Sunday, June 28, 2015

ಕರುಣಾ ಸಂಧಿ - ೩೦ ನೇ ಪದ್ಯ ( ಪರಶುರಾಮಾವತಾರ )

ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||
ರೇಣುಕಾತ್ಮಜ : ಪದ್ಮ ಪುರಾಣದ  "ಪರಶುರಾಮ ಚರಿತ್ರೆ"ಯಲ್ಲಿ ಜಮದಗ್ನಿ ಋಷಿಯ ಮಗನಾಗಿ ಅವತರಿಸಿದ ’ರಾಮ’ ನಾಮಕನು ’ಪರಶುರಾಮ’ನಾದ ಕಥೆಯ ವಿವರಣೆಯಿದೆ.   ಭೃಗು ಋಷಿಯ ಮಗನಾದ ಜಮದಗ್ನಿಯು ದೇವೇಂದ್ರನನ್ನು ಕುರಿತು ಉಗ್ರವಾದ ತಪಸ್ಸು ಮಾಡಿ, ಕಾಮಧೇನುವೆಂಬ ಹೆಸರುಳ್ಳ ’ಸುರಭಿ’ ನಾಮಕ ಹಸುವನ್ನು ವರವಾಗಿ ಪಡೆಯುವನು.  ಸುರಭಿಯ ಕೃಪೆಯಿಂದ ಜಮದಗ್ನಿ ಮಹರ್ಷಿಯು ಕುಬೇರನಂತೆ ಐಶ್ವರ್ಯವನ್ನು ಹೊಂದಿ ಭೂಲೋಕದ ದೇವೇಂದ್ರನಂತೆ ವೈಭವ ಜೀವನವನ್ನು ನಡೆಸುವನು.  ರೇಣುಕನ ಮಗಳಾದ ರೇಣುಕಾಳನ್ನು ವಿವಾಹವಾಗಿ, ಪುತ್ರಕಾಮೇಷ್ಠಿ ಯಾಗವನ್ನು ಮಾಡಿ, ಮಹಾ ಪ್ರತಾಪಶಾಲಿಯಾದ ಪುತ್ರರತ್ನವನ್ನು ಪಡೆಯುವನು.  ಸರ್ವಗುಣ ಹಾಗೂ ಲಕ್ಷಣಗಳ ಸಂಪನ್ನನಾದ ಶ್ರೀಹರಿಯೇ ತನ್ನ ಮೊಮ್ಮಗನಾಗಿ ಜನಿಸಿರುವನೆಂದು ಭೃಗು ಮಹರ್ಷಿಗಳು ಹೆಮ್ಮೆಯಿಂದಲೂ, ಹರ್ಷದಿಂದಲೂ ಸಂತುಷ್ಟರಾಗುವರು.  ತಾವೇ ಜಮದಗ್ನಿ ಕುಮಾರನಿಗೆ ’ರಾಮ’ನೆಂದು ನಾಮಕರಣ ಮಾಡುವರು.  ಕುಮಾರ ರಾಮನು ಜಮದಗ್ನಿಯ ಮಗನಾದುದರಿಂದ ಜಾಮದಗ್ನ್ಯ ಎಂದೂ, ರೇಣುಕೆಯ ಮಗನಾದುದರಿಂದ ರೇಣುಕಾತ್ಮಜ ಎಂದೂ, ಭೃಗುಮುನಿಯ ಮೊಮ್ಮಗನಾದುದರಿಂದ ಭಾರ್ಗವ ಎಂದೂ ಕರೆಯಲ್ಪಡುವನು.  ಉಪನಯನ ಸಂಸ್ಕಾರ ಪಡೆದ ರಾಮನು ಸಕಲ ಶಾಸ್ತ್ರ ಮತ್ತು ಶಸ್ತ್ರ ಪಾರಂಗತನಾಗುವನು.  ತಪಸ್ಸು ಮಾಡಲು ತೆರಳುವನು.  ಉಗ್ರ ತಪಸ್ಸಿನಿಂದ ಕುಮಾರ ರಾಮನು ಭಗವಂತನಿಂದ ವಿಶೇಷ ಶಕ್ತಿಯನ್ನೂ, ಘೋರವಾದ ಕೊಡಲಿಯನ್ನೂ, ವೈಷ್ಣವ ಧನುಸ್ಸನ್ನೂ ಮತ್ತು ಅನೇಕ ದಿವ್ಯಾಸ್ತ್ರಗಳನ್ನೂ ಪಡೆಯುವನು.  ಭಗವಂತನಿಂದ ರಾಮನಿಗೆ ಮದೋನ್ಮತ್ತರಾದ ರಾಜರನ್ನೆಲ್ಲಾ ಕೊಂದು ಭೂಭಾರ ಹರಣ ಮಾಡಿ  ಭೂಮಂಡಲವನ್ನೆಲ್ಲಾ ಸ್ವಾಧೀನ ಪಡಿಸಿಕೊಂಡು ಧರ್ಮದಿಂದ ಪೃಥ್ವೀ ಪಾಲನೆ ಮಾಡಬೇಕೆಂಬ ಆದೇಶವನ್ನೂ ಪಡೆಯುವನು. 

ಕಾಮಧೇನುವೆಂಬ ಇಂದ್ರಲೋಕದ ಹಸುವಿಗಾಗಿ ನಡೆದ ಹಗರಣದಲ್ಲಿ ತನ್ನ ತಂದೆಗೆ ಹಾನಿಯುಂಟುಮಾಡಿದ್ದ ಕಾರ್ತವೀರ್ಯಾರ್ಜುನ ರಾಜನನ್ನು ಕುಮಾರ ರಾಮನು ತನ್ನ ಕೊಡಲಿಯಿಂದ ಕೊಲ್ಲುವನು.  ಪಟ್ಟಾಭಿಷಿಕ್ತ ರಾಜನನ್ನು ಕೊಂದ ಪಾಪವನ್ನು ಪರಿಹಾರ ಮಾಡಿಕೊಳ್ಳಲು ಕುಮಾರ ರಾಮನು ತಂದೆ ಜಮದಗ್ನಿ ಋಷಿಗಳ ಆದೇಶದಂತೆ ಒಂದು ವರ್ಷಕಾಲ ತೀರ್ಥಯಾತ್ರೆ ಮಾಡಿ ಬರುವನು.  ಒಮ್ಮೆ ತಾಯಿ ರೇಣುಕೆ ಗಂಗಾನದಿಗೆ ನೀರು ತರಲು ಹೋಗಿ ಅಲ್ಲಿ ಚಿತ್ರರಥನೆಂಬ ಗಂಧರ್ವ ಅಪ್ಸರೆಯೊಡನೆ ಜಲಕ್ರೀಡೆಯಾಡುವುದನ್ನು ಕಂಡು ಕ್ಷಣಕಾಲ ಮೈಮರೆಯುವಳು.  ಇದು ಮಾನಸಿಕ ವ್ಯಭಿಚಾರವೆಂದು ಜಮದಗ್ನಿ ಋಷಿಗಳು ತಾಯಿಯನ್ನು ಕೊಲ್ಲುವಂತೆ ತಮ್ಮ ಮಕ್ಕಳಿಗೆ ಆದೇಶಿಸುವರು.  ಆದರೆ ಅವರುಗಳು ಒಪ್ಪುವುದಿಲ್ಲ.  ಆದರೆ ಪರಶುರಾಮ ಮಾತ್ರ ತನ್ನ ತಂದೆಯ ತಪಃಶಕ್ತಿಯನ್ನು ಅರಿತಿದ್ದನಾದ್ದರಿಂದ ಅವರ ಆಜ್ಞೆಯನ್ನು ಶಿರಸಾವಹಿಸಿ, ತಾಯಿಯ ತಲೆಯನ್ನೂ, ತಂದೆಯ ಆಜ್ಞೆಯನ್ನು ಧಿಕ್ಕರಿಸಿದ ಸೋದರರ ತಲೆಗಳನ್ನೂ ಕಡಿಯುವನು.  ಸಂತುಷ್ಟನಾದ ತಂದೆ ಬೇಕಾದ ವರವನ್ನು ಕೇಳು ಎಂದಾಗ, ತನ್ನಿಂದ ಹತರಾದವರೆಲ್ಲರೂ ಬದುಕಲಿ ಮತ್ತು ತಾನು ಅವರನ್ನು ಕೊಂದ ವಿಷಯ ಅವರಿಗೆ ಮರೆತುಹೋಗಲಿ ಎಂದು ಕೇಳುವನು.  ಪರಶುರಾಮನ ತಾಯಿ ರೇಣುಕಾದೇವಿ ಹಾಗೂ ಅವಳ ಮಕ್ಕಳು ನಿದ್ರೆಯಿಂದ ಎದ್ದವರಂತೆ ಸುಖವಾಗಿ ಎಚ್ಚೆತ್ತುಕೊಳ್ಳುವರು.  ಪರಶುರಾಮನಿಂದ ಹತನಾದ ಕಾರ್ತವೀರ್ಯಾರ್ಜುನನ ಮಕ್ಕಳು ಒಮ್ಮೆ ಆಶ್ರಮದಲ್ಲಿ ಪರಶುರಾಮನಿಲ್ಲದಿದ್ದಾಗ ಬಂದು ಜಮದಗ್ನಿ ಮುನಿಯ ತಲೆಯನ್ನು  ಕತ್ತರಿಸಿ ಒಯ್ಯುವರು.  ತಾಯಿಯ ಕೂಗಿಗೆ ಧಾವಿಸಿ ಬಂದ ರಾಮನು ದುಷ್ಟ ಕ್ಷತ್ರಿಯರ ಕುಲವನ್ನೇ ನಾಶ ಮಾಡುವ ಪಣತೊಡುವನು.   ಸಮಸ್ತ ಕ್ಷತ್ರಿಯರನ್ನೆಲ್ಲಾ ವಧಿಸಲು ೨೧ ಬಾರಿ ಭೂ ಪ್ರದಕ್ಷಿಣೆ ಮಾಡುವನು.  ಕೊನೆಗೆ  ಅಶ್ವಮೇಧ ಯಜ್ಞವನ್ನು ಮಾಡಿ ಬ್ರಾಹ್ಮಣರಿಗೆ ಸಪ್ತದೀಪವತಿಯಾದ ಮೇದಿನೀ ಮಂಡಲವನ್ನೆಲ್ಲಾ ದಾನರೂಪವಾಗಿ ನೀಡಿ, ತಾನು ತಪಸ್ಸು ಮಾಡಲು ನರನಾರಾಯಣರ ಆಶ್ರಮಕ್ಕೆ ತೆರಳುವನು.

ಮಹಾಭಾರತ ಶಾಂತಿಪರ್ವದಲ್ಲಿ ಬರುವ ’ಪರಾಶರ ಗೀತಾ’ ದಲ್ಲಿ ತಂದೆಯ ಸ್ಥಾನದ ಮಹತ್ವದ ವಿವರಣೆ ಸಿಗುತ್ತದೆ.  "ಪಿತಾ ಸಖಯೋ ಗುರವಃ" - ಪಿತನಲ್ಲಿ ಅನನ್ಯ ಭಕ್ತಿಯುಳ್ಳ  ಪುತ್ರನಿಗೆ ತಂದೆಯು ಗುರುವೂ, ಸಖನೂ ಆಗಿ ಜನ್ಮ ಜನ್ಮಾಂತರಕ್ಕೆ ಬರುವ ವಿದ್ಯೆಯನ್ನು ಕೊಡುತ್ತಾನೆ.  ತಾಯಿಯು ಇಹ ಜನ್ಮದ ಶರೀರವನ್ನು ಹೊತ್ತು, ಹೆತ್ತು ಪೋಷಿಸುವವಳು.  ಆದರೆ ತಂದೆ ಜನ್ಮಕ್ಕೆ ಕಾರಣನಾಗುವುದಲ್ಲದೆ, ಜನ್ಮ ಜನ್ಮಾಂತರಕ್ಕೂ ಬೆಳಕಾಗಬಲ್ಲ ವಿದ್ಯೆ ನೀಡುವವನಾಗುತ್ತಾನೆ.  ಆದ್ದರಿಂದ ತಂದೆಯೇ ಮಹತ್ವದ ಸ್ಥಾನವನ್ನು ಹೊಂದಿರುವನು.  ತಂದೆಯ ವಾಕ್ಯ ಅನುಶಾಸನವಿದ್ದಂತೆ, ಅದನ್ನು ಪಾಲಿಸಲೇ ಬೇಕೆಂಬುದನ್ನು
ಪಿತಾ ಪರಂ ದೈವತಂ ಮಾನವಾನಾಂ | ಮಾತುರ್ವಿಶಿಷ್ಟಂ ಪಿತರಂ ವದನ್ತಿ |
ಜ್ಞಾನಸ್ಯ ಲಾಭಂ ಪರಮಂ ವದನ್ತಿ | ಜಿತೇನ್ದ್ರಿಯಾರ್ಥಾಃ ಪರಮಾಪ್ನು ವನ್ತಿ ||  - ತಂದೆಯು ಶ್ರೇಷ್ಠನಾದ ದೇವತೆಯಾಗಿರುವನು.  ಜನ್ಮ ನೀಡುವುದಲ್ಲದೆ, ಉಪನಯನ - ಬ್ರಹ್ಮೋಪದೇಶ ಮಾಡಿ, ವಿದ್ಯೆ ಕಲಿಸುವುದರಿಂದ ತಂದೆಯ ಮಾತಿಗೇ ಹೆಚ್ಚು ಮಹತ್ವವಿರುವುದು.  ಪರಶುರಾಮನ ತನ್ನ ತಂದೆಯು ತಾಯಿ ರೇಣುಕೆಗೆ ಶಿಕ್ಷೆ ವಿಧಿಸುವುದಕ್ಕಾಗಿ ತಲೆಯನ್ನು ಕಡಿಯ ಬೇಕೆಂದು ಆಜ್ಞಾಪಿಸಿದಾಗ, ಪರಶುರಾಮನು ಒಂದು ಕ್ಷಣವೂ ಆಲೋಚಿಸದೆ ಆ ಕಾರ್ಯ ಮಾಡುವನು.  ಗುರುವಿನ ಆಜ್ಞೆಯನ್ನು ಶಿರಸಾವಹಿಸುವನು.  ತಂದೆ ಜಮದಗ್ನಿಯು ತನ್ನ ಕಾರ್ಯದಿಂದ ಸಂತುಷ್ಟನಾಗಿ ಬೇಕಾದ ವರವನ್ನು ಕೇಳಿಕೋ ಎಂದಾಗ, ತಾನು ತನ್ನ ತಾಯಿಯನ್ನೂ, ಸೋದರರನ್ನೂ ಮತ್ತೆ ಬದುಕಿಸಿಕೊಳ್ಳಬಹುದೆಂಬುದು ಪರಶುರಾಮನಿಗೆ ತಿಳಿದಿರುವುದು.  ಆದ್ದರಿಂದಲೇ ತಂದೆಯ ಮಾತಿನಂತೆ ನಡೆದು, ಸುಪುತ್ರನೆನಿಸಿಕೊಂಡು, ನಂತರ ತಂದೆಯಿಂದ ವರ ಪಡೆಯುವುದರ ಮೂಲಕ ಪರಿವಾರವನ್ನು ಬದುಕಿಸಿಕೊಳ್ಳುವನು.
ಶ್ರೀಮದ್ಭಾಗವತ ದ್ವಿತೀಯಸ್ಕಂಧ ೭ನೆಯ ಅಧ್ಯಾಯದಲ್ಲಿ ಪರಶುರಾಮಾವತಾರವನ್ನು
ಕ್ಷತ್ರಂ ಕ್ಷಯಾಯ ವಿಧಿನೋಪಭೃತಂ ಮಹಾತ್ಮಾ
ಬ್ರಹ್ಮಧ್ರುಗುಜ್ಝಿತಪಥಂ ನರಕಾರ್ತಿಲಿಪ್ಸು |
ಉದ್ಧನ್ತ್ಯಸಾವವನಿಕಣ್ವಕಮುಗ್ರವೀರ್ಯ-
ಸ್ತ್ರಿಃಸಪ್ತಕೃತ್ವ ಉರುಧಾರಪರಶ್ವಧೇನ || - ಬ್ರಹ್ಮದ್ರೋಹಿಗಳಾಗಿ, ಆರ್ಯ ಮರ್ಯಾದೆಯನ್ನು ಉಲ್ಲಂಘಿಸುವ, ನರಕಕ್ಕೆ ಯೋಗ್ಯರಾದ ದುಷ್ಟ ಕ್ಷತ್ರಿಯರು ಹೆಚ್ಚಿಕೊಂಡು ಬಿಟ್ಟಾಗ ಈ ಪರಮಪುರುಷನು ಮಹಾಪರಾಕ್ರಮಿಯಾದ ಪರಶುರಾಮನ ರೂಪದಲ್ಲಿ ಅವತಾರ ಮಾಡಿ ತೀಕ್ಷ್ಣವಾದ ಅಲುಗುಳ್ಳ ತನ್ನ ಗಂಡುಗೊಡಲಿಯಿಂದ ಇಪ್ಪತ್ತೊಂದು ಬಾರಿ ಅವರನ್ನು ಸಂಹರಿಸಿದನು.

ಅಷ್ಟಮಸ್ಕಂಧದಲ್ಲಿ ೧೩ನೆಯ ಅಧ್ಯಾಯ ಹಾಗೂ ೧೪ನೆಯ ಅಧ್ಯಾಯಗಳಲ್ಲಿ ಪರಶುರಾಮ ಕಾರ್ತವೀರ್ಯಾರ್ಜುನನನ್ನು ಕೊಲ್ಲುವ ಪ್ರಸಂಗ, ತಾಯಿ ರೇಣುಕೆಯ ತಲೆ ಕತ್ತರಿಸುವ ಪ್ರಸಂಗಗಳ ವಿಸ್ತಾರವಾದ ವಿವರಣೆಯಿದೆ.

ಶ್ರೀವಿಷ್ಣು ಸಹಸ್ರನಾಮದಲ್ಲಿ "ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ" - ಶತ್ರುಗಳನ್ನು ತರಿವ ಕೊಡಲಿ ಹೊತ್ತವನು ಖಂಡಪರಶುಃ.  ಪರಶುರಾಮನಾಗಿ, ವಿಶೇಷ ಕೊಡಲಿಯಿಂದ ದುಷ್ಟ ಕ್ಷತ್ರಿಯರ ದಮನ ಮಾಡಿದ ಭಗವಂತ ಖಂಡಪರಶುಃ ಎಂಬ ವಿವರಣೆಯಿದೆ.  ಶತ್ರುಗಳನ್ನು ಖಂಡಿಸುವ ಕೊಡಲಿ ಉಳ್ಳವನು ಎಂಬ ಅರ್ಥವೂ ಆಗುತ್ತದೆ. ಯಾರಿಂದಲೂ ಖಂಡಿಸಲಾಗದ ಪರಶು ಉಳ್ಳವನು ಎಂದೂ ಮೋಕ್ಷ ಯೋಗ್ಯರ ಅವಿದ್ಯೆಯನ್ನು ಖಂಡಿಸಿ ಉದ್ಧರಿಸುವವನು ಎಂಬ ಅರ್ಥ ವಿವರಣೆಗಳೂ ಸಿಗುತ್ತವೆ.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ಪರಶುರಾಮಾವತಾರವನ್ನು
"ರಾಮ ಭೃಗೂದ್ವಹ ಸೂರ್ಜಿತದೀಪ್ತೇ ಕ್ಷತ್ರಕುಲಾಂತಕ ಶಂಭುವರೇಣ್ಯ" - ಭೃಗುಕುಲೋದ್ಧಾರಕನೂ, ಮಹಾಕಾಂತಿಯುಕ್ತನೂ, ದುಷ್ಟ ಕ್ಷತ್ರಿಯನಾಶಕನೂ, ರುದ್ರದೇವರಿಂದ ಪ್ರಾರ್ಥಿತನೂ ಆದ ಪರಶುರಾಮ ದೇವರನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಅವಿಜಿತ ಉನೃಪತಿಸಮಿತಿವಿ ಖಂಡನ ರಮಾವರ ವೀರಪ ಭವ ಮಮ್ಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಕಾರ್ತವೀರ್ಯಾದಿ ದುಷ್ಟರಾಜ ಸಮೂಹವನ್ನು ಸಂಹರಿಸಿದ, ಭಕ್ತವೀರರನ್ನು ಕಾಪಾಡುವ ಲಕ್ಷ್ಮೀಪತ್ರಿಯಾದ ಭಾರ್ಗವ ಸ್ವರೂಪಿಯಾದ ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ
ಧೈರ್ಯಾಂಬುಧೇ ಪರಶುಚರ್ಯಾಧಿಕೃತ್ತ ಖಲವರ್ಯಾವನೀಶ್ವರ ಮಹಾ
ಶೌರ್ಯಾಭಿಭೂತ ಕೃತವೀರ್ಯಾತ್ಮಜಾತ ಭುಜವೀರ್ಯಾವಲೇಪನಿಕರ |
ಭಾರ್ಯಾಪರಾಧ ಕುಪಿತಾರ್ಯಾಜ್ಞಯಾ ಗಲಿತ ನಾರ್ಯಾತ್ಮಸೂಗಲತರೋ
ಕಾರ್ಯಾSಪರಾಧಮವಿಚಾರ್ಯಾರ್ಯಮೌಘಜಯಿ ವೀರ್ಯಾಮಿತಾ ಮಯಿ ದಯಾ || - ಧೈರ್ಯ ಸಾಗರನಾದ, ಮಹಾಪರಾಕ್ರಮದಿಂದ ಸಾವಿರ ಕೈಗಳಿಂದ ಯುದ್ಧ ಮಾಡುತ್ತಿರುವ ಕಾರ್ತವೀರ್ಯಾರ್ಜುನನನ್ನು ಸಂಹರಿಸಿ, ಕೊಡಲಿಯಿಂದಲೇ ಅತಿದುಷ್ಟರಾದ ರಾಜರುಗಳ ಸಮೂಹವನ್ನೇ ನಿರ್ಮೂಲ ಮಾಡಿದ, ಪತ್ನಿ ರೇಣುಕೆಯ ಮಾನಸಾಪರಾಧವನ್ನು ತಿಳಿದು ಕುಪಿತನಾದ ತಂದೆಯ ಆಜ್ಞೆಯಂತೆ ತನ್ನ ತಾಯಿಯ ಕುತ್ತಿಗೆಯನ್ನು ಕಡಿದ, ಸಹಸ್ರಾರು ಸೂರ್ಯರ ಪ್ರಕಾಶಕ್ಕಿಂತಲೂ ಅತಿಶಯವಾದ ಪ್ರಕಾಶವುಳ್ಳ, ಪರಶುರಾಮ ರೂಪಿಯಾದ ಶ್ರೀ ಮಹಾವಿಷ್ಣುವೇ ನನ್ನ ಅನಂತ ಅಪರಾಧಗಳನ್ನು ಮನ್ನಿಸಿ ನನ್ನಲ್ಲಿ ದಯೆ ಇಡುವವನಾಗು ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಪರಶುರಾಮಾವತಾರವನ್ನು
ಕ್ಷತ್ರಿಯರುಧಿರಮಯೇ ಜಗದಪಗತಪಾಪಂ
ಸ್ನಪಯಸಿ ಪಯಸಿ ಶಮಿತ ಭವತಾಪಂ
ಕೇಶವ ಧೃತ ಭೃಗುಪತಿ ರೂಪ ಜಯ ಜಗದೀಶ ಹರೇ - ಕ್ಷತ್ರಿಯರ ರಕ್ತದಿಂದ ಜಗತ್ತಿನ ಪಾಪಗಳನ್ನು ತೊಳೆದು ಓಡಿಸಿದ ಹಾಗೆ, ನಮ್ಮ ಪ್ರಾರಬ್ಧ ಪಾಪಗಳನ್ನು ಶಮನಗೊಳಿಸಿ, ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸುವ ಕೇಶವ ಧೃತ ಭೃಗುಪತಿ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ ಪರಶುರಾಮಾವತಾರವನ್ನು ಸಮನ್ವಯಿಸಿದಾಗ ಜೀವವು ವಿಕಾಸಗೊಂಡು ಉನ್ನತಿಗೇರಿ ಮದದಿಂದ ಉದ್ಧಟವಾದ ಪ್ರವರ್ತನೆಯನ್ನು ಬೆಳೆಸಿಕೊಂಡಾಗ ಮತ್ತು ಸಹಜೀವಿಗಳಿಗೆ ಕಂಟಕಪ್ರಾಯವಾಗಿ ಮಾರ್ಪಾಡಾದಾಗ ಪ್ರಕೃತಿ ಅಥವಾ ಭಗವಂತನೇ ಪರಶು ಹಾಗೂ ಪುರುಷನಾಗಿ ನಿಯಂತ್ರಿಸುವನು ಎಂಬುದು ಅರ್ಥವಾಗುತ್ತದೆ.   ದಾನವರೂ ಕಂಟಕಪ್ರಾಯರೂ ಆದ ಅಂಧಕ, ಗಜಾಸುರ, ತ್ರಿಪುರಾಸುರ ಮುಂತಾದ ಅನೇಕರನ್ನು ಕೊಂದು, ತಾಮಸವನ್ನು ಹತ್ತಿಕ್ಕಲು ಭಗವಂತನು ಪರಶು, ಬಾಣ, ಖಡ್ಗ, ಶೂಲ, ನಖ ಪಾಶಗಳನ್ನು ಬಳಸುವನು.  ಹಾಗೇ ನಮ್ಮೊಳಗೆ ಸದಾ ಜಾಗೃತವಾಗುತ್ತಲೇ ಇರುವ ವಿಷಯಾಸಕ್ತಿಗಳನ್ನೂ, ತಾಮಸ ಪ್ರವೃತ್ತಿಗಳನ್ನೂ, ವಿತಂಡ ತರ್ಕಗಳನ್ನೂ ಬೇರು ಸಹಿತ ನಿರ್ಮೂಲನ ಮಾಡಲು ಪರಶುವಿನಂತಹ ವಿವೇಕವನ್ನು ಉಪಯೋಗಿಸಬೇಕಾಗುವುದು.  ಸಾಧನೆಯ ಹಾದಿಯಲ್ಲಿ ನಡೆಯುವ ಸಾಧಕನಿಗೆ ಭಾರ್ಗವರಾಮನಂತನ ಅಪಾರ ಧೈರ್ಯ ಬೇಕಾಗುವುದು.  ಸಾತ್ವಿಕತೆಯನ್ನು ಕಾಪಾಡಿಕೊಳ್ಳಲು ಪರಶುರಾಮನ ಗಂಡುಗೊಡಲಿಯೇ ಬೇಕಾಗುವುದು.   ಪರ್ವತದಂತೆ ಅಚಲವಾಗಿ ನಿಂತು ವಿವೇಕದಿಂದ ಸರ್ವಾಯುಧಗಳನ್ನು ಬಳಸಿ ಸತ್ಯವನ್ನು ಹೃತ್ಕಮಲದಲ್ಲಿ ಸ್ಥಾಪಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂಬುದನ್ನು ಭಗವಂತನ ಪರಶುರಾಮಾವತಾರವು ಸೂಚಿಸುತ್ತದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಮುಖದಲ್ಲಿ ಪರಶುರಾಮರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಪರಶುರಾಮ ರೂಪದಿಂದವತರಿಸಿದಾಗ ರಮಾದೇವಿಯು ’ಹರಿಣಿ’ಯಾಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ಕುವಲಯಾಧೀಶ್ವರರ ಬವರ ಮುಖದಲಿ ಕೊಂದು
ಅವನಿ ಭಾರವನು ಇಳುಹಿ-ದ | ಇಳುಹಿದ ಸ್ವಾಮಿಭಾ-
ರ್ಗವರಾಮ ಎಮಗೆ ದಯವಾಗೋ || - ದುಷ್ಟರಾಜ್ಯಾಧಿಪರನ್ನು ಯುದ್ಧರಂಗದಲ್ಲಿ ಸಂಹರಿಸಿ, ಭೂಭಾರವನ್ನು ಇಳಿಸಿದ ಹೇ ಪರಶುರಾಮ ಸ್ವಾಮಿ ದಯತೋರೋ ಎಂದು ಪ್ರಾರ್ಥಿಸಿದ್ದಾರೆ.  

ಚಿತ್ರಕೃಪೆ : ಅಂತರ್ಜಾಲ

http://temple.dinamalar.com/en/new_en.php?id=564
https://en.wikipedia.org/wiki/Thiruvallam_Sree_Parasurama_Temple
http://www.shaivam.org/siddhanta/spke_108.htm