Saturday, May 2, 2015

ಕರುಣಾ ಸಂಧಿ - ೩೦ ನೇ ಪದ್ಯ (ವರಾಹಾವತಾರ)




 ಮೀನ ಕೂರ್ಮ ವರಾಹ ನರಪಂ-
ಚಾನನಾತುಳಶೌರ್ಯ ವಾಮನ
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ |
ಧೇನುಕಾಸುರಮಥನ ತ್ರಿಪುರವ
ಹಾನಿಗೈಸಿದ ನಿಪುಣ ಕಲಿಮುಖ
ದಾನವರ ಸಂಹರಿಸಿ ಧರ್ಮದಿ ಕಾಯ್ದ ಸುಜನರನು || ೩೦ ||


ವರಾಹ - ವರಾಹಾವತಾರ : ಭಗವಂತನ ಅಸಂಖ್ಯಾತ ಅವತಾರಗಳಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟಿರುವ ದಶಾವತಾರಗಳಲ್ಲಿ ಮೂರನೆಯ ಅವತಾರವಾಗಿ ವರಾಹಾವತಾರವಾಯಿತು.    ಭಾಗವತ ಎರಡನೆಯ ಸ್ಕಂಧ ಏಳನೆಯ ಅಧ್ಯಾಯದಲ್ಲಿ ಶ್ವೇತವರಾಹ ಕಲ್ಪದಲ್ಲಿ ಮೊದಲು ಭಗವಂತನ ವರಾಹಾವತಾರವಾಯಿತು ಎಂಬ ಉಲ್ಲೇಖವಿದೆ.  ಅಪ್ರಾಕೃತ ದೇಹದಿಂದಲೇ ಯಾಗಕ್ಕೆ ಬೇಕಾದ ಸರ್ವ ಸಾಮಗ್ರಿಗಳನ್ನು ಸೃಷ್ಟಿ ಮಾಡಿ ’ಯಜ್ಞವರಾಹ’ನೆಂದು ಪ್ರಸಿದ್ಧನಾದನು.  ತಾನಾಗಿಯೇ ಮುಳುಗಿ ಹೋಗಿದ್ದ ಭೂಮಿಯನ್ನು ಶ್ವೇತವರಾಹ ಸ್ವಾಮಿಯು ರಸಾತಳದಿಂದ ಕೋರೆದಾಡಿಯ ಕೊನೆಯಲ್ಲಿಟ್ಟುಕೊಂಡು ಮೇಲಕ್ಕೆ ತರುವಾಗ ಆದಿದೈತ್ಯ ಹಿರಣ್ಯಾಕ್ಷನು ತಡೆದಾಗ ಸ್ವಾಮಿಯು ಗದೆಯಿಂದ ಹಿರಣ್ಯಾಕ್ಷನ ದೇಹವನ್ನು ಸೀಳಿ  ಸಂಹರಿಸಿದನೆಂಬ ವಿವರಣೆ ಇದೆ.

ಶ್ರೀವಿಷ್ಣು ಪುರಾಣಮ್ ವರಾಹಾವತಾರವನ್ನು ವರಾಹ ರೂಪವು ದೇವಯಜ್ಞಮಯವಾದದ್ದು ಎಂದು ಸ್ತುತಿಸಲಾಗಿದೆ.  ನೀರಿನಲ್ಲಿ ಮುಳುಗಿದ್ದ ಪೃಥಿವಿಯನ್ನು ಎತ್ತಿ ತರಬೇಕೆಂಬ ಉದ್ದೇಶದಿಂದ ಜನಲೋಕದಲ್ಲಿದ್ದ ಸನಕಾದಿ ಸಿದ್ಧಪುರುಷರಿಂದ ಸ್ತುತಿಸಲ್ಪಡುತ್ತಿದ್ದಾಗ, ನೀರಿನೊಳಗೆ ಪ್ರವೇಶವಾಯಿತು.  ಪಾತಾಳಕ್ಕೆ ಬಂದ ವರಾಹ ರೂಪಿ ಭಗವಂತನನ್ನು ಕಂಡು ಭೂದೇವಿಯು ಅನೇಕ ವಿಧವಾಗಿ ಸ್ತುತಿಸುತ್ತಾ, ನೀನೇ ನನಗೆ ಆಧಾರನೆಂದು ಮೊರೆಯಿಡುತ್ತಾ ನಮಸ್ಕರಿಸುವಳು.  ಪೃಥಿವಿಯ ಸ್ತುತಿಯಿಂದ ಸಂತುಷ್ಟನಾದ ವರಾಹವು ಸಾಮಗಾನದ ಧ್ವನಿಯಲ್ಲಿ ಗರ್ಜಿಸುತ್ತಾ, ತನ್ನ ಕೋರೆದಾಡಿಯಿಂದ ಭೂಮಿಯನ್ನೆತ್ತಿಕೊಂಡು ದೊಡ್ಡ ನೀಲಾಚಲದಂತೆ ರಸಾತಳದಿಂದ ಮೇಲೆದ್ದಿತು.  ಜಲದಿಂದ ಮೇಲೇಳುವಾಗ ವರಾಹದ ಬಾಯಿಯಿಂದ ಬಿರುಗಾಳಿ ಎದ್ದು ಸಮುದ್ರದ ನೀರು, ಉಕ್ಕಿ ಪುಟಿದು ಜನಲೋಕದಲ್ಲಿ ಆಶ್ರಯ ಪಡೆದಿದ್ದ ಸನಂದನಾದಿ ತೇಜಸ್ವಿ ಮುನಿಗಳನ್ನು ತೊಳೆಯುತ್ತದೆ.  ವರಾಹದ ಹೊಟ್ಟೆಯು ನೀರಿನಿಂದ ಒದ್ದೆಯಾಗಿ, ಅದು ತನ್ನ ವೇದೋಮಯ ಶರೀರವನ್ನು ಕೊಡಹುವುದು.  ರೋಮ ರೋಮಗಳಲ್ಲಿ ಆಶ್ರಯ ಪಡೆದಿದ್ದ ಮುನಿಗಳು ಭಯದಿಂದ ನಿರಂತರ ಸ್ತೋತ್ರ ಮಾಡುತ್ತಾರೆ.  ಸಕಲ ದೇವಾದಿದೇವತೆಗಳೂ, ಜನಲೋಕದ ಸಮಸ್ತ ಯೋಗಿಗಳೂ ವರಾಹಾವತಾರವನ್ನು ಯಜ್ಞಪುರುಷನೆಂದೂ, ಪಾದಗಳು ನಾಲ್ಕು ವೇದಗಳೆಂದೂ, ಕೋರೆದಾಡಿಯೇ ಯೂಪವೆಂದೂ, ಹಲ್ಲುಗಳೇ ಯಜ್ಞಗಳೆಂದೂ, ಮುಖವೇ ಹೋಮಕುಂಡವೆಂದೂ, ನಾಲಿಗೆಯೇ ಅಗ್ನಿಯೆಂದೂ, ರೋಮಗಳೇ ದರ್ಭೆಗಳೆಂದೂ ಪರಮಪುರುಷನ ಅವಯವಗಳನ್ನು ಸ್ತುತಿಸುತ್ತಾ ನಮಿಸುತ್ತಾರೆ.  ವರಾಹರೂಪಿ ಭಗವಂತನು ಪೃಥಿವಿಯನ್ನು ಜಲರಾಶಿಯ ಮೇಲೆ ಸ್ಥಾಪಿಸಿ, ಭೂಮಿಯ ಮೇಲ್ಮೈಯನ್ನು ಸಮವಾಗಿ ಮಾಡಿ, ಪರ್ವತಗಳನ್ನು ವಿಭಾಗ ಮಾಡಿ ಸ್ಥಾಪಿಸುವನು.  ಸಪ್ತದ್ವೀಪಗಳಾಗಿ ವಿಂಗಡಿಸಲ್ಪಟ್ಟು, ಭೂಃ ಭುವಃ ಸುವಃ ಮಹಃ ಎಂಬ ನಾಲ್ಕು ಲೋಕಗಳು ನಿರ್ಮಾಣವಾಯಿತೆಂದು ಸುಂದರವಾಗಿ ವರ್ಣಿಸಲ್ಪಟ್ಟಿದೆ.

ಪದ್ಮ ಮಹಾಪುರಾಣದಲ್ಲಿ ವರಾಹಾವತಾರವು ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ.  ಭಗವಂತನು ವಿಚಿತ್ರವಾದ ವಿಶ್ವರೂಪಿ ವರಾಹ ಅವತಾರವನ್ನು ಧರಿಸಿದನೆಂಬ ಉಲ್ಲೇಖವಿದೆ.  ವರಾಹದ ಮೂಲ ಎಲ್ಲಿದೆಯೆಂಬುದೇ ತಿಳಿಯದಂತೆ, ಮಧ್ಯವು ಗೋಚರಿಸದೆ, ತುದಿಯಂತೂ ಇಲ್ಲದಂತಹ ವ್ಯಾಪ್ತತೆಯಿರುತ್ತದೆ.  ಮೈ ತುಂಬ ಕಣ್ಣು, ನೋಡಿದಲ್ಲೆಲ್ಲ ಕೈ, ಎಲ್ಲ ಕಡೆಗೂ ಕಾಲು, ಅತೀ ಉದ್ದವಾದ ಕೋರೆದಾಡಿಯನ್ನು ಹೊಂದಿತ್ತೆಂಬ ವಿವರಣೆ ಸಿಕ್ಕುತ್ತದೆ.  ನಾಲ್ಕು ವೇದಗಳು, ಆರು ವೇದಾಂಗಗಳನ್ನು ದೇಹವಾಗಿ ಹೊಂದಿದ್ದ ಯಜ್ಞ ವರಾಹ ರೂಪಿಯನ್ನು ದೇವತೆಗಳು "ನಮೋ ಯಜ್ಞ ವರಾಹಾಯ ಕೃಷ್ಣಾಯ ಶತಬಾಹವೇ | ನಮಸ್ತೇ ವೇದವೇದಾಂಗ ತನವೇ ವಿಶ್ವರೂಪಿಣೇ" ಎಂದು ಸ್ತುತಿಸುತ್ತಾರೆ.



ಭಾಗವತ ಎರಡನೆಯ ಸ್ಕಂಧ ೭ನೆಯ ಅಧ್ಯಾಯದಲ್ಲಿ ವರಾಹಾವತಾರವನ್ನು
ಯತ್ರೋದ್ಯತಃ ಕ್ಷಿತಿತಲೋದ್ಧರಣಾಯ ಬಿಭ್ರ-
ತ್ಕ್ರೌಡೀಂ ತನುಂ ಸಕಲ ಯಜ್ಞಮಯೀಮನನ್ತಃ |
ಅನ್ತರ್ಮಹಾರ್ಣವ ಉಪಾಗತಮಾದಿದೈತ್ಯಂ
ತಂ ದಂಷ್ಟ್ರಯಾದ್ರಿಮಿವ ವಜ್ರಧರೋ ದದಾರ || - ಪ್ರಳಯ ಜಲದಲ್ಲಿ ಮುಳುಗಿದ್ದ ಭೂಮಿಯನ್ನು ಉದ್ಧರಿಸುವುದಕ್ಕೋಸ್ಕರ ಅನಂತನಾದ ಶ್ರೀಭಗವಂತನು ಸಮಸ್ತ ಯಜ್ಞಮಯವಾದ ವರಾಹ ದೇಹವನ್ನು ಕೈಗೊಂಡನು.  ಆ ಅವತಾರದಲ್ಲಿ ಆತನು ಮಹಾ ಸಮುದ್ರದೊಳಗಡೆಯೇ ತನ್ನನ್ನು ಎದುರಿಸಲು ಬಂದ ಆದಿದೈತ್ಯನಾದ ಹಿರಣ್ಯಾಕ್ಷನನ್ನು - ಇಂದ್ರನು ವಜ್ರಾಯುಧದಿಂದ ಪರ್ವತವನ್ನು ಭೇದಿಸಿದಂತೆ - ತನ್ನ ಕೋರೆದಾಡೆಯಿಂದ ಸೀಳಿಹಾಕಿದನು ಎಂದು ವರ್ಣಿಸಲ್ಪಟ್ಟಿದೆ.

ಭಾಗವತ ಮೂರನೆಯ ಸ್ಕಂಧ, ಹದಿಮೂರನೆಯ ಅಧ್ಯಾಯದಲ್ಲಿ ಸ್ವಾಯಂಭುವ ಮನುವು ಭೂಮಿಯು ದಿನ ಪ್ರಳಯದ ನೀರಿನಲ್ಲಿ ಮುಳುಗಿರುವುದರಿಂದ ಪ್ರಜೆಗಳ ವಾಸಕ್ಕೆ ಸ್ಥಳವಿಲ್ಲವಾಗಿದೆ, ಭೂಮಿಯನ್ನು ನೀರಿನಿಂದ ಮೇಲಕ್ಕೆ ತರಬೇಕೆಂದು ಕೇಳಿಕೊಳ್ಳುತ್ತಾರೆ.  ಬ್ರಹ್ಮದೇವರು ಶ್ರೀಮನ್ನಾರಾಯಣನೇ ಭೂಮಿಯನ್ನು ಮೇಲಕ್ಕೆ ತರಬೇಕೆಂದು, ಭಗವಂತನನ್ನು ಧ್ಯಾನಿಸುತ್ತಾರೆ.  ಧ್ಯಾನದ ಸಮಯದಲ್ಲಿಯೇ ಬ್ರಹ್ಮದೇವರ ಮೂಗಿನ ಹೊಳ್ಳೆಯಿಂದ ಅಂಗುಷ್ಠ ಗಾತ್ರದ ವರಾಹವು ಹೊರಗೆ ಬಂದು ಕೂಡಲೇ ಬೃಹದಾಕಾರವಾಗಿ ಬೆಳೆಯಿತು.  ಇದು ಭಗವಂತನದ್ದೇ ಲೀಲೆಯೆಂದು ಬ್ರಹ್ಮದೇವರು ಮತ್ತು ಸ್ವಾಯಂಭುವ ಮನುವು ಯೋಚಿಸುತ್ತಿರಲು ವರಾಹವು ಒಮ್ಮೆ ಗರ್ಜಿಸಿ, ದೇವತೆಗಳೆಲ್ಲರನ್ನೂ ಸಂತೋಷಪಡಿಸುತ್ತದೆ.  ಸಮಸ್ತರೂ ವರಾಹರೂಪಿ ಭಗವಂತನನ್ನು ವೇದಗಳಿಂದ ಸ್ತುತಿಸುತ್ತಿರಲು, ವರಾಹವು ತನ್ನ ಬಾಲವನ್ನು ಮೇಲಕ್ಕೆತ್ತಿಕೊಂಡು, ನೀರೊಳಗೆ ಹೋಗಿ ರಸಾತಳದಲ್ಲಿ ಸೆರೆಸಿಕ್ಕಿದ್ದ ಭೂಮಿಯನ್ನು ಮೇಲಕ್ಕೆ ತರುತ್ತಿರಲು, ಬ್ರಹ್ಮದೇವರಿಂದ ಹುಟ್ಟಿದ್ದ ಆದಿ ಹಿರಣ್ಯಾಕ್ಷನೆಂಬ ದೈತ್ಯನು ಗದಾಪಾಣಿಯಾಗಿ ಭಗವಂತನನ್ನು ಅಡ್ಡಗಟ್ಟುತ್ತಾನೆ.  ವರಾಹದೇವನು ತನ್ನ ದಾಡೆಯಿಂದ ಅವನನ್ನು ಕೊಂದು ಭೂಮಿಯೊಡನೆ ಮೇಲಕ್ಕೆ ಬರುತ್ತಾನೆ.    ತಾನಾಗಿಯೇ ದಿನಪ್ರಳಯ ಜಲದಲ್ಲಿ ಮುಳುಗಿದ್ದ ಭೂಮಿಯನ್ನು ತರುವಾಗ ಅಡ್ಡಬಂದ ಆದಿಹಿರಣ್ಯಾಕ್ಷನನ್ನು ಭಗವಂತನು ಶ್ವೇತವರಾಹ ರೂಪದಲ್ಲಿ, ದಾಡೆಯಿಂದ ಸಂಹರಿಸುತ್ತಾನೆ.    ಏಳನೆಯ ಮನ್ವಂತರದಲ್ಲಿ ಕಶ್ಯಪ-ದಿತಿಯ ಮಗನಾಗಿ ಹುಟ್ಟಿದ್ದ ಹಿರಣ್ಯಾಕ್ಷನು ಭೂಮಿಯನ್ನು ಅಪಹರಿಸಿ, ನೀರಿನಲ್ಲಿ ಮುಳುಗಿದ್ದಾಗ ಭಗವಂತನು ನೀಲವರಾಹ ರೂಪದಿಂದ ಅವತರಿಸಿ, ಹಿರಣ್ಯಾಕ್ಷನ ಕಿವಿಯ ಬುಡದಲ್ಲಿ ಹಸ್ತದಿಂದಲೇ ಹೊಡೆದು ಕೊಲ್ಲುತ್ತಾನೆ.  ಹೀಗೆ ಭಗವಂತನು ಒಂದು ಬಾರಿ ’ಶ್ವೇತವರಾಹ’ನಾಗಿಯೂ ಮತ್ತೊಂದು ಬಾರಿ ’ನೀಲವರಾಹ’ನಾಗಿಯೂ ಅವತರಿಸುತ್ತಾನೆ.

ಶ್ರೀಮದಾಚಾರ್ಯರು ತಮ್ಮ ದ್ವಾದಶ ಸ್ತೋತ್ರದ ಷಷ್ಠೋಧ್ಯಾಯದಲ್ಲಿ ಭಗವಂತನ ವರಾಹಾವತಾರವನ್ನು "ಸೂಕರ ರೂಪಕ ದಾನವಶತ್ರೋ ಭೂಮಿವಿಧಾರಕ ಯಜ್ಞವರಾಂಗ" - ರಾಕ್ಷಸ ಸಂಹಾರಿಯೂ, ಭೂಮಿಯನ್ನು ಧರಿಸಿರುವವನೂ, ಬ್ರಹ್ಮಾದಿ ದೇವತೆಗಳನ್ನು ತನ್ನ ಶರೀರದಲ್ಲೇ ಧರಿಸಿರುವ ವರಾಹಾವತಾರಿಯಾದ ಶ್ರೀಮಹಾವಿಷ್ಣುವೇ ನಿನ್ನನ್ನು ನಮಸ್ಕರಿಸುತ್ತೇನೆ ಎಂದೂ ನವಮೋಧ್ಯಾಯದಲ್ಲಿ
ಸಗಿರಿವರಧರಾತಲವಹ ಸುಸೂಕರ ಪರಮ ವಿಬೋಧ ಹೇ ಭವ ಮಮ ಶರಣಮ್ |
ಶುಭತಮ ಕಥಾಶಯ ಪರಮಸದೋದಿತ ಜಗದೇಕ ಕಾರಣ ರಾಮರಮಾರಮಣ || -  ವರಾಹರೂಪಿಯಾಗಿ ಭೂಮಿಯನ್ನುದ್ಧರಿಸಿದ, ಪೂರ್ಣಜ್ಞಾನ ರೂಪಿಯಾದ, ಬ್ರಹ್ಮ ಜಿಜ್ಞಾಸುಗಳ ಸಂವಾದಕ್ಕೆ ಮುಖ್ಯ ಕಾರಣನೂ, ಪುರುಷೋತ್ತಮನೂ, ಸದಾ ಪ್ರಕಾಶಮಾನನೂ ಜಗತ್ತಿನ ಅಸ್ತಿತ್ವಕ್ಕೆ ಮುಖ್ಯ ಕಾರಣನೂ, ಆತ್ಮಾರಾಮನೂ ಆದ ಲಕ್ಷ್ಮೀಪತಿಯೇ ನಿನ್ನನ್ನು ಶರಣು ಹೊಂದುತ್ತೇನೆ ಎಂದು ಸ್ತುತಿಸಿದ್ದಾರೆ.

ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ವರಾಹಾವತಾರವನ್ನು
ನೀಲಾಂಬುದಾಭ ಶುಭ ಶೀಲಾದ್ರಿ ದೇಹಧರ ಖೇಲಾಹೃತೋದಧಿಧುನೀ
ಶೈಲಾದಿಯುಕ್ತ ನಿಖಿಲೇಲಾಕಟಾದ್ಯಸುರ ತೂಲಾಟವೀ ದಹನ ತೇ |
ಕೋಲಾಕೃತೇ ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರ ಧರಣೀ
ಲೀಲಾಸ್ಪದೋರುತಲ ಮೂಲಾಶಿಯೋಗಿವರ ಜಾಲಾಭಿ ವಂದಿತ ನಮಃ || - ನೀಲಮೇಘಶ್ಯಾಮನಾದ, ಸಜ್ಜನರಿಗೆ ಇಷ್ಟಾರ್ಥಪ್ರದನಾದ, ಪರ್ವತ ಸಮಾನ ದೇಹಧಾರಿಯಾದ, ಅಸುರನಿಂದ ಅಪಹರಿಸಲ್ಪಟ್ಟ ಭೂಮಿಯನ್ನು ಉದ್ಧರಿಸಲಿಕ್ಕಾಗಿ ಆದಿದೈತ್ಯ ಹಿರಣ್ಯಾಕ್ಷನನ್ನು ಸಂಹರಿಸಿ, ನೀಲಕಮಲದಂತೆ ಭೂಮಿಯನ್ನು ಎತ್ತಿ ದಾಡೆಯಲ್ಲಿಟ್ಟುಕೊಂಡು ಸಮುದ್ರ ಜಲದಲ್ಲಿ ಕ್ರೀಡಾರ್ಥವಾಗಿ ವಿಹರಿಸಿದ, ಭೂಮಿದೇವಿಯನ್ನು ಮಡಿಲಲ್ಲಿರಿಸಿಕೊಂಡು ರಮಿಸಿದ, ಮಹಾಯೋಗಿಗಳಿಂದ ಸದಾ ಧ್ಯಾನಿಸಲ್ಫಡುತ್ತಿರುವ, ಭೂವರಾಹರೂಪಿಯಾದ ಶ್ರೀ ಮಹಾವಿಷ್ಣುವೇ ನಿನಗೆ ಅನಂತ ನಮಸ್ಕಾರಗಳು ಎಂದು ಸ್ತುತಿಸಿದ್ದಾರೆ.

ಜಯದೇವ ಕವಿಯು ತನ್ನ "ಗೀತಗೋವಿಂದ" ಕೃತಿಯಲ್ಲಿನ ದಶಾವತಾರದ ವರ್ಣನೆಯಲ್ಲಿ ವರಾಹಾವತಾರವನ್ನು
ವಸತಿ ದಶನಶಿಖರೇ ಧರಣೀ ತವ ಲಗ್ನಾ
ಶಶಿನಿ ಕಲಂಕಕತ್ರೇವ ನಿಮಗ್ನಾ
ಕೇಶವ ಧೃತಶೂಕರರೂಪ ಜಯ ಜಗದೀಶ ಹರೇ || - ವಿಸ್ತಾರವಾದ ಧರಣಿಯನ್ನು ನಿನ್ನ ಶಿರೋ ಭಾಗದಲ್ಲಿ ಹೊತ್ತಿರುವ ಸೂಕರ ರೂಪದಲ್ಲಿ ಸ್ಥಿತನಾಗಿರುವ ಕೇಶವನೇ ನಿನಗೆ ಜಯ ಜಯವೆಂದು ಸ್ತುತಿಸಿದ್ದಾರೆ.

ಜೀವ ವಿಕಸನದ ಸಂಕೇತವಾಗಿ ಮತ್ಸ್ಯರೂಪದಲ್ಲಿಯೂ, ಧ್ಯಾನಿಸಲು ಬೇಕಾದ ಭದ್ರವಾದ ಆಸನ ಹಾಗೂ ವಿಷಯಾಸಕ್ತಿಗಳಿಂದ ರಕ್ಷಿಸಿಕೊಳ್ಳಲು ಗಟ್ಟಿಯಾದ ಹೊರ ಕವಚವನ್ನು ಮನೋನಿಗ್ರಹವನ್ನು ಕೂರ್ಮರೂಪದಲ್ಲಿಯೂ ಅನುಸಂಧಾನ ಮಾಡಿಕೊಂಡ ನಂತರ ಬರುವುದು ವರಾಹಾವತಾರ.  ಸಾಧಕನು ವಿಕಸಿತನಾಗಿ, ದೃಢವಾಗಿ ಕುಳಿತ ನಂತರ ಸಮುದ್ರದ ತಳದಲ್ಲಿರುವಂತೆ ಅಂತರಂಗದಲ್ಲಿರುವ ವಿಷಯಾಸಕ್ತಿಗಳೊಳಗೆ ವರಾಹದಂತೆ ನುಗ್ಗಿ, ಬಗ್ಗಡವನ್ನು ಭಕ್ತಿಯೆಂಬ ಕೋರೆದಾಡಿಯಿಂದ ಬಗೆದು ರಸಾತಳದಲ್ಲಿ ಹುದುಗಿರುವ ಶುದ್ಧಾತ್ಮನನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಬೇಕು.  ಬಗ್ಗಡವನ್ನು ಬಿಟ್ಟು, ವಿಷಯಾಸಕ್ತಿಗಳೆಂಬ ಹಿರಣ್ಯಾಕ್ಷನನ್ನು ಭಕ್ತಿಯೆಂಬ ಕೋರೆದಾಡಿಯಿಂದ ವಧಿಸಿ, ಶುದ್ಧಾತ್ಮನನ್ನು ಪರಿಶುಭ್ರವಾದ ಹೃತ್ಕಮಲದಲ್ಲಿ ನೆಲೆಸುವಂತೆ ಮಾಡಿ ಧ್ಯಾನಿಸಬೇಕು.  ಭಗವಂತನ ದಶಾವತಾರಗಳು ಹಂತ ಹಂತವಾಗಿ ಸಾಧಕನನ್ನು ಒಂದೊಂದೇ ಮೆಟ್ಟಿಲು ಏರುವಂತೆ ಮಾಡುವ ಅತಿ ಸುಂದರವಾದ ಅನುಸಂಧಾನವಾಗಿದೆ.

ಮನುಷ್ಯನ ಶರೀರದಾದ್ಯಂತ ದಶೇಂದ್ರಿಯಗಳಲ್ಲಿ ಭಗವಂತನ ವ್ಯಾಪ್ತಿಯನ್ನು ದಶಾವತಾರಕ್ಕೆ ಹೇಗೆ ಅನುಸಂಧಾನ ಮಾಡಿಕೊಳ್ಳಬೇಕೆಂಬುದನ್ನು ವಿವರಿಸುತ್ತಾ ದಾಸರಾಯರು ಹರಿಕಥಾಮೃತಸಾರದ "ಪಂಚ ಮಹಾಯಜ್ಞ ಸಂಧಿ"ಯ ೩೪ನೆಯ ಪದ್ಯದಲ್ಲಿ  ಚರ್ಮದಲ್ಲಿ ವರಾಹರೂಪಿ ಭಗವಂತನ ಮೂರ್ತಿಯನ್ನು ಅನುಸಂಧಾನ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.  ಭಗವಂತನು ವರಾಹರೂಪವೆತ್ತಿದಾಗ ಲಕ್ಷ್ಮೀದೇವಿಯು ಧಾತ್ರಿಯಾಗಿರುತ್ತಾಳೆ ಎಂದಿದ್ದಾರೆ.

ಆದಿ ಹಿರಣ್ಯಾಕ್ಷನನ್ನು ಕೊಂದ ಭಗವಂತನನ್ನು ಭೂದೇವಿಯು ನಾನಾವಿಧವಾಗಿ ಸ್ತುತಿಸುತ್ತಾ, ತನ್ನನ್ನು ಉದ್ಧರಿಸಿದ ಭಗವಂತನ ಸ್ವರೂಪವು ತನಗೆ ತಿಳಿಯದೆಂದು ಪ್ರಾರ್ಥಿಸಿಕೊಳ್ಳಲಾಗಿ, ಭಗವಂತನು ಭೂಮಿದೇವಿಗೆ ನೀಡಿದ ತತ್ವೋಪದೇಶವು ವರಾಹಪುರಾಣವೆಂದು ಪ್ರಸಿದ್ಧವಾಯಿತು.  ಆದಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮೇಲಕ್ಕೆ ತಂದದ್ದೂ, ಮತ್ತೆ ನೀಲವರಾಹನಾಗಿ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮೇಲಕ್ಕೆ ತಂದದ್ದು ಭೂಮಿಯ ಮೇಲೆ ಸಾಧನೆಗೋಸ್ಕರ ಹುಟ್ಟಬೇಕಾಗಿದ್ದ ಜೀವರಾಶಿಯ ಮೇಲಿನ ಅಪಾರ ಕಾರುಣ್ಯದಿಂದಲೇ ಎಂದು ತಿಳಿಯುತ್ತದೆ.

ಶ್ರೀ ಜಗನ್ನಾಥದಾಸರು ತಮ್ಮ "ತತ್ವಸುವ್ವಾಲಿ"ಯಲ್ಲಿ ವರಾಹಾವತಾರವನ್ನು
ಸೋಮಪನ ನುಡಿ ಕೇಳಿ ಹೇಮಾಂಬಕನ ಕೊಂದಿ
ಭೂಮಿಯ ನೆಗಹಿದಿ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿ ಭೂವರಹ ದಯವಾಗೋ || - ಸೋಮಪನ (ಚತುರ್ಮುಖ ಬ್ರಹ್ಮ) ಪ್ರಾರ್ಥನೆಯನ್ನು ಕೇಳಿ ಹಿರಣ್ಯಾಕ್ಷನೆಂಬ ದೈತ್ಯನನ್ನು ಸಂಹರಿಸಿ ಕೋರೆದಾಡಿಯಿಂದ ಭೂಮಿಯನ್ನು ಮೇಲಕ್ಕೆ ಎತ್ತಿದಂತಹ ಸ್ವಾಮಿ ಜಗತ್ತಿನ ಒಡೆಯನೇ ಭೂವರಹನೇ ಕೃಪೆಮಾಡು ಎಂದು ಪ್ರಾರ್ಥಿಸಿದ್ದಾರೆ.

ಶ್ರೀವಿಜಯದಾಸರು ತಮ್ಮ "ವರಾಹ ಸ್ತೋತ್ರ" ಎಂಬ ಸುಳಾದಿಯಲ್ಲಿ ’ಭೂವರಾಹ ಅವತಾರ ಶೃಂಗಾರ ಗುಣಾಕಾರ’, ’ಧಾರುಣೀಧರ’ ’ಸರ್ವಸಾರಭೋಕ್ತ’ ಎಂದೆಲ್ಲಾ ಸ್ತುತಿಸುತ್ತಾ ’ಸೂಕರ ರೂಪವ ತಾಳಿ ಕೋರಿದಾಡಿಲಿಂದ, ಭೀಕರ ಶಬ್ದದಿ ದಶದಿಶೆಗಳೆಲ್ಲ ಬೀರುತ್ತ’...  ಎಂದು ಭೀಕರರೂಪವನ್ನು ವರ್ಣಿಸಿದ್ದಾರೆ.  ’ಇಳೆಯಾ ಬಗೆದು’.. ಎಂದು ಮುಂದುವರೆಸುತ್ತಾ ವರಾಹಾವತಾರದ ಮೂಲ ಉದ್ದೇಶವನ್ನು ಸುಂದರವಾಗಿ ಚಿತ್ರಿಸಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ


ಭಾರತದಲ್ಲಿರುವ ವರಾಹಸ್ವಾಮಿ ದೇವಸ್ಥಾನದ ಕೊಂಡಿಗಳು..
http://gotirupati.com/sri-bhoo-varahaswamy/

https://www.google.co.in/search?q=varahaswamy&safe=active&tbm=isch&tbo=u&source=univ&sa=X&ei=Sds3VbSTCNSdugTa1oH4Cw&ved=0CC4Q7Ak&biw=1105&bih=703#imgrc=hHcaFQzLMW-ixM%253A%3BqwzAaaaMZ2OriM%3Bhttp%253A%252F%252Fwww.tourismguideindia.com%252Fimages%252FKarnataka%252FMysore%252FVarahaswamy%252520Temple.jpg%3Bhttp%253A%252F%252Fwww.tourismguideindia.com%252Fmysore-gallery.htm%3B600%3B398

No comments: