Sunday, June 5, 2011

ಹರಿಕಥಾಮೃತಸಾರ ಸೌರಭ


ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ

ಪರಮ ಭಗವದ್ಭಕ್ತರಿದನಾದರದಿ ಕೇಳುವುದು

“ಹರಿ” ಎಂಬ ಪದದ ಎರಡು ಅಕ್ಷರಗಳ ವಿಶೇಷತೆ ಏನೆಂದರೆ ’ಹ’ ವ್ಯಂಜನಾಕ್ಷರ ಶ್ರೇಣಿಯಲ್ಲಿ ೮ನೇ ಸ್ಥಾನದಲ್ಲಿದೆ ಮತ್ತು ‘ರಿ’ ವ್ಯಂಜನಾಕ್ಷರ ೨ನೇ ಸ್ಥಾನದಲ್ಲಿದೆ. “ಅಂಕಾನಾಂ ವಾಮತೋಗತಿ:” ಎಂಬ ಸಂಸ್ಕೃತದ ನಿಯಮದಂತೆ ೮೨ ಎಂಬುದು ೨೮ ಎಂದಾಗುವುದು. ೨೮ – ಹರಿ ಶಬ್ದದ ಭಗವದ್ರೂಪಗಳು. ಈ ಮೇಲಿನ ಮೂರು ಸಾಲುಗಳ ಪಲ್ಲವಿಯು ಪ್ರತಿ ಸಂಧಿಯ ಮೊದಲೂ ಹೇಳಲ್ಪಡುತ್ತದೆ. ಭಗವಂತನ ಅನಂತ ಕಲ್ಯಾಣ ಗುಣಗಳನ್ನು ಎಲ್ಲಿ ಸುಂದರವಾಗಿ ನಿರೂಪಣೆ ಮಾಡಿದ್ದಾರೋ ಅದೇ “ಹರಿಕಥೆ”. ಎಂಬರ್ಥದಲ್ಲಿ ಹರಿಕಥಾಮೃತಸಾರವನ್ನು ಕೇಳುವುದೂ, ಹಾಡುವುದೂ ಮತ್ತೆ ಮತ್ತೆ ನೆನಪಿಸಿಕೊಳ್ಳುವುದೂ ಮೋಕ್ಷಕ್ಕೆ ದಾರಿಯೆಂದೂ ಹರಿಯಲ್ಲಿ ನಿರಂತರವಾಗಿ ಅನುರಕ್ತರಾಗಿರುವ ಪರಮ ಭಕ್ತರು ಉದಾಸ ತೋರದೆ, ಆದರದಿಂದ, ಭಕ್ತಿಯಿಂದ, ಶ್ರದ್ಧೆಯಿಂದ ಕೇಳಿ ಮನನ ಮಾಡಿಕೊಳ್ಳಿರೆಂದೂ ಜಗನ್ನಾಥ ದಾಸರು ಪ್ರತಿಯೊಂದು ಸಂಧಿಯ ಮೊದಲೂ ವಿನಂತಿಸಿಕೊಳ್ಳುತ್ತಾರೆ. ವೇದ, ಪುರಾಣ, ಉಪನಿಷತ್ತುಗಳನ್ನು ಚೆನ್ನಾಗಿ ಕಡೆದು ತೆಗೆದ “ನವನೀತ” – ಹರಿಕಥಾಮೃತಸಾರವನ್ನು ಜಗನ್ನಾಥ ದಾಸರು ನಮಗೆ ಅರ್ಥವಾಗುವ, ನಮ್ಮದೇ ಕನ್ನಡ ಭಾಷೆಯಲ್ಲಿ ಸುಲಭವಾಗಿ ಸೇವಿಸಲು ಕೊಟ್ಟಿದ್ದಾರೆ ಮತ್ತು ನಮ್ಮ ದೈನಂದಿನ ಜೀವನದ ಅನುಷ್ಠಾನಕ್ಕೆ ಬೇಕಾದದ್ದೆಲ್ಲಾ ಕೊಟ್ಟು ಶ್ರೀ ಹರಿಯ ಪಾದಗಳಲ್ಲಿ ಶರಣಾಗಿ ಜೀವನ ಸಾರ್ಥಕ ಮಾಡಿಕೊಳ್ಳಿರಿ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ಶ್ರೀ ಪುರಂದರ ದಾಸರ ಒಂದು ಉಗಾಭೋಗ ನಮಗೆ 'ಗುರು'ವಿನ ಮಹಿಮೆಯನ್ನು ಹೃದಯ ಸ್ಪರ್ಶವಾಗುವಂತೆ ವರ್ಣಿಸುತ್ತದೆ..

ಗುರು ಉಪದೇಶವಿಲ್ಲದ ಜ್ಞಾನವು

ಗುರು ಉಪದೇಶವಿಲ್ಲದ ಸ್ನಾನವು

ಗುರು ಉಪದೇಶವಿಲ್ಲದ ಧ್ಯಾನವು

ಗುರು ಉಪದೇಶವಿಲ್ಲದ ಜಪವು

ಗುರು ಉಪದೇಶವಿಲ್ಲದ ತಪವು

ಗುರು ಉಪದೇಶವಿಲ್ಲದ ಮಂತ್ರ

ಗುರು ಉಪದೇಶವಿಲ್ಲದ ತಂತ್ರ

ಉಗ್ರನ ಉಪವಾಸದಂತೆ ಕಾಣಿರೋ.

ಇನ್ನೂ ಸುಲಭವಾದ ಮಾತುಗಳಲ್ಲಿ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ " ಎಂದಿದ್ದಾರೆ.
ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ :

ಬ್ರಹ್ಮರುದ್ರುಲಕೈನ - ಭಾವಿಂಪ ಶಕ್ಯಮಾ

ಅಧ್ಯಾತ್ಮವಿದ್ಯ ಗುರುಕೀಲು ಮಹಿಮ

ಅಧ್ಯಾತ್ಮ ವಿದ್ಯೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು ; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಅಧ್ಯಾತ್ಮ ವಿದ್ಯೆಯು ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಅಧ್ಯಾತ್ಮವಿದ್ಯ "ಗುರುಕೀಲು ಮಹಿಮೆ" - ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. "ಗುರುಕೀಲು" ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥ. ತಾತಯ್ಯನವರು ಗುರುವಿಗೆ 'ಮಾತೃಸ್ಥಾನ' ವನ್ನು ಕೊಟ್ಟಿದ್ದಾರೆ.

ಗುರು ಪ್ರಸಾದದಿಂದಲೇ ಹರಿ ಪ್ರಸಾದವು ಲಭ್ಯವಾಗಬೇಕು. ಆದ್ದರಿಂದಲೇ ಶ್ರೀ ವಾದಿರಾಜರ ಗುರು ಮಹಿಮೆಯನ್ನು ಸಾರುವ ಈ ಮಾತುಗಳನ್ನು ನಾವು ಸದಾ ನೆನೆಯುತ್ತಿರಬೇಕು.

ಗುರುಭಕುತಿಯಿರಬೇಕು ಹಿರಿಯ ಕರುಣವು ಬೇಕು

ಹರಿಕಥೆಗಳ ನಿತ್ಯದಲಿ ಕೇಳುತಿರಬೇಕು

ವಿರಕ್ತಿಯು ಬೇಕು ವಿಷ್ಣುವಿನಾರಾಧನೆ ಬೇಕು

ವರಮಂತ್ರ ಜಪ ಬೇಕು ತಪ ಬೇಕು ಪರಗತಿಗೆ

ಪರಿಪರಿಯ ವ್ರತ ಬೇಕು ಸಿರಿಪತಿ ಹಯವದನನ

ಪರಮಾನುಗ್ರಹ ಬೇಕು ವಿಷಯನಿಗ್ರಹ ಬೇಕು.

ಭಾಗವತ ದಶಮಸ್ಕಂದದಲ್ಲಿ ಹೇಳುವಂತೆ.....
ವಾಸುದೇವಕಥಾಪ್ರಶ್ನ: ಪುರುಷಾಂಸ್ತ್ರೀನ್ಪುನಾತಿ ಹಿ |

ವಕ್ತಾರಂ ಪೃಚ್ಛಕಂ ಶ್ರೋತೃಂಸ್ತತ್ಪಾದಸಲಿಲಂ ಯಥಾ ||

ವಿಷ್ಣು ಪಾದೋದ್ಭವಳಾದ ಗಂಗಾದೇವಿಯು ಹೇಗೆ ಮೂರೂ ಲೋಕಗಳನ್ನು ಪಾವನಗೊಳಿಸುತ್ತಿರುವಳೋ, ಹಾಗೆ ವಾಸುದೇವನ ಕಥೆಗಳನ್ನು ಕೇಳುವವರ, ಪ್ರವಚನಗಳನ್ನು ಮಾಡುವವರ ಎಲ್ಲ ಕಷ್ಟಗಳನ್ನೂ ಪರಿಹರಿಸಿ, ಜನ್ಮ ಪಾವನಗೊಳಿಸುವನು ಶ್ರೀಹರಿ. “ಅದ್ಭುತಂಬೈನ ಶ್ರೀಹರಿಕಥಲ್ ನಿರ್ಮಿಂಚಿ, ಇತರ ಚಿಂತಲನ್ನೀ ವಿಡಿಚಿನಾಡು” – ಅಂದರೆ ಅನ್ಯ ಚಿಂತೆಗಳನ್ನೆಲ್ಲಾ ಬಿಟ್ಟು ಶ್ರೀಹರಿಕಥೆಯೊಂದೇ ಅನನ್ಯ ಚಿಂತೆಯಾಗಬೇಕು ಎಂದರು ತಾತಯ್ಯನವರು. ಅನನ್ಯ ಚಿಂತೆ – ಗೀತೆಯಲ್ಲಿ ಭಗವಂತ “ಅನನ್ಯಾಶ್ಚಿಂತಯಂತೋ ಮಾಂ – ಯೇ ಜನಾ: ಪರ್ಯುಪಾಸತೇ “ : ಯಾರು ಉಳಿದ ಚಿಂತೆಗಳನ್ನು ಬಿಟ್ಟು ನನ್ನನ್ನೇ ಉಪಾಸಿಸುತ್ತ ಚಿಂತಿಸುವರೋ ಅವರನ್ನು ನಾನು ಕಾಪಾಡುತ್ತೇನೆ ಎಂಬ ಭರವಸೆ ಕೊಡುತ್ತಾನೆ.

ಇದೆಲ್ಲದರ ಜೊತೆಗೆ ನಮ್ಮ ಡಿವಿಜಿಯವರ “ಮಂಕುತಿಮ್ಮನ ಕಗ್ಗ”ವನ್ನೂ ನಾವು ಇಲ್ಲಿ ನೆನೆಯಲೇ ಬೇಕು. ನಮ್ಮ ಕನ್ನಡ ಭಾಷೆಯ ಇನ್ನೊಂದು ಮೇರು ಕೃತಿಯಲ್ಲಿ ಅನುಭವ ಪೂರ್ವಕವಾಗಿ ಡಿವಿಜಿಯವರು ನಮ್ಮ ನಿಮ್ಮೆಲ್ಲರಿಗೂ ಜೀವನ ನಡೆಸುವ ಕ್ರಮ, ಅಳವಡಿಸಿಕೊಳ್ಳಬೇಕಾದ ತತ್ವಗಳನ್ನು ಕೊಟ್ಟಿದ್ದಾರೆ...

ವ್ಯಾಕರಣ ಕಾವ್ಯ ಲಕ್ಷಣಗಳನ್ನು ಗಣಿಸದೆಯೆ
ಲೋಕ ತಾಪದಿ ಬೆಂದು ತಣಿಪನೆಳಸಿದವಂ
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು
ಸ್ವೀಕರಿಕೆ ಬೇಳ್ಪವರು - ಮಂಕುತಿಮ್ಮ ||

ಕಗ್ಗದ ಬಗ್ಗೆ ಮೇಲಿನ ಪದ್ಯದಲ್ಲಿ ಡಿವಿಜಿಯವರು ತಾವು ಇದನ್ನು ಬರೆಯುವಾಗ ಯಾವ ವ್ಯಾಕರಣ, ಛಂದಸ್ಸುಗಳನ್ನೂ ಬಳಸಿ ಒಂದು ಮಹಾಕಾವ್ಯ ರಚಿಸಬೇಕೆಂಬ ಮನಸ್ಥಿತಿಯಲ್ಲೇನು ಇರಲಿಲ್ಲವೆಂದು ಹೇಳಿದ್ದಾರೆ. ಬದುಕಿನ ಬೇಗೆಯಲ್ಲಿ ಬೆಂದು, ಬಳಲಿ, ಬಾಯಾರಿ ತಿಳಿಜಲವ ಬಯಸಿ ಬಂದ ವ್ಯಕ್ತಿಗೆ ಡಿವಿಜಿಯವರು ತಮ್ಮ ನಂಬಿಕೆಗಳನ್ನು ಇಲ್ಲಿ “ಕಗ್ಗ”ದ ರೂಪದಲ್ಲಿ ಪೋಣಿಸಿ ಕೊಟ್ಟಿದ್ದಾರೆ.

ಜಗನ್ನಾಥ ದಾಸರು ಹರಿಕಥಾಮೃತಸಾರವನ್ನು ಪರಮ ಭಗವದ್ಭಕ್ತರಿಗಾಗಿ ಎಂದು ಹೇಳಿರುವಂತೆ ಡಿವಿಜಿಯವರು “ಕಗ್ಗ”ದ ಸಾರ ಯಾರಿಗೆ ಬೇಕೋ ಅವರಿಗೆ ಮಾತ್ರ, ಬೇಡದವರು ಇದರ ರುಚಿ ತಿಳಿಯರು ಎಂದಿದ್ದಾರೆ.