Saturday, February 28, 2015

ಕರುಣಾ ಸಂಧಿ - ೩೦ ನೇ ಪದ್ಯ - ಒಂದು ಮುನ್ನುಡಿ


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


 ಪ್ರತಿಪದಾರ್ಥ : ಮೀನ - ಮತ್ಸ್ಯನಾಗಿ ಭೂಮಿಯನ್ನೂ ವೇದಗಳನ್ನೂ ರಕ್ಷಿಸಿದ ರೂಪ,  ಕೂರ್ಮ - ಆಮೆಯಾಗಿ ಬೆನ್ನಮೇಲೆ ಮಂದರ ಪರ್ವತವನ್ನು ಹೊತ್ತು ಸಮುದ್ರ ಮಥನ ಮಾಡಿಸಿದ ರೂಪ, ವರಾಹ - ರಸಾತಳದಿಂದ ಭೂಮಿಯನ್ನು ಕೋರೆದಾಡಿಗಳ ಮೇಲಿಟ್ಟು ಕೊಂಡು ತಂದ ಸೂಕರ ರೂಪ, ನರಪಂಚಾನನ - ನರ ಹಾಗೂ ಸಿಂಹಗಳ ಮಿಶ್ರಣ ರೂಪ ಧರಿಸಿ ಪುಟ್ಟ ಬಾಲಕ ಪ್ರಹ್ಲಾದನನ್ನು ಉದ್ಧರಿಸಿದ ರೂಪ, ಅತುಳ ಶೌರ್ಯ ವಾಮನ - ಬಲಿಚಕ್ರವರ್ತಿಯಿಂದ ೩ ಪಾದ ಭೂಮಿ ದಾನ ಬೇಡಿ ಸಮಸ್ತ ಲೋಕಗಳನ್ನು ಅಳೆದ ರೂಪ,  ರೇಣುಕಾತ್ಮಜ - ಕ್ಷತ್ರಿಯಕುಲ ನಾಶಕ್ಕೆ ಕಾರಣಾಗಲು ಜಮದಗ್ನಿ ಹಾಗೂ ರೇಣುಕೆಯರ ಮಗನಾಗಿ ಪರಶುರಾಮನ ರೂಪ, ರಾವಣಾದಿ ನಿಶಾಚರ ಧ್ವಂಸಿ - ರಾವಣ ಮೊದಲಾದ ಅಸುರರೆಲ್ಲರ ನಾಶಕ್ಕೆ ಕಾರಣನಾದ ಶ್ರೀರಾಮಚಂದ್ರನ ರೂಪ, ಧೇನುಕಾಸುರ ಮಥನ - ಧೇನುಕನೆಂಬ ರಾಕ್ಷಸನನ್ನು ಸಂಹಾರ ಮಾಡಿದ ರೂಪ, ತ್ರಿಪುರವ ಹಾನಿಗೈಸಿದ ನಿಪುಣ - ತ್ರಿಪುರಾಸುರರ ಪತ್ನಿಯರ ಪಾತಿವ್ರತ್ಯ ವ್ರತ ಭಂಗ ಮಾಡಿಸಿ ಅವರುಗಳ ನಾಶಕ್ಕೆ ಕಾರಣವಾದ ಬುದ್ಧರೂಪ, ಕಲಿಮುಖ ದಾನವರ ಸಂಹರಿಸಿ - ಕಲ್ಕಿ ಅವತಾರದಿಂದ ಕಲಿಯೇ ಮುಂತಾದ ದೈತ್ಯರನ್ನು ನಾಶ ಮಾಡಿದ ರೂಪ, ಧರ್ಮದಿ ಕಾಯ್ದ ಸುಜನರನು - ಸಜ್ಜನರಾದ ಭಕ್ತರನ್ನು ಧರ್ಮದಿಂದ ಸಂರಕ್ಷಿಸುವವನು.

ಕರುಣಾಸಂಧಿಯ ೩೦ನೆಯ ಪದ್ಯದಲ್ಲಿ ದಾಸರಾಯರು ದಶಾವತಾರದ ವರ್ಣನೆಯ ಮೂಲಕ ಭಗವಂತನ ಕಾರುಣ್ಯವನ್ನು ವಿಸ್ತಾರವಾಗಿ ವಿವರಿಸಿದ್ದಾರೆ.  ಅಸಂಖ್ಯಾವತಾರಗಳನ್ನು ಎತ್ತಿ ತನ್ನದೇ ಸೃಷ್ಟಿಯಾದ ಭೂಮಂಡಲವನ್ನೂ, ಮನುಕುಲವನ್ನೂ ಕಾಪಾಡುವ ಭಗವಂತನ ಅಪಾರ ಕರುಣೆಯು ವಿವರಣೆಯ ನಿಲುಕಿಗೆ ಸಿಲುಕುವಂತಹುದಲ್ಲದಿದ್ದರೂ, ಅದನ್ನು ಅರಿಯುವ, ತಾವು ಅರಿತದ್ದನ್ನು ಮತ್ತು ತಮ್ಮ ಅನುಭವವನ್ನು ಮತ್ತೊಬ್ಬರಿಗೂ ಯಥಾ ಶಕ್ತ್ಯಾನುಸಾರ ತಿಳಿಸುವುದರ ಮೂಲಕ  ಭಗವಂತನನ್ನು ಸ್ತುತಿಸುವ ಪ್ರಯತ್ನವನ್ನು ಶ್ರೀ ಜಗನ್ನಾಥದಾಸರು ಮಾಡಿದ್ದಾರೆ.

ಭಗವಂತನು ಕಲ್ಪಗಳ ಲಯ ಕಾಲದಲ್ಲಿ ಅವತಾರಗಳನ್ನು ಎತ್ತುತ್ತಾ, ಬ್ರಹ್ಮಾಂಡವನ್ನೂ,  ಅನಾದಿಯಾದ ಬೀಜರೂಪದಲ್ಲಿರುವ ಜೀವರಾಶಿಯನ್ನೂ  ಪ್ರಳಯ ಜಲದಲ್ಲಿ ಕೊಚ್ಚಿ ಹೋಗದಂತೆ ಕಾಪಾಡುತ್ತಲೇ ಇದ್ದಾನೆ.  ಪ್ರಕೃತಿಯಲ್ಲಿ ವಿಕೋಪ ಉಂಟಾದಾಗ, ಪರಿಸ್ಥಿತಿಯಲ್ಲಿ ಏರುಪೇರಾದಾಗ, ಭಗವಂತ ಅಲ್ಲಿಯ ಸಂದರ್ಭಕ್ಕನುಗುಣವಾಗಿ ಅವತರಿಸಿ, ಸಮತೋಲನವನ್ನು ಕಾಪಾಡುತ್ತಾನೆ.  ಭಗವಂತನ ಅಸಂಖ್ಯಾತ ಅವತಾರಗಳಲ್ಲಿ ಹತ್ತು ಅವತಾರಗಳನ್ನು ಮಾತ್ರ ’ದಶಾವತಾರ’ಗಳೆಂದು ಪ್ರಮುಖವಾಗಿ ಪರಿಗಣಿಸಲಾಗಿದೆ.  ಭಗವಂತನ ಲೀಲಾವಿನೋದವನ್ನು ಅವತಾರಗಳೆಂದು ವರ್ಣಿಸುವ ಅನೇಕ ಕೃತಿಗಳು ನಮ್ಮ ದಾಸ ಸಾಹಿತ್ಯದಲ್ಲಿ ದೊರಕುತ್ತವೆ.  ಇಲ್ಲಿ ಶ್ರೀ ಜಗನ್ನಾಥ ದಾಸರು ಭಗವಂತನ ಅಪಾರವಾದ ಕಾರುಣ್ಯವನ್ನು ಗುರುತಿಸುತ್ತಾ ಅವನ ಅವತಾರಗಳನ್ನು ವರ್ಣಿಸುತ್ತಾರೆ.  ಭಗವಂತನ ಲೀಲೆಗಳನ್ನು ವಿವರಿಸುವುದೇ ಅತ್ಯಂತ ಸೊಬಗಿನ ವಿಷಯವಾದರೆ, ದಶಾವತಾರವು ಎಲ್ಲಾ ಸಾತ್ವಿಕರನ್ನೂ, ದಾಸ ಪರಂಪರೆಯನ್ನೂ ಸೂಜಿಗಲ್ಲಿನಂತೆ ಸೆಳೆಯುವ ಅತ್ಯಾಕರ್ಷಕವಾದ ಸಂಗತಿಯಾಗಿದೆ.  ಕ್ಷಣ ಮಾತ್ರದಲ್ಲಿ ಅವತಾರ ಪುರುಷನಾಗಿ ನಾನಾವಿಧ ರೂಪಗಳಲ್ಲಿ ಲೀಲಾಜಾಲವಾಗಿ ಪ್ರಕಟವಾಗಿ, ನಂಬಿದ ಭಕ್ತರನ್ನೂ, ಅವರು ನೆಲೆಸಲು ಅವಶ್ಯಕವಾಗಿ ಬೇಕಾಗಿರುವ ಭೂಮಂಡಲವನ್ನೂ, ಕಾಪಾಡುವ ಅವನ ಪರಿಯು ವರ್ಣನೆಗೆ ನಿಲುಕದ ವಿಶೇಷವಾಗಿದೆ.  ಆದರೂ ಭಗವಂತನನ್ನೂ ಅವನ ಚಿತ್ರವಿಚಿತ್ರ ಲೀಲಾವಿನೋದಗಳನ್ನೂ ತಮ್ಮದೇ ಆದ ಧಾಟಿಯಲ್ಲಿಯೂ ಪದಪುಂಜಗಳ ಗುಚ್ಛದಲ್ಲಿಯೂ ಹಿಡಿದಿಡುವ ಪ್ರಯತ್ನ ಅವಿರತವಾಗಿ ನಡೆಯುತ್ತಲೇ ಇದೆ.

ಶ್ರೀ ಪುರಂದರದಾಸರು ಒಂದು  ಸುಳಾದಿಯಲ್ಲಿ :
ಅಚ್ಯುತಾನಂತಗೋವಿಂದ ಮುಕುಂದ
ವಾಮನ ವಾಸುದೇವ ನಾರಾಯಣ ಹರಿ
ಸಚ್ಚದಾನಂದ ಸ್ವರೂಪ ಗೋಪಾಲ ಪುರುಷೋತ್ತಮ
ಪರಂಧಾಮ ನಾರಾಯಣ
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ
ಭಾರ್ಗವ ರಾಮ ಶ್ರೀಕೃಷ್ಣ ಬೌದ್ಧ ಕಲ್ಕಿ
ಅವತಾರ ಅನಂತಾವತಾರ ನಾರಾಯಣ
ಹರಿ ಅಚುತಾನಂತ ಗೋವಿಂದ
ಅಪಾರ ಮಹಿಮ ಶ್ರೀ ನಾರಾಯಣ ಅಹೋ
ಸರ್ಪಶಯನನೆ ನಾರಾಯಣ
ಶ್ರೀ ಪುರಂದರವಿಠಲ ವಿಭುವೆ ತಿರುವೆಂಗಳಪ್ಪ
ಎನ್ನಪ್ಪ ನೀ ನಾರಾಯಣ || - ಅನಂತಾವತಾರದ ಅಚುತಾನಂತ ನಾರಾಯಣನು ಅಪಾರ ಮಹಿಮನು ಎನ್ನುತ್ತಾ ತಿರುವೆಂಗಳಪ್ಪನು ಎನ್ನಪ್ಪನು ಎಂದು ಸ್ತುತಿಸಿದ್ದಾರೆ.  ಹಾಗೂ ತಮ್ಮ ಮತ್ತೊಂದು "ನೆಲೆಸೆನ್ನ ಹೃದಯ ಮಂದಿರದಿ - ಶ್ರೀ ಹರಿಯೆ ನೀ | ಸಲಿಸೆಮ್ಮ ಮನದಿಷ್ಟ ಅನುದಿನ ದಯದಿ" ಎಂಬ  ಕೃತಿಯಲ್ಲಿ

ನಾರುವಿ ಭಾರವ ಪೊರುವಿ - ಬಲು - |
ಬೇರುಗಳನೆ ಕಿತ್ತು ಮೆಲುವಿ - ಕರಿ - |
ವೈರಿ ರೂಪಗೊಂಡ ಗರುವಿ - ಬ್ರಹ್ಮ - |
ಚಾರಿ ಖಳರ ಕತ್ತರಿಸುವಿ |
ವೀರದಶರಥಸುತ ಸುರಾರ್ಚಿತ |
ಜಾರತನದಲಿ ವ್ರತವ ಕೆಡಿಸುತ |
ತೋರಿ ಮೆರೆವನೆ ತರಳ ಬಲು ಗಂ - |
ಭೀರ ಕುದುರೆಯನೇರಿ ಮೆರೆವನೆ ||  ಎನ್ನುತ್ತಾ ಮಾರ್ಮಿಕವಾಗಿ ನಾರುವಿ - ಮತ್ಸ್ಯ, ಭಾರವ ಪೊರುವಿ - ಕೂರ್ಮ, ಬೇರುಗಳನೆ ಕಿತ್ತು ಮೆಲುವಿ - ವರಾಹ, ವೈರಿ ರೂಪಗೊಂಡ ಗರುವಿ - ನಾರಸಿಂಹ, ಬ್ರಹ್ಮಚಾರಿ - ವಾಮನ ಎಂದು ಅತಿ ಸುಂದರವಾಗಿ ದಶಾವತಾರದ ವರ್ಣನೆಯನ್ನು ಮಾಡಿದ್ದಾರೆ.

ಶ್ರೀ ಜಗನ್ನಾಥ ದಾಸರಾಯರು ತಮ್ಮ "ರಮಾ ಮನೋಹರನೆ ದೀನ - ಪತಿತಪಾವನಾ" ಎಂಬ ಕೃತಿಯಲ್ಲಿ ಒಂದೊಂದೇ ಪದಗಳಿಂದ ಭಗವಂತನ ದಶಾವತಾರಗಳನ್ನು
ಚೆಂದದಿಂದ ವೇದ ತಂದ | ಮಂದರೋದ್ಧಾರಾ ಅರ | ವಿಂದನಯನ ಬಂಧು ರಕ್ಷಿಸೋ | ಇಂದು ಭೂಧರಾ ||
ಕರುಳಮಾಲೆ ಧರಿಸಿದ ಶ್ರೀ | ವರದ ವಾಮನಾ ಧೃತ | ಕರದ ಪರಶುರಾಮ ರಾಘವ | ಯರು ಕುಲೋತ್ತಮಾ ||
ಲೋಕ ಮೋಹಕ ಬುದ್ಧನಾಗಿ | ತೇಜಿಯೇರಿದಾ ಜಗ | ದೇಕ ಜಗನ್ನಾಥ ವಿಠಲ | ಭೀಕರಾಂತಿಕಾ || - ಎಂದು ಅತ್ಯಂತ ಸರಳವಾಗಿ ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ "ಹೆಜ್ಜೆ ನೋಡೋಣ ಬಾರೆ" ಎಂಬ ಕೃತಿಯಲ್ಲಿ | ಮಚ್ಛನಾಗಿ ವೇದವ ತಂದವನಂತೆ ಕೂರ್ಮನಾಗಿ ಭೂಧರ ಪೊತ್ತವನಂತೆ ವರಹ ನರಹರಿಯಾಗಿ ದುರುಳರ ಸೀಳಿದ ಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ ||
ಮಾತೃದ್ರೋಹ ಮಾಡಿದ ಪರಶುರಾಮನ | ಪಿತೃವಾಕ್ಯವ ನಡೆಸಿದ ಶ್ರೀರಾಮನ | ಕೃಷ್ಣಾವತಾರನ ಬೌದ್ಧಸ್ವರೂಪನ | ಹಯವನೇರಿದ ಕಲ್ಕಿ ಹಯವದನನ್ನ || ಎನ್ನುತ್ತಾ  ದಶಾವತಾರವನ್ನು ವರ್ಣಿಸಿದ್ದಾರೆ.  ಇಷ್ಟೆಲ್ಲಾ ಲೀಲಾವಿನೋದಗಳನ್ನು ಮಾಡಿದ,  ಸಮಸ್ತ ಲೋಕಗಳನ್ನೂ ಭೇದಿಸಿದ ಭಗವಂತನ ಹೆಜ್ಜೆಯನ್ನು "ಪುಟ್ಟ ಹೆಜ್ಜೆ" ಎಂದು ಆಪ್ಯಾಯಮಾನವಾಗಿ,  ಮಮತೆಯ ಸೆಲೆ ಉಕ್ಕುವಂತೆ ವರ್ಣಿಸಿ  ಹಾಡಿದ್ದಾರೆ.  ತಮ್ಮ ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಎಂಬ ಕೃತಿಯಲ್ಲಿ | ಮತ್ಸ್ಯ ಕೂರ್ಮರೂಪ ಸೂಕರ ನರಹರಿ ಕಾಯ | ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣ ಸುವ್ವಿ | ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣನಾದ | ಬೌದ್ಧ ಕಲ್ಕಿ ರೂಪ ಪ್ರಸಿದ್ಧವಂತೆ ಸುವ್ವಿ || ಎಂದಿದ್ದಾರೆ.
ಚಿತ್ರಕೃಪೆ : ಅಂತರ್ಜಾಲ

No comments: