Monday, June 13, 2011

೧. ಮಂಗಳಾಚರಣ ಅಥವಾ ನಾಂದಿ ಸಂಧಿ :-

ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು  ಪೇಳುವೆ
ಪರಮ ಭಗವದ್ಭಾಕ್ತರಿದನಾದರದಿ ಕೇಳುವುದು

ಪಲ್ಲವಿಯಾದ ತರುವಾಯ ಮಂಗಳಾಚರಣ ಸಂಧಿಯಲ್ಲಿ ಒಟ್ಟು ೧೩ ಪದ್ಯಗಳಲ್ಲಿ ಜಗತ್ ಸೃಷ್ಟಿಗೆ ಕಾರಣನಾದ ಪರಮಾತ್ಮನನ್ನು ಅನುಸರಿಸಿ ತಾರತಮ್ಯ ಪೂರ್ವಕವಾಗಿ ಲಕ್ಷ್ಮೀದೇವಿ ಮುಂತಾದ ದೇವತೆಗಳ ಮಂಗಳಸ್ತವನವಿದೆ. ೧೩ ಎಂದರೆ ಅಧ್ಯಾತ್ಮಿಕ ಸಂಖ್ಯಾ ಸೂಚಕದಲ್ಲಿ  ದೀಪ ಎಂಬ ಅರ್ಥ ಬರುತ್ತದೆ. ಹೇಗೆಂದರೆ ಸಂಸ್ಕೃತದ ಕಟಪಯಾದಿ ಸೂತ್ರದ ಪ್ರಕಾರ  ದೀಪ ಎಂಬ ಪದದಲ್ಲಿ... “ದ” ೩ನೇ ಸಂಖ್ಯೆ ಮತ್ತು “ಪ” “೧”ನೇ ಸಂಖ್ಯೆ.  ಎರಡೂ ಸೇರಿದಾಗ ೩೧ ಆಗುತ್ತದೆ.  ನಾವು ಸಂಖ್ಯೆಗಳನ್ನು ಬದಲಿಸಿದಾಗ ೧೩ ಆಗುತ್ತದೆ.  ಹೀಗೆ ೧೩ ಪದ್ಯಗಳಿಗೆ ದೀಪ ಎನ್ನುವ ಅರ್ಥ ಬಂದು ಮಂಗಳಾಚರಣ ಸಂಧಿಯು ಇಡೀ ಹರಿಕಥಾಮೃತಸಾರಕ್ಕೆ ಅಧ್ಯಾತ್ಮಿಕ ದೀಪದಂತೆ ಇದೆ.

ಜಗನ್ನಾಥ ವಿಠಲನ ಪರಮ ಭಕ್ತರಾದ ಜಗನ್ನಾಥ ದಾಸವರ್ಯರು ತಮ್ಮ ಶ್ರೇಷ್ಠ ಗ್ರಂಥವಾದ ಹರಿಕಥಾಮೃತಸಾರ ರಚನೆಗೆ "ಗುರುಗಳ" ಕರುಣೆಯಿಂದ.. "ಆಪನಿತು" ಎಂದರೆ ತಮ್ಮ ಯೋಗ್ಯತೆ ಇದ್ದಷ್ಟು ರಚಿಸುತ್ತೇನೆ ಎಂದು ಹೇಳಿಕೊಂಡು ಮುಂದಿನ ಪದ್ಯ ಮಾಲೆಯನ್ನು ಆರಂಭಿಸಿದ್ದಾರೆ.  ಮೊತ್ತ ಮೊದಲನೇ ಪದ್ಯದಲ್ಲಿ ತಮ್ಮ ಇಷ್ಟ ದೈವ, ಮನೆದೈವ, ಮನದೈವ ಆದಂತಹ ನಾರಸಿಂಹನನ್ನು ಈ  ಗ್ರಂಥ ರಚನೆಗೆ ಮಂಗಳವನ್ನು ಕರುಣಿಸು ಎಂದು ಬೇಡಿಕೊಳ್ಳುತ್ತಾರೆ.  ನಾರಸಿಂಹನ ಪರಮ ಭಕ್ತರಿವರು. ಇವರ ಪಿತೃದೇವತೆಯ ಹೆಸರು ನಾರಸಿಂಹಾಚಾರ್ಯ ಎಂದು.  ಆಚಾರ್ಯರು ಕೂಡ ನಾರಸಿಂಹ ವಿಠಲ ಅಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.  ಇನ್ನು ನಮ್ಮ ದಾಸವರ್ಯರಾದ ಜಗನ್ನಾಥ ದಾಸರು ಕೂಡ ನಾರಸಿಂಹನ ಬಗ್ಗೆ ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ  -  ೧) ಪಾಹಿ ಲಕ್ಷ್ಮೀ ನರಸಿಂಹ, ೨) ನಮಸ್ತೆ ನರಸಿಂಹ ೩) ನೀರಾತರಂಗಿಣಿ ನರಸಿಂಹ  ೪) ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದ.. ಈ ಕೃತಿಯಲ್ಲಿ ಮೊದಲ ಚರಣ "ಸಕಲ ಜೀವ ಜಡಾತ್ಮಕ ಜಗತಿನೊಳಗಿದ್ದು ಅಕಳಂಕನಾಮಕ ರೂಪದಲ್ಲಿ ಕರೆಸಿ "ಪ್ರಕಟನಾಗದೆಲೆ" ಮಾಡಿ  ವ್ಯಾಪಾರ ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ” ಎಂದು ನಾರಸಿಂಹನನ್ನು ಸ್ತುತಿಸಿದ್ದಾರೆ.  ಇವುಗಳೇ ಅಲ್ಲದೆ “ದುರಿತವನ ಕುಠಾರಿ, ದುರ್ಜನಾಕುಲವೈರಿ” ಎಂದು ಸಪ್ತ ತಾಳಗಳ ಸುಳಾದಿಯನ್ನೂ ರಚಿಸಿದ್ದಾರೆ.  ಒಬ್ಬ ಬಡ ಭಕ್ತನ ಬಡತನದ ಬೇಗೆಯನ್ನು ನೋಡಲಾರದೆ ಕರುಣೆಯಿಂದ ರಚಿಸಿದ್ದು ಈ ಸುಳಾದಿ.  ಇಂದಿಗೂ ಬಡತನದಲ್ಲಿರುವವರು ಈ ಸ್ತೋತ್ರವನ್ನು ಪಠಿಸಿದರೆ ಬಡವ ಬಲ್ಲಿದನಾಗುತ್ತಾನೆಂಬ ನಂಬಿಕೆ..


ಶ್ರೀ ರಮಣಿ ಕರಕಮಲ ಪೂಜಿತ
ಚಾರುಚರಣಸರೋಜ ಬ್ರಹ್ಮ ಸ
ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ |
ನೀರಜ ಭವಾಂಡೋದಯ ಸ್ಥಿತಿ
ಕಾರಣನೆ ಕೈವಲ್ಯದಾಯಕ
ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ  ||೧||

ಪ್ರತಿಪದಾರ್ಥ : ಶ್ರೀರಮಣಿ - ಮಹಾಲಕ್ಷ್ಮಿ, ಕರಕಮಲ - ಕಮಲದ ಹೂವಿನಂತಹ ಮೃದುವಾದ ಕೈಗಳು, ಪೂಜಿತ - ಪೂಜೆಗೊಳ್ಳುವ, ಚಾರು ಚರಣ ಸರೋಜ - ಮನೋಹರವಾದ ಪಾದ ಕಮಲಗಳುಳ್ಳವನು, ಬ್ರಹ್ಮ - ಚತುರ್ಮುಖ ಬ್ರಹ್ಮದೇವ, ಸಮೀರ - ವಾಯುದೇವ, ವಾಣಿ - ಸರಸ್ವತಿ ಹಾಗೂ ಭಾರತಿ, ಫಣೀಂದ್ರ - ಸರ್ಪಕುಲಕ್ಕೆ ಶ್ರೇಷ್ಠನಾದ ಶೇಷ, ವೀಂದ್ರ - ಪಕ್ಷಿಗಳ ರಾಜ ಗರುಡ, ಭವೇಂದ್ರ - ಭವ+ಇಂದ್ರ ರುದ್ರದೇವರು ಹಾಗೂ ದೇವತೆಗಳ ರಾಜನಾದ ಇಂದ್ರ, ಮುಖ ವಿನುತ - ಇತ್ಯಾದಿ ದೇವತಾ ಸಮೂಹದಿಂದ ಸ್ತುತಿಸಲ್ಪಡುವ, ನೀರಜ ಭವಾಂಡ ಉದಯ ಸ್ಥಿತಿ ಕಾರಣನೆ - ನೀರಿನಲ್ಲಿ ಹುಟ್ಟುವ ಕಮಲದಲ್ಲಿ ಉದ್ಭವಿಸಿದ ಬ್ರಹ್ಮನ ದೇಹ ಅಂದರೆ ಬ್ರಹ್ಮಾಂಡದ ಸೃಷ್ಟಿಗೆ ಕಾರಣನಾದವನು, ಸ್ಥಿತಿ ಕಾರಣನೆ - ಸೃಷ್ಟಿಸಿದ ಬ್ರಹ್ಮಾಂಡದ ಪಾಲನೆಗೆ ಕಾರಣನಾದವನು, ಕೈವಲ್ಯದಾಯಕ - ಕೇವಲ ಜ್ಞಾನ / ಮೋಕ್ಷ ಕೊಡುವವನು, ನಾರಸಿಂಹನೆ - ನರಸಿಂಹಸ್ವಾಮಿಯೇ, ನಮಿಪೆ - ನಮಸ್ಕರಿಸುವೆ,  ಕರುಣಿಪುದೆಮಗೆ - ಕರುಣಿಸು, ಮಂಗಳವ - ಸನ್ಮಾರ್ಗ / ಮಂಗಳವನ್ನು.

ಶ್ರೀ ರಮಣಿ ಕರ ಕಮಲ ಪೂಜಿತ ಎಂದು ಆರಂಭಿಸಿ, ಪರಮಾತ್ಮನ ಪಾರಮ್ಯತೆಯನ್ನು ತಿಳಿಸುತ್ತಾರೆ.  ಶ್ರೀ ರಮಣನಿಗೆ ಶ್ರೀ ರಮಣಿಯಿಂದಲೇ ಮೊದಲ ಪೂಜೆ.  ಲಕ್ಷ್ಮೀದೇವಿ ಪರಮಾತ್ಮನ ಅವಿಭಾಜ್ಯಳು.  ಪರಮಾತ್ಮ ಶ್ರೀ ರಮಣ ಲಕ್ಷ್ಮೀ ನಾರಸಿಂಹ, ಸೀತಾರಾಮ, ರುಕ್ಮಿಣೀಶ  ಹೀಗೆ ಕರೆಸಿಕೊಳ್ಳುತ್ತಾನೆ.  ಇದು ಲಕ್ಷ್ಮೀ ಮತ್ತು ಪರಮಾತ್ಮನ ಅನುಬಂಧ.  ಅದಾಗಿ ಶ್ರೀ ರಮಣಿಯೇ ಮೊದಲ ಪೂಜಾರ್ಹಳು.  ಇದಲ್ಲದೆ ಪರಶುಕ್ಲತ್ರಯರಲ್ಲಿ ಮೊದಲು ಲಕ್ಷ್ಮೀ ದೇವಿ ನಂತರ ಕ್ರಮವಾಗಿ ಬ್ರಹ್ಮ, ವಾಯು ಅವರುಗಳ ಪತ್ನಿಯರಾದ್ದರಿಂದ ಇದೇ ರೀತಿಯಲ್ಲಿ ಪರಮಾತ್ಮನು  ಸ್ತೋತ್ರಗೊಳ್ಳುತ್ತಾನೆ.  ಅನಂತರ ತತ್ವಾದಿ ಪತಿಗಳಿಂದ ಹಾಗೂ ಅಹಂಕಾರ ತ್ರಯರಾದ ಶೇಷ, ಗರುಡ, ರುದ್ರ ಇವರುಗಳಿಂದ ವಂದಿಸಿಕೊಳ್ಳುತ್ತಾನೆ.  ಕೊನೆಗೆ ದೇವೇಂದ್ರ ಮುಂತಾದ ಮುಖ್ಯ ದೇವತೆಗಳಿಂದ ನಮಸ್ಕರಿಸಿಕೊಳ್ಳುತ್ತಾನೆ.  ಇಂತಹ ಶ್ರೇಷ್ಠರಿಂದ ಪೂಜೆಗೊಳ್ಳುವಂತ ಪರಮಾತ್ಮ ಹೇಗಿದ್ದಾನೆಂದರೆ ಈ ಬ್ರಹ್ಮಾಂಡದ ಉದಯ ಸ್ಥಿತಿಗೆ ಕಾರಣನಾಗಿಯೂ  ಪರಬ್ರಹ್ಮ ಭಕ್ತರಿಗೆ ಕೈವಲ್ಯ ದಾತನಾಗಿಯೂ ಲಯಕ್ಕೆ ಕಾರಣನಾಗುತ್ತಾನೆ.  ಹೀಗೆ ದಾಸರು ನಾರಸಿಂಹನನ್ನು ಮಂಗಳವನ್ನು ಕರುಣಿಸು ಎಂದು ಬೇಡಿಕೊಳ್ಳುತ್ತಾರೆ.
ಶ್ರೀ ಎ೦ದರೆ ಕಾ೦ತಿ ಸ೦ಪನ್ನಳಾದಐಶ್ವರ್ಯ ಪೂರ್ಣಳಾದ ನಾರಾಯಣ ದೇವರಿಗೆ ರಮಣಿಯಾದ ಲಕ್ಷ್ಮೀ ದೇವಿಯ – ಶ್ರೀಭೂ, ದುರ್ಗಾ ರೂಪಗಳು.  ಕರಕಮಲಪೂಜಿತ – ಮಹಾಲಕ್ಷ್ಮೀದೇವಿಯ ಹಸ್ತಗಳಿಂದಲೇ ಸದಾ ಕಾಲ ಶ್ರೀಹರಿ ನೇರವಾಗಿ ಪೂಜಿಸಲ್ಪಡುವವನು.  ಪ್ರಳಯ ಕಾಲದಲ್ಲಿಯೂ ಕೂಡ ರಮಾದೇವಿಯಿ೦ದಲೇ ಸೇವಿತನಾಗುವವನುಅನ್ಯರಿ೦ದಲ್ಲ ಎ೦ದು ಅರ್ಥ.  ಚಾರುಚರಣ ಸರೋಜಮನೋಹರವಾದ ಕಮಲದ೦ತಹ ಪಾದ ಉಳ್ಳ ಶ್ರೀ ಹರಿಯನ್ನು  ಉಳಿದವರೆಲ್ಲಾ ಮಹಾಲಕ್ಷ್ಮಿಯ ಮೂಲಕವೇ ಪೂಜಿಸುವರು.  ಅವರಲ್ಲಿ ಚತುರ್ಮುಖ ಬ್ರಹ್ಮಪ್ರಧಾನ ವಾಯುದೇವರು ಸರಸ್ವತೀದೇವಿ ಮತ್ತು ಭಾರತೀ ದೇವಿಯರು ಫಣೀ೦ದ್ರ-ಶೇಷ,  ವೀ೦ದ್ರ-ಗರುಡ, ಭವೇ೦ದ್ರಏಕಾದಶರುದ್ರರಲ್ಲಿ ಶ್ರೇಷ್ಟರಾದ ರುದ್ರದೇವರು ಇವರೇ ಮೊದಲಾದ ಸಮೂಹಗಳಿ೦ದ ವಿನುತಸ್ತುತ್ಯನಾದವನು ಶ್ರೀಹರಿ ಎ೦ದು ಅರ್ಥೈಸಲಾಗಿದೆ.  ಗ್ರಂಥಕರ್ತೃ ಜಗನ್ನಾಥ ದಾಸರ ಕುಲದೈವ ಉಪಾಸ್ಯ ಮೂರುತಿಯಾದ ನಾರಸಿಂಹ.  ಅವನೇ ಕೈವಲ್ಯದಾಯಕ.  ಕೇವಲ ಎಂಬ ಹೆಸರುಳ್ಳ ನಾರಾಯಣ. “ಕೈವಲ್ಯ ಎಂದರೆ ಮುಕ್ತಿ ಎಂಬ ಅರ್ಥವೂ ಇದೆ.  ಸಾಧನೆಯನ್ನು ಪೂರೈಸಿದ ಸಾತ್ವಿಕ ಜ್ಞಾನಿಗಳಿಗೆ ಮುಕ್ತಿಯನ್ನು ನೀಡುವ ಪ್ರಭು ಎಂದೂ ಆಗುತ್ತದೆ.  ನಾರಸಿಂಹನೆಂದರೆ ಅನಿಷ್ಟವನ್ನು ಹೋಗಲಾಡಿಸಿ ಇಷ್ಟಾರ್ಥಗಳನ್ನು ಕರುಣಿಸುವವನು ಎಂದೂಅರ ಎಂದರೆ ದೋಷ – ನಾರ ಎಂದರೆ ದೋಷವಿಲ್ಲದ ಮುಕ್ತನಾದವನು ಎಂದೂ ಆಗುತ್ತದೆ. ನಾರ ಎಂದರೆ ಲಕ್ಷ್ಮೀದೇವಿ ಎಂಬ ಅರ್ಥವೂ ಇರುವುದರಿಂದ – ಆಕೆಗೆ ಒಡೆಯ ಮತ್ತು ಶ್ರೇಷ್ಠ  ನಾರಸಿಂಹ (ನಾರಾಯಣ).  

ಲಕ್ಷ್ಮೀನಾರಸಿಂಹ ಸ್ವಾಮಿಯು ರಮಾದೇವಿಯನ್ನು ತನ್ನ ಎಡತೊಡೆಯ ಮೇಲೆ ಕೂಡಿಸಿಕೊಂಡು ಕುಳಿತಿರುವ ಮನೋಹರ ರೂಪ ನೋಡಿ ಆಚಾರ್ಯ ಶಂಕರರು ತಮ್ಮ ಲಕ್ಷ್ಮೀನಾರಸಿಂಹ ಸ್ತೋತ್ರದಲ್ಲಿ ಸಂಸಾರ ಸಾಗರ ನಿಮಜ್ಜನ ಮುಹ್ಯಮಾನಂ ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಂ | ಪ್ರಹ್ಲಾದ ಖೇದ ಪರಿಹಾರ ಕೃತಾವತಾರ ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ || ಎಂದು ಸ್ತುತಿಸುತ್ತಾ ಸಂಸಾರ ಸಾಗರದಲ್ಲಿ ಮುಳುಗಿ ಕಂಗಾಲಾದ ನಮ್ಮೆಡೆಗೆ ನಿನ್ನ ಕೃಪಾದೃಷ್ಟಿ ಬೀರಿ ನಮಗೆ ನಿನ್ನ ಕರಗಳ ಆಶ್ರಯ ನೀಡಿ ಕಾಪಾಡು ಎಂದು ಪ್ರಾರ್ಥಿಸುತ್ತಾರೆ.

ಪ್ರತ್ಯಕ್ಷವಾಗಿರುವ ಪ್ರಪ೦ಚಕ್ಕೆ ಸೃಷ್ಟಿ ಲಯಾದಿಗಳು ಮನುಷ್ಯ ಯತ್ನಮಾತ್ರದಿ೦ದ ಸಾಧ್ಯವಲ್ಲದ್ದಾಗಿರುವುದರಿ೦ದ ವಿವೇಕಿಗಳಿಗೆ ಈ “ಜಗತ್ ಕರ್ತೃತ್ವ”  ಕಾರಣವಸ್ತು ಒ೦ದು ಇದೆ ಎ೦ದು ತಿಳಿದು ಬರುತ್ತದೆ. ಆ ವಸ್ತುವೇ ಪರಬ್ರಹ್ಮಪದವಾಚ್ಯನಾದ, ತಾರತಮ್ಯೋಪೇತನೂ, ಸರ್ವರಿ೦ದಲೂ ಅತ್ತ್ಯುತ್ತಮನಾದವನೂ, ಶ್ರೀ ನಾರಸಿ೦ಹಾಭಿನ್ನ ಶ್ರೀನಾರಾಯಣ ದೇವರು.  ಇವನನ್ನು ನಿರ್ದೋಷನು, ಜ್ಞಾನಾನ೦ದಾದ್ಯನ೦ತ ಗುಣಪರಿಪೂರ್ಣನೂ ಎ೦ದು ಭಜಿಸಬೇಕೆ೦ದು ಇದರ ತಾತ್ಪಯ೯ವಾಗಿದೆ.  ಹೀಗೆ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ ಕರ್ತನಾದ ನಾರಸಿಂಹ ದೇವರಿಗೆ ಲಕ್ಷ್ಮೀಬ್ರಹ್ಮವಾಯುಶೇಷಗರುಡರುದ್ರ, ಇಂದ್ರ ಮೊದಲಾದ ಮಹಾನ್ ದೇವತೆಗಳಿಂದ ತಾರತಮ್ಯ ಪೂರಕವಾಗಿ ವಂದಿಸಿ ಮಂಗಳವೆಂದರೆ ಮೋಕ್ಷವೆಂಬ ಅರ್ಥದಲ್ಲಿ, ಮಂಗಳವನ್ನು ಕರುಣಿಸು ಎಂದು ಜಗನ್ನಾಥ ದಾಸರು ಕೇಳಿಕೊಳ್ಳುತ್ತಿದ್ದಾರೆ.

ಡಿವಿಜಿಯವರು ಕೂಡ ತಮ್ಮ ಕಗ್ಗದಲ್ಲಿ “ನಂಬದಿದ್ದನು ತಂದೆ, ನಂಬಿದನು ಪ್ರಹ್ಲಾದ ; ನಂಬಿಯೂ ನಂಬದಿರುವಿಬ್ಬಂದಿ ನೀನು | ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು “ ಎನ್ನುತ್ತಾ  ಇಲ್ಲಿ ಪ್ರಹ್ಲಾದ ಆಸ್ತಿಕ ಅವನ ತಂದೆ ಹಿರಣ್ಯಾಕ್ಷ ನಾಸ್ತಿಕ.  ಕಂಬದಿಂದ ಪ್ರತ್ಯಕ್ಷನಾದ ನಾರಸಿಂಹ (ಬಿಂಬ) ಭಕ್ತ ಪ್ರಹ್ಲಾದನಿಗೆ ಮೋಕ್ಷ ಕೊಟ್ಟ ಎಂದು ನಾರಸಿಂಹನ ಕೈವಲ್ಯದಾಯಕತ್ವವನ್ನು ವರ್ಣಿಸಿದ್ದಾರೆ. 

ಮುಂದಿನ ಚರಣದಲ್ಲಿ ಮಹಾಲಕ್ಷ್ಮಿಯ ಭಕ್ತಿ ಮತ್ತು ಜವಾಬ್ದಾರಿಯ ವಿವರಣೆಯನ್ನು ನೀಡಿದ್ದಾರೆ.

ಚಿತ್ರಕೃಪೆ  : ಅಂತರ್ಜಾಲ

3 comments:

Vishnu Priya said...

ನರಸಿಂಹ ದೇವರು- ಬರೆಯುತ್ತಿರುವ ನಿಮಗೂ, ಜಗತ್ತಿನಾದ್ಯಂತ ಓದುತ್ತಿರುವ ಓದುಗುರಿಗೂ ಸನ್ಮಂಗಳವನ್ನುಂಟುಮಾಡಲಿ.
ಹರಿ ಓಂ.

ಹರಿಕಥಾಮೃತಸಾರ said...

ಧನ್ಯವಾದಗಳು ಪ್ರಕಾಶ್... ನಿಮ್ಮ ಪ್ರೋತ್ಸಾಹ ಹೀಗೆ ನಿರಂತರವಾಗಿ ನಮ್ಮ ಜೊತೆಗಿರಲಿ.

Manjunatha Kollegala said...

ಉತ್ತಮ ಪ್ರಯತ್ನ. ದಯವಿಟ್ಟು ಮುಂದುವರೆಸಿ. ಇದಕ್ಕೇ ಒಂದು ಬ್ಲಾಗನ್ನು ಮೀಸಲಿಟ್ಟರೆ ಮತ್ತೂ ಒಳ್ಳೆಯದು.

"೧೩ ಎಂದರೆ ಅಧ್ಯಾತ್ಮಿಕ ಸಂಖ್ಯಾ ಸೂಚಕದಲ್ಲಿ ದೀಪ ಎಂಬ ಅರ್ಥ ಬರುತ್ತದೆ. ಹೇಗೆಂದರೆ ಸಂಸ್ಕೃತದ ಕಟಪಯಾದಿ ಸೂತ್ರದ ಪ್ರಕಾರ ದೀಪ ಎಂಬ ಪದದಲ್ಲಿ... “ದ” ೩ನೇ ಸಂಖ್ಯೆ ಮತ್ತು “ಪ” “೧”ನೇ ಸಂಖ್ಯೆ. ಎರಡೂ ಸೇರಿದಾಗ ೩೧ ಆಗುತ್ತದೆ. ನಾವು ಸಂಖ್ಯೆಗಳನ್ನು ಬದಲಿಸಿದಾಗ ೧೩ ಆಗುತ್ತದೆ. ಹೀಗೆ ೧೩ ಪದ್ಯಗಳಿಗೆ ದೀಪ ಎನ್ನುವ ಅರ್ಥ ಬಂದು ಮಂಗಳಾಚರಣ ಸಂಧಿಯು ಇಡೀ ಹರಿಕಥಾಮೃತಸಾರಕ್ಕೆ ಅಧ್ಯಾತ್ಮಿಕ ದೀಪದಂತೆ ಇದೆ" - ಇದಕ್ಕೆ ತುಸು ವಿವರಣೆಯ ಅರ್ಥವಿದೆಯೆನ್ನಿಸುತ್ತದೆ.

ಇದರಲ್ಲಿ ನೀವು ಹೇಳುವ "ಆಧ್ಯಾತ್ಮಿಕ ಸಂಖ್ಯಾ ಸೂಚಕ"ವೆಂದರೆ ಯಾವುದು? ಕಟಪಯಾದಿ ನಿಯಮವೇನೇ? ಹಾಗಿದ್ದರೆ ಆ ನಿಯಮದ ಪ್ರಕಾರ ೧೩ "ದೀಪ"ವನ್ನು ಸೂಚಿಸುವುದಿಲ್ಲವಲ್ಲ? ಕಟಪಯಾದಿ ನಿಯಮದಂತೆ ದ ೩ನೆಯ ಸಂಖ್ಯೆಯಾಗುವುದಿಲ್ಲ, ಬದಲಿಗೆ ಅದು ೮ನೆಯ ಸಂಖ್ಯೆ. ನಾನು ತಿಳಿದ ಪ್ರಕಾರ ಕಟಪಯಾದಿ ನಿಯಮ ಹೀಗೆ: ಕಾದಿ ನವ, ಟಾದಿ ನವ, ಪಾದಿ ಪಂಚ, ಯಾದಿ ಅಷ್ಟ ಅಂದರೆ ಕ ಅಕ್ಷರದಿಂದ ಒಂಬತ್ತು ಅಕ್ಷರಗಳು, ಟ ಅಕ್ಷರದಿಂದ ಒಂಬತ್ತು, ಪ ಅಕ್ಷರದಿಂದ ಐದು ಮತ್ತು ಯ ಅಕ್ಷರದಿಂದ ಎಂಟು ಹೀಗೆ ವ್ಯಂಜನ ವರ್ಣಮಾಲೆಯನ್ನು ಭಾಗಮಾಡಿದೆ. ಈ ಲೆಕ್ಕದಲ್ಲಿ ದೀಪ ಎಂಬ ಪದವನ್ನು ಗಮನಿಸಿದರೆ ದ ಎಂಬುದು "ಟಾದಿ ನವ" ವರ್ಗದಲ್ಲಿ ಬರುತ್ತದೆ, ಅದು ೮ನೇ ಅಕ್ಷರ; ಮತ್ತು ಪ ಎನ್ನುವುದು "ಪಾದಿ ಪಂಚ"ದಲ್ಲಿ ಬರುವ ೧ನೆಯ ಅಕ್ಷರ. ಅಂದರೆ ೮೧ ಆಯಿತು. ಇನ್ನು "ಅಂಕಾನಾಂ ವಾಮತೋ ಗತಿಃ" ಎಂಬ ಮಾತಿನಂತೆ ೮೧ ನ್ನು ತಿರುಗಿಸಿ ಬರೆದರೆ ೧೮. ಅಂದರೆ ದೀಪದ ಸಂಖ್ಯಾಸೂಚಿ ಹದಿಮೂರಲ್ಲ, ಹದಿನೆಂಟು!