Saturday, March 28, 2015

ಕರುಣಾ ಸಂಧಿ - ೩೦ ನೇ ಪದ್ಯ (ಕೂರ್ಮಾವತಾರ)


ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


ಕೂರ್ಮ - ಕೂರ್ಮಾವತಾರ : ಮತ್ಸ್ಯಾವತಾರದ ನಂತರದ್ದು ಕೂರ್ಮಾವತಾರವಾಗಿದೆ.  ಹಿಂದೆ ಒಮ್ಮೆ ರೈವತ ಮನ್ವಂತರದಲ್ಲಿ ಕೂರ್ಮಾವತಾರ-ವಾಗಿರುತ್ತದೆ.  ಮುಂದೆ ವೈವಸ್ವತ ಮನ್ವಂತರದಲ್ಲಿಯೂ ಕೂರ್ಮಾವತಾರವಾಗುತ್ತದೆ.  ಚಾಕ್ಷುಶ ಮನ್ವಂತರದಲ್ಲಿ ಮಂದದ್ರುತ ಅಥವಾ ಮಂದ್ರದ್ಯುಮ್ನನೆಂಬುವನು ಇಂದ್ರನಾಗಿರುತ್ತಾನೆ.  ವೈರಾಜ ಋಷಿಯಿಂದ ಸಂಭೂತಿಯೆಂಬ ಪತ್ನಿಯಲ್ಲಿ ಭಗವಂತನು "ಅಜಿತ" ನಾಮಕನಾಗಿ ಅವತರಿಸಿ, ಸಮುದ್ರಮಥನ ಮಾಡಿ, ಕೂರ್ಮರೂಪದಿಂದ ಮಂದರ ಪರ್ವತವನ್ನು ಧರಿಸುತ್ತಾನೆ.  ಕೂರ್ಮಾವತಾರವು ಸಮುದ್ರಮಥನದ ಸಮಯದಲ್ಲಾದ ಅವತಾರವಾಗಿದೆ ಮತ್ತು ಇದಕ್ಕೆ ಹಿನ್ನೆಲೆಯಾಗಿ ಒಂದು ಕಥೆ / ಕಾರಣವನ್ನೂ ಕಾಣಬಹುದಾಗಿದೆ.  ದೇವತೆಗಳಿಗೂ, ದೈತ್ಯರಿಗೂ ನಡೆಯುತ್ತಿದ್ದ ಯುದ್ಧದಲ್ಲಿ ದೇವತೆಗಳು ಕಂಗೆಡುತ್ತಾರೆ.  ದೂರ್ವಾಸರಿಂದ ದತ್ತವಾದ ಹರಿಯು ಧರಿಸಿದ್ದ ಪುಷ್ಪಮಾಲೆಯನ್ನು ಇಂದ್ರನು ತಿರಸ್ಕರಿಸಿ  ಆನೆಯ ಕುಂಭಸ್ಠಳದಲ್ಲಿಡುತ್ತಾನೆ.  ಐರಾವತವು ಮಾಲೆಯನ್ನು ನೆಲದಲ್ಲಿ ಹೊಸಕಿ ಬಿಡುತ್ತದೆ.  ಇದರಿಂದ ಕೆರಳಿದ ದೂರ್ವಾಸರು ಲೋಕಪಾಲಕರೊಡನೆ ಐಶ್ವರ್ಯ ಭ್ರಷ್ಟನಾಗೆಂದು ಶಪಿಸುತ್ತಾರೆ.  ಮೂರು ಲೋಕಗಳಲ್ಲೂ ಐಶ್ವರ್ಯ ಭ್ರಷ್ಟವಾಗಿ, ಯಾಗಾದಿ ಕಾರ್ಯಗಳೆಲ್ಲಾ ಸ್ಥಗಿತಗೊಳ್ಳುತ್ತವೆ.  ಲಕ್ಷ್ಮೀದೇವಿಯು ಮೂರು ಲೋಕಗಳಿಂದಲೂ ಅಂತರ್ಧಾನವಾಗಿ ಬಿಡುತ್ತಾಳೆ.  ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಿದಾಗ, ಬ್ರಹ್ಮದೇವರು ತಾವೆಲ್ಲರೂ ಕೂಡಿ ಭಗವಂತನಿಗೇ ವಿಜ್ಞಾಪಿಸಿಕೊಳ್ಳಬೇಕೆನ್ನುತ್ತಾರೆ.  ದೇವತೆಗಳಿಗೆ ಭಗವಂತನು ಮಂಗಳಕರವಾದ ಸ್ಥಿತಿ ಬರುವವರೆಗೆ ಬಲಿ ಮೊದಲಾದ ದೈತ್ಯರೊಡನೆ ಸಂಧಿಯನ್ನು ಮಾಡಿಕೊಂಡು ಅಮೃತ ಪಡೆಯಲು ಪ್ರಯತ್ನಿಸಬೇಕೆನ್ನುತ್ತಾನೆ.  ಮಂದರ ಪರ್ವತವನ್ನು ಕಡಗೋಲನ್ನಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ತನ್ನ ಸಹಾಯದಿಂದ ಕ್ಷೀರ ಸಮುದ್ರವನ್ನು ಮಥನವನ್ನು ಮಾಡಬೇಕೆಂದು ತಿಳಿಸುತ್ತಾನೆ.  ಸಮುದ್ರಮಥನ ನಡೆದು, ಅಮೃತವು ದೇವತೆಗಳ ಕೈಸೇರುವವರೆಗೂ ದೈತ್ಯರನ್ನು ಅನುಮೋದಿಸಿಕೊಂಡಿರಬೇಕೆಂದು ಕೂಡ ತಿಳಿಸುತ್ತಾನೆ.  ದೇವತೆಗಳು ಬಲಿಗೆ ವಿಷಯ ತಿಳಿಸಿದಾಗ, ವಿಧೇಯರಾಗಿ ಬಂದ ದೇವತೆಗಳನ್ನು ದೈತ್ಯರಿಂದ ರಕ್ಷಿಸಿ, ಸಮುದ್ರಮಥನಕ್ಕೆ ಸಮ್ಮತಿಸುತ್ತಾನೆ.  ಎಲ್ಲರೂ ಸೇರಿ ಮಂದರಪರ್ವತವನ್ನು ಕಿತ್ತು, ಸ್ವಲ್ಪ ದೂರ ಸಾಗಿಸುವುದರೊಳಗೆ ಭಾರವನ್ನು ತಾಳಲಾರದೆ ಕೆಳಗೆತ್ತಿಹಾಕಿದಾಗ, ದೇವತೆಗಳು ಪರ್ವತದ ಕೆಳಗೆ ಸಿಕ್ಕಿಕೊಂಡು ಪುಡಿಯಾಗುತ್ತಾರೆ.  ಶ್ರೀಹರಿಯು ಪರಮಕರುಣೆಯಿಂದ ಗರುಡಾರೂಢನಾಗಿ ಬಂದು ಗಿರಿಯನ್ನು ಎತ್ತಿಕೊಂಡು ಸುರಾಸುರರೊಡನೆ ಕ್ಷೀರಸಮುದ್ರದ ಮಧ್ಯದಲ್ಲಿ ಇಳಿಸುತ್ತಾನೆ.  ವಾಸುಕಿಗೆ  ಅಮೃತದಲ್ಲಿ ಪಾಲು ಕೊಡುವುದಾಗಿ ಒಪ್ಪಿಸಿ, ಹಗ್ಗವಾಗಿಸಿ, ಮಂದರ ಪರ್ವತಕ್ಕೆ ಸುತ್ತಿ ಕ್ಷೀರಸಮುದ್ರವನ್ನು ಕಡೆಯಲು ಪ್ರಾರಂಭಿಸುತ್ತಾರೆ.  ಸ್ವಲ್ಪ ಹೊತ್ತಿನಲ್ಲೇ ಗಿರಿಯು ನೀರಿನಲ್ಲಿ ಮುಳುಗಿ ಬಿಡುತ್ತದೆ.  ಪರಮಾತ್ಮನು ನೀರಿನಲ್ಲಿ ಮುಳುಗಿ, ಕೂರ್ಮಾವತಾರವನ್ನು ಧರಿಸಿ, ಗಿರಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು  ಮೇಲೆ ಬರುತ್ತಾನೆ.  ಮಥನ ಕಾರ್ಯವು ನಡೆಯುತ್ತದೆ.  ಗಿರಿಯು ಮೇಲೆ, ಕೆಳಗೆ ಹೋಗುತ್ತಾ ಅಲ್ಲಾಡಿದಾಗ, ಭಗವಂತನು ಅಜಿತರೂಪಕನಾಗಿ ಸಹಸ್ರಾರು ಬಾಹುಗಳಿಂದ ಪರ್ವತವನ್ನು ಆಕ್ರಮಿಸಿಕೊಂಡು, ಮಥನ ಕಾರ್ಯವನ್ನು ನಡೆಸಿಕೊಡುತ್ತಾನೆ.  ಸಮುದ್ರಮಥನ ನಡೆಯುವ ಸಮಯದಲ್ಲಿ ಮೂರುಲೋಕದಿಂದ ಮರೆಯಾಗಿದ್ದ ಲಕ್ಷ್ಮೀದೇವಿಯ ಆವಿರ್ಭಾವವಾಗುತ್ತದೆ. 


ಭಾಗವತ ದ್ವಿತೀಯಸ್ಕಂಧ, ೭ನೆಯ ಅಧ್ಯಾಯದಲ್ಲಿ ಕೂರ್ಮಾವತಾರದ ವರ್ಣನೆಯನ್ನು
ಕ್ಷೀರೋದಧಾವಮರದಾನವಯೂಥಪಾನಾ - | ಮುನ್ಮಥ್ನತಾಮಮೃತಲಬ್ಧಯ ಆದಿದೇವಃ |
ಪೃಷ್ಠೇನ ಕಚ್ಛಪವಪುರ್ವಿದಧಾರ ಗೋತ್ರಂ | ನಿದ್ರಾಕ್ಷಣೋSದ್ರಿಪರಿವರ್ತಕಷಾಣಕಣ್ದೂಃ || - ದೇವತೆಗಳೂ, ದಾನವರೂ ಸೇರಿಕೊಂಡು ಅಮೃತವನ್ನು ಪಡೆಯಲೋಸುಗ ಕ್ಷೀರಸಮುದ್ರವನ್ನು ಕಡೆಯುತ್ತಿದ್ದಾಗ  - ಈ ಆದಿದೇವನು ಆಮೆಯ ದೇಹವನ್ನು ತಾಳಿ ತನ್ನ ಬೆನ್ನಿನ ಮೇಲೆ ಮಂದರ ಗಿರಿಯನ್ನು ಹೊತ್ತುಕೊಂಡನು.  ಆಗ ಸುತ್ತುತ್ತಿದ್ದ ಪರ್ವತದ ಉಜ್ಜುವಿಕೆಯಿಂದಾಗಿ ಮೈನವೆಯು ಕಡಿಮೆಯಾದಂತಾಗಿ ಸ್ವಾಮಿಗೆ ಕ್ಷಣಕಾಲ ಸುಖನಿದ್ರೆಯನ್ನು ಮಾಡಲು ಸಾಧ್ಯವಾಯಿತು ಎಂದು ವರ್ಣಿಸಿದ್ದಾರೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ಕೂರ್ಮಾವತಾರವನ್ನು  "ಕೂರ್ಮ ಸ್ವರೂಪಕ ಮಂದರಧಾರಿನ್ ಲೋಕವಿಧಾರಕ ದೇವವರೇಣ್ಯ - ಮಂದರ ಪರ್ವತವನ್ನು ಧರಿಸಿರುವ, ಲೋಕ ಸಂರಕ್ಷಕನಾದ, ದೇವ ಶ್ರೇಷ್ಠನಾದ, ಕೂರ್ಮರೂಪಿಯೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಸುರದಿತಿಜಸುಬಲವಿಲುಲಿತ ಮಂದರಧರ ವರಕೂರ್ಮ ಹೇ ಭವಮಮ ಶರಣಮ್ |
ಶುಭತಮ ಕಥಾಶಯ ಪರಮಸದೋದಿತ ಜಗದೇಕ ಕಾರಣ ರಾಮರಮಾರಮಣ || - ಸುರಾಸುರರು ಅಮೃತವನ್ನು ಪಡೆಯುವುದಕ್ಕಾಗಿ ಕ್ಷೀರಸಮುದ್ರವನ್ನು ಮಥಿಸಿದಾಗ ಮುಳುಗುತ್ತಿದ್ದ ಮಂದರ ಪರ್ವತವನ್ನು ಬೆನ್ನಲ್ಲಿ ಧರಿಸಿದವನಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನಾದ, ಪುರುಷೋತ್ತಮನಾದ, ಸದಾ ಪ್ರಕಾಶಮಾನನಾದ, ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನಾದ, ಆತ್ಮಾರಾಮನಾದ ಲಕ್ಷ್ಮೀಪತಿಯೇ ನಿನಗೆ ಶರಣು ಹೊಂದುತ್ತೇನೆ ಎಂದು ಪ್ರಾರ್ಥಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ಕೂರ್ಮಾವತಾರವನ್ನು
ಕೂರ್ಮಾಕೃತೇ ತ್ವವತು ನರ್ಮಾತ್ಮ ಪೃಷ್ಠಧೃತ ಭರ್ಮಾತ್ಮ ಮಂದರಗಿರೇ
ಧರ್ಮಾವಲಂಬನ ಸುಧರ್ಮಾಸದಾಂ ಕಲಿತ ಶರ್ಮಾ ಸುಧಾವಿತರಣಾತ್ |
ದುರ್ಮಾನರಾಹುಮುಖ ದುರ್ಮಾಯಿ ದಾನವ ಸುಮರ್ಮಾಭಿಭೇದನ ಪಟೋ
ಘರ್ಮಾರ್ಕಕಾಂತಿವರವರ್ಮಾ ಭವಾನ್ ಭುವನ ನಿರ್ಮಾಣಧೂತವಿಕೃತಿಃ || - ಸಮುದ್ರ ಮಂಥನ ಕಾಲದಲ್ಲಿ ದೇವತೆಗಳಿಂದ ಪ್ರಾರ್ಥಿತನಾಗಿ, ಕೂರ್ಮರೂಪವನ್ನು ಧರಿಸಿ ಮಂದರ ಪರ್ವತವನ್ನು ಧರಿಸಿ, ದೇವತೆಗಳಿಗೆ ಅಮೃತಪ್ರಾಶನ ಮಾಡಿಸಿದ, ರಾಹು ಮೊದಲಾದ ದೈತ್ಯರ ಸಂಹಾರ ಮಾಡಿದ, ವಿಶ್ವವನ್ನು ಸೃಷ್ಟಿಸಿ, ಅದರ ಒಳಗೂ ಹೊರಗೂ ವ್ಯಾಪಿಸಿಕೊಂಡು, ನಿರ್ವಿಕಾರನಾಗಿರುವ, ಅತ್ಯಂತ ಸುಂದರನಾದ, ಕೂರ್ಮರೂಪಿಯಾದ ಭಗವಂತನು ನಮ್ಮನ್ನು ಎಲ್ಲಾ ಆಪತ್ತುಗಳಿಂದಲೂ ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ಕೂರ್ಮಾವತಾರವನ್ನು
ಕ್ಷಿತಿರತಿವಿಪುಲತರೇ ತವ ತಿಷ್ಠತಿ ಪೃಷ್ಠೇ
ಧರಣಿಧರಣಕಿಣಚಕ್ರಗರಿಷ್ಠೇ
ಕೇಶವ ಧೃತ ಕಚ್ಛಪರೂಪ ಜಯ ಜಗದೀಶ ಹರೇ || - ನಿನ್ನ ಬೆನ್ನಿನಲ್ಲಿ ವಿಶಾಲವಾದ ಭೂಮಿಯು ನಿಂತಿದೆ.  ಗರಿಷ್ಠವಾದ ಚಕ್ರಾಕಾರದಲ್ಲಿರುವ ಧರಣಿಯನ್ನು ಧರಿಸಿರುವ, ಕಚ್ಛಪ ರೂಪ ಧರಿಸಿರುವ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಭಗವದ್ಗೀತೆಯ ಎರಡನೆಯ ಅಧ್ಯಾಯದ ೫೮ನೆಯ ಶ್ಲೋಕದಲ್ಲಿ ಭಗವಂತನು
ಯದಾ ಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ |
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಜಾ ಪ್ರತಿಷ್ಠಿತಾ || -  ಹೇಗೆ ಆಮೆಯು ತನ್ನ ಎಲ್ಲಾ ಅಂಗಗಳನ್ನೂ, ಎಲ್ಲಾ ಕಡೆಗಳಿಂದಲೂ ಒಳಗೆ ಎಳೆದುಕೊಂಡು, ಸ್ಥಿರವಾಗಿ ಇರುತ್ತದೆಯೋ, ಹಾಗೆ ಸಾಧಕನು ಕೂಡ ವಿಷಯಾಸಕ್ತಿಗಳೆಡೆಗೆ ಆಕರ್ಷಿತವಾಗುವ ಇಂದ್ರಿಯಗಳನ್ನು, ಜಾಗೃತ, ಸ್ವಪ್ನಾವಸ್ಥೆಯೆಂಬ ಎರಡೂ ಅವಸ್ಥೆಗಳಲ್ಲಿಯೂ ನಿಯಂತ್ರಿಸಬೇಕು ಎಂದಿದ್ದಾನೆ. 

ಮತ್ಸ್ಯಾವತಾರ ಜೀವ ವಿಕಸನದ ಸಂಕೇತವಾಗಿದೆ.  ಪ್ರಳಯ ಜಲದಿಂದ ಆವೃತವಾಗಿದ್ದ ಬ್ರಹ್ಮಾಂಡದಲ್ಲಿ ಜೀವ ವಿಕಸನದ ಸಂಕೇತವಾಗಿ ಜಲಚರಗಳ ಸೃಷ್ಟಿಯಾಗಿತ್ತು.  ಅದರ ಮುಂದಿನ ಹಂತದ ಪ್ರತೀಕವಾಗಿ ಕೂರ್ಮ ಜಲದಲ್ಲಿಯೂ, ನೆಲದಲ್ಲಿಯೂ ಬದುಕಬಲ್ಲ ಜೀವವಾಗಿ ಪ್ರಕಟಗೊಂಡಿದೆ.  ಕೂರ್ಮಾವತಾರವನ್ನು ಮಾನವನ ಜೀವನಕ್ಕೆ ಹೋಲಿಸಿಕೊಂಡಾಗ ಆಧ್ಯಾತ್ಮ ಹಾದಿಯಲ್ಲಿ ನಡೆಯ ಬಯಸುವ ಪ್ರತಿಯೊಬ್ಬ ಸಾಧಕನಿಗೂ ಕೂರ್ಮವು ಅತ್ಯಂತ ಮುಖ್ಯವಾದ ಹಾಗೂ ಮೂಲವಾದ ಸಂದೇಶವನ್ನು ತೋರುತ್ತದೆ.  ಆಮೆಯು ನೀರಿನಲ್ಲಿಯೂ, ನೆಲದಲ್ಲಿಯೂ ತನ್ನನ್ನು ತಾನು ಸುಲಭವಾಗಿ ಹೊಂದಿಸಿಕೊಂಡು ಬದುಕಬಲ್ಲ ಪ್ರಾಣಿಯಾಗಿದೆ.  ಮಾನವನೂ ಕೂಡ ತನ್ನನ್ನು ತಾನು ನೀರಿನಲ್ಲಾಗಲೀ, ನೆಲದಲ್ಲಾಗಲೀ ಹೊಂದಿಸಿಕೊಂಡು ಬದುಕುವ ಛಲವನ್ನು ಹೊಂದಬೇಕೆಂಬ ಸಂದೇಶ ಕೊಡುತ್ತದೆ.  ಕೂರ್ಮದ ಬೆನ್ನು ತುಂಬಾ ಕಠಿಣವಾದ ಕವಚವಾಗಿದೆ.  ಯಾವುದೇ ರೀತಿಯ ಆಪತ್ತು ಬಂದರೂ ಆಮೆಗೆ ರಕ್ಷಣೆಯಾಗಿ ಅದರ ಹೊರ ಕವಚ ಕೆಲಸಮಾಡುತ್ತದೆ.  ಮೇಲು ಹೊದಿಕೆಯಾಗಿ ಕವಚ ಅಷ್ಟು ಗಟ್ಟಿಯಾಗಿದ್ದರೂ ಒಳಗಿರುವ ಆಮೆಯ ಅವಯವಗಳೂ, ಮೈಯೂ ಮೃದುವಾಗಿಯೇ ಇರುತ್ತದೆ.  ಸಾಧಕನಾದವನು ತನ್ನನ್ನು ತಾನು ಋಣಾತ್ಮಕ ಪ್ರಪಂಚದಿಂದ ರಕ್ಷಿಸಿಕೊಳ್ಳಲು ತನ್ನ ಹೊರಮೈಯನ್ನು ಹೀಗೆ ಗಟ್ಟಿಯಾಗಿಸಿಕೊಳ್ಳಬೇಕು.  ಒಳಗಿರುವ ಆತ್ಮ ತುಂಬಾ ಮೃದುವಾದ, ಭಾವನೆಗಳ ಗುಚ್ಛವಾಗಿರುತ್ತದೆ.  ಅದನ್ನು ಘಾಸಿ ಮಾಡಲು ನುಗ್ಗಿ ಬರುವ ಋಣಾತ್ಮಕ ಭಾವಗಳು ಗಟ್ಟಿಯಾದ ಹೊರಮೈಗೆ ಅಪ್ಪಳಿಸಿ ಹಾಗೇ ತಿರುಗಿಹೋಗುವಂತೆ ನಮ್ಮ ಮೃದುವಾದ ಆತ್ಮಕ್ಕೆ ರಕ್ಷಣಾಕವಚವನ್ನು ಹಾಕಿಕೊಳ್ಳಬೇಕೆಂಬುದನ್ನು ಕೂರ್ಮಾವತಾರ ಸೂಚಿಸುತ್ತದೆ.  ಅಪಾಯದ ಮುನ್ಸೂಚನೆ ಸಿಕ್ಕ ಕೂಡಲೆ ಕೂರ್ಮವು ತನ್ನ ಕಾಲುಗಳನ್ನೂ, ತಲೆಯನ್ನೂ ಗಟ್ಟಿಯಾದ ಕವಚದ ಒಳಗೆ ಎಳೆದುಕೊಂಡು ಬಿಡುತ್ತದೆ  ಸಾಧಕನೂ ಕೂಡ ತನ್ನನ್ನು ಬಂದು ಮುತ್ತುವ ವಿಷಯಾಸಕ್ತಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು, ತನ್ನ ಆಂತರ್ಯವನ್ನು ಒಳಮುಖವಾಗಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ.   ಕೂರ್ಮವು ಬಲು ನಿಧಾನವಾಗಿ ಚಲಿಸುತ್ತದೆ ಆದರೆ ಅದು ತನ್ನ ಗುರಿಯನ್ನೇ ಗಮನವಾಗಿಟ್ಟುಕೊಂಡು ಚಲಿಸುತ್ತದೆ.  ನಿಧಾನವಾದರೂ ಕೂಡ ಅದು ತನ್ನ ಗುರಿಯನ್ನು ತಲುಪುತ್ತದೆ.  ಕೂರ್ಮಾವತಾರವು ಜಾಣ್ಮೆ ಮತ್ತು ತಾಳ್ಮೆಯ ಸಂಕೇತವಾಗಿದೆಯೆಂಬುದನ್ನು ದಾಸರಾಯರು ಕರುಣಾಸಂಧಿಯ ೨೮ನೆಯ ಪದ್ಯದಲ್ಲಿ "ಬೆಟ್ಟ ಬೆನ್ನಲಿ ಹೊರಿಸಿದವರನು ಸಿಟ್ಟು ಮಾಡಿದನೇನೋ ಹರಿ" ಎಂದು ಕೊಂಡಾಡುವುದರ ಮೂಲಕ ತಿಳಿಸಿದ್ದಾರೆ.  ಕೂರ್ಮದ ಚಲನೆ ಏಕಧ್ಯಾನದಿಂದ ಕೂಡಿರುತ್ತದೆ ಮತ್ತು ಮಾನವನು ಕೂಡ ಇದನ್ನೇ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ. ಸ್ಥಿರವಾದ ಹೆಜ್ಜೆಗಳನ್ನು ಹಾಕುತ್ತಾ, ಎಲ್ಲಿಯೂ ನಿಲ್ಲದೆ ನಡೆಯುವ ಅಭ್ಯಾಸವನ್ನು ಮಾಡಿಕೊಂಡರೆ ನಿಶ್ಚಯವಾಗಿ ಗುರಿಯನ್ನು ಮುಟ್ಟಬಹುದೆಂಬುದನ್ನು ಭಗವಂತನು ಮಂದರ ಪರ್ವತವನ್ನು ಧಾರಣೆ ಮಾಡುವ ಮೂಲಕ ಕೂರ್ಮವು ಮೂಲವಾಗಿ ಆಧಾರವು ಎಂಬುದನ್ನು ತೋರಿಸಿಕೊಡುತ್ತಾನೆ.  ನಮ್ಮ ದೇಹದಲ್ಲಿನ ಷಟ್ಚಕ್ರಗಳಲ್ಲಿ "ಮೂಲಾಧಾರ" ಚಕ್ರವು ಅತ್ಯಂತ ಮುಖ್ಯವಾದ ಚಕ್ರವಾಗಿದೆ.  ಮೂಲಾಧಾರ ಸ್ಥಾನದಲ್ಲಿ ಕುಂಡಲಿನಿ ಸರ್ಪವು ಮೂರು ಸುತ್ತು ಸುತ್ತಿಕೊಂಡು ಮಲಗಿದೆಯೆಂಬ ನಂಬಿಕೆಯಿದೆ.  ಆಧ್ಯಾತ್ಮ ಸಾಧನೆಯಲ್ಲಿ ನಮ್ಮೊಳಗಿನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುವುದೆಂದರೆ ಮೂಲಾಧಾರ ಚಕ್ರವನ್ನು ಉದ್ದೀಪನಗೊಳಿಸುವುದೆಂದು ಅರ್ಥವಾಗುತ್ತದೆ.  ಮಂದರ ಪರ್ವತವು ಸಮುದ್ರ ಮಥನದಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡಲು ಭಗವಂತ ಕೂರ್ಮಾವತಾರವೆತ್ತಿದ ಹಾಗೆ ನಮ್ಮೊಳಗಿನ ಪ್ರಾಣ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಲು ಮೂಲಾಧಾರ ಚಕ್ರವೇ ಮೂಲಸ್ಥಾನವಾಗಿದೆ.  ಕೂರ್ಮಾವತಾರವನ್ನು ಮೂಲಾಧಾರ ಚಕ್ರಕ್ಕೆ ಹೋಲಿಸಬಹುದಾಗಿದೆ.

ಆದಿಕೂರ್ಮವೆಂಬ ಮತ್ತೊಂದು ರೂಪದಲ್ಲಿ ಭಗವಂತನು ಬ್ರಹ್ಮಾಂಡವನ್ನೇ ಧಾರಣೆ ಮಾಡಿದವನಾಗಿರುವನೆಂಬ ಉಲ್ಲೇಖವಿದೆ.  ವಿಷ್ಣು ಸಹಸ್ರನಾಮದಲ್ಲಿ "ಧಾತಾ ಧಾತುರುತ್ತಮಃ" - ಇಡೀ ಜಗತ್ತನ್ನು ಧಾರಣೆ ಮಾಡಿರುವ, ಪೋಷಣೆ ಮಾಡುವ, ಎಲ್ಲರಿಗಿಂತಲೂ ಉತ್ತಮನಾದ, ವೇದಗಳನ್ನೂ, ಕಾಲವನ್ನೂ, ಲೋಕಗಳನ್ನೂ ಧರಿಸಿರುವವನಾದ, ಸರ್ವಾಧಾರನಾದ ಭಗವಂತನು ಧಾತುರುತ್ತಮನು ಎಂದು ಸ್ತುತಿಸಲಾಗಿದೆ.  ಸೃಷ್ಟಿಯ ಆದಿಯಿಂದ ಪ್ರಳಯದಲ್ಲಿ ಅಂತ್ಯವಾಗುವವರೆಗೆ ಬ್ರಹ್ಮಾಂಡವನ್ನು ಧಾರಣೆ ಮಾಡಿರುವವನು ಆದಿಕೂರ್ಮ ರೂಪಿ ಭಗವಂತನಾಗಿದ್ದಾನೆ.  ಆಧ್ಯಾತ್ಮದ ಹಾದಿಯಲ್ಲಿ ನಡೆಯ ಬಯಸುವ ಸಾಧಕನಿಗೆ ಧ್ಯಾನಕ್ಕೆ ಕೂಡಲು ಸುಸ್ಥಿರವಾದ, ಭದ್ರವಾದ ಆಸನವು ಅವಶ್ಯವಾಗಿದೆ.  ಆತ್ಮವನ್ನು ಅಂತರ್ಮುಖವಾಗಿಸಿಕೊಳ್ಳಲು ಧ್ಯಾನಕ್ಕೆ ಕುಳಿತುಕೊಳ್ಳುವ ಆಸನವೂ ಕೂಡ ತುಂಬಾ ಮುಖ್ಯವಾಗುತ್ತದೆ.  ಅಮೃತಕ್ಕಾಗಿ ಮಂದರ ಪರ್ವತ ಧರಿಸಿದ ಭಗವಂತನು ಸಾಧಕರಿಗೂ ಮೂಲಾಧಾರವಾಗಿರುವನು.  ಪೀಠದಲ್ಲಿ ಕುಳಿತ ಭಗವಂತನನ್ನು ಪೂಜಿಸುವುದಕ್ಕೂ ಮೊದಲು ಶ್ರೀಹರಿಯು ಕುಳಿತ ಆಸನವನ್ನು ಪೂಜಿಸಬೇಕು.  ಹೀಗೆ ಮಾಡುವಾಗ ಬ್ರಹ್ಮಾಂಡ ಧಾರಿಯಾದ ಕೂರ್ಮರೂಪಿ ಭಗವಂತನನ್ನು ಧ್ಯಾನಿಸುತ್ತಾ ಅನುಸಂಧಾನ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ . 

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೧೮ನೆಯ ಪದ್ಯದಲ್ಲಿ "ಮಧುವಿರೋಧಿಯು ಲೋಚನದಿ" ಎಂದಿದ್ದಾರೆ.  ಕಣ್ಣುಗಳಲ್ಲಿ ನೆಲೆಸಿರುವ ದಿಗ್ದೇವತೆಗಳಾದ ಸೂರ್ಯ ಚಂದ್ರರಿಗೆ ಮಧುಸೂದನ ಪರಮಾತ್ಮನು ಅಭಿಮಾನಿ ದೇವತೆಯಾಗಿದ್ದಾನೆ.  ಮಧುಸೂದನನೆಂದರೆ ಮಧುವಿನಂತೆ ಮೇಲ್ನೋಟಕ್ಕೆ ರಮಣೀಯವಾಗಿ ತೋರುವ ವಿಷಯ ಸುಖ ಅಜ್ಞಾನ ಪರಿಹಾರಕ ರೂಪ, ರೋಗಭಯ, ವಿರೋಧಿಗಳನ್ನು ದೂರ ಮಾಡುವವನು ಎಂಬರ್ಥವಾಗುತ್ತದೆ.  ಮುಂದುವರೆಯುತ್ತಾ ೩೪ನೆಯ ಪದ್ಯದಲ್ಲಿ ಕೂಡ ಕಣ್ಣುಗಳಲ್ಲಿ ಕೂರ್ಮರೂಪಿ ಭಗವಂತನನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ಕೂರ್ಮಾವತಾರವೆತ್ತಿದಾಗ ಲಕ್ಷ್ಮೀದೇವಿಯು ವೇದವತಿಯಾಗಿರುತ್ತಾಳೆ ಎಂದಿದ್ದಾರೆ.

ಕೂರ್ಮಾವತಾರಿ ಭಗವಂತನ ಪೂಜೆ ಹೆಚ್ಚು ಪ್ರಚಲಿತದಲ್ಲಿಲ್ಲ ಆದರೆ ಕೂರ್ಮಶಾಲಗ್ರಾಮಕ್ಕೆ ಮಾತ್ರ ವಿಶೇಷ ಪೂಜೆಯು ಮಾಡಲ್ಪಡುತ್ತದೆ.  ಕೂರ್ಮ ಶಾಲಗ್ರಾಮಕ್ಕೆ ವಿಶೇಷ ಮಹತ್ವವಿದೆ.  ಇದು ತುಂಬಾ ಅಪರೂಪದ ಶಾಲಗ್ರಾಮವಾಗಿರುತ್ತದೆ.  ಕ್ಷೀರಾಭಿಷೇಕ ಮಾಡುವುದರಿಂದ ಅಭೀಷ್ಟಗಳು ನೆರವೇರುತ್ತದೆಂಬ ನಂಬಿಕೆ ಇದೆ.  ಕೂರ್ಮ ಶಾಲಗ್ರಾಮಕ್ಕೆ ಕ್ಷೀರಾಭಿಷೇಕ ಮಾಡಿ, ಕ್ಷೀರಪಾನ ಮಾಡುವುದರಿಂದ ದೈಹಿಕವಾದ ಅನೇಕ ರೋಗ ರುಜಿನಗಳು ವಾಸಿಯಾಗುವುದೆಂಬ ನಂಬಿಕೆ ಕೂಡ ಇದೆ.


ಕೂರ್ಮರೂಪಿಯಾದ ಶ್ರೀಹರಿಯು ಇಂದ್ರಾದಿದೇವತೆಗಳಿಗೆ ಮತ್ತು ನಾರದಾದಿ ಮಹರ್ಷಿಗಳಿಗೆ  ಮಾಡಿದ ತತ್ವೋಪದೇಶವೇ "ಕೂರ್ಮ ಮಹಾಪುರಾಣ"ವಾಯಿತೆಂಬ ಮಾತು  ಕೂರ್ಮಮಹಾಪುರಾಣದಲ್ಲಿಯೇ ಉಲ್ಲೇಖಿತವಾಗಿದೆ.
 

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ ಕೂರ್ಮಾವತಾರವನ್ನು
ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ವೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೋ || - ದೇವದಾನವರು ಮಂದರಾದ್ರಿಯನ್ನು ಬಳಸಿ ಸಮುದ್ರ ಮಥನವನ್ನು ಮಾಡುವಾಗ ಮಂದರ ಪರ್ವತವನ್ನು ಕೂರ್ಮರೂಪದಿಂದ ಧರಿಸಿ, ಸಿಂಧುವಿನ ಮಥನವನ್ನು ಮಾಡಿ, ವೃಂದಾರಕರಿಗೆ (ದೇವತೆಗಳಿಗೆ)  ಉಣಿಸಿದ ಇಂದಿರಾರಾಧ್ಯನಾದ ನಾರಾಯಣನೇ ದಯವಾಗೋ ಎಂದು ಸ್ತುತಿಸಿದ್ದಾರೆ.  ಕೂರ್ಮಾವತಾರದ ವರ್ಣನೆಯಲ್ಲಿ ದಾಸರಾಯರು ಭಗವಂತನ ಮೂರು ಅವತಾರಗಳಾದ ಮಂದರ ಪರ್ವತವನ್ನು ಧರಿಸಿದ ಕೂರ್ಮರೂಪ, ದೇವತೆಗಳೊಂದಿಗೆ ಸಮುದ್ರಮಥನ ಮಾಡಿದ ಅಜಿತ ರೂಪ ಮತ್ತು ಅಮೃತವನ್ನು ದೇವತೆಗಳಿಗೆ ಉಣಬಡಿಸಿದ ಮೋಹಿನಿ ರೂಪಗಳನ್ನು ಸ್ಮರಿಸಿದ್ದಾರೆ.  



ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿರುವ ಕೂರ್ಮಾವತಾರದ ಏಕೈಕ ದೇವಸ್ಥಾನದ ಕೊಂಡಿ https://www.google.co.in/search?tbm=isch&q=Kurmavathara+of+Lord+Vishnu&ei=59EWVd7zDY6EuwTNkIHIDg

 http://en.wikipedia.org/wiki/Sri_Kurmam

ಚಿತ್ರಕೃಪೆ : ಅಂತರ್ಜಾಲ

No comments: