Monday, January 21, 2013

ಕರುಣಾ ಸಂಧಿ - ೭ನೇ ಪದ್ಯ




 ಪರಮ ಸತ್ಪುರುಷಾರ್ಥರೂಪನು |
ಹರಿಯು ಲೋಕಕೆ ಎಂದು ಪರಮಾ |
ದರದಿ ಸದುಪಾಸನೆಯ ಗೈವರಿಗಿತ್ತಪನು ತನ್ನ ||
ಮರೆದು ಧರ್ಮಾರ್ಥಗಳ ಕಾಮಿಸು |
ವರಿಗೆ ನಗುತತಿ ಶೀಘ್ರದಿಂದಲಿ |
ಸುರಪತನಯ ಸುಯೋಧನರಿಗಿತ್ತಂತೆ ಕೊಡುತಿಪ್ಪ  || ||

ಪ್ರತಿಪದಾರ್ಥ :  ಪರಮ - ಶ್ರೇಷ್ಠ, ಸತ್ - ಸಮೀಚೀನ, ಪುರುಷಾರ್ಥ - ಧರ್ಮ ಅರ್ಥ ಕಾಮ ಮೋಕ್ಷ ಎಂಬವುಗಳು, ರೂಪನ - ಸ್ವರೂಪನಾದ, ಲೋಕಕೆ - ತ್ರಿವಿಧ ಜೀವರಿಗೂ ಅಥವಾ ಲೋಕಪ್ರಾಪ್ತ್ಯರ್ಥವಾಗಿ, ಪರಮಾದರದಿ - ಅತ್ಯಂತ ಭಕ್ತಿ ಮತ್ತು ವಿಶ್ವಾಸದಿಂದ, ಸದುಪಾಸನೆಯ - ಆರಾಧನೆಯನ್ನು, ಗೈವರಿಗಿತ್ತಪನು ತನ್ನ - ಮಾಡುವವರಿಗೆ ತನ್ನನ್ನೇ ಅರ್ಪಿಸಿಕೊಳ್ಳುವನು, ಮರೆದು - ತನ್ನನ್ನು ಮರೆತು, ಧರ್ಮಾರ್ಥಗಳ - ಕೇವಲ ಧರ್ಮ ಮತ್ತು ಅರ್ಥಗಳನ್ನು, ಕಾಮಿಸುವವರಿಗೆ - ಬಯಸುವವರಿಗೆ ಅಥವಾ ಇಚ್ಛಿಸುವವರಿಗೆ, ನಗುತ - ನಗುತ್ತಾ, ಅತಿ ಶೀಘ್ರದಿಂದಲಿ - ಅತ್ಯಂತ ತ್ವರಿತವಾಗಿ, ಸುರಪತನಯ - ಇಂದ್ರನ ಮಗ ಅರ್ಜುನ (ಸುರಪ - ಇಂದ್ರ / ತನಯ - ಮಗ)ನಿಗೆ ಕುರುಕ್ಷೇತ್ರ ಯುದ್ಧದಲ್ಲಿ ಸಾರಥಿಯಾಗಿ ತನ್ನನ್ನೇ ಕೊಟ್ಟಂತೆ, ಸುಯೋಧನರಿಗೆ - ಕೌರವ ರಾಜನಾದ ದುರ್ಯೋಧನನಿಗೆ ತನ್ನ ಸೈನ್ಯವನ್ನು ಕೊಟ್ಟಂತೆ, ಇತ್ತಂತೆ ಕೊಡುತಿಪ್ಪ - ಪಾಂಡವರು ಹಾಗೂ ಕೌರವರಿಗೆ ಕೊಟ್ಟಂತೆ ಕೊಡುವನು. 

ಭಗವಂತನನ್ನು ಪುರುಷಾರ್ಥರೂಪ ಎಂದು ಆರಾಧಿಸಬಾರದು, ಪುರುಷಾರ್ಥಪ್ರದ ಎಂದು ಆರಾಧಿಸಬೇಕು.  ಪುರುಷಾರ್ಥಪ್ರದ ಎಂದರೆ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಗಳಿಸಲು ಸಾಧನವಾಗುವುದು.  ಆದರೆ ಪುರುಷಾರ್ಥ ರೂಪವೆಂದರೆ ಅವನೇ ಎಲ್ಲವೂ, ಎಲ್ಲವೂ ಅವನಿಂದಲೇ, ಎಲ್ಲವೂ ಅವನಿಗೇ ಅರ್ಪಿತನೆಂದು ಆರಾಧಿಸುವುದು.  ಭಗವಂತ ಸಂತುಷ್ಟನಾದರೆ ಮತ್ತೆಲ್ಲವೂ ತಾನಾಗಿಯೇ ನಮ್ಮೆಡೆಗೆ ಹರಿದು ಬರುತ್ತದೆ.

ಧರ್ಮ, ಅರ್ಥ, ಕಾಮಗಳು ಎಲ್ಲರಿಗೂ ಇರುತ್ತವೆ.  ಆದರೆ ಅವುಗಳನ್ನು ಕೊಡುವುದಕ್ಕೆ ಸತ್ಪುರುಷನಾದ ಹರಿ ಒಬ್ಬನಿಗೆ ಮಾತ್ರವೇ ಸಾಧ್ಯ.  ಹೀಗೆ ನಾವು ಪರಮಾತ್ಮನನ್ನು ಬೇಡಬೇಕಾದರೆ ನಮ್ಮ ಬೇಡಿಕೆ ಸತ್ಪ್ರದವಾಗಿರಬೇಕು.  ಆಗ ಪರಮಾತ್ಮ ಉತ್ತಮವಾದ ಸತ್ಫಲವನ್ನೂ, ಸತ್ಲೋಕವನ್ನೂ ಕೊಡಮಾಡುತ್ತಾನೆ.  ಅದೇ ನಾವು ಸ್ವಾರ್ಥದಿಂದ ಅವನನ್ನು ಬೇಡಿದಾಗ ಅದಕ್ಕೆ ತಕ್ಕ ಫಲವೇ ಸಿಗುತ್ತದೆ.  ಹೀಗೆ ಅರ್ಜುನ ಮತ್ತು ದುರ್ಯೋಧನರು ಪರಮಾತ್ಮನನ್ನು ಬೇಡಲು ಬಂದಾಗ, ದುರ್ಯೋಧನನಿಗೆ ಜಗತ್ತು ಕಾಣುವಂತೆ ತನ್ನ ಇಡೀ ಯಾದವ ಸೈನ್ಯವನ್ನೇ ಕೊಟ್ಟುಬಿಟ್ಟ.  ಅದೇ ಅರ್ಜುನನಿಗೆ ಗೀತೋಪದೇಶ ಮಾಡಿದ್ದೂ ಅಲ್ಲದೇ ತಾನೇ ಸಾರಥಿಯಾಗಿ ರಕ್ಷಣೆಗೆ ನಿಂತುಬಿಟ್ಟ.  ಇದು ಪರಮಾತ್ಮ ಅನುಗ್ರಹಿಸುವ ರೀತಿ.  ಜಗನ್ನಾಥದಾಸರು ತಮ್ಮ ಒಂದು ಕೃತಿಯಲ್ಲಿ "ಆ ನಮಿಪೆ ವಿಷ್ಣು ಶ್ರೀ ಬ್ರಹ್ಮ ವಾಯು ವಾಣಿ ಭಾರತಿ ಮುಖ್ಯ ಅವತಾರಗಳಿಗಾ ನಮಿಪೆ ಎಂದು ಹೇಳುತ್ತಾ ಬೃಹತ್ತಾರತಮ್ಯವನ್ನೇ ವಿವರಿಸಿ ಪರಮಾತ್ಮನನ್ನು ಶಾಶ್ವತ ಕರುಣಿ, ಸಂತೈಪ ಸರ್ವಕಾಲದಲಿ ಎಂದು ಹೊಗಳಿ ಕರುಣಾಕರೇಶ, ಕಾಮಿತ, ಕಲ್ಪತರು, ಜನ್ಮರಣ, ವಿವರ್ಜಿತ, ಜಗನ್ನಾಥವಿಠ್ಠಲರಾಯ ಎಂದು ಹೊಗಳಿ ಹಾಡಿದ್ದಾರೆ.

ಜಗನ್ನಾಥ ದಾಸರು ಹರಿಯು ಪರಮ ಸತ್ಪುರುಷರಿಗೆ ಅರ್ಥರೂಪನು ಎಂದಿದ್ದಾರೆ.  ಏಕೆಂದರೆ ಲೌಕಿಕದ ಎಲ್ಲವನ್ನೂ ತ್ಯಜಿಸಿ, ಏಕಾಂತದಲ್ಲಿ ಭಗವಂತನನ್ನು ಆರಾಧಿಸುವ ಸದ್ಭಕ್ತರಿಗೆ ಹರಿಯೇ ಸಕಲ ಸೌಭಾಗ್ಯ ಹಾಗೂ ಸಂಪತ್ತು.  ಅವರು ಬೇರೇನನ್ನೂ ಬಯಸುವುದೇ ಇಲ್ಲ.  ಹೀಗೆ ಆರಾಧಿಸುವ ಭಕ್ತರಿಗೆ ಹರಿ ತನ್ನನ್ನೇ ಕೊಟ್ಟುಬಿಡುತ್ತಾನೆ.  ಇದಕ್ಕೆ ಉದಾಹರಣೆಯೆಂದರೆ "ಪ್ರಹ್ಲಾದ".  ಏನನ್ನೂ ಬೇಡದ ಪ್ರಹ್ಲಾದನಿಗೆ ಹರಿ ಒಂದು ಮನ್ವಂತರ ಕಾಲ ಆಯುಷ್ಯವನ್ನೂ, ಸುತಲ ಲೋಕದ ಅರಮನೆಯಲ್ಲಿ ವಾಮನ ರೂಪದಿಂದ ನಿತ್ಯದರ್ಶನವನ್ನೂ ಕೊಡುವ ಮೂಲಕ ತನ್ನನ್ನೇ ಕೊಟ್ಟ.  ಭಗವಂತನನ್ನು ನಾವು ಪುರುಷಾರ್ಥರೂಪ ಎಂದು ಆರಾಧಿಸಬಾರದು, ಪುರುಷಾರ್ಥಪ್ರದ ಅಥವಾ ಪುರುಷಾರ್ಥದಾಯಕ ಎಂದು ಆರಾಧಿಸ ಬೇಕು.  ಪುರುಷಾರ್ಥಗಳು ಪುರುಷಾರ್ಥಗಳೆನಿಸಬೇಕಾದರೆ, ಭಗವಂತ ಅವುಗಳಲ್ಲಿ ತಾನೆ ನಿಂತು ಆಯಾ ಪುರುಷಾರ್ಥ ರೂಪಗಳನ್ನು ತಳೆದು ಅದರ ಶಕ್ತಿಯನ್ನು ವ್ಯಕ್ತ ಮಾಡಬೇಕು.  ಆದ್ದರಿಂದ ಪುರುಷಾರ್ಥದಾಯಕನೆಂದು ಭಗವಂತನನ್ನು ಆರಾಧಿಸಿದಾಗ, ಸಾಧಕರಿಗೆ / ಭಕ್ತರಿಗೆ ಹರಿ ತನ್ನನ್ನೇ ತಾನು ಕೊಟ್ಟು ಬಿಡುವ.  ಪುರುಷಾರ್ಥದಾಯಕನೂ, ಪುರುಷಾರ್ಥರೂಪನೂ ಆದ ಹರಿಯೇ ಒಲಿದ ಮೇಲೆ, ಸಕಲ ಪುರುಷಾರ್ಥಗಳೂ ತಾವಾಗಿಯೇ ನಮ್ಮ ವಶವಾಗುವುವು. 

ಮರೆದು ಧರ್ಮಾರ್ಥಗಳ - ಕುರುಕ್ಷೇತ್ರ ಯುದ್ಧಕಾಲದಲ್ಲಿ ಅರ್ಜುನ ಮತ್ತು ದುರ್ಯೋಧನ ಇಬ್ಬರೂ ಶ್ರೀಕೃಷ್ಣನ ಸಹಾಯ ಕೇಳಲು ಹೋಗಿದ್ದರು.  ಆದರೆ ಅರ್ಜುನ ವಿನಮ್ರ ಭಾವದಿಂದ ಭಗವಂತನ ಪಾದದ ಬಳಿ ಕುಳಿತ ಮತ್ತು ನಿದ್ರೆಯ ನಾಟಕವಾಡುತ್ತಿದ್ದ ಶ್ರೀಕೃಷ್ಣ ಕಣ್ಣು ತೆರೆದೊಡನೆ ಕಾಣಿಸಿದ.  ಮೊದಲು ಕಾಣಿಸಿದನೆಂದೂ, ವಯಸ್ಸಿನಲ್ಲಿ ದುರ್ಯೋಧನನಿಗಿಂತ ಚಿಕ್ಕವನೆಂದೂ  ಅರ್ಜುನನಿಗೆ ಮೊದಲ ಅವಕಾಶ ಕೊಟ್ಟ ಭಗವಂತ ತನ್ನ ಸಮಸ್ತ ಶಸ್ತ್ರಾಸ್ತ್ರ ಸುಸಜ್ಜಿತ ನಾರಾಯಣೀ ಸೈನ್ಯ ಬೇಕೋ ಅಥವಾ ನಿರಾಯುಧನಾದ ತಾನು ಬೇಕೋ ಎಂದು ಕೇಳಿದಾಗ, ಅರ್ಜುನ ಭಗವಂತನನ್ನೇ ಬೇಡಿದ.  ಆದರೆ ದುರ್ಯೋಧನ ನಿನ್ನಿಂದ ನನಗೇನಾಗಬೇಕು, ನನಗೆ ನಿನ್ನ ಸೈನ್ಯವೇ ಸಾಕು ಎಂದಾಗ, ಭಗವಂತ ನಸು ನಗುತ್ತಾ ಅವರವರು ಬೇಡಿದ್ದನ್ನು ಅವರವರಿಗೆ ಕೊಟ್ಟ.  ಇಲ್ಲಿ ಧರ್ಮಾರ್ಥಗಳನ್ನು ಅಂದರೆ ಮೋಕ್ಷ ಸಾಧನಗಳನ್ನು ಮರೆತು, ಅವುಗಳನ್ನು ಸಾಧನವನ್ನಾಗಿ ಮಾಡಿಕೊಂಡು ರಾಜ್ಯವೆಂಬ ಸುಖಭೋಗವನ್ನು ಬಯಸಿದ ದುರ್ಯೋಧನನಿಗೆ ಕುರುಕ್ಷೇತ್ರ ಯುದ್ಧದ ಹದಿನೆಂಟು ದಿನಗಳು ಮುಗಿಯುವಷ್ಟರಲ್ಲಿ ಸರ್ವನಾಶವನ್ನೇ ಕೊಟ್ಟ.  ಅರ್ಜುನ ಹರಿಗೆ ಆಗದವರನ್ನು ನಿಗ್ರಹಿಸಬೇಕಾಗಿದ್ದರೂ ಕೂಡ ಅದನ್ನು ಮರೆತು ಯುದ್ಧ ಮಾಡುವುದಿಲ್ಲವೆಂದು ನಿಂತಾಗ ಭಗವಂತ ನಗುನಗುತ್ತಾ ಅತಿ ಶ್ರೀಘ್ರದಿಂದಲೇ "ಗೀತೋಪದೇಶ" ಮಾಡಿ ಯುದ್ಧಕ್ಕೆ ನಿಲ್ಲಿಸಿದ ಮತ್ತು ಜಯವನ್ನೂ ಕೊಟ್ಟ.  ಹರಿಯನ್ನು ದ್ವೇಷಿಸಿದ ದುರ್ಯೋಧನ ತೊಡೆ ಮುರಿದುಕೊಂಡು ರಣರಂಗದಲ್ಲಿ ಬಿದ್ದಾಗಲೂ ಭಗವಂತ ಕರುಣೆ ತೋರಲಿಲ್ಲ.  ಏಕೆಂದರೆ ದುರ್ಯೋಧನ ಸ್ವಭಾವತಃ ತಮೋ ಗುಣದವನು ಮತ್ತು ದುಷ್ಟ.  ಆದ್ದರಿಂದ ಅವನ ಅದೇ ಗುಣವನ್ನು ಅಧಿಕವಾಗಿಸಿ, ಅವನನ್ನು ತಮಸ್ಸಿಗೆ ತಳ್ಳಿದ.  ಆದರೆ ಅರ್ಜುನ ಸ್ವಭಾವತಃ ಸಜ್ಜನಾದ್ದರಿಂದ ಅವನಿಗೆ ಭಗವಂತ ಗೀತೋಪದೇಶ ಮಾಡಿದ.

ನಗುತ ಅತಿ ಶೀಘ್ರದಿಂದಲಿ ಕೊಡುತಿಪ್ಪ - ಪುರುಷಾರ್ಥಗಳು ತಮಗೆ ತಾವೇ ಸ್ವತಃ ಪುರುಷಾರ್ಥಗಳಾಗುವುದಿಲ್ಲ.  ಅವುಗಳಲ್ಲಿ ಭಗವಂತ ತಾನೇ ನೆಲೆಸದಿದ್ದರೆ ಅವುಗಳಿಗೆ ಯಾವ ಆಕರ್ಷಣೆಯೂ ಇರುವುದಿಲ್ಲ.  ಆತ್ಮನಲ್ಲಿ ಪರಮಾತ್ಮನಿದ್ದಾಗ ಮಾತ್ರವೇ ಆತ್ಮ ತನಗೆ ತಾನೇ ಪ್ರಿಯನೆನಿಸುವುದು ಇಲ್ಲದಿದ್ದಾಗ ವಿಷಯಾಸಕ್ತಿಗಳಲ್ಲಿ ಮುಳುಗಿ, ಅನರ್ಥ ಸಾಧನೆಗಳನ್ನು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಾನೆ.  ಸಜ್ಜನರಾದ ಜೀವಿಗಳು ತಮ್ಮ ಪ್ರಾರಬ್ಧ ಕರ್ಮಗಳಿಂದಾಗಿ ವಿಷಯಾಸಕ್ತ ಭೋಗಗಳನ್ನು ಬಯಸಿ, ಮುಳುಗಿ ಹರಿಯನ್ನು ಮರೆತರೆ, ಭಗವಂತ ಅವರನ್ನು ಕಂದು ವಾತ್ಸಲ್ಯ, ಕರುಣೆಗಳಿಂದ ನಸುನಗುತ್ತಾನೆ ಮತ್ತು ವಿಷಯ ಸುಖಗಳನ್ನು ನೀಡುತ್ತಾನೆ.  ಆದರೆ ತಾಮಸ ಭಾವದಿಂದ ಕೂಡಿದ್ದು ಹರಿಯನ್ನು ಮರೆತು ವಿಷಯಭೋಗಗಳಲ್ಲಿ ಮುಳುಗಿದವರನ್ನು ಕಂಡು ಶ್ರೀಹರಿ ನಗುವ ನಗು ವಾತ್ಸಲ್ಯ ಕರುಣೆಗಳಿಂದ ಕೂಡಿರುವುದಿಲ್ಲ.  ಭಗವಂತನ ’ನಸುನಗು’ವಿನಲ್ಲೂ ವ್ಯತ್ಯಾಸವಿದೆ.  ಆದ್ದರಿಂದಲೇ ಜಗನ್ನಾಥ ದಾಸರು ಇಲ್ಲಿ ದುರ್ಯೋಧನನ ದುಷ್ಟ ಸ್ವಭಾವಕ್ಕೂ, ರಾಜ್ಯದ ಭೋಗ ಸುಖದ ಆಸೆಗೂ, ನಸುನಗುತ್ತಲೇ ಸರ್ವನಾಶವನ್ನು ಕೊಟ್ಟ ಎನ್ನುತ್ತಾರೆ.  ನಸುನಗುತ್ತಲೇ ಶಾಶ್ವತ ನರಕವನ್ನೇ ದಯಪಾಲಿಸಿದನೆಂದು ಅರ್ಥವಾಗುತ್ತದೆ.  ಸಜ್ಜನರಿಗೆ ಅತೀ ಕರುಣಾಶಾಲಿಯಾಗಿರುವನು ಭಗವಂತ ಎನ್ನುತ್ತಾರೆ ದಾಸರು.

ಪರಮ ಸತ್ಪುರುಷಾರ್ಥ ರೂಪನೇ ಹರಿಯಾಗಿದ್ದರೂ ಸಹ, ಅವನನ್ನು ಬಿಟ್ಟು ಬೇರೆಯ ಲೌಕಿಕ ಧರ್ಮ ಅರ್ಥಗಳನ್ನು ಬಯಸುತ್ತಾ ಮತ್ತೆ ಮತ್ತೆ ಹುಟ್ಟು-ಸಾವುಗಳ ಚಕ್ರದಲ್ಲಿ ಸಿಕ್ಕು ನರಳುವವರನ್ನು ಕಂಡು ಹರಿಯು ನಸುನಗುತ್ತಾನೆ ಎಂದು ತಿಳಿಸುತ್ತಾರೆ ದಾಸರು.  ಹಾಗೆಯೇ ಸಜ್ಜನರಾದರೂ ಸರಿ, ದುರ್ಜನರಾದರೂ ಸರಿ, ಹರಿಯನ್ನು ಮರೆತವರನ್ನು ಶಿಕ್ಷಿಸದೆ ಬಿಡುವುದಿಲ್ಲ ಭಗವಂತ ಎಂಬ ಎಚ್ಚರಿಕೆಯ ಮಾತನ್ನೂ ಹೇಳುತ್ತಾರೆ.  ಪುರುಷಾರ್ಥ ರೂಪನೇ ಆದರೂ ಕೂಡ ಶ್ರೀಹರಿ ಈ ಎಲ್ಲಕ್ಕಿಂತಲೂ ಅತ್ಯಂತ ಶ್ರೇಷ್ಠನು, ಇವನಿಗೆ ಸಾಟಿ ಬೇರೆ ಯಾವುದೂ ಇಲ್ಲವೆಂದು ಭಕ್ತಿಯಿಂದ, ಶ್ರದ್ಧೆಯಿಂದ ನಮ್ಮನ್ನೇ ನಾವು ಅರ್ಪಿಸಿಕೊಂಡಾಗ, ಭಗವಂತ ತನ್ನನ್ನೇ ನಮಗೆ ಕೊಟ್ಟುಬಿಡುತ್ತಾನೆ.  ಸದುಪಾಸನೆ ಮಾಡುವವರನ್ನು ಎಂದಿಗೂ ಬೆಂಬಿಡದೆ ಕಾಪಾಡುವವನು ಭಗವಂತ.

ತತ್ವಸುವ್ವಾಲಿಯಲ್ಲಿ ದಾಸರು :
ವಿಷಯದೊಳು ಮನವಿರಿಸಿ ವಿಷಯ ಮನದೊಳಗಿರಿಸಿ
ವಿಷಯೇಂದ್ರಿಯಗಳ ಅಭಿಮಾನಿ | ಅಭಿಮಾನಿ ದಿವಿಜರಿಗೆ
ವಿಷಯನಾಗದಲೆ ಇರುತಿರ್ಪೆ ||  - ಮನಸ್ಸು ವಿಷಯಗಳತ್ತ ವಾಲುವುದು ಅದರ ಸ್ವಭಾವ.  ಇದಕ್ಕೆ ಪ್ರೇರಣೆಯನ್ನೂ ಭಗವಂತನೇ ಕೊಡುವವನು.  ವಿಷಯಗಳಲ್ಲೇ ಧ್ಯಾನವನ್ನು ಕೇಂದ್ರೀಕರಿಸಿದಾಗ ಅದರ ಸಂಗವಾಗುತ್ತದೆ, ಸಂಗದಿಂದ ಭೋಗದ ಇಚ್ಛೆ, ಭೋಗದಿಂದ ಕಾಮ, ಕಾಮದಿಂದ ಕ್ರೋಧ, ಲೋಭ, ಮತ್ಸರ ಉಂಟಾಗುತ್ತದೆ.  ಇವುಗಳನ್ನೇ ಪುರುಷಾರ್ಥಗಳೆಂದು ತಿಳಿದು, ಅದರಲ್ಲೇ ಮುಳುಗೇಳುತ್ತಾ, ಶಾಸ್ತ್ರಗಳನ್ನು ಮರೆತವರನ್ನೂ, ಶ್ರೀಹರಿಯ ಧ್ಯಾನವನ್ನು ನಿರ್ಲಕ್ಷಿಸಿದವರನ್ನೂ ಎಂದಿಗೂ ಭಗವಂತ ಕರುಣಿಸುವುದಿಲ್ಲ.  ಎಲ್ಲವನ್ನೂ, ಎಲ್ಲರನ್ನೂ ಮೀರಿದವನು ಪರಮ ಪುರುಷಾರ್ಥ ರೂಪನಾದ ಶ್ರೀಹರಿ ಎಂದು ತಿಳಿದಿ, ಅವನಲ್ಲೇ ನಮ್ಮ ಮನಸ್ಸು ಅರ್ಪಿಸಬೇಕು.  ನಾವು ಮಾಡುವ ಉಪಾಸನೆಗೆ ತಕ್ಕಂತೆಯೇ ಫಲಗಳನ್ನು ಕೊಡುವವನು ಭಗವಂತ.

ಡಿವಿಜಿಯವರು ಕಗ್ಗದಲ್ಲಿ ಒಂದು ನಾಯಿಯ ಜೀವನವನ್ನು ದೃಷ್ಟಾಂತವಾಗಿ ಕೊಡುತ್ತಾರೆ :

ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ |
ಅನಿತನಿತರೊಳೆ ಬದುಕುತಾಯುವನು ಕಳೆವಾ ||
ಮನದ ಲಘುಸಂಚಾರವೊಂದು ಯೋಗದುಪಾಯ |
ಶುನಕೋಪದೇಶವದು ಮಂಕುತಿಮ್ಮ || - ಘನತತ್ತ್ವಕ್ಕೆ ಶರಣಾದ ಜೀವಿ ಹೇಗೆ ಬದುಕಬೇಕೆಂಬುದನ್ನು ನಾಯಿಯು ತನ್ನ ಜೀವನದ ಮೂಲಕ ತಿಳಿಸುತ್ತದೆ ಎನ್ನುತ್ತಾರೆ.  ನಾಯಿ ಏನನ್ನೂ ಸಂಗ್ರಹ ಮಾಡಿಟ್ಟುಕೊಳ್ಳುವುದಿಲ್ಲ.  ಒಂದು ಕ್ಷಣದಿಂದ ಇನ್ನೊಂದು ಕ್ಷಣಕ್ಕೆ, ಒಂದು ದಿನದಿಂದ ಇನ್ನೊಂದು ದಿನಕ್ಕೆ ಎಷ್ಟು ಸಿಕ್ಕುತ್ತದೋ ಅಷ್ಟರಿಂದಲೇ ತೃಪ್ತಿಪಡುತ್ತಾ ತನ್ನ ಜೀವಿತಾವಧಿಯನ್ನು ಕಳೆಯುತ್ತದೆ.  ಇದರಿಂದ ನಾವು ತಿಳಿಯಬೇಕಾಗಿರುವುದೇನೆಂದರೆ ಮಹತತ್ತ್ವದಲ್ಲಿ ಮನಸ್ಸು ನಿಲ್ಲಿಸಿದವನು ಲೋಕದಲ್ಲಿ ಸಿಕ್ಕುವ ವಸ್ತುಗಳಿಗಾಗಿ ಇಂದ್ರಿಯಗಳನ್ನು ಉಪಯೋಗಿಸುವುದಿಲ್ಲ.  ಬದುಕಿರಲು ಎಷ್ಟು ಬೇಕೋ ಅಷ್ಟು ಮಾತ್ರ ಸ್ವೀಕರಿಸಿ ತೃಪ್ತಿ ಪಡುತ್ತಾನೆ.  ಅವನ ಮನಸ್ಸು ಮಹತತ್ತ್ವದಲ್ಲೇ ನೆಲೆಸಿ ಹಗುರವಾಗಿ ಸಂಚರಿಸುತ್ತಿರುತ್ತದೆ.  ಪುರುಷಾರ್ಥಗಳನ್ನು ಬೇಕು ಬೇಕೆಂದು ಹುಡುಕುತ್ತಾ ಭಾರವಾಗಿ ಚಲಿಸಲಾರದೆ ವಿಷಯಾಸಕ್ತಿಗಳಲ್ಲೇ ಮುಳುಗುವುದಿಲ್ಲ.  ಇದು ಶುನಕವು ಪರಮಾತ್ಮನೊಡನೆ ಸೇರಲು ಮಾಡುವ ಉಪಾಯ ಮತ್ತು ಜೀವಿಗಳಿಗೆ ಮಾಡುವ ಉಪದೇಶ.

ಚಿರಶಿಕ್ಷೆಯಿಂ ನಿನಗೆ ಸರ್ವಾತ್ಮತಾಭ್ಯಾಸ |
ಸರಳ ಸಹಜವದಹುದು ಮೂಗಿನುಸಿರವೊಲು ||
ಪರ ನಿಯತಿಯಿರದು ಸ್ವತಸ್ಸಿದ್ಧ ನಿಯತಿಯಿರೆ |
ಹೊರಸಡಿಲಕೊಳಹಿಡಿತ - ಮಂಕುತಿಮ್ಮ ||  -  ನಮ್ಮೊಳಗಿರುವ ಆ ಘನತತ್ತ್ವವೆಂಬ ಭಗವಂತನನ್ನು ನಾವು ಕಾಣಬೇಕೆಂದರೆ ಆ ತತ್ತ್ವಕ್ಕೆ ನಮ್ಮನ್ನು ನಾವೇ ಒಪ್ಪಿಸಿಕೊಂಡು, ಎಲ್ಲದರಲ್ಲೂ, ಎಲ್ಲೆಲ್ಲೂ, ಯಾವಾಗಲೂ ಅದನ್ನೇ ಕಾಣುವ ಅಭ್ಯಾಸ ನಮಗೆ ಉಸಿರಾಡುವಷ್ಟು ಸಹಜವಾಗಬೇಕು.  ಇದು ಅಷ್ಟು ಸುಲಭವಲ್ಲ, ದೀರ್ಘಕಾಲ ನಾವು ನಮ್ಮ ಅಂತರಂಗವನ್ನು ಕಠಿಣವಾಗಿ ಶಿಸ್ತುಗೊಳಿಸುವುದರಿಂದ ಮಾತ್ರ ಸಾಧ್ಯವಾಗುವುದು.  ಇದು ಯಾರ ಪ್ರೇರಣೆಯಿಂದಲಾಗಲೀ, ಬಲವಂತದಿಂದಾಗಲೀ ಸಾಧ್ಯವಾಗುವಂತಹುದಲ್ಲ.  ಇದು ನಮ್ಮೊಳಗಿರುವ ನಮ್ಮ ಆತ್ಮಕ್ಕೆ ಅತ್ಯಂತ ಆಪ್ತವಾಗಿ ಬೇಕಾಗಿರಬೇಕು.  ಸಾಧಿಸುವ ಹಾದಿ ಕಠಿಣವಾದರೂ, ಅದರಲ್ಲೇ ನಡೆಯುವ ಹುಮ್ಮಸ್ಸು, ಹತೋಟಿ ಇರಬೇಕು.  ಹೀಗಾಗಲು ನಮಗೆ ನಮ್ಮ ಮನಸ್ಸೇ ಅತ್ಯಂತ ಪ್ರಧಾನ ಕಾರ್ಯ ನಿರ್ವಹಿಸಬೇಕು.  ಎಲ್ಲಕ್ಕೂ ಮೊದಲು ಇಂದ್ರಿಯಗಳ ಮೇಲೆ ನಿಯಂತ್ರಣ ಸಿಕ್ಕಬೇಕು.  ಒಳಗೆ ಏನೇ ಕಠಿಣ ತಾಲೀಮು ನಡೆಯುತ್ತಿದ್ದರೂ ಹೊರ ಪ್ರಪಂಚಕ್ಕೆ ತೋರಗೊಡದೆ ಮನಸ್ಸು ನಿಗ್ರಹಿಸಬೇಕು.  ಹೀಗೆ ನಮ್ಮನ್ನೇ ನಾವು ಸಂಪೂರ್ಣವಾಗಿ ಒಪ್ಪಿಸಿಕೊಂಡಾಗ ತನ್ನನ್ನೇ ಕೊಟ್ಟು ಬಿಡುವಂತಹ ಸರಳ, ಸುಲಭನೋ ನಮ್ಮ ಹರಿ.


ಚಿತ್ರಕೃಪೆ : ಅಂತರ್ಜಾಲ

1 comment:

ಕ್ಷಣ... ಚಿಂತನೆ... said...

ಹರಿಕಥಾಮೃತಸಾರ - ೭ನೇ ಪದ್ಯಕ್ಕೆ ಸರಳವಾಗಿ ಉದಾಹರಣೆಗಳನ್ನು ಮನಮುಟ್ಟುವಂತೆ ಕೊಟ್ಟು, ಓದಿಸಿಕೊಂಡು ಹೋಗುತ್ತಾ ಚಿಂತನೆಗೂ ಒಳಪಡಿಸುತ್ತದೆ. ಇದನ್ನು ಸರಳವಾಗಿ ತಿಳಿಹೇಳುವ ಕೆಲಸವೂ ಸಹ ಸುಲಭವಲ್ಲ. ಇತಹ ಸುಕಾರ್ಯಗಳನ್ನು ಮಾಡುತ್ತಿರುವ ಹರಿಕಥಾಮೃತಸಾರ ಬಳಗಕ್ಕೆ ಅಭಿನಂದನೆಗಳು.
ಸ್ನೇಹದಿಂದ,
ಚಂದ್ರು