Sunday, August 23, 2015

ಕರುಣಾ ಸಂಧಿ - ೩೦ ನೇ ಪದ್ಯ (ಶ್ರೀಕೃಷ್ಣಾವತಾರ)

ಜನ್ಮಾದ್ಯಸ್ಯ ಯತೋSನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ |
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ||


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ 

ಕಾಯ್ದ ಸುಜನರನು ||೩೦||

ಧೇನುಕಾಸುರಮಥನ -   ಭಗವಂತನಾದ ಮಹಾವಿಷ್ಣುವು ಯೋಗನಿದ್ರೆಯಲ್ಲಿರುವಾಗ ಕೃತ-ತ್ರೇತಾಯುಗಗಳು ಮುಗಿದು, ದ್ವಾಪರ ಯುಗವು ಕೊನೆಯ ಘಟ್ಟದಲ್ಲಿರುವುದು.  ಬ್ರಹ್ಮಾದಿ ಸಕಲ ದೇವತೆಗಳಿಂದ ಸ್ತುತಿಸಲ್ಪಡುವ ಶ್ರೀಹರಿಯು ಎಚ್ಚರಗೊಳ್ಳುವನು.  ಬ್ರಹ್ಮದೇವರೊಡಗೂಡಿ  ಬಂದಿದ್ದ ಸಮಸ್ತ ದೇವತೆಗಳನ್ನು ಕಂಡು ಭಗವಂತನು ಯಾವ ಸಂಕಷ್ಟದಲ್ಲಿ ತನ್ನನ್ನು ಪ್ರಾರ್ಥಿಸುತ್ತಿರುವರೆಂದು ವಿಚಾರಿಸುವನು.  ದೇವತೆಗಳೆಲ್ಲರ ಪರವಾಗಿ ಬ್ರಹ್ಮದೇವರು ಮಹಾವಿಷ್ಣುವಿನಲ್ಲಿ  "ಪ್ರಜೆಗಳ ಅಧಿಪತಿಗಳಾದ ರಾಜರುಗಳೆಲ್ಲಾ ನಾಲ್ಕು ವರ್ಣಗಳನ್ನೂ ಯಥೋಚಿತವಾದ ರೀತಿಯಲ್ಲಿ ರಕ್ಷಿಸುತ್ತಿರುವರು.  ಪ್ರಪಂಚದಲ್ಲಿ ವೈದಿಕ ಕರ್ಮಗಳು, ಲೌಕಿಕ ಕರ್ಮಗಳು ಮತ್ತು ಧರ್ಮ ಶಾಸ್ತ್ರೋಕ್ತವಾದ ಕರ್ಮಗಳೆಂಬ ಮೂರು ವಿಧದ ಕರ್ಮಗಳನ್ನೂ ಭೂಮಂಡಲದ ರಾಜರುಗಳು ಯಥೋಚಿತವಾಗಿ ಮಾಡುತ್ತಾ ಭೂಮಂಡಲದಲ್ಲಿ ಪುನಃ ಕೃತಯುಗವನ್ನು ಸ್ಥಾಪಿಸಬೇಕೆಂಬ ಉತ್ಸಾಹದಲ್ಲಿರುವರು.  ಇದರ ಪ್ರಭಾವದಿಂದ ಕಾಲಕಾಲಕ್ಕೆ ಮಳೆ ಗಾಳಿಗಳಿಂದ ಹತ್ತು ದಿಕ್ಕುಗಳೂ ಸ್ವಚ್ಛವಾಗಿರುವುವು.  ಸಕಲ ಗ್ರಹಗಳೂ ತಮ್ಮ ತಮ್ಮ ಸ್ಥಾನದಲ್ಲಿ ಸಂಚರಿಸುತ್ತಿರುವರು.  ಹೀಗೆ ಎಲ್ಲವೂ ಅತ್ಯಂತ ಸುಸ್ಥಿತವಾಗಿ ನಡೆಯುತ್ತಿರುವಾಗ, ಧಾರ್ಮಿಕ ಕ್ರಿಯೆಗಳು ವೃದ್ಧಿಸುತ್ತಿರುವಾಗ, ಸಮಸ್ತ ಪ್ರಜೆಗಳೂ ತೃಪ್ತಿಯಿಂದಿರುವಾಗ ಮನುಷ್ಯರಿಗೆ ಕಾಲದ ಭಯ ಹಾಗೂ ಯುದ್ಧದ ಭಯವಿಲ್ಲದಂತಾಗುವುದು.  ಅತಿ ಬಲಿಷ್ಠರಾದ ರಾಜರಲ್ಲಿ ಅಸಂಖ್ಯಾತವಾದ ಸೈನ್ಯವು ಸಮಾವೇಶವಾಗಿರುವುದು.  ಅದರ ಭಾರವು ದಿನೇದಿನೇ ಹೆಚ್ಚುತ್ತಲೇ ಇರುವುದರಿಂದ ಭೂದೇವಿಗೆ ಸಹಿಸಲಾಗದ ಪೀಡೆಯುಂಟಾಗುವುದು.  ಆಯಾಸದಿಂದ ಬಹು ಬಳಲಿ ಭೂದೇವಿಯು ರಕ್ಷಣೆಯನ್ನು ಕೋರಿ ನಿನ್ನ ಬಳಿಗೆ ಬಂದಿರುವಳು.  ಭೂಮಂಡಲದ ರಾಜರ ಸ್ವರೂಪವು ಪ್ರಳಯಕಾಲದ ಅಗ್ನಿಯಂತಿರುವುದು.  ಪೃಥ್ವಿಯನ್ನು ದೃಢವಾಗಿ ನಿಲ್ಲಿಸಿದ್ದ ಪರ್ವತಗಳು ಸಡಿಲವಾಗುತ್ತಿರುವುದು.  ಈ ಕಾರಣದಿಂದ ನೌಕೆಯ ರೂಪದಲ್ಲಿರುವ ಪೃಥ್ವೀದೇವಿಯು ರಸಾತಲದಲ್ಲಿರುವ ಜಲರಾಶಿಯಲ್ಲಿ ಮುಳುಗಿ ಹೋಗುವಳು.  ಕ್ಷತ್ರಿಯರ ತೇಜಸ್ಸು, ಶರೀರ ಮತ್ತು ಬಲಗಳಿಂದಲೂ, ವಿಸ್ತಾರವಾದ ರಾಜ್ಯಗಳಿಂದಲೂ, ಕೋಟಿ ಕೋಟಿ ಸಂಖ್ಯೆಯ ಸೈನ್ಯಗಳಿಂದಲೂ ಭೂಮಂಡಲವು ತುಂಬಿರುವುದು.  ಭಾರ ಹೊತ್ತು ಶ್ರಮಪಡುತ್ತಿರುವ ವಸುಂಧರೆಯು ನಿಶ್ಚೇಷ್ಟಿತಳಾಗಿರುವಳು.  ಜಗತ್ತಿಗೆ ಆಧಾರಭೂತಳಾಗಿರುವ, ಮನುಷ್ಯರಿಗೆ ಕರ್ಮಭೂಮಿಯಾಗಿರುವ ವಸುಂಧರೆಯು ಪೀಡನೆಗೊಳಗಾವುದರಿಂದ ಸಮಸ್ತ ಪ್ರಜೆಗಳ ಸಕಲ ಕರ್ಮಗಳೂ ಲುಪ್ತವಾಗುವುವು.  ಅಚಲಳಾಗಿರುವ ಭೂದೇವಿಯು ತನ್ನ ಸಹಜ ಗುಣವಾದ ಕ್ಷಮೆಯನ್ನು ತ್ಯಜಿಸಿ, ಚಲತ್ವವನ್ನು ಹೊಂದುವಳು".  ಭಗವಂತಾ ವಸುಂಧರೆಯ ಭಾರವನ್ನು ಹರಣ ಮಾಡುವುದು ನಿನ್ನಿಂದ ಮಾತ್ರ  ಸಾಧ್ಯವಾಗುವುದರಿಂದ  ನಾವೆಲ್ಲರೂ ನಿನ್ನನ್ನು ಪ್ರಾರ್ಥಿಸಲು ಬಂದಿರುವೆವು.  ಸಕಲ ಮಾನವರೂ ಧರ್ಮಮೂಲವಾದ ವ್ಯವಹಾರವನ್ನೇ ನಡೆಸುತ್ತಿರುವುದರಿಂದ, ಧರ್ಮಕ್ಕೆ ಹಾನಿಯಾಗದಂತೆಯೂ, ಭೂಭಾರವು ಕಡಿಮೆಯಾಗುವಂತೆಯೂ ಮಾಡುವುದಕ್ಕೆ ಉಪಾಯವನ್ನು ಯೋಚಿಸಬೇಕಾಗಿದೆ.  ಭಗವಂತನೇ ನಾವೆಲ್ಲರೂ ಮೇರುಪರ್ವತಕ್ಕೆ ತೆರಳಿ ನಿನ್ನ ನಿರ್ಣಯವನ್ನು ತಿಳಿಯಬೇಕಾಗಿದೆ ಎಂದು ಪ್ರಾರ್ಥಿಸಿದನು.

ಸಮಸ್ತ ದೇವತೆಗಳೂ ಬ್ರಹ್ಮನ ಆಜ್ಞಾನುಸಾರ ಮೇರುಪರ್ವತದ ಸಭಾಭವನದಲ್ಲಿ ಯಥಾಯೋಗ್ಯತೆ ಆಸೀನರಾಗಿರುವರು.  ಎಲ್ಲರ ಸಮಕ್ಷಮದಲ್ಲಿ ಭೂದೇವಿಯು ಭಗವಂತನಲ್ಲಿ ತನ್ನ ಅಳಲನ್ನು ಅರುಹುವಳು.  ಪ್ರತಿಯೊಂದು ಯುಗದಲ್ಲಿಯೂ ಜಗತ್ತಿನ ಹಿತಕ್ಕಾಗಿ ನನ್ನ ಭಾರವನ್ನಿಳಿಸುತ್ತಿರುವ  ನಾರಾಯಣನೇ ನನ್ನನ್ನು ಉದ್ಧರಿಸೆಂದು ಪ್ರಾರ್ಥಿಸುವಳು. ಬ್ರಹ್ಮ ದೇವರ ಆದೇಶದಂತೆ ದೇವಾನುದೇವತೆಗಳೆಲ್ಲರೂ ತಮ್ಮ ತೇಜಸ್ಸಿಗೆ ಸಮಾನವಾಗಿರುವ ತೇಜಸ್ಸುಳ್ಳ ತಮ್ಮ ಅಂಶಗಳನ್ನು ತಮ್ಮ ಶರೀರದಿಂದಲೇ ಸೃಷ್ಟಿಸುವರು.  ಆಗ ಬ್ರಹ್ಮ ದೇವರು ಹಿಂದೊಮ್ಮೆ ತಾವು ಸಮುದ್ರ ರಾಜನಿಗೆ ಕೊಟ್ಟ ಶಾಪದ ಕಥೆಯನ್ನು ತಿಳಿಸುತ್ತಾ ಸಮುದ್ರ ರಾಜನು ತನ್ನ ಒಂದಂಶದಿಂದ ಭರತವಂಶದಲ್ಲಿ ಹುಟ್ಟಿ ಶಾಂತನು ಮಹರಾಜನಾಗಿ, ಗಂಗೆಯನ್ನು ವರಿಸುವನು.  ಅಷ್ಟ ವಸುಗಳು ಶಾಪ ವಿಮೋಚನೆಗೆಂದು ಗಂಗೆಯ ಪುತ್ರರಾಗಿ ಜನಿಸಿ ಶಾಪ ವಿಮೋಚನೆಯಾಗುವರು.  ಶಾಂತನುವಿನ ಎರಡನೆಯ ಪತ್ನಿಯಾದ ಸತ್ಯವತಿಯಲ್ಲಿ ಕುರುವಂಶದ ಕುಡಿಯಾಗಿ ವಿಚಿತ್ರವೀರ್ಯನು ಜನಿಸುವನು.  ಅವನ ಪುತ್ರರಾಗಿ ಇಬ್ಬರು ಮಕ್ಕಳು ಪಾಂಡು ಮತ್ತು ಧೃತರಾಷ್ಟ್ರನೆಂಬುವರ ಮಕ್ಕಳಲ್ಲಿ ಮಹತ್ತರ ಯುದ್ಧವಾಗಿ, ಯುದ್ಢದಲ್ಲಿ ಭರತ ಖಂಡದ ಸಮಸ್ತ ರಾಜರುಗಳೂ ಭಾಗವಹಿಸಿ, ಪರಸ್ಪರ ಕಾದಾಡಿ ಭೂಮಂಡಲದಲ್ಲಿರುವ ನಗರ-ರಾಷ್ಟ್ರಗಳೆಲ್ಲವೂ ನಿರ್ಜನವಾಗುವುದು.  ಭೂಭಾರ ಹರಣಕ್ಕೆ ಭೂಮಿಕೆಯು ಶಾಂತನುವಿನ ಜನ್ಮದಲ್ಲಿಯೇ ಪ್ರಾರಂಭವಾಗಿದೆ ಎಂದು ತಿಳಿಸಿದನು.  ಎಲ್ಲಾ ದೇವತೆಗಳೂ ತಮ್ಮ ಅಂಶದಿಂದ ಭೂಮಿಯಲ್ಲಿ ಅವತರಿಸಿದ ನಂತರ, ಇತ್ತ ನಾರದರು ಭಗವಂತನಲ್ಲಿ ಶ್ರೀರಾಮಚಂದ್ರನ ಕಥೆಯನ್ನು ನೆನಪಿಸುತ್ತಾ ಭಗವಂತಾ ನೀನು ತಾರಕಾಮಯ ಸಂಗ್ರಾಮದಲ್ಲಿ ಕಾಲನೇಮಿಯೆಂಬ ಯಾವ ದೈತ್ಯನನ್ನು ಸಂಹರಿಸಿದೆಯೋ ಅವನೀಗ ಉಗ್ರಸೇನನ ಮಗ ಕಂಸನಾಗಿ ಮಥುರಾ ಎಂಬ ಪಟ್ಟಣದಲ್ಲಿ ಜನಿಸಿರುವನು.  ಅವನು ಅತಿ ಭಯಂಕರನು, ಲೋಕಪೀಡಕನೂ ಆಗಿರುವನು.    ಹಿಂದೆ ಕುದುರೆಯಂತೆ ಸಂಚರಿಸುತ್ತಿದ್ದ ಹಯಗ್ರೀವನೆಂಬ  ದೈತ್ಯನು ಈಗ  ಕಂಸನ ತಮ್ಮ ಕೇಶೀ ಎಂಬ ಹೆಸರಿನಿಂದ ಜನಿಸಿರುವನು.  ದಾನವಶ್ರೇಷ್ಠನಾದ ದಿತಿಯ ಮಗ ದಿಷ್ಟನೆಂಬುವನು ಆನೆಯಾಗಿ ಕಂಸನ ವಾಹನನಾಗಿದ್ದಾನೆ.  ದೈತ್ಯರಲ್ಲೇ ಅತ್ಯಂತ ದರ್ಪಿಷ್ಠನಾಗಿದ್ದ ಲಂಬನೆಂಬುವನು ಪ್ರಲಂಬನಾಗಿ ಆಲದಮರವನ್ನು ಆಶ್ರಯಿಸಿದ್ದಾನೆ.  ಖರನೆಂಬ ದೈತ್ಯನು ಈಗ ಧೇನುಕನಾಗಿದ್ದಾನೆ.  ವಾರಾಹ ಮತ್ತು ಕಿಶೋರನೆಂಬ ದೈತ್ಯ ಬಲಿಷ್ಠರು ಚಾಣೂರ-ಮುಷ್ಟಿಕರೆಂಬ ಜಟ್ಟಿಗಳಾಗಿ ಕಂಸನೊಡನಿದ್ದಾರೆ.  ಮಯ ಮತ್ತು ತಾರ ಎಂಬ ಹೆಸರಿನ ದೈತ್ಯರು ಭೂಮಿಪುತ್ರನಾದ ನರಕನ ಪ್ರಾಗ್ಜ್ಯೋತಿಷ ನಗರದಲ್ಲಿ ವಾಸವಾಗಿದ್ದಾರೆ.  ಅವರೆಲ್ಲರೂ ಒಟ್ಟಿಗೇ ಸೇರಿ ಭೂಮಂಡಲದ ಸಮಸ್ತ ಮಾನವರನ್ನೂ ಪೀಡಿಸುತ್ತಿದ್ದಾರೆ.  ಲೋಕ ಹಿತಕ್ಕಾಗಿ ಅನೇಕಾನೇಕ ಅವತಾರಗಳನ್ನು ಎತ್ತಿರುವ ಭಗವಂತನೇ ನೀನು ಸೃಷ್ಟಿಸಿರುವ ದೇವತೆಗಳೆಲ್ಲರೂ ಭೂಮಂಡಲದಲ್ಲಿ ಅವತರಿಸಿ, ನಿನ್ನ ವ್ಯಕ್ತಾವತಾರವನ್ನು ನೋಡಲು ಕಾತುರದಿಂದಿದ್ದಾರೆ.  ಭೂದೇವಿಯನ್ನು ರಕ್ಷಿಸಲು, ಭೂಭಾರ ಹರಣ ಕಾರ್ಯ ಮಾಡಲು, ಕಂಸನನ್ನು ಅವನ ಪರಿವಾರ ಸಹಿತವಾಗಿ ನಾಶಗೊಳಿಸಲು ಭೂಮಿಯಲ್ಲಿ ಅವತರಿಸಬೇಕೆಂದು ಪ್ರಾರ್ಥಿಸುತ್ತಾರೆ.  

ಇವರಷ್ಟೇ ಅಲ್ಲದೆ ಬಲಿರಾಜನ ಮಗಳಾದ ಪೂತನಿ, ಜರಾಸಂಧ, ಬಾಣಾಸುರ ಮುಂತಾದವರನ್ನೂ ನಾಶಗೊಳಿಸಬೇಕಾಗಿದೆ.  ಗರುಡನ ಭಯದಿಂದಾಗಿ ಯಮುನಾ ನದಿಯ ಮಡುವಿನಲ್ಲಿ ಅವಿತಿರುವ ಕಾಲಿಯ ಸರ್ಪವನ್ನೂ ಅಡಗಿಸಬೇಕಾಗಿದೆಯಾದ್ದರಿಂದ ಮಾನವ ಶರೀರವನ್ನು ಧರಿಸಿ, ತಾನು ಅವತರಿಸುವುದಾಗಿ ಭಗವಂತನು ನಾರದರಿಗೆ ಅಭಯವನ್ನೀಯುವನು.  ವಸುದೇವನೆಂಬ ಹೆಸರಿನಿಂದ  ಗೊಲ್ಲರಿಗೆ ಅಧಿಪತಿಯಾಗಿರುವ ಕಶ್ಯಪ ಮಹರ್ಷಿಗಳಿಗೂ ಮತ್ತು ದೇವಕಿಯಾಗಿರುವ ಅದಿತಿಗೂ, ತಾನು ಮಗನಾಗಿ ಜನಿಸುವೆನೆಂದು ಭಗವಂತನು ನುಡಿಯುವನು.  ಕಶ್ಯಪ ಮಹರ್ಷಿಗಳ ಮತ್ತೊಬ್ಬ ಮಡದಿ ಸುರಭಿಯು ರೋಹಿಣಿಯಾಗಿ ಜನಿಸಿ ವಸುದೇವನ ಭಾರ್ಯೆಯಾಗಿರುವಳು.  ಭಗವಂತನು ವಸುದೇವ-ದೇವಕಿಯರ ಎಂಟನೆಯ ಮಗುವಾಗಿ ಅವತರಿಸುವ ಮೊದಲು ಏಳನೆಯ ಗರ್ಭದಲ್ಲಿ ಬರುವ ಮಗುವನ್ನು ಭಗವಂತನ ಆದೇಶದ ಮೇರೆಗೆ ನಿದ್ರಾದೇವಿಯು ದೇವಕಿಯ ಗರ್ಭದಿಂದ ಸೆಳೆದು ರೋಹಿಣಿಯ ಗರ್ಭದಲ್ಲಿ ಸೇರಿಸುತ್ತಾಳೆ.  ಗರ್ಭದಿಂದ ಸೆಳೆಯಲ್ಪಟ್ಟ ಮಗುವು ಮುಂದೆ ಸಂಕರ್ಷಣನೆಂದು ಕರೆಸಿಕೊಂಡು ಭಗವಂತನಿಗೆ ಹಿರಿಯ ಸಹೋದರನಾಗುತ್ತಾನೆ.  ಶ್ರೀಕೃಷ್ಣನಿಗೆ ಅಣ್ಣನಾಗಿ, ಬಲರಾಮನಾಗುತ್ತಾನೆ. 

ಭಗವಾನ್ ಶ್ರೀಕೃಷ್ಣನ ಅವತಾರವು ಮುಖ್ಯವಾಗಿ ಭೂಭಾರ ಹರಣ ಕಾರ್ಯಕ್ಕಾಗಿಯೇ ಆಗಿರುವುದೆಂಬುದು ತಿಳಿಯುತ್ತದೆ.  ಪುಟ್ಟ ಮಗುವಾಗಿ, ಆಟವಾಡುವ ಬಾಲಕನಾಗಿ ಕೃಷ್ಣನು ಅನೇಕ ದೈತ್ಯರ ವಧೆಯನ್ನು ಮಾಡುತ್ತಾನೆ.  ಅವತಾರದ ಸಮಾಪ್ತಿಯವರೆಗೂ ದುಷ್ಟ ದಾನವರ ಸಂಹಾರ ನಡೆಯುತ್ತದೆ.  ತಾನಿಟ್ಟ ಪ್ರತಿ ಹೆಜ್ಜೆಯಲ್ಲೂ, ತಾನು ಭಗವಂತನೇ, ಸಾಮಾನ್ಯನಲ್ಲ ಎಂಬುದನ್ನು ಶ್ರೀಕೃಷ್ಣನು ಜಗತ್ತಿಗೆ ತೋರಿಸುತ್ತಲೇ ಇರುವನು.  ಭೂದೇವಿಯ ರಕ್ಷಣೆಯ ಸಲುವಾಗಿ, ನಡೆಯುತ್ತಿರುವ ಭೂಭಾರ ಹರಣದ ಕಾರ್ಯದ ಜೊತೆಗೇ ಭಗವಂತನು ತನ್ನ ಬಾಲ್ಯ ಲೀಲೆಗಳಿಂದ ಸರ್ವರನ್ನೂ ವಿಸ್ಮಯಗೊಳಿಸುತ್ತಾ, ಮೋಡಿ ಮಾಡುತ್ತಾ, ತನ್ನ ಪಾಶದಲ್ಲಿ ಸಿಲುಕಿಸಿಕೊಳ್ಳುವ ಅತ್ಯಂತ ಆಕರ್ಷಕ ವ್ಯಕ್ತಿತ್ವವನ್ನು ತೋರುವನು.

ಹರಿವಂಶದಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿರುವ ಭೂಭಾರ ಹರಣಕ್ಕಾಗಿಯೇ ಆದ ಕೃಷ್ಣಾವತಾರದ ಕಥೆಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ "ಕೃಷ್ಣ ಚಾರಿತ್ರ್ಯ ಮಂಜರಿ"ಯಲ್ಲಿ ೨೮ ಪದ್ಯಗಳ ಗುಚ್ಛದಲ್ಲಿ 
ವಿಷ್ಣು ಬ್ರಹ್ಮಾದಿದೇವೈಃ ಕ್ಷಿತಿಭರಹರಣೇ ಪ್ರಾರ್ಥಿತಃ ಪ್ರಾದುರಾಸೀದ್
ದೇವಕ್ಯಾಂ ನಂದನಂದೀ ಶಿಶುವಧವಿಹಿತಾಂ ಪೂತನಾಂ ಯೋ ಜಘಾನ್ |
ಉತ್ಥಾನೌತ್ಸುಕ್ಯಕಾಲೇ ರಥಚರಣಗತಂ ಜಾಸುರಂ ಪಾದಘಾತೈ -
ಶ್ಚಕ್ರಾವರ್ತಂ ಚ ಮಾತ್ರಾ ಗುರುರಿತಿ ನಿಹಿತೋ ಭೂತಲೇ ಸೋSವತಾನ್ಮಾನ್ || - ಭೂಭಾರ ಹರಣಕ್ಕಾಗಿ ಬ್ರಹ್ಮ ರುದ್ರಾದಿ ದೇವತೆಗಳಿಂದ ಪ್ರಾರ್ಥಿಸಲ್ಪಟ್ಟವನಾಗಿ ಪ್ರಾದುರ್ಭಾವವಾದ ರೂಪವೇ ಕೃಷ್ಣ.  ದೇವಕಿಯಲ್ಲಿ ಜನಿಸಿ ನಂದಗೋಪನಿಗೆ ಆನಂದವನ್ನು ನೀಡಿ, ಶಿಶುವಧಾರ್ಥವಾಗಿ ಬಂದ ಪೂತನೆಯನ್ನು ಸಂಹರಿಸಿ, ಉಪನಿಷ್ಕ್ರಮಣ ಕಾಲದಲ್ಲಿ ರಥದ ರೂಪದಲ್ಲಿ ಬಂದ ಶಕಟಾಸುರನನ್ನು ತನ್ನ ಪಾದದಿಂದ ತಾಡನ ಮಾಡುವ ಮಾತ್ರದಿಂದಲೇ ಕೊಂದು, ಸುಂಟರಗಾಳಿ ರೂಪದಲ್ಲಿ ಬಂದ ತೃಣಾವರ್ತನನ್ನೂ ಆಕಾಶದೆತ್ತರದಿಂದ ಭೂತಲದಲ್ಲಿ ಬೀಳಿಸಿ, ಪುಡಿ ಪುಡಿಯಾಗುವಂತೆ ಮಾಡಿ, ಅವರಿಬ್ಬರನ್ನೂ ಸಂಹರಿಸಿದ ಶ್ರೀಕೃಷ್ಣನು ನಮ್ಮನ್ನು ರಕ್ಷಿಸಲೆಂದು ಪ್ರಾರ್ಥಿಸಿದ್ದಾರೆ.

ಪುರಾಣಗಳಲ್ಲಿ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ದಶರಥರಾಮ, ಬಲರಾಮ, ಬುದ್ಧ, ಕಲ್ಕಿ ಎಂದು ದಶಾವತಾರಗಳ ಉಲ್ಲೇಖವಿದೆ.  "ರಾಮೋ ರಾಮಶ್ಚ ರಾಮಶ್ಚ" - ಪರಶುರಾಮ, ದಶರಥರಾಮ ಮತ್ತು ಬಲರಾಮ ಎಂಬರ್ಥ.  ಆದರೆ ಶ್ರೀಮದಾಚಾರ್ಯರು ಭಗವಂತನ ದಶಾವತಾರಗಳು  ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ದಶರಥರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ ಎಂದು ಸ್ಪಷ್ಟ ಪಡಿಸಿದ್ದಾರೆ.  ಬಲರಾಮ ಭಗವಂತನ ಆವೇಶಾವತಾರವಾಗುವುದು.  ಆದರೆ ಬಲರಾಮನೊಳಗಿದ್ದು ಧೇನುಕಾಸುರನ ವಧೆ ಮಾಡುವುದು ಭಗವಂತನೇ ಆಗಿರುವುದರಿಂದ ಕೃಷ್ಣನೇ ಧೇನುಕಾಸುರಮಥನನೆಂದು ಹೆಸರು ಪಡೆದಿರುವುದು.  ಧೇನುಕಾಸುರನು ಕಂಸನ ಪರಿವಾರದವನು.  ಮೇರು ಪರ್ವತದ ಸಭೆಯಲ್ಲಿ ಭಗವಂತನು ದೇವತೆಗಳಿಗೆ ತಾನು ಕಂಸನನ್ನು ಪರಿವಾರ ಸಹಿತವಾಗಿ ನಾಶ ಮಾಡುವೆನೆಂದು ಅಭಯ ಕೊಡುವನು.  ಕೊಟ್ಟ ಮಾತಿನಂತೆಯೇ ಬಲರಾಮನಲ್ಲಿ ನಿಂತು ತಾನೇ ಮಾಡಿ, ಬಲರಾಮನಿಂದ ಮಾಡಿಸಿರುವನು.  (ಶ್ರೀ ಬನ್ನಂಜೆಯವರ ಪ್ರವಚನ ಆಧಾರಿತ).

ಶ್ರೀವಿಷ್ಣು ಸಹಸ್ರನಾಮದಲ್ಲಿ  ವಸುದೇವನ ಸುತ "ವಾಸುದೇವ"ನೆಂಬ ನಾಮ ಮೂರು ಬಾರಿ ಪುನರುಕ್ತಿಯಾಗಿದೆ.  ವಾಸುದೇವ ಪದವನ್ನು ಬಿಡಿಸಿದಾಗ ವಾ+ಸು+ದೇ+ಅವ - ವಾ=ಎಲ್ಲೆಡೆ ತುಂಬಿರುವವನು, ಸೂ ಅಥವಾ ಸೂತೇ=ಎಲ್ಲವನ್ನೂ ಹೆತ್ತವನು (ಸರ್ವ ಸೃಷ್ಟಿಕರ್ತ), ದೇ=ಎಲ್ಲವನ್ನೂ ಕೊಡುವವನು (ಸರ್ವದಾತ), ಅವ=ಎಲ್ಲರ ರಕ್ಷಕ ಎಂದೂ, ಜ್ಞಾನ ಪ್ರೇರಕ ಎಂದೂ, ’ಬೆಳಗುವ ಸಂಪತ್ತು’=ಕೇವಲ ಶುದ್ಧವಾದ ಸಾತ್ವಿಕ ಮನಸ್ಸಿಗೆ ಅಭಿವ್ಯಕ್ತವಾಗುವವನು, ಅಷ್ಟವಸುಗಳಲ್ಲಿ ಪ್ರಧಾನನಾದ ಅಗ್ನಿ ಪ್ರತೀಕದಲ್ಲಿ ಉಪಾಸ್ಯನಾದವ ಹಾಗೂ ಎಲ್ಲೆಡೆ ನೆಲೆಸಿ ಎಲ್ಲವನ್ನೂ ಆವರಿಸಿ ವಿಹರಿಸುವವನು ವಾಸುದೇವ ಎಂಬ ಅರ್ಥವಾಗುತ್ತದೆ. (ಶ್ರೀ ಬನ್ನಂಜೆಯವರ ಪ್ರವಚನ ಆಧಾರಿತ).

ಶ್ರೀವಿಷ್ಣು ಸಹಸ್ರನಾಮದಲ್ಲಿ "ಭಗವಾನ್ ಭಗಹಾನಂದಿ ವನಮಾಲೀ ಹಲಾಯುಧಃ" ಎಂಬ ಉಲ್ಲೇಖವಿದೆ.  ಹಲಾಯುಧಃ ಎಂದರೆ ನೇಗಿಲನ್ನು ಆಯುಧವಾಗಿ ಬಳಸಿದ ನರರೂಪಿ ಬಲರಾಮನೊಳಗೆ, ಆವಿರ್ಭೂತಿಯಾದ ಭಗವಂತ ಹಲಾಯುಧಃ.  ಭಗವಂತನು ಧರಿಸುವ ಅನೇಕಾನೇಕ ಆಯುಧಗಳಲ್ಲಿ ನೇಗಿಲೂ ಒಂದಾಗಿದೆ.  ವಿಶ್ವರೂಪವನ್ನು ತೋರಿಸಿದ ಶ್ರೀಕೃಷ್ಣನ ನಾನಾ ಬಾಹುಗಳಲ್ಲಿ ಬೇರೆ ಬೇರೆ ಆಯುಧಗಳಿದ್ದಂತೆ ಒಂದು ಬಾಹುವಿನಲ್ಲಿ ’ಹಲಾಯುಧ’ವನ್ನೂ ಕಾಣಬಹುದಾಗಿದೆ.  ’ಹಲ’ವೆಂದರೆ ಕಬ್ಬಿಣದ ನೇಗಿಲು, ಕಪ್ಪು ಬಣ್ಣದ್ದು.  ಭಗವಂತನು ತನ್ನ ಭಕ್ತರ ಪರಿಪಾಲನೆಗಾಗಿ, ಯಜ್ಞಕ್ಕೆ ಅವಶ್ಯಕವಾದ ದವಸ ಧಾನ್ಯಗಳನ್ನು ಬೆಳೆಯಲು ಭೂಮಿಯನ್ನು ಉಳಬೇಕು, ಬೆಳೆಯನ್ನು ಬೆಳೆಯಬೇಕು.  ಇದಕ್ಕೆ ಬೇಕಾದ ಉಪಕರಣಗಳಲ್ಲಿ ನೇಗಿಲು ಪ್ರಮುಖವಾದುದು.  ಹೀಗೆ ವ್ಯವಸಾಯಕ್ಕೆ ಬಳಸಲ್ಪಡುವ ನೇಗಿಲನ್ನು ಶತ್ರು ಸಂಹಾರಕ್ಕೆಂದು ಬಳಸಿದಾಗ ಅದನ್ನು ಹಲಾಯುಧವೆನ್ನುತ್ತಾರೆ.  ನೇಗಿಲೆಂಬ ಉಪಕರಣದಲ್ಲಿರುವ ದಿವ್ಯಶಕ್ತಿಯು ಭಗವಂತನೇ ಆಗಿದ್ದಾನೆ.  ಈ ಹಲಾಯುಧವನ್ನು ಧರಿಸಿರುವ ಭಗವಂತನು ಹಲಧರನೇ ಆಗಿರುವನು.

ಆಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ನಾಲ್ಕು ಚರಣಗಳಲ್ಲಿ ಭಗವಂತನ ಕೃಷ್ಣಾವತಾರವನ್ನು
"ದೇವಕಿನಂದನ ಸುಂದರರೂಪ ರುಕ್ಮಿಣಿ ವಲ್ಲಭ ಪಾಂಡವ ಬಂಧೋ | ದೇವಕಿನಂದನ ನಂದಕುಮಾರ ವೃಂದಾವನಾಂಚನ ಗೋಕುಲ ಚಂದ್ರ | ಕಂದಫಲಾಶನ ಸುಂದರರೂಪ ನಂದಿತಗೋಕುಲ ವಂದಿತಪಾದ" - ಪರಮ ಸುಂದರನೂ, ರುಕ್ಮಿಣೀ ಪತಿಯೂ, ಪಾಂಡವರ ಬಂಧುವೂ ಆದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ.  ದೇವಕೀ ವಸುದೇವರಿಗೂ, ನಂದಯಶೋದೆಯರಿಗೂ ಪುತ್ರನಾದ, ವೃಂದಾವನದಲ್ಲಿ ವಿಹರಿಸುತ್ತಿದ್ದ, ಗೋಕುಲವನ್ನು ಬೆಳಗಿದ ಕಂದಫಲಗಳನ್ನು ತಿನ್ನುವ, ಸುಂದರರೂಪಿಯಾದ, ಗೋ, ಗೋಪಗೋಪಿಯರನ್ನು ಆನಂದಗೊಳಿಸಿದ, ಸಜ್ಜನರಿಂದ ವಂದಿತನಾದವನೇ ನಿನಗೆ ನಮಸ್ಕರಿಸುತ್ತೇನೆ ಎಂದೂ 
ನವಮೋಧ್ಯಾಯದಲ್ಲಿ
ಸುಲಲಿತ ತನುವರವರದ ಮಹಾಬಲಯದುವರ ಪರ್ಥಪಭವಮಮ ಶರಣಮ್ |
ಶುಭತಮ ಕಥಾಶಯ ಪರಮ ಸದೋದಿತ ಜಗದೇಕ ಕಾರಣ ರಾಮರಮಾರಮಣ || - ಸುಂದರರೂಪಿಯೂ, ಭಕ್ತರಿಗೆ ಇಷ್ಟಾರ್ಥವನ್ನು ಕರುಣಿಸುವ ಸರ್ವಶಕ್ತನೂ ಅರ್ಜುನ ರಕ್ಷಕನೂ ಕೃಷ್ಣಾವತಾರಿಯೂ ಆದ ಬ್ರಹ್ಮಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ ಪುರುಷೋತ್ತಮನೂ, ಸದಾ ಪ್ರಕಾಶಮಾನನು ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾ ರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.


ಶ್ರೀಶಂಕರಾಚಾರ್ಯರು  ತಮ್ಮ ಶ್ರೀ ಕೃಷ್ಣಾಷ್ಟಕಮ್ ಸ್ತೋತ್ರಮ್ ನಲ್ಲಿ

ಭುವೋ ಭರಾವತಾರಕಂ ಭವಾಬ್ಧಿ ಕರ್ಣಧಾರಕಂ | ಯಶೋಮತೀ ಕಿಶೋರಕಂ ನಮಾಮಿ ಚಿತ್ತ ಚೋರಕಮ್ || - ಭೂಮಿಯನ್ನು ಭಾರದಿಂದ ರಕ್ಷಿಸುವ, ಭಕ್ತರ ಸಂಸಾರ ನೌಕೆಯನ್ನು ನಡೆಸುವ, ಯಶೋಮತಿಯ ಪುತ್ರ, ಗೋಪಿಯರ ಚಿತ್ತ ಚೋರನನ್ನು ನಮಿಸುವೆನು ಎಂದೂ

ತ್ರೈವಿಷ್ಟಪರಿಪುವೀರಘ್ನಂ ಕ್ಷಿತಿಭಾರಘ್ನಂ ಭವರೋಗ ಘ್ನಂ | ಕೈವಲ್ಯಂ ನವನೀತಾ ಹಾರಮನಾಹಾರಂ ಭುವನಾಹಾರಮ್ || - ದೇವತೆಗಳ ಶತ್ರುಗಳನ್ನು ಸಂಹರಿಸುವವನು, ಭೂಭಾರವನ್ನು ಇಳಿಸಿದವನು, ಸಂಸಾರರೋಗ ನಾಶಕನು, ಮೋಕ್ಷ ಸ್ವರೂಪನು, ವಿಶ್ವವೇ ಆಹಾರವಾಗಿರುವವನನ್ನು ನಮಸ್ಕರಿಸಿ ಎಂದೂ

ಕಾಂತಂ ಕಾರಣಕಾರಣಮಾದಿಮನಾದಿಂ ಕಾಲ ಘನಾಭಾಸಂ | ಕಾಲಿಂದೀಗತಕಾಲಿಯಶಿರಸಿರು ನೃತ್ಯಂತಂ ಸುವಿನೃತ್ಯಂತಮ್ || - ಕಾಂತನು, ಕಾರಣದ ಕಾರಣನು, ಅನಾದಿಯು, ಆದಿಯು, ಅಭಾಸರಹಿತ ಕಾಲಸ್ವರೂಪನು, ಯಮುನಾ ನದಿಯಲ್ಲಿ ಕಾಲಿಯಾ ಸರ್ಪದ ಹೆಡೆಯ ಮೇಲೆ ಸುಂದರವಾದ ನೃತ್ಯ ಮಾಡುತ್ತಿರುವವನನ್ನು ನಮಸ್ಕರಿಸಿರಿ ಎಂದೂ ಸ್ತುತಿಸಿ ಪ್ರಾರ್ಥಿಸಿದ್ದಾರೆ.


ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಶ್ರೀಕೃಷ್ಣಾವತಾರವನ್ನು ಒಟ್ಟು ಹನ್ನೆರಡು ಚರಣಗಳಲ್ಲಿ ಸ್ತುತಿಸಿ, ವರ್ಣಿಸಿದ್ದಾರೆ :

ಭಗವಂತನು ಶ್ರೀಕೃಷ್ಣನಾಗಿ ಅವತರಿಸಿ, ತನ್ನ ಬಾಲ್ಯಲೀಲೆಗಳಿಂದ ಎಲ್ಲರನ್ನೂ ಸಂತೋಷ ಪಡಿಸುವುದನ್ನೂ, ತುಂಟತನದಿಂದಾಗಿ ತಾಯಿಯಿಂದ ಬಂಧಿಸಲ್ಪಡುವುದನ್ನೂ, ಗೋವರ್ಧನೋದ್ಧಾರನಾಗಿರುವುದನ್ನೂ, ತನ್ನ ಆಟಗಳಲ್ಲಿಯೇ ದುಷ್ಟ ರಕ್ಕಸರನ್ನು ಸಂಹರಿಸುತ್ತಾ ಭಕ್ತರನ್ನು ಮೋಹಗೊಳಿಸುವುದನ್ನೂ, ಸುಂದರವಾಗಿ ವರ್ಣಿಸುತ್ತಾರೆ.    ಹಾಗೇ ಶ್ರೀಕೃಷ್ಣಾವತಾರದ ಮೂಲ ಉದ್ದೇಶವನ್ನು ವರ್ಣಿಸುತ್ತಾ
ಕಂಸಾದಿಕಾಸದವ ತಂಸಾವನೀಪತಿ ವಿಹಿಂಸಾಕೃತಾತ್ಮ ಜನುಷಂ
ಸಂಸಾರ ಭೂತಮಿಹ ಸಂಸಾರಬದ್ಧ ಮನಸಂ ಸಾರಚಿತ್ಸುಖ      ತನುಮ್ |
ಸಂಸಾಧಯಂತಮನಿಶಂ ಸಾತ್ವಿಕವ್ರಜಮಹಂ ಸಾದರಂ ಬತ ಭಜೇ
ಹಂಸಾದಿ ತಾಪಸ ರಿರಂಸಾಸ್ಪದಂ ಪರಮ ಹಂಸಾದಿ ವಂದ್ಯ ಚರಣಮ್ || - ಕಂಸಾದಿ ದುಷ್ಟರಾಜರ ನಾಶಕ್ಕಾಗಿ ಅವತರಿಸಿದ, ಸರ್ವೋತ್ತಮನಾದ, ತನ್ನನ್ನೆ ಸದಾಕಾಲ ಭಜಿಸುತ್ತಿರುವ ಜ್ಞಾನಿಗಳಿಗೆ ಮುಕ್ತಿಪ್ರದನಾದ, ಸರ್ವವನ್ನೂ ಬಿಟ್ಟ ಹಂಸ ಪರಮಹಂಸಾದಿ ತಾಪಸಶ್ರೇಷ್ಠರಿಗೆ ಆಶ್ರಯಸ್ಥಾನನಾದ, ಬ್ರಹ್ಮನ ಮಾನಸ ಪುತ್ರರಾದ ಸನಕಾದಿ ಯೋಗಿಗಳಿಂದ ಸದಾಕಾಲ ಧ್ಯಾನಿಸಲ್ಪಡುತ್ತಿರುವ, ಸರ್ವೋತ್ತಮನಾದ, ಲಕ್ಷ್ಮೀಪತಿಯಾದ ಶ್ರೀ ಕೃಷ್ಣನೆಂದು ಅವತರಿಸಿದ ಶ್ರೀಹರಿಯು ನಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಶ್ರೀಕೃಷ್ಣಾತಾರವನ್ನು
ವಹಸಿ ವಪುಷಿ ವಿಶದೇ ವಸನಂ ಜಲದಾಭಂ
ಹಲಹತಿಭೀತಿಮಿಲಿತ ಯಮುನಾಭಂ
ಕೇಶವ ಧೃತ ಹಲಧರ ರೂಪ ಜಯ ಜಗದೀಶ ಹರೇ || -   ನೀರಿನ ಕಮಂಡಲವ ಪಿಡಿದ, ಸ್ವಚ್ಛವಾದ, ಸುಂದರ ದೇಹದಿ ನಡೆಯುವ ವಾಮನ ರೂಪ, ಯಮುನಾ ತೀರದಿ ಭೀತಿ ಬೆರೆತಿರುವ ಹಲಾಯುಧ ರೂಪನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಮಾನವನ ವಿಕಾಸಕ್ಕೆ ಭಗವಂತನ  ಶ್ರೀ ಕೃಷ್ಣಾವತಾರವನ್ನು ಸಮನ್ವಯಿಸಿಕೊಂಡಾಗ ಕೃಷ್ಣ ನಮ್ಮೊಳಗಿನ ಚೇತನ, ಪ್ರಜ್ಞೆ ಎಂಬ ಅರಿವಾಗುತ್ತದೆ.  ಪುಟ್ಟ ಮಗುವಾಗಿ ತನ್ನ ಬಾಲ್ಯಲೀಲೆಗಳಿಂದ ಎಲ್ಲರ ಮನಸ್ಸನ್ನೂ ತಿಳಿಗೊಳಿಸಿದ, ಕರ್ಷಿಸಿದ ’ಉತ್ಸಾಹ’ವೆನಿಸುತ್ತದೆ.  ನಮ್ಮನ್ನು ತಾಮಸಿಕ ಆಂದೋಲನದಿಂದ ಹೊರಗೆಳೆಯಬಹುದಾದ ಶಕ್ತಿ ಅಥವಾ ಪ್ರಜ್ಞೆ - ಅದುವೇ "ಕೃಷ್ಣ ಪ್ರಜ್ಞೆ".  ಕೃಷ್ಣ ಧನಾತ್ಮಕ ಶಕ್ತಿಯಾದರೆ, ನಮ್ಮ ಬುದ್ಧಿ, ವಿವೇಕದ ಶಕ್ತಿ.  ನಮ್ಮೊಳಗಿನ ತರಂಗಗಳಲ್ಲಿ ಯಾವುದು ನಮ್ಮನ್ನು ಸಾತ್ವಿಕತೆಯ ಹಾದಿಗೆ ಕೊಂಡೊಯ್ಯುವುದು ಎಂಬುದರ ಅರಿವು ನಮಗೆ ಬರುವುದೇ "ಕೃಷ್ಣ ಪ್ರಜ್ಞೆ".  ಶ್ರೀ ಕೃಷ್ಣ ಪರಮಾತ್ಮ ಕಾಳಿಂಗ ಸರ್ಪದ ಮೇಲೆ ನಿಂತು ಮರ್ಧಿಸಿದನೆಂದರೆ, ಅದರ ಅರ್ಥ ಋಣಾತ್ಮಕ ಭಾವಗಳನ್ನೂ, ತಮಸ್ಸನ್ನೂ, ಪುಟ್ಟ ಕೃಷ್ಣ ತಾನೇ ಧನಾತ್ಮಕ ಭಾವವಾಗಿಯೂ, ಸಾತ್ವಿಕದ ಸಂಕೇತವಾಗಿಯೂ ತುಳಿದು ಧ್ವಂಸ ಮಾಡಿದನೆಂದಾಗುತ್ತದೆ.  ಸದಾ ಶ್ರೀಕೃಷ್ಣನ ಕಾಳಿಂಗ ಮರ್ಧನವನ್ನು ಚಿಂತನೆ ಮಾಡುತ್ತಾ ನಮ್ಮೊಳಗೆ ಉತ್ಪತ್ತಿಯಾಗುತ್ತಲೇ ಇರುವ ತಾಮಸಿಕ ಗುಣಗಳನ್ನು ನಾವು ನಾಶಪಡಿಸುತ್ತಲೇ ಇರಬೇಕು. ಕೃಷ್ಣನ ಸೆಳವಿಗೆ ಸಿಲುಕಿದಲ್ಲಿ ಮಾತ್ರವೇ ಉತ್ಕೃಷ್ಟವಾದ ದೈವಿಕ ಪ್ರೇಮ-ಭಾವ ಅಂತರಂಗದಲ್ಲಿ ಅಂಕುರವಾಗುವುದು. ಕೃಷ್ಣನ ನಿಕಟವರ್ತಿಗಳಾದ ಗೋವು, ಕೊಳಲು, ತುಳಸಿ, ಬೆಣ್ಣೆ ಹೀಗೆ ಪ್ರತಿಯೊಂದೂ ನಮಗೆ ಕೃಷ್ಣ ಪ್ರಜ್ಞೆಯನ್ನು ಸದಾ ಜಾಗೃತಿಗೊಳಿಸುತ್ತಲೇ ಇರುತ್ತವೆ.  ಕೃಷ್ಣ ನಮ್ಮೊಳಗೇ, ನಮ್ಮೊಂದಿಗೇ ಸದಾ ಇದ್ದಾನೆಂಬ ಅಲೌಕಿಕ ಸುಖ ತನು ಮನಗಳನ್ನು ಪುಳಕಿತಗೊಳಿಸುತ್ತಲೇ ಇರುತ್ತದೆ.  

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ, ಕಾಲುಗಳಲ್ಲಿ ಶ್ರೀಕೃಷ್ಣ ರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಶ್ರೀಕೃಷ್ಣನ ರೂಪದಿಂದವತರಿಸಿದಾಗ ರಮಾದೇವಿಯು ’ರುಕ್ಮಿಣಿ’ಯಾಗಿರುತ್ತಾಳೆ ಎಂದಿದ್ದಾರೆ.  ಹಾಗೂ ತಮ್ಮ ತತ್ವಸುವ್ವಾಲಿಯಲ್ಲಿ
ವಸುದೇವ ದೇವಕೀ ಬಸುರಿ-ಲಿ ಜನಿಸಿದಿ
ವಸುಧೆ ಭಾರವನು ಇಳುಹಿ-ದಿ | ಇಳುಹಿ ಪಾಂಡವರ ಪೋ-
ಷಿಸಿದ ಶ್ರೀ ಕೃಷ್ಣ ದಯವಾಗೋ || - ವಸುದೇವ ದೇವಕಿಯರ ಗರ್ಭದಿಂದ ಜನಿಸಿ ಭೂಭಾರವನ್ನು, ಪಾಪಿಗಳ ಸಂಹಾರದಿಂದ, ನಾಶಮಾಡಿದಿ.  ಪಾಂಡುಪುತ್ರರಾದ ಧರ್ಮಾದಿಗಳನ್ನು ರಕ್ಷಿಸಿದ ಹೇ ಕೃಷ್ಣ ದಯವಾಗೋ, ಕೃಪೆತೋರೋ ಎಂದು ಪ್ರಾರ್ಥಿಸಿದ್ದಾರೆ.

ಕೃಷ್ಣಾವತಾರದ ಮೂಲ ಉದ್ದೇಶವನ್ನು ಎರಡು ರೀತಿಯಲ್ಲಿ ಭಗವಂತ ನಮಗೆ ತೋರಿಸಿರುವುದು ಅವನ ಪರಮ ಕರುಣೆಯೆಂದು ತಿಳಿಯಬಹುದು.  ಮೊದಲ ಕಾರಣವು ಮಾನವ ಕುಲಕ್ಕೆ "ಭಗವದ್ಗೀತೆ"ಯ ಕೊಡುಗೆಯಾಗಿದೆ.  ಅಂದಿಗೂ, ಇಂದಿಗೂ, ಮುಂದೆಯೂ, ಸರ್ವ ಕಾಲದಲ್ಲಿಯೂ ಪ್ರಸ್ತುತವಾಗಿರುವ ಭಗವದ್ಗೀತೆಯು, ಭಗವಂತನು ಸ್ವತಃ ಉಲಿದ ಸರ್ವ ಶ್ರೇಷ್ಠ ಕೊಡುಗೆಯಾಗಿದೆ. ಎರಡನೆಯ ಕಾರಣವು  ಭಗವಂತನು ಭಕ್ತರಿಗೆ  ತನ್ನ ಬಗೆಬಗೆಯ ಲೀಲಾವಿನೋದಗಳನ್ನೂ, ಕ್ರೀಡಾದಿಗುಣಗಳನ್ನೂ ತೋರಿಸುವುದೇ ಆಗಿದೆ.  ಭಗವಂತನು ಕೃಷ್ಣನಾಗಿ ಅವತರಿಸಿರದಿದ್ದರೆ ಭಕ್ತರಾದ ನಮಗೆ ಭಗವಂತನ ಲೀಲೆಗಳನ್ನೂ, ಚರಿತ್ರೆಗಳನ್ನೂ ಚಿಂತನೆ ಮಾಡುವುದು ಸಾಧ್ಯವಿರಲಿಲ್ಲ.  ಇದು ಭಗವಂತನು ಭಕ್ತರಿಗೆ ಪ್ರೇಮದಿಂದ ತೋರಿದ ಕಾರುಣ್ಯವೇ ಆಗಿದೆಯೆಂದು ಭಾವಿಸಬೇಕು.

ಚಿತ್ರಕೃಪೆ : ಅಂತರ್ಜಾಲ
http://www.orissatourism.org/jagannath-temple/

https://en.wikipedia.org/wiki/Krishna_Balaram_Mandir

No comments: