Thursday, November 26, 2015

ಕರುಣಾ ಸಂಧಿ - ೩೧ ನೇ ಪದ್ಯ



ಶ್ರೀ ಮನೋರಮ ಶಮಲವರ್ಜಿತ
ಕಾಮಿತಪ್ರದ ಕೈರವದಳ-
ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ |
ಸಾಮಸನ್ನುತ ಸಕಲಗುಣಗಣ-
ಧಾಮ ಶ್ರೀ ಜಗನ್ನಾಥ ವಿಟ್ಠಲ
ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು || ೩೧ ||


ಪ್ರತಿಪದಾರ್ಥ : ಶ್ರೀ ಮನೋರಮ - ಮಹಾಲಕ್ಷ್ಮಿಯ ಮನಸ್ಸಿಗೆ ಆನಂದ ಕೊಡುವವನು, ಶಮಲವರ್ಜಿತ - ದೋಷದೂರನಾದವನು, ಕಾಮಿತಪ್ರದ - ಇಷ್ಟಾರ್ಥಗಳನ್ನೆಲ್ಲಾ ಪೂರೈಸುವವನು, ಕೈರವದಳ ಶ್ಯಾಮ - ನೈದಿಲೆ ಹೂವಿನಂತೆ ನೀಲವರ್ಣ ವಿಶಿಷ್ಟನಾದವನು, ಶಬಲ - ಮಿಶ್ರವರ್ಣ ಉಳ್ಳವನು, ಶರಣ್ಯ - ಮೊರೆಹೊಕ್ಕವರಿಗೆ ಆಸರೆಯಾದವನು, ಶಾಶ್ವತ - ಎಂದಿಗೂ ಬದಲಾಗದ ನಿರ್ವಿಕಾರನು, ಶರ್ಕರಾಕ್ಷಸಖ - ಶರ್ಕರಾ ಎಂದರೆ ಸೂಕ್ಷ್ಮವಾದಂಥ ಮತ್ತು ಅಕ್ಷ ಎಂದರೆ ಜ್ಞಾನ ಎಂದರ್ಥ, ಸಾಮಸನ್ನುತ - ಸಾಮವೇದದಿಂದ ಸ್ತುತಿಸಲ್ಪಡುವವನು, ಸಕಲ ಗುಣಗಣಧಾಮ - ಸಮಸ್ತ ಕಲ್ಯಾಣ ಗುಣಗಳಿಗೆ ಆಶ್ರಯನಾದವನು, ಶ್ರೀ ಜಗನ್ನಾಥ ವಿಟ್ಠಲನು - ಜಗತ್ತಿಗೇ ಸ್ವಾಮಿಯಾದವನು, ಈ ಮಹಿಯೊಳವತರಿಸಿ - ಈ ಭೂಮಿಯಲ್ಲಿ ಮತ್ತೆ ಮತ್ತೆ ಅವತರಿಸಿ, ಸಲಹಿದ ಸಕಲ ಸುಜನರನು - ಸಮಸ್ತ ಸಜ್ಜನರನ್ನು ಕಾಪಾಡುವವನು.

ಕರುಣಾ ಸಂಧಿಯ ಕಡೆಯ ಪದ್ಯದಲ್ಲಿ ಶ್ರೀ ಜಗನ್ನಾಥದಾಸರು ಭಕ್ತಿ ಪರವಶತೆಯಿಂದ ಭಗವಂತನನ್ನು ನಾನಾ ವಿಧವಾಗಿ, ವಿಶೇಷಣಗಳಿಂದ ಸ್ತುತಿಸಿದ್ದಾರೆ.  ಪರಮ ಕಾರುಣ್ಯದ ಭಾವವನ್ನೂ, ಮತ್ತು ಗುಣಗಳನ್ನೂ ವಿಧ ವಿಧವಾದ,  ವಿಶೇಷವಾದ ಗುಣವಾಚಕಗಳನ್ನು ಬಳಸಿ ಹೇಳಿದ್ದಾರೆ.  ಮಹಾ ವೈಭವೋಪೇತನಾದರೂ ಭಕ್ತರನ್ನು ಅನುಗ್ರಹಿಸುವುದಕ್ಕಾಗಿಯೇ ಈ ಭುವಿಯಲ್ಲಿ ಅನೇಕ ಬಾರಿ ಅವತರಿಸಿ ಮತ್ತು ಮುಂದೆಯೂ ಅವತರಿಸುವನು ಎನ್ನುತ್ತಾ ಭಗವಂತನ ಎಲ್ಲೆಯಿಲ್ಲದ ಕಾರುಣ್ಯದ ಮಹಿಮೆಯನ್ನು ಕೊಂಡಾಡುತ್ತಾ ಕರುಣಾ ಸಂಧಿಯನ್ನು  ಪರಿಸಮಾಪ್ತಿಗೊಳಿಸಿದ್ದಾರೆ.

ಶ್ರೀ ಮನೋಹರ / ಶ್ರೀ ಮನೋರಮ - ಶ್ರೀ ಮನೋಹರನೆಂದರೆ ಶ್ರೀ- ರಮಾದೇವಿಯ ಮನಸ್ಸಿಗೆ ರತಿಯನ್ನು ನೀಡುವವನು ಶ್ರೀ ಮನೋಹರನೆಂದರೆ ಶ್ರೀದೇವಿಗೆ ಮಾತ್ರ ಮನಸೆಳೆವ ಪತಿ ಹರಿಯಾಗಿರುವನು.  ಗೋಪಿಯರ ಮನಸ್ಸನ್ನು ಸೆಳೆದದ್ದು, ಹದಿನಾರು ಸಾವಿರ ಸ್ತ್ರೀಯರನ್ನು ಕಲ್ಯಾಣವಾದದ್ದೆಲ್ಲವೂ ಅವರವರ ತಪಸ್ಸಿಗೆ ತಕ್ಕ ಫಲವಾಗಿಯೂ, ಅವರಲ್ಲಿ ರಮಾದೇವಿಯ ಆವೇಶವಾಗಿದ್ದರಿಂದಲೂ ನಡೆಯುವುದು.  ಶ್ರೀಹರಿ ಎಂದಿಗೂ ಕಾಮವೆಂಬ ದೋಷಕ್ಕೆ ಸಿಲುಕುವವನೂ, ಪರಸ್ತ್ರೀಯರನ್ನು ಮೋಹಿಸುವವನೂ ಅಲ್ಲ.  ಭಗವಂತನು ರಮಾದೇವಿಯನ್ನು ಮಾತ್ರವೇ ಮೋಹಿಸುವವನು ಎಂಬರ್ಥವಾಗಿರುವುದು.  ಶ್ರೀಹರಿಯು ಸದಾ ಕಾಲವೂ ಮಹಾಲಕ್ಷ್ಮಿಯನ್ನು ಆನಂದಗೊಳಿಸುವವನಾಗಿರುವನು.

ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಈ ಪದ್ಯದಲ್ಲಿ ಬಳಸಲ್ಪಟ್ಟಿರುವ ಭಗವಂತನ ವಿಶೇಷ ನಾಮಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.  ಕೇವಲ ವೇದದಲ್ಲಿ ಮಾತ್ರವೇ ಬರುವ  ನಾಮಗಳನ್ನು ದಾಸರಾಯರು ಇಲ್ಲಿ ಬಳಸಿದ್ದಾರೆಂದೂ, ಇವುಗಳನ್ನು ವೈದಿಕ ನಾಮಗಳೆಂದು ಅರ್ಥೈಸಬೇಕೆಂದೂ ತಿಳಿಸಿದ್ದಾರೆ.  ಐತರೇಯೋಪನಿಷತ್ತಿನಲ್ಲಿ ಭಗವಂತನು ಚತುರ್ಮುಖ ಶರೀರವನ್ನು ಕಾಲಿನ ತುದಿಯಿಂದ ಪ್ರವೇಶಿಸಿದನು ಎಂಬ ವಿವರಣೆಯಿದೆ.  ಹಾಗೆ ಪ್ರವೇಶಿಸಿ ಊರ್ಧ್ವಮುಖನಾಗಿ ಚಲಿಸಿದ ಭಗವಂತನಾದ ವಾಸುದೇವನು ವಾಯು ಮತ್ತು ಇತರ ಇಂದ್ರಿಯಾಭಿಮಾನಿ ದೇವತೆಗಳೊಂದಿಗೆ ತಲೆಯನ್ನು ಆಶ್ರಯಿಸಿದನೆಂದು ತಲೆಯನ್ನು ’ಶಿರಸ್’ ಎನ್ನಲಾಯಿತು.  ಚಕ್ಷುಸ್, ಶ್ರೋತ್ರ, ಮನಸ್, ವಾಕ್, ಪ್ರಾಣ ಮೊದಲಾದ ದೇವತೆಗಳು ಶಿರಸ್ಸನ್ನಾಶ್ರಯಿಸಿದ್ದು ಪ್ರರಬ್ರಹ್ಮನ ಉಪಾಸನೆ ಮಾಡುವುದರಿಂದ ಅವರುಗಳು ’ಶ್ರೀ’ ಎನಿಸಿದ್ದಾರೆಂಬ ಉಲ್ಲೇಖವಿದೆ. ಆದರೆ ಇಂದ್ರಿಯಗಳೇ ಶ್ರೀ ಆಗುವುದಿಲ್ಲ.  ಇಂದ್ರಿಯಗಳಲ್ಲಿ ನೆಲೆಸಿರುವ ಅಭಿಮಾನಿ ದೇವತೆಗಳು, ಆ ದೇವತೆಗಳಲ್ಲಿರುವ ಪಂಚ ಪ್ರಾಣಗಳು, ಪಂಚ ಪ್ರಾಣಗಳಲ್ಲಿ ನೆಲೆಸಿರುವ ಪಂಚರೂಪಿಯಾದ ಭಗವಂತನು "ಶ್ರೀ" ಶಬ್ದ ವಾಚ್ಯನಾಗಿರುವನು.  ಅಭಿಮಾನಿ ದೇವತೆಗಳಾದ ಸೂರ್ಯ, ಚಂದ್ರ, ಅಗ್ನಿ, ಗರುಡ, ಶೇಷ, ರುದ್ರ ಮತ್ತು ಬ್ರಹ್ಮ ವಾಯುಗಳಾದ ಎಂಟು ಜನ ದೇವತೆಗಳ ಮನಗಳಲ್ಲಿ ಗೋಚರವಾಗಿ ಭಗವಂತನು ಅವರಿಗೆ ಮುದ ನೀಡುವನಾದ್ದರಿಂದ ಈ ದೇವತೆಗಳೂ ಕೂಡ ಶ್ರೀ ಶಬ್ದ ವಾಚ್ಯರಾಗುವರು ಎಂದರ್ಥೈಸಿಕೊಳ್ಳಬೇಕಾಗುವುದು.  ಹಾಗೇ ಶ್ರೀ ಎಂದರೆ ವೇದಗಳು ಎಂಬ ಅರ್ಥವೂ ಇರುವುದರಿಂದ, ವೇದಾಭಿಮಾನಿ ದೇವತೆಗಳಾದ ಲಕ್ಷ್ಮೀ, ಸರಸ್ವತಿ, ಭಾರತಿಯರ ಮನದಲ್ಲಿ ಗೋಚರನಾಗಿ ಅವರಿಗೆ ಸಂತೋಷ ಕೊಡುವವನಾಗಿರುವವನು ಶ್ರೀಮನೋಹರನಾದ ಭಗವಂತನು ಎಂಬುದು ವೈದಿಕವಾದ ಅರ್ಥವಾಗುವುದು.

ಶಮಲವರ್ಜಿತ - ಶಮಲವೆಂದರೆ ದೋಷವೆಂದು ಅರ್ಥವಾಗುತ್ತದೆ.  ಪದವನ್ನು ಬಿಡಿಸಿದಾಗ ಶ + ಮಲ = ಶ ಎಂದರೆ ಆನಂದವೆಂದೂ, ಮಲ ಎಂದರೆ ದೋಷ, ದುಃಖದ ಜೊತೆಗಿರುವ ಆನಂದದ ಮಲ/ದೋಷವೆಂದರ್ಥವಾಗುವುದು.  ನಮ್ಮಂತಹ ಪಾಮರರಿಗೆ ದುಃಖ ಮಿಶ್ರಿತ ಸುಖವಿರುವುದು.  ದೋಷವೆಂದರೆ ದುಃಖವೆಂದಾದಾಗ, ಭಗವಂತನು ದುಃಖವಿಲ್ಲದವನು, ಅವನು ಸದಾ ಆನಂದಮಯನಾಗಿರುವನು.  ಭಕ್ತರಿಗೆ, ಸಾಧಕರಿಗೆ ಜ್ಞಾನಾನಂದವನ್ನು ಕೊಡುವವನಾಗಿರುವನು.     ಶ್ರೀಹರಿಯನ್ನು ಜ್ಞಾನಾನಂದ ಸ್ವರೂಪನೆಂದು ಆರಾಧಿಸಿದಾಗ ನಮಗೆ ನಮ್ಮ ಸ್ವರೂಪ ಜ್ಞಾನವನ್ನು  ಕರುಣೆಯಿಂದ ದಯಪಾಲಿಸುವವನಾಗಿರುವನು.    ಭಗವಂತನು ಕಾಮಾದಿ ದೋಷಗಳಿಂದ ವರ್ಜಿತನಾಗಿರುವುದರಿಂದ, ಅವನು ಸರ್ವ ದೋಷಗಳಿಂದಲೂ ವರ್ಜಿತನು.  ಆದ್ದರಿಂದಲೇ ಅವನು ಶ್ರೀಮನೋಹರನಾಗಿರುವನು. 

ನಾರಾಯಣೋಪನಿಷತ್ತಿನಲ್ಲಿ ಭಗವಂತನನ್ನು "ನಿಷ್ಕಳಂಕೋ ನಿರಂಜನೋ ನಿರ್ವಿಕಲ್ಪೋ ನಿರಾಖ್ಯಾತಶ್ಶುದ್ಧೋ ದೇವ ಏಕೋ ನಾರಾಯಣಃ" - ನಾರಾಯಣನು ನಿಷ್ಕಳಂಕನು, ನಿರಂಜನನು, ನಿರ್ವಿಕಲ್ಪನು, ಮಾತಿನಲ್ಲಿ ಹೀಗೆಂದು ಹೇಳಲು ಸಾಧ್ಯವಿಲ್ಲದವನು.  ಶುದ್ಧನೂ, ದೇವನೂ ಅದ್ವಿತೀಯನು ಆ ನಾರಾಯಣನಲ್ಲದೆ ಮತ್ಯಾರೂ ಇಲ್ಲವೇ ಇಲ್ಲ ಎಂದು ತಿಳಿಸಲಾಗಿದೆ.

ಭಗವದ್ಗೀತೆಯ ಎರಡನೆಯ ಅಧ್ಯಾಯ ೬೨ನೆಯ ಶ್ಲೋಕದಲ್ಲಿ

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ |
ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋSಭಿಜಾಯತೇ || - ವಿಷಯಗಳನ್ನು ಚಿಂತಿಸುವ ಪುರುಷನಿಗೆ ಆ ವಿಷಯದಲ್ಲಿ ಆಸಕ್ತಿಯುಂಟಾಗುವುದು.  ಆಸಕ್ತಿಯಿಂದಾಗಿ ಆ ವಿಷಯಗಳ ಕಾಮನೆಯುಂಟಾಗುವುದು ಮತ್ತು ಕಾಮನೆಗಳು ಪೂರ್ಣವಾಗದಿದ್ದಾಗ ಕ್ರೋಧವುಂಟಾಗುವುದು ಎಂದು ಭಗವಂತನೇ ತಿಳಿಸಿರುವನು.  ಕಾಮ ಒಂದಿದ್ದರೆ ಸಾಕು, ಅದಕ್ಕೆ ಅಡಚಣೆಯಾದಾಗ ಕ್ರೋಧ ತಾನಾಗೇ, ಅರಿವಿಲ್ಲದಂತೆಯೇ ಬಂದು ಬಿಡುವುದು.  ಸದ್ದಿಲ್ಲದೇ ಬಂದ ಕ್ರೋಧವು ಧರ್ಮಕ್ಕೆ ವಿರುದ್ಧವಾದಂತಹ ಅಕಾರ್ಯಗಳಲ್ಲಿ ತೊಡಗುವಂತೆ ಮೋಹಗೊಳಿಸುವುದು.  ಶಾಸ್ತ್ರಗಳಲ್ಲಿ ತಿಳಿಸಿರುವ ವಿಧಿ ನಿಷೇಧದ ಅರಿವನ್ನು ಮರೆಯುವಂತೆ ಮಾಡುವುದು.  ಸರಿ ತಪ್ಪುಗಳ ವಿಮರ್ಶೆಯನ್ನೇ ಇಲ್ಲವಾಗಿಸಿ, ವ್ಯಕ್ತಿಯನ್ನು ವಿವೇಕ ಶೂನ್ಯನನ್ನಾಗಿಸುವುದು.  ವಿವೇಕ ಕಳೆದುಕೊಂಡ ಕ್ಷಣದಿಂದಲೇ ಬದುಕು ಅನರ್ಥಗಳ  ದಾರಿಯಲ್ಲಿ ವೇಗವಾಗಿ ಚಲಿಸುವುದು.  

ಸಮಸ್ತ ದೇವತೆಗಳೂ ತಮ್ಮಲ್ಲಿರುವ ದೋಷಗಳನ್ನು ಕಳೆದುಕೊಳ್ಳುವುದಕ್ಕೋಸ್ಕರವೇ ಭಗವಂತನನ್ನು ಮನನ ಮಾಡುವರು ಏಕೆಂದರೆ ಭಗವಂತನು ದೋಷ ವರ್ಜಿತನಾಗಿರುವನು. ಅವನು ಶಮಲವರ್ಜಿತನಾಗಿರುವನು ಆದ್ದರಿಂದಲೇ ಅವನು ಶ್ರೀಮನೋಹರನಾಗಿರುವನು ಎಂದು ತಿಳಿಯಬೇಕು.

ಕಾಮಿತಪ್ರದ -  ಸರ್ವ ಗುಣ ಪರಿಪೂರ್ಣ ಹಾಗೂ ಸಕಲ ದೋಷ ವರ್ಜಿತನಾಗಿರುವುದರಿಂದಲೇ ಭಗವಂತನು ಕಾಮಿತ ಪ್ರದನಾಗಿರುವನು.  ಕ ಎಂದರೆ ಆನಂದವೆಂಬ ಅರ್ಥವಾದರೆ, ಭಗವಂತನು ಮೋಕ್ಷದಲ್ಲಿ ಅಮಿತವಾದ ಆನಂದವನ್ನು ಕೊಡುವವನು, ಆದ್ದರಿಂದ ಅವನು ’ಕಾಮಿತ’ನೆನಿಸುವನು.  ಭಕ್ತರು ಮೋಕ್ಷದ ಸುಖಕ್ಕಾಗಿಯೂ, ಧರ್ಮ, ಅರ್ಥ, ಕಾಮಗಳ ಅಭೀಷ್ಟೆಗಳಿಂದಲೂ ಭಗವಂತನನ್ನು ಪ್ರಾರ್ಥಿಸುವರು.  ಸಕಲರ ಅಭೀಷ್ಟಗಳನ್ನೂ ಕರುಣೆಯಿಂದ ದಯಪಾಲಿಸುವ ಭಗವಂತನು ಕಾಮಿತಪ್ರದನೆನಿಸುವನು.  ಸಾಮಾನ್ಯ ಭಕ್ತರಿಗಿಂತ ವಿಭಿನ್ನರಾದ ಅಂತರಂಗ ಭಕ್ತರು ಭಗವಂತನಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನೆಲ್ಲಾ ಯಾವುದನ್ನೂ ಬಯಸುವುದಿಲ್ಲ.  ಅವರು ಭಗವಂತನನ್ನೇ ಬಯಸುವರು, ಬೇರೇನನ್ನೂ ಅಲ್ಲ.  ಇಂತಹ ಭಕ್ತರಿಂದ ಸದಾ ಕಾಮಿತನಾದ ಭಗವಂತನು ’ಕಾಮಿತ’ ವಾಚ್ಯನಾಗುವನು.  ಮತ್ತು ಆರಾಧಿಸುವ ಭಕ್ತರಿಗೆ ಅತ್ಯಂತ ಶ್ರೇಷ್ಠವಾದ ಸ್ವರೂಪ ಆನಂದವನ್ನು ಕೊಡುವವನಾಗಿರುವನು, ಆದ್ದರಿಂದ ಭಗವಂತನು ’ಪ್ರದ’ ಎನಿಸುವನು (ಶ್ರೀ ಬನ್ನಂಜೆ ಅವರ ಪ್ರವಚನ ಆಧಾರಿತ). 

ಭಗವದ್ಗೀತೆಯ ೪ನೆಯ ಅಧ್ಯಾಯದ ೮ನೆಯ ಶ್ಲೋಕದಲ್ಲಿ ಭಗವಂತನು
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ || - ಸಾಧು ಪುರುಷರನ್ನು ಉದ್ಧರಿಸುವುದಕ್ಕಾಗಿ, ಪಾಪಕರ್ಮ ಮಾಡುವವರನ್ನು ವಿನಾಶ ಮಾಡಲಿಕ್ಕಾಗಿ ಮತ್ತು ಧರ್ಮವನ್ನು ಚೆನ್ನಾಗಿ ಸ್ಥಾಪಿಸುವುದಕ್ಕಾಗಿ ನಾನು ಯುಗ-ಯುಗಗಳಲ್ಲಿ ಪ್ರಕಟನಾಗುತ್ತೇನೆ ಎನ್ನುವ ಭರವಸೆಯನ್ನು ಕೊಟ್ಟಿರುವನು.  ತನ್ನನ್ನೇ ಬಯಸುವಂತಹ ಸಾಧು ಜನರಿಗಾಗಿ ಭಗವಂತ ತಾನು ಅಸಂಖ್ಯಾತ ಅವತಾರಗಳನ್ನು ಎತ್ತುತ್ತಲೇ ಇರುವೆನು ಎಂದು ತಿಳಿಸಿರುವನು. 

ಯಾರು ಸರ್ವ ಶ್ರೇಷ್ಠ ಗುಣಗಳನ್ನು ಹೊಂದಿರುವರೋ, ದೋಷ ರಹಿತರಾಗಿರುವರೋ ಅವರು ಇತರರ ದೋಷಗಳನ್ನು ದೂರ ಮಾಡಬಲ್ಲರು, ಅಭೀಷ್ಟಗಳನ್ನು ನೆರವೇರಿಸಬಲ್ಲರು.  ತಮ್ಮಲ್ಲೇ ದೋಷವಿದ್ದವರು, ತಮ್ಮ ದೋಷಗಳನ್ನೇ ಸರಿಪಡಿಸಿಕೊಳ್ಳಲಾರದವರು ಇತರರ ದೋಷಗಳನ್ನೂ, ಅವಗುಣಗಳನ್ನೂ ದೂರ ಮಾಡಲು ಅಸಾಧ್ಯವಾಗಿರುವುದು.  ಭಗವಂತನು ಸರ್ವ ಶ್ರೇಷ್ಠನು, ಉತ್ಕೃಷ್ಠನು ಎನ್ನುವುದನ್ನು ಶ್ರೀವಾದಿರಾಜ ಗುರುಗಳು ತಮ್ಮ "ಲಕ್ಷ್ಮೀ ಶೋಭಾನೆ" ಕೃತಿಯಲ್ಲಿ

ತಾ ದುಃಖಿಯಾದರೆ ಸುರತಿಯ ಕಳೆದು
ಮೋದವೀವುದಕೆ ಧರೆಗಾಗಿ |
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಬಾಧಿಪ ಕೆಸರ ಬಿಡಿಸುವನೆ? - ದೋಷ ರಹಿತನಾದ ಭಗವಂತನು ಮಾತ್ರವೇ ಇತರರ ದೋಷಗಳನ್ನು ದೂರ ಮಾಡುವ ಸಾಮರ್ಥ್ಯ ಉಳ್ಳವನಾಗಿರುವನು.  ತಾನೇ ಕೆಸರಿನಲ್ಲಿ ಮುಳುಗಿರುವವನು ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವನಲ್ಲದೇ ಪರರನ್ನು ಬಾಧಿಸುವ ಕೆಸರನ್ನು ಬಿಡಿಸುವ ಸಾಹಸ ಮಾಡುವವನಲ್ಲ.  ತಾನು ಕೆಸರಿನಿಂದ ಮೇಲೆದ್ದರೆ ಮಾತ್ರವೇ ಕೆಸರಿನಲ್ಲಿ ಇನ್ನೂ ಮುಳುಗಿರುವ ಮತ್ತೊಬ್ಬನನ್ನು ಮೇಲೆತ್ತುವ ಆಲೋಚನೆ ಮಾಡಬಹುದು.  ಆದರೆ ಭಗವಂತ ಸರ್ವ ದುಃಖರಹಿತನೂ, ಸರ್ವ ದೋಷರಹಿತನೂ ಆಗಿರುವುದರಿಂದಲೇ ಮತ್ತೆ ಮತ್ತೆ ಅವತಾರಗಳನ್ನೆತ್ತುತ್ತಾ ಸುರಾದಿ ದೇವತೆಗಳ ದುಃಖ, ದೋಷಗಳನ್ನು ದೂರ ಮಾಡಿ ಅವರ ಮನಸ್ಸಿಗೆ ಮುದ ಕೊಡುವನು ಎಂದು ವಿವರಿಸಿದ್ದಾರೆ.  

ಕೈರವದಳಶ್ಯಾಮ - ಕೈ ಎಂದರೆ ಶಬ್ದವೆಂದೂ, ಶಬ್ದದ ಸಮುದಾಯವಾದ ’ವೇದ’ ಎಂದೂ ಒಂದರ್ಥವಿದೆ.  ಕೈ ಇಂದ ರವತಿ - ಈ ವೇದಗಳೆಂಬ ಶಬ್ದ ಸಮೂಹದಿಂದ ಪ್ರಕಟಗೊಳ್ಳುವವನಾದ ಭಗವಂತನು, ದಲನ - ನಾಶಮಾಡುವವನು, ಅಂದರೆ ನಮ್ಮ ಭವವನ್ನು ನಾಶ ಮಾಡುವವನಾಗಿರುವನು ಎಂದರ್ಥವಾಗುವುದು.  ಆದ್ದರಿಂದಲೇ ಅವನು ಕೈರವದಳನೆನಿಸುವನು (ಶ್ರೀ ಬನ್ನಂಜೆಯವರ ಪ್ರವಚನ ಆಧಾರಿತ).  "ಅಂಗುಷ್ಠಮಾತ್ರಃ ಪುರುಷೋsನ್ತರಾತ್ಮಾ, ಸದಾ ಜನಾನಾಂ ಹೃದಯೇ ಸನ್ನಿವಿಷ್ಟಃ"  - ಹೆಬ್ಬೆರಳ ಗಾತ್ರವುಳ್ಳ ಪುರುಷನು ಶರೀರದಲ್ಲಿ ಹೃದಯ ಮಧ್ಯದಲ್ಲಿ ಇದ್ದಾನೆ ಎಂಬ ಕಠೋಪನಿಷತ್ತಿನ ಮಾತಿನಂತೆ ಭಗವಂತನು ನಮ್ಮ ಹೃದಯದಲ್ಲಿಯೇ ಅಡಗಿ ಕುಳಿತಿರುವನು.   ಕೈರವ ಎಂದರೆ ನೀಲಿ ಬಣ್ಣದ ನೈದಿಲೆಯೆಂಬರ್ಥವಾಗುವುದು.  ಹೃದಯ ಕಮಲದಲ್ಲಿ ನೆಲೆಸಿರುವ ಭಗವಂತನು ನೈದಿಲೆಯಂತೆ ನೀಲವರ್ಣದಿಂದ ಹೊಳೆಯುತ್ತಾ ನೆಲೆಸಿರುವನು.

ಭಗವಂತನು ಕೈರವದಳ ಶ್ಯಾಮನೂ ಆಗಿರುವನು ಮತ್ತು ನೀಲಮೇಘಶ್ಯಾಮನೂ ಆಗಿರುವನು. ಶ್ಯಾಮ ಎಂಬ ನಾಮವನ್ನು ಬೇರೆಯಾಗಿಯೇ ಅರ್ಥೈಸಬಹುದಾಗಿದೆ.  ’ಶ್ಯಾ’ ಎಂದರೆ ಆನಂದ ಮತ್ತು ’ಮ’ ಎಂದರೆ ಜ್ಞಾನ.  ಭಗವಂತನು ಪರಿಪೂರ್ಣನಾದ ಜ್ಞಾನಾನಂದಮಯನು.  ಆದ್ದರಿಂದಲೇ ಅವನು "ಶ್ಯಾಮ".  ಶ್ಯಾಮನೆಂದರೆ ನೀಲವರ್ಣದವನು.  ನೈದಿಲೆಯಂತೆ ನೀಲವರ್ಣದವನಾದ ಭಗವಂತನು ನಮ್ಮ ಹೃತ್ಕಮಲದಲ್ಲಿಯೇ ವಾಸಿಸುವವನಾಗಿರುವನು.

ಶಬಲ - ಶಬಲ ಎಂದರೆ ಸಂಸ್ಕೃತದಲ್ಲಿ ನಾನಾವರ್ಣದ, ಚಿತ್ರವರ್ಣದ ಎಂಬ ಅರ್ಥವಿದೆ.  ಭಗವಂತನ ಶಬಲವೆಂಬ ವಿಶೇಷಣಕ್ಕೆ ಕೂಡ ನಾನಾವರ್ಣವಿರುವವನು ಅಥವಾ ಸಕಲ ವರ್ಣಗಳೂ ಇರುವವನು ಎಂಬ ಅರ್ಥವೇ ಆಗುವುದು.  ಶ್ಯಾಮರೂಪಿ ಭಗವಂತನು  ನೀಲವರ್ಣದವನು, ಶಬಲರೂಪಿ ಭಗವಂತನು ಸಕಲ ವರ್ಣದವನು.  ಶಬಲರೂಪವು ಅರ್ಜುನನು ಕಂಡಂತಹ ವಿಶ್ವರೂಪಿ ಭಗವಂತನದ್ದು.  ಇಡೀ ವಿಶ್ವದಲ್ಲೇ ತುಂಬಿರುವ ವಿಶ್ವ ನಾಮಕ ಭಗವಂತನು ಶಬಲನೆನಿಸುವನು.  ವಿಶ್ವದ ಪ್ರತೀ ವಸ್ತುವಿನಲ್ಲಿಯೂ ವ್ಯಾಪಿಸಿರುವ ಭಗವಂತನು, ಆಯಾ ವಸ್ತುವಿನಲ್ಲಿ ಅದೇ ರೂಪದಲ್ಲಿಯೇ, ಅದೇ ವರ್ಣದಲ್ಲಿಯೇ ನೆಲೆಸಿರುವನು.  ಆದ್ದರಿಂದಲೇ ಅವನು ವರ್ಣರಂಜಿನಾದವನು ಮತ್ತು ಶಬಲನಾಮಕನಾಗುವನು.  ಹೃತ್ಕಮಲದಲ್ಲಿರುವ ನೀಲವರ್ಣದ ಶ್ಯಾಮರೂಪಿ ಭಗವಂತನನ್ನು ಸರ್ವ ಶ್ರೇಷ್ಠ ಸಾಧನೆಯ ಮೂಲಕ ಅಪರೋಕ್ಷ ಜ್ಞಾನವನ್ನು ಪಡೆದ ಸಾಧಕರು ಕಾಣುವರು.  ಧ್ಯಾನದ ತುರೀಯಾವಸ್ಥೆಯಲ್ಲಿ ನೀಲವರ್ಣದ ಶ್ಯಾಮರೂಪವನ್ನು ಕಂಡವರು, ತಮ್ಮ ಎಚ್ಚರದ ಸ್ಥಿತಿಯಲ್ಲಿ ಸಕಲ ವರ್ಣದ ಶಬಲರೂಪವನ್ನು ಕಾಣುವರು.

ಛಾಂದೋಗ್ಯೋಪನಿಷತ್ತಿನಲ್ಲಿ "ಶ್ಯಾಮಾಚ್ಛಬಳಂ ಪ್ರಪದ್ಯೇ ಶಬಳಾಚ್ಛ್ಯಾಮಂ ಪ್ರಪದ್ಯೇ" - ಶ್ಯಾಮರೂಪನಾದ (ನೀಲವರ್ಣದಿಂದ) ಭಗವಂತನಿಂದ ಶಬಲರೂಪನಾದ (ಸಕಲ ವರ್ಣಗಳಿಂದ ಶೋಭಿತನಾದ, ವಿಶ್ವರೂಪದ) ಭಗವಂತನನ್ನು ಕಾಣುತ್ತಿದ್ದೇನೆ.  ಮರಳಿ ಶಬಲರೂಪದಿಂದ ಶ್ಯಾಮರೂಪದ ಉಪಾಸನೆಗೆ ಹಿಂದಿರುಗುವೆನು ಎಂಬ ಉಲ್ಲೇಖವಿದೆ.

ಶಬಲ ಮತ್ತು ಶ್ಯಾಮ ಎರಡೂ ಒಂದೇ ಅರ್ಥ ಕೊಡುವಂತಹ ವಿಶೇಷಣಗಳು.  ’ಶ’  ಎಂದರೆ ಆನಂದ, ’ಬ’ ಎಂದರೆ ಜ್ಞಾನ, ಮತ್ತು ’ಲ’ ಎಂದರೆ ಕೊಡುವವನು, ಜ್ಞಾನಾನಂದವನ್ನು ಕೊಡುವವನು.  ನಮಗೆ ಅಪೇಕ್ಷಿತವಾದ ಮತ್ತು ನಾವು ಬಯಸುವ ನಮ್ಮ ಸ್ವರೂಪಾನಂದವನ್ನು (ಶಬ) ಕೊಡುವವನು (ಲ) ಎಂಬ ಅರ್ಥವಾಗುತ್ತದೆ.  ಭಗವಂತನ ಈ ನಾಮವು ವೈದಿಕ ನಾಮವಾಗಿರುವುದು.

ಶರಣ್ಯ - ಶರಣ್ಯ ಎಂದರೆ ಶರಣಾಗತಿ ಎಂದು ಆಶ್ರಯ ಕೇಳಿ ಬಂದ ’ಶರಣ’ರಿಗೆ ಆಶ್ರಯವನ್ನು ಕಲ್ಪಿಸಿಕೊಡುವವನು, ಆಸರೆಯನ್ನು ನೀಡುವವನು, ಸರ್ವ ವಿಧದ ರಕ್ಷಣೆಯನ್ನೂ ಕೊಡುವವನು, ಆಶ್ರಯದಾತನು ಎಂಬ ಅರ್ಥವಾಗುವುದು.  ಪ್ರತಿಯೊಬ್ಬ ಜೀವಿಯೂ ಅಂತಿಮವಾಗಿ ಭಗವಂತನಿಗೇ ಮೊರೆಹೋಗಬೇಕು.  ಅವನನ್ನೇ ಆಶ್ರಯಿಸಬೇಕು.  ಹಾಗೆ ತನ್ನನ್ನೇ ಒಪ್ಪಿಸಿಕೊಳ್ಳುವುದೂ, ಮೋಕ್ಷವನ್ನು ಬಯಸುವುದೇ ಜನ್ಮದ ರಹಸ್ಯವೆಂದು ತಿಳಿದು, ಭಗವಂತನ್ನು ಆರಾಧಿಸಿದಾಗ, ನಮ್ಮ ಭವ ಬಂಧನವನ್ನು ಬಿಡಿಸಿ, ಆಶ್ರಯ ನೀಡಿ, ಭಗವಂತನು "ಶರಣ್ಯ"ನಾಮಕನಾಗುವನು.  ನಮ್ಮ ಸಹಸ್ರ ಅಪರಾಧಗಳನ್ನೂ ಮನ್ನಿಸಿ ಶರಣ್ಯನಾಗುವ ಭಗವಂತನು ಅಪಾರ ಕರುಣಾಮಯನಾಗಿರುವನು.

ಭಗವದ್ಗೀತೆಯ ೯ನೆಯ ಅಧ್ಯಾಯದ ೧೮ನೆಯ ಶ್ಲೋಕದಲ್ಲಿ "ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್" - ಸಂಸಾರ ಭೀತರಿಗೂ ಮುಕ್ತಾತ್ಮರಿಗೂ ಆಶ್ರಯನಾಗಿರುವುದರಿಂದಲೇ ತಾನು ’ಶರಣಂ’ ಎನಿಸಿರುವೆನೆಂದು ಭಗವಂತನು ತಿಳಿಸಿರುವನು.

ವಿಷ್ಣು ಸಹಸ್ರನಾಮದಲ್ಲಿ "ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ" - ಸಂಸಾರದಲ್ಲಿ ಪರಿತಪಿಸುತ್ತಿರುವ ಅಜ್ಞಾನಿಗಳಿಗಷ್ಟೇ ಆಶ್ರಯನಲ್ಲ, ಜ್ಞಾನಿಗಳಿಗೂ ಮತ್ತು ಮುಕ್ತಾತ್ಮರಿಗೂ ಕೂಡ ಶ್ರೀಹರಿಯೇ ಆಶ್ರಯನು  ಎಂಬುದಾಗಿ ಉಲ್ಲೇಖಿಸಲಾಗಿದೆ.

ಶಾಶ್ವತ -  ಭಗವಂತನಲ್ಲಿರುವ ಸರ್ವ ಗುಣಗಳೂ, ಸದಾ ಸರ್ವದಾ, ಬದಲಾವಣೆಗೊಳಗಾಗದೇ ಪ್ರಾಕೃತಿಕವಾಗಿ ಇರುವಂತಹ ಗುಣಗಳು.  ಅವನ ಕರುಣಾಸಮುದ್ರವೆಂದೂ ಬತ್ತುವುದೇ ಇಲ್ಲ.  ಭಕ್ತರೆಡೆಗಿನ ಭಗವಂತನ ಕರುಣೆ, ವಾತ್ಸಲ್ಯ, ಪ್ರೀತಿ ಶಾಶ್ವತವಾಗಿ ಅನಾದಿಯಿಂದಲೂ, ಅನಂತ ಕಾಲದವರೆಗೂ ಹರಿಯುತ್ತಲೇ ಇರುವುದರಿಂದ, ಅವನು "ಶಾಶ್ವತ"ನೆಂಬ ವಿಶೇಷಣದಿಂದ ಕರೆಯಲ್ಪಡುವನು.  ಶಾಶ್ವತನೆಂದರೆ ಸಮಸ್ತವನ್ನೂ, ಎಲ್ಲಾ ಕಾಲದಲ್ಲಿಯೂ ತಿಳಿಯಬಲ್ಲವನು, ಪೂರ್ಣಜ್ಞಾನ ಸ್ವರೂಪನೂ ಆಗಿರುವನೆಂದು ತಿಳಿಯಬೇಕು.  ಶಾಶ್ವತ ಎಂಬ ನಾಮವನ್ನು ಬಿಡಿಸಿದಾಗ, ಈ ನಾಮದಲ್ಲಿಯೂ ’ಶಾ’ ಎಂದರೆ ಆನಂದ, ’ಅಶ್ವ’ ಎಂದರೆ ಹಯಗ್ರೀವ ರೂಪಿಯಾಗಿರುವವನು ಮತ್ತು ’ತ’ ಎಂದರೆ ತತನಾಗಿರುವವನು ಎಂಬ ಅನುಸಂಧಾನ ಮಾಡಿಕೊಳ್ಳಬೇಕು.  ಶ್ರೀಹರಿಯು ಸದಾ ಆನಂದ ಸ್ವರೂಪನಲ್ಲದೇ ಬೇರೆ ಅಲ್ಲವೇ ಅಲ್ಲ ಎಂಬುದನ್ನು ಪುನರಾವೃತ್ತಿಯಾಗಿ ದಾಸರಾಯರು ಉಲ್ಲೇಖಿಸುತ್ತಲೇ ಭಗವಂತನ ಕಾರುಣ್ಯದ ವರ್ಣನೆ ಮಾಡಿರುವರು. 

ಮಾಂಡೂಕೋಪನಿಷತ್ತಿನಲ್ಲಿ "ಓಮಿತ್ಯೇತದಕ್ಷರಮಿದಂ ಸರ್ವಂ ತಸ್ಯೋಪವ್ಯಾಖ್ಯಾನಂ ಭೂತಂ ಭವದ್ ಭವಿಷ್ಯದಿತಿ" - ಓಂ ಎನಿಸುವ ಭಗವಂತನು ನಾಶರಹಿತನಾದ ಪ್ರಯುಕ್ತ ಅಕ್ಷರ ಎನಿಸಿಕೊಂಡು ಭೂತ, ಭವಿಷ್ಯದ್, ವರ್ತಮಾನ ಕಾಲಗಳಲ್ಲೂ ಒಂದೇ ರೀತಿಯಾಗಿಯೇ ಇರುವನು ಎಂದು ತಿಳಿಸಲ್ಪಟ್ಟಿದೆ.    ಮಹಾನಾರಾಯಣೋಪನಿಷತ್ತಿನ ಸಪ್ತಮೋಧ್ಯಾಯ (ಉತ್ತರ ಕಾಂಡ) ೫ನೆಯ ಮಂತ್ರದಲ್ಲಿ ಭಗವಂತನನ್ನು "ಮನೋವಾಚಾಮಗೋಚರಂ, ನಿತ್ಯಮುಕ್ತ ಸ್ವರೂಪಂ..... ಎಂದೆಲ್ಲಾ ವರ್ಣಿಸುತ್ತಾ "ದೇಶತಃ ಕಾಲತೋ ವಸ್ತುತಃ ಪರಿಚ್ಛೇದರಹಿತಂ ನಿರಂತ ರಾಭಿನವಂ ನಿತ್ಯಪರಿಪೂರ್ಣಂ, ಅಖಂಡಾನಂದಾಮೃತ ವಿಶೇಷಂ, ಶಾಶ್ವತಂ ಪರಮಪದಂ" - ದೇಶದಿಂದ, ಕಾಲದಿಂದ, ವಸ್ತುವಿನಿಂದ, ಪರಿಚ್ಛಿನ್ನವಾಗದಂಥದ್ದು, ನಿರಂತರವೂ ಅಭಿನವವಾದುದು, ನಿತ್ಯ ಪರಿಪೂರ್ಣವಾದುದು, ಅಖಂಡಾನಂದಾಮೃತ ವಿಶೇಷ ಹಾಗೂ ಶಾಶ್ವತ, ಪರಮಪದ ಎಂಬ ವಿವರಣೆಯಿದೆ.

ಭಗವದ್ಗೀತೆಯ ೨ನೆಯ ಅಧ್ಯಾಯ ೨೦ನೆಯ ಶ್ಲೋಕದಲ್ಲಿ "ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ" - ಭಗವಂತನು ತಾನು ಜನ್ಮರಹಿತನೂ, ನಿತ್ಯನೂ, ಸನಾತನನೂ ಮತ್ತು ಪುರಾತನನೂ ಆಗಿರುವುದರಿಂದ ಶಾಶ್ವತನು ಎಂದು ಸ್ವಯಂ ಉಲ್ಲೇಖಿಸಿದ್ದಾನೆ.
ವಿಷ್ಣುಸಹಸ್ರನಾಮದಲ್ಲಿಯೂ "ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ" -  ಭಗವಂತನು ಅನಾದಿ ಹಾಗೂ ಅನಂತನಾದ್ದರಿಂದಲೇ ಅವನು ಶಾಶ್ವತನು ಎಂದಿದ್ದಾರೆ.    

ಶಾರ್ಕರಾಕ್ಷ್ಯಸಖ - ಶರ್ಕರಾ ಎಂದರೆ ಅತ್ಯಂತ ಸೂಕ್ಷ್ಮವಾದ, ಅಕ್ಷ ಎಂದರೆ ದೃಷ್ಟಿ ಉಳ್ಳವರು ಎಂದು ಅರ್ಥವಾಗುತ್ತದೆ.  ಅತ್ಯಂತ ಸೂಕ್ಷ್ಮವಾದ ಕಣ್ಣು (ದೃಷ್ಟಿ)ಗಳುಳ್ಳ ಋಷಿಗಳ ಸಮೂಹ.  ಇವರಲ್ಲಿ ಪ್ರಖ್ಯಾತರಾದವರು ಶಾರ್ಕರಾಕ್ಷ್ಯರು ಎಂಬ ಮುನಿಗಳು.   ಶ್ರೀಮದಾಚಾರ್ಯರು ತಮ್ಮ ಮಹೈತರೇಯೋಪನಿಷದ್ಭಾಷ್ಯದಲ್ಲಿ "ಸೂಕ್ಷ್ಯ ದೃಷ್ಟಿಯುತಾ ಯೇ ತು ಮುನಯಃ ಶಾರ್ಕರಾಕ್ಷ್ಯಕಾಃ" - ಸೂಕ್ಷ್ಮ ದೃಷ್ಟಿಯುಕ್ತರಾದ ಶಾರ್ಕರಾಕ್ಷ್ಯರೆಂಬ ಹೆಸರಿನ ಯಾವ ಮುನಿಗಳಿರುವರೋ ಅವರಿಗೆ ಅತ್ಯಂತ ಬೇಕಾದವನಾಗಿ, ಪ್ರೀತಿಪಾತ್ರದವನಾಗಿ, ಸಖನಾಗಿ ಇರುವ ಭಗವಂತನ ರೂಪವೇ ’ಶಾರ್ಕರಾಕ್ಷ್ಯಸಖ’ ರೂಪ ಎಂದು ತಿಳಿಸಿದ್ದಾರೆ.

ಶರ್ಕರಾಕ್ಷರು ಎಂದರೆ ಬ್ರಹ್ಮ ಜ್ಞಾನಿಗಳು, ಭಗವಂತ ಅವರಿಗೆ ಪ್ರಿಯನಾದವನು, ಆದ್ದರಿಂದಲೇ ಸಖನಾಗುವನು.  ಶರ್ಕರಾಕ್ಷ ಎಂಬ ಶಬ್ದವನ್ನು ಬಿಡಿಸಿದಾಗ ಶ = ಸುಖರೂಪಿಯಾದ, ರ = ಕ್ರೀಡೆ (ಸೃಷ್ಟಿಯೇ ಮುಂತಾದ ಆಟಗಳನ್ನಾಡುವ), ಕ = ಪೂರ್ಣನಾದ ಪರಮಾತ್ಮನಲ್ಲಿ, ರಾ= ರಕ್ತಿ / ಆಸಕ್ತಿ ಸಹಿತನಾದ, ಅಕ್ಷ = ಕಣ್ಣುಳ್ಳವನು ಶರ್ಕರಾಕ್ಷನು.  ಅವರಿಗೆ ಸಖನಾದ ಭಗವಂತನೆಂದರೆ, ಸ್ನೇಹಿತ / ಪ್ರಿಯವಾದವನು ಎಂಬ ಅರ್ಥ ತಿಳಿಯಬಹುದು.  ಶರ್ಕರಾಕ್ಷ ಎಂದರೆ ವಾಯುದೇವರು ಎಂದೂ ಅರ್ಥವಾಗುವುದು.  ವಾಯುದೇವರಿಗೆ ಪ್ರಿಯನಾದವನು ಭಗವಂತ ಎಂದು ಕೂಡ ತಿಳಿಯಬಹುದು (ಶ್ರೀ ಕೆ ಎಂ ಕೃಷ್ಣರಾವ ಪುಸ್ತಕ ಆಧಾರಿತ).

ಭಗವಂತನು ಎರಡು ವಿಧದಿಂದ ಪುರುಷಾಕಾರದ ಶರೀರ ಪ್ರವೇಶ ಮಾಡುವನು.  ಮೊದಲನೆಯದಾಗಿ ಪಾದದ ಮೂಲಕ ಮತ್ತು ಎರಡನೆಯದಾಗಿ ತಲೆಯ ಮೂಲಕ.  ಪಾದದ ಮೂಲಕ ಪ್ರವೇಶಿಸಿದ್ದರಿಂದ ಪುರುಷನ ಕಾಲಿನ ತುದಿಗೆ ’ಪ್ರಪದ’ ಎಂಬ ಹೆಸರಾಯಿತು.  ಐತರೇಯೋಪನಿಷತ್ತಿನಲ್ಲಿ ತಿಳಿಸಿರುವಂತೆ ವಾಸುದೇವ ರೂಪಿ ಭಗವಂತನು ಪುರುಷಾಕಾರದ ಚತುರ್ಮುಖ ಶರೀರವನ್ನು, ವಾಯು ಹಾಗೂ ಇತರ ಇಂದ್ರಿಯಾಭಿಮಾನಿ ದೇವತೆಗಳೊಂದಿಗೆ ಪಾದದ ಮೂಲಕ ಪ್ರವೇಶಿಸುವನು.  ಪುರುಷಾಕಾರದ ಹೊಟ್ಟೆಯ ಭಾಗದಲ್ಲಿ ಭಗವಂತನು ತನ್ನ ಜೊತೆ ಬಂದಿದ್ದ ವಾಯುದೇವರಿಗೆ ನೆಲೆಸಿ ಬಹುವಾಗಿ ಅನ್ನ ಉಂಡು ತನ್ನನ್ನು ಸ್ತುತಿಸುವಂತೆ ಆದೇಶಿಸುವನು.  ವಾಯುದೇವನು ಭಗವಂತನ ಆದೇಶವನ್ನು ಪಾಲಿಸಿದ ಹೊಟ್ಟೆಯ ಭಾಗವು ’ಉದರ’ ಎನಿಸಿಕೊಂಡಿತು.  ’ಉದ್’ ಚೆನ್ನಾಗಿ ’ಅರ’ ಉಂಡ ಮತ್ತು ಸ್ತೋತ್ರ ಮಾಡಿದ ಸ್ಥಳವಾದ್ದರಿಂದ ಅದು ಉದರವೆನಿಸಿತು.   ಶಾರ್ಕರಾಕ್ಷ್ಯರೆಂದು ಕರೆಯಲ್ಪಡುವ ಮುನಿಗಳ ಸಮೂಹವು ಭಗವಂತನನ್ನು "ಉದರ" ಎಂದು ಉಪಾಸನೆಗೈಯುವವರು.  ಉದರ ಎಂದರೆ ನಿಜವಾದ ಉದರವೆಂಬ ಅಂಗವಲ್ಲ, ಉದರವನ್ನು ಸ್ಥಳವನ್ನಾಗಿಸಿಕೊಂಡು ನೆಲೆ ನಿಂತಿರುವ ’ಉದರನಾಮಕ’ ಭಗವಂತನ ರೂಪವನ್ನು ಶಾರ್ಕರಾಕ್ಷ್ಯರು ಉಪಾಸನೆ ಮಾಡುವರು ಎಂಬ ಅರ್ಥವಾಗುವುದು.

ಮಹೈತರೇಯೋಪನಿಷತ್ತಿನಲ್ಲಿ ಶಾರ್ಕರಾಕ್ಷ್ಯರನ್ನು "ಉದರಂ ಬ್ರಹ್ಮೇತಿ ಶಾರ್ಕರಾಕ್ಷ್ಯಾ ಉಪಾಸತೇ" - ಶಾರ್ಕರಾಕ್ಷ್ಯ ಮುನಿಗಳು ಉದರದಲ್ಲಿರುವ ವಾಸುದೇವ ರೂಪವನ್ನು ಪರಬ್ರಹ್ಮನೆಂದು ಉಪಾಸನೆ ಮಾಡುವರು ಎಂಬ ಉಲ್ಲೇಖವಿದೆ.  ಇದನ್ನೇ ಆಚಾರ್ಯರು ತಮ್ಮ ಭಾಷ್ಯದಲ್ಲಿ "ಉದರೇ ತೇ ಪರಂ ಬ್ರಹ್ಮ ವಾಸುದೇವಮುಪಾಸತೇ"  ಎಂದು ವಿವರಿಸಿದ್ದಾರೆ.

ಭಾಗವತ ದಶಮಸ್ಕಂಧ, ೯೬ನೆಯ ಅಧ್ಯಾಯದಲ್ಲಿ ’ಶ್ರುತಿಗೀತೆ’ಯ ಐದನೆಯ ಪದ್ಯ "ಉದರಮುಪಾಸತೇ ಯರ್ಹಿ ವರ್ತ್ಮನಿ ಸೂಕ್ಷ್ಮದೃಶಃ" - ಬ್ರಹ್ಮ ವಿಚಾರ ಮಾರ್ಗದಲ್ಲಿ ಸೂಕ್ಷ್ಮದೃಷ್ಟಿಯುಳ್ಳ ಶಾರ್ಕರಾಕ್ಷ್ಯ ಮುನಿಗಳು ಉದರನಾಮಕನಾದ ಹರಿಯನ್ನು ಉಪಾಸಿಸುತ್ತಾರೆ.  ’ಶರ್ಕರಾ’ ಎಂದರೆ ಸಣ್ಣ ಮರಳಿನಂತೆ ಸೂಕ್ಷ್ಮವಾದ ಮತ್ತು ’ಅಕ್ಷಿ’ ಎಂದರೆ ಕಣ್ಣಿನ ದೃಷ್ಟಿ ಉಳ್ಳ ಮುನಿಗಳು ಶಾರ್ಕರಾಕ್ಷ್ಯರೆಂದು ಕರೆಯಲ್ಪಡುವರು.  ಇವರು ಉದರದಲ್ಲಿ ಉದರನಾಮಕನಾದ ಹರಿಯನ್ನು ಉಪಾಸನೆ ಮಾಡಿ ಬ್ರಹ್ಮನಾಡಿಯಿಂದ ಉತ್ಕ್ರಮಣ ಮಾಡಿ ಹರಿಯನ್ನು ಹೊಂದುವುದರಿಂದ ತಿರುಗಿ ಸಂಸಾರ ಬಂಧನದಲ್ಲಿ ಬೀಳುವುದಿಲ್ಲವೆಂದು ತಿಳಿಸಲಾಗಿದೆ.  (ಶ್ರೀ ಹಯವದನ ಪುರಾಣಿಕರ ಭಾಗವತ ತಾತ್ಪರ್ಯ ನಿರ್ಣಯ ಆಧಾರಿತ).

ಸಾಮಸನ್ನುತ - ಸಾಮಸನ್ನುತನೆಂದರೆ ಸಾಮವೇದದಿಂದ ಸ್ತುತಿಸಲ್ಪಡುವವನು.  ಭಗವಂತನು ಸಾಮಗಾನ ಪ್ರಿಯನಾದವನು.  ಸಮಸ್ತ ಮುನಿಗಳೂ ಭಗವಂತನನ್ನು ಸಾಮಾದಿ ವೇದಮಂತ್ರಗಳಿಂದಲೇ, ಸಾಮಗಾನ ಪ್ರಿಯನನ್ನು ಸ್ತುತಿಸಿ, ಉಪಾಸನೆ ಮಾಡುವರು.  ವೇದಮಂತ್ರಪೂರ್ವಕವಾಗಿ ಮನಸ್ಸನ್ನು ಭಗವಂತನಿಗೆ ಸಮರ್ಪಿಸಿದಾಗ ಮಾತ್ರವೇ ಮನಸ್ಸು ಭಗವಂತನಲ್ಲಿ ನೆಲೆ ನಿಲ್ಲಬಹುದಾಗಿದೆ.   ಸಾಮವೇದದ ವಿಶೇಷತೆಯೆಂದರೆ ಭಗವಂತನು ವೇದನಾಮಗಳೊಂದಿಗೆ ನಾದದಿಂದಲೂ ಸ್ತುತಿಸಲ್ಪಡುವನು.  ’ಸಾಮ’ ಎಂದರೆ ಭಗವಂತನು ಸಮಸ್ತ ರೂಪಗಳಲ್ಲಿಯೂ ಸಮನಾಗಿರುವನು, ಸಮಸ್ತ ಗುಣಪೂರ್ಣನಾಗಿರುವನು ಎಂಬ ಅರ್ಥವಾಗುವುದು.  ’ಸತ್’ ಶಬ್ದವು ವೇದಗಳಲ್ಲಿ ಬ್ರಹ್ಮ ಮತ್ತು ವಾಯುಗಳ ಹೆಸರಾಗಿರುವುದು.  ಅವರುಗಳಿಂದ ವಿಶೇಷವಾಗಿ ಸ್ತುತಿಸಲ್ಪಡುವವನು ಎಂದೂ ಅರ್ಥವಾಗುವುದು.  ಸನ್ನುತ ಶಬ್ದವನ್ನು ಬಿಡಿಸಿದಾಗ ಸತ್ ಎಂದರೆ ಸಜ್ಜನರಿಂದ ನುತ ಸ್ತುತಿಸಲ್ಪಡುವವನೂ ಎಂಬ ಅರ್ಥವೂ ಇರುವುದು.  ಸ ಎಂದರೆ ಭಾರತೀದೇವಿ, ವಾಗ್ದೇವತೆ ಹಾಗೂ ಅಮ ಎಂದರೆ ವಾಯುದೇವರು.  ಸಾಮ ಎಂದರೆ ಭಾರತೀದೇವಿ ಹಾಗೂ ಮುಖ್ಯಪ್ರಾಣ ದೇವರಿಂದ ಸ್ತುತಿಸಲ್ಪಡುವವನು ಎಂಬ ಅರ್ಥವೂ ಆಗುವುದು (ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರಿತ). 

ಭಗವದ್ಗೀತೆಯ ೧೦ನೆಯ ಅಧ್ಯಾಯದ ೨೨ನೆಯ ಶ್ಲೋಕದಲ್ಲಿ ಭಗವಂತ "ವೇದಾನಾಂ ಸಾಮವೇದೋಸ್ಮಿ.." ಎನ್ನುತ್ತಾ ತಾನು ಸಾಮಗಾನ ಪ್ರಿಯನೂ, ಸಾಮವೇದ ಮಂತ್ರಗಳಿಂದ ಸ್ತುತಿಸಿದವರಿಗೆ ಒಲಿಯುವೆನೆಂಬುದನ್ನೂ ಸ್ವತಃ ತಿಳಿಸಿದ್ದಾನೆ. 


ಸಕಲಗುಣಗಣಧಾಮ - ’ಸಕಲ’ ಎಂದರೆ ಷೋಡಶ ಕಲೆಗಳಿಗೂ ನಿಯಾಮಕನಾಗಿ, ಅದರ ಜೊತೆಗೇ ಇರುವವನು ಎಂಬರ್ಥವಾಗುವುದು.  ’ಗುಣ’ ಎಂದರೆ ಸಮಸ್ತ ಗುಣ ಪರಿಪೂರ್ಣನು, ದೋಷರಹಿತನು ಎಂಬರ್ಥವಾಗುವುದು.  ’ಗಣ’ ಎಂದರೆ ಸಮಸ್ತ ಭಕ್ತರ ಸಾಧನೆಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವವನು.  ’ಧಾ’ ಎಂದರೆ ಜಗತ್ತಿಗೇ ಧಾರಕನಾಗಿರುವವನು, ’ಧಾಮ’ ಎಂದರೆ ಸಮಸ್ತ ಗುಣಗಳ ಸಮೂಹಕ್ಕೆ ಅಮಿತ ಧಾರಕನಾಗಿರುವವನು , ಆಶ್ರಯದಾತನು ಎಂಬ ಅರ್ಥವಾಗುವುದು.

ಶ್ರೀ ಜಗನ್ನಾಥ ವಿಟ್ಠಲ - ಶ್ರೀ ಎಂದರೆ ಲಕ್ಷ್ಮೀದೇವಿ ಮತ್ತು ಜಗತ್ ಎಂದರೆ ಸರ್ವ ವ್ಯಾಪ್ತನಾಗಿರುವ ಪ್ರಾಣದೇವರಿಗೆ ’ನಾಥ’ ನಾಗಿರುವ ಭಗವಂತನು ಎಂಬರ್ಥವಾಗುವುದು.  ’ವಿಟ್’ ಎಂದರೆ ಅಜ್ಞಾನಿಗಳಿಗೆ ಜ್ಞಾನವನ್ನು ’ಲ’ ಎಂದರೆ ಕೊಟ್ಟು, ಅವರನ್ನು ಉದ್ಧರಿಸುವವನಾದ ಭಗವಂತನು ’ವಿಟ್ಠಲ’ನೆನಿಸುವನು. 

ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು - ಕಾಲ ಕಾಲಕ್ಕೆ ಧರ್ಮವನ್ನು ರಕ್ಷಿಸುವ ಸಲುವಾಗಿ ಭಗವಂತನು ಅನೇಕ ಅವತಾರಗಳಲ್ಲಿ ಪ್ರಾದುರ್ಭವಿಸುತ್ತಾ ಈ ಮಹಿಯೊಳಗೆ ಸಜ್ಜನರನ್ನು ಸಲಹುವನು.  ಭಗವಂತನು ಸ್ಥೂಲ ಬುದ್ಧಿಯವರೂ, ಅಜ್ಞಾನಿಗಳೂ ಆದ ನಮ್ಮನ್ನು ಉದ್ಧರಿಸುವ ಪರಮ ಕರುಣಾಮಯಿಯಾದವನು.  ಕರುಣಾಸಾಗರನು.  ಉಪನಿಷತ್ ಪ್ರತಿಪಾದ್ಯವಾದ ಭಗವಂತನ ರೂಪಗಳನ್ನೂ, ವಿಷ್ಣು ಸಹಸ್ರನಾಮದ ನಾಮಗಳನ್ನೂ ಉಲ್ಲೇಖಿಸುತ್ತಾ, ಸಕಲ ಶ್ರುತಿಸ್ಮೃತಿಗಳ ರಹಸ್ಯವನ್ನು ಸರಳವಾಗಿ ವಿವರಿಸುತ್ತಾ ಶ್ರೀಜಗನ್ನಾಥ ದಾಸರು, ಭಗವಂತನ ಅಪಾರ ಕರುಣೆಯನ್ನು ’ಕರುಣಾಸಂಧಿ’ ಎಂದೇ ಕರೆದಿರುವ ೩೧ ಪದ್ಯಗಳ ಸುಂದರ ಹೂವಿನ ಗುಚ್ಛದಲ್ಲಿ ವಿಧವಿಧವಾದ ಉಪಮೆಗಳ ಸಹಿತವಾಗಿ ವಿವರಿಸಿದ್ದಾರೆ.


 " ಶ್ರೀ ಕೃಷ್ಣಾರ್ಪಣಮಸ್ತು "

ಭಗವಂತನ ಕೃಪೆಯಿಂದ ಹರಿಕಥಾಮೃತಸಾರವೆಂಬ ಮೇರು ಗ್ರಂಥದ ಮೊದಲ ಎರಡು ಸಂಧಿಗಳಾದ "ಮಂಗಳಾಚರಣ ಸಂಧಿ" ಮತ್ತು "ಕರುಣಾಸಂಧಿ"ಯ ಪದ್ಯಗಳ ಅರ್ಥ ವಿವರಣೆಯು  ಇಲ್ಲಿಗೆ ಸಂಪನ್ನವಾಗಿದೆ.  ನಮಗೆ ತಿಳಿದ ಮಟ್ಟಿಗೆ ಮಾಡಿರುವ ಈ ನಮ್ಮ ಚಿಕ್ಕ ಪ್ರಯತ್ನವನ್ನು ೨-೩ ವರ್ಷಗಳಿಂದಲೂ  ಸತತವಾಗಿ ಓದಿ ನಮ್ಮನ್ನು ಪ್ರೋತ್ಸಾಹಿಸಿದ  ಎಲ್ಲಾ ಆಧ್ಯಾತ್ಮ ಬಂಧುಗಳಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
 ಚಿತ್ರಕೃಪೆ : ಅಂತರ್ಜಾಲ

Sunday, September 27, 2015

ಕರುಣಾ ಸಂಧಿ - ೩೦ ನೇ ಪದ್ಯ ( ಕಲ್ಕ್ಯಾವತಾರ )

ಮೀನ ಕೂರ್ಮ ವರಾಹ ನರಪಂ- ಚಾನನಾತುಳಶೌರ್ಯ ವಾಮನ ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ | ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 
ಕಾಯ್ದ ಸುಜನರನು ||೩೦||
ಕಲಿಮುಖ  ದಾನವರ   ಸಂಹರಿಸಿ   ಧರ್ಮದಿ  ಕಾಯ್ದ
ಸುಜನರನು : ಕಲ್ಕ್ಯಾವತಾರವು ಭಗವಂತನ ದಶಾವತಾರಗಳಲ್ಲಿ ಹತ್ತನೆಯದು ಹಾಗೂ ಕೊನೆಯದಾಗಿದೆ.  ಈ ಅವತಾರವು ಕಲಿಯುಗಾಂತ್ಯದಲ್ಲಿ ಆಗಿ ಸಮಸ್ತ ದುಷ್ಟರನ್ನು ದಮನಗೊಳಿಸುವುದಾಗಿದೆ.  ಭಗವಂತನಲ್ಲಿ ಅತಿಯಾದ ದ್ವೇಷವನ್ನು ಮಾಡುವ ’ಕಲಿ’ಯೇ ಈ ಯುಗಕ್ಕೆ ಪ್ರಭುವಾಗಿರುವುದರಿಂದ ’ಕಲಿಯುಗ’ವೆಂದೇ ಹೆಸರು ಬಂದಿದೆ.  ಕಲಿಯುಗದ ವರ್ಣನೆಯನ್ನು ಭಾಗವತ ದ್ವಾದಶಸ್ಕಂಧ, ೨ನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ   "ವಿತ್ತಮೇವ ಕಲೌ ನೃಣಾಂ ಜನ್ಮಾಚಾರ ಗುಣೋದಯಃ" - ಹಣ ಮತ್ತು ಬಲ ಎಲ್ಲಕ್ಕೂ ಅಳತೆಗೋಲು ಮತ್ತು ಪ್ರಮಾಣಗಳಾಗಿರುವುದು.  ಯಾರಲ್ಲಿ ಹೆಚ್ಚು ಹಣವಿರುವುದೋ ಆತನೇ ಕುಲೀನನೆಂದೂ, ಗುಣಶಾಲಿಯೆಂದೂ, ಯಾರು ಹೆಚ್ಚು ಬಲವಂತನೋ ಅವನೇ ಧರ್ಮಿಷ್ಠನೆಂದೂ ಪರಿಗಣಿಸಲ್ಪಡುವನು.  ವಿವಾಹಗಳಲ್ಲಿ ಹೆಣ್ಣು-ಗಂಡುಗಳ ನಡುವಿನ ಕಾಮಾಭಿರುಚಿಯೇ ನಿಯಾಮಕವೆನಿಸುವುದು.  ಛಲ, ಕುಟಿಲ, ಮೋಸ, ಅಧರ್ಮ ಕಾರ್ಯಗಳ ಪಾಲನೆ, ಕಪಟ ಸಂನ್ಯಾಸಿಗಳ ಆಶ್ರಮಗಳು, ಬೂಟಾಟಿಕೆಯ ದಂಡ-ಕಮಂಡಲಗಳ ಉಪಯೋಗ ಮುಂತಾದವುಗಳೇ ಪ್ರಮುಖವಾಗಿ ತುಂಬಿರುವುವು.  ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು, ಯಾವುದೇ ಮಾರ್ಗ ಅನುಸರಿಸಿಯಾದರೂ ಸರಿ ತನ್ನ ಕಾರ್ಯ ಸಾಧಿಸಿಕೊಳ್ಳುವುದು, ಕೇವಲ ತನ್ನ ಕುಟುಂಬವನ್ನು ರಕ್ಷಿಸುವುದೇ ಕಲಿಯುಗದ ಪರಮ ಪುರುಷಾರ್ಥಗಳಾಗುವುವು.  ಕೇವಲ ಕೀರ್ತಿ ಸಂಪಾದನೆಗೋಸ್ಕರವೇ ಧರ್ಮಾನುಷ್ಠಾನ ಆಚರಣೆಯಾಗುವುದು ಎಂದು ವಿವರಿಸಲ್ಪಟ್ಟಿದೆ.

ಕಲಿ ದೋಷದ ಪರಿಣಾಮದಿಂದ ಪ್ರಾಣಿಗಳು ಮತ್ತು ಜೀವಿಗಳ ದೇಹಗಳು ಕೃಶವಾಗುವುವು, ಆಯಸ್ಸು ಕಡಿಮೆಯಾಗುವುದು.  ಪಾಷಂಡಿಗಳ ಧರ್ಮವೇ ಎಲ್ಲೆಲ್ಲೂ ತಾಂಡವವಾಡುತ್ತಾ ಆಳುವ ಜನಗಳೇ ಭಕ್ಷಕರಂತೆ ಪ್ರವರ್ತಿಸುವರು.  ಹೀಗೆ ಅಧರ್ಮ-ಆಪತ್ತುಗಳು ಉತ್ತುಂಗಕ್ಕೇರಿದಾಗ ಸ್ವಯಂ ಭಗವಂತನೇ ಧರ್ಮ ಸಂರಕ್ಷಣೆಗಾಗಿ ಅವತರಿಸುವನು.   ೧೬ನೆಯ ಶ್ಲೋಕದಲ್ಲಿ "ಇತ್ಥಂ ಕಲೌ ಗತಪ್ರಾಯೇ ಜನೇ ತು ಖರಧರ್ಮಿಣಿ |  ಧರ್ಮತ್ರಾಣಾಯ ಸತ್ತ್ವೇನ ಭಗವಾನವತರಿಷ್ಯತಿ"  ಎಂದು ಕಲ್ಕಿ ಅವತಾರವನ್ನು ತಿಳಿಸಿದೆ.  ಮುಂದಿನ ೧೮ನೆಯ ಶ್ಲೋಕದಲ್ಲಿ "ಶಮ್ಭಲ ಗ್ರಾಮ ಮುಖ್ಯಸ್ಯ ಬ್ರಾಹ್ಮಣಸ್ಯ ಮಹಾತ್ಮನಃ | ಭವನೇ ವಿಷ್ಣುಯಶಸಃ ಕಲ್ಕಿಃ ಪ್ರಾದುರ್ಭವಿಷ್ಯತಿ" - ಶ್ರೀಹರಿಯು ಶಂಭಲವೆಂಬ ಗ್ರಾಮದಲ್ಲಿ ವಾಸಿಸುವ ವಿಷ್ಣುಯಶಸ ಎಂಬ ಹೆಸರಿನ ಮಹಾತ್ಮನಾದ ಬ್ರಾಹ್ಮಣ ಶ್ರೇಷ್ಠನ ಮನೆಯಲ್ಲಿ ’ಕಲ್ಕಿ’ ಎಂಬ ಹೆಸರಿನಿಂದ ಅವತರಿಸುವನು.  ಅಣಿಮಾ ಮೊದಲಾದ ಅಷ್ಟೈಶ್ವರ್ಯಗಳಿಂದಲೂ, ಜ್ಞಾನ ಮುಂತಾದ ಆರು ಗುಣಗಳಿಂದಲೂ ಸಂಪನ್ನನಾದ ಭಗವಂತನು, ದೇವತೆಗಳು ತನಗೆ ಸಮರ್ಪಿಸುವ "ದೇವದತ್ತ"ನೆಂಬ ಮಹಾವೇಗಶಾಲಿಯಾದ ಹಯವನ್ನೇರಿ ಭೂಮಂಡಲವೆಲ್ಲಾ ಸಂಚರಿಸುತ್ತಾ ರಾಜವೇಷದಿಂದ ತಮ್ಮನ್ನು ತಾನೇ ಮರೆಸಿಕೊಂಡಿರುವ ತಾಮಸಿಗರೆಲ್ಲರನ್ನೂ ಒಂದೇ ದಿನದಲ್ಲಿ ಸಂಹಾರ ಮಾಡುವನು ಎಂದು ವಿವರಿಸಿದೆ.  ನಂತರ ಕೇವಲ ಸಜ್ಜನರು ಮಾತ್ರ ಭೂಮಿಯಲ್ಲಿ ಉಳಿದುಕೊಳ್ಳುವರು ಮತ್ತು ಭಗವಂತನು ಮತ್ತೆ ಯಜ್ಞ ಯಾಗಾದಿಗಳನ್ನು ಪ್ರಾರಂಭಿಸಿ, ಕೃತಯುಗವನ್ನು ಆರಂಭಿಸುವನು ಎಂದು ತಿಳಿಸಲಾಗಿದೆ.
 


ವಿಷ್ಣು ಸಹಸ್ರನಾಮದಲ್ಲಿ "ಯುಗಾದಿಕೃತ್ ಯುಗಾವರ್ತೋ" ಎಂಬ ನಾಮದಿಂದ ಭಗವಂತನನ್ನು ಸ್ತುತಿಸಲಾಗಿದೆ.  ಆದಿಯಲ್ಲಿ ಬ್ರಹ್ಮ-ಸರಸ್ವತಿ ಹಾಗೂ ಪ್ರಾಣ-ಭಾರತಿಯರನ್ನು ಸೃಷ್ಟಿ ಮಾಡಿದ ಭಗವಂತನು ಯುಗಾದಿಕೃತ್ ಎಂದೆನಿಸಿಕೊಳ್ಳುವನು.  ಯುಗದ ಆದಿಗೆ ಕಾರಣನಾದ ಭಗವಂತ ಯುಗದ ಆವರ್ತನೆಗೂ ಕಾರಣನಾಗುವನು.  ದುಷ್ಟರನ್ನು ಶಿಕ್ಷಿಸುತ್ತಾ, ಯುಗದ ನಂತರ ಯುಗ, ಚತುರ್ಯುಗದ ನಂತರ ಚತುರ್ಯುಗ, ಮನ್ವಂತರದ ನಂತರ ಮನ್ವಂತರ, ಹೀಗೆ ವಿಶ್ವದ ಆವರ್ತನೆಗೆ ಕಾರಣಕರ್ತನಾಗಿ, ಪ್ರತಿಯೊಂದು ಗಂಡು ಹೆಣ್ಣಿನಲ್ಲಿ ಕುಳಿತು ಸೃಷ್ಟಿ ಚಕ್ರವನ್ನು ತಿರುಗಿಸುವ ಭಗವಂತನು ಯುಗಾವರ್ತಃ ಎನಿಸಿಕೊಳ್ಳುವನು.  ಸಮಸ್ತ ಮ್ಲೇಚ್ಛರನ್ನು ಸಂಹರಿಸಿ ಕಲಿಯುಗದ ನಂತರ ಕೃತಯುಗದ ಆವರ್ತನೆಯನ್ನು ಮಾಡುವನು ಎಂದು ವಿವರಿಸಲ್ಪಟ್ಟಿದೆ.



ಭಾಗವತ ದ್ವಿತೀಯಸ್ಕಂಧ, ೭ನೆಯ ಅಧ್ಯಾಯದಲ್ಲಿ ಕಲ್ಕ್ಯವತಾರವನ್ನು   
ಯರ್ಹ್ಯಾಲಯೇಷ್ವಪಿ ಸತಾಂ ನ ಹರೇಃ ಕಥಾಃ ಸ್ಯುಃ
ಪಾಖಣ್ಡಿನೋ ದ್ವಿಜಜನಾ ವೃಷಲಾ ನೃದೇವಾಃ |
ಸ್ವಾಹಾ ಸ್ವಧಾ ವಷಡಿತಿ ಸ್ಮ ಗಿರೋ ನ ಯತ್ರ
ಶಾಸ್ತಾ ಭವಿಷ್ಯತಿ ಕಲೇರ್ಭಗವಾನ್ಯುಗಾನ್ತೇ || - ಕಲಿಯುಗದ ಕೊನೆಯಲ್ಲಿ ಸತ್ಪುರುಷರ ಮನೆಗಳಲ್ಲಿಯೂ ಶ್ರೀಹರಿಯ ಕಥೆಯ ಶ್ರವಣ-ಕೀರ್ತನ-ಉತ್ಸವಾದಿಗಳು ನಡೆಯಲು ಅವಕಾಶವಾಗುವುದಿಲ್ಲ.  ಪಾಷಂಡಿ ಜನರೂ, ಧರ್ಮಘಾತುಕರೂ ರಾಜರಾಗುವರು.  ದೇವತೆಗಳನ್ನೂ, ಪಿತೃಗಳನ್ನೂ ಕುರಿತು ಮಾಡುವ ಯಜ್ಞ ಮತ್ತು ಶ್ರಾದ್ಧಗಳ ಸದ್ದೂ, ಸ್ವಾಹಾ-ಸ್ವಧಾ-ವಷಟ್ಕಾರಗಳೂ ಕೇಳುವುದಿಲ್ಲ.  ಇಂತಹ ಸಮಯದಲ್ಲಿ ಕಲಿಯುಗವನ್ನು ಹತೋಟಿಗೆ ತರುವುದಕ್ಕಾಗಿ ಭಗವಂತನು ಕಲ್ಕಿರೂಪದಲ್ಲಿ ಅವತರಿಸುವನು ಎಂದೂ
ಏಕಾದಶಸ್ಕಂಧ, ೪ನೆಯ ಅಧ್ಯಾಯದಲ್ಲಿ "ಶೂದ್ರಾನ್ಕಲೌ ಕ್ಷಿತಿಭುಜೋ ನ್ಯಹನಿಷ್ಯದನ್ತೇ" - ಕಲಿಯುಗದ ಅಂತ್ಯದಲ್ಲಿ ಕಲ್ಕ್ಯಾವತಾರವನ್ನು ಮಾಡಿ ಅಧರ್ಮಿಷ್ಠರಾದ ರಾಜರನ್ನು ಸಂಹರಿಸುತ್ತಾನೆ ಎಂದೂ ತಿಳಿಸಲಾಗಿದೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ  ಭಗವಂತನ ಕಲ್ಕ್ಯಾವತಾರವನ್ನು
ದುಷ್ಟಕುಲಾಂತಕ ಕಲ್ಕಿಸ್ವರೂಪ ಧರ್ಮವಿವರ್ಧನ ಮೂಲಯುಗಾದೇ
ನಾರಾಯಣಾಮಲ ಕಾರಣಮೂರ್ತೇ ಪೂರ್ಣಗುಣಾರ್ಣವ ನಿತ್ಯಸುಬೋಧ || - ದುಷ್ಟ ಶಿಕ್ಷಕನೂ ಧರ್ಮರಕ್ಷಕನೂ ಕೃತಯುಗ ಪ್ರವರ್ತಕನೂ ಆದ ಕಲ್ಕಿಯನ್ನು, ಶ್ರೇಷ್ಠನೂ ಸರ್ವಕ್ಕೂ ಕಾರಣ ಮೂರ್ತಿಯೂ, ಗುಣ ಪರಿಪೂರ್ಣನೂ ಸದಾ ಜ್ಞಾನ ಸ್ವರೂಪಿಯೂ ಆದ ಶ್ರೀಮನಾರಾಯಣನನ್ನು ವಂದಿಸುತ್ತೇನೆ ಎಂದೂ

ನವಮೋಧ್ಯಾಯದಲ್ಲಿ
ಕಲಿಮಲಹುತವಹ ಸುಭಗ ಮಹೋತ್ಸವ ಶರಣದ ಕಲ್ಕೀಶ ಹೇಭವಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || -  ಕಲಿದೋಷಹಾರಕದ, ಭಾಗ್ಯವಂತರಾದ, ಕೃತಯುಗದ ಜನರಿಗೆ ಮಹದಾನಂದವನ್ನುಂಟು ಮಾಡುವ, ಶರಣಾಗತ ರಕ್ಷನಾದ, ಕಲ್ಕ್ಯಾವತಾರಿಯಾದ ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ  ಕಲ್ಕ್ಯಾವತಾರವನ್ನು
ಕ್ರುದ್ಧಾಹಿತಾಸುಹೃತಿ ಸಿದ್ಧಾಸಿ ಖೇಟಧರ ಶುದ್ಧಾಶ್ವಯಾನ ಕಮಲಾ |
ಶುದ್ಧಾಂತ ಮಾಂ ರುಚಿ ಪಿನದ್ದಾಖಿಲಾಂಗ ನಿಜಮದ್ಧಾSವ ಕಲ್ಕ್ಯಭಿಧ ಭೋಃ || - ಕಲಿಯುಗದ ಅಂತ್ಯದಲ್ಲಿ, ದುಷ್ಟಜನರ ನಿರ್ಮೂಲನಕ್ಕೆ ಖಡ್ಗಚರ್ಮಧಾರಿಯಾಗಿ ಬಿಳಿಕುದುರೆಯನ್ನೇರಿ ಸರ್ವರನ್ನು ಸಂಹರಿಸುವ, ಲಕ್ಷ್ಮೀಪತಿಯಾದ, ಅತಿಯಾದ ಕಾಂತಿಯಿಂದ ಬೆಳಗುತ್ತಿರುವ ಕಲ್ಕಿನಾಮಕ ಶ್ರೀ ಪರಮಾತ್ಮನೆ, ನಿನ್ನ ಭಕ್ತನಾದ ನನ್ನನ್ನು ಚೆನ್ನಾಗಿ ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ  ಕಲ್ಕ್ಯಾವತಾರವನ್ನು
ಮ್ಲೇಚ್ಛನಿವಹನಿಧನೇ ಕಲಯಸಿ ಕರವಾಲಂ
ಧೂಮಕೇತುಮಿವ ಕಿಮಪಿ ಕರಾಲಂ
ಕೇಶವ ಧೃತ ಕಲ್ಕಿ ಶರೀರ ಜಯ ಜಗದೀಶ ಹರೇ || -    ಕಲಿಯುಗದ ಕಡೆಯಲ್ಲಿ ಮ್ಲೇಚ್ಛರ ನಾಶಕ್ಕಾಗಿ ಭಯಾನಕ ಖಡ್ಗವನು ಪಿಡಿದು ಧೂಮಕೇತುವಿನಂತೆ ಅವತರಿಸಿದ ಕಲ್ಕಿ ರೂಪದ ಹರಿಯೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.


ಮಾನವನ ವಿಕಾಸಕ್ಕೆ ಭಗವಂತನ  ಕಲ್ಕ್ಯಾವತಾರವನ್ನು ಸಮನ್ವಯಿಸಿಕೊಂಡಾಗ ಪ್ರಪಂಚದ ಭವಿಷ್ಯವನ್ನು ಸೂಚಿಸುವುದು.  ವಿಕಾಸದ ಅಬ್ಬರ ಹಾಗೂ ಭರದಲ್ಲಿ ಮಾನವನು ಮಿತಿಮೀರಿದಾಗ, ಪ್ರಕೃತಿಯು ತನ್ನನ್ನು ಸಹಜ ಸ್ಥಿತಿಗೆ ತಂದುಕೊಳ್ಳಲು ನಡೆಸುವ ಹೋರಾಟವೆಂದು ಅರ್ಥೈಸಬಹುದೇನೋ.  ಮಾನವನು ಪ್ರಳಯಾಂತಕನಾಗಿ ಪ್ರಕೃತಿಗೇ ಹಾನಿಯನ್ನು ಉಂಟುಮಾಡುವಾಗ, ಕಾಲವನ್ನು ಗೆಲ್ಲುವತ್ತ ಸಾಗಿದಾಗ ಹಿಂಸೆ ಮತ್ತು ಅಧರ್ಮಗಳು ವಿಜೃಂಭಿಸುವುವು.  ಇಂತಹ ತೀವ್ರತರವಾದ ವಿಷಮ ಪರಿಸ್ಥಿತಿಯಲ್ಲಿ ಖಡ್ಗವನ್ನು ಝಳಪಿಸುತ್ತಾ, ಬಿಳಿಯ ಕುದುರೆಯನೇರಿ ಬರುವ ಕಲ್ಕಿ ರೂಪಿ ಭಗವಂತನು ಶಾಂತಿಯನ್ನು ಸ್ಥಾಪಿಸಿ ಮತ್ತೆ ಕೃತಯುಗ ಅಥವಾ ಸತ್ಯಯುಗದ ಸ್ಥಾಪನೆ ಮಾಡುವನು ಎಂದು ತಿಳಿಯಬಹುದಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಶರೀರದ ಉಪಸ್ಥದಲ್ಲಿ ಕಲ್ಕಿ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು  ಕಲ್ಕಿಯ ರೂಪದಿಂದವತರಿಸಿದಾಗ ರಮಾದೇವಿಯು ’ಪ್ರಭಾ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ 

ಕಲಿಯ ವ್ಯಾಪಾರ ವೆಗ್ಗಳವಾಗೆ ತಿಳಿದು ’ಶಂ-
ಫಲಿ’ ಎಂಬ ಪುರದಿ ದ್ವಿಜನಲ್ಲಿ | ದ್ವಿಜನಲ್ಲಿ ಜನಿಸಿ ಕಲಿ-
ಮಲವ ಹರಿಸಿದ ಕಲ್ಕಿ ದಯವಾಗೋ || - ದೈತ್ಯಧಮನಾದ ಕಲಿಯ ಶಕ್ತಿಯಿಂದಾಗುವ ದುಷ್ಕರ್ಮಗಳು ಮಿತಿಮೀರಲು, ಈ ಪರಿಸ್ಥಿತಿಯನ್ನು ತಿಳಿದ ಸರ್ವಜ್ಞನಾದ ಶ್ರೀಹರಿಯು ಶಂಭಲವೆಂಬ ಗ್ರಾಮದಲ್ಲಿ, ಬ್ರಾಹ್ಮಣನಲ್ಲಿ ಅವತರಿಸಿ ಕಲಿಯ ದೋಷವನ್ನು, ಪರಿಹಾರ ಮಾಡಿದ ಕಲ್ಕಿರೂಪನಾದ ಹೇ ಭಗವನ್ ದಯವಾಗೋ ಎಂದು ಪ್ರಾರ್ಥಿಸಿದ್ದಾರೆ.

ಜೀವ ಕುಲವನ್ನೂ, ಜೀವ ಕುಲವು ಸಾಧನೆಯ ಮೂಲಕ ತನ್ನ ಅಂತಿಮ ಗುರಿಯನ್ನು ತಲುಪಲು ಬೇಕಾಗಿರುವ ಭೂಮಂಡಲವನ್ನೂ,  ಸಾತ್ವಿಕ ಸಜ್ಜನರನ್ನೂ ಸದಾ ಸರ್ವದಾ ಸಂರಕ್ಷಣೆಯನ್ನು ಮಾಡಲು ಭಗವಂತನು ನಾನಾ ಅವತಾರಗಳನ್ನು ಆವಿರ್ಭವಿಸುತ್ತಾ, ತನ್ನ ಲೀಲಾ ವಿನೋದಗಳನ್ನು ಪ್ರಕಟಿಸುತ್ತಾ, ಪರಮ ಕಾರುಣ್ಯವನ್ನು ಹರಿಸುವನು.



ಚಿತ್ರಕೃಪೆ : ಅಂತರ್ಜಾಲ


https://en.wikipedia.org/wiki/Kalki
https://en.wikipedia.org/wiki/Kalki_Purana
http://www.sumadhwaseva.com/dashavatara/kalkyaavata/
http://www.indiaprofile.com/monuments-temples/kalkitemple.htm
http://theinnerworld.in/travel/the-coming-of-bhagwan-kalki/

Sunday, September 6, 2015

ಕರುಣಾ ಸಂಧಿ - ೩೦ ನೇ ಪದ್ಯ ( ಬುದ್ಧಾವತಾರ )

ತತ: ಕಲೌ ಸಂಪ್ರವೃತ್ತೇ ಸಂಮೋಹಾಯ ಸುರದ್ವಿಷಾಂ |
ಬುದ್ಧೋ ನಾಮ್ನಾಜಿನಸುತ: ಕೀಕಟೇಷು ಭವಿಷ್ಯತಿ ||


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||


ತ್ರಿಪುರವ ಹಾನಿಗೈಸಿದ ನಿಪುಣ - ಶ್ರೀಕೃಷ್ಣನ ಅವತಾರ ಸಮಾಪ್ತಿಯಾದ ನಂತರ, ಒಂಬತ್ತನೆಯ ಅವತಾರವಾಗಿ ಭಗವಂತನು ಬುದ್ಧಾವತಾರವನ್ನು ತಳೆದನು.   ಬುದ್ಧನಾಗಿ ಅವತರಿಸಿದ ಭಗವಂತನು ಧರ್ಮದಂತೆ ಕಾಣುವ ಅಧರ್ಮವನ್ನು, ಧರ್ಮಾಭಾಸವನ್ನು, ಪಾಷಂಡಧರ್ಮವನ್ನು ಅಸುರರಿಗೆ ಬೋಧಿಸುವನು.  ಅಸುರ ಸ್ತ್ರೀಯರ ಎದುರಿಗೆ ಪಾತಿವ್ರತ್ಯ ಧರ್ಮವನ್ನು ತೆಗಳುವನು. 

ತಾರಕಾಸುರನಿಗೆ ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಎಂಬ ಮೂವರು ಮಕ್ಕಳು.  ಸುರರಿಂದ ಸೋಲಿಸಲ್ಪಟ್ಟ ಅಸುರರು ಮಯನನ್ನು ಮೊರೆಹೊಕ್ಕಾಗ, ಮಯನು ತಾರಾಕ್ಷನಿಗೆ ಬಂಗಾರದಿಂದ, ಕಮಲಾಕ್ಷನಿಗೆ ಬೆಳ್ಳಿಯಿಂದ ಮತ್ತು ವಿದ್ಯುನ್ಮಾಲಿಗೆ ಕಬ್ಬಿಣದಿಂದ ಮೂರು ಸಂಚಾರಿ ಪಟ್ಟಣಗಳನ್ನು ನಿರ್ಮಿಸುವನು.  ಬ್ರಹ್ಮದೇವರಿಂದ ಮೂರು ಪಟ್ಟಣಗಳು ಒಂದೆಡೆ ಸೇರಿದಾಗ, ಒಂದೇ ಬಾಣದಿಂದ ಏಕಕಾಲದಲ್ಲಿ ಹೊಡೆದರೆ ಮಾತ್ರ ನಾಶವಾಗುವುವೆಂಬ ವರ ಪಡೆದಿರುವರು.  ಮಯನ ಉಪದೇಶದಿಂದ ಅಸುರರು ಬಹುಕಾಲ ಧರ್ಮಮಾರ್ಗದಲ್ಲಿರುವರು.  ಅವರಿಗೆ ಅವರ ಪತ್ನಿಯರ ಪಾತಿವ್ರತ್ಯದ ಬಲವೂ ಸೇರಿ ಅವರನ್ನು ಕೊಲ್ಲುವುದು ಯಾರಿಂದಲೂ ಸಾಧ್ಯವಿರುವುದಿಲ್ಲ.   ಇದೆಲ್ಲಾ ಬಲದಿಂದ ಕೊಬ್ಬಿದ ಅಸುರರು ತಮ್ಮ ಸಂಚಾರಿ ಪಟ್ಟಣಗಳಲ್ಲಿ ಅಡಗಿ ಕುಳಿತುಕೊಂಡು ದೇವತೆಗಳನ್ನು ಪೀಡಿಸುವರು.  ದೇವತೆಗಳು ರುದ್ರದೇವರನ್ನು ರಕ್ಷಿಸೆಂದು ಪ್ರಾರ್ಥಿಸಲು, ಶಿವನು ಪಾಶುಪತಾಸ್ತ್ರವನ್ನು ಪ್ರಯೋಗಿಸುವನು.  ಬಾಣಾಗ್ನಿಯಿಂದ ಉರಿದು ತ್ರಿಪುರವಾಸಿಗಳಾದ ಅಸುರರು ಮೃತರಾಗುವರು.  ಆಗ ಪುನಃ ಅಸುರರ ರಕ್ಷಣೆಗೆ ಬರುವ ಮಯನು ಸಿದ್ಧಾಮೃತರಸ ಕೂಪವನ್ನು ನಿರ್ಮಿಸಿ, ಸತ್ತ ಅಸುರರನ್ನು ಅದರಲ್ಲಿ ಅದ್ದಿ ಮತ್ತೆ ಬದುಕಿಸುವನು.  ಹೀಗೆ ಬದುಕಿದ ಅಸುರರು ದ್ವಿಗುಣ ಶಕ್ತಿಯಿಂದ, ಬಲ, ದರ್ಪದಿಂದ ಬೆಳೆದು ನಿಂತು, ಸಿಡಿಲನ್ನೇ ಕುಡಿಯುವಂತೆ ಉರಿಯುತ್ತಾ ಬರುವರು.  ಭಗ್ನ ಸಂಕಲ್ಪರಾದ ರುದ್ರದೇವರು ಹತಾಶರಾಗಿ ಕುಳಿತುಬಿಡುವರು.  ಆ ಸಮಯದಲ್ಲಿ ಭಗವಂತನಾದ ಶ್ರೀಹರಿಯು ತಾನು ಅತಿಶಯವಾದ ಆಕಳ ರೂಪವನ್ನು ಧರಿಸಿ, ಕರುವಿನ ರೂಪದಲ್ಲಿ ಬ್ರಹ್ಮದೇವರನ್ನು ಕರೆದುಕೊಂಡು ಬಂದು ಸಿದ್ಧಾಮೃತರಸದ ಕೊಳದಲ್ಲಿದ್ದ ಸಮಸ್ತ ರಸವನ್ನೂ ಹೀರಿ ಬಿಡುವರು.  ವಿಚಿತ್ರವೂ, ಅತಿಶಯವೂ ಆಗಿದ್ದ ಈ ಆಕಳು ಮತ್ತು ಕರುವನ್ನು ಕಾವಲಿನವರು ನೋಡಿದರೂ ಕೂಡ, ಮೋಡಿಗೊಳಗಾದವರಂತೆ, ಸುಮ್ಮನೆ ನೋಡುತ್ತಾ ನಿಲ್ಲುವರು.  ಹೀಗೆ ಆಕಳನ್ನು ಓಡಿಸದೆ, ಕಾವಲಿನವರು ಭ್ರಮೆಯಿಂದ ನೋಡುತ್ತಿರುವಂತೆಯೇ ಗೋವು ಹಾಗೂ ವತ್ಸ ಮಾಯವಾಗುವರು.  ಇದರಿಂದ ಮಯನು ಇದು ಭಗವಂತನದೇ ಮಹಿಮೆಯೆಂದು ಅರಿತುಕೊಂಡು ಚಿಂತಿಸುತ್ತಿದ್ದ ದೈತ್ಯರಿಗೆ ’ದೇವತೆಯಾಗಲೀ, ಅಸುರನಾಗಲೀ ಭಗವಂತನು ಕೊಟ್ಟ ಸುಖ ಹಾಗೂ ದುಃಖಗಳನ್ನು ಅನುಭವಿಸಲೇ ಬೇಕು’ ಎಂದು ತಿಳಿಸುವನು. ಭಗವಂತನು ಅಸುರರ ಪತ್ನಿಯರಿಗೆ ಯಜ್ಞವು ಪಾಪಕರವಾದ ಪಶುಹಿಂಸಾರೂಪವಾದುದು.  ಪತ್ನಿಯಾದವಳು ಹೀಗೆ ಪತಿ ಆಚರಿಸುವ ಯಜ್ಞ ಕಾರ್ಯದಲ್ಲಿ ಪತಿಯೊಂದಿಗೆ ಇರುವವಳಾದ್ದರಿಂದ ಪತಿಪತ್ನಿ ಭಾವಕ್ಕೆ ಮಹತ್ವ ನೀಡಬಾರದೆಂದು ಬೋಧಿಸುವನು.  ಭಗವಂತನ ಬೋಧನೆಯಿಂದ ತ್ರಿಪುರಾಸುರರಿಗೆ ಪತ್ನಿಯರ ಪಾತಿವ್ರತ್ಯ ಧರ್ಮದ ರಕ್ಷೆ ಇಲ್ಲವಾಗುವುದು.  ಅದೇ ಸಮಯದಲ್ಲಿ ಭಗವಂತನು ರುದ್ರದೇವರಿಗೆ ಭೂದೇವಿ ಹಾಗೂ ಸಮಸ್ತ ದೇವತಾ ಶಕ್ತಿಗಳಿಂದ ಯುದ್ಧೋಪಕರಣಗಳನ್ನು ಒದಗಿಸಿ ಬಲವನ್ನು ಅನುಗ್ರಹಿಸುವನು.  ರಥ, ಸೂತ, ಧ್ವಜ, ಧನುಸ್ಸು ಮತ್ತು ಕವಚಗಳಿಗೆ ಅಭಿಮಾನಿ ದೇವತೆಗಳಾಗಿ ನಿಂತ ದೇವತೆಗಳಂತೆಯೇ ಶ್ರೀಹರಿಯೂ ತಾನು ಕೂಡ "ಬಾಣ"ರೂಪವನ್ನು ಧರಿಸುವನು.  ಶಂಕರನು ಅಭಿಜಿನ್ಮುಹೂರ್ತದಲ್ಲಿ ನಾರಾಯಣ ಬಾಣದಿಂದ ತ್ರಿಪುರಗಳನ್ನು ಸುಟ್ಟು, ತ್ರಿಪುರಾರಿ ಎನಿಸುವನು.   ಬಾಣದ ತುದಿಯಲ್ಲಿ ಭಗವಂತನು ತಾನೆ ಬೆಂಕಿಯಾಗಿ ನಿಂತು ತ್ರಿಪುರಗಳ ದಹನ ಕಾರ್ಯ ಮಾಡಿ ಅದರ ಯಶಸ್ಸನ್ನು ಶಂಕರಿನಿಗಿತ್ತು ’ತ್ರಿಪುರಾರಿ’ ಎನಿಸುವಂತೆ ಮಾಡುವನು.  ಶಿವನು ತ್ರಿಪುರಾಸುರರ ಮೂರು ಪಟ್ಟಣಗಳನ್ನು ಭಗವಂತನ ತೇಜಸ್ಸಿಗೆ ಆಹುತಿಯಾಗಿಸುವನು. 

ತ್ರಿಪುರಾಸುರರು ಶಿವನಿಂದ ಹತರಾದ ಮೇಲೆ ಭೂತಳದಲ್ಲಿ ಪುನಃ ಹುಟ್ಟುವರು.  ದಿವ್ಯವಾದ ತತ್ವಜ್ಞಾನವನ್ನು ಹೊಂದಿ, ಮೋಕ್ಷ ಸಾಧನೆಯಲ್ಲಿ ನಿರತರಾಗಿ ಸಾವಿರಾರು ದುಷ್ಟರಿಗೆ ತತ್ವಜ್ಞಾನದ ಉಪದೇಶ ಮಾಡುವರು.  ತ್ರಿಪುರಾಸುರರಲ್ಲಿ ಮೊದಲನೆಯವನಾದ ತಾರಾಕ್ಷನು ಶುದ್ಧೋದನನೆಂಬ ಹೆಸರುಳ್ಳ ಜಿನನಾಗಿ ಹುಟ್ಟುವನು.  ಅವನ ಮಗನಾಗಿ ಭಗವಂತನು ಆವಿರ್ಭವಿಸುವನು.  ಶುದ್ಧೋದನನಿಗೆ ಹುಟ್ಟಿದ್ದ ಮಗವನ್ನು ದೂರ ಸರಿಸಿ, ಭಗವಂತನು ಶಿಶುರೂಪದಲ್ಲಿ ಪ್ರಕಟಗೊಳ್ಳುವನು. ದಾನವರಿಗೆ ದಾರಿ ತಪ್ಪಿಸಿ, ಇವರ ಕೈವಶವಾಗಿ ಬಂಧನದಲ್ಲಿದ್ದ "ಜ್ಞಾನ"ದ ಬಿಡುಗಡೆಗಾಗಿ ಭಗವಂತನು ಬುದ್ಧಾವತಾರ ತಾಳುವನು.  ಆಗ ತಾನೆ ಹುಟ್ಟಿದ ಮಗು ಶುದ್ಧೋದನ ಮತ್ತು ಇತರರು ಮಾಡುತ್ತಿದ್ದ ವೈದಿಕ ಕರ್ಮಗಳ ಆಚರಣೆಯನ್ನು ಕಂಡು ಗಟ್ಟಿಯಾಗಿ ನಗಲು ಪ್ರಾರಂಭಿಸುವುದು.  ಆಶ್ಚರ್ಯಗೊಂಡ ಜಿನ ಮೊದಲಾದವರು ಮಗುವನ್ನು ಯಾರೆಂದು ಕೇಳಲು ಮಗು ತಾನು ’ಬುದ್ಧ’ನೆಂದು ಉತ್ತರಿಸುವುದು.  ಭಗವಂತನು ದೇವತೆಗಳ ಸಹಾಯದಿಂದ ಅಸುರರಲ್ಲಿ ತನ್ನದೇ ರೂಪದ ವಿಷಯದಲ್ಲಿ ಭರವಸೆ ಮೂಡಿಸಲು ತನ್ನ ಜೊತೆ ಯುದ್ಧ ಮಾಡುವಂತೆ ಪ್ರೇರೇಪಿಸುವನು.  ಸಮಸ್ತ ದೇವತೆಗಳೂ ತನ್ನ ಮೇಲೆ ಪ್ರಯೋಗಿಸಿದ ಆಯುಧಗಳೆಲ್ಲವನೂ ಶಿಶುರೂಪಿ ಭಗವಂತನು ನುಂಗುವನು.  ವಿಷ್ಣು ರೂಪಿ ಭಗವಂತನು ಶಿಶುವಿನ ಮೇಲೆ ಪ್ರಯೋಗಿಸಿದ ಸುದರ್ಶನ ಚಕ್ರವನ್ನು ಹಿಡಿದು, ಆಸನವನ್ನಾಗಿ ಮಾಡಿ ಅದರ ಮೇಲೆ ಕುಳಿತುಕೊಳ್ಳುವನು.  ದೇವತೆಗಳು ನೀನೇ ಸರ್ವೋತ್ತಮನೆಂದು ತಿಳಿಸಿ, ಹೊರಟುಹೋಗುವರು.  ಇದರಿಂದ ಜಿನ ಮೊದಲಾದ ದೈತ್ಯರು ಭಗವಂತನ ಮಾತುಗಳನ್ನು ಪ್ರಮಾಣವನ್ನಾಗಿ ನಂಬುವರು.  ಭಗವಂತ ಬೋಧಿಸಿದ ಸರ್ವವೂ ಶಾಸ್ತ್ರಮಯವಾಗಿದ್ದರೂ ಕೂಡ, ಅಸುರರು ಅದರ ಅಂತರಾರ್ಥ ತಿಳಿಯದೇ ವಿಪರೀತಾರ್ಥವನ್ನು ತಿಳಿದು, ಮೋಹಕ್ಕೆ ಒಳಗಾಗುವರು.    ಹೀಗೆ ದೇವತೆಗಳಿಗೆ ಅಂತರಾರ್ಥವನ್ನು ತಿಳಿಯುವಂತೆ ಬೋಧಿಸಿದ ತತ್ವವನ್ನು "ಪ್ರಶಾಂತ ವಿದ್ಯೆ"ಯೆಂದು ಕರೆಯುವರು.  ಭಗವಂತನು, ಅಸುರರಿಗೆ, ಅಧರ್ಮಿಗಳಿಗೆ ಮೋಹಕವಾಗಿ ಮಿಥ್ಯಾಜ್ಞಾನವನ್ನು ಬಣ್ಣಿಸುವನು.  ತಾಮಸ ಮೂಲದವರಾದ ಕಾರಣ, ಸಾತ್ವಿಕಾರ್ಥವನ್ನು ಅರಿಯುವ ಅವಕಾಶವಿರುವುದಿಲ್ಲ.  ದುಷ್ಟರಿಗೆ ಪವಿತ್ರವಾದ ತತ್ವಜ್ಞಾನವು ದೊರೆಯದಂತೆ ಮಾಡಲೆಂದೇ ಬುದ್ಧಾವತಾರವಾಯಿತು ಎಂದು ತಿಳಿಯಬೇಕು.

ಭಾಗವತ ೨ನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ಬುದ್ಧಾವತಾರವನ್ನು

ದ್ವೇವದ್ವಿಷಾಂ ನಿಗಮವರ್ತ್ಮನಿ ನಿಷ್ಠಿತಾನಾಂ
ಪೂರ್ಭಿರ್ಮಯೇನ ವಿಹಿತಾಭಿರದೃಶ್ಯತೂರ್ಭಿಃ |
ಲೋಕಾನ್ ಘ್ನತಾಂ ಮತಿವಿಮೋಹಮತಿಪ್ರಲೋಭಂ
ವೇಷಂ ವಿಧಾಯ ಬಹು ಭಾಷ್ಯತ ಔಪಧರ್ಮ್ಯಮ್ || - ದೇವತೆಗಳ ಶತ್ರುಗಳಾದ ದಾನವರು ಮಾಯಾಸುರನು ಮಾಡಿಕೊಟ್ಟ ಅದೃಶ್ಯವಾದ ವೇಗವುಳ್ಳ ಪುರಗಳಲ್ಲಿ ವಾಸಿಸುತ್ತಾ ಮನುಷ್ಯರನ್ನು ಹಿಂಸಿಸುವಾಗ ಭಗವಂತನು ಜನರ ಮನಸ್ಸಿನಲ್ಲಿ ಮೋಹವನ್ನೂ, ಪ್ರಲೋಭನೆಯನ್ನೂ ಉಂಟು ಮಾಡುವ ವೇಷವನ್ನು ಧರಿಸಿ ಬುದ್ಧದೇವರ ರೂಪದಲ್ಲಿ ಬಹುಪ್ರಕಾರದ ಉಪಧರ್ಮಗಳನ್ನು ಉಪದೇಶ ಮಾಡುವನು ಎಂದೂ 

ಏಕಾದಶಸ್ಕಂಧ ೪ನೆಯ ಅಧ್ಯಾಯದಲ್ಲಿ "ವಾದೈರ್ವಿಮೋಹಯತಿ ಯಜ್ಞಕೃತೋSತದರ್ಹಾನ್" - ಆದಿಪುರುಷನು ಬೌದ್ಧಾವತಾರವನ್ನೆತ್ತಿ ಯಜ್ಞಕ್ಕೆ ಅನಧಿಕಾರಿಗಳಾದವರು ಯಜ್ಞ ಮಾಡುವುದನ್ನು ನೋಡಿ ಅನೇಕ ಪ್ರಕಾರವಾದ ತರ್ಕ-ವಿತರ್ಕಗಳಿಂದ ಅವರನ್ನು ಯಜ್ಞ ಕರ್ಮದಿಂದ ವಿಮುಖರನ್ನಾಗಿ ಮಾಡುವನು ಎಂದೂ ಉಲ್ಲೇಖಿಸಲಾಗಿದೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ  ಭಗವಂತನ ಬೌದ್ಧಾವತಾರವನ್ನು
ಚಂದ್ರಶತಾನನ ಕುಂದಸುಹಾಸ ನಂದಿತ ದೈವತಾSSನಂದ ಸುಪೂರ್ಣ
ದೈತ್ಯ ವಿಮೋಹಕ ನಿತ್ಯಸುಖಾದೇ ದೇವಸುಬೋಧಕ ಬುದ್ಧ ಸ್ವರೂಪ || - ನೂರಾರು ಚಂದ್ರರಷ್ಟು ಪ್ರಕಾಶಮಾನನಾದ ಮಲ್ಲಿಗೆ ಹೂವಿನಂತೆ ಮಂದಸ್ಮಿತವುಳ್ಳ ದೇವತೆಗಳಿಗೆ ಸಂತೋಷಕಾರಿಯಾದ ಪೂರ್ಣಾನಂದ ಸ್ವರೂಪಿಯಾದ ಶ್ರೀಕೃಷ್ಣನನ್ನು, ದೈತ್ಯರಿಗೆ ಮೋಹಪ್ರದನೂ, ಜ್ಞಾನಿಗಳಿಗೆ ಮೋಕ್ಷಪ್ರದನೂ, ದೇವತೆಗಳಿಗೆ ಜ್ಞಾನಪ್ರದನೂ ಆದ ಬುದ್ಧನನ್ನು ನಮಸ್ಕರಿಸುತ್ತೇನೆ ಎಂದೂ

ನವಮೋಧ್ಯಾಯದಲ್ಲಿ
ದಿತಿಸುತ ಮೋಹನ ವಿಮಲ ವಿಬೋಧನ ಪರಗುಣ ಬುದ್ಧ ಹೇ ಭವ ಮಮ ಶರಣಮ್
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ದೈತ್ಯರನ್ನು ಮೋಹಗೊಳಿಸಿದ ಬ್ರಹ್ಮಾದಿಗಳಿಗೆ ಜ್ಞಾನಪ್ರದನಾದ ಜ್ಞಾನಾನಂದಾದಿಗುಣಗಳುಳ್ಳ ಬುದ್ಧಾವತಾರಿಯಾದ ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ  ಬೌದ್ಧಾವತಾರವನ್ನು
ಬುದ್ಧಾವತಾರ ಕವಿ ಬದ್ಧಾನುಕಂಪ ಕುರು ಬದ್ಧಾಂಜಲೌ ಮಯಿ ದಯಾಂ
ಶೌದ್ಧೋದನಿ ಪ್ರಮುಖ ಸೈದ್ಧಾಂತಿಕಾಸುಗಮ ಬೌದ್ಧ, ಗಮ ಪ್ರಣಯನ || - ಅಜ್ಞಾನಿಗಳಿಗೆ ತಿಳಿಯಲು ಅಸಾಧ್ಯವಾದ ಬೌದ್ಧಾಗಮವನ್ನು ರಚಿಸಿದ, ಜ್ಞಾನಿಗಳಲ್ಲಿ ಅನುಗ್ರಹ ಬುದ್ಧಿಯಿಂದಿರುವ ಬುದ್ಧರೂಪಿಯಾದ ಪರಮಾತ್ಮನೇ ಕೈಮುಗಿದು ಬೇಡುತ್ತಿರುವ ನನ್ನನ್ನು ಅನುಗ್ರಹಿಸು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ  ಬೌದ್ಧಾವತಾರವನ್ನು
ನಿಂದಸಿ ಯಜ್ಞ ವಿಧೇರಹಹ ಶ್ರುತಿಜಾತಂ
ಸದಯ ಹೃದಯದರ್ಶಿತ ಪಶುಘಾತಂ
ಕೇಶವ ಧೃತ ಬುದ್ಧ ಶರೀರ ಜಯ ಜಗದೀಶ ಹರೇ || -    ಶ್ರುತಿ ಜನ್ಯ ಯಜ್ಞ ವಿಧೇಯಕವೆನ್ನುತ್ತ ಪ್ರಾಣಿಹತ್ಯೆ ಮಾಡುವವರನ್ನು ಖಂಡಿಸುವ ಸಹೃದಯಿ ಬುದ್ಧ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ  ಬೌದ್ಧಾವತಾರವನ್ನು ಸಮನ್ವಯಿಸಿಕೊಂಡಾಗ ವಿಕಾಸಗೊಂಡಿರುವ ಮಿದುಳಿನಿಂದ ಅತಿ ಜ್ಞಾನ ಪಡೆದು ಅದನ್ನು ದುರುಪಯೋಗ ಪಡಿಸಿಕೊಂಡು, ಬಂಧನದಲ್ಲಿ ಸಿಲುಕಿರುವಾಗ,  ಬಿಡುಗಡೆಯ ದಾರಿಯನ್ನು ಸೂಚಿಸುವುದು.  ಜ್ಞಾನವು ಅಪಾತ್ರರ, ಸ್ವಾರ್ಥಿಗಳ ವಶವಾದಾಗ, ನಡೆಯುವುದೆಲ್ಲಾ ಅನಾಚಾರ, ಅನೀತಿ, ಅಧರ್ಮಗಳೇ ಆಗುವುವು.  ಗಟ್ಟಿಯಲ್ಲದ, ಪೊಳ್ಳು ಸಂಸ್ಕಾರ, ಸಂಸ್ಕೃತಿಗಳು ಅಟ್ಟಹಾಸ ಮಾಡುತ್ತಾ ಜ್ಞಾನವನ್ನು ಬಂಧಿಸುವುವು.  ಪ್ರದರ್ಶನದ, ಡಂಬಾಚಾರದ, ಅನಾಗರಿಕರ ವಶದಿಂದ ಜ್ಞಾನದ ಬಿಡುಗಡೆ ಮಾಡುವುದೇ ಬೌದ್ಧಾವತಾರವೆನ್ನಬಹುದು.  ಶುದ್ಧವಾದ ಜ್ಞಾನವನ್ನು ಕಾಪಾಡುವ ಭಗವಂತನು, ಸಾತ್ವಿಕರನ್ನು ರಕ್ಷಿಸುವ ಸಲುವಾಗಿ, ಧರ್ಮವನ್ನು ಸಂಸ್ಥಾಪಿಸುವ ಸಲುವಾಗಿ, ಬುದ್ಧನಾಗಿ ಅವತರಿಸುವನೆಂದು ತಿಳಿಯಬಹುದು.  ಭಗವದ್ಗೀತೆಯಲ್ಲಿ ಭಗವಂತ ಸ್ವತಃ ನುಡಿದಿರುವ   "ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" ಎಂಬ ಭರವಸೆಯ ಮಾತುಗಳು ಬುದ್ಧಾವತಾರಕ್ಕೆ ಬೆಳಕು ಚೆಲ್ಲುವುದೆಂದು ತಿಳಿಯಬಹುದು.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಶರೀರದ ಗುದಭಾಗದಲ್ಲಿ ಬುದ್ಧ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು  ಬುದ್ಧನ ರೂಪದಿಂದವತರಿಸಿದಾಗ ರಮಾದೇವಿಯು ’ದೇವಕಿ’ಯಾಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ  

ಜಿನನೆಂಬ ದನುಜ ಸಜ್ಜನ ಕರ್ಮವನು ಮಾಡೆ
ಜನಿಸಿ ಅವರಲ್ಲಿ ದುರ್ಬುದ್ಧಿ | ದುರ್ಬುದ್ಧಿ ಕವಿಸಿದ
ವಿನುತ ಶ್ರೀಬುದ್ಧ ದಯವಾಗೋ || - ಜಿನನೆಂಬ ದಾನವನು ಸುಜೀವರಿಗೆ ಅರ್ಹವಾದ ವೇದೋಕ್ತ ಕರ್ಮಗಳನು ಮಾಡುತ್ತಿರಲು, ಅವತರಿಸಿ, ಜಿನ ಮತ್ತು ಅವನ ಅನುಯಾಯಿಗಳಲ್ಲಿ, ದುರ್ಬುದ್ಧಿ ಕವಿಸಿದ, ಮಿಥ್ಯಾಜ್ಞಾನವು ಅವರನ್ನು ಆವರಿಸುವಂತೆ ಮಾಡಿದ, ಬ್ರಹ್ಮಾದಿಗಳಿಂದ ವಿಶೇಷವಾಗಿ ಸ್ತುತ್ಯನಾದ, ಬುದ್ಧರೂಪೀ ಶ್ರೀಹರಿಯೇ ಕೃಪೆಮಾಡು ಎಂದು ಪ್ರಾರ್ಥಿಸಿದ್ದಾರೆ.

ದಶಾವತಾರದಲ್ಲಿ ಉಲ್ಲೇಖಿಸಲ್ಪಟ್ಟಿರುವ ಒಂಭತ್ತನೆಯ ಅವತಾರವಾದ ಬುದ್ಧಾವತಾರದ ಭಗವಂತನನ್ನು ಆಗಲೇ ಹುಟ್ಟಿದ ಶಿಶುರೂಪದಲ್ಲಿಯೂ, ಸುರರ ಆಯುಧಗಳನ್ನೆಲ್ಲಾ ನುಂಗುತ್ತಿರುವ ರೂಪದಲ್ಲಿಯೂ, ವಿಷ್ಣುವಿನ ಸುದರ್ಶನ ಚಕ್ರವನ್ನು ಆಸನವನ್ನಾಗಿ ಮಾಡಿಕೊಂಡ ರೂಪವನ್ನೂ, ನಗುಮುಖದಿಂದ ಜ್ಞಾನಮುದ್ರೆ ತೋರುತ್ತಾ ಉಪದೇಶ ಮಾಡುವ ರೂಪವನ್ನೂ ಅನುಸಂಧಾನ ಮಾಡಿಕೊಂಡು ಧ್ಯಾನಿಸಿ, ಪ್ರಾರ್ಥಿಸಬೇಕೆಂದು ಶ್ರೀಮದಾಚಾರ್ಯರು ತಿಳಿಸಿರುವರು.

ಅಗ್ನಿ ಪುರಾಣದಲ್ಲಿ ಬುದ್ಧರೂಪಿ ಭಗವಂತನು ಗೌರವರ್ಣದಿಂದ ಶೋಭಿಸುತ್ತಿರುವನು, ಪೀತ ವಸ್ತ್ರಧಾರಿಯೆನಿಸುವನು, ಪದ್ಮಾಸನದಲ್ಲಿ ಕುಳಿತು, ಒಂದು ಕರವು ಅಭಯಮುದ್ರೆಯಿಂದಲೂ, ಇನ್ನೊಂದು ಕರವು ಆಶೀರ್ವಾದರೂಪದಿಂದಲೂ ಶೋಭಿಸುವುದೆಂದು ವರ್ಣಿಸಲಾಗಿದೆ.  ಬುದ್ಧಾವತಾರದಲ್ಲಿ ಭಗವಂತನು ಶಸ್ತ್ರಧಾರಣೆಯನ್ನು ಮಾಡಲೇ ಇಲ್ಲ.  ಬೋಧ ಮಾಡಿ, ಉಪದೇಶ ಕೊಟ್ಟು ಮಹಿಮೆಯನ್ನು ತಿಳಿಸಿರುವನು.
 ಚಿತ್ರಕೃಪೆ : ಅಂತರ್ಜಾಲ

Sunday, August 23, 2015

ಕರುಣಾ ಸಂಧಿ - ೩೦ ನೇ ಪದ್ಯ (ಶ್ರೀಕೃಷ್ಣಾವತಾರ)

ಜನ್ಮಾದ್ಯಸ್ಯ ಯತೋSನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ |
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ||


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||

ಧೇನುಕಾಸುರಮಥನ -   ಭಗವಂತನಾದ ಮಹಾವಿಷ್ಣುವು ಯೋಗನಿದ್ರೆಯಲ್ಲಿರುವಾಗ ಕೃತ-ತ್ರೇತಾಯುಗಗಳು ಮುಗಿದು, ದ್ವಾಪರ ಯುಗವು ಕೊನೆಯ ಘಟ್ಟದಲ್ಲಿರುವುದು.  ಬ್ರಹ್ಮಾದಿ ಸಕಲ ದೇವತೆಗಳಿಂದ ಸ್ತುತಿಸಲ್ಪಡುವ ಶ್ರೀಹರಿಯು ಎಚ್ಚರಗೊಳ್ಳುವನು.  ಬ್ರಹ್ಮದೇವರೊಡಗೂಡಿ  ಬಂದಿದ್ದ ಸಮಸ್ತ ದೇವತೆಗಳನ್ನು ಕಂಡು ಭಗವಂತನು ಯಾವ ಸಂಕಷ್ಟದಲ್ಲಿ ತನ್ನನ್ನು ಪ್ರಾರ್ಥಿಸುತ್ತಿರುವರೆಂದು ವಿಚಾರಿಸುವನು.  ದೇವತೆಗಳೆಲ್ಲರ ಪರವಾಗಿ ಬ್ರಹ್ಮದೇವರು ಮಹಾವಿಷ್ಣುವಿನಲ್ಲಿ  "ಪ್ರಜೆಗಳ ಅಧಿಪತಿಗಳಾದ ರಾಜರುಗಳೆಲ್ಲಾ ನಾಲ್ಕು ವರ್ಣಗಳನ್ನೂ ಯಥೋಚಿತವಾದ ರೀತಿಯಲ್ಲಿ ರಕ್ಷಿಸುತ್ತಿರುವರು.  ಪ್ರಪಂಚದಲ್ಲಿ ವೈದಿಕ ಕರ್ಮಗಳು, ಲೌಕಿಕ ಕರ್ಮಗಳು ಮತ್ತು ಧರ್ಮ ಶಾಸ್ತ್ರೋಕ್ತವಾದ ಕರ್ಮಗಳೆಂಬ ಮೂರು ವಿಧದ ಕರ್ಮಗಳನ್ನೂ ಭೂಮಂಡಲದ ರಾಜರುಗಳು ಯಥೋಚಿತವಾಗಿ ಮಾಡುತ್ತಾ ಭೂಮಂಡಲದಲ್ಲಿ ಪುನಃ ಕೃತಯುಗವನ್ನು ಸ್ಥಾಪಿಸಬೇಕೆಂಬ ಉತ್ಸಾಹದಲ್ಲಿರುವರು.  ಇದರ ಪ್ರಭಾವದಿಂದ ಕಾಲಕಾಲಕ್ಕೆ ಮಳೆ ಗಾಳಿಗಳಿಂದ ಹತ್ತು ದಿಕ್ಕುಗಳೂ ಸ್ವಚ್ಛವಾಗಿರುವುವು.  ಸಕಲ ಗ್ರಹಗಳೂ ತಮ್ಮ ತಮ್ಮ ಸ್ಥಾನದಲ್ಲಿ ಸಂಚರಿಸುತ್ತಿರುವರು.  ಹೀಗೆ ಎಲ್ಲವೂ ಅತ್ಯಂತ ಸುಸ್ಥಿತವಾಗಿ ನಡೆಯುತ್ತಿರುವಾಗ, ಧಾರ್ಮಿಕ ಕ್ರಿಯೆಗಳು ವೃದ್ಧಿಸುತ್ತಿರುವಾಗ, ಸಮಸ್ತ ಪ್ರಜೆಗಳೂ ತೃಪ್ತಿಯಿಂದಿರುವಾಗ ಮನುಷ್ಯರಿಗೆ ಕಾಲದ ಭಯ ಹಾಗೂ ಯುದ್ಧದ ಭಯವಿಲ್ಲದಂತಾಗುವುದು.  ಅತಿ ಬಲಿಷ್ಠರಾದ ರಾಜರಲ್ಲಿ ಅಸಂಖ್ಯಾತವಾದ ಸೈನ್ಯವು ಸಮಾವೇಶವಾಗಿರುವುದು.  ಅದರ ಭಾರವು ದಿನೇದಿನೇ ಹೆಚ್ಚುತ್ತಲೇ ಇರುವುದರಿಂದ ಭೂದೇವಿಗೆ ಸಹಿಸಲಾಗದ ಪೀಡೆಯುಂಟಾಗುವುದು.  ಆಯಾಸದಿಂದ ಬಹು ಬಳಲಿ ಭೂದೇವಿಯು ರಕ್ಷಣೆಯನ್ನು ಕೋರಿ ನಿನ್ನ ಬಳಿಗೆ ಬಂದಿರುವಳು.  ಭೂಮಂಡಲದ ರಾಜರ ಸ್ವರೂಪವು ಪ್ರಳಯಕಾಲದ ಅಗ್ನಿಯಂತಿರುವುದು.  ಪೃಥ್ವಿಯನ್ನು ದೃಢವಾಗಿ ನಿಲ್ಲಿಸಿದ್ದ ಪರ್ವತಗಳು ಸಡಿಲವಾಗುತ್ತಿರುವುದು.  ಈ ಕಾರಣದಿಂದ ನೌಕೆಯ ರೂಪದಲ್ಲಿರುವ ಪೃಥ್ವೀದೇವಿಯು ರಸಾತಲದಲ್ಲಿರುವ ಜಲರಾಶಿಯಲ್ಲಿ ಮುಳುಗಿ ಹೋಗುವಳು.  ಕ್ಷತ್ರಿಯರ ತೇಜಸ್ಸು, ಶರೀರ ಮತ್ತು ಬಲಗಳಿಂದಲೂ, ವಿಸ್ತಾರವಾದ ರಾಜ್ಯಗಳಿಂದಲೂ, ಕೋಟಿ ಕೋಟಿ ಸಂಖ್ಯೆಯ ಸೈನ್ಯಗಳಿಂದಲೂ ಭೂಮಂಡಲವು ತುಂಬಿರುವುದು.  ಭಾರ ಹೊತ್ತು ಶ್ರಮಪಡುತ್ತಿರುವ ವಸುಂಧರೆಯು ನಿಶ್ಚೇಷ್ಟಿತಳಾಗಿರುವಳು.  ಜಗತ್ತಿಗೆ ಆಧಾರಭೂತಳಾಗಿರುವ, ಮನುಷ್ಯರಿಗೆ ಕರ್ಮಭೂಮಿಯಾಗಿರುವ ವಸುಂಧರೆಯು ಪೀಡನೆಗೊಳಗಾವುದರಿಂದ ಸಮಸ್ತ ಪ್ರಜೆಗಳ ಸಕಲ ಕರ್ಮಗಳೂ ಲುಪ್ತವಾಗುವುವು.  ಅಚಲಳಾಗಿರುವ ಭೂದೇವಿಯು ತನ್ನ ಸಹಜ ಗುಣವಾದ ಕ್ಷಮೆಯನ್ನು ತ್ಯಜಿಸಿ, ಚಲತ್ವವನ್ನು ಹೊಂದುವಳು".  ಭಗವಂತಾ ವಸುಂಧರೆಯ ಭಾರವನ್ನು ಹರಣ ಮಾಡುವುದು ನಿನ್ನಿಂದ ಮಾತ್ರ  ಸಾಧ್ಯವಾಗುವುದರಿಂದ  ನಾವೆಲ್ಲರೂ ನಿನ್ನನ್ನು ಪ್ರಾರ್ಥಿಸಲು ಬಂದಿರುವೆವು.  ಸಕಲ ಮಾನವರೂ ಧರ್ಮಮೂಲವಾದ ವ್ಯವಹಾರವನ್ನೇ ನಡೆಸುತ್ತಿರುವುದರಿಂದ, ಧರ್ಮಕ್ಕೆ ಹಾನಿಯಾಗದಂತೆಯೂ, ಭೂಭಾರವು ಕಡಿಮೆಯಾಗುವಂತೆಯೂ ಮಾಡುವುದಕ್ಕೆ ಉಪಾಯವನ್ನು ಯೋಚಿಸಬೇಕಾಗಿದೆ.  ಭಗವಂತನೇ ನಾವೆಲ್ಲರೂ ಮೇರುಪರ್ವತಕ್ಕೆ ತೆರಳಿ ನಿನ್ನ ನಿರ್ಣಯವನ್ನು ತಿಳಿಯಬೇಕಾಗಿದೆ ಎಂದು ಪ್ರಾರ್ಥಿಸಿದನು.

ಸಮಸ್ತ ದೇವತೆಗಳೂ ಬ್ರಹ್ಮನ ಆಜ್ಞಾನುಸಾರ ಮೇರುಪರ್ವತದ ಸಭಾಭವನದಲ್ಲಿ ಯಥಾಯೋಗ್ಯತೆ ಆಸೀನರಾಗಿರುವರು.  ಎಲ್ಲರ ಸಮಕ್ಷಮದಲ್ಲಿ ಭೂದೇವಿಯು ಭಗವಂತನಲ್ಲಿ ತನ್ನ ಅಳಲನ್ನು ಅರುಹುವಳು.  ಪ್ರತಿಯೊಂದು ಯುಗದಲ್ಲಿಯೂ ಜಗತ್ತಿನ ಹಿತಕ್ಕಾಗಿ ನನ್ನ ಭಾರವನ್ನಿಳಿಸುತ್ತಿರುವ  ನಾರಾಯಣನೇ ನನ್ನನ್ನು ಉದ್ಧರಿಸೆಂದು ಪ್ರಾರ್ಥಿಸುವಳು. ಬ್ರಹ್ಮ ದೇವರ ಆದೇಶದಂತೆ ದೇವಾನುದೇವತೆಗಳೆಲ್ಲರೂ ತಮ್ಮ ತೇಜಸ್ಸಿಗೆ ಸಮಾನವಾಗಿರುವ ತೇಜಸ್ಸುಳ್ಳ ತಮ್ಮ ಅಂಶಗಳನ್ನು ತಮ್ಮ ಶರೀರದಿಂದಲೇ ಸೃಷ್ಟಿಸುವರು.  ಆಗ ಬ್ರಹ್ಮ ದೇವರು ಹಿಂದೊಮ್ಮೆ ತಾವು ಸಮುದ್ರ ರಾಜನಿಗೆ ಕೊಟ್ಟ ಶಾಪದ ಕಥೆಯನ್ನು ತಿಳಿಸುತ್ತಾ ಸಮುದ್ರ ರಾಜನು ತನ್ನ ಒಂದಂಶದಿಂದ ಭರತವಂಶದಲ್ಲಿ ಹುಟ್ಟಿ ಶಾಂತನು ಮಹರಾಜನಾಗಿ, ಗಂಗೆಯನ್ನು ವರಿಸುವನು.  ಅಷ್ಟ ವಸುಗಳು ಶಾಪ ವಿಮೋಚನೆಗೆಂದು ಗಂಗೆಯ ಪುತ್ರರಾಗಿ ಜನಿಸಿ ಶಾಪ ವಿಮೋಚನೆಯಾಗುವರು.  ಶಾಂತನುವಿನ ಎರಡನೆಯ ಪತ್ನಿಯಾದ ಸತ್ಯವತಿಯಲ್ಲಿ ಕುರುವಂಶದ ಕುಡಿಯಾಗಿ ವಿಚಿತ್ರವೀರ್ಯನು ಜನಿಸುವನು.  ಅವನ ಪುತ್ರರಾಗಿ ಇಬ್ಬರು ಮಕ್ಕಳು ಪಾಂಡು ಮತ್ತು ಧೃತರಾಷ್ಟ್ರನೆಂಬುವರ ಮಕ್ಕಳಲ್ಲಿ ಮಹತ್ತರ ಯುದ್ಧವಾಗಿ, ಯುದ್ಢದಲ್ಲಿ ಭರತ ಖಂಡದ ಸಮಸ್ತ ರಾಜರುಗಳೂ ಭಾಗವಹಿಸಿ, ಪರಸ್ಪರ ಕಾದಾಡಿ ಭೂಮಂಡಲದಲ್ಲಿರುವ ನಗರ-ರಾಷ್ಟ್ರಗಳೆಲ್ಲವೂ ನಿರ್ಜನವಾಗುವುದು.  ಭೂಭಾರ ಹರಣಕ್ಕೆ ಭೂಮಿಕೆಯು ಶಾಂತನುವಿನ ಜನ್ಮದಲ್ಲಿಯೇ ಪ್ರಾರಂಭವಾಗಿದೆ ಎಂದು ತಿಳಿಸಿದನು.  ಎಲ್ಲಾ ದೇವತೆಗಳೂ ತಮ್ಮ ಅಂಶದಿಂದ ಭೂಮಿಯಲ್ಲಿ ಅವತರಿಸಿದ ನಂತರ, ಇತ್ತ ನಾರದರು ಭಗವಂತನಲ್ಲಿ ಶ್ರೀರಾಮಚಂದ್ರನ ಕಥೆಯನ್ನು ನೆನಪಿಸುತ್ತಾ ಭಗವಂತಾ ನೀನು ತಾರಕಾಮಯ ಸಂಗ್ರಾಮದಲ್ಲಿ ಕಾಲನೇಮಿಯೆಂಬ ಯಾವ ದೈತ್ಯನನ್ನು ಸಂಹರಿಸಿದೆಯೋ ಅವನೀಗ ಉಗ್ರಸೇನನ ಮಗ ಕಂಸನಾಗಿ ಮಥುರಾ ಎಂಬ ಪಟ್ಟಣದಲ್ಲಿ ಜನಿಸಿರುವನು.  ಅವನು ಅತಿ ಭಯಂಕರನು, ಲೋಕಪೀಡಕನೂ ಆಗಿರುವನು.    ಹಿಂದೆ ಕುದುರೆಯಂತೆ ಸಂಚರಿಸುತ್ತಿದ್ದ ಹಯಗ್ರೀವನೆಂಬ  ದೈತ್ಯನು ಈಗ  ಕಂಸನ ತಮ್ಮ ಕೇಶೀ ಎಂಬ ಹೆಸರಿನಿಂದ ಜನಿಸಿರುವನು.  ದಾನವಶ್ರೇಷ್ಠನಾದ ದಿತಿಯ ಮಗ ದಿಷ್ಟನೆಂಬುವನು ಆನೆಯಾಗಿ ಕಂಸನ ವಾಹನನಾಗಿದ್ದಾನೆ.  ದೈತ್ಯರಲ್ಲೇ ಅತ್ಯಂತ ದರ್ಪಿಷ್ಠನಾಗಿದ್ದ ಲಂಬನೆಂಬುವನು ಪ್ರಲಂಬನಾಗಿ ಆಲದಮರವನ್ನು ಆಶ್ರಯಿಸಿದ್ದಾನೆ.  ಖರನೆಂಬ ದೈತ್ಯನು ಈಗ ಧೇನುಕನಾಗಿದ್ದಾನೆ.  ವಾರಾಹ ಮತ್ತು ಕಿಶೋರನೆಂಬ ದೈತ್ಯ ಬಲಿಷ್ಠರು ಚಾಣೂರ-ಮುಷ್ಟಿಕರೆಂಬ ಜಟ್ಟಿಗಳಾಗಿ ಕಂಸನೊಡನಿದ್ದಾರೆ.  ಮಯ ಮತ್ತು ತಾರ ಎಂಬ ಹೆಸರಿನ ದೈತ್ಯರು ಭೂಮಿಪುತ್ರನಾದ ನರಕನ ಪ್ರಾಗ್ಜ್ಯೋತಿಷ ನಗರದಲ್ಲಿ ವಾಸವಾಗಿದ್ದಾರೆ.  ಅವರೆಲ್ಲರೂ ಒಟ್ಟಿಗೇ ಸೇರಿ ಭೂಮಂಡಲದ ಸಮಸ್ತ ಮಾನವರನ್ನೂ ಪೀಡಿಸುತ್ತಿದ್ದಾರೆ.  ಲೋಕ ಹಿತಕ್ಕಾಗಿ ಅನೇಕಾನೇಕ ಅವತಾರಗಳನ್ನು ಎತ್ತಿರುವ ಭಗವಂತನೇ ನೀನು ಸೃಷ್ಟಿಸಿರುವ ದೇವತೆಗಳೆಲ್ಲರೂ ಭೂಮಂಡಲದಲ್ಲಿ ಅವತರಿಸಿ, ನಿನ್ನ ವ್ಯಕ್ತಾವತಾರವನ್ನು ನೋಡಲು ಕಾತುರದಿಂದಿದ್ದಾರೆ.  ಭೂದೇವಿಯನ್ನು ರಕ್ಷಿಸಲು, ಭೂಭಾರ ಹರಣ ಕಾರ್ಯ ಮಾಡಲು, ಕಂಸನನ್ನು ಅವನ ಪರಿವಾರ ಸಹಿತವಾಗಿ ನಾಶಗೊಳಿಸಲು ಭೂಮಿಯಲ್ಲಿ ಅವತರಿಸಬೇಕೆಂದು ಪ್ರಾರ್ಥಿಸುತ್ತಾರೆ.  

ಇವರಷ್ಟೇ ಅಲ್ಲದೆ ಬಲಿರಾಜನ ಮಗಳಾದ ಪೂತನಿ, ಜರಾಸಂಧ, ಬಾಣಾಸುರ ಮುಂತಾದವರನ್ನೂ ನಾಶಗೊಳಿಸಬೇಕಾಗಿದೆ.  ಗರುಡನ ಭಯದಿಂದಾಗಿ ಯಮುನಾ ನದಿಯ ಮಡುವಿನಲ್ಲಿ ಅವಿತಿರುವ ಕಾಲಿಯ ಸರ್ಪವನ್ನೂ ಅಡಗಿಸಬೇಕಾಗಿದೆಯಾದ್ದರಿಂದ ಮಾನವ ಶರೀರವನ್ನು ಧರಿಸಿ, ತಾನು ಅವತರಿಸುವುದಾಗಿ ಭಗವಂತನು ನಾರದರಿಗೆ ಅಭಯವನ್ನೀಯುವನು.  ವಸುದೇವನೆಂಬ ಹೆಸರಿನಿಂದ  ಗೊಲ್ಲರಿಗೆ ಅಧಿಪತಿಯಾಗಿರುವ ಕಶ್ಯಪ ಮಹರ್ಷಿಗಳಿಗೂ ಮತ್ತು ದೇವಕಿಯಾಗಿರುವ ಅದಿತಿಗೂ, ತಾನು ಮಗನಾಗಿ ಜನಿಸುವೆನೆಂದು ಭಗವಂತನು ನುಡಿಯುವನು.  ಕಶ್ಯಪ ಮಹರ್ಷಿಗಳ ಮತ್ತೊಬ್ಬ ಮಡದಿ ಸುರಭಿಯು ರೋಹಿಣಿಯಾಗಿ ಜನಿಸಿ ವಸುದೇವನ ಭಾರ್ಯೆಯಾಗಿರುವಳು.  ಭಗವಂತನು ವಸುದೇವ-ದೇವಕಿಯರ ಎಂಟನೆಯ ಮಗುವಾಗಿ ಅವತರಿಸುವ ಮೊದಲು ಏಳನೆಯ ಗರ್ಭದಲ್ಲಿ ಬರುವ ಮಗುವನ್ನು ಭಗವಂತನ ಆದೇಶದ ಮೇರೆಗೆ ನಿದ್ರಾದೇವಿಯು ದೇವಕಿಯ ಗರ್ಭದಿಂದ ಸೆಳೆದು ರೋಹಿಣಿಯ ಗರ್ಭದಲ್ಲಿ ಸೇರಿಸುತ್ತಾಳೆ.  ಗರ್ಭದಿಂದ ಸೆಳೆಯಲ್ಪಟ್ಟ ಮಗುವು ಮುಂದೆ ಸಂಕರ್ಷಣನೆಂದು ಕರೆಸಿಕೊಂಡು ಭಗವಂತನಿಗೆ ಹಿರಿಯ ಸಹೋದರನಾಗುತ್ತಾನೆ.  ಶ್ರೀಕೃಷ್ಣನಿಗೆ ಅಣ್ಣನಾಗಿ, ಬಲರಾಮನಾಗುತ್ತಾನೆ. 

ಭಗವಾನ್ ಶ್ರೀಕೃಷ್ಣನ ಅವತಾರವು ಮುಖ್ಯವಾಗಿ ಭೂಭಾರ ಹರಣ ಕಾರ್ಯಕ್ಕಾಗಿಯೇ ಆಗಿರುವುದೆಂಬುದು ತಿಳಿಯುತ್ತದೆ.  ಪುಟ್ಟ ಮಗುವಾಗಿ, ಆಟವಾಡುವ ಬಾಲಕನಾಗಿ ಕೃಷ್ಣನು ಅನೇಕ ದೈತ್ಯರ ವಧೆಯನ್ನು ಮಾಡುತ್ತಾನೆ.  ಅವತಾರದ ಸಮಾಪ್ತಿಯವರೆಗೂ ದುಷ್ಟ ದಾನವರ ಸಂಹಾರ ನಡೆಯುತ್ತದೆ.  ತಾನಿಟ್ಟ ಪ್ರತಿ ಹೆಜ್ಜೆಯಲ್ಲೂ, ತಾನು ಭಗವಂತನೇ, ಸಾಮಾನ್ಯನಲ್ಲ ಎಂಬುದನ್ನು ಶ್ರೀಕೃಷ್ಣನು ಜಗತ್ತಿಗೆ ತೋರಿಸುತ್ತಲೇ ಇರುವನು.  ಭೂದೇವಿಯ ರಕ್ಷಣೆಯ ಸಲುವಾಗಿ, ನಡೆಯುತ್ತಿರುವ ಭೂಭಾರ ಹರಣದ ಕಾರ್ಯದ ಜೊತೆಗೇ ಭಗವಂತನು ತನ್ನ ಬಾಲ್ಯ ಲೀಲೆಗಳಿಂದ ಸರ್ವರನ್ನೂ ವಿಸ್ಮಯಗೊಳಿಸುತ್ತಾ, ಮೋಡಿ ಮಾಡುತ್ತಾ, ತನ್ನ ಪಾಶದಲ್ಲಿ ಸಿಲುಕಿಸಿಕೊಳ್ಳುವ ಅತ್ಯಂತ ಆಕರ್ಷಕ ವ್ಯಕ್ತಿತ್ವವನ್ನು ತೋರುವನು.

ಹರಿವಂಶದಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿರುವ ಭೂಭಾರ ಹರಣಕ್ಕಾಗಿಯೇ ಆದ ಕೃಷ್ಣಾವತಾರದ ಕಥೆಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ "ಕೃಷ್ಣ ಚಾರಿತ್ರ್ಯ ಮಂಜರಿ"ಯಲ್ಲಿ ೨೮ ಪದ್ಯಗಳ ಗುಚ್ಛದಲ್ಲಿ 
ವಿಷ್ಣು ಬ್ರಹ್ಮಾದಿದೇವೈಃ ಕ್ಷಿತಿಭರಹರಣೇ ಪ್ರಾರ್ಥಿತಃ ಪ್ರಾದುರಾಸೀದ್
ದೇವಕ್ಯಾಂ ನಂದನಂದೀ ಶಿಶುವಧವಿಹಿತಾಂ ಪೂತನಾಂ ಯೋ ಜಘಾನ್ |
ಉತ್ಥಾನೌತ್ಸುಕ್ಯಕಾಲೇ ರಥಚರಣಗತಂ ಜಾಸುರಂ ಪಾದಘಾತೈ -
ಶ್ಚಕ್ರಾವರ್ತಂ ಚ ಮಾತ್ರಾ ಗುರುರಿತಿ ನಿಹಿತೋ ಭೂತಲೇ ಸೋSವತಾನ್ಮಾನ್ || - ಭೂಭಾರ ಹರಣಕ್ಕಾಗಿ ಬ್ರಹ್ಮ ರುದ್ರಾದಿ ದೇವತೆಗಳಿಂದ ಪ್ರಾರ್ಥಿಸಲ್ಪಟ್ಟವನಾಗಿ ಪ್ರಾದುರ್ಭಾವವಾದ ರೂಪವೇ ಕೃಷ್ಣ.  ದೇವಕಿಯಲ್ಲಿ ಜನಿಸಿ ನಂದಗೋಪನಿಗೆ ಆನಂದವನ್ನು ನೀಡಿ, ಶಿಶುವಧಾರ್ಥವಾಗಿ ಬಂದ ಪೂತನೆಯನ್ನು ಸಂಹರಿಸಿ, ಉಪನಿಷ್ಕ್ರಮಣ ಕಾಲದಲ್ಲಿ ರಥದ ರೂಪದಲ್ಲಿ ಬಂದ ಶಕಟಾಸುರನನ್ನು ತನ್ನ ಪಾದದಿಂದ ತಾಡನ ಮಾಡುವ ಮಾತ್ರದಿಂದಲೇ ಕೊಂದು, ಸುಂಟರಗಾಳಿ ರೂಪದಲ್ಲಿ ಬಂದ ತೃಣಾವರ್ತನನ್ನೂ ಆಕಾಶದೆತ್ತರದಿಂದ ಭೂತಲದಲ್ಲಿ ಬೀಳಿಸಿ, ಪುಡಿ ಪುಡಿಯಾಗುವಂತೆ ಮಾಡಿ, ಅವರಿಬ್ಬರನ್ನೂ ಸಂಹರಿಸಿದ ಶ್ರೀಕೃಷ್ಣನು ನಮ್ಮನ್ನು ರಕ್ಷಿಸಲೆಂದು ಪ್ರಾರ್ಥಿಸಿದ್ದಾರೆ.

ಪುರಾಣಗಳಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ದಶರಥರಾಮ, ಬಲರಾಮ, ಬುದ್ಧ, ಕಲ್ಕಿ ಎಂದು ದಶಾವತಾರಗಳ ಉಲ್ಲೇಖವಿದೆ.  "ರಾಮೋ ರಾಮಶ್ಚ ರಾಮಶ್ಚ" - ಪರಶುರಾಮ, ದಶರಥರಾಮ ಮತ್ತು ಬಲರಾಮ ಎಂಬರ್ಥ.  ಆದರೆ ಶ್ರೀಮದಾಚಾರ್ಯರು ಭಗವಂತನ ದಶಾವತಾರಗಳು  ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ದಶರಥರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ ಎಂದು ಸ್ಪಷ್ಟ ಪಡಿಸಿದ್ದಾರೆ.  ಬಲರಾಮ ಭಗವಂತನ ಆವೇಶಾವತಾರವಾಗುವುದು.  ಆದರೆ ಬಲರಾಮನೊಳಗಿದ್ದು ಧೇನುಕಾಸುರನ ವಧೆ ಮಾಡುವುದು ಭಗವಂತನೇ ಆಗಿರುವುದರಿಂದ ಕೃಷ್ಣನೇ ಧೇನುಕಾಸುರಮಥನನೆಂದು ಹೆಸರು ಪಡೆದಿರುವುದು.  ಧೇನುಕಾಸುರನು ಕಂಸನ ಪರಿವಾರದವನು.  ಮೇರು ಪರ್ವತದ ಸಭೆಯಲ್ಲಿ ಭಗವಂತನು ದೇವತೆಗಳಿಗೆ ತಾನು ಕಂಸನನ್ನು ಪರಿವಾರ ಸಹಿತವಾಗಿ ನಾಶ ಮಾಡುವೆನೆಂದು ಅಭಯ ಕೊಡುವನು.  ಕೊಟ್ಟ ಮಾತಿನಂತೆಯೇ ಬಲರಾಮನಲ್ಲಿ ನಿಂತು ತಾನೇ ಮಾಡಿ, ಬಲರಾಮನಿಂದ ಮಾಡಿಸಿರುವನು.  (ಶ್ರೀ ಬನ್ನಂಜೆಯವರ ಪ್ರವಚನ ಆಧಾರಿತ).

ಶ್ರೀವಿಷ್ಣು ಸಹಸ್ರನಾಮದಲ್ಲಿ  ವಸುದೇವನ ಸುತ "ವಾಸುದೇವ"ನೆಂಬ ನಾಮ ಮೂರು ಬಾರಿ ಪುನರುಕ್ತಿಯಾಗಿದೆ.  ವಾಸುದೇವ ಪದವನ್ನು ಬಿಡಿಸಿದಾಗ ವಾ+ಸು+ದೇ+ಅವ - ವಾ=ಎಲ್ಲೆಡೆ ತುಂಬಿರುವವನು, ಸೂ ಅಥವಾ ಸೂತೇ=ಎಲ್ಲವನ್ನೂ ಹೆತ್ತವನು (ಸರ್ವ ಸೃಷ್ಟಿಕರ್ತ), ದೇ=ಎಲ್ಲವನ್ನೂ ಕೊಡುವವನು (ಸರ್ವದಾತ), ಅವ=ಎಲ್ಲರ ರಕ್ಷಕ ಎಂದೂ, ಜ್ಞಾನ ಪ್ರೇರಕ ಎಂದೂ, ’ಬೆಳಗುವ ಸಂಪತ್ತು’=ಕೇವಲ ಶುದ್ಧವಾದ ಸಾತ್ವಿಕ ಮನಸ್ಸಿಗೆ ಅಭಿವ್ಯಕ್ತವಾಗುವವನು, ಅಷ್ಟವಸುಗಳಲ್ಲಿ ಪ್ರಧಾನನಾದ ಅಗ್ನಿ ಪ್ರತೀಕದಲ್ಲಿ ಉಪಾಸ್ಯನಾದವ ಹಾಗೂ ಎಲ್ಲೆಡೆ ನೆಲೆಸಿ ಎಲ್ಲವನ್ನೂ ಆವರಿಸಿ ವಿಹರಿಸುವವನು ವಾಸುದೇವ ಎಂಬ ಅರ್ಥವಾಗುತ್ತದೆ. (ಶ್ರೀ ಬನ್ನಂಜೆಯವರ ಪ್ರವಚನ ಆಧಾರಿತ).

ಶ್ರೀವಿಷ್ಣು ಸಹಸ್ರನಾಮದಲ್ಲಿ "ಭಗವಾನ್ ಭಗಹಾನಂದಿ ವನಮಾಲೀ ಹಲಾಯುಧಃ" ಎಂಬ ಉಲ್ಲೇಖವಿದೆ.  ಹಲಾಯುಧಃ ಎಂದರೆ ನೇಗಿಲನ್ನು ಆಯುಧವಾಗಿ ಬಳಸಿದ ನರರೂಪಿ ಬಲರಾಮನೊಳಗೆ, ಆವಿರ್ಭೂತಿಯಾದ ಭಗವಂತ ಹಲಾಯುಧಃ.  ಭಗವಂತನು ಧರಿಸುವ ಅನೇಕಾನೇಕ ಆಯುಧಗಳಲ್ಲಿ ನೇಗಿಲೂ ಒಂದಾಗಿದೆ.  ವಿಶ್ವರೂಪವನ್ನು ತೋರಿಸಿದ ಶ್ರೀಕೃಷ್ಣನ ನಾನಾ ಬಾಹುಗಳಲ್ಲಿ ಬೇರೆ ಬೇರೆ ಆಯುಧಗಳಿದ್ದಂತೆ ಒಂದು ಬಾಹುವಿನಲ್ಲಿ ’ಹಲಾಯುಧ’ವನ್ನೂ ಕಾಣಬಹುದಾಗಿದೆ.  ’ಹಲ’ವೆಂದರೆ ಕಬ್ಬಿಣದ ನೇಗಿಲು, ಕಪ್ಪು ಬಣ್ಣದ್ದು.  ಭಗವಂತನು ತನ್ನ ಭಕ್ತರ ಪರಿಪಾಲನೆಗಾಗಿ, ಯಜ್ಞಕ್ಕೆ ಅವಶ್ಯಕವಾದ ದವಸ ಧಾನ್ಯಗಳನ್ನು ಬೆಳೆಯಲು ಭೂಮಿಯನ್ನು ಉಳಬೇಕು, ಬೆಳೆಯನ್ನು ಬೆಳೆಯಬೇಕು.  ಇದಕ್ಕೆ ಬೇಕಾದ ಉಪಕರಣಗಳಲ್ಲಿ ನೇಗಿಲು ಪ್ರಮುಖವಾದುದು.  ಹೀಗೆ ವ್ಯವಸಾಯಕ್ಕೆ ಬಳಸಲ್ಪಡುವ ನೇಗಿಲನ್ನು ಶತ್ರು ಸಂಹಾರಕ್ಕೆಂದು ಬಳಸಿದಾಗ ಅದನ್ನು ಹಲಾಯುಧವೆನ್ನುತ್ತಾರೆ.  ನೇಗಿಲೆಂಬ ಉಪಕರಣದಲ್ಲಿರುವ ದಿವ್ಯಶಕ್ತಿಯು ಭಗವಂತನೇ ಆಗಿದ್ದಾನೆ.  ಈ ಹಲಾಯುಧವನ್ನು ಧರಿಸಿರುವ ಭಗವಂತನು ಹಲಧರನೇ ಆಗಿರುವನು.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ನಾಲ್ಕು ಚರಣಗಳಲ್ಲಿ ಭಗವಂತನ ಕೃಷ್ಣಾವತಾರವನ್ನು
"ದೇವಕಿನಂದನ ಸುಂದರರೂಪ ರುಕ್ಮಿಣಿ ವಲ್ಲಭ ಪಾಂಡವ ಬಂಧೋ | ದೇವಕಿನಂದನ ನಂದಕುಮಾರ ವೃಂದಾವನಾಂಚನ ಗೋಕುಲ ಚಂದ್ರ | ಕಂದಫಲಾಶನ ಸುಂದರರೂಪ ನಂದಿತಗೋಕುಲ ವಂದಿತಪಾದ" - ಪರಮ ಸುಂದರನೂ, ರುಕ್ಮಿಣೀ ಪತಿಯೂ, ಪಾಂಡವರ ಬಂಧುವೂ ಆದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ.  ದೇವಕೀ ವಸುದೇವರಿಗೂ, ನಂದಯಶೋದೆಯರಿಗೂ ಪುತ್ರನಾದ, ವೃಂದಾವನದಲ್ಲಿ ವಿಹರಿಸುತ್ತಿದ್ದ, ಗೋಕುಲವನ್ನು ಬೆಳಗಿದ ಕಂದಫಲಗಳನ್ನು ತಿನ್ನುವ, ಸುಂದರರೂಪಿಯಾದ, ಗೋ, ಗೋಪಗೋಪಿಯರನ್ನು ಆನಂದಗೊಳಿಸಿದ, ಸಜ್ಜನರಿಂದ ವಂದಿತನಾದವನೇ ನಿನಗೆ ನಮಸ್ಕರಿಸುತ್ತೇನೆ ಎಂದೂ 
ನವಮೋಧ್ಯಾಯದಲ್ಲಿ
ಸುಲಲಿತ ತನುವರವರದ ಮಹಾಬಲಯದುವರ ಪರ್ಥಪಭವಮಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಸುಂದರರೂಪಿಯೂ, ಭಕ್ತರಿಗೆ ಇಷ್ಟಾರ್ಥವನ್ನು ಕರುಣಿಸುವ ಸರ್ವಶಕ್ತನೂ ಅರ್ಜುನ ರಕ್ಷಕನೂ ಕೃಷ್ಣಾವತಾರಿಯೂ ಆದ ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನು ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾ ರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.


ಶ್ರೀಶಂಕರಾಚಾರ್ಯರು  ತಮ್ಮ ಶ್ರೀ ಕೃಷ್ಣಾಷ್ಟಕಮ್ ಸ್ತೋತ್ರಮ್ ನಲ್ಲಿ

ಭುವೋ ಭರಾವತಾರಕಂ ಭವಾಬ್ಧಿ ಕರ್ಣಧಾರಕಂ | ಯಶೋಮತೀ ಕಿಶೋರಕಂ ನಮಾಮಿ ಚಿತ್ತ ಚೋರಕಮ್ || - ಭೂಮಿಯನ್ನು ಭಾರದಿಂದ ರಕ್ಷಿಸುವ, ಭಕ್ತರ ಸಂಸಾರ ನೌಕೆಯನ್ನು ನಡೆಸುವ, ಯಶೋಮತಿಯ ಪುತ್ರ, ಗೋಪಿಯರ ಚಿತ್ತ ಚೋರನನ್ನು ನಮಿಸುವೆನು ಎಂದೂ

ತ್ರೈವಿಷ್ಟಪರಿಪುವೀರಘ್ನಂ ಕ್ಷಿತಿಭಾರಘ್ನಂ ಭವರೋಗ ಘ್ನಂ | ಕೈವಲ್ಯಂ ನವನೀತಾ ಹಾರಮನಾಹಾರಂ ಭುವನಾಹಾರಮ್ || - ದೇವತೆಗಳ ಶತ್ರುಗಳನ್ನು ಸಂಹರಿಸುವವನು, ಭೂಭಾರವನ್ನು ಇಳಿಸಿದವನು, ಸಂಸಾರರೋಗ ನಾಶಕನು, ಮೋಕ್ಷ ಸ್ವರೂಪನು, ವಿಶ್ವವೇ ಆಹಾರವಾಗಿರುವವನನ್ನು ನಮಸ್ಕರಿಸಿ ಎಂದೂ

ಕಾಂತಂ ಕಾರಣಕಾರಣಮಾದಿಮನಾದಿಂ ಕಾಲ ಘನಾಭಾಸಂ | ಕಾಲಿಂದೀಗತಕಾಲಿಯಶಿರಸಿರು ನೃತ್ಯಂತಂ ಸುವಿನೃತ್ಯಂತಮ್ || - ಕಾಂತನು, ಕಾರಣದ ಕಾರಣನು, ಅನಾದಿಯು, ಆದಿಯು, ಅಭಾಸರಹಿತ ಕಾಲಸ್ವರೂಪನು, ಯಮುನಾ ನದಿಯಲ್ಲಿ ಕಾಲಿಯಾ ಸರ್ಪದ ಹೆಡೆಯ ಮೇಲೆ ಸುಂದರವಾದ ನೃತ್ಯ ಮಾಡುತ್ತಿರುವವನನ್ನು ನಮಸ್ಕರಿಸಿರಿ ಎಂದೂ ಸ್ತುತಿಸಿ ಪ್ರಾರ್ಥಿಸಿದ್ದಾರೆ.


ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಶ್ರೀಕೃಷ್ಣಾವತಾರವನ್ನು ಒಟ್ಟು ಹನ್ನೆರಡು ಚರಣಗಳಲ್ಲಿ ಸ್ತುತಿಸಿ, ವರ್ಣಿಸಿದ್ದಾರೆ :

ಭಗವಂತನು ಶ್ರೀಕೃಷ್ಣನಾಗಿ ಅವತರಿಸಿ, ತನ್ನ ಬಾಲ್ಯಲೀಲೆಗಳಿಂದ ಎಲ್ಲರನ್ನೂ ಸಂತೋಷ ಪಡಿಸುವುದನ್ನೂ, ತುಂಟತನದಿಂದಾಗಿ ತಾಯಿಯಿಂದ ಬಂಧಿಸಲ್ಪಡುವುದನ್ನೂ, ಗೋವರ್ಧನೋದ್ಧಾರನಾಗಿರುವುದನ್ನೂ, ತನ್ನ ಆಟಗಳಲ್ಲಿಯೇ ದುಷ್ಟ ರಕ್ಕಸರನ್ನು ಸಂಹರಿಸುತ್ತಾ ಭಕ್ತರನ್ನು ಮೋಹಗೊಳಿಸುವುದನ್ನೂ, ಸುಂದರವಾಗಿ ವರ್ಣಿಸುತ್ತಾರೆ.    ಹಾಗೇ ಶ್ರೀಕೃಷ್ಣಾವತಾರದ ಮೂಲ ಉದ್ದೇಶವನ್ನು ವರ್ಣಿಸುತ್ತಾ
ಕಂಸಾದಿಕಾಸದವ ತಂಸಾವನೀಪತಿ ವಿಹಿಂಸಾಕೃತಾತ್ಮ ಜನುಷಂ
ಸಂಸಾರ ಭೂತಮಿಹ ಸಂಸಾರಬದ್ಧ ಮನಸಂ ಸಾರಚಿತ್ಸುಖ      ತನುಮ್ |
ಸಂಸಾಧಯಂತಮನಿಶಂ ಸಾತ್ವಿಕವ್ರಜಮಹಂ ಸಾದರಂ ಬತ ಭಜೇ
ಹಂಸಾದಿ ತಾಪಸ ರಿರಂಸಾಸ್ಪದಂ ಪರಮ ಹಂಸಾದಿ ವಂದ್ಯ ಚರಣಮ್ || - ಕಂಸಾದಿ ದುಷ್ಟರಾಜರ ನಾಶಕ್ಕಾಗಿ ಅವತರಿಸಿದ, ಸರ್ವೋತ್ತಮನಾದ, ತನ್ನನ್ನೆ ಸದಾಕಾಲ ಭಜಿಸುತ್ತಿರುವ ಜ್ಞಾನಿಗಳಿಗೆ ಮುಕ್ತಿಪ್ರದನಾದ, ಸರ್ವವನ್ನೂ ಬಿಟ್ಟ ಹಂಸ ಪರಮಹಂಸಾದಿ ತಾಪಸಶ್ರೇಷ್ಠರಿಗೆ ಆಶ್ರಯಸ್ಥಾನನಾದ, ಬ್ರಹ್ಮನ ಮಾನಸ ಪುತ್ರರಾದ ಸನಕಾದಿ ಯೋಗಿಗಳಿಂದ ಸದಾಕಾಲ ಧ್ಯಾನಿಸಲ್ಪಡುತ್ತಿರುವ, ಸರ್ವೋತ್ತಮನಾದ, ಲಕ್ಷ್ಮೀಪತಿಯಾದ ಶ್ರೀ ಕೃಷ್ಣನೆಂದು ಅವತರಿಸಿದ ಶ್ರೀಹರಿಯು ನಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಶ್ರೀಕೃಷ್ಣಾತಾರವನ್ನು
ವಹಸಿ ವಪುಷಿ ವಿಶದೇ ವಸನಂ ಜಲದಾಭಂ
ಹಲಹತಿಭೀತಿಮಿಲಿತ ಯಮುನಾಭಂ
ಕೇಶವ ಧೃತ ಹಲಧರ ರೂಪ ಜಯ ಜಗದೀಶ ಹರೇ || -   ನೀರಿನ ಕಮಂಡಲವ ಪಿಡಿದ, ಸ್ವಚ್ಛವಾದ, ಸುಂದರ ದೇಹದಿ ನಡೆಯುವ ವಾಮನ ರೂಪ, ಯಮುನಾ ತೀರದಿ ಭೀತಿ ಬೆರೆತಿರುವ ಹಲಾಯುಧ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ  ಶ್ರೀ ಕೃಷ್ಣಾವತಾರವನ್ನು ಸಮನ್ವಯಿಸಿಕೊಂಡಾಗ ಕೃಷ್ಣ ನಮ್ಮೊಳಗಿನ ಚೇತನ, ಪ್ರಜ್ಞೆ ಎಂಬ ಅರಿವಾಗುತ್ತದೆ.  ಪುಟ್ಟ ಮಗುವಾಗಿ ತನ್ನ ಬಾಲ್ಯಲೀಲೆಗಳಿಂದ ಎಲ್ಲರ ಮನಸ್ಸನ್ನೂ ತಿಳಿಗೊಳಿಸಿದ, ಕರ್ಷಿಸಿದ ’ಉತ್ಸಾಹ’ವೆನಿಸುತ್ತದೆ.  ನಮ್ಮನ್ನು ತಾಮಸಿಕ ಆಂದೋಲನದಿಂದ ಹೊರಗೆಳೆಯಬಹುದಾದ ಶಕ್ತಿ ಅಥವಾ ಪ್ರಜ್ಞೆ - ಅದುವೇ "ಕೃಷ್ಣ ಪ್ರಜ್ಞೆ".  ಕೃಷ್ಣ ಧನಾತ್ಮಕ ಶಕ್ತಿಯಾದರೆ, ನಮ್ಮ ಬುದ್ಧಿ, ವಿವೇಕದ ಶಕ್ತಿ.  ನಮ್ಮೊಳಗಿನ ತರಂಗಗಳಲ್ಲಿ ಯಾವುದು ನಮ್ಮನ್ನು ಸಾತ್ವಿಕತೆಯ ಹಾದಿಗೆ ಕೊಂಡೊಯ್ಯುವುದು ಎಂಬುದರ ಅರಿವು ನಮಗೆ ಬರುವುದೇ "ಕೃಷ್ಣ ಪ್ರಜ್ಞೆ".  ಶ್ರೀ ಕೃಷ್ಣ ಪರಮಾತ್ಮ ಕಾಳಿಂಗ ಸರ್ಪದ ಮೇಲೆ ನಿಂತು ಮರ್ಧಿಸಿದನೆಂದರೆ, ಅದರ ಅರ್ಥ ಋಣಾತ್ಮಕ ಭಾವಗಳನ್ನೂ, ತಮಸ್ಸನ್ನೂ, ಪುಟ್ಟ ಕೃಷ್ಣ ತಾನೇ ಧನಾತ್ಮಕ ಭಾವವಾಗಿಯೂ, ಸಾತ್ವಿಕದ ಸಂಕೇತವಾಗಿಯೂ ತುಳಿದು ಧ್ವಂಸ ಮಾಡಿದನೆಂದಾಗುತ್ತದೆ.  ಸದಾ ಶ್ರೀಕೃಷ್ಣನ ಕಾಳಿಂಗ ಮರ್ಧನವನ್ನು ಚಿಂತನೆ ಮಾಡುತ್ತಾ ನಮ್ಮೊಳಗೆ ಉತ್ಪತ್ತಿಯಾಗುತ್ತಲೇ ಇರುವ ತಾಮಸಿಕ ಗುಣಗಳನ್ನು ನಾವು ನಾಶಪಡಿಸುತ್ತಲೇ ಇರಬೇಕು. ಕೃಷ್ಣನ ಸೆಳವಿಗೆ ಸಿಲುಕಿದಲ್ಲಿ ಮಾತ್ರವೇ ಉತ್ಕೃಷ್ಟವಾದ ದೈವಿಕ ಪ್ರೇಮ-ಭಾವ ಅಂತರಂಗದಲ್ಲಿ ಅಂಕುರವಾಗುವುದು. ಕೃಷ್ಣನ ನಿಕಟವರ್ತಿಗಳಾದ ಗೋವು, ಕೊಳಲು, ತುಳಸಿ, ಬೆಣ್ಣೆ ಹೀಗೆ ಪ್ರತಿಯೊಂದೂ ನಮಗೆ ಕೃಷ್ಣ ಪ್ರಜ್ಞೆಯನ್ನು ಸದಾ ಜಾಗೃತಿಗೊಳಿಸುತ್ತಲೇ ಇರುತ್ತವೆ.  ಕೃಷ್ಣ ನಮ್ಮೊಳಗೇ, ನಮ್ಮೊಂದಿಗೇ ಸದಾ ಇದ್ದಾನೆಂಬ ಅಲೌಕಿಕ ಸುಖ ತನು ಮನಗಳನ್ನು ಪುಳಕಿತಗೊಳಿಸುತ್ತಲೇ ಇರುತ್ತದೆ.  

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಕಾಲುಗಳಲ್ಲಿ ಶ್ರೀಕೃಷ್ಣ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಶ್ರೀಕೃಷ್ಣನ ರೂಪದಿಂದವತರಿಸಿದಾಗ ರಮಾದೇವಿಯು ’ರುಕ್ಮಿಣಿ’ಯಾಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ವಸುದೇವ ದೇವಕೀ ಬಸುರಿ-ಲಿ ಜನಿಸಿದಿ
ವಸುಧೆ ಭಾರವನು ಇಳುಹಿ-ದಿ | ಇಳುಹಿ ಪಾಂಡವರ ಪೋ-
ಷಿಸಿದ ಶ್ರೀ ಕೃಷ್ಣ ದಯವಾಗೋ || - ವಸುದೇವ ದೇವಕಿಯರ ಗರ್ಭದಿಂದ ಜನಿಸಿ ಭೂಭಾರವನ್ನು, ಪಾಪಿಗಳ ಸಂಹಾರದಿಂದ, ನಾಶಮಾಡಿದಿ.  ಪಾಂಡುಪುತ್ರರಾದ ಧರ್ಮಾದಿಗಳನ್ನು ರಕ್ಷಿಸಿದ ಹೇ ಕೃಷ್ಣ ದಯವಾಗೋ, ಕೃಪೆತೋರೋ ಎಂದು ಪ್ರಾರ್ಥಿಸಿದ್ದಾರೆ.

ಕೃಷ್ಣಾವತಾರದ ಮೂಲ ಉದ್ದೇಶವನ್ನು ಎರಡು ರೀತಿಯಲ್ಲಿ ಭಗವಂತ ನಮಗೆ ತೋರಿಸಿರುವುದು ಅವನ ಪರಮ ಕರುಣೆಯೆಂದು ತಿಳಿಯಬಹುದು.  ಮೊದಲ ಕಾರಣವು ಮಾನವ ಕುಲಕ್ಕೆ "ಭಗವದ್ಗೀತೆ"ಯ ಕೊಡುಗೆಯಾಗಿದೆ.  ಅಂದಿಗೂ, ಇಂದಿಗೂ, ಮುಂದೆಯೂ, ಸರ್ವ ಕಾಲದಲ್ಲಿಯೂ ಪ್ರಸ್ತುತವಾಗಿರುವ ಭಗವದ್ಗೀತೆಯು, ಭಗವಂತನು ಸ್ವತಃ ಉಲಿದ ಸರ್ವ ಶ್ರೇಷ್ಠ ಕೊಡುಗೆಯಾಗಿದೆ. ಎರಡನೆಯ ಕಾರಣವು  ಭಗವಂತನು ಭಕ್ತರಿಗೆ  ತನ್ನ ಬಗೆಬಗೆಯ ಲೀಲಾವಿನೋದಗಳನ್ನೂ, ಕ್ರೀಡಾದಿಗುಣಗಳನ್ನೂ ತೋರಿಸುವುದೇ ಆಗಿದೆ.  ಭಗವಂತನು ಕೃಷ್ಣನಾಗಿ ಅವತರಿಸಿರದಿದ್ದರೆ ಭಕ್ತರಾದ ನಮಗೆ ಭಗವಂತನ ಲೀಲೆಗಳನ್ನೂ, ಚರಿತ್ರೆಗಳನ್ನೂ ಚಿಂತನೆ ಮಾಡುವುದು ಸಾಧ್ಯವಿರಲಿಲ್ಲ.  ಇದು ಭಗವಂತನು ಭಕ್ತರಿಗೆ ಪ್ರೇಮದಿಂದ ತೋರಿದ ಕಾರುಣ್ಯವೇ ಆಗಿದೆಯೆಂದು ಭಾವಿಸಬೇಕು.

ಚಿತ್ರಕೃಪೆ : ಅಂತರ್ಜಾಲ
http://www.orissatourism.org/jagannath-temple/

https://en.wikipedia.org/wiki/Krishna_Balaram_Mandir

Wednesday, July 15, 2015

ಕರುಣಾ ಸಂಧಿ - ೩೦ ನೇ ಪದ್ಯ ( ರಾಮಾವತಾರ )

ರಾಮೋರಾಮೋರಾಮ ಇತಿ ಸರ್ವೇಷಾಮಭವತ್ತದಾ |
ಸರ್ವೋ ರಾಮಮಯೋ ಲೋಕೋ ಯದಾ ರಾಮಸ್ತ್ವ ಪಾಲಯತ್ ||


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||

ರಾವಣಾದಿನಿಶಾಚರಧ್ವಂಸಿ -  ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿ ದಶರಥ ಮಹಾರಾಜನು ಆಯಾ ದೇವತೆಗಳನ್ನು ಹವಿಸ್ಸನ್ನು ಸ್ವೀಕರಿಸಲು ಆಹ್ವಾನಿಸಿದನು.  ಆಹ್ವಾನ ಸ್ವೀಕರಿಸಿ ದಯಮಾಡಿಸಿದ ಸಮಸ್ತ ದೇವತೆಗಳೂ ಅಲ್ಲಿಯೇ ಉಪಸ್ಥಿತರಿದ್ದ ಬ್ರಹ್ಮ ದೇವರಲ್ಲಿ ತಮ್ಮ ಅಳಲನ್ನು ಬಿನ್ನಹ ಮಾಡುವರು.  ಬ್ರಹ್ಮ ದೇವರ ವರಪ್ರಸಾದದಿಂದ ಅತಿಶಯ ಮದದಿಂದ ಕೊಬ್ಬಿರುವ ರಾವಣನೆಂಬ ರಾಕ್ಷಸನು ತಮ್ಮನ್ನೆಲ್ಲಾ ಪೀಡಿಸುತ್ತಿರುವನೆಂದೂ, ಸ್ವರ್ಗಲೋಕಾಧಿಪತ್ಯವನ್ನು ಗಳಿಸಿ ಇಂದ್ರದೇವನನ್ನು ಸ್ಥಾನದಿಂದ ಚ್ಯುತರನ್ನಾಗಿಸಲು ಹೊಂಚು ಹಾಕುತ್ತಿರುವನೆಂದೂ, ದುರಹಂಕಾರದಿಂದ ಉನ್ಮತ್ತನಾಗಿ ಋಷಿಗಳನ್ನೂ, ಯಕ್ಷ-ಗಂಧರ್ವರನ್ನೂ ಬಹುವಾಗಿ ಪೀಡಿಸುತ್ತಿರುವನೆಂದು ತಿಳಿಸುತ್ತಾರೆ.  ಬ್ರಹ್ಮದೇವರಿಂದ  ’ಗಂಧರ್ವ-ಯಕ್ಷ-ದೇವ-ರಾಕ್ಷಸ’ರಿಂದ ತಾನು ಅವಧ್ಯನಾಗುವಂತೆ ಪಡೆದಿರುವ ವರಪ್ರಸಾದದಿಂದ ದುಷ್ಟ ರಾವಣನು ಲೋಕಕಂಟಕನಾಗಿರುವನು.  ಆದ್ದರಿಂದ ರಾವಣನ ವಧೆಗೆ ಉಪಾಯವೊಂದನ್ನು ನಿರೂಪಿಸಬೇಕೆಂದು ಸಮಸ್ತ ದೇವತೆಗಳೂ ಬ್ರಹ್ಮದೇವರನ್ನು ಪ್ರಾರ್ಥಿಸುವರು.  ಬ್ರಹ್ಮದೇವರು ರಾವಣನಿಗೆ ಮಾನವರ ವಿಷಯದಲ್ಲಿದ್ದ ಅನಾದರಣೆ ಮತ್ತು ತಾತ್ಸಾರವನ್ನು ತಿಳಿಸುತ್ತಾ ರಾವಣನು ಮಾನವನಿಂದ ತನಗೆ ಮೃತ್ಯು ಬಾರದಿರಲೆಂದು ವರ ಕೇಳಿಲ್ಲವೆಂದು ತಿಳಿಸುವರು.  ಆದ್ದರಿಂದಲೇ ರಾವಣನು ಮಾನವನಿಂದಲೇ ಹತನಾಗಬೇಕು ಮತ್ತು ಭಗವಂತನೇ ಸಾಕ್ಷಾತ್ ಈ ಕಾರ್ಯವನ್ನು ಮಾಡಬೇಕಾಗಿರುವುದರಿಂದ ಸರ್ವ ದೇವತೆಗಳೂ ಶ್ರೀಹರಿಯನ್ನು ಪ್ರಾರ್ಥಿಸಬೇಕೆಂದು ತಿಳಿಸುವರು.  ಅದೇ ಸಮಯಕ್ಕೆ ಅಲ್ಲಿಗೆ ಶಂಖ-ಚಕ್ರ-ಗದಾಪಾಣಿಯಾಗಿ ಆಗಮಿಸಿದ ಶ್ರೀಹರಿಯನ್ನು ದೇವತೆಗಳು ನಾನಾ ವಿಧದಿಂದ ಸ್ತುತಿಸುತ್ತಾ ದಶರಥನ ಸುತನಾಗಿ ಜನಿಸಬೇಕೆಂದು ಪ್ರಾರ್ಥಿಸುತ್ತಾರೆ.   ಭಗವಂತನು ದೇವತೆಗಳಿಗೆ ಅಭಯವನ್ನು ನೀಡುತ್ತಾ ರಾವಣನನ್ನು ಪುತ್ರ-ಪೌತ್ರ-ಅಮಾತ್ಮ-ಮಂತ್ರಿ-ಜ್ಞಾನಿ-ಬಾಂಧವರೊಡನೆ ಸಂಹರಿಸಿ, ಮಾನವ ರೂಪದಲ್ಲಿ ತಾನು ಭೂಲೋಕವನ್ನು ಸಂರಕ್ಷಿಸುವುದಾಗಿ ಆಶ್ವಾಸನೆ ನೀಡುವನು.  ಪುಂಡರೀಕಾಕ್ಷನಾದ ಶ್ರೀಮಹಾವಿಷ್ಣುವು ನಾಲ್ಕು ಅಂಶಗಳಿಂದ ದಶರಥ ಮತ್ತು ಆತನ ನಾಲ್ವರು ಪತ್ನಿಯರಲ್ಲಿ ಭೂಲೋಕದಲ್ಲಿ ಅವತರಿಸುವನು.  ರಾಮಚಂದ್ರನಾಗಿ ಭರತ, ಲಕ್ಷ್ಮಣ ಮತ್ತು ಶತ್ರುಘ್ನನೊಂದಿಗೆ ಅಯೋಧ್ಯೆಯಲ್ಲಿ ಪ್ರಾದುರ್ಭವಿಸುವನು.  ಭಾಗವತ ನವಮಸ್ಕಂಧ ೮ನೆಯ ಅಧ್ಯಾಯದಲ್ಲಿ ಭಗವಂತ ಶ್ರೀರಾಮನಾಗಿ ಅವತರಿಸಿದ್ದನ್ನು "ಅಂಶಾಂಶೇನ ಚತುರ್ಧಾSಗಾತ್ ಪುತ್ರತ್ವಂ ಪ್ರಾರ್ಥಿತಃ ಸುರೈಃ | ರಾಮ ಲಕ್ಷ್ಮಣ ಶತ್ರುಘ್ನ ಭರತಾಶ್ಚೇತಿ ಸಂಜ್ಞಯಾ"  ಎಂದು ವಿವರಿಸಿದ್ದಾರೆ.  ಬ್ರಹ್ಮದೇವರು  ಮಾನವ ರೂಪದಲ್ಲಿ ಅವತರಿಸುವ ಭಗವಂತನ ಭೂಭಾರ ಹರಣ ಕಾರ್ಯದಲ್ಲಿ ನೆರವಾಗಲು, ಸಹಭಾಗಿಗಳಾಗಲು ಸಮಸ್ತ ದೇವತೆಗಳಿಗೂ ಆದೇಶವೀಯುವರು.  ಸಮಸ್ತ ದೇವತೆಗಳೂ ನಾನಾ ವಿಧವಾದ ರೂಪಗಳಲ್ಲಿ ಪ್ರಾಣಿ, ಪಕ್ಷಿ, ಕಪಿಗಳಾಗಿ ಭಗವಂತ ರಾಮನಾಗಿ ನಡೆಸುವ ಲೀಲಾವಿನೋದದಲ್ಲಿ ಪಾಲ್ಗೊಳ್ಳಲು ಆಗಮಿಸುವರು.  ರಾಮಾವತಾರದ ಲೀಲೆ ಅನಾವರಣಗೊಳ್ಳುವುದು, ರಾಮಾಯಣವಾಗುವುದು.

ರಾಮಾಯಣವನ್ನು ಅರಿಯುವ ಪ್ರಯತ್ನವನ್ನು ಮಾಡಿದಾಗ ನಮಗೆ ಮೇಲ್ನೋಟಕ್ಕೆ ರಾಮಾವತಾರವು ರಾವಣನ ವಧೆಗಾಗಿಯೂ, ವಿಜೃಂಭಿಸುತ್ತಿದ್ದ ತಮಸ್ಸನ್ನು ಹತ್ತಿಕ್ಕುವುದಕ್ಕಾಗಿಯೂ ಆಗಿರುವುದೆಂಬ ಅಭಿಪ್ರಾಯವು ಮೂಡುವುದು.   ಆದರೆ ಮಾನವನಾಗಿ ಅವತರಿಸಿದ ಭಗವಂತನು ತನ್ನ ವ್ಯಕ್ತಿತ್ವದ ಮೂಲಕವೂ, ಅನಂತ ಗುಣಗಳ ಮೂಲಕವೂ ಅನೇಕ ದೃಷ್ಟಾಂತಗಳನ್ನು ಸೃಷ್ಟಿಸುವನು.  ಸಕಲ ಗುಣ ಪರಿಪೂರ್ಣನಾಗಿ, ಕಲ್ಯಾಣ ಗುಣಗಳಿಂದ ಶೋಭಿಸುವನು.  ಭಗವಂತನಾದ ಶ್ರೀರಾಮನು "ನಿತ್ಯಪೂರ್ಣ ಸುಖಜ್ಞಪ್ತಿ ಸ್ವರೂಪೋSಸೌ ಯತೋ ವಿಭುಃ" - ರಾಮ ಎಂಬ ಹೆಸರಿನಲ್ಲೇ ನಿತ್ಯಪೂರ್ಣ ಸುಖಜ್ಞಾನ ಸ್ವರೂಪನೆಂಬ ಅರ್ಥ ವಿವರಣೆಯಿದೆ.  ’ರ ಆ ಮ’ ಎಂಬ ಮೂರು ಅಕ್ಷರಗಳ ಸಮ್ಮಿನಲ ರಾಮನೆಂಬ ಶಬ್ದವಾಗುವುದು.  ರ ಎಂದರೆ ಸುಖ, ಮ ಎಂದರೆ ಜ್ಞಾನ ಮತ್ತು ಇವೆರಡರ ನಡುವೆ ಎರಡಕ್ಕೂ ಅನ್ವಯವಾಗುವಂತೆ ಇರುವ ಆ ಎಂದರೆ ಎರಡೂ ಗುಣಗಳೂ ನಿತ್ಯವಾಗಿವೆ, ಪೂರ್ಣವಾಗಿವೆ ಎಂಬರ್ಥವಾಗುತ್ತದೆ.  ಮಾನವನು ವಿಕಾರ ರಹಿತವಾದ ಆತ್ಮನಾಗಿರಬೇಕೆಂಬ ಸತ್ಯವನ್ನು ಪ್ರತಿಪಾದಿಸುವನು.  ಶಾಸ್ತ್ರ, ವೇದಗಳನ್ನು ಆಳವಾಗಿ ಅಭ್ಯಸಿಸಿ ನಾಡಿನ ಸಂಸ್ಕೃತಿಯನ್ನು ಉನ್ನತವಾಗಿಸಬೇಕೆಂಬುದನ್ನು ತಿಳಿಸುವನು.  ಒಬ್ಬ ರಾಜನಾಗಿ ಆಶ್ರಿತರಕ್ಷಕನಾಗಿರಬೇಕೆಂಬುದನ್ನು ತೋರಿಸುವನು.  ಶುದ್ಧಾತ್ಮನಾಗಿ ಗುರು-ಹಿರಿಯರಿಗೆ ವಿಧೇಯನಾಗಿರಬೇಕೆಂಬುದನ್ನು ಸಾಬೀತುಪಡಿಸುವನು.  ತನ್ನ ವನವಾಸಕ್ಕೆ ಕಾರಣಳಾದ ಕೈಕೇಯಿಯನ್ನೂ ಕೂಡ ದ್ವೇಷಿಸದೆ, ಪ್ರೀತಿಸಿ, ಹಿರಿಯರಲ್ಲಿ ಭಕ್ತಿ, ವಿನಯತೆಯನ್ನು ಪ್ರದರ್ಶಿಸುವನು.  ಅನುಜನಾಗಿ ತನ್ನ ಸಹೋದರರನ್ನು ಅಕ್ಕರೆಯಿಂದ ಕಾಣುತ್ತಾ, ಅವರಿಗೆ ತಾನು ದಾರಿತೋರುವನು.  ಧರ್ಮಕಾರ್ಯಗಳಿಗೆ ಅಡ್ಡಿ ಮಾಡುವವರನ್ನು ಸದೆಬಡಿದು ಧರ್ಮರಕ್ಷಕನಾಗಿ ಮೆರೆಯುವನು.   ದಕ್ಷ ರಾಜನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಏಕಪತ್ನೀ ವ್ರತಸ್ಥನಾಗಿ ಶ್ರೀರಾಮಚಂದ್ರನು ನಮ್ಮ ಬದುಕಿನಲ್ಲಿ, ಮನೆ-ಮನಗಳಲ್ಲಿ ಹಾಸುಹೊಕ್ಕಾಗಿ ಸುಂದರ ಭಾವವಾಗಿ ನಿಲ್ಲುವನು.

ಭಾಗವತ ಎರಡನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ರಾಮಾವತಾರವನ್ನು
ಅಸ್ಮತ್ಪ್ರಸಾದಸುಮುಖಃ ಕಲಯಾ ಕಲೇಶ
ಇಕ್ಷ್ವಾಕುವಂಶ ಅವತೀರ್ಯ ಗುರೋರ್ನಿದೇಶೇ |
ತಿಷ್ಠನ್ವನಂ ಸದಯಿತಾನುಜ ಆವಿವೇಶ
ಯಸ್ಮಿನ್ವಿರುಧ್ಯ ದಶಕನ್ಧರ ಆರ್ತಿಮಾರ್ಚ್ಛತ್ || - ಪರಿಪೂರ್ಣನಾದ ಭಗವಂತನು ನಮ್ಮನ್ನು ಅನುಗ್ರಹಿಸುವುದಕ್ಕಾಗಿಯೇ ತನ್ನ ಅಂಶಕಲೆಗಳಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರೊಡನೆ ಶ್ರೀರಾಮಚಂದ್ರನಾಗಿ ಇಕ್ಷ್ವಾಕು ವಂಶದಲ್ಲಿ ಅವತರಿಸುವನು.  ಅವತರಿಸಿ ತಂದೆಯ ಆಜ್ಞೆಯನ್ನು ಪಾಲಿಸುವ ಮಗನಾಗಿ ಪತ್ನೀ ಮತ್ತು ತಮ್ಮನೊಡನೆ ವನವಾಸ ಮಾಡುವನು.  ದೇವತೆಗಳಿಗೆ ಕಂಟಕಪ್ರಾಯನಾಗಿದ್ದು, ರಾಮಚಂದ್ರನ ವನವಾಸದ ಸಮಯದಲ್ಲಿ ವಿರೋಧ ಬೆಳೆಸಿಕೊಂಡಿದ್ದ ದುಷ್ಟದಶಾನನನ್ನು ಸಂಹಾರ ಮಾಡುವನು ಎಂದೂ ನವಮಸ್ಕಂಧದ ೧೦ನೆಯ ಮತ್ತು ೧೧ನೆಯ ಅಧ್ಯಾಯಗಳಲ್ಲಿ ಸಂಪೂರ್ಣ ರಾಮಾಯಣದ ಕಥೆಯನ್ನೂ ವಿವರಿಸಲಾಗಿದೆ.

ಶ್ರೀವಿಷ್ಣು ಸಹಸ್ರನಾಮದ ಫಲಶ್ರುತಿಯಲ್ಲಿ ಈಶ್ವರ ಉವಾಚವೆಂದು "ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ |  ಶ್ರೀ ರಾಮನಾಮ ವರಾನನೇ ಓಂ ನಮಃ ಇತಿ" ಎಂಬ ಶ್ಲೋಕವಿದೆ.  ರುದ್ರದೇವರು ವಿಷ್ಣು ಸಹಸ್ರನಾಮವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡ ಮೊದಲಿಗರು.  ಇದರ ಮಹತ್ವವನ್ನು ಪಾರ್ವತಿದೇವಿಗೆ ತಿಳಿಸುತ್ತಾ ಶ್ರೀರಾಮನಾಮದ ಜಪ ವಿಷ್ಣು ಸಹಸ್ರನಾಮದ ಪಾರಾಯಣಕ್ಕೆ ಸಮನಾದದ್ದು ಎಂದಿದ್ದಾರೆ.  ಹೇಗೆಂದರೆ “ರಾ” ಎನ್ನುವುದು ಅಕ್ಷರಮಾಲೆಯಲ್ಲಿ ೨ನೇ ಅಕ್ಷರ, “ಮ” ೫ನೇ ಅಕ್ಷರವಾಗುತ್ತದೆ.  ಆದ್ದರಿಂದ ೨X೫=೧೦, ೨X೫=೧೦, ೨X೫=೧೦, ಆಮೇಲೆ ೧೦X೧೦X೧೦=೧೦೦೦.  ಇದೊಂದೇ ಶ್ಲೋಕ ಪಠಿಸಿದರೆ ವಿಷ್ಣುವಿನ ೧೦೦೦ ನಾಮ ಜಪಿಸಿದಂತೆ ಆಗುತ್ತದೆ.  "ರಾಮನಾಮ"ದ ಜಪ ಅಷ್ಟು ಮಹತ್ವದ್ದೆಂದು ಸಾರಿದ್ದಾರೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ರಾಮಾವತಾರವನ್ನು
"ರಾಘವ ರಾಘವ ರಾಕ್ಷಸತ್ರೋ ಮಾರುತಿ ವಲ್ಲಭ ಜಾನಕಿಕಾಂತ" - ರಘುಕುಲತಿಲಕನೂ, ರಾಕ್ಷಸ ಶತ್ರುವೂ, ಆಂಜನೇಯನಿಗೆ ಸ್ವಾಮಿಯೂ, ಸೀತಾಪತಿಯೂ ಆದ ಶ್ರೀರಾಮನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಖರತರ ನಿಶಿಚರ ದಹನ ಪರಾಮೃತ ರಘುವರ ಮಾನದಭವ ಮಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ರಾವಣ ಕುಂಭಕರ್ಣಾದಿ ದುಷ್ಟ ದೈತ್ಯರನ್ನು ಸಂಹರಿಸಿದ, ಸರ್ವ ಸ್ವತಂತ್ರನಾದ, ಶ್ರೀ ಹನುಮದಾದಿಗಳಿಗೆ ಜ್ಞಾನದಾಯಕನಾದ, ರಾಮಾವತಾರಿಯೂ ಆದ ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀಶಂಕರಾಚಾರ್ಯರು  ತಮ್ಮ ಶ್ರೀರಾಮ ಸ್ತೋತ್ರಮ್ ನಲ್ಲಿ

ವಿಶುದ್ಧಂ ಪರಂ ಸಚ್ಚಿದಾನಂದರೂಪಂ | ಗುಣಾಧಾರಮಾಧಾರಹೀನಂ ವರೇಣ್ಯಮ್ ||
ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ | ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ || - ಅತ್ಯಂತ ಶುದ್ಧನಾದ, ಪರಮಾತ್ಮ, ಸಚ್ಚಿದಾನಂದ ಸ್ವರೂಪನನ್ನು, ಗುಣಗಳಿಗೆ ಆಧಾರನನ್ನು, ಶ್ರೇಷ್ಠನನ್ನು, ಮಹಾಂತನನ್ನು, ಯಾರಲ್ಲಿ ಬುದ್ಧಿ-ಗುಣ-ಸುಖಗಳು ಬೆಳಗಿ ಲೀನವಾಗುವವೋ, ಯಾರು ತನಗೆ ತಾನೇ ಆಶ್ರಯನೋ ಅಂತಹ ಶ್ರೀರಾಮನಿಗೆ ಶರಣು ಬಂದಿರುವೆನು ಎಂದೂ
ನಮೋ ವಿಶ್ವಕರ್ತ್ರೇ ನಮೋ ವಿಶ್ವಹರ್ತ್ರೇ | ನಮೋ ವಿಶ್ವಭೋಕ್ರ್ತೇ ನಮೋ ವಿಶ್ವಮಾತ್ರೇ ||
ನಮೋ ವಿಶ್ವನೇತ್ರೇ ನಮೋ ವಿಶ್ವಜೇತ್ರೇ | ನಮೋ ವಿಶ್ವಪಿತ್ರೇ ನಮೋ ವಿಶ್ವಮಾತ್ರೇ || - ವಿಶ್ವದ ನಿರ್ಮಾಪಕನೇ ನಿನಗೆ ನಮಸ್ಕಾರವು.  ವಿಶ್ವಸಂಹಾರಕನೇ ನಮಸ್ಕಾರವು.  ವಿಶ್ವದ ಭೋಗ ಮಾಡುವವನೇ ನಮಸ್ಕಾರವು.  ವಿಶ್ವಮಾತ್ರನೇ, ವಿಶ್ವದ ಮುಂದಾಳುವೇ, ವಿಶ್ವ ವಿಜಯಿಯೇ, ವಿಶ್ವದ ತಂದೆ-ತಾಯಿಯೇ ನಿನಗೆ ನಮಸ್ಕಾರವು ಎಂದೂ
ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ | ನರಾ ಯೇ ಸ್ಮರಂತ್ಯನ್ವಹಂ ರಾಮಚಂದ್ರ ||
ಭವಂತಂ ಭವಾಂತಂ ಭರಂತಂ ಭಜಂತೋ | ಲಭಂತೇ ಕೃತಾಂತಂ ನ ಪಶ್ಯಂತ್ಸ ತೋSನ್ತೇ || - ಶ್ರೀರಾಮಚಂದ್ರ ನಿನ್ನ ಚರಿತ್ರೆಯು ವಿಚಿತ್ರವೂ, ಪವಿತ್ರವೂ ಆಗಿದೆ.  ಯಾರು ಈ ಚರಿತ್ರೆಯನ್ನು ಯಾವಾಗಲೂ ಸ್ಮರಿಸುವರೋ ಅವರು ಕಾಲತ್ರಯಗಳನ್ನು ನಿವಾರಿಸಿ , ತಮ್ಮ ಭ್ರಮೆಗಳನ್ನು ಹೋಗಲಾಡಿಸಿ ನಿನ್ನನ್ನು ಭಜಿಸುತ್ತಾ ಕೃತಕೃತ್ಯರಾಗುವರು.  ಅವರು ನಿನ್ನನ್ನೇ ಹೊಂದುವರು, ಅವರಿಗೆ ಅಂತ್ಯಕಾಲದಲ್ಲಿ ಯಮನ ದರ್ಶನವಿರುವುದಿಲ್ಲ ಎಂದು  ಸ್ತುತಿಸಿದ್ದಾರೆ.  ಹಾಗೇ ತಮ್ಮ
"ಶ್ರೀರಾಮ ಮಾನಸ ಸ್ತೋತ್ರಮ್" ನಲ್ಲಿ
ಜಯ ಜಯತಿ ವಿಷ್ಣೂ ರಾಮನಾಮಾಭಿಧೇಯೋ | ಜಯತಿ ಜಯತಿ ಪೂರ್ಣಃ ಕೋಟಿ ಕಂದರ್ಪಭಾಸಃ || - ಶ್ರೀರಾಮನೆಂಬ ಹೆಸರಿನ ಶ್ರೀವಿಷ್ಣುವಿಗೆ ಜಯವಾಗಲಿ, ಕೋಟಿ ಮದನರ ತೇಜವುಳ್ಳವನೇ, ಪೂರ್ಣನೇ ನಿನಗೆ ಜಯವಾಗಲಿ ಎಂದೂ
ಜಯ ಜಯ ಕರುಣಾಬ್ಧೇSನಂತ ಭಾನುಪ್ರಕಾಶ | ಜಯ ಜಯ ಜಗದೀಶಾವ್ಯಕ್ತ ಮಾಯಾಧಿದೇವ ||
ಜಯ ಜಯ ಧರಣೀಜಾವಲ್ಲಭಾನಂತವೀರ್ಯ | ಜಯ ಜಯ ರಘುನಾಥಾನಾಥಾನಾಥ ಪ್ರಸೀದ || - ಕರುಣಾಸಾಗರ, ಅನಂತಸೂರ್ಯ ಪ್ರಕಾಶ ನಿನಗೆ ಜಯವಾಗಲಿ, ಜಗದೀಶ, ಅವ್ಯಕ್ತ, ಮಾಯಾಧಿಪನೇ ನಿನಗೆ ಜಯವಾಗಲಿ, ಭೂಮಾತೆಯ ಕನ್ಯೆ ಸೀತಾದೇವಿಯ ಪತಿಯೇ, ಅತುಲ ಪರಾಕ್ರಮಿಯೇ ನಿನಗೆ ಜಯವಾಗಲಿ, ಅನಾಥನಾಥ, ರಘುನಾಥ ಪ್ರಸನ್ನನಾಗು, ನಿನಗೆ ಜಯವಾಗಲಿ ಎಂದು ಸ್ತುತಿಸಿ ಪ್ರಾರ್ಥಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಶ್ರೀರಾಮಾವತಾರವನ್ನು ಒಟ್ಟು ಹನ್ನೆರಡು ಚರಣಗಳಲ್ಲಿ ಸ್ತುತಿಸಿ, ವರ್ಣಿಸಿದ್ದಾರೆ :

ಶ್ರೀರಾಮ ಲಕ್ಷ್ಮಣ ಶುಕಾರಾಮ ಭೂರವತು ಗೌರಾಮಲಾಮಿತಮಹೋ
ಹಾ ರಾಮರಸ್ತುತಯಶೋ ರಾಮಕಾಂತಿ ಸುತನೋ ರಾಮಲಬ್ಧಕಲಹ |
ಸ್ವಾರಾಮವರ್ಯರಿಪು ವೀರಾಮಯರ್ಧಿಕರ ಚೀರಾಮಲಾವೃತಕಟೇ
ಸ್ವಾರಾಮದರ್ಶನಜ ಮಾರಾಮಯಾಗತ ಸುಘೋರಾ ಮನೋರಥ ಹರ || - ಲಕ್ಷ್ಮಣನಿಗೆ ಆಶ್ರಯದಾತನಾದ, ಮನೋಹರವಾದ ಮುಕ್ತಾಹಾರಾದಿ ಆಭರಣಗಳುಳ್ಳ, ದೇವತೆಗಳಿಂದ ವರ್ಣಿಸಲ್ಪಡುವ, ಮಹಾಕೀರ್ತಿಯುಳ್ಳ, ಅತಿಮನೋಹರ ಕಾಂತಿಯುಕ್ತ ಶರೀರವುಳ್ಳ, ಪರಶುರಾಮನೊಂದಿಗೆ ಕಲಹದ ನಾಟಕವಾಡಿದ, ಸ್ವರ್ಗದ ಇಂದ್ರಾದಿ ದೇವತೆಗಳನ್ನು ಸೋಲಿಸಿದ ದೈತ್ಯರಿಗೆ ಹೆದರಿಕೆಯನ್ನುಂಟು ಮಾಡಿದ, ವಲ್ಕಲಧಾರಿಯಾದ, ಪಂಚವಟಿಯ ಉದ್ಯಾನವನ್ನು ಕಂಡು ಶೀರಾಮದರ್ಶನದಿಂದ ಕಾಮಬಾಣ ಪೀಡಿತೆಯಾದ ಶೂರ್ಪಣಖಿಯ ಇಷ್ಟಾರ್ಥ ಭಂಗ ಮಾಡಿದ ಶ್ರೀರಾಮಚಂದ್ರನೇ ನನ್ನನ್ನು ಸದಾಕಾಲ ರಕ್ಷಿಸು ಎಂದೂ
ಧೀಮಾನಮೇಯ ತನು ಧಾಮಾSSರ್ತ ಮಂಗಲದ ನಾಮಾ ರಮಾ ಕಮಲ ಭೂ
ಕಾಮಾರಿ ಪನ್ನಗಪ ಕಾಮಾಹಿವೈರಿ ಗುರು ಸೋಮಾದಿವಂದ್ಯ ಮಹಿಮಾ |
ಸ್ಥೇಮಾದಿನಾSಪಗತ ಸೀಮಾSವತಾತ್ಸಖಲ ಸಾಮಾಜ ರಾನಣರಿಪೂ
ರಾಮಾಭಿಧೋ ಹರಿರಭೌಮಾಕೃತಿಃ ಪ್ರತನ ಸಾಮಾದಿವೇದವಿಷಯಃ || - ಸರ್ವತತ್ತ್ವ ದೇವತೆಗಳಿಗೂ ಪ್ರೇರಕನಾದ, ಬ್ರಹ್ಮಾದಿ ದೇವತೆಗಳಿಂದಲೂ ಸಮಗ್ರವಾಗಿ ತಿಳಿಯಲು ಅಸಾಧ್ಯವಾದ ಮಹಿಮಾತಿಶಯವುಳ್ಳ, ಭಕ್ತಜನರ ದುಃಖಗಳನ್ನು ಪರಿಹರಿಸುವ ಮಂಗಲಕರವಾದ ನಾಮಗಳುಳ್ಳ, ಲಕ್ಷ್ಮೀ ಬ್ರಹ್ಮಾದಿ ದೇವತೆಗಳಿಂದ ವಂದಿತನಾದ, ಸಮಸ್ತ ಚರಾಚರ ಪ್ರಪಂಚದ ಸೃಷ್ಟಿ ಸ್ಥಿತಿ ಪ್ರಲಯಾದಿ ಕರ್ತನಾದ, ಸರ್ವ ಸೈನ್ಯ ಸಹಿತನಾದ ರಾವಣನನ್ನು ಸಂಹರಿಸಿದ, ಅಪ್ರಾಕೃತವಾದ ಶರೀರವುಳ್ಳ, ವೇದ ಪ್ರತಿಪಾದ್ಯನಾದ, ಶ್ರೀರಾಮನೆಂಬ ಹೆಸರಿನಿಂದ ಭೂಮಿಯಲ್ಲಿ ಅವತರಿಸಿದ ಶ್ರೀಹರಿಯು ನಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ರಾಮಾವತಾರವನ್ನು
ವಿತರಸಿ ದಿಕ್ಷು ರಣೇ ದಿಕ್ಪತಿಕಮನೀಯಂ
ದಶಮುಖ ಮೌಲಿಬಲಿಂ ರಮಣೀಯಂ
ಕೇಶವ ಧೃತ ರಾಮಶರೀರ ಜಯ ಜಗದೀಶ ಹರೇ || -  ದಿಕ್ಪಾಲಕರಿಗೆ ರಣದೀಕ್ಷೆಯನ್ನು ವಿತರಿಸುವ ರಮಣೀಯ ದೃಶ್ಯ, ದಶಕಂಠನ ಮುಕುಟವನ್ನು ಬಲಿಯಾಗಿಸುವ ರಮಣೀಯ ದೃಶ್ಯ, ಕೇಶವ ಧೃತ ರಾಮ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ ರಾಮಾವತಾರವನ್ನು ಸಮನ್ವಯಿಸಿದಾಗ ಶ್ರೀರಾಮನೆಂದರೆ ಮರ್ಯಾದಾ ಪುರುಷೋತ್ತಮನೆಂದೂ, ಅತ್ಯಂತ ಸಂಭಾವಿತನೆಂದೂ ಆರಾಧಿಸುತ್ತೇವೆ. ಸಮಯ ಬಂದಾಗ ದುಷ್ಟ ಶಕ್ತಿಗಳ ನಿವಾರಣೆ ಮಾಡಿದ ಭಗವಂತನೆಂದು ಕೊಂಡಾಗ, ನಮಗೆ ರಾಮ ನಮ್ಮಲ್ಲಿರುವ ದುರ್ವ್ಯಸನಗಳನ್ನು ದಮನ ಮಾಡಲು, ನಮ್ಮ ಮನಸ್ಸನ್ನು ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಗುರುವಾಗಿ ಹತ್ತಿರವಾಗುತ್ತಾನೆ. ಸಮಚಿತ್ತದಿಂದ ಬದುಕು ನಡೆಸಲು ಆದರ್ಶ ವ್ಯಕ್ತಿಯಾಗಿ ಕಾಣಿಸುತ್ತಾನೆ. ಅನುಕರಿಸಲೇ ಬೇಕಾದ ಸೌಮ್ಯ ಸ್ವಭಾವ, ಗಂಭೀರಾಕೃತಿ, ಇಂದ್ರಿಯಗಳ ನಿಗ್ರಹ ಶಕ್ತಿ, ರೂಪ, ಲಾವಣ್ಯ ಎಲ್ಲವೂ ರಾಮನನ್ನು ನಮ್ಮ ಮನದಲ್ಲಿ ನೆಲೆಗೊಳಿಸಲು ಸುಲಭ ಸಾಧ್ಯವಾಗುವಂತೆ ಮಾಡಿದೆ. ಪತ್ನಿಯೆಡೆಗಿನ ಅನುಪಮ ಪ್ರೇಮ, ಸೋದರ ವಾತ್ಸಲ್ಯ, ಹೀಗೆ ಪಟ್ಟಿ ಮಾಡುತ್ತಾ ಹೋದಾಗ ರಾಮ ಭಗವಂತ ಎನ್ನುವುದಕ್ಕಿಂತ ನಮ್ಮಲ್ಲೇ, ನಮ್ಮೊಳಗೇ ನೆಲೆಸಿರುವ ನಮ್ಮದೇ ಆತ್ಮಸಖ ಎನ್ನುವ ಅತಿ ನಿಕಟ ಸಂಬಂಧದ ಭಾವ ಬರುತ್ತದೆ.  ಪ್ರತಿಯೊಬ್ಬ ಮನುಷ್ಯನೂ ತನಗೊಂದು ಕಷ್ಟ ಬಂದಾಗಲಾಗಲೀ, ದುಃಖ ಬಂದಾಗಲಾಗಲೀ ಅಥವಾ ಅತಿಯಾದ ಸಂತೋಷವೇ ಆದಾಗಲೂ ಕೂಡ ಮೊಟ್ಟ ಮೊದಲು ಉದ್ಗರಿಸುವುದು "ರಾಮಾ" ಎಂದೇ.  ರಾಮಚಂದ್ರನು ನಮ್ಮ ಉಸಿರಿನಲ್ಲಿಯೇ ನೆಲೆಸಿದ್ದಾನೆಂಬುದನ್ನು ಗಮನಿಸಿಕೊಳ್ಳಬೇಕು.


ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಕೈಗಳಲ್ಲಿ ಶ್ರೀರಾಮ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ರಾಮಚಂದ್ರನ ರೂಪದಿಂದವತರಿಸಿದಾಗ ರಮಾದೇವಿಯು ’ಸೀತಾದೇವಿ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ಶತಧೃತಿಯ ನುಡಿಗೆ ದಶರಥನ ಗರ್ಬದಿ ಬಂದಿ
ದಿತಿಜರನು ಒರಸಿ ಸುಜನ-ರ | ಸುಜನರನು ಪೊರೆದ ರಘು-
ಪತಿಯೆ ನೀನೊಲಿದು ದಯವಾಗೋ || -  ಬ್ರಹ್ಮದೇವನ ವಿಜ್ಞಾಪನೆಗೆ ದಶರಥರಾಜನ ಹೊಟ್ಟೆಯಲ್ಲಿ ಅವತರಿಸಿ, ದೈತ್ಯರನ್ನು ನಾಶಮಾಡಿ, ಸಜ್ಜನರನ್ನು ರಕ್ಷಿಸಿದ, ಹೇ ರಘುಕುಲದೊಡೆಯ ರಾಮಚಂದ್ರ ನೀನು ಪ್ರಸನ್ನನಾಗಿ, ದಯವಾಗೋ ಎಂದು ಪ್ರಾರ್ಥಿಸಿದ್ದಾರೆ.


ರಾಮಾಯಣದಲ್ಲಿ ಉಲ್ಲೇಖವಿರುವಂತೆ
ಸರ್ವದೇವಮಯೋ ರಾಮಃ ಸ್ಮೃತಶ್ಚಾರ್ತಿ ಪ್ರಣಾಶನಃ | - ಶ್ರೀರಾಮನು ಸರ್ವದೇವಮಯನು.  ಶ್ರೀರಾಮನಲ್ಲಿಯೇ ಎಲ್ಲ ದೇವತೆಗಳೂ ಇರುವರು. ಸ್ಮರಿಸಿಕೊಂಡೊಡನೆಯೇ ಭಕ್ತರ ಪೀಡೆಗಳನ್ನು ವಿನಾಶಗೊಳಿಸುತ್ತಾನೆ.
ರಾಮನಾಮೈವ ನಾಮೈವ ನಾಮೈವ ಮಮ ಜೀವನಮ್ |
ಕಲೌ ನಾಸ್ತ್ಯೇವ ನಾಸ್ತ್ಯೇವ ನಾಸ್ತ್ಯೇವ ಗತಿರನ್ಮಥಾ || - ಶ್ರೀರಾಮನಾಮವೇ - ಜಯರಾಮನಾಮವೇ - ಜಯ ಜಯ ರಾಮನಾಮವೇ ನನ್ನ ಜೀವನವು.  ಕಲಿಯುಗದಲ್ಲಿ ಪರಮಗತಿಯನ್ನು ಹೊಂದಲು ಬೇರೆ ಯಾವ ಉಪಾಯವೂ ಇಲ್ಲ, ಇಲ್ಲ, ಇಲ್ಲ, ಇಲ್ಲವೇ ಇಲ್ಲ. 


ಚಿತ್ರಕೃಪೆ : ಅಂತರ್ಜಾಲ

https://en.wikipedia.org/wiki/Kodandarama_Temple
https://en.wikipedia.org/wiki/Ramateertham
http://www.karnataka.com/hampi/kodanda-rama-temple/

Sunday, June 28, 2015

ಕರುಣಾ ಸಂಧಿ - ೩೦ ನೇ ಪದ್ಯ ( ಪರಶುರಾಮಾವತಾರ )

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||
ರೇಣುಕಾತ್ಮಜ : ಪದ್ಮ ಪುರಾಣದ  "ಪರಶುರಾಮ ಚರಿತ್ರೆ"ಯಲ್ಲಿ ಜಮದಗ್ನಿ ಋಷಿಯ ಮಗನಾಗಿ ಅವತರಿಸಿದ ’ರಾಮ’ ನಾಮಕನು ’ಪರಶುರಾಮ’ನಾದ ಕಥೆಯ ವಿವರಣೆಯಿದೆ.   ಭೃಗು ಋಷಿಯ ಮಗನಾದ ಜಮದಗ್ನಿಯು ದೇವೇಂದ್ರನನ್ನು ಕುರಿತು ಉಗ್ರವಾದ ತಪಸ್ಸು ಮಾಡಿ, ಕಾಮಧೇನುವೆಂಬ ಹೆಸರುಳ್ಳ ’ಸುರಭಿ’ ನಾಮಕ ಹಸುವನ್ನು ವರವಾಗಿ ಪಡೆಯುವನು.  ಸುರಭಿಯ ಕೃಪೆಯಿಂದ ಜಮದಗ್ನಿ ಮಹರ್ಷಿಯು ಕುಬೇರನಂತೆ ಐಶ್ವರ್ಯವನ್ನು ಹೊಂದಿ ಭೂಲೋಕದ ದೇವೇಂದ್ರನಂತೆ ವೈಭವ ಜೀವನವನ್ನು ನಡೆಸುವನು.  ರೇಣುಕನ ಮಗಳಾದ ರೇಣುಕಾಳನ್ನು ವಿವಾಹವಾಗಿ, ಪುತ್ರಕಾಮೇಷ್ಠಿ ಯಾಗವನ್ನು ಮಾಡಿ, ಮಹಾ ಪ್ರತಾಪಶಾಲಿಯಾದ ಪುತ್ರರತ್ನವನ್ನು ಪಡೆಯುವನು.  ಸರ್ವಗುಣ ಹಾಗೂ ಲಕ್ಷಣಗಳ ಸಂಪನ್ನನಾದ ಶ್ರೀಹರಿಯೇ ತನ್ನ ಮೊಮ್ಮಗನಾಗಿ ಜನಿಸಿರುವನೆಂದು ಭೃಗು ಮಹರ್ಷಿಗಳು ಹೆಮ್ಮೆಯಿಂದಲೂ, ಹರ್ಷದಿಂದಲೂ ಸಂತುಷ್ಟರಾಗುವರು.  ತಾವೇ ಜಮದಗ್ನಿ ಕುಮಾರನಿಗೆ ’ರಾಮ’ನೆಂದು ನಾಮಕರಣ ಮಾಡುವರು.  ಕುಮಾರ ರಾಮನು ಜಮದಗ್ನಿಯ ಮಗನಾದುದರಿಂದ ಜಾಮದಗ್ನ್ಯ ಎಂದೂ, ರೇಣುಕೆಯ ಮಗನಾದುದರಿಂದ ರೇಣುಕಾತ್ಮಜ ಎಂದೂ, ಭೃಗುಮುನಿಯ ಮೊಮ್ಮಗನಾದುದರಿಂದ ಭಾರ್ಗವ ಎಂದೂ ಕರೆಯಲ್ಪಡುವನು.  ಉಪನಯನ ಸಂಸ್ಕಾರ ಪಡೆದ ರಾಮನು ಸಕಲ ಶಾಸ್ತ್ರ ಮತ್ತು ಶಸ್ತ್ರ ಪಾರಂಗತನಾಗುವನು.  ತಪಸ್ಸು ಮಾಡಲು ತೆರಳುವನು.  ಉಗ್ರ ತಪಸ್ಸಿನಿಂದ ಕುಮಾರ ರಾಮನು ಭಗವಂತನಿಂದ ವಿಶೇಷ ಶಕ್ತಿಯನ್ನೂ, ಘೋರವಾದ ಕೊಡಲಿಯನ್ನೂ, ವೈಷ್ಣವ ಧನುಸ್ಸನ್ನೂ ಮತ್ತು ಅನೇಕ ದಿವ್ಯಾಸ್ತ್ರಗಳನ್ನೂ ಪಡೆಯುವನು.  ಭಗವಂತನಿಂದ ರಾಮನಿಗೆ ಮದೋನ್ಮತ್ತರಾದ ರಾಜರನ್ನೆಲ್ಲಾ ಕೊಂದು ಭೂಭಾರ ಹರಣ ಮಾಡಿ  ಭೂಮಂಡಲವನ್ನೆಲ್ಲಾ ಸ್ವಾಧೀನ ಪಡಿಸಿಕೊಂಡು ಧರ್ಮದಿಂದ ಪೃಥ್ವೀ ಪಾಲನೆ ಮಾಡಬೇಕೆಂಬ ಆದೇಶವನ್ನೂ ಪಡೆಯುವನು. 

ಕಾಮಧೇನುವೆಂಬ ಇಂದ್ರಲೋಕದ ಹಸುವಿಗಾಗಿ ನಡೆದ ಹಗರಣದಲ್ಲಿ ತನ್ನ ತಂದೆಗೆ ಹಾನಿಯುಂಟುಮಾಡಿದ್ದ ಕಾರ್ತವೀರ್ಯಾರ್ಜುನ ರಾಜನನ್ನು ಕುಮಾರ ರಾಮನು ತನ್ನ ಕೊಡಲಿಯಿಂದ ಕೊಲ್ಲುವನು.  ಪಟ್ಟಾಭಿಷಿಕ್ತ ರಾಜನನ್ನು ಕೊಂದ ಪಾಪವನ್ನು ಪರಿಹಾರ ಮಾಡಿಕೊಳ್ಳಲು ಕುಮಾರ ರಾಮನು ತಂದೆ ಜಮದಗ್ನಿ ಋಷಿಗಳ ಆದೇಶದಂತೆ ಒಂದು ವರ್ಷಕಾಲ ತೀರ್ಥಯಾತ್ರೆ ಮಾಡಿ ಬರುವನು.  ಒಮ್ಮೆ ತಾಯಿ ರೇಣುಕೆ ಗಂಗಾನದಿಗೆ ನೀರು ತರಲು ಹೋಗಿ ಅಲ್ಲಿ ಚಿತ್ರರಥನೆಂಬ ಗಂಧರ್ವ ಅಪ್ಸರೆಯೊಡನೆ ಜಲಕ್ರೀಡೆಯಾಡುವುದನ್ನು ಕಂಡು ಕ್ಷಣಕಾಲ ಮೈಮರೆಯುವಳು.  ಇದು ಮಾನಸಿಕ ವ್ಯಭಿಚಾರವೆಂದು ಜಮದಗ್ನಿ ಋಷಿಗಳು ತಾಯಿಯನ್ನು ಕೊಲ್ಲುವಂತೆ ತಮ್ಮ ಮಕ್ಕಳಿಗೆ ಆದೇಶಿಸುವರು.  ಆದರೆ ಅವರುಗಳು ಒಪ್ಪುವುದಿಲ್ಲ.  ಆದರೆ ಪರಶುರಾಮ ಮಾತ್ರ ತನ್ನ ತಂದೆಯ ತಪಃಶಕ್ತಿಯನ್ನು ಅರಿತಿದ್ದನಾದ್ದರಿಂದ ಅವರ ಆಜ್ಞೆಯನ್ನು ಶಿರಸಾವಹಿಸಿ, ತಾಯಿಯ ತಲೆಯನ್ನೂ, ತಂದೆಯ ಆಜ್ಞೆಯನ್ನು ಧಿಕ್ಕರಿಸಿದ ಸೋದರರ ತಲೆಗಳನ್ನೂ ಕಡಿಯುವನು.  ಸಂತುಷ್ಟನಾದ ತಂದೆ ಬೇಕಾದ ವರವನ್ನು ಕೇಳು ಎಂದಾಗ, ತನ್ನಿಂದ ಹತರಾದವರೆಲ್ಲರೂ ಬದುಕಲಿ ಮತ್ತು ತಾನು ಅವರನ್ನು ಕೊಂದ ವಿಷಯ ಅವರಿಗೆ ಮರೆತುಹೋಗಲಿ ಎಂದು ಕೇಳುವನು.  ಪರಶುರಾಮನ ತಾಯಿ ರೇಣುಕಾದೇವಿ ಹಾಗೂ ಅವಳ ಮಕ್ಕಳು ನಿದ್ರೆಯಿಂದ ಎದ್ದವರಂತೆ ಸುಖವಾಗಿ ಎಚ್ಚೆತ್ತುಕೊಳ್ಳುವರು.  ಪರಶುರಾಮನಿಂದ ಹತನಾದ ಕಾರ್ತವೀರ್ಯಾರ್ಜುನನ ಮಕ್ಕಳು ಒಮ್ಮೆ ಆಶ್ರಮದಲ್ಲಿ ಪರಶುರಾಮನಿಲ್ಲದಿದ್ದಾಗ ಬಂದು ಜಮದಗ್ನಿ ಮುನಿಯ ತಲೆಯನ್ನು  ಕತ್ತರಿಸಿ ಒಯ್ಯುವರು.  ತಾಯಿಯ ಕೂಗಿಗೆ ಧಾವಿಸಿ ಬಂದ ರಾಮನು ದುಷ್ಟ ಕ್ಷತ್ರಿಯರ ಕುಲವನ್ನೇ ನಾಶ ಮಾಡುವ ಪಣತೊಡುವನು.   ಸಮಸ್ತ ಕ್ಷತ್ರಿಯರನ್ನೆಲ್ಲಾ ವಧಿಸಲು ೨೧ ಬಾರಿ ಭೂ ಪ್ರದಕ್ಷಿಣೆ ಮಾಡುವನು.  ಕೊನೆಗೆ  ಅಶ್ವಮೇಧ ಯಜ್ಞವನ್ನು ಮಾಡಿ ಬ್ರಾಹ್ಮಣರಿಗೆ ಸಪ್ತದೀಪವತಿಯಾದ ಮೇದಿನೀ ಮಂಡಲವನ್ನೆಲ್ಲಾ ದಾನರೂಪವಾಗಿ ನೀಡಿ, ತಾನು ತಪಸ್ಸು ಮಾಡಲು ನರನಾರಾಯಣರ ಆಶ್ರಮಕ್ಕೆ ತೆರಳುವನು.

ಮಹಾಭಾರತ ಶಾಂತಿಪರ್ವದಲ್ಲಿ ಬರುವ ’ಪರಾಶರ ಗೀತಾ’ ದಲ್ಲಿ ತಂದೆಯ ಸ್ಥಾನದ ಮಹತ್ವದ ವಿವರಣೆ ಸಿಗುತ್ತದೆ.  "ಪಿತಾ ಸಖಯೋ ಗುರವಃ" - ಪಿತನಲ್ಲಿ ಅನನ್ಯ ಭಕ್ತಿಯುಳ್ಳ  ಪುತ್ರನಿಗೆ ತಂದೆಯು ಗುರುವೂ, ಸಖನೂ ಆಗಿ ಜನ್ಮ ಜನ್ಮಾಂತರಕ್ಕೆ ಬರುವ ವಿದ್ಯೆಯನ್ನು ಕೊಡುತ್ತಾನೆ.  ತಾಯಿಯು ಇಹ ಜನ್ಮದ ಶರೀರವನ್ನು ಹೊತ್ತು, ಹೆತ್ತು ಪೋಷಿಸುವವಳು.  ಆದರೆ ತಂದೆ ಜನ್ಮಕ್ಕೆ ಕಾರಣನಾಗುವುದಲ್ಲದೆ, ಜನ್ಮ ಜನ್ಮಾಂತರಕ್ಕೂ ಬೆಳಕಾಗಬಲ್ಲ ವಿದ್ಯೆ ನೀಡುವವನಾಗುತ್ತಾನೆ.  ಆದ್ದರಿಂದ ತಂದೆಯೇ ಮಹತ್ವದ ಸ್ಥಾನವನ್ನು ಹೊಂದಿರುವನು.  ತಂದೆಯ ವಾಕ್ಯ ಅನುಶಾಸನವಿದ್ದಂತೆ, ಅದನ್ನು ಪಾಲಿಸಲೇ ಬೇಕೆಂಬುದನ್ನು
ಪಿತಾ ಪರಂ ದೈವತಂ ಮಾನವಾನಾಂ | ಮಾತುರ್ವಿಶಿಷ್ಟಂ ಪಿತರಂ ವದನ್ತಿ |
ಜ್ಞಾನಸ್ಯ ಲಾಭಂ ಪರಮಂ ವದನ್ತಿ | ಜಿತೇನ್ದ್ರಿಯಾರ್ಥಾಃ ಪರಮಾಪ್ನು ವನ್ತಿ ||  - ತಂದೆಯು ಶ್ರೇಷ್ಠನಾದ ದೇವತೆಯಾಗಿರುವನು.  ಜನ್ಮ ನೀಡುವುದಲ್ಲದೆ, ಉಪನಯನ - ಬ್ರಹ್ಮೋಪದೇಶ ಮಾಡಿ, ವಿದ್ಯೆ ಕಲಿಸುವುದರಿಂದ ತಂದೆಯ ಮಾತಿಗೇ ಹೆಚ್ಚು ಮಹತ್ವವಿರುವುದು.  ಪರಶುರಾಮನ ತನ್ನ ತಂದೆಯು ತಾಯಿ ರೇಣುಕೆಗೆ ಶಿಕ್ಷೆ ವಿಧಿಸುವುದಕ್ಕಾಗಿ ತಲೆಯನ್ನು ಕಡಿಯ ಬೇಕೆಂದು ಆಜ್ಞಾಪಿಸಿದಾಗ, ಪರಶುರಾಮನು ಒಂದು ಕ್ಷಣವೂ ಆಲೋಚಿಸದೆ ಆ ಕಾರ್ಯ ಮಾಡುವನು.  ಗುರುವಿನ ಆಜ್ಞೆಯನ್ನು ಶಿರಸಾವಹಿಸುವನು.  ತಂದೆ ಜಮದಗ್ನಿಯು ತನ್ನ ಕಾರ್ಯದಿಂದ ಸಂತುಷ್ಟನಾಗಿ ಬೇಕಾದ ವರವನ್ನು ಕೇಳಿಕೋ ಎಂದಾಗ, ತಾನು ತನ್ನ ತಾಯಿಯನ್ನೂ, ಸೋದರರನ್ನೂ ಮತ್ತೆ ಬದುಕಿಸಿಕೊಳ್ಳಬಹುದೆಂಬುದು ಪರಶುರಾಮನಿಗೆ ತಿಳಿದಿರುವುದು.  ಆದ್ದರಿಂದಲೇ ತಂದೆಯ ಮಾತಿನಂತೆ ನಡೆದು, ಸುಪುತ್ರನೆನಿಸಿಕೊಂಡು, ನಂತರ ತಂದೆಯಿಂದ ವರ ಪಡೆಯುವುದರ ಮೂಲಕ ಪರಿವಾರವನ್ನು ಬದುಕಿಸಿಕೊಳ್ಳುವನು.
ಶ್ರೀಮದ್ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ಪರಶುರಾಮಾವತಾರವನ್ನು
ಕ್ಷತ್ರಂ ಕ್ಷಯಾಯ ವಿಧಿನೋಪಭೃತಂ ಮಹಾತ್ಮಾ
ಬ್ರಹ್ಮಧ್ರುಗುಜ್ಝಿತಪಥಂ ನರಕಾರ್ತಿಲಿಪ್ಸು |
ಉದ್ಧನ್ತ್ಯಸಾವವನಿಕಣ್ವಕಮುಗ್ರವೀರ್ಯ-
ಸ್ತ್ರಿಃಸಪ್ತಕೃತ್ವ ಉರುಧಾರಪರಶ್ವಧೇನ || - ಬ್ರಹ್ಮದ್ರೋಹಿಗಳಾಗಿ, ಆರ್ಯ ಮರ್ಯಾದೆಯನ್ನು ಉಲ್ಲಂಘಿಸುವ, ನರಕಕ್ಕೆ ಯೋಗ್ಯರಾದ ದುಷ್ಟ ಕ್ಷತ್ರಿಯರು ಹೆಚ್ಚಿಕೊಂಡು ಬಿಟ್ಟಾಗ ಈ ಪರಮಪುರುಷನು ಮಹಾಪರಾಕ್ರಮಿಯಾದ ಪರಶುರಾಮನ ರೂಪದಲ್ಲಿ ಅವತಾರ ಮಾಡಿ ತೀಕ್ಷ್ಣವಾದ ಅಲುಗುಳ್ಳ ತನ್ನ ಗಂಡುಗೊಡಲಿಯಿಂದ ಇಪ್ಪತ್ತೊಂದು ಬಾರಿ ಅವರನ್ನು ಸಂಹರಿಸಿದನು.

ಅಷ್ಟಮಸ್ಕಂಧದಲ್ಲಿ ೧೩ನೆಯ ಅಧ್ಯಾಯ ಹಾಗೂ ೧೪ನೆಯ ಅಧ್ಯಾಯಗಳಲ್ಲಿ ಪರಶುರಾಮ ಕಾರ್ತವೀರ್ಯಾರ್ಜುನನನ್ನು ಕೊಲ್ಲುವ ಪ್ರಸಂಗ, ತಾಯಿ ರೇಣುಕೆಯ ತಲೆ ಕತ್ತರಿಸುವ ಪ್ರಸಂಗಗಳ ವಿಸ್ತಾರವಾದ ವಿವರಣೆಯಿದೆ.

ಶ್ರೀವಿಷ್ಣು ಸಹಸ್ರನಾಮದಲ್ಲಿ "ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ" - ಶತ್ರುಗಳನ್ನು ತರಿವ ಕೊಡಲಿ ಹೊತ್ತವನು ಖಂಡಪರಶುಃ.  ಪರಶುರಾಮನಾಗಿ, ವಿಶೇಷ ಕೊಡಲಿಯಿಂದ ದುಷ್ಟ ಕ್ಷತ್ರಿಯರ ದಮನ ಮಾಡಿದ ಭಗವಂತ ಖಂಡಪರಶುಃ ಎಂಬ ವಿವರಣೆಯಿದೆ.  ಶತ್ರುಗಳನ್ನು ಖಂಡಿಸುವ ಕೊಡಲಿ ಉಳ್ಳವನು ಎಂಬ ಅರ್ಥವೂ ಆಗುತ್ತದೆ. ಯಾರಿಂದಲೂ ಖಂಡಿಸಲಾಗದ ಪರಶು ಉಳ್ಳವನು ಎಂದೂ ಮೋಕ್ಷ ಯೋಗ್ಯರ ಅವಿದ್ಯೆಯನ್ನು ಖಂಡಿಸಿ ಉದ್ಧರಿಸುವವನು ಎಂಬ ಅರ್ಥ ವಿವರಣೆಗಳೂ ಸಿಗುತ್ತವೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ಪರಶುರಾಮಾವತಾರವನ್ನು
"ರಾಮ ಭೃಗೂದ್ವಹ ಸೂರ್ಜಿತದೀಪ್ತೇ ಕ್ಷತ್ರಕುಲಾಂತಕ ಶಂಭುವರೇಣ್ಯ" - ಭೃಗುಕುಲೋದ್ಧಾರಕನೂ, ಮಹಾಕಾಂತಿಯುಕ್ತನೂ, ದುಷ್ಟ ಕ್ಷತ್ರಿಯನಾಶಕನೂ, ರುದ್ರದೇವರಿಂದ ಪ್ರಾರ್ಥಿತನೂ ಆದ ಪರಶುರಾಮ ದೇವರನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಅವಿಜಿತ ಉನೃಪತಿಸಮಿತಿವಿ ಖಂಡನ ರಮಾವರ ವೀರಪ ಭವ ಮಮ್ಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಕಾರ್ತವೀರ್ಯಾದಿ ದುಷ್ಟರಾಜ ಸಮೂಹವನ್ನು ಸಂಹರಿಸಿದ, ಭಕ್ತವೀರರನ್ನು ಕಾಪಾಡುವ ಲಕ್ಷ್ಮೀಪತ್ರಿಯಾದ ಭಾರ್ಗವ ಸ್ವರೂಪಿಯಾದ ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ
ಧೈರ್ಯಾಂಬುಧೇ ಪರಶುಚರ್ಯಾಧಿಕೃತ್ತ ಖಲವರ್ಯಾವನೀಶ್ವರ ಮಹಾ
ಶೌರ್ಯಾಭಿಭೂತ ಕೃತವೀರ್ಯಾತ್ಮಜಾತ ಭುಜವೀರ್ಯಾವಲೇಪನಿಕರ |
ಭಾರ್ಯಾಪರಾಧ ಕುಪಿತಾರ್ಯಾಜ್ಞಯಾ ಗಲಿತ ನಾರ್ಯಾತ್ಮಸೂಗಲತರೋ
ಕಾರ್ಯಾSಪರಾಧಮವಿಚಾರ್ಯಾರ್ಯಮೌಘಜಯಿ ವೀರ್ಯಾಮಿತಾ ಮಯಿ ದಯಾ || - ಧೈರ್ಯ ಸಾಗರನಾದ, ಮಹಾಪರಾಕ್ರಮದಿಂದ ಸಾವಿರ ಕೈಗಳಿಂದ ಯುದ್ಧ ಮಾಡುತ್ತಿರುವ ಕಾರ್ತವೀರ್ಯಾರ್ಜುನನನ್ನು ಸಂಹರಿಸಿ, ಕೊಡಲಿಯಿಂದಲೇ ಅತಿದುಷ್ಟರಾದ ರಾಜರುಗಳ ಸಮೂಹವನ್ನೇ ನಿರ್ಮೂಲ ಮಾಡಿದ, ಪತ್ನಿ ರೇಣುಕೆಯ ಮಾನಸಾಪರಾಧವನ್ನು ತಿಳಿದು ಕುಪಿತನಾದ ತಂದೆಯ ಆಜ್ಞೆಯಂತೆ ತನ್ನ ತಾಯಿಯ ಕುತ್ತಿಗೆಯನ್ನು ಕಡಿದ, ಸಹಸ್ರಾರು ಸೂರ್ಯರ ಪ್ರಕಾಶಕ್ಕಿಂತಲೂ ಅತಿಶಯವಾದ ಪ್ರಕಾಶವುಳ್ಳ, ಪರಶುರಾಮ ರೂಪಿಯಾದ ಶ್ರೀ ಮಹಾವಿಷ್ಣುವೇ ನನ್ನ ಅನಂತ ಅಪರಾಧಗಳನ್ನು ಮನ್ನಿಸಿ ನನ್ನಲ್ಲಿ ದಯೆ ಇಡುವವನಾಗು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಪರಶುರಾಮಾವತಾರವನ್ನು
ಕ್ಷತ್ರಿಯರುಧಿರಮಯೇ ಜಗದಪಗತಪಾಪಂ
ಸ್ನಪಯಸಿ ಪಯಸಿ ಶಮಿತ ಭವತಾಪಂ
ಕೇಶವ ಧೃತ ಭೃಗುಪತಿ ರೂಪ ಜಯ ಜಗದೀಶ ಹರೇ - ಕ್ಷತ್ರಿಯರ ರಕ್ತದಿಂದ ಜಗತ್ತಿನ ಪಾಪಗಳನ್ನು ತೊಳೆದು ಓಡಿಸಿದ ಹಾಗೆ, ನಮ್ಮ ಪ್ರಾರಬ್ಧ ಪಾಪಗಳನ್ನು ಶಮನಗೊಳಿಸಿ, ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸುವ ಕೇಶವ ಧೃತ ಭೃಗುಪತಿ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ ಪರಶುರಾಮಾವತಾರವನ್ನು ಸಮನ್ವಯಿಸಿದಾಗ ಜೀವವು ವಿಕಾಸಗೊಂಡು ಉನ್ನತಿಗೇರಿ ಮದದಿಂದ ಉದ್ಧಟವಾದ ಪ್ರವರ್ತನೆಯನ್ನು ಬೆಳೆಸಿಕೊಂಡಾಗ ಮತ್ತು ಸಹಜೀವಿಗಳಿಗೆ ಕಂಟಕಪ್ರಾಯವಾಗಿ ಮಾರ್ಪಾಡಾದಾಗ ಪ್ರಕೃತಿ ಅಥವಾ ಭಗವಂತನೇ ಪರಶು ಹಾಗೂ ಪುರುಷನಾಗಿ ನಿಯಂತ್ರಿಸುವನು ಎಂಬುದು ಅರ್ಥವಾಗುತ್ತದೆ.   ದಾನವರೂ ಕಂಟಕಪ್ರಾಯರೂ ಆದ ಅಂಧಕ, ಗಜಾಸುರ, ತ್ರಿಪುರಾಸುರ ಮುಂತಾದ ಅನೇಕರನ್ನು ಕೊಂದು, ತಾಮಸವನ್ನು ಹತ್ತಿಕ್ಕಲು ಭಗವಂತನು ಪರಶು, ಬಾಣ, ಖಡ್ಗ, ಶೂಲ, ನಖ ಪಾಶಗಳನ್ನು ಬಳಸುವನು.  ಹಾಗೇ ನಮ್ಮೊಳಗೆ ಸದಾ ಜಾಗೃತವಾಗುತ್ತಲೇ ಇರುವ ವಿಷಯಾಸಕ್ತಿಗಳನ್ನೂ, ತಾಮಸ ಪ್ರವೃತ್ತಿಗಳನ್ನೂ, ವಿತಂಡ ತರ್ಕಗಳನ್ನೂ ಬೇರು ಸಹಿತ ನಿರ್ಮೂಲನ ಮಾಡಲು ಪರಶುವಿನಂತಹ ವಿವೇಕವನ್ನು ಉಪಯೋಗಿಸಬೇಕಾಗುವುದು.  ಸಾಧನೆಯ ಹಾದಿಯಲ್ಲಿ ನಡೆಯುವ ಸಾಧಕನಿಗೆ ಭಾರ್ಗವರಾಮನಂತನ ಅಪಾರ ಧೈರ್ಯ ಬೇಕಾಗುವುದು.  ಸಾತ್ವಿಕತೆಯನ್ನು ಕಾಪಾಡಿಕೊಳ್ಳಲು ಪರಶುರಾಮನ ಗಂಡುಗೊಡಲಿಯೇ ಬೇಕಾಗುವುದು.   ಪರ್ವತದಂತೆ ಅಚಲವಾಗಿ ನಿಂತು ವಿವೇಕದಿಂದ ಸರ್ವಾಯುಧಗಳನ್ನು ಬಳಸಿ ಸತ್ಯವನ್ನು ಹೃತ್ಕಮಲದಲ್ಲಿ ಸ್ಥಾಪಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂಬುದನ್ನು ಭಗವಂತನ ಪರಶುರಾಮಾವತಾರವು ಸೂಚಿಸುತ್ತದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಮುಖದಲ್ಲಿ ಪರಶುರಾಮರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಪರಶುರಾಮ ರೂಪದಿಂದವತರಿಸಿದಾಗ ರಮಾದೇವಿಯು ’ಹರಿಣಿ’ಯಾಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ಕುವಲಯಾಧೀಶ್ವರರ ಬವರ ಮುಖದಲಿ ಕೊಂದು
ಅವನಿ ಭಾರವನು ಇಳುಹಿ-ದ | ಇಳುಹಿದ ಸ್ವಾಮಿಭಾ-
ರ್ಗವರಾಮ ಎಮಗೆ ದಯವಾಗೋ || - ದುಷ್ಟರಾಜ್ಯಾಧಿಪರನ್ನು ಯುದ್ಧರಂಗದಲ್ಲಿ ಸಂಹರಿಸಿ, ಭೂಭಾರವನ್ನು ಇಳಿಸಿದ ಹೇ ಪರಶುರಾಮ ಸ್ವಾಮಿ ದಯತೋರೋ ಎಂದು ಪ್ರಾರ್ಥಿಸಿದ್ದಾರೆ.  

ಚಿತ್ರಕೃಪೆ : ಅಂತರ್ಜಾಲ

http://temple.dinamalar.com/en/new_en.php?id=564
https://en.wikipedia.org/wiki/Thiruvallam_Sree_Parasurama_Temple
http://www.shaivam.org/siddhanta/spke_108.htm

Thursday, June 11, 2015

ಕರುಣಾ ಸಂಧಿ - ೩೦ ನೇ ಪದ್ಯ ( ವಾಮನಾವತಾರ )

ಅಜಿನ ದಂಡ ಕಮಂಡಲ ಮೇಖಲ ರುಚಿರ ಪಾವನ ವಾಮನ ಮೂರ್ತಯೇ |
ಮಿತ ಜಗತ್ರಿತಯಾಯ ಜಿತಾರಯೆ ನಿಗಮ ವಾಕ್ಪಟವೇ ವಟವೇ ನಮ: ||

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 
ಕಾಯ್ದ ಸುಜನರನು ||೩೦||

ಅತುಳಶೌರ್ಯ ವಾಮನ - ಪ್ರಹ್ಲಾದರಾಜರ ಮೊಮ್ಮಗನಾದ ಬಲಿರಾಜನು ಅಮೃತ ಸಿಗಲಿಲ್ಲವೆಂಬ ಕಾರಣದಿಂದ ದೈತ್ಯರ ಸೈನ್ಯದೊಡನೆ ದೇವತೆಗಳ ಮೇಲೆ ಯುದ್ಧ ಸಾರಿ ಬಂದಾಗ ಇಂದ್ರನು ಬಲಿರಾಜನನ್ನು ಹೊಡೆದು ಸೋಲಿಸಿ, ಇತರ ಪ್ರಮುಖ ದೈತ್ಯರನ್ನೆಲ್ಲಾ ಕೊಲ್ಲುವನು.  ಶುಕ್ರಾಚಾರ್ಯರ ಮೃತಸಂಜೀವನೀ ವಿದ್ಯೆಯ ಪ್ರಯೋಗದ ಕೃಪೆಯಿಂದ  ಮೃತರಾಗಿದ್ದ ದೈತ್ಯರೆಲ್ಲಾ ಮರಳಿ ಬದುಕುವರು.  ಬಲಿರಾಜನು ತನಗೆ ಜೀವದಾನ ಮಾಡಿ ಆಶ್ರಯ ಕೊಟ್ಟ ಶುಕ್ಲಾಚಾರ್ಯರ ಸೇವೆಯನ್ನು ಮಾಡುವನು.   ಮತ್ತೆ ಸ್ವರ್ಗಾಧಿಪತ್ಯವನ್ನು ಪಡೆಯಬೇಕೆಂಬ ಬಲಿರಾಜನ ಆಸೆಗೆ  ಶುಕ್ಲಾಚಾರ್ಯರು ಬಲಿರಾಜನ ಹತ್ತಿರ ವಿಶ್ವಜಿತ್ ಯಾಗವನ್ನು ಮಾಡಿಸುವರು.  ಸಂತೃಪ್ತನಾದ ಅಗ್ನಿದೇವನಿಂದ ಸುವರ್ಣರಥ, ಇಂದ್ರಾಶ್ವಗಳಂತಿರುವ ಅಶ್ವಗಳು, ಸಿಂಹಧ್ವಜ, ಬಿಲ್ಲು, ಬತ್ತಳಿಕೆಗಳು ಮತ್ತು ದಿವ್ಯ ಕವಚವನ್ನು ಬಲಿರಾಜನು ಪಡೆಯುವನು.  ಪಿತಾಮಹನಾದ ಪ್ರಹ್ಲಾದನಿಂದ ಅಮ್ಲಾನ ಪುಷ್ಪಮಾಲೆಯನ್ನೂ, ಶುಕ್ರಾಚಾರ್ಯರಿಂದ ಶಂಖವನ್ನೂ ಪಡೆಯುವನು.  ಸೈನ್ಯ ಸಮೇತನಾಗಿ ಮತ್ತೆ ಅಮರಾವತಿಗೆ ಮುತ್ತಿಗೆ ಹಾಕಿದಾಗ ಬೃಹಸ್ಪತ್ಯಾಚಾರ್ಯರ ಸಲಹೆಯಂತೆ ದೇವತೆಗಳು ರೂಪಾಂತರದಿಂದ ಸ್ವರ್ಗವನ್ನು ಬಿಟ್ಟು ಹೊರಟು ಹೋಗುವರು.  ಬಲಿರಾಜನು ನಿರಾಯಾಸವಾಗಿ ಮೂರು ಲೋಕಗಳನ್ನೂ ವಶಪಡಿಸಿಕೊಳ್ಳುವನು.  ಬಲಿರಾಜನ ಗುರುಗಳನ್ನು ಅನುಸರಿಸುವ ಭಕ್ತಿಯನ್ನು ಮೆಚ್ಚಿ ಶುಕ್ರಾಚಾರ್ಯರು ಇಂದ್ರ ಪದವಿಯು ಸ್ಥಿರವಾಗುವಂತೆ ಮಾಡಲು ನೂರು ಅಶ್ವಮೇಧ ಯಾಗಗಳನ್ನು ಮಾಡಿಸುವರು.

ವಾಮನ ಮಹಾಪುರಾಣದಲ್ಲಿ ತಿಳಿಸಿರುವಂತೆ,  ದೇವತೆಗಳ ತಾಯಿಯಾದ ಅದಿತಿಯು ಇಂದ್ರಾದಿ ದೇವತೆಗಳು ರಾಜ್ಯ ಕಳೆದುಕೊಂಡಿರುವುದನ್ನು ನೋಡಿ ದುಃಖಿಸುವಳು.  ಪತಿಯಾದ ಕಶ್ಯಪರು ದುಃಖಿಸುವುದನ್ನು ಬಿಟ್ಟು ಜಗದ್ಗುರುವಾದ ವಾಸುದೇವನನ್ನು ಸೇವಿಸು ಎನ್ನುವರು.  ಅವರ ಆದೇಶದಂತೆ ಸಂತಾನಾಪೇಕ್ಷೆಗಾಗಿ ಮಾಡುವ ’ಪಯೋವ್ರತ’ವನ್ನು ಮಾಡಿದಾಗ ಸಂತುಷ್ಟನಾದ ಭಗವಂತನು ಪ್ರತ್ಯಕ್ಷನಾಗಿ ವರವೀಯುವನು.  ದೈತ್ಯರು ಅತಿ ಬಲಿಷ್ಠರಾಗಿರುವುದರಿಂದ ಅವರನ್ನು ಉಪಾಯದಿಂದಲೇ ಗೆಲ್ಲಬೇಕೆಂದು ತಿಳಿಸುತ್ತಾ, ಒಂದು ಅಂಶದಿಂದ ನಿನ್ನ ಮಗನಾಗಿ ಜನಿಸಿ ನಿನ್ನ ಮಕ್ಕಳನ್ನು ರಕ್ಷಿಸುವೆನೆಂದು ಅಭಯವನ್ನು ಕೊಡುವನು.  ತಾನು ಕೊಟ್ಟ ವರವನ್ನೇ ನಿಮಿತ್ತ ಮಾಡಿಕೊಂಡು ಶ್ರೀಹರಿಯು, ಅದಿತಿಯ ಗರ್ಭದಿಂದ ವಾಮನಾವತಾರದಲ್ಲಿ ಅವತರಿಸಿದನು.  ಹುಟ್ಟಿದ ಕೂಡಲೇ ಬೆಳೆದು ನಿಂತ ಭಗವಂತನಿಗೆ ಬ್ರಹ್ಮದೇವರು ಜಾತಕರ್ಮಾದಿ ಸಂಸ್ಕಾರಗಳನ್ನು ಮಾಡಿ ಸಂತಸಪಡುವರು.   ದೇವತೆಗಳೆಲ್ಲರೂ ಹರುಷದಿಂದ ಸ್ತುತಿಸಿದಾಗ ಭಗವಂತನು ನಿಮ್ಮೆಲ್ಲರ ಪ್ರಾರ್ಥನೆಯಿಂದ ಅವತರಿಸಿರುವ ನಾನು ಮೂರು ಲೋಕಗಳ ಮುಳ್ಳುಗಳನ್ನೂ ದೂರಮಾಡಿ ಇಂದ್ರನನ್ನು ತ್ರಿಲೋಕಾಧಿಪತಿಯನ್ನಾಗಿ ಮಾಡುವೆನೆಂದನು.  ಓಂಕಾರ ಪ್ರಣವದಿಂದ ಭೂಷಿತವಾದ ವೇದಗಳು ಭಗವಂತನ ಸೇವೆಗೆ ಅಲ್ಲಿ ಉಪಸ್ಥಿತವಾದವು.  ಸಾಂಖ್ಯ, ಯೋಗ, ಸಕಲ ಶಾಸ್ತ್ರಗಳೂ ಆ ಭಗವತ್ ಕೈಂಕರ್ಯಕ್ಕಾಗಿ ಬಂದು ವಾಮನ ವಟುವಿನ ಸನ್ನಿಹಿತವಾದವು.  ಜಡೆ, ಕೊಡೆ, ದಂಡಗಳಿಂದ ಒಪ್ಪುವ ವಾಮನ ಮೂರ್ತಿಯು ಕೈಯಲ್ಲಿ ಕಮಂಡಲವನ್ನು ಪಿಡಿದು ಬಲಿರಾಜನ ಯಜ್ಞವಾಟದೆಡೆಗೆ ಹೊರಡುವನು.   ಬೇಡಲು ಬಂದ ಯಾರಿಗೂ ಇಲ್ಲವೆಂದೇ ಹೇಳದ ಬಲಿರಾಜನಲ್ಲಿ ಭಗವಂತನು  ಅಗ್ನಿಶಾಲೆಯನ್ನು ಕಟ್ಟಲಿಕ್ಕಾಗಿ ಮೂರು ಪಾದ ಭೂಮಿಯನ್ನು ಬೇಡಿದನು.  ಸಂಕಲ್ಪ ಮಾಡಿ ವಟುವಿನ ಕೈಯಲ್ಲಿ ಭೂಮಿ ದಾನದ ಸಂಕಲ್ಪದ ನೀರು ಬಿದ್ದ ಕೂಡಲೇ ಭಗವಂತನು ವಿರಾಟರೂಪವನ್ನು ತಳೆಯುತ್ತಾ ತ್ರಿವಿಕ್ರಮನಾಗುವನು. ಒಂದು ಪಾದದಿಂದ ಸಮಸ್ತ ಭೂಮಂಡಲವನ್ನೇ ಅಳೆಯುವನು, ಎರಡನೆಯ ಪಾದದಿಂದ ಅಂತರಿಕ್ಷವನ್ನಳೆಯುವನು, ಮೂರನೆಯ ಪಾದವನ್ನು ಬಲಿರಾಜನ ಇಚ್ಛೆಯಂತೆಯೇ ಅವನ ಶಿರದಲ್ಲಿರಿಸಿ, ಬಲಿರಾಜನನ್ನು ಸುತಳ ಎಂಬ ಪಾತಾಳ ಲೋಕಕ್ಕೆ ಕಳುಹಿಸುವನು.   

ಶ್ರೀಮದ್ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ವಾಮನಾವತಾರವನ್ನು
ಜ್ಯಾಯಾನ್ಗುಣೈರವರಜೋsಪ್ಯದಿತೇಃ ಸುತಾನಾಂ
ಲೋಕಾನ್ವಿಚಕ್ರಮ ಇಮಾನ್ಯದಥಾಧಿಯಜ್ಞಃ |
ಕ್ಷ್ಯಾಂ ವಾಮನೇನ ಜಗೃಹೇ ತ್ರಿಪದಚ್ಛಲೇನ
ಯಾಚ್ಞಾಮೃತೇ ಪಥಿ ಚರನ್ಪ್ರಭುಭಿರ್ನ ಚಾಲ್ಯಃ || - ಅದಿತಿಯ ಪುತ್ರರಲ್ಲಿ ಅತ್ಯಂತ ಚಿಕ್ಕವನಾದರೂ ಗುಣಗಳಲ್ಲಿ ಎಲ್ಲರಿಗಿಂತಲೂ ದೊಡ್ಡವನಾದ ದೇವದೇವನು, ವಾಮನ ಮೂರ್ತಿಯಾಗಿ ಅವತರಿಸಿ ಬಲಿಚಕ್ರವರ್ತಿಯಿಂದ ಮೂರು ಪಾದಗಳಷ್ಟು ಭೂಮಿಯನ್ನು ಬೇಡಿ ಪಡೆಯುವ ನೆಪದಿಂದ ತ್ರಿವಿಕ್ರಮನಾಗಿ ಬೆಳೆದು ನಿಂತವನು ಮೂರು ಲೋಕಗಳನ್ನೂ ಅಳೆಯುವನು.  ಎಂದಿಗೂ ಸನ್ಮಾರ್ಗವನ್ನು ಬಿಡದ ಬಲಿಯನ್ನು ಮಣಿಸಲು ಭಗವಂತನು ಯುಕ್ತಿಯಿಂದ ಬೇಡುವ ಉಪಾಯವನ್ನು ಹೂಡಿ  ಶಕ್ತಿಗಿಂತಲೂ ಯುಕ್ತಿಯಿಂದಲೇ ಜಯ ಸಾಧಿಸಬಹುದೆಂಬುದನ್ನು ಲೋಕಕ್ಕೆ ಸಾಧಿಸಿ ತೋರಿಸುವನು.

ಅಷ್ಟಮಸ್ಕಂಧದಲ್ಲಿ ೧೫ನೆಯ ಅಧ್ಯಾಯದಿಂದ ೨೩ನೆಯ ಅಧ್ಯಾಯದವರೆಗೂ ಬಲಿಚಕ್ರವರ್ತಿ ಹಾಗೂ ಭಗವಂತನ ವಾಮನಾವತಾರದ ಕಥೆಯನ್ನು ವಿಸ್ತಾರವಾಗಿ ತಿಳಿಸಲ್ಪಟ್ಟಿದೆ.  ವಾಮನಮೂರ್ತಿಯು ತ್ರಿವಿಕ್ರಮನಾಗಿ ಬೆಳೆದು ಮೂರು ಲೋಕಗಳನ್ನೂ ಅಳೆದು, ದೇವಾದಿದೇವತೆಗಳಿಗೆಲ್ಲಾ ತೋರಿದ ವಿಶ್ವವ್ಯಾಪಿ ರೂಪದ ವರ್ಣನೆಯು ಸುಂದರವಾಗಿ ಚಿತ್ರಿಸಲಾಗಿದೆ.  


ಶ್ರೀವಿಷ್ಣು ಸಹಸ್ರನಾಮದಲ್ಲಿ "ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ" - ವಾಮನ ಎಂದರೆ ಚಿಕ್ಕ ಗಾತ್ರದವನು ಎಂದರ್ಥವಾಗುತ್ತದೆ.  ಭಗವಂತ ಅಣುವಿಗಿಂತ ಅಣುವಾಗಿ ನಮ್ಮ ಹೃತ್ಕಮಲದಲ್ಲಿ ನೆಲೆಸಿರುವನು.  ’ವಾಮ’ ಎಂದರೆ ಸೌಂದರ್ಯ, ವಾಮನ ಎಂದರೆ ಸೌಂದರ್ಯವನ್ನು ಕೊಡುವವನು.  ಸೌಂದರ್ಯದ ಕೇಂದ್ರ ಬಿಂದು ಕಣ್ಣು ಮತ್ತು ಭಗವಂತನ ಸನ್ನಿಧಾನ ಕಣ್ಣಿನಲ್ಲಿರುವುದು.  ವಾಮನ ಎಂಬ ಪದವನ್ನು ವಾ+ಅಮ+ನ ಎಂದು ಬಿಡಿಸಿದಾಗ ’ವಾ’ ಎಂದರೆ ಜ್ಞಾನ, ’ಅಮ’ ಎಂದರೆ ಅಜ್ಞಾನ ಹಾಗೂ ’ನ’ ಎಂದರೆ ನಯತಿ ಎಂಬರ್ಥವಾಗುವುದು.  ಜ್ಞಾನವನ್ನಾಗಲೀ, ಅಜ್ಞಾನವನ್ನಾಗಲೀ, ಅವರವರ ಯೋಗ್ಯತೆಗೆ ತಕ್ಕಂತೆ ಕರುಣಿಸುವವನೂ, ಜ್ಞಾನಮೂರ್ತಿಯೂ, ಆನಂದಮೂರ್ತಿಯೂ ಆದ ಭಗವಂತನು ವಾಮನನೆನಿಸುವನು  (ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರಿತ).

ಕಾಠಕೋಪನಿಷತ್ತಿನ ದ್ವಿತೀಯಾಧ್ಯಾಯದ ಎರಡನೇ ವಲ್ಲಿಯಲ್ಲಿ
ಊರ್ಧ್ವಂ ಪ್ರಾಣಮುನ್ನಯತ್ಯಪಾನಂ ಪ್ರತ್ಯಗಸ್ಯತಿ | ಮಧ್ಯೇ ವಾಮನಮಾಸೀನಂ, ವಿಶ್ವೇದೇವಾ ಉಪಾಸತೇ || - ಪೂಜನೀಯವಾದ ಪರಮಾತ್ಮನು ಪ್ರಾಣವನ್ನು ಮೇಲಕ್ಕೂ, ಅಪಾನವನ್ನು ಕೆಳಕ್ಕೂ ಕಳುಹಿಸುವನು.  ಮಧ್ಯದಲ್ಲಿ ಆಸೀನನಾಗಿರುವ ಆ ವಾಮನ ರೂಪಿ ಭಗವಂತನನ್ನು ದೇವತೆಗಳೆಲ್ಲರೂ ಆರಾಧಿಸುವರು ಎಂದು ತಿಳಿಸಲಾಗಿದೆ.

ಶ್ರೀಮದಾಚಾರ್ಯರು  ಕಾಠಕೋಪನಿಷದ್ಭಾಷ್ಯದಲ್ಲಿ
ನಮೋ ಭಗವತೇ ತಸ್ಮೈ ಸರ್ವತಃ ಪರಮಾಯ ತೇ |
ಸರ್ವಪ್ರಾಣಿ ಹೃದಿಸ್ಥಾಯ ವಾಮನಾಯ ನಮೋ ನಮಃ || - ಐಶ್ವರ್ಯಾದಿ ಷಡ್ಗುಣ ಸಂಪನ್ನನಾದ ಭಗವಂತನಿಗೆ ನಮಸ್ಕಾರ.  ಇಂದ್ರಿಯಗಳಿಂದಾರಂಭಿಸಿ ಅವ್ಯಕ್ತದವರೆಗೆ ಇರುವ ಎಲ್ಲ ತತ್ವಗಳಿಗಿಂತಲೂ ಉತ್ತಮನಾದ ಎಲ್ಲ ಜೀವಿಗಳ ಹೃದಯದಲ್ಲಿ ವಾಸವಾಗಿರುವ ವಾಮನ ರೂಪಿಯಾದ ನಿನಗೆ ಪುನಃ ಪುನಃ ನಮಸ್ಕಾರ ಎಂದು ಸ್ತುತಿಸಿದ್ದಾರೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ವಾಮನಾವತಾರವನ್ನು
"ವಾಮನ ವಾಮನ ಮಾಣವಶೇಷ ದೈತ್ಯವರಾಂತಕ ಕಾರಣ ರೂಪ"  - ಜ್ಞಾನ ಭಕ್ತ್ಯಾದಿಗಳಿಂದ ಆರಾಧಿತನೂ, ವಟುವೇಷಧಾರಿಯೂ, ಬಲಿಯ ಅಭೀಷ್ಟವನ್ನು ನೆರವೇರಿಸಿದವನೂ, ಇಂದ್ರನಿಗೆ, ತ್ರೈಲೋಕ್ಯವನ್ನು ಕರುಣಿಸಿದವನೂ ವಾಮನನೂ ಆದ ನಿನಗೆ ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಬಲಿಮುಖದಿತಿಸುತ ವಿಜಯ ವಿನಾಶನ ಜಗದವನಾಜಿತ ಭವಮಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಬಲಿ ಮೊದಲಾದ ಮಹಾ ದೈತ್ಯರನ್ನು ಜಯಿಸಿದ ಜಗದ್ರಕ್ಷಕನಾದ, ಸರ್ವಶ್ರೇಷ್ಠನಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ
ಪಿಂಗಾಕ್ಷ ವಿಕ್ರಮ ತುರಂಗಾದಿಸೈನ್ಯ ಚತುರಂಗಾವಲಿಪ್ತ ದನುಜಾ-
ಸಾಂಗಾಧ್ವರಸ್ಥ ಬಲಿ ಸಾಂಗಾವಪಾತ ಹೃಷಿತಾಂಗಾಮರಾಲಿ ನುತ ತೇ |
ಶೃಂಗಾರ ಪಾದನಖ ತುಂಗಾಗ್ರಭಿನ್ನ ಕನಕಾಂಗಾಂಡಪಾತಿ ತಟಿನೀ-
ತುಂಗಾತಿ ಮಂಗಲ ತರಂಗಾಭಿಭೂತ ಭಜಕಾಂಗಾಘ ವಾಮನ ನಮಃ || - ಮಹಾಪರಾಕ್ರಮಿಗಳಾದ ಗರ್ವಿಷ್ಠ ದಾನವರಿಂದ ಕೂಡಿಕೊಂಡು ಯಜ್ಞದಲ್ಲಿ ದೀಕ್ಷಿತನಾದ ಬಲಿಚಕ್ರವರ್ತಿಯನ್ನು, ವಾಮನರೂಪಿಯಾಗಿ ಬಂದು ಮೂರಡಿ ಭೂಮಿಯನ್ನು ಯಾಚಿಸಿ, ತ್ರಿವಿಕ್ರಮ ರೂಪಿಯಾಗಿ ಬೆಳೆದು ಆ ಮೂರು ಅಡಿಯನ್ನೂ ಕೊಡಲು ಆತನನ್ನು ಅಶಕ್ತನನ್ನಾಗಿ ಮಾಡಿ ಸುತಲಕ್ಕೆ ಕಳುಹಿಸಿ, ಇಂದ್ರನಿಗೆ ಮೂರು ಲೋಕಗಳನ್ನೂ ಕೊಟ್ಟು ದೇವತೆಗಳನ್ನು ಹರ್ಷಗೊಳಿಸಿದ, ತ್ರಿವಿಕ್ರಮನಾಗಿ ಬೆಳೆದಾಗ ತನ್ನ ಪಾದಗ್ರದ ಉಗುರಿನಿಂದ ಬ್ರಹ್ಮಾಂಡ ಕಟಾಹವು ಭಿನ್ನವಾಗಿ ಒಳನುಗ್ಗಿದ ಪವಿತ್ರ ಗಂಗೆಯ ಅಲೆಗಳಿಂದ ಭಕ್ತರ ಸಮಸ್ತ ಪಾಪಸಮೂಹಗಳನ್ನೂ ನಾಶಗೊಳಿಸಿದ ವಾಮನರೂಪಿಯಾದ ಪರಮಾತ್ಮನೇ ನಿನಗೆ ನಮಸ್ಕಾರ ಎಂದು ಸ್ತುತಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ನರಸಿಂಹಾವತಾರವನ್ನು
ಛಲಯಸಿ ವಿಕ್ರಮಣೇ ಬಲಿಮದ್ಭುತ ವಾಮನ
ಪದ ನಖ ನೀರಜನಿತ ಜನ ಪಾವನ
ಕೇಶವ ಧೃತವಾಮನರೂಪ ಜಯ ಜಗದೀಶ ಹರೇ - ವಾಮನ ರೂಪಿಯಾದ ಭಗವಂತ ಅದ್ಭುತವಾದ ತ್ರಿವಿಕ್ರಮ ರೂಪವನ್ನು ತಳೆದು ಬಲಿಯನ್ನು ಮೋಹಕಗೊಳಿಸಿದ,  ತನ್ನ ಪಾದದ ಅಂಗುಷ್ಠದ ಉಗುರಿನಿಂದ ಬ್ರಹ್ಮಾಂಡ ಕರ್ಪರವನ್ನು ಒಡೆದು ಗಂಗಾಜನಕನೆನಿಸಿಕೊಂಡು ಬುಧಜನರನ್ನು ಪಾವನಗೊಳಿಸಿದ, ವಾಮನ ರೂಪದ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಶ್ರೀ ಪುರಂದರದಾಸರು ತಮ್ಮ "ಅಚ್ಯುತಾನಂತ ಗೋವಿಂದ" ಎಂದ ಕೃತಿಯಲ್ಲಿ
ವಾಮನ ರೂಪಿಲಿ ಬಂದು | ಬಲಿಯ | ದಾನವ ಬೇಡಲು ಉಚಿತವು ಎಂದು || ಧಾರೆಯನೆರೆಯಲು ಅಂದು | ಬೆಳೆದು | ಧಾರಿಣಿಯೆಲ್ಲವನಳೆದ್ಯೊ ನೀನಂದು || ಎನ್ನುತ್ತಾ ಪುಟ್ಟ ವಾಮನನಾಗಿ ಬಂದು ಬಲಿಯು ದಾನದ ತೀರ್ಥವನ್ನು ಕೈಯಲ್ಲಿ ಬಿಟ್ಟಾಕ್ಷಣ ಬೆಳೆದು ಧಾರಿಣಿಯೆಲ್ಲವನ್ನೂ ಅಳೆದೆಯೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ  ವಾಮನಾವತಾರವನ್ನು ಸಮನ್ವಯಿಸಿದರೆ  ವಿಷಯಾಸಕ್ತಿಗಳಿಂದ ದೂರ ಸರಿದು ಪುಟ್ಟ ವಟು ವಾಮನನಂತೆ ವಿಧೇಯತೆ, ವಿನಮ್ರತೆಯಿಂದಲೇ ಲೌಕಿಕ ಭೋಗಗಳನ್ನು ಮೆಟ್ಟಿ ಪಾತಾಳಕ್ಕೆ ಅಟ್ಟಿ,  ಇಂದ್ರಿಯ ನಿಗ್ರಹವನ್ನು ಮಾಡಿ ತ್ರಿವಿಕ್ರಮನಂತೆ ಬೆಳೆದು ನಿಲ್ಲಬೇಕು ಎಂದು ತಿಳಿಯುತ್ತದೆ.   ಯಾವಾಗ ನಮ್ಮ ದೇಹ ಹಾಗೂ ಮನಸ್ಸು ಪೂರ್ಣ ಶುದ್ಧಿಯಾಗುತ್ತದೋ, ಆಗ ನಮ್ಮೊಳಗೇ ಭಗವಂತನ ಇರುವಿಕೆಯ ಅರಿವು ನಮಗಾಗುತ್ತದೆ.  ನಮ್ಮ ಮನಸ್ಸು ಲೌಕಿಕ ಭೋಗಾಸಕ್ತಿಗಳಲ್ಲಿ ಮುಳುಗಿ ಅಸ್ತಿತ್ವವೇ ಇಲ್ಲದಂತಾಗಿರುವುದು.  ಭಗವಂತನ ಸಾಕ್ಷಾತ್ಕಾರವಾಗಲು ನಾವು ಧೃಡ ಮನಸ್ಸಿನವರಾಗಬೇಕು, ಆಧ್ಯಾತ್ಮಿಕವಾಗಿ ಬಲಿಷ್ಠರಾಗಬೇಕು.  ಪುಟ್ಟ ವಟುವಾಗಿ ಬರುವ ವಾಮನ ರೂಪಿ ಭಗವಂತನನ್ನು ಮನದಲ್ಲಿ ಸ್ಥಾಪಿಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಬೇಕು.  ಧ್ಯಾನದಲ್ಲಿ ವಾಮನರೂಪಿಯನ್ನು ಆರಾಧಿಸುತ್ತಾ ಭಗವಂತನ ವಿಶ್ವವ್ಯಾಪ್ತಿಯೆಡೆಗೆ ಮನಸ್ಸನ್ನು ತಿರುಗಿಸಬೇಕು.  ಪರಮಾತ್ಮನೆಂಬುದು ಒಂದು ಶಕ್ತಿ, ಅವನು ಸರ್ವಾಂತರ್ಯಾಮಿ, ನನ್ನೊಳಗೂ, ಹೊರಗೂ, ಎಲ್ಲೆಲ್ಲೂ ವ್ಯಾಪಿಸಿದ್ದಾನೆ ಎಂದು ತ್ರಿವಿಕ್ರಮರೂಪಿ ಭಗವಂತನನ್ನು ಆರಾಧಿಸಬೇಕು.  ಸರ್ವ ಪ್ರಕಾರಗಳಿಂದಲೂ ನಮ್ಮನ್ನು ಉದ್ಧರಿಸುತ್ತಾನೆ ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು.  ಭೂಮಂಡಲವೊಂದು ಅನಂತ ಶಕ್ತಿಗಳ ಆಗರ, ಪ್ರತಿಕ್ಷಣ ಘರ್ಷಿಸುವ ಶಕ್ತಿಗಳಿಂದ ಹೊಯ್ದಾಡುವ ವಿಶ್ವವನ್ನು ಭಗವಂತನು ತನ್ನ ಮೂರು ಹೆಜ್ಜೆಗಳನ್ನು ಊರಿ ಸುಸ್ಥಿತಿಗೆ ತಂದನೆಂದು ಕೂಡ ತಿಳಿಯಬಹುದಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ನಾಸಿಕದಲ್ಲಿ ವಾಮನರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ವಾಮನರೂಪದಿಂದವತರಿಸಿದಾಗ ರಮಾದೇವಿಯು ’ಸುಖಾ’ ಆಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ವೈರೋಚನೀಯ ಭೂಮಿ ಮೂರು ಪಾದವು ಬೇಡಿ
ಈರಡಿಯೊಳಗಳದೆ ಭ್ಯೂವೋಮ | ಭೂವ್ಯೋಮವಳೆದ ಭಾ-
ಗೀರಥಿಯ ಜನಕ ದಯವಾಗೋ || - ವಿರೋಚನನ ಮಗ ಬಲಿಚಕ್ರವರ್ತಿಯನ್ನು ಮೂರು ಪಾದ ಭೂಮಿ ಬೇಡಿ, ಎರಡು ಪಾದಗಳಲ್ಲಿ, ಭೂಲೋಕ ಮತ್ತು ಅಂತರಿಕ್ಷಗಳನ್ನಳೆದು ಪಾದನಖದಿಂದ ಬ್ರಹ್ಮಾಂಡ ಕರ್ಪರವನ್ನು ಒಡೆದು ಭಾಗೀರಥಿಯ ಜನಕನೆಂದೆನಿಸಿಕೊಂಡ ಹೇ ವಾಮನನೇ ಕೃಪೆತೋರೋ ಎಂದು ಪ್ರಾರ್ಥಿಸಿದ್ದಾರೆ.

ಭಗವಂತನ ವಾಮನಾವತಾರವೂ ಕೂಡ ಅನಂತ ಕರುಣೆಯ ಕಾರ್ಯವೇ ಆಗಿದೆ.  ಬಲಿಯ ಅಹಂಕಾರವನ್ನು ಮೆಟ್ಟಿ,  ಇಂದ್ರನ ಪದವಿಯನ್ನು ಮರಳಿ ಇಂದ್ರನಿಗೆ ದೊರಕಿಸುವುದು ದೇವತೆಗಳ ಮೇಲಿನ ಅಪಾರ ಕಾರುಣ್ಯದಿಂದಲೇ ಎಂಬುದು ತಿಳಿಯುತ್ತದೆ.  ಮೂರು ಲೋಕವನ್ನು ಅಳೆಯುವ ನೆಪದಿಂದ ಬ್ರಹ್ಮಾಂಡ ಕಟಾಹವನ್ನು ಭೇದಿಸಿ, ಗಂಗಾಜನಕನೆಂದೆನಿಕೊಂಡಿದ್ದು ಲೋಕದ ಸಮಸ್ತ ಬುಧಜನರ ಉದ್ಧಾರಕ್ಕಾಗಿಯೂ ಹಾಗೂ ಪಾಪಿಜನರ ಪಾಪ ಪರಿಹಾರಕ್ಕಾಗಿಯೂ ಆಗಿದೆ.  ಇಂತಹ ಕರುಣಾಸಾಗರನ ಕಾರುಣ್ಯಕ್ಕೆ ಯಾವ ಸಾಟಿಯೂ ಇಲ್ಲವೆಂಬುದನ್ನು ತಿಳಿಯಬೇಕಾಗಿದೆ.  ಭಾಗವತ ಅಷ್ಟಮಸ್ಕಂಧದ ೨೨ನೆಯ ಅಧ್ಯಾಯದಲ್ಲಿ ಬಲಿನಿಗ್ರಹವಾದಾಗ ಅಲ್ಲಿಗೆ ಬಂದ ಬಲಿಯ ಪಿತಾಮಹ ಪ್ರಹ್ಲಾದನು ಭಗವಂತನನ್ನೂ, ಅವನ ಕಾರುಣ್ಯವನ್ನೂ ಸ್ತುತಿಸುತ್ತಾ "ಮನ್ಯೇ ಮಹಾನದ್ಯ ಕೃತೋ ಹ್ಯನುಗ್ರಹೋ | ವಿಭ್ರಂಶಿತೋ ಯಚ್ಛ್ರಿಯ ಆತ್ಮಮೋಹನಾತ್" - ಬಲಿಗೆ ಸಕಲೈಶ್ವರ್ಯವನ್ನು ಕೊಟ್ಟವನೂ ನೀನೆ, ಮನಸ್ಸನ್ನು ಮರುಳುಗೊಳಿಸುವ ಸಂಪತ್ತಿನಿಂದ ಜಾರಿಸಿದ್ದೂ ನೀನೆ.  ಇದು ನೀನು ಬಲಿಯ ಮೇಲೆ ತೋರಿರುವ ಅಪಾರ ಕರುಣೆ ಹಾಗೂ ಪರಮಾನುಗ್ರಹವೇ ಆಗಿದೆ ಎಂದಿರುವ ಉಲ್ಲೇಖವಿದೆ.

ಚಿತ್ರಕೃಪೆ : ಅಂತರ್ಜಾಲ

ಕೇರಳದಲ್ಲಿ ವಾಮನರೂಪಿ ಭಗವಂತನ ದೇವಾಲಯದ ಕೊಂಡಿ http://en.wikipedia.org/wiki/Thrikkakara_Temple

ಕಜುರಾಹೋನಲ್ಲಿರುವ ವಾಮನರೂಪಿ ಭಗವಂತನ ದೇವಸ್ಥಾನದ ಅತಿ ಸುಂದರ ಚಿತ್ರಗಳಿಗಾಗಿ ಕೊಂಡಿ http://www.tripadvisor.in/Attraction_Review-g297647-d2665517-Reviews-Vaman_Temple-Khajuraho_Madhya_Pradesh.html

 ತ್ರಿವಿಕ್ರಮ ದೇವಾಲಯದ ಕೊಂಡಿ http://en.wikipedia.org/wiki/Tirukoilur