ಶ್ರುತಿ ತತಿಗಳಭಿಮಾನಿ ಲಕ್ಶ್ಮೀ |
ಸ್ತುತಿಗಳಿಗೆ ಗೋಚರಿಸದಪ್ರತಿ |
ಹತ ಮಹೈಶ್ವರ್ಯಾದ್ಯಖಿಲ ಸದ್ಗುಣಗಳಾಂಭೋದಿ ||
ಪ್ರತಿದಿವಸ ತನ್ನಂಘ್ರಿ ಸೇವಾ |
ರತ ಮಹಾತ್ಮರು ಮಾಡುತಿಹ ಸಂ |
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ || ೩ ||
ಪ್ರತಿಪದಾರ್ಥ
: ಶ್ರುತಿ ತತಿಗಳಿಗಭಿಮಾನಿ - ವೇದ ಸಮೂಹಗಳಿಗೆ ಅಭಿಮಾನಿಯಾದ, ಲಕುಮಿಸ್ತುತಿಗಳಿಗೆ -
ಲಕ್ಷ್ಮೀದೇವಿಯು ಮಾಡುವ ಸ್ತೋತ್ರಗಳಿಗೂ ಸ್ತುತಿಗಳಿಗೂ, ಗೋಚರಿಸದ - ನಿಲುಕದ,
ಅಪ್ರತಿಹತ - ನಾಶರಹಿತನಾದ, ಮಹೈಶ್ವರ್ಯಾದಿ - ಅಪರಿಮಿತ ಐಶ್ವರ್ಯಗಳಿಗೆ, ಅಖಿಳ
ಸದ್ಗುಣಗಣಾಂಭೋಧಿ - ಸಮಸ್ತ ಸುಗುಣಗಳ ಸಾಗರನಾಗಿರುವನು, ಪ್ರತಿದಿವಸ - ದಿನದಿನವೂ
ಅನವರತ, ತನ್ನಂಘ್ರಿಸೇವಾರತ - ಚರಣ ಸೇವೆಯಲ್ಲಿ ನಿರತರಾಗಿರುವ, ಮಹಾತ್ಮರು - ನಿಷ್ಕಲ್ಮಶ
ಮನಸ್ಸುಳ್ಳ ಭಕ್ತರು, ಮಾಡುತಿಹ ಸಂಸ್ತುತಿಗೆ - ಮಾಡುವ ಭಕ್ತಿಯ ಸ್ತೋತ್ರಗಳಿಗೆ,
ವಶನಾಗುವನು - ಒಲಿಯುವನು, ಇವನ ಕಾರುಣ್ಯಕೇನೆಂಬೆ - ಇಂತಹ ಅಂತಃಕರಣವುಳ್ಳ ಭಗವಂತನಿಗೆ
ಏನೆಂದು ಹೇಳಲಿ.
ಈ ಪದ್ಯದಲ್ಲಿ ಪರಮಾತ್ಮನ ಕಾರುಣ್ಯದ ಬಗ್ಗೆ ವಿವರಿಸುತ್ತಾರೆ
ದಾಸರು. ತಡೆಯಿಲ್ಲದ ಮಹದೈಶ್ವರ್ಯ ಉಳ್ಳವನು. ಸದ್ಗುಣಗಳ ಆಗರ.
ಇಂಥಹ ಪರಮಾತ್ಮ ಶ್ರುತಿ ತತಿಗಳಿಗೆ ಅಭಿಮಾನಿಯಾದ ಲಕುಮೀ ದೇವಿಗೂ ಗೋಚರಿಸದಂತವನು. ಆದರೆ ತನ್ನ ಸೇವಾಸಕ್ತರಾದ ಭಕ್ತಿಯಲ್ಲಿ ನಿರತರಾದ ಭಕ್ತರಿಗೆ
ಅವರವರ ಯೋಗ್ಯತಾನುಸಾರ ವಶನಾಗುತ್ತಾನೆ. ಧ್ರುವ –
ಪ್ರಹ್ಲಾದರಿಗೆ ಒಲಿದಂಥವನು ನಮ್ಮಂತಹ ಪಾಮರರಿಗೂ ಒಲಿಯುತ್ತಾನೆ. ದಾಸರು “ಗಿರಿರಾಜ ಗಿರಿರಾಜ “.. ಎಂಬ ತಮ್ಮ ಪದದಲ್ಲಿ ಪರಮಾತ್ಮನನ್ನು
ಕರುಣಾಂಬುಧಿ, ಭಕ್ತ ಕುಟುಂಬಿ ಎಂದು ಕರೆಯುತ್ತಾರೆ ಮತ್ತು ಈ ಶಬ್ದಗಳು ಸುಳ್ಳಲ್ಲ ನಿಜ ಜಗನ್ನಾಥ ವಿಠಲ
ಎಂದು ಹೇಳುತ್ತಾರೆ.
ವೇದಗಳಿಗೆ ’ವೇದ’ ಎಂಬ ಹೆಸರು ಬಂದಿರುವುದೇ ಅವು ಹರಿಯನ್ನು
ತಿಳಿಸುವುದರಿಂದ. ಪಂಚೇಂದ್ರಿಯಗಳಿಗೆ ಗೋಚರಿಸದ, ಊಹೆಗೂ
ನಿಲುಕದ ಶ್ರೀಹರಿಯನ್ನು ವೇದಗಳು ತಿಳಿಸುವುವೇ ? ವೇದಕ್ಕೆ ಗೋಚರಿಸದವನು ಎಂಬ ಮಾತು ಇಲ್ಲಿ ಬಂದಾಗ
ಹರಿಯ ಅನಂತಾನಂತ ಗುಣಗಳನ್ನು ಸಂಪೂರ್ಣವಾಗಿ ತಿಳಿಸಲು ವೇದಕ್ಕೆ ಕೂಡ ಸಾಮರ್ಥ್ಯವಿಲ್ಲವೆಂಬ ಅರ್ಥದಿಂದ
ತೆಗೆದುಕೊಳ್ಳಬೇಕು. ಇಂತಹ ಮಹತ್ ಐಶ್ವರ್ಯದಂತಹ ಅಖಿಳ
ಸದ್ಗುಣಗಳಿಗೆ ಒಡೆಯನಾದ ಶ್ರೀಹರಿಯು ನಿರಂತರವಾಗಿ ತನ್ನ ಮಹಿಮೆಗಳನ್ನು ಶ್ರವಣ ಮಾಡುವ ಸದಾ ಧ್ಯಾನಿಸುವ
ಭಕ್ತರು ಮಾಡುವ ’ಸಂಸ್ತುತಿ’ – ಭಕ್ತಿ ತುಂಬಿದ ಅಂತರಂಗದಿಂದ ಹರಿದು ಬಂದ ಉತ್ತಮವಾದ ಸ್ತುತಿಗೆ
ವಶನಾಗಿಯೇ ಬಿಡುತ್ತಾನೆಂದರೆ ಅವನ ಕಾರುಣ್ಯದ ವ್ಯಾಪ್ತಿ ಅದೆಂತಹುದು ಎಂದು ದಾಸರಾಯರು ತಿಳಿಸುತ್ತಾರೆ. ಸದಾ ತನ್ನ ಜೊತೆಯಲ್ಲೇ ಇರುವ ರಮಾದೇವಿಯ ಸ್ತುತಿಗಳಿಗೇ ಪರಿಪೂರ್ಣವಾಗಿ
ಗೋಚರಿಸದೇ ಇರುವ ಭಗವಂತ ನಮ್ಮಂತಹ ಪಾಮರರು ಭಕ್ತಿಯಿಂದ, ಶ್ರದ್ಧೆಯಿಂದ, ಶರಣಾಗತರಾಗಿ ಸ್ತುತಿಸಿದಾಗ
ಒಲಿದುಬಿಡುವನು, ಗೋಚರಿಸುವನು.
ಭಗವಂತ “ಅಪ್ರತಿಹತ” , ಅಂಭೋದಿ – ಸಾಗರದಂತೆ ಭಗವಂತನ ಗುಣಗಳು. ಪೂರ್ಣವಾಗಿ ಅರಿಯುವುದು ಮಹಾಲಕ್ಷ್ಮಿಯಿಂದಲೇ ಸಾಧ್ಯವಾಗದುದು. “ಮಹದೈಶ್ವರ್ಯ” ಎಂದರೆ ಇಲ್ಲಿ ನಿಯಾಮಕತ್ವ - ಬದಲಾವಣೆ
ಯಾಗದಿರುವುದು ಎಂದು ಅರ್ಥೈಸಬಹುದು. ಸತ್+ಚಿ(ಕ್ಷಿ)ತ್+ಆನಂದ+ಆತ್ಮ
– ದೋಷಗಳೇ ಇಲ್ಲದ ಕ್ಷಿತ್ ಎಂದರೆ (ವಿ)ಜ್ಞಾನಮಯ, ಆನಂದ – ಸದಾ ಆನಂದಕರವಾಗಿರುವ, ಆತ್ಮ ನೆಂದರೆ ಸ್ವಾಮಿ. ನಾವು ಸದಾಕಾಲವೂ ಭಗವಂತನ ಈ ಚತುರ್ಗುಣಗಳನ್ನೇ ಆರಾಧಿಸಬೇಕು. ಜೀವನು ಮುಕ್ತಿಗೆ ತಲುಪಿದಾಗಲೂ ಕೂಡ ಜೀವಾತ್ಮ-ಪರಮಾತ್ಮನ
ಸಂಬಂಧದಲ್ಲಿ ಯಾವ ಬದಲಾವಣೆಯೂ ಇಲ್ಲ. ಆಗಲೂ, ಅಲ್ಲೂ
ಭಗವಂತನೇ ಜೀವಾತ್ಮನಿಗೆ “ನಿಯಾಮಕ”. ಅವನು ಬಿಂಬನಾಗಿ
ಚಲಿಸಿದರೆ ಮಾತ್ರವೇ ಪ್ರತಿಬಿಂಬವಾದ ನಮ್ಮಲ್ಲಿ ಚಲನೆ ಬರುವುದು. ಅಪ್ರತಿಹತ ಎಂದು ಭಗವಂತನ ಅನಂತ ಸದ್ಗುಣಗಳಿಗೂ, ಮಹದೈಶ್ವರ್ಯಕ್ಕೂ,
ಎರಡಕ್ಕೂ ಹೋಲಿಸಬಹುದು. ಸಾಗರಕ್ಕೂ ಮಿತಿಯೆಂಬುದಿದೆ,
ಆದರೆ ಭಗವಂತನಿಗೆ ಮಿತಿಯೇ ಇಲ್ಲ. ಅವನು ಅಮಿತ ಗುಣಸಾಗರನು. ನಮ್ಮಂತಹ ಪಾಮರರ ಅರಿವಿಗೆ ಬರಲೆಂದು ಇದನ್ನು ಹೋಲಿಕೆಯಾಗಿ
ತಿಳಿಸಿದ್ದಾರೆ ಎನ್ನಬಹುದು ಅಷ್ಟೇ. ಇಂತಹ ಮಹೈಶ್ವರ್ಯಶಾಲಿಯಾದ
ಭಗವಂತನನ್ನು ಭಕ್ತರು “ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ಎನ್ನುತ್ತಾ ಸುಲಭದ ಮುಕ್ತಿಗೆ ಸುಲಭನು
ಶ್ರೀಹರಿ.. ಅಪಾರಮಹಿಮನ ಉಪಾಯದಿಂದಲಿ” ಸದಾ ನೆನೆಯುತ್ತಿರಲು ಕರುಣೆ ತೋರುವನು, ಒಲಿವನು ಎನ್ನುತ್ತಾರೆ
ಶ್ರೀ ಪುರಂದರದಾಸರು.
ಭಾಗವತದಲ್ಲಿ ಸಕಲ ಶಾಸ್ತ್ರ-ಗ್ರಂಥಗಳನ್ನೂ ತಿಳಿದಿದ್ದ ಉದ್ಧವ..
ಶ್ರೀಕೃಷ್ಣನಲ್ಲಿ ತನಗೆ ಇನ್ನೊಂದು ಜನ್ಮವೆಂಬುದು ಇದ್ದರೆ ತನ್ನನ್ನು ಗೋಪಿಕೆಯರ ಪಾದಧೂಳಿ ತಗುಲುವ
’ಗರಿಕೆ’ ಹುಲ್ಲನ್ನಾಗಿಸು ಎಂದು ಕೇಳಿಕೊಳ್ಳುತ್ತಾನೆ.
ಇದು ಭಕ್ತಿಯ, ಭಗವಂತನಲ್ಲಿ ಶರಣಾಗತಿಯ ಪರಾಕಾಷ್ಠೆಯನ್ನು ಬಿಂಬಿಸುವುದು.
ಕರುಣಾಸಂಧಿಯನ್ನು ಜಗನ್ನಾಥ ದಾಸರು ರಚಿಸಿರುವುದೇ ಭಗವಂತ
ಅಪಾರ ಕರುಣಾಮಯಿ, ಪಾಮರರು ಮಾಡುವ ಅಣುವಿನಷ್ಟು ಸಾಧನೆಯ ಪ್ರಯತ್ನವನ್ನೂ ಗುರುತಿಸುವನು ಮತ್ತು ತಕ್ಕ
ಫಲವನ್ನು ಕೊಡುವನು ಎಂಬ ತತ್ವವನ್ನು ಸಾರುವ ಉದ್ದೇಶದಿಂದ.
ಜೀವಿಯು ಸಾಧನೆಯ ಸಂಕಲ್ಪ ಮಾಡಿದರೇ ಸಾಕು ಸಿಕ್ಕಬಹುದಾದ ಅತುಳೈಶ್ವರ್ಯದ ವಿಚಾರ ವಿವರಿಸಿ, ಸರ್ವರನ್ನೂ ಸಾಧನೆಯ ಮಾರ್ಗದ ಕಡೆ ನಡೆಸುವ ಉಪಾಯ ದಾಸವರೇಣ್ಯರದು.
1 comment:
ಹರಿಯ ನೆನೆಯದಿರ ಮನವೇಕೆ??? ನಿಜಕ್ಕೂ ಸರಳವಾಗಿ ಅರ್ಥೈಸುವ ಬರಹ ನೀಡಿದ್ದೀರಿ. ಇಷ್ಟವಾಯಿತು. ವಾರಕ್ಕೊಮ್ಮೆ ಹರಿಕಥಾಮೃತಸಾರವನ್ನು ಪ್ರಕಟಿಸುವ ಪ್ರಯತ್ನವಾಗಲಿ...
ಸ್ನೇಹದಿಂದ,
ಚಂದ್ರು
Post a Comment