Monday, August 29, 2011

ಮಂಗಳಾಚರಣ ಸಂಧಿ - ೧೦ ನೇ ಪದ್ಯ...

 
ವಾಮದೇವ ವಿರಿಂಚಿತನಯ ಉ

ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ|
ಕಾಮಹರ ಕೈಲಾಸಮಂದಿರ
ಸೋಮಸೂರ್ಯಾನಲ ವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ ||೧೦||

ಪ್ರತಿಪದಾರ್ಥ : ವಾಮದೇವ - ಸುಂದರನಾದಂತಹ ದೇವ, ವಿರಿಂಚಿತನಯ - ಬ್ರಹ್ಮದೇವನ ಪುತ್ರ, ಉಮಾಮನೋಹರ - ಉಮಾದೇವಿಯ ಮನಸ್ಸನ್ನು ಮುದಗೊಳಿಸುವವ, ಉಗ್ರ - ಉ ಎಂದರೆ ಸಂಸಾರ ಮತ್ತು ಗ್ರ ಎಂದರೆ ಸಂಸಾರವನ್ನು ಗ್ರಸನ ಮಾಡುವವನು, ಧೂರ್ಜಟಿ - ಜಟೆಯಲ್ಲಿ ಗಂಗೆಯನ್ನು ಧರಿಸಿರುವವನು, ಸಾಮಜಾಜಿನ ವಸನಭೂಷಣ - ಸಾಮಜ ಎಂದರೆ ಗಜ, ಆಜಿನ ಎಂದರೆ ಚರ್ಮ, ವಸನ ಎಂದರೆ ವಸ್ತ್ರ, ಭೂಷಣ ಎಂದರೆ ಅಲಂಕರಿಸಿಕೊಂಡವ, ಸುಮನಸೋತ್ತಂಸ - ಸುಮನಸರು ಎಂದರೆ ಜ್ಞಾನಿಗಳಾದ ದೇವತೆಗಳು ಮತ್ತು ಅಂತಹವರಲ್ಲಿ ಉನ್ನತಸ್ಥಾನದಲ್ಲಿರುವವನು, ಕಾಮಹರ - ಕಾಮ (ಮನ್ಮಥ)ನನ್ನು ಸಂಹರಿಸಿದ ಪರಮ ವೈರಾಗಿ, ಕೈಲಾಸ ಮಂದಿರ - ಕೈಲಾಸವನ್ನು ತನ್ನ ಮನೆಯನ್ನಾಗಿಸಿಕೊಂಡವ, ಸೋಮಸೂರ್ಯಾನಲ ವಿಲೋಚನ - ಸೋಮ ಎಂದರೆ ಚಂದ್ರ ಮತ್ತು ಸೂರ್ಯರನ್ನು ಎಡ ಹಾಗೂ ಬಲ ಕಣ್ಣುಗಳಲ್ಲಿಯೂ,  ಅನಲ ಎಂದರೆ ಅಗ್ನಿಯನ್ನು ಹಣೆಯಲ್ಲಿಯೂ ಧರಿಸಿರುವವನು, ಕಾಮಿತಪ್ರದ - ಬೇರೆಲ್ಲಾ ದೇವತೆಗಳಿಗಿಂತಲೂ ಅತಿ ಶ್ರೀಘ್ರವಾಗಿ ಒಲಿಯುವವನು, ಸದಾಸುಮಂಗಳವ - ಒಳ್ಳೆಯ ಜ್ಞಾನವನ್ನೂ, ಭಕ್ತಿಯನ್ನೂ,  ಕರುಣಿಸೆಮಗೆ - ಕರುಣೆಯಿಂದ ನಮಗೆ ಕೊಡು.


ಈ ಪದ್ಯದಲ್ಲಿ  ದಾಸರು ರುದ್ರ ದೇವರನ್ನು ನಮಿಸುತ್ತಾರೆ
ರುದ್ರ ದೇವರು "ವಿರಿಂಚಿ" ಎಂದರೆ ಬ್ರಹ್ಮ ತನಯರುಅವರಿಗೆ ಮೂರು ಮುಖ್ಯವಾದ ಹೆಸರುಗಳು : ) ಅತ್ಯಂತ ಸುಂದರ ರೂಪನಾದವನು, ತನ್ನ ಎಡಭಾಗದಲ್ಲಿರುವ ಪರಮಾತ್ಮನನ್ನು ಸರ್ವದಾ ಉಪಾಸನೆ ಮಾಡುವವನು ವಾಮದೇವ. ಸುಂದರನೆಂದರೆ ನಮ್ಮನ್ನು ಮರುಳುಗೊಳಿಸುವಂತಹ ರೂಪವುಳ್ಳವನು ವಾಮದೇವ. ನಮ್ಮ ಮನಸ್ಸಿಗೆ ಸತ್ಯದ ಅರಿವನ್ನೂ ಮತ್ತು ಮೋಹವನ್ನೂ - ಎರಡನ್ನೂ ಕೊಡುವವನು.    ೨) "ಉ" ಏಕಾಕ್ಷರದ ಅರ್ಥ "ಶಿವ". ಉಮಾ ಎಂದರೆ ಶಿವನಲ್ಲಿ ಮನಸ್ಸಿಟ್ಟವಳುಹಾಗೂ ಉಮಾ ದೇವಿಯ ಮನಸ್ಸಿಗೆ ಸಂತೋಷ ಕೊಡುವವನು, ಉಮಾಳ ಪತಿ ಉಮಾ ಮನೋಹರ. ೩) ಶತೃಗಳಿಗೆ ಕ್ರೂರನಾದುದರಿಂದ ಉಗ್ರ. "ಉ" ಎಂದರೆ ಉತ್ಪನ್ನವಾಗಿರುವ ಪ್ರಪಂಚ ಮತ್ತು "ಉ" ಎಂದರೆ "ಉಗ್ರ".  ಇಲ್ಲಿ ’ಗ್ರ’ ಎಂದರೆ "ಗ್ರಸನ" "ಗ್ರಸತಿ" ಎಂದು ಅರ್ಥ ಆದಾಗ, ಉತ್ಪನ್ನವಾಗಿರುವ ಪ್ರಪಂಚವನ್ನು  ಗ್ರಸನ - ಸಂಹಾರ ಮಾಡುವವನು ಎಂದು ಅರ್ಥವಾಗುತ್ತದೆಹಾಗೇ "ಉಗ್" ಜ್ಞಾನಿಗಳ ಸಮುದಾಯ "ರ" - ರಮಯತಿ ಎಂದರೆ ಆನಂದ ಕೊಡತಕ್ಕವನು ಎಂದೂ ಅರ್ಥೈಸಬಹುದು.   ತ್ರಿನೇತ್ರನಾದ ರುದ್ರ ದೇವರು ಬಲಗಣ್ಣಿನಲ್ಲಿ ಸೂರ್ಯ - ಇಚ್ಛೆ ಹಾಗೂ ರಜೋಗುಣವನ್ನೂ, ಎಡಗಣ್ಣಿನಲ್ಲಿ ಚಂದ್ರ - ಜ್ಞಾನ ಹಾಗೂ ಸತ್ವಗುಣವನ್ನೂ ಮತ್ತು ಹಣೆಗಣ್ಣಿನಲ್ಲಿ ಅಗ್ನಿ - ಕ್ರಿಯೆ ಹಾಗೂ ತಮೋ ಗುಣಗಳನ್ನು ಹೊಂದಿರುತ್ತಾರೆ.   ಇಲ್ಲಿ ನಮಗೆ ಯಾವುದೇ ಸಾಧನೆಗೂ ಅಥವಾ ವಸ್ತು ನಿರ್ಮಾಣಕ್ಕೂ ಮೊದಲು ಇಚ್ಛೆ ಬರಬೇಕು ನಂತರ ಆ ಇಚ್ಛೆಯನ್ನು ಪೂರೈಸಿಕೊಳ್ಳಲು ಜ್ಞಾನ ಬೇಕು, ಕೊನೆಗೆ ಸಾಧನೆಗೂ, ಯಾವುದೇ ವಸ್ತು ನಿರ್ಮಾಣಕ್ಕೂ  ಕ್ರಿಯೆ ಬೇಕಾಗುತ್ತದೆ ಎಂಬುದನ್ನು ತಿಳಿಸುತ್ತದೆ.  ರುದ್ರ ದೇವರು  ಗಂಗೆಯನ್ನು ಶಿರದಲ್ಲಿ ಧರಿಸಲು ತಮ್ಮ ಜಟೆಯನ್ನು ಆಕಾಶದಲ್ಲಿ ಒಗೆದು ಹರಡಿದಾಗ ಅದು ಹೊಗೆಯಂತೆ ಕಂಡಿದ್ದರಿಂದ ಅವರನ್ನು ವ್ಯೋಮಕೇಶ’  ಅಥವಾ ಧೂರ್ಜಟಿಎಂಬ ಹೆಸರಿನಿಂದಲೂ ಕರೆಯುತ್ತಾರೆಧೂರ್ಜಟಿ ಮತ್ತು ಸಾಮಜಾಜಿನವಸನ ಎಂಬ ಹೆಸರುಗಳು ವೈರಾಗ್ಯವನ್ನು ಸೂಚಿಸುತ್ತವೆ.  ಸುಮನಸೋತ್ತಂಸ - ’ಸು’ ಎಂದರೆ ಭಗವಂತ, ಯಾರು ಅವನನ್ನು ಸದಾ ಧ್ಯಾನಿಸುವರೋ ಅವರು ಸುಮನಸರು, ದೇವತೆಗಳು ಎಂದರ್ಥ.  ಅಂತಹ ಸುಮನಸರಲ್ಲಿ ರುದ್ರ ದೇವರು ಉತ್ತಮರು. ಕಾಮಹರ - ರುದ್ರ ದೇವರು ತನ್ನ ಕಾಮವನ್ನು ಮಾತ್ರ ಬಿಡಲಿಲ್ಲ.  ನಮ್ಮ ಸಾಧನೆಗೆ ಬಾಧಕವಾದಾಗ ನಮ್ಮ ಕಾಮವನ್ನು ಹರಿಸಿದವರು ಎಂದರೆ, ಇಂದ್ರಿಯಗಳ ನಿಗ್ರಹಣೆಗೆ ಅನುಕೂಲ ಮಾಡಿಕೊಡುವಂತಹ ಮನೋಕಾರಕ ದೇವರು ಎಂದರ್ಥ. ಕೈಲಾಸ ಮಂದಿರ - ಕೈಲಾಸವೆಂದರೆ ಹಿಮದ ರಾಶಿ ಎಂದರ್ಥ.  "ಕಿಲ" ಎಂದರೆ ಶೈತ್ಯ.  ಛಳಿ ಬರಿಸುವಂತಹ ಹಿಮದ ರಾಶಿಯನ್ನು ಮನೆಯನ್ನಾಗಿಸಿಕೊಂಡವನು.  ಎಲ್ಲಿ ಮನುಷ್ಯರು ಮೈ ಕೈ ಬಿಟ್ಟಿರಲು ಸಾಧ್ಯವಿಲ್ಲವೋ ಅಂತಹ ಶೈತ್ಯದಲ್ಲಿ ದಿಗಂಬರನಾದವನು ರುದ್ರ.  ಇದು ಅತ್ಯಂತ ಉನ್ನತವಾದ ಭಾವ - ಎಲ್ಲಾ ಕಾಮನೆಗಳನ್ನೂ ಬಿಟ್ಟವನು ಎಂಬ ಅರ್ಥ ಕೊಡುವ ಶಬ್ದ.  ಶಿವನಿಗೆ ಉಪನಿಷತ್ತಿನಲ್ಲಿ ಶರೀರಪುರುಷ ಎಂದೂ ಹೆಸರಿದೆ.  ನಮ್ಮ ಈ ಶರೀರವೇ ರುದ್ರನಿಗೆ ಬಟ್ಟೆ.  ಶರೀರ ಬಿದ್ದು ಹೋದಾಗ.. ಅವನು ದಿಗಂಬರ.  ಆದ್ದರಿಂದಲೇ ರುದ್ರ ದೇವರು “ತ್ವಂ ಪ್ರಾಣ ತೇಜಸಾ ರುದ್ರಃ”. ರುದ್ರ ಶಬ್ದ ವೇದದಲ್ಲಿ ನಾಲಕ್ಕು ಅರ್ಥಗಳಲ್ಲಿ ಬಳಕೆಯಾಗಿದೆ – ೧) ಅಗ್ನಿ ೨) ಶಂಕರ ೩) ಪ್ರಾಣ ೪) ನಾರಾಯಣ.  ಶ್ರೀ ವಿಷ್ಣು ಸಹಸ್ರನಾಮದಲ್ಲಿ “ಓಂ ರುದ್ರಾಯ ನಮ:” ಎಂದಾಗ - ರುದ್ರ ಎಂದರೆ ಮೇಲ್ನೋಟಕ್ಕೆ ದುಃಖ ಕೊಡುವವನು, ಸುಡುವವನು, ಎನ್ನುವ ಅರ್ಥವನ್ನು ಕೊಡುತ್ತದೆ. ವೇದಗಳಲ್ಲಿರುವ ರುದ್ರಸೂಕ್ತಗಳಿಗೆ ಸಾಯಣರು ಅರ್ಥ ಬರೆಯುವಾಗ, ರುದ್ರ ಎಂದರೆ ಅಗ್ನಿ ಎಂದು ಬರೆಯುತ್ತಾರೆ. ಮುಟ್ಟಿದರೆ ಕಣ್ಣೀರು ಬರುವುದು ಪಂಚಭೂತಗಳಲ್ಲಿ ಅಗ್ನಿಯಿಂದ ಮಾತ್ರ. ಆದ್ದರಿಂದ ಅಗ್ನಿ ಕೂಡ ರುದ್ರ. ಆದರೆ ಭಗವಂತ ನಮಗೆ ಏಕೆ ದುಃಖ ಕೊಡುತ್ತಾನೆ? ಭಗವಂತ ದುಃಖ ಕೊಡುವುದು ಪಾಪಿಗಳಿಗೆ ಮಾತ್ರ. ಇಲ್ಲಿ ಭಗವಂತ ದುಃಖ ಕೊಡುವ ಉದ್ದೇಶ ನಮಗೆ ಶಿಕ್ಷಣ ಕೊಡುವುದು, ಉದ್ಧರಿಸುವುದು ಎಂದೇ ಅರ್ಥವಾಗುತ್ತದೆ.   ಹಾಗೇ ಈ ಪದ “ರುದ್ರ”ವನ್ನು ಬಿಡಿಸಿ ನೋಡಿದಾಗ ರುಕ್+ದ್ರಾ ಎಂದಾಗುತ್ತದೆ.  'ರುಕ್' ಎಂದರೆ ಭವರೋಗ, ಮತ್ತು 'ದ್ರಾ' ಎಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ. ಆದ್ದರಿಂದ ರುದ್ರ ಎಂದರೆ ಭವರೋಗ ನಾಶಕ. ಈ ನಾಮವನ್ನು ನಾವು ರುತ್+ದ್ರಾ ಎಂದೂ ಒಡೆದು ಅರ್ಥೈಸಬಹುದು. ಇಲ್ಲಿ ರುತ್ ಅಂದರೆ ದುಃಖ. ಆದ್ದರಿಂದ ರುದ್ರ ಅಂದರ ದುಃಖನಾಶಕ.  ರುದ್ರನು ಮಹಾ ತೇಜಸ್ವಿ ಮತ್ತು ಅಹಂಕಾರ ತತ್ವದ ಪ್ರತೀಕ.  ನಮ್ಮಲ್ಲಿರುವ ಅಹಂಕಾರ, ಅತಿಯಾದ ಅಭಿಮಾನ, ಆಲಸ್ಯವೆಂಬ ದೌರ್ಬಲ್ಯಗಳು  ನಮ್ಮನ್ನು ದುರವಸ್ಥೆಗೀಡು ಮಾಡಿದಾಗ ನಮಗೆ ಭಗವಂತನಲ್ಲಿ ಶರಣಾಗುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂಬ ಅರಿವು ಮೂಡಿಸುವುದೂ ಹಾಗೂ ಭಗವಂತನ ಸರ್ವೋತ್ತಮತ್ವದೆಡೆಗೆ ಸಾಗಲು ಪ್ರೇರೇಪಿಸುವವರೇ ರುದ್ರ ದೇವರು.

ಶಿವಾನಂದಲಹರಿಯಲ್ಲಿ ಶ್ರೀ ಶಂಕರರು ರುದ್ರನನ್ನು ಇನ್ನೂ ಅನೇಕ ಹೆಸರುಗಳಿಂದ ಸ್ತುತಿಸುತ್ತಾರೆ.  ಅದರಲ್ಲಿ  ಅ) ಚದುರಗಹಾರ - ದಾರುಕಾವನದಲ್ಲಿ ಮುನಿಗಳು ಹರಿಬಿಟ್ಟ ಹಾವುಗಳನ್ನೂ, ಗರುಡನ ಭಯದಿಂದ ಹೆದರಿ ಶರಣು ಬಂದ ಹಾವುಗಳನ್ನೂ ತನಗೆ ಆಭರಣವಾಗಿ ಮಾಡಿಕೊಂಡವನು ಆ) ಮೃಗಧರಂ - ಜಿಂಕೆಯನ್ನು ಧರಿಸಿದವನು ಇ) ಪಶುಪತಿಂ - ಬ್ರಹ್ಮನಿಂದ ಸ್ಥಾವರದವರೆಗಿನ ಪಶುಸಮೂಹಕ್ಕೆ ಒಡೆಯನಾದವನು ಈ) ಚಿದಾಲಂಬಂ - ಚೈತನ್ಯಾಶ್ರಯನಾದವನು ಉ) ಜಟಾಭಾರೋದಾರಂ - ಜಟಾಸಮೂಹದಿಂದ ರಮಣೀಯನಾದವನು ಊ)  ಅತಿವಿಡಂಬಂ - ಲೋಕ ವಿಲಕ್ಷಣನಾದವನು, ತ್ರಿಲೋಚನತ್ವ, ದಿಗಂಬರತ್ವ, ಸ್ಮಶಾನವಾಸ ಮುಂತಾದವುಗಳು.

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿ: |
ಸಮರ್ಪ್ಯೈಕಂ ಚೇತ: ಸರಸಿಜಮುಮಾನಾಥ ಭವತೇ
ಸುಖೇನೈವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ||
ಪರಮೇಶ್ವರನಿಗೆ ಬಾಹ್ಯಾರ್ಚನೆಗಿಂತಲೂ ಅಂತರಂಗದ ಅರ್ಚನೆ ಬಹಳ ಪ್ರಿಯವಾದದ್ದು.  ಎಷ್ಟೇ ಕಷ್ಟ ಪಟ್ಟು ಬಾಹ್ಯ ವಸ್ತುಗಳನ್ನು ಸಂಗ್ರಹಿಸಿ ಶಿವನಿಗೆ ಅರ್ಪಿಸಿ ಪೂಜಿಸಿದರೂ, ನಮ್ಮ ಮನಸ್ಸನ್ನು ಶಿವನಲ್ಲಿ ಲೀನವಾಗಿಸದೆ, ಅರ್ಪಿಸದೆ ಹೋದರೆ ನಾವು ಸಂಸಾರದ ವಿಷಯಾಸಕ್ತಿಗಳಿಂದ ಹೊರ ಬರುವುದು ಸಾಧ್ಯವಿಲ್ಲ.  ಮನಸ್ಸನ್ನು ಶಿವನಿಗೆ ಅರ್ಪಿಸಿದ್ದಾದ ಮೇಲೆ ಬೇರೆ ಯಾವ ಆರಾಧನೆಯೂ, ಪೂಜೆಯೂ ಬೇಕಾಗಿಯೇ ಇಲ್ಲ. ಅದರಿಂದಲೇ ಶಿವನನ್ನು "ಮನಸ್ಸಿನಂತೆ ಮಹಾದೇವ" ಎನ್ನುವುದು. 

ಸ್ತೋತ್ರಕಾವ್ಯಗಳ ಕವಿ ನಾರಾಯಣ ಪ೦ಡಿತಾಚಾರ್ಯರ ವಿರಚಿತ ಶಿವಸ್ತುತಿ :
ಮಹೇಶ ಮಹಿತೋsಸಿ ತತ್ಪುರುಷ ಪೂರುಷಾಗ್ರ್ಯೋ ಭವಾನ್
ಅಘೋರ ರಿಪು-ಘೋರ ತೇsನವಮ ವಾಮ-ದೇವಾ೦ಜಲಿ:|
ನಮ: ಸಪದಿ-ಜಾತ ತೇ ತ್ವಮಿತಿ ಪ೦ಚ-ರೂಪೋs೦ಚಿತ:
ಪ್ರಪ೦ಚಯ ಚ ಪ೦ಚ-ವೃನ್ಮಮ ಮನಸ್ತಮಸ್ತಾಡಯ ||

ಓ ಮಹೇಶ, ಎಲ್ಲರಿ೦ದಲೂ ಪೂಜೆಗೊಳ್ಳುವವನು ನೀನು. ಓ ತತ್ಪುರುಷ, ಪುರುಷರಿಗೂ ಮಿಗಿಲಾದ ಪುರುಷ ನೀನು. ಹಗೆಗಳ ಎದೆಗೆಡಿಸಿದ ಓ ಅಘೋರ, ಹಿರಿಯ ದೈವತವಾದ ಓ ವಾಮದೇವ, ಇದೋ ನಿನಗೆ ಕೈಮುಗಿದೆ. ಓ ಸದ್ಯೋಜಾತ, ಇದೋ ನಿನಗೆ ವ೦ದನೆ, ಹೀಗೆ ಪ೦ಚರೂಪನಾದ ನಿನ್ನನ್ನು ಪೂಜಿಸುವೆ. ಪ೦ಚವಿಧವಾದ ನನ್ನ ಒಳ ಬಗೆಯನ್ನು ವಿಸ್ತಾರಗೊಳಿಸು. ಪ೦ಚವಿಧವಾದ ಬಗೆಯ ಕತ್ತಲನ್ನು ಒದ್ದೋಡಿಸು.


ರುದ್ರ ದೇವರು ಮುಖ್ಯವಾಗಿ “ಮನೋನಿಯಾಮಕರು” ಎಂಬ ಮಾತನ್ನು  “ಪಂಪಾಪುರ ನಿವಾಸ ಪ್ರಮಥೇಶ “ ಎಂಬ ಪದದಲ್ಲಿ ಜಗನ್ನಾಥ ದಾಸರು “ಮನೋ ಮೈಲಿಗೆಯ ಪರಿಹರಿಸು ನೀಲಕಂಠ..” ಎಂದು ಆರ್ದ್ರರಾಗಿ ಬೇಡಿಕೊಳ್ಳುವುದರ ಮೂಲಕ ಹೇಳುತ್ತಾರೆ.  ಅಮೃತ ಮಂಥನ ಕಾಲದಲ್ಲಿ ಬಂದ ವಿಷವನ್ನು ಕಂಠದಲ್ಲಿಟ್ಟು ಕೊಂಡಿದ್ದರಿಂದ ಅವನು “ನೀಲಕಂಠ”ನಾಗಿದ್ದಾನೆ.  ಇದಲ್ಲದೆ ದೂರ್ವಾಸ, ಶುಕ, ವ್ಯಾಧ, ಜೈಗೀಶ ಎಂಬ ರೂಪಗಳಲ್ಲೂ ಹರಿಯ ಪರಿಚರವನ್ನು ಮಾಡಿ ಮೆಚ್ಚಿಸಿದ್ದಾನೆ. 


“ನೀಲಲೋಹಿತ” ಎಂಬ ಪದದಲ್ಲಿ ಡಮರುಗ, ತ್ರಿಶೂಲಗಳನ್ನು ಹೊಂದಿರುವವನು, ಹಣೆಯಲ್ಲಿ ಕಣ್ಣನ್ನಿಟ್ಟುಕೊಂಡು ಫಾಲನಯನನಾಗಿದ್ದಾನೆ. ತಲೆಯಲ್ಲಿ ಚಂದ್ರನನ್ನು ಧರಿಸಿಕೊಂಡು ಶಶಿಧರನೂ, ಇಂದ್ರನಿಂದ ವಂದಿಸಿಕೊಳ್ಳುವವನೂ  ಹಾಗೂ ನಾಗಭೂಷಣನೂ ಆಗಿದ್ದಾನೆ.  ಇಂತಹ ರುದ್ರ ದೇವರು ನಮಗೆ ಸದಾ ಸುಮಂಗಳವ ಕರುಣಿಸಲೆಂದು ದಾಸರು ಕೇಳಿ ಕೊಳ್ಳುತ್ತಾರೆ.

ಜಗನ್ನಾಥ ದಾಸರು ತಮ್ಮ ತತ್ವ ಸುವ್ವಾಲಿಯಲ್ಲಿ ಪರಮೇಶ್ವರನನ್ನು ಕುರಿತು..

ಭೂತನಾಥನ ಗುಣ ಪ್ರಭಾತಕಾಲದಲೆದ್ದು
ಪ್ರೀತಿಪೂರ್ವಕದಿ ಪಠಿಸುವ | ಪಠಿಸುವವರ ಜಗ-
ನ್ನಾಥ ವಿಠಲನು ಸಲಹುವ ||   ಎನ್ನುತ್ತಾರೆ.

"ಶಿವ"ನೆಂದರೇ ಮಂಗಲ, ಮಂಗಲವೆಂದರೆ ಮೇಲಕ್ಕೇರುವುದು, ಎತ್ತರಕ್ಕೇರುವುದು ಎಂದರ್ಥ.  ಇದಕ್ಕಾಗಿಯೇ ಅಲ್ಲವೇ ನಾವು ಕೈಲಾಸವಾಸನನ್ನು ಎಲ್ಲಾ ವಿಷಯಾಸಕ್ತಿಗಳನ್ನೂ ನಿಗ್ರಹಿಸಿ, ಅತ್ಯಂತ ಎತ್ತರದಲ್ಲಿರುವ ಭಗವಂತನ ಅರಿವನ್ನು ಮೂಡಿಸಿ, ಹರಿಯಲ್ಲಿ ತೈಲಧಾರೆಯಂತೆ ನಮ್ಮ ಮನಸ್ಸನ್ನು ನೆಲೆ ನಿಲ್ಲಿಸು, ನಮಗೆ ಮಂಗಲವನ್ನು ಕರುಣಿಸು ಎಂದು ಕೇಳಿಕೊಳ್ಳುವುದು.  ನಮ್ಮ ಮನಸ್ಸಿನಲ್ಲಿ ಸದಾ ಭಗವಂತನ ಎಚ್ಚರ ಇರುವಂತೆ  ಮಾಡು ಎಂದು ಜಗನ್ನಾಥ ದಾಸರು ರುದ್ರದೇವರು ಏಕಾದಶ ರುದ್ರರ ಗಣಕ್ಕೆ ಅಧಿಪತಿಯಾದವರು, ಮುಖ್ಯರಾದವರು "ಶಿವ" ಎಂಬ ಸೂಚನೆ ಕೊಡುತ್ತಾ ಒಟ್ಟು   - ವಾಮದೇವ, ವಿರಿಂಚಿತನಯ, ಉಮಾಮನೋಹರ, ಉಗ್ರ, ಧೂರ್ಜಟಿ, ಸಾಮಜಾಜಿನವಸನ ಭೂಷಣ, ಸುಮನಸೋತ್ತಂಸ, ಕಾಮಹರ, ಕೈಲಾಸಮಂದಿರ, ಸೋಮಸೂರ್ಯಾನಲ ವಿಲೋಚನ, ಕಾಮಿತಪ್ರದ ಎಂಬ ಹನ್ನೊಂದು ಹೆಸರುಗಳಿಂದ  ಸ್ತುತಿಸುತ್ತಾ ಕೇಳಿಕೊಳ್ಳುತ್ತಾರೆ.


ಚಿತ್ರಕೃಪೆ : ಅಂತರ್ಜಾಲ
"ಶಿವಾನಂದಲಹರಿ" - ಆಧಾರ ವೇದಾಂತ ಭಾರತೀ ಪ್ರಕಾಶನ

6 comments:

kaladakannadi said...

ಹರಿಕಥಾಮೃತಸಾರ ಬ್ಲಾಗ್ ನ ವೈಶಿಷ್ಟ್ಯವೇ ಅ೦ಥಹದ್ದು..! ಭಕ್ತಿ ಇಲ್ಲದವನೂ ಇಲ್ಲಿಯ ತಾತ್ಪರ್ಯ ಸಹಿತ ಶ್ಲೋಕಗಳನ್ನೋದಿ ಆನ೦ದದಿ೦ದ ಕುಣಿಯುವ೦ತಿದೆ!ಹೆಚ್ಚೆಚ್ಚು ದೇವರನ್ನು ಓದಿಕೊಳ್ಳಬೇಕೆ೦ಬ ಬಯಕೆಯನ್ನು೦ಟು ಮಾಡುತ್ತದೆ.. ಆಧ್ಯಾತ್ಮಿಕವಾಗಿ ನೀವೂ ದಿನೇ ದಿನೇ ಉನ್ನತ ಮಟ್ಟವನ್ನು ತಲುಪುತ್ತಿದ್ದೀರೆ೦ಬ ವಿಶ್ವಾಸ ಉ೦ಟಾಗುತ್ತಿದೆ. ಆದ್ದರಿ೦ದ ಇನ್ನೂ ಹೆಚ್ಚಿನ ತಾತ್ಪರ್ಯಗಳನ್ನು ಕಾಯಬಹುದಾಗಿದೆ.
ನಿಮಗೆ ಆ ರುದ್ರನು ಒಳ್ಳೆಯದನ್ನು ಮಾಡಲಿ..

ರುದ್ರ ದೇವರ ಬಗ್ಗೆಗಿನ ವಿವರಣೆ ಓದುತ್ತಿದ್ದ೦ತೆ ರೋಮಾ೦ಚನವಾಗುತ್ತದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Badarinath Palavalli said...

ಈ ಬ್ಲಾಗು ಇನ್ನಷ್ಟು ಜನಜನಿತವಾಗಬೇಕಿದೆ. ರಭಸದ ಜೀವನ ಶೈಲಿಯಲ್ಲಿ ಭಕ್ತಿಯ ಕೊರತೆಯನ್ನೂ. ಆಧ್ಯಾತ್ಮಿಕ ವಿಚಾರವಂತಿಕೆಯನ್ನೂ ಹಚ್ಚುವ ಪ್ರಯತ್ನ ಇದು.


ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

Manjunatha Kollegala said...

ಸೊಗಸಾದ ಪ್ರಯತ್ನ. ಹರಿಕಥಾಮೃತಸಾರದ ಬಗ್ಗೆ ಬರೆಯಬೇಕೆಂದು ಬಹುದಿನದಿಂದ ಮನಸ್ಸಿನಲ್ಲಿತ್ತು. ಆದರೆ ಈ ಬಗ್ಗೆ ಒಂದಿಡೀ ಬ್ಲಾಗೇ ಇರುವುದು, ಅದರಲ್ಲೂ ವಿಷಯಪ್ರತಿಪಾದನೆ ಇಷ್ಟು ವಿವರವಾಗಿ, ವಿಶದವಾಗಿ ಬರುತ್ತಿರುವುದು ತಿಳಿದು ತುಂಬಾ ಸಂತೋಷವಾಯಿತು.

ಹರಿಕಥಾಮೃತಸಾರ ಗಹನ ತತ್ವಗಳನ್ನು ತಿಳಿಯಾಗಿ ಸಾಮಾನ್ಯರಿಗೆ ತಿಳಿಯಪಡಿಸುವ ಉದ್ದೇಶವನ್ನು ಹೊಂದಿದ್ದರೂ ಸ್ವಭಾವತಃ ಇದು ತುಸು ಜಟಿಲ, technical ಅನ್ನಬಹುದಾದ ಕೃತಿಯೇ ಸರಿ. ಇದನ್ನು ಅರಗಿಸಿಕೊಳ್ಳುವುದಕ್ಕೆ ಕೇವಲ ಪದ ಪದ ಅರ್ಥದ ಬದಲು interpretationನ ಅಗತ್ಯ ಬಹಳ ಇದೆ. ಈ ಕೆಲಸವನ್ನು ನೀವು ಸಮರ್ಥವಾಗಿ ನಿರ್ವಹಿಸುತ್ತಿದ್ದೀರಿ.

ಒಳ್ಳೆಯ ಪ್ರಯತ್ನ, ಮುಂದುವರೆಸಿ.

ಹರಿಕಥಾಮೃತಸಾರ said...

"ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ನಮ್ಮ ಅನಂತ ಧನ್ಯವಾದಗಳು...

ಹರಿಕಥಾಮೃತಸಾರದಂತಹ ಉತ್ಕೃಷ್ಟ ಕಾವ್ಯ ಎಲ್ಲರಿಗೂ ತಲುಪಬೇಕೆನ್ನುವುದು ಭಗವಂತನ ಪ್ರೇರಣೆ.

ನಿಮ್ಮೆಲ್ಲರ ಪ್ರೋತ್ಸಾಹದಿಂದ, ಭಗವಂತನ ಕರುಣೆಯಿಂದ ಈ ಕೆಲಸ ನಿರ್ವಿಘ್ನವಾಗಿ

ಮುಂದುವರೆಯುವುದೆಂದು ಆಶಿಸುತ್ತೇವೆ..."

Anil Joshi - ಅನಿಲ ಜೋಶಿ said...

ಬಹಳ ಸೊಗಸಾಗಿ ಬಂದಿದೆ ವಿವರಣೆ, ಓದಿ ಖುಷಿಯಾಯ್ತು. ಧನ್ಯವಾದಗಳು.

ಹರಿಕಥಾಮೃತಸಾರ said...

ಧನ್ಯವಾದಗಳು ಅನಿಲ್ ಜೋಶಿಯವರಿಗೆ...