇವರು ಏಕಾದಶ ರುದ್ರರ ಗಣಕ್ಕೆ ಅಧಿಪತಿಯಾದವರು, ಮುಖ್ಯರಾದವರು "ಶಿವ" ಎಂಬ ಸೂಚನೆ ಕೊಡುತ್ತಾ ಒಟ್ಟು   - ವಾಮದೇವ, ವಿರಿಂಚಿತನಯ, ಉಮಾಮನೋಹರ, ಉಗ್ರ, ಧೂರ್ಜಟಿ, ಸಾಮಜಾಜಿನವಸನ ಭೂಷಣ, ಸುಮನಸೋತ್ತಂಸ, ಕಾಮಹರ, ಕೈಲಾಸಮಂದಿರ, ಸೋಮಸೂರ್ಯಾನಲ ವಿಲೋಚನ, ಕಾಮಿತಪ್ರದ ಎಂಬ ಹನ್ನೊಂದು ಹೆಸರುಗಳಿಂದ  ಸ್ತುತಿಸುತ್ತಾ ಕೇಳಿಕೊಳ್ಳುತ್ತಾರೆ.


ಚಿತ್ರಕೃಪೆ : ಅಂತರ್ಜಾಲ
"ಶಿವಾನಂದಲಹರಿ" - ಆಧಾರ ವೇದಾಂತ ಭಾರತೀ ಪ್ರಕಾಶನ

Tuesday, August 16, 2011

ಮಂಗಳಾಚರಣ ಸಂಧಿ - ೯ ನೇ ಪದ್ಯ...


ಪಂಚಭೇದಾತ್ಮಕ ಪ್ರಪಂಚಕೆ
ಪಂಚ ರೂಪಾತ್ಮಕನೆ ದೈವಿಕ
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ |
ಪಂಚವಿಂಶತಿ ತತ್ವ ತರತಮ
ಪಂಚಿಕೆಗಳನು ಪೇಳ್ದ ಭಾವಿ ವಿ
ರಿಂಚಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||

ಪ್ರತಿಪದಾರ್ಥ :  ಪಂಚಭೇದಾತ್ಮಕ ಪ್ರಪಂಚ - ಜೀವ-ಜೀವರ ಭೇದ, ಜೀವ-ಜಡರ ಭೇದ, ಜಡ-ಜಡ ಭೇದ, ಜೀವೇಶ ಭೇದ, ಜಡೇಶ ಭೇದ ಎಂಬ ಐದು ಭೇದಗಳುಳ್ಳ ಪ್ರಪಂಚ, ಪಂಚರೂಪಾತ್ಮಕನೆ ದೈವತ - ನಾರಾಯಣ, ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ಎಂಬ ಶ್ರೀಹರಿಯ ಐದು ರೂಪಗಳೇ ಅಧಿದೇವತೆಗಳು, ಪಂಚಮುಖ - ರುದ್ರದೇವರು, ಶಕ್ರಾದಿಗಳು - ಇಂದ್ರ ಮೊದಲಾದವರು, ಕಿಂಕರರು ಶ್ರೀಹರಿಗೆ - ಭಗವಂತನಾದ ಶ್ರೀಹರಿಯ ಸಹಚರರು (ಸೇವಕರು), ಪಂಚವಿಂಶತಿತತ್ವ - ಮಹದಾದಿ ೨೫ ತತ್ವಗಳು, ತರತಮ - ತಾರತಮ್ಯದಲ್ಲಿ ದೇವತೆಗಳು, ಪಂಚಿಕೆಗಳನು ಪೇಳ್ದ - ಪಂಚಭೇದಗಳ ವಿವರಗಳನ್ನು ವಿವರಿಸಿದ, ಭಾವಿ ವಿರಿಂಚಿ - ಭಾವಿ ಬ್ರಹ್ಮರು (ಮುಂದಿನ ಕಲ್ಪದಲ್ಲಿ ಬ್ರಹ್ಮ ಪದವಿಗೆ ಬರುವವರು), ಎನಿಪ ಆನಂದತೀರ್ಥರ - ಎಂದು ಕರೆಯುವ ಆನಂದಕರವಾದ ಮಧ್ವ ಸಿದ್ಧಾಂತವನ್ನು ನೀಡಿದ ಮಧ್ವರು, ನೆನೆವೆನನುದಿನವು - ನಿರಂತರವೂ ಸ್ಮರಿಸುವೆನು. 

ಈ ಪದ್ಯ  ಕೂಡ ಆನಂದತೀರ್ಥರನ್ನೇ ಕುರಿತದ್ದಾಗಿದೆ.  ಇಲ್ಲಿ ಆಚಾರ್ಯರು ಬೋಧಿಸಿದ ಪಂಚಭೇದ, ಪಂಚರೂಪ, ಇವೆಲ್ಲದರ ಕುರಿತು ತತ್ವವನ್ನು ಹೇಳುತ್ತದೆ. ಪಂಚ ಭೇದವೆಂದರೆ ೧) ಜೀವ ಮತ್ತು ಈಶ್ವರನಲ್ಲಿರುವ ಭೇದ.  ಜೀವವೆಂದರೆ ಬ್ರಹ್ಮನಿಂದಾರಂಭಿಸಿ ಅತೀ ಸೂಕ್ಷ್ಮ ಜೀವಿಗಳವರೆಗೂ ಇರುವ  ೨)  ಜಡ ಮತ್ತು ಈಶ್ವರ ಭೇದ. ಜಡವೆಂದರೆ ಚಲನೆ ಇಲ್ಲದ್ದು ಮತ್ತು  ಈಶ್ವರನಿಗೂ ಇರುವ ಭೇದ.  ೩) ಜಡಕ್ಕೂ ಜೀವಕ್ಕೂ ಇರುವ ಭೇದ.  ೪)  ಜಡ - ಜಡ  ಭೇದ.   ಜಡ   ವಸ್ತುಗಳಲ್ಲಿ ಒಂದರಿಂದ   ಒಂದಕ್ಕಿರುವ ಭೇದ.   ೫) ಜೀವ – ಜೀವ ಭೇದ.  ಹೀಗೆ ಪಂಚ ಭೇದಗಳಿಂದ ಕೂಡಿದ ಈ ಪ್ರಪಂಚಕ್ಕೆ “ಪಂಚ ಭೇದಾತ್ಮಕ ಪ್ರಪಂಚ” ಎಂದು ಹೆಸರು. ಈ ಪ್ರಪಂಚದಲ್ಲಿ ಈಶ (ಪರಮಾತ್ಮ) – ಜೀವ – ಜಡ ಪದಾರ್ಥ ಈ ಮೂರು ವಸ್ತುಗಳ ಹೊರತು ಪ್ರಸಿದ್ಧವಾದವು ಯಾವುದೂ ಇಲ್ಲ ಮತ್ತು ಈ ಮೂರು ವಸ್ತುಗಳೇ ಆಚಾರ್ಯರು ಬೋಧಿಸಿದ ಪಂಚಭೇದ ತತ್ವಕ್ಕೆ ಆಧಾರ.  ಪ್ರತೀ ಜೀವವೂ ತನ್ನದೇ ಆದ ಸ್ವಂತಿಕೆ ಹೊಂದಿರುತ್ತದೆ. ಜೀವ – ಜೀವಗಳಿಗೆ ಎಷ್ಟೇ ಹೋಲಿಕೆ ಇದ್ದರೂ.. ಅಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ.  ಉದಾ – ಅವಳಿ ಮಕ್ಕಳು.  ಸಾಮಾನ್ಯವಾಗಿ ಬೇರೆ ಯಾರೂ ಗುರುತಿಸಲಾಗದಿದ್ದರೂ ತಾಯಿಯಾದವಳು ಗುರುತಿಸುತ್ತಾಳೆ.  ಜಡ – ಜಡ ಭೇದ. ಜಡವಸ್ತುಗಳಲ್ಲಿರುವ ವ್ಯತ್ಯಾಸಗಳು.

ಇನ್ನು ಪಂಚರೂಪವೆಂದರೆ  - ಪರಮಾತ್ಮನ ಐದು ರೂಪಗಳು.  ಲಕ್ಷ್ಮೀ – ನಾರಾಯಣ, ಮಾಯಾ – ವಾಸುದೇವ, ಜಯ – ಸಂಕರ್ಷಣ, ಕೃತಿ – ಪ್ರದ್ಯುಮ್ನ ಮತ್ತು  ಶಾಂತಿ – ಅನಿರುದ್ಧ.  ಈ ಐದು ರೂಪಗಳುಳ್ಳ ನರಸಿಂಹನೇ ಸರ್ವೋತ್ತಮ ದೇವರು.

ಪಂಚಮುಖನಾದ ರುದ್ರ, ಶಕ್ರ ಎಂದರೆ ಇಂದ್ರ, ದೇವತೆಗಳೆಲ್ಲಾ ಶ್ರೀಹರಿಗೆ ಕಿಂಕರರಾಗಿರುತ್ತಾರೆಪಂಚವೆಂದರೆ ಐದು, ವಿಂಶತಿಯೆಂದರೆ ೨೦, ಇವುಗಳಲ್ಲಿ ಮೊದಲಿನ ನಾಲಕ್ಕು ತತ್ವಗಳಾದ ) ಅವ್ಯಕ್ತತತ್ವ ) ಮಹತ್ತತ್ವ ) ಅಹಂಕಾರತತ್ವ ಮತ್ತು ) ಮನಸ್ತತ್ವ, ಇವುಗಳನ್ನು ಸೂಕ್ಷ್ಮತತ್ವಗಳುಎಂದು ಕರೆಯುತ್ತಾರೆಉಳಿದವುಗಳು  ) ಪಂಚ ಭೂತಗಳು ಪಂಚತನ್ಮಾತ್ರ  ) ಪಂಚ ಜ್ಞಾನೇಂದ್ರಿಯಗಳು  ಹಾಗು ೮) ಪಂಚ  ಕರ್ಮೇಂದ್ರಿಯಗಳು ,  ಒಟ್ಟು  ೨೫ ತತ್ವಗಳುಇದರ ಅಭಿಮಾನಿ ದೇವತೆಗಳು ಮತ್ತು ಅವರ ತಾರತಮ್ಯವನ್ನು ತಿಳಿಸುತ್ತಾರೆ ತಾರತಮ್ಯ ಪಂಚಭೇದಗಳು ಎಂಬುದೇ ಆನಂದತೀರ್ಥರು ಪ್ರತಿಪಾದಿಸಿದ ತತ್ವಗಳಲ್ಲಿ ಬಹು ಮುಖ್ಯವಾದವುಇದರಿಂದಲೇ ಬಹು ಮುಖ್ಯವಾದಹರಿಸರ್ವೋತ್ತಮತ್ವಸಾಧಿಸುವುದುಅವ್ಯಕ್ತ ತತ್ವಾಭಿಮಾನಿ ರಮಾದೇವಿ, ಸರ್ವೋತ್ತಮನಾದ ಶ್ರೀಹರಿಗಿಂತ ಅನಂತ ಗುಣಗಳಲ್ಲಿ ಕಡಿಮೆಮಹತ್ತತ್ವಾಭಿಮಾನಿಗಳಾದ ಬ್ರಹ್ಮ, ವಾಯುಗಳು ರಮಾದೇವಿಗಿಂತ ಕೋಟಿ ಗುಣ ಕಡಿಮೆಯಾಗಿದ್ದಾರೆಅವರವರ ಪತ್ನಿ ವಾಣೀ, ಭಾರತೀ ತಮ್ಮ ಪತಿಗಳಿಗಿಂತ ೧೦೦ ಗುಣ ಕಡಿಮೆ ಇದ್ದಾರೆಅಹಂಕಾರಾಭಿಮಾನಿಗಳಲ್ಲಿ ಕಾಲಾಭಿಮಾನಿ ಗರುಡ, ಜೀವಾಭಿಮಾನಿ ಶೇಷ, ಅಹಂಕಾರಾಭಿಮಾನಿ ರುದ್ರ  ಸಮರಾದರೂ ವಾಣೀ ಭಾರತಿಯರಿಗಿಂತ ೧೦೦ ಕಡಿಮೆ.

ಜೀವ ಜೀವರಲ್ಲಿ ಭೇದ ಚೆನ್ನಾಗಿ ಉಂಟು ಎಂದು ತಿಳಿಯಬೇಕು.  ಪುರಂದರ ದಾಸರು ತಮ್ಮ “ಸ್ನಾನವ  ಮಾಡಿರೋ ಜ್ಞಾನ ತೀರ್ಥದಲಿ | ನಾನು ನೀನೆಂಬ ಅಹಂಕಾರ ಬಿಟ್ಟು || ಎಂಬ ಪದದಲ್ಲಿ “ವೇದಶಾಸ್ತ್ರವನೋದುವುದೊಂದು ಸ್ನಾನ | ಭೇದಾಭೇದ ತಿಳಿದರೊಂದು ಸ್ನಾನ || ಸಾಧು ಸಜ್ಜನರ ಸಂಗ ಒಂದು ಸ್ನಾನ | ಪುರಂದರ ವಿಠಲನ ಜ್ಞಾನವೇ ಗಂಗಾ ಸ್ನಾನ || ಎಂದಿದ್ದಾರೆ. 

ಜೀವರು ತ್ರಿವಿಧ – ಸಾತ್ವಿಕರು, ರಾಜಸರು ಮತ್ತು ತಾಮಸರು.  ಹೀಗೆ ಪರಮಾತ್ಮನಿಂದ ಹಿಡಿದು ತೃಣದ ತನಕ ತಾರತಮ್ಯ ಮತ್ತು ಪಂಚಭೇದಗಳು ಇವೆ.  ಎಲ್ಲರೂ ಎಲ್ಲವೂ ಎಲ್ಲೂ ಒಂದೇ ಅಲ್ಲ ಎಂಬ ತತ್ವ ನಿರೂಪಿಸಿದವರು ಶ್ರೀ ಆನಂದತೀರ್ಥರು.  ಇವರೇ ಮುಂದಿನ ಕಲ್ಪದಲ್ಲಿ ಬರುವ ಭಾವೀ ಬ್ರಹ್ಮರು.



ಈ ದೇವತಾ ತಾರತಮ್ಯವನ್ನು ಶ್ರೀ ಪುರಂದರ ದಾಸರು ತಮ್ಮ ಒಂದು ಪದದಲ್ಲಿ ಹೀಗೆ..

ಸತ್ಯ ಜಗಕಿದು ಪಂಚ ಭೇದವು ನಿತ್ಯ ಶ್ರೀಗೋವಿಂದನ |

ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ||


ಜೀವ ಈಶಗೆ ಭೇದಸರ್ವತ್ರ | ಜೀವಜೀವಕೆ ಭೇದವು ||

ಜೀವಜಡಕೆ ಜಡಜಡಕೆ ಭೇದ | ಜೀವಜಡ ಪರಮಾತ್ಮಗೆ ||೧||



ಮಾನುಷೋತ್ತಮಗಧಿಪ ಕ್ಷಿತಿಪರು | ಮನುಜ ದೇವ ಗಂಧರ್ವರು

ಜ್ಞಾನಿ ಪಿತ್ರಾಜಾನ ಕರ್ಮಜ | ದಾನವಾರಿ ತತ್ವಾತ್ಮರು ||೨||



ಗಣಪ ಮಿತ್ರರು ಸಪ್ತ ಋಷಿಗಳು | ವಹ್ನಿನಾರದ ವರುಣನು ||

ಇನಜಗೆ ಸಮ ಚಂದ್ರ ಸೂರ್ಯರು | ಮನುಸತಿಯು ಹೆಚ್ಚು ಪ್ರವಹನು ||೩||



ದಕ್ಷ ಸಮ ಅನಿರುದ್ಧ ಗುರುಶಚಿ | ರತಿ ಸ್ವಾಯಂಭುವರಾರ್ವರು ||

ಪಕ್ಷ ಪ್ರಾಣನಿಗಿಂತ ಕಾಮನು | ಕಿಂಚಿದಧಿಕನು ಇಂದ್ರನು ||೪||



ದೇವೇಂದ್ರನಿಗಿಂದಧಿಕ ಮಹರುದ್ರ ದೇವಸಮ ಶೇಷ ಗರುಡರು ||

ಕೇವಲಧಿಕರು ಶೇಷ ಗರುಡಗೆ ದೇವಿ ಭಾರತೀ ಸರಸ್ವತಿ ||೫||



ವಾಯುವಿಗೆ ಸಮರಿಲ್ಲ ಜಗದೊಳು | ವಾಯುದೇವರೇ ಬ್ರಹ್ಮರು ||

ವಾಯು ಬ್ರಹ್ಮಗೆ ಕೋಟಿಗುಣದಿಂದ | ಅಧಿಕ ಶಕ್ತಳು ಶ್ರೀರಮಾ  ||೬||



ಅನಂತ ಗುಣದಿಂ ಲಕುಮಿಗಿಂತ | ಅಧಿಕ ಪುರಂದರ ವಿಠಲನು |

ಘನಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ || ೭ ||  ಎಂದು ವಿವರಿಸಿದ್ದಾರೆ.

ಕೈವಾರ ತಾತಯ್ಯನವರು "ಪಂಚವಿಂಶತಿ ಮೀದ ಪ್ರಬಲು ಪರಂಜ್ಯೋತಿ" ಎಂದಿದ್ದಾರೆ.  ಪರಂಜ್ಯೋತಿ ಎಂದರೆ ದಿವ್ಯಜ್ಯೋತಿ.. ಪರಮಾತ್ಮ.  ಅದು ತಾನಾಗಿಯೇ ಬೆಳಗುತ್ತದೆ, ಬೇರೆ ಯಾರೂ ಹೊತ್ತಿಸಬೇಕಾಗಿಲ್ಲ.  ಅದು ಸ್ವಯಂಪ್ರಕಾಶಮಾನವಾಗಿ ಉರಿಯುತ್ತಿರುತ್ತದೆ.  ದೇಹದಲ್ಲಿ ಆಧ್ಯಾತ್ಮಿಕ ಹೃದಯವೇ ಹಣತೆ, ಅನುಭೂತಿಯೇ ಪ್ರಕಾಶ, ತತ್ತ್ವರೂಪಿಯಾದ ಪರಮಾತ್ಮನೇ ಪರಂಜ್ಯೋತಿ.  

ಡಿವಿಜಿಯವರು ತಮ್ಮ ಕಗ್ಗದಲ್ಲಿ ಇದೇ ಜೀವ – ಜಡ ಎಂಬುದೊಂದು ಅಗೋಚರ ಶಕ್ತಿ ಎನ್ನುತ್ತಾ..

ಜೀವ ಜಡರೂಪ ಪ್ರಪಂಚವನಾವುದೋ |

ಆವರಿಸಿಕೊಂಡುಮೊಳನೆರೆದುಮಿಹುದಂತೆ ||

ಭಾವಕೊಳಪಡದಂತೆ ಅಳತೆಗಳವಡದಂತೆ |

ಆ ವಿಶೇಷಕೆ ಮಣಿಯೋ – ಮಂಕುತಿಮ್ಮ ||

ಜೀವ  ಚೈತನ್ಯ ಹೊಂದಿರುವಂತದ್ದೂ, ಜಡ ರೂಪದಲ್ಲಿರುವಂತದ್ದೂ ಆದ ಈ ಪ್ರಪಂಚವನ್ನು ಅದ್ಯಾವುದೋ ಒಂದು ಪ್ರಚಂಡ ಶಕ್ತಿ ಆವರಿಸಿ ಕೊಂಡಿದೆ.  ಅದು ಎಲ್ಲಾ ಜೀವ-ಜಡ ವಸ್ತುಗಳ ಒಳಗಡೆಯೂ, ಹೊರಗಡೆಯೂ, ಎರಡು ಕಡೆಯೂ ಪಸರಿಸಿಕೊಂಡಿದೆ.  ಆ ಮಹಾನ್  ಶಕ್ತಿಗೆ, ಅಸಾಮಾನ್ಯ ಚೇತನಕ್ಕೆ ನಮಿಸು ಎನ್ನುತ್ತಾರೆ.

Wednesday, August 3, 2011

೧. ಮಂಗಳಾಚರಣ ಸಂಧಿ - ೮ ನೇ ಚರಣ



ಅನ್ಯ ಧರ್ಮೀಯರ ಪ್ರಚಾರದಲ್ಲಿ ಹಿಂದೂ ಧರ್ಮ ಒತ್ತಡಕ್ಕೆ ಸಿಕ್ಕಿ ನಲುಗಿದ್ದ ಕಾಲದಲ್ಲಿ, ಧರ್ಮ ಪುನಶ್ಚೇತನಕ್ಕಾಗಿಯೇ ಬಂದವರು ನಮ್ಮ ಆಚಾರ್ಯ ತ್ರಯರಾದ ಶ್ರೀ ಶಂಕರ, ಶ್ರೀ ರಾಮಾನುಜ ಮತ್ತು ಶ್ರೀ ಮಧ್ವಾಚಾರ್ಯರು.  ಶ್ರೀ ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಮೂಲ ಪುರುಷರು.  ಇವರನ್ನು ಶ್ರೀ ವಾಯುದೇವರ ಮೂರನೆಯ ಅವತಾರವೆಂದೇ ಭಾವಿಸಲಾಗುತ್ತದೆ.  ಸುಮಾರು ೭೭೨ ವರ್ಷಗಳ ಹಿಂದೆ ಕ್ರಿಸ್ತಶಕ ೧೨೩೮ ನ ದಶಮಿ ಬುಧವಾರ ಮಧ್ಯಾಹ್ನ “ಪಾಜಕ” ಕ್ಷೇತ್ರದಲ್ಲಿ ಶ್ರೀ ಮಧ್ವರ ಜನನವಾಗಿತ್ತು.  ಹಲವಾರು ವರ್ಷಗಳು ತಪಸ್ಸು ಮಾಡಿದ ಫಲವಾಗಿ, ಜನನವಾದ  ಮಗುವಿನ ಹೆಸರು ವಾಸುದೇವ ಭಟ್ಟ.

ಉಪನಯನದ ನಂತರ ವಾಸುದೇವ ಭಟ್ಟರು ತಮ್ಮ ಹದಿನಾರನೇ ವಯಸ್ಸಿಗೆ ಶ್ರೀ ಅಚ್ಯುತ ಪ್ರೇಕ್ಷಾಚಾರ್ಯರಿಂದ ಸನ್ಯಾಸ ಸ್ವೀಕರಿಸಿ ಅವರಲ್ಲೇ ತಮ್ಮ ವಿದ್ಯಾಭ್ಯಾಸ ಮುಂದುವರೆಸಿ “ಮಧ್ವ”, “ಪೂರ್ಣಪ್ರಜ್ಞ” ಮತ್ತು “ಆನಂದ ತೀರ್ಥ”ರೆಂಬ ಹೆಸರುಗಳನ್ನು ಪಡೆದು ಪ್ರಸಿದ್ಧರಾದರು.  ಇವರು “ಕುಲ”ವೆಂಬ ವೃಕ್ಷದ ಟೊಂಗೆಗಳು, ಟಿಸಿಲುಗಳು ತಮ್ಮ ಬೇರನ್ನೇ ಮರೆತು ಎಲ್ಲೆಡೆ ವ್ಯಾಪಿಸಿಬಿಟ್ಟಿವೆಯೆಂದೂ, ಈ ವೃಕ್ಷಕ್ಕೆ ತನ್ನ ಬೇರಿನ ಪರಿಚಯ ಮಾಡಿಕೊಡುವುದೇ ತಮ್ಮ ಇಚ್ಛೆಯೆಂದು ಹೇಳಿದವರು.  ಶ್ರೀ ಮಧ್ವಾಚಾರ್ಯರು ಅನೇಕ ವಿದ್ಯೆಗಳ ಜೊತೆಗೇ ಸಂಗೀತದಲ್ಲೂ, ಸಾಮಾಜಿಕ ಪ್ರಜ್ಞೆಯಲ್ಲೂ ಅದ್ವಿತೀಯರೆನಿಸಿಕೊಂಡವರು.

ಆಚಾರ್ಯರು ತಮ್ಮ ದ್ವೈತ ಸಿದ್ಧಾಂತದಲ್ಲಿ “ಜಗತ್ತಿನ ಒಡೆಯ ಆ ಗುಣಪೂರ್ಣನಾದ ಪರಮಾತ್ಮ, ಆತ ಒಬ್ಬನೇ, ಅವನೇ ಸರ್ವೋತ್ತಮ, ಪರಮಾತ್ಮನಿಗೂ, ಜೀವರಿಗೂ, ಜಡಗಳಿಗೂ ಪರಸ್ಪರ ಭೇದವಿದ್ದುದು ಸತ್ಯ.  ಪರಮಾತ್ಮನು ಜೀವರಿಂದ, ಜಡರಿಂದ, ವಿಭಿನ್ನನಾದವನು.  ಆದ್ದರಿಂದ ಅವರಲ್ಲಿ ತಾರತಮ್ಯವಿದೆ.  ಈ ತಾರತಮ್ಯ ವಾಸ್ತವಿಕವಾಗಿ, ವ್ಯವಹಾರಿಕವಾಗಿ, ಸತ್ಯವಿದೆ.  ನಿಷ್ಕಾಮ ಕರ್ಮದಿಂದ ಜ್ಞಾನ, ಜ್ಞಾನದಿಂದ ಮೋಕ್ಷ ಎಂದು ಕರ್ಮಕ್ಕೂ ಮಹತ್ವ ಕೊಟ್ಟು, ಹರಿ ಅನುಗ್ರಹ, ಹರಿ ಪ್ರಸಾದಗಳೇ ಮುಕ್ತಿಗೆ ಸಾಧನ ಮತ್ತು ಜ್ಞಾನ ಭಕ್ತಿಗಳಂತೆ ಕರ್ಮವೂ ಮೋಕ್ಷಕ್ಕೆ ಅವಶ್ಯಕವಾದ ಅಂಗವೆಂಬುದು ಶ್ರೀ ಮಧ್ವರ ಮತದ ಸಾರ “.

ಮಧ್ವಾಚಾರ್ಯರು “ಭಗವಂತನ ಸೃಷ್ಟಿಯಲ್ಲಿ ಯಾವ ಕುಂದೂ ಇಲ್ಲ, ಅದೆಂದಿಗೂಕೆಡುವುದಿಲ್ಲ.  ಕೆಟ್ಟಿರುವುದು ನಮ್ಮ ನಮ್ಮ ಒಳಗಿರುವ ಮನಸ್ಸುಗಳು.  ಮೊದಲು ನಮ್ಮ ಮನಸ್ಸುಗಳನ್ನು ಶುದ್ಧೀಕರಿಸುವ ಕೆಲಸದಲ್ಲಿ ನಾವು ತೊಡಗಬೇಕು.  ಭಗವಂತನ  ಬಗ್ಗೆ ಚಿಂತಿಸುತ್ತಾ, ಸದಾ ಅವನ ಧ್ಯಾನ ಮಾಡುತ್ತಾ  ಕೆಟ್ಟಿರುವ ನಮ್ಮ ಮನಸ್ಸುಗಳನ್ನು ಸ್ವಚ್ಛಮಾಡಿಕೊಳ್ಳಬೇಕು.  ನಮ್ಮ ಕೆಲಸಗಳನ್ನು ಶುದ್ಧ ಮನಸ್ಸಿನಿಂದ, ಪ್ರಾಮಾಣಿಕವಾಗಿ, ಅದು ಭಗವಂತನ ಸೇವೆಯೆಂದು ತಿಳಿದು ಮಾಡಬೇಕು.  ಪ್ರತಿಫಲ ಭಗವಂತನ ಕರುಣೆಯಿಂದ ಎಷ್ಟು ಸಿಕ್ಕುತ್ತದೋ ಅಷ್ಟಕ್ಕೇ ತೃಪ್ತರಾಗಬೇಕು.  ಸದ್ಧರ್ಮ, ಸದಾಚರಣೆಗಳನ್ನು ನಮ್ಮ ನಿತ್ಯ ಜೀವನದಲ್ಲಿ ಪಾಲಿಸುತ್ತಾ, ಸಾತ್ವಿಕ ಜೀವನದ ಲಕ್ಷಣಗಳಾದ ಭಗವಂತನ ಚಿಂತನೆ ನಿರಂತರ ಮಾಡಬೇಕು” ಎಂದು ಬೋಧಿಸಿದರು.  ಮತ್ತೊಂದು ಮಹತ್ವದ ಮಾತು ಆಚಾರ್ಯರು ಬೋಧಿಸಿರುವುದೆಂದರೆ.. “ಭಗವಂತ ಪರಿಪೂರ್ಣ, ಅವನು ಅಧರ್ಮಕ್ಕೆ ಎಂದೂ ಒಲಿಯನು, ಭೋಗ ಭೌತಿಕವಾದ್ದರಿಂದ ನಶ್ವರ, ತ್ಯಾಗ ಅಧ್ಯಾತ್ಮಿಕ ಆದ್ದರಿಂದಲೇ ಶಾಶ್ವತ” ಎಂಬ ಮಾತು.

ಶ್ರೀ ಮಧ್ವಾಚಾರ್ಯರು ಶ್ರೀ ಕೃಷ್ಣನ ಆರಾಧಕರು ಮತ್ತು ಸುಮಾರು ೩೭ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.  ಮುಖ್ಯವಾದವು ಗೀತಾಭಾಷ್ಯ, ಗೀತಾತಾತ್ಪರ್ಯ ನಿರ್ಣಯ, ಬ್ರಹ್ಮಸೂತ್ರ, ಅನುಭಾಷ್ಯ ಮತ್ತು ಭಾಗವತ ತಾತ್ಪರ್ಯ ನಿರ್ಣಯ.  ಮಧುವನ್ನು ಕೊಡುವ ಶಾಸ್ತ್ರ ಮಧ್ವ ಶಾಸ್ತ್ರ.  ಅದನ್ನು ರಚಿಸಿದವರು ಮಧ್ವಾಚಾರ್ಯರು. ಮಧ್ವಾಚಾರ್ಯರು ವೇದವ್ಯಾಸರ ಪರಮ ಶಿಷ್ಯರಾಗಿದ್ದು ಬದರಿಯಲ್ಲಿ ತಮ್ಮ ಗುರುಗಳಾದ ವ್ಯಾಸರಿಗೆ ಗೀತಾ ತಾತ್ಪರ್ಯ ನಿರ್ಣಯ, ಮಹಾಭಾರತ ತಾತ್ಪರ್ಯ ನಿರ್ಣಯ ಹಾಗೂ ಭಾಗವತ ತಾತ್ಪರ್ಯ ನಿರ್ಣಯಗಳನ್ನು ಒಪ್ಪಿಸಿದರು.  ತಾವೇ ದ್ವಾದಶ ಸ್ತೋತ್ರಗಳನ್ನು ರಚಿಸಿ, ಅಂಕಿತ ಹಾಕುವ ಪದ್ಧತಿಯನ್ನು ಪರಂಪರಾಬದ್ಧವಾಗಿಸಿದರು ಶ್ರೀ ಮಧ್ವಾಚಾರ್ಯರು.

ಕ್ಷಿತಿಯೊಳಗೆ ಮಣಿಮಂತ ಮೊದಲಾ
ದತಿ ದುರಾತ್ಮರು ಒಂದಧಿಕ ವಿಂ
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ |
ಸತಿಯ ಜಠರದೊಳವತರಿಸಿ ಭಾ
ರತಿರಮಣ ಮಧ್ಯಾಭಿಧಾನದಿ
ಚತುರದಶಲೋಕದಲಿ ಮೆರೆದಪ್ರತಿಮಗೊಂದಿಸುವೆ ||೮||


ಪ್ರತಿಪದಾರ್ಥ :  ಕ್ಷಿತಿಯೊಳಗೆ - ಭೂಮಿಯಲ್ಲಿ, ಮಣಿಮಂತ - ಕ್ರೋಧವಶಗಣಕ್ಕೆ ಸೇರಿದ ಮಹಾರಾಕ್ಷಸ {ಕುಬೇರನ ಭೃತ್ಯ (ಸೇವಕ)}, ಮೊದಲಾದ ಅತಿ ದುರಾತ್ಮರು - ಮಣಿಮಂತ ಮೊದಲಾದ ಇನ್ನೂ ಅನೇಕ ವಿಷ್ಣು ವಿರೋಧಿ ದುಷ್ಟರು, ಒಂದಧಿಕ ವಿಂಶತಿ - ೧+೨೧ = ಇಪ್ಪತ್ತೊಂದು, ಕುಭಾಷ್ಯವ - ವಿಷ್ಣು ಸರ್ವೋತ್ತಮತ್ವ ಮತ್ತು ಜಗತ್ಸತ್ಯತ್ವವನ್ನು ವಿರೋಧಿಸುವ ಭಾಷ್ಯಗಳಾಗಿರುವುದರಿಂದ ಇವುಗಳು ಕುಭಾಷ್ಯಗಳೆಂದು ಕರೆಯಲ್ಪಟ್ಟಿವೆ, ರಚಿಸೆ - ರಚನೆ ಮಾಡಿರಲು, ನಡುಮನೆಯೆಂಬ ಬ್ರಾಹ್ಮಣನ - ಮಧ್ಯಗೇಹನೆಂಬ ಕುಲನಾಮವುಳ್ಳ ಬ್ರಾಹ್ಮಣನ, ಸತಿಯ ಜಠರದೊಳವತರಿಸಿ - ಪತ್ನಿಯಾದ ವೇದವತಿಯ ಉದರದಲ್ಲಿ ಅವತಾರ ಮಾಡಿದ, ಭಾರತೀರಮಣ - ಭಾರತೀ ಪತಿಯಾದ ವಾಯುದೇವರು / ಮುಖ್ಯಪ್ರಾಣದೇವರು, ಮಧ್ವಾಭಿದಾನದಿ - ಮಧ್ವಾಚಾರ್ಯರೆಂಬ ಹೆಸರಿನಲ್ಲಿ, ಚತುರದಶ ಲೋಕದಿ - ಚತುರ ಎಂದರೆ ನಾಲ್ಕು ಮತ್ತು ದಶ ಎಂದರೆ ಹತ್ತು ಚತುರದಶವೆಂದರೆ ೧೪ ಲೋಕಗಳಲ್ಲಿ, ಮೆರೆದ - ಪ್ರಸಿದ್ಧಿಹೊಂದಿದ, ಅಪ್ರತಿಮಗೆ - ಸರಿ ಸಾಟಿಯಿಲ್ಲದವನಿಗೆ, ವಂದಿಸುವೆ - ನಮಸ್ಕರಿಸುವೆ.
 

ಈ ಚರಣದಲ್ಲಿ ಜಗನ್ನಾಥ ದಾಸರು ಶ್ರೀ ಮನ್ಮಧಾಚಾರ್ಯರನ್ನು ಸ್ತುತಿಸುತ್ತಾ  ಮಣಿಮಂತ ಮೊದಲಾದ ದೈತ್ಯರು ವೇದಗಳಿಗೆ ಹೇಳಿದ ವಿಪರೀತಾರ್ಥಗಳನ್ನು ಖಂಡಿಸಿ ಸರಿಯಾದ ಅರ್ಥವನ್ನು ಲೋಕಕ್ಕೆ ತೋರಿಸಿ ಉತ್ತಮರ ಸಾಧನೆಗೆ ಸಹಕರಿಸಲು ಅವತರಿಸಿ ಆನಂದತೀರ್ಥ ನಾಮದಲ್ಲಿ ಲೋಕವಿಖ್ಯಾತರಾದ ಅಸದೃಶ ಗುರುಗಳಿಗೆ ವಂದಿಸುವೆ ಎಂದು ಹೇಳಿದ್ದಾರೆ.   

ಹರಿದಾಸ ಪಂಥಕ್ಕೆ ಯಜಮಾನರಂತಿರುವ ಶ್ರೀಪಾದರಾಜರ ಮಧ್ವನಾಮ ಎಂಬ ಕೃತಿಗೆ ಜಗನ್ನಾಥ ದಾಸರು ಫಲಶ್ರುತಿಯನ್ನು ಬರೆದಿದ್ದಾರೆ.  ಈ ಮಧ್ವನಾಮದಲ್ಲಿ ಶ್ರೀ ಪಾದರಾಜರು ಹನುಮ-ಭೀಮ-ಮಧ್ವ ಅವತಾರ ತ್ರಯಗಳನ್ನು ಕುರಿತು ಹೇಳಿದ್ದಾರೆ.  ಅದಕ್ಕೆ ಫಲಸ್ತುತಿ ಬರೆಯುತ್ತಾ ಜಗನ್ನಾಥ ದಾಸರು ಈ ಮಧ್ವನಾಮ ಪಠಿಸಿದವರಿಗೆ ಗಂಗಾತೀರದಲ್ಲಿ ಮಾಡುವ ಸಹಸ್ರಾರು ಗೋದಾನದ ಫಲ ಮತ್ತು ಅಪುತ್ರರು ಸಪುತ್ರರಾಗುವ ಭಾಗ್ಯ ಸಿಗುವುದೆಂದು ತಿಳಿಸಿದ್ದಾರೆ.  ಭಕ್ತರೆಲ್ಲರ ಸಂತಾಪವನ್ನೂ ಕಳೆದು ಸೌಖ್ಯವನ್ನೇ ಕೊಟ್ಟು,  ಜಗನ್ನಾಥ ವಿಠಲನನ್ನೇ ತೋರಿಸಿ,  ಭವ ಕೂಪದಿಂದ ನಮ್ಮನ್ನು ಈ  ಮಧ್ವನಾಮ ಕಾಪಾಡುತ್ತದೆ  ಎಂದು ಬರೀ ತಾವು ಮಾಡಿರುವ ಮಧ್ವ ಸ್ತೋತ್ರವಲ್ಲದೆ, ತಮ್ಮ ಜನನದ ಮೊದಲೇ  ಹಿರಿಯರಾದ ಶ್ರೀ ಪಾದರಾಜರು ರಚಿಸಿದ್ದ ಮಧ್ವನಾಮಕ್ಕೂ ಮನ್ನಣೆ ಕೊಟ್ಟಿದ್ದಾರೆ.


 

Thursday, July 14, 2011

೧. ಮಂಗಳಾಚರಣ ಸಂಧಿ - ೭ ನೇ ಚರಣ

ವೇದಪೀಠ ವಿರಿಂಚಿಭವ ಶ
ಕ್ರಾದಿ ಸುರವಿಜ್ಞಾನದಾಯಕ
ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ |
ಛೇದ ಭೇದ ವಿಷಾದ ಕುಟಿಲಾಂ
ತಾದಿಮಧ್ಯವಿದೂರ ಆದಾ
ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ  || ೭  ||

ಪ್ರತಿಪದಾರ್ಥ : ವೇದಪೀಠ - ಪೀಠವೆಂದರೆ ಆಶ್ರಯ; ವೇದಗಳಿಗೆ ಆಶ್ರಯವಾಗಿರುವ, ವಿರಿಂಚಿ - ಬ್ರಹ್ಮದೇವರು, ಭವ - ರುದ್ರದೇವರು, ಶಕ್ರ - ಇಂದ್ರದೇವರು, ಆದಿ ಸುರ - ಇತ್ಯಾದಿ ದೇವತೆಗಳಿಗೆ, ವಿಜ್ಞಾನದಾಯಕ - ವಿಶೇಷ ಜ್ಞಾನ ಅರಿವು, ಮೋದ ಚಿನ್ಮಯಗಾತ್ರ - ಆನಂದ ಹಾಗೂ ಜ್ಞಾನವನ್ನೇ ಶರೀರವಾಗಿ ಉಳ್ಳ, ಲೋಕಪವಿತ್ರ - ತಮ್ಮ ಜ್ಞಾನದಿಂದ ಲೋಕವನ್ನೇ ಪವಿತ್ರಗೊಳಿಸುವ, ಸುಚರಿತ್ರ - ಒಳ್ಳೆಯ ಚಾರಿತ್ರ್ಯ ಹೊಂದಿರುವ, ಛೇದ - ತುಂಡರಿಸಲಾಗದ, ಭೇದ - ಅಂಗ ಭೇದವಿಲ್ಲದ, ವಿಷಾದ - ವ್ಯಸನ, ಕುಟಿಲ - ಕಪಟ, ಅಂತ ಆದಿ ಮಧ್ಯ - ಕೊನೆ ಮೊದಲು ಮತ್ತು ಮಧ್ಯೆ, ವಿದೂರ - ದೋಷಗಳು ಸರ್ವತಾ ಇಲ್ಲದ, ಆದಾನಾದಿ ಕಾರಣ - ಆದಾನವೆಂದರೆ ತೆಗೆದುಕೊಳ್ಳುವುದು / ಅನಂತ ವೇದರಾಶಿಯಿಂದ ವೇದ ಭಾಗಗಳನ್ನು ತೆಗೆದು ಶಾಖೋಪಶಾಖೆಗಳಾಗಿ ವಿಂಗಡಿಸಿದ,  ಬಾದರಾಯಣ - ಬದರಿಯಲ್ಲಿ ನೆಲೆಸಿರುವ,  ಸತ್ರಾಣ - ಸಜ್ಜನರಿಗೆ ರಕ್ಷಣೆ ನೀಡುವ, ಪಾಹಿ - ನಮ್ಮನ್ನು ಕಾಪಾಡಿ.
ವ್ಯಾಸರು ಪರಾಶರ – ಸತ್ಯವತಿಯವರ ಪುತ್ರ. ಇವರ ಪುತ್ರರು ಬ್ರಹ್ಮ ಜ್ಞಾನಿಗಳಾದ ಶುಕಾಚಾರ್ಯರು.  ವೇದವ್ಯಾಸರಿಗೆ “ವೇದಪೀಠ”ವೆಂಬ ಹೆಸರೂ ಸಲ್ಲುತ್ತದೆ.  ವೇದ ಎಂದರೆ ಉಪಾಯ.  ಉಪಾಯ ಎಂದರೆ ಯೋಗ, ಯೋಗವನ್ನೇ ಪೀಠವನ್ನಾಗಿ ಉಳ್ಳವರು ಎಂದರ್ಥವಾಗುತ್ತದೆ.  ಶ್ರೀ ವೇದವ್ಯಾಸರು ಭಾರತ, ಭಾಗವತ, ಶ್ರುತಿ,  ಸ್ಮೃತಿಗಳಿಗೆ ಆಧಾರ ರೂಪವಾಗಿದ್ದಾರೆಂದು ಅವರಿಗೆ  ವೇದಪೀಠರೆಂದು ಹೆಸರು.  ಇವತ್ತಿಗೂ ನಾವು ಓದಲು / ಬರೆಯಲು ಉಪಯೋಗಿಸುವ ಪೀಠವನ್ನು “ವ್ಯಾಸಪೀಠ”ವೆಂದು ಸ್ಮರಿಸುತ್ತೇವೆ.  ಯಮುನಾ ನದಿಯ ದ್ವೀಪದಲ್ಲಿ ಜನಿಸಿದವರಾದ್ದರಿಂದ ಇವರನ್ನು ದ್ವೈಪಾಯನನೆಂದೂ ಕರೆಯುತ್ತಾರೆ.  ಬದರಿಕಾಶ್ರಮದಲ್ಲಿ ತಪಸ್ಸು ನಡೆಸುತ್ತಿರುವುದರಿಂದ ಬದರೀನಾರಾಯಣನೆಂದೂ, ಬೋರೇ ವೃಕ್ಷಗಳ ವನ (ಬಾದರ ಎಂದು ಹೆಸರು) ದಲ್ಲಿ ಯೋಗಾಸನಾರೂಢರಾಗಿರುವುದರಿಂದ ಅವರಿಗೆ “ಬಾದರಾಯಣ” ಎಂದೂ ಹೆಸರು.  ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದರಿಂದ “ವೇದವ್ಯಾಸ”ರು ಎಂಬ ಹೆಸರು ಬಂದಿತು.






ಜಗನ್ನಾಥ ದಾಸರು ತಮ್ಮ ಒಂದು ಕೃತಿಯಲ್ಲಿ ಶ್ರೀ ವೇದವ್ಯಾಸರ ಪೂರ್ಣ ಪರಿಚಯವನ್ನು ಹೀಗೆ ಮಾಡಿಕೊಡುತ್ತಾರೆ :



ಮಧ್ವಾಂತರ್ಗತ ವೇದವ್ಯಾಸ ಮಮ - ಹೃದ್ವನರುಹಸನ್ನಿವಾಸ |
ಸದ್ವಿದ್ಯಾ ಕೊಡು ಶ್ರೀ ಕೃಷ್ಣದ್ವೈಪಾಯನ ಚಿದಚಿದ್ವಿ ಲಕ್ಷಣ ತ್ವತ್ಪಾದದ್ವಯಾಬ್ಜವ ತೋರೋ ||

ಬಾದರಾಯಣ ಬಹುರೂಪ ಸನಕಾದಿಸನ್ನುತ ಧರ್ಮಯೂಪ
ವೇದೋದ್ಧಾರಾದಾನಾದಿಕರ್ತ ಪೂರ್ಣಬೋಧ ಸದ್ಗುರು ವರರಾಧಿತ ಪದಯುಗ
ಮೇದಿನಿಯೊಳಾನೋರ್ವ ಪಾಮರಾಧಮನು ಕೈಪಿಡಿ ಕರುಣಮ
ಹೋದಧೇ ಕಮನೀಯಕಾಯ ಪ್ರಭೋಧಮುದ್ರಾಭಯಕರಾಂಬುಜ ||

ಹರಿತೋಪಲಾಭಶರೀರ ಪರಾಶರಮುನಿ ವರಸುಕುವರ
ಪರಮಪುರುಷಕಾರ್ತಸ್ವರಭರ್ಗ ಪ್ರಮುಖ ನಿರ್ಜರಗಣಮುನಿನುತ
ವರಪಾದಪಂಕಜ ಕುರುಕುಲದಿ ಧೃತರಾಷ್ಟ್ರಪಾಂಡುವಿದುರರ
ಪಡೆದೈವರಿಗೊಲಿದು ಸಂಹರಿಸಿ ದುರ್ಯೋಧನನ ಭಾರತ
ವಿರಚಿಸಿದ ಸುಂದರ ಕವೀಂದ್ರ ||

ಜಾತರೂಪ ಜಟಾಜೂಟ ಶ್ರೀನಿಕೇತನ ತಿಲಕಲಲಾಟ
ಪೀತಕೃಷ್ಣಾಜಿನ ಶ್ವೇತ ಶ್ರೀಯಜ್ಞೋಪವೀತ
ಮೇಖಲ ದಂಡಾನ್ವಿತ ಕಮಂಡಲ ಭೂತಭಾವನಭೂತಿಕೃತ್ಸ
ದ್ಬೂತಿದಾಯಕ ಶ್ರೀ ಜಗನ್ನಾಥ ವಿಠಲ ನಾ ತುತಿಸಬಲ್ಲೆನೆ ನಿನ್ನ ಮಹಿಮೆಯ
ಸುಖಾತ್ಮ ಪಾತಕನು ಅಲ್ಪಾತುಮನು ನಾ  ||

“ವ್ಯಾಸೋಚ್ಛಿಷ್ಟಂ ಜಗತ್ಸರ್ವಂ “  ಆದ್ದರಿಂದ ಯಾವುದೇ ಜ್ಞಾನಕ್ಕೂ ವ್ಯಾಸರೇ ಮೂಲ. ವೇದವ್ಯಾಸರ ಅಭಿಪ್ರಾಯವೇ ವೇದಗಳ ಅಭಿಪ್ರಾಯ.  ಅದರಂತೆಯೇ ಅವರಿಗೆ ವಿರೋಧವಲ್ಲದ ತತ್ವ ಜ್ಞಾನವನ್ನೇ ಇಲ್ಲಿ ಹೇಳಲಾಗಿದೆ.  ವೇದಾಧಿಕಾರಿಗಳಾದ ಬ್ರಹ್ಮ, ರುದ್ರ, ಇಂದ್ರರಿಗೂ ತತ್ವಜ್ಞಾನವನ್ನು ಕೊಡುವವರು, ಜ್ಞಾನವೇ ಶರೀರವಾಗುಳ್ಳವರು ವೇದವ್ಯಾಸರು.  ಬ್ರಹ್ಮಾದಿಗಳಿಂದಲೂ ಪೂಜೆಯನ್ನು ಸ್ವೀಕರಿಸುವವರು, ಸಜ್ಜನರ ರಕ್ಷಕರು ಆದ ಬಾದರಾಯಣರು ನಮಗೆ ಜ್ಞಾನವಿಟ್ಟು ರಕ್ಷಿಸಲಿ ಎಂದು ನಾರಾಯಣನ ಅವತಾರವಾದ ವೇದವ್ಯಾಸರಿಗೆ ಗುರುಮುಖತ್ವೇನ ನಮಸ್ಕರಿಸಿದ್ದಾರೆ.



 ಚಿತ್ರಕೃಪೆ : ಅಂತರ್ಜಾಲ