Saturday, February 28, 2015

ಕರುಣಾ ಸಂಧಿ - ೩೦ ನೇ ಪದ್ಯ - ಒಂದು ಮುನ್ನುಡಿ


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


 ಪ್ರತಿಪದಾರ್ಥ : ಮೀನ - ಮತ್ಸ್ಯನಾಗಿ ಭೂಮಿಯನ್ನೂ ವೇದಗಳನ್ನೂ ರಕ್ಷಿಸಿದ ರೂಪ,  ಕೂರ್ಮ - ಆಮೆಯಾಗಿ ಬೆನ್ನಮೇಲೆ ಮಂದರ ಪರ್ವತವನ್ನು ಹೊತ್ತು ಸಮುದ್ರ ಮಥನ ಮಾಡಿಸಿದ ರೂಪ, ವರಾಹ - ರಸಾತಳದಿಂದ ಭೂಮಿಯನ್ನು ಕೋರೆದಾಡಿಗಳ ಮೇಲಿಟ್ಟು ಕೊಂಡು ತಂದ ಸೂಕರ ರೂಪ, ನರಪಂಚಾನನ - ನರ ಹಾಗೂ ಸಿಂಹಗಳ ಮಿಶ್ರಣ ರೂಪ ಧರಿಸಿ ಪುಟ್ಟ ಬಾಲಕ ಪ್ರಹ್ಲಾದನನ್ನು ಉದ್ಧರಿಸಿದ ರೂಪ, ಅತುಳ ಶೌರ್ಯ ವಾಮನ - ಬಲಿಚಕ್ರವರ್ತಿಯಿಂದ ೩ ಪಾದ ಭೂಮಿ ದಾನ ಬೇಡಿ ಸಮಸ್ತ ಲೋಕಗಳನ್ನು ಅಳೆದ ರೂಪ,  ರೇಣುಕಾತ್ಮಜ - ಕ್ಷತ್ರಿಯಕುಲ ನಾಶಕ್ಕೆ ಕಾರಣಾಗಲು ಜಮದಗ್ನಿ ಹಾಗೂ ರೇಣುಕೆಯರ ಮಗನಾಗಿ ಪರಶುರಾಮನ ರೂಪ, ರಾವಣಾದಿ ನಿಶಾಚರ ಧ್ವಂಸಿ - ರಾವಣ ಮೊದಲಾದ ಅಸುರರೆಲ್ಲರ ನಾಶಕ್ಕೆ ಕಾರಣನಾದ ಶ್ರೀರಾಮಚಂದ್ರನ ರೂಪ, ಧೇನುಕಾಸುರ ಮಥನ - ಧೇನುಕನೆಂಬ ರಾಕ್ಷಸನನ್ನು ಸಂಹಾರ ಮಾಡಿದ ರೂಪ, ತ್ರಿಪುರವ ಹಾನಿಗೈಸಿದ ನಿಪುಣ - ತ್ರಿಪುರಾಸುರರ ಪತ್ನಿಯರ ಪಾತಿವ್ರತ್ಯ ವ್ರತ ಭಂಗ ಮಾಡಿಸಿ ಅವರುಗಳ ನಾಶಕ್ಕೆ ಕಾರಣವಾದ ಬುದ್ಧರೂಪ, ಕಲಿಮುಖ ದಾನವರ ಸಂಹರಿಸಿ - ಕಲ್ಕಿ ಅವತಾರದಿಂದ ಕಲಿಯೇ ಮುಂತಾದ ದೈತ್ಯರನ್ನು ನಾಶ ಮಾಡಿದ ರೂಪ, ಧರ್ಮದಿ ಕಾಯ್ದ ಸುಜನರನು - ಸಜ್ಜನರಾದ ಭಕ್ತರನ್ನು ಧರ್ಮದಿಂದ ಸಂರಕ್ಷಿಸುವವನು.

ಕರುಣಾಸಂಧಿಯ ೩೦ನೆಯ ಪದ್ಯದಲ್ಲಿ ದಾಸರಾಯರು ದಶಾವತಾರದ ವರ್ಣನೆಯ ಮೂಲಕ ಭಗವಂತನ ಕಾರುಣ್ಯವನ್ನು ವಿಸ್ತಾರವಾಗಿ ವಿವರಿಸಿದ್ದಾರೆ.  ಅಸಂಖ್ಯಾವತಾರಗಳನ್ನು ಎತ್ತಿ ತನ್ನದೇ ಸೃಷ್ಟಿಯಾದ ಭೂಮಂಡಲವನ್ನೂ, ಮನುಕುಲವನ್ನೂ ಕಾಪಾಡುವ ಭಗವಂತನ ಅಪಾರ ಕರುಣೆಯು ವಿವರಣೆಯ ನಿಲುಕಿಗೆ ಸಿಲುಕುವಂತಹುದಲ್ಲದಿದ್ದರೂ, ಅದನ್ನು ಅರಿಯುವ, ತಾವು ಅರಿತದ್ದನ್ನು ಮತ್ತು ತಮ್ಮ ಅನುಭವವನ್ನು ಮತ್ತೊಬ್ಬರಿಗೂ ಯಥಾ ಶಕ್ತ್ಯಾನುಸಾರ ತಿಳಿಸುವುದರ ಮೂಲಕ  ಭಗವಂತನನ್ನು ಸ್ತುತಿಸುವ ಪ್ರಯತ್ನವನ್ನು ಶ್ರೀ ಜಗನ್ನಾಥದಾಸರು ಮಾಡಿದ್ದಾರೆ.

ಭಗವಂತನು ಕಲ್ಪಗಳ ಲಯ ಕಾಲದಲ್ಲಿ ಅವತಾರಗಳನ್ನು ಎತ್ತುತ್ತಾ, ಬ್ರಹ್ಮಾಂಡವನ್ನೂ,  ಅನಾದಿಯಾದ ಬೀಜರೂಪದಲ್ಲಿರುವ ಜೀವರಾಶಿಯನ್ನೂ  ಪ್ರಳಯ ಜಲದಲ್ಲಿ ಕೊಚ್ಚಿ ಹೋಗದಂತೆ ಕಾಪಾಡುತ್ತಲೇ ಇದ್ದಾನೆ.  ಪ್ರಕೃತಿಯಲ್ಲಿ ವಿಕೋಪ ಉಂಟಾದಾಗ, ಪರಿಸ್ಥಿತಿಯಲ್ಲಿ ಏರುಪೇರಾದಾಗ, ಭಗವಂತ ಅಲ್ಲಿಯ ಸಂದರ್ಭಕ್ಕನುಗುಣವಾಗಿ ಅವತರಿಸಿ, ಸಮತೋಲನವನ್ನು ಕಾಪಾಡುತ್ತಾನೆ.  ಭಗವಂತನ ಅಸಂಖ್ಯಾತ ಅವತಾರಗಳಲ್ಲಿ ಹತ್ತು ಅವತಾರಗಳನ್ನು ಮಾತ್ರ ’ದಶಾವತಾರ’ಗಳೆಂದು ಪ್ರಮುಖವಾಗಿ ಪರಿಗಣಿಸಲಾಗಿದೆ.  ಭಗವಂತನ ಲೀಲಾವಿನೋದವನ್ನು ಅವತಾರಗಳೆಂದು ವರ್ಣಿಸುವ ಅನೇಕ ಕೃತಿಗಳು ನಮ್ಮ ದಾಸ ಸಾಹಿತ್ಯದಲ್ಲಿ ದೊರಕುತ್ತವೆ.  ಇಲ್ಲಿ ಶ್ರೀ ಜಗನ್ನಾಥ ದಾಸರು ಭಗವಂತನ ಅಪಾರವಾದ ಕಾರುಣ್ಯವನ್ನು ಗುರುತಿಸುತ್ತಾ ಅವನ ಅವತಾರಗಳನ್ನು ವರ್ಣಿಸುತ್ತಾರೆ.  ಭಗವಂತನ ಲೀಲೆಗಳನ್ನು ವಿವರಿಸುವುದೇ ಅತ್ಯಂತ ಸೊಬಗಿನ ವಿಷಯವಾದರೆ, ದಶಾವತಾರವು ಎಲ್ಲಾ ಸಾತ್ವಿಕರನ್ನೂ, ದಾಸ ಪರಂಪರೆಯನ್ನೂ ಸೂಜಿಗಲ್ಲಿನಂತೆ ಸೆಳೆಯುವ ಅತ್ಯಾಕರ್ಷಕವಾದ ಸಂಗತಿಯಾಗಿದೆ.  ಕ್ಷಣ ಮಾತ್ರದಲ್ಲಿ ಅವತಾರ ಪುರುಷನಾಗಿ ನಾನಾವಿಧ ರೂಪಗಳಲ್ಲಿ ಲೀಲಾಜಾಲವಾಗಿ ಪ್ರಕಟವಾಗಿ, ನಂಬಿದ ಭಕ್ತರನ್ನೂ, ಅವರು ನೆಲೆಸಲು ಅವಶ್ಯಕವಾಗಿ ಬೇಕಾಗಿರುವ ಭೂಮಂಡಲವನ್ನೂ, ಕಾಪಾಡುವ ಅವನ ಪರಿಯು ವರ್ಣನೆಗೆ ನಿಲುಕದ ವಿಶೇಷವಾಗಿದೆ.  ಆದರೂ ಭಗವಂತನನ್ನೂ ಅವನ ಚಿತ್ರವಿಚಿತ್ರ ಲೀಲಾವಿನೋದಗಳನ್ನೂ ತಮ್ಮದೇ ಆದ ಧಾಟಿಯಲ್ಲಿಯೂ ಪದಪುಂಜಗಳ ಗುಚ್ಛದಲ್ಲಿಯೂ ಹಿಡಿದಿಡುವ ಪ್ರಯತ್ನ ಅವಿರತವಾಗಿ ನಡೆಯುತ್ತಲೇ ಇದೆ.

ಶ್ರೀ ಪುರಂದರದಾಸರು ಒಂದು  ಸುಳಾದಿಯಲ್ಲಿ :
ಅಚ್ಯುತಾನಂತಗೋವಿಂದ ಮುಕುಂದ
ವಾಮನ ವಾಸುದೇವ ನಾರಾಯಣ ಹರಿ
ಸಚ್ಚದಾನಂದ ಸ್ವರೂಪ ಗೋಪಾಲ ಪುರುಷೋತ್ತಮ
ಪರಂಧಾಮ ನಾರಾಯಣ
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ
ಭಾರ್ಗವ ರಾಮ ಶ್ರೀಕೃಷ್ಣ ಬೌದ್ಧ ಕಲ್ಕಿ
ಅವತಾರ ಅನಂತಾವತಾರ ನಾರಾಯಣ
ಹರಿ ಅಚುತಾನಂತ ಗೋವಿಂದ
ಅಪಾರ ಮಹಿಮ ಶ್ರೀ ನಾರಾಯಣ ಅಹೋ
ಸರ್ಪಶಯನನೆ ನಾರಾಯಣ
ಶ್ರೀ ಪುರಂದರವಿಠಲ ವಿಭುವೆ ತಿರುವೆಂಗಳಪ್ಪ
ಎನ್ನಪ್ಪ ನೀ ನಾರಾಯಣ || - ಅನಂತಾವತಾರದ ಅಚುತಾನಂತ ನಾರಾಯಣನು ಅಪಾರ ಮಹಿಮನು ಎನ್ನುತ್ತಾ ತಿರುವೆಂಗಳಪ್ಪನು ಎನ್ನಪ್ಪನು ಎಂದು ಸ್ತುತಿಸಿದ್ದಾರೆ.  ಹಾಗೂ ತಮ್ಮ ಮತ್ತೊಂದು "ನೆಲೆಸೆನ್ನ ಹೃದಯ ಮಂದಿರದಿ - ಶ್ರೀ ಹರಿಯೆ ನೀ | ಸಲಿಸೆಮ್ಮ ಮನದಿಷ್ಟ ಅನುದಿನ ದಯದಿ" ಎಂಬ  ಕೃತಿಯಲ್ಲಿ

ನಾರುವಿ ಭಾರವ ಪೊರುವಿ - ಬಲು - |
ಬೇರುಗಳನೆ ಕಿತ್ತು ಮೆಲುವಿ - ಕರಿ - |
ವೈರಿ ರೂಪಗೊಂಡ ಗರುವಿ - ಬ್ರಹ್ಮ - |
ಚಾರಿ ಖಳರ ಕತ್ತರಿಸುವಿ |
ವೀರದಶರಥಸುತ ಸುರಾರ್ಚಿತ |
ಜಾರತನದಲಿ ವ್ರತವ ಕೆಡಿಸುತ |
ತೋರಿ ಮೆರೆವನೆ ತರಳ ಬಲು ಗಂ - |
ಭೀರ ಕುದುರೆಯನೇರಿ ಮೆರೆವನೆ ||  ಎನ್ನುತ್ತಾ ಮಾರ್ಮಿಕವಾಗಿ ನಾರುವಿ - ಮತ್ಸ್ಯ, ಭಾರವ ಪೊರುವಿ - ಕೂರ್ಮ, ಬೇರುಗಳನೆ ಕಿತ್ತು ಮೆಲುವಿ - ವರಾಹ, ವೈರಿ ರೂಪಗೊಂಡ ಗರುವಿ - ನಾರಸಿಂಹ, ಬ್ರಹ್ಮಚಾರಿ - ವಾಮನ ಎಂದು ಅತಿ ಸುಂದರವಾಗಿ ದಶಾವತಾರದ ವರ್ಣನೆಯನ್ನು ಮಾಡಿದ್ದಾರೆ.

ಶ್ರೀ ಜಗನ್ನಾಥ ದಾಸರಾಯರು ತಮ್ಮ "ರಮಾ ಮನೋಹರನೆ ದೀನ - ಪತಿತಪಾವನಾ" ಎಂಬ ಕೃತಿಯಲ್ಲಿ ಒಂದೊಂದೇ ಪದಗಳಿಂದ ಭಗವಂತನ ದಶಾವತಾರಗಳನ್ನು
ಚೆಂದದಿಂದ ವೇದ ತಂದ | ಮಂದರೋದ್ಧಾರಾ ಅರ | ವಿಂದನಯನ ಬಂಧು ರಕ್ಷಿಸೋ | ಇಂದು ಭೂಧರಾ ||
ಕರುಳಮಾಲೆ ಧರಿಸಿದ ಶ್ರೀ | ವರದ ವಾಮನಾ ಧೃತ | ಕರದ ಪರಶುರಾಮ ರಾಘವ | ಯರು ಕುಲೋತ್ತಮಾ ||
ಲೋಕ ಮೋಹಕ ಬುದ್ಧನಾಗಿ | ತೇಜಿಯೇರಿದಾ ಜಗ | ದೇಕ ಜಗನ್ನಾಥ ವಿಠಲ | ಭೀಕರಾಂತಿಕಾ || - ಎಂದು ಅತ್ಯಂತ ಸರಳವಾಗಿ ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ "ಹೆಜ್ಜೆ ನೋಡೋಣ ಬಾರೆ" ಎಂಬ ಕೃತಿಯಲ್ಲಿ | ಮಚ್ಛನಾಗಿ ವೇದವ ತಂದವನಂತೆ ಕೂರ್ಮನಾಗಿ ಭೂಧರ ಪೊತ್ತವನಂತೆ ವರಹ ನರಹರಿಯಾಗಿ ದುರುಳರ ಸೀಳಿದ ಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ ||
ಮಾತೃದ್ರೋಹ ಮಾಡಿದ ಪರಶುರಾಮನ | ಪಿತೃವಾಕ್ಯವ ನಡೆಸಿದ ಶ್ರೀರಾಮನ | ಕೃಷ್ಣಾವತಾರನ ಬೌದ್ಧಸ್ವರೂಪನ | ಹಯವನೇರಿದ ಕಲ್ಕಿ ಹಯವದನನ್ನ || ಎನ್ನುತ್ತಾ  ದಶಾವತಾರವನ್ನು ವರ್ಣಿಸಿದ್ದಾರೆ.  ಇಷ್ಟೆಲ್ಲಾ ಲೀಲಾವಿನೋದಗಳನ್ನು ಮಾಡಿದ,  ಸಮಸ್ತ ಲೋಕಗಳನ್ನೂ ಭೇದಿಸಿದ ಭಗವಂತನ ಹೆಜ್ಜೆಯನ್ನು "ಪುಟ್ಟ ಹೆಜ್ಜೆ" ಎಂದು ಆಪ್ಯಾಯಮಾನವಾಗಿ,  ಮಮತೆಯ ಸೆಲೆ ಉಕ್ಕುವಂತೆ ವರ್ಣಿಸಿ  ಹಾಡಿದ್ದಾರೆ.  ತಮ್ಮ ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಎಂಬ ಕೃತಿಯಲ್ಲಿ | ಮತ್ಸ್ಯ ಕೂರ್ಮರೂಪ ಸೂಕರ ನರಹರಿ ಕಾಯ | ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣ ಸುವ್ವಿ | ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣನಾದ | ಬೌದ್ಧ ಕಲ್ಕಿ ರೂಪ ಪ್ರಸಿದ್ಧವಂತೆ ಸುವ್ವಿ || ಎಂದಿದ್ದಾರೆ.




ಚಿತ್ರಕೃಪೆ : ಅಂತರ್ಜಾಲ

Wednesday, February 11, 2015

ಕರುಣಾ ಸಂಧಿ - ೨೯ ನೇ ಪದ್ಯ



ಖೇದ ಮೋದ ಜಯಾಪಜಯ ಮೊದ
ಲಾದ ದೋಷಗಳಿಲ್ಲ ಚಿನ್ಮಯ
ಸಾದರದಿ ತನ್ನಂಘ್ರಿಕಮಲವ ನಂಬಿ ತುತಿಸುವರ |
ಕಾದುಕೊಂಡಿಹ ಪರಮಕರುಣಮ-
ಹೋದಧಿಯು ತನ್ನವರು ಮಾಡ್ದಪ-
ರಾಧಗಳ ನೋಡದೆಲೆ ಸಲಹುವ ಸರ್ವಕಾಮದನು || ೨೯ ||


ಪ್ರತಿಪದಾರ್ಥ : ಖೇದ - ದುಃಖ, ಮೋದ - ಸಂತೋಷ, ಜಯ - ಗೆಲುವು, ಅಪಜಯ - ಸೋಲು, ಮೊದಲಾದ ದೋಷಗಳಿಲ್ಲ - ಮುಂತಾದ ಯಾವುದೇ ತರಹದ ದೋಷಗಳೂ ಇಲ್ಲದಿರುವುದು, ಸಾದರದಿ - ಭಕ್ತಿಯಿಂದ, ತನ್ನಂಘ್ರಿಕಮಲವ - ತನ್ನ ಪಾದ ಕಮಲಗಳನ್ನು, ನಂಬಿ ತುತಿಸುವರ - ನಂಬಿಕೆಯಿಂದ ಸ್ತುತಿಸುವವರನ್ನು, ಕಾದುಕೊಂಡಿಹ - ಕಾಯುತ್ತಿರುವನು ಅಥವಾ ಸದಾ ಸಂರಕ್ಷಿಸುತ್ತಿರುವನು, ಪರಮ ಕರುಣಮಹೋದದಿಯು - ಅತ್ಯಂತ ಕರುಣಾಸಾಗರನಾಗಿರುವವನು, ತನ್ನವರು - ತನ್ನ ಭಕ್ತರು, ಮಾಡ್ದಪರಾಧಗಳ - ಮಾಡಿದ ಎಲ್ಲಾ ತಪ್ಪುಗಳನ್ನೂ, ನೋಡದಲೆ ಸಲಹುವ - ತಪ್ಪೆಂದು ತಿಳಿಯದೆ ರಕ್ಷಿಸುವನು, ಸರ್ವಕಾಮದನು - ಸರ್ವರಿಗೂ ಸರ್ವ ಅಭೀಷ್ಟಗಳನ್ನೂ ಪೂರೈಸುವವನು.

ನಿತ್ಯನರಕನಿವಾಸಿಗಳಾಗಿ, ಅ೦ಧ:ತಮಸ್ಸಿನಲ್ಲಿ ಲಿ೦ಗಭ೦ಗರಾಗಿ ಬಹುವಾಗಿ ದು:ಖವನ್ನು ಅನುಭವಿಸುವ ಕಲಿಯಾದಿ ದೈತ್ಯರಿಗೂ, ಸಚ್ಚಿದಾನ೦ದರೂಪಿ ಪರಮಾತ್ಮನೇ ಬಿ೦ಬಸ್ವರೂಪಿಯಾದರೂ ಕೂಡ, ಖೇದ ದು:ಖಗಳು ಎ೦ದಿಗೂ ಭಗವ೦ತನಿಗೆ ಇಲ್ಲ. ಹಾಗೆಯೇ ಬ್ರಹ್ಮಾದಿಗಳಿಗೆ ಬಿ೦ಬನಾದ ಹರಿಗೆ, ನಿತ್ಯಸುಖ ಲೋಕವಾದ ವೈಕು೦ಠದಲ್ಲಿ ಆನ೦ದಾತಿಶಯದಿ೦ದ  ಅನುಭವಿಸುವ ಸ೦ತೋಷವೂ ಕೂಡ ಉ೦ಟಾಗುವುದಿಲ್ಲ. ಜಗತ್ತಿನ ಸಕಲ ವ್ಯಾಪಾರಗಳ ಬಿ೦ಬರೂಪಿಯಾಗಿದ್ದರೂ, ಭಗವ೦ತನಿಗೆ ತಾನು ಜಯಶೀಲನಾಗುವ ಅಥವಾ ಅನ್ಯರಿ೦ದ ಅಪಜಯವಾಗುವ, ಜೀವನಿಷ್ಟವಾದ ಈ ದೋಷಗಳೂ ಇರುವುದಿಲ್ಲ. ತನ್ನ ಪಾದ ಕಮಲಗಳನ್ನು ಸದಾ ಸೇವಿಸುತ್ತಾ ಸರ್ವೋತ್ತಮನಾದವನು ಇವನೇ ಎ೦ದು ಧೃಢವಾಗಿ ನ೦ಬಿ ಸ್ತೋತ್ರಮಾಡುವ ಭಕ್ತರ ಸಮೀಪದಲ್ಲಿ ನಿತ್ಯವಾಸಿಯಾಗಿ ಭಗವ೦ತನು ಕಾದುಕೊ೦ಡಿರುತ್ತಾನೆ. ಇ೦ತಹ ಪರಮ ಕರುಣಾಸಮುದ್ರನಾದ ಭಗವ೦ತನು, ಪೂರ್ವೋಕ್ತಪ್ರಕಾರ ಚಿ೦ತಿಸುವ ಭಕ್ತರಿ೦ದ ಸ೦ಭವಿಸಬಹುದಾದ ದೋಷಗಳನ್ನು ಎಣಿಸದೆ, ಸ೦ರಕ್ಷಣೆ ಮಾಡುವುದರ ಜೊತೆಗೆ ಬೇಡಿದ೦ತಹಾ ಇಷ್ಟಾರ್ಥಗಳನ್ನು ಕೂಡಾ ಯೋಗ್ಯತಾನುಸಾರ ಅನುಗ್ರಹಿಸುತ್ತಾನೆ ಎ೦ದು ದಾಸರಾಯರು ತಿಳಿಸುತ್ತಾರೆ.

ಖೇದ ಮೋದ ಜಯಾಪಜಯ ಮೊದಲಾದ ದೋಷಗಳಿಲ್ಲ -  ಖೇದವೆಂದರೆ ದುಃಖ ಮತ್ತು ಮೋದವೆಂದರೆ ಸುಖ ಎಂಬರ್ಥವನ್ನು ತೆಗೆದುಕೊಂಡಾಗ, ಸುಖ-ದುಃಖಗಳು ಎಂದಿಗೂ ಒಟ್ಟಿಗೆ ಬರುವುದಿಲ್ಲವೆಂಬುದು ತಿಳಿಯುತ್ತದೆ.  ಅತಿಯಾದ ಸುಖ ಬಂದಾಗ ಅದರ ಹಿಂದೆಯೇ ದುಃಖವು ಖಂಡಿತಾ ಬರುತ್ತದೆ.  ಅದೇರೀತಿ ದುಃಖದ ನಂತರ ಕೂಡ ಸುಖವು ಬಂದೇ ಬರುತ್ತದೆ.  ಮೊದಲು ಸುಖವನ್ನು ಅನುಭವಿಸಿದರೆ, ದುಃಖ ಬಂದಾಗ ಅದರ ಪ್ರಮಾಣ ಹೆಚ್ಚಾಗಿರುತ್ತದೆ.  ಹಾಗೇ ದುಃಖದ ನಂತರ ಸುಖವು ಬಂದಾಗ, ದುಃಖದಿಂದ ಅನುಭವಿಸಿದ ಸಂಕಟಗಳೆಲ್ಲಾ ಮರೆತು ಹೋಗುತ್ತದೆ.  ಸುಖದ ನಂತರ ಬರುವ ದುಃಖವು ಹೆಚ್ಚು ನೋವು ಕೊಡುವುದರಿಂದ ಸುಖವೂ ಕೂಡ ದೋಷವೆಂದೇ ತೋರುತ್ತದೆ.  ಆದರೆ ಭಗವಂತನಿಗೆ ಇವು ಯಾವುದೂ ಇಲ್ಲ, ಅವನು ನಿತ್ಯಾನಂದನೂ, ನಿತ್ಯಸುಖಿಯೂ ಆಗಿರುವನು.  ’ಮೋದ’ವೆಂದರೇ ಸುಖವೆಂಬ ಅರ್ಥವಾಗುವುದಿಲ್ಲ.  ಮೋದವೆಂಬುದು ಸುಖದ ಒಂದು ಮಜಲು ಅಷ್ಟೇ.  ಸುಖಕ್ಕೆ ಮೋದ, ಪ್ರಮೋದ ಮತ್ತು ಆನಂದವೆಂಬ ಮೂರು ಮಜಲುಗಳಿವೆ.  ಒಂದು ವಸ್ತುವನ್ನು ಕಂಡಾಗ ಆಗುವ ಖುಷಿಯೇ ಮೋದವು.  ಆ ವಸ್ತುವನ್ನು ಕಂಡದ್ದಕ್ಕಿಂತಲೂ, ಪಡೆದಾಗ ಆಗುವುದು ಪ್ರಮೋದವು.  ವಸ್ತುವು ನಿರೀಕ್ಷಣೆಗಿಂತ ಹೆಚ್ಚಾಗಿ ಸಿಕ್ಕಾಗ ಆಗುವ ಅತಿಯಾದ ಆನಂದವು ಪ್ರಮೋದವಾಗುವುದು.   ಭಗವಂತನಿಗೆ ಯಾವ ನಿರೀಕ್ಷಣೆಯೂ ಇಲ್ಲ, ಏನು ಕಂಡರೂ, ಏನು ಸಿಕ್ಕರೂ ಅವನಲ್ಲಿ ಯಾವ ಬದಲಾವಣೆಯೂ ಆಗದೇ ಇರುವುದರಿಂದಲೇ ಅವನು ನಿತ್ಯಾನಂದನು.  ಜೀವಿಗಳಿಗೆ ಖೇದ ಮೋದಗಳಾಗಲು ಯಾವುದಾದರೂ ವಿಷಯ ಅಥವಾ ಘಟನೆ ಕಾರಣವಾಗುತ್ತದೆ.  ಆದರೆ ಸ್ವತಃ ಆನಂದ ಸ್ವರೂಪನೇ ಆಗಿರುವ ಭಗವಂತನಿಗೆ, ಕಾರಣೀಭೂತವಾಗಿ ಬರುವ ಖೇದ ಮೋದಗಳು ಇರುವುದಿಲ್ಲ.  ಅವನಿಗೆ ಸುಖವೂ ಇಲ್ಲ, ದುಃಖವೂ ಇಲ್ಲ, ಮೋದವೂ ಇಲ್ಲ, ಪ್ರಮೋದವೂ ಇಲ್ಲ.  ಎಲ್ಲವೂ ಅವನೇ

ತೈತ್ತಿರೀಯೋಪನಿಷತ್ತಿನಲ್ಲಿ "ತಸ್ಯ ಪ್ರಿಯಮೇವ ಶಿರಃ | ಮೋದೋ ದಕ್ಷಿಣಃ ಪಕ್ಷಃ | ಪ್ರಮೋದ ಉತ್ತರಃ ಪಕ್ಷಃ | ಆನಂದ ಆತ್ಮಾ | ಬ್ರಹ್ಮ ಪುಚ್ಛಂ ಪ್ರತಿಷ್ಠಾ" ಎಂಬ ಉಲ್ಲೇಖವಿದೆ.  ಇದನ್ನು ಶ್ರೀಮದಾಚಾರ್ಯರು ತಮ್ಮ ಭಾಷ್ಯದಲ್ಲಿ "ಶಿರಃ ಪ್ರಿಯೇ ಸ್ಥಿತಂ ತಸ್ಯ ಪರೇಯಂ ಪ್ರಿಯನಾಮಕಮ್ | ಮೋದಪ್ರಮೋದಯೋರ್ಬಾಹೂ ಮೋದನಾಚ್ಚ ಪ್ರಮೋದನಾತ್" - ಆನಂದಸ್ವರೂಪನಾದ ನಾರಾಯಣನ ಶಿರಸ್ಸು ಮುಕ್ತರಿಂದ ಹೊಂದಲ್ಪಡುವುದರಿಂದ ಪ್ರಿಯವೆಂದು ಕರೆಯಲ್ಪಡುತ್ತದೆ.  ಭಗವಂತನು ಸ್ವರೂಪಭೂತವಾಗಿ ಅಪ್ರಕೃಷ್ಟ ಮತ್ತು ಪ್ರಕೃಷ್ಟ (ಉತ್ಕೃಷ್ಟ) ವಿಷಯ ಜನ್ಯ ಆನಂದಗಳಾದ ಮೋದ ಮತ್ತು ಪ್ರಮೋದಗಳನ್ನು ಉಳ್ಳವನಾದ್ದರಿಂದ ಅವನ ಬಾಹುಗಳು ಮೋದ-ಪ್ರಮೋದವೆಂಬ ಹೆಸರುಗಳನ್ನು ಪಡೆದಿವೆ ಎಂದು ವಿವರಿಸಿದ್ದಾರೆ.  ಹೀಗೆ ಸ್ವರೂಪದಲ್ಲೇ ಮೋದ-ಪ್ರಮೋದಗಳನ್ನು ಹೊಂದಿರುವ ಭಗವಂತನಿಗೆ ಹೊಸದಾಗಿ ಯಾವ ಖೇದ ಮೋದಗಳೂ ಅನ್ವಯಿಸುವುದಿಲ್ಲ. 

ಜಯಾಪಜಯಗಳೂ ಕೂಡ ಭಗವಂತನಿಗೆ ಇಲ್ಲ.  ಭಗವಂತನು ’ಜಯಂತ’ನು, ನಿರಂತರವಾಗಿ ಜಯವನ್ನೇ ಸ್ವಭಾವತಃ ಪಡೆದಿರುವವನು, ಜಯಾಪಜಯಗಳಿಗೆ ಒಡೆಯನಾದವನು.  ಅವನಿಗೆ ಈ ಲೌಕಿಕದ ಜಯಾಪಜಯಗಳ ಗೊಡವೆಯಿಲ್ಲ.  ಯಾವ ದೋಷಗಳೂ ಇಲ್ಲದ ನಿರ್ದೋಷನು.  ಭಗವದ್ಗೀತೆಯ ೫ನೆಯ ಅಧ್ಯಾಯದ ೧೯ನೆಯ ಶ್ಲೋಕದಲ್ಲಿ "ನಿರ್ದೋಷಂ ಹಿ ಸಮಂ ಬ್ರಹ್ಮ" - ಸಚ್ಚಿದಾನಂದಘನ ಪರಮಾತ್ಮನು ನಿರ್ದೋಷನೂ, ಸಮನೂ ಆಗಿದ್ದಾನೆ ಎಂಬ ಉಲ್ಲೇಖವಿದೆ.  "ನ ಪ್ರಹೃಷ್ಯೇತ್ಪ್ರಿಯಂ ಪ್ರಾಪ್ಯ ನೋದ್ವಿಜೇತ್ಪ್ರಾಪ್ಯ ಚಾಪ್ರಿಯಮ್ | ಸ್ಥಿರಬುದ್ಧಿರಸಂ ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ" - ಪ್ರಿಯ ವಸ್ತು ದೊರಕಿದಾಗ ಹರ್ಷಿತನಾಗದ, ಅಪ್ರಿಯ ವಸ್ತು ಪ್ರಾಪ್ತವಾದಾಗ ಉದ್ವಿಗ್ನನಾಗದ, ಸ್ಥಿರಬುದ್ಧಿಯುಳ್ಳ ಸಂಶಯರಹಿತ ಬ್ರಹ್ಮವೇತ್ತನಾದ ಪುರುಷನು ಸಚ್ಚಿದಾನಂದಘನ ಪರಬ್ರಹ್ಮ ಪರಮಾತ್ಮನನ್ನು ಪಡೆಯುತ್ತಾನೆ ಎಂದು ತಿಳಿಸಿದೆ.  ಸ್ಥಿರಬುದ್ದಿಯನ್ನು ಸಾಧಿಸಿದ ಜೀವಿಗೆ ಪರಮಾತ್ಮ ದೊರೆಯುತ್ತಾನೆಂದರೆ, ಪರಮಾತ್ಮನು ಯಾವ ದೋಷಗಳೂ ಇಲ್ಲದ, ಪರಮ ಸದ್ಗುಣಗಳ ಆಗರನಾದವನು ಎಂಬುದು ತಿಳಿಯುತ್ತದೆ.

ಲೌಕಿಕ ಪ್ರಪಂಚದಲ್ಲಿ ನಾವು ಏನನ್ನಾದರೂ ಗೆದ್ದಾಗ, ಜಯ ಲಭಿಸಿದಾಗ, ಹೊರಗಿನಿಂದ ಬಂದ ಈ ಗೆಲುವು ನಮಗೆ ನಮ್ಮೊಳಗಿನ ಆತ್ಮಕ್ಕೆ ಸೋಲು ತರಬಹುದು.  ಏಕೆಂದರೆ ಗೆಲುವಿನ ಜೊತೆಗೇ ’ನಾನು ಗೆದ್ದೆ’ ಎಂಬ ಅಹಂಕಾರವೂ ಬರುತ್ತದೆ ಮತ್ತು ಇದು ಒಳಗಿನ ಸೋಲಿಗೆ ಕಾರಣವಾಗುತ್ತದೆ.  ಜೀವಿಯು ಹೊರಗಿನಿಂದಾಗಲೀ, ಒಳಗಿನಿಂದಾಗಲೀ ಏನನ್ನಾದರೂ ಗೆದ್ದರೂ, ಪಡೆದುಕೊಂಡರೂ ಅದು ಜೀವಿಗೆ ಮಾತ್ರವೇ ಸೀಮಿತವಾಗುತ್ತದೆ.  ಜೀವಿಯು ಮಾತ್ರವೇ ಸುಖ-ದುಃಖಗಳನ್ನು ಅನುಭವಿಸುತ್ತಾನೆ.  ಹಾಗಾದರೆ ಜೀವಿಯ ಒಳಗೇ ಜೀವಿಯ ಜೊತೆಗೇ ಇರುವ ಭಗವಂತನಿಗೆ ಏಕೆ ಇದು ಅನ್ವಯಿಸುವುದಿಲ್ಲವೆಂಬುದು ಪ್ರಶ್ನೆಯಾದಾಗ, ಭಗವಂತನು ’ವಿಶಿಷ್ಟನು’, ಆದ್ದರಿಂದ ಭಗವಂತನಿಗೆ ಯಾವುದರ ಲೇಪನವೂ ಆಗುವುದಿಲ್ಲ ಎನ್ನುತ್ತದೆ ಉಪನಿಷತ್ತುಗಳು.  ಇದನ್ನು ಒಂದು ದೃಷ್ಟಾಂತದ ಮೂಲಕ ವಿವರಿಸಬಹುದಾಗಿದೆ - ಒಂದು ಮನೆಗೆ ಬೆಂಕಿ ಹತ್ತಿಕೊಂಡಾಗ, ಅದರಲ್ಲಿರುವ ಸಮಸ್ತ ವಸ್ತುಗಳೂ, ಗೋಡೆಗಳೂ ಸಹ ಸುಟ್ಟು ಕರಕಲಾಗಿ ಹೋಗುತ್ತದೆ.  ಆದರೆ ಅದೇ ಮನೆಯಲ್ಲಿ ಇರುವ ಗಾಳಿಯೂ, ಆಕಾಶವೂ ಮಾತ್ರ ಸುಡುವುದಿಲ್ಲ.  ಏಕೆಂದರೆ ಗಾಳಿ, ಆಕಾಶಗಳು ಆ ಮನೆಯಲ್ಲಿದ್ದ ಇತರ ಎಲ್ಲಾ ವಸ್ತುಗಳಿಗಿಂತಲೂ ವಿಶಿಷ್ಟವಾದವುಗಳು.  ಹಾಗೇ ಭಗವಂತನು ಜೀವಿಯ ಒಳಗೇ ಇದ್ದರೂ ಅವನು ವಿಶಿಷ್ಟನಾದ್ದರಿಂದ ಅವನಿಗೆ ಖೇದ-ಮೋದ, ಜಯಾಪಜಯಗಳು ಅನ್ವಯಿಸುವುದಿಲ್ಲ. (ಶ್ರೀ ಬನ್ನಂಜೆಯವರ ಪ್ರವಚನ ಆಧಾರಿತ).

ಭಗವಂತನು ದೋಷರಹಿತನು, ಆನಂದಾತ್ಮಕನು ಎಂಬುದನ್ನು ಶ್ರೀ ವಿಜಯದಾಸರು ತಮ್ಮ ಕೃತಿಯಲ್ಲಿ
ಅನಂತ ಕಲ್ಯಾಣ ಗುಣಪರಿಪೂರ್ಣ ನಿತ್ಯನಿರ್ದೋಷಾ
ಜ್ಞಾನಾನಂದಾತ್ಮಕ ವಿಷ್ಣುರ್ಮೇಸ್ವಾಮಿ ತ್ರಿಲೋಕಕರ್ತಾ
ನೀನೆ ಸ್ವಾತಂತ್ರ ಬೊಮ್ಮಾದಿಗಳು ನಿನ್ನ ದಾಸಾನುದಾಸರು
ಅನಂತ ಅನಂತ ಕಾಲದಲ್ಲಿ ನಿಜವೆಂದು ಪೇಳುತ್ತ
ಮಾನುಷೋತ್ತಮ ಹೀಗೆ ಬಲುಕಾಲವರ್ಚಿಸಲು
ಮನದೊಳಗೆ ವಿಜಯ ವಿಠ್ಠಲನು ಕೃಪೆಯಿಂದ ಧ್ಯಾನಕೆ ಪೊಳೆವ || ಎಂದು ಸುಂದರವಾಗಿ ತಿಳಿಸಿದ್ದಾರೆ.

ಚಿನ್ಮಯ - ಭಗವಂತನು ’ಮೋದ ಚಿನ್ಮಯ ಗಾತ್ರ ಲೋಕ ಪವಿತ್ರ ಸುಚರಿತ್ರ’ ನಾದವನು ಎಂದು ಮಂಗಳಾಚರಣ ಸಂಧಿಯಲ್ಲಿಯೇ ದಾಸರಾಯರು ನುಡಿದಿದ್ದಾರೆ.  ಶ್ರೀಹರಿಯು ಚಿನ್ಮಯನು.  ಪಾಂಚಭೌತಿಕ ಶರೀರವಿಲ್ಲದವನು.  ಅಪರೋಕ್ಷ ಜ್ಞಾನಿಗಳಿಗೂ ಖೇದ-ಮೋದಗಳಿಲ್ಲವೆಂದು ಭಗವಂತನೇ ಗೀತೆಯಲ್ಲಿ ತಿಳಿಸಿದ್ದಾನೆ.  ಸ್ವಾಭಾವಿಕವಾಗಿಯೇ ಕರುಣೆಯುಳ್ಳವರು ಜ್ಞಾನಿಗಳಾಗಲು ಸಾಧ್ಯವಾಗುತ್ತದೆ.  ಬ್ರಹ್ಮಾದಿ ದೇವತೆಗಳೆಲ್ಲರೂ ಜ್ಞಾನಿಗಳೇ ಆಗಿದ್ದರೂ ಅವರು ಚಿನ್ಮಯರಲ್ಲ.  ಅವರಿಗೂ ಪ್ರಾಕೃತ ಶರೀರಗಳೂ, ಅಂತಃಕರಣಗಳೂ ಇವೆ ಮತ್ತು ಪ್ರಾರಬ್ಧ ಕರ್ಮವೂ ಕೂಡ ಇರುವುದರಿಂದಲೇ ಹಲವು ಬಾರಿ ಅವರು ಯೋಗ್ಯರಲ್ಲದವರಿಗೆ ಕರುಣೆ ತೋರಿಸಿ, ಕಷ್ಟಕ್ಕೆ ಸಿಲುಕುತ್ತಾರೆ.  ಇದಕ್ಕೆ ದೃಷ್ಟಾಂತವೆಂದರೆ ಈಶ್ವರನು ವೃಕಾಸುರನಂಥ ಅಸುರನಿಗೆ ಕರುಣೆಯಿಂದ ವರಕೊಟ್ಟದ್ದು.  ವರ ಪಡೆದ ಅಸುರ ಶಿವನ ತಲೆಯ ಮೇಲೆಯೇ ಕೈಯಿಡಲು ಬಂದಿದ್ದ.  ಹಾಗೇ ದುರ್ವಾಸ ಮುನಿಗಳು ಅಂಬರೀಷನಲ್ಲಿ ಸಿಟ್ಟುಗೊಂಡಿದ್ದು.  ಯಾರಿಂದಲೂ ರಕ್ಷಣೆ ಸಿಕ್ಕದೆ ಕೊನೆಗೆ ರಾಜನಿಗೇ ಶರಣಾಗಿದ್ದು, ಮುನಿಗಳ ಪ್ರಾರಬ್ಧಕರ್ಮವೇ ಆಗಿದೆ.  ಚಿನ್ಮಯನಾದ ಭಗವಂತನು ತನ್ನ ಸಜ್ಜನ ಭಕ್ತರಿಗೆ ಅವರವರ ಯೋಗ್ಯತೆಗನುಸಾರವಾಗಿಯೂ, ಅವರ ಸಾಧನೆಗನುಗುಣವಾಗಿಯೂ ತನ್ನ ಸ್ವಾಭಾವಿಕ ಕರುಣೆಯನ್ನು ಹರಿಸುತ್ತಾನೆ.

ಸಾದರದಿ ತನ್ನಂಘ್ರಿ ಕಮಲವ ನಂಬಿ ತುತಿಸುವರ ಕಾದುಕೊಂಡಿಹ -  ಭಗವಂತನ ಕರುಣೆಯಿಂದ ಸಮಸ್ತ ಸುಖಗಳನ್ನೂ ಪಡೆದಿರುವ ಭಕ್ತನ ಹೃತ್ಕಮಲದಲ್ಲಿಯೇ ನೆಲೆಸಿ ಭಗವಂತನು ಭಕ್ತನನ್ನು ಸದಾ ರಕ್ಷಿಸುತ್ತಿರುವನು.  ಸಮಸ್ತವೂ ಭಗವಂತನ ಸೃಷ್ಟಿಯೇ ಆಗಿದೆ, ಎಲ್ಲ ಚರಾಚರ ವಸ್ತುಗಳಲ್ಲೂ ಭಗವಂತನ ಸನ್ನಿಧಾನವಿದ್ದೇ ಇದೆ.  ಇದನ್ನು ತಿಳಿದು ಯಾವ ಭಕ್ತನು ಭಗವಂತನನ್ನು ಸದಾ ಸ್ಮರಿಸುತ್ತಾ, ಅವನಿಂದಲೇ ಪಡೆದದ್ದೆಲ್ಲವನ್ನೂ ಅವನಿಗೇ ಸಮರ್ಪಿಸುವನೋ, ಅಂತಹ ಭಕ್ತನೆಡೆಗೆ ಭಗವಂತನ ಕರುಣೆಯು ಸಾಗರದೋಪಾದಿಯಲ್ಲಿ ಹರಿಯುತ್ತಿರುತ್ತದೆ.  ದಾಸರಾಯರು ತಮ್ಮ "ತತ್ವಸುವ್ವಾಲಿ"ಯಲ್ಲಿ
ಖಂ ವಾಯು ಮಗ್ನಿಂ ಸಲಿಲಂ ಮಹೀಂ ಚ | ಜ್ಯೋತೀಂಷಿ ಸತ್ತ್ವಾನಿ ದಿಶೋ ದೃಮಾದೀನ್ | ಸರಿತ್ ಸಮುದ್ರಾಂಶ್ಚ ಹರೇಃ ಶರೀರಂ | ಯತ್ಕಿಂಚ ಭೂತಂ ಪ್ರಣಮೆದನನ್ಯಮ್ || - ಗಗನ, ಗಾಳಿ, ಅಗ್ನಿ, ನೀರು, ಭೂಮಿ, ನಕ್ಷತ್ರಗಳು, ದಿಕ್ಕುಗಳು, ಗಿಡಬಳ್ಳಿಗಳು, ಸರೋವರದಿಂದ ಸಮುದ್ರದವರೆಗೆ ಒಟ್ಟಾರೆ ವಿಶ್ವದಲ್ಲಿ ಏನೇನು ಅಸ್ತಿತ್ವವನ್ನು ಪಡೆದಿದೆಯೋ ಅದೆಲ್ಲವೂ ಹರಿಯ ಶರೀರ, ಹರಿಯ ಪ್ರತಿಮೆಗಳು. 
ಅದೆಲ್ಲದಕ್ಕೂ ವಂದಿಸಬೇಕು ಎನ್ನುತ್ತಾ ಪರಮಾತ್ಮನ ವ್ಯಾಪ್ತಿಯ ಆಳವನ್ನು ತಿಳಿಸುತ್ತಾ ಪ್ರತಿ ವಸ್ತುವಿನಲ್ಲೂ ಭಗವಂತನ ಸಾನಿಧ್ಯವನ್ನು ಧ್ಯಾನಿಸುತ್ತಾ ಶರಣಾಗಬೇಕೆಂಬ ಉನ್ನತ ಭಾವವನ್ನು ಹೇಳಿದ್ದಾರೆ. ಆರಾಧಿಸಬೇಕು. 

ಮೂರುವಿಧ ಗುಣಗಳ ಜೀವರಾಶಿಗಳಲ್ಲಿ, ಸಾತ್ವಿಕ ಸ್ವಭಾವದ ಜೀವಿಗಳು ಸದಾ ಭಗವಂತನನ್ನು ಸ್ತುತಿಸುತ್ತಾ, ಸಂಪೂರ್ಣವಾಗಿ ನಂಬಿಕೆಯಿಂದ ಶರಣಾಗುವವರಾಗುತ್ತಾರೆ.  ಇಂತಹ ಸಾತ್ವಿಕರಲ್ಲಿ ಭಗವಂತನಿಗೆ ಸ್ವಾಭಾವಿಕವಾಗಿಯೇ ಕರುಣೆಯಿರುವುದರಿಂದ, ಅವರನ್ನು ಸದಾ ರಕ್ಷಿಸುತ್ತಾನೆ.  ಶ್ರೀಕೃಷ್ಣನು ಭಗವದ್ಗೀತೆಯ ೯ನೆಯ ಅಧ್ಯಾಯದ ೨೨ನೆಯ ಶ್ಲೋಕದಲ್ಲಿ
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ | ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || - ಅನನ್ಯ ಪ್ರೇಮೀ ಭಕ್ತರು ಪರಮೇಶ್ವರನಾದ ನನ್ನನ್ನು ನಿರಂತರ ಚಿಂತಿಸುತ್ತಾ ನಿಷ್ಕಾಮ ಭಾವದಿಂದ ಭಜಿಸುತ್ತಾರೆ.  ಹೀಗೆ ನಿತ್ಯ ನಿರಂತರ ಚಿಂತಿಸುವ ಮನುಷ್ಯರ ಯೋಗಕ್ಷೇಮವನ್ನು ನಾನೇ ಸ್ವತಃ ವಹಿಸಿಕೊಳ್ಳುವೆನು ಎಂದಿದ್ದಾನೆ. 
ದಿನದಿನವೂ, ಕ್ಷಣ ಕ್ಷಣವೂ ಭಕ್ತರು "ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ | ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷೋ ಜಗತ್ಪತೇ" ಎಂದು ಯಾರು ಸಂಪೂರ್ಣ ಶರಣಾಗತರಾಗಿ, ಭಗವಂತನನ್ನು ನಂಬುತ್ತಾರೋ, ಅವರನ್ನು ಭಗವಂತನು ಎಂದಿಗೂ ಕೈಬಿಡದೆ ಬಹಳ ಆದರದಿಂದ, ಅಕ್ಕರೆಯಿಂದ, ಕಾರುಣ್ಯದಿಂದ, ತಂದೆ-ತಾಯಿಗಳಂತೆ, ಶರಣಜನ ಮಂದಾರನಂತೆ,  ಆಕಾಶದವೋಲ್ ಎತ್ತ ನೋಡಿದರೂ ಇದ್ದು ರಕ್ಷಿಸುತ್ತಾನೆ. 

ತನ್ನನ್ನು ಭಕ್ತರು ಸ್ತುತಿಸಬೇಕೆಂಬ ಬಯಕೆ ಭಗವಂತನಿಗೇನೂ ಇಲ್ಲ.  ಸಾತ್ವಿಕ ಭಕ್ತರು ತಮ್ಮ ಸ್ವಭಾವದಂತೆ ಭಗವಂತನನ್ನು ಸದಾ ಸ್ತುತಿಸುತ್ತಲೇ ಇರುತ್ತಾರೆ.  ಆದರೆ ಸಾತ್ವಿಕರ ಈ ಸ್ವಭಾವವು ಅವರ ಅಂತರಂಗದಲ್ಲಿ ಹುದುಗಿರುವ ವಿಷಯವಾಗಿದೆ.  ಅದು ಪ್ರಕಟವಾಗಬೇಕು, ವ್ಯಕ್ತವಾಗಬೇಕೆಂದರೆ, ಸಾತ್ವಿಕರೂ, ಜ್ಞಾನಿಗಳೂ ಆದ ಭಕ್ತರು ಭಗವಂತನನ್ನು ಸ್ತುತಿಸಬೇಕಾಗುತ್ತದೆ.  ಹೀಗೆ ಅವರ ಈ ಸಾತ್ವಿಕ ಸ್ವಭಾವವು ಹೆಚ್ಚು ಹೆಚ್ಚು ವ್ಯಕ್ತವಾದಂತೆಲ್ಲಾ, ಭಗವಂತನ ಕರುಣಾರಸವೂ ಸಾಗರದಂತೆ ಹೆಚ್ಚು ಹೆಚ್ಚು ಹರಿಯುತ್ತದೆ.  ಹೇಗೆ ಸಾಗರದ ಹನಿಗಳನ್ನು ಲೆಕ್ಕ ಮಾಡಲಾಗುವುದಿಲ್ಲವೋ, ಹಾಗೆ ಭಗವಂತನ ಕಾರುಣ್ಯದ ಕಡಲಿನ ಉದ್ದ, ಅಗಲ, ಆಳವನ್ನು ಅಳೆಯಲಾಗುವುದಿಲ್ಲ.  ತನ್ನ ಭಕ್ತರ ಶುದ್ಧ ಗುಣವಾದ ಸಾತ್ವಿಕ ಭಾವವು ವ್ಯಕ್ತವಾಗಲೆಂದೇ ಭಗವಂತನನ್ನು ತನ್ನ ಸ್ತುತಿಯನ್ನು ಬಯಸುತ್ತಾನೆಯೇ ಹೊರತು, ಯಾರು ಸ್ತುತಿಸಿದರೂ, ಸ್ತುತಿಸದಿದ್ದರೂ ಅದರಿಂದ ಭಗವಂತನಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ.

 ಶ್ರೀ ಶಂಕರಾಚಾರ್ಯರು ತಮ್ಮ "ಜಗನ್ನಾಥಾಷ್ಟಕ ಸ್ತೋತ್ರಮ್" ನಲ್ಲಿ  "ಅಹೋ ದೀನಾನಾಥಂ ನಿಹಿತಮಚಲಂ ಪಾತುಮನಿಶಂ" - ದೀನ, ಅನಾಥನಾದ, ನಿನ್ನ ಸನ್ನಿಧಿಯಲ್ಲಿರುವ ಜಡವಾದ ನನ್ನನ್ನು ಸದಾ ರಕ್ಷಿಸು ಎನ್ನುತ್ತಾ ನಂಬಿಕೆಯಿಂದ ಶರಣಾಗುವುದನ್ನು ತಿಳಿಸಿದ್ದಾರೆ.

ಪರಮ ಕರುಣಾಮಹೋದಧಿಯು -  ಭಗವಂತನು ಸರ್ವ ಗುಣ ಸಂಪೂರ್ಣನು.  ಅವನ ಎಲ್ಲಾ ಗುಣಗಳೂ ಪೂರ್ಣವಾಗಿವೆ ಮತ್ತು ಭಗವಂತನು ಗುಣಸಾಗರನಾಗಿದ್ದಾನೆ.  ಗುಣ ಸಾಗರದಲ್ಲಿನ ಒಂದೊಂದು ಹನಿಯಲ್ಲಿಯೂ ಭಗವಂತನು ಅದೇ ಗುಣವಿಶೇಷಣನಾಗಿ ಪರಿಪೂರ್ಣನಾಗಿದ್ದಾನೆ.  ವೇದಗಳೂ ಕೂಡ ಭಗವಂತನನ್ನು "ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ | ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ" ಎಂದು ವರ್ಣಿಸಿವೆ.   ಮಹೋದಧಿಯೆಂದರೆ ಅತಿ ದೊಡ್ಡ ಸಾಗರವೆಂಬ ಅರ್ಥವಾಗುತ್ತದೆ.  ಭಗವಂತನ ಸರ್ವ ಗುಣಗಳಲ್ಲಿ ಕರುಣೆಯೂ ಒಂದಾಗಿದೆ.  ಒಂದೇ ಒಂದು ಗುಣವೇ ಒಂದು ಮಹೋದಧಿಯಂತಿದ್ದರೆ ಉಳಿದ ಎಲ್ಲಾ ಗುಣಗಳೂ ಅಷ್ಟೇ ವ್ಯಾಪ್ತಿಯಲ್ಲಿವೆಯೆಂಬರ್ಥವಾಗುತ್ತದೆ.  ಇಂತಹ ಅನೇಕ ಗುಣಗಳ ಮಹೋದಧಿಗಳಿಗೇ ಒಡೆಯನಾದವನು ಮತ್ತು ಇಂತಹ ಅನೇಕ ರಸಗಳ, ಗುಣಗಳ ಮಹೋದಧಿಗಳನ್ನೊಳಗೊಂಡ ಏಕರಸ "ಆನಂದ"ದ ಆಶ್ರಯವು ಭಗವಂತನೇ ಆಗಿದ್ದಾನೆ.  ಹೀಗೆಂದು ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯ ೧೪ನೆಯ ಅಧ್ಯಾಯದ ೨೭ನೆಯ ಶ್ಲೋಕದಲ್ಲಿ "ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ" ಎಂದು ತಾನೇ ತಿಳಿಸಿದ್ದಾನೆ.  ಕರುಣೆಯೆಂಬ ಮಹೋದಧಿಯು ಕರುಣಾರಸದ ಕೋಟ್ಯಾಂತರ ಬಿಂದುಗಳಿಂದ ತುಂಬಿರುವುದು.  ಹನಿಹನಿಯಾಗಿ ಭಗವಂತನು ಕರುಣೆಯ ರಸದ ಸಿಂಚನವನ್ನು ಭಕ್ತರಿಗೆ ಸದಾ ಒದಗಿಸುತ್ತಲೇ ಇರುತ್ತಾನೆ.  ಕರುಣೆಯ ಮಹೋದಧಿಯು ಎಂದಿಗೂ ಬತ್ತುವುದೇ ಇಲ್ಲ.

ತನ್ನವರು ಮಾಡ್ದಪರಾಧಗಳ ನೋಡದಲೆ ಸಲಹುವ - ನಮ್ಮವರೆನಿಸಿಕೊಳ್ಳುವವರು ಮಾಡಿದ ಅಪರಾಧಗಳನ್ನು ಎಣಿಸದೆ ಕ್ಷಮಿಸಿ ಕರುಣೆ ತೋರುವುದು ಸಜ್ಜನಿಕೆಯ ಲಕ್ಷಣವಾಗುತ್ತದೆ.  ಸಾಮಾನ್ಯ ಜನರಿಗೇ ಇಷ್ಟು ಸಜ್ಜನಿಕೆಯು ಇದ್ದರೆ, ಕರುಣಾಸಾಗರನಾದ ಭಗವಂತನ ಕ್ಷಮಾ ಗುಣವನ್ನು ಅಳೆಯುವುದು ಅಸಾಧ್ಯವೇ ಆಗಿದೆ.  ದಾಸರಾಯರು ಹಿಂದಿನ ಪದ್ಯಗಳಲ್ಲಿ ಭಗವಂತನನ್ನು ’ಸ್ಮರಿಸುವವರಪರಾಧಗಳ ತಾ ಸ್ಮರಿಸ’ ಮತ್ತು ’ಮಹಾಪರಾಧಗಳೆಣಿಸಿದರೆ ಕರುಣಾಸಮುದ್ರ ಹರಿ’ ಎಂದೆಲ್ಲಾ ವಿವರಿಸಿದ್ದಾರೆ.  ಇಲ್ಲಿ ಮತ್ತೆ ಅದೇ ಕರುಣಾರಸವನ್ನು ’ತನ್ನವರು ಮಾಡ್ದಪರಾಧಗಳ ನೋಡದೆಲೆ ಸಲಹುವ’ ಎಂದಿರುವುದರಲ್ಲಿ ಏನು ವಿಶೇಷವಿದೆಯೆಂದರೆ ತನ್ನವರಾದ ಭಕ್ತರು ಮಾಡಿದ ಅಪರಾಧಗಳನ್ನು ಸ್ಮರಿಸದಿರುವುದೂ, ಎಣಿಸದಿರುವುದೂ ಮಾತ್ರವಲ್ಲದೆ ನೋಡದಿರುವುದೂ ಕೂಡ ಭಗವಂತನ ಒಂದು ವೈಶಿಷ್ಟ್ಯವೆಂದು ವರ್ಣಿಸಿರುವುದು.  ಸಜ್ಜನರು ತಮ್ಮ ಜೀವಕ್ಕೇ ಅಪಾಯ ತಂದವರ ಅಪರಾಧಗಳನ್ನು ಕೂಡ ’ಅಪರಾಧವೆಂದು ಪರಿಗಣಿಸಿಯೇ’ ಕ್ಷಮಿಸಿಬಿಡಬಹುದು.  ಆದರೆ ಭಗವಂತನು ತನ್ನವರು ಮಾಡಿದ ಅಪರಾಧಗಳನ್ನು ನೋಡದೆಲೇ, ಅಪರಾಧವೆಂದು  ಪರಿಗಣಿಸದೆಲೇ ಕ್ಷಮಿಸಿ ಸಲಹುವವನು.
ಭಾಗವತ ದಶಮಸ್ಕಂದದ ೮೯ನೆಯ ಅಧ್ಯಾಯದಲ್ಲಿ ಒಂದು ಪ್ರಸಂಗದ ಉಲ್ಲೇಖವಿದೆ.  ದ್ವಾರಕಾ ಪಟ್ಟಣದ ಬ್ರಾಹ್ಮಣ ದಂಪತಿಗಳಿಗೆ ಮಕ್ಕಳು ಹುಟ್ಟಿ ಭೂ ಸ್ಪರ್ಶವಾದ ಕೂಡಲೇ ಸತ್ತುಹೋಗುತ್ತಿರುತ್ತವೆ.  ಹೀಗೆ ಒಂಬತ್ತು ಮಕ್ಕಳನ್ನು ಕಳೆದುಕೊಂಡು ಗೋಳಾಡುವ ಬ್ರಾಹ್ಮಣನಿಗೆ ಅರ್ಜುನನು ಹತ್ತನೆಯ ಶಿಶುವನ್ನು ತಾನು ರಕ್ಷಿಸುವುದಾಗಿಯೂ, ಸಾಧ್ಯವಾಗದಿದ್ದರೆ ಅಗ್ನಿಪ್ರವೇಶ ಮಾಡುವುದಾಗಿಯೂ ಪ್ರತಿಜ್ಞೆ ಮಾಡುತ್ತಾನೆ.  ಜನಿಸಿದ ಹತ್ತನೆಯ ಶಿಶು ಆಕಾಶದಲ್ಲಿ ಮಾಯವಾಗುತ್ತದೆ.  ಅರ್ಜುನನ ಅಹಂಕಾರದ ಮಾತುಗಳನ್ನು ಬ್ರಾಹ್ಮಣನು ಹೀನಾಯವಾಗಿ ನಿಂದಿಸಿದಾಗ, ಅರ್ಜುನ ಯಮಲೋಕಕ್ಕೇ ತೆರಳಿ ಮಕ್ಕಳನ್ನು ಹುಡುಕುತ್ತಾನೆ.  ಅಲ್ಲಿ ಕಾಣದಿದ್ದ ಮಕ್ಕಳನ್ನು ಬೇರೆಲ್ಲಾ ಲೋಕಗಳಲ್ಲಿಯೂ ಹುಡುಕಿ, ಸಿಕ್ಕದೆ, ಹತಾಶನಾಗಿ ಅಗ್ನಿಪ್ರವೇಶಕ್ಕೆ ಸಿದ್ಧನಾಗುತ್ತಾನೆ.  ಅಗ್ನಿಪ್ರವೇಶ ಮಾಡದಂತೆ ತಡೆದ ಶ್ರೀಕೃಷ್ಣನು ಅರ್ಜುನನ್ನು ತನ್ನ ಜೊತೆ ತನ್ನ ಅನಂತಸ್ವರೂಪವಾದ ಪುರುಷೋತ್ತಮನ ಲೋಕಕ್ಕೆ ಕರೆದೊಯ್ದು ಅಲ್ಲಿ ಬಾಲಕರನ್ನು ತೋರಿಸುತ್ತಾನೆ.  ಭಗವಂತನ ಕರುಣೆ, ಕೃಪೆಯಿಲ್ಲದೇ ತನ್ನ ಬಲ-ಪೌರುಷಗಳಿಗೆ ಯಾವುದೇ ಶಕ್ತಿಯಿಲ್ಲವೆಂಬುದನ್ನು ತಿಳಿದು ಅರ್ಜುನನು ಭಗವಂತನಿಗೆ ನಮಸ್ಕರಿಸುತ್ತಾನೆ.  ಹೀಗೆ ಅರ್ಜುನನ ಅಪರಾಧವನ್ನು ನೋಡದೆಲೇ ಭಗವಂತನು ತನ್ನ ಭಕ್ತನನ್ನು ಸಲಹಿದನು ಎಂಬುದು ತಿಳಿಯುತ್ತದೆ.

ಸರ್ವಕಾಮದನು - ಸರ್ವಕಾಮದನಾದ ಭಗವಂತನು ಲೌಕಿಕ ಹಾಗೂ ಅಲೌಕಿಕದ ಎಲ್ಲಾ ಕಾಮನೆಗಳನ್ನೂ ಪೂರೈಸುವವನಾಗಿರುತ್ತಾನೆ.  ವಿಷ್ಣು ಸಹಸ್ರನಾಮದಲ್ಲಿಯೂ ಭಗವಂತನ ಸರ್ವಕಾಮದ ಗುಣವನ್ನು "ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ" ಎಂದು ವಿವರಿಸಲ್ಪಟ್ಟಿದೆ.  ದಾಸರಾಯರು ಇಲ್ಲಿ ಭಗವಂತನನ್ನು  ಸರ್ವಕಾಮದನು ಎಂದು ವಿಶೇಷ ಗುಣವಾಚಕದಿಂದ ಸಂಬೋಧಿಸಿ, ಹರಿಕಥಾಮೃತಸಾರಕ್ಕೂ ವಿಷ್ಣು ಸಹಸ್ರನಾಮಕ್ಕೂ ಕೊಂಡಿಯನ್ನು ಕಲ್ಪಿಸಿದ್ದಾರೆ. 
ಭಾಗವತ ಎರಡನೆಯ ಸ್ಕಂದದ ತೃತೀಯೋಧ್ಯಾಯದ ೯ನೆಯ ಶ್ಲೋಕದಲ್ಲಿ "ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರಧೀಃ | ತೀವ್ರೇಣ ಭಕ್ತಿಯೋಗೇನ ಯಜೇತ ಪುರುಷಂ ಪರಮ್" - ಉದಾರವಾದ ಮನಸ್ಸುಳ್ಳ ಬುದ್ಧಿಶಾಲಿಯಾದ ಮನುಷ್ಯನು ನಿಷ್ಕಾಮನಾಗಿರಲಿ ಇಲ್ಲವೇ ಎಲ್ಲ ಕಾಮನೆಗಳಿಂದಲೂ ಕೂಡಿರಲಿ ಅಥವಾ ಮೋಕ್ಷಕಾಮನಾಗಿರಲಿ, ಆತನು ತೀವ್ರವಾದ ಭಕ್ತಿಯೋಗದಿಂದ ಆ ಭಗವಂತನಾದ ಪುರುಷೋತ್ತಮನನ್ನೇ ಭಜಿಸಬೇಕು ಎಂಬ ಉಲ್ಲೇಖವಿದೆ.

ಭಾಗವತ ತೃತೀಯಸ್ಕಂದ ೧೪ನೆಯ ಅಧ್ಯಾಯದಲ್ಲಿ
ತಸ್ಮಿನ್ಪ್ರಸನ್ನೇ ಸಕಲಾಶಿಷಾಂ ಪ್ರಭೌ | ಕಿಂ ದುರ್ಲಭಂ ತಾಭಿರಲಂ ಲವಾತ್ಮಭಿಃ | ಅನನ್ಯದೃಷ್ಟ್ಯಾ ಭಜತಾಂ ಗುಹಾಶಯಃ | ಸ್ವಯಂ ವಿಧತ್ತೇ ಸ್ವಗತಿಂ ಪರಃ ಪರಾಮ್ || - ಭಗವಂತನೇ ಎಲ್ಲಾ ಕಾಮನೆಗಳನ್ನೂ ಈಡೇರಿಸುವ ಸಾಮರ್ಥ್ಯವುಳ್ಳವನು.  ಅವನು ಪ್ರಸನ್ನನಾದರೆ ದುರ್ಲಭವಾದುದು ಯಾವುದೂ ಇಲ್ಲ.  ಎಲ್ಲವನ್ನೂ ಕೊಡುವ ಸರ್ವಕಾಮದನಾದ ಭಗವಂತನನ್ನು ಅನನ್ಯಭಾವದಿಂದ ಭಜಿಸಿದರೆ, ಕರುಣಾಮಯಿ ಸ್ವಾಮಿಯು ತನ್ನ ಪರಮಪದವನ್ನೇ ಅನುಗ್ರಹಿಸುವನು ಎಂದು ತಿಳಿಸಲಾಗಿದೆ.

ಭಗವದ್ಗೀತೆಯ ೬ನೆಯ ಅಧ್ಯಾಯದ ೧೫ನೆಯ ಶ್ಲೋಕ
ಯುಂಜನ್ನೆವಂ ಸದಾತ್ಮಾನಾಂ ಯೋಗೀ ನಿಯತಮಾನಸಃ | ಶಾಂತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ || - ಮನಸ್ಸನ್ನು ವಶಪಡಿಸಿಕೊಂಡಿರುವ ಯೋಗಿಯು ಈ ಪ್ರಕಾರವಾಗಿ ಆತ್ಮವನ್ನು ಪರಮೇಶ್ವರ ಸ್ವರೂಪನಾದ ನನ್ನಲ್ಲಿ ನಿರಂತರವಾಗಿ ತೊಡಗಿಸುತ್ತ ನನ್ನಲ್ಲಿರುವ ಪರಮಾನಂದದ ಪರಾಕಾಷ್ಠಾರೂಪಿ (ಪರಮಗತಿ)ಯಾದ ಶಾಂತಿಯನ್ನು ಪಡೆಯುತ್ತಾನೆಂದು  ತಿಳಿಸುತ್ತಾ ಶ್ರೀಕೃಷ್ಣನು ಭಗವಂತನಾದ ತಾನು ಪರಮಗತಿಯಾದ ಮೋಕ್ಷವನ್ನೇ ಕರುಣಿಸುವ ಸರ್ವಕಾಮದನು ಎಂದು ತಿಳಿಸಿದ್ದಾನೆ.
ಕಠೋಪನಿಷತ್ತಿನ ದ್ವಿತೀಯಾಧ್ಯಾಯದ ೬ನೆಯ ವಲ್ಲಿಯ ೧೪ನೆಯ ಶ್ಲೋಕದಲ್ಲಿ "ಯದಾ ಸರ್ವೇ ಪ್ರಮುಚ್ಯನ್ತೇ, ಕಾಮಾ ಯೇSಸ್ಯ ಹೃದಿಶ್ರಿತಾಃ | ಅಥ ಮರ್ತ್ಯೋSಮೃತೋ ಭವತ್ಯತ್ರ ಬ್ರಹ್ಮ ಸಮಶ್ನುತೇ" - ಹೃದಯದಲ್ಲಿರುವ ಕೋರಿಕೆಗಳನ್ನೆಲ್ಲಾ ಯಾವಾಗ ಪೂರ್ತಿಯಾಗಿ ಹೋಗಲಾಡಿಸಿಕೊಳ್ಳುವರೋ, ಆಗ ಮರ್ತ್ಯನು ಅಮೃತನಾಗಿ ಅಲ್ಲಿಯೇ ಬ್ರಹ್ಮವನ್ನು ಚೆನ್ನಾಗಿ ಹೊಂದುತ್ತಾನೆ ಎಂಬ ಉಲ್ಲೇಖವಿದೆ.

ಹೀಗೆ, ಜೀವನಿಷ್ಟವಾದ ದೋಷಗಳಿಂದ ವಿದೂರನಾದ ಚಿನ್ಮಯರೂಪಿ ಭಗವ೦ತನನ್ನು ಸರ್ವೋತ್ತಮನೆ೦ದು ಧೃಢವಾಗಿ ನ೦ಬಿ, ಅವನ ಗುಣಗಳನ್ನು ಸದಾ ಸ್ತುತಿಸುವವರ ಸಮೀಪದಲ್ಲಿಯೇ ಇದ್ದು,  ಸರ್ವಕಾಮದನಾದ ಭಗವ೦ತನು ಕರುಣಾಖ್ಯ ಮಹಾಸಮುದ್ರ ಉಳ್ಳವನಾಗಿ, ಇ೦ತಹ ಭಕ್ತರ ಅಪರಾಧಗಳನ್ನು ಎಣಿಸದೆ ಸ೦ರಕ್ಷಣೆಯನ್ನು ಮಾಡಿ,  ಅವರ ಇಷ್ಟಾರ್ಥಗಳನ್ನು ಯೋಗ್ಯತಾನುಸಾರ ಕೊಡುವವನಾಗುತ್ತಾನೆ ಎ೦ದು ದಾಸರಾಯರು ತಿಳಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ