Sunday, December 14, 2014

ಕರುಣಾ ಸಂಧಿ - ೨೮ ನೇ ಪದ್ಯ




ಕೊಟ್ಟುದನು ಕೈಕೊಂಬರೆಕ್ಷಣ
ಬಿಟ್ಟಗಲ ತನ್ನವರ ದುರಿತಗ-
ಳಟ್ಟುವನು ದೂರದಲಿ ದುರಿತಾರಣ್ಯಪಾವಕನು |
ಬೆಟ್ಟ ಬೆನ್ನಲಿ ಹೊರಿಸಿದವರೊಳು
ಸಿಟ್ಟು ಮಾಡಿದನೇನೊ ಹರಿ ಕಂ-
ಗೆಟ್ಟ ಸುರರಿಗೆ ಸುಧೆಯನುಣಿಸಿದ ಮುರಿದನಹಿತರನು  || ೨೮ ||


ಪ್ರತಿಪದಾರ್ಥ : ಕೊಟ್ಟುದನು ಕೈಗೊಂಬ - ಶುದ್ಧವಾದ ಮನಸ್ಸಿನಿಂದಲೂ ಪ್ರೀತಿಯಿಂದಲೂ ಭಕ್ತರು ಏನನ್ನೇ ಸಮರ್ಪಿಸಿದರೂ ಸ್ವೀಕರಿಸುವವನು, ಅರೆಕ್ಷಣ ಬಿಟ್ಟಗಲ ತನ್ನವರ - ಒಂದು ಕ್ಷಣದಲ್ಲಿ ಅರೆಕ್ಷಣ ಸಮಯದಷ್ಟೂ ಭಕ್ತರನ್ನು ಬಿಟ್ಟು ಅಗಲಿ ಹೋಗದವನು, ದುರಿತಗಳಟ್ಟುವನು ದೂರದಲಿ - ಭಕ್ತರ ಕಷ್ಟಗಳನ್ನು ಅತಿ ದೂರಕ್ಕೆ ಓಡಿಸುವವನು, ದುರಿತಾರಣ್ಯಪಾವಕನು - ಜನ್ಮಾರ್ಜಿತ ಪಾಪಗಳೆಂಬ ಅರಣ್ಯವನ್ನು ಅಗ್ನಿಯಾಗಿ ಭಸ್ಮಗೊಳಿಸಿ ಬಿಡುವವನು, ಬೆಟ್ಟ ಬೆನ್ನಲಿ ಪೊರಸಿದವರೊಳು - ಸಮುದ್ರ ಮಥನ ಕಾಲದಲ್ಲಿ ಕೂರ್ಮರೂಪಿ ಭಗವಂತನ ಬೆನ್ನಮೇಲೆ ಮಂದರ ಪರ್ವತವನ್ನು ಹೊರಿಸಿದಂತಹವರ ಮೇಲೆ, ಸಿಟ್ಟು ಮಾಡಿದನೇನೋ ಹರಿ - ಭಗವಂತನು ಕೋಪಿಸಿಕೊಂಡನೇ, ಕಂಗೆಟ್ಟ ಸುರರಿಗೆ - ಅಮೃತವನ್ನು ದಾನವರು ಅಪಹರಿಸಿದಾಗ  ಕಂಗೆಟ್ಟಿದ್ದ ದೇವತೆಗಳಿಗೆ, ಸುಧೆಯನುಣಿಸಿದ - ಅಮೃತವನ್ನು ಪಾನ ಮಾಡಿಸುವನು, ಮುರಿದನಹಿತರನು - ತನಗೆ ವಿರೋಧಿಗಳಾದ ದಾನವರ ಅಮೃತಪಾನದ ಆಸೆಯನ್ನು ಮುರಿದು ಅವರನ್ನು ಸಂಹರಿಸಿದನು

ಭಗವ೦ತನ ಕಾರುಣ್ಯವನ್ನು ದಾಸರಾಯರು ಈ ಪದ್ಯದಲ್ಲಿ ವಿವರಿಸುತ್ತಾ, ತನ್ನ ನಿಜಭಕ್ತರು ಜ್ಞಾನಾನುಸ೦ಧಾನದಿ೦ದ ಕೊಟ್ಟ೦ತಹ ನೈವೇದ್ಯ ಪದಾರ್ಥಗಳಲ್ಲಿನ ಸ್ವಾಖ್ಯರಸವನ್ನು ಸ್ವೀಕರಿಸಿ, ಅರೆಕ್ಷಣವಾದರೂ ಭಕ್ತರನಗಲದೆ, ಅವರ ಸತ್ಸಾಧನೆಗೆ ಪ್ರತಿಬ೦ಧಕಗಳಾಗುವ ಅಜ್ಞಾನಾದಿ ದೋಷಗಳನ್ನು ನಿವಾರಣೆ ಮಾಡುತ್ತಾನೆ ಎ೦ದು ತಿಳಿಸಿದ್ದಾರೆ. ಹಾಗೆಯೇ ಭಗವ್ದ್ವೇಷಿಗಳಾದ ದೈತ್ಯರನ್ನು, ಸೂರ್ಯನು ಕತ್ತಲೆಯನ್ನು ನಿಮಿಷಮಾತ್ರದಲಿ ನಿವಾರಿಸುವ ಹಾಗೆ ದೈತ್ಯರೆ೦ಬ ಅ೦ಧಕಾರವನ್ನು ಓಡಿಸುತ್ತಾನೆ. ಜನನ ಮರಣಗಳಿಗೆ ಧಾತುವಾದ ಕರ್ಮಗಳು, ಯಾವತ್ತೂ ಸ೦ಚಿತ ಪಾಪಕರ್ಮಗಳೇ ಆಗಿರುವುದರಿ೦ದ, ಭಕ್ತರ ದುರಿತಗಳ ಅರಣ್ಯಕ್ಕೆ ಭಗವ೦ತನು ಅಗ್ನಿಸದೃಶನಾಗುತ್ತಾನೆ.  ಪರಮಾತ್ಮನ ಕೂರ್ಮಾವತಾರದಲ್ಲಿ ದೇವತೆಗಳು ಮ೦ದರ ಪರ್ವತವನ್ನು ತನ್ನ ಬೆನ್ನ ಮೇಲೆ ಹೊರಿಸಿದರೂ ಕೂಡ, ಭಗವ೦ತನು ಕೋಪಗೊಳ್ಳದೆ, ಅವರಿಗೆ ಅಮೃತಪಾನವನ್ನೇ ಮಾಡಿಸುತ್ತಾನೆ. ಆದರೆ ದೈತ್ಯರು ಎಷ್ಟೇ ಕಷ್ಟದಿ೦ದ ಪ್ರಯತ್ನ ಪಟ್ಟರೂ ಕೂಡ ಅವರನ್ನು ಅಮೃತದಿ೦ದ ವ೦ಚಿಸಿ ಅವರ ಅಭಿಲಾಷೆಯನ್ನು ಭ೦ಗಗೊಳಿಸುತ್ತಾನೆ. 

ಕೊಟ್ಟುದನು ಕೈಕೊಂಬ -   
ಜಗತ್ಕಾರಣನಾದ ಭಗವ೦ತನಿ೦ದಲೇ ಸಕಲ ಚರಾಚರಾವಸ್ತುಗಳು ನಿರ್ಮಿಸಲ್ಪಟ್ಟಿದ್ದು, ಅದರ ಉಪ ಭೋಗವನ್ನು ನಾವು ಪಡೆಯುತ್ತಿದ್ದೇವೆ.  ಈಶಾವಾಸ್ಯೋಪನಿಷತ್‍ನಲ್ಲಿ "ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್" - ಜಗತ್ತೆಲ್ಲವನ್ನೂ ಭಗವಂತನು ತನ್ನ ಪ್ರವೃತ್ತಿಗಾಗಿ ಸೃಷ್ಟಿಸಿದ್ದಾನೆಂದು ತಿಳಿಸಲಾಗಿದೆ.  ಒಳಗೆ ಪ್ರೇರಕನಾಗಿ ಭಗವಂತನಿಲ್ಲದಿದ್ದರೆ ಜಗತ್ತಿನ ಒಂದು ಹುಲ್ಲು ಕಡ್ಡಿಯೂ ಕೂಡ ಪ್ರವರ್ತಿಸಲಾರದು ಎಂದೂ ಮತ್ತು "ಈಶಸ್ಯ ಆವಾಸಯೋಗ್ಯಂ ಈಶಾವಾಸ್ಯಂ | ಜಗತ್ಯಾಂ ಪ್ರಕೃತೌ " - ಪ್ರಕೃತಿಯಲ್ಲಿ ಈಶನ ಆವಾಸಕ್ಕೆ ಅರ್ಹವಾದುದು ಈಶಾವಾಸ್ಯವು ಎಂಬ ಉಲ್ಲೇಖವಿದೆ.  ಇದರರ್ಥವು ಸಕಲ ಚರಾಚರ ವಸ್ತುಗಳಲ್ಲೂ ಭಗವಂತನೇ ನೆಲೆಸಿದ್ದಾನೆ.  ಎಲ್ಲವೂ ಅವನ ಆವಾಸವೇ ಆಗಿದೆ ಎಂದಾಗಿದೆ.  ಹೀಗೆ ಎಲ್ಲವನ್ನೂ ಭಗವಂತನೇ ಕೊಟ್ಟಿರುವಾಗ, ಎಲ್ಲದರಲ್ಲೂ ಅವನೇ ನೆಲೆಸಿರುವಾಗ,  ನಮ್ಮ ಬಳಿಯಲ್ಲಿ ಅವನಿಗಾಗಿ ಕೊಡುವುದಕ್ಕೆ ಅವನದಲ್ಲದೇ ಇರುವ ಯಾವ ವಸ್ತುವೂ ಇಲ್ಲ.   ಸರ್ವವ್ಯಾಪ್ತನಾದ ಭಗವಂತನು ತಾನೇ ನಮಗೆ ಮೊದಲು ಕೊಟ್ಟಿದ್ದರೂ ಅದನ್ನೇ ನಾವು ಮರಳಿ ಅವನಿಗರ್ಪಿಸಿದಾಗ ಆನಂದದಿಂದ ಸ್ವೀಕರಿಸುತ್ತಾನೆ.  ನಮ್ಮದೇ ಎಂಬಂತಹ ಸ್ವಂತದ್ದು ಯಾವುದೂ ಇಲ್ಲದಿರುವುದರಿಂದ ನಾವು ಭಗವಂತನಿಗೆ ನಮ್ಮನ್ನೇ, ನಮ್ಮ ಆತ್ಮವನ್ನೇ ಸಮರ್ಪಣೆ ಮಾಡಿಕೊಳ್ಳಬೇಕು.  ಅದೂ ಕೂಡ ಅವನ ಕಾರುಣ್ಯದಿಂದಲೇ ಬಂದಿರುವುದು.  ಶ್ರೀ ಪುರಂದರದಾಸರು ಹೇಳಿದಂತೆ "ಕೆರೆಯ ನೀರನು ಕೆರೆಗೇ ಚೆಲ್ಲಬೇಕು" ಅನ್ಯಥಾ ಉಪಯೋಗಿಸಿ, ವ್ಯರ್ಥ ಮಾಡುವ ಅಧಿಕಾರ ಜೀವನಿಗೆ ಇರುವುದಿಲ್ಲ.  ಹರಿಯ ಕರುಣದೊಳಾದ ಭಾಗ್ಯವನ್ನು ಹರಿಗೇ ಸಮರ್ಪಣೆ ಮಾಡಬೇಕು.  ಸಮರ್ಪಿಸುವ ವಸ್ತು ಯಾವುದೇ ಆಗಿದ್ದರೂ ಕೂಡ ಅದರ ಹಿಂದಿನ ಭಾವ ಮಾತ್ರ ಶುದ್ಧವಾಗಿರಬೇಕು.  ಭಕ್ತಿಯಿಂದ, ಶ್ರದ್ಧೆಯಿಂದ ಭಗವಂತ ನಮಗಾಗಿ ಕೊಟ್ಟದ್ದನ್ನು ನಾವು ಅವನಿಗೆ ಹಿಂತಿರುಗಿಸುವಾಗ ಶುದ್ಧ ಮನಸ್ಸಿನಿಂದ ಸಮರ್ಪಿಸಬೇಕು.  ಭಗವಂತನಿಗೆ ಭಕ್ತರಿಂದ ಯಾವ ನಿರೀಕ್ಷೆಯೂ ಇಲ್ಲ.  ಅವನನ್ನು ಸುಪ್ರೀತಗೊಳಿಸಲು ದುಬಾರಿ ಬೆಲೆಯ ಯಾವ ವಸ್ತುಗಳನ್ನೂ ಕೊಡಬೇಕಾಗಿಲ್ಲ.  ಇಲ್ಲಿ ವಸ್ತು ಮುಖ್ಯವಾಗುವುದಿಲ್ಲ ಅದರ ಹಿಂದಿರುವ ಭಾವವೇ ಮುಖ್ಯವಾಗುತ್ತದೆ.  ಶ್ರದ್ಧೆಯಿಂದ, ಭಕ್ತಿಯಿಂದ ಭಗವಂತನಿಗೆ ಒಂದೇ ಒಂದು ದಳ ಶ್ರೀತುಳಸಿಯನ್ನೂ, ಒಂದು ಬಿಂದು ಗಂಗೋದಕವನ್ನು ಕೊಟ್ಟರೂ ಸಾಕು.  ಅತ್ಯಂತ ಕರುಣೆಯಿಂದ ಸ್ವೀಕರಿಸಿ ರಕ್ಷಿಸುತ್ತಾನೆ ಎಂದು ಶ್ರೀ ಪುರಂದರದಾಸರು ತಮ್ಮ "ಹೂವ ತರುವರ ಮನೆಗೆ ಹುಲ್ಲ ತರುವ" ಎಂಬ ಕೃತಿಯಲ್ಲಿ ತಿಳಿಸಿದ್ದಾರೆ.  ಸರ್ವವ್ಯಾಪ್ತನಾದ ಭಗವಂತನು ಕೊಟ್ಟಿರುವ ಎಲ್ಲವನ್ನೂ ಅವನಿಗೇ ಸಮರ್ಪಿಸಬೇಕೆಂಬುದನ್ನು ಶ್ರೀ ವಿಜಯದಾಸರು ತಮ್ಮ ಒಂದು ಸುಳಾದಿಯಲ್ಲಿ
ನೀನಿತ್ತ ಸುಕೃತವೊ ನೀನಿತ್ತಾಗ್ರಜನನ
ನೀನಿತ್ತ ಸೌಭಾಗ್ಯ ನೀನಿತ್ತ ಪದವಿ
ನೀನಿತ್ತ ಸತಿಸುತರು ನೀನಿತ್ತ ಸಂಬಂಧ
ನೀನಿತ್ತ ತುರಗಾದಿ ಸಕಲ ಒಡವೆ
ನಾನು ಭುಂಜಿಸಿ ನಿನಗೆ ಅರ್ಪಿಸುವೆ ಎಂದಿದ್ದಾರೆ.
ಭಾಗವತ ದಶಮಸ್ಕಂದ ೮೧ನೆಯ ಅಧ್ಯಾಯದ ೩ನೇ ಶ್ಲೋಕದಲ್ಲಿ "ಅಣ್ವಪ್ಯುಪಾಹೃತಂ ಭಕ್ತೈಃ ಪ್ರೇಮ್ಣಾ ಭೂರ್ಯೇವ ಮೇ ಭವೇತ್" - ಭಕ್ತರು ಪ್ರೇಮ ಪೂರ್ವಕವಾಗಿ ತರುವ ಅತ್ಯಲ್ಪವಾದ ಕಾಣಿಕೆಯನ್ನೂ ಕೂಡ ನಾನು ಅಪಾರವಾದ ಅನರ್ಘ್ಯವಾದ ಕಾಣಿಕೆಯೆಂದು ಸ್ವೀಕರಿಸುತ್ತೇನೆ ಎಂದಿದ್ದಾನೆ.  ಹಾಗೇ ಮುಂದಿನ ೪ನೆಯ ಶ್ಲೋಕದಲ್ಲಿ
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ | ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ || - ಭಕ್ತಿಯಿಂದ ಒಂದೇ ಒಂದು ಪತ್ರೆಯನ್ನಾಗಲಿ, ಪುಷ್ಪವನ್ನಾಗಲೀ, ಫಲವನ್ನಾಗಲೀ, ಜಲವನ್ನಾಗಲೀ ಅರ್ಪಿಸಿದರೆ ಅಂತಹ ಭಕ್ತನ ಶುದ್ಧಾಂತಃಕರಣವಾದ ಪ್ರೇಮೋಪಹಾರವನ್ನು ಸ್ವೀಕರಿಸುತ್ತೇನೆ ಮತ್ತು ಆದರದಿಂದ ಸೇವಿಸುತ್ತೇನೆ ಎಂದಿದ್ದಾನೆ.  ಸುಧಾಮನ ಒಂದು ಹಿಡಿ ಅವಲಕ್ಕಿ, ಗಜೇಂದ್ರನ ಒಂದು ಪುಷ್ಪವನ್ನೇ ಸ್ವೀಕರಿಸಿ ಉದ್ಧರಿಸಿದವನ ಕಾರುಣ್ಯಕ್ಕೆ ಯಾವ ಎಣೆಯೂ ಇಲ್ಲ.  ನಾವು ಮನದೊಳಗೇ ಸುಂದರ ಪದಾರ್ಥಗಳನ್ನು ಕಲ್ಪಿಸಿಕೊಂಡು ಅದನ್ನು ಸಮರ್ಪಿಸಿದರೂ ಕೂಡ ಶ್ರೀಹರಿ ಸಂತುಷ್ಟನಾಗುತ್ತಾನೆ.  ಆ ಕಲ್ಪನೆ ಕೂಡ ಅವನ ಕಾರುಣ್ಯದಿಂದಲೇ ಬಂದಿದ್ದೆಂಬುದನ್ನು ತಿಳಿಯಬೇಕಷ್ಟೆ. 

ಅರೆಕ್ಷಣ ಬಿಟ್ಟಗಲ ತನ್ನವರ - ದಾಸರಾಯರು ಭಗವಂತನು ತನ್ನ ಭಕ್ತರನ್ನು ಒಂದರೆಕ್ಷಣವೂ ಬಿಟ್ಟು ಅಗಲದೆ ಕಾಪಾಡುತ್ತಾನೆಂಬುದನ್ನು ಅನೇಕ ವಿಧದಲ್ಲಿ, ವಿವಿಧ ದೃಷ್ಟಾಂತಗಳೊಂದಿಗೆ ವಿವರಿಸುತ್ತಲೇ ಬಂದಿದ್ದಾರೆ.  ಒಮ್ಮೆ ’ಆಗಸವೋಲೆತ್ತ ನೋಡಿದರೂ’ ಎನ್ನುತ್ತ ಹಿಂದೆ-ಮುಂದೆ, ಒಳಗೆ-ಹೊರಗೆ, ಎಡ-ಬಲದಿ ಇಂದಿರೇಶನಿದ್ದು ರಕ್ಷಿಸುತ್ತಾನೆನ್ನುತ್ತಾರೆ.  ಇನ್ನೊಮ್ಮೆ ’ಒಡಲ ನೆಳಲಂದದಲಿ ಹರಿ ನಮ್ಮೊಡನೆ ತಿರುಗುವ ಒಂದರೆಕ್ಷಣ ಬಿಡದೆ’ ಎನ್ನುತ್ತಾರೆ.   ಇಲ್ಲಿ ’ಅರೆಕ್ಷಣ ಬಿಟ್ಟಗಲ ತನ್ನವರ’ ಎಂಬ ಮಾತನ್ನು ಮತ್ತೆ ಹೇಳುವುದು, ಶ್ರೀಹರಿಯ ಪರಮ ಕಾರುಣ್ಯವನ್ನು ಅದೆಷ್ಟು ಕೊಂಡಾಡಿದರೂ ಸಾಲದು ಎಂಬ ಭಾವನೆಯಿಂದ  ಮಾತ್ರವೇ ಆಗಿದೆ. 
ಶ್ರೀ ಪುರಂದರ ದಾಸರು ತಮ್ಮ "ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ" ಎಂಬ ಕೃತಿಯಲ್ಲಿ ’ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು, ನಿಶೆ ಹಗಲು ಶ್ರೀಹರಿಯ ನೆನೆಯಬೇಕು’ ಎಂದಿದ್ದಾರೆ.  ಯಾರು ಹೀಗೆ ಭಗವಂತನನ್ನು ಸರ್ವದಾ ನೆಚ್ಚಿ ನೆನೆಯುತ್ತಾರೋ ಅವರನ್ನು ತಾನೇ ಸ್ವತಃ ರಕ್ಷಿಸುತ್ತೇನೆಂದು ಶ್ರೀಕೃಷ್ಣನು ಭಗವದ್ಗೀತೆಯ ೯ನೆಯ ಅಧ್ಯಾಯದ ೨೨ನೆಯ ಶ್ಲೋಕದಲ್ಲಿ
ಅನನ್ಯಾಶ್ಚಿನ್ತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ | ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || - "ಯಾವ ಅನ್ಯ ಚಿಂತೆಯನ್ನೂ ಮಾಡದೆ ಒಂದೇ ಮನಸ್ಸಿನಿಂದ ಯಾರು ನನ್ನನ್ನು ಪೂಜಿಸುತ್ತಾ, ಸಂಕೀರ್ತನೆ ಮಾಡುತ್ತಾ, ಸ್ಮರಣೆ ಮಾಡುತ್ತಾ, ಪ್ರಾರ್ಥನೆ ಮಾಡುತ್ತಾ, ಚರಣಕಮಲಗಳನ್ನು ಸೇವಿಸುತ್ತಾ, ಸ್ನೇಹವನ್ನು ಬೆಳೆಸಿಕೊಳ್ಳುತ್ತಾ ಸಂಪೂರ್ಣವಾಗಿ ಶರಣಾಗುತ್ತಾರೋ, ಅಂತಹ ನಿತ್ಯಯುಕ್ತರ ಯೋಗಕ್ಷೇಮವನ್ನು ನಾನೇ ವಹಿಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾನೆ.

ದುರಿತಗಳಟ್ಟುವನು ದೂರದಲಿ - ಭಗವಂತನಿಗೆಂದು ಕೊಡಲು ಭಕ್ತರಿಗೆ ತಮ್ಮದೇ ಎಂಬ ಯಾವುದೇ ವಸ್ತುವಿಲ್ಲ. ಅದಕ್ಕೆಂದೇ ಭಗವಂತನು ಮೊದಲು ತಾನೇ ಭಕ್ತರಿಗೆ ಕೊಡುತ್ತಾನೆ ಮತ್ತು ತಾನು ಕೊಟ್ಟದ್ದನ್ನೇ ಅನುಭವಿಸು ಎನ್ನುತ್ತಾನೆ.   ಈಶಾವಾಸ್ಯೋಪನಿಷತ್ತಿನಲ್ಲಿ "ತೇನ ಈಶೇನ ತ್ಯಕ್ತೇನ ದತ್ತೇನ ಭುಂಜೀಥಾಃ" -  ತೇನ ಎಂದರೆ ಈಶನಿಂದ ಮತ್ತು ತ್ಯಕ್ತೇನ ಎಂದರೆ ಕೊಡಲ್ಪಟ್ಟಿದ್ದರಿಂದ ಭುಂಜೀಥಾಃ ಎಂದರೆ ಅನುಭವಿಸು  ಎಂಬ ಉಲ್ಲೇಖವಿದೆ.  ಇದರರ್ಥವು ಭಗವಂತನು ಕೊಟ್ಟದ್ದನ್ನು ನಾವು ಉಣ್ಣಬೇಕು, ಆದರೆ ಉಣ್ಣುವುದಕ್ಕೆ ಮೊದಲು ಅದನ್ನು ಅವನಿಗೇ ಸಮರ್ಪಿಸಬೇಕು.  ನೈವೇದ್ಯಕ್ಕೆಂದು ಇಟ್ಟ ಪ್ರತಿಯೊಂದು ಪದಾರ್ಥಗಳಲ್ಲೂ ಭಗವಂತನ ಅನೇಕ ವಿಭೂತಿ ರೂಪಗಳ ಸನ್ನಿಧಾನವಿರುತ್ತದೆ.  ಆ ರೂಪಗಳನ್ನು ಭಕ್ತಿಯಿಂದ ನೆನೆಯುತ್ತಾ, ಆ ಪದಾರ್ಥಗಳಿಗೆ ಬದ್ಧರಾದ ಅಭಿಮಾನಿ ದೇವತೆಗಳನ್ನು ಸ್ಮರಿಸಿ ಸಮರ್ಪಣೆ ಮಾಡಬೇಕು.  ಭಗವದರ್ಪಣೆಯಾದದ್ದನ್ನು ನಾವು ಪ್ರಸಾದವೆಂದು ಸ್ವೀಕರಿಸಬೇಕು.  ಹೀಗೆ ಭಗವಂತನ ಪ್ರಸಾದವನ್ನು ಉಣ್ಣುವವರ ದುರಿತಗಳು ಪರಿಹಾರವಾಗುತ್ತವೆ ಎಂದರ್ಥವಾಗುತ್ತದೆ.  ಭಗವದ್ಗೀತೆಯ ೩ನೆಯ ಅಧ್ಯಾಯದ ೧೩ನೆಯ ಶ್ಲೋಕದಲ್ಲಿ
"ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ" - ಯಜ್ಞಮಾಡಿ ಉಳಿದ ಅನ್ನವನ್ನು ಪ್ರಸಾದವೆಂದು ಸೇವಿಸುವ ಶ್ರೇಷ್ಠ ಪುರುಷರು ಎಲ್ಲಾ ಪಾಪಗಳಿಂದಲೂ ಮುಕ್ತರಾಗುತ್ತಾರೆ ಎಂದು ಭಗವಂತನೇ ತಿಳಿಸಿದ್ದಾನೆ.  ತನ್ನ ಭಕ್ತರುಗಳು ತಮ್ಮ ಪಾಪಗಳನ್ನು ಪರಿಹಾರ ಮಾಡಿಕೊಳ್ಳಲೆಂದೇ ಭಗವಂತನು ಏನೂ ಇಲ್ಲದ ಭಕ್ತನಿಗೆ ಎಲ್ಲವನ್ನೂ ಕೊಡುತ್ತಾನೆ.  ಕೊಟ್ಟುದನ್ನು ಮರಳಿ ತನಗರ್ಪಿಸಲಿಯೆಂದು ಕೇಳುತ್ತಾನೆ.  ಹೀಗೆ ಕೊಟ್ಟ ಅಲ್ಪವನ್ನು ಸ್ವೀಕರಿಸಿ, ಬೆಟ್ಟದಷ್ಟು ದುರಿತಗಳನ್ನು ಪರಿಹರಿಸಿ ಉದ್ಧರಿಸುತ್ತಾನೆ.  ಭಗವದರ್ಪಣೆ ಮಾಡುವ ವಸ್ತುಗಳಲ್ಲಿನ ಸ್ವಾಖ್ಯ ರಸವನ್ನಷ್ಟೇ ಸ್ವೀಕರಿಸಿ, ಭಗವಂತನು ಮಿಕ್ಕದ್ದನ್ನು ನಮಗೇ ಬಿಟ್ಟುಬಿಡುತ್ತಾನೆ.  ಅವನು ಸ್ವಾಖ್ಯರಸ ಸ್ವೀಕರಿಸಿ ಬಿಟ್ಟದ್ದೇ ನಮಗೆ ಅಮೃತವಾಗುತ್ತದೆ. 
ದಾಸರಾಯರು ತತ್ವಸುವ್ವಾಲಿಯಲ್ಲಿ ಸಂಪೂರ್ಣ ಹರಿಗರ್ಪಿತವಾದ ಬದುಕು, ಶರೀರವೆಂದರೆ ಹೇಗಿರಬೇಕೆಂಬುದನ್ನು
ನಡೆವುದೇ ಹರಿಯಾತ್ರೆ ನುಡಿವುದೇ ಹರಿನಾಮ
ಕುಡಿವ ನೀರುಗಳೆ ಅಭಿಷೇಕ | ಅಭಿಷೇಕ ದಿನದಿನದಿ
ಒಡಲಿಗುಂಬನ್ನ ನೈವೇದ್ಯ || - ಎಂದು ತಿಳಿಸುತ್ತಾ, ಭಗವಂತನು ಕೊಟ್ಟಿದ್ದನ್ನು ಅವನಿಗೇ ಮರಳಿಸುವ ಸರ್ವ ಸಮರ್ಪಣೆಯ ಮಾರ್ಗ ತೋರಿಸಿದ್ದಾರೆ.

ಶ್ರೀ ಶಂಕರಾಚಾರ್ಯರು ತಮ್ಮ "ಶ್ರೀಕೃಷ್ಣಾಷ್ಟಕಮ್"ನಲ್ಲಿ
ಸಮಸ್ತ ದೋಷಶೋಷಣಂ ಸಮಸ್ತ ಲೋಕ ಪೋಷಣಂ ನಮಾಮಿ ನಂದ ಲಾಲಸಮ್ || - ತನ್ನ ಭಕ್ತರ ದೋಷಗಳನ್ನು ಸದಾ ನಿವಾರಿಸುವ, ಲೋಕ ರಕ್ಷಿಸುವ ಶ್ರೀಕೃಷ್ಣನಿಗೆ ಭಕ್ತಿಯಿಂದ ನಮಿಸುತ್ತೇನೆ ಎಂದಿದ್ದಾರೆ.  ಹಾಗೂ ತಮ್ಮ "ಭಗವನ್ಮಾನಸಪೂಜಾ ಸ್ತೋತ್ರಮ್" ನಲ್ಲಿ ’ತವ ಪ್ರಾದಕ್ಷಿಣ್ಯಕ್ರಮಣ ಮಘವಿಧ್ವಂಸಿ ರಚಿತಂ’ - ನಿನ್ನ ಪ್ರದಕ್ಷಿಣೆಯ ಪ್ರತಿಯೊಂದು ಹೆಜ್ಜೆಯೂ ಪಾಪಗಳನ್ನು ನಿವಾರಿಸುತ್ತದೆ ಮತ್ತು ’ನಮಸ್ಕಾರೋಷ್ಟಾಂಗಃ ಸಕಲದುರಿತ ಧ್ವಂಸನ ಪಟುಃ’ - ಎಲ್ಲಾ ದುರಿತಗಳನ್ನೂ ನಾಶಮಾಡುವ ನಿನಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತಿರುವೆನು ಎಂದು ಸ್ತುತಿಸಿದ್ದಾರೆ.

ಶ್ರೀವಿಜಯದಾಸರು ತಮ್ಮ ಒಂದು ಸುಳಾದಿಯಲ್ಲಿ
ಎಲೊ ಎಲೊ ದುರಿತವೆ ಓಡು ಓಡು ಎನ್ನ
ಬಳಿಯಲ್ಲಿ ಮೊದಲಂತೆ ತಲೆ ಬಲಿತು ನಿಂದೆಯಾದರೆ ನಿನ್ನ
ಕುಲಕೆ ಕ್ಷೇಮವಿಲ್ಲ ಕೈಲೆ ಕಡ್ಡಿಯನಿತ್ತೆ
ಮರೆತವರ ಗಂಡ ಸಿರಿಕೃಷ್ಣ ಕಂಡರೆ ನಿನ್ನ
ತಲೆಯ ಚೆಂಡಾಡುವ ಭೂತ ಬಲಿಯನೀವ
ತಿಳಿದುಕೊ ನಿನ್ನೊಳು ನೀನು ಮೊದಲಂತೆ ನಾನಲ್ಲ
ಸುಲಭ ವಿಜಯವಿಠಲ ಒಲಿದರೆ ಭಯವಿಲ್ಲ || - ಎನ್ನುತ್ತಾ ತನಗೆ ಒಲಿದ ಭಗವಂತನು ನಿನ್ನನ್ನು ಕಂಡರೆ ನಿನ್ನ ತಲೆಯನ್ನು ಚೆಂಡಾಡಿ ಬಿಡುತ್ತಾನೆಂದ ತಮ್ಮನ್ನು ಬೆದರಿಸುವ ದುರಿತಗಳಿಗೆ ಸವಾಲನ್ನೆಸೆಯುತ್ತಾರೆ. ಇದು ಭಗವಂತನಲ್ಲಿ ಭಕ್ತನ ನಿಷ್ಠೆಯ ಉತ್ತುಂಗವನ್ನು ಬಿಂಬಿಸುತ್ತದೆ. 

ದುರಿತಾರಣ್ಯಪಾವಕನು -  ಭಗವಂತನು ಭಕ್ತರ ದುರಿತ ಎಂಬ ಅರಣ್ಯಕ್ಕೆ ಅಗ್ನಿಯಂತಿದ್ದಾನೆ.  ಕಾಡ್ಗಿಚ್ಚು ಇಡೀ ಕಾಡನ್ನೇ ಸುಟ್ಟು ಭಸ್ಮ ಮಾಡುವಂತೆ ಭಗವಂತನು ಭಕ್ತರ ದುರಿತ, ’ಸಂಸಾರ’ವೆಂಬ ಅರಣ್ಯವನ್ನು ಸುಟ್ಟು ಭಸ್ಮ ಮಾಡುತ್ತಾನಾದ್ದರಿಂದಲೇ ಅವನು ದುರಿತಾರಣ್ಯಪಾವಕನಾಗುತ್ತಾನೆ.  ದಾಸರಾಯರು ತಮ್ಮ "ನರಸಿಂಹ ಸುಳಾದಿ"ಯನ್ನು ’ದುರಿತವನ ಕುಠಾರಿ, ದುರ್ಜನ ಕುಲವೈರಿ’ ಎಂಬ ಸಂಬೋಧನೆಯಿಂದಲೇ ಪ್ರಾರಂಭಿಸಿದ್ದಾರೆ.   ತಮ್ಮ  "ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವಾ" ಕೃತಿಯಲ್ಲಿ ’ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ | ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ’ ಎನ್ನುತ್ತಾ ಸಕಲ ದುರಿತಗಳ ಪಾವಕನು ಭಗವಂತನೆಂದು ಸ್ತುತಿಸಿದ್ದಾರೆ.  ತಮ್ಮ ಇನ್ನೊಂದು "ನರಸಿಂಹಾ ಪಾಹಿ ಲಕ್ಷ್ಮೀ ನರಸಿಂಹ"  ಎಂಬ ಕೃತಿಯಲ್ಲಿ ’ಜಯಜಯ ದೇವವರೇಣ್ಯ ಮಹದ್ಭಯ ನಿವಾರಣನೆ ಅಗಣ್ಯ ಗುಣಾಶ್ರಯ ಘೋರ ದುರಿತಾರಣ್ಯ ಧನಂಜಯ’..  ಎಂದೆಲ್ಲಾ ಸ್ತುತಿಸಿ ಪಾಡಿದ್ದಾರೆ.

ಭಗವಂತನಲ್ಲಿ ಭಕ್ತಿ ಮಾಡುತ್ತಾ ಅವನ ಗುಣಗಳ ಜ್ಞಾನವನ್ನು ಪಡೆದುಕೊಳ್ಳುವುದರಿಂದಲೇ ಭಕ್ತರ ಸಕಲ ದುರಿತಗಳೂ ಭಸ್ಮವಾಗಿ ಬಿಡುತ್ತದೆಂದು ಭಗವದ್ಗೀತೆಯ ೪ನೆಯ ಅಧ್ಯಾಯದ ೩೭ನೆಯ ಶ್ಲೋಕದಲ್ಲಿ "ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ" - ಜ್ಞಾನರೂಪೀ ಅಗ್ನಿಯು ಸರ್ವ ಕರ್ಮಗಳನ್ನೂ ಬೂದಿಮಾಡಿ ಬಿಡುತ್ತದೆ ಎಂದು ಭಗವಂತನೇ ತಿಳಿಸಿದ್ದಾನೆ.  ೧೮ನೆಯ ಅಧ್ಯಾಯದ ೬೬ನೆಯ ಶ್ಲೋಕದಲ್ಲಿ "ಅಹಂ ತ್ವಾಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ" - ನಾನು ಮಾತ್ರವೇ ನಿನ್ನನ್ನು ಎಲ್ಲ ಪಾಪಗಳಿಂದ ಬಿಡುಗಡೆಗೊಳಿಸುವವನು ಎಂದೂ ತಿಳಿಸಿದ್ದಾನೆ.

ಶ್ರೀ ಪುರಂದರದಾಸರು ತಮ್ಮ ಒಂದು ಉಗಾಭೋಗದಲ್ಲಿ
ಬೆಟ್ಟದಂಥ ದುರಿತವು ಸುತ್ತಮುತ್ತು ಇರಲಾಗೆ
ಕೃಷ್ಣ ನಾಮದ ಕಿಡಿಬಿದ್ದು ದುರಿತ ಬೇವುದ ಕಂಡೆ
ಎಲೆ ಎಲೆ ದುರಿತವೆ, ನಿಲ್ಲ-ನಿಲ್ಲದೆ ಹೋಗು
ಎಲೆ ಎಲೆ ದುರಿತವೆ, ತಿರುಗಿ ನೋಡದೆ ಹೋಗು
ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು
ಎನ್ನೊಡೆಯ ಪಂಢರಿರಾಯ ಪುರಂದರ ವಿಠಲ ಕಂಡರೆ
ಶಿರವ ಚೆಂಡಾಡುವನು - ತಿರುಗಿ ನೋಡದೆ ಹೋಗು - ಭಗವಂತನ ನಾಮದ ಒಂದು ಕಿಡಿಯೇ ಸಾಕು ಬೆಟ್ಟದಂಥಹ ದುರಿತವನ್ನು ಸುಟ್ಟು ಭಸ್ಮ ಮಾಡಲು ಎನ್ನುತ್ತಾ ಭಗವಂತನು ದುರಿತಾರಣ್ಯಪಾವಕನು ಎಂದು ಸ್ತುತಿಸಿದ್ದಾರೆ.

ಬೆಟ್ಟ ಬೆನ್ನಲಿ ಹೊರಿಸಿದವರಲಿ ಸಿಟ್ಟು ಮಾಡಿದನೇನೋ - ದಾಸರಾಯರು ಇಲ್ಲಿ ಭಗವಂತನ ಕೂರ್ಮಾವತಾರದ ವಿಚಾರವನ್ನು ತಿಳಿಸಿದ್ದಾರೆ.  ಜ್ಞಾನ, ದಾನಾದಿಗಳನ್ನು ಮಾಡುತ್ತಾ, ಸದಾ ಭಗವಂತನ ಧ್ಯಾನವನ್ನೇ ಮಾಡುವ ದೇವತೆಗಳು ತಮ್ಮ ಪ್ರಾರಬ್ಧವಶದಿಂದ ಏನಾದರೂ ಅಪರಾಧಗಳನ್ನು ಮಾಡಿದರೆ, ಭಗವಂತನು ಸಿಟ್ಟು ಮಾಡುವುದಿಲ್ಲ,  ಅವರನ್ನು ಕ್ಷಮಿಸಿಬಿಡುತ್ತಾನೆ.  ಸಮುದ್ರ ಮಥನದ ಕಾಲದಲ್ಲಿ ಮಂದರಪರ್ವತ ಕ್ಷೀರಸಾಗರದಲ್ಲಿ ಮುಳುಗಿದಾಗ, ದೇವತೆಗಳು ಕಂಗೆಟ್ಟು ಶ್ರೀಹರಿಯನ್ನು ಪ್ರಾರ್ಥಿಸಿದರು.  ಕೂರ್ಮರೂಪಿಯಾದ ಭಗವಂತನ ಬೆನ್ನಮೇಲೆ ಬೆಟ್ಟವನ್ನು ಹೊರೆಸಿ,  ಸಮುದ್ರಮಥನವನ್ನು ಮಾಡಿದರು.  ಭಗವಂತನು ಕೋಪಿಸಿಕೊಳ್ಳದೇ, ಅಮೃತವನ್ನು ಅಸುರರು ಅಪಹರಿಸಿಬಿಟ್ಟಾಗ, ಮೋಹಿನಿ ಅವತಾರವನ್ನು ತಳೆದು, ದೇವತೆಗಳಿಗೆ ತನ್ನ ಸ್ವಹಸ್ತದಿಂದಲೇ ಅಮೃತವನ್ನು ಪಾನ ಮಾಡಿಸಿದ.  ಮತ್ತೊಂದು ದೃಷ್ಟಾಂತವಾಗಿ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿ ಹಿಡಿದ ಪ್ರಸಂಗವು ಭಾಗವತದಲ್ಲಿ ಉಲ್ಲೇಖಿತವಾಗಿದೆ.  ಗೋಕುಲವಾಸಿಗಳು ಶ್ರೀಕೃಷ್ಣನ ಆದೇಶದ ಮೇರೆಗೆ ಗೋ-ಬ್ರಾಹ್ಮಣ-ಪರ್ವತಗಳ ಪೂಜೆಯನ್ನು ಮಾಡಿದರು.  ತನಗೆ ಪೂಜೆಯಾಗಲಿಲ್ಲವೆಂಬ ಕೋಪದಲ್ಲಿ, ಅಹಂಕಾರದಿಂದ ಇಂದ್ರದೇವನು ಒನಕೆ ಗಾತ್ರದ ಹನಿಗಳಿಂದ ೭ ದಿನಗಳ ಕಾಲ ಮಳೆಸುರಿಸಿದನು.  ಭಗವಂತನು ತನ್ನ ಕಿರಿಬೆರಳಿನಲ್ಲಿಯೇ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಸಮಸ್ತ ಗೋಪಾಲಕರನ್ನೂ, ಗೋವುಗಳನ್ನೂ ರಕ್ಷಿಸಿದನು.  ಇಂದ್ರದೇವನು ತನ್ನ ಅಹಂಕಾರವನ್ನು ಕಳೆದು ಭಗವಂತನಲ್ಲಿ ಶರಣಾಗತನಾಗಿ
ನಮಸ್ತುಭ್ಯಂ ಭಗವತೇ ಪುರುಷಾಯ ಮಹಾತ್ಮನೇ | ವಾಸುದೇವಾಯ ಕೃಷ್ಣಾಯ ಸಾತ್ವತಾಂ ಪತಯೇ ನಮಃ || - ಸರ್ವಾಂತರ್ಯಾಮಿಯಾದ ಪರಮ ಪುರುಷನಾದ ವಾಸುದೇವನಿಗೆ ನಮಿಸುವೆ ಎಂದು ಸ್ತುತಿಸಿದಾಗ ಭಗವಂತನು ಇಂದ್ರದೇವನ ಅಪರಾಧವನ್ನು ಕ್ಷಮಿಸಿ ಅವನಿಗೆ ಅಭಯವನ್ನಿತ್ತನು.  ಹೀಗೆ ತನ್ನ ಭಕ್ತರು ಅಪರಾಧಗಳನ್ನು ಮಾಡಿದಾಗಲೂ ಭಗವಂತನು ಸಿಟ್ಟುಗೊಳ್ಳದೆ, ಅವರನ್ನು ಕ್ಷಮಿಸಿ, ಅಪರಾಧದ ಅರಿವು ಮೂಡಿಸಿ ರಕ್ಷಿಸುತ್ತಾನೆ ಎಂದರ್ಥವಾಗುತ್ತದೆ.
ಶ್ರೀ ಪುರಂದರದಾಸರು  "ಮಂದರಧರ ದೇವ ಮೊರೆಹೊಕ್ಕವರ ಕಾಯ್ವ" ಎನ್ನುತ್ತಾ ಕೂರ್ಮಾವತಾರಿ ಭಗವಂತನು ಶರಣಾದವರನ್ನು ಸದಾ ರಕ್ಷಿಸುತ್ತಾನೆಂದು ಭರವಸೆ ಕೊಡುತ್ತಾ ’ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ’ ಎಂದು ಸ್ತುತಿಸಿದ್ದಾರೆ.

ಶ್ರೀಬನ್ನಂಜೆ ಗೋವಿಂದಾಚಾರ್ಯರು ಬೆಟ್ಟ ಬೆನ್ನಲಿ ಹೊರಿಸುವುದನ್ನು ಒಂದು ವಿಚಾರಾತ್ಮಕ ಕೋನದಿಂದ ವಿಶ್ಲೇಷಣೆ ಮಾಡಿದ್ದಾರೆ.   ಪ್ರತಿಯೊಬ್ಬ ಸಾಧಕ ಭಕ್ತನೂ ಭಗವಂತನ ಬೆನ್ನಲ್ಲಿ ಬೆಟ್ಟವನ್ನು ಪ್ರತಿದಿನವೂ ಹೊರಿಸುತ್ತಲೇ ಇದ್ದಾನೆ ಎಂದು ತಿಳಿಸಿದ್ದಾರೆ.  ಸಮುದ್ರಮಂಥನವನ್ನು ನಮ್ಮ ಅಂತರಂಗದ ಮಂಥನವೆಂಬ ದೃಷ್ಟಿಕೋನದಿಂದ ನೋಡಿದಾಗ ಮಂದರ ಪರ್ವತವು ನಮ್ಮ ಮನಸ್ಸೆಂದಾಗುತ್ತದೆ.  ಶಾಸ್ತ್ರಾಧ್ಯಯನವನ್ನು ಮಾಡಿ, ಅದನ್ನು ನಮ್ಮ ಅಂತರಂಗಕ್ಕಿಳಿಸಿಕೊಂಡು, ಅದನ್ನು ಮನಸ್ಸೆಂಬ ಮಂದರದಿಂದ ಮಂಥನ ಮಾಡಬೇಕು.  ಮಂದರಪರ್ವತವನ್ನು ಮುಳುಗದ ಹಾಗೆ ಸ್ಥಿತಿಗೊಳಿಸಿದಂತೆ ನಮ್ಮ ಮನಸ್ಸು ಕೂಡ ಮುಳುಗದೇ ಇರುವಂತೆ, ಓಲಾಡದೆ ಸ್ಥಿರವಾಗಿ ನಿಲ್ಲಬೇಕೆಂದರೆ ಅದಕ್ಕೆ ಭಗವಂತನ ಕರುಣೆಯೆಂಬ ಬೆನ್ನು ಆಸರೆಯಾಗುತ್ತದೆ.  ಕೂರ್ಮಾವತಾರಿ ಭಗವಂತನ ಬೆನ್ನಮೇಲೆ ನಮ್ಮ ಮನಸ್ಸೆಂಬ ಮಂದರಪರ್ವತವನ್ನು ಹೊರಿಸಿದರೂ ಕೂಡ ಭಗವಂತನು ಸಿಟ್ಟು ಮಾಡುವುದಿಲ್ಲ.   ಮಜ್ಜಿಗೆಯನ್ನು ಕಡೆದು ನವನೀತವನ್ನು ತೆಗೆವಂತೆ, ನಮ್ಮೊಳಗೆ ಶಾಸ್ತ್ರದ ಮಂಥನ ನಡೆದು, ಒಳಗಿನ ಶುದ್ಧಾಂತಃಕರಣವು ಪುಟಿದೇಳಬೇಕು.  ಭಗವಂತನೆಡೆಗಿನ ಭಕ್ತಿಯು ಬೆಣ್ಣೆಯಂತೆ ಶುದ್ಧವಾಗಿ, ತೇಲಬೇಕು.  ಹೀಗೆ ಅಂತರಂಗದ ಮಂಥನವನ್ನು ಮನಸ್ಸಿನಿಂದ ಮಾಡಬೇಕೆಂದರೆ, ಅದಕ್ಕೆ ಭಗವಂತನ ಕರುಣೆ ಬೇಕೇಬೇಕು.  ಮನಸ್ಸೆಂಬ ಬೆಟ್ಟ ಭದ್ರವಾಗಿ ನಿಲ್ಲಲು ಭಗವಂತನ ಬೆನ್ನು ಆಧಾರವಾಗಿ ನಿಲ್ಲಬೇಕು.  ಸಾಧನೆಯ ಹಾದಿಯಲ್ಲಿರುವ ಸಾಧಕರು ಹೀಗೆ ತಮ್ಮ ಮಂದರಪರ್ವತ (ಮನಸ್ಸು)ವನ್ನು ಪ್ರತಿದಿನವೂ  ಭಗವಂತನ ಬೆನ್ನ ಮೇಲೆ ಹೊರಿಸುತ್ತಾರೆ.

ಹರಿ ಕಂಗೆಟ್ಟ ಸುರರಿಗೆ ಸುಧೆಯನುಣಿಸಿದ -  ಸಮುದ್ರಮಥನದಿಂದ ಬಂದ ಅಮೃತವನ್ನು ಅಸುರರು ಅಪಹರಿಸಿದಾಗ, ಸುರರಾದ ದೇವತೆಗಳು ಕಂಗೆಟ್ಟಿದ್ದರು.  ಮೋಹಕವಾದ ಸ್ತ್ರೀವೇಷವನ್ನು ಧರಿಸಿ ಶ್ರೀಹರಿ ಅಸುರರಿಂದ ಅಮೃತವನ್ನು ಪಡೆದುಕೊಂಡು ಸುರರಿಗೆ ಸ್ವತಃ ಉಣಿಸಿ, ರಕ್ಷಿಸಿದ.  ಕುರುಕ್ಷೇತ್ರ ಯುದ್ಧದಲ್ಲಿ ತನ್ನ ಬಂಧು ಬಾಂಧವರನ್ನು ಯುದ್ಧ ಭೂಮಿಯಲ್ಲಿ ಕಂಡು ಅರ್ಜುನ ಯುದ್ಧ ಮಾಡಲ್ಲೊಲ್ಲದೆ, ಬಿಡಲೂ ಆಗದೆ ಕಂಗೆಟ್ಟಾಗ, ಶ್ರೀಕೃಷ್ಣನು  ’ಗೀತೋಪದೇಶ’ದ ಸುಧೆಯನ್ನು ಉಣಿಸಿದನು.  ಅರ್ಜುನನು ಶಸ್ತ್ರಹಿಡಿಯುವಂತೆ ಮಾಡಿ, ಕೌರವರ ಸೈನ್ಯವನ್ನು ನಾಶ ಮಾಡಿಸಿದನು.  ಭಗವಂತನು ತಾನು ಶ್ರೀಕೃಷ್ಣನಾಗಿ ಅವತಾರ ಮಾಡಿದ ಕಥೆಯನ್ನು ಶುಕಾಚಾರ್ಯರು ಪರೀಕ್ಷಿತ್ ರಾಜನಿಗೆ  ಹೇಳುವಂತೆ ಮಾಡಿ, ಭಕ್ತಜನರಿಗೆ ’ಭಾಗವತ’ದ ಸುಧೆಯನ್ನು ಉಣಿಸಿದನು.  ಹೀಗೆ ಭಗವಂತನು ಸದಾಕಾಲವೂ ಅಮೃತವನ್ನು ಉಣಿಸುತ್ತಾ ಕಂಗೆಟ್ಟ ಸುರರನ್ನು ರಕ್ಷಿಸುತ್ತಲೇ ಇದ್ದಾನೆಯೆಂದು ತಿಳಿಯಬಹುದು.  ಭಗವಂತನು ಯಾರು ಶ್ರೀಕೃಷ್ಣನ ಕಥೆಯನ್ನು ಕೇಳುವರೋ, ಓದುವರೋ ಅವರೆಲ್ಲರಿಗೂ ದುರಿತಗಳ ಪರಿಹಾರ ಮಾಡಿ,   ಶಾಶ್ವತ ಸುಖವಾದ ಮೋಕ್ಷವನ್ನೇ ಕೊಟ್ಟು ಉದ್ಧರಿಸುತ್ತಾನೆಂದು ಭಾಗವತದಲ್ಲಿ ಉಲ್ಲೇಖವಿದೆ.

ಮುರಿದನಹಿತರನು - ಅಹಿತರು ಎಂದರೆ ದಾನವರು, ಭಗವಂತನಲ್ಲಿ ಭಕ್ತಿ ಮಾಡದವರು ಎಂದಾಗುತ್ತದೆ.  ಅಮೃತ ಬಂದ ಘಳಿಗೆಯಲ್ಲಿ ಅದನ್ನು ಅಪಹರಿಸಿ, ಸುರರನ್ನು ಕಂಗೆಡಿಸಿದ್ದ ಅಹಿತರಾದ ದಾನವರನ್ನು ಭಗವಂತನು ಸಂಹರಿಸಿದನು (ಮುರಿದನು).  ಯುದ್ಧಭೂಮಿಯಲ್ಲಿ ಕಂಗೆಟ್ಟು ನಿಂತ ಅರ್ಜುನನಿಗೆ ಗೀತೋಪದೇಶ ಮಾಡಿ, ಅವನ ಕೈಯಿಂದಲೇ ಭಗವಂತನು ಅಹಿತರಾದ ಕೌರವರ ಸೈನ್ಯವನ್ನು ಧ್ವಂಸ ಮಾಡಿಸಿದನು.  ಭಗವಂತನು ತನಗೆ ಸೋದರಮಾವನೇ ಆದರೂ, ಅಹಿತನಾಗಿದ್ದ ಕಂಸನನ್ನು ಸಂಹರಿಸಿದನು.  ನೂರು ತಪ್ಪುಗಳಾಗುವ ತನಕ ಸಹಿಸಿಕೊಂಡು ಶಿಶುಪಾಲನನ್ನು ವಧಿಸಿ, ಜರಾಸಂಧನನ್ನು ಭೀಮಸೇನನು ಸಂಹರಿಸುವಂತೆ ಮಾಡಿ ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಮಾಡಿದನು.  ವಸುಂಧರೆಯನ್ನೇ ಕಕ್ಷೆಯಿಂದ ತಪ್ಪಿಸಿದ್ದ ತಪ್ಪಿಗಾಗಿ ಹಿರಣ್ಯಾಕ್ಷನನ್ನು ಸಂಹರಿಸಿದನು.  ತನ್ನ ಭಕ್ತನಾದ ಪುಟ್ಟ ಬಾಲಕ ಪ್ರಹ್ಲಾದನನ್ನು ಕಾಪಾಡಲೋಸುಗ ನರಸಿಂಹಾವತಾರವನ್ನೇ ಎತ್ತಿ ಅಹಿತನಾಗಿದ್ದ ಹಿರಣ್ಯಕಷಿಪುವನ್ನು ಸಂಹರಿಸಿದನು.  ಹೀಗೆ ಭಗವಂತನು ಅಹಿತರಾದವರನ್ನು ಮುರಿದು ಧರ್ಮ ಸಂಸ್ಥಾಪಿಸುವವನಾಗಿದ್ದಾನೆ.  ಸುಜನರ ಹಿತ ಕಾಯಲೋಸುಗ ಅಹಿತರನು ನಿವಾರಿಸಲು ಮರಳಿ ಮರಳಿ ಭಗವಂತನು ಧರೆಯಲಿ ಅವತಾರವೆತ್ತುತ್ತಾನೆ.
 





ಚಿತ್ರಕೃಪೆ : ಅಂತರ್ಜಾಲ

No comments: