Friday, June 29, 2012

ಕರುಣಾ ಸಂಧಿ - ೪ನೇ ಪದ್ಯ



















ಮನವಚಕತಿದೂರ ನೆನೆವರ |
ನನುಸರಿಸಿ ತಿರುಗುವನು ಜಾಹ್ನವಿ |
ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು ||
ಘನಮಹಿಮ ಗಾಂಗೇಯನುತ ಗಾ |
ಯನವ ಕೇಳುತ ಗಗನಚರ ವಾ|
ಹನ ದಿವೌಕಸರೊಡನೆ ಚರಿಸುವ 

ಮನೆಮನೆಗಳಲ್ಲಿ || ೪ ||

 ಪ್ರತಿಪದಾರ್ಥ : ಮನ - ಮನಸ್ಸು ಅಥವಾ ನಮ್ಮ ಆಲೋಚನೆಗಳು, ವಚನ - ನಾವಾಡುವ ಮಾತುಗಳು ಅಥವಾ ಭಗವಂತನ ಸ್ತುತಿಗಳು/ಸ್ತೋತ್ರಗಳು, ಅತಿದೂರ - ಮನಸ್ಸಿನ ಮಾತುಗಳಿಗೆ ನಿಲುಕದವನು, ನೆನೆವರನನುಸರಿಸಿ ತಿರುಗುವನು - ಯಾರು ಶುದ್ಧ ಭಕ್ತಿಯಿಂದ ಸದಾ ಭಗವಂತನನ್ನು ಸ್ಮರಿಸುವರೋ ಅವರನ್ನು ಹಿಂಬಾಲಿಸುತ್ತಾ ತಿರುಗಾಡುವವನು, ಜಾಹ್ನವಿ ಜನಕ - ಜಾಹ್ನವಿ ಎಂದರೆ ಗಂಗೆ ಭಗವಂತನ ಉಂಗುಷ್ಠದಿಂದುದ್ಭವಿಸಿದಳಾದ್ದರಿಂದ ಗಂಗೆಯ ಪಿತ, ಜನರೊಳಗಿದ್ದು ಜನಿಸುವ - ಬಿಂಬ ರೂಪಿಯಾಗಿ ಪ್ರತಿಯೊಬ್ಬ ಮನುಷ್ಯನು ಜನಿಸಿದಾಗ ಅವನೊಂದಿಗೆ ತಾನೂ ಜನಿಸುವವನು, ಜಗದುದರ ತಾನು - ಜಗತ್ತನ್ನೇ ತನ್ನ ಉದರದಲ್ಲಿ ಧರಿಸಿರುವವನು, ಘನಮಹಿಮಗಾಂಗೇಯನುತ - ಅತ್ಯಂತ ಗೌರವವುಳ್ಳ ತಮ್ಮ ಅಪೂರ್ವ ಪ್ರತಿಜ್ಞೆಗಳಿಂದ ಸುವಿಖ್ಯಾತರಾದ  ಗಂಗೆಯ ಪುತ್ರನಾದ ಭೀಷ್ಮನಿಂದ ಸ್ತುತಿಸಲ್ಪಡುವವನು, ಗಾಯನವ ಕೇಳುತ - ತನ್ನ ಭಕ್ತರು ಭಕ್ತಿಯಿಂದ ತನ್ನನ್ನು ಸ್ತುತಿಸಿ ಹಾಡುವುದನ್ನು ಕೇಳುವವನು, ಗಗನಚರ ವಾಹನ - ಅಂತರಿಕ್ಷದಲ್ಲಿ ಹಾರಾಡುವ ಗರುಡನು ವಾಹನವಾಗಿರುವವನು, ದಿವೌಕಸರೊಡನೆ - ಸಮಸ್ತ ದೇವತೆಗಳೊಂದಿಗೆ, ಚರಿಸುವ ಮನೆಮನೆಗಳಲ್ಲಿ - ತನ್ನ ಪರಿವಾರ ಸಹಿತವಾಗಿ ಭಕ್ತರನ್ನು ಸಂತೋಷಪಡಿಸಲು ಅವರ ಮನವೆಂಬ ಮನೆಯಲ್ಲಿ ಸದಾ ಸಂಚರಿಸುವವನು.

ನೆನಕೆಯ ಕರೆಗೆ ದೂರವಿದ್ದರೂ, ಮನದ ಕರೆಗೆ ಹತ್ತಿರವಾಗುತ್ತಾನೆ.  ಶುದ್ಧವಾದ ಗಂಗೆಯ ಪಿತನಾದರೂ ಸಾಮಾನ್ಯ ಜನರಲ್ಲಿದ್ದು, ಜನಿಸಿ ತಾನೇ ಜಗದುದರನಾಗಿದ್ದಾನೆ.  ಇಂಥಹ ಘನಮಹಿಮನಾದ ಪರಮಾತ್ಮ ಗಗನಚರನಾಗಿದ್ದರೂ ತನ್ನ ಕುರಿತು ಹಾಡಿಪಾಡಿದವರ ಮನೆಗೆ ತನ್ನ ಪರಿವಾರದೊಡನೆ ಬಂದು ಭಕ್ತರನ್ನು ಪ್ರೇಮದಲಿ ಬಂಧಿಸುತ್ತಾನೆ.  ಜಗನ್ನಾಥ ದಾಸರು ವಿಠಲಯ್ಯ ವಿಠಲಯ್ಯ ಎಂಬ ಕೃತಿಯಲ್ಲಿ “ಶರಣಾಗತರನ್ನು ಪೊರೆವನೆಂಬ ತವ ಬಿರಿದು ಕಾಣೋ ಸಿರಿವರ ಜಗನ್ನಾಥ ವಿಠಲಯ್ಯ ವಿಠಲಯ್ಯ" ಎಂದು ಸ್ತುತಿಸಿದ್ದಾರೆ.

ಗಂಗೆಯ ಪಿತನಾದ ಶ್ರೀಹರಿ ನಮ್ಮ ಮನಸ್ಸಿಗೂ, ಮಾತಿಗೂ ನಿಲುಕಲಾಗದಷ್ಟು ದೂರದಲ್ಲಿದ್ದಾನೆ.  ಭಕ್ತಿಯಿಂದ, ಪ್ರೀತಿಯಿಂದ ನೆನೆದಾಗ ಮಾತ್ರ ಕರುಣೆಯಿಂದ, ತಾಯಿಯಂತೆ ನಮ್ಮನ್ನೇ ಅನುಸರಿಸುತ್ತಾ ನಮ್ಮ ಹಿಂದೆ ಮುಂದೆ ತಿರುಗುತ್ತಿರುತ್ತಾನೆ.  ಪ್ರಳಯ ಕಾಲದಲ್ಲಿ ಜಗತ್ತನ್ನೇ ನುಂಗಿ ಉದರದಲ್ಲಿಟ್ಟುಕೊಂಡು ಕಾಪಾಡುವ ’ಜಗದ್ಭುಕ್’ ಎನಿಸಿಕೊಂಡ ಭಗವಂತ ಜನರೊಳಗೆ ಅಂತರ್ಯಾಮಿಯಾಗಿದ್ದು, ಜನರು ಜನಿಸುವಾಗ ತಾನೂ ಜನಿಸಿ, ಜನರನ್ನು ಕಾಪಾಡುವನು.  ಗರುಡ ವಾಹನ, ಖೇಚರನಂತೆ ಗಗನದಲ್ಲಿ ಚಲಿಸುತ್ತಾ ದೇವತೆಗಳ ಗಾಯನವನ್ನು ಕೇಳುತ್ತಾ, ಸುಖಿಸುವವನು. ತಾನೇ ಮಹಾ ಮಹಿಮನಾಗಿದ್ದರೂ ಕೂಡ, ಗಂಗಾಪುತ್ರನಾದ ಗಾಂಗೇಯನು ಮಾಡಿದ ಸ್ತುತಿಯನ್ನು ಕೇಳುವವನು. ಅಂತಹ ಪರಮ ಕರುಣಾ ಸಿಂಧು ನಮ್ಮ ಗಾಯನವನ್ನೂ ಕೇಳುತ್ತಾನೆ ಮತ್ತು ಸಕಲ ದೇವತೆಗಳೊಂದಿಗೆ ನಮ್ಮ ಮನೆ-ಮನಗಳಲ್ಲಿಯೂ ಸಂಚರಿಸುತ್ತಿರುತ್ತಾನೆ.  “ಜನರೊಳಗಿದ್ದು ಜನಿಸುವ”  - ಜನಿಸುವುದರಿಂದಲೇ ಜನರು “ಜನ”ರೆಂದು ಕರೆಸಿಕೊಳ್ಳುತ್ತಾರೆ.  ಅವರೊಳಗಿದ್ದು, ಅವರು ಜನಿಸಿದಾಗ ಹರಿ ತಾನೂ ಜನಿಸುತ್ತಾನೆಂಬ ಅರ್ಥವಾಗುತ್ತದೆ.

“ಜಾಹ್ನವಿಜನಕ” – ಜಹ್ನುವಿನ ಮಗಳಾಗಿ ಹುಟ್ಟಿದ್ದರಿಂದ ಗಂಗೆ ಜಾಹ್ನವಿಯಾದಳು. 

ಗಂಗಾ ಗಂಗೇತಿ ಯೋ ಬ್ರೂಯಾದ್ ಯೋಜನಾನಾಂ ಶತೈರಪಿ |
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ||  -  ನೂರು ಯೋಜನ ದೂರದಿಂದಲಾದರೂ ಕೂಡ ಗಂಗೇ ಎಂದರೆ ಸಾಕು, ಗಂಗೆ ಬಂದು ಪಾಪ ಪರಿಹರಿಸಿ, ನಮ್ಮನ್ನು ಉದ್ಧರಿಸುತ್ತಾಳೆಂದರೆ, ಗಂಗೆಯ ಜನಕನಾದ ಶ್ರೀಹರಿ, ಕರುಣಾ ಸಮುದ್ರನೇ ಆಗಿದ್ದಾನೆ.

ಶ್ರೀಹರಿಯು ಮನೋಭಿಮಾನಿಯಾದ ರುದ್ರನಿಗೂ, ಮುಖ್ಯಪ್ರಾಣನಿಗೂ, ಅಭಿಮಾನಿ ರಮಾದೇವಿಗೂ ಕೂಡ ನಿಲುಕದವನು. ನಮ್ಮ ಮನಕ್ಕೆ ಅತಿದೂರದಲ್ಲಿರುವನು.  ಒಂದು ಲೌಕಿಕ ಸಂಬಂಧವನ್ನು ಅರ್ಥೈಸಿಕೊಳ್ಳಲು ನಾವು ದಿನಗಳೂ, ವರ್ಷಗಳೂ ಕಳೆಯುವಾಗ ಭಗವಂತನ ಗುಣವಿಶೇಷಗಳ ಅಭಿವ್ಯಕ್ತಿ ಮಾಡಲು ಭಾಷೆ, ಪದ, ಸಮಯ.. ಯಾವುದೂ ಸೀಮಿತವಲ್ಲ.  ಮಗು ತಾಯಿಯ ಒಡನಾಡಿಯಾಗಿರುವಂತೆ,  ಪರಮಾತ್ಮ ಜೀವಾತ್ಮದೊಡನೆ ಇದ್ದಾನೆ.  ಭಗವಂತನನ್ನು ನೆನೆವವರಲ್ಲಿ ಯಾಂತ್ರಿಕತೆಯಿದೆ ಆದರೆ ಕರುಣಾಮಯಿ ಭಗವಂತನಲ್ಲಿಲ್ಲ.  ನಾವು ವಿಷಯಾಸಕ್ತಿಗಳಲ್ಲೇ ಮುಳುಗಿ ಭೋಗದಲ್ಲೇ ಮೀಯಲು ಬಯಸುತ್ತಾ ಇರಬಾರದು.  ಹುಟ್ಟಿನಲ್ಲಿ ಪಾಪವಿದ್ದಾಗ, ಮರಣದಲ್ಲೂ ಪಾಪವಿರುತ್ತದೆ (ಅಪಮೃತ್ಯು).  ಗಂಗೆಯ ಸ್ಪರ್ಶದಿಂದಲೇ ಪಾಪ ಪರಿಹಾರವಾಗುವಾಗ, ಅವಳ ಜನಕ ವಿಷ್ಣುವಿನ ಗುಣವಿಶೇಷಗಳನ್ನು ಅರಿಯುವುದರಿಂದ ಪಾಪರಾಶಿಗಳೇ ನಾಶವಾಗಿಬಿಡುತ್ತವೆ.   ಪಾಪ ೧೦೦ ಅಂಶ ಇದ್ದಾಗ, ೨೫ ಅಂಶ ಪಶ್ಚಾತ್ತಾಪ ಪಡುವುದರಿಂದಲೇ ಕರಗಿ ಬಿಡುತ್ತದೆ, ೨೫ ಅಂಶ ಮತ್ತೆಂದೂ ತಪ್ಪು ಮಾಡದೆ ಧರ್ಮ ಕಾರ್ಯ ಮಾಡುವುದರ ಮೂಲಕ ಕರಗುತ್ತದೆ, ೨೫ ಅಂಶ ಪವಿತ್ರ ಕ್ಷೇತ್ರಗಳ ದರ್ಶನ ಮಾಡುವುದರಿಂದ ಮತ್ತು ಕೊನೆಯ ೨೫ ಅಂಶ ಪವಿತ್ರ ಗ್ರಂಥಗಳ ಪಠಣ / ಮನನ ಮಾಡುವುದರ ಮೂಲಕ ಕರಗುತ್ತದೆ ಎಂಬುದು ಶಾಸ್ತ್ರಗಾರರಿಂದ ತಿಳಿಯುತ್ತದೆ.

ಮನವಚನ ಎ೦ದಾಗ, ನಾವು ಎರಡೂ ದೃಷ್ಟಿಯಿಂದಲೂ ಸ್ವಲ್ಪ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡೋಣ. ಮೊದಲು ನೇರ ಅರ್ಥದ ಶಬ್ದ ಎಂಬ ದೃಷ್ಟಿ ಬಂದಾಗ, ನಮ್ಮ ಮನಸ್ಸಿನಲ್ಲಿ ಉತ್ಪತ್ತಿ ಆಗುವ ಮಾತುಗಳು ಎಂದುಕೊಂಡರೆ, ಅಲ್ಲಿ ವಿಧ ವಿಧವಾದ ಸಂದೇಹಗಳು ಇರುತ್ತವೆ.   ಎಲ್ಲಿ ಸಂದೇಹಗಳು ಇರುತ್ತವೋ ಅಲ್ಲಿ ಭಗವಂತನಿರುವುದಿಲ್ಲ.  ಮನದಲ್ಲಿ ಏಳುವ ಎಲ್ಲಾ ಮಾತುಗಳೂ ನಮ್ಮ ಭಾವಗಳೇ ಆಗಿರುತ್ತವೆ ಎಂಬುದೂ ಕೂಡ ಕೆಲವೊಮ್ಮೆ ಸಂದೇಹಾಸ್ಪದವಾಗುತ್ತದೆ. ಉದ್ದೇಶ ಇಲ್ಲದೇ ಇದ್ದರೂ ಅನವಶ್ಯಕ ಶಬ್ದಗಳು  ನಮ್ಮಿಂದ ಹೊರಹೊಮ್ಮಿ ಬಿಡುತ್ತವೆ.  ಆಮೇಲೆ ಅದನ್ನು ನಾವು ನೆನಪು ಮಾಡಿಕೊಂಡರೆ ಮಾತ್ರ, ಅದು ತಪ್ಪು ಎಂದು ಗೊತ್ತಾಗುತ್ತದೆ.  ಆದ್ದರಿಂದ ಈ ಎಲ್ಲಾ ಮಾತುಗಳಿಂದಲೂ ಭಗವಂತ ಖಂಡಿತಾ ನಮ್ಮ ಮನಕ್ಕೆ ಅತಿ ದೂರವೇ ಇರುತ್ತಾನೆ.   ’ಕಾಯಾ ವಾಚಾ’ಕ್ಕಿಂತಲೂ ಮನಸಾ ಮಾತ್ರವೇ ತುಂಬಾ ಮುಖ್ಯವಾಗುತ್ತದೆ.  ನುಡಿದಂತೆಯೇ ನಡೆದಾಗ ಮಾತ್ರ ಬಹುಶ: ಭಗವಂತ ಮನವಚನಕ್ಕೆ ದೂರನಾಗದೆ, ಮನದಲ್ಲಿ ನೆಲೆ ನಿಲ್ಲುತ್ತಾನೆ.  ತನ್ನ ತಾಣದಲ್ಲಿ ಪ್ರಸನ್ನನಾಗಿ ಕುಳಿತು, ಭಕ್ತಿಯನ್ನು ಸೇವಿಸುತ್ತಾನೆ.  ಭಕ್ತಿಯನ್ನು ಸೇವಿಸುತ್ತಾ ಅದೇ ಆಗಿಬಿಡುತ್ತಾನೆ.  ಹಾಗಾಗಬೇಕಾದರೆ ತನು-ಮನ ಶುದ್ಧವಾಗಿರಬೇಕು.   ಹೀಗೆ ನಮ್ಮ ನುಡಿಯನ್ನು ನಡೆಗೆ ಹೊಂದಿಸುತ್ತಾ ಹೋದಾಗ ನಮ್ಮದೇ ಭಾವಗಳು ಶುದ್ಧಿ ಆಗುತ್ತಾ ಹೋಗುತ್ತವೆ ಮತ್ತು ಜೀವದ ಕಣ ಕಣದಲ್ಲೂ ಶುದ್ಧಗೊಳಿಸುವ ಕ್ರಿಯೆ ನಿರಂತರ ನಡೆಯುತ್ತಾ ಹೋಗುತ್ತದೆ.

ಜನರೊಳಗಿದ್ದು ಜನಿಸುವ ಜಗದುದರ ತಾನು - ಗುರು, ತಂದೆ-ತಾಯಿ, ಬಾಧಕ, ನಿಯಾಮಕ ಎಲ್ಲವೂ ಆಗಬಲ್ಲ.  ಭಗವಂತ ಜಗತ್ತಿಗೇ ಜನಕನಾದರೂ, ಜನರಿಂದಲೇ ಹುಟ್ಟಿ ಬಂದು ಅವರ ಮಗ ಎಂದು ಕರೆಸಿಕೊಳ್ಳುವವ.  ಆತ್ಮನಿಗೇ ಹುಟ್ಟು-ಸಾವು ಇಲ್ಲವೆಂದಾಗ, ಭಗವಂತನಿಗೆ ಎಲ್ಲಿಯ ಹುಟ್ಟು?  ನಾವು ದೇಹದೊಂದಿಗೆ ಹುಟ್ಟು-ಸಾವು ಅನುಭವಿಸುತ್ತೇವೆ.  ಆದರೆ ದೇವರು ಕಾಣಿಸಿಕೊಳ್ಳುತ್ತಾನೆ ಹಾಗೂ ಕಾಣೆಯಾಗುತ್ತಾನೆ.  ಹೊಸ ಹೊಸ ರೂಪಗಳಲ್ಲಿ ಭಗವಂತ ಕಾಣಿಸಿಕೊಂಡಾಗ, ಅದನ್ನು ನಾವು ದೇವರ ಅವತಾರ ಎನ್ನುತ್ತೇವೆ.  ಹಾಗೇ ನಮಗೆ ನಮ್ಮ ಮಗ, ಬರಿಯ ಮಗ.  ಅವನು ಬೇರೇನೂ ಆಗಲು ಸಾಧ್ಯವಿಲ್ಲ.  ಆದರೆ ಭಗವಂತ ನಮಗೆ ತಾಯಿ-ತಂದೆ, ಗಂಡ-ಮಗ, ಅಣ್ಣ-ತಮ್ಮ, ಸಖ.. ಎಲ್ಲವೂ ಆಗಬಲ್ಲ.  ಭಾವದಲ್ಲಿ ಭಾವ ಬೆರೆಸಬಲ್ಲ.  ದೇವರ ಉದರ (ಬಸಿರು)ದಿಂದ ಬಂದವರಾದ್ದರಿಂದ ಅವನು ನಮಗೆ ತಾಯಿ.  ರಮಾದೇವಿಯಲ್ಲಿ ಅವನು ಬ್ರಹ್ಮಾಂಡ ಪಿಂಡವನ್ನಿಟ್ಟ, ಆದ್ದರಿಂದ ತಂದೆ.  ನಮ್ಮ ಕರ್ಮ ಕಳೆದು, ಪಾಪ ತೊಳೆದು ಮುಕ್ತಿ ಕೊಡುವ ದೇವರು ನಮಗೆ ಮಗನೂ ಹೌದು - ಅಂದರೆ ನಮಗೆ ಸದ್ಗತಿ ಕೊಡುವವನು ಎಂದರ್ಥ.

ತತ್ವಸುವ್ವಾಲಿಯಲ್ಲಿ ದಾಸರು :
ತಂದೆ ತಾಯಿಯು ಭ್ರಾತೃ ಬಂಧು ಸಖ ಗುರು ಪುತ್ರ
ಎಂದೆಂದು ನೀನೇ ಗತಿ ಗೋತ್ರ | ಗತಿ ಗೋತ್ರ ಇಹ ಪರದಿ
ಇಂದಿರಾರಾಧ್ಯ ಸಲಹೆಮ್ಮ ||  - ದಾಸರು ಪ್ರತಿಯೊಂದ ಸಂಬಂಧವೂ ಎಲ್ಲಾ ಕಾಲಕ್ಕೂ ಭಗವಂತನೇ ಎಂಬ ಮಾತು ಹೇಳಿದ್ದಾರೆ. ’ಗೋ’ ಶಬ್ದಕ್ಕೆ ಭೂಮಿ, ಧೇನು, ಸ್ವರ್ಗ, ವೇದ ಎಂಬೆಲ್ಲಾ ಕೆಲವು ಮುಖ್ಯಾರ್ಥಗಳು ಇವೆ.  ಇವೆಲ್ಲವುಗಳಿಗೂ ರಕ್ಷಕನಾದ್ದರಿಂದ ಭಗವಂತ "ಗೋತ್ರ"ನಾಗುತ್ತಾನೆ.  ಎಲ್ಲವೂ ತಾನೇ ತಾನಾಗಿ, ಯಾವಕಾಲಕ್ಕೂ ನಮ್ಮನ್ನು ಕಾಯುವವನು, ನೀನೇ ನಮಗೆ ಗತಿ ಎಂದಿದ್ದಾರೆ ದಾಸರು.


ನೆನೆವರನನುಸರಿಸಿ ತಿರುಗುವನು - ಭಗವಂತ ಎಂತಹ ಕರುಣಾಮಯಿಯೆಂದರೆ ತನ್ನ ಮಕ್ಕಳೇ ಆದ ಜೀವಿಗಳು ತನ್ನನ್ನು ರಕ್ಷಿಸು ಎಂದು ಬೇಡುವವರೆಗೂ ಕಾಯುವುದಿಲ್ಲ.  ತುಂಬು ವಾತ್ಸಲ್ಯದಿಂದ, ಕರುಣೆಯಿಂದ ಭಕ್ತರನ್ನು ಅನುಸರಿಸಿ ನಮ್ಮ ಹಿಂದೆ ಹಿಂದೆಯೇ ತಿರುಗುತ್ತಾ ನಮ್ಮನ್ನು ಪೊರೆಯುವನು.  "ಗಾಯನವ ಕೇಳುತ ದಿವೌಕಸರೊಡನೆ ಚರಿಸುವ ಮನೆಮನೆಗಳಲ್ಲಿ" ಎಂದಾಗ ಕೂಡ ಶ್ರೀಹರಿ ಸದಾಕಾಲವೂ ವೈಕುಂಠದಲ್ಲಿ ಕುಳಿತಿರುವುದಿಲ್ಲ, ಯಾರು ತನ್ನನ್ನು ಭಕ್ತಿಯಿಂದ ಗುಣ ಕೀರ್ತನೆ ಮಾಡುತ್ತಿರುತ್ತಾರೋ ಅಲ್ಲಿ ಅವರ ಹಿಂದೆ ಮುಂದೆ ತಾನು ಇರುತ್ತೇನೆ ಎನ್ನುತ್ತಾನೆ ಭಗವಂತ. 

ಭಗವಂತನ ಕಾರುಣ್ಯವನ್ನೂ, ಹರಿನಾಮ ಸಂಕೀರ್ತನೆಯ ಮಹಿಮೆಯನ್ನೂ ತಿಳಿಸಿಕೊಡುತ್ತಾ ಕೈವಾರ ತಾತಯ್ಯನವರು "ಅನವರತಮು ಹರಿನಿ-ಆತ್ಮದಲಚಿನವಾರಿ ಯಾಮರುಕವೆನುವೆಂಟ-ದಿರುಗುಚುಂಡು" - ಸದಾ ಕಾಲವೂ ತನ್ನ ನಾಮ ಸ್ಮರಣೆ ಮಾಡುವವರ ಹಿಂದೆಯೇ ತಿರುಗುತ್ತಾ ಬೆಂಗಾವಲಾಗಿ ಇರುತ್ತಾನೆ ಭಗವಂತ ಎನ್ನುತ್ತಾರೆ.  ಹಾಗೂ  "ಶರಣನ್ನವಾರಲನು ಚೇಪಟ್ಟಿ ಯೇವೇಳ ಕಂಟಿರೆಪ್ಪವಲೆನು ಕಾಚಿಯುಂಡು" - ತನ್ನನ್ನು ಕಾಯಾ ವಾಚಾ ಮನಸಾ ನಂಬಿ ಬಂದು ಶರಣಾದವರನ್ನು ಕಣ್ಣಿನ ರೆಪ್ಪೆಯಂತೆ ಕಾಯುವ ಆಪದ್ರಕ್ಷಕನಾಗಿರುತ್ತಾನೆ ಭಗವಂತ ಎನ್ನುತ್ತಾರೆ.

"ಘನಮಹಿಮ"  - ಮಹಾಲಕ್ಷ್ಮಿ ಅನಂತವೇದಗಳಿಂದ ಪ್ರೀತಿಯಿಂದ ಸ್ತುತಿಸುವ ಘನಮಹಿಮೆಯುಳ್ಳವನು ಭಗವಂತ.  ಅಂಥಹ ಶ್ರೀಹರಿಯನ್ನು  ಭೀಷ್ಮನು ಸ್ತುತಿಸುತ್ತಾರೆ.  ರಾಜಸೂಯ ಯಾಗದ ನಂತರ ಅಗ್ರಪೂಜೆಯನ್ನು ಸಲ್ಲಿಸುವಾಗ  ಹಿರಿಯರಾದ ಯಾರಿಗಾದರೂ (ಭೀಷ್ಮ ಅಥವಾ ವೇದವ್ಯಾಸರಿಗೆ) ಸಲ್ಲಿಸಬಹುದಿತ್ತು.  ಆದರೆ ಭೀಷ್ಮ ಎಲ್ಲರಿಗೂ ಶ್ರೀ ಕೃಷ್ಣನ ನಿಜಸ್ವರೂಪವನ್ನು, ಘನಮಹಿಮೆಯನ್ನು ಪರಿಚಯಿಸಲು ಅವನಿಗೇ ಅಗ್ರಪೂಜೆಯನ್ನು ಸಲ್ಲಿಸಲು ನಿರ್ದೇಶಿಸುತ್ತಾರೆ.  ಹೀಗೆ ಭಗವಂತನ ಪ್ರೇರಣೆಯಿಂದಲೇ ಸಮಸ್ತ ಕಾರ್ಯಗಳೂ ನಡೆಯುವುವು.

"ಗಗನಚರವಾಹನ" - ಆಕಾಶದಲ್ಲಿ ಹಾರುವ ಗರುಡನನ್ನು ವಾಹನವನ್ನಾಗಿ ಮಾಡಿಕೊಂಡಿರುವವನು ಶ್ರೀಹರಿ.  ಗರುಡ ವೇದಾಭಿಮಾನಿ.  ಗಗನಚರನಾದಾಗ ಗರುಡನ ರೆಕ್ಕೆಗಳಿಂದ ಸಾಮಗಾನ ಹೊರಡುತ್ತದೆ.  ಈ ಸಾಮಗಾನ ಸೇವೆಯನ್ನು ಸ್ವೀಕರಿಸುತ್ತಾ ಅವನನ್ನು ಅನುಗ್ರಹಿಸುವುದಕ್ಕಾಗಿಯೇ ಭಗವಂತ ಗರುಡನನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ.  ನಾವು ವೇದಪೂರ್ವಕವಾಗಿ ಶ್ರೀಹರಿಯ ಧ್ಯಾನ ಮಾಡಿದಾಗ, ವೇದಾಭಿಮಾನಿ ಗರುಡನನ್ನು ಏರಿ ಭಗವಂತ ಸಾಧಕರ ಹೃದಯದೊಳಗೆ ಹಾರಿ ಬರುತ್ತಾನೆಂಬ ನಂಬಿಕೆಯಿದೆ.

ಜಗನ್ನಾಥ ದಾಸರು ತತ್ವಸುವ್ವಾಲಿಯಲ್ಲಿ :
ಮನವಚನಕಾಯದಿಂದನುಭವಿಪ ವಿಷಯಗಳ
ನಿನಗರ್ಪಿಸುವೆನೋ ನಿಖಿಳೇಶ | ನಿಖಿಳೇಶ ನಿನ್ನ ಪಾ-
ವನಮೂರ್ತಿ ತೋರಿ ಸುಖವೀಯೋ || - ಮನ ವಚನ ಕಾಯದಿಂದ ಅನುಭವಿಸುವ ಎಲ್ಲಾ ವಿಷಯಗಳನ್ನೂ ನಿನಗೇ ಅರ್ಪಿಸುವೆನೋ ನಿಖಿಳೇಶ ಒಪ್ಪಿಸಿಕ್ಕೊಳ್ಳೋ ಹೇ ಸರ್ವೇಶ, ಒಪ್ಪಿಸಿಕೊಂಡು ನಿನ್ನ ಮಂಗಳಸ್ವರೂಪವನ್ನು ತೋರಿ - ತೋರಿಸಿ, ಸುಖವಿತ್ತು ಆನಂದಪಡಿಸು ಸ್ವಾಮಿ ಎನ್ನುತ್ತಾರೆ.



ಚಿತ್ರಕೃಪೆ : ಅಂತರ್ಜಾಲ





1 comment:

ಕ್ಷಣ... ಚಿಂತನೆ... said...

tumba chennagide. adralliyoo kannadada padagalannu eshtu saralavaagi upayogisuttiddaru endu tiliyabahudu. dhanyavaadagalu.