Sunday, June 1, 2014

ಕರುಣಾ ಸಂಧಿ - ೨೧ ನೇ ಪದ್ಯ


ಕಾಮಧೇನು ಸುಕಲ್ಪತರು ಚಿಂ-
ತಾಮಣಿಗಳಮರೇಂದ್ರ ಲೋಕದಿ
ಕಾಮಿತಾರ್ಥಗಳೀವವಲ್ಲದೆ ಸೇವೆ ಮಾಳ್ಪರಿಗೆ |
ಶ್ರೀಮುಕುಂದನ ಪರಮ ಮಂಗಳ-
ನಾಮ ನರಕಸ್ಥರನು ಸಲಹಿತು
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು ||೨೧||


ಪ್ರತಿಪದಾರ್ಥ : ಕಾಮಧೇನು - ಇಷ್ಟಾರ್ಥಗಳನ್ನು ಪೂರೈಸುವ ಸ್ವರ್ಗಲೋಕದ ಹಸು, ಸುಕಲ್ಪತರು - ತನ್ನ ಸೇವೆ ಮಾಡಿದವರು ಕಲ್ಪಿಸಿಕೊಂಡದ್ದನ್ನೆಲ್ಲಾ ಕೊಡುವಂತಹ ವೃಕ್ಷ, ಚಿಂತಾಮಣಿ - ಚಿಂತಿಸಿದ್ದನ್ನು ಕೊಡತಕ್ಕಂತಹ ಮಣಿ, ಅಮರೇಂದ್ರಲೋಕದಿ - ದೇವಲೋಕ ಅಥವಾ ಸ್ವರ್ಗಲೋಕದಲ್ಲಿ, ಕಾಮಿತಾರ್ಥಗಳೀವುವಲ್ಲದೆ - ಬೇಡಿದ ಐಹಿಕ ಸುಖ ಭೋಗಗಳನ್ನು ಮಾತ್ರ ಕೊಡುತ್ತವೆ, ಸೇವೆ ಮಾಳ್ಪರಿಗೆ - ತಮ್ಮ ಸೇವೆ ಮಾಡುವಂತಹವರಿಗೆ, ಶ್ರೀಮುಕುಂದನ - ಭಗವಂತನಾದ ಶ್ರೀಹರಿಯ, ಪರಮಮಂಗಳ ನಾಮ - ಮಂಗಳಕರವಾದ / ಶುಭಕರವಾದ ನಾಮ ಸ್ಮರಣೆ, ನರಕಸ್ಥರನು ಸಲಹಿತು - ನರಕದಲ್ಲಿ ನರಳುತ್ತಿದ್ದ ನರಕವಾಸಿಗಳಿಗೂ ಮೋಕ್ಷ ದೊರೆಯುವಂತೆ ಮಾಡುವಂತಹ, ಪಾಮರರ ಪಂಡಿತರೆನಿಸಿ - ಅಜ್ಞಾನಿಗಳ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನಿಗಳನ್ನಾಗಿ ಮಾಡುವಂತಹುದು, ಪುರುಷಾರ್ಥ ಕೊಡುತಿಹುದು - ಧರ್ಮ ಅರ್ಥ ಕಾಮ ಮೋಕ್ಷಗಳನ್ನು ದೊರಕಿಸಿ ಕೊಡುವಂತಹುದು.

ಅಮರ ಲೋಕದಲ್ಲಿರುವಂತಹ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ ಇವೆಲ್ಲಾ ಸೇವೆ ಮಾಡುವಂತಹವರಿಗೆ, ಬೇಡಿದ ಇಷ್ಟಾರ್ಥವನ್ನೇ ಕೊಡುವ ಸಾಮರ್ಥ್ಯವನ್ನು ಹ್ಹೊಂದಿರುತ್ತದೆ. ಆದರೆ ಶಾಶ್ವತವಾದ ಸ್ವರ್ಗಲೋಕ, ಮೋಕ್ಷ, ಬಿಮ್ಬಾಪರೋಕ್ಷ ಇವುಗಳನ್ನು ಕೊಡುವುದಿಲ್ಲ.  ಮೋಕ್ಷಪ್ರದವಾದ  ಮುಕುಂದನ ಮಂಗಳ ನಾಮ ಉಚ್ಚಾರಣ ಮಾತ್ರದಿನ್ದಲೇ ಘೋರವಾದ  ನರಕದಲ್ಲಿ ಬಿದ್ದಂತಹ ಜೀವರುಗಳನ್ನು ಪಾಪಗಳಿಂದ ಮುಕ್ತರನ್ನಾಗಿ ಮಾಡಿ   ಧರ್ಮಾರ್ಥಗಳನ್ನು ಕೊಟ್ಟು ಸಂರಕ್ಷಣೆಯನ್ನು ಮಾಡುತ್ತದೆ.   ಅನಂತಾನಂತ ಕಾಲಗಳಲ್ಲಿ ಬ್ರಹಾಂಡದಲ್ಲಿ ಸೃಷ್ಟಿಗೆ ಬರುವ ಭಕ್ತ ಜನರಿಗೆ ಪುರುಷಾರ್ಥಗಳನ್ನು ಕೊಡುತ್ತದೆ. ಇದರಿಂದ ಭಗವನ್ನಾಮೋಚ್ಛಾರಣೆಯು  ಏತಾದೃಷವಾದದ್ದು ಎಂದು ಅರ್ಥಮಾಡಿಕೊಳ್ಳಬಹುದು.

ಕಾಮಧೇನು - ದೇವಲೋಕದ ಹಸು ಸುರಭಿಯು ಇಂಗಡಲ ಮಥನ ನಡೆದಾಗ ಉದ್ಭವಿಸಿದ ರತ್ನಗಳಲ್ಲಿ ಒಂದಾಗಿದ್ದು ಕಾಮಧೇನುವೆಂದು ಕರೆಯಲ್ಪಡುತ್ತದೆ.  ಕಾಮಧೇನುವೆಂಬುದು ಚಲಿಸುವಂತಹ ಒಂದು ಪಶು ಮತ್ತು ಕೇಳಿದ್ದನ್ನು ಕೊಡುವಂತಹುದು.  ಅಮರೇಂದ್ರರ ಲೋಕದಲ್ಲಿದ್ದು, ಅಲ್ಲಿರುವವರು ಸೇವೆ ಮಾಡಿ, ಒಲಿಸಿಕೊಂಡಾಗ ಮಾತ್ರ ಕೇಳಿದ್ದನ್ನು ಕೊಡುವಂತಹುದು.  ಅದರಲ್ಲೂ ಕೇಳಿದ್ದನ್ನೆಲ್ಲಾ ಕೊಡುವಷ್ಟು ಶಕ್ತಿಯಿಲ್ಲದಿದ್ದರೂ, ಅತಿ ಶ್ರೇಷ್ಠವಾದವುಗಳನ್ನು ಕೊಡಲಾಗದಿದ್ದರೂ, ತನ್ನದೇ ಮಿತಿಯಲ್ಲಿ ಏನನ್ನಾದರೂ ಕೊಡಬಲ್ಲದು.  ಗೋಮಾತೆಯಾಗಿ ಸುರಭಿಯು ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದಾಗ, ಕ್ಷೀರಾಭಿಷೇಕ ಮಾಡಿದವಳು. 

ಕಾಮಧೇನುವೆಂದು ದೇವಲೋಕದ ಸುರಭಿಗೆ ಮಾತ್ರ ಕರೆಯುವುದಿಲ್ಲ, ವಸಿಷ್ಠ ಮಹರ್ಷಿಗಳ ಗೋಮಾತೆ ನಂದಿನಿಯೂ ಕೂಡ ಕಾಮಧೇನುವೆನಿಸಿಕೊಂಡವಳು.  ವಿಶ್ವಾಮಿತ್ರ ಬ್ರಹ್ಮರ್ಷಿಯಾಗುವುದಕ್ಕೆ ಮುಂಚೆ ವಸಿಷ್ಠರ ಆಶ್ರಮದಲ್ಲಿ ನಂದಿನಿಯೆಂಬ ಕಾಮಧೇನುವಿನಿಂದ ಅತಿಥಿ ಸತ್ಕಾರ ಪಡೆದವನು.  ರಾಜನಾದ ತನಗೇ ಕಾಮಧೇನು ಬೇಕೆಂದು ಬಲವಂತವಾಗಿ ಕಟ್ಟಿ ಎಳೆದೊಯ್ಯಲು ಪ್ರಯತ್ನಿಸಿದನು.  ಸಾಧ್ಯವಾಗದೆ ಸೋತು, ತಪಸ್ಸು ಮಾಡಿ ’ಬ್ರಹ್ಮರ್ಷಿ’ಯಾದನು.  ಹಾಗೆಯೇ ಅಷ್ಟವಸುಗಳೂ ಕೂಡ ಈ ಗೋಮಾತೆಯನ್ನು ಅಪಹರಿಸಲು ಪ್ರಯತ್ನಿಸಿ ಶಾಪಗ್ರಸ್ತರಾದರು.  ಗಂಗಾದೇವಿಯ ಮಕ್ಕಳಾಗಿ ಜನಿಸಿ, ಏಳು ವಸುಗಳು ನೀರು ಪಾಲಾಗಿ ಕೊನೆಗೆ ಅಷ್ಟವಸುವು ಭೀಷ್ಮನಾಗಿ ಜನಿಸಿದನು.

ಜಮದಗ್ನಿ ಮುನಿಯ ಹಸುವಾದ ಕಪಿಲೆಯೂ ಕಾಮಧೇನುವೆಂದೇ ಕರೆಯಲ್ಪಟ್ಟವಳು.  ಭಗವಂತನಿಂದ ಬ್ರಹ್ಮದೇವರಿಗೂ, ಬ್ರಹ್ಮನಿಂದ ಭೃಗುಮುನಿಗೂ, ಭೃಗುಮುನಿಯಿಂದ ಜಮದಗ್ನಿಗೂ ಕೊಡಲ್ಪಟ್ಟವಳು.  ರಾಜಾ ಕಾರ್ತವೀರ್ಯಾರ್ಜುನನು ಜಮದಗ್ನಿ ಮುನಿಯ ಆಶ್ರಮಕ್ಕೆ ಬಂದಾಗ ಕಪಿಲೆಯು ರಾಜನಿಗೆ ಅತಿಥಿ ಸತ್ಕಾರ ಮಾಡಿದಳು.  ರಾಜನು ಗೋಮಾತೆ ತನಗೇ ಬೇಕೆಂದು ಕಟ್ಟಿ, ಸೈನ್ಯದ ಬಲದಿಂದ ಒಯ್ಯಲು ಪ್ರಯತ್ನಿಸಿದಾಗ, ಸಮಸ್ತ ಸೈನ್ಯವನ್ನೂ ನಾಶಗೊಳಿಸಿ, ಅಂತರಿಕ್ಷಕ್ಕೆ ಹಾರಿ ಮರೆಯಾದವಳು.  



ಕಲ್ಪವೃಕ್ಷ - ಕಲ್ಪವೃಕ್ಷವು ಚಲಿಸದಂತಹ ಸ್ಥಾವರ ಪದಾರ್ಥವು.  ಇದು ಸಣ್ಣ ಗಿಡವೂ ಆಗಬಹುದು, ಹೆಮ್ಮರವೂ ಆಗಬಹುದು.   ಈ ಮರದ ಕೆಳಗೆ ಕುಳಿತು ಅದರ ಸುಗಂಧವನ್ನು ಆಘ್ರಾಣಿಸಿದ ಮಾತ್ರಕ್ಕೇ ರೋಗಾದಿಗಳು ಗುಣವಾಗುವುವು, ನೆರಳಲ್ಲಿ ಕುಳಿತರೇ ಪೂರ್ವ ಜನ್ಮದ ಸ್ಮರಣೆ, ಹೀಗೆ ಕಲ್ಪವೃಕ್ಷದ ಮಹಿಮೆ ಅಪಾರವಾಗಿದೆ.  ಆದರೆ ಕಲ್ಪವೃಕ್ಷವೆಂಬ ಮರವು ಬಯಸಿದ್ದನ್ನೆಲ್ಲಾ ಕೊಡುವಷ್ಟು ಸಾಮರ್ಥ್ಯ ಹೊಂದಿದ್ದರೂ ಕೂಡ, ಭಗವಂತನ ನಾಮಸ್ಮರಣೆಯೊಂದೇ ನೀಡಬಲ್ಲಂತಹ ಮುಕ್ತಿ/ಮೋಕ್ಷವೆಂಬ ಅತಿಶಯವಾದ ಹಾಗೂ ಅತ್ಯುತ್ಕೃಷ್ಠವಾದ ಫಲವನ್ನು ನೀಡಲಾರದು.   


ಸತ್ಯಭಾಮದೇವಿಯ ಪ್ರೇರಣೆಯಿಂದ ಶ್ರೀಕೃಷ್ಣನು ದೇವಲೋಕದಲ್ಲಿದ್ದ ಪಾರಿಜಾತ ವೃಕ್ಷವನ್ನು ಕಿತ್ತು ಗರುಡನ ಮೇಲಿಟ್ಟು ಅದನ್ನು ಭೂಲೋಕಕ್ಕೆ ತರುವಾಗ, ದೇವತೆಗಳು  ಯುದ್ಧಕ್ಕೆ ಬರುತ್ತಾರೆ.  ಎಲ್ಲರನ್ನೂ ಸೋಲಿಸಿ ಶ್ರೀಕೃಷ್ಣನು ಹೊರಟಾಗ ಇಂದ್ರನು ಸ್ವಯಂ ಬಂದು ಭಗವಂತನಲ್ಲಿ ಪಾರಿಜಾತ ವೃಕ್ಷವನ್ನು ದೇವಲೋಕದಲ್ಲೇ ಬಿಟ್ಟು ತೆರಳುವಂತೆ ಕೇಳಿಕೊಳ್ಳುತ್ತಾನೆ.  ಈ ಕಲ್ಪವೃಕ್ಷವು ಭೂಲೋಕಕ್ಕೆ ಬಂದರೆ, ಅದರ ನೆರಳಿನಲ್ಲಿ ಕುಳಿತು ಆಲೋಚಿಸಿದ ಕಾಮನೆಗಳೂ ಫಲವಾಗಿ ಬಿಡುವುದರಿಂದ, ದೇವಲೋಕದ ಮಹಿಮೆಯು ತಗ್ಗಿ ಬಿಡುವುದೂ ಮತ್ತು ಜೀವಿಗಳು ಕರ್ಮ ಮಾಡುವುದನ್ನೇ ನಿಲ್ಲಿಸಿ ಬಿಡುವರಾದ್ದರಿಂದಲೇ ತಾನು ಭಗವಂತನ ಜೊತೆಗೆ ಯುದ್ಧ ಮಾಡುವ ಅನಿವಾರ್ಯವಾಯಿತೆಂದು ತಿಳಿಸುತ್ತಾನೆ.  ಶ್ರೀಕೃಷ್ಣನು ತಾನು ಅವತಾರ ಸಮಾಪ್ತಿಯಾಗಿ ವೈಕುಂಠಕ್ಕೆ ಮರಳಿದಾಗ ಕಲ್ಪವೃಕ್ಷವು ಕೂಡ ದೇವಲೋಕಕ್ಕೆ ಮರಳುವುದೆಂದು ತಿಳಿಸುತ್ತಾನೆ.  ಇಷ್ಟು ಮಹಿಮೆಯುಳ್ಳ ಕಲ್ಪವೃಕ್ಷಕ್ಕೂ ಕೂಡ ಮಿತಿಯಿದೆ.  ಆದರೆ ಭಗವಂತನ ಕರುಣೆಗೆ ಯಾವ ಮಿತಿಯೂ ಇಲ್ಲ. 

ಚಿಂತಾಮಣಿ - ಚಿಂತಾಮಣಿಯೆನ್ನುವುದು ಒಂದು ಅನರ್ಘ್ಯ ರತ್ನ.  ಒಂದು ಜಡವಸ್ತುವಾದ ಮಣಿಯ ಒಳಗಿದ್ದು  ಅಚ್ಚರಿಯನ್ನು ಮಾಡಿಸುವವನು ಭಗವಂತನೇ.  ಭಗವಂತ ಮಾಡಿಸದಿದ್ದರೆ, ಜಡವಸ್ತುವಿಗೆ ಇಂತಹ ಮಹಿಮೆಯು ಬರುವುದಿಲ್ಲ.  ಆದರೆ ಇಂತಹ ಅಚ್ಚರಿಯನ್ನು ಮಾಡುವ, ವಿಶೇಷವಾದ ವಸ್ತುಗಳು ಭೂಲೋಕದಲ್ಲಿದ್ದರೆ, ಭೂಮಿಯೇ ಸ್ವರ್ಗವಾಗಿ, ಜನರು ಪುಣ್ಯಕರ್ಮಗಳನ್ನು ಮಾಡುವುದನ್ನೇ ಮರೆತು ಬಿಡುವರೆಂದು ಭಗವಂತನು, ಕಾಮಧೇನು, ಕಲ್ಪತರು, ಚಿಂತಾಮಣಿಗಳೆಂಬ ಕಾಮಿತಾರ್ಥಗಳನ್ನು ಕೊಡುವ ವಿಶಿಷ್ಠ ಗುಣಗಳನ್ನು ಹೊಂದಿರುವವುಗಳನ್ನು ಅಮರಲೋಕದಲ್ಲಿಯೇ ಇಟ್ಟುಬಿಟ್ಟಿದ್ದಾನೆ.  ಸುಲಭದಲ್ಲಿ ಲಭ್ಯವಾಗದಂತೆ ಮಾಡಿದ್ದಾನೆ.  ನರ ಜನ್ಮ ಸಿಕ್ಕಿರುವುದೇ ಭಗವಂತನ ನಾಮಸ್ಮರಣೆ ಮಾಡಿ ಈ ಜನನ-ಮರಣಗಳ ಚಕ್ರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೆಂಬ ಉದ್ದೇಶವನ್ನು ಜನರು ಮರೆಯಬಾರದೆಂದು ಭಗವಂತ ಹೀಗೆ ಮಾಡಿದ್ದಾನೆ.

ಭಗವಂತನು ಕಾಮಧೇನು, ಕಲ್ಪತರು, ಚಿಂತಾಮಣಿಗಳ ಮೂಲಕ ಕಾಮಿತಗಳನ್ನು ಬೇಡಿದವರಿಗೆ ನೀಡುವುದು ಅವನ ಅನಂತ ಲೀಲೆಗಳಿಗೆ ದೃಷ್ಟಾಂತಗಳಿದ್ದಂತೆ.

ಅಮರೇಂದ್ರ ಲೋಕ - ಸ್ವರ್ಗಲೋಕ ಅಥವಾ ದೇವತೆಗಳ ಲೋಕವನ್ನು ಅಮರ ಲೋಕವೆನ್ನುತ್ತಾರೆ.  ಅಮರರು ಎಂದರೆ ಸದಾ ಇರುವವರು, ಸಾವಿಲ್ಲದವರು ಇರುವಂತಹ ಲೋಕ.  ಸಾವಿಲ್ಲದವರು ಎಂದರೆ ಸಂಸಾರದ ಜನನ ಮರಣಗಳಿಂದ ಮುಕ್ತರಾದವರು ಎಂಬರ್ಥವಾಗುತ್ತದೆ.  ಇಂತಹ ಅಮರರಿರುವ ಲೋಕಕ್ಕೆ ಇಂದ್ರನೇ ರಾಜನಾಗಿಹನು.  ಯಾವ ಲೋಕದಲ್ಲಿ ಇಂದ್ರನ ಆಳ್ವಿಕೆಯಿದೆಯೋ, ಎಲ್ಲಿ ಅಮರರು ನೆಲೆಸಿದ್ದಾರೋ, ಅಲ್ಲಿ ಬಯಸಿದ್ದನ್ನು ಕೊಡುವ ಕಾಮಧೇನು, ಕಲ್ಪತರು ಮತ್ತು ಚಿಂತಾಮಣಿಗಳೂ ಕೂಡ ನೆಲೆಸಿವೆ.

ಕಾಮಿತಾರ್ಥಗಳೀವುವು ಸೇವೆ ಮಾಳ್ಪರಿಗೆ - ಕಾಮಿತಾರ್ಥಗಳೆಂದರೆ ಬಯಸಿದ ಭಾಗ್ಯವೆಂದಾಗುತ್ತದೆ.   ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳು ತಮ್ಮ ಸೇವೆಯನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ, ಅಂತಹವರು ಬಯಸಿದ ಇಷ್ಟಾರ್ಥಗಳನ್ನೆಲ್ಲಾ ಕೊಡುತ್ತವೆ.  ಆದರೆ ಸುಮ್ಮನೆ ಕೇಳಿದವರಿಗೆ ಕೊಡುವುದಿಲ್ಲ, ಕಾಮಧೇನು, ಕಲ್ಪತರು, ಚಿಂತಾಮಣಿಗಳನ್ನು ಯಾರು ಓಲೈಸಿ, ಸೇವೆಮಾಡಿ, ಒಲಿಸಿಕೊಳ್ಳುತ್ತಾರೋ, ಅಂತಹವರಿಗೆ ಅವರು ಬಯಸಿದ್ದನ್ನು, ತಮ್ಮದೇ ಆದ ಮಿತಿಯೊಳಗೆ ಮಾತ್ರ ಕೊಡಬಲ್ಲವು ಅಷ್ಟೇ.  ಬಯಸಿದ್ದನ್ನೆಲ್ಲಾ ಎಂದಾಗ ಮಿತಿಯಿಲ್ಲದೆ, ಅಮಿತವಾಗಿ ಕೊಟ್ಟುಬಿಡುವುವೆಂದರ್ಥವಾಗುವುದಿಲ್ಲ. 

ಶ್ರೀಮುಕುಂದನ ಪರಮಮಂಗಳ ನಾಮ - ಭಗವಂತನ ನಾಮವಾದ ಮುಕುಂದನೆಂದರೆ ಮುಕ್ತಿಯನ್ನು ದಯಪಾಲಿಸುವವನು ಎಂದರ್ಥವಾಗುತ್ತದೆ.  ಕಾಮಧೇನು, ಕಲ್ಪತರು, ಚಿಂತಾಮಣಿಗಳು ಬಯಸಿದ್ದನ್ನು ಕೊಟ್ಟರೆ, ಭಗವಂತನಾದ ಮುಕುಂದನನ್ನು ಸ್ಮರಿಸಿದರೆ, ಅವನು ಅತ್ಯುತ್ತಮವಾದ ಮುಕ್ತಿಯನ್ನೇ ದಯಪಾಲಿಸಿ ಬಿಡುವನು.  ನಂಬಿದ ಭಕ್ತರನ್ನು ಸದಾ ಪೊರೆಯುವವನು, ಉದ್ಧರಿಸುವವನು, ತನ್ನ ತನುವಿನಲ್ಲೇ ಸ್ಥಳಕೊಟ್ಟು ಪಾಲಿಸುವವನು ಮುಕುಂದನಾಮಕ ಭಗವಂತನು.  ಭಗವಂತನ ನಾಮ ಸ್ಮರಣೆ ಮಾಡುವುದೆಂದರೆ, ಮನಸ್ಸಿನಲ್ಲಿ ಭಗವಂತನನ್ನು ಸ್ಮರಿಸಿಕೊಳ್ಳುತ್ತಾ, ನಾಲಿಗೆಯಲ್ಲಿ ಅವನ ನಾಮಗಳನ್ನು ಉಚ್ಛರಿಸುವುದು ಎಂದರ್ಥವಾಗುತ್ತದೆ. 

ಶ್ರೀ ಕುಲಶೇಖರ ಆಳ್ವಾರ್ ರವರ ರಚನೆಯಾದ "ಮುಕುಂದಮಾಲಾ" ದಲ್ಲಿ  

ಶ್ರೀವಲ್ಲಭೇತಿ ವರದೇತಿ ದಯಾಪರೇತಿ
ಭಕ್ತಪ್ರಿಯೇತಿ ಭವಲುಂಠನಕೋವಿದೇತಿ
ನಾಥೇತಿ ನಾಗಶಯನೇತಿ ಜಗನ್ನಿವಾಸೇತಿ
ಆಲಾಪನಂ ಪ್ರತಿಪದಂ ಕುರು ಮಾಂ ಮುಕುಂದ || - ತನ್ನನ್ನೇ ಸ್ಮರಿಸುವವರಿಗೆ ಭಗವಂತ ತನ್ನ ನಾಮ ಸ್ಮರಣೆಯನ್ನೇ ದಯಪಾಲಿಸುತ್ತಾನೆ, ಸಕಲ ಇಷ್ಟಾರ್ಥಗಳನ್ನೂ ನೆರವೇರಿಸುವ ನಿಧಿಯಂತಿದ್ದಾನೆ.  ಭಕ್ತಪ್ರಿಯನಾಗಿದ್ದಾನೆ, ಸಂಸಾರವೆಂಬ ದುಃಖವನ್ನು ನಾಶಪಡಿಸುವ ಜಗನ್ನಾಥನಾಗಿದ್ದಾನೆ  ಮತ್ತು ಫಣಿಶಾಯಿಯಾಗಿರುವ ಭಗವಂತನು ಮೋಕ್ಷಪ್ರದನಾಗುತ್ತಾನೆ ಎಂದಿದ್ದಾರೆ.

ಕಾಮಧೇನು, ಕಲ್ಪತರು, ಚಿಂತಾಮಣಿಗಳೆಲ್ಲಾ ಅಮರಲೋಕದಲ್ಲಿರುವವರಿಗೆ ಮಾತ್ರ ಕಾಮಿತಾರ್ಥಗಳನ್ನು ಕೊಡಬಲ್ಲವು, ಆದರೆ ಶ್ರೀಮುಕುಂದನ ಪರಮಮಂಗಳವಾದ ನಾಮಸ್ಮರಣೆ ಮಾಡಿದರೆ ಸ್ವರ್ಗಲೋಕ, ಮರ್ತ್ಯ್ಸಲೋಕಗಳಷ್ಟೇ ಅಲ್ಲದೆ ನರಕಲೋಕದಲ್ಲಿರುವವರನ್ನೂ ಕೂಡ ಉದ್ಧರಿಸಿ, ಅವರಿಗೂ ಸ್ವರ್ಗ, ಮೋಕ್ಷಾದಿಗಳೆಂಬ ಭಾಗ್ಯವನ್ನು ಕೊಡಬಲ್ಲದು.

ನರಕಸ್ಥರನು ಸಲಹಿತು -  ಭಗವಂತನ ಪುಣ್ಯ ನಾಮಸ್ಮರಣೆಯು ನರಕದಲ್ಲಿರುವವರನ್ನೂ ಸಲಹುದು ಎಂಬುದಕ್ಕೆ ಪೂರಕವಾಗಿ ಒಂದು ಕಥೆಯಿದೆ.  ನಾರದರು ಒಮ್ಮೆ ಭಗವಂತನ ಮುಂದೆ ನರಕವನ್ನು ನೋಡಬೇಕೆಂಬ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದರು.  ಭಗವಂತನ ಅನುಜ್ಞೆಯನ್ನು ಪಡೆದುಕೊಂಡು ಯಮಲೋಕಕ್ಕೆ ಬಂದರು.  ಅಲ್ಲಿಯ ವಾಸಿಗಳು ಯಾತನೆ ಪಡುವುದನ್ನು ಕಂಡರು ಮತ್ತು ಆಶ್ಚರ್ಯ ಪಟ್ಟರು.  "ನಾರಾಯಣೇತಿ ಮಂತ್ರೋಸ್ತಿ ವಾಗಸ್ತಿ ವಶವರ್ತಿನೀ | ತಥಾಪಿ ನರಕೇ ಘೋರೇ ಪತಂತೀತ್ಯೇತದದ್ಭುತಮ್" ಎಂಬ ಯಮನ ಮಾತುಗಳನ್ನು ಕೇಳಿ ನರಕವಾಸಿಗಳಿಗಾಗಿ ಮರುಕ ಪಟ್ಟರು.  ನಾರಾಯಣ ಎಂಬ ಪರಮ ಪವಿತ್ರವಾದ ಮಂತ್ರವಿದೆ ಮತ್ತು ನುಡಿಯಲು ತನ್ನದೇ ಸ್ವಾಧೀನದಲ್ಲಿರುವ ನಾಲಿಗೆಯಿದ್ದರೂ, ಮಂತ್ರವನ್ನು ಜಪಿಸದೆ ನರಕವಾಸಿಗಳಾಗುತ್ತಾರೆಂದು ಚಕಿತರಾದರು.  ಅವರಿಗೆ ತೀವ್ರವಾದ ದುಃಖದ ಜೊತೆಗೆ ಅತಿಯಾದ ವಿಷಾದವೂ ಆಯಿತು.  ಅವರು ನಾರಾಯಣ ನಾಮಸ್ಮರಣೆಯನ್ನು ಎತ್ತರದ ಧ್ವನಿಯಲ್ಲಿ ಮಾಡಲು ಪ್ರಾರಂಭಿಸಿದರು.  ಭಗವಂತನ ನಾಮಾಮೃತದ ಶ್ರವಣ ಮಾಡಿದ ನರಕವಾಸಿಗಳು, ತಮ್ಮ ಪಾಪ ಕಳೆದುಕೊಂಡರು ಮತ್ತು ನಾರದರನ್ನು ಸ್ತುತಿಸುತ್ತಾ ಪುಷ್ಪಕವಿಮಾನದಲ್ಲಿ ಸ್ವರ್ಗಕ್ಕೆ ತೆರಳಿದರು.  ಶ್ರೀಹರಿಯ ನಾಮಸ್ಮರಣೆಯೊಂದೇ ಸಾಕು ಕಲಿಯುಗದಲ್ಲಿ ನರಕವನ್ನು ತಪ್ಪಿಸಲು ಎಂಬುದನ್ನು ಶ್ರೀಪುರಂದರದಾಸರು "ಸ್ಮರಣೆಯೊಂದೇ ಸಾಲದೆ" ಎಂಬ ಕೃತಿಯಲ್ಲಿ ಹಾಡಿದ್ದಾರೆ.

ಶ್ರೀ ವಿಷ್ಣು ಸಹಸ್ರನಾಮದ ಪೂರ್ವ ಪೀಠಿಕೆಯಲ್ಲಿ | ಜಗತ್ಪ್ರಭುಂ ದೇವದೇವಮನನ್ತಂ ಪುರುಷೋತ್ತಮಮ್ | ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || - ಭಗವಂತನ ಸ್ತುತಿ, ಧ್ಯಾನ ಮುಂತಾದವುಗಳನ್ನು ಯಾರು ನಿರಂತರವಾಗಿ ಮಾಡುತ್ತಿರುತ್ತಾರೋ ಅವರಿಗೆ ಮೃತ್ಯು ಭಯವೂ ಕಾಡುವುದಿಲ್ಲ ಎಂದಿದ್ದಾರೆ.  ಹಾಗೇ ಫಲಶೃತಿಯ ಕೊನೆಯ ಶ್ಲೋಕದಲ್ಲಿ "ಸಂಕೀರ್ತ್ಯ ನಾರಾಯಣ ಶಬ್ದಮಾತ್ರಂ ವಿಮುಕ್ತ ದುಃಖಾ ಸುಖಿನೋ ಭವಂತಿ" - ನಾರಾಯಣ ಎಂಬ ಶಬ್ದವನ್ನು ಉಚ್ಛಾರಣೆ ಮಾಡುವುದರಿಂದ ಮಾತ್ರವೇ ಸಮಸ್ತ ದುಃಖಗಳೂ ಪರಿಹಾರವಾಗಿ ಸುಖಿಯಾಗುತ್ತಾರೆ ಎಂದಿದ್ದಾರೆ.  ಭಗವಂತನ ನಾಮಸ್ಮರಣೆಯ ಮಹಿಮೆಯಿದು.

ಶ್ರೀಕುಲಶೇಖರರು "ಮುಕುಂದಮಾಲ"ದಲ್ಲಿ
ಮಾಭೀಃ ಮಂದಮನೋ ವಿಚಿಂತ್ಯ ಬಹುಧಾ ಯಾಮೀಶ್ಚಿರಂ ಯಾತನಾಃ
ನಾಮೀ ನಃ ಪ್ರಭವಂತಿ ಪಾಪರಿಪವಃ, ಸ್ವಾಮೀ ನನು ಶ್ರೀಧರಃ |
ಆಲಸ್ಯಂ ವ್ಯಪನೀಯ ಭಕ್ತಿಸುಲಭಂ ಧ್ಯಾಯಸ್ವ ನಾರಾಯಣಂ
ಲೋಕಸ್ಯ ವ್ಯಸನಾಪನೋದನಕರೋ ದಾಸಸ್ಯ ಕಿಂ ನ ಕ್ಷಮಃ || - ಮೂಢ ಮನವೇ ನಾನಾಬಗೆಯ ನರಕದ ಯಾತನೆಗಳನ್ನು ನೆನೆದು ಭಯಪಡಬೇಡ.  ಶ್ರೀಹರಿಯೇ ಸ್ವಾಮಿ ಎಂದು ದೃಢವಾಗಿ ನಂಬಿದವರಿಗೆ ಪಾಪವೆಂಬ ಶತೃಗಳೂ ಏನೂ ಮಾಡಲಾರವು.  ಆದ್ದರಿಂದ ಆಲಸ್ಯ ತೊರೆದು ಭಕ್ತಿಗೆ ಸುಲಭವಾಗಿ ಒಲಿಯುವ ನಾರಾಯಣನನ್ನು ಸದಾ ಸ್ಮರಿಸು ಎಂದಿದ್ದಾರೆ.

ಶ್ರೀವಾದಿರಾಜರು "ಮಾತುಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ"  ಎಂದಿದ್ದಾರೆ.  ತಮ್ಮ ಇನ್ನೊಂದು ಕೃತಿ "ಹರಿ ನಾರಾಯಣ ಹರಿ ನಾರಾಯಣ ನಾಮಂ ಜಯ" ದಲ್ಲಿ "ನಾರಾಯಣ ನಾರದಪ್ರಿಯ ನಾರಾಯಣ ನರಕಾಂತಕ" ಎನ್ನುತ್ತಾ ನಾರಾಯಣನು ನರಕಕ್ಕೆ ಅಂತಕನು ಎಂದು ಸ್ತುತಿಸಿದ್ದಾರೆ.

ಪಾಮರರ ಪಂಡಿತರೆನಿಸುವುದು - ಭಗವಂತನ ಮಂಗಳಕರವಾದ ಪುಣ್ಯನಾಮಗಳನ್ನು ಸದಾ ಸ್ಮರಿಸುವುದರಿಂದ ಪಾಮರರೂ ಕೂಡ ಪಂಡಿತರಾಗಿ ಮಾರ್ಪಾಡಾಗುತ್ತಾರೆ.  ವಾಲ್ಮೀಕಿಯು ’ಮರ’ ಎಂಬ ಶಬ್ದವನ್ನು ಉಚ್ಛರಿಸುತ್ತಿರುವಾಗ ಅದು ’ರಾಮ’ ಶಬ್ದವಾಗಿ ಅವರಿಗೆ ಕೇಳಿಸಿ ಪಾಮರರಾಗಿದ್ದ ಅವರು ಪಂಡಿತರಾದ ವಾಲ್ಮೀಕಿಯಾದರು.  ಮಹಾಕಾವ್ಯವಾದ ರಾಮಾಯಣದ ರಚನೆಯಾಯಿತು.   ಕಾಮಧೇನು ಒಂದು ಹಸು, ಕಲ್ಪವೃಕ್ಷ ಒಂದು ಮರ ಮತ್ತು ಚಿಂತಾಮಣಿ ಒಂದು ಕಲ್ಲು.  ಹೀಗೆ ಪಶು, ಮರ ಮತ್ತು ಕಲ್ಲು ಬೇಡಿದ ಇಷ್ಟಾರ್ಥಗಳನ್ನು ನೀಡುವುದೆಂದರೆ, ಅದು ಭಗವಂತನ ಅಚಿಂತ್ಯ ಲೀಲೆಯೆಂದೇ ತಿಳಿಯಬೇಕು.  ಇವುಗಳಿಗೇ ಇಷ್ಟು ಶಕ್ತಿಯಿದ್ದರೆ, ಭಗವಂತನ ರೋಮರೋಮಗಳಲ್ಲೂ ನೆಲೆಸಿರುವ ಅವನ ನಾಮಗಳಿಗೆಷ್ಟು ಮಹಿಮೆಯಿದೆ ಎಂಬುದನ್ನು ಅರಿಯಬೇಕು.  ಭಗವಂತನು ಭಕ್ತಿ ಹಾಗೂ ಶ್ರದ್ಧೆಯಿಂದ ಸ್ಮರಣೆ ಮಾಡಿದ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನೂ ಕೊಟ್ಟು ಸಲಹುತ್ತಾನೆ.  ಭಗವಂತನ ನಾಮಸ್ಮರಣೆಯನ್ನು ಸದಾ ಮಾಡುವ ಮನಸ್ಸು ಮಲಿನಗೊಳ್ಳಲಾಗಲೀ, ವಿಷಯಾಸಕ್ತಿಗಳ ಬಂಧನಕ್ಕೆ ಸಿಲುಕುವುದಾಗಲೀ ಆಗುವುದೇ ಇಲ್ಲ.

ಶ್ರೀ ಜಗನ್ನಾಥ ದಾಸರು ತಮ್ಮ ತತ್ವ ಸುವ್ವಾಲಿ
ಮನದಲ್ಲಿ ಹರಿಯ ಚಿಂತನೆ ಉಳ್ಳ ನರನಿಗೆ
ಮನೆಯಾದರೇನು ವನವೇನು | ವನವೇನು ಸತತ ದು-
ರ್ಜನರ ಸಂಗದೊಳು ಇರಲೇನು || - ನಿರಂತರವಾಗಿ ಹರಿಸ್ಮರಣೆ ಮಾಡುವ ಭಕ್ತನು ವಿಷಯಭೋಗ ಮಾಡಿದರೂ,  ಲಂಪಟರ ಸಂಗದಲ್ಲಿದ್ದರೂ, ಯಾವ ಹಾನಿಯೂ ಆಗುವುದಿಲ್ಲ.  ಕಾಮಾದಿಗಳ ವಶವಾದವನಿಗೆ ಅರಣ್ಯದಲ್ಲಿದ್ದರೂ ಸಂಸಾರದ ಭಯವು ತಪ್ಪುವುದಿಲ್ಲ.  ಆದರೆ ಇಂದ್ರಿಯಗಳ ಜಯಿಸಿ, ಭಗವಂತನ ಪಾದದಲ್ಲಿ ಮನಸ್ಸು ನಿಲ್ಲಿಸಿ, ನಾಮಸ್ಮರಣೆ ಮಾಡುವವನಿಗೆ ಗೃಹಸ್ಥಾಶ್ರಮವೂ ಕೂಡ ಯಾವ ಭಯವನ್ನೂ ಉಂಟುಮಾಡುವುದಿಲ್ಲ ಎನ್ನುತ್ತಾ ನಾಮಸ್ಮರಣೆಯ ಮಹತ್ವವನ್ನು ತಿಳಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ

Wednesday, April 16, 2014

ಕರುಣಾ ಸಂಧಿ - ೨೦ ನೇ ಪದ್ಯ


ಅಂಗುಟಾಗ್ರದಿ ಜನಿಸಿದಮರತ-
ರಂಗಿಣಿಯು ಲೋಕತ್ರಯಗಳಘ
ಹಿಂಗಿಸುವಳವ್ಯಾಕೃತಾಕಾಶಾಂತ ವ್ಯಾಪಿಸಿದ |
ಇಂಗಡಲ ಮಗಳೊಡೆಯನಂಗೋ-
ಪಾಂಗಗಳಲಿಪ್ಪಮಲನಂತ ಸು-
ಮಂಗಳಪ್ರದ ನಾಮ ಪಾವನ ಮಾಳ್ಪುದೇನರಿದು ?  ||೨೦||


ಪ್ರತಿಪದಾರ್ಥ :  ಅಂಗುಟಾಗ್ರದಿ - ಭಗವಂತನ ಪಾದಾಂಗುಷ್ಠದ ತುದಿಯಿಂದ, ಜನಿಸಿದ - ಉದ್ಭವಿಸಿದ, ಅಮರ ತರಂಗಿಣಿಯು - ದೇವತಾನದಿಯಾದ ಭಾಗೀರಥಿ, ಲೋಕತ್ರಯಗಳಘ - ಮೂರು ಲೋಕದ ಜೀವಿಗಳ ಪಾಪಗಳನ್ನೂ ಪರಿಹರಿಸುವಳು, ಅವ್ಯಾಕೃತ ಆಕಾಶ - ನಮ್ಮ ಕಣ್ಣಿಗೆ ಕಾಣಿಸುವ ಆಕಾಶದ ಆಚೆಗೆ ಇರುವ ಆಕಾಶದ, ಅಂತ - ಕೊನೆಯಲ್ಲಿ, ವ್ಯಾಪಿಸಿದ - ಹಬ್ಬಿಕೊಂಡಿರುವ, ಇಂಗಡಲಮಗಳ - ಕ್ಷೀರಸಮುದ್ರ ತನಯೆಯಾದ ಮಹಾಲಕ್ಷ್ಮಿಯ, ಒಡೆಯನ - ಲಕ್ಷ್ಮೀ ಪತಿಯಾದ ನಾರಾಯಣನ, ಅಂಗೋಪಾಂಗಗಳಲಿಪ್ಪ - ಕರಣೋಪಕರಣಗಳಲ್ಲಿ, ಅಮಲ - ನಿರ್ಮಲವಾದ, ಅನಂತ - ಯಾರೂ ಸಾಟಿಯಿಲ್ಲದ, ಸುಮಂಗಳಪ್ರದನಾದ - ಸನ್ಮಂಗಳವನ್ನುಂಟು ಮಾಡುವ ಭಗವದ್ರೂಪಗಳ ನಾಮಗಳು, ಪಾವನ ಮಾಳ್ಪುದು - ಸಕಲ ಪಾಪಗಳನ್ನು ಪರಿಹರಿಸಿ ಪಾವನ ಮಾಡುವುದು, ಏನರಿದು - ಇದರಲ್ಲೇನು ಆಶ್ಚರ್ಯವಿದೆ.
ಪರಮಾತ್ಮನು  ತ್ರಿವಿಕ್ರಮನಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ತನ್ನ  ಎಡಗಾಲ ಹೆಬ್ಬೆರಳಿನ ಉಗುರಿನ ಕೊನೆ ಬ್ರಹ್ಮಾಂಡದ ಕರ್ಪರಕ್ಕೆ ತಗುಲಿಸಿದಾಗ, ಅದು ಒಡೆದು ಅವ್ಯಾಕೃತಾಕಾಶದಿಂದ ಜಲಧಾರೆ ಹೊರಟು ದೇವಗಂಗೆ, ಅಮರ ತರಂಗಿಣಿ, ವಿಷ್ಣುಪದಿ ಎನಿಸಿ, ಸ್ವರ್ಗ ಭೂ ಪಾತಾಳ ಲೋಕಗಳ ಜನರ ಪಾಪ ಪರಿಹಾರ ಮಾಡಿತು.  ಇಂತಹ ಪವಿತ್ರ ಗಂಗೆಯನ್ನು ತಂದ ಪರಮಾತ್ಮನ ಅಂಗಗಳಲ್ಲಿ ಉಗುರು, ಕೂದಲು ಮುಂತಾದ ಉಪಾಂಗಗಳಲ್ಲಿ ವ್ಯಾಪಿಸಿರುವ, ತನ್ನಿಂದ ಅಭಿನ್ನ ರೂಪಗಳ ಮಹಿಮೆಯನ್ನು ಬಣ್ಣಿಸುವ ಪರಮಾತ್ಮನ ನಾಮವು ಪಾಪವೇ  ಪರಿಹಾರ ಮಾಡುತ್ತದೆ. ಹರಿಯ ಕಾಲಬೆರಳ ಉಗುರಿನಿಂದ ಬಂದ ನದಿಯ ನೀರಿಗೇ ಇಷ್ಟು ಮಹಿಮೆ ಇದ್ದ ಮೇಲೆ, ಅವನಿಗೇ ಇನ್ನೆಷ್ಟು ಮಹಿಮೆ ಇರಬೇಡ.  ಕರಚರಣಾದಿ ಏಕಾದಶೇನ್ದ್ರಿಯಗಳಿಗೆ ನಿಯಾಮಕನಾದ, ಪಾರತನ್ತ್ರಾದಿ ದೋಷಗಳಿಂದ ನಿರ್ಮಲನಾದ, ಆದ್ಯತಶೂನ್ಯನಾದ, ಮಹಿಮೋಪೇತನಾದ, ಸಜ್ಜನರಿಗೆ ಮೋಕ್ಷ ಕೊಡುವ ಆ ಪರಮಾತ್ಮನ ಧ್ಯಾನಾನುಸಂಧಾನದಿಂದ ಉಚ್ಚರಿಸತಕ್ಕ ನಾಮವು ಸರ್ವದೋಷಗಳಿ೦ದ ಪವಿತ್ರರನ್ನಾಗಿ ಮಾಡುತ್ತದೆ.

ಅಂಗುಟಾಗ್ರದಿ ಜನಿಸಿದ ಅಮರ ತರಂಗಿಣಿ - ಪಂಚಭೂತಗಳ ಸಮ್ಮಿಶ್ರಣದಿಂದಾದ ಭೂಮಂಡಲದ ಕವಚವು ಅತಿ ಕಾಠಿಣ್ಯಕರವಾದ ಲಕ್ಷಣವುಳ್ಳದ್ದು.  ನಮ್ಮ ಕಣ್ಣಿಗೆ ಕಾಣುವುದು ಪಂಚಭೂತಗಳಲ್ಲೊಂದಾದ ಮಣ್ಣು ಮಾತ್ರವು.  ಆದರೆ ನಮ್ಮ ಕಣ್ಣಿಗೆ ಕಾಣದ ನೂರಾರು ಕೋಟಿ ಯೋಜನದ ದೂರದಲ್ಲಿರುವುದು ಶುದ್ಧವಾದ ಕವಚವು.  ಭಗವಂತ ವಾಮನನವತಾರವೆತ್ತಿ ಬಲಿಯ ಮನೆಗೆ ಬಂದು ೩ ಪಾದ ಭೂಮಿ ದಾನ ಬೇಡಿದ.  ಭಗವಂತನೇ ಬಂದಿದ್ದರೂ ತಾನು ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂದು ಬಲಿ ಚಕ್ರವರ್ತಿ ದಾನ ಕೊಡಲು ಮುಂದಾದಾಗ, ಭಗವಂತ ತನ್ನ ಒಂದು ಪುಟ್ಟ ಪಾದದಿಂದ ಇಡೀ ಭೂಮಂಡಲವನ್ನೇ ಅಳೆದನು.  ಎರಡನೆಯ ಪಾದವನ್ನು ಆಕಾಶದತ್ತ ಎತ್ತಿದಾಗ, ಪುಟ್ಟ ಪಾದವು ಬೆಳೆಯಲಾರಂಭಿಸಿತು.  ಬೆಳೆಯುತ್ತಾ ಬೆಳೆಯುತ್ತಾ ಎಲ್ಲಾ ಲೋಕಗಳನ್ನೂ  ಮೀರಿ ಬೆಳೆಯುತ್ತದೆ.  ಭಾಗವತ ಅಷ್ಟಮಸ್ಕಂದದಲ್ಲಿ ಬರುವ ಬಲಿ ಚಕ್ರವರ್ತಿಯ ಕಥೆಯಲ್ಲಿ ಭಗವಂತನ ಪಾದ ಬೆಳೆದುದನ್ನು ವಿವರಿಸಲಾಗಿದೆ. 

ವಾಮನನಾಗಿ ಬಂದ ಪುಟ್ಟ ಬಾಲಕ ತ್ರಿವಿಕ್ರಮರೂಪಿಯಾಗಿ ಬೆಳೆಯಲಾರಂಭಿಸಿದಾಗ ಭಗವಂತನ ಆ ವಿರಾಟ್ ದೇಹದಲ್ಲಿ ಭೂಮಿ, ಆಕಾಶ, ದಿಕ್ಕುಗಳು, ಅತಲಾದಿ ಏಳು ಲೋಕಗಳೂ, ಏಳು ಸಮುದ್ರಗಳೂ, ದೇವಮುನಿ, ಮನುಷ್ಯಾದಿ ಸರ್ವಸ್ವವೂ ಕಾಣಿಸಿಕೊಂಡವು.  ಬಲಿಚಕ್ರವರ್ತಿಯು ಭಗವಂತನ ಶರೀರದ ಪ್ರತೀ ಅವಯವದಲ್ಲೂ ಗುಣತ್ರಯಾತ್ಮಕವಾದ ಸಕಲ ಪ್ರಪಂಚವನ್ನೂ ಕಂಡನು.  ಬೆಳೆಯುತ್ತಲೇ ಹೋದ ಭಗವಂತನ ಶರೀರ ಹಾಗೂ ಪಾದವು ಮೇಲೆ ಹೋಗುತ್ತಾ ಮಹರ್ಲೋಕ, ಜನೋಲೋಕ, ತಪೋಲೋಕಗಳನ್ನೆಲ್ಲಾ ದಾಟಿ ಸತ್ಯಲೋಕವನ್ನೂ ಆಕ್ರಮಿಸಿಕೊಂಡುಬಿಟ್ಟಿತು.   ಹೀಗೆ ಬೆಳೆಯುತ್ತಾ ಸಾಗಿದ ಪಾದದ ಹೆಬ್ಬೆರಳ ಉಗುರಿನ ತುದಿ ಮಾತ್ರ ತಲುಪಿ ಕಠಿಣವಾದ ಭೂಮಂಡಲದ ಕವಚ ಬಿರುಕುಬಿಟ್ಟಿತು.  ಬ್ರಹ್ಮಾಂಡದ ಹೊರಗಿನ ಜಲಾವರಣದ ಶುದ್ದ ಜಲವು ಬಿರುಕಿನಿಂದ ಒಳಗೆ ಸುರಿಯಿತು.  ಶುದ್ಧಜಲವನ್ನು ಕಂಡ ಬ್ರಹ್ಮದೇವರು ಅದನ್ನು ಕಮಂಡಲುವಿನಲ್ಲಿ ಸಂಗ್ರಹಿಸಿ, ಭಗವಂತನ ಪಾದವನ್ನು ತೊಳೆದರು.  ಭಗವಂತನ ಉಗುರಿನಿಂದ ಉದ್ಭವಿಸಿದ ಶುದ್ಧಜಲವು, ಭಗವಂತನ ಪಾದ ತೊಳೆಯಲುಪಯೋಗಿಸಲ್ಪಟ್ಟಿದ್ದರಿಂದ, ಪವಿತ್ರಜಲವಾಯಿತು, ಗಂಗೆಯಾದಳು.  ಅಂಗುಟಾದ್ರಿಯಲ್ಲಿ ಜನಿಸಿದವಳಾದ್ದರಿಂದ ದೇವಗಂಗೆಯಾದಳು.  ಅನೇಕ ಸಾವಿರ ವರ್ಷಗಳ ನಂತರ ಸಪ್ತಋಷಿ ಮಂಡಲಕ್ಕೆ ಹೋಗಿ, ಅಲ್ಲಿಂದ ಚಂದ್ರ ಮಂಡಲಕ್ಕೆ ಬಂದಳು.  ಅಲ್ಲಿ ಸೂರ್ಯನ ಕಿರಣಗಳನ್ನು ನೇರವಾಗಿ ಸ್ವೀಕರಿಸಿ, ಇನ್ನೂ ಹೆಚ್ಚು ಪವಿತ್ರಳಾಗಿ, ಹಿಮಾಲಯದ ಮೂಲಕ ಪೃಥ್ವಿಗೆ ಹರಿದು ಬಂದಳು.  ಮುಂದೆ ಅನೇಕ ಸಾವಿರ ವರ್ಷಗಳ ನಂತರ ದೇವತೆಗಳು ಅವಳನ್ನು ಮತ್ತೆ ದೇವಲೋಕಕ್ಕೇ ಕರೆಸಿಕೊಂಡರು.  ಹೀಗೆ ಅಮರಲೋಕಕ್ಕೆ ಮರಳಿ ತೆರಳಿದ ಗಂಗೆಯು ಅಮರತರಂಗಿಣಿಯಾದಳು. 

ಗಂಗೆಯುದ್ಭವವನ್ನು ಶ್ರೀ ಜಗನ್ನಾಥ ದಾಸರು ತಮ್ಮ "ಭಾಗೀರಥ್ಯಾದಿ ನದಿಗಳ ತಾರತಮ್ಯ" ಎಂಬ ಪದದಲ್ಲಿ
ಹರಿಪಾದನಖದ ಸಂಸ್ಪರ್ಶ ಮಾತ್ರದಿಂದಲಿ
ಸುರತರಂಗಿಣಿ ಶ್ರೇಷ್ಠಳೆನಿಸುವಳು ನದಿಗಳೊಳು
ದಶರಥಾಂಗನದಾ ವಿಧೃತಪಾಣಿ ಮಾಧವನು, ದೊರೆಮೆನಿಪನಾ ತೀರ್ಥಕೆ.. || - ಶ್ರೀಹರಿಯ ನಖ ಸ್ಪರ್ಶದಿಂದ ಬಂದವಳಾದ ಗಂಗೆಯಲ್ಲಿ ಮಾಧವನು ಸ್ವತಃ ನೆಲೆಸಿದ್ದಾನೆ ಎನ್ನುತ್ತಾ ಗಂಗೆಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.
ಗಂಗೆಯನ್ನು ಜಾಹ್ನವಿಯೆಂದು ದಾಸರಾಯರು ತಮ್ಮ ಇನ್ನೊಂದು ಕೀರ್ತನೆ  "ಜನನಿ ಜಾಹ್ನವಿ ಜಗತ್ರಯ ಪಾವನಿ | ಪ್ರಣತಕಾಮದೆ ಪದ್ಮಜಾಂಡ ಸಂಭೂತೆ " ಯಲ್ಲಿ "ಕಾರುಣಿಕ ಬಹಿರಾವರಣದಿಂದ ನೀ ಪೊರಟು"  ಎಂದು ಗಂಗೆ ವಿಷ್ಣು ಪಾದೋದ್ಭವೆ ಎಂಬುದನ್ನು ತಿಳಿಸುತ್ತಾರೆ.  ಮುಂದುವರೆಯುತ್ತಾ  "ಸೃಷ್ಟೀ ಶ ಪದಜಾತೆ ವಿಶ್ವಮಂಗಳ ಮಹೋತ್ಕೃಷ್ಟ ತೀರ್ಥಗಳೊಳುತ್ತಮಳೆನಿಸುವೇ" ಎನ್ನುತ್ತಾ ಗಂಗೆಯ ಶ್ರೇಷ್ಠತೆಯನ್ನು ತಿಳಿಸಿದ್ದಾರೆ.

ಗಂಗೆಯ ಶ್ರೇಷ್ಠತೆಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ನದೀ ತಾರತಮ್ಯ ಸ್ತೋತ್ರದಲ್ಲಿ "ವಿಷ್ಣು ಪಾದಾಬ್ಜ ಸಂಭೂತಾ ಗಂಗಾ ಸರ್ವಾಧಿಕಾ ಮತಾ" - ಗಂಗೆ ನದಿಗಳಲ್ಲೆಲ್ಲಾ ಅತಿ ಪಾವನಳು, ಶ್ರೇಷ್ಠಳೇಕೆಂದರೆ ಅವಳು ಶ್ರೀಹರಿಯ ಪಾದಕಮಲದಿಂದ ಉದ್ಭವಿಸಿದವಳು ಎಂದು ಕೊಂಡಾಡಿದ್ದಾರೆ.  


ಲೋಕತ್ರಯಗಳಘ ಹಿಂಗಿಸುವಳು - ಗಂಗೆಯನ್ನುಳಿದು ಇತರ ನದಿಗಳೆಲ್ಲಾ ಭೂಲೋಕದಲ್ಲಿ ಮಾತ್ರ ಹರಿಯುತ್ತವೆ, ಆದರೆ ಗಂಗೆ ಮೂರೂ ಲೋಕಗಳಲ್ಲೂ ಸಂಚರಿಸುವವಳಾದ್ದರಿಂದಲೇ ಅವಳು ಶ್ರೇಷ್ಠಳಾಗಿದ್ದಾಳೆ. ಸೂರ್ಯ ವಂಶದ ರಾಜನಾದ ಭಗೀರಥನು ತನ್ನ ತಂದೆಯ ತಂದೆಯರಾದ (ಪೂರ್ವಜರಾದ) ಸಗರ ಕುಮಾರರ ಮುಕ್ತಿಗಾಗಿ ಗಂಗೆಯನ್ನು ಕುರಿತು ತಪಸ್ಸು ಮಾಡಿ ಭೂಲೋಕಕ್ಕೆ ಕರೆದುತಂದನು.  ಅರವತ್ತು ಸಾವಿರ ಮಂದಿ ಸಗರ ಕುಮಾರರು ಕಪಿಲ ಮುನಿಯ ಶಾಪಾಗ್ನಿಯಿಂದ ಸುಟ್ಟು ಬೂದಿಯಾಗಿದ್ದರು.  ಭಗೀರಥನ ತಪಸ್ಸಿನಿಂದಾಗಿ ಭೂಲೋಕಕ್ಕೆ ಇಳಿದ ಗಂಗೆಯು ನಂತರ ಪಾತಾಳದಲ್ಲಿಯೂ ಹರಿದು ತ್ರಿಪಥಗಾ ಎನಿಸಿದಳು.  ದೇವಲೋಕದಲ್ಲಿ ಮಂದಾಕಿನಿಯೆಂದೂ, ಭೂಲೋಕದಲ್ಲಿ ಭಾಗೀರಥಿಯೆಂದೂ ಮತ್ತು ಪಾತಾಳದಲ್ಲಿ ಭೋಗವತೀಯೆಂಬ ಹೆಸರುಗಳಿಂದ ತ್ರಿಲೋಕಪಾವನೆಯಾಗಿ, ಲೋಕತ್ರಯಗಳ ಅಘವನ್ನು ಹಿಂಗಿಸುವಳು.

ಶ್ರೀ ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಗಂಗೆಯ ಸ್ತೋತ್ರವನ್ನು ೮ ಶ್ಲೋಕಗಳಿಂದ ಮಾಡಿದ್ದಾರೆ.  ಅದರಲ್ಲಿ
ತ್ವಂ ದೀನೇಷು ದಯಾವತೀತಿ ವಿದಿತಂ ಯದ್ಬ್ರಹ್ಮಹಸ್ತಾಶ್ರಯಂ
ಪ್ರಾಪ್ತಾಥಾಚ್ಯುತಪಾದ ಸಂಗಮಹಿತಾಪಶ್ಚಾಚ್ಚ ನಾಕಂ ಗತಾ |
ಸೌವರ್ಣಾಚಲಶೃಂಗಮೇತ್ಯ ಮುದಿತಾ ಶಂಭೋಃ ಶಿರಃಸಂಗತಾ-
ಪ್ಯಾಸ್ಮಾಕಕ್ಷಿತಿಮಂಡಲೇ ತ್ರಿಪಥಗೇ ತುಷ್ಟಾಸ್ಯಭೀಷ್ಟಪ್ರದಾ  - ಸ್ವರ್ಗ, ಮರ್ತ್ಯ ಮತ್ತು ಪಾತಾಳಗಳಲ್ಲಿ ಸಂಚರಿಸುವುದರಿಂದ ತ್ರಿಪಥಗಾ ಎಂಬ ಹೆಸರುಳ್ಳ ಗಂಗೆಯೇ ನೀನು ಪಾಪದಿಂದ ದುಃಖಿತರಾದವರಲ್ಲಿ ದಯಾವಂತಳೆಂದು ತಿಳಿಯಲ್ಪಟ್ಟಿದೆ.  ಬ್ರಹ್ಮ ಹಸ್ತಾಶ್ರಯದಿಂದ ಶ್ರೀಹರಿಯ ಪಾದ ಸಂಪರ್ಕದಿಂದ ಪೂಜ್ಯಳಾಗಿದ್ದೀಯೆ ಎಂದು ಗಂಗೆಯ ಶ್ರೇಷ್ಠತೆಯನ್ನು ಸ್ತುತಿಸಿದ್ದಾರೆ.

ಸ್ಕಾಂದಪುರಾಣದ ಕಾಶೀ ಖಂಡದಲ್ಲಿ ಗಂಗೆಯ ಮಹಿಮೆಯನ್ನು ಸಾರುವ
ಗಚ್ಛಂಸ್ತಿಷ್ಠನ್ ಜಪನ್ ಧ್ಯಾಯನ್ ಭುಂಜನ್ ಜಾಗೃತ್ ಸ್ವಪನ್ ವದನ್ | ಯಃ ಸ್ಮರೇತ್ ಸತತಂ ಗಂಗಾಂ ಸ ಹಿ ಮುಚ್ಯೇತ ಬಂಧನಾತ್ || - ನಡೆದಾಡುವಾಗ, ನಿಂತುಕೊಂಡಾಗ, ಜಪಮಾಡುವಾಗ, ಧ್ಯಾನಗೈಯುವಾಗ, ಊಟ ಮಾಡುವಾಗ, ಎಚ್ಚರವಿದ್ದಾಗ ಮತ್ತು  ಮಾತನಾಡುವಾಗ, ಹೀಗೆ ಸದಾ ಯಾರು ಗಂಗೆಯನ್ನು ನೆನೆಯುವರೋ ಅವರು ಸಂಸಾರ ಬಂಧನದಿಂದ ಮುಕ್ತರಾಗುವರೆಂಬುದನ್ನು ತಿಳಿಸಲಾಗಿದೆ.    ಗಂಗೆಯ ಮಹಾತ್ಮ್ಯವನ್ನು ತಿಳಿದು ಗೋವಿಂದನಲ್ಲಿ ಭಕ್ತಿ ಮಾಡುವ ಮಾನವರ ಮೇಲೆ ಗಂಗೆಯು ಸುಪ್ರಸನ್ನಳಾಗುವಳು ಎಂಬ ಮಾತೂ ಸಹ ಉಕ್ತವಾಗಿದೆ.

ಅವ್ಯಾಕೃತಾಕಾಶಾಂತ ವ್ಯಾಪಿಸಿದ -  ಅವ್ಯಾಕೃತಾಕಾಶ ಎಂದರೆ ಏನೂ ಇಲ್ಲದ ಎಂದರ್ಥವಾಗುತ್ತದೆ.  ನಮ್ಮ ಕಣ್ಣಿಗೆ ಕಾಣುವ ಈ ಭೂತಾಕಾಶವು ಪ್ರಳಯ ಕಾಲದಲ್ಲಿ ಲಯವಾಗುವಂತಹುದು.  ಸಮಸ್ತವೂ ಲಯವಾಗಿ, ಇಲ್ಲವಾದಾಗ ಉಳಿಯುವುದೇ ಏನೂ ಇಲ್ಲದ, ವಿವರಣೆಗೆ ಸಿಕ್ಕದ ಖಾಲಿಜಾಗ ಅಥವಾ ಅವ್ಯಾಕೃತಾಕಾಶವೆನ್ನುವುದು.  ಕಣ್ಣಿಗೆ ಕಾಣುವ ಈ ಭೂತಾಕಾಶವು ಸಾಂತ (ಮಿತಿಯುಳ್ಳದ್ದು), ಆದರೆ ಕಣ್ಣಿಗೆ ಕಾಣದ ಅವ್ಯಾಕೃತಾಕಾಶವು ಅನಂತ (ಮಿತಿಯೇ ಇಲ್ಲದ್ದು) ಮತ್ತು ಸದಾಕಾಲವೂ ಇರುವಂತಹುದು.  ಭಗವಂತನು ಅನಂತನಾಗಿದ್ದು, ಅಮಿತನು, ಸದಾಕಾಲವೂ ಇರುವಂತಹವನಾಗಿದ್ದಾನೆ.  ಅವನು ಸರ್ವವ್ಯಾಪ್ತನು.  ಅಣುಅಣುವಿನಲ್ಲೂ, ಕಣಕಣಗಳಲ್ಲೂ ವ್ಯಾಪ್ತನು.  ಶ್ರೀ ಜಗನ್ನಾಥದಾಸರು ತಮ್ಮ "ಸ್ಮರಿಸು ಸಂತತ ಹರಿಯನು ಮನವೇ" ಎಂಬ ಕೃತಿಯಲ್ಲಿ | "ಅಣುವಿನೊಳಗಣುವಹನು ಘನಕೆ ಘನತರನಹನು ಅಣು ಮಹದ್ವಿಲಕ್ಷಣಾ ಕಲ್ಯಾಣ ಗುಣಜ್ಞಾನ ಘನಲಕ್ಷಣಾ ಸಂಪೂರ್ಣ" || ಎಂದು ಭಗವಂತನ ಸರ್ವವ್ಯಾಪ್ತತೆಯನ್ನು ವಿವರಿಸಿದ್ದಾರೆ. 
ಭಗವದ್ಗೀತೆಯ  ಹತ್ತನೇ ಅಧ್ಯಾಯದಲ್ಲಿ ಭಗವಂತ ಅರ್ಜುನನಿಗೆ ತನ್ನನ್ನು ಕುರಿತು ತಾನೇ
ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ | ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ || - ಎಲೈ ಕುರುಶ್ರೇಷ್ಠನೇ, ಈಗ ನಾನು ನನ್ನ ದಿವ್ಯ ವಿಭೂತಿಗಳಲ್ಲಿ ಮುಖ್ಯವಾದವುಗಳನ್ನು ನಿನಗೆ ತಿಳಿಸುತ್ತೇನೆ.  ಏಕೆಂದರೆ ನನ್ನ ವಿಸ್ತಾರಕ್ಕೆ ಕೊನೆಯೇ ಇಲ್ಲ ಎಂದಿದ್ದಾನೆ.  ಇದು ಭಗವಂತನ ಸರ್ವವ್ಯಾಪ್ತತೆಯ ವಿವರಣೆಯಾಗುತ್ತದೆ.  

ಇಂಗಡಲ ಮಗಳೊಡೆಯ -  ಇಂಗಡಲು ಎಂದರೆ ಸಿಹಿಯಾದ, ಮಧುರವಾದ ಹಾಲಿನ ಕಡಲು, ಕ್ಷೀರ ಸಮುದ್ರ.  ಇಂಗಡಲಿನಲ್ಲಿ ಉದಿಸಿದವಳು ಮಹಾಲಕ್ಷ್ಮೀ ದೇವಿ, ಕ್ಷೀರ ಸಮುದ್ರರಾಜ ಕುಮಾರಿ.  ದಾಸರಾಯರು ಲಕ್ಷ್ಮೀದೇವಿಯನ್ನು ತಮ್ಮ "ಇಂದಿರೆ ಇಂದುವದನೇ ಸರಸಿಜಸದನೇ".. ಎಂಬ ಕೃತಿಯಲ್ಲಿ "ಪಾಲಗಡಲ ಸಂಭೂತೆ ಕಾಲ ದೇಶದಿ ವ್ಯಾಪಿತೆ" ಎಂದಿದ್ದಾರೆ.   ಶ್ರೀಸೂಕ್ತದಲ್ಲಿ "ಲಕ್ಷ್ಮೀಂ ಕ್ಷೀರ ಸಮುದ್ರರಾಜ ತನಯೇ.." ಎಂದು ಸ್ತುತಿಸಲಾಗಿದೆ.  ಶ್ರೀ ವಾದಿರಾಜರು ತಮ್ಮ "ಲಕ್ಷ್ಮೀ ಶೋಭಾನೆ"ಯಲ್ಲಿ "ಪಾಲಸಾಗರವನ್ನು ಲೀಲೆಯಲಿ ಕಡೆಯಲು | ಬಾಲೆ ಮಹಲಕ್ಷ್ಮಿ ಉದಿಸಿದಳು" ಎನ್ನುತ್ತಾ ಸಮುದ್ರ ಮಥನದಲ್ಲಿ ಕ್ಷೀರಸಾಗರವನ್ನೇ ಕಡೆಯಲಾಗಿತ್ತೆಂಬ ಮಾತನ್ನು ತಿಳಿಸಿದ್ದಾರೆ.  ಇಂತಹ ಇಂಗಡಲ ಮಗಳಾಗಿ ಜನಿಸಿದ ಮಹಾಲಕ್ಷ್ಮಿಗೂ ಒಡೆಯನಾದವನು ಶ್ರೀಹರಿಯಾಗಿದ್ದಾನೆ.  ಪ್ರಳಯ ಕಾಲದಲ್ಲಿಯೂ ಭಗವಂತನ ಜೊತೆ ಸದಾ ಇರುವವಳು ಲಕ್ಷ್ಮೀದೇವಿ ಮಾತ್ರ.  ಸರ್ವದಾ ಶ್ರೀಹರಿಯ ಜೊತೆಯಲ್ಲಿಯೇ ಇರುವಂತಹ ಲಕ್ಷ್ಮೀದೇವಿಯೇ ಸರ್ವ ವ್ಯಾಪ್ತಳು ಎಂದಾಗ, ಅವಳಿಗೂ ಒಡೆಯನಾದ ಭಗವಂತನು ಅಮಿತನು ಎನ್ನುವುದು ತಿಳಿಯುತ್ತದೆ.  ಜಗನ್ನಾಥ ದಾಸರು ತತ್ವ ಸುವಾಲಿಯಲ್ಲಿ
ಪಾಲ್ಗಡಲಮಗಳಾಳ್ದನಾಳ್ಗಳೊಳಗಪ್ರತಿಮ
ಓಲೈಪ ಜನರ ಸಲಹೆಂದು | ಸಲಹೆಂದು ಬಿನ್ನೈಪೆ
ಫಲ್ಗುಣಾಗ್ರಜನೆ ಪ್ರತಿದಿನ || - ಪಾಲ್ಗಡಲ ಮಗಳಾದ ಲಕ್ಷ್ಮೀದೇವಿಯನ್ನಾಳಿದ ನಾಳ್ಗಳೊಳಗೆಲ್ಲಾ ಅಪ್ರತಿಮನಾದವನಾದ ಭಗವಂತನೇ ಸಲಹು ಎಂದಿದ್ದಾರೆ.

ಅಂಗೋಪಾಂಗಗಳಲಿಪ್ಪ ಅನಂತ ಸುಮಂಗಳಪ್ರದ ನಾಮ -   ಭಗವದ್ಗೀತೆಯ ೧೧ನೇ ಅಧ್ಯಾಯದಲ್ಲಿ "ಅನೇಕ ವಕ್ತ್ರ ನಯನಮನೇಕಾದ್ಭುತ ದರ್ಶನಮ್ | ಅನೇಕ ವಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್" || - ಅನೇಕ ಮುಖಗಳು, ಕಣ್ಣುಗಳು ಹೊಂದಿರುವ ಅನೇಕ ಬಗೆಯ ದಿವ್ಯವಾದ ಭೂಷಣಗಳಿಂದ ಅಲಂಕೃತನಾದ, ಅನೇಕ ವಿಧವಾದ ದಿವ್ಯ ಶಸ್ತ್ರಗಳನ್ನು ಧರಿಸಿರುವ, ದಿವ್ಯ ಗಂಧವನ್ನು ಪೂಸಿಕೊಂಡಿರುವ, ಎಲ್ಲ ಪ್ರಕಾರದ ಆಶ್ಚರ್ಯಗಳಿಂದ ಒಳಗೊಂಡ, ಅನಂತಸ್ವರೂಪನಾದ ಭಗವಂತನನ್ನು ಕಂಡೆ ಎಂದು ಅರ್ಜುನ ತಿಳಿಸಿದ್ದಾನೆ.  ಅವ್ಯಾಕೃತಾಕಾಶದಲ್ಲಿ ಭಗವಂತನ ಜೊತೆಗೇ ಸರ್ವ ವ್ಯಾಪ್ತಳಾಗಿರುವವಳು ಲಕ್ಷ್ಮೀದೇವಿ ಮಾತ್ರ.  ಆದರೆ ಭಗವಂತನು ಲಕ್ಷ್ಮೀದೇವಿಯ ಒಳಗೂ ವ್ಯಾಪ್ತನು, ಹೊರಗೂ ವ್ಯಾಪ್ತನಾದ್ದರಿಂದಲೇ ಅವನು ಅಮಿತನು.  ಭಗವಂತನ ಸರ್ವವ್ಯಾಪ್ತಿತ್ವವನ್ನು ’ಶ್ವೇತಾಶ್ವತರೋಪನಿಷತ್ತ್’ನಲ್ಲಿ "ಏಕೋ ದೇಸ್ಸರ್ವಭೂತೇಷು ಗೂಢಸ್ಸರ್ವವ್ಯಾಪ್ತೀ " ಎಂದು ಪ್ರಾರಂಭವಾಗುವ ಶ್ಲೋಕದಲ್ಲಿ ತಿಳಿಸಲ್ಪಟ್ಟಿದೆ.  ವಿಷ್ಣು ಸಹಸ್ರನಾಮದ ಫಲಶೃತಿಯಲ್ಲಿ ಕೂಡ "ಏಕೋ ವಿಷ್ಣುರ್ಮಹದ್ಭೂತಂ".. ಎಂಬ ಮಾತಿನ ಮೂಲಕ ಭಗವಂತನ ಮಹಾ ವಿಭೂತಿಯ ಉಲ್ಲೇಖವಾಗಿದೆ.  ಭಗವಂತ ಒಬ್ಬನೇ ಸರ್ವ ವ್ಯಾಪ್ತನು ಅವನೇ ಸರ್ವವನ್ನೂ ನಿರ್ವಹಣೆ ಮಾಡುವವನು ಎಂಬ ಉಲ್ಲೇಖವಿದೆ.  ಭಗವಂತನು ಹೇಗೆ ಸರ್ವವ್ಯಾಪ್ತನೋ, ಹಾಗೇ ಅವನ ಪ್ರತಿಯೊಂದ ಅಂಗಗಳೂ, ಉಪಾಂಗಗಳೂ ಕೂಡ ಅದೇ ಪರಿಯಲ್ಲಿ ವ್ಯಾಪ್ತವಾಗಿರುವುದು.  ಅಂದರೆ ಭಗವಂತನ ಶರೀರವು ಹೇಗೆ ಸರ್ವ ವ್ಯಾಪ್ತಿಯನ್ನು ಹೊಂದಿರುವುದೋ, ಹಾಗೆ ಅವನ ಅಂಗಾಂಗಗಳೂ ಅವ್ಯಾಕೃತಾಕಾಶ ಪರ್ಯಂತ ವ್ಯಾಪ್ತವಾಗಿವೆ.  ಅಂಗಾಂಗಗಳಿಗಿರುವ ಉಪಾಂಗಗಳೂ ಕೂಡ ಅಷ್ಟೇ ವ್ಯಾಪ್ತತೆಯನ್ನು ಹೊಂದಿವೆ.  ಭಗವಂತನ ಅಂಗವಾದ ಅವನ ಪಾದದ ಬೆರಳು ಎಷ್ಟು ವ್ಯಾಪ್ತಿಯನ್ನು ಹೊಂದಿದೆಯೋ, ಅಷ್ಟೇ ವ್ಯಾಪ್ತಿಯನ್ನು ಬೆರಳಿನ ಉಪಾಂಗವಾದ ನಖವೂ ಕೂಡ ಹೊಂದಿದೆ.  ಪಾದವು ಸರ್ವ್ಯ ವ್ಯಾಪ್ತವಾಗಿದೆ, ಪಾದದ ಬೆರಳೂ ಸರ್ವ ವ್ಯಾಪ್ತವಾಗಿದೆ ಹಾಗೇ ಬೆರಳಿನ ನಖವೂ ಸರ್ವ ವ್ಯಾಪ್ತತೆಯನ್ನು ಹೊಂದಿದೆ.  ಹೀಗೆ ಅವನ ಸರ್ವಾಂಗಗಳಲ್ಲಿಯೂ, ಉಪಾಂಗಗಳಲ್ಲಿಯೂ ಮಿತಿಯಿಲ್ಲದಂತೆ ವ್ಯಾಪ್ತವಾಗಿರುವುದೇ ಭಗವಂತನ ಅನಂತ ನಾಮಗಳು.  ನಾಮಗಳು ಸುಮಂಗಳಪ್ರದವಾಗಿರುವುದೇಕೆಂದರೆ, ನಾಮೋಚ್ಛಾರಣೆಯಿಂದಲೇ ಸಕಲವೂ ಮಂಗಳವಾಗುವುದು.  ಭಗವಂತನಿಗೆ ಎಷ್ಟು ಸಹಸ್ರ ರೂಪಗಳಿವೆಯೋ, ಅಷ್ಟೇ ಸಹಸ್ರ ನಾಮಗಳೂ ಇವೆ.  ಭಗವಂತನ ಪ್ರತಿಯೊಂದು ಅಂಗವೂ ಅವನ ಒಂದೊಂದು ರೂಪಗಳೇ ಆಗಿರುವುದರಿಂದ, ಅವನ ಅಂಗಾಂಗಗಳಲ್ಲಿ ಸುಮಂಗಳಪ್ರದವಾದ ಅನೇಕ, ಅನಂತ ನಾಮಗಳು ಸೇರಿಕೊಂಡಿವೆ.  ಅಂತ್ಯವಿಲ್ಲದ ಅವ್ಯಾಕೃತಾಕಾಶ ಪರ್ಯಂತ ವ್ಯಾಪಿಸಿರುವ ಭಗವಂತನು "ಅಣೋರಣೀಯನು ಹಾಗೂ ಮಹತೋ ಮಹೀಯನು".  ಅವನ ವ್ಯಾಪ್ತಿಯಂತೆಯೇ ವ್ಯಾಪಿಸಿರುವ ಅವನ ನಾಮಗಳೂ ಕೂಡ ಮಹತ್ತಾದವುಗಳು.  ಭಗವಂತನ ಅಂಗಾಂಗಗಳಲ್ಲಿ ವ್ಯಾಪಿಸಿರುವ ಅವನ ಅನಂತ ನಾಮಗಳಿಗೂ ಅಭಿಮಾನಿ ದೇವತೆ ಲಕ್ಷ್ಮೀದೇವಿಯಾಗಿದ್ದಾಳೆ.  ಮಂಗಳಪ್ರದಳಾದ ಲಕ್ಷ್ಮೀದೇವಿಯು ನಿರವದ ಸೇವಿಸುವ, ಅಭಿಮಾನಿಸುವ ನಾಮಗಳು ಮಂಗಳಪ್ರದವೇ ಆಗಿವೆ.

ಸರ್ವಾಂಗಗಳಲ್ಲೂ ಮಿತಿಯಿಲ್ಲದಂತೆ ವ್ಯಾಪ್ತವಾಗಿರುವ ಭಗವಂತನ ಅಸಂಖ್ಯ, ಅನಂತ ನಾಮಗಳು  "ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಂ" ಎಂದು ವಿಷ್ಣು ಸಹಸ್ರನಾಮ ಧ್ಯಾನ ಶ್ಲೋಕಗಳಲ್ಲಿ ತಿಳಿಸಲ್ಪಟ್ಟಿದೆ.  ಪವಿತ್ರವೆಂದು ಪರಿಗಣಿಸಲ್ಪಡುವ ಎಲ್ಲಾ ವಸ್ತುಗಳನ್ನೂ ಪವಿತ್ರವಾಗಿಸುವುದೇ ಭಗವಂತನ ನಾಮದ ಮಹಿಮೆ.  ಶ್ರೀ ಪುರಂದರ ದಾಸರು "ನೀನ್ಯಾಯೋ ನಿನ್ನ ಹಂಗ್ಯಾಕೋ - ನಿನ್ನ - ನಾಮದ ಬಲವೆನಗಿದ್ದರೆ ಸಾಕೋ" ಎಂದು ನಾಮಕ್ಕಿರುವ ಶಕ್ತಿಯನ್ನು ತಿಳಿಸಿದ್ದಾರೆ.  ತಮ್ಮ ಇನ್ನೊಂದು "ನಿನ್ನ ನಾಮವಿದ್ದರೆ ಸಾಕೊ | ಮುನಿದರೆ ಮುನಿ ನಿನ್ನಾಣೆ ಶ್ರೀರಾಮ"  ಎಂಬ ಕೃತಿಯಲ್ಲಿ ನಾಮ ಸ್ಮರಣೆ ಮಾತ್ರದಿಂದಲೇ ಪಾಪಗಳೆಲ್ಲವೂ ಛಿನ್ನ ಛಿದ್ರವಾಗುವುದೆಂದೂ, ನಾಮದ ಬಲವೇ ತನ್ನ ಪಾಪವನ್ನು ಕೋಪದಿಂದಲಿ ತರಿದು,  ಕರ್ಮಗಳನ್ನೆಲ್ಲಾ ಝಾಡಿಸಿ, ತನ್ನನ್ನು ವೈಕುಂಠಕ್ಕೆ ಕೊಂಡೊಯ್ದು ಪರಮಾನಂದವನ್ನೀವುದು ಎಂದಿದ್ದಾರೆ.  ಮತ್ತೊಂದು ಕೃತಿ "ನಿನ್ನ ನಾಮವೆ ಎನಗೆ ಅಮೃತಾನ್ನವು" ಎಂಬುದರಲ್ಲಿ ಒಂದೊಂದು ನಾಮವನ್ನು ಜಪಿಸುತ್ತಿದ್ದರೆ ಒಂದೊಂದು ಭಕ್ಷ್ಯ ಸವಿದಂತಾಗುವುದೆಂದೂ,  ಭಗವಂತನೊಲಿದರೆ ಹಸಿವೆಯೆಂಬುದೇ ಇರುವುದಿಲ್ಲವೆಂದೂ ತಿಳಿಸಿದ್ದಾರೆ.  ಹೀಗಿದೆ ಭಗವಂತನ ನಾಮಸ್ಮರಣೆಯ ಶಕ್ತಿ ಹಾಗೂ ಮಹತ್ವ.  ಪರಮಪುರುಷನಾದ ಪರಮಾತ್ಮನನ್ನು ಧ್ಯಾನಿಸಿದರೆ, ದರ್ಶನ ಮಾಡಿದರೆ, ಧ್ಯಾನಿಸಿದರೆ, ಕೀರ್ತನೆ ಮಾಡಿದರೆ, ಸ್ತೋತ್ರ ಮಾಡಿದರೆ, ಪೂಜಿಸಿದರೆ, ಸ್ಮರಿಸಿದರೆ, ನಮಸ್ಕರಿಸಿದರೆ ಸರ್ವ ಪಾಪಗಳೂ ಪರಿಹಾರವಾಗುವುದು.  ಮಂಗಲಾನಾಂಚ ಮಂಗಲಂ ಎಂದರೆ ಸುಖಕ್ಕೆ ಸಾಧನವಾಗಿರುವುದು ಎಂದರ್ಥವಾಗುತ್ತದೆ.  ಎಲ್ಲಾ ಸಾಧನಗಳೂ ಕೂಡ ಪರಮಾನಂದ ಲಕ್ಷಣವಾದವುಗಳಾದ್ದರಿಂದಲೂ, ಪರಮಮಂಗಲವಾಗಿರುವುದರಿಂದಲೂ, ಭಗವಂತನು ಮಂಗಲಗಳಿಗೂ ಮಂಗಲ ಎಂದು ಸ್ತುತಿಸಲ್ಪಟ್ಟಿದ್ದಾನೆ.

ಪಾವನ ಮಾಳ್ಪುದೇನರಿದು -   ಪಾವನವೆಂದರೇ ಪವಿತ್ರವೆಂದೇ ಅರ್ಥವಾಗುತ್ತದೆ.  ಧರ್ಮದ ವಿಚಾರಗಳೆಲ್ಲವೂ ಪವಿತ್ರವಾದ ವಿಚಾರಗಳೇ ಮತ್ತು ಪಾಪಪರಿಹಾರಕ ವಿಚಾರಗಳೇ ಆಗಿವೆ.  ಆದರೆ ಪವಿತ್ರವಾದ ವಿಚಾರಗಳಲ್ಲಿಯೂ ಅತಿ ಪವಿತ್ರವಾದ ಭಗವಂತನ ವಿಚಾರಗಳನ್ನು ವಿವರಿಸಿವಾಗ "ಪಾವನ"ವೆಂಬ ಶಬ್ದ ವಿಶೇಷವಾಗಿ ಉಪಯೋಗಿಸಲ್ಪಡುತ್ತದೆ.  ಪಾವನ ಎಂದರೆ  ಪವಿತ್ರವಾಗಿರುವುದನ್ನೂ, ಶುದ್ಧವಾಗಿರುವುದನ್ನೂ ಇನ್ನೂ ಹೆಚ್ಚು ಪವಿತ್ರವಾಗಿಸುವುದು, ಶುದ್ಧವಾಗಿಸುವುದು ಎಂದು ಅರ್ಥೈಸಬಹುದು.  ವಿಷ್ಣು ಸಹಸ್ರನಾಮದಲ್ಲಿ "ಭೂತ ಭವ್ಯ ಭವನ್ನಾಥಃ ಪವನಃ ಪಾವನೋನಲಃ" - ಯಾರು ಅತಿ ಶುದ್ಧವಾಗಿರುವರೋ ಅವರು ಮತ್ತೆಲ್ಲವನ್ನೂ ಶುದ್ಧಮಾಡಬಲ್ಲವನೋ ಅವರು ’ಪಾವನನು’ ಎಂದು ತಿಳಿಸಲ್ಪಟ್ಟಿದೆ.  ಪವನಃ ಪಾವನೋನಲಃ ಎಂದರೆ ವಾಯುವನ್ನು ಯಾವಾಗಲೂ ಸಂಚರಿಸುವಂತೆ ಮಾಡುವವನು ಎಂಬ ಅರ್ಥವೂ ಆಗುತ್ತದೆ.  ಭಗವದ್ಗೀತೆಯ ೧೦ನೇ ಅಧ್ಯಾಯದ ೩೧ನೇ ಶ್ಲೋಕದಲ್ಲಿ ಭಗವಂತನು "ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ | ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ" || -  ನಾನು ಪವಿತ್ರಗೊಳಿಸುವವರಲ್ಲಿ ವಾಯುವು, ಶಸ್ತ್ರಧಾರಿಗಳಲ್ಲಿ ಶ್ರೀರಾಮನು, ಮೀನುಗಳಲ್ಲಿ ಮೊಸಳೆಯೂ ಹಾಗೂ ನದಿಗಳಲ್ಲಿ ಭಾಗೀರಥಿ ಗಂಗೆಯು ನಾನೇ ಆಗಿದ್ದೇನೆ ಎಂದು ತಿಳಿಸಿದ್ದಾನೆ.

ಗಂಗೆಯ ಮಹಿಮೆಯನ್ನು ಮತ್ತು ಸರ್ವ ಪಾಪಗಳನ್ನು ನಶಿಸುವವಳೆಂಬುದನ್ನು ’ಸ್ಕಂದಮಹಾಪುರಾಣ’ದಲ್ಲಿ "ಓಂ ನಮಃ ಶಿವಾಯೈ ಗಂಗಾಯೈ ಶಿವದಾಯೈ ನಮೋ ನಮಃ | ನಮಸ್ತೇ ವಿಷ್ಣುರೂಪಿಣ್ಯೈ ಬ್ರಹ್ಮಮೂರ್ತ್ಯೈ ನಮೋಸ್ತುತೇ || ಎಂಬ ಸ್ತೋತ್ರದಲ್ಲಿ ವಿವರಿಸಲ್ಪಟ್ಟಿದೆ.  ಶ್ರೀ ಶಂಕರಾಚಾರ್ಯರು ಗಂಗೆಯ ಮಹಿಮೆಯನ್ನು ತಮ್ಮ ’ಗಂಗಾಷ್ಟಕಮ್’ ನಲ್ಲಿ "ಕಣಮಣು ಪರಿಮಾಣಂ ಪ್ರಾಣಿನೋ ಯೇ ಸ್ಪೃಶಂತಿ" - ನಿನ್ನ ಒಂದು ಕಣದ ಪರಮಾಣುವನ್ನು ಪ್ರಾಣಿಗಳು ಸ್ಪರ್ಶಿಸಿದರೆ ಪ್ರಾಣಿಗಳ ಕಲಿ ಕಲ್ಮಶಗಳನ್ನು ಜನ್ಮ ಜನ್ಮಾಂತರದ ಪಾಪಗಳನ್ನು ಪರಿಹರಿಸುತ್ತೀಯೇ ಎಂದು ಸ್ತುತಿಸಿದ್ದಾರೆ.    ಶ್ರೀಮದಾಚಾರ್ಯರು ತಮ್ಮ ’ಶ್ರೀ ಗಂಗಾಸ್ತೋತ್ರಮ್’ ನಲ್ಲಿ "ಹರಿಪದ ಪಾದ್ಯತರಂಗಿಣಿ ಗಂಗೇ".. "ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇಹ ಗೃಹೀತಂ" - ಗಂಗೆ ನಿನ್ನ ಜಲಪಾನ ಮಾಡಿದವರು ಪರಮಪದ ಹೊಂದುತ್ತಾರೆ, "ಪತಿತೋದ್ಧಾರಿಣಿ ಜಾನ್ಹವಿ ಗಂಗೇ" - ಪಾಪ ನಿವಾರಿಸುವ ಜಾನ್ಹವಿ ಗಂಗೇ, "ಕಲ್ಪಲತಾಮಿವ ಫಲದಾಂ ಲೋಕೇ" - ಕಲ್ಪವೃಕ್ಷದಂತೆ ಲೋಕದಲ್ಲಿ ಫಲನೀಡುವವಳೇ ಎಂದೆಲ್ಲಾ ಗಂಗೆಯ ಮಹಿಮೆಯನ್ನು ಸುಂದರವಾಗಿ ವರ್ಣಿಸಿದ್ದಾರೆ.  ಭಗವಂತನು ತ್ರಿವಿಕ್ರಮಾವತಾರವೆತ್ತಿದಾಗ ಅಂಗುಷ್ಠದ ನಖದ ಒಂದು ಸಣ್ಣ ಸ್ಪರ್ಶದಿಂದಲೇ ಧರೆಗಿಳಿದ ಗಂಗೆ ಅತ್ಯಂತ ಪಾವನಳು ಎನಿಸಿಕೊಂಡಳು.  ಭಗವಂತನ ಸರ್ವಾಂಗಗಳ ಸ್ಪರ್ಶವೇನಾಗಲಿಲ್ಲ ಮತ್ತು ಸ್ಪರ್ಶವು ಸಾರ್ವಕಾಲಿಕವಾಗಿಯೂ ಇಲ್ಲ.  ಆದರೂ ಆ ಜಲ ಅತಿ ಶುದ್ಧ, ಪವಿತ್ರ, ಪಾವನವೆನಿಸಿಕೊಂಡಿದೆ ಮತ್ತು ಗಂಗೆಯು ಮೂರೂ ಲೋಕಗಳ ಅಘ ಹಿಂಗಿಸುವವಳು ಎನಿಸಿಕೊಂಡಿದ್ದಾಳೆ.   ಶ್ರೀಹರಿಯ ಅನಂತಾನಂತ ನಾಮಗಳು ಅವನ ಸರ್ವಾಂಗೋಪಾಂಗಗಳಲ್ಲಿ ನೆಲೆಸಿ ಸದಾ ಸಾರ್ವಕಾಲಿಕ ಸಂಬಂಧ ಪಟ್ಟು, ವಾಚ್ಯವಾಗಿರುವಂತಹವು.  ಹಾಗೆಂದಮೇಲೆ ಮೂರುಲೋಕಗಳ ಅಘ ಹಿಂಗಿಸುವ ಗಂಗೆಗಿಂತಲೂ ಅತ್ಯಂತ ಪರಮ, ಪವಿತ್ರ ಹಾಗೂ ಪಾವನವು ಶ್ರೀಹರಿಯ ಅನಂತ ನಾಮಗಳು.  ಈ ನಾಮಗಳ ಅರ್ಚನೆ, ಉಪಾಸನೆ, ಸಂಕೀರ್ತನೆಗಳು ಸದ್ಗತಿಗೆ ಮಾರ್ಗವಾಗಿ, ಭಕ್ತರ ಸರ್ವ ಪಾಪಗಳನ್ನೂ ನಾಶಪಡಿಸುವುದೆಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲವು. 

ಕೇವಲ ನಖದ ತುದಿಯನ್ನು ಸ್ಪರ್ಶಿಸಿದ ಗಂಗೆಯೇ ಸರ್ವ ಪಾಪಗಳನ್ನು ತೊಳೆಯುವ ’ಅಮರ ತರಂಗಿಣಿ’ಯಾಗಬಹುದಾದರೆ, ಭಗವಂತನ ಸರ್ವ ಅಂಗಗಳನ್ನೂ, ಉಪಾಂಗಗಳನ್ನು ಸ್ಮರಿಸುವ, ಸ್ಪರ್ಶಿಸುವ ಅವನ ನಾಮಗಳು ಸುಮಂಗಳಪ್ರದವಾಗಿ, ಸ್ಮರಿಸುವವರೆಲ್ಲರನ್ನೂ ಪಾವನರನ್ನಾಗಿಸುವುದರಲ್ಲಿ ಯಾವ ಸಂಶಯವೂ ಇಲ್ಲ.  ಭಗವದ್ಗೀತೆಯ ೧೧ನೇ ಅಧ್ಯಾಯದ ೩೬ನೇ ಶ್ಲೋಕದಲ್ಲಿ ಅರ್ಜುನನು | ಸ್ಥಾನೇ ಹೃಷಿಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಜ್ಯತೇ ಚ | ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ || - ಹೇ ಅಂತರ್ಮಾಮಿಯೇ ನಿನ್ನ ನಾಮ, ಗುಣ ಮತ್ತು ಪ್ರಭಾವದ ಕೀರ್ತನೆಯಿಂದ ಜಗತ್ತು ಅತಿ ಹರ್ಷಿತವಾಗುತ್ತಾ, ಪ್ರೇಮ ವಿಹ್ವಲವಾಗುತ್ತಾ ಇದೆ.  ಹಾಗೆಯೇ ಭಯಗೊಂಡ ರಾಕ್ಷಸರು ಹತ್ತು ದಿಕ್ಕುಗಳಲ್ಲಿಯೂ ಓಡಿ ಹೋಗುತ್ತಿದ್ದಾರೆ.  ಹಾಗೂ ಸಿದ್ಧರ ಸಮುದಾಯವೆಲ್ಲ ನಮಸ್ಕರಿಸುತ್ತಿದೆ ಎಂದು ಭಗವಂತನನ್ನು ಸ್ತುತಿಸಿದ್ದಾನೆ. 

ಶ್ರೀ ಜಗನ್ನಾಥದಾಸರು ತತ್ವ ಸುವ್ವಾಲಿಯಲ್ಲಿ

ಜಲದೊಳಗೆ ಮಿಂದು ನಿರ್ಮಲರಾದೆವೆಂದು ತ-
ಮ್ಮೊಳು ತಾವೆ ಹಿಗ್ಗಿ ಸುಖಿಸೋರು | ಸುಖಿಸೋರು ಪರಮ ಮಂ-
ಗಳ ಮೂರ್ತಿ ನಿನ್ನ ನೆನೆಯದೆ || - ಭಗವಂತನ ನಖ ಸ್ಪರ್ಶದಿಂದಲೇ ಪವಿತ್ರಳಾದವಳೆಂದು ಗಂಗೆಯನ್ನು ಎಷ್ಟು ಕೊಂಡಾಡಿದರೂ ಕೂಡ ಗಂಗೇ ತಾನೇ ಸ್ವಯಂ ಪಾಪಗಳನ್ನು ಪರಿಹರಿಸಲಾರಳು.  ನಾವು ನಿರ್ಮಲರಾಗಬೇಕೆಂಬ ಇಚ್ಛೆ ನಮಗೆ ಇದ್ದರೆ, ನಾವು ಗಂಗೆಯಲ್ಲಿ ಮುಳುಗುವಾಗ ಭಗವಂತನನ್ನು ನೆನೆಯಬೇಕು.

ಜಡಭೂತಜಲ ಜನರ ಮಡಿಮಾಡಲಾಪರೆ
ಜಡಧಿ ಮಂದಿರನ ಶುಭನಾಮ | ಶುಭನಾಮ ಮೈಲಿಗೆಯ
ಬಿಡಿಸಿ ಮಂಗಳವ ಕೊಡದೇನೊ || - ಅಚೇತನರಾದ ನದ್ಯಾದಿ ಜಲಗಳು ಸ್ನಾನ ಮಾಡಿದ ಮಾತ್ರಕ್ಕೇ ನಮ್ಮ ಪಾಪಗಳನ್ನೆಲ್ಲಾ ತೊಳೆದು ಶುದ್ಧಮಾಡಬಲ್ಲದೇ ?  ಮನಸ್ಸಿಟ್ಟು ಭಗವಂತನ ಮಂಗಳನಾಮವನ್ನು ಸ್ಮರಿಸುತ್ತಾ, ಯಾವ ತೀರ್ಥ, ಯಾವ ಜಲದಲ್ಲಿ ಮುಳುಗಿದರೂ ಕೂಡ ಮನಸ್ಸಿನಲ್ಲಿಯ ಮೈಲಿಗೆಯನ್ನೆಲ್ಲಾ ತೊಳೆದು ಶುದ್ಧರಾಗಬಹುದು.

ಸ್ವಚ್ಛಗಂಗೆಯ ಒಳಗೆ ಅಚ್ಯುತನ ಸ್ಮರಿಸಿದೊಡೆ
ಅಚ್ಚಮಡಿಯೆಂದು ಕರೆಸೋರು | ಕರೆಸೋರು ಕೈವಲ್ಯ
ನಿಶ್ಚಯವು ಕಂಡ್ಯ ನಿಮಗಿನ್ನು || - ಪಾದಾಂಗುಷ್ಠದಿಂದ ಉದ್ಭವಿಸಿದ ಸ್ವಚ್ಛಳಾದ ಗಂಗೆಯಲ್ಲಿ ಮೀಯುವಾಗ ಭಗವಂತನಾದ ಅಚ್ಯುತನನ್ನು ಸ್ಮರಿಸಿಕೊಂಡರೆ ಸಾಕು ಸ್ವಚ್ಛವಾಗಿಯೂ, ಅಚ್ಚಮಡಿಯಾಗಿ, ಕೈವಲ್ಯವೇ ಪ್ರಾಪ್ತಿಯಾಗುವುದು ನಿಶ್ಚಯವು.

ಅನಘ ರೋಗಘ್ನ ಎಂದಿನಿತು ಮಂಗಳನಾಮ
ನೆನೆಯೆ ದುರಿತಗಳು ಬರಲುಂಟೆ | ಬರಲುಂಟೆ ಲೋಕದ
ಜನರ ಧನ್ವಂತ್ರಿ ಕಾಪಾಡೋ || - ಭಗವಂತನ ನಾಮಗಳದೆಷ್ಟು ಪವಿತ್ರ ಮತ್ತು ಮಂಗಳಕರವೆಂದರೆ, ಎಂತಹ ಭೀಕರ ರೋಗವಾದರೂ ಕೂಡ, ನಾಮಸ್ಮರಣೆ ಮಾಡುವುದರಿಂದಲೇ ರೋಗಮುಕ್ತರನ್ನಾಗಿಸುವ ವಿಶ್ವದ ವೈದ್ಯ ಧನ್ವಂತರಿದೇವನು ಎನ್ನುತ್ತಾರೆ.


ಚಿತ್ರಕೃಪೆ : ಅಂತರ್ಜಾಲ



Wednesday, March 12, 2014

ಕರುಣಾ ಸಂಧಿ - ೧೯ ನೇ ಪದ್ಯ


ಪಾಪಕರ್ಮವ ಸಹಿಸುವರೆ ಲ-
ಕ್ಷ್ಮೀಪತಿಗೆ ಸಮರಾದ ದಿವಿಜರ-
ನೀ ಪಯೋಜಭವಾಂಡದೊಳಗಾವಲ್ಲಿ ನಾ ಕಾಣೆ |
ಗೋಪ ಗುರುವಿನ ಮಡದಿ ಭೃಗು ನಗ-
ಚಾಪ ಮೊದಲಾದವರು ಮಾಡ್ದ ಮ-
ಹಾಪರಾಧಗಳೆಣಿಸಿದನೆ ಕರುಣಾಸಮುದ್ರ ಹರಿ  ||೧೯||
 

ಪ್ರತಿಪದಾರ್ಥ : ಪಾಪಕರ್ಮವ ಸಹಿಸುವರೆ - ಅಸುರಾವೇಶದಿಂದಾಗಲೀ ಅಜ್ಞಾನದಿಂದಾಗಲೀ ಮಾಡುವ ಪಾಪಕೃತ್ಯಗಳನ್ನು ಸಹಿಸಿಕೊಳ್ಳುವಲ್ಲಿ, ಲಕ್ಷ್ಮೀಪತಿಗೆ - ಲಕ್ಶ್ಮೀದೇವಿಯ ಪತಿಯಾದ ಶ್ರೀಹರಿಗೆ, ಸಮರಾದ - ಸಾಟಿಯಿಲ್ಲದ ಸಮವಿಲ್ಲದ, ದಿವಿಜರನು - ದೇವತೆಗಳನ್ನೂ, ಈ ಪಯೋಜ ಭವಾಂಡದೊಳಗೆ - ಈ ಬ್ರಹ್ಮಾಂಡದಲ್ಲಿ, ಆವಲ್ಲಿ ನಾ ಕಾಣೆ - ಎಲ್ಲಿಯೂ ನಾನು ಕಂಡಿಲ್ಲ, ಗೋಪ - ಎಂದರೆ ಸ್ವರ್ಗಾಧಿಪತಿ ಇಂದ್ರ (ಅತಿಶಯವಾಗಿ ಮಳೆ ಸುರಿಸಿ ಗೋವುಗಳಿಗೂ ಜನರಿಗೂ ಹಿಂಸೆ ಕೊಟ್ಟವನು) ಮತ್ತು ಗೋಪ ಎಂದರೆ ನಂದಗೋಪ ಗೋವುಗಳ ಪರಿಪಾಲಕ, ಗುರುವಿನ ಮಡದಿ - ದೇವಗುರು ಬೃಹಸ್ಪತಿಯ ಪತ್ನಿ ತಾರೆ ಚಂದ್ರನ ಸಂಗ ಮಾಡಿ ಬುಧನನ್ನು ಪಡೆದವಳು, ಭೃಗು - ತ್ರಿಮೂರ್ತಿಗಳಲ್ಲಿ ಶ್ರೇಷ್ಠರಾರೆಂದು ಪರೀಕ್ಷಿಸುವ ಸಂದರ್ಭದಲ್ಲಿ ಶ್ರೀ ಹರಿಯ ವಕ್ಷಸ್ಥಳಕ್ಕೆ ಪಾದಪ್ರಹಾರ ಮಾಡಿದವರು, ನಗಚಾಪ - ತ್ರಿಪುರಾಸುರಸ ಸಂಹಾರದಲ್ಲಿ ಈಶ್ವರ ವಿಷ್ಣುವನ್ನೇ ಬಾಣವಾಗಿ ಉಪಯೋಗಿಸಿದ ಮತ್ತು ರಾವಣನ ಸಂಹಾರದ ನಂತರ ಬೆಟ್ಟವನ್ನೇ ಧನುಸ್ಸಾಗಿಸಿಕೊಂಡು (ನಗಚಾಪ) ಶ್ರೀರಾಮನ ಮೇಲೆ ಉಪಯೋಗಿಸಿದ, ಮೊದಲಾದವರು - ಇವರುಗಳೆಲ್ಲ, ಮಾಡಿದ ಮಹಾಪರಾಧಗಳ - ಮಾಡಿದ ಇಂತಹ ಮಹಾ ಅಪರಾಧಗಳನ್ನೆಲ್ಲಾ, ಎಣಿಸಿದನೆ - ಲಕ್ಷ್ಯಕ್ಕೆ ತೆಗೆದುಕೊಂಡನೇ, ಕರುಣಾಸಮುದ್ರ ಹರಿ - ಕರುಣೆಯ ಸಾಗರವೇ ಆಗಿರುವಂತಹ ಶ್ರೀಹರಿ.                               

ಶ್ರೀಹರಿಯು ತನ್ನ ಭಕ್ತರು ಅವಿದ್ಯಾವಶಾತ್ ಅಸುರಾವೇಷಗಳಿಂದ ಮಾಡಿದ ಪಾಪಗಳನ್ನು ನಂತರ ಪಶ್ಚಾತ್ತಾಪ ಪಟ್ಟು ಕ್ಷಮೆ ಬೇಡಿದರೆ, ಕ್ಷಮಾಗುಣದಲ್ಲಿ  ಅಸೀಮನಾದುದರಿ೦ದ, ಭಗವ೦ತನು ಕ್ಷಮಿಸಿಬಿಡುತ್ತಾನೆ.  ಏಕೆಂದರೆ ಅಸುರಾವೇಶಾದಿಗಳು ಪಾಪ ಪರಿಹಾರವಾದ ಉತ್ತರದಲ್ಲಿ, ಅನುಸ೦ಧಾನಪೂರ್ವಕವಾಗಿ, ಬಿ೦ಬಕ್ರಿಯಾದ್ವಾರ ಪ್ರತಿಬಿ೦ಬಕ್ರಿಯಾದಿ೦ದ ಆದದ್ದೆ೦ದು ತಿಳಿದು ದೇವರನ್ನು ಪ್ರಾಥಿ೯ಸುವುದರಿ೦ದ, ಸಹನೆಯಿ೦ದ ಕ್ಷಮಿಸಿಬಿಡುತ್ತಾನೆ.  ಪಾಪ ಮಾಡಿದ ಗೋಪ ಎಂದರೆ ಚಂದ್ರನ ತಪ್ಪನ್ನೂ,   ಲೋಕಪಾಲಕನಾದ ಚಂದ್ರನ ಗುರುಪತ್ನಿ-ಗಮನ ದೋಷವನ್ನು ಕ್ಷಮಿಸಿದ.  ಗೋಪ ಎಂದರೆ ಸ್ವರ್ಗ ಪಾಲಕ ಇಂದ್ರನೆಂದೂ ಅರ್ಥ ಮಾಡಬಹುದು.  ಈ ದೇವೇಂದ್ರನನ್ನು ಪಾರಿಜಾತ ಪ್ರಸಂಗ, ಗೋವರ್ಧನಗಿರಿ ಪ್ರಸಂಗ, ಖಾಂಡವ ದಹನ, ಅಹಲ್ಯಾ ಪ್ರಸಂಗವೆಂಬಷ್ಟೂ ಅಪರಾಧಗಳನ್ನು ಕ್ಷಮಿಸಿದ್ದಾನೆ.  ಹಾಗೇ ಬೃಹಸ್ಪತಾಚಾರ್ಯರ ಪತ್ನಿ ತಾರಾದೇವಿಯ ಚಂದ್ರ ಪರಿಗ್ರಹಣವನ್ನೂ ಮನ್ನಿಸಿ ಪಂಚ ಪತಿವ್ರತೆಯರಲ್ಲಿ ಒಬ್ಬಳನ್ನಾಗಿ ಮಾಡಿದ.  ಇನ್ನು ನಗಚಾಪ ಎಂದರೆ ರುದ್ರ ದೇವರು.  ರುದ್ರದೇವರು ಬಾಣಾಸುರನ ಪ್ರಸಂಗದಲ್ಲಿ ಹರಿ ವಿರುದ್ಧ ಯುದ್ಧಕ್ಕೆ ನಿಂತವರು.  ರಾವಣ ಸಂಹಾರವಾದ ಮೇಲೆ ರಾಮನನ್ನೇ ಯುದ್ಧಕ್ಕೆ ಕರೆದರು.  ಅಂತಹ ರುದ್ರದೇವರನ್ನು ಸ್ನೇಹಿತನಂತೆ ಕಂಡಿದ್ದಾನೆ ಶ್ರೀಹರಿ.  ಭೃಗುಮುನಿಗಳು ಸರ್ವೋತ್ತಮರು ಯಾರೆಂದು ಪರೀಕ್ಷೆ ಮಾಡಲು ಹರಿಯ ಎದೆಯನ್ನೇ ಒದ್ದರು.  ಇನ್ನು ದ್ವಾಪರದಲ್ಲಿ ವ್ಯಾಧನಾಗಿ ಕೃಷ್ಣನ ಕಾಲಿಗೆ ಹಕ್ಕಿಯೆಂದು ತಿಳಿದು ಬಾಣದಲ್ಲಿ ಹೊಡೆದವರು. ಕ್ಷಮಾಮಹಿಮನಾದ ಪರಮಾತ್ಮ ಅಂತಹವರನ್ನು ಕೂಡಾ ಕ್ಷಮಿಸಿದ್ದಾನೆ, ತನ್ನ ಭಕ್ತರನ್ನು ಮಕ್ಕಳಂತೆ ಕಾಣುತ್ತಾನೆ.  ವಿಶೇಷ ಕಾರಣದಿಂದ ತಪ್ಪು ಮಾಡಿದರೂ ಕ್ಷಮೆಕೋರಿ ಪಶ್ಚಾತ್ತಾಪ ಪಡುತ್ತಾರೆ ಈ ಭಕ್ತರುಗಳು.  ದೇವತೆಗಳು ಮಾಡಿದ ಪಾಪಕರ್ಮವನ್ನು ಸಹಿಸುವ ರೀತಿಯಲ್ಲಿ ಪರಮಾತ್ಮನು ದೈತ್ಯರು ಮಾಡಿದ ಪಾಪಕರ್ಮವನ್ನು ಸಹಿಸುವುದಿಲ್ಲ. ಏಕೆ೦ದರೆ ದೇವತೆಗಳ೦ತೆ ಸ್ವಾಮಿಭೃತ್ಯನ್ಯಾಯದಿ೦ದ ಶ್ರೀಹರಿಯಲ್ಲಿ ಭಕ್ತಿ ಮಾಡದೆ, ದೈತ್ಯರು ದ್ವೇಷ ಮಾಡುವುದರಿ೦ದ, ಅವರ ಪಾಪಕೃತ್ಯಗಳನ್ನು ಕ್ಷಮಿಸುವುದಿಲ್ಲ."

ಪಾಪಕರ್ಮವ ಸಹಿಸುವರೆ -     ಪಾಪ ಕರ್ಮವನ್ನು ಭಗವಂತನಲ್ಲದೆ ಇನ್ಯಾವ ದೇವತೆಗಳೂ ಸಹಿಸುವುದಿಲ್ಲ.  ಹೀಗೇಕೆಂದರೆ ಅನ್ಯ ದೇವತೆಗಳೆಲ್ಲರೂ ಪರಮಾತ್ಮನ ಅನನ್ಯ ಭಕ್ತರು.  ಪರಮಾತ್ಮನ ನಿಂದನೆಯನ್ನಾಗಲೀ, ಅವನ ಪೂಜೆಯಲ್ಲಿ ಲೋಪವನ್ನಾಗಲೀ ಅನ್ಯ ದೇವತೆಗಳು ಸಹಿಸುವುದಿಲ್ಲ.  ಭಗವಂತನ ವಿಸ್ಮರಣೆಯನ್ನು ಕೂಡ ಬೇರೆ ದೇವತೆಗಳು ಸಹಿಸುವುದಿಲ್ಲ.  ಭಗವಂತ ಅದೆಷ್ಟು ಕರುಣಾಮಯಿಯೆಂದರೆ, ಅವನನ್ನು ಪೂಜಿಸುತ್ತೇವೆಂಬ ಸಂಕಲ್ಪ ಮಾಡಿದರೇ ಸಾಕು, ಪೂಜೆಯ ಪ್ರಾರಂಭದಲ್ಲೇ ಫಲಕೊಟ್ಟು, ರಕ್ಷಿಸುವನು.    ದಾಸರಾಯರು ತಮ್ಮ "ಕಾಯೋ ಕಾಯೋ" ಎಂಬ ಕೃತಿಯಲ್ಲಿ  "ನೀ ದಯ ಮಾಡದಿರೀ ದಿವಿಜರು ಒಲಿದಾದರಿಸುವರೆ ವೃಕೋದರ ವಂದ್ಯ" ಎಂದಿದ್ದಾರೆ.  ಪಾಪ ಕರ್ಮವೆಂದರೆ ನಿಷಿದ್ಧವಾದ, ಧರ್ಮ ಶಾಸ್ತ್ರಕ್ಕೆ ವಿರೋಧವಾದ ಕರ್ಮಗಳನ್ನು ಮಾಡುವುದು ಮತ್ತು ವಿಹಿತವಾದ ಕರ್ಮಗಳನ್ನೂ, ಅನುಷ್ಠಾನಗಳನ್ನೂ ಮಾಡದೇ ಇರುವುದು ಎಂದರ್ಥವಾಗುತ್ತದೆ.  ಶ್ರೀಹರಿಯ ವಿಸ್ಮರಣೆಗೆ ಕಾರಣವಾಗುವಂತಹ ಕರ್ಮಗಳೆಲ್ಲವೂ ಪಾಪಕರ್ಮಗಳಾಗುತ್ತವೆ.  ಸಜ್ಜನರು ಹರಿಸ್ಮರಣೆಯನ್ನು ಮರೆತರೆ ಶ್ರೀಹರಿ ಕುಪಿತನಾಗುತ್ತಾನೆ.  ಅದೂ ಕೂಡ ಅವನ ಕರುಣೆಯೆಂದೇ ತಿಳಿಯಬೇಕು.  ಏಕೆಂದರೆ ಮಕ್ಕಳು ತಪ್ಪು ಮಾಡಿದಾಗ ತಂದೆ-ತಾಯಿಗಳು ಮಕ್ಕಳ ಮೇಲೆ ಕುಪಿತರಾಗುತ್ತಾರೆ.  ಕೋಪಿಸಿಕೊಂಡರೂ, ಬುದ್ಧಿ ಹೇಳಿ ತಿದ್ದುತ್ತಾರೆ.  ಸಜ್ಜನರಿಗೂ, ಸದ್ಭಕ್ತರಿಗೂ ಭಗವಂತ ತಂದೆ-ತಾಯೆಯಾಗಿ ಕಾಪಾಡುತ್ತಾನೆ.  ಆದ್ದರಿಂದಲೇ ಸಜ್ಜನರು ತನ್ನ ಸ್ಮರಣೆಯನ್ನು ಮರೆತಾಗ ಕೋಪಿಸಿಕೊಂಡು, ಅವರಿಗೆ ಅರಿವು ಕೊಡುತ್ತಾನೆ.  ವಿಸ್ಮರಣೆಯಿಂದಾಗಿ ಅವರು ಮಾಡಿದ ಪಾಪಕರ್ಮವನ್ನು ಸಹಿಸುತ್ತಾನೆ.  ಎಲ್ಲಾ ದೇವತೆಗಳನ್ನೂ ಭಗವಂತನ ಪರಿವಾರವೆಂದು ಆರಾಧಿಸುವವರಿಗೆ ಮಾತ್ರ ಪಾಪ ಪರಿಹಾರವಾಗುತ್ತದೆ.  
ಶ್ರೀ ಜಗನ್ನಾಥದಾಸರು ತಮ್ಮ "ಆ ವೆಂಕಟಗಿರಿನಿಲಯನಂಘ್ರಿ ರಾಜೀವ ಯುಗಳಗಾ ನಮಿಸುವೆನು" ಎಂಬ ಕೃತಿಯಲ್ಲಿ
ಮನವಾಕ್ಕಾಯದಿ ಬಿಡದೆ ಸೇವಿಸುವ
ಜನರ ಸಂಚಿತ ಕುಕರ್ಮಗಳ
ಮನೆಯ ಮುರಿದು ಆಗಾಮಿ ಫಲಂಗಳ
ಅನುಭವಕೀಯದೆ ಪ್ರಾರಬ್ದಾ
ಉಣಿಸಿ ಸುಲಭದಲಿ ತನ್ನ ಮೂರ್ತಿ ಚಿಂ
ತನೆ ಇತ್ತು ಸ್ವರೂಪಸುಖಾ
ಅನುದಿನದಲಿ ವ್ಯಕ್ತಮಾಡಿಸಿ ಕೊ
ಟ್ಟನಿಮಿತ್ತಾಪ್ತನೆನಿಸುತಿಪ್ಪ || ಎಂದು ಸದಾ ಸರ್ವದಾ ಸೇವಿಸುವ ಭಕ್ತರ ಕುಕರ್ಮಗಳನ್ನು ಕಳೆದು ಉದ್ಧರಿಸುವನೆಂದು ತಿಳಿಸಿದ್ದಾರೆ. 

ಶ್ರೀಮದಾಚಾರ್ಯರು ತಮ್ಮ ’ಸದಾಚಾರ ಸ್ಮೃತಿ’ಯಲ್ಲಿ "ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಚಾತುಚಿತ್" ಎಂದಿದ್ದಾರೆ.  ಭಗವಂತನ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡಿದಾಗ ಮಾತ್ರ ಪಾಪ ಕರ್ಮಗಳನ್ನು ಕಳೆಯುವನು.  ಸುಮ್ಮನೆ ಮಾಡಬೇಕೆಂದಾಗಲೀ ಅಥವಾ ತಾನು ಮಾಡಿರುವ ಪಾಪಗಳನ್ನು ಕಳೆದುಕೊಳ್ಳಬೇಕೆಂದಾಗಲೀ ಮಾಡಬಾರದು.  ಹರಿನಾಮೋಚ್ಛಾರಣೆಯನ್ನು ಭಕ್ತಿರಹಿತವಾಗಿ ಮಾಡಿದರೆ ಅದು ದೋಷ ಅಥವಾ ಪಾಪವಾಗುತ್ತದೆ.  ಅದರಿಂದ ಪಾಪವು ಹೆಚ್ಚಾಗುತ್ತದೆ.  ಭಕ್ತಿ ಪೂರ್ವಕವಾಗಿ ನಾಮೋಚ್ಛಾರಣೆ ಮಾಡುವುದಕ್ಕೆ ಯಾವ ವಿಧಿ ವಿಧಾನ, ಆಸನ, ನಿಯಮವೆಂದು ಏನೂ ಇಲ್ಲ.  ಮನಸ್ಸನ್ನು ಭಗವಂತನ ಪಾದದಲ್ಲಿ ಸ್ಥಿರಗೊಳಿಸಿ, ನಾಮಸ್ಮರಣೆ ಮಾಡಬೇಕು.

ಭಾಗವತ ಆರನೇ ಸ್ಕಂದದ ಎರಡನೆಯ ಅಧ್ಯಾಯದಲ್ಲಿ
ಸರ್ವೇಷಾಮಪ್ಯಘವತಾಮಿದಮೇವ ಸುನಿಷ್ಕೃತಮ್ |
ನಾಮವ್ಯಾಹರಣಂ ವಿಷ್ಣೋರ್ಯತಸ್ತದ್ವಿಷಯಾ ಮಶಿಃ || - ಜೀವಿಯು ಯಾವ ವಿಧದ ಪಾಪವನ್ನೇ ಮಾಡಿದ್ದರೂ ಕೂಡ, ಅವನ ಎಲ್ಲಾ ಪಾತಕಗಳಿಗೂ ನಾರಾಯಣ ನಾಮವನ್ನು ಉಚ್ಛರಿಸುವುದೇ ಮುಖ್ಯವಾದ ಪ್ರಾಯಶ್ಚಿತ್ತವೆಂದು ತಿಳಿಸಲಾಗಿದೆ.  ಇದೇ ಸ್ಕಂದ ಹಾಗೂ ಅಧ್ಯಾಯದಲ್ಲಿ ಬರುವ ಅಜಾಮಿಳನ ಕಥೆಯಲ್ಲಿ ನಾರಾಯಣ ನಾಮೋಚ್ಛಾರಣೆಯ ಮಹತ್ವವನ್ನು ವಿವರಿಸಿದ್ದಾರೆ .  ಅಜಾಮಿಳನು ಮೊದಲಿಗೆ ಒಬ್ಬ ಸದಾಚಾರಿ ಬ್ರಾಹ್ಮಣನಾಗಿದ್ದನು.  ಆದರೆ ಒಂದು ದಿನ ಅವನು ಪೂಜೆಗಾಗಿ ಹೂವು, ಹಣ್ಣು ಹಾಗೂ ಸಮಿತ್ತುಗಳನ್ನು ತರಲು ಕಾಡಿಗೆ ಹೋಗಿದ್ದಾಗ ಹೆಣ್ಣಿನ ಮೋಹಕ್ಕೆ ಬಿದ್ದು ಸದಾಚಾರವನ್ನು ಬಿಟ್ಟು, ಧರ್ಮಪತ್ನಿಯನ್ನು ತೊರೆದ.  ಗಳಿಸಿದ್ದ ಸಂಪತ್ತೆಲ್ಲಾ ಕರಗಿ ಬೀದಿಗೆ ಬಿದ್ದ, ಕಳ್ಳತನ ಮಾಡಿ, ಜೂಜಾಡಿ ಹಣ ಸಂಪಾದಿಸಿದ.  ಅಷ್ಟುಹೊತ್ತಿಗೆ ಅಜಾಮಿಳನಿಗೆ ವಯಸ್ಸಾಗಿ, ಅಂತ್ಯಕಾಲ ಸಮೀಪಿಸಿತ್ತು.  ಯಮಕಿಂಕರರು ಬಂದು ಎಳೆದೊಯ್ಯುವಾಗ, ಭಯದಿಂದ ಅಜಾಮಿಳ ತನ್ನ ೮ ವರ್ಷದ ಕೊನೆಯ ಮಗನನ್ನು ’ನಾರಾಯಣ’ ಎಂದು ಕರೆದ.  ಮಗನ ಹೆಸರೆಂದು ಉಚ್ಛರಿಸಿದ ನಾಮ ಭಗವಂತನ ನಾಮವೆಂಬ ಸತ್ಯ ಅವನಿಗೆ ತನ್ನ ಪೂರ್ವ ಸಂಸ್ಕಾರದಿಂದ ತಿಳಿಯಿತು.  ಅರಿವು ಮೂಡಿದ ಅಜಾಮಿಳ ಭಕ್ತಿಪೂರ್ವಕವಾಗಿ ಭಗವಂತನ ನಾಮೋಚ್ಛಾರಣೆ ಮಾಡತೊಡಗಿದ.  ವಿಷ್ಣುದೂತರು ಬಂದು ಅವನನ್ನು ಬಿಡಿಸಿದರು.  ಅರಿವು ಮೂಡಿದ್ದ ಅಜಾಮಿಳ, ತಾನು ಅದುವರೆಗೆ ಮಾಡಿದ್ದ ಪಾಪಗಳನ್ನು ನೆನೆದು ಪಶ್ಚಾತ್ತಾಪಗೊಂಡು ಹರಿದ್ವಾರಕ್ಕೆ ಹೋಗಿ ನಿರಂತರ ಭಗವಂತನ ಸ್ಮರಣೆಯನ್ನು ಮಾಡುತ್ತಾ ಕಾಲಕಳೆದ.  ಕೊನೆಗೊಂದು ದಿನ ದಿವ್ಯವಿಮಾನದಲ್ಲಿ ವಿಷ್ಣುಲೋಕಕ್ಕೆ ತೆರಳಿದ.  ಈ ದೃಷ್ಟಾಂತದಿಂದ ಹರಿಸ್ಮರಣೆಯನ್ನು ಭಕ್ತಿಪೂರ್ವಕವಾಗಿಯೂ, ಶುದ್ಧ ಮನಸ್ಸಿನ ಪಶ್ಚಾತ್ತಾಪದಿಂದಲೂ ಮಾಡಿದಾಗ ಮಾತ್ರ ಪಾಪ ಪರಿಹಾರವಾಗುವುದೆಂಬುದು ಅರ್ಥವಾಗುತ್ತದೆ. 

ಶ್ರೀ ಪುರಂದರ ದಾಸರ ತಮ್ಮ "ಯಾರಿದ್ದರೇನಯ್ಯಾ ನೀನಿಲ್ಲದೆನಗಿಲ್ಲ" ಎಂಬ ಕೃತಿಯಲ್ಲಿ  |ಅಜಾಮಿಳನು ಕುಲಗೆಡಲು ಕಾಲದೂತರು ಬರಲು | ನಿಜಸುತನ ಕರೆಯೆ ನೀ ಅತಿ ವೇಗದಿ | ತ್ರಿಜಗದೊಡೆಯಾ ಪುರಂದರ ವಿಟ್ಠಲನ ಕರುಣದಲಿ | ನಿಜದೂತರನು ಕಳುಹಿ ಪೊರೆದೆಗಡ ಹರಿಯೇ || ಎಂದು ಅಜಾಮಿಳನ ಕಥೆಯನ್ನು ತಿಳಿಸಿದ್ದಾರೆ.

ಗೋಪ - ಗೋ ಎಂದರೆ ಮೇಲ್ನೋಟಕ್ಕೆ ಗೋವು, ಹಸು ಎಂಬರ್ಥವಿದ್ದರೂ ಕೂಡ, ಹಸುಗಳನ್ನು ಮೇಯಿಸುವವನೂ ಗೋಪನು.  ಇಂದ್ರನು ಕೃಷ್ಣನನ್ನು ಇಂತಹ ಒಬ್ಬ ಗೋಪನೆಂದು ತಿಳಿದು ಅಪರಾಧ ಮಾಡಿದ.  ಆ ಸಮಯದಲ್ಲಿ ಇಂದ್ರ ಸ್ವತಃ ಅಸುರಾವೇಶಕ್ಕೆ ಸಿಲುಕಿದ್ದ.  ಇಂದ್ರನೂ ’ಗೋಪ’ನೇ ಆಗುತ್ತಾನೆ, ’ಗೋ’ ಎಂದರೆ ಸ್ವರ್ಗ ಮತ್ತು ’ಪ’ ಎಂದರೆ ಅಧಿಪತಿ ಎಂದಾಗುತ್ತದೆ.  ಸ್ವರ್ಗಾಧಿಪತಿಯಾದ ಇಂದ್ರನೂ ಗೋಪನೇ ಆಗುತ್ತಾನೆ.  ಗೋವರ್ಧನಗಿರಿ ಪ್ರಕರಣದಲ್ಲಿ ಇಂದ್ರ ಕೃಷ್ಣನನ್ನು ಸಾಧಾರಣ ಗೋಪನೆಂದೇ ತಿಳಿದು ತಪ್ಪು ಮಾಡಿದ.  ಭಗವಂತ ಗೋವರ್ಧನಗಿರಿ ಎತ್ತಿ ಹಿಡಿದು ಭಕ್ತರನ್ನು ರಕ್ಷಿಸಿದ ಮತ್ತು ಇಂದ್ರನ ಅಹಂಕಾರವನ್ನು ದಮನ ಮಾಡಿದ.  ಹಾಗೇ ಪಾರಿಜಾತಪ್ರಕರಣದಲ್ಲಿ ಕೂಡ ಎಲ್ಲಾ ದೇವತೆಗಳನ್ನೂ ಸೇರಿಸಿಕೊಂಡು ಭಗವಂತನ ಮೇಲೆ ಆಕ್ರಮಣ ಮಾಡಿದ್ದ.  ಅಪರಾಧಗಳನ್ನು ಮಾಡಿ ಪಶ್ಚಾತ್ತಾಪದಿಂದ ಶರಣು ಬಂದಾಗ, ಭಗವಂತನು ಕರುಣೆಯಿಂದ ಇಂದ್ರನ ಈ ಎರಡೂ ಅಪರಾಧಗಳನ್ನೂ ಕ್ಷಮಿಸಿದ.

ಗುರುವಿನ ಮಡದಿ - ದೇವಗುರು ಭೃಹಸ್ಪತ್ಯಾಚಾರ್ಯರ  "ಮಡದಿ ತಾರೆಯನ್ನು," ಚಂದ್ರ ಮೋಹಿತಗೊಂಡು ಬಲಾತ್ಕಾರ ಮಾಡಿದಾಗ, ಅವಳು ಪ್ರತಿಭಟಿಸಲಿಲ್ಲ.  ಚಂದ್ರನನ್ನು ಸೇರಿ ’ಬುಧ’ನನ್ನು ಮಗನಾಗಿ ಪಡೆದಳು.  ಪತಿಯ ಶಿಷ್ಯನಾದ ಚಂದ್ರ ಅವಳಿಗೆ ಮಗನಿದ್ದಂತೆ.  ಹೀಗಿದ್ದರೂ ಅವಳು ಚಂದ್ರನನ್ನು ಪ್ರತಿಭಟಿಸದೇ ಇದ್ದದ್ದು ಮಹಾಪರಾಧವೇ.  ಆದರೆ ಪಶ್ಚಾತ್ತಾಪದಿಂದ ದಗ್ಧಳಾಗಿ ಬಂದು ಭಗವಂತನಲ್ಲಿ ಶರಣಾದಾಗ, ಭಗವಂತ ಅವಳನ್ನು ಈ ಅಪರಾಧಕ್ಕೆ ಶಿಕ್ಷಿಸಲಿಲ್ಲ.  ತಾರೆಯನ್ನು ಪ್ರಾತಃಸ್ಮರಣೀಯರಾದ ಪಂಚಕನ್ಯೆಯರಲ್ಲಿ ಒಬ್ಬಳನ್ನಾಗಿಸಿದ "ಕರುಣಾಮಯಿಯಾಗಿದ್ದಾನೆ.

ಭೃಗು - ಮಹಾಜ್ಞಾನಿಯಾದ ಭೃಗು ಋಷಿಗಳು ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರೆಂದು ನಿರ್ಣಯಿಸುತ್ತೇನೆಂದು ಹೊರಟಿರುತ್ತಾರೆ.  ವೈಕುಂಠಕ್ಕೆ ತೆರಳಿ ಅಲ್ಲಿ ಭಗವಂತ ರಮಾದೇವಿಯೊಡನಿರುವುದನ್ನು ಕಾಣುತ್ತಾರೆ.  ಕಣ್ಣು ಮುಚ್ಚಿ ಕುಳಿತ ಶ್ರೀಹರಿಯ ವಕ್ಷಸ್ಥಳಕ್ಕೆ ಕ್ರೋಧಾವೇಶದಿಂದ ಕಾಲಿನಿಂದ ಒದೆಯುತ್ತಾರೆ.  ಸರ್ವೋತ್ತಮನಾದ, ಸಾಕ್ಷಾತ್ ಭಗವಂತನಿಗೇ ಕಾಲಲ್ಲಿ ಒದ್ದು ಅಪರಾಧವೆಸಗುತ್ತಾರೆ.  ಪಾಪ ಮಾಡಿದ ಋಷಿಗಳು ಪಶ್ಚಾತ್ತಾಪ ಪಡುವುದಿಲ್ಲವಾದ್ದರಿಂದ ಅವರನ್ನು ಭಗವಂತ ಶಿಕ್ಷಿಸುತ್ತಾನೆ.  ಪರಮ ಜ್ಞಾನಿಯಾದ ಋಷಿಗಳನ್ನು, ಅವಿವೇಕಿ, ಅಜ್ಞಾನಿಯಾಗಿ ನೀಚಕುಲದಲ್ಲಿ ’ಜರಾ’ ಎಂಬ ಬೇಡನಾಗಿ ಹುಟ್ಟುವಂತೆ ಮಾಡುತ್ತಾನೆ.  ಬೇಡನಾಗಿ ಜರಾ ಬಿಟ್ಟ ಬಾಣವನ್ನು ಹೂವೆಂದು ಸ್ವೀಕರಿಸುತ್ತಾನೆ.  ಬಾಣ ಬಿಟ್ಟ ಬೇಡನಿಗೆ ತನ್ನ ಸ್ವರೂಪದ ಅರಿವನ್ನು ಕೊಡುತ್ತಾನೆ.  ಆಗ ಪಶ್ಚಾತ್ತಾಪದಿಂದ ಶರಣಾಗಿ, ತನ್ನ ಅಪರಾಧಕ್ಕೆ ಮತ್ತೆಂತಹ ಘೋರ ಶಿಕ್ಷೆಯನ್ನು ಕೊಡುವೆಯೋ ಪರಮಾತ್ಮ ಎಂದು ದುಃಖಿತರಾದಾಗ, ಭಗವಂತ ಅವರನ್ನು ಉದ್ಧರಿಸಿ ಕರುಣಾಸಾಗರನಾಗುತ್ತಾನೆ.

ನಗಚಾಪ - ನಗ ಎಂದರೆ ಬೆಟ್ಟವೆಂದು ಅರ್ಥ.  ಯಾರು ಬೆಟ್ಟವನ್ನೇ ಧನುಸ್ಸಾಗಿ ಮಾಡಿಕೊಂಡಿರುವನೋ ಅವನೇ ’ನಗಚಾಪ’ನಾದ, ಶಿವನು.  ಭಾಗವತದ ಸಪ್ತಮಸ್ಕಂದದಲ್ಲಿ ತ್ರಿಪುರಾಸುರರ ಸಂಹಾರದ ಕಥೆ ಬರುತ್ತದೆ.  ಮಯನ ಸಹಾಯದಿಂದ ಅಸುರರು ಬೆಳ್ಳಿ, ಬಂಗಾರ ಹಾಗೂ ಕಬ್ಬಿಣಗಳಿಂದ ಮಾಡಿದ ಮೂರು ಪಟ್ಟಣಗಳನ್ನು ಮಾಡಿಕೊಳ್ಳುತ್ತಾರೆ.  ಅದರಲ್ಲಿ ಅಡಗಿ ಸುರರನ್ನು ಪೀಡಿಸುತ್ತಾರೆ.  ದೇವತೆಗಳು ಶಿವನನ್ನ ಮೊರೆಹೋಗುತ್ತಾರೆ.  ಶಿವ ಪಾಶುಪತಾಸ್ತ್ರದಿಂದ ಎಲ್ಲವನ್ನೂ ಸುಟ್ಟುಬಿಡುತ್ತಾನೆ,  ಆದರೆ ಮಯನು ತಯಾರಿಸಿದ ಸಿದ್ಧಾಮೃತರಸದಲ್ಲಿ ಅಸುರರನ್ನು ಅದ್ದಿ ತೆಗೆದಾಗ ಅವರು ಇಮ್ಮಡಿ ಶಕ್ತಿಯಿಂದ ವಿಜೃಂಭಿಸುತ್ತಾರೆ.  ಶಿವನ ಸಹಾಯಕ್ಕೆ ಬಂದ ವಿಷ್ಣುವು ಗೋವಾಗಿಯೂ, ಬ್ರಹ್ಮ ಕರುವಾಗಿಯೂ ಬಂದು ಸಿದ್ಧಾಮೃತರಸವನ್ನು ಸಂಪೂರ್ಣವಾಗಿ ಕುಡಿದುಬಿಡುತ್ತಾರೆ.  ಆಕಳು ಮತ್ತು ವತ್ಸನನ್ನು ನೋಡಿದರೂ ಏನೂ ಮಾಡದೆ, ಕಾವಲಿದ್ದ ಅಸುರರು ಮೋಹಪಾಶಕ್ಕೆ ಒಳಗಾಗುತ್ತಾರೆ.  ಭಗವಂತ ಸಮಸ್ತ ದೇವತೆಗಳ ಶಕ್ತಿಗಳಿಂದ ಕೂಡಿದ ಆಯುಧಗಳನ್ನು ಶಿವನಿಗೆ ಒದಗಿಸುತ್ತಾನೆ.  ರಥ, ಸೂತ, ಧ್ವಜ, ಧನಸ್ಸು ಮತ್ತು ಕವಚಗಳನ್ನು ಕೊಟ್ಟು, ಅಭಿಮಾನಿ ದೇವತೆಗಳನ್ನು ನಿಲ್ಲಿಸುತ್ತಾನೆ .  ತಾನೇ ’ಬಾಣ’ರೂಪನಾಗಿ ಶಿವನ ಧನುಸ್ಸಿನಿಂದ ’ನಾರಾಯಣಬಾಣ’ವಾಗಿ ಅಸುರರ ಸಂಹಾರ ಮಾಡುತ್ತಾನೆ.   ಹೀಗೆ  ಭಗವಂತನು ತ್ರಿಪುರಾಸುರರ ಸಂಹಾರದ ಕೀರ್ತಿಯನ್ನು ಕೊಟ್ಟು ರುದ್ರದೇವರನ್ನು "ತ್ರಿಪುರಾರಿ" ಎನ್ನಿಸಿ, ಕರುಣಿಸಿದವನು.   ದಶಮಸ್ಕಂದದಲ್ಲಿ ಬಾಣಾಸುರನ ವಧೆಯ ಕಥೆ ತಿಳಿಸಲ್ಪಟ್ಟಿದೆ.   ಬಾಣಾಸುರನು ಬಲಿಚಕ್ರವರ್ತಿಯ ಮಗನು ಮತ್ತು ಸಾವಿರ ತೋಳುಗಳನ್ನು ಹೊಂದಿದ್ದನು.  ಒಮ್ಮೆ ಶಂಕರನ ತಾಂಡವ ನೃತ್ಯಕ್ಕೆ ಸಾವಿರಾರು ವಾದ್ಯಗಳನ್ನು ಒಟ್ಟಾಗಿ ನುಡಿಸಿ, ಪ್ರಸನ್ನಗೊಳಿಸಿ, ಶಿವ ತನ್ನ ಪಟ್ಟಣವನ್ನು ರಕ್ಷಣೆ ಮಾಡಬೇಕೆಂಬ ಕೋರಿಕೆಯನ್ನು ವರವಾಗಿ ಪಡೆಯುತ್ತಾನೆ.  ಒಮ್ಮೆ ಬಾಣಾಸುರನು ತನ್ನ ಸಾವಿರ ತೋಳುಗಳಿಂದ ಯುದ್ಧ ಮಾಡಿ ಜಯಿಸಲು ಸಮಾನರು ಯಾರೂ ಇಲ್ಲವೆಂಬ ಅಹಂಕಾರದಿಂದ ಮಾತಾಡುತ್ತಾನೆ. ಶಂಕರ ಅಂತಹ ಮಹಾತ್ಮನೊಬ್ಬ ಬರುವನೆಂದು ಎಚ್ಚರಿಸಿದ್ದನು.  ರುಗ್ಮಿಯ ಮಗಳು ರುಗ್ಮವತಿ ತನ್ನ ನೀತಪತಿಯಾದ ಪ್ರದ್ಯುಮ್ನನನ್ನು ವರಿಸಿ, ಅನಿರುದ್ಧನನ್ನು ಪುತ್ರನನ್ನಾಗಿ ಪಡೆಯುತ್ತಾಳೆ.  ಬಾಣಾಸುರನ ಮಗಳಾದ ಉಷೆ ತನ್ನ ನೀತಪತಿಯಾದ ಅನಿರುದ್ಧನನ್ನು ಮಿತ್ರಳಾದ ಚಿತ್ರಲೇಖೆಯ ಮೂಲಕ ಗಗನಮಾರ್ಗದಿಂದ ಕರೆಸಿಕೊಂಡು, ಗಾಂಧರ್ವ ವಿವಾಹವಾಗುತ್ತಾಳೆ.  ತನ್ನ ಮಗಳ ಅಂತಃಪುರದಲ್ಲಿ ಅನಿರುದ್ಧನಿರುವುದನ್ನು ತಿಳಿದು ಬಾಣಾಸುರನು ಯುದ್ಧ ಪ್ರಾರಂಭಿಸಿದನು.  ನಾರದರಿಂದ ಯುದ್ಧದ ವಿಷಯ ತಿಳಿದು ಶ್ರೀಕೃಷ್ಣನು ಬಾಣನ ಪಟ್ಟಣಕ್ಕೆ ಬಂದು ಸಮಸ್ತ ಸೈನ್ಯವನ್ನೂ ನಾಶಮಾಡಿದನು.  ಬಾಣಾಸುರವ ಪಟ್ಟಣವನ್ನು ರಕ್ಷಣೆ ಮಾಡುತ್ತೇನೆಂಬ ವರಕೊಟ್ಟಿದ್ದ ಶಿವನು ಅನಿವಾರ್ಯವಾಗಿ ಶ್ರೀಕೃಷ್ಣನೊಡನೆ ಯುದ್ಧಕ್ಕೆ ನಿಲ್ಲುತ್ತಾನೆ.  ಯುದ್ಧದಲ್ಲಿ ಪರಾಜಯಗೊಂಡ ಶಿವನು ತನ್ನ ಭಕ್ತನಾದ ಬಾಣನನ್ನು ಕೊಲ್ಲಬೇಡವೆಂದು ಶ್ರೀಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ.  ಭಗವಂತ ಬಾಣಾಸುರನ ೧೦೦೦ ತೋಳುಗಳನ್ನು ಕತ್ತರಿಸಿ, ಕೇವಲ ಎರಡು ತೋಳುಗಳನ್ನು ಉಳಿಸುತ್ತಾನೆ.  ತನಗೆ ಎದುರಾಗಿ ಯುದ್ಧಮಾಡಿದ ಶಂಕರನ ಅಪರಾಧವನ್ನು ಪರಿಗಣಿಸದೇ,  ಶಿವನ ಪ್ರಾರ್ಥನೆಯಂತೆ ಬಾಣನನ್ನು ಉಳಿಸಿ ಕರುಣಿಸುತ್ತಾನೆ.

ಪಾಪಕರ್ಮವನ್ನು ಸಹಿಸುವುದೆಂದರೆ ನಿಷಿದ್ಧ ಕರ್ಮಗಳನ್ನು ಮಾಡುತ್ತಲೇ ಇರುವುದನ್ನು ಸಹಿಸುವುದೆಂದರ್ಥವಲ್ಲ.  ಅಸುರಾವೇಶಕ್ಕೊಳಗಾಗಿ, ತಾಮಸ ಕರ್ಮಗಳನ್ನು ಮಾಡುತ್ತಾ ಯಾರು ಭಗವಂತನ ವಿಸ್ಮರಣೆ ಮಾಡುತ್ತಾರೋ ಅವರು ತಮ್ಮ ಕುಕರ್ಮಗಳಿಗೆ ತಕ್ಕ ಫಲವನ್ನು ಅನುಭವಿಸಲೇಬೇಕು.  ಆದರೆ ಯಾರು ತಮ್ಮ ಪಾಪಕರ್ಮಗಳನ್ನು ಅರಿತು ನಿಜವಾಗಿಯೂ ಪಶ್ಚಾತ್ತಾಪದಿಂದ ಭಗವಂತನ ಸ್ಮರಣೆ ಮಾಡುತ್ತಾರೋ, ಅಂತಹ ಪಾಪಕರ್ಮಗಳನ್ನು ಭಗವಂತನು ಸಹಿಸುತ್ತಾನೆಂದು ಅರ್ಥವಾಗುತ್ತದೆ.  ಹಾಗೆಂದು ಎಲ್ಲರಿಗೂ ಪ್ರಾಯಶ್ಚಿತ್ತ ಕರ್ಮಗಳು ಫಲಪ್ರದವಾಗುವುದಿಲ್ಲ.  ಪ್ರಾಯಶ್ಚಿತ್ತದಲ್ಲೂ ಯಾರು ಭಗವಂತನಿಗೆ ವಿನಮ್ರರಾಗಿರುತ್ತಾರೋ ಅವರಿಗೆ ಮಾತ್ರ ಇದು ಫಲಪ್ರದವಾಗುತ್ತದೆ.  ಯಾರು ಶುದ್ಧ ಭಕ್ತಿಯಿಂದ ಸ್ಮರಣೆ ಮಾಡುತ್ತಾರೋ ಅವರು ಪಾಪಿಗಳಾಗಿದ್ದರೂ ಕೂಡ ಭಗವಂತ ಅವರ ಅಪರಾಧಗಳನ್ನು ಸ್ಮರಿಸಿ, ಇಷ್ಟಾರ್ಥಗಳನ್ನು ಕರುಣೆಯಿಂದ ಪೂರೈಸುತ್ತಾನೆ.  ಶ್ರೀ ಕುಲಶೇಖರ್ ಆಳ್ವಾರ್ ವಿರಚಿತ ’ಮುಕುಂದಮಾಲಾ ಸ್ತೋತ್ರ’ದಲ್ಲಿ "ಶ್ರೀಮನ್ನಾಮ ಪ್ರೋಚ್ಯ ನಾರಾಯಣಾಖ್ಯಂ | ಕೇನ ಪ್ರಾಪುರ್ವಾಂಛಿತಂ ಪಾಪಿನೋSಪಿ|| - ನಾರಾಯಣ ಎಂಬ ನಾಮ ಸ್ಮರಣೆಯಿಂದ ಪಾಪಿಗಳೂ ಕೂಡ ಇಷ್ಟಾರ್ಥಗಳನ್ನು ಪಡೆಯುತ್ತಾರಾದ್ದರಿಂದ ಯಾರು ಬೇಕಾದರೂ ಭಗವನ್ನಾಮ ಸ್ಮರಣೆ ಮಾಡಬಹುದು ಎಂದಿದ್ದಾರೆ.

ಭಗವದ್ಗೀತೆಯಲ್ಲಿ ಭಗವಂತ
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇSಪಿ ಸ್ಯುಃ ಪಾಪಯೋನಯಃ |
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇSಪಿ ಯಾಂತಿ ಪರಾಂ ಗತಿಮ್ || - ಎಲ್ಲೈ ಅರ್ಜುನ ಸ್ತ್ರೀಯರು, ವೈಶ್ಯರು, ಶೂದ್ರರು ಹಾಗೆಯೇ ಚಂಡಾಲರು / ಪಾಪಿಗಳು ಯಾರೇ ಆಗಿರಲಿ, ಅವರು ಕೂಡ ನನ್ನಲ್ಲಿ ಶರಣಾಗಿ ಪರಮ ಗತಿಯನ್ನೇ ಪಡೆಯುತ್ತಾರೆ ಎಂದಿದ್ದಾನೆ.

ಶ್ರೀ ಶಂಕರಾಚಾರ್ಯರು ತಮ್ಮ "ಗೋವಿಂದಾಷ್ಟಕಮ್" ನಲ್ಲಿ :
ಗೋವಿಂದಾಷ್ಟಕಮೇತದಧೀತೇ ಗೋವಿಂದಾರ್ಪಿತ ಚೇತಾಯೋ |
ಗೋವಿಂದಾಚ್ಯುತ ಮಾಧವ ವಿಷ್ಣೋ  ಗೋಕುಲನಾಯಕ ಕೃಷ್ಣೇತಿ ||
ಗೋವಿಂದಾಂಘ್ರಿ ಸರೋಜಧ್ಯಾನ ಸುಧಾಜಲಧೌತ ಸಮಸ್ತಾಘಃ |
ಗೋವಿಂದಂ ಪರಮಾನಂದಾಮೃತ ಮಂತಸ್ಥಂಸ ಸಮಭ್ಯೇತಿ || - ಯಾರು ಗೋವಿಂದನಿಗೆ ಮನವನ್ನರ್ಪಿಸಿ ಗೋವಿಂದ, ಅಚ್ಯುತ, ಮಾಧವ, ವಿಷ್ಣುವೇ, ಗೋಕುಲನಾಯಕ, ಕೃಷ್ಣನೆನ್ನುತ್ತ ಗೋವಿಂದನನ್ನು ಸ್ಮರಿಸುತ್ತಾರೋ ಅವರು ಗೋವಿಂದನ ಚರಣ ಕಮಲ ಸುಧಾಜಲದಿಂದ ಎಲ್ಲ ಪಾಪಗಳನ್ನೂ ತೊಳೆದು ತನ್ನಲ್ಲಿರುವ ಪರಮಾನಂದಾಮೃತ ರೂಪಿ ಗೋವಿಂದನನ್ನೇ ಪಡೆಯುವರು ಎಂದಿದ್ದಾರೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ
ಪುಣ್ಯಪಾಪಾದಿಗಳು ನಿನ್ನಾಧೀನದೊಳಿರಲು
ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ
ನಿನ್ನರಿವ ಜ್ಞಾನ ಕರುಣಿಸೊ || -  ನೀನೇ ಸರ್ವಕರ್ತ, ಪುಣ್ಯಪಾಪಾದಿ ಕರ್ಮಗಳನ್ನು ಮಾಡಿ, ನಿನ್ನ ಅಧೀನನು, ದಾಸನೂ ಆದ ನನ್ನಿಂದ ಮಾಡಿಸುವೆ ಎಂಬ  ಜ್ಞಾನವನ್ನು ನನಗೆ ಕೊಟ್ಟು, ಆ ಮೂಲಕ ಪಾಪಪುಣ್ಯಗಳ ಲೇಪನವಾಗದಂತೆ ಅನುಗ್ರಹಿಸು ಎಂದಿದ್ದಾರೆ.

ಪಾಪ ಪುಣ್ಯಗಳು ಬರಲಾಪವೆ ನಿನ್ನುಳಿದು
ಪ್ರಾಪಕನು ನೀನೆ ಇರಲಾಗಿ | ಇರಲಾಗಿ ತಿಳಿಯದುದೆ
ಪಾಪ ತಿಳಿಯುವುದೆ ಮಹಪುಣ್ಯ || - ಭಗವಂತ ಪಾಪಪುಣ್ಯಗಳೆಲ್ಲಕ್ಕೂ ನೀನೇ ಪ್ರಾಪಕನು ಎಂದು ಅರಿಯದಿರುವುದೇ ಪಾಪ ಹಾಗೂ ಸರ್ವನಿಯಾಮಕ ನೀನೇ ಎಂಬುದನ್ನು ತಿಳಿಯುವುದೇ ಪುಣ್ಯ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ "ಪುಣ್ಯಪಾಪ ಋಣಾನುಬಂಧ ವಾಸಗೆಗಳಿವು | ಜನ್ಮಾಂತರದ ಕರ್ಮಶೇಷದಂಶಗಳು|| ಎಂದಿದ್ದಾರೆ.  ಎಲ್ಲದಕ್ಕೂ ಭಗವಂತನೇ ಕಾರಣವೆಂಬುದನ್ನು "ಪಾರಬ್ಧ ಕರ್ಮಮುಂ ದೈವಿಕದ ಲೀಲೆಯುಂ" ಎಂದಿದ್ದಾರೆ.  ಭಗವಂತನಿಗೆ ಶರಣಾಗದ "ಪಾಪಿಯನ್ನು ಪ್ರೋತ್ಸಹಿಸಿ (ಪಾಪಕರ್ಮಗಳನ್ನೇ ಮಾಡುವ ಪ್ರೇರಣೆ ಕೊಡುವುದು) ಸುಕೃತಿಯ ಪರೀಕ್ಷಿಸುತ ವೇಪಿಪನು ವಿಧಿ" - ಸುಜೀವಿಗಳನ್ನು ನಾನಾವಿಧವಾಗಿ ಪರೀಕ್ಷಿಸುತ್ತಾ ಪಕ್ವ ಮಾಡುತ್ತಾನೆ.  ಭೂಮಂಡಲದಲ್ಲಿ ಒಂದು ಸತ್ವಯುತವಾದ ಪಾಕವನ್ನು ಭಗವಂತ ತಯಾರಿಸುತ್ತಾನೆಂಬುದನ್ನು "ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ | ಭೂಪುಟದಿ ಜೀವರಸಗಳ ಪಚಿಸುವಂತೆ" || - ಸೂರ್ಯ ತನ್ನ ತಾಪದಿಂದ ಭೂಮಂಡಲದ ವಸ್ತುಗಳನ್ನು ಕಿರಣಗಳ ಮೂಲಕ ಗ್ರಹಿಸಿ ಪಾಕ ಮಾಡುತ್ತಾನೆ ಮತ್ತು ವೈದ್ಯನಾಗಿ ಋತುಗಳ ಮೂಲಕ ಸುಡುತ್ತಾನೆ, ಮಳೆಗೆ ಕಾರಣನಾಗಿ ತಂಪು ಮಾಡುತ್ತಾನೆ, ಪ್ರವಾಹ, ಭೂಕಂಪಗಳನ್ನು ಮಾಡಿ ಕುಲುಕಿಸುತ್ತಾನೆ.  ಹೀಗೆ ಮಾಡಿ ಪಾಕ ಸೃಷ್ಟಿಮಾಡಿ ಪಾಪಿಗಳನ್ನು ಪ್ರಚೋದಿಸಿ, ಸುಕೃತಿಗಳನ್ನು ತಾವು ಮಾಡಿದ ಒಳ್ಳೆಯ ಕರ್ಮಗಳ ಮೂಲಕ ಪರೀಕ್ಷಿಸಿ ಅವರವರಿಗೆ ತಕ್ಕುದಾದ ಗತಿಯನ್ನು ಕೊಡುತ್ತಾನೆ ಎಂದಿದ್ದಾರೆ.  ಒಟ್ಟಿನಲ್ಲಿ ಎಲ್ಲಕ್ಕೂ ಆ ಭಗವಂತನೇ ಒಡೆಯ ಸರ್ವಸ್ವತಂತ್ರ ಮತ್ತು ಕಾರಣಪುರುಷ ಎಂಬುದನ್ನು "ಒಟ್ಟಿನಲಿ ತತ್ತ್ವವಿದು ವಿಕಟರಸಿಕನೊ ಧಾತ | ತೊಟ್ಟಿಲನು ತೂಗುವನು, ಮಗುವ ಜಿಗುಟುವನು"| ಎಂಬ ಮಾತಿನಲ್ಲಿ ವ್ಯಕ್ತಪಡಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ

Friday, February 28, 2014

ಕರುಣಾ ಸಂಧಿ - ೧೮ ನೇ ಪದ್ಯ

ಭುವನ ಪಾವನಚರಿತ ಪುಣ್ಯ
ಶ್ರವಣ ಕೀರ್ತನ ಪಾಪನಾಶನ
ಕವಿಭಿರೀಡಿತ ಕೈರವದಳ ಶ್ಯಾಮ   ನಿಸ್ಸೀಮ |
ಯುವತಿ ವೇಷದಿ ಹಿಂದೆ ಗೌರೀ
ಧವನ ಮೋಹಿಸಿ ಕೆಡಿಸಿ ಉಳಿಸಿದ
ಇವನ ಮಾವಯ ಗೆಲುವನಾವನು ಈ ಜಗತ್ರಯದಿ  ||೧೮||

ಪ್ರತಿಪದಾರ್ಥ : ಭುವನ ಪಾವನಚರಿತ - ೧೪ ಲೋಕಗಳನ್ನೂ ಪವಿತ್ರಗೊಳಿಸುವಂತಹ ಮಹಿಮೆಯ ಕಥೆಯನ್ನುಳ್ಳವನು, ಪುಣ್ಯ ಶ್ರವಣ ಕೀರ್ತನ - ತನ್ನ ಕಥಾ ಶ್ರವಣ ಮಾಡುವವರಿಗೂ ಶ್ರವಣ ಮಾಡುವವರಿಗೂ ಪುಣ್ಯ ಕೊಡುವವನು, ಪಾಪನಾಶನ - ಸಮಸ್ತ ಪಾಪಗಳನ್ನೂ ನಾಶ ಮಾಡುವವನು, ಕವಿಭಿರೀಡಿತ - ಕವಿ ಎಂದರೆ ಜ್ಞಾನಿಗಳು ಈ ಡಿತ ಎಂದರೆ ಸ್ತುತನಾದವನು ಎಂದರ್ಥ, ಕೈರವದಳ ಶ್ಯಾಮ - ನೈದಿಲೆ ದಳದ ನೀಲವರ್ಣದಂತೆ ವಿಶಿಷ್ಟವಾದ ಕಾಂತಿಯುಳ್ಳವನು, ನಿಸ್ಸೀಮ - ದೇಶ ಕಾಲ ಗುಣಗಳಲ್ಲಿ ಮಿತಿಯಿಲ್ಲದವನು, ಯುವತಿ ವೇಶದಿ - ಸಮುದ್ರ ಮಥನ ಸಮಯದಲ್ಲಿ ಮೋಹಿನಿ ವೇಷ ಧರಿಸಿ, ಹಿಂದೆ - ಶಿವ ಮೋಹಿನಿ ರೂಪವನ್ನು ನೋಡಬೇಕೆಂದು ಪ್ರಾರ್ಥಿಸಿದಾಗ, ಗೌರಿಧವನ - ಪಾರ್ವತಿ ಪತಿಯಾದ ಶಿವನ, ಮೋಹಿಸಿ - ಮೋಹಗೊಳಿಸಿ, ಕೆಡಿಸಿ - ಆ ಸಮಯದಲ್ಲಿ ಶಿವನಿಗೆ ಅಜ್ಞಾನ ಕೊಟ್ಟು, ಉಳಿಸಿದ - ರಕ್ಷಿಸಿದ, ಇವನ ಮಾಯವ ಗೆಲುವನಾವನು - ಭಗವಂತನಾದ ಶ್ರೀಹರಿಯ ಮಾಯೆಯನ್ನು ಯಾರಿಂದ ಗೆಲ್ಲಲು ಸಾಧ್ಯವಿದೆ, ಈ ಜಗತ್ರಯದಿ - ಮೂರು ಲೋಕಗಳಲ್ಲಿಯೂ.
 

ಚತುರ್ದಶ ಲೋಕಗಳಲ್ಲಿ ಪವಿತ್ರತರವಾದ ಚರಿತ್ರೆಗಳುಳ್ಳ ಜೀವರು ಮೋಕ್ಷ ಪಡೆಯುವುದಕ್ಕಾಗಿ ಪುಣ್ಯಕಾರ್ಯವಾದ ಸಚ್ಚಾಸ್ತ್ರಗಳ ಶ್ರವಣ ಮತ್ತು ಪಠಣ ಮಾಡುವುದರಿ೦ದ, ಇ೦ತಹ ಸುಜೀವರ ಪಾಪನಾಶನೂ ಆದ  ಭಗವ೦ತನು, ಬ್ರಹ್ಮಾದಿ ದೇವತೆಗಳಿಂದ ಸ್ತುತಿಸಲ್ಪಟ್ಟವನೂ,  ನೈದಿಲೆಯಂತೆ ನೀಲವರ್ಣದವನೂ, ವಿಶಿಷ್ಟವಾದ ಕಾಂತಿಯುಳ್ಳವನೂ ಆಗಿರುವ ಮಹಾ ನಿಸ್ಸೀಮನು. ಬ್ರಹ್ಮಜ್ಞಾನಿಗಳಿ೦ದ ಸ್ತುತ್ಯನಾದ ಅತ್ಯ೦ತ ಪರಾಕ್ರಮಶಾಲಿಯೂ ಆಗಿದ್ದಾನೆ.   ಅಮೃತ ಮಂಥನ ಕಾಲದಲ್ಲಿ ಇವನು ಧರಿಸಿದ ಮೋಹಿನಿ ವೇಷವನ್ನು ನೋಡಲಿಲ್ಲವೆಂದು ಪಾರ್ವತೀ ಪತಿಯಾದ ರುದ್ರನು ಕೇಳಿದಾಗ, ಮೋಹಿನಿ ರೂಪವನ್ನು ತಾಳಿ ನಿಂತ ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಇಂತಹವನ ಮಾಯೆಯನ್ನು ಮೂರು ಜಗದಲ್ಲಿ ಯಾರಿಗಾದರೂ ಗೆಲ್ಲಲು ಸಾಧ್ಯವೇ ?  ಮನ್ಮಥ ದಹನ ಮಾಡಿದ ಫಾಲಾಕ್ಷನದೇ ಈ ಪಾಡಾದ ಮೇಲೆ ಬೇರೆಯವರ ಪಾಡೇನು ? 

ಹಿಂದಿನ ಪದ್ಯದಲ್ಲಿ ಶ್ರೀ ಜಗನ್ನಾಥದಾಸರು ಶ್ರೀಹರಿಯು ಸಜ್ಜನ ಭಕ್ತರಿಗೆ ಕರುಣಿಸುವ ಮೋಕ್ಷಸುಖದ ವಿಷಯವನ್ನು ತಿಳಿಸಿದ್ದರು.  ಈ ಪದ್ಯದಲ್ಲಿ, ಭಕ್ತನು ಸಂಸಾರದಲ್ಲಿದ್ದರೂ, ಅವನಿಗೆ ವಿಷಯ ಸುಖಗಳನ್ನು ನೀಡಿ, ಆ ಸುಖದಲ್ಲಿಯೇ ಅವನು ಮುಳುಗದಂತೆಯೂ ಎಚ್ಚರಿಸುವ, ರಕ್ಷಿಸುವ ಭಗವಂತನ ಕಾರುಣ್ಯವನ್ನು ವಿವರಿಸುತ್ತಾರೆ.  ಭಗವಂತನ ಕಾರುಣ್ಯಕ್ಕೆ ಮಿತಿಯಿಲ್ಲವೆಂಬುದಕ್ಕೆ,  ಅತ್ಯದ್ಭುತವಾದ, ಅತಿಶಯ ಸುಂದರವಾದ ಮೋಹಿನೀ ರೂಪವನ್ನು ನೋಡಿ ಮೋಹಿಸಿದ ರುದ್ರದೇವರ ದೃಷ್ಣಾಂತವನ್ನು ತಿಳಿಸಿದ್ದಾರೆ.  ಭಗವಂತನ ಗುಣಗಳನ್ನು ಅನೇಕ ವಿಶೇಷ ಪದಪುಂಜಗಳಿಂದ ವರ್ಣಿಸಿದ್ದಾರೆ.   

ಭುವನಪಾವನಚರಿತ - ಭಗವಂತನ ಪಾವನವಾದ ಪುಣ್ಯಕರವಾದ ಚರಿತ್ರೆಯನ್ನು ಕೇಳುವುದರಿಂದ ಭೂಮಂಡಲದ ಸಕಲ ಜೀವರಾಶಿಗಳಿಗೂ ಪುಣ್ಯ ಬರುತ್ತದೆ.  ಆದ್ದರಿಂದಲೇ ಭಗವಂತನು ಭುವನ ಪಾವನ ಚರಿತನು.  ಶ್ರೀಹರಿಯ ಕಥೆಯನ್ನು ಶ್ರವಣ ಮಾಡುವುದರಿಂದಲೇ ಅವನು ಭಕ್ತರ ಶ್ರವಣೇಂದ್ರಿಯಗಳ ಮೂಲಕ ಹೃದಯಕ್ಕೆ ಪ್ರವೇಶಿಸಿ, ಅಲ್ಲಿ ತುಂಬಿರುವ ಪಾಪಗಳನ್ನೆಲ್ಲಾ ನಾಶಮಾಡುತ್ತಾನೆ.

ಪುಣ್ಯಶ್ರವಣಕೀರ್ತನ - ಯಾರ ಗುಣಗಳನ್ನು ಉಪಾಸಿಸುವುದರಿಂದಲೂ, ಶ್ರವಣ ಮಾಡುವುದರಿಂದಲೂ, ಹೃದಯದಲ್ಲಿ ತುಂಬಿಸಿಕೊಳ್ಳುವುದರಿಂದಲೂ, ಅರಿಯುವ ಪ್ರಯತ್ನ ಮಾಡುವುದರಿಂದಲೂ ಮತ್ತು ಅರಿತ ಕಿಂಚಿತ್ತನ್ನು ಮತ್ತೊಬ್ಬರಿಗೆ ತಿಳಿಸುವೆವೋ, ಅವನು ಪುಣ್ಯಶ್ರವಣಕೀರ್ತನನು.  ಭಾಗವತದಲ್ಲಿ ಲಕ್ಷ್ಮೀದೇವಿಯಲ್ಲಿರುವ ಭಕ್ತಿ ಬೇರೆ ಯಾರಲ್ಲೂ ಇಲ್ಲವೆಂದೂ, ಭಗವಂತನ ಮಂಗಳಕರವಾದ ಕೀರ್ತಿಯನ್ನು ಆವೃತ್ತಿಮಾಡುವ ಇಚ್ಛೆಯಿಂದಲೂ ಮತ್ತು ಭಗವಂತನ ಗುಣಗಳ ಉಪದೇಶವನ್ನು ಹೊಂದಬೇಕೆಂಬ ಇಚ್ಛೆಯಿಂದಲೂ, ಸಾಕ್ಷಾತ್ ಲಕ್ಷ್ಮೀದೇವಿಯೇ ಸದಾ ಕಾಲವೂ ಭಗವಂತನ ಪುಣ್ಯಕೀರ್ತಿಯ ಶ್ರವಣವನ್ನು ಅಪೇಕ್ಷಿಸುವಳು ಎಂಬ ಮಾತು ಉಲ್ಲೇಖವಾಗಿದೆ.  ವಿಷ್ಣು ಸಹಸ್ರನಾಮದಲ್ಲಿ "ಪುಣ್ಯಕೀರ್ತಯೇ ನಮಃ" ಮತ್ತು "ಪುಣ್ಯಶ್ರವಣಕೀರ್ತನಾಯ ನಮಃ" ಎಂದಿದೆ.  ಭಗವಂತನು ಅನಂತ ಕಲ್ಯಾಣ ಗುಣ ಸಂಪನ್ನನು. ಅವನ ತೇಜಸ್ಸು ಅದ್ಭುತ ಹಾಗೂ ಅವನ ಕೀರ್ತಿ ಅಪಾರ.  ಭಗವಂತನ ಅಪಾರ ಕೀರ್ತಿಯನ್ನು ಸದಾ ಧ್ಯಾನಿಸುವವರಿಗೆ ಯಶಸ್ಸು ಖಂಡಿತವಾಗಿ ಸಿಕ್ಕುವುದು.  ಭಗವಂತನ ಅಪಾರ ಮಹಿಮೆಯನ್ನು ಕೇಳುವುದರಿಂದಲೇ ಆತ್ಮಲಾಭ, ಆತಿಶಯಾನಂದ, ನಿರತಿಶಯ ಸುಖವು ಲಭಿಸುವುದು ಮತ್ತು ಪುಣ್ಯ ಪ್ರಾಪ್ತಿಯಾಗುವುದು.  ಭಗವಂತನ ಸಾಕ್ಷಾತ್ಕಾರವಾದವರಿಂದ ಭಗವಂತನ ಅಚಿಂತ್ಯ ಮಹಿಮೆಯನ್ನು ಕೇಳುವುದೇ ಸದ್ಗತಿಗೆ ದಾರಿಯಾಗುತ್ತದೆ.  ಭಾಗವತದಲ್ಲಿ ತಿಳಿಸಿರುವಂತೆ ಪರೀಕ್ಷಿತ್ ಮಹಾರಾಜ ಭಗವಂತನ ಪುಣ್ಯ ಕಥೆಯನ್ನು ಶ್ರವಣ ಮಾಡಿಯೇ ಸದ್ಗತಿ ಪಡೆದನು.  ಭಾಗವತದ ಮೊದಲನೇ ಸ್ಕಂದದಲ್ಲಿ "ಶೃಣುತ್ವಾಂ ಸ್ವಕಥಾಂ ಕೃಷ್ಣಃ ಪುಣ್ಯಶ್ರವಣಕೀರ್ತನಃ | ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ ಸತಾಮ್"|| - ಪುಣ್ಯಶ್ರವಣಕೀರ್ತನ ಎಂಬ ನಾಮವುಳ್ಳವನಾದ ಶ್ರೀಕೃಷ್ಣ ಪರಮಾತ್ಮನು ತನ್ನ ಕಥೆಯನ್ನು ಕೇಳುವವರ ಅಂತಃಕರಣದೊಳಗೆ ಪ್ರವೇಶಿಸುತ್ತಾನೆ ಮತ್ತು ಅವರ ಸಕಲ ಪಾಪಗಳನ್ನೂ ಪರಿಹರಿಸುತ್ತಾನೆ ಎಂಬ ಮಾತು ತಿಳಿಸಲಾಗಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪುಣ್ಯೋ ವೈ ಪುಣ್ಯೇನ ಕರ್ಮಣಾ ಭವತಿ" - ಪುಣ್ಯ ಕರ್ಮಗಳನ್ನು ಮಾಡುವುದರಿಂದ ಮನುಷ್ಯನು ಪುಣ್ಯವಂತನಾಗುತ್ತಾನೆ ಎಂಬ ಉಲ್ಲೇಖವಿದೆ.  ಭಗವಂತನ ಗುಣಗಳನ್ನು ಉಪಾಸಿಸುವುದೇ ಜೀವಿ ಮಾಡಬಹುದಾದ ಪುಣ್ಯ ಕರ್ಮವು.  ಸದಾ ನಿರತವೂ ಸಂಕೀರ್ತನೆಯನ್ನು ಮಾಡುತ್ತಾ, ಶ್ರವಣ ಮಾಡುತ್ತಾ ಇರುವುದರಿಂದ ನಮ್ಮೊಳಗಿನಲ್ಲಿ ವಿಚಾರಶಕ್ತಿಯು ಬೆಳೆಯುತ್ತದೆ ಮತ್ತು ಧನಾತ್ಮಕ ಭಾವಗಳ ಧಾರೆಯೇ ಹರಿಯುತ್ತದೆ, ಸದಾಚಾರ ಬೆಳೆಯುತ್ತದೆ.  ಶಾಂತಿ, ಧೈರ್ಯ ಹೆಚ್ಚುತ್ತದೆ.   ಸಂತತಂ ಚಿಂತಯೇ ಅನಂತಂ ಎಂಬುದನ್ನು ಅಭ್ಯಾಸ ಮಾಡಿಕೊಂಡಾಗ, ಅಂತ್ಯಕಾಲದಲ್ಲಿ ವಿಶೇಷವಾಗಿ ಭಗವಂತನ ಸ್ಮರಣೆ ಸಿಕ್ಕುತ್ತದೆ.  ವಿಷ್ಣುಸಹಸ್ರನಾಮದ ಫಲಶ್ರುತಿಯಲ್ಲಿ "ಯ ಇದಂ ಶ್ರುಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ | ನಾ ಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || - ಯಾರು ಭಗವಂತನ ಸಹಸ್ರನಾಮವನ್ನು ನಿತ್ಯವೂ ಕೇಳುವರೋ, ಹಾಡುವರೋ ಅವರಿಗೆ ಇಲ್ಲಿಯಾಗಲೀ, ಪರಲೋಕದಲ್ಲಿಯಾಗಲೀ ಸ್ವಲ್ಪವೂ ಕೆಡುಕಾಗುವುದಿಲ್ಲ ಎಂದಿದ್ದಾರೆ. 

ಪಾಪನಾಶನ - ವಿಷ್ಣು ಸಹಸ್ರನಾಮದಲ್ಲಿ "ದೇವಕೀನನ್ದನಃ (ದೇವಕೀ ನಂದನ) ಸ್ರಷ್ಟಾ ಕ್ಷಿತೀಶಃ ಪಾಪನಾಶನಃ" -  ದೇವಕೀ ಪುತ್ರನಾದ ಏಕೋ ದೇವನಾದ ಶ್ರೀಕೃಷ್ಣನೇ ಏಕಮೇವಾದ್ವಿತೀಯನಾದ ನಾರಾಯಣನು.  ಇವನ ನಾಮ ಸಂಕೀರ್ತನೆ ಮಾಡಿದರೆ, ಬೆಂಕಿಯು ಧಾತುವನ್ನು ಕರಗಿಸಿಬಿಡುವಂತೆ, ಸರ್ವ ಪಾಪಗಳನ್ನೂ ಸುಟ್ಟು ಭಸ್ಮ ಮಾಡಿಬಿಡುವನು ಎಂದು ತಿಳಿಸಲಾಗಿದೆ.  ಹಾಗೇ  ಫಲಶೃತಿಯಲ್ಲಿ "ಸರ್ವ ಪಾಪ ವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್"  - ಸರ್ವ ಪಾಪಗಳನ್ನೂ ಶುದ್ಧಗೊಳಿಸುವ ಒಂದೇ ಒಂದು ಆತ್ಮ, ಅವನೇ  ಪರಬ್ರಹ್ಮ ಎಂಬ ಉಲ್ಲೇಖವಿದೆ.  ಬೃಹದಾರಣ್ಯಕ ಉಪನಿಷತ್ತಿನ ಪಂಚಮಾಧ್ಯಾಯದ ಎರಡನೆಯ ಶಾಖೆಯಲ್ಲಿ "ಪಾಪಃ ಪಾಪೇನೇತಿ" - ಭಗವಂತನನ್ನು ಧ್ಯಾನಿಸದೆ ಪಾಪ ಕರ್ಮಗಳನ್ನು ಮಾಡುವವನು ಪಾಪಿಯಾಗುತ್ತಾನೆ ಎಂದಿದೆ.  ಭಗವದ್ಗೀತೆಯ ೧೬ನೇ ಅಧ್ಯಾಯದಲ್ಲಿ ಭಗವಂತ "ತಾನಹಂ ದ್ವಿಷತಃ ಕ್ರೂರಾನ್ಸಂಸಾರೇಷು ನರಾಧಮಾನ್ | ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು"|| - ನನ್ನನ್ನು ದ್ವೇಷಿಸುವ ಪಾಪಿಗಳೂ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ ಪದೇ ಅಸುರೀ ಯೋನಿಗಳಲ್ಲಿ ಜನಿಸುವಂತೆ ಮಾಡುತ್ತೇನೆ ಎಂದಿದ್ದಾನೆ.  ಶರಣು ಬಂದ ಭಕ್ತರಿಗೆ ಭಗವಂತನು ಪಾಪನಾಶನನೂ ಹೌದು ಮತ್ತು ಪಾಪಿಗಳನ್ನು (ಅಸುರರನ್ನು) ಸಂಹರಿಸುವವನೂ ಆಗಿರುವನು.  ಪುಣ್ಯಧಾಮನ ಗುಣಗಳ ವಿಶೇಷತೆಯನ್ನು ಕೇಳುವುದರಿಂದಲೇ ಸಕಲ ಪಾಪವೂ ಪರಿಹಾರವಾಗುವುದಾದ್ದರಿಂದಲೇ ಭಗವಂತನು ಪಾಪನಾಶನ ನಾಮಕನು.   ಭಕ್ತಿಯಿಂದ ಒಮ್ಮೆ ಕೂಗಿದರೂ ಸಾಕು, ಓಡಿ ಬಂದು ಬಿಡುವ ಕರುಣಾಮಯಿ.  ಸಮುದ್ರ ಮಥನದ ಸಮಯದಲ್ಲಿ ಪಾಪಾಭಿಮಾನಿ ಅಸುರರಿಗೆ ಅಮೃತ ಸಿಕ್ಕದಂತೆ ಮಾಡಿ   ಅವರನ್ನು ನಾಶಮಾಡಿದವನು.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ಪ್ರಣತದೇಹಿನಾಂ ಪಾಪಕರ್ಶನಂ" - ಶರಣಾಗತರಾದವರ ಪಾಪಗಳನ್ನು ಹೋಗಲಾಡಿಸುವವನು ಎಂಬ ಉಲ್ಲೇಖವಿದೆ.

ಕವಿಭಿರೀಡಿತ - ಆದಿ ಕವಿಯಾದ ಬ್ರಹ್ಮನಿಂದಲೂ, ಜ್ಞಾನಿಗಳಿಂದಲೂ ಸ್ತುತಿಸಿಕೊಳ್ಳುವವನು.  ಋಷಿಗಳು, ಮುನಿಗಳು, ದೇವಾನುದೇವತೆಗಳೆಲ್ಲರೂ ಸರ್ವದಾ ಸ್ತುತಿಸಿದರೂ ಅವನ ಮಹಿಮೆಯ ಗುಣಗಾನ ಮಾಡುವುದಾಗುವುದಿಲ್ಲ.  ಸಾಕ್ಷಾತ್ ಮಹಾಲಕ್ಷ್ಮಿಯಿಂದಲೂ ಅವನ ಅನಂತ ಗುಣಗಳನ್ನು ಸಂಪೂರ್ಣವಾಗಿ ಅರಿತು ಸ್ತುತಿಸುವುದಾಗುವುದಿಲ್ಲ.  ಸ್ತುತಿಸಿದಷ್ಟೂ ಗೋಚರವಾಗದ ಅನೇಕ ಗುಣಗಳನ್ನು ಉಳಿಸಿಕೊಂಡಂತಹ ಭಗವಂತ ಅಪ್ರತಿಮ ಮಹಿಮೆಯುಳ್ಳವನು.  ದಾಸ ಪರಂಪರೆಯಲ್ಲಿ ಬಂದ ಎಲ್ಲಾ ದಾಸರುಗಳೂ ಭಗವಂತನ ಗುಣವಿಶೇಷಣಗಳನ್ನು ಸ್ತುತಿಸಿ, ಲಕ್ಷಾಂತರ ಕೀರ್ತನೆಗಳನ್ನು ಸುಲಭ ಹಾಗೂ ಸರಳ ಕನ್ನಡದಲ್ಲಿಯೇ ರಚಿಸಿ ಹಾಡಿದ್ದಾರೆ.

ಭಾಗವತದ ದಶಮಸ್ಕಂದದಲ್ಲಿ ಬರುವ ಗೋಪೀಗೀತಮ್ ನಲ್ಲಿ "ತವ ಕಥಾಮೃತಂ ತಪ್ತಜೀವನಂ ಕವಿಭಿರೀಡಿತಂ ಕಲ್ಮಷಾಪಹಮ್" - ಭಗವಂತನ ಲೀಲೆಯ ಕಥಾಪ್ರಸಂಗಗಳು ಅಮೃತ ಸ್ವರೂಪಗಳೇ ಆಗಿವೆ.  ವಿರಹಿಗಳಿಗೆ ಅದನ್ನು ಬಿಟ್ಟು ಬೇರೇನೂ ಬೇಕಾಗುವುದೇ ಇಲ್ಲ.  ದೊಡ್ಡ ದೊಡ್ಡ ಜ್ಞಾನಿಗಳು ಮತ್ತು ಮಹಾ ಕವಿಗಳು ನಿನ್ನ ಚರಿತಾಮೃತವನ್ನು ಹಾಡಿ ಹೊಗಳಿದ್ದಾರೆ ಎಂದಿದ್ದಾರೆ.

ಕೈವರದಳಶ್ಯಾಮ - ಕನ್ನೈದಿಲೆಯ ಬಣ್ಣವನ್ನು ಹೋಲುವ ಕಪ್ಪುಬಣ್ಣದವನಾದವನು ಭಗವಂತ.  ಆದ್ದರಿಂದಲೇ ಅವನು ಕೈವರದಳಶ್ಯಾಮ.  ಅರಳಿದ ನೈದಿಲೆಯಂತೆ ಅತಿಮೋಹಕ ಬಣ್ಣವನ್ನೂ, ರೂಪವನ್ನೂ ಹೊಂದಿದವನು ಶ್ರೀಹರಿ.  ದರ್ಶನ ಮಾತ್ರದಿಂದಲೇ ಸರ್ವರನ್ನೂ ಸೆಳೆಯುವವನು, ಹೃತ್ಕಮಲವನ್ನು ಅರಳಿಸಿ, ಆನಂದಾನುಭೂತಿಯ ಅನುಭವವನ್ನು ಕೊಡುವವನು.  ದೇವಕಿ - ವಸುದೇವರ ಪುತ್ರನಾಗಿ ಸೆರೆಮನೆಯಲ್ಲಿ ಜನಿಸಿದರೂ ತನ್ನ ವಿಷ್ಣು ರೂಪವನ್ನು ತೋರಿಸಿ ಆನಂದಪಡಿಸಿದವನು.  ಬಾಲಕೃಷ್ಣನಾಗಿ ತನ್ನ ಲೀಲಾವಿನೋದಗಳಿಂದ ಸರ್ವರನ್ನೂ ಸಂತೋಷಪಡಿಸಿದವನು, ಕೈವರದಳಶ್ಯಾಮನು.

ನಿಸ್ಸೀಮ - ತನಗೆ ತಾನೇ ಸಾಟಿಯಾದಂತಹವನು, ಅಸಾಧ್ಯನು, ಎಲ್ಲಾ ಸೀಮೆಯನ್ನೂ ಮೀರಿ ಅಸೀಮಾತೀತನಾಗಿ ನಿಂತವನು, ಅತೀತನು, ಭಗವಂತನು ನಿಸ್ಸೀಮನು.  ಕಾಮದೇವನನ್ನೇ ಸುಟ್ಟು ಹಾಕಿದ ವೈರಾಗ್ಯಪತಿ ಮಹಾರುದ್ರನನ್ನೇ ಮೋಹಿನಿ ವೇಷದಲ್ಲಿ ಮರುಳು ಮಾಡಿ ಕಂಗೆಡಿಸಿದವನು ಭಗವಂತನು, ಅವನ ಮಹಿಮೆಗೆಲ್ಲಿದೆ ಸೀಮೆ?

ಯುವತಿವೇಷದಿ - ಅಮೃತ ಮಂಥನದ ಸಮಯದಲ್ಲಿ ಮೋಹಿನಿ ರೂಪದಿಂದ ಬಂದ ಭಗವಂತನ ಅಸಾಧಾರಣ ಸೌಂದರ್ಯವನ್ನು ನೋಡುವ ಅವಕಾಶ ದೇವತೆಗಳಿಗೆ ಲಭಿಸಿತು.  ಅಸುರರಿಗೆ ಭಗವಂತ ಕಣ್ಣು ಮುಚ್ಚಲು ತಿಳಿಸಿಬಿಟ್ಟ.  ಅಸುರರು ಸುಂದರಿ ಸ್ತ್ರೀಯೆಂಬ ದೃಷ್ಟಿಯಿಂದ ನೋಡಿದರು.  ಆದ್ದರಿಂದಲೇ ಅವರಿಗೆ ಕಣ್ಣುಮುಚ್ಚಲು ಆಜ್ಞಾಪಿಸಿದ ಭಗವಂತ.  ದೇವತೆಗಳು ಅತಿಶಯವಾದ, ಅನುಪಮ ಸೌಂದರ್ಯವನ್ನು ಕಣ್ಣರಳಿಸಿ ನೋಡಿ, ಮನದಲ್ಲಿ ತುಂಬಿಸಿಕೊಂಡರು.  ಅವರು ಸ್ತ್ರೀರೂಪವೆಂದು ನೋಡದೆ ಜಗನ್ಮಾತೆಯೆಂಬ ದೃಷ್ಟಿಯಿಂದಲೇ ನೋಡಿದ್ದರಿಂದ ಭಗವಂತನು ಅವರಿಗೆ ಕರುಣಿಸಿದ.

ಗೌರೀಧವನ ಮೋಹಿಸಿ - ಭಾಗವತ ಅಷ್ಟಮಸ್ಕಂದದಲ್ಲಿ ಭಗವಂತನು ಮೋಹಿನೀ ರೂಪ ಧರಿಸಿದ ಕಥೆಯು ಹೇಳಲ್ಪಟ್ಟಿದೆ.  ಮೋಹಿನೀರೂಪದ ವರ್ಣನೆಯನ್ನು ಕೇಳಿ ರುದ್ರದೇವರು ತಾವೂ ಶ್ರೀಹರಿಯ ಈ ಮನಮೋಹಕ ರೂಪವನ್ನು ಕಾಣಬೇಕೆಂದು ಗಿರಿಜಾ ಸಮೇತನಾಗಿ ವಿಷ್ಣು ಲೋಕಕ್ಕೆ ಬರುತ್ತಾನೆ.  ಭಗವಂತನನ್ನು ನಾನಾ ರೀತಿಯಲ್ಲಿ ಸ್ತುತಿಸುತ್ತಾ, ತಾನು ಎಲ್ಲಾ ಗುಣಪೂರ್ಣ ರೂಪಗಳನ್ನು ನೋಡಿದ್ದರೂ ಸ್ತ್ರೀರೂಪ ನೋಡಿಲ್ಲವಾಗಿ, ತನಗೆ ಆ ಅತಿಶಯ ಲಾವಣ್ಯವತಿಯ ರೂಪವನ್ನು ತೋರಿಸುವಂತ ಪ್ರಾರ್ಥಿಸಿಕೊಳ್ಳುತ್ತಾನೆ.  ಭಗವಂತ ಮಾಯವಾಗಿ ಹೋದಾಗ, ಶಂಕರನು ಪಾರ್ವತೀ ಹಾಗೂ ಪ್ರಥಮಗಣಗಳೊಡನೆ ಎಲ್ಲಾ ದಿಕ್ಕುಗಳಲ್ಲೂ ತಿರುಗಿ ನೋಡುತ್ತಾ ಇರುವಾಗಲೇ ಜಗನ್ಮೋಹಕ ಸುಂದರಿಯನ್ನು ಉಪವನದಲ್ಲಿ ಕಾಣುತ್ತಾನೆ.  ದರ್ಶನ ಮಾತ್ರದಿಂದಲೇ ಪಾರ್ವತೀ ಹಾಗೂ ಪ್ರಥಮಗಣಗಳನ್ನೂ ಮರೆತು ಧಾವಿಸಿಬಿಡುತ್ತಾನೆ.  ಮೋಹಿನಿಯು ಮರಗಳ ಮರೆಯಲ್ಲಿ ಅವಿತಿಟ್ಟುಕೊಂಡರೂ ರುದ್ರನು ಬಿಡದೇ ಬೆನ್ನಟ್ಟಿಹೋಗುವನು. ವಿಷ್ಣುವನ್ನು ಹೆಣ್ಣೆಂದೇ ಭಾವಿಸಿ, ರುದ್ರನು ವರ್ತಿಸಿದಾಗ, ಅಜ್ಞಾನವನ್ನು ಕೊಟ್ಟು ಕೆಡಿಸಿ, ನ೦ತರ ಜ್ಞಾನವನ್ನು ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ. ಹೀಗೆ ಯುವತಿವೇಷವ ಧರಿಸಿ ಗೌರೀಧವನ
ನ್ನು ಮೋಹಿಸುವಂತೆ ಮಾಡಿದ ಭಗವಂತನು.   ಭಗವಂತನ ಅಪರಿಮಿತ ಮಹಿಮೆಯನ್ನು ವರ್ಣಿಸುತ್ತಾ ರುದ್ರದೇವರು ಪಾರ್ವತಿದೇವಿಗೆ ಈ ಪ್ರಸಂಗವನ್ನು ಯಾರು ಬಾರಿಬಾರಿಗೂ ಸಂಕೀರ್ತಿಸುತ್ತಾರೋ ಅಥವಾ ಶ್ರವಣ ಮಾಡುತ್ತಾರೋ ಅವರಿಗೆ ನಿಷ್ಫಲವೆಂಬುದೇ ಇರುವುದಿಲ್ಲ.  ಸಂಸಾರದ ಸಮಸ್ತ ಕ್ಲೇಶಗಳೂ ಕಳೆದುಹೋಗುವುವು ಎಂದಿದ್ದಾರೆಂಬುದನ್ನು  ಭಾಗವತದಲ್ಲಿ ಉಲ್ಲೇಖಿಸಲಾಗಿದೆ.

ಕೆಡಿಸಿ ಉಳಿಸಿದ - ಜಗದೇಕ ಸೌಂದರ್ಯವತಿಯಾದ ಪಾರ್ವತಿಯನ್ನು ಮದುವೆಯಾಗಿದ್ದರೂ ಶಿವನು ಕಾಮವನ್ನೇ ಸುಟ್ಟು, ಜಯಿಸಿದವನು.  ಆದರೆ ಅತಿಲಾವಣ್ಯಮತಿ ಮೋಹಿನಿಯನ್ನು ಕಂಡು ಭಗವಂತನ ಮಾಯೆಯಲ್ಲಿ ಸಿಲುಕಿ, ಶಿವನು ಮೋಹಿತನಾಗುತ್ತಾನೆ.   ಶ್ರೀಹರಿಯ ಮಾಯೆಯಿಂದ ತಾನು ಮೋಹಿತನಾದೆನೆಂದು ತಿಳಿದು ಶಿವನು ನಾಚುತ್ತಾನೆ.  ಭಗವಂತನು ರುದ್ರದೇವನಿಗೆ ನಾನು ನಿನ್ನನ್ನು ಮೋಹಗೊಳಿಸಿದರೂ ಕೂಡ ನೀನು ದೈವವಶದಿಂದ ದಾಟಿ ವಿವೇಕವನ್ನು ಹೊಂದಿದೆ.  ಆದ್ದರಿಂದ ನೀನು ನಿಜವಾಗಿಯೂ ಪರಮ ವಿರಕ್ತನು, ನಿನ್ನಂತೆ ಕಾಮಾದಿಗಳನ್ನು ಯಾರೂ ಜಯಿಸಲಾರರು ಎಂದನು.   ಭಗವಂತನನು ತನ್ನ ಮೋಹಿನಿ ರೂಪದಿಂದ ಶಿವನ ಚಿತ್ತ ಸ್ವಾಸ್ಥ್ಯ ಕೆಡಿಸಿದ, ಮೋಹಪಾಶದಿಂದ ಅರಿವು ತಳೆದ ರುದ್ರದೇವನನ್ನು ಹೊಗಳಿ ಉಳಿಸಿದನು.  ಇದು ಶ್ರೀಹರಿಯ ಕಾರುಣ್ಯದ ಮಹಿಮೆ.

ಇವನ ಮಾಯವ ಗೆಲುವನಾವನು ಈ ಜಗತ್ರಯದಿ -  ಭಗವಂತನ ಮಾಯೆ ಎಂದರೆ ಸಾಮರ್ಥ್ಯ, ಶಕ್ತಿ ಅಥವಾ ಇಚ್ಛೆ ಎಂಬರ್ಥವು ಮತ್ತು ಭಗವಂತನ ಪತ್ನಿ ಮಾಯಾದೇವಿ ರೂಪಿಯಾದ ಲಕ್ಷ್ಮೀದೇವಿ.  ಬ್ರಹ್ಮಾದಿ ದೇವತೆಗಳಿಂದ ಪ್ರಾರಂಭಿಸಿ ಜೀವಿಗಳವರೆಗೂ ಯಾರಿಗೂ ಈ ಎರಡೂ ಮಾಯೆಗಳನ್ನು ಗೆಲ್ಲುವುದು ಸಾಧ್ಯವೇ ಇಲ್ಲ,  ಭಗವಂತನ ಲೀಲೆಗಳೂ, ಅವನ ಮಾಯೆಯ ಪ್ರಭಾವವೂ ಇರುತ್ತದೆ.  ಯಾರಿಂದಲೂ ಅದನ್ನು ಗೆಲ್ಲುವುದಾಗುವುದಿಲ್ಲ.  ಆದರೆ ಭಗವಂತನ ಕರುಣೆಯೂ ಅಪಾರ.  ಶ್ರದ್ಧೆ ಹಾಗೂ ಭಕ್ತಿಯಿಂದ ಯಾರು ಸಂಪೂರ್ಣವಾಗಿ ಶರಣಾಗತರಾಗುವರೋ, ಅವರನ್ನು ಸಂಸಾರವೆಂಬ ಬಂಧನ ಅಥವಾ ಮಾಯೆಯಿಂದ ಬಿಡಿಸಿ ಉದ್ಧರಿಸುವನು.  ಭಗವಂತನು ದುರ್ಜನರನ್ನೂ, ತಾಮಸಿಗರನ್ನೂ ತನ್ನ ಮಾಯೆಯಿಂದ ಕೆಡಿಸಿ, ಪರಮಪುರುಷಾರ್ಥವಾದ ಮುಕ್ತಿ, ಮೋಕ್ಷದಿಂದ ಅವರು ವಂಚಿತರಾಗುವಂತೆ ಮಾಡುವನು.  ಸಜ್ಜನರನ್ನೂ, ಸಾತ್ವಿಕರನ್ನೂ ಮಾಯೆಯಿಂದ ಬಿಡಿಸಿ, ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ರಕ್ಷಿಸುವನು.  ಶ್ರೀ ಪುರಂದರ ದಾಸರು ತಮ್ಮ "ಚಂದ್ರಚೂಡ ಶಿವ ಶಂಕರ ಪಾರ್ವತಿ ರಮನ ನಿನಗೆ ನಮೋ ನಮೋ" ಎಂಬ ಕೃತಿಯಲ್ಲಿ "ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ | ಜಾಲಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ" || ಎಂದು ಸ್ತುತಿಸಿದ್ದಾರೆ.

ಭಗವದ್ಗೀತೆಯಲ್ಲಿ ಭಗವಂತ :
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ |
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ||  - ಎಲೈ ಭಾರತಾ ! ಎಲ್ಲಾ ಪ್ರಕಾರಗಳಿಂದಲೂ ಪರಮಾತ್ಮನಿಗೇ ಶರಣಾಗು.  ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮಧಾಮವನ್ನೂ ಹೊಂದುವೆ ಎಂದಿದ್ದಾನೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ವಸುವ್ವಾಲಿಯಲ್ಲಿ :

ಎಲ್ಲರಂದದಿ ಲಕ್ಷ್ಮೀನಲ್ಲನೆಂದೆನಬೇಡ
ಬಲ್ಲಿದನು ಕಂಡ್ಯ ಭಗವಂತ | ಭಗವಂತನ ಮಹಿಮೆ
ಬಲ್ಲವರು ಇಲ್ಲ ಜಗದೊಳು || - ಎಲ್ಲರೂ ತಿಳಿದಂತೆ ಭಗವಂತನನ್ನು ಲಕ್ಷ್ಮೀರಮಣನೆಂದು ಮಾತ್ರ ತಿಳಿಯಬೇಡ.  ಶ್ರೀಹರಿಯು ಷಡ್ಗುಣೈಶ್ವರ್ಯಪೂರ್ಣನಾದ, ಅಚಿಂತ್ಯವಾದ, ಅದ್ಭುತವಾದ ಸಾಮರ್ಥ್ಯವುಳ್ಳವನು.  ಭಗವಂತನ ಮಹಿಮೆಗಳನ್ನು ಪೂರ್ಣವಾಗಿ ತಿಳಿದವರು ಯಾರೂ ಇಲ್ಲವೇ ಇಲ್ಲ.

ಶ್ರೀಯರಸನೆ ನಿನ್ನ ಮಾಯಕ್ಕೆ ಎಣೆಗಾಣೆ
ಹೇಯವಿಷಯಗಳ ಜನರಿಗೆ | ಜನರಿಗುಣಿಸಿ ಉಪಾ-
ದೇಯವೆಂತೆಂದು ಸುಖಿಸುವಿ || - ಭಗವಂತನ ಇಚ್ಛೆ, ಶಕ್ತಿಗಳೆಂಬ ಮಾಯೆಗೆ ಯಾರೂ, ಯಾವುದೂ ಸಾಟಿಯಲ್ಲ.  ಪ್ರಾಕೃತಿಕ ಬಂಧನದಲ್ಲಿ ಸಿಲುಕಿಸಿ ಜೀವರಿಗೆ ಲೌಕಿಕ ಭೋಗಗಳೇ ಪರಮ ಪುರುಷಾರ್ಥಗಳೆಂದೂ, ಆದರರಿಂದ ಸ್ವೀಕರಿಸಲು ಯೋಗ್ಯವೂ ಎಂಬ ಮಾಯೆಯಲ್ಲಿ ಮುಳುಗಿಸಿ, ಅವರು ತಮ್ಮ ’ಅಹಂ ಮಮಕಾರ’ಗಳೊಳಗೇ ಮುಳುಗುವಂತೆ ಮಾಡುತ್ತಾನೆ.  ಭವವೆಂಬ ಪಾಶದಲ್ಲಿ ಬಂಧಿಸುವವನೂ ಅವನೇ, ಬಿಡಿಸಿ ಉದ್ಧರಿಸುವವನೂ ಅವನೇ.  ಜೀವಿಗಳಲ್ಲಿ ತಾನಿದ್ದು ಭಗವಂತನು ಶುಭವಿಷಯಗಳನ್ನು ಭೋಗಿಸಿದರೂ, ಎಲ್ಲದರಿಂದಲೂ ರಹಿತನಾಗಿದ್ದು ಸುಖಿಸುವ ಪೂರ್ಣಾನಂದನಾಗಿದ್ದಾನೆ.



ಚಿತ್ರಕೃಪೆ : ಅಂತರ್ಜಾಲ

Tuesday, February 18, 2014

ಕರುಣಾ ಸಂಧಿ - ೧೭ ನೇ ಪದ್ಯ

ಜನಪ ಮೆಚ್ಚಿದರೀವ ಧನವಾ
ಹನ ವಿಭೂಷಣವಸನ ಭೂಮಿಯ
ತನು ಮನೆ ಗಳಿತ್ತಾದರಿಪರುಂಟೇನೋ ಲೋಕದೊಳು |
ಅನವರತ ನೆನೆವವರನಂತಾ
ಸನವೆ ಮೊದಲಾದಾಲಯದೊಳಿ
ಟ್ಟುಣುಗನಂದದವರ ವಶನಾಗುವ ಮಹಾಮಹಿಮ  ||೧೭||



ಪ್ರತಿಪದಾರ್ಥ : ಜನಪ - ಅರಸು, ಮೆಚ್ಚಿದರೆ - ಇಷ್ಟವಾದರೆ, ಧನ ವಾಹನ ವಿಭೂಷಣ ವಸನ ಮತ್ತು ಭೂಮಿ - ಧನಕನಕ ಕುದುರೆ ಆನೆ ಮೊದಲಾದ ವಾಹನ ಆಭರಣಗಳು ವಸ್ತ್ರಗಳು ಜಮೀನು ಇತ್ಯಾದಿಗಳನ್ನು ಕೊಡುವನು, ತನು ಮನೆಗಳಿತ್ತಾದರಿಪರುಂಟೇನೋ  - ಶ್ರೀಹರಿಯು ತನ್ನನ್ನೇ ಕೊಡುವುದಲ್ಲದೇ ಅನಂತಾಸನ ಶ್ವೇತದ್ವೀಪ ಮತ್ತು ವೈಕುಂಠ ಎಂಬ ಭಗವಂತನ ಮಂದಿರಗಳು ಎಂದರ್ಥ,  ಲೋಕದೊಳು - ಈ ಜಗತ್ತಿನಲ್ಲಿ, ಅನವರತ ನೆನೆವವರ - ಸದಾ ನಿರಂತರವಾಗಿ ಶ್ರೀಹರಿಯನ್ನೇ ಧ್ಯಾನಿಸುವವರನ್ನು, ಅನಂತಾಸನವೆ ಮೊದಲಾದ ಆಲಯದೊಳಿಟ್ಟು - ತನ್ನ ಮಂದಿರಗಳಾದ ಅನಂತಾಸನ ಶ್ವೇತದ್ವೀಪ ಮತ್ತು ವೈಕುಂಠಗಳೆಂಬ ಮಂದಿರಗಳಲ್ಲಿ ನೆಲೆಸುವಂತೆ ಮಾಡಿ, ಅಣುಗನಂದದಲಿ ಅವರ ವಶನಾಗುವ - ಪುಟ್ಟ ಮಗುವಿನಂತೆ ಭಗವಂತನು ಮುಕ್ತರಾದ ಜೀವಿಗಳ ವಶಕ್ಕೆ ಸಿಲುಕುವನು, ಮಹಾಮಹಿಮ - ಅಂತಹ ಮಹಿಮಾವಂತನಾಗಿರುವನು.

ಲೌಕಿಕದಲ್ಲಿ ಪ್ರಭುವಾದವನು ಕಷ್ಟಪಟ್ಟು, ಮೈ ಮುರಿದು ದುಡಿಯುವ ಸೇವಕರಿಗೆ ಹಣ ಕೊಡಬಹುದು, ವಾಹನಗಳನ್ನು ಕೊಡಬಹುದು, ಒಡವೆ ಬಟ್ಟೆಗಳನ್ನೂ, ಭೂಮಿಯನ್ನೂ ಕೊಡಬಹುದು.  ಆದರೆ ದೇಹ ಮನಸ್ಸು ಕೊಡಲಿಕ್ಕವನಿಗೆ ಸಾಧ್ಯವಿಲ್ಲ.  ಅಂತಹುದನ್ನು ಯಾವ ದೊರೆ ಕೊಟ್ಟಿದ್ದಾನೆ ?  ಪರಮಾತ್ಮನಿಗೊಬ್ಬನಿಗೇ ಅದನ್ನು ಕೊಡಲು ಸಾಧ್ಯವಿರುವುದು.  ಹೀಗೆ ಸದಾ ಸ್ಮರಿಸುವ ಭಕ್ತರನ್ನು ಅನಂತಾಸನದಂತಹ ಆಲಯದೊಳಗಿಟ್ಟು ತಾನು ಮಗುವಿನಂತೆ  ಈ ಮಹಾಮಹಿಮನು ಭಕ್ತರ ವಶನಾಗುವನು.  ಪ್ರಾಕೃತ ಲೋಕದ ದೊರೆಯು ನಮ್ಮನ್ನು ಮೆಚ್ಚಿದರೆ ಒಡವೆ-ವಸನಗಳನ್ನು ಕೊಟ್ಟು ಆದರಿಸಬಹುದು.  ಆದರೆ ಹರಿಯು ಎಲ್ಲಾ ಮೋಹವನ್ನೂ ಹರಿಸುವಂತಹ ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಕೊಟ್ಟು ನಮಗೆ ತನ್ನ ಲೋಕಗಳಲ್ಲಿ ಇರುವಂತಹ ವೈಭವವನ್ನು ಕೊಡುತ್ತಾನೆ.  ಇಂತಹ ಕಾರ್ಯಕ್ಕೆ ನಾವು ಸಿದ್ಧರಾಗಲು ನಮಗೆ ದೇಹ, ಮನಸ್ಸು ಎಲ್ಲವನ್ನೂ ಕೊಟ್ಟಿರುತ್ತಾನೆ.  ಪರಮಾತ್ಮನು ನಮ್ಮ ಜೊತೆಗೆ ಮಗುವಿನಂತೆ ಇರುತ್ತಾನೆ, ಮಿತ್ರನಂತೆ ಸಹಾಯ ಮಾಡುತ್ತಾನೆ.  ತಂದೆಯಂತೆ ನಮ್ಮನ್ನು ರಕ್ಷಿಸುತ್ತಾನೆ, ಪ್ರಭುವಿನಂತೆ ಕಾಪಾಡುತ್ತಾನೆ.  ನಾವು ನಿಜಕ್ಕೂ ಅವನ ವಶವಾದರೆ ನಮ್ಮನ್ನು ತನ್ನ ಮಗುವಿನಂತೆಯೇ ಕಾಪಾಡುತ್ತಾನೆ ಮತ್ತು ತಾನೂ ನಮ್ಮ ಮಗುವಾಗಿ ವಶನಾಗುತ್ತಾನೆ.

ಜನಪ ಮೆಚ್ಚಿದರೀವ -  ರಾಜಾ ಹರಿಶ್ಚಂದ್ರನಂತಹವರು ತಾವು ಕೊಟ್ಟ ಮಾತು ಪಾಲಿಸುವುದಕ್ಕಾಗಿ, ಸತ್ಯ, ಧರ್ಮವನ್ನು ನಿಲ್ಲಿಸುವುದಕ್ಕಾಗಿ, ಶರಣಾಗತರಾದವರನ್ನು ಕಾಪಾಡುವುದಕ್ಕಾಗಿ ತಮ್ಮ ಸರ್ವಸ್ವವನ್ನೂ, ಪ್ರಾಣವನ್ನೂ ಕೊಡಲು ಸಿದ್ಧರಿದ್ದರು.  ಆದರೆ ಅವರು ತಮ್ಮ ಅರಮನೆಯನ್ನು ಯಾರಿಗೂ ಕೊಡಲಿಲ್ಲ, ಇವೆಲ್ಲಾ ತಮ್ಮ ಸಾಧನೆಗಾಗಿಯಾಗಿಯೂ ಪುಣ್ಯ ಸಂಪಾದನೆಗಾಗಿಯೂ ಮಾಡಿದರು.  ರಾಜನೇ ಆದರೂ ತಮ್ಮ ಹತ್ತಿರ ಇರುವ ವಸ್ತುಗಳು ತಮ್ಮ ಉಪಯೋಗಕ್ಕೆ ಆಗಿ ಹೆಚ್ಚಿಗೆಯಿದ್ದರೆ ಕೊಡಬಹುದು.  ಹಾಗೆ ಕೊಡುವುದೂ ಅಪರೂಪವೇ ಆಗಿರುತ್ತದೆ. ಆದರೆ ಭಗವಂತನ ಕರುಣೆಗೆ ಯಾವ ಮಿತಿಯೂ, ದೃಷ್ಟಾಂತವೂ ಇಲ್ಲ.  ಜಗತ್ತಿಗೇ ಜನಪನಾದ ಭಗವಂತ, ನಿರಂತರ ಧ್ಯಾನಿಸುವ ತನ್ನ ಭಕ್ತರಿಗೆ ತನ್ನ ಮನೆ, ಮನ, ತನು ಸಕಲವನ್ನೂ ಕೊಡುವನು.

ತನುಮನೆಗಳಿತ್ತಾದರಿಪರುಂಟೇನೋ - ದೇಶವನ್ನಾಳುವ ರಾಜನು ತನಗೆ ಅತ್ಯಂತ ಪ್ರಿಯರಾದವರಿಗೆ ಹಣ, ವಾಹನ, ಬಂಗಾರ, ವಸ್ತ್ರ, ಭೂಮಿ, ಇನ್ನೂ ಏನನ್ನು ಬೇಕಾದರು ಕೊಡುತ್ತಾನೆ.  ತಾನು ಮೆಚ್ಚಿದ  ಆ ವ್ಯಕ್ತಿ ಅದೆಷ್ಟೇ ಪ್ರಿಯನಾದವನಾದರೂ ಅವನಿಗೆ ತನ್ನ ಅರಮನೆಯನ್ನಾಗಲೀ ಅಥವಾ ತನ್ನ ಪಟ್ಟಣವನ್ನಾಗಲೀ ಕೊಡುವುದಿಲ್ಲ ಮತ್ತು ತನ್ನ ಶರೀರ ಹಾಗೂ ಮನಸ್ಸುಗಳನ್ನು ಕೊಡುವುದಿಲ್ಲ.  ಆದರೆ  ಅತ್ಯಂತ ಕರುಣಾಮಯಿಯಾದ ಭಗವಂತನು ಪ್ರಾಪಂಚಿಕ ಭೋಗಗಳನ್ನೂ ಕೊಡುತ್ತಾನೆ, ಧನಕನಕಾದಿಗಳನ್ನೂ ಕೊಡುತ್ತಾನೆ.  ಸದಾ ತನ್ನನ್ನೇ ಧ್ಯಾನಿಸುತ್ತಾ, ತನ್ನಲ್ಲಿ ನಿಷ್ಮಾಮ ಭಕ್ತಿಯನ್ನಿಟ್ಟಿರುವ ಭಕ್ತರಿಗೆ ಮುಕ್ತಿಯನ್ನೂ ಕೊಡುತ್ತಾನೆ.  ತನ್ನ ಪಟ್ಟಣವನ್ನೇ ಕೊಡುತ್ತಾನೆ, ತನುವನ್ನೇ ಕೊಡುತ್ತಾನೆ, ಜೊತೆಗೆ ಮನವನ್ನೂ ಕೊಟ್ಟುಬಿಡುತ್ತಾನೆ.  ತನುವನ್ನೂ ಮನವನ್ನೂ ಕೊಟ್ಟುಬಿಡುವುದರ ಅರ್ಥವೆಂದರೆ ಮುಕ್ತರಿಗೆ ಮೋಕ್ಷ ಕರುಣಿಸುವುದು ಎಂದಾಗುತ್ತದೆ.  ಭಕ್ತಿಯಲ್ಲಿ ಬಹುವಿಧಗಳಿವೆ ಹಾಗೇ ಮೋಕ್ಷದಲ್ಲೂ ಐದು ವಿಧವಾದ ಮೋಕ್ಷಗಳಿವೆ.  ಭಕ್ತಿಯಲ್ಲಿ ಬಹುವಿಧವಿದೆಯೆಂಬುದನ್ನು ಭಾಗವತದ ತೃತೀಯಸ್ಕಂದದಲ್ಲಿ 

ಭಕ್ತಿಯೋಗೋ ಬಹುವಿಧೋ ಮಾರ್ತೈರ್ಭಾಮಿನಿ ಭಾವ್ಯತೇ |
ಸ್ವಭಾವಗುಣ ಮಾರ್ಗೇಣ ಪುಂಸಾಂ ಭಾವೋ ವಿಭಿದ್ಯತೇ || - ಸಾಧಕರ ಭಾವಕ್ಕೆ ತಕ್ಕಂತೆ ಭಕ್ತಿಯೋಗವು ಅನೇಕ ಪ್ರಕಾರವಾಗಿ ಪ್ರಕಾಶಿಸುತ್ತದೆ.  ಮನುಷ್ಯರ ಮನೋವೃತ್ತಿಗಳ ಮತ್ತು ಸತ್ತ್ವಾದಿಗುಣಗಳ ಭೇದಕ್ಕೆ ಅನುಗುಣವಾಗಿ ಅವರ ಭಾವಗಳಲ್ಲೂ ಅನೇಕ ಪ್ರಕಾರದ ಭೇದಗಳಿರುತ್ತವೆ.  ಅದರಿಂದಾಗಿಯೇ ಭಕ್ತಿಯಲ್ಲಿ ಮಾತ್ರ ವಿವಿಧತೆಯಲ್ಲ, ಭಕ್ತರಲ್ಲೂ ವಿವಿಧ ಭೇದಗಳಿವೆ.  ನಿಜವಾದ ಭಕ್ತರ ಲಕ್ಷಣಗಳು ಹೀಗಿರುತ್ತವೆಯೆಂದು ಭಾಗವತದಲ್ಲಿ ತಿಳಿಸಿದೆ.
ಲಕ್ಷಣಂ ಭಕ್ತಿಯೋಗಸ್ಯ ನಿರ್ಗುಣಸ್ಯ ಹ್ಯುದಾಹೃತಮ್ |
ಅಹೈತುಕ್ಯವ್ಯವಹಿತಾ ಯಾ ಭಕ್ತಿಃ ಪುರುಷೋತ್ತಮೇ || - ಗಂಗೆಯ ಪ್ರವಾಹವು ಅಖಂಡರೂಪವಾಗಿ, ಸಹಜವೇ ಎನ್ನುವಂತೆ ಸಮುದ್ರದೆಡೆಗೆ ಹೇಗೆ ಧಾವಿಸುವುದೋ, ಹಾಗೆ ಭಗವಂತನ ಗುಣಗಳನ್ನು ಕೇಳಿ, ಅನ್ಯವ್ಯಾಪಾರರಹಿತವಾಗಿ ಗಂಗಾಪ್ರವಾಹದಂತೆ ಸ್ವಾಭಾವಿಕವಾಗಿರುವ ಅಂತಃಕರಣ ಸ್ಥಿತಿಯಲ್ಲಿ ಸರ್ವಾಂತರ್ಯಾಮಿ ಹಾಗೂ ಪುರುಷೋತ್ತಮನಾದ ಭಗವಂತನ ಕಡೆಗೆ  ಅನನ್ಯ ಭಾವದಿಂದ ಸೆಳೆಯಲ್ಪಡುವುದೋ ಅದೇ ಉತ್ತಮ ಭಕ್ತಿ ಅಥವಾ ’ನಿರ್ಗುಣ ಭಕ್ತಿ’ಯ ಲಕ್ಷಣ. ನಿರ್ಗುಣ ಭಕ್ತಿಯೆಂದರೆ ಜಗತ್ತೆಲ್ಲವೂ ಪರಮಾತ್ಮನ ಸ್ಥೂಲರೂಪ, ಹಾಗೂ ಜಗತ್ ಸೃಷ್ಟಿಗೆ ಏಕಮೇವ ಕಾರಣ ಎಂದು ತಿಳಿಯುವುದು.  ಬಾಹ್ಯ ಉಪಾಧಿಗಳನ್ನೆಲ್ಲಾ ಬಿಟ್ಟು ಸರ್ವದಾ ಭಗವಂತನ ಸ್ವರೂಪವನ್ನು ಅತ್ಯಧಿಕ ಪ್ರೇಮದಿಂದ ಚಿಂತಿಸುತ್ತ ಇರುವುದು ಎಂಬುದನ್ನು ಸ್ಕಂದಮಹಾಪುರಾಣದಲ್ಲಿ ತಿಳಿಸಲ್ಪಟ್ಟಿದೆ.  ಈ ನಿರ್ಗುಣ ಭಕ್ತಿಯು ಸತ್ವ, ರಜೋ, ತಮೋ ಎಂಬ ತ್ರಿಗುಣಗಳನ್ನೂ ಹೋಗಲಾಡಿಸಿ, ಮುಕ್ತಿಗೆ ತಲುಪಿಸುತ್ತದೆ.

ಅನ್ಯವ್ಯಾಪಾರರಹಿತವಾಗಿ ಭಕ್ತಿಯನ್ನು ಮಾಡುವ ಭಕ್ತನನ್ನು ಕುರಿತು ಭಗವದ್ಗೀತೆಯ ೧೧ನೇ ಅಧ್ಯಾಯದಲ್ಲಿ  ಭಗವಂತ
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋರ್ಜುನ |
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ || - ಅನನ್ಯ ಭಕ್ತಿಯ ಮೂಲಕ ಚತುರ್ಭುಜರೂಪವುಳ್ಳ ನನ್ನನ್ನು ಪ್ರತ್ಯಕ್ಷವಾಗಿ ನೋಡಲು, ತತ್ವದಿಂದ ತಿಳಿಯಲು ಹಾಗೂ ಪ್ರವೇಶಿಸಲು ಶಕ್ತ್ಯವಿದೆಯೆಂದಿದ್ದಾನೆ
ಮತ್ಕರ್ಮ ಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ |
ನಿವೈರಃ ಸರ್ವ ಭೂತೇಷು ಯಃ ಸ ಮಾಮೇತಿ ಪಾಂಡವ || - ಕೇವಲ ನನಗಾಗಿಯೇ ಸಮಸ್ತ ಕರ್ತವ್ಯ, ಕರ್ಮಗಳನ್ನು ಮಾಡುವ, ನನ್ನಲ್ಲಿ ಪರಾಯಣನಾದ, ನನ್ನ ಭಕ್ತನಾದ, ಆಸಕ್ತಿರಹಿತನಾದ ಮತ್ತು ಸರ್ವ ಪ್ರಾಣಿಗಳಲ್ಲಿ ವೈರಭಾವರಹಿತನಾದ ಅನನ್ಯ ಭಕ್ತನು ನನ್ನನ್ನೇ ಹೊಂದುತ್ತಾನೆ ಎಂದಿದ್ದಾನೆ.

ಮುಕ್ತಿಯಲ್ಲಿಯೂ ಐದು ವಿಧ ಮುಕ್ತಿಗಳಿವೆಯೆಂದು ಭಾಗವತ ತೃತೀಯ ಸ್ಕಂದದಲ್ಲಿ ತಿಳಿಸಿದೆ.
ಸಾಲೋಕ್ಯಸಾರ್ಷ್ಟಿ ಸಾಮೀಪ್ಯ ಸಾರೂಪ್ಯೈಕತ್ವಮಪ್ಯುತ |
ದೀಯಮಾನಂ ನ ಗೃಹ್ಣನ್ತಿ ವಿನಾ ಮತ್ಸೇವನಂ ಜನಾಃ || - ಐದು ವಿಧ ಮುಕ್ತಿಗಳೆಂದರೆ ಸಾಲೋಕ್ಯ ಸಾರ್ಷ್ಟಿ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯ.  ಸಾಲೋಕ್ಯವೆಂದರೆ ಭಗವಂತನ ಲೋಕದಲ್ಲಿಯೇ  ಅಂದರೆ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳಲ್ಲಿ ನಿವಾಸಮಾಡುವುದು.  ಸಾರ್ಷ್ಟಿಯೆಂದರೆ ಭಗವಂತನನೊಡನೆ ಸಮಾನವಾದ ಐಶ್ವರ್ಯವನ್ನು ಹೊಂದುವುದು.  ಸಾಮೀಪ್ಯವೆಂದರೆ ಸದಾ ಭಗವಂತನ ಬಳಿಯಲ್ಲಿ, ಅಂದರೆ ವಿಷ್ಣುಲೋಕಗಳೆನಿಸಿರುವ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳ ಸಮೀಪದಲ್ಲಿ ಇರುವುದು.  ಸಾರೂಪ್ಯವೆಂದರೆ ಭಗವಂತನ ರೂಪದಂತೆಯೇ ರೂಪವನ್ನು ಹೊಂದುವುದು, ಅಂದರೆ ಭಗವಂತನಂತೆಯೇ ನಾಲ್ಕು ತೋಳುಗಳನ್ನೂ, ಕಿರೀಟಾದಿ ಆಭರಣಗಳನ್ನೂ ಧರಿಸಿ ವಿಮಾನಗಳಲ್ಲಿ ವಿಹರಿಸುವಂತಹದು.  ಸಾಯುಜ್ಯವೆಂದರೆ ಭಗವಂತನ ತನುಮನಗಳಲ್ಲೇ ವಾಸಿಸುವುದು.  ಭಗವಂತ ತನ್ನ ಶರೀರ ಹಾಗೂ ಮನಸ್ಸುಗಳನ್ನು ಕೊಡುತ್ತಾನೆಂದರೆ, ಮುಕ್ತರು ಭಗವಂತನ ಶರೀರ ಮನಸ್ಸುಗಳನ್ನೇ ಉಪಯೋಗಿಸಿಕೊಂಡು ತಮ್ಮ ಇಚ್ಛಾನುಸಾರ ಚಟುವಟಿಕೆಗಳನ್ನು ಮಾಡುವುದೆಂದರ್ಥವಾಗುತ್ತದೆ.  ಅಂದರೆ ಇಲ್ಲಿಯೂ ಭಗವಂತನ ಅಧೀನವೇ ಇರುತ್ತದೆ, ಸ್ವತಂತ್ರತೆಯಲ್ಲ. ಮುಕ್ತರಾದರೂ ಅವರ ಇಚ್ಛೆ ಹರಿಯ ಇಚ್ಛಾನುಸಾರವೇ ಆಗಿರುತ್ತದೆ ಎಂದರ್ಥವಾಗುತ್ತದೆ.

ಮೋಕ್ಷಕ್ಕೆ ಅಂತರ್ಯಾಮಿಯಾಗಿ ಮಾಡುವ ಅಂತರಂಗ ಸಾಧನೆಗೆ ಭಕ್ತಿಯೊಂದೇ ಪ್ರಧಾನವಾಗಿರುವುದು.  "ಮನಸಾ ಧ್ಯಾಯನ್ ವಿಷ್ಣುಂ" ಎಂಬ ಒಂದೇ ಮಾರ್ಗ ಹಾಗೂ ಗುರಿಯಾಗಬೇಕು.  ಮುಕ್ತಿಗಳಲ್ಲಿ "ಸಾಯುಜ್ಯ" ಮುಕ್ತಿಯೇ ಶ್ರೇಷ್ಠವಾದದ್ದು.   ಸಾಯುಜ್ಯ ಮುಕ್ತಿಗೆ ಯೋಗ್ಯರಾದ ಭಕ್ತರು ಸಾಯುಜ್ಯವನ್ನೂ ಬಯಸಿರುವುದಿಲ್ಲ.  ಅವರಿಗೆ ಶ್ರೀಹರಿಯ ತನುಮನಗಳ ಆಶ್ರಯ ಬೇಕಾಗಿರುತ್ತದಷ್ಟೆ.  ಬೇರೇನೂ ಅಲ್ಲ.  ಭಗವಂತ ಪ್ರೀತಿಯಿಂದ ಕೊಟ್ಟ ಸಾಯುಜ್ಯವನ್ನು ಅವರು ಶ್ರೀಹರಿಯ ಆಜ್ಞೆಯೆಂದು ಮಾತ್ರ ಸ್ವೀಕರಿಸುತ್ತಾರೆ, ಬೇರಾವ ಕಾರಣಕ್ಕೂ ಅಲ್ಲ.

ಶ್ರೀ ವಾದಿರಾಜರು ತಮ್ಮ ವೈಕುಂಠವರ್ಣನೆಯಲ್ಲಿ " ಸಾಯುಜ್ಯ ಸಾಲೋಕ್ಯ ಸಾಮೀಪ್ಯ ಮತ್ತು ಸಾರೂಪ್ಯವೆಂದು ನಾಲ್ಕು ವಿಧ ಮುಕ್ತಿಗಳನ್ನು  ಉಲ್ಲೇಖಿಸಿದ್ದಾರೆ. ಸಾಯುಜ್ಯ ಮುಕ್ತಿಯನ್ನು "ಹರಿಯಂಗವಾಶ್ರೈಸಿ ಮುಕ್ತಿಯಲಿಹರಾಗಿ ಆ ಪಿರಿಯಸುರರೆ ಸಾಯುಜ್ಯ ಮೋಕ್ಷಕರು" ಎಂದಿದ್ದಾರೆ.  ಸಾಲೋಕ್ಯ ಮುಕ್ತಿಯನ್ನು "ಸಾಲೋಕ್ಯ ಹರಿಯ ಲೋಕದೊಳಗೆ ತುಂಬಿಪ್ಪುದು" ಎಂದಿದ್ದಾರೆ.   ಸಾಮೀಪ್ಯ ಮುಕ್ತಿಯನ್ನು  "ಪಾಲಸಾಗರದಲ್ಲಿ ಸುಖಿಸುವ ಜೀವರ ಸಾಲಿಗೆ ಸಾಮೀಪ್ಯ ಮುಕ್ತಿ ಕಾಣಿರೋ" ಎಂದಿದ್ದಾರೆ.    ಸಾಯುಜ್ಯ, ಸಾಮೀಪ್ಯ ಮತ್ತು ಸಾಲೋಕ್ಯ ಮುಕ್ತಿಯನ್ನು ಹೊಂದಿದವರಿಗೂ ಸಾರೂಪ್ಯವೆಂಬುದು ಇದ್ದೇ ಇರುತದೆಂಬುದನ್ನು
ಮೂರು ಶಾಕವ ಮಾಡಿ ಲವಣವ ಕೂಡಿದರೂ
ಮೂರು ಶಾಕವೆಂದು ಕರೆಯರೈಸೆ
ಬೇರೆ ಬೇರೆ ಬಡಿಸಿದರೂ ಲವಣವೆನಿಪುದು ಈ-
ಪರಿಯಲ್ಲಿ ಸಾರೂಪ್ಯದ ಮುಕ್ತರಿಗೂ || - ಮೂರು ತರಹದ ಪಲ್ಯಗಳನ್ನು ಮಾಡಿ, ಅವುಗಳನ್ನು ಉಪ್ಪಿನೊಡನೆ ಸೇರಿಸಿದರೂ ಕೂಡ, ಮೂರು ತರಹದ ಪಲ್ಯಗಳೆಂದೇ ಕರೆಯಲ್ಪಡುತ್ತವೆ.   ಅದರಲ್ಲಿ ಉಪ್ಪು ಬೇರೆಯೆಂದು ವ್ಯವಹರಿಸುವುದಿಲ್ಲ.  ಆದರೆ ಎಲೆಯ ತುದಿಯಲ್ಲಿ ಬೇರೆಯಾಗಿಯೇ ಬಡಿಸಿದ ಉಪ್ಪನ್ನು ಮಾತ್ರ ಉಪ್ಪು ಎಂದೇ ವ್ಯವಹರಿಸುತ್ತಾರೆ.  ಸಾಮೀಪ್ಯ ಮತ್ತು ಸಾಯುಜ್ಯ ಮುಕ್ತಿಗಳು ವಿಶೇಷವಾದವು.  ಅವುಗಳಿಲ್ಲದ ಬೇರೆ ಎಲ್ಲಾ ಮುಕ್ತರಿಗೂ ಸಾರೂಪ್ಯಮುಕ್ತಿಯು ಇದ್ದೇ ಇರುತ್ತದೆ.

ಸತ್ಯಲೋಕದವರೆಗಿನ ಲೋಕಗಳಲ್ಲಿ ವಾಸಿಸುವವರು ಸಾರೂಪ್ಯ ಮುಕ್ತರು.  ಭಗವಂತನ ಮನೆಗಳಾದ ಧಾಮತ್ರಯಗಳ ಆಸುಪಾಸಿನಲ್ಲಿ ವಾಸಿಸುವವರು ಸಾಮೀಪ್ಯ ಮುಕ್ತರು.  ಶ್ರೀಹರಿಯ ಮನೆಗಳಾದ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳಲ್ಲಿ ವಾಸಿಸುವವರು ಸಾಲೋಕ್ಯ ಮುಕ್ತರು ಮತ್ತು ಪರಮಾತ್ಮನ ತನುಮನಗಳಲ್ಲಿ ವಾಸಿಸುವವರು ಸಾಯುಜ್ಯ ಮುಕ್ತರು.  ಭಗವಂತ ಹೀಗೆ ತನ್ನನ್ನೇ ಸದಾ ಸ್ಮರಿಸುವ, ಸೇವಿಸುವ ಭಕ್ತರಿಗೆ ತನ್ನ ತನುಮನಗಳೆರಡನ್ನೂ ಕೊಟ್ಟು ಮುಕ್ತಿಯನ್ನು ಕರುಣಿಸುವ ಕರುಣಾಮಯಿಯು.

ಅನವರತ ನೆನೆವವರ - ಅನವರತವೂ ನೆನೆವವರೇ ನಿಜವಾದ ಭಕ್ತರು. ಧ್ಯಾನದಿಂದಲೇ ಅವರು ಶುದ್ಧಿಯಾಗುವರು ಮತ್ತು ಎಲ್ಲವನ್ನೂ ಪಡೆಯುವರು.  ಸ್ಕಂದಮಹಾಪುರಾಣದಲ್ಲಿ
ಧ್ಯಾನೇನ ಸರ್ವಮಾಪ್ನೋತಿ ಧ್ಯಾನೇ ನಾಪ್ನೋತೊ ಶುದ್ಧತಾಂ |
ಧ್ಯಾನೇನ ಪರಮಂ ಬ್ರಹ್ಮ ಮೂರ್ತೌ ಯೋಗಸ್ತು ಧ್ಯಾನಜಃ || - ಪರಬ್ರಹ್ಮ ಪ್ರಾಪ್ತಿಯೂ, ಸಾಕ್ಷಾತ್ಕಾರವೂ ಉತ್ಕಟ ಹಾಗೂ ಅನವರತ ಧ್ಯಾನದಿಂದಲೇ ಸಾಧ್ಯವೆಂದು ತಿಳಿಸಲ್ಪಟ್ಟಿದೆ.
ಭಗವದ್ಗೀತೆಯಲ್ಲಿ ಭಗವಂತ ಅರ್ಜುನನಿಗೆ
ಮಯ್ಯೇವ ಮನ ಆಧಸ್ಸ್ವಮಯಿ ಬುದ್ಧಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ || - ನನ್ನಲ್ಲೇ ಮನಸ್ಸು ಹಾಗೂ ಬುದ್ಧಿಯನ್ನು ತೊಡಗಿಸಿದರೆ ಯಾವ ಸಂಶಯವೂ ಇಲ್ಲದೆ ನೀನು ನನ್ನಲ್ಲೇ ನೆಲೆಸುವೆ ಎಂದಿದ್ದಾನೆ.  ಮನಸ್ಸು ಮತ್ತು ಬುದ್ಧಿ ಎರಡನ್ನೂ ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಧ್ಯಾನದ ಮೂಲಕ ಅನವರತ ನೆನೆವುದಲ್ಲದೆ ಬೇರೆ ಉಪಾಯವಿಲ್ಲವೇ ಇಲ್ಲ.
"ನಿನ್ನ ಧ್ಯಾನವನು ಕೊಡು ಎನ್ನ ಧನ್ಯನ ಮಾಡು" ಎಂದು ಪುರಂದರ ದಾಸರು ಹೇಳಿದ್ದಾರೆ.  "ನಿನ್ನ ಧ್ಯಾನದ ಶಕ್ತಿಯ ಕೊಡು, ಅನ್ಯರಲಿ ವಿರಕ್ತಿಯ ಕೊಡು..... ತುದಿಯಲಿ ಎನಗೆ ಮುಕ್ತಿ ಕೊಡು" ಎಂದು ಶ್ರೀವಾದಿರಾಜರು ಕೂಡ ತಿಳಿಸಿದ್ದಾರೆ.

ಅನಂತಾಸನವೆ ಮೊದಲಾದಾಲಯ -   ಧಾಮತ್ರಯಗಳೆಂದೇ ಪ್ರಸಿದ್ಧಿಗೊಂಡಿರುವುದು ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳು.  ಈ ಧಾಮತ್ರಯಗಳು ಶ್ರೀಹರಿಯ ಸಾಕ್ಷಾತ್ ನಿವಾಸಗಳು.  ವಿಷ್ಣುರಹಸ್ಯ ಹಾಗೂ ಇತರ ಪುರಾಣಗಳಲ್ಲಿ ವೈಕುಂಠ ಲೋಕದಲ್ಲಿ, ವೈಕುಂಠವೆಂದೇ ಕರೆಯಲ್ಪಡುವ ವೈಕುಂಠನಾಮಕ ಶ್ರೀಹರಿಯು ವಿಹರಿಸುವುದೇ ವೈಕುಂಠನಗರಿಯು ಎಂದಿದೆ.
ಭಗವದ್ಗೀತೆಯ ೮ನೇ ಅಧ್ಯಾಯದಲ್ಲಿ ಭಗವಂತ
ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹುಃ ಪರಮಾ ಗತಿಮ್ |
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ || - ಅದನ್ನು ಅವ್ಯಕ್ತ, ಅಕ್ಷರ ಎಂದು ಹೇಳುತ್ತಾರೆ ಮತ್ತು ಶ್ರೇಷ್ಠಗತಿಯೆಂದೂ ತಿಳಿಸುತ್ತಾರೆ.  ಆ ಸನಾತನ ಅವ್ಯಕ್ತ ಭಾವವನ್ನು ಪಡೆದುಕೊಂಡ ಬಳಿಕ ಮನುಷ್ಯನು ಮರಳಿ ಹುಟ್ಟುವುದಿಲ್ಲ, ಅದು ನನ್ನ ಸರ್ವಶ್ರೇಷ್ಠ ಸ್ಥಾನವಾಗಿದೆ ಎಂದಿದ್ದಾನೆ.
ಶ್ರೀ ವಾದಿರಾಜರು ತಮ್ಮ ವೈಕುಂಠ ವರ್ಣನೆಯಲ್ಲಿ "ಸಾಕ್ಷಾನ್ನಾರಾಯಣನಿಪ್ಪ ವೈಕುಂಠ"ವೆಂದಿದ್ದಾರೆ.   "ಅರ್ಕಕೋಟಿಗಳಂತೆ ವೈಕುಂಠಲೋಕ ದಶ ದಿಕ್ಕಿನೊಳಗೆ ಬೆಳಗುವುದು"  -  ವೈಕುಂಠಲೋಕವನ್ನು ಮಾತ್ರ ಲಕ್ಷ್ಮೀದೇವಿಯ ಕಾಂತಿಯು ಸಾಕ್ಷಾತ್ತಾಗೆ ಪ್ರಕಾಶಗೊಳಿಸುತ್ತದೆ ಎಂದಿದ್ದಾರೆ.
ಭಗವದ್ಗೀತೆಯಲ್ಲಿ ಭಗವಂತ ಸ್ವಯಂ
ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |
ಯದ್ಗತ್ವಾನ ನಿವರ್ತಂತೇ ತದ್ಧಾಮ ಪರಮಂ ಮಮ || - ಆ ಸ್ವಯಂ ಪ್ರಕಾಶಿತ ಪರಮಪದವನ್ನು ಸೂರ್ಯ ಚಂದ್ರರಾಗಲೀ, ಅಗ್ನಿಯಾಗಲೀ ಪ್ರಕಾಶಿಸಲಾರರು.  ಆ ಪರಮಪದವನ್ನು ಪಡೆದ ಮನುಷ್ಯ ಮರಳಿ ಸಂಸಾರಕ್ಕೆ ಬರುವುದಿಲ್ಲ.  ಅದೇ ನನ್ನ ಪರಮಧಾಮವಾಗಿದೆ ಎಂದಿದ್ದಾನೆ.
ಶ್ರೀ ವಾದಿರಾಜರು ವೈಕುಂಠವರ್ಣನೆಯಲ್ಲಿ ಮುಂದುವರೆಯುತ್ತಾ "ಶಿರಿದೇವಿ ತಾನೆ ಮುರಹರನ ಪಟ್ಟಣದೊಳು | ಪರಿಪರಿಯ ಮನೆಯ ರೂಪದಲ್ಲಿ | ಮಿರಮಿರನೆ ಮಿಂಚುವಳು ಹಚ್ಚಪ್ರಕೃತಿಯಿಂದ | ವಿರಚಿತಗೃಹಗಳೊಪ್ಪಿಹವು || - ಮುರಹರನ ಪಟ್ಟಣದಲ್ಲಿ ಶಿರಿದೇವಿಯಾದ ಶ್ರೀಮಹಾಲಕ್ಷ್ಮಿಯೇ ಸ್ವಯಂ ಪರಿಪರಿಯ, ನಾನಾವಿಧದ ಮನೆಯ ರೂಪಗಳಲ್ಲಿ ಪ್ರಕಾಶಿಸುತ್ತಾಳೆ ಎಂದಿದ್ದಾರೆ.  ಇಂತಹ ಪರಮ ಪವಿತ್ರವಾದ ಮತ್ತು ಲಕ್ಷ್ಮೀದೇವಿಯೇ ಸ್ವಯಂ ರೂಪದಲ್ಲಿರುವ ತನ್ನ ತ್ರಿಧಾಮಗಳನ್ನೇ ಭಗವಂತ ಸಾಲೋಕ್ಯ ಮುಕ್ತರಿಗೆ ಕೊಟ್ಟುಬಿಡುತ್ತಾನೆ.  ಇದು ಅವನ ಪರಮಕಾರುಣ್ಯವಲ್ಲದೇ ಬೇರೇನೂ ಅಲ್ಲ.

ಅಣುಗನಂದದಲವರ ವಶನಾಗುವ -  ಅನುಗನೆಂದರೆ ಸಂಸ್ಕೃತದಲ್ಲಿ ಸಹಚರ, ಸೇವಕ, ಅನುಚರ, ಹಿಂಬಾಲಿಸುವವ ಎಂದರ್ಥ.  ಲೌಕಿಕ ಪ್ರಪಂಚದ ಎಲ್ಲಾ ಸಂಬಂಧಗಳಲ್ಲೂ ಒಬ್ಬರಿಗೊಬ್ಬರು ತಮ್ಮನ್ನು ಅರ್ಪಿಸಿಕೊಂಡಾಗ ಅಲ್ಲಿ ಸ್ವಾರ್ಥದ ಲೇಪವಿದ್ದೇ ಇರುತ್ತದೆ.  ಆದರೆ ಪರಮಾತ್ಮನಿಗೆ ಪರಮ ಭಕ್ತರು ತಮ್ಮನ್ನೇ ಅರ್ಪಿಸಿಕೊಂಡಾಗ ಅಲ್ಲಿ ಎಲ್ಲವೂ ಮುಕ್ತವಾಗಿರುತ್ತದೆ.  ಭಗವಂತ ತನ್ನ ತನು ಮನ ಧಾಮಗಳೆಲ್ಲವನ್ನೂ ಭಕ್ತರಿಗೆ ಕೊಟ್ಟಾಗಲೂ ಅದರಿಂದ ಅವನಿಗೆ ಯಾವ ಲಾಭವೂ ಇಲ್ಲ.  ತನ್ನದೆಲ್ಲವನ್ನೂ ಕೊಟ್ಟು, ತಾನೂ ಅನುಗನಂತೆ ಭಕ್ತರನ್ನು ಸೇವಿಸುವ.  ಪುಟ್ಟ ಮಗು ತನ್ನ ತಂದೆಯನ್ನೇ ಅನುಸರಿಸುತ್ತಾ ಹಿಂದೆ ಮುಂದೆ ತಿರುಗುವಂತೆ ಭಗವಂತ ತನ್ನ ಭಕ್ತರ ವಶನಾಗಿಬಿಡುವನು.  ಇದೇ ಆ ಪರಮಪುರುಷನ ಅತಿಶಯವಾದ ಕಾರುಣ್ಯವು  ಹಾಗೂ ಮಹಾಮಹಿಮೆಯು ಆಗಿರುತ್ತದೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ
ಏನು ಕೊಟ್ಟರೂ ಕೊಡೋ ಶ್ರೀನಿವಾಸನೆ ನಿನ್ನ-
ಧೀನದವನಯ್ಯ ಎಂದೆಂದು | ಎಂದೆಂದು ಸುಖದುಃಖ-
ಮಾನಾದಿಗಳಿಗೆ ಪ್ರಭು ನೀನು || - ಶ್ರೀನಿವಾಸನೇ ನೀನು ಏನು ಕೊಡುತ್ತೀಯೋ ಕೊಡು, ನಿನ್ನ ಇಚ್ಛೆಗೆ ಬಂದದ್ದನ್ನು ಕೊಡು.  ನಾನು ಎಂದೆಂದಿಗೂ, ಯಾವ ಕಾಲಕ್ಕೂ (ಮುಕ್ತಿಯಲ್ಲೂ) ನಿನ್ನ ದಾಸನು.  ನನ್ನ ಸುಖ-ದುಃಖ ಮಾನಾಪಮಾನಾದಿ ದ್ವಂದ್ವಗಳಿಗೆ ನೀನೇ ಪ್ರಭು, ನೀನೇ ಸ್ವತಂತ್ರನು.  ನಾನು ನಿನ್ನ ಅಧೀನನು ಎಂದಿದ್ದಾರೆ.

ನಿತ್ಯ ಬುದ್ಧನು ನಾನು ನಿತ್ಯ ಮುಕ್ತನು ನೀನು
ಭೃತ್ಯನು ನಾನು ಪ್ರಭು ನೀನು | ಪ್ರಭು ನೀನು ಮೂರ್ಲೋಕ-
ವ್ಯಾಪ್ತನು ನೀನು ಅಣು ನಾನು || - ನಾನು ನಿತ್ಯ ಪರಾಧೀನನು, ನಿತ್ಯ ಸಂಸಾರಿಯು ಮತ್ತು ನಿನ್ನ ಸೇವಕನು.  ನೀನು ನಿತ್ಯ ಸ್ವತಂತ್ರನು, ಆಳುವ ಪ್ರಭು,  ಮೂರ್ಲೋಕ ವ್ಯಾಪ್ತನು.  ಆದರೆ ನಾನಾದರೋ ಅಣು ಮಾತ್ರ ಸ್ವರೂಪನು ಎಂದಿದ್ದಾರೆ.  ದುಃಖ ವಿಮೋಚನೆಯೇ ಮುಕ್ತನೆಂಬ ನಾಮಕ್ಕೆ ಕಾರಣವಾದರೆ, ಸದಾ ಶ್ರೀಹರಿಯ ಅಧೀನನು ಎಂಬುದೇ ಬದ್ಧನೆಂಬ ನಾಮಕ್ಕೆ ಕಾರಣವಾಗುತ್ತದೆ.

ಡಿವಿಜಿಯವರು ಕಗ್ಗದಲ್ಲಿ "ಮುಕ್ತಿಸುಖವಾಂತರಿಕವದು ನಿರವಧಿಸುಖ" - ಮುಕ್ತಿಸುಖವೆನ್ನುವುದು ಬಾಹ್ಯವಲ್ಲ,  ಆಂತರಿಕ.  ಪ್ರತೀ ಜೀವಿಯೂ ತನ್ನ ದೃಷ್ಟಿಯನ್ನು ತನ್ನೊಳಗೆ ತಿರುಗಿಸಿಕೊಂಡು ಅಲ್ಲಿ ಆಗುವ ಬ್ರಹ್ಮಾನಂದವನ್ನು ಅನುಭವಿಸಬೇಕು, ಅದು ನಿರವಧಿಸುಖ ಎಂದಿದ್ದಾರೆ.
ನೆನೆನೆನೆದು ಗಹನವನು, ಜೀವನರಹಸ್ಯವನು
ಮನವ ಬಳಲಿಸಿ ಸೋಲಿಸಿರುವ ತತ್ತ್ವವನು |
ಮನನದೇಕಾಂತದಲಿ ಮೌನದ ಧ್ಯಾನದಲಿ
ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ || - ವಿಶ್ವಕ್ಕೆಲ್ಲಾ ಆದಿಮೂಲವಾಗಿರುವ ಬ್ರಹ್ಮ ವಸ್ತುವನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿರು.  ಏಕಾಂತದಲ್ಲಿ ಮೌನವಾಗಿ ಕುಳಿತು ತದೇಕ ಚಿತ್ತನಾಗಿ ಧ್ಯಾನಿಸು.  ಧ್ಯಾನಿಸುತ್ತಾ ಪುನಃ ಪುನಃ ಸಾಷ್ಟಾಂಗ ನಮಸ್ಕಾರ ಮಾಡು ಎಂದಿದ್ದಾರೆ.

ಚಿತ್ರಕೃಪೆ : ಅಂತರ್ಜಾಲ

Tuesday, February 11, 2014

ಕರುಣಾ ಸಂಧಿ - ೧೬ ನೇ ಪದ್ಯ

ಏನು ಕರುಣಾನಿಧಿಯೊ ಹರಿ ಮ
ತ್ತೇನು ಭಕ್ತಾಧೀನನೋ ಇ
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ |
ತಾನೆ ಸೃಜಿಸುವ ಪಾಲಿಸುವ ನಿ
ರ್ವಾಣ ಮೊದಲಾದಖಿಳಲೋಕ
ಸ್ಥಾನದಲಿ ಮತ್ತವರನಿಟ್ಟಾನಂದ ಪಡಿಸುವನು  ||೧೬||

ಪ್ರತಿಪದಾರ್ಥ : ಏನು ಕರುಣಾನಿಧಿಯೋ ಹರಿ - ಶ್ರೀಹರಿಯು ಸಾಟಿಯಿಲ್ಲದಂತಹ ಕರುಣಾಸಾಗರನು, ಮತ್ತೇನು ಭಕ್ತಾಧೀನನೋ - ತನ್ನನ್ನು ಭಕ್ತಿ ಹಾಗೂ ಪ್ರೇಮದಿಂದ ಸ್ತುತಿಸುವ ಭಕ್ತರಿಗೆ ಅಧೀನನಾಗುವನು, ಇನ್ನೇನು ಈತನ ಲೀಲೆ - ಭಗವಂತ ಎಲ್ಲಾ ಕಾರ್ಯಗಳೂ ಲೀಲೆಗಳೇ (ಕ್ರೀಡೆಗಳೇ) ಆಗಿವೆ ಬಣ್ಣಿಸಲಾಗಲೀ ಹೋಲಿಸಲಾಗಲೀ ಸಾಧ್ಯವಿಲ್ಲದಂತಹುದು, ಇಚ್ಛಾಮಾತ್ರದಲಿ - ತನಗೆ ಇಚ್ಛೆಯಾದ ಕೂಡಲೆ,  ಜಗವ ತಾನೆ ಸೃಜಿಸುವ - ಬ್ರಹ್ಮಾಂಡವನ್ನು ಸೃಷ್ಟಿ ಮಾಡುವನು, ಪಾಲಿಸುವ - ಸಂರಕ್ಷಣೆಯನ್ನೂ ಮಾಡುವನು, ನಿರ್ವಾಣ - ಎಂದರೆ ಬಾಣವಿಲ್ಲದ ಸ್ಥಳ ಮತ್ತು ಬಾಣ ಎಂದರೆ ಬಾಹ್ಯದೇಹ - ಮೋಕ್ಷ, ಮೊದಲಾದಖಿಳ - ಸ್ವರ್ಗ ಹಾಗೂ ಇತರ ಭೋಗಗಳು, ಲೋಕ ಸ್ಥಾನದಲಿ - ಸ್ವರ್ಗಲೋಕ ಮಹರ್ಲೋಕ ಮುಂತಾದ ಲೋಕಗಳಲ್ಲಿ, ಮತ್ತವರನ್ನಿಟ್ಟು - ಭಕ್ತರನ್ನು ಅಲ್ಲಿ ಇಟ್ಟು, ಆನಂದಪಡಿಸುವನು - ಸಂತೋಷಪಡುವಂತೆ ಮಾಡುವನು.

ಹರಿ ಕರುಣಾ ಸಮುದ್ರನು ಮತ್ತು ಭಕ್ತರಿಗೆ ಅಧೀನನೂ ಆಗಿದ್ದಾನೆ.  ತನ್ನ ಖುಷಿಯಿಂದ ಜಗತ್ತನ್ನು ಸೃಷ್ಟಿಸುವವನು ಹಾಗೂ  ಪಾಲಿಸುವವನು.  ತನ್ನ ಇಷ್ಟವುಳ್ಳ ಭಕ್ತರಿಗೆ ಮೋಕ್ಷವನ್ನು ಕೊಟ್ಟು, ಅವರನ್ನು ಆನಂದ ಪಡಿಸುವನು.  ಅತ್ಯಂತ ಬಡವನಾದ ತನ್ನ ಸ್ನೇಹಿತ ಸುಧಾಮನಿಗೆ ಐಶ್ವರ್ಯವನ್ನು ಕೊಟ್ಟು ಕರುಣಾನಿಧಿ ಎನಿಸಿಕೊಂಡ.  ಭಕ್ತ ಪುಂಡರೀಕ ಕೊಟ್ಟ ಇಟ್ಟಿಗೆಯ ಮೇಲೆ ನಿಂತು ಭಕ್ತಾಧೀನನೆನಿಸಿಕೊಂಡ.  ಪುಟ್ಟ ಧೃವ ಮತ್ತು ಪ್ರಹ್ಲಾದರಿಗೆ ಏನೇ ಕಷ್ಟ ಬಂದರೂ ಅವರನ್ನು ಕಾಪಾಡಿದ.  ಧೃವನಿಗೆ ಒಂದು ಲೋಕವನ್ನೇ ಕೊಟ್ಟು ಲೋಕಾಧಿಪತಿಯನ್ನು ಮಾಡಿದ.  ಭಕ್ತ ಪ್ರಹ್ಲಾದನಿಗಾಗಿ ಒಂದು ಅವತಾರವನ್ನೇ ಎತ್ತಿದ.  ಹೀಗೆ ಇಚ್ಛಾಮಾತ್ರ ಲೀಲೆಯಿಂದ ಈ ಲೋಕವನ್ನು ಸೃಷ್ಟಿಸಿ, ಪಾಲಿಸಿ, ಲಯಗೊಳಿಸಿ, ವೈಕುಂಠವೇ ಮೊದಲಾದ ಮುಕ್ತ ಲೋಕಗಳಲ್ಲಿ ತನ್ನ ಭಕ್ತರನ್ನಿಟ್ಟು ಆನಂದಪಡಿಸುತ್ತಾನೆ.

ಭಗವಂತನ ಲೀಲೆಗಳಿಂದ ಆನಂದವಲ್ಲ, ಅವನು ಆನಂದದಿಂದಲೇ ಲೀಲೆಯಾಡುವನು.  ತನ್ನ ಒಂದು ಇಚ್ಛೆಯಿಂದಲೇ ಬ್ರಹ್ಮಾಂಡದ ಸೃಷ್ಟಿಯನ್ನು ಮಾಡುವಂತಹ ಪರಮಪುರುಷನಾದ ಶ್ರೀಹರಿ ಅದೆಷ್ಟು ಕರುಣಾಮಯನೆಂದರೆ, ನಿಜವಾದ ಭಕ್ತರಿಗೆ ತಾನೇ ಅಧೀನನಾಗಿ ಬಿಡುವಂತಹವನು.  ಕರುಣೆಗೆ ಗುರುತೇ ಭಕ್ತರಿಗಧೀನನಾಗುವುದು.  ಆನಂದದಿಂದ ಲೀಲೆಯಾಡುವಂತಹ ಸರ್ವಶಕ್ತನಾದ ಶ್ರೀಹರಿ ಭಕ್ತರ ನಿಷ್ಕಲ್ಮಷ ಪ್ರೇಮಕ್ಕೆ, ಭಕ್ತಿಗೆ ತನ್ನನ್ನೇ ಕೊಟ್ಟು, ಕಟ್ಟುಹಾಕಿಸಿಕೊಳ್ಳುವಂತಹವನು.  ಇಂತಹ ಕರುಣಾಮಯನ ಕರುಣೆ ಜೀವಿಗೆ ಸಿಗಬೇಕಾದರೆ, ಜೀವಿ ನಿಜವಾದ ಭಕ್ತಿಯಿಂದ ಪರಿಪೂರ್ಣವಾಗಿ ತನ್ನನ್ನೇ ಅವನಿಗೆ ಅರ್ಪಿಸಿಕೊಳ್ಳಬೇಕು.  ನಿಜವಾದ ಭಕ್ತನು ಯಾರು ಮತ್ತು ನಿಜವಾದ ಭಕ್ತಿಯೆಂದರೆ ಏನೆಂಬುದನ್ನು ಮೊದಲು ಅರಿಯಬೇಕು.  ಭಕ್ತರಲ್ಲಿಯೂ ವಿವಿಧ ಭಾವಗಳಿವೆ.  ಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆಂದು ಬಯಸುವ ಭಕ್ತನನ್ನು ’ಜಿಜ್ಞಾಸು’ (ಜ್ಞಾತುಂ ಇಚ್ಛಾ ಜಿಜ್ಞಾಸಾ) ಎನ್ನುತ್ತಾರೆ.   ವಾಸನೆಗಳನ್ನೂ, ವಿಷಯಗಳನ್ನೂ ಬಯಸುವ ಭಕ್ತನನ್ನು ’ಅರ್ಥಾರ್ಥಿ’ ಎನ್ನುತ್ತಾರೆ.  ಸದಾ ಸರ್ವದಾ ಭಗವಂತನನ್ನೇ ಬಯಸುವಂತಹ ಭಕ್ತನನ್ನು ’ಜ್ಞಾನೀಚ’ ಎನ್ನುತ್ತಾರೆ ಮತ್ತು ಇದೇ ನಿಜವಾದ ಭಕ್ತಿ ಹಾಗೂ ಇದನ್ನು ಬಯಸುವವನೇ ನಿಜವಾದ ಭಕ್ತನೂ ಆಗಿರುತ್ತಾನೆ.  ನಿರಂತರ ಸ್ಮರಿಸಬೇಕೆಂದಾಗ, ಭಗವಂತನಿಗೆ ಇದೇ ನಾಮ ಅದೇ ನಾಮವೆಂಬ ಯಾವುದೇ ನಿಯಮವಿಲ್ಲ.  ಅವನು ಪ್ರತಿ ಅಕ್ಷರ ಹಾಗೂ ಪದಗಳ ಪ್ರತಿಪಾದ್ಯನು.  ಯಾವುದೇ ಪದವನ್ನು ಉಪಯೋಗಿಸಿದರೂ, ಯಾವುದೇ ನಾಮವಾದರೂ , ಶುದ್ಧ ಭಕ್ತಿಯಿಂದ, ನುಡಿದಾಗ ಅದು ಭಗವಂತನ ನಾಮವೇ ಆಗುತ್ತದೆ.  ನಾವು ಆಡುವ ಪ್ರತಿ ಶಬ್ದವೂ ಭಗವಂತನಿಗೇ ಸಮರ್ಪಣೆಯೆಂಬ ಒಂದು ಅನುಸಂಧಾನವನ್ನು ದಿನವೂ ಬೆಳಿಗ್ಗೆ ಎದ್ದ ತಕ್ಷಣ ಮಾಡಿಕೊಂಡರೆ, ದಿನಪೂರ್ತಿಯೂ ಆಡುವ ಪ್ರತೀ ಮಾತೂ ಅವನಿಗೇ ಸಮರ್ಪಿತವಾಗುತ್ತದೆ.  ಹೀಗೆ ಮಾಡಿದಾಗ ತತ್ತ್ವಾಭಿಮಾನಿ ದೇವತೆಗಳು ಕೂಡ ನುಡಿಯುವ ಪ್ರತೀ ಶಬ್ದವೂ ಭಗವಂತನಿಗೆ ಪ್ರೀತಿಯಾಗುವಂತೆಯೇ ನುಡಿಸುತ್ತಾರೆ.  ಭಗವಂತನಿಗೆ ತನ್ನದೇ ಎಂಬ ಯಾವ ಕರ್ತವ್ಯವೂ ಯಾವ ಲೋಕದಲ್ಲಿಯೂ ಇಲ್ಲ.  ಅವನು ಕರುಣಾಸಾಗರ ಹಾಗೂ ಭಕ್ತಪರಾಧೀನನಾದ್ದರಿಂದಲೇ, ಜೀವಿಗೋಸ್ಕರವಾಗಿಯೇ, ತನ್ನದೇ ಕರ್ತವ್ಯವೋ ಎಂಬಂತೆ ತಾನು ಮಾಡಿ, ನಮ್ಮಿಂದ ಮಾಡಿಸಿ, ನಮ್ಮನ್ನು ಕಾಪಾಡುತ್ತಾನೆ.  


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು :

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ || -  ಮೂರೂ ಲೋಕಗಳಲ್ಲಿಯೂ ನನಗೆ ಗಳಿಸಲಾಗದಿರುವ ಯಾವುದೇ ವಸ್ತುವೂ ಇಲ್ಲ ಮತ್ತು ಇದ್ದರೂ ನನಗೆ ಅದರ ಅವಶ್ಯಕತೆ ಇಲ್ಲ.  ನನಗಾಗಿ ಯಾವ ಕರ್ತವ್ಯವೂ ಉಳಿದಿಲ್ಲವಾದರೂ ಕೂಡ ನಾನು ಕರ್ಮಗಳನ್ನು ತ್ಯಾಗ ಮಾಡುವುದಿಲ್ಲ.  ನಾನೇ ಸೃಷ್ಟಿಸಿರುವ ಈ ಲೋಕದ ಜೀವಿಗಳಿಗಾಗಿ, ಅವರ ಉದ್ಧಾರಕ್ಕಾಗಿ, ಅವರ ಮೇಲೆ ದಯೆಗೈದು ನಾನು ಕರ್ಮಗಳಲ್ಲಿ ತೊಡಗಿದ್ದೇನೆ ಎಂದು ಅರ್ಜುನನಿಗೆ ತಿಳಿಸಿದ್ದಾನೆ.  

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದಿತಃ |

ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ || - ನಾನು ಎಂದಾದರೂ ಎಚ್ಚರವಾಗಿ ಕರ್ಮಗಳನ್ನು  ಮಾಡದಿದ್ದರೆ ದೊಡ್ಡ ಹಾನಿಯುಂಟಾಗುವುದು.  ಏಕೆಂದರೆ ಎಲ್ಲಾ ಜೀವಿಗಳೂ ಪ್ರತಿಯೊಂದು ರೀತಿಯಲ್ಲೂ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ ಎಂದಿದ್ದಾನೆ.
ಭಗವಂತ ತಾನೇನೂ ಮಾಡಬೇಕಿಲ್ಲವಾದರೂ, ಅವನು ಮಾಡದಿದ್ದರೆ ಅಸ್ವತಂತ್ರರಾದ ಜೀವಿಗಳೂ ಏನೂ ಮಾಡಲಾರರು.   ಜೀವಿಗಳು ತಮಗೆ ಬೇಕಿದ್ದರೂ ಕೂಡ ತಾವೇ ಜನಿಸಲಾರರು,  ಸಾಧನೆ ಮಾಡಲಾರರು.  ಮುಕ್ತಿ, ಮೋಕ್ಷಗಳನ್ನು ಪಡೆಯಲಾರರು.  ಆದ್ದರಿಂದ ಕರುಣಾಮಯಿಯಾದ ಭಗವಂತ ತಾನೇ ಹುಟ್ಟಿಸಿ, ರಕ್ಷಿಸಿ, ಸಾಧನೆ ಮಾಡಿಸಿ, ಮೋಕ್ಷಾದಿ ಫಲಗಳನ್ನು ಕೊಟ್ಟು ಸಂತೋಷಪಡಿಸುತ್ತಾನೆ.   ಇಷ್ಟೆಲ್ಲಾ ಮಾಡುವ ಭಗವಂತನು ತಾನು ಮಾಡಿದ ಕೆಲಸಕ್ಕೆ ಪ್ರತಿಫಲವನ್ನೇನೂ ಬಯಸುವುದಿಲ್ಲ.

ಅನುಸಂಧಾನ ಪೂರ್ವಕವಾಗಿ ಮಾಡುವ ಪ್ರತೀ ಕರ್ಮವೂ ಭಗವಂತನಿಗೆ ಸಮರ್ಪಣೆಯಾಗುತ್ತದೆ.  ಸಮರ್ಪಣೆಯಾದಾಗ, ಪಾಪವೂ ಪಾಪವಾಗುವುದಿಲ್ಲ, ಪುಣ್ಯವೇ ಆಗುತ್ತದೆ.  ಪಾಪವೆಂಬಂತೆ ತೋರಿಸಿ, ಜೀವಿಯನ್ನು ಎಚ್ಚರಿಸಿ ಮತ್ತೆ ಪಾಪ ಮಾಡದಂತೆ, ಪ್ರೇರೇಪಿಸುತ್ತಾನೆ ಭಗವಂತ.  ಆದ್ದರಿಂದಲೇ ಅವನು ಕರುಣಾಸಮುದ್ರನು. ಭಕ್ತಾಧೀನನಾದ ಭಗವ೦ತನು ತನ್ನ ಕರುಣೆಯ ಅಧೀನತ್ವವನ್ನು ಯಾವಾಗ ತೋರಿಸುವನು ಎ೦ದರೆ ಜೀವಿಯು ಅನುಸ೦ಧಾನಪೂರ್ವಕವಾಗಿ ಕರ್ಮಗಳನ್ನು ಮಾಡಿದಲ್ಲಿ, ತನ್ನ ಭಕ್ತರು ಏನು ಪಾಪವನ್ನು ಮಾಡಿದರೂ, ತಜ್ಜನಿತವಾದ ಪಾಪ ಫಲಗಳನ್ನು ದೈತ್ಯರಿಗೆ ವಿಭಾಗ ಮಾಡಿಕೊಟ್ಟು, ದೈತ್ಯರು ಮಾಡಿದ ಪುಣ್ಯಕರ್ಮಗಳನ್ನು ತನ್ನ ಭಕ್ತರಿಗೆ ಕೊಡುತ್ತಾನೆ. 


ಏನು ಕರುಣಾನಿಧಿಯೊ - ಭಾಗವತದಲ್ಲಿ ತಿಳಿಸಿರುವಂತೆ ಬ್ರಹ್ಮಾಂಡ ಸೃಷ್ಟಿಯಾಗುವ ಮೊದಲೇ ೨೪ ತತ್ತ್ವಗಳ ಸೃಷ್ಟಿಯಾಗಿತ್ತು.  ಆದರೆ ತತ್ತ್ವಾಭಿಮಾನಿ ದೇವತೆಗಳು ಏನೂ ಮಾಡಲಾಗದೇ, ಭಗವಂತನಿಗೆ ಶರಣುಬಂದಾಗ, ಶ್ರೀಹರಿ ತಾನೇ ಎಲ್ಲ ದೇವತೆಗಳೊಳಗೂ ನಿಂತು, ಮಾಡಿ, ತತ್ತ್ವಾಭಿಮಾನಿ ದೇವತೆಗಳಿಂದ ಮಾಡಿಸಿ, ಬ್ರಹ್ಮಾಂಡ ಸೃಷ್ಟಿಸಿದ.  ಪ್ರತಿಯೊಬ್ಬರಿಗೂ ಅವರರವ ಯೋಗ್ಯತೆಗನುಸಾರವಾಗಿ ಕರ್ಮ ಮಾಡಿಸಿ, ತಕ್ಕ ಫಲವನ್ನು ಕೊಡುವವನು.  ಸಾಧನೆಯಿಲ್ಲದೇ ಯಾವ ಫಲವೂ ಸಿಕ್ಕುವುದಿಲ್ಲ.  ಈ ಜನ್ಮದಲ್ಲಿ ಕೊಟ್ಟಿರುವ ಭೌತಿಕ ಶರೀರವನ್ನುಪಯೋಗಿಸಿಕೊಂಡು ಭಗವಂತನಿಗೆ ಶರಣಾಗಿ ಪ್ರಾರ್ಥಿಸಿಕೊಂಡಾಗ ಮಾತ್ರ ನಮಗೆ ಮುಂದಿನ ಜನ್ಮಗಳಲ್ಲೂ ಸಾಧನೆಗೆ ಅನುಕೂಲವಾಗುವಂತಹ ಉತ್ತಮ ಶರೀರ ಕೊಟ್ಟು, ಹಣ, ಸ್ಥೈರ್ಯ, ಅನುಕೂಲಕರವಾಗಿರುವ ವಾತಾವರಣ ಕೊಟ್ಟು ಸಾಧನೆ ಮಾಡಿಸಿ, ಸಾಧನೆಯ ಫಲವಾಗಿ  ಸ್ವರ್ಗ ಹಾಗೂ ಮೋಕ್ಷಗಳನ್ನು ಕರುಣಿಸುತ್ತಾನೆ.


ಏನು ಭಕ್ತಾಧೀನನೋ -  ಭಗವಂತ ಭಕ್ತರ ಅಧೀನನು.  ಜೀವಿಗಳಿಂದ ಪ್ರಾರಂಭಿಸಿ, ದೇವತೆಗಳವರೆಗೂ ಎಲ್ಲರೂ ಅವನ ಭಕ್ತರೇ.  ಎಲ್ಲರಲ್ಲೂ ಅವನೇ ಇದ್ದು ಸಾಧನೆ ಮಾಡಿಸುವನು.  ಜೀವಿಗಳನ್ನು ಹುಟ್ಟಿಸಿ, ಅವರೊಳಗೆ ಭಗವತ್ತತ್ತ್ವಗಳ ಪ್ರೇರಣೆ ಕೊಟ್ಟು, ಸಾಧನೆ ಮಾಡಿಸುವುದು ತತ್ತ್ವಾಭಿಮಾನಿ ದೇವತೆಗಳ ಕೆಲಸ, ಕರ್ತವ್ಯ.  ಇದು ತತ್ತ್ವಾಭಿಮಾನಿ ದೇವತೆಗಳಿಗೆ ಮೋಕ್ಷ ಸಾಧನೆ.  ಆದರೆ ತತ್ತ್ವಾಭಿಮಾನಿ ದೇವತೆಗಳೂ ಕೂಡ ಅಸ್ವತಂತ್ರರೇ.  ಅವರು ಭಗವಂತನಲ್ಲಿ ತಮ್ಮ ಅಶಕ್ತತೆಯನ್ನು ನಿವೇದಿಸಿಕೊಂಡರು.  ಭಾಗವತ ತೃತೀಯ ಸ್ಕಂದದಲ್ಲಿ ತಿಳಿಸಿರುವಂತೆ ದೇವತೆಗಳು ಭಗವಂತನನ್ನು "ಪ್ರಪಂಚದ ಸೃಷ್ಟಿಗಾಗಿ ನೀನು ನಮ್ಮನ್ನು ತ್ರಿಗುಣಮಯವನ್ನಾಗಿ ಸೃಷ್ಟಿಸಿದರೂ, ನಮ್ಮಲ್ಲಿ ಪರಸ್ಪರ ಸಾಮ್ಯವಿಲ್ಲ.  ಎಲ್ಲರ ಸ್ವಭಾವವೂ ಬೇರೆ ಬೇರೆಯೇ ಆಗಿದೆ.  ಆದ್ದರಿಂದ ನಾವುಗಳೆಲ್ಲರೂ ಒಟ್ಟಾಗಿ ಸೇರಿ ನಿನ್ನ ಕ್ರೀಡೆಗಾಗಿ ಲೋಕವನ್ನು ಸೃಷ್ಟಿಮಾಡಿ, ನಿನಗೆ ಅರ್ಪಿಸಲು ಅಸಮರ್ಥರಾಗಿದ್ದೇವೆ" ಎಂದು ಪ್ರಾರ್ಥಿಸಿಕೊಂಡರು.  ಭಗವಂತ ಪ್ರತೀ ತತ್ತ್ವಾಭಿಮಾನಿ ದೇವತೆಯೊಳಗೂ ತಾನು ಪ್ರವೇಶಿಸಿ, ಅವರಲ್ಲಿದ್ದ ಸುಪ್ತ ಶಕ್ತಿಯನ್ನು ಉದ್ರೇಕಿಸಿ, ಪ್ರೇರಣೆ ಕೊಟ್ಟು, ಅವರೆಲ್ಲರ ಮೂಲಕವೇ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿಸಿದ.  ಹೀಗೆ ತನ್ನ ಭಕ್ತರಾದ ದೇವತೆಗಳ ಭಕ್ತಿಗೆ ಮೆಚ್ಚಿ ಅವರೊಳಗಿದ್ದು ತಾನು ಮಾಡಿ, ಅವರಿಂದ ಸಾಧನೆ ಮಾಡಿಸುವನಾದ್ದರಿಂದಲೇ ಅವನು ಭಕ್ತಪರಾಧೀನ.   ಭಗವಂತ ತಾನೇ ಎಲ್ಲವನ್ನೂ ಮಾಡಿದರೂ ಕೂಡ ಅದರಿಂದ ಬರುವ ಪ್ರತಿಫಲಗಳನ್ನು ಆಯಾ ದೇವತೆಗಳಿಗೇ ಅವರ ಸಾಧನೆಯ ಲೆಕ್ಕಕ್ಕೆ ಸೇರಿಸಿಬಿಡುವ ಕರುಣಾಸಮುದ್ರನಾಗಿದ್ದಾನೆ.    ಬ್ರಹ್ಮಾಂಡದ ಪಾಲನೆಯಲ್ಲಿಯೂ ದೇವತೆಗಳು ಅಶಕ್ತರೆಂಬುದು ಭಾಗವತದಲ್ಲಿ ಬರುವ "ಭಕ್ತ ಅಂಬರೀಷ ರಾಜ"ನ ಕಥೆಯಿಂದ ತಿಳಿಯಬಹುದು.  ರಾಜ ಅಂಬರೀಷನಲ್ಲಿ ಅಪರಾಧ ಮಾಡಿದ ದುರ್ವಾಸರನ್ನು ವಿಷ್ಣುಚಕ್ರ ಬೆನ್ನಟ್ಟಿಕೊಂಡು ಬಂದಾಗ, ದುರ್ವಾಸರು ಎಲ್ಲಾ ಲೋಕಗಳಲ್ಲಿಯೂ ಸಂಚರಿಸಿ, ದೇವತೆಗಳನ್ನು ಪ್ರಾರ್ಥಿಸಿದರು.  ಆದರೆ ಯಾರಿಂದಲೂ ವಿಷ್ಣುಚಕ್ರ ತಡೆಯುವುದಾಗಲಿಲ್ಲ.  ಕೊನೆಗೆ ಶ್ರೀಹರಿಯ ಪಾದಗಳಿಗೆ ದುರ್ವಾಸರು ಶರಣಾಗತರಾದಾಗ, ಭಗವಂತ ವಿಷ್ಣುಚಕ್ರ ತಡೆಯುವುದು, ತನ್ನಿಂದಲೂ ಸಾಧ್ಯವಿಲ್ಲವೆಂದು ತಿಳಿಸಿದನು.  ದುರ್ವಾಸರು ಅಪರಾಧ ಮಾಡಿದ್ದ ಭಗವಂತನ ಪರಮ ಭಕ್ತನಾದ ರಾಜ ಅಂಬರೀಷನು ಮಾತ್ರವೇ ವಿಷ್ಣುಚಕ್ರವನ್ನು ತಡೆಯಬಲ್ಲವನೆಂದು ದುರ್ವಾಸರಿಗೆ ತಿಳಿಸಿ, ತನ್ನ ಭಕ್ತಾಧೀನ ಗುಣವನ್ನು ಪ್ರಕಾಶಿಸಿದ.  ಭಗವಂತ ತಾನೇ "ಅಹಂ ಭಕ್ತಪರಾಧೀನೋ ಹ್ಯಸ್ವತನ್ತ್ರ ಇವ ದ್ವಿಜ | ಸಾಧುಭಿರ್ಗ್ರಸ್ತ ಹೃದಯೋ ಭಕ್ತೈರ್ಭಕ್ತ ಜನಪ್ರಿಯಃ || - ನಾನು ಸರ್ವಥಾ ಭಕ್ತಜನರಿಗೆ ಅಧೀನನು, ನನಗೆ ಯಾವ ಸ್ವಾತಂತ್ರವೂ ಇಲ್ಲ, ನನ್ನ ಭಕ್ತರನ್ನು ಬಹಳವಾಗಿ ಪ್ರೀತಿಸುತ್ತೇನೆ ಎಂದು  ತಿಳಿಸಿದ್ದಾನೆ.


ಏನು ಈತನ ಲೀಲೆ - ಭಗವಂತ ಸುಖವಾಗಿ ತಾನಿರುವ ವೈಕುಂಠದಿಂದಲೇ ತನ್ನ ಇಚ್ಛೆಮಾತ್ರದಿಂದಲೇ ಸಕಲ ಸೃಷ್ಟಿಯನ್ನೂ ಮಾಡಬಹುದು.  ಆದರೆ ಹಾಗೆ ಮಾಡದೆ ತನ್ನ ಭಕ್ತರಾದ ಬ್ರಹ್ಮಾದಿ ದೇವತೆಗಳ ಮೂಲಕ ಸೃಷ್ಟಿಯಾದಿ ಕೆಲಸಗಳನ್ನು ಮಾಡುವನು.  ತಾನೇ ಬೇರೆ ಬೇರೆ ರೂಪಗಳಲ್ಲಿ ಎಲ್ಲಾ ದೇವತೆಗಳೊಳಗೂ ಪ್ರವೇಶಿಸಿ ಎಲ್ಲವನ್ನೂ ಮಾಡಿ ಮಾಡಿಸುತ್ತಾನೆ.  ತನಗಾಗಿ ತನ್ನ ಲೀಲೆಗಾಗಿ ಭಗವಂತ ಸೃಷ್ಟಿಯ ಕಾರ್ಯ ಮಾಡುವುದಿಲ್ಲ.  ಅವನು ಪೂರ್ಣಾನಂದನಾಗಿರುವುದರಿಂದ ಸೃಷ್ಟಿಯನ್ನು ಲೀಲೆಯಿಂದ ಮಾಡಿಬಿಡುತ್ತಾನಷ್ಟೆ. 

ಭಗವದ್ಗೀತೆಯಲ್ಲಿ ಭಗವಂತ
ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ | -   ಎನ್ನುತ್ತಾ ಸರ್ವ ಜಗತ್ತಿನ ಉತ್ಪತ್ತಿಗೆ ನಾನೇ ಕಾರಣನಾಗಿದ್ದೇನೆ ಮತ್ತು ನನ್ನಿಂದಲೇ ಇಡೀ ಜಗತ್ತು ವರ್ತಿಸುತ್ತಾ ಇದೆ ಎಂದೂ
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ |
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ || - ಕಲ್ಪದ ಕೊನೆಯಲ್ಲಿ ಸರ್ವ ಜೀವಕೋಟಿಯು ನನ್ನ ಪ್ರಕೃತಿಯಲ್ಲಿ ಲೀನವಾಗುತ್ತವೆ ಹಾಗೂ ಕಲ್ಪದ ಪ್ರಾರಂಭದಲ್ಲಿ ಪುನಃ ಅವುಗಳನ್ನು ನಾನು ಸೃಷ್ಟಿಸುತ್ತೇನೆ ಎಂದೂ ತಿಳಿಸಿದ್ದಾನೆ. 
ಸಕಲವೂ ಅವನದ್ದೇ, ಎಲ್ಲಾ ಚರಾ ಚರಗಳಲ್ಲೂ ಭಗವಂತನದ್ದೇ ಅನೇಕಾನೇಕ ವಿಭೂತಿರೂಪಗಳಿವೆ ಎಂಬುದನ್ನು ತಾನೇ ತಿಳಿಸಿರುವಾಗ ಸೃಷ್ಟಿಯೆಂಬುದು ಅವನಿಗೆ ಅನಾಯಾಸ ಕಾರ್ಯ.  ಸದಾನಂದನಾಗಿ ಅವನು ನಡೆಸುವ ಲೀಲೆಯೇ ಸೃಷ್ಟಿ.  ಲೀಲೆಗಾಗಿ ಸೃಷ್ಟಿಯಲ್ಲ, ಸೃಷ್ಟಿಯೇ ಲೀಲೆ.

ಇಚ್ಛಾಮಾತ್ರದಲಿ ಜಗವ ತಾನೆ ಸೃಜಿಸುವ - ಭಗವಂತ ಏತಕ್ಕಾಗಿ ಸೃಷ್ಟಿಯನ್ನು ಮಾಡಬೇಕು ಎಂದು ವಿಚಾರ ಮಾಡಿದಾಗ,  ಜಗತ್ತನ್ನು ಸೃಜಿಸುವುದರಿಂದ ಭಗವಂತನಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.  ಸೃಷ್ಟಿ ಕಾರ್ಯ ಎಂಬ ಕ್ರೀಡೆಯಿಂದ ಅವನಿಗೆ ಯಾವ ಆನಂದವೂ ಉಂಟಾಗುವುದಿಲ್ಲ,  ಏಕೆಂದರೆ ಅವನು ಸದಾನಂದನೂ, ಪೂರ್ಣಾನಂದನೂ ಆಗಿರುವನು.  ಹಾಗಿರುವಾಗ ಈ ಸೃಷ್ಟಿಯ ಕಾರ್ಯವನ್ನು ಭಗವಂತ ತನ್ನ ಆನಂದಕ್ಕಾಗಲೀ ಅಥವಾ ಉಪಯೋಗಕ್ಕಾಗಲೀ ಮಾಡುವುದಿಲ್ಲವೆಂಬುದು ತಿಳಿಯುತ್ತದೆ. ಭಗವಂತನು ಜೀವಿಗಳ ಮೇಲಿನ ಕರುಣೆಯಿಂದ ಮತ್ತು ಜೀವಿಗಳ ಉದ್ಧಾರಕ್ಕಾಗಿಯೇ ಜಗವನ್ನು ಸೃಷ್ಟಿಸಿ, ಸಾಧನೆ ಮಾಡಲು ಅನುಕೂಲ ಮಾಡಿಕೊಡುತ್ತಾನೆ.  ಕರುಣಾಸಮುದ್ರನಾದ ಭಗವಂತ ಭಕ್ತಾಪರಾಧೀನನಾಗಿ, ಭಕ್ತರಿಗೋಸ್ಕರ ಜಗತ್ತನ್ನು ಸೃಷ್ಟಿಸಿ, ಅವರೊಳಗೆ ತಾನಿದ್ದು, ಸಾಧನೆ ಮಾಡಿಸುತ್ತಾನೆ.  ಸಾಧನೆಗೆ ಪ್ರತಿಫಲವಾಗಿ ಮುಕ್ತಿ ಹಾಗೂ ಮೋಕ್ಷಗಳನ್ನು ಕೊಟ್ಟು ಸದಾ ಆನಂದದಿಂದಿರುವಂತೆ ರಕ್ಷಿಸುತ್ತಾನೆ.  ಭಗವಂತನಿಗೆ ಸೃಷ್ಟಿ ಕಾರ್ಯ ಮಾಡುವುದರಿಂದ ಯಾವುದೇ ಆಯಾಸವೂ ಆಗುವುದಿಲ್ಲ.  ತನ್ನ ಸ್ವಾಭಾವಿಕ ಗುಣವಾದ ಆನಂದದಿಂದಲೇ ಅನಾಯಾಸವಾಗಿಯೇ ಸೃಜಿಸುತ್ತಾನೆ.  ಸಾಧನೆ ಮಾಡಿದ ಭಕ್ತರನ್ನು ನಿರ್ವಾಣ ಮೊದಲಾದ ಅಖಿಳ ಲೋಕಗಳಲ್ಲಿಟ್ಟು ಆನಂದಪಡಿಸುತ್ತಾನೆ.  ನಿರ್ವಾಣವೆಂದರೆ ಶೂನ್ಯ ಅಥವಾ ಏನೂ ಇಲ್ಲದ ಸ್ಥಿತಿ ಎಂದರ್ಥ.  ನಿರ್ವಾಣ ಲೋಕವೆಂದರೆ ’ಲಿಂಗಶರೀರ’ ಭಂಗವಾದ ನಂತರ ಸಾಧಕನು ತಲುಪುವ ಸ್ಥಳ, ಅಂದರೆ ಮೋಕ್ಷವೆಂದರ್ಥವಾಗುತ್ತದೆ.   ಅ೦ತ:ಕರಣವೆ೦ಬ ಸಮುದ್ರ ಉಳ್ಳವ ಎ೦ದರೆ ಅಪಾರ ಕಾರುಣ್ಯವುಳ್ಳವನಾದ ಭಗವ೦ತ ಎ೦ದೂ ಭಕ್ತರವಶನು. ತಾನೇ ಸೃಜಿಸಿರುವ, ಸ೦ರಕ್ಷಣೆ ಮಾಡುವ, ಜಗತ್ತಿನಲ್ಲಿ ಮಾತ್ರವಲ್ಲದೆ, ಪ್ರಳಯಕಾಲದಲ್ಲಿ, ಲಿ೦ಗಭ೦ಗ ಉ೦ಟಾದ ಜೀವರನ್ನು ಶ್ವೇತದ್ವೀಪ, ಅನ೦ತಾಸನ, ವೈಕು೦ಠಾದಿ ಲೋಕಗಳಲ್ಲಿಯೂ ಆವಾಸರನ್ನಾಗಿ ಮಾಡಿ ಸ್ವರೂಪಾನ೦ದವನ್ನು ಪಡಿಸುವವನು ಎ೦ದು ಜಗನ್ನಾಥ ದಾಸರು ತಿಳಿಸುತ್ತಾರೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ :


ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣ

ತಾ ನಮ್ಮನಗಲಿ ಸೈರಿ-ಸ | ಸೈರಿಸದ ಕರುಣಿಯ
ನಾನೆಂತು ತುತಿಸಿ ಹಿಗ್ಗ-ಲಿ || - ಶ್ರೀಮಹಾಲಕ್ಷ್ಮೀ ರಮಣನೂ, ಅಪಾರ ಕರುಣಾಸಮುದ್ರನೂ ಆದ ಭಗವಂತ ಭಕ್ತರನ್ನು ಅಗಲಿ ಇರುವುದಿಲ್ಲ.  ಅವನು ಅಗಲಿಕೆಯನ್ನು ಸಹಿಸುವುದಿಲ್ಲ.  ಅಂತಹ ಸರ್ವ ಶ್ರೇಷ್ಟನಾದ ಭಗವಂತನನ್ನು ಎಷ್ಟು ವಿಧವಾಗಿ ಸ್ತುತಿಸಿದರೂ ಸಾಕಾಗುವುದಿಲ್ಲವೆಂದು ಭಗವಂತನ ಕರುಣೆಯ ಬಗ್ಗೆ ತಿಳಿಸಿದ್ದಾರೆ.

ಸರ್ವಸ್ವತಂತ್ರ ನೀನೋರ್ವನಲ್ಲದೆ ಮ

ತ್ತೋರ್ವನಿನ್ನುಂಟೇ ಜಗದೊಳು | ಜಗದೊಳಗಜಾದಿಗಳು
ದರ್ವಿಯಂದದಲಿ ಚರಿಸೋರು || - ಭಗವಂತನೊಬ್ಬನೇ ಸರ್ವ ಸ್ವತಂತ್ರನು, ಯಾರ ಅಧೀನನೂ ಅಲ್ಲದವನು.  ಎಲ್ಲವನ್ನೂ ನಿಯಂತ್ರಿಸುವವನು.  ಬ್ರಹ್ಮಾದಿ ದೇವತೆಗಳೂ ಮತ್ತು ಸಕಲ ಜೀವಿಗಳೂ ಜಡ ಉಪಕರಣವಾದ ’ಸೌಟು’ ಇದ್ದಂತೆ.  ಅಡುಗೆ ಬಡಿಸಲು ಉಪಯೋಗಿಸಿದರೆ ಮಾತ್ರ ಉಪಯೋಗವಾಗುವುದು ಸೌಟು.  ಹಾಗೇ ಬ್ರಹ್ಮಾದಿ ದೇವತೆಗಳೊಳಗೆ ನೀನಿದ್ದು ಸರ್ವ ಕಾರ್ಯಗಳನ್ನೂ ಮಾಡಿಸುವೆ ಎಂದಿದ್ದಾರೆ. 

ಏನು ಮಾಡುವ ಕರ್ಮ ನೀನೆ ಮಾಡಿಪೆ ಎಂಬ

ಜ್ಞಾನವೇ ಎನಗೆ ಜಿತವಾಗಿ | ಜಿತವಾಗಿ ಇರಲಿ ಮ-
ತ್ತೇನು ನಾನೊಲ್ಲೆ ನಿನ್ನಾಣೆ || - ಅಸ್ವತಂತ್ರನಾದ ನಾನು ಏನನ್ನೂ ಮಾಡಲಾರೆ.  ನಾನು ಮಾಡುವ ಎಲ್ಲಾ ಕಾರ್ಯಗಳನ್ನೂ ನನ್ನೊಳಗೆ  ಭಗವಂತ ನೀನು ನಿಂತು ಮಾಡಿ ಮಾಡಿಸುವೆ ಎಂಬ ಅರಿವು, ಜ್ಞಾನ ಮಾತ್ರ, ಯಾವ ಸಂಶಯವೂ ಇಲ್ಲದೆ ನನ್ನಲ್ಲಿ ಸ್ಥಿರವಾಗಿ ನಿಲ್ಲಲಿ.  ನಾನು ಸತ್ಯವಾಗಿಯೂ ಇನ್ನೇನನ್ನೂ ಬಯಸುವುದಿಲ್ಲ ಎಂದಿದ್ದಾರೆ.

ಗುಣಕಾಲ ಕರ್ಮಗಳ ಮನೆಮಾಡಿ ಜೀವರಿಗೆ

ಉಣಿಸುವಿ ನೀನೇ ಸುಖದುಃಖ | ಸುಖದುಃಖ ಮಿಶ್ರಫಲ
ಉಣದೆ ಸರ್ವತ್ರ ಬೆಳಗುವೆ || -  ಸತ್ವ ರಜಸ್ತಮೋ ಗುಣಗಳ, ಕಾಲ ಮತ್ತು ಕರ್ಮಗಳೆಂಬ ಮನೆಯನ್ನು ವಾಸಸ್ಥಾನವನ್ನಾಗಿ ಮಾಡಿ, ಸಂಸಾರಿಗಳಾದ ಜೀವಿಗಳನ್ನು ಬಂಧನಕ್ಕೆ ಒಳಪಡಿಸುತ್ತಾನೆ.  ಈ ಮನೆಗೆ ಭಗವಂತ ತಾನೇ ನಿಯಾಮಕನಾಗಿ ಜೀವಿಗಳಿಗೆ ಸುಖದುಃಖಗಳನ್ನು ಉಣಿಸುತ್ತಾನೆ.  ಭಗವಂತನು ತಾನು ಏನನ್ನೂ ಭೋಗಿಸದೆ ಎಲ್ಲೆಲ್ಲಿಯೂ ವಿರಾಜಮಾನನಾಗಿ ಬೆಳಗುತ್ತಾನೆ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ

ಶಶ್ವದ್ವಿಕಾಸನ ಹ್ರಾಸನ ಕ್ರಮಗಳಿಂ |
ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||
ಸ್ವಸ್ವರೂಪವನರಸುವಾಟ ಪರಚೇತನದ |
ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ || -  ಶಾಶ್ವತವಾದದ್ದು  (ಭಗವಂತ) ತನ್ನ ಆನಂದಕ್ಕೋಸ್ಕರ ವಿಕಾಸಗೊಂಡು ಪ್ರಪಂಚವಾಗಿ ಅರಳಿ, ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನ ಉದರದೊಳಗೆ ಸೇರಿಸಿಕೊಂಡು ವಿಶ್ವದಲ್ಲಿ ತನ್ನ ಪೌರುಷೋನ್ನತಿಯಿಂದ ನರ್ತನ ಮಾಡುತ್ತಿದೆ.   ತನ್ನದೇ ಶಕ್ತಿಯಾದ ಪ್ರಕೃತಿಯ ಮೂಲಕ ಲೀಲೆಗಳನ್ನು ಮಾಡುತ್ತಿದೆ.  ಈ ವಿಸ್ಮಯದ ಹಿಂದೆ ಅಡಗಿರುವ ತನ್ನ ನಿಜವಾದ ಸ್ವರೂಪವನ್ನು ಹುಡುಕಲಿಯೆಂದೇ ಆ ಪರ ಚೇತನದ (ಭಗವಂತನ) ಆಟ.  ಇದು ಪರಮಪುರುಷನ ಹೃಷ್ಯದ್ವಿಲಾಸ, ಅಂದರೆ ಆನಂದದ ವಿಲಾಸ.

ಪುರುಷಂ ಸ್ವತಂತ್ರನೋ ? ದೈವವಿಧಿ ಪರವಶನೊ? |

ಎರಡುಮನಿತಿನಿತುಳ್ಳ ತೋಳಿನಂತಿಹನೋ ? ||
ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |
ನರನಂತು ಮಿತಶಕ್ತ - ಮಂಕುತಿಮ್ಮ || - ಮನುಷ್ಯನು ಮಾಡುವ ಧರ್ಮ/ಕರ್ಮಗಳಲ್ಲಿ ಅವನು ಎಷ್ಟು ಸ್ವತಂತ್ರ ?  ದೈವವೇ ಮನುಷ್ಯನಿಂದ ಕರ್ಮಗಳನ್ನು ಮಾಡಿಸುತ್ತದೆ.  ಮನುಷ್ಯ ಅಸ್ವತಂತ್ರನು.  ಅವನ ಶಕ್ತಿ, ಪರಿಧಿಯೆಲ್ಲಾ ಭೌತಿಕ ದೇಹದವರೆಗೆ ಮಾತ್ರ.  ಮನುಷ್ಯ ತನ್ನ ಒಂದು ತೋಳನ್ನು ತನ್ನ ದೇಹದ ಕಟ್ಟಿನ ಪರಿಧಿಯಲ್ಲಿ ಮಾತ್ರ ತಿರುಗಿಸಬಹುದು, ಮಡಿಸಬಹುದು.  ಅದಕ್ಕಿಂತ ಆಚೆಗೆ ತೋಳನ್ನೇ ತೆಗೆಯುವುದಕ್ಕಾಗುವುದಿಲ್ಲ.  ತೋಳಿನ ಆಟ ದೇಹದ ಕಟ್ಟಿನ ಹಿಡಿತ ಬಿಟ್ಟು ನಡೆಯುವುದಿಲ್ಲ.  ತೋಳಿಗೆ ಭುಜದ ಕಡೆಯಿಂದ ನಿರ್ಬಂಧವಿದೆ, ಬೆರಳಿನ ಕಡೆಯಿಂದ ಸ್ವಾತಂತ್ರ್ಯವಿದೆ.  ಮನುಷ್ಯ ಆಕಾಶದಲ್ಲಿ ಎಷ್ಟು ಹಾರಾಡಿದರೂ ಭೂಮಿಯ ಆಕರ್ಷಣಾ ಶಕ್ತಿಯಿಂದ ನಿರ್ಬಂಧಿತನಾಗಿದ್ದಾನೆ.  ಆದರೆ  ಆಕಾಶಕ್ಕೆ ನೆಗೆಯುವುದಕ್ಕೂ ಮತ್ತು ಭೂಮಿಯ ಮೇಲೆ ಸಂಚರಿಸುವುದಕ್ಕೂ ಅವನು ಸ್ವತಂತ್ರನು.  ಇಷ್ಟು ಸ್ವಾತಂತ್ರ್ಯ ಕೂಡ ಭಗವಂತನ ಅಸೀಮ ಕರುಣೆಯಲ್ಲದೆ ಬೇರೇನೂ ಅಲ್ಲ.  ಇದೇ ಪರಮಪುರುಷನ ಸೀಮಾತೀತವಿಲ್ಲದ ಸ್ವಾತಂತ್ರ್ಯ ಹಾಗೂ ಮನುಷ್ಯನಿಗಿರುವ ಅಸ್ವತಂತ್ರತೆ ಅಥವಾ ನಿರ್ಬಂಧತೆ.
 ಚಿತ್ರಕೃಪೆ : ಅಂತರ್ಜಾಲ

Wednesday, January 29, 2014

ಕರುಣಾ ಸಂಧಿ - ೧೫ ನೇ ಪದ್ಯ



ಸ್ಮರಿಸುವವರಪರಾಧಗಳ ತಾ
ಸ್ಮರಿಸ ಸಕಲೇಷ್ಟಪ್ರದಾಯಕ
ಮರಳಿ ತನಗರ್ಪಿಸಲು ಕೊಟ್ಟುದನಂತಮಡಿ ಮಾಡಿ |
ಪರಿಪರಿಯಲುಂಡುಣಿಸಿ ಸುಖಸಾ
ಗರದಿ ಲೋಲಾಡಿಸುವ ಮಂಗಳ
ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ||೧೫||


ಪ್ರತಿಪದಾರ್ಥ : ಸ್ಮರಿಸುವವರ - ಯಾರು ಭಗವಂತನ ಸ್ಮರಣೆಯನ್ನು ಸದಾ ಸರ್ವದಾ ಮಾಡುವರೋ ಅವರ, ಅಪರಾಧಗಳ - ಅಂತಹ ಭಕ್ತರು ಮಾಡುವ ತಪ್ಪುಗಳನ್ನು, ತಾ ಸ್ಮರಿಸ - ಲಕ್ಷ್ಯಕ್ಕೆ ತೆಗೆದುಕೊಳ್ಳುವವನಲ್ಲ, ಸಕಲೇಷ್ಟಪ್ರದಾಯಕ - ಅಂತಹ ತನ್ನ ಭಕ್ತರ ಸಮಸ್ತ ಕೋರಿಕೆಗಳನ್ನೂ ನೆರವೇರಿಸುವನು, ಮರಳಿ ತನಗರ್ಪಿಸಲು - ಸರ್ವಕ್ಕೂ ಒಡೆಯನು ಭಗವಂತನೇ ಅವನಿಂದಲೇ ಇದು ತನಗೆ ಸಿಕ್ಕಿರುವುದೆಂಬ ಮನೋಭಾವದಿಂದ ಪುನಃ ಅವನಿಗೇ ಅರ್ಪಿಸಿದರೆ, ಕೊಟ್ಟುದನಂತಮಡಿ ಮಾಡಿ - ಭಕ್ತರು ತನಗೆ ಒಪ್ಪಿಸಿದ್ದನ್ನು ಅವರು ಕೊಟ್ಟಿದ್ದಕ್ಕಿಂತ ಅನೇಕ ಪಟ್ಟುಗಳಷ್ಟು ಹೆಚ್ಚಿಸಿ, ಪರಿಪರಿಯಲುಂಡುಣಿಸಿ - ಜ್ಞಾನಾನಂದಾದಿ ಫಲಗಳನ್ನು ಕೊಡುವನು ವಿವಿಧ ಬಗೆಗಳಲ್ಲಿ ತಾನೂ ಉಂಡು ಭಕ್ತರಿಗೂ ಉಣಿಸುವನು, ಸುಖಸಾಗರದಲಿ - ಐಶ್ವರ್ಯ ಭೋಗಗಳನ್ನಿತ್ತು ಸುಖ ಸಾಗರದಲ್ಲಿ, ಓಲಾಡಿಸುವ - ತೇಲುವಂತೆ ಮಾಡುವನು ಹೊರಳಾಡಿಸುವನು,  ಮಂಗಳಚರಿತ - ಮಂಗಳಮಯವಾದ ಚಾರಿತ್ರ್ಯವನ್ನು ಉಳ್ಳವನು ಲವಲೇಶವೂ ದುಃಖವಿಲ್ಲದವನು, ಚಿನ್ಮಯ ಗಾತ್ರ - ಸಚ್ಚಿದಾನಂದ ಶರೀರವುಳ್ಳವನು, ಲೋಕ ಪವಿತ್ರ - ಪವಿತ್ರವಾದ ಲಿಂಗ ದೇಹವನ್ನು ಭಂಗಗೊಳಿಸಿ ಪವಿತ್ರ ಮಾಡುವವನು, ಸುಚರಿತ್ರ - ಸಜ್ಜನರ ಸಾತ್ವಿಕರನ್ನು ರಕ್ಷಿಸುವಂತಹ ಒಳ್ಳೆಯ ಚರಿತ್ರೆಯುಳ್ಳವನು.

ಭಗವಂತನನ್ನು ನಾವು ಭಕ್ತಿಯಿಂದ ಸ್ಮರಿಸಿದಾಗ, ಅವನು ನಮ್ಮನ್ನು ಸ್ಮರಿಸುತ್ತಾನೆ.  ಆದರೆ ನಮ್ಮ ಅಪರಾಧಗಳನ್ನು ಸ್ಮರಿಸುವುದಿಲ್ಲ, ಕ್ಷಮಿಸಿ ಬಿಡುತ್ತಾನೆ.  ದೇವೇಂದ್ರನು ಕೃಷ್ಣನನ್ನು ಗೊಲ್ಲನೆಂದು ತಿಳಿದು ಅಪರಾಧ ಮಾಡಿದ್ದಾನೆ.  ಮಳೆಗಾಗಿ ತನ್ನನ್ನು ಪೂಜಿಸಲಿಲ್ಲವೆಂದು ಮುಸಲಧಾರೆಯನ್ನುಂಟುಮಾಡಿ ಶ್ರೀಕೃಷ್ಣ ಮತ್ತು ಅವನ ಭಕ್ತರಿಗೆ ಅಪರಾಧ ಮಾಡಿದ್ದಾನೆ.  ಆದರೆ ಅದನ್ನು ತಿಳಿದು ಕೃಷ್ಣನಲ್ಲಿ ಕ್ಷಮೆ ಯಾಚಿಸಿದಾಗ, ಕೃಷ್ಣ ಅವನನ್ನು ಕ್ಷಮಿಸಿದ್ದಾನೆ.  ಇನ್ನು ಭೃಗು ಮುನಿಗಳು ವೈಕುಂಠಕ್ಕೆ ಬಂದಾಗ ವೈಕುಂಠನಾಥ ಪರಮಾತ್ಮ ಎದ್ದು ತಮ್ಮನ್ನು ಆದರಿಸಲಿಲ್ಲವೆಂದು ಪರಮಾತ್ಮನಿಗೆ ಅಪರಾಧ ಮಾಡಿದ್ದಾರೆ.  ಆದರೆ ವೈಕುಂಠಪತಿಯನ್ನು ಅವರು ಕ್ಷಮೆ ಕೋರಿದಾಗ ಅವರಿಗಾಗಿ, ಧರೆಗಿಳಿದುಬಂದು ತಿರುಪತಿ ತಿಮ್ಮಪ್ಪನೆಂದು ಬೇಡಿದ್ದನ್ನು ಕೊಡುವವನೆಂಬ ಖ್ಯಾತಿಗೆ ಒಳಗಾಗಿದ್ದಾನೆ.  ಹೀಗೆ ಮಂಗಳಚರಿತ, ಚಿನ್ಮಯಗಾತ್ರ, ಲೋಕಪವಿತ್ರ, ಸುಚರಿತ್ರನಾದ ಭಗವಂತ ಸ್ಮರಿಸುವವರ ಅಪರಾಧಗಳನ್ನು ಸ್ಮರಿಸದೆ, ಸಕಲೇಷ್ಟಪ್ರದಾಯಕನಾಗಿ ಪ್ರಸಿದ್ಧಿಗೊಂಡಿದ್ದಾನೆ.

ಭಕ್ತಿಯೆಂದರೆ ನನ್ನಿಂದ ಭಗವಂತ ಸಾಧನೆ ಮಾಡಿಸುತ್ತಿದ್ದಾನೆಂಬ ಅರಿವು ಬರುವುದೇ ಆಗಿದೆ.  ಭಕ್ತರು ಭಗವಂತ ಕರುಣೆಯಿಂದ  ಕೊಟ್ಟಿರುವುದನ್ನೇ, ಮರಳಿ ಅವನಿಗೆ ಸಮರ್ಪಣೆ ಮಾಡಿದರೂ ಕೂಡ ಅವನು ಭಕ್ತರ  ಅಪರಾಧಗಳನ್ನು ಸ್ಮರಿಸುವುದಿಲ್ಲ.  ನಾವು ಕೊಟ್ಟಿದ್ದನ್ನೇ ಮತ್ತೆ ಅನಂತಮಡಿ ಮಾಡಿ, ವಿಧವಿಧವಾಗಿ ತಾನು ಉಂಡು, ನಮಗೇ ಉಣಿಸುತ್ತಾನೆ.  ಸುಖ ಭೋಗಗಳನ್ನು ಕೊಟ್ಟು ಓಲಾಡಿಸುತ್ತಾನೆ.  ಸಕಲಾರ್ಥಗಳನ್ನೂ ಕೊಟ್ಟು ರಕ್ಷಿಸುತ್ತಾನೆ.  ಭಕ್ತರು ಪೂಜೆ ಮಾಡುವಾಗ ಮಾಡುವ ಅನೇಕ ಅಪರಾಧಗಳನ್ನು ಕ್ಷಮಿಸುತ್ತಾನೆ.  ಹೂವು ತಂದು ತೊಳೆಯದೇ ಸಮರ್ಪಿಸುತ್ತೇವೆ, ತುಳಸಿಯನ್ನು ತೊಳೆದು ಸಮರ್ಪಿಸುತ್ತೇವೆ, ಪೂಜೋಪಕರಣಗಳಿಗೆ ಪಾದ ಸ್ಪರ್ಶ ಮಾಡಿಬಿಟ್ಟಿರುತ್ತೇವೆ, ಕಪ್ಪು ಬಣ್ಣದ ಬಟ್ಟೆ ತೊಟ್ಟಿರುತ್ತೇವೆ, ಒದ್ದೆ ಬಟ್ಟೆ ಉಟ್ಟು ಪೂಜಾ ವಿಧಿಗಳನ್ನು ಮಾಡಿರುತ್ತೇವೆ.  ಹೀಗೆ ನಾವು ಮಾಡುವ ಅನಂತ ಅಪರಾಧಗಳನ್ನು ಸ್ಮರಿಸದೆ, ಶುದ್ಧ ಮನಸ್ಸು, ಭಕ್ತಿಯಿಂದ ಮಾಡಿದ ಪೂಜೆಯನ್ನು ಸಕಲೇಷ್ಟಪ್ರದಾಯಕನಾಗಿ ಭಗವಂತನು ಸ್ವೀಕರಿಸುತ್ತಾನೆ.  ಶ್ರೀಮಧಾಚಾರ್ಯರು ಸದಾಚಾರ ಸ್ಮೃತಿಯಲ್ಲಿ ತಿಳಿಸಿರುವ ಮುಖ್ಯ ಸಂದೇಶವೇ "ಭಗವಂತನ ವಿಸ್ಮರಣೆ".  ಯಾವಾಗ ನಾವು ಭಗವಂತನ ಆದೇಶಗಳನ್ನು ಪಾಲಿಸುವುದಿಲ್ಲವೋ, ಆಗ ’ವಿಸ್ಮರಣೆ’ಯಾಗುತ್ತದೆ.  ಈ ವಿಸ್ಮರಣೆಗೆ ಪ್ರಾಯಶ್ಚಿತ್ತವೆಂದರೆ ನಿರಂತರ ಭಗವಂತನ "ಸ್ಮರಣೆ’ ಮಾಡುವುದು ಎಂದಿದ್ದಾರೆ.


ಸ್ಮರಿಸುವವರಪರಾಧಗಳ ತಾ ಸ್ಮರಿಸ - ನಮಗೆ ತಂದೆ-ತಾಯಿಯಾಗಿ ಜೋಪಾನ ಮಾಡುವ ಭಗವಂತನನ್ನು ಸ್ಮರಿಸದಿರುವುದೇ ಮಹಾಪರಾಧವಾಗುತ್ತದೆ.  ನಮ್ಮೊಳಗೂ ತಾನು ಅನೇಕ ವಿಭೂತಿರೂಪಗಳಲ್ಲಿದ್ದು ಸರ್ವ ಕಾರ್ಯಗಳನ್ನೂ ಮಾಡಿ, ನಮ್ಮಿಂದ ಮಾಡಿಸುತ್ತಾನೆ.  ನಮ್ಮ ಹೊರಗೂ ಇದ್ದು ನಮ್ಮನ್ನು ಕರುಣೆಯಿಂದ ರಕ್ಷಿಸುತ್ತಾನೆ.  ನಮಗೆ ಸುಖ, ಭೋಗಗಳನ್ನು ಕೊಟ್ಟು ಸಂತೋಷ ಪಡಿಸುತ್ತಾನೆ, ಮೋಕ್ಷ ಸಾಧನೆಯನ್ನೂ ಮಾಡಿಸುತ್ತಾನೆ.  ತಂದೆ ಹೇಗೆ ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ತನ್ನ ಮಗುವನ್ನು ಅತೀ ಜತನದಿಂದಲೂ, ಅಕ್ಕರೆಯಿಂದಲೂ ಕಾಪಾಡುತ್ತಾನೋ ಹಾಗೆ ಭಗವಂತ ತನ್ನ ಮಕ್ಕಳಾದ ನಮ್ಮನ್ನು ಯಾವ ಪ್ರತಿಫಲಾಪೇಕ್ಷೆಯನ್ನೂ ಬಯಸದೆ ರಕ್ಷಿಸುತ್ತಾನೆ.  ಮಕ್ಕಳಾದ ನಾವು ಅವನನ್ನು ಮರೆಯುವುದೆಂದರೆ ಅದು ಘೋರ ಅಪರಾಧ ಮಾಡಿದಂತೆ.  ಭಕ್ತರು ಭಗವಂತನ ಉಪಕಾರವನ್ನು ಸ್ಮರಿಸಿದರೆ ಸಾಕು, ಅವನು ಪ್ರಸನ್ನನಾಗಿ ಎಲ್ಲಾ ಅಪರಾಧಗಳನ್ನೂ ಮರೆತುಬಿಡುತ್ತಾನೆ.  ಶುದ್ಧ ಮನಸ್ಸಿನಿಂದ ಸ್ಮರಿಸಿ ನಾವು ಏನನ್ನು ಕೊಟ್ಟರೂ ಭಗವಂತ ಅದನ್ನು ಅನಂತಮಡಿ ಮಾಡಿ ಸ್ವೀಕರಿಸುತ್ತಾನೆ.  ಒಂದೇ ಒಂದು ಉದ್ಧರಣೆ ನೀರನ್ನು ಸಮರ್ಪಿಸಿದರೂ ಕೂಡ ಅದನ್ನೇ ಮಹಾನೈವೇದ್ಯವೆಂದು ಸ್ವೀಕರಿಸಿ ಸಲಹುತ್ತಾನೆ. 


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು :

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ || -  ಯಾವ ಭಕ್ತನು ಪತ್ರ, ಪುಷ್ಪ, ಫಲ, ಜಲ ಇತ್ಯಾದಿಗಳನ್ನು ಭಕ್ತಿಯಿಂದ ನನಗೆ ಸಮರ್ಪಿಸುತ್ತಾನೋ, ಆ ಶುದ್ಧ ಬುದ್ಧಿಯುಳ್ಳ ನಿಷ್ಮಾಮ ಪ್ರೇಮೀ ಭಕ್ತನು ಭಕ್ತಿಯಿಂದ ಅರ್ಪಿಸಿದ ಆ ಪತ್ರ ಪುಷ್ಪಾದಿಗಳನ್ನು ನಾನು ಸಗುಣರೂಪದಿಂದ ಪ್ರಕಟನಾಗಿ ಪ್ರೀತಿಯಿಂದ ತಿಂದುಬಿಡುವೆನೆಂದಿದ್ದಾನೆ.

ಅನನ್ಯ ಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ |

ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ || - ಯಾರು ಅನನ್ಯ ಚಿತ್ತನಾಗಿ ನನ್ನನ್ನು ಸದಾಕಾಲ ಸ್ಮರಿಸುತ್ತಾ ನಿತ್ಯ  ನಿರಂತರ ಧ್ಯಾನಿಸುವರೋ ಅವರಿಗೆ ನಾನು ಸುಲಭವಾಗಿ ಪ್ರಾಪ್ತವಾಗುತ್ತೇನೆ ಎಂದಿದ್ದಾನೆ. ಪ್ರತಿಯೊಂದು ರೀತಿಯ ಅಪರಾಧಗಳಿಗೂ ಒಂದು ಪ್ರಾಯಶ್ಚಿತ್ತವಿದೆ.  ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ, ಭಗವದ್ಗೀತೆಯ ಒಂದು ಅಧ್ಯಾಯ ಪಠಣ ಮಾಡುತ್ತೇವೆ.  "ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ ರಮಾಪತೇ | ಯತ್ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ" ಎಂದು ನಾವು ಮಾಡಿದ ಮಂತ್ರಲೋಪ, ವರ್ಣಲೋಪ ದೋಷಗಳನ್ನು ಸರಿಪಡಿಸೆಂದು ಕೋರುತ್ತಾ, "ಅಚ್ಯುತ, ಅನಂತ, ಗೋವಿಂದ" ನಾಮತ್ರಯ ಸ್ಮರಣೆ ಮಾಡುವುದು ನಮ್ಮ ಶತಾಪರಾಧಗಳಿಗೆ ಪ್ರಾಯಶ್ಚಿತ್ತವಾಗುತ್ತದೆ.  ನಾಮಸ್ಮರಣೆ ಅತ್ಯಂತ ಶ್ರೇಷ್ಠ ಹಾಗೂ ಸಾಮರ್ಥ್ಯವುಳ್ಳದ್ದು.  ದೇವತೆಗಳೂ ಕೂಡ ಕೆಲವೊಮ್ಮೆ ಅಸುರಾವೇಶದಿಂದ ಅಪರಾಧ ಮಾಡುತ್ತಾರೆ.  ಕೃಷ್ಣನನ್ನು ವಿರೋಧಿಸಿ  ಇಂದ್ರದೇವ ಅಪರಾಧ ಮಾಡಿದ ಆದರೆ ಗೋವರ್ಧನೋದ್ಧಾರನಾದ ಭಗವಂತನನ್ನು ಕಂಡು ಪಶ್ಚಾತ್ತಾಪದಿಂದ ನಾಮ ಸ್ಮರಣೆ ಮಾಡಿ, ಭಗವಂತನನ್ನು ಒಲಿಸಿಕೊಂಡು, ಅಪರಾಧದಿಂದ ಮುಕ್ತನಾದ.  ಜೊತೆಗೇ ತನ್ನ ಮಗನಾದ ಅರ್ಜುನನನ್ನು ಸದಾ ಕಾಪಾಡುವ ವರವನ್ನೂ ಪಡೆದುಕೊಂಡ.  ಜಗನ್ನಾಥ ದಾಸರು ತಮ್ಮ "ಇದು ನಿನಗೆ ಧರ್ಮವೇ ಇಂದಿರೇಶ" ಎಂಬ ಕೃತಿಯಲ್ಲಿ ಶರಣಾಗತ ರಕ್ಷಕನಾದ ನೀನು  ಕ್ಷಣಕನಂತಪರಾಧವೆಣಿಸದೆ ನನ್ನ ಬಿನ್ನಹ ಸ್ವೀಕರಿಸಿ ಉದ್ಧರಿಸು ಎಂದಿದ್ದಾರೆ.  "ನಿನ್ನ ಪೋಲುವ ಕರುಣಿಗಳನಾರ ಕಾಣೆ ಪ್ರಪನ್ನ ತಾ ಪಾಪಹರನೇ" ಎಂಬ ಕೃತಿಯಲ್ಲಿ "ಸದ್ಧರ್ಮ ತೊರೆದು ಮರೆದು" ಬಿದ್ದಿರುವ ಎನ್ನಪರಾಧಗಳ ಎಣಿಸದಿರು ಅಜಭವಶರಣ್ಯ ಪರಿಪೂರ್ಣೇಂದಿರಾಗಾರ ಎಂದು ಬೇಡಿದ್ದಾರೆ.  ಕರುಣಾಳುಗಳಿಗೇ ದೊರೆಯಾದ ಭಗವಂತನನ್ನು ಸದಾ "ಸ್ಮರಿಸು ಸಂತತ ಹರಿಯನು ಮನವೇ" ಎನ್ನುತ್ತಾ ಅಂತರಂಗಕ್ಕೆ ತಾನು ಮಾಡಬೇಕಾಗಿರುವ ಒಂದೇ ಒಂದು ಕೆಲಸವನ್ನು ನೆನಪು ಮಾಡಿಕೊಟ್ಟಿದ್ದಾರೆ.  ಹೀಗೆ ಸದಾ ಸ್ಮರಿಸುತ್ತಿರುವ ಭಕ್ತರನ್ನು ಅಪರಾಧಗಳೆಣಿಸದಲೇ ಪೊರೆಯುವವನೇ ಪರಮ ಕರುಣಾಳು ಶ್ರೀಹರಿ.  ಸದಾ ಮಾಡುವ ಸ್ಮರಣೆಯಿಂದ ಭಗವಂತನಿಗೇನೂ ಆಗಬೇಕಿಲ್ಲ, ಆದರೆ ಸ್ಮರಿಸುವ ಭಕ್ತರು ಮಾತ್ರ ಸದಾ ಆನಂದದಿಂದಿರುವ ಉತ್ತಮ ಅವಕಾಶ ಪಡೆದುಕೊಳ್ಳುತ್ತಾರೆ.

ಸಕಲೇಷ್ಟಪ್ರದಾಯಕ - ಸಕಲ ಇಷ್ಟಾರ್ಥಗಳನ್ನೂ ಕರುಣಿಸುವವನು.  ಭಕ್ತರು ತನ್ನನ್ನು ಮರೆತು ಸ್ಮರಿಸದೇ ಇದ್ದಾಗ ಕೂಡ ಭಗವಂತ ಅವರ ಮೇಲಿನ ಕರುಣೆಯಿಂದಲೇ, ಪ್ರೇಮದಿಂದಲೇ ಅವರ ಅಪರಾಧಕ್ಕೆ ಸಿಟ್ಟಾಗುತ್ತಾನೆ.  ಆದರೆ ತನ್ನ ಭಕ್ತರನ್ನೆಂದಿಗೂ ಕೈಬಿಡುವುದಿಲ್ಲ.  ಅವರನ್ನು ಶಿಕ್ಷಿಸಿ, ಸರಿದಾರಿಗೆ ತರುತ್ತಾನೆ.  ಮಕ್ಕಳು ತಪ್ಪು ಮಾಡಿದಾಗ ಕೆಲವೊಮ್ಮೆ ತಾಯಿಯಿಂದ ಪೆಟ್ಟು ತಿನ್ನುತ್ತವೆ.  ಆದರೆ ಪೆಟ್ಟು ತಿಂದು ಅಳಲು ಪ್ರಾರಂಭಿಸಿದ ಮಗುವನ್ನು ತಾಯಿ ಎದೆಗವಚಿಕೊಂಡು ಮುದ್ದಿಸುತ್ತಾಳೆ.  ಹಾಗೇ ಭಕ್ತರು ಕೂಡ ತಾವು ಮಾಡಿದ ಅಪರಾಧದಿಂದ ಪಶ್ಚಾತ್ತಾಪಗೊಂಡು, ಶರಣಾಗತರಾಗಿ ಸ್ಮರಿಸಿದಾಗ ಅತಿಶಯವಾದ ಅಕ್ಕರೆಯಿಂದ ಅವರು ಬೇಡಿದ ಎಲ್ಲಾ ಇಷ್ಟಾರ್ಥಗಳನ್ನೂ ಕೊಟ್ಟು ’ಸಕಲೇಷ್ಟಪ್ರದಾಯಕ’ನಾಗುತ್ತಾನೆ.  


ಮರಳಿ ತನಗರ್ಪಿಸಲು - ನಮದೆನ್ನುವುದೇನೂ ಇಲ್ಲ ಎಲ್ಲವೂ ಭಗವಂತನದೇ, ಎಲ್ಲಕ್ಕೂ ಒಡೆಯನು ಅವನೇ.  ಹಾಗೆ ಅವನು ನಮಗೆ, ನಮ್ಮ ಸುಖಕ್ಕೆ ಕೊಟ್ಟಿರುವುದನ್ನೇ ನಾವು ಮರಳಿ ಅವನಿಗರ್ಪಿಸಿದರೆ ಅವನು ತನ್ನದೇ ವಸ್ತುವನ್ನು ತನಗೇ ಮರಳಿ ಕೊಟ್ಟಿದ್ದಾರೆಂದು ನಮ್ಮ ಅಪರಾಧವನ್ನು ಸ್ಮರಿಸುವುದಿಲ್ಲ.  ತನಗೆ ಶುದ್ಧ ಭಕ್ತಿಯಿಂದ ಸಮರ್ಪಿಸಿದಾಗ ಅದನ್ನು ಸ್ವೀಕರಿಸಿ, ನಮಗೆ ಸಕಲ ಇಷ್ಟಾರ್ಥಗಳನ್ನೂ ಕೊಡುತ್ತಾನೆ.  ಭಗವಂತನಿಂದ ಪಡೆದುದನ್ನೇ ನಾವು ಮರಳಿ ಅವನಿಗೆ ಸಮರ್ಪಿಸುವುದೇ ಮೋಕ್ಷ ಸಾಧನೆಯಾಗುತ್ತದೆ.  ನಾವೆಷ್ಟೇ ಅಲ್ಪವಾದುದನ್ನು ಕೊಟ್ಟರೂ ಅವನೆಂದೂ ಅದನ್ನು ಉಪೇಕ್ಷೆ ಮಾಡುವುದಿಲ್ಲ.  ಶುದ್ಧ ಭಕ್ತಿಯಿಂದಾದ ಸಮರ್ಪಣೆಯನ್ನು ಸ್ವೀಕರಿಸಿ ಅದನ್ನು ಅನಂತಮಡಿ ಮಾಡಿ ಮತ್ತೆ ನಮಗೇ ಮರಳಿಸುತ್ತಾನೆ.   


ಪರಿಪರಿಯಲುಂಡುಣಿಸಿ ಸುಖಸಾಗರದಿ ಲೋಲಾಡಿಸುವ - ತಾನೇ ಕೊಟ್ಟದ್ದನ್ನು ತನಗೇ ಮರಳಿ ಸಮರ್ಪಣೆ ಮಾಡಿದಾಗ ಅತ್ಯಂತ ಸಂತೋಷದಿಂದ ಸ್ವೀಕರಿಸುತ್ತಾನೆ.  ಬಿಂಬರೂಪಿಯಾದ ಭಗವಂತ ತಾನು ಮೊದಲು ಉಂಡು ಪ್ರತಿಬಿಂಬರೂಪಿಗಳಾದ ನಮಗೆ ಉಣಿಸುತ್ತಾನೆ.    ಅಸ್ವತಂತ್ರ ಜೀವಿಗಳು ಸ್ವತಃ ಏನನ್ನೂ ಮಾಡಲಾರೆವಾದ್ದರಿಂದ ಭಗವಂತ ತಾನು ಉಂಡು, ನಮಗೆ ಉಣಿಸುತ್ತಾನೆ.   ನಮ್ಮನ್ನು ಸುಖ ಸಾಗರದಿ ಓಲಾಡುಸುತ್ತಾನೆ.  ಪ್ರತೀ ಜೀವಿಗೂ ಅವರವರ ಯೋಗ್ಯತಾನುಸಾರ ಸುಖ, ಭೋಗಗಳನ್ನು ಕೊಟ್ಟರೂ, ತಮಗೆ ಲಭ್ಯವಿದ್ದಷ್ಟರಿಂದಲೇ ಜೀವಿಗಳು ಪೂರ್ಣ ಸುಖದ ಅನುಭವ ಪಡೆಯುತ್ತಾರೆ.  ಮಾಡಿದ ಅಪರಾಧಗಳನ್ನು ಅರಿತು ಪಶ್ಚಾತ್ತಾಪದಿಂದ ನೊಂದ ಭಕ್ತರ ಸಮರ್ಪಿಸಿದ್ದನ್ನು ಸ್ವೀಕರಿಸಿ ಅವರಿಗೆ ಸಂತೋಷವಿತ್ತು ಸುಖ ಸಾಗರದಲ್ಲಿ ತೇಲಾಡಿಸುತ್ತಾನೆ.


ಮಂಗಳಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ - ಮಂಗಳಚರಿತನೆಂದರೆ ಶುಭಕರ, ಮಂಗಳವನ್ನುಂಟುಮಾಡುವವನು.  ಚಿನ್ಮಯಗಾತ್ರನೆಂದರೆ ಆನಂದ ಸ್ವರೂಪನಾದ ಲಕ್ಷ್ಮಿಯ ರಕ್ಷಕನು.  ಲೋಕಪವಿತ್ರನೆಂದರೆ  ಅಪವಿತ್ರವಾದ, ದೋಷಪೂರಿತವಾದ ಲಿಂಗ ದೇಹವನ್ನು ಭಂಗಗೊಳಿಸಿ ಸಕಲ ಜೀವರನ್ನೂ ಪವಿತ್ರವಾಗಿಸುವವನು.  ಮಾಡಿದ ಅಪರಾಧಗಳಿಗೆ ಪಶ್ಚಾತ್ತಾಪಪಟ್ಟ ಪ್ರತಿ ಜೀವಿಗೂ ಅವರ ಪಾಪಗಳನ್ನು ಕಳೆದು ಕರುಣೆಯಿಂದ ಪವಿತ್ರರನ್ನಾಗಿಸುವವನು.  ಸುಚರಿತ್ರನೆಂದರೆ ಒಳ್ಳೆಯ ಚರಿತ್ರೆಯುಳ್ಳವನು ಮತ್ತು ಸಜ್ಜನರನ್ನು ರಕ್ಷಿಸುವವನು.  ತನ್ನಲ್ಲೇ ಸಕಲವನ್ನೂ ಸಮಸ್ತವನ್ನೂ ಸಮರ್ಪಣೆ ಮಾಡಿರುವ ಭಕ್ತರನ್ನು ಭಗವಂತ ಮಿತ್ರನಾಗಿ, ಸಖನಾಗಿ ಸದಾಕಾಲವೂ ಕರುಣೆಯಿಂದ ಕಾಪಾಡುತ್ತಾನೆ.


ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ


ನಡೆನುಡಿಗಳಪರಾಧ ಒಡೆಯ ನೀನೆಣಿಸಿದರೆ

ಬಡವ ನಾನೆಂತು ಬದುಕ-ಲೋ | ಬದುಕಲೋ ಕರುಣಾಳು
ಕಡೆಬೀಳ್ವದೆಂತೋ ಭವದಿಂದ || -  ಕರುಣಾಳುವಾದ ಭಗವಂತ, ಜಗದೊಡೆಯನಾದ ನೀನು ನನ್ನ ನಡೆ ನುಡಿಗಳಲ್ಲಿರುವ ಅಪರಾಧಗಳನ್ನು ಎಣಿಸಲಾರಂಭಿಸಿದರೆ ದೀನನೂ ಮತ್ತು ಬಡವನೂ ಆದ ನಾನು ಬದುಕುವುದೇ ಸಾಧ್ಯವಿಲ್ಲ. 

ಕೃಪಣವತ್ಸಲನೆ ಎನ್ನಪರಾಧಗಳ ನೋಡೆ

ಕುಪಿತನಾಗುವುದೆ ಕಮಲಾಕ್ಷ | ಕಮಲಾಕ್ಷ ನೀನೆನಗೆ
ಉಪಕಾರಿ ಎಂದು ಸ್ಮರಿಸುವೆ || - ದೀನಬಂಧುವಾದ ಭಗವಂತನೇ ನನ್ನ ಅಪರಾಧಗಳಿಗೆ ನೀನು ಕುಪಿತನಾಗುವುದು ಸರಿಯೇ ? ನೀನು ನನಗೆ ಅನಿಮಿತ್ತ ಉಪಕಾರಿಯೆಂದು ನಿನ್ನನ್ನು ನಾನು ಸದಾ ಸ್ಮರಿಸುವೆ, ಉದ್ಧರಿಸು.

ಎನಗೆ ನಿನ್ನಲಿ ಭಕುತಿ ಇನಿತಿಲ್ಲದಿದ್ದರೂ

ಅನಿಮಿತ್ತ ಬಂಧು ಸಲಹುವಿ | ಸಲಹುವಿ ಸರ್ವದಾ
ಎಣೆಗಾಣೆ ನಿನ್ನ ಕರುಣಕ್ಕೆ || - ಮಾಡುವ ಪ್ರತೀ ಕರ್ಮಕ್ಕೂ ಪ್ರತ್ಯುಪಕಾರ ಬಯಸುವ ಲೌಕಿಕ ಭಾವಗಳಂತಲ್ಲ ನೀನು.  ನಿಮಿತ್ತವೇ ಇಲ್ಲದೆ ಉಪಕಾರ ಮಾಡುವ, ಕರುಣೆ ತೋರುವ, ರಕ್ಷಿಸುವ, ಸದಾ ಸಲಹುವ  ಆತ್ಮಬಂಧು.  ಸರ್ವದಾ, ಸರ್ವ ದೇಹಗಳಲ್ಲೂ, ಸರ್ವ ದೇಶಗಳಲ್ಲೂ, ಸರ್ವ ಕಾಲಗಳಲ್ಲೂ ನನ್ನನ್ನು ಪೊರೆಯುವ ನಿನ್ನ ಕಾರುಣ್ಯಕ್ಕೆ ಸಮನಾದದ್ದು ಬೇರೊಂದು ಇಲ್ಲವೇ ಇಲ್ಲ.  ದಯಾಮೂರ್ತಿಯೇ ನನ್ನನ್ನು ಸಲಹು.

ನಿತ್ಯವೂ ಜೀವಿಗಳು "ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ" ಎಂದು ಪ್ರಾರ್ಥಿಸುತ್ತೇವೆ.  ಭಗವಂತ ಗೀತೆಯಲ್ಲಿ "ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ" ಎನ್ನುತ್ತಾ ತಾನು ಸದಾ ಭಕ್ತರನ್ನು ರಕ್ಷಿಸುವೆನೆಂದು ತಿಳಿಸಿದ್ದಾನೆ.


ಡಿವಿಜಿಯವರು ಕಗ್ಗದಲ್ಲಿ "ಪರದೈವವನು ತೊರೆಯೆ ಗತಿ ನರನಿಗಿಲ್ಲ" ಎನ್ನುತ್ತಾ "ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ"  ಎಂದಿದ್ದಾರೆ -  ಜೀವಿಗಳಿಗೆ ಭಗವಂತನೇ ಸರ್ವಸ್ವ, ಬಿಂಬರೂಪಿಯಾದ ಅವನ ಸ್ಮರಣೆ ಬಿಟ್ಟರೆ ಬೇರೆ ಗತಿಯಿಲ್ಲ.


ದಂಡನಿರ್ಣಯದಿ  ನೀಂ ಕ್ಷಮಿಸೆನಲ್ ನ್ಯಾಯಪತಿ |

ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ||
ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು |
ಕುಂದಿಸಲಿಕಾಗದೇಂ ? - ಮಂಕುತಿಮ್ಮ || - ಅಪರಾಧಿಯು ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ತನ್ನನ್ನು ಕ್ಷಮಿಸೆಂದು ಬೇಡಿದರೆ, ನ್ಯಾಯಾಧೀಶರು ಅಪರಾಧಿಯ ಹಿಂದಿನ ಒಳ್ಳೆಯ ನಡವಳಿಕೆಯನ್ನೂ, ಅಪರಾಧ ಮಾಡಿದ ಸನ್ನಿವೇಶ-ಸಂದರ್ಭವನ್ನೂ ಅವಲೋಕಿಸಿ ಶಿಕ್ಷೆಯನ್ನು ಸ್ವಲ್ಪವಾದರೂ ಕಡಿಮೆ ಮಾಡುವುದಿಲ್ಲವೇ, ಹಾಗೇ ಭಗವಂತನೂ ಕೂಡ ಪಶ್ಚಾತ್ತಾಪದಿಂದ ಬೇಡಿಕೊಂಡ ಭಕ್ತರ ಅಪರಾಧಗಳನ್ನು ಸ್ಮರಿಸದೆ, ರಕ್ಷಿಸುತ್ತಾನೆ.  ಮಗು ಸಚ್ಚಾರಿತ್ರನಾಗಲಿ ಎಂಬ ಆಸೆಯಿಂದ ಹೇಗೆ ತಂದೆಯು ಮಗುವನ್ನು ಶಿಕ್ಷಿಸುತ್ತಾನೋ, ಹಾಗೇ ಭಗವಂತ ಕೂಡ.

ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ |

ಒಕ್ಕುವುದು ಬಿಡದೆ ಜೀವಿಯ ಪಾಪಚಯವ ||
ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ |
ಭಕ್ತಿ ಪಶ್ಚಾತ್ತಾಪ - ಮಂಕುತಿಮ್ಮ || - ಭಗವಂತ ನ್ಯಾಯ ನಿರ್ಣಯ ಮಾಡಲು ತಕ್ಕಡಿ ಹಿಡಿದಿರುವನಂತೆ.  ಒಂದು ತಟ್ಟೆಯಲ್ಲಿ ಜೀವಿಯ ಮಾಡಿರುವ ಅಪರಾಧಗಳನ್ನೂ, ಪಾಪಗಳನ್ನೂ  ಮತ್ತೊಂದು ತಟ್ಟೆಯಲ್ಲಿ ಜೀವಿಯು ಮಾಡಿರುವ ಒಳ್ಳೆಯ ಕೆಲಸಗಳನ್ನೂ, ಪುಣ್ಯರಾಶಿಯನ್ನೂ ಇಡುವನಂತೆ.  ಪಾಪದ ತಟ್ಟೆ ಭಾರವಾಗಿದ್ದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ.  ಶಿಕ್ಷೆ ಕಡಿಮೆ ಮಾಡೆಂದು ಬೇಡಿದರೂ ಕೂಡ ಭಗವಂತ ಕರಗುವುದಿಲ್ಲ.  ಆದರೆ ತಾನು ಮಾಡಿದ ಪಾಪಗಳಿಗಾಗಿಯೂ, ಅಪರಾಧಗಳಿಗಾಗಿಯೂ ಜೀವಿ ಪಶ್ಚಾತ್ತಾಪ ಪಟ್ಟಾಗ ಮಾತ್ರ ಭಗವಂತ ಅಪರಾಧಗಳನ್ನು ಸ್ಮರಿಸದೆ ಕಾಪಾಡುತ್ತಾನೆ.

ಪ್ರಾರಬ್ಧದಲಿ ನಿನ್ನ ಪುಣ್ಯವಿನಿತಾನುಮಿರೆ |

ಸೇರೆ ಪಶ್ಚಾತ್ತಾಪ ಭಾರವದರೊಡನೆ ||
ದಾರುಣದ ಕರ್ಮನಿಯತಿಯನಿನಿತು ಶಿಥಿಲಿಪುದು |
ಕಾರುಣ್ಯದಿಂ ದೈವ - ಮಂಕುತಿಮ್ಮ || - ಜೀವಿಯು ಅನುಭವಿಸುತ್ತಿರುವ ಪ್ರಾರಬ್ಧ ಕರ್ಮದಲ್ಲಿ ಕಿಂಚಿತ್ತೇನಾದರೂ ಪುಣ್ಯವು ಇದ್ದರೆ, ಅದರ ಜೊತೆಗೆ ತಾನು ಮಾಡಿದ ಅಪರಾಧಗಳಿಗೆಲ್ಲಾ ಪಶ್ಚಾತ್ತಾಪ ಪಟ್ಟರೆ ಅನುಭವಿಸಬೇಕಾದ ಉಗ್ರ ಶಿಕ್ಷೆ ಸ್ವಲ್ಪ ಕಡಿಮೆಯಾಗುತ್ತದೆ.  ಇದು ಬೇರೆ ಏನೂ ಅಲ್ಲ, ಭಗವಂತನ ಕಾರುಣ್ಯ ಅಷ್ಟೆ ಎಂದಿದ್ದಾರೆ.



 ಚಿತ್ರಕೃಪೆ : ಅಂತರ್ಜಾಲ