Tuesday, July 31, 2012

ಕರುಣಾ ಸಂಧಿ - ೫ನೇ ಪದ್ಯ

ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ ಕುಳಿತು ಪಾಡಲು |
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ||
ಸುಲಭನೋ ಹರಿ ತನ್ನವರನರ |
ಘಳಿಗೆ ಬಿಟ್ಟಗಲನು ರಮಾಧವ |
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ || ೫ ||

ಪ್ರತಿಪದಾರ್ಥ :  ಮಲಗಿ - ಅನಾರೋಗ್ಯದಿಂದಾಗಲೀ, ವೃದ್ಧಾಪ್ಯದಿಂದಾಗಲೀ, ದೈಹಿಕ ದೌರ್ಬಲ್ಯದಿಂದಾಗಲೀ ಅಂತಃಪ್ರಜ್ಞೆಯಿಂದ ಮಲಗಿರುವಾಗ, ಪರಮಾದರದಿ ಪಾಡಲು - ಭಕ್ತಿ - ಶ್ರದ್ಧೆ ಹಾಗೂ ಪ್ರೇಮದಿಂದ ಹಾಡಲು, ಕುಳಿತು ಕೇಳುವ - ಆದರದಿಂದ ಕರೆಯುತ್ತಾ ಮಲಗಿರುವ ಭಕ್ತರ ಸಮೀಪ ತಾನೇ ಬಂದು ಕುಳಿತು ಕಿವಿಗೊಟ್ಟು ಆಲಿಸುವವನು, ಕುಳಿತು ಪಾಡಲು ನಿಲುವ - ಕುಳಿತು ಎಂದರೆ ಯೋಗ್ಯವಾದ ಆಸನಗಳಲ್ಲಿ ಕುಳಿತು ಮಾಡುವ ಜಪ - ತಪ - ಪೂಜೆಗಳನ್ನು ಭಗವಂತ ನಿಂತು ಸ್ವೀಕರಿಸುವನು, ನಿಂತರೆ ನಲಿವ - ನಿಂತರೆ ಎಂದಾಗ ಯೋಗ್ಯವಾದ ಸ್ಥಳದಲ್ಲಿ ನಿಂತು ಅರ್ಘ್ಯವನ್ನು ಕೊಡುವಾಗ ಸಂತಸದಿಂದ ನಲಿಯುವವನು, ನಲಿದರೆ ಒಲಿವೆನು ನಿಮಗೆಂಬ - ಭಕ್ತರು ಭಗವಂತನನ್ನು ಸ್ತುತಿಸುತ್ತಾ ಮೈಮರೆತು ನಲಿಯುತ್ತಾ ನಾಟ್ಯವಾಡುವ ಭಕ್ತರ ಭಕ್ತಿಯ ಪರಾಕಾಷ್ಠೆಗೆ ಮೆಚ್ಚಿ ಒಲಿಯುವವನು, ಸುಲಭನೋ ಹರಿ - ಸರಳವಾಗಿ ಭಕ್ತಿಗೆ ಶ್ರದ್ಧೆಗೆ ಸಮರ್ಪಣೆಗೆ ಮೆಚ್ಚಿ ಧಾವಿಸುವವನು, ತನ್ನವರ ಅರೆಗಳಿಗೆ ಬಿಟ್ಟಗಲನು - ತನ್ನನ್ನೇ ನಂಬಿ ಸ್ತುತಿಸುವ ಸರ್ವವನ್ನೂ ಸಮರ್ಪಿಸುವ ಭಕ್ತರನ್ನು ಒಂದೇ ಒಂದು ಕ್ಷಣಕ್ಕೂ ಬಿಟ್ಟು ದೂರ ಹೋಗದವನು, ರಮಾಧವನ ಒಲಿಸಲರಿಯದೆ - ಇಂತಹ ಸುಲಭವಾಗಿ ಒಲಿಯುವ ರಮೆಯ ಪತಿಯಾದ ಮಾಧವನನ್ನು ಹೇಗೆ ಮೆಚ್ಚಿಸುವುದೆಂದು ತಿಳಿಯದ, ಪಾಮರರು - ವಿವೇಕವಿಲ್ಲದ ಮೂಢ ಜನರು, ಬಳಲುವರು ಭವದೊಳಗೆ - ಸಂಸಾರದ ಬಂಧನದಲ್ಲಿ ಮತ್ತೆ ಮತ್ತೆ ಸಿಲುಕುತ್ತಾ ದುಃಖ ಅನುಭವಿಸುವರು.


ಕರುಣಾಮೂರ್ತಿಯಾದ ಪರಮಾತ್ಮನು ತನ್ನನ್ನು ಸ್ಮರಿಸುವವರನ್ನು ಎಂದೂ ಕೈ ಬಿಡನು. ತನ್ನನ್ನು ಕುರಿತು ಸ್ತುತಿಸುವಾಗ ಹೀಗೇ ಇರಬೇಕೆಂಬ ನಿರ್ದೇಶನವನ್ನು ಅವನು ಕೊಡುವುದೇ ಇಲ್ಲ. ದೇಶ, ಕಾಲ, ನೇಮ, ನಿಷ್ಠೆ ಯಾವುದೂ ಅವನಿಗೆ ಬೇಡ.  ಯಾರು ತನ್ನನ್ನು ಪ್ರೀತಿಯಿಂದ, ಆರ್ತತೆಯಿಂದ, ಮನವನ್ನು ಕೊಟ್ಟು ಭಜಿಸುತ್ತಾರೋ ಅವರಿಗೆ ರಮಾಧವ ಒಲಿದೇ ಒಲಿಯುತ್ತಾನೆ ಎಂದು ಹರಿದಾಸರು ಈ ಪದ್ಯದಲ್ಲಿ ಹೇಳಿದ್ದಾರೆ.  

ಇನ್ನು ಅಧ್ಯಾತ್ಮಿಕವಾಗಿ ತೆಗೆದುಕೊಂಡರೆ ಮಲಗಿ ಪರಮಾದರದಿ ಪಾಡಲು ಎಂದರೆ ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿಯೇ ವಿಷ್ಣು ಸ್ತೋತ್ರವನ್ನು ಮಾಡಿದವರು.  ಕುಳಿತು ಪಾಡಲು ಎಂದರೆ ಪುಟ್ಟ ಧ್ರುವಕುಮಾರನು ಕುಳಿತೇ ಸ್ತೋತ್ರ ಮಾಡಿದವನು.  ಭಕ್ತ ಪ್ರಹ್ಲಾದನು ನಿಂತು ಪಾಡಿದ್ದರಿಂದ ಪರಮಾತ್ಮ ನರಸಿಂಹ ರೂಪದಿಂದ ನಲಿ ನಲಿಯುತ್ತಾ ಕಂಬದಿಂದ ಬಂದು ಒಲಿದನು.  ನಾರದರಂತಹ ಜ್ಞಾನಿಗಳು ಗೆಜ್ಜೆ ಕಟ್ಟಿ ತಾಳ ಕುಟ್ಟಿ ನಲಿದು ಪಾಡುವುದರಿಂದ, ಭಗವ೦ತನೂ ಅವರೊಡನೆಯೇ ಇದ್ದು ನಲಿಯುತ್ತಲೇ ಇರುತ್ತಾನೆ.  ಹರಿಯನ್ನು ಒಲಿಸಿಕೊಳ್ಳುವುದು ಬಲು ಸುಲಭವು.  ಇಂತಹ ಹರಿಯು ತನ್ನ ಭಕ್ತರನ್ನು ಬಿಟ್ಟು ಎಂದೂ ಅಗಲುವುದೇ ಇಲ್ಲ.  ಭಕ್ತರು ಎಂದಿಗೂ ಅವನ ಮಕ್ಕಳೇ.  ಜಗನ್ನಾಥ ದಾಸರು ತಮ್ಮ ಒಂದು ಕೃತಿ "ಅರಿತವರಿಗೆ ಅತಿ ಸುಲಭ ಹರಿಯ ಪೂಜೆ" ಯಲ್ಲಿ ಪ್ರೀತಿಯಿಂದಲಿ ಭಜಿಸಿ ಮೋದಿಪರ ವೀತಶೋಕರ ಮಾಡಿ ಸಂತೈಸುತಿಹ ಜಗನ್ನಾಥ ವಿಠಲ, ಒಲಿದು ಸರ್ವಕಾಲದಲ್ಲಿ ಎಂದು ಹಾಡಿ ಹೊಗಳಿದ್ದಾರೆ.  ಹಾಗೇ ಪರಮಾತ್ಮನನ್ನು ಒಲಿಸಲು ಅರಿಯದೇ ಪಾಮರರು ಬಳಲುವರು ಭವದೊಳಗೆ ಎಂದು ಹೇಳುತ್ತಾರೆ.
 "ಮಲಗಿ ಪರಮಾದರದಿ ಪಾಡಲು.."   -   ದಶ ಇಂದ್ರಿಯಗಳನ್ನೂ ಲಯಗೊಳಿಸಿ ಧ್ಯಾನಿಸಿದರೆ, ಹೃದಾಕಾಶದಲ್ಲಿ ಕುಳಿತು ಕೇಳುವ ಎನ್ನುವ ವಿಚಾರವನ್ನು ವಿಶ್ಲೇಷಿಸುವ ದಾಸರು, ಮಲಗುವ ಮುನ್ನ ಹರಿಯನ್ನು ಧ್ಯಾನಿಸಿ, ಮನವು ನಿನ್ನಲ್ಲಿ ಲಯಗೊಳ್ಳಲಿ ಅಂತ ಪ್ರಾರ್ಥಿಸಿದ್ದರೆ, ಕನಸುಗಳ ವ್ಯಾಪಾರವೂ ಅಲ್ಲಿ ಇರುವುದಿಲ್ಲ, ಹೃದಯದಾಕಾಶದಲಿ  ಹರಿಯು ವ್ಯಾಪಿಸಿ ಕುಳಿತು ಕೇಳುವ ಎ೦ದು ಅರ್ಥವನ್ನು ವ್ಯಾಖ್ಯಾನಿಸಿದ್ದಾರೆ. ಕುಳಿತು ಧ್ಯಾನಿಸಿದರೆ, ಕಣ್ಣೆದುರಲ್ಲಿ ನಿಲುವ ಎ೦ದಾಗ  ಧ್ಯಾನ ಸ್ಥಿತಿಯಲ್ಲಿ ನಮಗೆ ಗೋಚರವಾಗುತ್ತಾ ಹೋಗುವ ಒಂದು ದೃಷ್ಟಿ (vision) ಕೆಲವೊಮ್ಮೆ ಬೆಳಕು, ಬಣ್ಣಗಳು ಗೋಚರವಾಗುವ ಹಾಗೆ ಎ೦ದು ಅರ್ಥೈಸಬಹುದು.  "ಸುಲಭನೂ ಹರಿ ತನ್ನವರನರೆಘಳಿಗೆ ಬಿಟ್ಟಗಲನೋ".... ಎನ್ನುವಲ್ಲಿ   ತನ್ನವರು ಎ೦ದರೆ ಹರಿಯ ಪರಿವಾರ ಅಲ್ಲ, ಅವನ ಭಕ್ತರು ಎಂದು ಅರ್ಥೈಸಿಕೊಳ್ಳಬೇಕು.  "ರ ಮಾಧವನ ಒಲಿಸಲರಿಯದೆ.." ಅಂದರೆ ರಮೆಯ ಅರಸ,  ಧವನ ಎ೦ದರೆ ಗಂಡ, ಪತಿ ಎ೦ದು ಅರ್ಥ ಆಗುತ್ತದೆ.  ಅವನನ್ನು ಹೀಗೆ ಸುಲಭವಾಗಿ ಒಲಿಸಿಕೊಳ್ಳಲರಿಯದ ಭಕ್ತರು ಎಂದು ಅರ್ಥ ಮಾಡಿಕೊಳ್ಳಬೇಕು.  ಭಗವಂತನ ಕರುಣೆ ಎಂಬುದು ಅದೆಷ್ಟು ವಿಶಾಲವಾದುದೆಂದರೆ, ನಾವು ಒಂದು ಹೆಜ್ಜೆ ಅವನೆಡೆಗೆ ಇಟ್ಟರೆ ಸಾಕು, ಅವನು ೧೦, ೧೦೦, ೧೦೦೦ ಹೆಜ್ಜೆಗಳನ್ನು ನಮ್ಮೆಡೆಗಿಟ್ಟು ಕಂದನೆಡೆಗೆ ಧಾವಿಸುವ ತಾಯಿಯಂತೆ ಬಂದು ರಕ್ಷಿಸುವನು. ಜೀವನದ ಉಳಿದೆಲ್ಲಾ ಸಂಬಂಧಗಳು ಬರೀ ಸೀಮಿತ. ಬಿಂಬರೂಪಿ ಭಗವಂತನ ಸಂಬಂಧ ಮಾತ್ರವೇ ಅವನದೇ ಪ್ರತಿಬಿಂಬವಾದ ನಮ್ಮ ಜೊತೆ ಅನಂತ.  ನಾವು ಭಗವಂತನನ್ನು ಅರಿಯುವ ಪ್ರಯತ್ನ ಮಾಡುತ್ತಾ ನಮ್ಮ ಕೃತಜ್ಞತೆಯನ್ನು ಮಾತ್ರ ಸದಾ ತಿಳಿಸುತ್ತಿರಬೇಕು.

ಮಲಗಿ, ಕುಳಿತು, ನಿಂತು, ಕುಣಿದು, ನಲಿದು, ಒಲಿದು ಎಂದೆಲ್ಲಾ ಬೇರೆ ಬೇರೆಯಾಗಿ ಹೇಳಿರುವುದನ್ನು ಅನೇಕ ರೀತಿಯಾಗಿ ವಿಶ್ಲೇಷಣೆ ಮಾಡಬಹುದು.  ಮಲಗಿ ಎಂದಾಗ ಕುಳಿತುಕೊಳ್ಳಲಾಗದವರು, ಅಶಕ್ತರು ಮಲಗಿಯೇ ಪರಮಾದರದಿಂದ ಹರಿಯ ಸ್ಮರಣೆ ಮಾಡಿದರೂ ಸಾಕು, ಅವನು ಪ್ರೀತಿಯಿಂದ ಪಕ್ಕದಲ್ಲಿ ಕುಳಿತೇ ಕೇಳಿಸಿಕೊಳ್ಳುವನೆಂದೆನ್ನಬಹುದು.  ಜಗನ್ನಾಥ ದಾಸರು ಹರಿ ಪ್ರತ್ಯಕ್ಷನಾಗುವನೆಂದು ಹೇಳಿಲ್ಲ ’ಒಲಿವೆ ನಿಮಗೆಂಬ’ ಎಂದಿದ್ದಾರೆ.  ಹರಿಯ ಕರುಣೆಯನ್ನು ನಾವು ನಾನಾ ರೀತಿಯಲ್ಲಿ ಪ್ರತೀ ನಿಮಿಷವೂ ಪಡೆಯುತ್ತಲೇ ಇದ್ದೇವೆ.  ಇದಕ್ಕಾಗಿ ಮಲಗಿದಾಗಲೂ, ಕುಳಿತಾಗಲೂ, ನಿಂತಾಗಲೂ, ಸದಾ ಅನವರತ ಭಗವಂತನ ನಾಮ ಸ್ಮರಣೆ ಮಾಡುತ್ತಾ ಧನ್ಯವಾದಗಳನ್ನು ಅರ್ಪಿಸುತ್ತಲೇ ಇರಬೇಕೆಂಬ ಅರ್ಥ ಕೂಡ ಆಗುತ್ತದೆ.  ನಾವು ಯಾವಾಗ ಪರಮ ಆದರದಿಂದ, ಭಕ್ತಿಯಿಂದ ಭಗವಂತನ ಸ್ಮರಣೆ ಮಾಡುತ್ತೇವೆಯೋ ಆಗ ಅವನು ನಾವು ಮಲಗಿ, ಕುಳಿತು, ಅಥವಾ ನಿಂತು ಸ್ಮರಣೆ ಮಾಡುತ್ತಿದ್ದೇವೆಯೇ ಎಂಬುದನ್ನು ಪರಿಗಣಿಸುವುದಿಲ್ಲ, ಧಾವಿಸಿ ಬಂದು ನಮಗೆ ಒಲಿಯುವನೆಂದು ಅರ್ಥ.  ಇನ್ನೊಂದು ವಿಧದಲ್ಲಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ನಮಗೆ ತೋರುವುದು, ಜನನ ಮರಣವೆಂಬ ಚಕ್ರದಲ್ಲಿ ನಿರಂತರ ಸುತ್ತುವ ಜೀವ, ಭ್ರೂಣಾವಸ್ಥೆಯಲ್ಲಿ ತಾಯಿಯ ಗರ್ಭದಲ್ಲಿ ಮಲಗಿರುತ್ತಾನೆ, ಜನಿಸಿದ ನಂತರ ತೊಟ್ಟಿಲಲ್ಲಿ ಮಲಗುತ್ತಾನೆ, ಮಗುವಾಗಿ ಎದ್ದು ಕುಳಿತುಕೊಳ್ಳುತ್ತಾನೆ, ಬೆಳೆದಾಗ ನಿಲ್ಲುತ್ತಾನೆ, ಯೌವನ ಬಂದಾಗ ಕುಣಿಯುತ್ತಾನೆ, ಮತ್ತೆ ವಯಸ್ಸಾದಾಗ ಸೋತು ನಿಲ್ಲುತ್ತಾನೆ, ತೀರ ಮುದುಕನಾದಾಗ ನಿಲ್ಲಲಾರದೆ ಕುಳಿತುಕೊಳ್ಳುತ್ತಾನೆ ಮತ್ತು ಮರಣ ಸಮಯವಾದಾಗ ಏಳಲೇ ಆಗದೆ ಮಲಗಿ ಬಿಟ್ಟಿರುತ್ತಾನೆ.  ಹೀಗೇ ಎಲ್ಲಾ ಅವಸ್ಥೆಗಳಲ್ಲೂ ಯಥಾಶಕ್ತಿ ಜ್ಞಾನ ಸಾಧನೆ ಮಾಡಲೇಬೇಕೆಂಬ ಅರ್ಥ ಕೂಡ ಆಗುತ್ತದೆ.  ಗರ್ಭಾವಸ್ಥೆಯಲ್ಲಿಯೂ, ಶಿಶುಗಳಲ್ಲಿಯೂ, ವೃದ್ಧಾಪ್ಯದಲ್ಲಿಯೂ, ಭೌತಿಕ ದೇಹದ ದೌರ್ಬಲ್ಯದಿಂದ ಭಗವಂತನ ಆರಾಧನೆ, ಉಪಾಸನೆ ತೀವ್ರತರವಾಗಿ ಆಗುವುದಿಲ್ಲ ಆದರೆ ಯೌವನಾವಸ್ಥೆಯಲ್ಲಿ ಜೀವಿ ಸದೃಢನಾಗಿರುತ್ತಾನೆ, ಕುಣಿದು, ನಲಿದು ಉಪಾಸನೆ ಮಾಡಬಹುದಾದ ಅವಸ್ಥೆ ಮತ್ತು ಯೋಗ್ಯಕಾಲ ಕೂಡ.  ಆಗ ವಿಷಯಾಸಕ್ತಿಗಳಲ್ಲಿ ಮುಳುಗಿ, ಬೇಕೆನಿಸಿದ್ದನ್ನೆಲ್ಲಾ ಉಂಡು - ಉಟ್ಟು ದೇಹವನ್ನು ವ್ಯರ್ಥ ಮಾಡಿಕೊಳ್ಳುವುದು ಬಿಟ್ಟು ಬಿಡಬೇಕು.  ದೇಹಧಾರಣೆಗೆ ಬೇಕಾದಷ್ಟು ಮಾತ್ರ ಸಾತ್ವಿಕ ಆಹಾರ ತೆಗೆದುಕೊಂಡು, ಶರೀರ ಮತ್ತು ಇಂದ್ರಿಯಗಳನ್ನು ನಿಗ್ರಹಿಸಿ, ಒಳಗೂ - ಹೊರಗೂ ಹರಿಯನ್ನು ಸೇವಿಸಿದಾಗ ಭಗವಂತ ಪರಮ ಕರುಣೆಯಿಂದ ನಮಗೆ ಒಲಿಯುವನು ಎಂಬ ಅರ್ಥ ಕೂಡ ಆಗುತ್ತದೆ.

ಕಲಿಯುಗದಲ್ಲಿ ನಿರಂತರವಾಗಿ ಹರಿ ಸ್ಮರಣೆ,  ನಾಮ ಜಪ ಮಾಡುತ್ತ, ಹರಿಯ ಸ್ತುತಿಗಳನ್ನು ಹಾಡುತ್ತಾ ಜನ್ಮ ಸಾರ್ಥಕ ಮಾಡಿಕೊಳ್ಳಬೇಕೆಂಬುದನ್ನು ನಮ್ಮ ದಾಸ ಪರಂಪರೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಮತ್ತು ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ.  ಶ್ರೀ ವಿಜಯದಾಸರು "ಕಲಿಯುಗದಿ ಗಾನದಿ ಕೇಶವನೆನಲು ಕೈಗೂಡುವನು ರಂಗವಿಟ್ಠಲ" ಎಂದಿದ್ದಾರೆ ಮತ್ತು ಶ್ರೀ ಪುರಂದರ ದಾಸರು "ಕೀರ್ತನಮಾತ್ರದಿ ಕಲಿಯುಗದಲ್ಲಿ ಮುಕುತಿಯನೀವ ಪುರಂದರ ವಿಟ್ಠಲ" ಎಂದಿದ್ದಾರೆ.  ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಿಗಿಂತಲೂ ಕಲಿಯುಗದಲ್ಲಿ ಅತ್ಯಂತ ಸುಲಭೋಪಾಯವಾದ, ನಾಮ ಸ್ಮರಣೆಯಿಂದಲೇ ಹರಿಯನ್ನು ಒಲಿಸಿಕೊಳ್ಳಬಹುದೆಂಬ ಮಾತು ಸತ್ಯವೆಂದಿದ್ದಾರೆ.  ಹೀಗೆ ಗಾನ ಮಾಡುವುದಕ್ಕೆ ಯಾವುದೇ ನಿರ್ದಿಷ್ಟ ಆಸನವೇ ಬೇಕೆಂದೇನೂ ಇಲ್ಲ.  ಮಲಗಿಯೂ ಹಾಡಬಹುದು, ಕುಳಿತೂ ಹಾಡಬಹುದು, ನಿಂತೂ ಹಾಡಬಹುದು, ಕುಣಿಯುತ್ತಲೂ ಹಾಡಬಹುದು.  ’ಮಲಗಿ ಪರಮಾದರದಿ ಪಾಡಲು’ ಎಂಬುದನ್ನು ’ಅಪರೋಕ್ಷ ಜ್ಞಾನಿಗಳಿಗಾಗಿ ತಿಳಿಸಿರುವುದು ಎಂಬ ಅರ್ಥದಲ್ಲಿ ಕೂಡ ನೋಡಬಹುದು, ಏಕೆಂದರೆ ಅವರಿಗೆ ಯಾವ ನಿಯಮಗಳೂ ಇರುವುದಿಲ್ಲ.  ಅವರು ಸದಾ ಭಗವಂತನ ಸ್ಮರಣೆಯನ್ನು ಮಾಡುತ್ತಲೇ ಇರುತ್ತಾರೆ.

’ರಮಾಧವನೊಲಿಸಲರಿಯದೇ ಪಾಮರರು ಬಳಲುವರು ಭವದೊಳಗೆ’ - ರಮಾಧವನೆಂದರೆ ರಮೆಯ ರಮಣ ಮಾಧವನು.  ಪಾಮರರಿಗೆ ರಮೆ (ಲಕ್ಷ್ಮೀ) ಮಾತ್ರ ಬೇಕು, ರಮಾರಮಣ ಬೇಡ, ಆದ್ದರಿಂದಲೇ ಭಗವಂತ ನಮ್ಮ ಹತ್ತಿರ ನಾವು ಕರೆಯದೇ ಬರುವುದೇ ಇಲ್ಲ. ಆದರೆ ಭಗವಂತ ನಮ್ಮಿಂದ ದೂರ ಇಲ್ಲವೇ ಇಲ್ಲ, ಅವನು ಸದಾ ನಮ್ಮಂತರಂಗದಲ್ಲಿ ಬಿಂಬರೂಪಿಯಾಗಿ ಇದ್ದೇ ಇದ್ದಾನೆ, ಒಮ್ಮೆ ಪರಮಾದರದಿಂದ ಕೂಗಿದರೂ ಓಗೊಡುತ್ತಾನಾದ್ದರಿಂದಲೇ ಅವನು ’ಸುಲಭನು’  ಆದರೆ ಭಕ್ತರಾದ ಪಾಮರರು ಇದನ್ನು ತಿಳಿಯುವುದಿಲ್ಲ, ಅವನು ದುರ್ಲಭನೆಂದುಕೊಳ್ಳುತ್ತಾರೆ.  ಭಗವಂತ ಹಾಗೇನೂ ತಿಳಿಯುವುದೇ ಇಲ್ಲ.  ತನ್ನ ಭಕ್ತರಾದ ಸಜ್ಜನರನ್ನು ಅವನು ತನ್ನವರೆಂದೇ ತಿಳಿದು, ಅವರ ಬಳಿಯೇ ಇದ್ದು, ಅವರ ಸಾಧನೆಗೆ ಹೆಚ್ಚು ಹೆಚ್ಚು ಅನುಕೂಲ ಮಾಡಿಕೊಡುತ್ತಿರುತ್ತಾನೆ.  ಅವರ ಸಾಧನೆಗಿಂತಲೂ ಅಧಿಕವಾಗಿಯೇ ಅನುಗ್ರಹ ಮಾಡುತ್ತಾನೆ. ಪರಮ ಕರುಣಾಳುವಾದ ಶ್ರೀಹರಿ ಬೇಡುವವನಿಗಿಂತ ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇದ್ದು, ಅನುಗ್ರಹ ಮಾಡುತ್ತಾನೆ.

ತತ್ವಸುವ್ವಾಲಿಯಲ್ಲಿ ಜಗನ್ನಾಥ ದಾಸರು :
ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು | ಸುರರೊಳು ನೀನು ಬೆಂ-
ಬಲವಾಗಿ ಇರಲು ಭಯವುಂಟೆ ||  - ಸಂಸಾರವೆಂಬ ಭವಸಾಗರದಲ್ಲಿ ನಾನಾ ಭಯಗಳ ಮಧ್ಯೆ ಸಿಕ್ಕಿಕೊಂಡು ಕಂಗಾಲಾಗಿರುವ ಜೀವನು ನಿನ್ನನ್ನೇ ಆಶ್ರಯಿಸುವನು.  ಭಗವಂತ ನಿನಗಿಂತ ಸುಲಭರು ಮತ್ಯಾರು ಇಲ್ಲ.  ನಿನ್ನ ಬೆಂಬಲವೊಂದಿದ್ದರೆ ಯಾವ ಭಯವೂ ನನ್ನನ್ನು ಕಾಡದು ಎನ್ನುತ್ತಾ, ಸುಲಭದಲ್ಲಿ ಒಲಿಸಿಕೊಳ್ಳಬಹುದಾದವನು  ಭಗವಂತ ಎಂದಿದ್ದಾರೆ.

ನಿಲ್ಲಲು ನಿಲ್ಲುವೆನು ಮಲಗಿದರೆ ಮಲಗುವೆನು
ತಿಳಿದು ತಿಳಿಸಿದರೆ ತಿಳಿವೆನು | ತಿಳಿವೆನೊ ದೇಹದ
ನೆಳಲಂತೆ ಇರ್ಪೆ ನಿನಗಾನು ||  -  ಜೀವ ಪರಮಾತ್ಮನ ಪೂರ್ಣ ಅಧೀನನು, ಪ್ರತಿಬಿಂಬರೂಪನು ಎಂಬುದನ್ನು ತಿಳಿಸುತ್ತಾ ಜೀವರ ಸಕಲ ಕ್ರಿಯೆಗಳೂ ಬಿಂಬರೂಪಿಯಾದ ಭಗವಂತನ ಕ್ರಿಯೆಗನುಸಾರವಾಗಿಯೇ ಆಗುವುದೆಂಬ ಯಥಾರ್ಥವು ಸತ್ಯವೆನ್ನುತ್ತಾರೆ ಜಗನ್ನಾಥ ದಾಸರು.



ಚಿತ್ರಕೃಪೆ : ಅಂತರ್ಜಾಲ

Friday, June 29, 2012

ಕರುಣಾ ಸಂಧಿ - ೪ನೇ ಪದ್ಯ



















ಮನವಚಕತಿದೂರ ನೆನೆವರ |
ನನುಸರಿಸಿ ತಿರುಗುವನು ಜಾಹ್ನವಿ |
ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು ||
ಘನಮಹಿಮ ಗಾಂಗೇಯನುತ ಗಾ |
ಯನವ ಕೇಳುತ ಗಗನಚರ ವಾ|
ಹನ ದಿವೌಕಸರೊಡನೆ ಚರಿಸುವ 

ಮನೆಮನೆಗಳಲ್ಲಿ || ೪ ||

 ಪ್ರತಿಪದಾರ್ಥ : ಮನ - ಮನಸ್ಸು ಅಥವಾ ನಮ್ಮ ಆಲೋಚನೆಗಳು, ವಚನ - ನಾವಾಡುವ ಮಾತುಗಳು ಅಥವಾ ಭಗವಂತನ ಸ್ತುತಿಗಳು/ಸ್ತೋತ್ರಗಳು, ಅತಿದೂರ - ಮನಸ್ಸಿನ ಮಾತುಗಳಿಗೆ ನಿಲುಕದವನು, ನೆನೆವರನನುಸರಿಸಿ ತಿರುಗುವನು - ಯಾರು ಶುದ್ಧ ಭಕ್ತಿಯಿಂದ ಸದಾ ಭಗವಂತನನ್ನು ಸ್ಮರಿಸುವರೋ ಅವರನ್ನು ಹಿಂಬಾಲಿಸುತ್ತಾ ತಿರುಗಾಡುವವನು, ಜಾಹ್ನವಿ ಜನಕ - ಜಾಹ್ನವಿ ಎಂದರೆ ಗಂಗೆ ಭಗವಂತನ ಉಂಗುಷ್ಠದಿಂದುದ್ಭವಿಸಿದಳಾದ್ದರಿಂದ ಗಂಗೆಯ ಪಿತ, ಜನರೊಳಗಿದ್ದು ಜನಿಸುವ - ಬಿಂಬ ರೂಪಿಯಾಗಿ ಪ್ರತಿಯೊಬ್ಬ ಮನುಷ್ಯನು ಜನಿಸಿದಾಗ ಅವನೊಂದಿಗೆ ತಾನೂ ಜನಿಸುವವನು, ಜಗದುದರ ತಾನು - ಜಗತ್ತನ್ನೇ ತನ್ನ ಉದರದಲ್ಲಿ ಧರಿಸಿರುವವನು, ಘನಮಹಿಮಗಾಂಗೇಯನುತ - ಅತ್ಯಂತ ಗೌರವವುಳ್ಳ ತಮ್ಮ ಅಪೂರ್ವ ಪ್ರತಿಜ್ಞೆಗಳಿಂದ ಸುವಿಖ್ಯಾತರಾದ  ಗಂಗೆಯ ಪುತ್ರನಾದ ಭೀಷ್ಮನಿಂದ ಸ್ತುತಿಸಲ್ಪಡುವವನು, ಗಾಯನವ ಕೇಳುತ - ತನ್ನ ಭಕ್ತರು ಭಕ್ತಿಯಿಂದ ತನ್ನನ್ನು ಸ್ತುತಿಸಿ ಹಾಡುವುದನ್ನು ಕೇಳುವವನು, ಗಗನಚರ ವಾಹನ - ಅಂತರಿಕ್ಷದಲ್ಲಿ ಹಾರಾಡುವ ಗರುಡನು ವಾಹನವಾಗಿರುವವನು, ದಿವೌಕಸರೊಡನೆ - ಸಮಸ್ತ ದೇವತೆಗಳೊಂದಿಗೆ, ಚರಿಸುವ ಮನೆಮನೆಗಳಲ್ಲಿ - ತನ್ನ ಪರಿವಾರ ಸಹಿತವಾಗಿ ಭಕ್ತರನ್ನು ಸಂತೋಷಪಡಿಸಲು ಅವರ ಮನವೆಂಬ ಮನೆಯಲ್ಲಿ ಸದಾ ಸಂಚರಿಸುವವನು.

ನೆನಕೆಯ ಕರೆಗೆ ದೂರವಿದ್ದರೂ, ಮನದ ಕರೆಗೆ ಹತ್ತಿರವಾಗುತ್ತಾನೆ.  ಶುದ್ಧವಾದ ಗಂಗೆಯ ಪಿತನಾದರೂ ಸಾಮಾನ್ಯ ಜನರಲ್ಲಿದ್ದು, ಜನಿಸಿ ತಾನೇ ಜಗದುದರನಾಗಿದ್ದಾನೆ.  ಇಂಥಹ ಘನಮಹಿಮನಾದ ಪರಮಾತ್ಮ ಗಗನಚರನಾಗಿದ್ದರೂ ತನ್ನ ಕುರಿತು ಹಾಡಿಪಾಡಿದವರ ಮನೆಗೆ ತನ್ನ ಪರಿವಾರದೊಡನೆ ಬಂದು ಭಕ್ತರನ್ನು ಪ್ರೇಮದಲಿ ಬಂಧಿಸುತ್ತಾನೆ.  ಜಗನ್ನಾಥ ದಾಸರು ವಿಠಲಯ್ಯ ವಿಠಲಯ್ಯ ಎಂಬ ಕೃತಿಯಲ್ಲಿ “ಶರಣಾಗತರನ್ನು ಪೊರೆವನೆಂಬ ತವ ಬಿರಿದು ಕಾಣೋ ಸಿರಿವರ ಜಗನ್ನಾಥ ವಿಠಲಯ್ಯ ವಿಠಲಯ್ಯ" ಎಂದು ಸ್ತುತಿಸಿದ್ದಾರೆ.

ಗಂಗೆಯ ಪಿತನಾದ ಶ್ರೀಹರಿ ನಮ್ಮ ಮನಸ್ಸಿಗೂ, ಮಾತಿಗೂ ನಿಲುಕಲಾಗದಷ್ಟು ದೂರದಲ್ಲಿದ್ದಾನೆ.  ಭಕ್ತಿಯಿಂದ, ಪ್ರೀತಿಯಿಂದ ನೆನೆದಾಗ ಮಾತ್ರ ಕರುಣೆಯಿಂದ, ತಾಯಿಯಂತೆ ನಮ್ಮನ್ನೇ ಅನುಸರಿಸುತ್ತಾ ನಮ್ಮ ಹಿಂದೆ ಮುಂದೆ ತಿರುಗುತ್ತಿರುತ್ತಾನೆ.  ಪ್ರಳಯ ಕಾಲದಲ್ಲಿ ಜಗತ್ತನ್ನೇ ನುಂಗಿ ಉದರದಲ್ಲಿಟ್ಟುಕೊಂಡು ಕಾಪಾಡುವ ’ಜಗದ್ಭುಕ್’ ಎನಿಸಿಕೊಂಡ ಭಗವಂತ ಜನರೊಳಗೆ ಅಂತರ್ಯಾಮಿಯಾಗಿದ್ದು, ಜನರು ಜನಿಸುವಾಗ ತಾನೂ ಜನಿಸಿ, ಜನರನ್ನು ಕಾಪಾಡುವನು.  ಗರುಡ ವಾಹನ, ಖೇಚರನಂತೆ ಗಗನದಲ್ಲಿ ಚಲಿಸುತ್ತಾ ದೇವತೆಗಳ ಗಾಯನವನ್ನು ಕೇಳುತ್ತಾ, ಸುಖಿಸುವವನು. ತಾನೇ ಮಹಾ ಮಹಿಮನಾಗಿದ್ದರೂ ಕೂಡ, ಗಂಗಾಪುತ್ರನಾದ ಗಾಂಗೇಯನು ಮಾಡಿದ ಸ್ತುತಿಯನ್ನು ಕೇಳುವವನು. ಅಂತಹ ಪರಮ ಕರುಣಾ ಸಿಂಧು ನಮ್ಮ ಗಾಯನವನ್ನೂ ಕೇಳುತ್ತಾನೆ ಮತ್ತು ಸಕಲ ದೇವತೆಗಳೊಂದಿಗೆ ನಮ್ಮ ಮನೆ-ಮನಗಳಲ್ಲಿಯೂ ಸಂಚರಿಸುತ್ತಿರುತ್ತಾನೆ.  “ಜನರೊಳಗಿದ್ದು ಜನಿಸುವ”  - ಜನಿಸುವುದರಿಂದಲೇ ಜನರು “ಜನ”ರೆಂದು ಕರೆಸಿಕೊಳ್ಳುತ್ತಾರೆ.  ಅವರೊಳಗಿದ್ದು, ಅವರು ಜನಿಸಿದಾಗ ಹರಿ ತಾನೂ ಜನಿಸುತ್ತಾನೆಂಬ ಅರ್ಥವಾಗುತ್ತದೆ.

“ಜಾಹ್ನವಿಜನಕ” – ಜಹ್ನುವಿನ ಮಗಳಾಗಿ ಹುಟ್ಟಿದ್ದರಿಂದ ಗಂಗೆ ಜಾಹ್ನವಿಯಾದಳು. 

ಗಂಗಾ ಗಂಗೇತಿ ಯೋ ಬ್ರೂಯಾದ್ ಯೋಜನಾನಾಂ ಶತೈರಪಿ |
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ||  -  ನೂರು ಯೋಜನ ದೂರದಿಂದಲಾದರೂ ಕೂಡ ಗಂಗೇ ಎಂದರೆ ಸಾಕು, ಗಂಗೆ ಬಂದು ಪಾಪ ಪರಿಹರಿಸಿ, ನಮ್ಮನ್ನು ಉದ್ಧರಿಸುತ್ತಾಳೆಂದರೆ, ಗಂಗೆಯ ಜನಕನಾದ ಶ್ರೀಹರಿ, ಕರುಣಾ ಸಮುದ್ರನೇ ಆಗಿದ್ದಾನೆ.

ಶ್ರೀಹರಿಯು ಮನೋಭಿಮಾನಿಯಾದ ರುದ್ರನಿಗೂ, ಮುಖ್ಯಪ್ರಾಣನಿಗೂ, ಅಭಿಮಾನಿ ರಮಾದೇವಿಗೂ ಕೂಡ ನಿಲುಕದವನು. ನಮ್ಮ ಮನಕ್ಕೆ ಅತಿದೂರದಲ್ಲಿರುವನು.  ಒಂದು ಲೌಕಿಕ ಸಂಬಂಧವನ್ನು ಅರ್ಥೈಸಿಕೊಳ್ಳಲು ನಾವು ದಿನಗಳೂ, ವರ್ಷಗಳೂ ಕಳೆಯುವಾಗ ಭಗವಂತನ ಗುಣವಿಶೇಷಗಳ ಅಭಿವ್ಯಕ್ತಿ ಮಾಡಲು ಭಾಷೆ, ಪದ, ಸಮಯ.. ಯಾವುದೂ ಸೀಮಿತವಲ್ಲ.  ಮಗು ತಾಯಿಯ ಒಡನಾಡಿಯಾಗಿರುವಂತೆ,  ಪರಮಾತ್ಮ ಜೀವಾತ್ಮದೊಡನೆ ಇದ್ದಾನೆ.  ಭಗವಂತನನ್ನು ನೆನೆವವರಲ್ಲಿ ಯಾಂತ್ರಿಕತೆಯಿದೆ ಆದರೆ ಕರುಣಾಮಯಿ ಭಗವಂತನಲ್ಲಿಲ್ಲ.  ನಾವು ವಿಷಯಾಸಕ್ತಿಗಳಲ್ಲೇ ಮುಳುಗಿ ಭೋಗದಲ್ಲೇ ಮೀಯಲು ಬಯಸುತ್ತಾ ಇರಬಾರದು.  ಹುಟ್ಟಿನಲ್ಲಿ ಪಾಪವಿದ್ದಾಗ, ಮರಣದಲ್ಲೂ ಪಾಪವಿರುತ್ತದೆ (ಅಪಮೃತ್ಯು).  ಗಂಗೆಯ ಸ್ಪರ್ಶದಿಂದಲೇ ಪಾಪ ಪರಿಹಾರವಾಗುವಾಗ, ಅವಳ ಜನಕ ವಿಷ್ಣುವಿನ ಗುಣವಿಶೇಷಗಳನ್ನು ಅರಿಯುವುದರಿಂದ ಪಾಪರಾಶಿಗಳೇ ನಾಶವಾಗಿಬಿಡುತ್ತವೆ.   ಪಾಪ ೧೦೦ ಅಂಶ ಇದ್ದಾಗ, ೨೫ ಅಂಶ ಪಶ್ಚಾತ್ತಾಪ ಪಡುವುದರಿಂದಲೇ ಕರಗಿ ಬಿಡುತ್ತದೆ, ೨೫ ಅಂಶ ಮತ್ತೆಂದೂ ತಪ್ಪು ಮಾಡದೆ ಧರ್ಮ ಕಾರ್ಯ ಮಾಡುವುದರ ಮೂಲಕ ಕರಗುತ್ತದೆ, ೨೫ ಅಂಶ ಪವಿತ್ರ ಕ್ಷೇತ್ರಗಳ ದರ್ಶನ ಮಾಡುವುದರಿಂದ ಮತ್ತು ಕೊನೆಯ ೨೫ ಅಂಶ ಪವಿತ್ರ ಗ್ರಂಥಗಳ ಪಠಣ / ಮನನ ಮಾಡುವುದರ ಮೂಲಕ ಕರಗುತ್ತದೆ ಎಂಬುದು ಶಾಸ್ತ್ರಗಾರರಿಂದ ತಿಳಿಯುತ್ತದೆ.

ಮನವಚನ ಎ೦ದಾಗ, ನಾವು ಎರಡೂ ದೃಷ್ಟಿಯಿಂದಲೂ ಸ್ವಲ್ಪ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡೋಣ. ಮೊದಲು ನೇರ ಅರ್ಥದ ಶಬ್ದ ಎಂಬ ದೃಷ್ಟಿ ಬಂದಾಗ, ನಮ್ಮ ಮನಸ್ಸಿನಲ್ಲಿ ಉತ್ಪತ್ತಿ ಆಗುವ ಮಾತುಗಳು ಎಂದುಕೊಂಡರೆ, ಅಲ್ಲಿ ವಿಧ ವಿಧವಾದ ಸಂದೇಹಗಳು ಇರುತ್ತವೆ.   ಎಲ್ಲಿ ಸಂದೇಹಗಳು ಇರುತ್ತವೋ ಅಲ್ಲಿ ಭಗವಂತನಿರುವುದಿಲ್ಲ.  ಮನದಲ್ಲಿ ಏಳುವ ಎಲ್ಲಾ ಮಾತುಗಳೂ ನಮ್ಮ ಭಾವಗಳೇ ಆಗಿರುತ್ತವೆ ಎಂಬುದೂ ಕೂಡ ಕೆಲವೊಮ್ಮೆ ಸಂದೇಹಾಸ್ಪದವಾಗುತ್ತದೆ. ಉದ್ದೇಶ ಇಲ್ಲದೇ ಇದ್ದರೂ ಅನವಶ್ಯಕ ಶಬ್ದಗಳು  ನಮ್ಮಿಂದ ಹೊರಹೊಮ್ಮಿ ಬಿಡುತ್ತವೆ.  ಆಮೇಲೆ ಅದನ್ನು ನಾವು ನೆನಪು ಮಾಡಿಕೊಂಡರೆ ಮಾತ್ರ, ಅದು ತಪ್ಪು ಎಂದು ಗೊತ್ತಾಗುತ್ತದೆ.  ಆದ್ದರಿಂದ ಈ ಎಲ್ಲಾ ಮಾತುಗಳಿಂದಲೂ ಭಗವಂತ ಖಂಡಿತಾ ನಮ್ಮ ಮನಕ್ಕೆ ಅತಿ ದೂರವೇ ಇರುತ್ತಾನೆ.   ’ಕಾಯಾ ವಾಚಾ’ಕ್ಕಿಂತಲೂ ಮನಸಾ ಮಾತ್ರವೇ ತುಂಬಾ ಮುಖ್ಯವಾಗುತ್ತದೆ.  ನುಡಿದಂತೆಯೇ ನಡೆದಾಗ ಮಾತ್ರ ಬಹುಶ: ಭಗವಂತ ಮನವಚನಕ್ಕೆ ದೂರನಾಗದೆ, ಮನದಲ್ಲಿ ನೆಲೆ ನಿಲ್ಲುತ್ತಾನೆ.  ತನ್ನ ತಾಣದಲ್ಲಿ ಪ್ರಸನ್ನನಾಗಿ ಕುಳಿತು, ಭಕ್ತಿಯನ್ನು ಸೇವಿಸುತ್ತಾನೆ.  ಭಕ್ತಿಯನ್ನು ಸೇವಿಸುತ್ತಾ ಅದೇ ಆಗಿಬಿಡುತ್ತಾನೆ.  ಹಾಗಾಗಬೇಕಾದರೆ ತನು-ಮನ ಶುದ್ಧವಾಗಿರಬೇಕು.   ಹೀಗೆ ನಮ್ಮ ನುಡಿಯನ್ನು ನಡೆಗೆ ಹೊಂದಿಸುತ್ತಾ ಹೋದಾಗ ನಮ್ಮದೇ ಭಾವಗಳು ಶುದ್ಧಿ ಆಗುತ್ತಾ ಹೋಗುತ್ತವೆ ಮತ್ತು ಜೀವದ ಕಣ ಕಣದಲ್ಲೂ ಶುದ್ಧಗೊಳಿಸುವ ಕ್ರಿಯೆ ನಿರಂತರ ನಡೆಯುತ್ತಾ ಹೋಗುತ್ತದೆ.

ಜನರೊಳಗಿದ್ದು ಜನಿಸುವ ಜಗದುದರ ತಾನು - ಗುರು, ತಂದೆ-ತಾಯಿ, ಬಾಧಕ, ನಿಯಾಮಕ ಎಲ್ಲವೂ ಆಗಬಲ್ಲ.  ಭಗವಂತ ಜಗತ್ತಿಗೇ ಜನಕನಾದರೂ, ಜನರಿಂದಲೇ ಹುಟ್ಟಿ ಬಂದು ಅವರ ಮಗ ಎಂದು ಕರೆಸಿಕೊಳ್ಳುವವ.  ಆತ್ಮನಿಗೇ ಹುಟ್ಟು-ಸಾವು ಇಲ್ಲವೆಂದಾಗ, ಭಗವಂತನಿಗೆ ಎಲ್ಲಿಯ ಹುಟ್ಟು?  ನಾವು ದೇಹದೊಂದಿಗೆ ಹುಟ್ಟು-ಸಾವು ಅನುಭವಿಸುತ್ತೇವೆ.  ಆದರೆ ದೇವರು ಕಾಣಿಸಿಕೊಳ್ಳುತ್ತಾನೆ ಹಾಗೂ ಕಾಣೆಯಾಗುತ್ತಾನೆ.  ಹೊಸ ಹೊಸ ರೂಪಗಳಲ್ಲಿ ಭಗವಂತ ಕಾಣಿಸಿಕೊಂಡಾಗ, ಅದನ್ನು ನಾವು ದೇವರ ಅವತಾರ ಎನ್ನುತ್ತೇವೆ.  ಹಾಗೇ ನಮಗೆ ನಮ್ಮ ಮಗ, ಬರಿಯ ಮಗ.  ಅವನು ಬೇರೇನೂ ಆಗಲು ಸಾಧ್ಯವಿಲ್ಲ.  ಆದರೆ ಭಗವಂತ ನಮಗೆ ತಾಯಿ-ತಂದೆ, ಗಂಡ-ಮಗ, ಅಣ್ಣ-ತಮ್ಮ, ಸಖ.. ಎಲ್ಲವೂ ಆಗಬಲ್ಲ.  ಭಾವದಲ್ಲಿ ಭಾವ ಬೆರೆಸಬಲ್ಲ.  ದೇವರ ಉದರ (ಬಸಿರು)ದಿಂದ ಬಂದವರಾದ್ದರಿಂದ ಅವನು ನಮಗೆ ತಾಯಿ.  ರಮಾದೇವಿಯಲ್ಲಿ ಅವನು ಬ್ರಹ್ಮಾಂಡ ಪಿಂಡವನ್ನಿಟ್ಟ, ಆದ್ದರಿಂದ ತಂದೆ.  ನಮ್ಮ ಕರ್ಮ ಕಳೆದು, ಪಾಪ ತೊಳೆದು ಮುಕ್ತಿ ಕೊಡುವ ದೇವರು ನಮಗೆ ಮಗನೂ ಹೌದು - ಅಂದರೆ ನಮಗೆ ಸದ್ಗತಿ ಕೊಡುವವನು ಎಂದರ್ಥ.

ತತ್ವಸುವ್ವಾಲಿಯಲ್ಲಿ ದಾಸರು :
ತಂದೆ ತಾಯಿಯು ಭ್ರಾತೃ ಬಂಧು ಸಖ ಗುರು ಪುತ್ರ
ಎಂದೆಂದು ನೀನೇ ಗತಿ ಗೋತ್ರ | ಗತಿ ಗೋತ್ರ ಇಹ ಪರದಿ
ಇಂದಿರಾರಾಧ್ಯ ಸಲಹೆಮ್ಮ ||  - ದಾಸರು ಪ್ರತಿಯೊಂದ ಸಂಬಂಧವೂ ಎಲ್ಲಾ ಕಾಲಕ್ಕೂ ಭಗವಂತನೇ ಎಂಬ ಮಾತು ಹೇಳಿದ್ದಾರೆ. ’ಗೋ’ ಶಬ್ದಕ್ಕೆ ಭೂಮಿ, ಧೇನು, ಸ್ವರ್ಗ, ವೇದ ಎಂಬೆಲ್ಲಾ ಕೆಲವು ಮುಖ್ಯಾರ್ಥಗಳು ಇವೆ.  ಇವೆಲ್ಲವುಗಳಿಗೂ ರಕ್ಷಕನಾದ್ದರಿಂದ ಭಗವಂತ "ಗೋತ್ರ"ನಾಗುತ್ತಾನೆ.  ಎಲ್ಲವೂ ತಾನೇ ತಾನಾಗಿ, ಯಾವಕಾಲಕ್ಕೂ ನಮ್ಮನ್ನು ಕಾಯುವವನು, ನೀನೇ ನಮಗೆ ಗತಿ ಎಂದಿದ್ದಾರೆ ದಾಸರು.


ನೆನೆವರನನುಸರಿಸಿ ತಿರುಗುವನು - ಭಗವಂತ ಎಂತಹ ಕರುಣಾಮಯಿಯೆಂದರೆ ತನ್ನ ಮಕ್ಕಳೇ ಆದ ಜೀವಿಗಳು ತನ್ನನ್ನು ರಕ್ಷಿಸು ಎಂದು ಬೇಡುವವರೆಗೂ ಕಾಯುವುದಿಲ್ಲ.  ತುಂಬು ವಾತ್ಸಲ್ಯದಿಂದ, ಕರುಣೆಯಿಂದ ಭಕ್ತರನ್ನು ಅನುಸರಿಸಿ ನಮ್ಮ ಹಿಂದೆ ಹಿಂದೆಯೇ ತಿರುಗುತ್ತಾ ನಮ್ಮನ್ನು ಪೊರೆಯುವನು.  "ಗಾಯನವ ಕೇಳುತ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ" ಎಂದಾಗ ಕೂಡ ಶ್ರೀಹರಿ ಸದಾಕಾಲವೂ ವೈಕುಂಠದಲ್ಲಿ ಕುಳಿತಿರುವುದಿಲ್ಲ, ಯಾರು ತನ್ನನ್ನು ಭಕ್ತಿಯಿಂದ ಗುಣ ಕೀರ್ತನೆ ಮಾಡುತ್ತಿರುತ್ತಾರೋ ಅಲ್ಲಿ ಅವರ ಹಿಂದೆ ಮುಂದೆ ತಾನು ಇರುತ್ತೇನೆ ಎನ್ನುತ್ತಾನೆ ಭಗವಂತ. 

ಭಗವಂತನ ಕಾರುಣ್ಯವನ್ನೂ, ಹರಿನಾಮ ಸಂಕೀರ್ತನೆಯ ಮಹಿಮೆಯನ್ನೂ ತಿಳಿಸಿಕೊಡುತ್ತಾ ಕೈವಾರ ತಾತಯ್ಯನವರು "ಅನವರತಮು ಹರಿನಿ-ಆತ್ಮದಲಚಿನವಾರಿ ಯಾಮರುಕವೆನುವೆಂಟ-ದಿರುಗುಚುಂಡು" - ಸದಾ ಕಾಲವೂ ತನ್ನ ನಾಮ ಸ್ಮರಣೆ ಮಾಡುವವರ ಹಿಂದೆಯೇ ತಿರುಗುತ್ತಾ ಬೆಂಗಾವಲಾಗಿ ಇರುತ್ತಾನೆ ಭಗವಂತ ಎನ್ನುತ್ತಾರೆ.  ಹಾಗೂ  "ಶರಣನ್ನವಾರಲನು ಚೇಪಟ್ಟಿ ಯೇವೇಳ ಕಂಟಿರೆಪ್ಪವಲೆನು ಕಾಚಿಯುಂಡು" - ತನ್ನನ್ನು ಕಾಯಾ ವಾಚಾ ಮನಸಾ ನಂಬಿ ಬಂದು ಶರಣಾದವರನ್ನು ಕಣ್ಣಿನ ರೆಪ್ಪೆಯಂತೆ ಕಾಯುವ ಆಪದ್ರಕ್ಷಕನಾಗಿರುತ್ತಾನೆ ಭಗವಂತ ಎನ್ನುತ್ತಾರೆ.

"ಘನಮಹಿಮ"  - ಮಹಾಲಕ್ಷ್ಮಿ ಅನಂತವೇದಗಳಿಂದ ಪ್ರೀತಿಯಿಂದ ಸ್ತುತಿಸುವ ಘನಮಹಿಮೆಯುಳ್ಳವನು ಭಗವಂತ.  ಅಂಥಹ ಶ್ರೀಹರಿಯನ್ನು  ಭೀಷ್ಮನು ಸ್ತುತಿಸುತ್ತಾರೆ.  ರಾಜಸೂಯ ಯಾಗದ ನಂತರ ಅಗ್ರಪೂಜೆಯನ್ನು ಸಲ್ಲಿಸುವಾಗ  ಹಿರಿಯರಾದ ಯಾರಿಗಾದರೂ (ಭೀಷ್ಮ ಅಥವಾ ವೇದವ್ಯಾಸರಿಗೆ) ಸಲ್ಲಿಸಬಹುದಿತ್ತು.  ಆದರೆ ಭೀಷ್ಮ ಎಲ್ಲರಿಗೂ ಶ್ರೀ ಕೃಷ್ಣನ ನಿಜಸ್ವರೂಪವನ್ನು, ಘನಮಹಿಮೆಯನ್ನು ಪರಿಚಯಿಸಲು ಅವನಿಗೇ ಅಗ್ರಪೂಜೆಯನ್ನು ಸಲ್ಲಿಸಲು ನಿರ್ದೇಶಿಸುತ್ತಾರೆ.  ಹೀಗೆ ಭಗವಂತನ ಪ್ರೇರಣೆಯಿಂದಲೇ ಸಮಸ್ತ ಕಾರ್ಯಗಳೂ ನಡೆಯುವುವು.

"ಗಗನಚರವಾಹನ" - ಆಕಾಶದಲ್ಲಿ ಹಾರುವ ಗರುಡನನ್ನು ವಾಹನವನ್ನಾಗಿ ಮಾಡಿಕೊಂಡಿರುವವನು ಶ್ರೀಹರಿ.  ಗರುಡ ವೇದಾಭಿಮಾನಿ.  ಗಗನಚರನಾದಾಗ ಗರುಡನ ರೆಕ್ಕೆಗಳಿಂದ ಸಾಮಗಾನ ಹೊರಡುತ್ತದೆ.  ಈ ಸಾಮಗಾನ ಸೇವೆಯನ್ನು ಸ್ವೀಕರಿಸುತ್ತಾ ಅವನನ್ನು ಅನುಗ್ರಹಿಸುವುದಕ್ಕಾಗಿಯೇ ಭಗವಂತ ಗರುಡನನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ.  ನಾವು ವೇದಪೂರ್ವಕವಾಗಿ ಶ್ರೀಹರಿಯ ಧ್ಯಾನ ಮಾಡಿದಾಗ, ವೇದಾಭಿಮಾನಿ ಗರುಡನನ್ನು ಏರಿ ಭಗವಂತ ಸಾಧಕರ ಹೃದಯದೊಳಗೆ ಹಾರಿ ಬರುತ್ತಾನೆಂಬ ನಂಬಿಕೆಯಿದೆ.

ಜಗನ್ನಾಥ ದಾಸರು ತತ್ವಸುವ್ವಾಲಿಯಲ್ಲಿ :
ಮನವಚನಕಾಯದಿಂದನುಭವಿಪ ವಿಷಯಗಳ
ನಿನಗರ್ಪಿಸುವೆನೋ ನಿಖಿಳೇಶ | ನಿಖಿಳೇಶ ನಿನ್ನ ಪಾ-
ವನಮೂರ್ತಿ ತೋರಿ ಸುಖವೀಯೋ || - ಮನ ವಚನ ಕಾಯದಿಂದ ಅನುಭವಿಸುವ ಎಲ್ಲಾ ವಿಷಯಗಳನ್ನೂ ನಿನಗೇ ಅರ್ಪಿಸುವೆನೋ ನಿಖಿಳೇಶ ಒಪ್ಪಿಸಿಕ್ಕೊಳ್ಳೋ ಹೇ ಸರ್ವೇಶ, ಒಪ್ಪಿಸಿಕೊಂಡು ನಿನ್ನ ಮಂಗಳಸ್ವರೂಪವನ್ನು ತೋರಿ - ತೋರಿಸಿ, ಸುಖವಿತ್ತು ಆನಂದಪಡಿಸು ಸ್ವಾಮಿ ಎನ್ನುತ್ತಾರೆ.



ಚಿತ್ರಕೃಪೆ : ಅಂತರ್ಜಾಲ





Wednesday, May 30, 2012

ಕರುಣಾ ಸಂಧಿ - ೩ನೇ ಪದ್ಯ


ಶ್ರುತಿ ತತಿಗಳಭಿಮಾನಿ ಲಕ್ಶ್ಮೀ |
ಸ್ತುತಿಗಳಿಗೆ ಗೋಚರಿಸದಪ್ರತಿ |
ಹತ ಮಹೈಶ್ವರ್ಯಾದ್ಯಖಿಲ ಸದ್ಗುಣಗಳಾಂಭೋದಿ ||
ಪ್ರತಿದಿವಸ ತನ್ನಂಘ್ರಿ ಸೇವಾ |
ರತ ಮಹಾತ್ಮರು ಮಾಡುತಿಹ ಸಂ |
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ  || ೩ ||

 ಪ್ರತಿಪದಾರ್ಥ : ಶ್ರುತಿ ತತಿಗಳಿಗಭಿಮಾನಿ - ವೇದ ಸಮೂಹಗಳಿಗೆ ಅಭಿಮಾನಿಯಾದ, ಲಕುಮಿಸ್ತುತಿಗಳಿಗೆ - ಲಕ್ಷ್ಮೀದೇವಿಯು ಮಾಡುವ ಸ್ತೋತ್ರಗಳಿಗೂ ಸ್ತುತಿಗಳಿಗೂ,  ಗೋಚರಿಸದ - ನಿಲುಕದ,  ಅಪ್ರತಿಹತ - ನಾಶರಹಿತನಾದ,  ಮಹೈಶ್ವರ್ಯಾದಿ - ಅಪರಿಮಿತ ಐಶ್ವರ್ಯಗಳಿಗೆ,  ಅಖಿಳ  ಸದ್ಗುಣಗಣಾಂಭೋಧಿ - ಸಮಸ್ತ ಸುಗುಣಗಳ ಸಾಗರನಾಗಿರುವನು, ಪ್ರತಿದಿವಸ - ದಿನದಿನವೂ ಅನವರತ, ತನ್ನಂಘ್ರಿಸೇವಾರತ - ಚರಣ ಸೇವೆಯಲ್ಲಿ ನಿರತರಾಗಿರುವ, ಮಹಾತ್ಮರು - ನಿಷ್ಕಲ್ಮಶ ಮನಸ್ಸುಳ್ಳ ಭಕ್ತರು, ಮಾಡುತಿಹ ಸಂಸ್ತುತಿಗೆ - ಮಾಡುವ ಭಕ್ತಿಯ ಸ್ತೋತ್ರಗಳಿಗೆ, ವಶನಾಗುವನು - ಒಲಿಯುವನು, ಇವನ ಕಾರುಣ್ಯಕೇನೆಂಬೆ - ಇಂತಹ ಅಂತಃಕರಣವುಳ್ಳ ಭಗವಂತನಿಗೆ ಏನೆಂದು ಹೇಳಲಿ.
 
ಈ ಪದ್ಯದಲ್ಲಿ ಪರಮಾತ್ಮನ ಕಾರುಣ್ಯದ ಬಗ್ಗೆ ವಿವರಿಸುತ್ತಾರೆ ದಾಸರು.  ತಡೆಯಿಲ್ಲದ ಮಹದೈಶ್ವರ್ಯ ಉಳ್ಳವನು.  ಸದ್ಗುಣಗಳ ಆಗರ.  ಇಂಥಹ ಪರಮಾತ್ಮ ಶ್ರುತಿ ತತಿಗಳಿಗೆ ಅಭಿಮಾನಿಯಾದ ಲಕುಮೀ ದೇವಿಗೂ ಗೋಚರಿಸದಂತವನು.  ಆದರೆ ತನ್ನ ಸೇವಾಸಕ್ತರಾದ ಭಕ್ತಿಯಲ್ಲಿ ನಿರತರಾದ ಭಕ್ತರಿಗೆ ಅವರವರ ಯೋಗ್ಯತಾನುಸಾರ ವಶನಾಗುತ್ತಾನೆ.  ಧ್ರುವ – ಪ್ರಹ್ಲಾದರಿಗೆ ಒಲಿದಂಥವನು ನಮ್ಮಂತಹ ಪಾಮರರಿಗೂ ಒಲಿಯುತ್ತಾನೆ.  ದಾಸರು “ಗಿರಿರಾಜ ಗಿರಿರಾಜ “.. ಎಂಬ ತಮ್ಮ ಪದದಲ್ಲಿ ಪರಮಾತ್ಮನನ್ನು ಕರುಣಾಂಬುಧಿ, ಭಕ್ತ ಕುಟುಂಬಿ ಎಂದು ಕರೆಯುತ್ತಾರೆ ಮತ್ತು ಈ ಶಬ್ದಗಳು ಸುಳ್ಳಲ್ಲ ನಿಜ ಜಗನ್ನಾಥ ವಿಠಲ ಎಂದು ಹೇಳುತ್ತಾರೆ.

ವೇದಗಳಿಗೆ ’ವೇದ’ ಎಂಬ ಹೆಸರು ಬಂದಿರುವುದೇ ಅವು ಹರಿಯನ್ನು ತಿಳಿಸುವುದರಿಂದ.  ಪಂಚೇಂದ್ರಿಯಗಳಿಗೆ ಗೋಚರಿಸದ, ಊಹೆಗೂ ನಿಲುಕದ ಶ್ರೀಹರಿಯನ್ನು ವೇದಗಳು ತಿಳಿಸುವುವೇ ? ವೇದಕ್ಕೆ ಗೋಚರಿಸದವನು ಎಂಬ ಮಾತು ಇಲ್ಲಿ ಬಂದಾಗ ಹರಿಯ ಅನಂತಾನಂತ ಗುಣಗಳನ್ನು ಸಂಪೂರ್ಣವಾಗಿ ತಿಳಿಸಲು ವೇದಕ್ಕೆ ಕೂಡ ಸಾಮರ್ಥ್ಯವಿಲ್ಲವೆಂಬ ಅರ್ಥದಿಂದ ತೆಗೆದುಕೊಳ್ಳಬೇಕು.  ಇಂತಹ ಮಹತ್ ಐಶ್ವರ್ಯದಂತಹ ಅಖಿಳ ಸದ್ಗುಣಗಳಿಗೆ ಒಡೆಯನಾದ ಶ್ರೀಹರಿಯು ನಿರಂತರವಾಗಿ ತನ್ನ ಮಹಿಮೆಗಳನ್ನು ಶ್ರವಣ ಮಾಡುವ ಸದಾ ಧ್ಯಾನಿಸುವ ಭಕ್ತರು ಮಾಡುವ ’ಸಂಸ್ತುತಿ’ – ಭಕ್ತಿ ತುಂಬಿದ ಅಂತರಂಗದಿಂದ ಹರಿದು ಬಂದ ಉತ್ತಮವಾದ ಸ್ತುತಿಗೆ ವಶನಾಗಿಯೇ ಬಿಡುತ್ತಾನೆಂದರೆ ಅವನ ಕಾರುಣ್ಯದ ವ್ಯಾಪ್ತಿ ಅದೆಂತಹುದು ಎಂದು ದಾಸರಾಯರು ತಿಳಿಸುತ್ತಾರೆ.  ಸದಾ ತನ್ನ ಜೊತೆಯಲ್ಲೇ ಇರುವ ರಮಾದೇವಿಯ ಸ್ತುತಿಗಳಿಗೇ ಪರಿಪೂರ್ಣವಾಗಿ ಗೋಚರಿಸದೇ ಇರುವ ಭಗವಂತ ನಮ್ಮಂತಹ ಪಾಮರರು ಭಕ್ತಿಯಿಂದ, ಶ್ರದ್ಧೆಯಿಂದ, ಶರಣಾಗತರಾಗಿ ಸ್ತುತಿಸಿದಾಗ ಒಲಿದುಬಿಡುವನು, ಗೋಚರಿಸುವನು.

ಭಗವಂತ “ಅಪ್ರತಿಹತ” ,  ಅಂಭೋದಿ – ಸಾಗರದಂತೆ ಭಗವಂತನ ಗುಣಗಳು.  ಪೂರ್ಣವಾಗಿ ಅರಿಯುವುದು ಮಹಾಲಕ್ಷ್ಮಿಯಿಂದಲೇ ಸಾಧ್ಯವಾಗದುದು.   “ಮಹದೈಶ್ವರ್ಯ” ಎಂದರೆ ಇಲ್ಲಿ ನಿಯಾಮಕತ್ವ - ಬದಲಾವಣೆ ಯಾಗದಿರುವುದು ಎಂದು ಅರ್ಥೈಸಬಹುದು.  ಸತ್+ಚಿ(ಕ್ಷಿ)ತ್+ಆನಂದ+ಆತ್ಮ – ದೋಷಗಳೇ ಇಲ್ಲದ ಕ್ಷಿತ್ ಎಂದರೆ (ವಿ)ಜ್ಞಾನಮಯ, ಆನಂದ – ಸದಾ ಆನಂದಕರವಾಗಿರುವ, ಆತ್ಮ ನೆಂದರೆ ಸ್ವಾಮಿ.  ನಾವು ಸದಾಕಾಲವೂ ಭಗವಂತನ ಈ ಚತುರ್ಗುಣಗಳನ್ನೇ ಆರಾಧಿಸಬೇಕು.  ಜೀವನು ಮುಕ್ತಿಗೆ ತಲುಪಿದಾಗಲೂ ಕೂಡ ಜೀವಾತ್ಮ-ಪರಮಾತ್ಮನ ಸಂಬಂಧದಲ್ಲಿ ಯಾವ ಬದಲಾವಣೆಯೂ ಇಲ್ಲ.  ಆಗಲೂ, ಅಲ್ಲೂ ಭಗವಂತನೇ ಜೀವಾತ್ಮನಿಗೆ “ನಿಯಾಮಕ”.  ಅವನು ಬಿಂಬನಾಗಿ ಚಲಿಸಿದರೆ ಮಾತ್ರವೇ ಪ್ರತಿಬಿಂಬವಾದ ನಮ್ಮಲ್ಲಿ ಚಲನೆ ಬರುವುದು.  ಅಪ್ರತಿಹತ ಎಂದು ಭಗವಂತನ ಅನಂತ ಸದ್ಗುಣಗಳಿಗೂ, ಮಹದೈಶ್ವರ್ಯಕ್ಕೂ, ಎರಡಕ್ಕೂ ಹೋಲಿಸಬಹುದು.  ಸಾಗರಕ್ಕೂ ಮಿತಿಯೆಂಬುದಿದೆ, ಆದರೆ ಭಗವಂತನಿಗೆ ಮಿತಿಯೇ ಇಲ್ಲ.  ಅವನು ಅಮಿತ ಗುಣಸಾಗರನು.  ನಮ್ಮಂತಹ ಪಾಮರರ ಅರಿವಿಗೆ ಬರಲೆಂದು ಇದನ್ನು ಹೋಲಿಕೆಯಾಗಿ ತಿಳಿಸಿದ್ದಾರೆ ಎನ್ನಬಹುದು ಅಷ್ಟೇ.  ಇಂತಹ ಮಹೈಶ್ವರ್ಯಶಾಲಿಯಾದ ಭಗವಂತನನ್ನು ಭಕ್ತರು “ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ಎನ್ನುತ್ತಾ ಸುಲಭದ ಮುಕ್ತಿಗೆ ಸುಲಭನು ಶ್ರೀಹರಿ.. ಅಪಾರಮಹಿಮನ ಉಪಾಯದಿಂದಲಿ” ಸದಾ ನೆನೆಯುತ್ತಿರಲು ಕರುಣೆ ತೋರುವನು, ಒಲಿವನು ಎನ್ನುತ್ತಾರೆ ಶ್ರೀ ಪುರಂದರದಾಸರು.

ಭಾಗವತದಲ್ಲಿ ಸಕಲ ಶಾಸ್ತ್ರ-ಗ್ರಂಥಗಳನ್ನೂ ತಿಳಿದಿದ್ದ ಉದ್ಧವ.. ಶ್ರೀಕೃಷ್ಣನಲ್ಲಿ ತನಗೆ ಇನ್ನೊಂದು ಜನ್ಮವೆಂಬುದು ಇದ್ದರೆ ತನ್ನನ್ನು ಗೋಪಿಕೆಯರ ಪಾದಧೂಳಿ ತಗುಲುವ ’ಗರಿಕೆ’ ಹುಲ್ಲನ್ನಾಗಿಸು ಎಂದು ಕೇಳಿಕೊಳ್ಳುತ್ತಾನೆ.  ಇದು ಭಕ್ತಿಯ, ಭಗವಂತನಲ್ಲಿ ಶರಣಾಗತಿಯ ಪರಾಕಾಷ್ಠೆಯನ್ನು ಬಿಂಬಿಸುವುದು.

ಕರುಣಾಸಂಧಿಯನ್ನು ಜಗನ್ನಾಥ ದಾಸರು ರಚಿಸಿರುವುದೇ ಭಗವಂತ ಅಪಾರ ಕರುಣಾಮಯಿ, ಪಾಮರರು ಮಾಡುವ ಅಣುವಿನಷ್ಟು ಸಾಧನೆಯ ಪ್ರಯತ್ನವನ್ನೂ ಗುರುತಿಸುವನು ಮತ್ತು ತಕ್ಕ ಫಲವನ್ನು ಕೊಡುವನು ಎಂಬ ತತ್ವವನ್ನು ಸಾರುವ ಉದ್ದೇಶದಿಂದ.  ಜೀವಿಯು ಸಾಧನೆಯ ಸಂಕಲ್ಪ ಮಾಡಿದರೇ ಸಾಕು ಸಿಕ್ಕಬಹುದಾದ ಅತುಳೈಶ್ವರ್ಯದ ವಿಚಾರ ವಿವರಿಸಿ,  ಸರ್ವರನ್ನೂ ಸಾಧನೆಯ ಮಾರ್ಗದ ಕಡೆ ನಡೆಸುವ ಉಪಾಯ ದಾಸವರೇಣ್ಯರದು.

Thursday, April 19, 2012

ಕರುಣಾ ಸಂಧಿ - ೨ನೇ ಪದ್ಯ




 













ಮಳೆಯ ನೀರೋಣಿಯೊಳು ಪರಿಯಲು |
ಬಳಸರೂರೊಳಗಿದ್ದ ಜನರಾ |
ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು ||
ಕಲುಷ ವಚನಗಳಾದರಿಯ ಬಾಂ |
ಬೊಳೆಯ ಪೆತ್ತನ ಪಾದ ಮಹಿಮಾ |
ಜಲಧಿ ಪೊಕ್ಕುದರಿಂದ ಮಾಣ್ದಪರೇ ಮಹೀಸುರರು || ೨ ||

ಪ್ರತಿಪದಾರ್ಥ : ಮಳೆಯ ನೀರೋಣಿಯಲಿ ಪರಿಯಲು - ಮಳೆ ಸುರಿದು ನೀರು ಓಣಿ ಬೀದಿಗಳಲ್ಲಿ ಹರಿಯಲು, ಬಳಸರು ಊರೊಳಗಿದ್ದ ಜನರು - ಊರಿನಲ್ಲಿರುವ ಜನರು ಆ ನೀರನ್ನು ಯಾವುದಕ್ಕೂ ಉಪಯೋಗಿಸುವುದಿಲ್ಲ, ಆ ಜಲವು ಹೆದ್ದೊರೆಗೂಡೆ - ಅದೇ ನೀರು ಯಾವುದಾದರೂ ದೊಡ್ಡ ನದಿಯನ್ನು ಸೇರಿದಾಗ, ಮಜ್ಜನ ಪಾನ ಗೈದಪರು - ಸ್ನಾನ ಮತ್ತು ಪಾನಗಳಿಗೆ ಉಪಯೋಗುವರು, ಕಲುಷ ವಚನಗಳಾದರಿವು - ದೇವವಾಣಿಯಾದ ಸಂಸ್ಕೃತವಲ್ಲದೆ ಪ್ರಾಕೃತ ಭಾಷೆಯಲ್ಲಿದ್ದರೂ, ಬಾಂಬೊಳೆಯ ಪೆತ್ತನ - ಬಾನಿನ ಹೊಳೆ ಅಥವಾ ಗಂಗಾನದಿಯ ಜನಕನಾದ ಶ್ರೀಹರಿಯ, ಪಾದ ಮಹಿಮಾಜಲಧಿ - ತ್ರಿವಿಕ್ರಮ ಅವತಾರದಲ್ಲಿ ಭಗವಂತನ ಪಾದವೆಂಬ ಮಹಿಮಾ ಸಾಗರದಲ್ಲಿ, ಪೊಕ್ಕುದರಿಂದ - ಭಗವಂತನ ಪಾದ ತೊಳೆದು ಮಹಿಮೆಯೆಂಬ ಸಾಗರವನ್ನು ಸೇರಿರುವ ಈ ಪ್ರಾಕೃತಿಕ ಭಾಷೆಯ ಪದಗಳು ಸೇರಿರುವುದರಿಂದ, ಮಾಣ್ದಪರೆ - ಬಿಟ್ಟು ಬಿಡುವರೆ, ಮಹೀಸುರರು - ವೇದ ಶಾಸ್ತ್ರ ನಿಪುಣರಾದ ವಿಪ್ರೋತ್ತಮರು.


ಮಳೆಯ ನೀರು ಬೀದಿಯಲ್ಲಿ ಹರಿದಾಗ ಕೊಚ್ಚೆ ನೀರು ಎಂದೆನಿಸಿಕೊಳ್ಳುತ್ತದೆ.  ಅದೇ ನೀರು ದೊಡ್ಡದಾದ ಹಾಗೂ ಪವಿತ್ರವಾದ ನದಿಗಳನ್ನು ಸೇರಿದಾಗ, ಸೇರಿದ ನದಿಯ ಹೆಸರನ್ನೇ ಪಡೆದು ಸ್ನಾನ – ಪಾನಾದಿಗಳಿಗೆ ಬಳಸಲ್ಪಡುತ್ತದೆ.  ಇಲ್ಲಿ ದಾಸರು “ಹೆದ್ದೊರೆ” ಎಂಬ ಪದವನ್ನು ಉಪಯೋಗಿಸಿ ಕೃಷ್ಣಾ ನದಿಯನ್ನು ಕುರಿತು ಹೇಳುತ್ತಾರೆ.  “ಕೃಷ್ಣೆ”ಯನ್ನು ಹೆದ್ದೊರೆಯೆಂದು ಗ್ರಾಮ್ಯ ಭಾಷೆಯಲ್ಲಿ ಕರೆಯುತ್ತಾರೆ. ಹೇಗೆ ಮಳೆಯ ನೀರು ನದಿಯನ್ನು ಸೇರಿದಾಗ ನದಿಯೇ ಆಗತ್ತದೆಯೋ ಹಾಗೆ ಪರಮಾತ್ಮನ ಬಗ್ಗೆ ಬರೆದಾಗ ಪ್ರಾಕೃತಭಾಷೆಯೂ “ಸಂಸ್ಕೃತ”ದಷ್ಟೇ ಪವಿತ್ರವಾಗಿದೆ ಎಂಬುದು ಜಗನ್ನಾಥ ದಾಸರ ಭಾವ. ಆದ್ದರಿಂದ ಪ್ರಾಕೃತ ಭಾಷೆಯಾದ ಕನ್ನಡದಲ್ಲಿ ಪರಮಾತ್ಮನ ಬಗ್ಗೆ ಹೇಳುತ್ತಿರುವುದು ದೋಷವಲ್ಲ ಎಂದು ದಾಸರು ನಿರೂಪಿಸಿದ್ದಾರೆ.

ಪ್ರಾಚೀನರೂ ಹಾಗೂ ಋಷಿಮುನಿಗಳು ಭಗವಂತನ ಸರ್ವವ್ಯಾಪ್ತತೆಯನ್ನು ಗುರುತಿಸುವಂತಹ ಸೂಕ್ಷ್ಮ ಸಂವೇದನೆಯನ್ನು ಹೊಂದಿದ್ದು ಅವನ ವಿಶೇಷತೆಯನ್ನು ಆರಾಧಿಸುತ್ತಿದ್ದರು. ಸುಪ್ರಸಿದ್ಧವಾದ "ತ್ವಮೇವ ಮಾತಾ ಚ ಪಿತಾ ತ್ವಮೇವ" ಶ್ಲೋಕದಲ್ಲಿ ಕೂಡ ಭಗವಂತನಿಗೆ ಅಸಾಧಾರಣವಾದ ಪಿತೃತ್ವ, ಮಾತೃತ್ವ, ಬಂಧುತ್ವ, ಗುರುತ್ವ ಇತ್ಯಾದಿ ಸಕಲ ಬಾಂಧವ್ಯವನ್ನೂ ಜಗತ್ತಿನೊಡನೆ ವಿಧಿಸುವ, ಗುರುತಿಸುವ ದಿವ್ಯ ದೃಷ್ಟಿಯನ್ನು ಹೊಂದಿದ್ದರು.  ಮಳೆಗರೆಯುವ ಮೇಘದ ಪ್ರಾಕೃತಿಕ ವ್ಯಾಪಾರದಲ್ಲಿಯೂ ಋಷಿಗಳು ಭಗವಂತನನ್ನು ಕಂಡು ಧನ್ಯತೆಯನ್ನು ಅನುಭವಿಸುತ್ತಿದ್ದರು.  ನೀರನ್ನು ತುಂಬಿಕೊಂಡ ಮೇಘಗಳನ್ನು, ಗರ್ಭಧರಿಸುವ ತಾಯಿಯೆಂದೂ ಸೃಷ್ಟಿರೂಪದಲ್ಲಿ ಮಳೆಗರೆಯುವ ಪುರುಷರ ಕಾರ್ಯವನ್ನೂ (ರೇತೋ ವಿಸರ್ಜನ) ಮಾಡುವುದರಿಂದ ತಂದೆಯೆಂದೂ ಕರೆದು, ಭಗವಂತನ ಜೊತೆಗಿನ ಆಪ್ತತೆಯನ್ನು ಅನುಭೂತಿಸುತ್ತಿದ್ದರು. ಜೀವ ನಳನಳಿಸಲು ’ಜೀವನಾಡಿ”ಯಾಗುವ ನದಿಗಳನ್ನು ದೇವತೆಗಳೆ೦ದು ಪೂಜಿಸುತ್ತಿದ್ದರು. ಭಗವ೦ತ ತ್ರಿವಿಕ್ರಮಾವತಾರದಲ್ಲಿ   ತನ್ನ ಎರಡನೆಯ ಪಾದದಿ೦ದ ಅ೦ತರಿಕ್ಷವನ್ನು ಅಳೆಯುವಾಗ, ಎಡಪಾದದ ಉಗುರಿನ ಬಿರಿದ ಭಾಗದಿಂದ ಸ್ಫುರಿಸಿದವಳು ಗಂಗೆ. ಈ ವಿಷ್ಣುಪದಿಯನ್ನು ಬೊಗಸೆಯಲ್ಲಿ ಹಿಡಿದ ಬ್ರಹ್ಮದೇವನು ಶ್ರೀಹರಿಯ ಪಾದಗಳನ್ನು ತೊಳೆದನಾದ್ದರಿಂದ ಗಂಗೆ ಸಕಲರ ಪಾಪಗಳನ್ನೂ ತೊಳೆವ ಪುಣ್ಯವತಿಯೆಂದು ಪೂಜಿಸಲ್ಪಡುವಳು.

ಹೀಗೆ ಉದ್ಭವಿಸಿದ ಗಂಗೆಯನ್ನು ಶ್ರೀ ಶಂಕರಾಚಾರ್ಯರು ತಮ್ಮ “ಗಂಗಾಸ್ತೋತ್ರ”ದಲ್ಲಿ- 
ತವ ಜಲಮಮಲಂ ಯೇನ ನಿಪೀತಂ | ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತ: | ಕಿಲ ತಂ ದ್ರಷ್ಟುಂ ನ ಯಮ: ಶಕ್ತ: ||

ಓ ತಾಯೇ ಗಂಗೇ, ನಿನ್ನ ನಿರ್ಮಲ ಜಲವನ್ನು ಕುಡಿಯುವವನು ಪರಮಾತ್ಮನ ಪರಮಪದವನ್ನೇ ಪಡೆಯುವನಲ್ಲವೇ ? ಆ ಯಮನಂತೂ ನಿನ್ನ ಭಕ್ತನ ಕಡೆ ಕಣ್ಣೆತ್ತಿ ನೋಡಲೂ ಶಕ್ತನಲ್ಲ ಎಂದು ಸ್ತುತಿಸುತ್ತಾರೆ.  ಹೀಗೆ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಬರಿಯ ಶರೀರ ಮಾತ್ರವಲ್ಲಾ ಮನಸ್ಸೂ ಶುದ್ಧವಾಗುತ್ತದೆ ಎಂಬ ನಂಬಿಕೆಯಿದೆ.

“ಕಲುಷ ವಚನಗಳಾದರಿವು ಬಾಂ | ಬೊಳೆಯ ಪೆತ್ತನ ಪಾದ ಮಹಿಮಾ | ಜಲಧಿ ಪೊಕ್ಕುದರಿಂದ ಮಾಣ್ದಪರೇ ಮಹೀಸುರರು” || ವಿಷ್ಣು ಪಾದೋದ್ಭವಳಾದ ಗಂಗೆಗೇ ಇಷ್ಟು ಮಹಿಮೆ ಇರುವಾಗ ಶ್ರೀಹರಿಯ ಕಥೆಗಳನ್ನೂ, ಮಹಿಮೆಯನ್ನೂ, ಅಹಂಕಾರವನ್ನು ತೊರೆದು, ಅತಿ ಆದರದಿಂದ, ಭಕ್ತಿಯಿಂದ, ಭಗವಂತನ ಸೇವೆಯೆಂಬ ಭಾವದಿಂದ, ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದೇನಾದ್ದರಿಂದ ಇದು ಕೂಡ ಸಂಸ್ಕೃತದಷ್ಟೇ ಪವಿತ್ರವಾಗಿದೆ. ಸಂಸ್ಕೃ ಪದಗಳು ವಸ್ತುವಿನ ಗುಣ - ಅಭಿರುಚಿ - ಎಂದು ನಾನಾ ಮುಖಗಳನ್ನು ವಿವರಿಸುತ್ತೆ.  ಆದ್ದರಿಂದ ಅಂತಹ ಒಂದು ಸಮೃದ್ಧ ಭಾಷೆ ಬಿಟ್ಟು, ಕನ್ನಡದಲ್ಲಿ ರಚಿಸಿರುವ ಕೃತಿ ಕೂಡ ಶ್ರೀಹರಿಯ ಸ್ತುತಿಯನ್ನು ಮಾಡುವುದರಿಂದ ಸಂಸ್ಕೃತದಷ್ಟೇ ವಿಶೇಷತೆಯನ್ನು ಡೆದಿದೆ   ಎಂದು ಜಗನ್ನಾಥ ದಾಸರು ಈ ಪದ್ಯದಲ್ಲಿ ಹೇಳುತ್ತಾರೆ.

ಶ್ರೀ ವಿಷ್ಣು ಸಹಸ್ರನಾಮದ  ಫಲಶ್ರುತಿಯಲ್ಲಿ :
"ದ್ಯೌ: ಸ ಚಂದ್ರಾರ್ಕನಕ್ಷತ್ರಂ ಖಂ ದಿಶೋ ಭೂ: ಮಹೋದಧಿ: |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನ:" ||

ಪರಮಾತ್ಮನ ವೀರ್ಯದಿಂದಲೇ ಸಕಲ ಜಗತ್ತೂ ಭರಿಸಲ್ಪಟ್ಟು ನಿಂತಿದೆಯೆಂದೂ, ಹಾಗೂ  ಜಗತ್ತಿನ ಸೃಷ್ಟಿಗೂ, ಮೇಘಗರ್ಭದಲ್ಲಿರುವ ನೀರಿಗೂ ನಡುವೆ ಒಂದು ದಿವ್ಯ ಸಂಬಂಧವನ್ನು ವೇದ ಇಲ್ಲಿ ಎತ್ತಿ ಹಿಡಿದಿದೆ.  ಸೃಜನ ಕಾರ್ಯಕ್ಕೆ ಅವಶ್ಯವಾಗಿ ಬೇಕಾಗುವ ಮೂಲದ್ರವ್ಯ ಉದಕವೆಂದೂ, ಆಪವೆಂದೂ, ಸಲಿಲವೆಂದೂ, ವನವೆಂದೂ ಮುಂತಾಗಿ ಸುಮಾರು ನೂರಾ ಒಂದು ದಿವ್ಯ ಶಬ್ದಗಳಲ್ಲಿ ಕರೆದಿದೆ.  “ಘೃತಂ” ಎಂದು ಕೂಡ ಒಂದು ಹೆಸರಿದೆ ನೀರಿಗೆ.  ’ಘೃ’ ಧಾತುವು ಸೇಚನ ಮಾಡುವುದು, ಸಿಂಪಡಿಸುವುದು ಎಂಬ ಕ್ರಿಯಾರ್ಥವನ್ನು ಹೊಂದಿರುವುದರಿಂದ ಮೇಲಿನಿಂದ ಮಳೆಯ ರೂಪದಲ್ಲಿ ಚೆಲ್ಲಲ್ಪಡುವ ನೀರು ಎಂಬುದನ್ನು ಸೂಚಿಸುತ್ತದೆ.  ಇದೇ ಧಾತುವಿಗೆ ’ಬೆಳಗು’ ಎಂಬ ಅರ್ಥವಾದಾಗ ತನ್ನ ಕಾಂತಿಯಿಂದಲೇ ಬೆಳಗುವ ನೀರಿನ ದೀಪ್ತಿಯನ್ನು, ದೈವೀ ಶಕ್ತಿಯನ್ನು ಸೂಚಿಸುತ್ತದೆ.  ಹಾಗೇ ಇದೇ ಧಾತುವಿಗೆ ’ಗತಿ’ ಎಂಬರ್ಥವನ್ನು ಹೇಳಿದಾಗ ಮಳೆಯ ರೂಪದಲ್ಲಿಯೂ ಪರ್ವತದಲ್ಲಿಯೂ ಕೆಳಗೆ ಬೀಳುವ ನೀರು ಎಂದು ಸೂಚಿಸುತ್ತದೆ. “ಜೀವ  ನಳನಳಿಸಲು ’ಜೀವನಾಡಿ"ಯಾಗುವ ಜಲ, ಜೀವನದ ಕಡೆಯ ಪಯಣದಲ್ಲಿ – "ಗಂಗಾಜಲ" ವಾಗುತ್ತದೆ.   ಹೀಗೆ ನೀರು ನಮಗೆ ಅತಿ ಅವಶ್ಯಕವಾದ ವಸ್ತುವಾಗುತ್ತದೆ.

“ಮಳೆಯ ನೀರೋಣಿಯೊಳು ಪರಿಯಲು” – ಪವಿತ್ರವಾದ ಮಳೆಯ ನೀರು ಕೊಳಚೆ ತುಂಬಿದ ಓಣಿಯಲ್ಲಿ ಸುರಿದು ಹರಿಯುತ್ತದೆ.  ಸುರಿವ ಮಳೆಗೆ ಕೊಳಚೆ ಓಣಿ, ಶುದ್ಧವಾದ ಓಣಿ ಎಂಬ ತಾರತಮ್ಯವಿರುವುದಿಲ್ಲ.  ಎಲ್ಲಾ ಕಡೆಯೂ ಸುರಿದು ಹರಿಯುತ್ತದೆ.  ಆಗಲೂ ನೀರು ಪವಿತ್ರವಾಗಿಯೇ ಇದ್ದರೂ ಕೂಡ ಅದು ಅಪವಿತ್ರವೆನ್ನಲಾಗುತ್ತದೆ. ಉಪಯೋಗಕ್ಕೆ ಬಾರದಿರುತ್ತದೆ.

“ಬಳಸರೂರೊಳಗಿದ್ದ ಜನರಾ ಜಲವು ಹೆದ್ದೊರೆಗೂಡೆ ಮಜ್ಜನಪಾನ ಗೈದಪರು” – ಕೊಳಚೆ ಓಣಿಯಲ್ಲಿ ಸುರಿದು ಹರಿದರೂ ಕೂಡ ಕೊನೆಗೆ ಮಳೆಯ ನೀರು ಹಿರಿದಾದ ತೊರೆಯನ್ನೋ, ನದಿಯನ್ನೋ ಸೇರಿದಾಗ, ತಾನೂ ಅದೇ ತೊರೆ ಅಥವಾ ನದಿಯೆಂದು ಗುರುತಿಸಲ್ಪಡುತ್ತದೆ.  ಊರಿನ ಜನಗಳು ಅದು ಕೊಳಚೆ ಓಣಿಯಲ್ಲಿ ಹರಿದಾಗ ಉಪಯೋಗ ಪಡಿಸಿಕೊಳ್ಳದವರು, ನದಿಯನ್ನೋ, ತೊರೆಯನ್ನೋ ಸೇರಿದಾಗ, ಕುಡಿಯಲು, ಸ್ನಾನ ಮಾಡಲು ಉಪಯೋಗಿಸುತ್ತಾರೆ.

ಸಾಗರದ  ನೀರು ಸೂರ್ಯ ರಶ್ಮಿಯ ಮಿಲನದಿಂದ ಆವಿಯಾಗಿ, ಮೋಡದ ಗರ್ಭದಲ್ಲಿ ಹನಿಯಾಗಿ ಸೇರಿ  ಮತ್ತೆ ಭೂಮಿಗೆ ಸುರಿದಾಗ ಎಲ್ಲಾ ರೀತಿಯಲ್ಲೂ ಬಹು ಪವಿತ್ರ ಹಾಗೂ ಪಾವನವಾಗಿರುತ್ತದೆ. ಅದೇ ರೀತಿಯಲ್ಲಿ ಯಾವುದೇ ವಸ್ತುವಾದರೂ ಕೂಡ ಭಗವಂತನ ಸಾನ್ನಿಧ್ಯವಿಲ್ಲದೆ ಪವಿತ್ರವಾಗುವುದಿಲ್ಲ.  ವಿಷ್ಣುಪದಿಯಾದ ಗಂಗೆ “ಹರಿವ ಹರಿಯೇ” ಎನ್ನುವಷ್ಟು ಶ್ರೀಹರಿಯ ಸಾ೦ಗತ್ಯವನ್ನು ಹೊ೦ದಿದ೦ತೆ, ದಾಸರು ರಚಿಸಿರುವ ’ಹರಿಕಥಾಮೃತಸಾರ’ ಗ್ರಂಥವೂ ಕೂಡ ಶ್ರೀಹರಿಯ ಸ್ತುತಿರೂಪವಾಗಿದ್ದು, ಭಗವಂತನ ಮಹಾಸನ್ನಿಧಾನ ಇರುವುದರಿಂದಲೇ ಅದು ಪವಿತ್ರವೆನ್ನಿಸಿದೆ.  

ಮೇಘೋಚ್ಛಿಷ್ಟ ವರ್ಷಧಾರೆಯು ಇಳೆಯನೆಲ್ಲಾ ಆವರಿಸಿ ಕಡಲ ತಡಿಯಲಿ ಹರಿದು ಒಡಲು ಸೇರುವ೦ತೆ, ಜೀವಿಗಳೂ ಕೂಡ ಮಳೆಯ ನೀರಿನಂತೆಯೇ ಹುಟ್ಟು ಸಾವುಗಳ ಚಕ್ರದಲ್ಲಿ ಬಂಧಿತರಾಗಿದ್ದೇವೆ. ಸಾಗರದ ನೀರು ಹೇಗೆ ಆವಿಯಾಗಿ-ಮೋಡವಾಗಿ ಮತ್ತೆ ಮಳೆಹನಿಯಾದಾಗ ಶುದ್ಧ ಮತ್ತು ಪವಿತ್ರವಾಗಿರುತ್ತದೆಯೋ,  ಹಾಗೆಯೇ ನಾವು ನಮ್ಮ ಮನಸ್ಸನ್ನು ಭಗವಂತನ ಪರ ಚಿ೦ತನೆಯಲ್ಲಿ ತೊಡಗಿಸಿಕೊಂಡು, ಮಾಡುವ ಎಲ್ಲಾ ಕರ್ಮಗಳನ್ನೂ ಪ್ರತಿಫಲಾಫೇಕ್ಷೆಯಿಲ್ಲದೆ ಮಾಡುತ್ತಾ ಬಂದರೆ, ನಮ್ಮ ಮನಸ್ಸೂ ಕೂಡ ಪರಿಶುದ್ಧವಾಗುತ್ತಾ ಭಗವಂತನಲ್ಲಿ ನೆಲೆ ಗಾಣುತ್ತದೆ.  ಸಾಗರದ ಗರ್ಭದಲ್ಲಿ ತಿಮಿಂಗಿಲಗಳೂ ಇವೆ, ಸುಂದರ ಮತ್ಸ್ಯಗಳೂ ಇವೆ ಮತ್ತು ಬೆಲೆಬಾಳುವ ಮುತ್ತು ರತ್ನಗಳೂ ಅಡಗಿವೆ.  ನಮ್ಮ ಹುಡುಕಾಟ ಮುತ್ತು ರತ್ನಗಳೆಂಬ ಬೆಲೆಬಾಳುವ ಭಗವಂತನ ಚಿಂತನೆಗಳಾಗಿರಬೇಕೆ ಹೊರತೂ, ವಿಷಯಾಸಕ್ತಿಗಳೆಂಬ ತಿಮಿಂಗಿಲಗಳಾಗಿರಬಾರದು ಎ೦ಬುದು ದಾಸರ ಚಿ೦ತನೆಯಾಗಿದೆ.

ಚಿತ್ರಕೃಪೆ : ಅಂತರ್ಜಾಲ 
ಆಧಾರ ಗ್ರಂಥ : "ವೇದ ಸಂಸ್ಕೃತಿಯ ಪರಿಚಯ"   ಡಾ|| ಕೆ ಎಸ್ ನಾರಾಯಣಾಚರ್ಯ

Saturday, March 31, 2012

ಕರುಣಾ ಸಂಧಿ - ೧ನೇ ಪದ್ಯ
















ಶ್ರವಣ ಮನಕಾನಂದವೀವುದು
ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು |
ಭುವನಪಾವನವೆನಿಪ ಲಕುಮೀ
ಧವನ ಮಂಗಳ ಕಥೆಯ ಪರಮೋ
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ  ||೧||

ಮ೦ಗಳಾಚರಣದಲ್ಲಿ ಪರಮಾತ್ಮನಿ೦ದ ಮೊದಲುಗೊ೦ಡುಸಕಲ ಪರಿವಾರವನ್ನು ವ೦ದಿಸಿದ ಜಗನ್ನಾಥ ದಾಸರು,ಕರುಣಾಸ೦ಧಿಯಲ್ಲಿ ಪರಮಾತ್ಮನ ಕರುಣಾತಿಶಯವನ್ನುಆಲಿಸಿದಲ್ಲಿ ಆಗತಕ್ಕ ಫಲವನ್ನು ವಿಶ್ಲೇಷಿಸುತ್ತಾರೆ.  

ಪ್ರತಿಪದಾರ್ಥ : ಶ್ರವಣ ಮನಕಾನಂದವೀವುದು - ಶ್ರೀಹರಿಯ ಕಥಾ ಶ್ರವಣವು ಮನಸ್ಸಿಗೆ ಆನಂದವನ್ನು ಕೊಡುವುದು, ಭವಜನಿತ - ಸಂಸಾರದಿಂದ ಹುಟ್ಟುವಂಥಹ, ದುಃಖಗಳ ಕಳೆವುದು - ಸಂಸಾರದ ತಾಪತ್ರಯಗಳನ್ನು ನಾಶಮಾಡುವುದು, ವಿವಿಧ ಭೋಗಗಳಿಹಪರಂಗಳಲಿತ್ತು - ಬಹು ಪರಿಯಾದ ಸುಖಗಳನ್ನೂ/ಭೋಗಗಳನ್ನೂ ಇಹದಲ್ಲಿಯೂ ಪರದಲ್ಲಿಯೂ ಕೊಡುವುದು, ಸಲಹುವುದು - ಕಾಪಾಡುವುದು, ಭುವನಪಾವನನೆನಿಪ - ಲೋಕ ಪಾವನನೆನಿಸುವ, ಲಕುಮೀಧವನ - ಮಹಾಲಕ್ಷಿಯ ಪತಿಯಾದ ಶ್ರೀಹರಿಯ, ಮಂಗಳ ಕಥೆಯ - ಭಗವಂತನ ಗುಣಗಾನ, ಮಂಗಳಕರವಾಗಿರುವ ಕಥೆ, ಪರಮೋತ್ಸವದಿ - ಅತಿ ಸಂತೋಷದಿಂದ, ಕಿವಿಗೊಟ್ಟಾಲಿಪುದು - ಶ್ರದ್ಧೆ ಹಾಗೂ ಭಕ್ತಿಯಿಂದ ಕಿವಿಯಗಲಿಸಿ ಕೇಳುವುದು, ಭೂಸುರರು - ಬ್ರಾಹ್ಮಣರು ಹಾಗೂ ಜ್ಞಾನಿಗಳು, ದಿನದಿನದಿ - ಅನವರತವೂ.

ಶ್ರವಣ” ವೆನ್ನುವುದು ನವವಿಧ ಭಕ್ತಿಗಳಲ್ಲಿ ಮೊದಲನೆಯದು.  ಭಕ್ತಿಯ ಮೊದಲನೆಯ ಮೆಟ್ಟಿಲು.  ಭಗವಂತನ ಅರಿವು ತಿಳಿಯುವ ಪ್ರಯತ್ನಕ್ಕೆ ಮೊದಲ ಸೋಪಾನ.  ವಿಷ್ಣು ಸಹಸ್ರನಾಮ ಅರ್ಥ ವಿವರಣೆಯ ಮೊದಲು ಕೂಡ ನವವಿಧ ಭಕ್ತಿಯ ವಿವರ ತಿಳಿಸುತ್ತಾರೆ.  ಶ್ರವಣವೆಂದರೆ ಮಹಾವಿಷ್ಣುವಿನ ಮಹಿಮೆಯನ್ನು ಕೇಳುವುದು ಎಂದರ್ಥ.  ಮಹರ್ಷಿ ಯಾಜ್ಞವಲ್ಕ್ಯರು ಮೈತ್ರೇಯಿಯನ್ನು ಕುರಿತು “ಶ್ರೋತವ್ಯೋ ಮನ್ತವ್ಯೋ ನಿದಿಧ್ಯಾಸಿತವ್ಯ:” (ಬೃಹದಾರಣ್ಯಕ ಉಪನಿಷತ್ತು) ಎಂದರೆ ಪರಮಾತ್ಮನ ವಿಚಾರವನ್ನೇ ಕೇಳಬೇಕು, ಮನನ ಮಾಡಬೇಕು ಮತ್ತು ಆ ಪರಮಾತ್ಮನ ತತ್ತ್ವದಲ್ಲಿ ದೃಢವಾಗಿ ನೆಲೆ ನಿಂತುಬಿಡಬೇಕು ಎನ್ನುತ್ತಾರೆ.  ಭಗವದ್ಗೀತೆಯನ್ನು  ಅರ್ಜುನ ಶ್ರವಣ ಮಾಡಿದ್ದರಿಂದಲೇ ಅವನಿಗೆ ಕವಿದಿದ್ದ ಮೋಹ ಕಳೆಯಿತು.  ಹೀಗೆ ಶ್ರವಣದ ಮಹತ್ವ ಸಾರುವ ಅನೇಕ ಕಥೆಗಳು ನಮಗೆ ನಮ್ಮ ಪುರಾಣಗಳಲ್ಲಿ ಸಿಕ್ಕುತ್ತವೆ.  ಶ್ರವಣವೆಂದರೆ ಕಿವಿಯೆಂದೂ, ಕೇಳುವುದೆಂದೂ ಎರಡೂ ಅರ್ಥವಾಗುತ್ತದೆ.  ಏನನ್ನು ಕೇಳಬೇಕೆಂದರೆ ಶ್ರೀಹರಿಯ ಕಥೆಗಳನ್ನು ಆಲಿಸಬೇಕು.  ಏಕೆಂದರೆ ಶ್ರೀಹರಿಯು “ಶ್ರವಣ ಮಂಗಲಧಾಮನು” – ಶ್ರೀಹರಿ ತಾನೇ ಮಂಗಲಧಾಮನಾಗಿರುವುದರಿಂದ ಹರಿಕಥೆ ಶ್ರವಣ ಮಾಡುವ ಭಕ್ತರಿಗೆ ರಕ್ಷಣೆ, ಆಶ್ರಯ ಕೊಟ್ಟು ಕಾಪಾಡುತ್ತಾನೆಂಬ ನಂಬಿಕೆ.     ಭಾಗವತದ ದಶಮಸ್ಕಂದದಲ್ಲಿ 

೧)  ವಾಸುದೇವಕಥಾಪ್ರಶ್ನ: ಪುರುಷಾಂಸ್ತ್ರೀನ್ಪುನಾತಿ ಹಿ |
     ವಕ್ತಾರಂ ಪೃಚ್ಛಕಂ ಶ್ರೋತೄಂಸ್ತತ್ಪಾದಸಲಿಲಂ ಯಥಾ ||

ವಿಷ್ಣುಪಾದೋದ್ಭವಳಾದ ಗಂಗಾದೇವಿಯ ಪವಿತ್ರ ತೀರ್ಥವು ಸ್ವರ್ಗ-ಮರ್ತ್ಯ-ಪಾತಾಳಗಳೆಂಬ ಮೂರೂ ಲೋಕಗಳನ್ನೂ ಪಾವನಗೊಳಿಸುವಂತೆ ವಾಸುದೇವನ ಕಥೆಗಳನ್ನು ಕೇಳುವವರು, ಪ್ರವಚನ ಮಾಡುವವರು, ಕಥೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡುವವರ ಜನ್ಮಗಳು ಸಾರ್ಥಕಗೊಳ್ಳುವುವು.

೨)  ತವ ಕಥಾಮೃತಂ ತಪ್ತಜೀವನಂ | ಕವಿಭಿರೀಡಿತಂ ಕಲ್ಮಷಾಪಹಮ್ |
     ಶ್ರವಣಮಂಗಲಂ ಶ್ರೀಮದಾತತಂ | ಭುವಿ ಗೃಣನ್ತಿ ತೇ ಭೂರಿದಾ ಜನಾ: ||
ಎಂದು ಭಾಗವತದ ಗೋಪೀಗೀತದಲ್ಲಿ ಶ್ರವಣದ ಮಹತ್ವ ಹೇಳುತ್ತಾರೆ.  ಪ್ರಭುವೇ ನಿನ್ನ ಕಥಾಪ್ರಸಂಗಗಳು ಅಮೃತ ಸ್ವರೂಪಗಳು, ಅವುಗಳ ಶ್ರವಣ ಮಾತ್ರದಿಂದಲೇ ನಮ್ಮೆಲ್ಲಾ ಪಾಪವು ಪರಿಹಾರವಾಗುವುದು, ಸುಖ ಸಂಪತ್ತುಗಳು ಪ್ರಾಪ್ತವಾಗುವುವು ಮತ್ತು ಈ ಜನ್ಮದಲ್ಲಿ ನಿನ್ನ ಮಂಗಳಕರವಾದ ಕಥೆಗಳನ್ನು ಕೇಳಿ ಅಮೃತವನ್ನು ಯಾರು ಸವಿಯುವರೋ ಅವರು ತಮ್ಮ ಪೂರ್ವಜನ್ಮದ ಪುಣ್ಯ ಫಲದಿಂದಲೇ ನಿನ್ನ ಕಥೆ ಆಲಿಸುವುದಕ್ಕೆ ಅರ್ಹರಾಗಿರುತ್ತಾರೆ.  ಆದ್ದರಿಂದ ನಿನ್ನ ಅಭೂತಪೂರ್ವ ಲೀಲೆಗಳನ್ನು ಕೇಳಿ ಆನಂದಿಸುವ ಸುಖ ನಮಗೆ ನಿರಂತರ ಪ್ರಾಪ್ತವಾಗಲಿ ಎಂದು ಹೇಳಿದ್ದಾರೆ.

ಶ್ರೀ ವಿಜಯದಾಸರು ತಮ್ಮ ಒಂದು ವಾಯುದೇವರ ಕುರಿತ ಪದದಲ್ಲಿ
“ಪವಮಾನ ಜಗದ ಪ್ರಾಣ ಸಂಕರುಷಣ | ಭವಭಯಾರಣ್ಯದಹನ ||

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ” ಎಂದು ಪ್ರಾರ್ಥಿಸುತ್ತಾರೆ.
“ಶ್ರವಣ ಮನಕಾನಂದವೀವುದು” ಎಂದಾಗ ಇಲ್ಲಿ ಬರಿಯ ಕಥೆ ಎಂಬ ಅರ್ಥವಾಗುವುದಿಲ್ಲ. ಶ್ರೀಹರಿಯ ಗುಣ ನಾಮ ಕೀರ್ತನಗಳ ಪರವಾದ ವೇದ, ಉಪನಿಷತ್ತುಗಳು, ಪುರಾಣಗಳು, ತರ್ಕಗ್ರಂಥಗಳು, ಕಾವ್ಯಾಲಂಕಾರನಾಟಕಗಳು ಎಲ್ಲವೂ ಆಗುತ್ತವೆ.  ಭಾಗವತದಲ್ಲಿ

ಶೃಣ್ವತಾಂ ಸ್ವಕಥಾಂ ಕೃಷ್ಣ: ಪುಣ್ಯಶ್ರವಣಕೀರ್ತನ: |
ಹೃದ್ಯಂತಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್ ||

ಎಲ್ಲವೂ ಮಂಗಳಕರವಾದ ಕಥೆಗಳೇ, ಬೆಳಿಗ್ಗೆ ಎದ್ದ ಕೂಡಲೆ ಮಂಗಳಕರವಾದವುಗಳನ್ನು ಶ್ರವಣ ಮಾಡುವುದರಿಂದ, ಭಗವಂತ ನಮ್ಮ ಶ್ರವಣೇಂದ್ರಿಯಗಳ ಮೂಲಕ ನಮ್ಮ ಹೃದಯದಲ್ಲಿ ಬಂದು ನೆಲೆಸುತ್ತಾನೆ ಮತ್ತು ನಮ್ಮಲ್ಲಿರುವ ಎಲ್ಲಾ ಕಶ್ಮಲಗಳನ್ನೂ ತೊಳೆದು ಬಿಡುತ್ತಾನೆ ಎನ್ನುತ್ತಾರೆ.  ಸದಾ ಮಂಗಳಕರವಾದ ವಾಸುದೇವನ ಕಥೆಗಳನ್ನು ಕೇಳುತ್ತಿದ್ದರೆ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ, ಆನಂದವನ್ನು ಅನುಭೂತಿಸುತ್ತಿರುತ್ತದೆ.  ಹೀಗೆ ನಿರಂತರ ಆನಂದದಲ್ಲಿ ಮನಸ್ಸು ತೇಲಾಡಿದಾಗ, ಅದು ನಿಧಾನವಾಗಿ ನಮ್ಮ ಹೃದಯದಲ್ಲಿ ಗಟ್ಟಿಯಾಗಿ ನೆಲೆಯೂರಿ ಅದೇ ಧ್ಯಾನವಾಗಿ ಪರಿವರ್ತನೆಯಾಗಿ ಬಿಡುತ್ತದೆ.  ಈ ಧ್ಯಾನದ ಆನಂದ ಮೋಕ್ಷಾನಂದಕ್ಕಿಂತಲೂ ಮಿಗಿಲಾಗಿರುತ್ತದೆ. 

“ಭವಜನಿತ ದು:ಖಗಳ ಕಳೆವುದು “ – ಭಾಗವತದಲ್ಲಿ “ಭವೌಷಧಾತ್” ಎಂದಂತೆ ನಮ್ಮ ಎಲ್ಲಾ ದು:ಖಗಳ ಪರಿಹಾರಕ್ಕೂ ಒಂದೇ ಔಷಧಿ ಹರಿಕಥಾಮೃತಸಾರ.  ದು:ಖ ನಿಜವಾಗಿಯೂ ವಿಷಯ ಪದಾರ್ಥದಲ್ಲಿಲ್ಲ, ಅದನ್ನು ನೋಡುವ ಕಣ್ಣು ಮತ್ತು ಆಲೋಚಿಸುವ ಮನಸ್ಸಿನಲ್ಲಿರುತ್ತದೆ.  ಯಾವಾಗ ನಮ್ಮ ಮನಸ್ಸು ಸದಾ ಶ್ರೀಹರಿಯ ಧ್ಯಾನದಲ್ಲಿ ತೊಡಗಿರುವುದೋ ಆಗ ಅಲ್ಲಿ ನಮಗೆ ಭಗವಂತನ ಕರುಣೆ, ಅವನ ಸೃಷ್ಟಿಯಲ್ಲಿನ ಸಂತೋಷ, ಉಲ್ಲಾಸಗಳು ಕಾಣ ಸಿಕ್ಕುತ್ತವೆ.  ನಮ್ಮ ಭವದ ದು:ಖಗಳು ನಮ್ಮನ್ನು ಬಾಧಿಸುವುದೇ ಇಲ್ಲ. 

“ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು” – ನಿರಂತರವಾಗಿ ಕರ್ಮಗಳನ್ನು ಮಾಡುತ್ತಲೇ ಇರುವ ನಾವು ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಪಡೆಯಬೇಕು ಎಂದರೆ ಸದಾ ಸತ್ಕರ್ಮಗಳನ್ನು ಮಾಡುತ್ತಾ ಭಗವಂತನ್ನು ಒಲಿಸಿಕೊಳ್ಳಬೇಕು.  ಹೀಗೆ ಮಾಡಲು ನಮಗೆ ಇಂದ್ರಿಯಗಳು ಬೇಕು, ಅವುಗಳ ಸದುಪಯೋಗ ನಮಗೆ ಇಹದಲ್ಲೂ, ಪರದಲ್ಲೂ ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ಭೋಗಗಳನ್ನು ನೀಡುವುದು. ಇಹಲೋಕದಲ್ಲಿ  ವಿವಿಧ  ಭೋಗಗಳು  ಎ೦ದಾಗ ಲೌಕಿಕ  ಭೋಗಗಳು  ಎ೦ದು ಅರ್ಥವಲ್ಲ,  ಅಹ೦ ಮತ್ತು ಮಮತಾದಿಗಳಿ೦ದ  ರಹಿತರನ್ನಾಗಿ  ಮಾಡಿ ಶ್ರೀಹರಿಯ ಭಕ್ತಿಯಲ್ಲಿ ಮನಸ್ಸನ್ನು ಕೊಟ್ಟು,  ವಿಷಯಗಳಲ್ಲಿ ವೈರಾಗ್ಯವನ್ನು ಮೂಡಿಸುವುದರ ಮೂಲಕ ಜೀವಕ್ಕೆ ಒ೦ದು ದಿವ್ಯಸ್ಥಾನವನ್ನು ಕರುಣಿಸುವುದು ಎ೦ದು ಜಗನ್ನಾಥ ದಾಸರು ವಿಶ್ಲೇಷಿಸುತ್ತಾರೆ.  ಶ್ರೀಹರಿಯ ಕಥೆಗಳ ಶ್ರವಣ ಮಾತ್ರದಿಂದಲೇ ಇದು ಸಾಧ್ಯವೆಂದು  ವಿವರಿಸಿದ್ದಾರೆ.

  ಗ್ರ೦ಥವನ್ನು ಸ೦ಪೂರ್ಣವಾಗಿ ಆಲಿಸುವುದರಿ೦ದ ಮನಸ್ಸಿಗೆ  ಆನ೦ದವನ್ನು  ನೀಡುವುದರ  ಜೊತೆಗೆ  ಸ೦ಸಾರಕ್ಕೆ ಕಾರಣವಾದ ಲಿ೦ಗ ದೇಹದಿ೦ದ ಉತ್ಪನ್ನಗಳಾದ  ಜನನ, ಮರಣಾದಿ  ದು:ಖಗಳು  ಪರಿಹರಿಸಲ್ಪಡುತ್ತವೆ.  ಲಿ೦ಗದೇಹ ಇರುವವರೆಗೂ ಎ೦ದರೆ, ಕರ್ಮ  ಬ೦ಧನದಲ್ಲಿ ಸಿಲುಕಿರುವವರೆಗೂ  ಜೀವನ  ಚಕ್ರಗಳಿ೦ದ  ಮುಕ್ತರಾಗದೇ ಇರುವ  ಸ೦ಧರ್ಭದಲ್ಲಿ,  ಇಹದಲ್ಲಿ  ಸ೦ಸಾರ  ದು:ಖವನ್ನು ಪರಿಹಾರ  ಮಾಡುತ್ತದೆ.   ನಾನಾ ವಿಧವಾದ ಸುಖ ಭೋಗಗಳನ್ನು  ಭೂಲೋಕದಲ್ಲಿ, ನ೦ತರ  ಸ್ವರ್ಗಾದಿ ಮೊದಲಾದ ಲೋಕಗಳಲ್ಲೂ ಕೊಟ್ಟು ಸ೦ರಕ್ಷಣೆ ಮಾಡುತ್ತದೆ.  ನ೦ತರದಲ್ಲಿ ಜೀವನ್ಮುಕ್ತರನ್ನಾಗಿ ಮಾಡಿ,    ಲಿ೦ಗ - ಭ೦ಗವನ್ನು  ಐದಿಸಿ,  ಸ್ವರೂಪಾನ೦ದವನ್ನು  ಅಭಿವ್ಯಕ್ತಿ ಮಾಡಿಸಿ,  ರಕ್ಷಿಸುತ್ತದೆ ಎ೦ದು  ದಾಸರು ತಿಳಿಸುತ್ತಾರೆ.  ಆದ್ದರಿ೦ದ  ಹದಿನಾಲ್ಕು  ಲೋಕಗಳ ಭಕ್ತ  ಜೀವರನ್ನು  ಪವಿತ್ರ ಮಾಡತಕ್ಕ,  ಲಕ್ಶ್ಮೀಪತಿಯಾದ ಶ್ರೀಮನ್ನಾರಾಯಣನ  ಶುಭಕರ  ಚರಿತ್ರೆಯನ್ನು ಅತ್ಯ೦ತ ಮನೋಲ್ಲಾಸದಿ೦ದ,  ಅನ್ಯವಾರ್ತೆಗೆ  ಶ್ರವಣೇ೦ದ್ರಿಯವು  ಹೋಗದ೦ತೆ ಹರಿಕಥೆಗೆ  ದತ್ತ  ಮಾಡಿ ಶ್ರದ್ಧೆಯಿ೦ದ  ಕೇಳುವುದು  ಎ೦ದು  ತಿಳಿಸುತ್ತಾರೆ.

“ಕಥಾಶ್ರವಣ ಮಾಡೋ, ಹರಿಕಥಾ ಶ್ರವಣ ಮಾಡೋ.. ಪಥಾ ವೈಕುಂಠಕಿದು ನೋಡೋ”.. ಎಂದು ವಿಜಯದಾಸರೆಂದರೆ, "ಕಾಲಕಾಲಕ್ಕೆ ಹರಿಕಥಾ  ಶ್ರವಣ  ಗುರುಗಳ  ಮುಖದಿ೦ದ ಕೇಳಿದ್ದೇ  ಕೇಳುತ್ತಾ,  ಹಾಡುತ್ತಾ ಪಾಡುತ್ತಾ, ಮನನ ಮಾಡುತ್ತಾ ಧ್ಯಾನವನ್ನು ಮಾಡುವುದು" ಎ೦ಬುದು ಗೋಪಾಲದಾಸರ ಉಕ್ತಿ.  ಇನ್ನು ಕನಕದಾಸರು "ಹರಿಕಥಾ ಶ್ರವಣವೇ  ಮುಕ್ತಿಗೆ ಮೊದ ಪಾವಟಿಗೆ" ಎ೦ದು  ತಮ್ಮ ಹರಿಭಕ್ತಿಸಾರದಲ್ಲಿ ದಾಖಲಿಸಿದ್ದಾರೆ  ಹೀಗೆ ಶ್ರೀಹರಿಯ ಕಥೆಗಳನ್ನು ಪರಮ ಉತ್ಸಾಹದಿಂದ ಭಜಿಸುವುದರಿಂದಲೂ, ಕಿವಿಗೊಟ್ಟು ಆಲಿಸುವುದರಿಂದಲೂ ಕಷ್ಟ ಪರಿಹಾರ – ಇಷ್ಟ ಪ್ರಾಪ್ತಿಯಾಗುತ್ತದೆ, ಅರಿತು ಪೂಜಿಸುವವರನ್ನು ದುಃಖದಿಂದ ದೂರೈಸಿ ಸುಖಗಳನ್ನಿತ್ತು ಜಗನ್ನಾಥ ವಿಠಲ ಒಲಿದು ಕಾಪಾಡುವ  ಎನ್ನುತ್ತಾ  “ಭುವನ ಪಾವನನಾದ ಪರಮಾತ್ಮನ  ಕರುಣೆ”ಯ  ಬಗ್ಗೆ ತಿಳಿಸಿದ್ದಾರೆ.




ಚಿತ್ರಕೃಪೆ : ಅಂತರ್ಜಾಲ