ಕಾಮಧೇನು ಸುಕಲ್ಪತರು ಚಿಂ-
ತಾಮಣಿಗಳಮರೇಂದ್ರ ಲೋಕದಿ
ಕಾಮಿತಾರ್ಥಗಳೀವವಲ್ಲದೆ ಸೇವೆ ಮಾಳ್ಪರಿಗೆ |
ಶ್ರೀಮುಕುಂದನ ಪರಮ ಮಂಗಳ-
ನಾಮ ನರಕಸ್ಥರನು ಸಲಹಿತು
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು ||೨೧||
ಪ್ರತಿಪದಾರ್ಥ : ಕಾಮಧೇನು - ಇಷ್ಟಾರ್ಥಗಳನ್ನು ಪೂರೈಸುವ ಸ್ವರ್ಗಲೋಕದ ಹಸು, ಸುಕಲ್ಪತರು - ತನ್ನ ಸೇವೆ ಮಾಡಿದವರು ಕಲ್ಪಿಸಿಕೊಂಡದ್ದನ್ನೆಲ್ಲಾ ಕೊಡುವಂತಹ ವೃಕ್ಷ, ಚಿಂತಾಮಣಿ - ಚಿಂತಿಸಿದ್ದನ್ನು ಕೊಡತಕ್ಕಂತಹ ಮಣಿ, ಅಮರೇಂದ್ರಲೋಕದಿ - ದೇವಲೋಕ ಅಥವಾ ಸ್ವರ್ಗಲೋಕದಲ್ಲಿ, ಕಾಮಿತಾರ್ಥಗಳೀವುವಲ್ಲದೆ - ಬೇಡಿದ ಐಹಿಕ ಸುಖ ಭೋಗಗಳನ್ನು ಮಾತ್ರ ಕೊಡುತ್ತವೆ, ಸೇವೆ ಮಾಳ್ಪರಿಗೆ - ತಮ್ಮ ಸೇವೆ ಮಾಡುವಂತಹವರಿಗೆ, ಶ್ರೀಮುಕುಂದನ - ಭಗವಂತನಾದ ಶ್ರೀಹರಿಯ, ಪರಮಮಂಗಳ ನಾಮ - ಮಂಗಳಕರವಾದ / ಶುಭಕರವಾದ ನಾಮ ಸ್ಮರಣೆ, ನರಕಸ್ಥರನು ಸಲಹಿತು - ನರಕದಲ್ಲಿ ನರಳುತ್ತಿದ್ದ ನರಕವಾಸಿಗಳಿಗೂ ಮೋಕ್ಷ ದೊರೆಯುವಂತೆ ಮಾಡುವಂತಹ, ಪಾಮರರ ಪಂಡಿತರೆನಿಸಿ - ಅಜ್ಞಾನಿಗಳ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನಿಗಳನ್ನಾಗಿ ಮಾಡುವಂತಹುದು, ಪುರುಷಾರ್ಥ ಕೊಡುತಿಹುದು - ಧರ್ಮ ಅರ್ಥ ಕಾಮ ಮೋಕ್ಷಗಳನ್ನು ದೊರಕಿಸಿ ಕೊಡುವಂತಹುದು.
ಅಮರ ಲೋಕದಲ್ಲಿರುವಂತಹ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ ಇವೆಲ್ಲಾ ಸೇವೆ ಮಾಡುವಂತಹವರಿಗೆ, ಬೇಡಿದ ಇಷ್ಟಾರ್ಥವನ್ನೇ ಕೊಡುವ ಸಾಮರ್ಥ್ಯವನ್ನು ಹ್ಹೊಂದಿರುತ್ತದೆ. ಆದರೆ ಶಾಶ್ವತವಾದ ಸ್ವರ್ಗಲೋಕ, ಮೋಕ್ಷ, ಬಿಮ್ಬಾಪರೋಕ್ಷ ಇವುಗಳನ್ನು ಕೊಡುವುದಿಲ್ಲ. ಮೋಕ್ಷಪ್ರದವಾದ ಮುಕುಂದನ ಮಂಗಳ ನಾಮ ಉಚ್ಚಾರಣ ಮಾತ್ರದಿನ್ದಲೇ ಘೋರವಾದ ನರಕದಲ್ಲಿ ಬಿದ್ದಂತಹ ಜೀವರುಗಳನ್ನು ಪಾಪಗಳಿಂದ ಮುಕ್ತರನ್ನಾಗಿ ಮಾಡಿ ಧರ್ಮಾರ್ಥಗಳನ್ನು ಕೊಟ್ಟು ಸಂರಕ್ಷಣೆಯನ್ನು ಮಾಡುತ್ತದೆ. ಅನಂತಾನಂತ ಕಾಲಗಳಲ್ಲಿ ಬ್ರಹಾಂಡದಲ್ಲಿ ಸೃಷ್ಟಿಗೆ ಬರುವ ಭಕ್ತ ಜನರಿಗೆ ಪುರುಷಾರ್ಥಗಳನ್ನು ಕೊಡುತ್ತದೆ. ಇದರಿಂದ ಭಗವನ್ನಾಮೋಚ್ಛಾರಣೆಯು ಏತಾದೃಷವಾದದ್ದು ಎಂದು ಅರ್ಥಮಾಡಿಕೊಳ್ಳಬಹುದು.
ಕಾಮಧೇನು - ದೇವಲೋಕದ ಹಸು ಸುರಭಿಯು ಇಂಗಡಲ ಮಥನ ನಡೆದಾಗ ಉದ್ಭವಿಸಿದ ರತ್ನಗಳಲ್ಲಿ ಒಂದಾಗಿದ್ದು ಕಾಮಧೇನುವೆಂದು ಕರೆಯಲ್ಪಡುತ್ತದೆ. ಕಾಮಧೇನುವೆಂಬುದು ಚಲಿಸುವಂತಹ ಒಂದು ಪಶು ಮತ್ತು ಕೇಳಿದ್ದನ್ನು ಕೊಡುವಂತಹುದು. ಅಮರೇಂದ್ರರ ಲೋಕದಲ್ಲಿದ್ದು, ಅಲ್ಲಿರುವವರು ಸೇವೆ ಮಾಡಿ, ಒಲಿಸಿಕೊಂಡಾಗ ಮಾತ್ರ ಕೇಳಿದ್ದನ್ನು ಕೊಡುವಂತಹುದು. ಅದರಲ್ಲೂ ಕೇಳಿದ್ದನ್ನೆಲ್ಲಾ ಕೊಡುವಷ್ಟು ಶಕ್ತಿಯಿಲ್ಲದಿದ್ದರೂ, ಅತಿ ಶ್ರೇಷ್ಠವಾದವುಗಳನ್ನು ಕೊಡಲಾಗದಿದ್ದರೂ, ತನ್ನದೇ ಮಿತಿಯಲ್ಲಿ ಏನನ್ನಾದರೂ ಕೊಡಬಲ್ಲದು. ಗೋಮಾತೆಯಾಗಿ ಸುರಭಿಯು ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದಾಗ, ಕ್ಷೀರಾಭಿಷೇಕ ಮಾಡಿದವಳು.
ಕಾಮಧೇನುವೆಂದು ದೇವಲೋಕದ ಸುರಭಿಗೆ ಮಾತ್ರ ಕರೆಯುವುದಿಲ್ಲ, ವಸಿಷ್ಠ ಮಹರ್ಷಿಗಳ ಗೋಮಾತೆ ನಂದಿನಿಯೂ ಕೂಡ ಕಾಮಧೇನುವೆನಿಸಿಕೊಂಡವಳು. ವಿಶ್ವಾಮಿತ್ರ ಬ್ರಹ್ಮರ್ಷಿಯಾಗುವುದಕ್ಕೆ ಮುಂಚೆ ವಸಿಷ್ಠರ ಆಶ್ರಮದಲ್ಲಿ ನಂದಿನಿಯೆಂಬ ಕಾಮಧೇನುವಿನಿಂದ ಅತಿಥಿ ಸತ್ಕಾರ ಪಡೆದವನು. ರಾಜನಾದ ತನಗೇ ಕಾಮಧೇನು ಬೇಕೆಂದು ಬಲವಂತವಾಗಿ ಕಟ್ಟಿ ಎಳೆದೊಯ್ಯಲು ಪ್ರಯತ್ನಿಸಿದನು. ಸಾಧ್ಯವಾಗದೆ ಸೋತು, ತಪಸ್ಸು ಮಾಡಿ ’ಬ್ರಹ್ಮರ್ಷಿ’ಯಾದನು. ಹಾಗೆಯೇ ಅಷ್ಟವಸುಗಳೂ ಕೂಡ ಈ ಗೋಮಾತೆಯನ್ನು ಅಪಹರಿಸಲು ಪ್ರಯತ್ನಿಸಿ ಶಾಪಗ್ರಸ್ತರಾದರು. ಗಂಗಾದೇವಿಯ ಮಕ್ಕಳಾಗಿ ಜನಿಸಿ, ಏಳು ವಸುಗಳು ನೀರು ಪಾಲಾಗಿ ಕೊನೆಗೆ ಅಷ್ಟವಸುವು ಭೀಷ್ಮನಾಗಿ ಜನಿಸಿದನು.
ಜಮದಗ್ನಿ ಮುನಿಯ ಹಸುವಾದ ಕಪಿಲೆಯೂ ಕಾಮಧೇನುವೆಂದೇ ಕರೆಯಲ್ಪಟ್ಟವಳು. ಭಗವಂತನಿಂದ ಬ್ರಹ್ಮದೇವರಿಗೂ, ಬ್ರಹ್ಮನಿಂದ ಭೃಗುಮುನಿಗೂ, ಭೃಗುಮುನಿಯಿಂದ ಜಮದಗ್ನಿಗೂ ಕೊಡಲ್ಪಟ್ಟವಳು. ರಾಜಾ ಕಾರ್ತವೀರ್ಯಾರ್ಜುನನು ಜಮದಗ್ನಿ ಮುನಿಯ ಆಶ್ರಮಕ್ಕೆ ಬಂದಾಗ ಕಪಿಲೆಯು ರಾಜನಿಗೆ ಅತಿಥಿ ಸತ್ಕಾರ ಮಾಡಿದಳು. ರಾಜನು ಗೋಮಾತೆ ತನಗೇ ಬೇಕೆಂದು ಕಟ್ಟಿ, ಸೈನ್ಯದ ಬಲದಿಂದ ಒಯ್ಯಲು ಪ್ರಯತ್ನಿಸಿದಾಗ, ಸಮಸ್ತ ಸೈನ್ಯವನ್ನೂ ನಾಶಗೊಳಿಸಿ, ಅಂತರಿಕ್ಷಕ್ಕೆ ಹಾರಿ ಮರೆಯಾದವಳು.

ಕಲ್ಪವೃಕ್ಷ - ಕಲ್ಪವೃಕ್ಷವು ಚಲಿಸದಂತಹ ಸ್ಥಾವರ ಪದಾರ್ಥವು. ಇದು ಸಣ್ಣ ಗಿಡವೂ ಆಗಬಹುದು, ಹೆಮ್ಮರವೂ ಆಗಬಹುದು. ಈ ಮರದ ಕೆಳಗೆ ಕುಳಿತು ಅದರ ಸುಗಂಧವನ್ನು ಆಘ್ರಾಣಿಸಿದ ಮಾತ್ರಕ್ಕೇ ರೋಗಾದಿಗಳು ಗುಣವಾಗುವುವು, ನೆರಳಲ್ಲಿ ಕುಳಿತರೇ ಪೂರ್ವ ಜನ್ಮದ ಸ್ಮರಣೆ, ಹೀಗೆ ಕಲ್ಪವೃಕ್ಷದ ಮಹಿಮೆ ಅಪಾರವಾಗಿದೆ. ಆದರೆ ಕಲ್ಪವೃಕ್ಷವೆಂಬ ಮರವು ಬಯಸಿದ್ದನ್ನೆಲ್ಲಾ ಕೊಡುವಷ್ಟು ಸಾಮರ್ಥ್ಯ ಹೊಂದಿದ್ದರೂ ಕೂಡ, ಭಗವಂತನ ನಾಮಸ್ಮರಣೆಯೊಂದೇ ನೀಡಬಲ್ಲಂತಹ ಮುಕ್ತಿ/ಮೋಕ್ಷವೆಂಬ ಅತಿಶಯವಾದ ಹಾಗೂ ಅತ್ಯುತ್ಕೃಷ್ಠವಾದ ಫಲವನ್ನು ನೀಡಲಾರದು.
ಸತ್ಯಭಾಮದೇವಿಯ ಪ್ರೇರಣೆಯಿಂದ ಶ್ರೀಕೃಷ್ಣನು ದೇವಲೋಕದಲ್ಲಿದ್ದ ಪಾರಿಜಾತ ವೃಕ್ಷವನ್ನು ಕಿತ್ತು ಗರುಡನ ಮೇಲಿಟ್ಟು ಅದನ್ನು ಭೂಲೋಕಕ್ಕೆ ತರುವಾಗ, ದೇವತೆಗಳು ಯುದ್ಧಕ್ಕೆ ಬರುತ್ತಾರೆ. ಎಲ್ಲರನ್ನೂ ಸೋಲಿಸಿ ಶ್ರೀಕೃಷ್ಣನು ಹೊರಟಾಗ ಇಂದ್ರನು ಸ್ವಯಂ ಬಂದು ಭಗವಂತನಲ್ಲಿ ಪಾರಿಜಾತ ವೃಕ್ಷವನ್ನು ದೇವಲೋಕದಲ್ಲೇ ಬಿಟ್ಟು ತೆರಳುವಂತೆ ಕೇಳಿಕೊಳ್ಳುತ್ತಾನೆ. ಈ ಕಲ್ಪವೃಕ್ಷವು ಭೂಲೋಕಕ್ಕೆ ಬಂದರೆ, ಅದರ ನೆರಳಿನಲ್ಲಿ ಕುಳಿತು ಆಲೋಚಿಸಿದ ಕಾಮನೆಗಳೂ ಫಲವಾಗಿ ಬಿಡುವುದರಿಂದ, ದೇವಲೋಕದ ಮಹಿಮೆಯು ತಗ್ಗಿ ಬಿಡುವುದೂ ಮತ್ತು ಜೀವಿಗಳು ಕರ್ಮ ಮಾಡುವುದನ್ನೇ ನಿಲ್ಲಿಸಿ ಬಿಡುವರಾದ್ದರಿಂದಲೇ ತಾನು ಭಗವಂತನ ಜೊತೆಗೆ ಯುದ್ಧ ಮಾಡುವ ಅನಿವಾರ್ಯವಾಯಿತೆಂದು ತಿಳಿಸುತ್ತಾನೆ. ಶ್ರೀಕೃಷ್ಣನು ತಾನು ಅವತಾರ ಸಮಾಪ್ತಿಯಾಗಿ ವೈಕುಂಠಕ್ಕೆ ಮರಳಿದಾಗ ಕಲ್ಪವೃಕ್ಷವು ಕೂಡ ದೇವಲೋಕಕ್ಕೆ ಮರಳುವುದೆಂದು ತಿಳಿಸುತ್ತಾನೆ. ಇಷ್ಟು ಮಹಿಮೆಯುಳ್ಳ ಕಲ್ಪವೃಕ್ಷಕ್ಕೂ ಕೂಡ ಮಿತಿಯಿದೆ. ಆದರೆ ಭಗವಂತನ ಕರುಣೆಗೆ ಯಾವ ಮಿತಿಯೂ ಇಲ್ಲ.
ಚಿಂತಾಮಣಿ - ಚಿಂತಾಮಣಿಯೆನ್ನುವುದು ಒಂದು ಅನರ್ಘ್ಯ ರತ್ನ. ಒಂದು ಜಡವಸ್ತುವಾದ ಮಣಿಯ ಒಳಗಿದ್ದು ಅಚ್ಚರಿಯನ್ನು ಮಾಡಿಸುವವನು ಭಗವಂತನೇ. ಭಗವಂತ ಮಾಡಿಸದಿದ್ದರೆ, ಜಡವಸ್ತುವಿಗೆ ಇಂತಹ ಮಹಿಮೆಯು ಬರುವುದಿಲ್ಲ. ಆದರೆ ಇಂತಹ ಅಚ್ಚರಿಯನ್ನು ಮಾಡುವ, ವಿಶೇಷವಾದ ವಸ್ತುಗಳು ಭೂಲೋಕದಲ್ಲಿದ್ದರೆ, ಭೂಮಿಯೇ ಸ್ವರ್ಗವಾಗಿ, ಜನರು ಪುಣ್ಯಕರ್ಮಗಳನ್ನು ಮಾಡುವುದನ್ನೇ ಮರೆತು ಬಿಡುವರೆಂದು ಭಗವಂತನು, ಕಾಮಧೇನು, ಕಲ್ಪತರು, ಚಿಂತಾಮಣಿಗಳೆಂಬ ಕಾಮಿತಾರ್ಥಗಳನ್ನು ಕೊಡುವ ವಿಶಿಷ್ಠ ಗುಣಗಳನ್ನು ಹೊಂದಿರುವವುಗಳನ್ನು ಅಮರಲೋಕದಲ್ಲಿಯೇ ಇಟ್ಟುಬಿಟ್ಟಿದ್ದಾನೆ. ಸುಲಭದಲ್ಲಿ ಲಭ್ಯವಾಗದಂತೆ ಮಾಡಿದ್ದಾನೆ. ನರ ಜನ್ಮ ಸಿಕ್ಕಿರುವುದೇ ಭಗವಂತನ ನಾಮಸ್ಮರಣೆ ಮಾಡಿ ಈ ಜನನ-ಮರಣಗಳ ಚಕ್ರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೆಂಬ ಉದ್ದೇಶವನ್ನು ಜನರು ಮರೆಯಬಾರದೆಂದು ಭಗವಂತ ಹೀಗೆ ಮಾಡಿದ್ದಾನೆ.
ಭಗವಂತನು ಕಾಮಧೇನು, ಕಲ್ಪತರು, ಚಿಂತಾಮಣಿಗಳ ಮೂಲಕ ಕಾಮಿತಗಳನ್ನು ಬೇಡಿದವರಿಗೆ ನೀಡುವುದು ಅವನ ಅನಂತ ಲೀಲೆಗಳಿಗೆ ದೃಷ್ಟಾಂತಗಳಿದ್ದಂತೆ.
ಅಮರೇಂದ್ರ ಲೋಕ - ಸ್ವರ್ಗಲೋಕ ಅಥವಾ ದೇವತೆಗಳ ಲೋಕವನ್ನು ಅಮರ ಲೋಕವೆನ್ನುತ್ತಾರೆ. ಅಮರರು ಎಂದರೆ ಸದಾ ಇರುವವರು, ಸಾವಿಲ್ಲದವರು ಇರುವಂತಹ ಲೋಕ. ಸಾವಿಲ್ಲದವರು ಎಂದರೆ ಸಂಸಾರದ ಜನನ ಮರಣಗಳಿಂದ ಮುಕ್ತರಾದವರು ಎಂಬರ್ಥವಾಗುತ್ತದೆ. ಇಂತಹ ಅಮರರಿರುವ ಲೋಕಕ್ಕೆ ಇಂದ್ರನೇ ರಾಜನಾಗಿಹನು. ಯಾವ ಲೋಕದಲ್ಲಿ ಇಂದ್ರನ ಆಳ್ವಿಕೆಯಿದೆಯೋ, ಎಲ್ಲಿ ಅಮರರು ನೆಲೆಸಿದ್ದಾರೋ, ಅಲ್ಲಿ ಬಯಸಿದ್ದನ್ನು ಕೊಡುವ ಕಾಮಧೇನು, ಕಲ್ಪತರು ಮತ್ತು ಚಿಂತಾಮಣಿಗಳೂ ಕೂಡ ನೆಲೆಸಿವೆ.
ಕಾಮಿತಾರ್ಥಗಳೀವುವು ಸೇವೆ ಮಾಳ್ಪರಿಗೆ - ಕಾಮಿತಾರ್ಥಗಳೆಂದರೆ ಬಯಸಿದ ಭಾಗ್ಯವೆಂದಾಗುತ್ತದೆ. ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳು ತಮ್ಮ ಸೇವೆಯನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ, ಅಂತಹವರು ಬಯಸಿದ ಇಷ್ಟಾರ್ಥಗಳನ್ನೆಲ್ಲಾ ಕೊಡುತ್ತವೆ. ಆದರೆ ಸುಮ್ಮನೆ ಕೇಳಿದವರಿಗೆ ಕೊಡುವುದಿಲ್ಲ, ಕಾಮಧೇನು, ಕಲ್ಪತರು, ಚಿಂತಾಮಣಿಗಳನ್ನು ಯಾರು ಓಲೈಸಿ, ಸೇವೆಮಾಡಿ, ಒಲಿಸಿಕೊಳ್ಳುತ್ತಾರೋ, ಅಂತಹವರಿಗೆ ಅವರು ಬಯಸಿದ್ದನ್ನು, ತಮ್ಮದೇ ಆದ ಮಿತಿಯೊಳಗೆ ಮಾತ್ರ ಕೊಡಬಲ್ಲವು ಅಷ್ಟೇ. ಬಯಸಿದ್ದನ್ನೆಲ್ಲಾ ಎಂದಾಗ ಮಿತಿಯಿಲ್ಲದೆ, ಅಮಿತವಾಗಿ ಕೊಟ್ಟುಬಿಡುವುವೆಂದರ್ಥವಾಗುವುದಿಲ್ಲ.
ಶ್ರೀಮುಕುಂದನ ಪರಮಮಂಗಳ ನಾಮ - ಭಗವಂತನ ನಾಮವಾದ ಮುಕುಂದನೆಂದರೆ ಮುಕ್ತಿಯನ್ನು ದಯಪಾಲಿಸುವವನು ಎಂದರ್ಥವಾಗುತ್ತದೆ. ಕಾಮಧೇನು, ಕಲ್ಪತರು, ಚಿಂತಾಮಣಿಗಳು ಬಯಸಿದ್ದನ್ನು ಕೊಟ್ಟರೆ, ಭಗವಂತನಾದ ಮುಕುಂದನನ್ನು ಸ್ಮರಿಸಿದರೆ, ಅವನು ಅತ್ಯುತ್ತಮವಾದ ಮುಕ್ತಿಯನ್ನೇ ದಯಪಾಲಿಸಿ ಬಿಡುವನು. ನಂಬಿದ ಭಕ್ತರನ್ನು ಸದಾ ಪೊರೆಯುವವನು, ಉದ್ಧರಿಸುವವನು, ತನ್ನ ತನುವಿನಲ್ಲೇ ಸ್ಥಳಕೊಟ್ಟು ಪಾಲಿಸುವವನು ಮುಕುಂದನಾಮಕ ಭಗವಂತನು. ಭಗವಂತನ ನಾಮ ಸ್ಮರಣೆ ಮಾಡುವುದೆಂದರೆ, ಮನಸ್ಸಿನಲ್ಲಿ ಭಗವಂತನನ್ನು ಸ್ಮರಿಸಿಕೊಳ್ಳುತ್ತಾ, ನಾಲಿಗೆಯಲ್ಲಿ ಅವನ ನಾಮಗಳನ್ನು ಉಚ್ಛರಿಸುವುದು ಎಂದರ್ಥವಾಗುತ್ತದೆ.
ಶ್ರೀ ಕುಲಶೇಖರ ಆಳ್ವಾರ್ ರವರ ರಚನೆಯಾದ "ಮುಕುಂದಮಾಲಾ" ದಲ್ಲಿ
ಶ್ರೀವಲ್ಲಭೇತಿ ವರದೇತಿ ದಯಾಪರೇತಿ
ಭಕ್ತಪ್ರಿಯೇತಿ ಭವಲುಂಠನಕೋವಿದೇತಿ
ನಾಥೇತಿ ನಾಗಶಯನೇತಿ ಜಗನ್ನಿವಾಸೇತಿ
ಆಲಾಪನಂ ಪ್ರತಿಪದಂ ಕುರು ಮಾಂ ಮುಕುಂದ || - ತನ್ನನ್ನೇ ಸ್ಮರಿಸುವವರಿಗೆ ಭಗವಂತ ತನ್ನ ನಾಮ ಸ್ಮರಣೆಯನ್ನೇ ದಯಪಾಲಿಸುತ್ತಾನೆ, ಸಕಲ ಇಷ್ಟಾರ್ಥಗಳನ್ನೂ ನೆರವೇರಿಸುವ ನಿಧಿಯಂತಿದ್ದಾನೆ. ಭಕ್ತಪ್ರಿಯನಾಗಿದ್ದಾನೆ, ಸಂಸಾರವೆಂಬ ದುಃಖವನ್ನು ನಾಶಪಡಿಸುವ ಜಗನ್ನಾಥನಾಗಿದ್ದಾನೆ ಮತ್ತು ಫಣಿಶಾಯಿಯಾಗಿರುವ ಭಗವಂತನು ಮೋಕ್ಷಪ್ರದನಾಗುತ್ತಾನೆ ಎಂದಿದ್ದಾರೆ.
ಕಾಮಧೇನು, ಕಲ್ಪತರು, ಚಿಂತಾಮಣಿಗಳೆಲ್ಲಾ ಅಮರಲೋಕದಲ್ಲಿರುವವರಿಗೆ ಮಾತ್ರ ಕಾಮಿತಾರ್ಥಗಳನ್ನು ಕೊಡಬಲ್ಲವು, ಆದರೆ ಶ್ರೀಮುಕುಂದನ ಪರಮಮಂಗಳವಾದ ನಾಮಸ್ಮರಣೆ ಮಾಡಿದರೆ ಸ್ವರ್ಗಲೋಕ, ಮರ್ತ್ಯ್ಸಲೋಕಗಳಷ್ಟೇ ಅಲ್ಲದೆ ನರಕಲೋಕದಲ್ಲಿರುವವರನ್ನೂ ಕೂಡ ಉದ್ಧರಿಸಿ, ಅವರಿಗೂ ಸ್ವರ್ಗ, ಮೋಕ್ಷಾದಿಗಳೆಂಬ ಭಾಗ್ಯವನ್ನು ಕೊಡಬಲ್ಲದು.
ನರಕಸ್ಥರನು ಸಲಹಿತು - ಭಗವಂತನ ಪುಣ್ಯ ನಾಮಸ್ಮರಣೆಯು ನರಕದಲ್ಲಿರುವವರನ್ನೂ ಸಲಹುದು ಎಂಬುದಕ್ಕೆ ಪೂರಕವಾಗಿ ಒಂದು ಕಥೆಯಿದೆ. ನಾರದರು ಒಮ್ಮೆ ಭಗವಂತನ ಮುಂದೆ ನರಕವನ್ನು ನೋಡಬೇಕೆಂಬ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದರು. ಭಗವಂತನ ಅನುಜ್ಞೆಯನ್ನು ಪಡೆದುಕೊಂಡು ಯಮಲೋಕಕ್ಕೆ ಬಂದರು. ಅಲ್ಲಿಯ ವಾಸಿಗಳು ಯಾತನೆ ಪಡುವುದನ್ನು ಕಂಡರು ಮತ್ತು ಆಶ್ಚರ್ಯ ಪಟ್ಟರು. "ನಾರಾಯಣೇತಿ ಮಂತ್ರೋಸ್ತಿ ವಾಗಸ್ತಿ ವಶವರ್ತಿನೀ | ತಥಾಪಿ ನರಕೇ ಘೋರೇ ಪತಂತೀತ್ಯೇತದದ್ಭುತಮ್" ಎಂಬ ಯಮನ ಮಾತುಗಳನ್ನು ಕೇಳಿ ನರಕವಾಸಿಗಳಿಗಾಗಿ ಮರುಕ ಪಟ್ಟರು. ನಾರಾಯಣ ಎಂಬ ಪರಮ ಪವಿತ್ರವಾದ ಮಂತ್ರವಿದೆ ಮತ್ತು ನುಡಿಯಲು ತನ್ನದೇ ಸ್ವಾಧೀನದಲ್ಲಿರುವ ನಾಲಿಗೆಯಿದ್ದರೂ, ಮಂತ್ರವನ್ನು ಜಪಿಸದೆ ನರಕವಾಸಿಗಳಾಗುತ್ತಾರೆಂದು ಚಕಿತರಾದರು. ಅವರಿಗೆ ತೀವ್ರವಾದ ದುಃಖದ ಜೊತೆಗೆ ಅತಿಯಾದ ವಿಷಾದವೂ ಆಯಿತು. ಅವರು ನಾರಾಯಣ ನಾಮಸ್ಮರಣೆಯನ್ನು ಎತ್ತರದ ಧ್ವನಿಯಲ್ಲಿ ಮಾಡಲು ಪ್ರಾರಂಭಿಸಿದರು. ಭಗವಂತನ ನಾಮಾಮೃತದ ಶ್ರವಣ ಮಾಡಿದ ನರಕವಾಸಿಗಳು, ತಮ್ಮ ಪಾಪ ಕಳೆದುಕೊಂಡರು ಮತ್ತು ನಾರದರನ್ನು ಸ್ತುತಿಸುತ್ತಾ ಪುಷ್ಪಕವಿಮಾನದಲ್ಲಿ ಸ್ವರ್ಗಕ್ಕೆ ತೆರಳಿದರು. ಶ್ರೀಹರಿಯ ನಾಮಸ್ಮರಣೆಯೊಂದೇ ಸಾಕು ಕಲಿಯುಗದಲ್ಲಿ ನರಕವನ್ನು ತಪ್ಪಿಸಲು ಎಂಬುದನ್ನು ಶ್ರೀಪುರಂದರದಾಸರು "ಸ್ಮರಣೆಯೊಂದೇ ಸಾಲದೆ" ಎಂಬ ಕೃತಿಯಲ್ಲಿ ಹಾಡಿದ್ದಾರೆ.
ಶ್ರೀ ವಿಷ್ಣು ಸಹಸ್ರನಾಮದ ಪೂರ್ವ ಪೀಠಿಕೆಯಲ್ಲಿ | ಜಗತ್ಪ್ರಭುಂ ದೇವದೇವಮನನ್ತಂ ಪುರುಷೋತ್ತಮಮ್ | ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || - ಭಗವಂತನ ಸ್ತುತಿ, ಧ್ಯಾನ ಮುಂತಾದವುಗಳನ್ನು ಯಾರು ನಿರಂತರವಾಗಿ ಮಾಡುತ್ತಿರುತ್ತಾರೋ ಅವರಿಗೆ ಮೃತ್ಯು ಭಯವೂ ಕಾಡುವುದಿಲ್ಲ ಎಂದಿದ್ದಾರೆ. ಹಾಗೇ ಫಲಶೃತಿಯ ಕೊನೆಯ ಶ್ಲೋಕದಲ್ಲಿ "ಸಂಕೀರ್ತ್ಯ ನಾರಾಯಣ ಶಬ್ದಮಾತ್ರಂ ವಿಮುಕ್ತ ದುಃಖಾ ಸುಖಿನೋ ಭವಂತಿ" - ನಾರಾಯಣ ಎಂಬ ಶಬ್ದವನ್ನು ಉಚ್ಛಾರಣೆ ಮಾಡುವುದರಿಂದ ಮಾತ್ರವೇ ಸಮಸ್ತ ದುಃಖಗಳೂ ಪರಿಹಾರವಾಗಿ ಸುಖಿಯಾಗುತ್ತಾರೆ ಎಂದಿದ್ದಾರೆ. ಭಗವಂತನ ನಾಮಸ್ಮರಣೆಯ ಮಹಿಮೆಯಿದು.
ಶ್ರೀಕುಲಶೇಖರರು "ಮುಕುಂದಮಾಲ"ದಲ್ಲಿ
ಮಾಭೀಃ ಮಂದಮನೋ ವಿಚಿಂತ್ಯ ಬಹುಧಾ ಯಾಮೀಶ್ಚಿರಂ ಯಾತನಾಃ
ನಾಮೀ ನಃ ಪ್ರಭವಂತಿ ಪಾಪರಿಪವಃ, ಸ್ವಾಮೀ ನನು ಶ್ರೀಧರಃ |
ಆಲಸ್ಯಂ ವ್ಯಪನೀಯ ಭಕ್ತಿಸುಲಭಂ ಧ್ಯಾಯಸ್ವ ನಾರಾಯಣಂ
ಲೋಕಸ್ಯ ವ್ಯಸನಾಪನೋದನಕರೋ ದಾಸಸ್ಯ ಕಿಂ ನ ಕ್ಷಮಃ || - ಮೂಢ ಮನವೇ ನಾನಾಬಗೆಯ ನರಕದ ಯಾತನೆಗಳನ್ನು ನೆನೆದು ಭಯಪಡಬೇಡ. ಶ್ರೀಹರಿಯೇ ಸ್ವಾಮಿ ಎಂದು ದೃಢವಾಗಿ ನಂಬಿದವರಿಗೆ ಪಾಪವೆಂಬ ಶತೃಗಳೂ ಏನೂ ಮಾಡಲಾರವು. ಆದ್ದರಿಂದ ಆಲಸ್ಯ ತೊರೆದು ಭಕ್ತಿಗೆ ಸುಲಭವಾಗಿ ಒಲಿಯುವ ನಾರಾಯಣನನ್ನು ಸದಾ ಸ್ಮರಿಸು ಎಂದಿದ್ದಾರೆ.
ಶ್ರೀವಾದಿರಾಜರು "ಮಾತುಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ" ಎಂದಿದ್ದಾರೆ. ತಮ್ಮ ಇನ್ನೊಂದು ಕೃತಿ "ಹರಿ ನಾರಾಯಣ ಹರಿ ನಾರಾಯಣ ನಾಮಂ ಜಯ" ದಲ್ಲಿ "ನಾರಾಯಣ ನಾರದಪ್ರಿಯ ನಾರಾಯಣ ನರಕಾಂತಕ" ಎನ್ನುತ್ತಾ ನಾರಾಯಣನು ನರಕಕ್ಕೆ ಅಂತಕನು ಎಂದು ಸ್ತುತಿಸಿದ್ದಾರೆ.
ಪಾಮರರ ಪಂಡಿತರೆನಿಸುವುದು - ಭಗವಂತನ ಮಂಗಳಕರವಾದ ಪುಣ್ಯನಾಮಗಳನ್ನು ಸದಾ ಸ್ಮರಿಸುವುದರಿಂದ ಪಾಮರರೂ ಕೂಡ ಪಂಡಿತರಾಗಿ ಮಾರ್ಪಾಡಾಗುತ್ತಾರೆ. ವಾಲ್ಮೀಕಿಯು ’ಮರ’ ಎಂಬ ಶಬ್ದವನ್ನು ಉಚ್ಛರಿಸುತ್ತಿರುವಾಗ ಅದು ’ರಾಮ’ ಶಬ್ದವಾಗಿ ಅವರಿಗೆ ಕೇಳಿಸಿ ಪಾಮರರಾಗಿದ್ದ ಅವರು ಪಂಡಿತರಾದ ವಾಲ್ಮೀಕಿಯಾದರು. ಮಹಾಕಾವ್ಯವಾದ ರಾಮಾಯಣದ ರಚನೆಯಾಯಿತು. ಕಾಮಧೇನು ಒಂದು ಹಸು, ಕಲ್ಪವೃಕ್ಷ ಒಂದು ಮರ ಮತ್ತು ಚಿಂತಾಮಣಿ ಒಂದು ಕಲ್ಲು. ಹೀಗೆ ಪಶು, ಮರ ಮತ್ತು ಕಲ್ಲು ಬೇಡಿದ ಇಷ್ಟಾರ್ಥಗಳನ್ನು ನೀಡುವುದೆಂದರೆ, ಅದು ಭಗವಂತನ ಅಚಿಂತ್ಯ ಲೀಲೆಯೆಂದೇ ತಿಳಿಯಬೇಕು. ಇವುಗಳಿಗೇ ಇಷ್ಟು ಶಕ್ತಿಯಿದ್ದರೆ, ಭಗವಂತನ ರೋಮರೋಮಗಳಲ್ಲೂ ನೆಲೆಸಿರುವ ಅವನ ನಾಮಗಳಿಗೆಷ್ಟು ಮಹಿಮೆಯಿದೆ ಎಂಬುದನ್ನು ಅರಿಯಬೇಕು. ಭಗವಂತನು ಭಕ್ತಿ ಹಾಗೂ ಶ್ರದ್ಧೆಯಿಂದ ಸ್ಮರಣೆ ಮಾಡಿದ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನೂ ಕೊಟ್ಟು ಸಲಹುತ್ತಾನೆ. ಭಗವಂತನ ನಾಮಸ್ಮರಣೆಯನ್ನು ಸದಾ ಮಾಡುವ ಮನಸ್ಸು ಮಲಿನಗೊಳ್ಳಲಾಗಲೀ, ವಿಷಯಾಸಕ್ತಿಗಳ ಬಂಧನಕ್ಕೆ ಸಿಲುಕುವುದಾಗಲೀ ಆಗುವುದೇ ಇಲ್ಲ.
ಶ್ರೀ ಜಗನ್ನಾಥ ದಾಸರು ತಮ್ಮ ತತ್ವ ಸುವ್ವಾಲಿ
ಮನದಲ್ಲಿ ಹರಿಯ ಚಿಂತನೆ ಉಳ್ಳ ನರನಿಗೆ
ಮನೆಯಾದರೇನು ವನವೇನು | ವನವೇನು ಸತತ ದು-
ರ್ಜನರ ಸಂಗದೊಳು ಇರಲೇನು || - ನಿರಂತರವಾಗಿ ಹರಿಸ್ಮರಣೆ ಮಾಡುವ ಭಕ್ತನು ವಿಷಯಭೋಗ ಮಾಡಿದರೂ, ಲಂಪಟರ ಸಂಗದಲ್ಲಿದ್ದರೂ, ಯಾವ ಹಾನಿಯೂ ಆಗುವುದಿಲ್ಲ. ಕಾಮಾದಿಗಳ ವಶವಾದವನಿಗೆ ಅರಣ್ಯದಲ್ಲಿದ್ದರೂ ಸಂಸಾರದ ಭಯವು ತಪ್ಪುವುದಿಲ್ಲ. ಆದರೆ ಇಂದ್ರಿಯಗಳ ಜಯಿಸಿ, ಭಗವಂತನ ಪಾದದಲ್ಲಿ ಮನಸ್ಸು ನಿಲ್ಲಿಸಿ, ನಾಮಸ್ಮರಣೆ ಮಾಡುವವನಿಗೆ ಗೃಹಸ್ಥಾಶ್ರಮವೂ ಕೂಡ ಯಾವ ಭಯವನ್ನೂ ಉಂಟುಮಾಡುವುದಿಲ್ಲ ಎನ್ನುತ್ತಾ ನಾಮಸ್ಮರಣೆಯ ಮಹತ್ವವನ್ನು ತಿಳಿಸಿದ್ದಾರೆ.
ಚಿತ್ರಕೃಪೆ : ಅಂತರ್ಜಾಲ
No comments:
Post a Comment